ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, March 2, 2013

ಏನೊ ಮಮತೆ, ಏನೊ ಮೋಹ, ಏನೊ ಋಣದ ಬಂಧನ ಎನ್ನನಿಷ್ಟುದಿನವು ಕಟ್ಟಿ ನಿಲಿಸಿತವನ ಕಾರಣ

ಚಿತ್ರಋಣ: ಅಂತರ್ಜಾಲ 
ಏನೊ ಮಮತೆ, ಏನೊ ಮೋಹ, ಏನೊ ಋಣದ ಬಂಧನ
ಎನ್ನನಿಷ್ಟುದಿನವು ಕಟ್ಟಿ ನಿಲಿಸಿತವನ ಕಾರಣ 

ಇದೊಂದು ಪುಣ್ಯ ಕಥೆ; ಜೀವನ ಕಥೆ, ಮಂಕುತಿಮ್ಮನ ’ಕಗ್ಗದ ಕಥೆ’ಯ ಹಿಂದಿನ ಕಥೆ! ಕುತೂಹಲದ ಬಿಸಿಲ ಬೇಗೆಯಲ್ಲಿ ಬಳಲಿದವರ ತೃಷೆಗೆ ತಂಪೆರೆದು ಪೋಷಿಸುವ, ಹಸಿದ ಮನಗಳನ್ನು ಹೊತ್ತುಬರುವ ನನ್ನಂತಹ ಸಾವಿರಾರು ಹಾದಿಹೋಕರಿಗೆ, ಜ್ಞಾನಸುಖದ ಮೃಷ್ಟಾನ್ನವನ್ನು ಉಣಬಡಿಸುವ, ನಿತ್ಯ ಜ್ಞಾನದಾಸೋಹಿ, ಶತಾವಧಾನಿ ಋಷಿ ರಾ. ಗಣೇಶರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು; ಮುಪ್ಪಿನ ಅಮ್ಮನ ಸೇವೆಯಲ್ಲಿ ಕಳೆದ ಎಂಟುವರ್ಷಗಳಿಂದ ತನ್ನನ್ನು ಸಮರ್ಪಿಸಿಕೊಂಡು, ಜೀವನಾವಧಾನಗಳ ವಿಭಿನ್ನ ಘಳಿಗೆಗಳಲ್ಲಿ ನಮ್ಮಂಥವರ ವಿಭಿನ್ನ-ವಿಚಿತ್ರ ಕರೆಗಳನ್ನು ಮನ್ನಿಸಿ ಸಮಸ್ಯಾಪೂರಣ-ಪರಿಹಾರ ಒದಗಿಸುವ ಅವರ ಈ ಕಾರ್ಯಕ್ಕೆ, ನಿತ್ಯ ಸಾವಿರ ಹಸಿದ ಹೊಟ್ಟೆಗಳಿಗೆ ಪುಷ್ಕಳ ಭೋಜನ ನೀಡಿದ ಸತ್ಕಾರದ ಸುಕೃತಫಲ ಪ್ರಾಪ್ತವಾಗಲೆಂದು ಹಾರೈಸುತ್ತೇನೆ. ಕಾಲಾನುಕಾಲದಲ್ಲಿ ಋಷಿಗಳು ವಿಭಿನ್ನರೂಪದಲ್ಲಿ ನಮ್ಮ ಮಧ್ಯೆಯೇ ಇರುತ್ತಾರೆ; ಆದರೆ ನಾವು ದೇವರೆಲ್ಲಿ, ಋಷಿಗಳೆಲ್ಲಿ ಎಂದು ಹುಡುಕುತ್ತಿರುತ್ತೇವೆ. ನಮ್ಮಲ್ಲೇ ಇರುವ ದೇವರನ್ನೂ ನಮ್ಮೊಡನೆಯೇ ಇರುವ ಋಷಿಗಳನ್ನೂ ನಾವು ಕಾಣದಾಗುವುದು ನಮ್ಮ ಮತಿಗೆ ಮುಸುಕಿದ ಮಾಯೆಯಾಗಿದೆ! ಕಾಡಿನಲ್ಲಿ ತರುಗಳ ತಲದಲ್ಲಿ ದೀರ್ಘಕಾಲ ತಪೋನಿರತಾಗಿ ಲೋಕೋಪಕಾರವನ್ನು ಬಯಸುತ್ತಿದ್ದ ಋಷಿಗಳು ಹಿಂದಕ್ಕೆ ಇದ್ದರು. ಅಂತಹ ಋಷಿಗಳೇ ಆಗಾಗ ಆಗಾಗ ಮತ್ತೆ ಮತ್ತೆ ಸಹಜ ಮಾನವ ರೂಪಧರಿಸಿ, ನಮ್ಮ ನಡುವೆಯೇ ಇದ್ದು, ಈ ಲೋಕದ ಎಲ್ಲಾ ಆಗುಹೋಗುಗಳನ್ನೂ ಸಹಿಸಿಯೂ ತಾವು ಬೇರೆ ಎಂಬುದನ್ನು ತಮ್ಮ ವಿಶಿಷ್ಟ ಶಕ್ತಿ-ಸಾಮರ್ಥ್ಯದಿಂದ ಸಾಬೀತುಪಡಿಸುತ್ತಾರೆ; ಆದರೆ ತಾವು ಬೇರೆ ಎಂದು ಅವರೆಂದೂ ಹೇಳಿಕೊಳ್ಳುವುದಿಲ್ಲ!  ಅಂತಹ ಋಷಿಸದೃಶ ಜೀವನ ನಡೆಸಿದ/ನಡೆಸುತ್ತಿರುವ ಕೆಲವರನ್ನು ಹೆಸರಿಸಬಹುದಾದರೆ ಅವರಲ್ಲಿ ಡಿವಿಜಿ ಒಬ್ಬರು ಇನ್ನೊಬ್ಬರು ನಮ್ಮ ಕಣ್ಣಮುಂದೆ ಇರುವ ರಾ. ಗಣೇಶರಾಗಿದ್ದಾರೆ; ಇದು ನನ್ನ ಅಂತರಂಗ ಹೇಳಿದ ಮಾತೇ ವಿನಃ ಯಾವುದೋ ಲಾಭಕ್ಕಾಗಿ ಮಾಡಿದ ಮುಖಸ್ತುತಿಯಲ್ಲ. ವ್ಯಕ್ತಿಯೊಬ್ಬ ಜೀವನದಲ್ಲಿ ಎಷ್ಟು ಸಾಧಿಸಬಹುದೋ ಅದಕ್ಕೂ ಮೀರಿದ ಸಾಧನೆ ಕಂಡುಬಂದಾಗ, ಅಲ್ಲಿ ನಮಗೆ ನಿಂತು ನೋಡುವ ಮನಸ್ಸಾಗುತ್ತದೆ, ಒಂದು ಜೀವಮಾನದಲ್ಲಿ ಸಾಧಿಸಲು ಅಸಾಧ್ಯವಾದುದು ಎನಿಸಿದ್ದನ್ನು, ಸಾಧಿಸಿಕೊಂಡವರು ಸಾಧ್ಯವೆಂದು ತೋರಿಸಿದಾಗ, ಅವರಲ್ಲಿ ಪೂಜ್ಯಭಾವನೆ ಮೂಡುತ್ತದೆ. ಒಂದಲ್ಲ-ಎರಡಲ್ಲ-ನಾಲ್ಕಾರು ಜನ್ಮಗಳನ್ನುತ್ತರಿಸಿ ಬಂದರೂ ಸಾಧಿಸಲಾಗದ ಮಹತ್ತನ್ನು ಸಾಧ್ಯವಾಗಿಸಿಕೊಂಡವರನ್ನು ಕಂಡಾಗ ಅದೊಂದು ದೈವಾಂಶ ಸಂಭೂತ ಜನ್ಮವೆಂದೇ ಒಪ್ಪಿಕೊಳ್ಳಬೇಕಾದುದು ವಿಹಿತ. ಅಂತಹ ಕೆಲವರು ಇಂದಿಗೂ ಈ ನಮ್ಮ ಪುಣ್ಯಭೂಮಿ ಭಾರತದಲ್ಲಿ ಇದ್ದಾರೆ ಎಂಬುದು ’ಸಂಭವಾಮಿ ಯುಗೇ ಯುಗೇ’ ಎಂಬುದರ ಧ್ವನಿ ತರಂಗಗಳ ವ್ಯಾಪ್ತಿಗೆ ಒಳಪಡುತ್ತದೆ! ಅಂತಹ ಋಷಿ ಸದೃಶರೆಲ್ಲರಿಗೂ ನನ್ನ ನಮನಗಳು.

ಈಗಿರುವ ಆರುಕೋಟಿ ಕನ್ನಡಿಗರಲ್ಲಿ ಮೂರು ಕೋಟಿ ಮಂದಿಗಾದರೂ ’ಮಂಕುತಿಮ್ಮನ ಕಗ್ಗ’ದ ಬಗ್ಗೆ ಪ್ರತ್ಯಕ್ಷ/ಪರೋಕ್ಷ ಓದಿ/ಕೇಳಿ/ತಿಳಿದು ಗೊತ್ತು ಎಂಬುದು ನನ್ನ ಅನಿಸಿಕೆ. ನನ್ನ ಓದಿನ ನಡುನಡುವೆ ಮೆಲುಕುಹಾಕುವ ಕಗ್ಗದ ಮುಕ್ತಕಗಳ ಜೊತೆಗೆ, ಕಗ್ಗದ ಮಗ್ಗ ಹೇಗೆ ಹುಟ್ಟಿತು ಎಂಬ ಕಥೆಯಂತೇ ಇರುವ ’ಕಗ್ಗದ ಕಥೆ’ ಎಂಬ ಕವನವೂ ಬಹುಕಾಲ ನನ್ನನ್ನು ಪೀಡಿಸಿತ್ತು. ಕಗ್ಗದ ಆರಂಭಕ್ಕೂ ಮುನ್ನ ಓದುಗರಿಗೆ ಲಭ್ಯವಾಗುವ ಈ ಕವನ "ಸೋಮಿ" ಬರೆದದ್ದು! ಯಾರಾತ ಸೋಮಿ? ಯಾಕೆ ಆತ ಹೀಗೆಲ್ಲಾ ಬರೆದ? ’ತಿಮ್ಮಗುರು’ ಎಂದು ಆ ಕವನದಲ್ಲೇ ಆತ ಹೇಳಿದ್ದಾನೆ ಎಂದಾದಾಗ, ನಮಗೆ ’ತಿಮ್ಮಗುರು’ವೆನಿಸಿದ ಗುಂಡಪ್ಪನವರೇ ಕವನದ ವಸ್ತುವಾದರೆ, ಸೋಮಿ ಯಾರು ಎಂಬುದೇ ನನ್ನ ಪ್ರಶ್ನೆ; ಸಮಸ್ಯೆಯಲ್ಲದ ಸಮಸ್ಯೆಗೆ ಪರಿಹಾರ ಸಿಗುವಲ್ಲಿ ನಾನು ಹೋಲಿಸಿದ ಕಡತಗಳು ಹಲವು, ಆದರೂ ಆ ಕೆಲಸ ಹಾಗೇ ನಿಂತಿತ್ತು. ಮೇಲೆ ಹೇಳಿದಹಾಗೇ ಹಸಿದ ಮಗುವಿನ ಅಳುವಿಗೆ ಎಚ್ಚೆತ್ತ ಅಮ್ಮ ಹೊಟ್ಟೆಗೊಂದಷ್ಟು ನೀಡಿ ರಮಿಸುವಂತೇ, ನನ್ನ ರೋದನಕ್ಕೆ ಎಚ್ಚೆತ್ತ ಗಣೇಶರು ಉತ್ತರಿಸಿದರು: "ಅದು ಡಿವಿಜಿಯವರೇ ಬರೆದಿದ್ದು, ಅವರ ಕೌಟುಂಬಿಕ ಹಿನ್ನೆಲೆಯನ್ನು ಅವರ ಜ್ಞಾಪಕ ಚಿಕ್ರಶಾಲೆಯ ೮ನೇ ಭಾಗ ’ಸಂಕೀರ್ಣ ಸಂಪುಟ’ದಲ್ಲಿ ತಿಳಿದುಕೊಳ್ಳಬಹುದು. ಆ ಕವನವನ್ನು ಅವರು ಅವರ ಸೋದರಮಾವನ ಕುರಿತಾಗಿ ಬರೆದಿದ್ದು" ಎಂಬ ಉತ್ತರ  ನನಗೆ ದೊರೆತಾಗ, ಭಗವಂತ ಎದುರಲ್ಲಿ ಸಿಕ್ಕಾಗ ಯಾವುದನ್ನು ಕೇಳಬೇಕೋ ಅದನ್ನು ಕೇಳುವುದು ಬಿಟ್ಟು ಎಲ್ಲಾಮರೆತ ಭಕ್ತನ ಸ್ಥಿತಿ ಉಂಟಾಯ್ತು. ’ಕಗ್ಗದ ಕಥೆ’ಯ ತುಸು ಅರ್ಥವಿಸ್ತರಣೆಗೆ ಪ್ರಯತ್ನಿಸುತ್ತಾ ಲೇಖನ ಮುಂದರಿಸುತ್ತೇನೆ. 

ನರಸಿಂಹ ಸ್ವಾಮಿಗಳ ಕವನದಲ್ಲಿರುವಷ್ಟೇ ಆತ್ಮೀಯವಾಗಿ ಬಂಧಿಸುವ, ಭಾವಗಳ ಸಂಕೋಲೆಯನ್ನು ಅರಿವಿಲ್ಲದೇ ನಮಗೆ ತೊಡಿಸುವ ಕವನದ ಆರಂಭ ಹೀಗಿದೆ: 

ಹಳ್ಳಿ ಮಕ್ಕಳಿಂಗೆ ಗುರುವು, ಹಳ್ಳಿಗೆಲ್ಲ ಗೆಳೆಯನು,-
"ಒಳ್ಳೆ ಹಾರುವಯ್ಯ", " ಹಸುವು", "ಹಸುಳೆ" ಎನುವರವನನು.
ಮಂಕುತಿಮ್ಮನೆನುತ ಹೆಸರನವನು ಹೇಳಿಕೊಳುವನು;
ಬಿಂಕ ಕೊಂಕು ಒಂದು ಅರಿಯದಿದ್ದ ಸಾಧುವಾತನು.

ಹಳ್ಳಿಯಲ್ಲೊಬ್ಬ ಗುರುವೆನಿಸಿದ, ಹಳ್ಳಿಗರಿಗೆ ಮಿತ್ರನಾಗಿದ್ದ ಆತ ಬ್ರಾಹ್ಮಣನಾದ್ದರಿಂದ ಜನ " ಒಳ್ಳೆ ಹಾರುವಯ್ಯ" ಎಂದರು, ಮಂಕುತಿಮ್ಮ ಎಂದು ತನ್ನನ್ನೇ ತಾನು ಹೆಸರಿಸಿಕೊಳ್ಳುತ್ತಾ ತಮಾಷೆಮಾಡುತ್ತಿದ್ದ, ಅತ್ಯಂತ ಸಾಧು ಸ್ವಭಾವದ ಆತನ ಮುಗ್ಧತೆಗೆ ಜನ "ಹಸು" , "ಹಸುಳೆ" ಎಂದೆಲ್ಲಾ ಕರೆಯುತ್ತಿದ್ದರು. ನಮ್ಮಲ್ಲಿ ಒಂದು ಗಾದೆಯಿದೆ "ಕೆಟ್ಟು ಬ್ರಾಹ್ಮಣರನ್ನು ಸೇರು, ಸೊಕ್ಕಿ ಸೇಠುಗಳನ್ನು ಸೇರು" ಎಂದು, ’ಜೀವನದಲ್ಲಿ ಕೆಟ್ಟೆ’ ಎಂಬ ದಾರಿಕಾಣದ ಸ್ಥಿತಿ ಬಂದಾಗ, ಆಚಾರವಂತ ಬ್ರಾಹ್ಮಣನನ್ನು ಕಂಡರೆ ಆತ ಏನಾದರೊಂದು ಮಾರ್ಗೋಪಾಯವನ್ನು ಕಲ್ಪಿಸಿಕೊಡುವುದಕ್ಕೆ ಸಹಕಾರಿಯಾಗುತ್ತಾನೆ, ಸೊಕ್ಕಿದ್ದರೆ ಮಾರ್ವಾಡಿಗಳನ್ನು ಹೋಗಿ ಕಾಣಬೇಕು, ನಮ್ಮ ಸೊಕ್ಕಿಗೆ ಅವರು ಕಡಿವಾಣ ಹಾಕುವುದರಲ್ಲಿ ಸಂಶಯವಿಲ್ಲ ಎಂಬುದು ಗಾದೆಯ ಧ್ವನ್ಯರ್ಥ. [ಪೂರ್ವಾಗ್ರಹ ಪೀಡಿತರಾಗದೇ ನಾವು ಅವಲೋಕಿಸಿದರೆ ಬ್ರಾಹ್ಮಣರಲ್ಲಿ ಲೋಕೋಪಕಾರಕ ಬುದ್ಧಿ ಬಹುತೇಕರಿಗೆ ಇದ್ದೇ ಇರುತ್ತದೆ. ಕೆಲವರು ಕೃತಿಯಿಂದ ಅದನ್ನು ನಡೆಸುತ್ತಾರೆ, ಇನ್ನು ಕೆಲವರು ಕೈಲಾಗದ್ದಕ್ಕೆ ಪರಿತಪಿಸಿಕೊಳ್ಳುತ್ತಿರುತ್ತಾರೆ. ಇದನ್ನರಿಯದ ಕೆಲವರು ’ಬ್ರಾಹ್ಮಣ್ಯ ಎಂಬ ಟ್ರ್ಯಾಕಿಗೆ ಸಿಕ್ಕಿಹಾಕಿಕೊಂಡರೆ ಹೊರಬರುವುದೇ ಕಷ್ಟ’ ಎಂಬೆಲ್ಲಾ ರೀತಿಯಲ್ಲಿ ಬರೆಯುತ್ತಾ, ಎಡಪಂಥೀಯ ಬ್ರಾಹ್ಮಣರ ಮಾತುಗಳನ್ನು ಅನುಮೋದಿಸುತ್ತಾ, ಭೈರಪ್ಪನವರನ್ನೋ ಕಾರಂತರನ್ನೋ ಆಡಿಕೊಳ್ಳುತ್ತಾ ತೀರಾ ಗುಜರಿ ಅಂಗಡಿ ಕೆಲಸಮಾಡುತ್ತಿರುತ್ತಾರೆ! ಅಂತಹ ಜನರಿಗೆ ಯಾವ ಮಹಾ ಜ್ಞಾನವಿದೆ ಎಂಬ ಹಮ್ಮೋ ದೇವರೇ ಬಲ್ಲ.]ಇರಲಿ, ಕಥೆ ಮುಂದಕ್ಕೇನಾಯ್ತು ನೋಡೋಣ:

ಬಾಳಿದೇತಕೆನುತಲೊಮ್ಮೆ ಯೊಮ್ಮೆ ತಾನೆ ಕೇಳ್ವನು;
ಕೂಳುಹೆಣವು ತಾನೆನುತ್ತಲೊಮ್ಮೆ ನಕ್ಕು ಪೇಳ್ವನು.
ಬೆದರರಾರುಮವನ ಕಂಡು; ಬಳಸಿ ನಿಂತು ಹುಡುಗರು
ಮುದದೊಳವನ ಸಲುಗೆಯಿಂದ, ’ಮೇಷ್ಟ್ರೆ’, ’ಮೇಷ್ಟ್ರೆ’ ಎನುವರು.

ವ್ರಥಾ ಬಿಟ್ಟಿ ಕೂಳು ತಿನ್ನುತ್ತಾ ಬಿದ್ದಿರುವ ತಾನು ಬದುಕುವುದಾದರೂ ಯಾತಕ್ಕೆ ಎಂದು ತನಗೆ ತಾನೇ ಆಡಿಕೊಳ್ಳುತ್ತಿದ್ದನಾತ. ಅವನನ್ನು ಕಂಡರೆ ಯಾರಿಗೂ ಹೆದರಿಕೆಯೆಂಬುದೇನೂ ಇರಲಿಲ್ಲ, ಮಕ್ಕಳು ಅವನನ್ನು ಸುತ್ತುವರಿದು, ಕೈ-ಮೈ ಹಿಡಿದು ಸಲುಗೆಯಿಂದ, "ಮೇಷ್ಟ್ರೆ", "ಮೇಷ್ಟ್ರೆ" ಎನ್ನುತ್ತಿದ್ದರು.   

ಮೂಡಲೂರ ಸುತ್ತಮುತ್ತಣೈದು ಮೈಲಿಯಿಂದಲಿ
ಕೂಡಿ ಬರುವರಣುಗರೋದೆ ತಿಮ್ಮ ಗುರುವಿನೆಡೆಯಲಿ.
ಶಾಲೆಗವನು ಹೊತ್ತುಗೊತ್ತಿಗೊಪ್ಪುವಂತೆ  ಬರುವನು;
ವೇಳೆ ವೆರ್ತವಾಗದಂತೆ ಪಾಠ ಹೇಳುತಿರುವನು;

ಮೂಡಲೂರಿನ ಸುತ್ತಮುತ್ತಣ ಐದು ಮೈಲಿಗಳ ಅಂತರದಲ್ಲಿರುವ ಊರು/ಹಳ್ಳಿಗಳಿಂದ ಜನ ತಂಡೋಪತಂಡವಾಗಿ ತಿಮ್ಮ ಗುರುವನ್ನು ನೋಡಲು ಆಗಾಗ ಬರುತ್ತಿದ್ದರು. ತಾನು ಕೆಲಸಮಾಡುತ್ತಿದ್ದ ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದ ಆತ ವೇಳೆ ವ್ಯರ್ಥವಾಗದಂತೇ ಮಕ್ಕಳಿಗೆ ಹಿತವಾಗಿ ಪಾಠಮಾಡುತಿದ್ದ.

ಆಟ, ಅಮರ, ಮಗ್ಗಿ, ಬರಹ -ಎಲ್ಲ ಕಲಿಸಿಕೊಡುವನು;
ಏಟು, ಪೆಟ್ಟು, ಬಯ್ಲು, ಗದರು -ಒಂದನುಮವನರಿಯನು; 
ಕತೆಯ ಹೇಳಿ ನಗಿಸುತವರ ತುಂಟತನವ ಕಳೆವನು;
ಮಿತದಿನೆಲ್ಲರೊಡನೆ ಮಾತುಕತೆಯನಾಡಿ ನಲಿವನು.

ಕ್ಲಿಷ್ಟಪದಗಳಿಲ್ಲದ್ದರಿಂದ ಈ ಮೇಲಿನ ಸಾಲುಗಳು ಓದುಗರಿಗೆ ಪದಶಃ ಅರ್ಥವಾಗಿರಬಹುದು ಎಂದುಕೊಳ್ಳುತ್ತೇನೆ. ಆಟಗಳನ್ನೂ, ಅಮರಕೋಶ, ಮಗ್ಗಿ[ಕೋಷ್ಟಕ], ಬರಹ ಎಲ್ಲವನ್ನೂ ಆತ ಹೇಳಿಕೊಡುತ್ತಿದ್ದನೇ ಹೊರತು ಮಕ್ಕಳಿಗೆ ಏಟು, ಪೆಟ್ಟು, ಬೈಗುಳ, ಗದರುವಿಕೆ ಇದನ್ನೆಲ್ಲಾ ಪ್ರಯೋಗಿಸಿದವನಲ್ಲ. ಕತೆ ಹೇಳಿ ನಗಿಸುವ ತನ್ನ ವಿಶಿಷ್ಟ ಬೋಧನಾಕ್ರಮದಿಂದ ಎಲ್ಲರ ತುಂಟತನವನ್ನು ಕಳೆಯುತ್ತಿದ್ದ; ಮಿತವಾಗಿ ಎಲ್ಲರೊಡನೆಯೂ ಮಾತನಾಡುತ್ತಿದ್ದ.

ಅವನ ತಾಯಿಯರ್ಧ ಕುರುಡಿ, ಸಿರಿಯನೆಡರಿಗಿಳಿದವಳ್,
ಶಿವನ ನಂಬಿ ಮುದುಕಿ ತನ್ನ ಮಗಳ ಮನೆಗೆ ದುಡಿಯುವಳ್:
ಆಕೆ,-ಅವನ ತಂಗಿ,-ಗಂಡನೊಡನೆ ಸುಖದಿ ಬಾಳ್ವರು;
ಲೋಕಸೇತು ತಿಮ್ಮ ಗುರುವಿಗಲ್ಲೆ; ಅಲ್ಲೆ ವಾಸವು.

ಅರ್ಧ ಕುರುಡಿಯಾದ ಆತನ ತಾಯಿಗೆ ಸಿರಿವಂತಿಕೆ ಎಂಬುದು ಕನಸಿನ ಪದವೇ ಸರಿ. ಬದುಕು ಹೀಗೆ ಎಂದು ಬೇಸರಿಸಿಕೊಳ್ಳದೇ ಶಿವನಿಚ್ಛೆ ಎಂದುಕೊಳ್ಳುತ್ತಾ ಮಗಳ ಮನೆಯಲ್ಲೇ ಆಕೆ ವಾಸವಿದ್ದು ಮಗಳಮನೆಯ ಕಠಿಣ ಮನೆವಾರ್ತೆ ಕೆಲಸಗಳನ್ನು ನಡೆಸುತ್ತಿದ್ದಳು. ತಾಯಿಯೊಟ್ಟಿಗೆ ತಂಗಿಯ ಮನೆಯಲ್ಲೇ ಆತ ವಾಸವಿದ್ದನು.

ಬೇರೆ ಮನೆಯ ಚಿಂತೆಯೇಕೆ ಹೆಂಡರಿಲ್ಲದವನಿಗೆ?
ಆರುಮರಿಯರವನು ಮದುವೆಯಾಗದಿದ್ದುದೇತಕೋ;
ಬಡವನೆಂದೊ; ಚೆಲುವನಲ್ಲವೆಂದೊ; ಹೆಣ್ಣ ಹೆತ್ತವರ್
ಕೊಡಲು ಬಾರದಿದ್ದರೇನೊ ! ಅವನೆ ಬೇಡವೆಂದನೋ!!

ಮದುವೆಯಾಗದೇ ಬ್ರಹ್ಮಚರ್ಯದಲ್ಲೇ ಜೀವನ ಕಳೆಯುತ್ತಿದ್ದ ಆತನಿಗೆ ಬೇರೇ ಮನೆ ಮಾಡಿ ವಾಸಿಸುವ ಚಿಂತೆ ಯಾವಾಗಲೂ ಕಾಡಲಿಲ್ಲ. ಆರುಮರಿ ಪಂಗಡದವನಾದರೂ ಮದುಯಾಗದಿದ್ದುದೇಕೆ ಎಂದು ತಿಳಿಯಲಿಲ್ಲ.  ಬಡವನೆಂದೋ ಸ್ಫುರದ್ರೂಪಿಯಲ್ಲವೆಂದೋ ಹೆಣ್ಣು ಹೆತ್ತವರು ಮುಂದೆಬರಲಿಲ್ಲವೇ? ಅಥವಾ ಅವನೇ ಮದುವೆ ಬೇಡವೆಂದುಕೊಂಡನೋ ತಿಳಿಯದು, ಅಂತೂ ಮದುವೆಯಾಗಲಿಲ್ಲ. 

ಹೇಗೆ ಇರಲಿ: ವರ್ಷವೈದು ದಶಕಗಳನು ಕಳೆದವನ್,
ನೀಗುತಿದ್ದ ನಾಯುವನ್ನು ಸರಳಮನದ ತೃಪ್ತಿಯಿನ್.
ತರಣಿಯುದಿಪ ಮುನ್ನ ಪಾಡಿ ನಾರಸಿಂಹಶತಕಮಂ,
ಇರುಳು ಬರಲು ರಾಮದಾಸ ಕೀರ್ತನೆಗಳ ಪಾಡುವಂ.

ಐವತ್ತು ವರ್ಷ ಆಯುಸ್ಸು ಈ ರೀತಿಯಲ್ಲೇ ಸರಳಮನದ ತೃಪ್ತಿಯಿಂದಲೇ ಕಳೆದುಬಿಟ್ಟನಾತ. ಪ್ರತಿನಿತ್ಯ ಸೂರ್ಯೋದಯಕ್ಕೂ ಮುನ್ನ ಎದ್ದು ಪ್ರಾತರ್ವಿಧಿಗಳನ್ನು ತೀರಿಸಿಕೊಂಡು ನಾರಸಿಂಹ ಶತಕ ಎಂಬ ಸ್ತೋತ್ರವನ್ನು ಮಾಡುತ್ತಿದ್ದ ಆತ ರಾತ್ರಿಯಲ್ಲಿ ರಾಮದಾಸರ ಕೀರ್ತನೆಗಳನ್ನು ಹಾಡುತ್ತಿದ್ದ.

ಬಿಡುವುಹೊತ್ತು  ಗುಡಿಯಳೆಲ್ಲೊ ಕುಳಿತು ದೈವಚಿಂತೆಯೊಳ್
ನಡೆಯುತಿದ್ದನವನು ಬಾಳಹೊರೆಯ ಹೊತ್ತು, ನಡೆಯುವೊಲ್
ಭಾನುವಾರ ಬೆಟ್ಟದೊಂದು ಮೊಡಕಸೇರಿ ಕೂಡುವಂ;
ಮೌನದಿಂದ ಗಗನ ಧರೆಯನಪ್ಪುವತ್ತ ನೋಡುವಂ;

ಬಿಡುವಿದ್ದಾಗ ಗುಡಿಗೆ ಹೋಗಿ ಅಲ್ಲೆಲ್ಲೋ ಕುಳಿತು ದೈವಧ್ಯಾನವನ್ನಾತ ನಡೆಸುತ್ತಿದ್ದ. ಬಾಳ ಹೊರೆಯನ್ನು ಹೀಗೇ ಹೊತ್ತು ಆತ ನಡೆಯುತ್ತಿದ್ದ. ಭಾನುವಾರ ಬಂದರೆ ಬೆಟ್ಟವೇರಿ ಅಲ್ಲಿನ ಬಂಡೆಗಳ ಮೇಲೆ ಮೌನವಾಗಿ ಕೂತು ದೂರದಲ್ಲಿ ಆಕಾಶ-ಭೂಮಿ ಒಂದಾದ ಹಾಗೆ ಕಾಣುವ ದಿಕ್ಕಿನತ್ತ ನೋಡುತ್ತಿದ್ದನಾತ.

ದೇಗುಲದೊಳದೊಂದು ಮಬ್ಬು ಮಂಟಪವನು ಸೇರುವಂ;
ಹೋಗಿಬರುವ ಭಕುತ ಜನಕೆ ಮರುಕನೋಟ ತೋರುವಂ.
ಹಳೆಯ ಹಚ್ಚಡವನು ತಲೆಯಿನಡಿಯವರೆಗೆ ಹೊದ್ದವಂ
ಹೊಳೆವ ಕಣ್ಣ ಕಾಣದರ್ಗೆ ಮೂಟೆಯೆಂದೆ ಕಾಣುವಂ.

ದೇಗುಲ ಸೇರಿಕೊಳ್ಳುತ್ತಿದ್ದ ಆತ, ಅಷ್ಟಾಗಿ ಬೆಳಕಿರದ ಮಬ್ಬುಳ್ಳ ಮಂಟಪದ ಮೂಲೆಯಲ್ಲಿ ಮುಡಿಯಿಂದ ಅಡಿಯವರೆಗೂ ಹಳೆಯ ಚಾದರವನ್ನು ಹೊದ್ದು ಕೂತು, ಹೋಗಿ ಬರುವವರ ಕಡೆಗೆ ಮರುಕದ ನೋಟ ಬೀರುತ್ತಿದ್ದ; ಸರಿಯಾಗಿ ಪರಾಂಬರಿಸದವರಿಗೆ ಮೂಟೆಯಂತೇ ಕಾಣುತ್ತಿದ್ದ!

ಗುರುತನರಿತರಾರುಮಾನುಮೇನನಾನುಮೊರೆದೊಡಂ
ಕಿರುನಗೆಯಿನೆ ಮಾರುವೇಳ್ವನ್, ಆಡನತಿಯ ನುಡಿಗಳಂ.
ಅವನ ತಂಗಿಗೊಬ್ಬ ಮಗನು; ಮುದ್ದಿನಿಂದ ಬೆಳೆದನು;
ಇವನೆ ತಿಮ್ಮ ಗುರುಗೆ ಜೀವವಿವನೆ ಲೋಕವೆಲ್ಲವು.

ಯಾರಾದರೂ ಗುರುತು ಹಿಡಿದು ಮಾತನಾಡಿಸ ಹತ್ತಿದರೆ ಕಿರುನಗೆ ಬೀರಿ ಅವರನ್ನು ಸಾಗಹಾಕಿಬಿಡುತ್ತಿದ್ದ; ಜಾಸ್ತಿ ಮಾತನಾಡುತ್ತಿರಲಿಲ್ಲ. ಅವನ ತಂಗಿಗೊಬ್ಬ ಮಗನಿದ್ದು ಮುದ್ದಿನಿಂದ ಬೆಳೆಯುತ್ತಿದ್ದ ಆ ಮಗುವೇ ತಿಮ್ಮ ಗುರುವಿನ ಜೀವವೂ ಭಾವವೂ ಸರ್ವವೂ ಆಗಿದ್ದ.

ಸೋಮಿಯವನು; ಮಾವನಿವನನೆತ್ತಿ, ನಡಸಿ, ಲಾಲಿಸಿ,
ಪ್ರೇಮದಂಗಿ ತೊಡಿಸಿ, ಪದ್ಯ ಕಲಿಸಿ, ಬರಹ ತಿದ್ದಿಸಿ,
ನೋಡಿ ಮುಂಜಿಯಾದುದನ್ನು, ಕೇಳಿ ವಿದ್ಯೆ ಪೆಂಪನು,
ಷೋಡಶಾಬ್ದದುತ್ಸವವನು ಮಾಡಿ ಮಾವ ನಲಿದನು.

ಸೋಮಿ ಎಂಬ ಅಳಿಯನಿಗೆ ತಿಮ್ಮಗುರು ಪ್ರೇಮವೆಂಬ ಅಂಗಿಯನ್ನು ಹಾಕುತ್ತಿದ್ದ, ಪದ್ಯ ಕಲಿಸುತ್ತಿದ್ದ, ಬರಹ ಕಲಿಸುತ್ತಿದ್ದ, ನಡೆಸಿ, ಲಾಲಿಸಿ ಪಾಲಿಸುತ್ತಿದ್ದ. ಮುಂಜಿಯಾದುದನ್ನು ನೋಡಿ ಹೆಚ್ಚಿನ ವಿದ್ಯಾಭಾಸ ಹೇಳಿಕೊಟ್ಟು ಸಂತಸಪಟ್ಟ ತಿಮ್ಮಗುರು, ತನ್ನಳಿಯನ ಷೋಡಶಾಬ್ದವನ್ನು ಉತ್ಸವವಾಗಿ ಆಚರಿಸಿದ.

ಧನ್ಯಳೀಗ ತಾನೆನುತ್ತ ಸೋಮಿಯಜ್ಜಿ ಹಿಗ್ಗಿದಳ್;
ಇನ್ನು ಹತ್ತುವಾರ ಕಳೆಯಲಾಕೆ ಕಣ್ಣು ಮುಚ್ಚಿದಳ್.
ಬಳಿಕ ಮುಂದಿನೋದಿಗೆಂದು ಸೋಮಿಯು ಮೈಲಾರಕೆ
ತೆರಳ್ವುದೆಂದು ಸಿದ್ಧವಾಯಿತವನು ಮೂಟೆ ಕಟ್ಟಿದ.

ಮೊಮ್ಮಗನ ಬೆಳವಣಿಗೆಯನ್ನು ಕಂಡು ಸೋಮಿಯ ಅಜ್ಜಿ ಬಹಳ ಹಿಗ್ಗಿದಳು. ಸಂಭ್ರಮದ ಉತ್ಸವ ನಡೆದ ಎರಡೂವರೆ ತಿಂಗಳಲ್ಲೇ ಅಜ್ಜಿ ಪರಂಧಾಮವನ್ನು ಸೇರಿದಳು. ಅಜ್ಜಿಯ ಅಂತ್ಯಕ್ರಿಯೆಗಳು ನಡೆದಾ ನಂತರ, ತನ್ನ ಮುಂದಿನ ಓದಿಗಾಗಿ ಸೋಮಿ ಮೈಲಾರಕ್ಕೆ ಹೊರಟುನಿಂತ.

ಬಂದಿತವನ ಪಯಣದ ದಿನವವನ ಮೊಗದೊಳುತ್ಸಹ;
ಅಂದು ತಿಮ್ಮಗುರುವಿನ ದನಿಯಲ್ಲಿ ಕೊಂಚ ಗದ್ಗದ.
ಬೆರೆಯಿತಂದು ಮಾವನೊಳಗೆ ಸಂತಸದಲಿ ಚಿಂತೆಯು,
ಕೊರೆಯಿತವನ ಮನವ ಸೋದರಳಿಯನಗಲ್ವ ಬೆಸನವು.

ಸೋಮಿ ಹೊರಡುವ ದಿನ ಬಂದೇ ಬಂತು; ಸೋಮಿಯ ಮುಖದಲ್ಲಿ ಉತ್ಸಾಹ; ಆದರೆ ತಿಮ್ಮಗುರುವಿನ ಗರಳು ಗದ್ಗದಿತವಾಗಿತ್ತು-ಆತ ಮಾತನಾಡಲಾರ, ಆಡದೇ ಇರಲಾರ. ಸೋಮಿ ದೂರಹೋಗುತ್ತಿರುವುದು ಮಾವ ತಿಮ್ಮಗುರುವಿನಲ್ಲಿ ಚಿಂತೆಗೆ ಕಾರಣವಾಗಿತ್ತು, ಸಂತಸದ ಜೊತೆಗೇ ಚಿಂತೆಯೂ ಬೆರೆತು ತಿಮ್ಮಗುರುವಿನ ಮನವನ್ನು ಸದಾ ಅದು ಕೊರೆಯತೊಡಗಿತು.

ಐದುವಾರ ಕಳೆದು ತಿಮ್ಮ ಗುರುವಿಗಾಯ್ತು ವರ್ಗವು;
ಮೂಡಲೂರಿನಿಂದಲವನು ಮಂಡುಗೆರೆಯ ಸೇರ್ದನು.
ಕೆಲವು ತಿಂಗಳಾದ ಬಳಿಕದೊಂದು ಸಂಜೆ ಮಾವನು
ತಲುಪಿದ ಮೈಲಾರವನಾ ಪುರದ ಬೆಡಗ ಕಂಡನು.

ಐದು ವಾರಗಳು ಹಾಗೂ ಹೀಗೂ ಕಳೆದಿದ್ದವು; ತಿಮ್ಮ ಗುರುವಿಗೆ ಮೂಡಲೂರಿನಿಂದ ಮಂಡಗೆರೆಗೆ ವರ್ಗವಾಯ್ತು. ಮಂಡಗೆರೆಗೆ ತೆರಳಿದ ಕೆಲವು ತಿಂಗಳುಗಳ ಬಳಿಕ, ಆತ ಸೋಮಿಯನ್ನು ನೋಡಬೇಕೆಂಬ ತಹತಹವನ್ನು ಹತ್ತಿಕ್ಕಲಾರದೇ ಮೈಲಾರಕ್ಕೆ ನಡೆದ; ಮೈಲಾರ ಪಟ್ಟಣದ ಬೆಡಗನ್ನು ಕಂಡ.

ಅರಸಿಯರಸಿ ಸೋಮಿಯ ವಿದ್ಯಾರ್ಥಿನೆಲೆಯ ಮುಟ್ಟಿದ;
ಬೆರಗುಪಟ್ಟನದರ ಜರಬಿನಂದಗಳನು ನೋಡುತ.
ಬಳಿಯ ಬಯಲಿನಲ್ಲಿ ಸೋಮಿ ಚಂಡನಾಡುತ್ತಿದ್ದನು,
ಗೆಳೆಯರೊಡನೆ ನಾಗರಿಕದ ಪೆರ್ಮೆ ತೋರುತ್ತಿದ್ದನು.

ಸೋಮಿಯ ವಿದ್ಯಾರ್ಥಿನಿಲಯವನ್ನು ಅರಸುತ್ತಾ ಅರಸುತ್ತಾ ಅಂತೂ ತಿಮ್ಮಗುರು ಅಲ್ಲಿಗೆ ಬಂದಾಗ, ಸೋಮಿ ಪಕ್ಕದ ಬಯಲಿನಲ್ಲಿ ಗೆಳೆಯರೊಡನೆ ಚೆಂಡಾಟವಾಡುತ್ತಿದ್ದ. ವಿದ್ಯಾರ್ಥಿನಿಲಯದ ಜರ್ಬನ್ನು ಕಂಡು ತಿಮ್ಮಗುರು ಬೆರಗಾಗಿದ್ದ.

ಮಾತು, ನಗುವು, ನಡಿಗೆಯುಡಿಗೆ-ಎಲ್ಲ ಕೊಂಚ ಹೊಸಬಗೆ,
ರೀತಿ ದೊಡ್ಡದಾಯ್ತು ಮಾವ ತಂದ ಹಳ್ಳಿ ಕಣ್ಣಿಗೆ.
ಆಟಮುಗಿಸಿ ಬರಲಿ ಸೋಮಿಯೆಂದು ಮಾವ ಕುಳಿತನು;
ನೋಟವ ಕೈಸಾಲೆಯಿಂದ ನೋಡಿ ಘಳಿಗೆ ಕಳೆದನು.

ನಗರದ ಜನಜೀವನ ಹಳ್ಳಿಗಳಿಗಿಂತ ಬೇರೆ. ಮಾತು-ನಗು, ನಡಿಗೆ-ಉಡುಗೆ ಎಲ್ಲದರಲ್ಲೂ ಹಳ್ಳಿಗಿಂತ ಪಟ್ಟಣ ಬಹಳ ಭಿನ್ನ. ನಾಗರಿಕತೆಯ ಹೆಸರಿನಲ್ಲಿ ಹೊಸ ಹೊಸ ರೀತಿಯಲ್ಲೇ ಎಲ್ಲವೂ ಕಾಣುತ್ತವೆ. ಹಳ್ಳಿಯ ಸಾಚಾತನ, ಅಲ್ಲಿನ ಸರಳತೆ ಪಟ್ಟಣಿಗರಲ್ಲಿ ಎಂದೂ ಇರುವುದಿಲ್ಲ. ಹಳ್ಳಿಗನಾದ ತಿಮ್ಮಗುರುವಿಗೆ ಇದೆಲ್ಲಾ ಹೊಸತು. ಕೈಸಾಲೆಯಲ್ಲೇ ಅತ್ತಿತ್ತ ನೋಡುತ್ತಾ ಸೋಮಿ ಬರಲಿ ಎಂದು ಕಾದು ಕುಳಿತನಾತ.

ಕತ್ತಲಾಗೆ ಸೋಮಿ ಗೆಳೆಯರೊಡನೆ ನೆಲೆಗೆ ಬಂದನು;
ಅತ್ತಲಿದ್ದ ಮಾವನನಚ್ಚರಿನೋಟದೆ ಕಂಡನು.
"ಏನು ಮಾವ? ಎಂದು ಬಂದೆ? ಹೇಗೆ ಬಂದೆ?"-ಎನ್ನುತ
ಸೋಮಿ ಕೇಳುತಿದ್ದನೊಲಿದು; ಕೆಲದಿ ಕೆಳೆಯರಿದ್ದರು.

ಆಡ್ತಾ ಆಡ್ತಾ ಕತ್ತಲಾವರಿಸಿತು, ಸೋಮಿ ಗೆಳೆಯರೊಟ್ಟಿಗೆ ವಿದ್ಯಾರ್ಥಿನಿಲಯಕ್ಕೆ ಮರಳಿದಾಗ ಅವನಿಗೆ ಅಚ್ಚರಿ ಕಾದಿತ್ತು! ದೂರದಲ್ಲಿ ಮಾವ ಕುಳಿತಿದ್ದುದು ಕಾಣುತ್ತಿತ್ತು. ಗೆಳೆಯರ ಜೊತೆಗೂಡಿ ಮಾವನ ಹತ್ತಿರಕ್ಕೆ ತೆರಳಿದ ಸೋಮಿ " ಏನು ಮಾವ? ಯಾವಾಗ ಬಂದೆ? ಹೇಗೆ ಬಂದೆ? ಎಲ್ಲಾ ಕ್ಷೇಮವೇ?" ಎಂದೆಲ್ಲಾ ಕೇಳತೊಡಗಿದ.

ಮಾವ-"ಎಲ್ಲ ಚೆನ್ನ; ಸೋಮಿ, ನೀನು ಸುಖವೆ?"-ಎಂದನು.
ಆದರೇನು?  ಸೋಮಿ ನಡತೆಯೊಳಗದೇನೊ ಹಿಡಿತವು;
ಭೇದವೇನೊ ಆಯಿತೆಂದು ಮಾವನಿಗಂ ಬಿಗಿತವು.
ಹರಕಲಂಗಿ, ಹುಲುಸುಗಡ್ಡ, ಹಳ್ಳಿರೀತಿ-ಮಾವನು;
ಪುರದ ವೇಷ, ಠೀವಿ ನೋಟ, ಆಂಗ್ಲರೀತಿ- ಅಳಿಯನು.

ಉಭಯ ಕುಶಲೋಪರಿ ಮಾತು ಸಾಗುತ್ತಿದ್ದರೂ, ಸೋಮಿಯನ್ನು ಮಾವ ಅಪಾದಮಸ್ತಕ ನೋಡೇ ನೋಡುತ್ತಾನೆ. ಸೋಮಿಯಲ್ಲಿ ಬಹಳ ಬದಲಾವಣೆಯಾಯ್ತಲ್ಲಾ ಎಂಬ ಅನಿಸಿಕೆ ಮಾವನೊಳಗೆ. ಮಾವನದೋ ಹಳ್ಳಿಯ ಜೀವನ, ಹರುಕಲಂಗಿ, ಹುಲುಸಾದ ಗಡ್ಡ, ಅಳಿಯ ಸೋಮಿಯದೋ ನಗರದ ಜೀವನ, ಠೀವಿಯಲ್ಲಿ ಟಾಕುಟೀಕು, ಆಂಗ್ಲ ಶೈಲಿಯ ವೇಷಭೂಷಣ!

ಕೆಲವು ನಿಮಿಷವಿದ್ದಿತಿಂತು; ಕೆಳೆಯರೆಲ್ಲ ತೆರಳಲು,
ಕಲೆತರಾಗ ಮಾವ ಅಳಿಯ ಹಿಂದಿನಂತೆ ಹರಟಲು.
ಮಾವ ತನ್ನ ಮೂಟೆ ಬಿಚ್ಚಿ,-’ಕೋ’ ಎನುತ್ತ ತೆಗೆದನು,
ಆವುತುಪ್ಪವೆರಡು ಕುಡಿಕೆ,ಅವಲಕ್ಕಿಯು ಬೆಲ್ಲವು,

ಒಂದಷ್ಟು ನಿಮಿಷಗಳ ಕಾಲ ಹೀಗೇ ಸಂದಿತು. ಆಮೇಲೆ ಸೋಮಿಯ ಗೆಳೆಯರೆಲ್ಲಾ ತಂತಮ್ಮ ಜಾಗಕ್ಕೆ ತೆರಳಿದರು. ಆಗ ಮಾವ-ಅಳಿಯ ಮೊದಲಿನಂತೇ ಮಾತುಕತೆಗೆ ಇಳಿದರು. ಮಾವ ತಾನು ತಂದಿದ್ದ ಬಟ್ಟೆಗಂಟು ಬಿಚ್ಚಿದ. ಅದರಿಂದ ಹಸುವಿನ ತುಪ್ಪ-ಎರಡು ಕುಡಿಕೆ, ಅವಲಕ್ಕಿ, ಬೆಲ್ಲ ಇತ್ಯಾದಿಗಳನ್ನು ತೆಗೆಯುತ್ತಾ ಒಂದೊಂದನ್ನೇ ಕೊಡಹತ್ತಿದ.

ಅರಳುಹಿಟ್ಟು, ಕೋಡುಬಳೆಗಳ್-ಇಷ್ಟನವನು ಕೊಟ್ಟನು.
ಮುರಿದು ಸೋಮಿ ಕೋಡುಬಳೆಯನೊಡನೆ ಬಾಯಿಗಿಟ್ಟನು;
ಬೇಗಬೇಗ ಮೇಜಿನೊಳಗೆ ಮಿಕ್ಕುದೆಲ್ಲ ಸುರಿದನು;
ಜಾಗಟೆ ಸದ್ದಾಗೆ ಸಂಜೆಯೂಟಕೆಂದು ಹೊರಟನು.

ಆ ಗಂಟಿನಲ್ಲಿ ಅರಳುಹಿಟ್ಟು, ಕೋಡುಬಳೆಗಳೂ ಇದ್ದವು. ಕೋಡುಬಳೆಯನ್ನು ಮುರಿದು ತಿನ್ನುತ್ತಾ ಸೋಮಿ ಮಿಕ್ಕಿದ ಎಲ್ಲವನ್ನೂ ತನ್ನ ಮೇಜಿನ ಡ್ರಾಯರಿನಲ್ಲಿ ತುರುಕುತ್ತಿದ್ದಾಗಲೇ ಸಂಜೆಯ ಊಟಕ್ಕೆ ಕರೆಬಂತು, ಜಾಗಟೆ ಸದ್ದಿಗೆ ಎದ್ದುನಿಂತ ಸೋಮಿ ಊಟಕ್ಕೆ ಹೊರಟ.

ಮಾವನು "ನಾನೂಟಮಾಡೆ; ಏಕಾದಶಿ" ಎನ್ನಲು,
ಸೋಮಿ ಪೇಟೆಯಿಂದ ಕದಲಿ ದ್ರಾಕ್ಷಿ ತಂದುಕೊಟ್ಟನು.
ಮಾವ ಸಂಜೆ ಸಂಧ್ಯೆ ಮಾಡಿ ಫಲವನುಂಡು ಕುಳಿತನು;
ಸೋಮಿಯೂಟ ಮುಗಿಸಿಬಂದು ಮಾವನ ಬಳಿ ಕುಳಿತನು.

ಮಾವ ತಾನು ಊಟಮಾಡುವುದಿಲ್ಲ-ಇಂದು ಏಕಾದಶಿ ಎಂದಾಗ, ಸೋಮಿ ಪೇಟೆಯಿಂದ ಬಾಳೇಹಣ್ಣು, ದ್ರಾಕ್ಷಿಗಳನ್ನು ತಂದುಕೊಟ್ಟ. ಮಾವ ಕೈಕಾಲು ತೊಳೆದು, ಸಂಧ್ಯಾವಂದನೆ ಮುಗಿಸಿ, ಫಲಾಹಾರ ಭುಂಜಿಸಿ ಕುಳಿತ. ಸೋಮಿ ಹೋಗಿ ಊಟಮುಗಿಸಿಕೊಂಡು ಬಂದ. ಮುಂದೆ ನೋಡೋಣ:

ಮಾತುಕತೆಗಳಾಗ ಸಾವಕಾಶದಿಂದ ಪರಿದುವು,
ಪ್ರೀತಿಮಾತು, ಮನೆಯಮಾತು, ಊರ ಮಾತು-ಎಲ್ಲವು.
ಏನು ಮಾತು! ಏನು ಹರಟೆ! ಏನು ಅಂತರಂಗಗಳ್!
ಏನದೇನೊ ಸವಿಯ ನೆನಪು! ಏನೊ ನಗುತರಂಗಗಳ್!

ಬಳಿಕ ಇಬ್ಬರಲ್ಲೂ ಮಾತುಕತೆಗಳು ನಡೆದವು. ಬಹಳದಿನಗಳ ನಂತರ ಇಬ್ಬರೂ ಭೇಟಿಯಾಗಿದ್ದರು. ಪ್ರೀತಿಮಾತು, ಮನೆಯಲ್ಲಿ ಆಡುತ್ತಿದ್ದ ಸಲುಗೆಯ ಮಾತು, ಊರ ತಿಟ್ಟಿನ ಮಾತು, ಗುಟ್ಟಿನಮಾತು ಎಲ್ಲವೂ ನಡೆದವು. ಯಾವುದೋ ಹಳೆಯ ಘಟನೆಗಳನ್ನು ನೆನೆದು ಇಬ್ಬರೂ ನಕ್ಕರು, ನಗು ಅಲೆಅಲೆಯಾಗಿ ಹೊಮ್ಮಿತು. 

ತಿಳಿದನಾಗ ಮಾವ ತನ್ನ ಸೋಮಿಯೆ ಇವನೆನ್ನುತ,-
ಎಳೆಯನಾಗಿ ತನ್ನ ತೊಡೆಯಳಾಡಿದವನೆ ಎನ್ನುತ.
ಕಳೆಯಲು ಮುಕ್ಕಾಲು ರಾತ್ರಿಯಾಗ ಮಾವನೆದ್ದನು;
ತಲೆಗೆ ತನ್ನ ಮೂಟೆಯನ್ನು ಮರಳಿ ಹೊರಿಸಿ ನಿಂತನು.

ಮಾತಿನಲ್ಲಿ ಮಾವ ತನ್ನ ಮೊದಲಿನ ಸೋಮಿಯನ್ನೇ ಕಂಡ. ಚಿಕ್ಕವನಾಗಿದ್ದಾಗ ತನ್ನ ತೊಡೆಯಮೇಲೆ ಮಲಗಿ ಆಡುತ್ತಿದ್ದ ಅದೇ ಸೋಮಿ ಇಷ್ಟೆತ್ತರಕ್ಕೆ ಬೆಳೆದು ನಿಂತಿದ್ದಾನೆ, ಆದರೂ ಸೋಮಿ ಸೋಮಿಯೇ ಎಂಬುದು ಮಾವನ ಮನಕ್ಕೆ ಖಾತರಿಯಾಯ್ತು. ಮಾತಾಡ್ತಾ ಮಾತಾಡ್ತಾ ಮುಕ್ಕಾಲು ರಾತ್ರಿ ಕಳೆದುಹೋಗಿತ್ತು. ತಂದ ಮೂಟೆಯನ್ನು ಮರಳಿ ತನ್ನ ತಲೆಯಮೇಲೆ ಇರಿಸಿಕೊಳ್ಳುತ್ತಾ ಮಾವ ಎದ್ದುನಿಂತ.

"ಏನು ಮಾವ ಇಷ್ಟು ಬೇಗ?" ಎನುತ ಸೋಮಿಯೆದ್ದನು;
-"ಏನಿದೇನು ಹೊರಟೆ?" ಇನ್ನುಮೆಷ್ಟೊ ಹೇಳಲಿರುವುದು.
ಇಂದು ನಿಲ್ಲು, ಮಾವ; ಊಟಗೈವ ನಾವು ಜೊತೆಯಲಿ"-
ಎಂದು ಸೋಮಿ ಹಂಬಲಿಸುತ ಮಾವನನ್ನು ಬೇಡಿದ.

"ಏನು ಮಾವ, ಇಷ್ಟೊತ್ನಲ್ಲಿ, ಅಷ್ಟು ಬೇಗ ಹೋರಡೋದೇ, ಇಂದು ನಿಲ್ಲು, ನಾಳೆ ಒಟ್ಟಿಗೇ ಊಟಮಾಡಿ ಇನ್ನಷ್ಟು ಬಾಕಿ ಹೇಳಲಿಕ್ಕಿರುವ ಸುದ್ದಿಯನ್ನೆಲ್ಲಾ ಹೇಳಿಮುಗಿಸಿ ಆಮೇಲೆ ಹೊರಟರಾಯ್ತು" ಎಂಬುದು ಸೋಮಿಯ ಆಗ್ರಹ ಪೂರ್ವಕ ವಿನಂತಿ. 

"ಕೇಳು ಸೋಮಿ"-ಎಂದ ಮಾವ-"ವೇಳೆ ಪಯಣಕಿದು ಸರಿ;
ನಾಳೆಯೆನಗೆ ಶಾಲೆಯಿರುವುದದನು ತಪ್ಪಲಾಗದು.
ಮೊನ್ನೆ ರಾತ್ರಿ ಕನಸಿನಲ್ಲಿ ನಿನ್ನ ಕಂಡೆನೇತಕೋ!
ಕಣ್ಣುತುಂಬ ಕಾಣುವಾಶೆ ತಡೆಯಲಾರದಾಯಿತು.

ಇಂತಹ ಸೋದರ ಮಾವಂದಿರು ಅದೆಷ್ಟು ಮಂದಿ ಮಕ್ಕಳಿಗೆ ಸಿಕ್ಕಾರು? "ಸೋಮಿ ಇಂದು ರವಿವಾರ, ಪಯಣಕ್ಕೆ ಸರಿ ಸಮಯ, ಸೋಮವಾರ ನನಗೆ ಶಾಲೆಯಿದೆ, ಹೋಗಲೇಬೇಕು. ಮೊನ್ನೆ ಕನಸಿನಲ್ಲಿ ನಿನ್ನನ್ನು ಕಂಡೆ, ನಿನ್ನನ್ನು ಕಾಣುವಾಶೆ ಬಹಳವಾಗಿ ತಡೆಯದಾದೆ-ಅದಕ್ಕೇ ಹೀಗೆ ಬಂದೆ" ಎಂದ ಮಾವ-ತಿಮ್ಮಗುರು.

ನಿನ್ನೆ ರಜವ ಪಡೆದು ನಡೆದು ಬಂದೆನಿಂದು ರವಿದಿನ;
ತಣ್ಣನೆ ಹೊತ್ತೀಗ ಹೊರಡೆ ದಾರಿ ಬೇಗ ಸವೆವುದು.
ಕೀರುಹೊಳೆಯ ದಡದೊಳಿರುವೆ ಹತ್ತುಗಂಟೆ ಸಮಯಕೆ;
ಪಾರಣೆಯನು ಸತ್ರದಲ್ಲಿ ಮುಗಿಸಿ ದಣಿವನಾರಿಸಿ,

"ನಿನ್ನೆ ಶನಿವಾರ, ರಜವನ್ನು ಪಡೆದು, ನಡೆದು ಇಲ್ಲಿಗೆ ಬಂದೆನಪ್ಪಾ, ಈಗ ಭಾನುವಾರದ ಬೆಳಗಿನಜಾವದ ತಣ್ಣನೆಯ ವಾತಾವರಣದಲ್ಲಿ ನಡೆಯಹೊರಟರೆ ದಾರಿ ದೂರವೆನಿಸದು, ಬೆಳಗಿನ ಹತ್ತುಗಂಟೆಯ ವೇಳೆಗೆ ಕೀರುನದಿಯ ದಡವನ್ನು ಸೇರಿಬಿಡುತ್ತೇನೆ. ಅಲ್ಲಿಯೇ ಸ್ನಾನಾದಿಗಳನ್ನು ಪೂರೈಸಿ, ಛತ್ರದಲ್ಲಿ ದ್ವಾದಶಿಯ ಪಾರಣೆ ಮುಗಿಸಿಕೊಂಡು ಮುಂದಕ್ಕೆ ಸಾಗುತ್ತೇನೆ."  [ನೆನಪಿಡಿ, ಏಕಾದಶಿಯ ಉಪವಾಸದಂದು ಮಾವ ತಿಮ್ಮಗುರು ತನ್ನ ಅಳಿಯ ಸೋಮಿಯಮೇಲಿನ ಪ್ರೀತಿಗಾಗಿ, ಆತನನ್ನು ಕಾಣಲಿಕ್ಕಾಗಿ ಅದೆಷ್ಟೋ ಮೈಲಿಗಳನ್ನು ನಡೆದು ಆತನಲ್ಲಿಗೆ ಬಂದಿದ್ದ!]

ಮರಳಿ ಮೂರು ಘಂಟೆ ನಡೆದು, ಸಂಜೆಗೂರ ಸೇರುವೆ;
ಇರುವೆ ನಾಳೆ ಮಂಡುಗೆರೆಯೊಳುದಯ ಶಾಲೆವೇಳೆಗೆ."
-ಇಂತು ಹೇಳುತಡಿಯನಿಡುತ ಹೊರಟ ತಿಮ್ಮ ಮಾವನು;
ಚಿಂತೆಪಡುತ ಅಳಿಯ ಕೊಂಚ ದೂರ ಕೂಡ ನಡೆದನು.

"ಮರಳಿ ಮತ್ತೆ ಮೂರುಘಂಟೆಯ ಕಾಲ ನಡೆದು ಸಂಜೆಯ ಹೊತ್ತಿಗೆ ಊರನ್ನು ಸೇರಿಕೊಳ್ಳುವೆ. ನಾಳೆ ಸೂರ್ಯೋದಯದ ಸಮಯಕ್ಕೆ ಮಂಡುಗೆರೆಯ ಶಾಲೆಯಲ್ಲಿ ಇರುತ್ತೇನೆ" ಎಂದು ಹೆಜ್ಜೆಹಾಕತೊಡಗಿದ ತಿಮ್ಮಮಾವನ ಜೊತೆಗೆ ಸೋಮಿ ತಾನೂ ಚಿಂತೆಯಿಂದ ಒಂದಷ್ಟು ದೂರ ಹೆಜ್ಜೆ ಹಾಕಿದ.

ಬೆಳಕು ಹರಿಯೆ ವೆಸನದಿಂದ ಸೋಮಿ ನೆಲೆಗೆ ತಿರುಗಿದ;
ತಳಮಳವನು ನುಂಗಿ ಮಾವ ನಡೆದನೆರಡು ಗಾವುದ.
ಒಂದು ತಿಂಗಳಾದ ಬಳಿಕದೊಂದು ದಿವಸ ಸೋಮಿಯ
ತಂದೆಗೊಂದು ಪತ್ರ ಬಂತು, ತಿಮ್ಮಗುರುವಿನಾಶಯ.

ಬೆಳಗಾಗಿ ಬಿಟ್ಟಿತ್ತು, ನಿತ್ಯದ ಕೆಲಸಗಳ ಚಿಂತೆಯಲ್ಲಿ ವ್ಯಸ್ತನಾದ ಸೋಮಿ ತನ್ನ ನೆಲೆಗೆ ಹಿಂದಿರುಗಿದ; ಅಳಿಯನನ್ನು ಬಿಟ್ಟಿರಲಾರದ ತಳಮಳದಲ್ಲೇ ತಿಮ್ಮಗುರು ಎರಡು ಗಾವುದ ದೂರ ನಡೆದ. ಇಬ್ಬರಿಗೂ ಇದು ಕನಸೋ ಎಂಬ ರೀತಿ ಆಗಿಹೋಯ್ತು. ಅದಾದ ತಿಂಗಳೊಳಗೆ ಒಂದು ದಿನ ಸೋಮಿಯ ತಂದೆಗೆ ತಿಮ್ಮಗುರುವಿನಿಂದ  ಪತ್ರವೊಂದು ಬಂತು.

ಅದರೊಳಾತನಿಂತು ಬರೆದನೆರಗಿ ಭಾವನಡಿಯೊಳು:-
"ಇದುವೆ ನನ್ನಕಡೆಯ ಬರಹ; ತಿರುಪತಿಗಾಂ ಬಂದಿಹೆಂ;
ಎನಗೆ ಕೆಲಸ ಸಾಕೆನುತ್ತ ಮೇಲಕೆ ನಾಂ ಬರೆದಿಹೆಂ;
ಋಣದ ರೊಕ್ಕಲೆಕ್ಕವೆಲ್ಲ ಶೇಷ ಬಿಡದೆ ಸಲಿಸಿಹೆಂ;

ಅದರಲ್ಲಿ ಆತ ಹೀಗೆ ಬರೆದಿದ್ದ: "ತೀ|| ಭಾವನವರ ಅಡಿದಾವರೆಗಳಲ್ಲಿ ನಮಸ್ಕಾರಗಳು. ನೀವೆಲ್ಲರೂ ಕ್ಷೇಮವೆಂದು ಭಾವಿಸುತ್ತೇನೆ. ಇದುವೇ ನನ್ನ ಕಡೆಯ ಬರಹ. ನಾನು ತಿರುಪತಿಗೆ ಬಂದಿದ್ದೇನೆ. ನನಗೆ ಕೆಲಸ ಸಾಕೆಂದು ನನ್ನ ಮೇಲಧಿಕಾರಿಗಳಿಗೆ ಬರೆದಿದ್ದೇನೆ ಮತ್ತು ನನ್ನ ಜೀವಿತದ ರೊಕ್ಕದ ಋಣಬಾಧೆಗಳ ಲೆಕ್ಕವನ್ನು ಶೇಷ ಬಿಡದಂತೇ ಚುಕ್ತಾಮಾಡಿದ್ದೇನೆ.

ಮುಂದೆ ಹೀಗೆ ಯಾತ್ರೆ ಕಾಶಿಗೆಂದು ಮನವ ಮಾಡಿಹೆಂ.
ದುಂದುಗವೇನೆನ್ನೊಳಿಲ್ಲ; ವೆಸನಕಿಲ್ಲ ಕಾರಣಂ.
ಸೋಮಿ ಹರೆಯವಾಂತ ಬಳಿಕ ಹಗುರವಾಯಿತೆನ್ನೆದೆ.
ಸ್ವಾಮಿಕೃಪೆಯಿನವನು ಬೆಳೆದು ಸೊಗವ ಯಶವ ಗಳಿಸುಗೆ.

ಮುಂದೆ ಕಾಶೀಯಾತ್ರೆಗೆ ಹೋಗಬೇಕೆಂದುಕೊಂಡಿದ್ದೇನೆ. ದುಂದುವೆಚ್ಚವನ್ನು ಮಾಡುವ ಮನುಷ್ಯ ನಾನಲ್ಲವಾದ್ದರಿಂದ ಚಿಂತೆಗೆ ಕಾರಣವಿಲ್ಲ. ಸೋಮಿ ಇನ್ನೂ ಚಿಕ್ಕ ಹುಡುಗ ಎಂಬುದೇ ತಲೆಯಲ್ಲಿ ಬಹಳ ಕೊರೆಯುತ್ತಿತ್ತು; ಈಗಾತ ಹರೆಯದವನಾದ್ದರಿಂದ ಅದನ್ನು ನೆನೆದು ಹೃದಯ ಹಗುರವಾಯ್ತು. ಸ್ವಾಮಿ ಕೃಪೆಯಿಂದ ಆತ ಬೆಳೆದು, ಸುಖವನ್ನೂ-ಯಶಸ್ಸನ್ನೂ ಗಳಿಸಲಿ.

ಏನೊ ಮಮತೆ, ಏನೊ ಮೋಹ, ಏನೊ ಋಣದ ಬಂಧನ
ಎನ್ನನಿಷ್ಟುದಿನವು ಕಟ್ಟಿ ನಿಲಿಸಿತವನ ಕಾರಣ. 
ಈಗಳವನು ತನ್ನ ಶಕ್ತಿಯಿಂದ ಬೆಳೆಯೆ ತಕ್ಕನು;
ಈಗಳೆನಗಮಂತರಾತ್ಮ ಸೇವೆಯೊಂದೆ ತಕ್ಕುದು.

ಸೋಮಿಯ ಮೇಲಿನ ಯಾವುದೋ ಮಮತೆ, ಏನೋ ಮೋಹ, ಏನೋ ಋಣಾನುಬಂಧ ನನ್ನನ್ನು ಇಷ್ಟುದಿನ ಕಟ್ಟಿಹಾಕಿತ್ತು. ಈಗ ಆತ ಸ್ವಯಂ ತಾನೇ ಬೆಳೆಯಬಲ್ಲ ಎಂಬುದು ಗೊತ್ತಾಗಿದೆ. ಅಂತರಾತ್ಮದ ಸೇವೆಗೆ-ಚಿಂತನೆಗೆ ಇದು ನನಗೆ ಸಕಾಲ.

ಇಂತಹದಿನ ಬರಲೆನುತ್ತ ಬೇಡಿಕಾಯುತಿದ್ದೆನು;
ಸಂತಸವನು ಸೋಮಿಯೇಳ್ಗೆಯಿಂದಲೀಗ ಕಂಡೆನು.
ಇನ್ನದೇನುಮಿಲ್ಲಮೆನಗೆ ಮನಸು ಬೇಳ್ಪ ಭಾಗ್ಯವು;
ಇನ್ನು ಬೇರೆ ತೋರದೀಗ ಲೋಕದಿ ಕರ್ತವ್ಯವು.

ಇಂಥಾ ದಿನಕ್ಕಾಗಿಯೇ ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಸೋಮಿಯ ಏಳ್ಗೆಯನ್ನು ಕಂಡು ಸಂತಸಪಟ್ಟಿದ್ದೇನೆ. ಮನಸು ಬೇಡುವಂಥಾ ಯಾವುದೇ ಭಾಗ್ಯದಬೇಡಿಕೆ ಎನ್ನೊಳಿಲ್ಲ, ಲೋಕದಲ್ಲಿ ಮಾಡಬೇಕಾದ ಕರ್ತವ್ಯವೂ ಬೇರೆ ಯಾವುದೂ ಕಾಣಿಸುತ್ತಿಲ್ಲ.

ಒದಗಿತೀಗಳಾಯುವ ಶಿವಸೇವೆಗೀವ ಸಮಯವು;
ಇದುವೆ ಸಮಯ ಪುಣ್ಯಯಾತ್ರೆಗಿನ್ನು ತಡವು ಸಲ್ಲದು.
ನಾನು ಮಂಡುಗೆರೆಯೊಳಿದ್ದ ಮನೆಯೊಳೊಂದು ಗೂಡಿನೊಳ್
ಏನೊ ಬರೆದ ಕಡತವೊಂದನಿರಿಸಿರುವೆನು ಗಂಟಿನೊಳ್;

ಪರಮಾತ್ಮನ ಸೇವೆಗೆ ಮಿಕ್ಕ ಆಯುಷ್ಯವನ್ನು ವಿನಿಯೋಗಿಸಲು ಇದು ತಕ್ಕುದಾದ ಸಮಯ. ಇನ್ನು ತಡಮಾಡಬಾರದು-ಪುಣ್ಯಯಾತ್ರೆ ನಡೆಸಲೇಬೇಕು. ನಾನು ಮಂಡುಗೆರೆಯಲ್ಲಿ ವಾಸವಿದ್ದ ಮನೆಯ ಗೋಡೆಯ ಗೂಡಿನಲ್ಲಿ, ಬಟ್ಟೆಯ ಗಂಟಿನಲ್ಲಿ ಏನೋ ಬರೆದ ಕಡತವೊಂದನ್ನು ಇರಿಸಿದ್ದೇನೆ.

ಸೋಮಿಯದನು ನೋಡಿ ತೆಗೆದುಕೊಳುವೊಡಂತು ಮಾಡಲಿ;
ನೀಮದಾರುಮೆನ್ನ ತುಂಬ ನೆನೆಯದಿರಿರಿ-ಮರೆಯಿರಿ.
ಪ್ರೇಮವುಕ್ಕಿ ಬೆಸನ ಕುದಿದೊಡಾಗ ದೀಪವೊಂದನು
ಸೋಮಶಿವನ ಗುಡಿಯೊಳಿರಿಸಿ ’ದೇವಗೆ ನಮೊ’ಯೆನ್ನಿರಿ.

ಸೋಮಿ, ಆ ಗಂಟನ್ನು ತೆರೆದು, ತನಗೇನಾದರೂ ಬೇಕಿದ್ದರೆ ತೆಗೆದುಕೊಳ್ಳಲಿ. ನೀವ್ಯಾರೂ ನನ್ನ ಬಗ್ಗೆ ಬಹಳ ನೆನೆಯಬೇಡಿ, ಮರೆತುಬಿಡಿ. ಮಾನವ ಸಹಜ ಪ್ರೇಮವುಕ್ಕಿ ದುಃಖವುಮ್ಮಳಿಸಿದಾಗ, ಸೋಮಶಿವನ ಗುಡಿಯಲ್ಲಿ ದೀಪವೊಂದನ್ನು ಉರಿಸಿ, ದೇವರಿಗೆ ನಮೋ ಎನ್ನಿರಿ.

ದೇವದೇವನೊಲಿದು ನಿಮ್ಮನೆಲ್ಲ ಹರಸಿ ಸಲಹುವಂ.
ಜೀವಪಥವ ಸುಗಮವೆನಿಸಿ ನಿಮ್ಮನೆಲ್ಲ ನಡಸುವಂ"

ದೇವದೇವನು ಒಲಿದು, ನಿಮ್ಮನ್ನೆಲ್ಲಾ ಹರಸಿ ಸಲಹುತ್ತಾನೆ. ಜೀವನ ಸುಗಮವಾಗಿ ಸಾಗುವಂತೇ ನಡೆಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ." --ಎಂದು ಆ ಪತ್ರ ಸಾರಿತು.

ಆಯಿತಿನಿತು ವ್ಯಾಕುಲವೀಯೋಲೆಯಿಂದ ಸೋಮಿಯ
ತಾಯಿತಂದೆಯರಿಗೆ; ಅವನ ಕಣ್ಣೊಳಶ್ರುವುಕ್ಕಿತು.
ಮಂಡುಗೆರೆಗೆ ಸೋಮಿ ಹೋಗಿ ನೋಡಿದನಾ ಕಡತವ;
ಕಂಡನದೊರಳಿನಿತು ಬಾಳ್ಗೆ ಸಲುವ ತತ್ತ್ವ ಮಥಿತವ.
ಸಖರ ತೃಪ್ತಿಗೆಂದು ಸೋಮಿಯಾಯ್ದು ಹಲವು ಬಂತಿಯ
ಲಿಖಿಸಿದ ಪಡಿಹೊತ್ತಗೆಯಿದು ಮಂಕುತಿಮ್ಮ ಕಂತೆಯ.

ಪತ್ರವನ್ನೋದಿದ ಸೋಮಿಯ ತಂದೆ-ತಾಯಂದಿರು ಅತ್ತರು, ಸೋಮಿಯ ಕಣ್ಣಲ್ಲಿ ಧಾರೆ ಧಾರೆಗಳು ಹರಿದವು. ಆದರೂ ಮಾವನ ಆಜ್ಞೆಯೋ ಎಂಬಂತೇ, ಮಾವ ಬಿಟ್ಟುಹೋದ ಕಡತದಲ್ಲಿ, ಮಾವ ತೊರೆದುಹೋದ ಆ ಮನೆಯಲ್ಲಿ ಅದೇನಿದ್ದೀತು ಎಂಬುದನ್ನು ನೋಡಹೊರಟ ಸೋಮಿಗೆ ಬಾಳಪಥಕೆ ಅನ್ವಯವಾಗಬಲ್ಲ ಬಹುವಿಧ ತತ್ತ್ವಗಳ ರಾಶಿ ರಾಶಿ ಬರಹಗಳು ಕಂಡವು. ಅವುಗಳಲ್ಲಿ ಹಲವು ಬಂತಿಯನ್ನು ಸೋಮಿ ಆಯ್ದುಕೊಂಡ, ಅವುಗಳನ್ನು ಅಕ್ಷರರೂಪಕ್ಕೆ ಅಚ್ಚಿಗೆ ಅಣಿಗೊಳಿಸಿ ಹೊತ್ತಗೆ ರೂಪದಲ್ಲಿ ಸಿದ್ಧಪಡಿಸಿಸುದೇ ’ಮಂಕುತಿಮ್ಮನ ಕಗ್ಗ’ ಎಂಬ ಕಂತೆ ಎಂದು ಸೋಮಿ ಅರ್ಥಾತ್ ಡಿವಿಜಿ ಹೇಳಿದ್ದಾರೆ! ಕಗ್ಗಗಳನ್ನು ತಾನೇ ಹೊಸೆದರೂ, ಕಗ್ಗದ ನೇಪಥ್ಯದಲ್ಲಿ ತನ್ನನ್ನು ಅಣಿಗೊಳಿಸಿದ ಸೋದರ ಮಾವನಿಗೆ ಕೃತಜ್ಞತೆ ಅರ್ಪಿಸಿವ ಸಲುವಾಗಿ ಡಿವಿಜಿ ಹೀಗೆ ಹೇಳಿಕೊಂಡರು. ಈ ಕವನವನ್ನು ನನ್ನೊಳಗೇ ನಾನು ವಾಚಿಸುತ್ತಾ ಹೀಗೆ ಈ ಲೇಖವನ್ನು ಬರೆಯುತ್ತಿರುವಾಗ ಕನಿಷ್ಠಪಕ್ಷ ಹತ್ತುಸಾರಿ ಕಣ್ಣುಗಳಿಂದ ನೀರಿಳಿಯಿತು. ಈ ಕವನದಲ್ಲಿ ಬರುವ ಎಲ್ಲಾ ಪಾತ್ರಗಳೂ ಡಿವಿಜಿಯವರ ಜೀವನದ ನೈಜ ಪಾತ್ರಗಳೇ ಆಗಿವೆ. ಕವನದಲ್ಲಿ ಕಾಣಿಸಿಕೊಂಡ ’ತಿಮ್ಮಗುರು’ ಡಿವಿಜಿಯವರ ಸೋದರಮಾವ ದಿ| ಶ್ರೀ ಗುಂಜೂರು ತಿಮ್ಮಪ್ಪನವರು. ಡಿವಿಜಿಯವರ ಅಜ್ಜಿ[ತಾಯಿಯ ತಾಯಿ] ಸಾಕಮ್ಮ.

ಒಂದು ಕಾಲಕ್ಕೆ ಶೇಕ್ದಾರ ಗುಂಡಪ್ಪನವರ ಮನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿ, ನೂರಾರು ಜನರ ಅತಿಥಿಸತ್ಕಾರವನ್ನು ನಿತ್ಯವೂ ನಡೆಸಿದ್ದ ಸಂಸ್ಥಾನಿಕರ ಮನೆ, ಪ್ಲೇಗುಮಾರಿಯಿಂದ ಹೇಗೆ ಎಲ್ಲವನ್ನೂ ಕಳೆದುಕೊಂಡಿತು ಎಂಬ ವಿಸ್ತಾರವಾದ ಕಥೆಯನ್ನು ಡಿವಿಜಿಯವರ ’ಜ್ಞಾಪಕ ಚಿತ್ರಶಾಲೆ-೮’ ರಲ್ಲಿ[’ಜ್ಞಾಪಕ ಚಿತ್ರಶಾಲೆ’-ಒಟ್ಟೂ ಎಂಟು ಸಂಪುಟಗಳಿದ್ದು ಎಲ್ಲವೂ ಸಂಗ್ರಹಯೋಗ್ಯವಾಗಿವೆ]ಓದಿಕೊಳ್ಳಬಹುದಾಗಿದೆ. ಅನೇಕ ಉಪಕಥೆಗಳು ರಂಜನೀಯವೆನಿಸಿದರೆ, ಅಂದಿನ ಬೆಂಗಳೂರು, ಅಂದಿನ ಕರ್ಣಾಟ ದಕ್ಷಿಣಪ್ರಾಂತ, ಅಂದಿನ ಸರಕಾರ, ಅಂದಿನ ಅಧಿಕಾರಿಗಳು, ಅಂದಿನ ಸರಕಾರ-ಕಾಯ್ದೆ-ಕಟ್ಲೆಗಳ ನಡಾವಳಿ, ಅಂದಿನ ಜನರ ವ್ಯಾವಹಾರಿಕ ವೈಖರಿ, ಅಂದಿನ ಸಮಾಜದಲ್ಲೂ ಜನರಲ್ಲಿ ಇದ್ದ ಮೋಸ ಮತ್ತು ವಂಚನೆ....ಹೀಗೇ ಹಲವು ಹತ್ತು ವಿಷಯಗಳು ವೇದ್ಯವಾಗುತ್ತವೆ. ಮಗುವಾಗಿದ್ದಾಗ, ಚಿಕ್ಕ ಅಜ್ಜ ರಾಮಣ್ಣನ ಅವಿಭಕ್ತಕುಟುಂಬದ ವ್ಯವಹಾರ ನಿರ್ವಹಣೆಯ ದೇಖರೇಕಿಯಲ್ಲಿ ಸುಖವಾಗಿದ್ದ ಡಿವಿಜಿಯವರ ತಂದೆಯ ಸಂಸಾರ, ಕೇವಲ ಪ್ಲೇಗು ಬಂದು ಹೋದಮೇಲೆ ಹೇಗೆ ಎಲ್ಲವನ್ನೂ ಕಳೆದುಕೊಂಡು, ಅನ್ನವನ್ನರಸಬೇಕಾದ ಕಡುದಾರಿದ್ರ್ಯಕ್ಕೆ ಒಳಪಟ್ಟಿತು ಎಂಬುದು ತಿಳಿದಾಗ ನನ್ನಂಥಾ ಓದುಗ ಮರುಗುತ್ತಾನೆ, ಅವಧೂತರಂತಹ ವ್ಯಕ್ತಿಗೂ ಈ ಇಳೆಯಲ್ಲಿ ಅದೆಂತಹ ಕಷ್ಟವಪ್ಪಾ ಎಂದು ತನ್ನೊಳಗೇ ಉಸುರಿಕೊಳ್ಳುತ್ತಾನೆ. ಗಂಡನನ್ನು ಕಳೆದುಕೊಂಡ ಅರೆಗುರುಡು ಅಜ್ಜಿ, ಡಿವಿಜಿಯವರ ಚಿಕ್ಕ ಅಜ್ಜಂದಿರ ವಿನಂತಿಗೆ ಮಣಿದು, ಹೆಂಗಸರೇ ಗತಿಯಿಲ್ಲದ ಮನೆಗೆ ಬಂದು-ಅಲ್ಲಿ ಪ್ರತಿನಿತ್ಯ ಒಂದೂವರೆ ಮೈಲು ಸಾಗಿ ನೀರು ಹೊರುತ್ತಾ ಎಲ್ಲರನ್ನೂ ಸಲಹುವುದು, ವೆಂಕಟರಮಣಯ್ಯನವರಿಗೆ ತನ್ನ ಮಗಳನ್ನು ಕೊಟ್ಟು, ತನ್ಮೂಲಕ ಅವಿಭಕ್ತ ಕುಟುಂಬದ ಏಳ್ಗೆಗೆ ಕಾರಣಳಾಗುವುದು, ಸಾಮಾನ್ಯ ಹೆಂಗಸರು ಹೊರಬಲ್ಲ ಹೊರೆಯಲ್ಲ! ತನ್ನ ತಂದೆ-ತಾಯ್ಗಳೊಟ್ಟಿಗೇ ಇದ್ದ ಸೋದರಮಾವ, ಮದುವೆಯನ್ನೇ ಮಾಡಿಕೊಳ್ಳದೇ ಹಾಗೇ ಇದ್ದು, ಶಿಕ್ಷಕರಾಗಿ ೫೦ ವರ್ಷಗಳ ವಯಸ್ಸಿನ ವರೆಗೂ ನಡೆಸಿ, ಸಾವಿರಾರು ಜನರ ಪ್ರೀತಿಗೆ ಪಾತ್ರವಾಗಿ-ಲೋಕಕ್ಕೆ ಬೇಕಾಗಿದ್ದವರು. ಲಾಯರ್ ಶೇಷಗಿರಿಯಪ್ಪ, ಕೌಟುಂಬಿಕ ವ್ಯವಹಾರ ಚತುರ ರಾಮಣ್ಣ, ವ್ಯಸನಿಕನಾಗಿ ಬೆಳೆದ ಶೀನಣ್ಣ ಇಂತಹ ಹಲವರ ಲೋಪದೋಷಗಳನ್ನೂ ಉನ್ನತಗುಣಗಳನ್ನೂ ಕಲೆಹಾಕಿ, ಹಂಸಕ್ಷೀರ ನ್ಯಾಯದಂತೇ-ಒಳ್ಳೆಯದನ್ನು ಮಾತ್ರ ಅಳವಡಿಸಿಕೊಂಡು, ಮಿಕ್ಕಿದ್ದನ್ನು ಮರೆತು, ’ಡಿವಿಜಿ’ ಎಂಬ ಮೂರ್ತಿ ಅನಾವರಣಗೊಳ್ಳುವ ಹೊತ್ತಿಗೆ, ತಗುಲಿದ ಚಾಣದ ಏಟುಗಳು ಕಮ್ಮಿಯಲ್ಲ!  "ಊಟದ[ಅನ್ನದ ಹುಡುಕಾಟ್] ಅಲೆದಾಟ ಇರುವವರಿಗೆ ಲೇಖನಕಾರ್ಯಕ್ಕೆ ಅವಶ್ಯವಾದ ವಿರಾಮವಾದರೂ ಹೇಗೆ ದೊರೆಯಬೇಕು?" ಎಂದು ಡಿವಿಜಿ ಒಂದು ಕಡೆ ಕೇಳುತ್ತಾರೆ. ಆದರೂ, ತನ್ನ ಬದುಕಿನ ಸಕಲ ಬೇಗುದಿಗಳನ್ನು ಬದಿಗಿಟ್ಟು, ಬದುಕಿನ ಬಂಡಿಗೆ ತಾನು ತನ್ನನ್ನು ಮಾರಿಕೊಳ್ಳದೇ, ಅದರ ಸೂತ್ರವನ್ನೇ ತನ್ನ ಕಯ್ಯಲ್ಲಿ ಹಿಡಿದು ಅಗಾಧ ಕೆಲಸಗಳನ್ನು ಮಾಡಿದ ಈ ಧೀಮಂತ ವ್ಯಕ್ತಿ, "ಅದೊಂದು ಶಕ್ತಿ" ಎನಿಸಿಕೊಳ್ಳಲು ಯೋಗ್ಯ.  ಎಲ್ಲವನ್ನೂ ಮುಗಿಸಿ ಮತ್ತೆ ಡಿವಿಜಿಯವರ ಮುಕ್ತಕವೊಂದನ್ನು ನೆನೆಸಿಕೊಂಡಾಗ ಅವರು ಇದ್ದಹಾಗೇ ಬರೆದರು- ನುಡಿದಹಾಗೇ ನಡೆದರು, ನಡೆದಹಾಗೇ ನುಡಿದರು ಎಂಬುದು ಮನದಟ್ಟಾಗುತ್ತದೆ.    

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು-ಮಂಕುತಿಮ್ಮ