ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 24, 2011

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ....


ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ....

ಯಾವುದನ್ನು ಇಷ್ಟಪಡುವುದಿಲ್ಲವೋ ಅದೇ ಬಂದು ನಮ್ಮನ್ನು ಅಪ್ಪಿಕೊಳ್ಳುವುದು ಪ್ರಕೃತಿಯ ವೈಚಿತ್ರ್ಯಗಳಲ್ಲೊಂದು. ಕಷ್ಟ ಬೇಡಾ ಎಂದು ಹಂಬಲಿಸಿದರೆ ಕಷ್ಟಗಳ ಜಡಿಮಳೆಯೇ ಸುರಿಯುವುದು, ಯಾವುದು ಉತ್ತೀರ್ಣವಾಗಲಿ ಎನ್ನುತ್ತೇವೋ ಅದು ಅನುತ್ತೀರ್ಣಗೊಳ್ಳುವುದು ಇದು ಅನೂಚಾನವಾಗಿ ಎಲ್ಲರೂ ಅನುಭವಿಸುವ ಸತ್ಯ. ಅಂತೆಯೇ ಇವತ್ತಿನ ಈ ಸಂಗತಿ ಸಂತೋಷದಿಂದ ಶ್ರುತಪಡಿಸುತ್ತಿರುವುದಲ್ಲ; ಬದಲಾಗಿ ಅನಿವಾರ್ಯವಾಗಿ ಬರೆಯಬೇಕಾಗಿ ಬಂದ ಪ್ರಸಂಗ. ಹಲವಾರು ದಿನಗಳಿಂದ ಯಾವುದನ್ನು ಬರೆಯುವ ಸಂಭವ ಸದ್ಯಕ್ಕೆ ಬಾರದೇ ಇರಲಿ ಎಂದು ಬಯಸುತ್ತಿದ್ದೆನೋ ಅದು ಬಂದುಬಿಟ್ಟಿದೆ-ಅದೆಂದರೆ ನಮ್ಮೆಲ್ಲರಿಗೆ ಚಿರಪರಿಚಿತರಾದ ಪುಟ್ಟಪರ್ತಿ ಸತ್ಯಸಾಯಿಬಾಬಾ ಅವರ ದೇಹಾಂತ್ಯ.

ಆಂಧ್ರ ಪ್ರದೇಶದ ಅತೀ ಉಷ್ಣ ತಾಪಮಾನವುಳ್ಳ ಜಾಗದಲ್ಲಿ ಬಡಕುಟುಂಬದಲ್ಲಿ ಜನಿಸಿದ ಒಬ್ಬ ಸಾಮಾನ್ಯ ಹುಡುಗ ಜಗತ್ತಿನಾದ್ಯಂತ ಕೋಟ್ಯಂತರ ಜನರ ಆಶಾಕಿರಣವಾಗಿ ಬೆಳಗುವುದು ಸಾಧ್ಯವೆಂದರೆ ಅದೊಂದು ಅತಿಮಾನುಷ ಶಕ್ತಿಯ ಆವಾಸ ಎನ್ನಲು ಅಡ್ಡಿಯಿಲ್ಲ. ಹಿಂದೆ ರಾಮ, ಕೃಷ್ಣ ಹೀಗೆಲ್ಲಾ ದೇವರು ಅವತಾರ ಎತ್ತಿ ಬಂದಂತೇ ಯಾವುದೋ ಋಷಿ ಅಥವಾ ಮುನಿ ತನ್ನ ತಪಸ್ಸನ್ನು ಭುವಿಯ ಜನರ ಸದುಪಯೋಗಕ್ಕೆ ಧಾರೆ ಎರೆಯುವ ಮನಸ್ಸಾಗಿ ಇಂತಹ ರೂಪದಲ್ಲಿ ಜನಿಸಿದ್ದು ನಿಜವೆನಿಸುತ್ತದೆ. ಮಾಧ್ಯಮಗಳವರು ಏನೇ ಹೇಳಿದರೂ ಕೋಟ್ಯಂತರ ಜನರು ಪ್ರತಿಯೊಬ್ಬರೂ "ನಮ್ಮ ಕಷ್ಟ ಕಳೆಯಿತು" " ನಮ್ಮ ಸಮಸ್ಯೆ ಬಗೆಹರಿಯಿತು " ಎಂದರೆ ಸುಮ್ಮನೇ ಹಾಗೆ ಹೇಳಲಿಕ್ಕೆ ಯಾರಿಗೂ ತಲೆಕೆಟ್ಟಿಲ್ಲ; ಅವರಲ್ಲಿ ಅನೇಕರು ಗಣ್ಯಾತಿಗಣ್ಯರೂ ಸಂಪದ್ಭರಿತರೂ ಆಗಿದ್ದವರಿದ್ದು ಘನವಿದ್ವಾಂಸರೂ ಬಹಳ ಜನರಿದ್ದರೆಂಬುದರಲ್ಲಿ ಅನುಮಾನವಿಲ್ಲ.

ಯಾವುದೇ ಶಾಲೆಗೆ ಹೋಗದೇ ಯಾವ ವ್ಯಾಸಂಗವನ್ನೂ ಮಾಡದೇ ಜಗತ್ತಿನ ಹಲವು ಭಾಷೆಗಳನ್ನು ಮಾತನಾಡುವುದು, ಸಾಗರಗರ್ಭದಂತಹ ವೇದಗಳನ್ನು ಓದದೇ ಪ್ರವಚನದಲ್ಲಿ ಅವುಗಳ ಸಾರವನ್ನು ಶ್ಲೋಕಸಹಿತ ಹೇಳುವುದು, ಯಾರಿಗೂ ನೋವಾಗದ ರೀತಿಯಲ್ಲಿ ಹೇಗೆ ಬದುಕಬೇಕೆಂಬುದಕ್ಕೆ ಸರಿಯಾದ ಸೂತ್ರಗಳನ್ನು ರೂಪಿಸುವುದು ಸಾಧ್ಯವಾಗುವುದು ಯಾವುದೋ ಜನಸಾಮಾನ್ಯನಿಗಲ್ಲ; ಅವರಲ್ಲಿರುವ ಆ ಅವ್ಯಕ್ತ ಶಕ್ತಿ ತನ್ನನ್ನು ತೋರ್ಪಡಿಸಿಕೊಂಡು ಜಗತ್ತಿನಲ್ಲಿ ಯಾರ್ಯಾರಿಗೆ ತೊಂದರೆ ಇದೆಯೋ ಅವರೆಲ್ಲಾ ಬಂದು ಬಗೆಹರಿಸಿಕೊಳ್ಳಲಿ ಎಂಬುದನ್ನು ಸೂಚಿಸಲಿಕ್ಕಾಗಿ ಬಾಬಾ ಪವಾಡ ಮಾಡಬೇಕಾಗಿ ಬಂತು. ಪವಾಡದ ಪ್ರತ್ಯಕ್ಷದರ್ಶಿಗಳು ಹಲವರು ಹೇಳುವಂತೇ ಎಲ್ಲಾ ಪವಾಡಗಳೂ ಅನಿರೀಕ್ಷಿತವಾಗಿ ಆ ಕ್ಷಣಕ್ಕೆ ಅಲ್ಲಲ್ಲೇ ಘಟಿಸುವಂಥವು ಮತ್ತು ಹೆಚ್ಚಾಗಿ ಬಾಬಾ ಕೈ ತಿರುವಿದಾಗ ನಡೆಯುತ್ತಿದ್ದ ಪವಾಡಗಳು.

ಹಿಂದೆ ನಾನು ಅನೇಕಾವರ್ತಿ ಹೇಳಿದಂತೇ ಈ ಲೋಕದಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯವೆಂಬ ೫ ಕೋಶಗಳಿವೆ, ಆದರೆ ಮಾನವನ ಜ್ಞಾನ ಪ್ರಯತ್ನದಿಂದ ವಿಜ್ಞಾನಮಯ ಕೋಶದವರೆಗೂ ಹೋಗುತ್ತದೆ. ಶ್ರೇಷ್ಠ ಆಧ್ಯಾತ್ಮಿಕ ಸಾಧಕರಿಗೆ ಮಾತ್ರ ಆನಂದಮಯ ಕೋಶದ ಅರಿವುಂಟಾಗುತ್ತದೆ. ಅದನ್ನರಿತ ನಿಜವಾದ ಜ್ಞಾನಿಗೆ ಪವಾಡನಡೆಸುವುದು ಬಹಳ ಸುಲಭ. ಅಂಥವರಿಗೆ ಸಂಕಲ್ಪಸಿದ್ಧಿ ಕೂಡ ಪ್ರಾಪ್ತವಾಗುತ್ತದೆ. [ಅಂದರೆ ಕೇವಲ ಅವರು ಸಂಕಲ್ಪಿಸಿದರೂ ಸಾಕು ಹೇಗೋ ಆ ಕೆಲಸ ಸಲೀಸಾಗಿ ನಡೆದುಹೋಗುತ್ತದೆ] ಆದರೆ ಈ ಪವಾಡಗಳು ವಿಜ್ಞಾನಕ್ಕೆ ಧಕ್ಕುವುದಿಲ್ಲ. ವಿಜ್ಞಾನ ಅವುಗಳಿಗೆ ಕಾರಣ ಹುಡುಕಿದರೂ ಸಿಗುವುದಿಲ್ಲ ಯಾಕೆಂದರೆ ಅವು ವಿಜ್ಞಾನಮಯಕೋಶದ ಪರಿಮಿತಿಯನ್ನೂ ಮೀರಿದ ಜಾಗದಲ್ಲಿ ಹುಟ್ಟಿದಂಥವು! ಇದನ್ನೇ ಸೂಕ್ಷ್ಮವಾಗಿ ಹೇಳುತ್ತಾ ಬಾಬಾ ಆಧ್ಯಾತ್ಮವನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಡಿ ಎಂದರು, ಹಾಗೊಮ್ಮೆ ಅದನ್ನು ನಡೆಸಿದರೂ ಯಾವುದೋ ಅವಘಡಗಳು ಸಂಭವಿಸಬಹುದಿತ್ತೇನೋ. ಈ ಜಗತ್ತಿನಲ್ಲಿ ಶೂನ್ಯ ಎಂಬುದೇ ಇಲ್ಲಾ ಎಂದು ಅವರು ಹೇಳಿದರು, ಅದರರ್ಥ ಬಾಬಾ ಕೈತಿರುವಿದಾಗ ಇನ್ನಾವುದೋ ಅಗೋಚರ ಅತಿಮಾನುಷ ಹಸ್ತ ಅವರು ಸಂಕಲ್ಪಿಸಿದ ವಸ್ತುವನ್ನು ಅವರ ಕೈಗೆ ನೀಡುತ್ತಿತ್ತು! ಲೌಕಿಕ ಬುದ್ಧಿವಂತಿಕೆ ಜಾಸ್ತಿಯಾದ ನಾವು ಎಲ್ಲವನ್ನೂ ಕೇವಲ ವೈಜ್ಞಾನಿಕ ಪರೀಕ್ಷೆಗೇ ಒಳಪಡಿಸಿದೆವು ಆದರೆ ಆತ್ಮ ಎಂದರೇನು? ಅದರ ಅಸ್ಥಿತ್ವ ಯಾವ ರೂಪದಲ್ಲಿರುತ್ತದೆ? ಅದು ಶರೀರದಲ್ಲಿ ಯಾವ ಜಾಗದಲ್ಲಿರುತ್ತದೆ? ಯಾವಾಗ ಎಲ್ಲಿಂದ ಹೇಗೆ ಬರುತ್ತದೆ ಮತ್ತು ಯಾವಾಗ ಎಲ್ಲಿಗೆ ಹೇಗೆ ತೆರಳುತ್ತದೆ ? -ಈ ಪ್ರಶ್ನೆಗಳಿಗೆ ನಮ್ಮ ಅತ್ಯಾಧುನಿಕ ವಿಜ್ಞಾನ ಇವತ್ತಿಗೂ ಗಪ್ ಚುಪ್ ! ಸೌರಮಂಡಲದ ಆಕಾಶಕಾಯಗಳನ್ನು ಗುರುತ್ವಾಕರ್ಷಣ ಶಕ್ತಿ ನಿರ್ಮಿಸಿ ಹಾಗೆ ನಿಯಮಿತಗೊಳಿಸಿದವರು ಯಾರು ? --ಈಗಲೂ ನಮ್ಮ ವಿಜ್ಞಾನ ಊಹೂಂ ! ಅಂದಮೇಲೆ ವಿಜ್ಞಾನವೇ ಎಲ್ಲವೂ ಅಲ್ಲ ಅದರ ಹೊರತಾಗಿ ಇನ್ನೇನೋ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾದ ನ್ಯಾಯ ಇದಾಗಿದೆ.

ಒಂದೆರಡು ಸಣ್ಣ ಪವಾಡಗಳ ಉದಾಹರಣೆಯನ್ನು ಬಳಸಿಕೊಳ್ಳುತ್ತೇನೆ:

೧. ಕರ್ನಾಟಕ ವಿಧಾನಸಭೆಯ ಮಾಜಿಸ್ಪೀಕರ್ ಆದಂತಹ ರಮೇಶ್‍ಕುಮಾರ್ ಅವರು ತಾನು ಸ್ವತಃ ನೋಡಿದ್ದನ್ನು ಹೇಳಿದ್ದಾರೆ: ಒಮ್ಮೆ ಪುಟ್ಟಪರ್ತಿಗೆ ಅವರು ಹೋಗಿದ್ದಾಗ ನಡೆದ ದರ್ಶನದ ಬಳಿಕ ಬಾಬಾ ಕೆಲವರನ್ನು ಆಪ್ತ ಸಂದರ್ಶನಕ್ಕೆ ಒಳಗೆ ಕರೆದರಂತೆ. ಅವರಲ್ಲಿ ರಮೇಶ್ ಕೂಡಾ ಒಬ್ಬರು. ಅವರ ಜೊತೆಗೆ ಸಾಲಿನಲ್ಲಿ ಅಮೇರಿಕದ ಪಾಮೋಲಿವ್ ಕಂಪನಿಯ ಯಜಮಾನರು ಮತ್ತವರ ಮಡದಿಕೂಡ ಇದ್ದರಂತೆ. ಆ ಹೆಂಗಸಿನ ಹತ್ತಿರ ನಿನಗೇನು ಬೇಕು ಎಂದು ಬಾಬಾ ಕೇಳಿದಾಗ " ಐ ವಾಂಟ್ ಪೀಸ್ " [ನನಗೆ ಶಾಂತಿ ಬೇಕು] ಎನ್ನುತ್ತಾ ಚೆಕ್‍ಬುಕ್ ತೆಗೆದು ೫೦೦ಕೋಟಿ ರೂಪಾಯಿಗಳ ಚೆಕ್ ಒಂದನ್ನು ಬಾಬಾಗೆ ಬರೆದುಕೊಟ್ಟಳಂತೆ! ಬಾಬಾ ಮೊದಲು "ಗುಡ್" ಎಂದರಂತೆ. ಆಮೇಲೆ ಆ ಚೆಕ್ಕನ್ನು ಹರಿದು ಚಿಕ್ಕ ಚಿಕ್ಕ ತುಂಡುಮಾಡಿ ಕೈಲಿ ಭಸ್ಮವಾಗಿ ಪರಿವರ್ತಿಸಿ ಅದನ್ನೇ ಅವಳಕೈಗೆ ಹಾಕಿ " ಟೇಕ್ ಪೀಸ್, ಡೋಂಟ್ ಎವರ್ ಡಿಸ್ಪ್ಯೂಟ್ ವಿತ್ ಯುವರ್ ಹಸ್ಬಂಡ್, ಲರ್ನ್ ಹೌ ಟು ಲಿವ್ ವಿದೌಟ್ ಹರ್ಟಿಂಗ್ ಎನಿಬಡಿ [ ಈ ಭಸ್ಮ ತಗೋ, ಗಂಡನ ಜೊತೆ ಜಗಳವಾಡುವುದನ್ನು ಬಿಟ್ಟುಬಿಡು ಯಾರಿಗೂ ನೋವುಂಟುಮಾಡದ ರೀತಿಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿ ] " ಎಂದುಬಿಟ್ಟರಂತೆ! ಹಣದ ಆಸೆ ಇದ್ದರೆ ಯಾರಾದರೂ ತಮಗೆ ಕೊಟ್ಟ ೫೦೦ ಕೋಟಿ ರೂಪಾಯಿಗಳ ಚೆಕ್ಕನ್ನು ಭಸ್ಮಮಾಡುತ್ತಿದ್ದರೇ?

೨. ಬೆಂಗಳೂರಿನಲ್ಲಿ ಸಮಾರಂಭವೊಂದರಲ್ಲಿ ವೇದಿಕೆ ಹಂಚಿಕೊಂಡವರಲ್ಲಿ ಆದಿಚುಂಚನಗಿರಿ ಮಠಾಧೀಶರು, ದೇವೇಗೌಡರು ಮತ್ತು ಸಾಯಿಬಾಬಾ ಇದ್ದರಂತೆ. [ಇದು ಆದಿಚುಂಚನಗಿರಿ ಮಠಾಧೀಶರೇ ಸ್ವತಃ ಅನುಭವದಿಂದ ಹೇಳಿದ್ದು!] ಬಾಬಾರ ಕೈಲಿರುವ ಕರ್ಚೀಫ್ ಕೆಳಗೆಬಿತ್ತು. ಆಗ ಪಕ್ಕದಲ್ಲಿ ಕುಳಿತಿದ್ದ ದೇವೇಗೌಡರು ಅದನ್ನು ಎತ್ತುಕೊಡಲು ಮುಂದಾದಾಗ ಆಗಿನ್ನೂ ಕರ್ನಾಟಕದ ಸಿ.ಎಂ. ಆಗಿದ್ದ ಗೌಡರನ್ನು " ಇರ್ಲಿ ಬಿಡಿ ಪ್ರೈಮ್ ಮಿನಿಷ್ಟ್ರೇ , ಬಿಡಿ ಪ್ರೈಮ್ ಮಿನಿಷ್ಟ್ರೇ, ಬಿಡಿ ಪ್ರೈಮ್ ಮಿನಿಷ್ಟ್ರೇ " ಎಂದು ಬಾಬಾ ಹೇಳಿದರಂತೆ. ಎಲ್ಲರೂ ಅದೇನೋ ಬಾಬಾ ನೆನಪಿರದೇ ತಪ್ಪುಚ್ಚರಿಸುತ್ತಿದ್ದಾರೆ ಎಂದುಕೊಂಡರು. ಆದರೆ ಅದಾದ ೧೫ ದಿನಗಳಲ್ಲೇ ಹರದನ ಹಳ್ಳಿಯ ಹೈದ ಭಾರತದ ಪ್ರಧಾನಿಪಟ್ಟವನ್ನು ಅಲಂಕರಿಸಿದ್ದು ಈಗ ಇತಿಹಾಸ!

ಇಂತಹ ಪವಾಡಗಳಿಂದ ಬಾಬಾಗೆ ಯಾವ ಲಾಭವೂ ಇರಲಿಲ್ಲ. " ನೀವು ಯಾಕೆ ಉಂಗುರ, ನೆಕ್ಲೇಸ್ ಎಲ್ಲಾ ಸೃಷ್ಟಿಸಿಕೊಡುತ್ತೀರಿ ? " ಎಂದು ಯಾರೋ ಕೇಳಿದಾಗ ಬಾಬಾ ಹೇಳಿದ್ದು ಹೀಗೆ- " ನೀವು ಅತ್ಯಂತ ಪ್ರೀತಿಪಾತ್ರರಿಗೆ ಎಷ್ಟೋ ಸರ್ತಿ ಪ್ರೀತಿಯಿಂದ ಗಿಫ್ಟ್ ಕೊಡುವುದಿಲ್ಲವೇ ? ತಂದೆ ಮಕ್ಕಳಿಗೆ ಏನಾದರೂ ತಂದುಕೊಡುವುದಿಲ್ಲವೇ ? ಅದೇ ರೀತಿಯಲ್ಲಿ ಪ್ರೀತಿಯಿಂದ ಅವರ ಖುಷಿಗಾಗಿ ಹಾಗೆ ಕೊಡುತ್ತೇನೆ " ! ಇದನ್ನು ಪುಷ್ಟೀಕರಿಸಲು ನಾವು ಇತಿಹಾಸ ಕೆದಕಿದರೆ ಬಾಬಾ ಪ್ರಚಾರಪ್ರಿಯರೂ ಆಗಿರಲಿಲ್ಲ! ಅವರು ವಿದೇಶಕ್ಕೆ ಹೋಗಿದ್ದು ಒಮ್ಮೆಮಾತ್ರ-ಉಗಾಂಡಾಕ್ಕೆ. ಅಲ್ಲಿನ ಜನರಿಗೆ ಅಲ್ಲಿಗೆ ಹೋದಾಗ ಹೇಳಿದರಂತೆ " ನಾನು ನಿಮ್ಮನ್ನು ನನ್ನತ್ತ ಆಕರ್ಷಿಸಲು ಬಂದಿಲ್ಲ, ನಿಮ್ಮ ನಿರ್ವ್ಯಾಜ ಪ್ರೀತಿಕಂಡು ನಿಮ್ಮನ್ನೆಲ್ಲಾ ನೋಡಿ ಸಂತೋಷ ಹಂಚಿಕೊಳ್ಳುವ ಮನಸ್ಸಾಗಿ ಬಂದಿದ್ದೇನೆ. " ಅದೇ ಮೊದಲು ಮತ್ತು ಅದೇ ಕೊನೆ-ಮತ್ತೆ ಬಾಬಾ ವಿದೇಶಗಳಿಗೆ ಹೋಗಲೇ ಇಲ್ಲ. ಜಗತ್ತಿನ ಹಲವಾರು ದೇಶಗಳ ಜನರೇ ಅವರನ್ನು ಹುಡುಕುತ್ತಾ ಅವರಿದ್ದೆಡೆಗೇ ಬಂದರು; ಸಹಾಯ ಪಡೆದರು.

"ಲವ್ ಆಲ್ ಸರ್ವ್ ಆಲ್" ಇದು ಅವರ ಬೋಧನೆ. ಅದನ್ನು ಆಚರಿಸಿಯೂ ತೋರಿಸಿದರು. ಸರಕಾರಗಳು ಮಾಡಲಾಗದ ಕೆಲಸಗಳು ಅವರಿಂದ ನಡೆದವು. ಹಳ್ಳಿಗಳಲ್ಲಿ ಬಡಜನರಿಗೆ ಗ್ರಾಮಸೇವೆ ನಡೆಯಿತು: ಜೀವನಾವಶ್ಯಕ ವಸ್ತುಗಳು, ಬಟ್ಟೆಗಳು ಮುಂತಾದವು ನೀಡಲ್ಪಟ್ಟವು. ನೀರಿಲ್ಲದ ಜಿಲ್ಲೆಗಳ ಹಾಹಾಕಾರ ತಣಿಸಲು ನೀರು ಸರಬರಾಜು ಮಾಡುವ ಯೋಜನೆಗಳು ಶಾಶ್ವತವಾಗಿ ಕಾರ್ಯಗತವಾದವು. ದಿಕ್ಕಿಲ್ಲದ ಬಡಜನರಿಗೆ ಅವರ ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಿಶ್ಶುಲ್ಕ ಆಸ್ಪತ್ರೆಗಳು ಸ್ಥಾಪಿತವಾದವು. ಅನಕ್ಷರಸ್ಥರಿಗೆ ಶಾಲೆಗಳು-ಶಿಕ್ಷಣ ಸಂಸ್ಥೆಗಳು ರೂಪತಾಳಿದವು. ಇವೆಲ್ಲಾ ನಡೆಯುತ್ತಲೇ ಇವೆ. ಅವರು ಯಾವ ರಾಜಕೀಯ ಪಕ್ಷವನ್ನಾಗಲೀ ಯಾವುದೇ ಒಂದು ಮತವನ್ನಾಗಲೀ ಆತುಕೊಂಡವರಲ್ಲ. ಸರ್ವಧರ್ಮಗಳ ಸಕಲದೇಶಗಳ ಮಾನವರನ್ನು ಏಕರೂಪದಿಂದ ನೋಡಿದರು ಬಾಬಾ. ಹೆಣ್ಣುಮಕ್ಕಳಿಗೂ ವೇದ ಬೋಧಿಸಿ ಉಪನಯನ ಮಾಡಿಸಿದ ಔದಾರ್ಯ ಮತ್ತು ಪರಿಜ್ಞಾನ ಅವರದ್ದು. " ದೇಹಿ " ಎಂದು ಬಂದರೆ ಇಲ್ಲಾ ಎನ್ನಬಾರದು ಎಂಬ ಭಾರತೀಯ ಆರ್ಷೇಯ ಪದ್ಧತಿಯನ್ನು ಸತತವಾಗಿ ಅನುಷ್ಠಾನದಲ್ಲಿಟ್ಟ ಒಬ್ಬರೇ ಸಂತ ಬಾಬಾ ಎಂದರೆ ತಪ್ಪಾಗಲಿಕ್ಕಿಲ್ಲ.

ಮಾಧ್ಯಮಗಳು ಆಗಾಗ ಹಲವು ವಿಷಯಗಳನ್ನು ಮನಸೋ ಇಚ್ಛೆ ವಿಕೃತವಾಗಿ ಬರೆದವು. ಬಾಬಾ ಹಾಗೆ ಹೀಗೆ ಎಂದೆಲ್ಲಾ ನೂರೆಂಟು ಇಲ್ಲದ್ದನ್ನು ಹೇಳಿದವು. ಆದರೂ ನಿಜಕ್ಕೂ ಹೇಳುತ್ತೇನೆ ಕೇಳಿ ನನ್ನಂತರಂಗ ಅವುಗಳನ್ನು ಪ್ರಶ್ನಿಸುತ್ತಲೇ ಇತ್ತು. ’ಬಾಬಾ ದೈವಾಂಶ ಸಂಭೂತರು’ ಎನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿತ್ತು. ಆದರೂ ಮರುಳು ಮನಸ್ಸು ಏನುಮಾಡಿತು ಬಲ್ಲಿರೋ ? ವ್ಯಾವಹಾರಿಕವಾಗಿ ಪುಟ್ಟಪರ್ತಿಯ ಯಾವುದೋ ವಸತಿ ನಿಲಯಕ್ಕೆ ನಾವೆಲ್ಲಾ ಕೆಲವರು ಹೋಗಿದ್ದರೂ ’ಪ್ರಶಾಂತಿ ನಿಲಯ’ದ ಗೇಟನ್ನು ನಾನು ಕಂಡಿದ್ದರೂ ಅದರೊಳಗೆ ಹೋಗಲು ನನ್ನ ಮರುಳು ಮನಸ್ಸು ಆಗ ಬಿಡಲೇ ಇಲ್ಲ. ಬಾಬಾ ಒಂದೊಮ್ಮೆ ಹೇಳಿದ್ದರಂತೆ " ನನ್ನನ್ನು ನೇರವಾಗಿ ದರ್ಶಿಸಲೂ ಪಡೆದುಬರಬೇಕು " ಎಂಬುದಾಗಿ. ಹೀಗಾಗಿ ನಾನು ಪಡೆದಿರದ ಆ ಭಾಗ್ಯ ನನಗೆ ಆ ಅವಕಾಶ ನೀಡಲಿಲ್ಲ-ಅದಕ್ಕಾಗಿ ಪಶ್ಚಾತ್ತಾಪವಾಗುತ್ತಿದೆ. ನೋಡಿ ಸಮಯವೇ ಹೀಗೆ: ಯಾರಿಗೂ ಕಾಯುವುದಿಲ್ಲ. ಬಾಬಾ ಜನಿಸಿದ್ದರು, ಅವರ ಕರ್ತವ್ಯ ಮುಗಿಯಿತು. ಈಗ ಮರಳಿಯೇ ಬಿಟ್ಟರು. ಮತ್ತೆ ಬಾಬಾ ಬೇರೇ ದೇಹದಲ್ಲಿ ಜನಿಸಬಹುದು; ಅದು ಬೇರೇ ಪ್ರಶ್ನೆ. ಆದರೆ ಇವತ್ತಿನವರೆಗೆ ಈ ದೇಹದಿಂದಿದ್ದ ಬಾಬಾ ಈಗ ಈ ಶರೀರವನ್ನು ತ್ಯಜಿಸಿಬಿಟ್ಟಿದ್ದಾರೆ. ಈಗ ಜೀವಂತ ಬಾಬಾ ಮತ್ತೆ ನೋಡಲು ಸಿಗುವರೇ ? ಸಮಯ ಮೀರಿಹೋಯಿತು. ಅದಕ್ಕೇ ಯಾವುದಕ್ಕೂ ವಿವೇಚಿಸಿ ನಡೆಯಬೇಕು ಎನ್ನುತ್ತಾರೆ.

ಇನ್ನು ಅಷ್ಟೆಲ್ಲಾ ಪವಾಡ ನಡೆಸುವ ಕೋಟ್ಯಂತರ ಭಕ್ತರ ಸಂಕಷ್ಟ ಪರಿಹರಿಸುವ ಬಾಬಾ ತಾನೇ ತಿಂಗಳಕಾಲ ಆಸ್ಪತ್ರೆಯಲ್ಲಿ ಸಾದಾ ಮನುಷ್ಯನೊಬ್ಬ ಮಲಗಿದಂತೇ ಆ ತೊಂದರೆ ಈ ತೊಂದರೆ ಎನ್ನುತ್ತಾ ಮಲಗಿದ್ದು ಯಾಕೆ-ಅವರಿಗೆ ಅವರೇ ಪರಿಹಾರ ಮಾಡಿಕೊಳ್ಳಲಾಗುತ್ತಿರಲಿಲ್ಲವೇ ? --ಇದು ಹಲವರ ಪ್ರಶ್ನೆ. ಮನುಷ್ಯರೂಪದಲ್ಲಿ ಜನಿಸಿದ ಯಾವುದೇ ಆತ್ಮಕ್ಕೆ ಐಹಿಕ ಬಾಧೆಗಳು ಸಹಜ. ಅನೇಕಾವರ್ತಿ ಇಂಥಾ ಪುಣ್ಯಾತ್ಮರು ತಮ್ಮ ಶಿಷ್ಯಗಣದ ನೋವನ್ನು ತಾವು ಪಡೆದು ಅನುಭವಿಸಿ ಅವರಿಗೆಲ್ಲಾ ನಲಿವನ್ನೂ ಸುಖವನ್ನೂ ನೀಡುತ್ತಾರೆ. ತೊಂದರೆಗಳು ರಾಮನನ್ನಾಗಲೀ ಕೃಷ್ಣನನ್ನಾಗಲೀ, ಏಸು-ಬುದ್ಧ-ಮಹಾವೀರ-ಪೈಗಂಬರ ಇಂತಹ ಯಾರನ್ನೇ ಆಗಲಿ ಬಿಡಲಿಲ್ಲ. ಹಲವು ಋಷಿಗಳೂ ಸನ್ಯಾಸಿಗಳೂ ಅನೇಕ ಸಂಕಟಗಳನ್ನು ಅನುಭವಿಸಿದ್ದಾರೆ. ಅದರಂತೇ ಬಾಬಾ ದೇಹ ವಿಸರ್ಜಿಸಲು ಕಾರಣಬೇಕಿತ್ತು. ಅವರು ಯಾವುದೋ ಒಂದು ತಿಥಿ-ಮಿತಿಗಾಗಿ ಕಾದಿದ್ದರು. ಇಂದು ಆ ಘಳಿಗೆ ಕೂಡಿಬಂತು; ಹೊರಟುಬಿಟ್ಟಿದ್ದಾರೆ. ಸಾಮಾನ್ಯವಾಗಿ ಮಹಾತ್ಮರು ದೇಹವನ್ನು ವಿಸರ್ಜಿಸುವಾಗ ಹೇಳುತ್ತಾ ಇರುವುದಿಲ್ಲ. ಹೇಳದೇ ಇದ್ದರೇ ಹಲವು ಭಕ್ತರು ನೋವನ್ನು ಅನುಭವಿಸುತ್ತಾರೆ-ಇನ್ನು ಹೇಳಿಬಿಟ್ಟರೆ ಎಷ್ಟೊಂದು ಜನ ಸುತ್ತ ನೆರೆದು ದೇಹವಿಸರ್ಜನೆಗೆ ತಡೆಯಾಗಬಹುದೆಂಬ ಕಾರಣದಿಂದ ಕರ್ತವ್ಯ ಮುಗಿದ ನಂತರ ಸುಮ್ಮನೆ ತೆರಳಿಬಿಡುತ್ತಾರೆ.

ಇವತ್ತಿನ ಜಗಕ್ಕೆ ಬೇಕಾದ ಮಿಕ್ಕಿದ್ದೆಲ್ಲವನ್ನೂ ನಾವು ಪಡೆದಿದ್ದೇವೆ; ಪಡೆಯುವವರಿದ್ದೇವೆ. ಆದರೆ ಎಲ್ಲರೂ ಒಂದೇ ಎಂಬ ಏಕೋಭಾವಮಾತ್ರ ಇಲ್ಲ. ಜಗತ್ತು ಸ್ಥಿರವಲ್ಲ, ನಾವು ಶಾಶ್ವತವಲ್ಲ, ಈ ಜಗತ್ತಿನಲ್ಲಿ ನಾವು ಯಾವಲೆಕ್ಕವೂ ಅಲ್ಲ, ಜಗತ್ತನ್ನಾಳುವ ಶಕ್ತಿಯನ್ನು ಆರಾಧಿಸುವ ಮೊದಲ ಹೆಜ್ಜೆಯಾಗಿ ಎಲ್ಲರನ್ನೂ ಪ್ರೀತಿಸಲು ಕಲಿಯಬೇಕು, ಎಲ್ಲರಿಗೂ ಹಂಚಿ ಬದುಕಲು ಕಲಿಯಬೇಕು-ಎಂಬ ಉದಾತ್ತ ತತ್ವಗಳನ್ನು ಸರಳ ರೀತಿಯಲ್ಲಿ ಅನುಸರಿಸಿ ಮಾನವ ಸೇವೆಯೇ ಮಾಧವ ಸೇವೆ ಎಂಬುದನ್ನು ಎತ್ತಿಹಿಡಿದ ಬಾಬಾ ತಾನೊಬ್ಬ ಶ್ರೇಷ್ಠಜೀವಿ ಎಂಬುದನ್ನು ತಮ್ಮ ಬದುಕಿನ ಆದರ್ಶದಿಂದ ತೋರಿಸಿದ್ದಾರೆ. ಪುಟ್ಟಪರ್ತಿಯಲ್ಲಿ ಇರುವ ಶಿಸ್ತು, ಸಂಯಮ, ನೀತಿ-ನಿಯಮಗಳನ್ನು ಅವಲೋಕಿಸಿದರೆ ಸರಕಾರ ನಡೆಸುವ ರಾಜಕಾರಣಿಗಳು ಕಲಿಯಬಹುದಾದ ಪಾಠಗಳು ಹಲವು.

ನಾನು ಬಾಬಾ ಭಕ್ತನಾಗಿರಲಿಲ್ಲ. ಆದರೆ ಅವರ ಚರ್ಯೆಗಳನ್ನು ಗಮನಿಸುತ್ತಾ ಬಂದ ನನ್ನಂತರಂಗ ಯಾಕೋ ಅವರನ್ನು ನೆನೆಯುವಂತೇ ಮಾಡುತ್ತಿತ್ತು. ಇನ್ನು ಪುಟ್ಟಪರ್ತಿಯಲ್ಲಿ ಅವರ ಸಮಾಧಿಯೇ ಹೊರತು ಜೀವಂತವಾಗಿ ಅವರನ್ನು ನೋಡುವುದು ಸಾಧ್ಯವಿಲ್ಲವಲ್ಲ. ಈ ಘಳಿಗೆಯಲ್ಲಾದರೂ ಮಲಿನವಾದ ಮನಸ್ಸಿನ ಕೊಳೆಯನ್ನು ನಾಶಮಾಡುವ ಸಲುವಾಗಿ ಹೊರಟುನಿಂತ ಬಾಬಾರವರಿಗೆ ಜಗದ ಎಲ್ಲರಪರವಾಗಿ ಈ ಕೆಳಗಿನ ಶ್ಲೋಕದೊಂದಿಗೆ ಸಾಷ್ಟಾಂಗ ವಂದನೆಗಳು,ಅಭಿನಂದನೆಗಳು-

ಶರೀರಂ ಸುರೂಪಂ ಯಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ ||