ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, June 15, 2011

ನಮ್ಮ ಸುಖ ರೈತನ ಮುಖದ ನಗುವಿನಲ್ಲಡಗಿದೆ !


ನಮ್ಮ ಸುಖ ರೈತನ ಮುಖದ ನಗುವಿನಲ್ಲಡಗಿದೆ !

ಇವನೆ ನೋಡು ಅನ್ನದಾತ ಹೊಲದಿ ದುಡಿದೇ ದುಡಿವನು
ನಾಡಜನರು ಬದುಕಲೆಂದು ದವಸ ಧಾನ್ಯ ಬೆಳೆವನು

ಸುಖದೇವ ಎಂಬೊಬ್ಬ ರೈತನಿದ್ದ. ಹಳ್ಳಿಯಲ್ಲಿ ಹೊಲಗದ್ದೆಗಳಲ್ಲಿ ಬೇಕುಬೇಕಾದ ಬೆಳೆಗಳನ್ನು ಬೆಳೆದು ಸಮೃದ್ಧಿಯಿಂದಿದ್ದ. ಸುಖದೇವನಿಗೊಬ್ಬ ತಮ್ಮ ಸಹದೇವ. ಬೆಳೆದು ದೊಡ್ಡವರಾದ ಅಣ್ಣ-ತಮ್ಮಂದಿರಿಗೆ ಅವರ ಪಾಲಕರು ಮದುವೆಮಾಡಿದರು. ಮದುವೆಯವರೆಗೆ ಪ್ರೀತಿಯಿಂದ ಉಳುಮೆಯೇ ದೇವರೆಂದು ನಂಬಿ ಬದುಕಿದ್ದ ಆ ಜನ ಲಗ್ನದ ನಂತರದ ದಿನಗಳಲ್ಲಿ ಮಾಡುವ ಕೆಲಸಗಳನ್ನು ಪಾಲು ಹಂಚಿಕೊಂಡರು. ಅದರಲ್ಲೂ ಅವರಿಗೆ ತೃಪ್ತಿ ಸಿಗಲಿಲ್ಲ. ಅಣ್ಣನ ಹೆಂಡತಿ ಮತ್ತು ತಮ್ಮನ ಹೆಂಡತಿ ನಡುವೆ ಈಗೀಗ ಕಿತ್ತಾಟ ಶುರುವಾಗಿತ್ತು. ದಿನವೂ ಜಗಳ ಮನಸ್ತಾಪ ಜಾಸ್ತಿಯಾಗುತ್ತಾ ನಡೆದಿತ್ತು. ಮುಪ್ಪಿನ ಪಾಲಕರು ಜಗಳ ಬಗೆಹರಿಸುತ್ತಲೇ ಇದ್ದು ಕಾಲಾನಂತರ ಕಾಲವಾದರು.

ಅಲ್ಲಿಯವರೆಗೂ ಹೇಗೋ ಸಹಿಸಿಕೊಂಡಿದ್ದ ಅಣ್ಣ-ತಮ್ಮ ಪಾಲಕರು ಗತಿಸಿದ ಮರುದಿನವೇ ಇರುವ ಚಿಕ್ಕ ಜಮೀನನ್ನು ಪಾಲುಮಾಡಿಕೊಳ್ಳಲು ಊರ ಮುಖಂಡರ ಮೊರೆಹೋದರು. ಪಂಚಾಯ್ತಿಯಲ್ಲಿ ಜಮೀನು ಇಬ್ಭಾಗವಾಯಿತು. ಇಬ್ಬರೂ ಸಣ್ಣ ಹಿಡುವಳಿದಾರರಾದರು. ಮಕ್ಕಳು ಜನಿಸಿ ಅದಾಗಲೇ ದೊಡ್ಡವರಾಗುತ್ತಿದ್ದರು. ತಮ್ಮ ಮನೆಯಲ್ಲಿ ನಡೆಯುವ ಜಗಳಗಳನ್ನು ನೋಡಿ ಅವರು ರೋಸಿ ಹೋಗಿದ್ದರು. ಹೇಗಾದರೂ ಮಾಡಿ ಇದರಿಂದ ಪಾರಾಗಬೇಕೆಂದು ಬಯಸುತ್ತಿದ್ದರು. ಆಗ ಅವರಿಗೆ ಅನಿಸಿದ್ದು ಸರಕಾರೀ ಉದ್ಯೋಗ ಹಿಡಿದರೆ ಇದು ಸಾಧ್ಯ ಎಂಬುದಾಗಿ. ಅದಕ್ಕಾಗಿ ಹೆಚ್ಚಿನ ವ್ಯಾಸಂಗದ ಅವಶ್ಯಕತೆಯಿತ್ತು. ಹಳ್ಳಿಯ ಹುಡುಗರು ಪಟ್ಟಣಕ್ಕೆ ಬಂದರು. ಇವರ ಪಾಲಕರಾದ ಸುಖದೇವ ಮತ್ತು ಸಹದೇವಂದಿರು ಸಾಲಮಾಡಿ ಮಕ್ಕಳನ್ನು ಓದಿಸಿದರು. ಓದಿದ ಮಕ್ಕಳಿಗೆ ಸರಕಾರೀ ನೌಕರಿಯೂ ದಕ್ಕಿತು. ಓದದೇ ಉಳಿದ ಅವರ ಸಹೋದರರು ಊರಲ್ಲಿ ಹಾಗೇ ಉಳಿದರು. ಓದಿ ಉದ್ಯೋಗ ಹಿಡಿದ ಈ ಜನವೂ ಊರಲ್ಲಿ ತಮ್ಮ ಸಹೋದರರಿಗೆ ಸಿಗುವ ಜಮೀನಿನಲ್ಲಿ ಪಾಲುಕೇಳಿದರು. ಓದಿದ ಮನೆಯ ಸಾಲ ಇನ್ನೂ ಬಾಕಿ ಉಳಿದಿತ್ತು. ಇರುವ ಜಮೀನಿನ ಆದಾಯ ಕುಟುಂಬದ ಖರ್ಚಿಗೂ ಮಿಕ್ಕಿ ಸಾಲ ತೀರಿಸಲು ಸಾಲುತ್ತಿರಲಿಲ್ಲ. ಇನ್ನು ಕಾಯಿಲೆ-ಕಸಾಲೆಯಾದರೋ ದೇವರೇ ಗತಿ!

ಜಾಗತೀಕರಣದಿಂದ ನಗರಗಳಲ್ಲಿ ಹಲವು ಉದ್ಯೋಗಗಳು ಸೃಷ್ಟಿಯಾದವು. ನಿಯತಕಾಲಿಕಗಳಲ್ಲಿ ಉದ್ಯೋಗ ಸಂಬಂಧೀ ಜಾಹೀರಾತುಗಳೂ ಹೆಚ್ಚಾಗತೊಡಗಿದವು. ಉತ್ತು ಬಿತ್ತು ಬೆಳೆದರೂ ಸಕಾಲಕ್ಕೆ ಸರಿಯಾದ ಬೆಳೆಯೂ-ಬೆಲೆಯೂ ಸಿಗುವುದು ದುಸ್ತರವಾಗಿ ಕಾಣಿಸುತ್ತಿತ್ತು. ಸರಿಯಾದ ಸಮಯದಲ್ಲಿ ಬೀಜಗಳು, ಗೊಬ್ಬರಗಳು ಸಿಗುತ್ತಿರಲಿಲ್ಲ. ಬೇಸಿಗೆಯಲ್ಲಿ ನೀರಿನ ಅಗಾಧ ಕೊರತೆ ಕಾಡುತ್ತಿತ್ತು. ಒಂದೇ ಬೆಳೆಯನ್ನು ನಂಬಿದರೆ ಬದುಕುವುದು ಸಾಧ್ಯವಿಲ್ಲವೆಂದು ನಿರ್ಧರಿಸಿದ ಇವರು ಮಿಶ್ರಬೆಳೆಗಳನ್ನು ಬೆಳೆದರು. ಆದರೂ ಬರುವ ಆದಾಯ ತುತ್ತಿನ ಚೀಲಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನೂ ಹೊಂದಿಸಿಕೊಳ್ಳುವಲ್ಲಿ ಮತ್ತೆ ಸಾಲವನ್ನು ಎತ್ತುವಂತೇ ಮಾಡುತ್ತಿತ್ತು.

ತಮ್ಮ ಈ ಸ್ಥಿತಿಯನ್ನು ಸ್ವಲ್ಪವೇ ಓದಿದ ಹಳ್ಳಿಯಲ್ಲಿರುವ ಮಿಕ್ಕುಳಿದ ಮಕ್ಕಳೂ ಅರಿತರು. ಅವರಿಗೂ ಜಮೀನು-ಮನೆ ಬೇಡವಾಯಿತು. ನಿಧಾನವಾಗಿ ಇರುವ ಜಮೀನಿನ ಭಾಗವನ್ನು ಮಾರಿದರು. ನಗರಗಳತ್ತ ಉದ್ಯೋಗ ಅರಸಿ ಹೊರಟುಬಿಟ್ಟರು. ಹೇಳಿಕೊಳ್ಳುವುದಕ್ಕೆ ಸಹೋದರರು ಸರಕಾರೀ ಉದ್ಯೋಗಗಳಲ್ಲಿದ್ದರೂ ಯಾರೂ ಸಹಾಯಮಾಡಲಿಲ್ಲ. ನಗರಕ್ಕೆ ಬಂದ ರೈತನ ಆ ಮಕ್ಕಳು ಬೀಡಿ ಕಟ್ಟಿದರು, ಗಾರೆ ಕೆಲಸದಲ್ಲಿ ತೊಡಗಿದರು, ವಾಚಮನ್ ಕೆಲಸಗಳಲ್ಲಿ ತೊಡಗಿದರು, ಕಾರ್ಖಾನೆಗಳಲ್ಲಿ ಕೆಲಸಗಾರರಾಗಿ ಸಣ್ಣ ಸಂಬಳಕ್ಕೆ ಕೈಯ್ಯೊಡ್ಡಿದರು. ಊರಲ್ಲಿ ಉಳಿಯಲು ಅದು ಹೇಗೋ ಮನೆಯೊಂದಿದ್ದು ಅದರಲ್ಲಿ ವೃದ್ಧಾಶ್ರಮಗಳಲ್ಲಿ ವಾಸಿಸುವಂತೇ ಈ ಜನರ ತಂದೆ-ತಾಯಿಗಳು ಬದುಕಿದರು. ವ್ಯತ್ಯಾಸ ಇಷ್ಟೇ ವೃದ್ಧಾಶ್ರಮಕ್ಕೆ ನೋಡಿಕೊಳ್ಳಲು ಒಂದು ಸಮಿತಿಯೋ ಅಥವಾ ಇನ್ಯಾರೋ ಇರುತ್ತಾರೆ, ಆದರೆ ಇಲ್ಲಿ ಅದೂ ಇರಲಿಲ್ಲ. ಹೆತ್ತ ಮಕ್ಕಳು ಪಟ್ಟಣ ಸೇರಿದಮೇಲೆ ಮುದಿವಯಸ್ಸಿನ ಆ ಜೀವಗಳಿಗೆ ಬದುಕಾದರೂ ಯಾಕಪ್ಪಾ ಎನಿಸುತ್ತಿತ್ತು.

ಇದು ಇಂದಿನ ಬಹುತೇಕ ಹಳ್ಳಿಗಳ ಚಿತ್ರಣ! ಶತಮಾನಗಳಿಂದಲೂ ಸಣ್ಣ ರೈತ ಸಂಕಷ್ಟದಲ್ಲೇ ಇದ್ದಾನೆ. ಆತನ ಆಯಕ್ಕೂ ವ್ಯಯಕ್ಕೂ ಸಂಬಂಧವೇ ಇರುವುದಿಲ್ಲ. ಕೆಲವೊಮ್ಮೆ ರೈತನಲ್ಲಿ ಬೀಜ-ಗೊಬ್ಬರ ಕೊಳ್ಳುವುದಕ್ಕೂ ರೊಕ್ಕ ಇರುವುದಿಲ್ಲ. ಮಾಸಲು ಬಟ್ಟೆಗಳನ್ನೇ ಧರಿಸುತ್ತಾ ಹೊರಲಾರದ ಹೊರೆಯನ್ನು ಹೊತ್ತ ಮಗುವಿನಂತೇ ಅತಿಯಾದ ಭಾರವನ್ನು ಏರಲ್ಲಿ ಎಳೆಯುವ ಗಾಡಿಯ ಎತ್ತಿನಂತೇ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಏನೇನೋ ಕಸರತ್ತುಗಳನ್ನು ಮಾಡುತ್ತಾ ದಿನದೂಡುವ ರೈತಾಪಿ ಜೀವನ ಯುವ ಪೀಳಿಗೆಯ ಹಲವು ಜನರಿಗೆ ಬೇಡವೆನಿಸಿಬಿಟ್ಟಿದೆ. ಮಧ್ಯೆ ಕಾಲಪರಿವರ್ತನೆಯಿಂದ ಬೇಸತ್ತಿದ್ದ ಮನಕ್ಕೆ ಮುದನೀಡಲು ಎಡತಾಕಿದ ದೃಶ್ಯಮಾಧ್ಯಮ [ಟಿವಿ]ಬಹುತೇಕರನ್ನು ಸದಾ ತನ್ನ ಮುಂದೇ ಕೂರಿಸಿಕೊಂಡುಬಿಟ್ಟಿದೆ. ಮೊಬೈಲ್ ಫೋನ್ ಬಂದಿದ್ದರಿಂದ ಇರುಚ ಚಿಕ್ಕಾಸನ್ನೇ ವ್ಯಯಿಸಿ ಅದನ್ನು ಕೊಂಡಾಗಿನಿಂದ ಕರೆನ್ಸಿ ಹಾಕಿಸಿ ಹಾಕಿಸಿ ಬೇಕೋ ಬೇಡವೋ ರೈತನ ಮಕ್ಕಳು ಇನ್ನೂ ಬಡವಾದರು ಎನಿಸುತ್ತದೆ. ಸಮಯದಲ್ಲಿ ಕೆಲವೊಮ್ಮೆ ಉಂಟಾಗುವ ತಲೆನೋವಿನ ಜಂಜಡಗಳನ್ನು ಮರೆಯಲು ಅಂತ ಆರಂಭಿಸಿದ ಗುಟ್ಕಾ ಪಾನ್‍ಪರಾಗ್ ಈಗ ಕಾಯಂ ಆಗಿ ಬಾಯಲ್ಲೇ ಇರಬೇಕಾಗುತ್ತದೆ! ಹಾಗೊಮ್ಮೆ ನೋಡಿದಾಗ ರೈತನ ಮಕ್ಕಳು ಸ್ವಲ್ಪ ಆಳಸಿಗಳಾಗುತ್ತಿರುವುದೂ ಕಾಣುತ್ತದೆ.

ಪ್ರತಿಯೊಬ್ಬ ಮನುಷ್ಯನಿಗೆ ಆಹಾರ ಅತೀ ಮುಖ್ಯ. ಅಂತಹ ಆಹಾರ ಬೆಳೆಗಳನ್ನು ಹಿಂದಿನಿಂದ ಇಂದಿನವರೆಗೂ ರೈತರು ಕೇವಲ ತಮ್ಮ ಉದರಂಭರಣೆಯ ಉದ್ದೇಶವೇ ಅಲ್ಲದೇ ಲೋಕದ ಹಿತಾರ್ಥ ಬೆಳೆಯುತ್ತಾರೆ. ಸಹಜವಾಗಿ ಭೂಮಿಯ ಮಕ್ಕಳಾದ ಅವರ ಬವಣೆಗಳನ್ನು ನಿಸರ್ಗವೇ ನೋಡಬೇಕೇ ಹೊರತು ಜನರನ್ನು ನಂಬಿ ಅವರು ನಡೆಯುವ ಹಾಗಿಲ್ಲ. ಕೇವಲ ಸರಕಾರ ಕೊಡುತ್ತದೆ ಅಥವಾ ಇನ್ಯಾರೋ ಕೊಡುತ್ತಾರೆ ಎಂದುಕೊಂಡರೆ ಅದು ತಪ್ಪಾಗುತ್ತದೆ. ಪ್ರತೀವರ್ಷ ಸಕಾಲಿಕ ಮಳೆಯ ಅಭಾವ, ಬಿತ್ತನೆಬೀಜಗಳ ಕೊರತೆ ಮುಂತಾದ ಬಳಲುವಿಕೆ ಇದ್ದೇ ಇದೆ. ಪ್ರತೀ ವರ್ಷ ಸರಕಾರ ಹೇಗೆ ಮುಂಗಡಪತ್ರವನ್ನು ಬರೆಯುತ್ತದೋ ಹಾಗೇ ಪ್ರತಿಯೊಬ್ಬ ರೈತನೂ ತನ್ನ ಆಯ-ವ್ಯಯಗಳನ್ನು ಗಣಿಸಿ ಒಂದು ಮುಂಗಡಪತ್ರವನ್ನು ರಚಿಸಿಕೊಂಡರೆ ಅದು ಆತನ ಸಮಸ್ಯೆಗಳಿಗೆ ಪರಿಹಾರ ಕಾಣುವಲ್ಲಿ ಮೊದಲ ಹೆಜ್ಜೆಯಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬದಲು ಹಟ್ಟಿಗೊಬ್ಬರಗಳನ್ನು ಬಳಸಿದರೆ ನಿಸರ್ಗ ಹಾಳಾಗದೇ ಇರುವುದರಿಂದ ತೀರಾ ಅಧಿಕ ಇಳುವರಿ ಬರದೇ ಇದ್ದರೂ ಕ್ರಮೇಣ ಅಧಿಕ ಇಳುವರಿಯನ್ನು ಸಾಧಿಸಬಹುದಾದ ಮಾರ್ಗಗಳು ಇವತ್ತು ನೋಡಸಿಗುತ್ತವೆ.

ಎತ್ತು ಎರಡು ಅವನ ಜೋಡು ಕೂಡಿ ದುಡಿವ ಗೆಳೆಯರು
ಹಿಗ್ಗುಕುಗ್ಗು ಏನೇ ಇರಲಿ ಹೊಂದಿಕೊಂಡು ನಡೆವರು

ಎಂತಹ ಭಾವನಾತ್ಮಕ ಸನ್ನಿವೇಶ ನೋಡಿ. ಜೀವಂತ ಯಂತ್ರಗಳಾದ ಎತ್ತುಗಳು ರೈತನ ಬೆನ್ನೆಲುಬಾಗಿ ಆತನಿಗೆ ಸಹಕರಿಸುತ್ತವೆ. ಹೊಟ್ಟೆಗೆ ತಿನ್ನದಿದ್ದರೂ ತಮ್ಮಿಂದಾಗುವಷ್ಟು ಕಾಲ ಒಡೆಯನ ಸೇವೆಯನ್ನು ಮಾಡುತ್ತವೆ. ಆತನ ಭಾವನೆಗಳಿಗೆ ಮೂಕವಾಗಿ ಸ್ಪಂದಿಸುವ ಅವುಗಳು ಸಿರಿತನಕ್ಕೆ ಹಿಗ್ಗದೇ ಬಡತನಕ್ಕೆ ಕುಗ್ಗದೇ ಏಕರೀತಿಯಿಂದ ರೈತನ ಜೀವಾಳವಾಗಿರುತ್ತವೆ. ಹೃದಯಾಘಾತದಿಂದ ಸತ್ತ ತನ್ನ ಯಜಮಾನನ ದೇಹವನ್ನು ಯಾವುದೇ ಮಾರ್ಗನಿರ್ದೇಶನವಿಲ್ಲದೇ ಕೇವಲ ತಂತಾನೇ ನಡೆದು ಮನೆಗೆ ತಲುಪಿಸಿದ ಎತ್ತೊಂದರ ಬಗ್ಗೆ ಮಾಧ್ಯಮಗಳು ಬಿತ್ತರಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ. ಸಣ್ಣ ರೈತರಿಗೆ ಎತ್ತುಗಳನ್ನು ಸಾಕಲಾಗುವುದಿಲ್ಲಾ ಎಂಬ ಚಿಂತೆಯಾಗಿದೆ. ಆದರೆ ಸರಿಯಾಗಿ ಅವರು ಚಿಂತಿಸಿನೋಡಿದರೆ ಎತ್ತುಗಳ ಹೊಟ್ಟೆಗೆ ಬೇಕಾಗುವ ಆಹಾರವನ್ನು ಅವುಗಳ ದುಡಿಮೆಯೇ ಪೂರೈಸುತ್ತದೆ. ಎತ್ತುಗಳೇ ಇಲ್ಲದ ಕೇವಲ ಟ್ರಾಕ್ಟರ್ ಮತ್ತು ರಾಸಾಯನಿಕಗಳನ್ನು ಬಳಸಿ ಮಾಡುವ ಹೊಲಗಳು ಕಾಲಕ್ರಮೇಣ ನಿಸ್ಸಾರವಾಗಿ ಅಲ್ಲಿರುವ ಮಣ್ಣಿಗೆ ಯಾವ ಅರ್ಹತೆಯೂ ಇರುವುದಿಲ್ಲ. ಈಗ ನಡೆಯುತ್ತಿರುವುದೇ ಅದಾಗಿದೆ. ಆಂಗ್ಲ ಗಾದೆಯೊಂದು ಹೀಗಿದೆ --- At First he calls drink, then Drink in the stomach calls Drinks, at last Drink calls him ಯಾವುದೋ ಕೆಟ್ಟಘಳಿಗೆಯಲ್ಲಿ ಒಮ್ಮೆ ಒಬ್ಬಾತ ಮದಿರೆಯನ್ನು ಕುಡಿಯುತ್ತಾನೆ. ನಂತರದ ದಿನಗಳಲ್ಲಿ ಆತನ ದೇಹದೊಳಗಣ ಮದಿರೆಯೇ ಮತ್ತೆ ಮದಿರೆಯನ್ನು ಕರೆಯುತ್ತದೆ. ಕೊನೆಗೊಮ್ಮೆ ಮದಿರೆಯ ನರ್ತನ ಜಾಸ್ತಿಯಾಗಿ ಆ ಮದಿರೆಯೇ ಆತನನ್ನು ಬಲಿತೆಗೆದುಕೊಳ್ಳುತ್ತದೆ.

ರೈತ ತಾನು ಮಾಡುತ್ತಿರುವ ವೃತ್ತಿ ಒಂದು ಉದ್ಯಮ ಎಂದು ಪರಿಗಣಿಸಬೇಕಾದ ದಿನ ಬಂದಿದೆ. ಹೇಗಾಯಿತ್ಹಾಗೆ ಎಂದುಕೊಂಡು ಸ್ವಲ್ಪ ಹೆಚ್ಚು ಕಮ್ಮಿ ಅಂದಾಜಿನ ಲೆಕ್ಕಾಚಾರದಲ್ಲೇ ದಿನಗಳೆದ ರೈತ ಉದ್ಯಮದಲ್ಲಿ ಲಾಭಗಳಿಸುವ ಮಾರ್ಗವನ್ನು ಸಮರ್ಪಕ ಲೆಕ್ಕಪತ್ರಗಳನ್ನು ಇಡುವುದರಿಂದ ಮತ್ತು ಯಾವಾಗ ಯಾವ ರೀತಿಯ ಬೆಳೆಯನ್ನು ಯಾವ ಭೂಮಿಯಲ್ಲಿ ಬೆಳೆದರೆ ಲಾಭ ಸಿಗಬಹುದೆಂಬ ಮಾರುಕಟ್ಟೆಯ ಮುಂಧೋರಣೆಯಿಂದ ನಡೆದರೆ ಆತ ಗೆಲ್ಲುವುದರಲ್ಲಿ ಸಂಶಯವಿರುವುದಿಲ್ಲ. ಅಲ್ಲಲ್ಲಿ ಕೆಲವು ರೈತರ ಸಂದರ್ಶನಗಳನ್ನು ನೋಡುತ್ತೇವೆ. ರೈತ ಕೇವಲ ಒಂದೇ ಬೆಳೆಯನ್ನು ಅವಲಂಬಿಸಬಾರದು; ಆದಷ್ಟೂ ಮಿಶ್ರಬೆಳೆಗಳನ್ನು ಬೆಳೆದರೆ ಒಂದಿಲ್ಲೊಂದು ಬೆಳೆಗೆ ಬೇಡಿಕೆ ಬರುವುದರಿಂದ ತನ್ನ ಆಯ-ವ್ಯಯಗಳನ್ನು ಸರಿದೂಗಿಸಿಕೊಂಡು ಹೋಗಲು ಅನುಕೂಲವಾಗುತ್ತದೆ.

ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ ಒಂದೇಸಮನೆ ದುಡಿಯುತ


ಯಾವುದೇ ಕೆಲಸವನ್ನು ಮಾಡಿದರೂ ಕೊನೆಗೊಮ್ಮೆ ಮನುಷ್ಯ ಮಾಡುವುದೆಲ್ಲಾ ಗೇಣು ಹೊಟ್ಟೆಗಾಗಿ-ತುಂಡು ಬಟ್ಟೆಗಾಗಿ! ಸಮಾಜದಲ್ಲಿ ಎಲ್ಲಾ ವೃತ್ತಿಗಳೂ ಒಂದನ್ನೊಂದು ಅವಲಂಬಿಸಿವೆ. ಕೇವಲ ಜಾಗತೀಕರಣದಿಂದ ಹುಟ್ಟಿಕೊಂಡ ಹೊಸ ಹೊಸ ಉದ್ಯಮಗಳಿಂದ ಮಾತ್ರ ಜಗತ್ತು ನಡೆಯುತ್ತದೆ ಎಂಬುದು ಸುಳ್ಳು. ಜಾಗತೀಕರಣ ಪರೋಕ್ಷ ನಮ್ಮ ದೇಶದ ಹಲವು ಸಣ್ಣಕೈಗಾರಿಕೆಗಳಿಗೆ ಹೊಡೆತಕೊಟ್ಟಿದೆ. ಬಿಸಿಲು,ಮಳೆ,ಚಳಿಯನ್ನು ಲೆಕ್ಕಿಸದೇ ಹೊಲಗದ್ದೆಗಳಲ್ಲಿ-ತೋಟತುಡಿಕೆಗಳಲ್ಲಿ ಕೃಷಿಕೆಲಸದಲ್ಲಿ ನಿರತನಾಗಿರುವ ರೈತ ನಿಜವಾದ ಅನ್ನದಾತನಾಗಿದ್ದಾನೆ. ಅನ್ನದಾತನನ್ನು ಯಾರೇ ನಿರ್ಲಕ್ಷಿಸಿದರೂ ಅದು ನಮಗೆ ನಾವೇಮಾಡಿಕೊಂಡ ಮೋಸವಾಗುತ್ತದೆ. ಹೇಗೆ ಇಂಧನಗಳ ಬೆಲೆ ಹೆಚ್ಚಳ ಸಾಗಾಣಿಕೆಗಳ ಮೇಲೂ ಆ ಮೂಲಕ ಮುಂದೆ ನಡೆಯಬೇಕಾದ ಕ್ರಯ-ವಿಕ್ರಯ ವ್ಯವಹಾರಗಳಮೇಲೂ ಪರಿಣಾಮ ಬೀರುವುದೋ ಹಾಗೆಯೇ ಅನ್ನದಾತನಿಗೆ ಬೀಳುವ ಹೊಡೆತ ನಮ್ಮೆಲ್ಲರಿಗೂ ತಾಗುವ ಪೆಟ್ಟು. ಇರುವುದರಲ್ಲಿ ತೃಪ್ತಿ ಪಟ್ಟು ಬದುಕುವ ರೈತಾಭಿಜನರನ್ನು ಆದರಿಸುವುದು ಅವರ ಅಗತ್ಯಗಳನ್ನು ನಾಗರಿಕ ಸರಕಾರ ಪೂರೈಸುವಂತೇ ನೋಡಿಕೊಳ್ಳುವುದು ಸಮಾಜದ ಎಲ್ಲರ ಹೊಣೆಯಾಗಿದೆ. ಕೃಷಿಯಿಂದ ಭ್ರಮನಿರಸನಗೊಂಡು ಹೊರಹೊರಡುವ ಗ್ರಾಮೀಣ ಯುವ ಪೀಳಿಗೆಯ ಸಮಸ್ಯೆಗಳನ್ನು ಆಲೈಸಿ ಅವರನ್ನು ಸರಿಯಾದ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ ಹಿಡುವಳಿದಾರರಾಗಿ ಸಮೃದ್ಧಿಯಿಂದ ಬದುಕುವಂತೇ ಪ್ರೇರೇಪಿಸುವುದು ಸದ್ಯ ಮಾಡಬೇಕಾದ ಕರ್ತವ್ಯವಾಗಿದೆ.