ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, July 7, 2010

ಜಗವಾಗಲಿ ಮನೆ

ಜಗವಾಗಲಿ ಮನೆ

ಜಗವದೊಂದು ಮದುವೆಮನೆ
ನಗುವಿನಲೆಯ ನವಿಲಮನೆ
ಮಗುವಿನಂತ ಮುಗ್ಧರಿರುವ
ಬಗೆಬಗೆ ಜೀವಿಗಳಮನೆ

ಸಡಗರದಲಿ ಹಲವರೆದ್ದು
ಗಡಬಡಿಸುತ ಓಡಿ ಹೋಗಿ
ಹಡಗು ರೈಲು ವಿಮಾನವೇರಿ
ಒಡನಾಡುವ ನಡುಮನೆ

ಗುಡುಗು ಮಿಂಚು ಮಳೆಯು ಬಿಸಿಲು
ಗುಡಿ ಮಸೀದಿ ಇಗರ್ಜಿಗಳು
ಮಡಿಮನಸಲಿ ಮಂಡಿಯೂರಿ
ಗಡಿಮೀರಿ ಪ್ರಾರ್ಥಿಪಮನೆ

ಮೃಷ್ಟಾನ್ನದ ಸುಗ್ರಾಸವು
ಅಷ್ಟಾಂಗಕು ಯೋಗ-ಧ್ಯಾನ
ಕಷ್ಟಗಳನು ತಿಳಿದು ಕಳೆದು
ಇಷ್ಟಾರ್ಥವ ಪಡೆವಮನೆ

ಧರ್ಮಕರ್ಮ ಅರ್ಥಗ್ರಹಿಸಿ
ಮರ್ಮವರಿತು ಮನುಜರಾಗಿ
ವರ್ಮ ಅಬ್ದುಲ್ ಆಂಟನಿ ಜತೆ
ಶರ್ಮ ಸೇರಿ ಬಾಳ್ವಮನೆ