ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, January 16, 2010


ಹಾಡಲೇ ಹಾಡಿನಾ ಪಲ್ಲವೀ ........


ಬರೆಯದೇ ಬಹಳ ಸಮಯದಿಂದ ಹಾಗೇ ಕಾಲ ಕಳೆದುಬಿಟ್ಟಿದ್ದೇನೆ. ಬರೆಯುವ ಹವ್ಯಾಸ ಇದ್ದರೂ ಅದಕ್ಕೆ ಸಮಯಾವಕಾಶ ಕೂಡಿಬರಲಿಲ್ಲ. ಅನೇಕ ಬಾಲ್ಯದ ಚೆಡ್ಡಿ ಗೆಳೆಯರ ಒತ್ತಡ ಶುರುವಾಯ್ತು "ನಿನ್ನ ಬರಹಗಳು ತುಂಬಾ ಚೆನ್ನಾಗಿರುತ್ತಾವಪ್ಪಾ ನೀನುಬರೆಯಲೇಬೇಕು, ಎಂದು? " ಹಠಹಿಡಿದಿದ್ದಾರೆ. ನನ್ನ ಬರಹಗಳು ಅನೇಕರಿಗೆ ರುಚಿಸುವುದೇ!? ಎಂಬ ಅನುಮಾನ ಕಾಡತೊಡಗಿತು. ಆದರೂ ನನ್ನ ತಾಣದ ಓದುಗರನ್ನು ನಿತ್ರಾಣರಾಗಿಸುವಷ್ಟು ಅರ್ಥಹೀನವೇ ನನ್ನ ಬರಹಗಳು ಎಂಬ ದುಗುಡ ಮನಸ್ಸಿನಲ್ಲಿ! ಎಹೇ ನಾನೇನು ಕಮ್ಮಿಯೇ,ಶೇಕಸ್ಪೀಯರ್ ಮೊಮ್ಮಗನ ಥರ ಇದ್ದೇನೆ ! ನಾಲ್ಕು ಸಾಲು ಗೀಚಿದರೆ ಒಂದು ಕವಿತೆ ರೆಡಿಯಪ್ಪ ಅಂತ ಒಂಥರಾ ಒಣ ಜಂಬ ಬಂದುಬಿಟ್ಟಿತೇ? ಒಮ್ಮೊಮ್ಮೆ ನನಗೇ ನಾನು ಅಂದುಕೊಂಡಿದ್ದಿದೆ "ಏಯ್ ಸುಮ್ಮನಿರೋ ಮಾರಾಯ, ಸುಮ್ನೇಏನೋ ಬರೆದು ನನ್ನನ್ನು ಯಾಕೆ ನಗೆಪಾಟಲಿಗೆ ಈಡುಮಾಡ್ತೀಯ? ಬೇರೆ ಕೆಲಸ ಇಲ್ದೇಇದ್ರೆ ಬಾತ್ರೂಮ್ನಲ್ಲಿ ಸಿನಿಮಾ ಹಾಡುಹೇಳು,ಇಲ್ಲಾಂದ್ರೆ ಟಿವಿ ನೋಡು ಸುಮ್ನೇ ನನ್ನನ್ನ ನನ್ನ ಪಾಡಿಗೆ ಬಿಟ್ಟುಬಿಡು". ಬಹುಶಃ ಇದು ಅನೇಕರ ಅನುಭವವೂ ಹೌದಿರಬೇಕು. ಏನೇ ಇರಲಿ ಬರೆದೇ ಬಿಡೋಣ ಅಂತ ಕೆಲವೊಮ್ಮೆ ಸ್ವಲ್ಪ ಹಂದಿಯ ಥರ ಹೂಂಕರಿಸುತ್ತೇನೆ ! ಸ್ವಲ್ಪ ಸ್ಲೋ ಮೋಶನ್ ಆದ್ರೆಗೂಳಿಯ ಥರ ಸಣ್ಣ ಗುಟುರು ಹೊಮ್ಮುತ್ತದೆ ! ಏನಿದ್ರೂ ನನ್ನ ಅನಿಸಿಕೆ ಹೇಳುವುದರಲ್ಲಿ- ನೀವದನ್ನು ಕೇಳುವುದರಲ್ಲಿ ಚೌಕಾಸಿವ್ಯಾಪಾರ ಯಾಕೆ -ಅದೆಲ್ಲ ಏನಿದ್ರೂ ತಳ್ಳು ಗಾಡಿಯವರಹತ್ತಿರ ಅಲ್ಲವೇ ?


ಬರೆದೇ
ಬಿಡುತ್ತೇನೆ ಎಂದು ಮತ್ತೆ ಬಿಲ್ಲು-ಬಾಣ ಹಿಡಿದು
ಬ್ಲಾಗ್ ರಥವೇರುವ ಹೊತ್ತಿಗೆ ಮತ್ತೆ ಅರ್ಜುನನ ರೀತಿ ಕುಸಿದುಬಿಡುತ್ತೇನೆ, ಎಂಥೆಂಥ ಅತಿರಥ ಮಹಾರಥರು ಕಣ್ಣೆದುರಿಗೆ ಬಂದುನಿಲ್ಲುತ್ತಾರೆ. ಛೆ ! ಪ್ರಾತಸ್ಮರಣೀಯರಾದ ಕಾರಂತರು,ಬೇಂದ್ರೆಯವರು, ಮಾಸ್ತಿ, ಕುವೆಂಪು .......ಆದಿಯಾಗಿ ಸಾವಿರಾರು ಸೈನಿಕರು, ಅಜಾನುಬಾಹುಗಳು, ವಿಗಡ ವಿಕ್ರಮರಾಯರುಗಳು ಎದುರಾಗುತ್ತಿದ್ದಾರೆ, ಏನುಮಾಡಲಿ ನನ್ನ ಸಾರಥಿಯಾಗಿ ಇರುವ ಕೃಷ್ಣಮಾತಾಡದೇ ಕುಳಿತುಬಿಟ್ಟಿದ್ದಾನೆ, ಕರೆಯುತ್ತೇನೆ ನೋಡೋಣ"ಕೃಷ್ಣ ,ಹೇ ಕೃಷ್ಣ ಪರಮಾತ್ಮ, ನೋಡಪ್ಪ ನಮ್ಮವರೆಲ್ಲ 'ದೊಡ್ಡದಾದ Parker ಮತ್ತು ಸ್ವಲ್ಪ ಚಿಕ್ಕದಾದ Reynolds' ಹಿಡಿದು ತಯಾರಾಗಿದ್ದಾರಪ್ಪ , ನನ್ನಿಂದ ಯುದ್ಧ ಸಾಧ್ಯವಿಲ್ಲ, ನನ್ನನ್ನು ಕ್ಷಮಿಸು", ತಡೆಯಿರಿ ಯಾವುದೋ ದ್ವನಿ ಕೇಳಿಸುತ್ತಿದೆ ! " ಯಾರಯ್ಯ ನಿನಗೆ ಬರೆಯಲು ಹೇಳಿದ್ದು? ಬರೆಯಲು ಹೊರಟಮೇಲೆ ಬರೆಯಲೇಬೇಕು, ನಿನ್ನ ಹಿರಿಯರು-ಬಂಧು ಮಿತ್ರರು-ನೆಂಟರಿಷ್ಟರು-ಅವರ ಮಕ್ಕಳು-ಅವರಮಕ್ಕಳು-ಮಗುದವರ ಮಕ್ಕಳು-ಮಗುದವರ ಮರಿ ಮೊಮ್ಮಕ್ಕಳು ಎಲ್ಲಾ ಇರುತ್ತಾರಪ್ಪ , ಅವರನ್ನು ಎದುರಾಳಿಗಳು ಎಂತ ನಿನಗೆ ಯಾರು ಹೇಳಿದರು ? " --ನನ್ನ ಕೃಷ್ಣ ಮಾತನಾಡುತ್ತಾನೆ.

" ಕೃಷ್ಣ, ಬರೆಯಲು ಹೊರಟಾಗ ನಾನೇ ಎಲ್ಲರಿಗಿಂತ ದೊಡ್ಡ ಸಾಹಿತಿ-ಬರೆಹಗಾರ,ಸವ್ಯಸಾಚಿ,ಕವಿ-ಗಾಂಡೀವಿ,ಸಾರಸ್ವತಲೋಕದಗಂಡ ಎಂದೆನಿಸಿಕೊಳ್ಳಬೇಕಲ್ಲವೇ ? ಅದನ್ನೆಲ್ಲ ಮಾಡುವಾಗ ನಾನು ಎದುರಾಗಿ ಬರುವ ಎಲ್ಲರನ್ನೂ ಸೋಲಿಸಿ ಸದೆಬಡಿಯಬೇಕಲ್ಲವೇ ? "

ಮತ್ತೆ ಕೃಷ್ಣ ಉವಾಚ " ಅವರನ್ನು ನಿನ್ನ ವೈರಿಗಳು, ಎದುರಾಳಿಗಳು ಎಂದು ಯಾರು ಹೇಳಿದರು ನಿನಗೆ ? ಅವರ ಪಾಡಿಗೆ ಅವರವರು ಯುದ್ಧಮಾಡಿದ್ದಾರೆ, ಮಾಡುತ್ತಿದ್ದಾರೆ, ಮಾಡುತ್ತಾರೆ. ಇದು ನಿಜವಾದ ಯುದ್ಧವಲ್ಲ. ಸುಮ್ಮನೇ ನಾಟಕ-ಯಕ್ಷಗಾನಗಳಲ್ಲಿ ಬಿಲ್ಲು-ಬಾಣ ಹಿಡಿದು ವೇದಿಕೆಯ ಮೇಲೆ ಆಕಡೆ ಈಕಡೆ ಓಡಾಡಿದ ಹಾಗೇ ಮಾಡು, ಅದು ಒಂದು ರೀತಿ ಯುದ್ಧದ ರೀತಿ ಕಾಣಿಸುತ್ತದೆ. ಆದರೆ ಅಲ್ಲಿ ಬಾಣ ಬಿಡುವುದೂ ಇಲ್ಲ;ನೋವು ಕಾವೂ ಇಲ್ಲ. ಅಂತಿಮವಾಗಿ ಕಥೆ ನಿನಗೆ ಮೊದಲೇ ತಿಳಿದಿರುವಂತೆ ಇಲ್ಲಿ ಕೌರವರೂಇಲ್ಲ-ಪಾಂಡವರೂ ಇಲ್ಲ, ಒಂಥರಾ ವೇಷ ಅಷ್ಟೇ ! ಅಂತಿಮವಾಗಿ ಎಲ್ಲರಿಗೂ ಗೆಲುವು. All participants are winners ! -ಎಲ್ಲರಿಗೂ ಏನಾದರೊಂದು ಬಹುಮಾನ ಇದೆ ಅಂತ ಅನೇಕ ಸ್ಥಳೀಯ ಮಾರಾಟ ಪ್ರಕ್ರಿಯೆಯ ಲಾಟರಿಯಲ್ಲಿ ಹೇಳುವುದಿಲ್ಲವೋ ? ಹಾಗೇ. ಹೀಗಾಗಿ ನನ್ನನ್ನೊಮ್ಮೆ ನೋಡು "

"ನೀನು ಬಹಳ ಸಾರಿ ಹಲವಾರು ರೀತಿ ತಿಳಿಸಿ ಹೇಳಿದೆ ಕೃಷ್ಣ, ಆದರೂ ನನಗ್ಯಾಕೋ ಅನುಮಾನ ಕೃಷ್ಣಾ, ನಾನು ಬಿಲ್ಲು ಹಿಡಿಯಲೂ ಅರ್ಹನಲ್ಲ ಅಂತ, ಹೀಗಾಗಿ ಮೇಲೇಳಲೇ ಆಗದೇ polio ಆದವರ ರೀತಿ ಆಗ್ಬಿಟ್ಟಿದೆ, ನನ್ನಿಂದ ಸಾಹಿತ್ಯರಣರಂಗದಲ್ಲಿ ಯುದ್ಧ ಸುತರಾಂ ಸಲ್ಲ "

"ಅರ್ಥವಾಯ್ತು, ನಿನಗಿನ್ನೂ ಅರ್ಥವಾಗಲಿಲ್ಲವೆಂಬುದು ಅರ್ಥವಾಯ್ತು. ನಿನ್ನ ಪರಾಮರ್ಶೆಗಾಗಿ ದೇವನಾದ ನಾನು ಹುಲುಮಾನವನಾದ ನಿನಗೆ ನನ್ನ ನಿಜರೂಪವನ್ನು ತೋರಿಸುತ್ತಿದ್ದೇನೆ ನೋಡು "

" ಕೃಷ್ಣ, ಬಹಳ ಪ್ರಕಾಶಮಾನವಾಗಿದೆ, ನೋಡಲು ಸಾಧ್ಯವೇ ಇಲ್ಲ, ಮೊದಲೇ ಹೇಳಲಿಲ್ಲವೇ, ನನಗೆ ಯಾವ ಗಾಂಡೀವವೂ ಬೇಡ, ಎಲ್ಲಾ ನಿನ್ನಲ್ಲೇ ಇರಲಿ, ದಿನದಲ್ಲಿ ಎರಡು ಹೊತ್ತಿಗೆ ಊಟ, ಎರಡು ಸರ್ತಿ ಕಾಪಿ ಅಥವಾ ಟೀ ಸಿಕ್ಕರೆ ಸಾಕು. Additional ಆಗಿಒಂದು ಮೇಜು ಮತ್ತು ಒಂದು ಕುರ್ಚಿ ಒಂದು ಬರೆಯುವ ಪೆನ್ನು[!] ಮತ್ತು ಕಾಲಿಹಾಳೆ ಸಿಗುವಂತೆ ಅನುಗ್ರಹಿಸು. ನನ್ನಪಾಡಿಗೆನಾನು ಇದ್ದುಬಿಡುತ್ತೇನೆ , ಅತಿಮಾನುಷನಾದ ನೀನು ಬೇರೆ ಅರ್ಜುನನ್ನು ಹುಡುಕಿಕೋ "

" ಛೇ! ಎಲ್ಲಾದರೂ ಉಂಟೆ ಅರ್ಜುನ ? ನಿನಗೆ ದಿವ್ಯ ಚಕ್ಷುಸ್ಸನ್ನು ಕರುಣಿಸಿದ್ದೇನೆ, ಕಣ್ಣಿನಿಂದ ಹೀಗೊಮ್ಮೆ ನೋಡು, ನನ್ನಲ್ಲಿಯೇ ಎಲ್ಲವೂ ಇದೆ, ನಾನೇ ಎಲ್ಲವೂ, ನೀನೂ ನಾನೇ-ನಿನ್ನ ಕಾರಂತರು-ಮಾಸ್ತಿ-ಬೇಂದ್ರೆ ಎಲ್ಲಾ ನಾನೇ, ಕಾಣುತ್ತಿರುವೆಯಷ್ಟೇ ? "

"ಹಾ ಹಾ , ಏನೇನೋ ಕಾಣುತ್ತಿದೆ ಪರಮಾತ್ಮ! ಇದೇನಾಶ್ಚರ್ಯ ! ಕಾರಂತರ ' ಜಗತ್ತು ', ಬೇಂದ್ರೆಯವರ 'ನಾಕು ತಂತಿ ', ಕುವೆಂಪು ಅವರ ' ರಾಮಾಯಣ ದರ್ಶನಂ', .....................ಇನ್ನೂ ಏನೆಲ್ಲಾ ಇದೆ ಎಣಿಸಲಸದಳ ಸ್ವಾಮೀ....... ಒಂದುಕಡೆ ಡಿ.ವಿ.ಜಿ,..ಕೃ, .ರಾ.ಸು., ಇನ್ನೊಂದುಕಡೆ ದೇವುಡು,ಗೊರೂರು,ವಿ.ಕೃ.ಗೋಕಾಕ್, ...........ಇಷ್ಟುದಿನ ಯಾಕೆ ಹೇಳಲಿಲ್ಲ ಸ್ವಾಮೀ, ಸರಕಾರೀ ಗ್ರಂಥಾಲಯಗಳಲ್ಲಿ ಸಿಗದ ಅತ್ಯಮೂಲ್ಯ ಎಲ್ಲಾ ಕೃತಿಗಳನ್ನೂ,ಕರ್ತ್ರುಗಳನ್ನೂ ನಿನ್ನಲ್ಲೇ ಹುದುಗಿಸಿಟ್ಟುಕೊಂಡು ಸುಮ್ಮನೇ ಹಾದಿಹೋಕರ ಹಾಗೇ ನನ್ನಜೊತೆ ಇದ್ದೂ ಸುಮ್ಮನಿದ್ದೆಯಲ್ಲ ಇದು ಯಾವ ನ್ಯಾಯ ? ಇಷ್ಟೆಲ್ಲಾ ಇದೆ ಅಂತ ಗೊತ್ತಿದ್ದರೆ ನಾನು ಮೊದಲೇ ನಿನ್ನಲ್ಲಿ ಕೇಳಿಪಡೆಯುತ್ತಿರಲಿಲ್ಲವೇ ? ಎಲ್ಲಾ ಮುಗಿದ ಮೇಲೆ ತನ್ನಲ್ಲೇ ಇದೆ ಅಂದರೆ ಅದರ ಉಪಕಾರ ಯಾರಿಗೆ ಬೇಕು? ಏನೇ ಇರಲಿ ಇದನ್ನೆಲ್ಲಾ ನನಗೆ ತೋರಿಸಿದ ಹಾಗೇ ಜಗತ್ತಿಗೂ ತೋರಿಸಬಾರದೆ ?"

" ಅರ್ಜುನಾ, ಎಲ್ಲವನ್ನೂ ಎಲ್ಲರಿಗೆ ಕೊಡುವುದು ಸಮಂಜಸವಲ್ಲ. ನೀನು 'ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಹಾಗೆ ' ಎಂಬಗಾದೆಯನ್ನು ಕೆಳಿದ್ದೀಯೇ. ಹಾಗೇ ಸಮುದ್ರದ ನೀರನ್ನು ಒಂದೇ ಪಾತ್ರೆಗೆ ತುಂಬಿಸಲು ಸಾಧ್ಯವಿಲ್ಲವಲ್ಲ; ಹಾಗೇ ನಿನ್ನಂತ ಮನುಜರು ಅವರವರ ಆಸಕ್ತಿಗನುಗುಣವಾಗಿ ಅವರವರ ಇಚ್ಛಾ ಪಾತ್ರೆ ತಂದು ನನ್ನಿಂದ ಜ್ಞಾನವೆಂಬ ನೀರನ್ನು ತುಂಬಿಸಿಕೊಳ್ಳುತ್ತಾರೆ. ಅದಕ್ಕೆಮಾರ್ಗದರ್ಶಿಯಾಗಿ Parmanent ಆಗಿ ಇರಲಿ ಅಂತ ನನ್ನದೇ ರಚಿತ 'ಗೀತೆ' ಎಂಬ ಸಾಹಿತ್ಯವನ್ನು ಇಡುತ್ತೇನೆ-ಅದೂ ನಿನ್ನಪ್ರಾರ್ಥನೆಯ ಮೇರೆಗೆ. ಆಯಿತಲ್ಲ, ಸನ್ನದ್ದನಾಗು "

" ಆಯ್ತು ಪರಮಾತ್ಮ , ಯಾರು ಏನಾದರೂ ಮಾಡಲಿ ಬಿಡಲಿ ನೀನಂತೂ ನನಗೆ ಮಾರ್ಗದರ್ಶಿಯಾಗಿ ಇತರರಿಗೂ ಮಾರ್ಗದರ್ಶಿಸಿದೆ , ನಿನ್ನ direction ನಲ್ಲಿ ನನ್ನ production ಹಣ ವಾಪಸು ಬರುವಂತೆ ನೋಡಿಕೊಳ್ಳುವ ಬರವಸೆ ಕೊಟ್ಟುಬಿಡು, ಯುದ್ಧಕ್ಕೆ ಸನ್ನದ್ದನಾಗುತ್ತೇನೆ."

[[ಕೃಷ್ಣ : ಸ್ವಗತ]ಆಯ್ತಪ್ಪ, ನೀನು ಅಷ್ಟಾಗಿ ಕೇಳಿಕೊಳ್ಳುತ್ತಿರುವೆ , ಈಗ 'ತಥಾಸ್ತು' ಅನ್ನದಿದ್ದರೆ ನಾಳೆ [ನಾಟಕ ಮುಗಿದ ಮೇಲೆ] ಬೀದಿಯಲ್ಲಿ ಹೊಡೆದುಬಿಟ್ಟೀಯ ],
"ತಥಾಸ್ತು "

" ಧನ್ಯೋಸ್ಮಿ ಕೃಷ್ಣ , ಭಗವಂತ, ನಾನಾದೆ ಈಗ ಬುದ್ಧಿವಂತ, ಇಷ್ಟರವರೆಗೆ ನೀನು ಬರೇ ಬಿಲ್ಲು ಬಾಣ ಅಂತೆಲ್ಲ ಅಂತಿದ್ದೆಯಲ್ಲ, ಸಾಹಿತಿಗಳನೇಕರಿಗೆ current bill ಕಟ್ಟುವ ತಾಕತ್ತೂ ಇರಲಿಲ್ಲ! ಬರೆಯುವವರಿಗೆ 'ಬರಪರಿಹಾರ' ಕಾಮಗಾರಿ ನಿನ್ನಿಂದಾಗದಲ್ಲ, ಇಲ್ಲದಿದ್ದರೆ 'ಮರಿಗಳು' ಹುಲುಸಾಗಿ ಬೆಳೆಯುತ್ತಿದ್ದವು, ಅನೇಕ ಕಾರಂತರು-ಬೇಂದ್ರೆಗಳು ಹುಟ್ಟುತ್ತಿದ್ದರು ಅಲ್ಲವೇ ? "

" ಏನೋ ನಿನ್ನದು ಅತಿಯಾಯ್ತು ಕಣೋ ಅರ್ಜುನ, ಎಲ್ಲವನ್ನೂ ಕೊಡಲಿಕ್ಕೆ ನಾನೂ ಅವತಾರೀ 'ವೇಷ' ದವನು ಎಂಬುದು ನಿನಗೆತಿಳಿಯದೇ? ಮತ್ತೆ ಹಪಹಪಿಸಬೇಡ, ನಿನ್ನ ಕರ್ತವ್ಯ ನೀನು ಮಾಡು -ಫಲಾಫಲ ನನಗೆ ಬಿಡು,ಹೊರಡು ಮುಂದಕ್ಕೆ "

" ಬಾವಾ, ನಿನ್ನ ಮರುಳು ಮಾಡುವ ಮುರಳಿಯನ್ನು ಕೇಳುವ ಆಸೆಯಾಗಿದೆ ಸ್ವಲ್ಪ ನುಡಿಸಬಾರದೇ? "


[[ಕೃಷ್ಣ : ಸ್ವಗತ ] ತಾಲೀಮಿನಲ್ಲಿ ಇದು ಇರಲಿಲ್ಲವೋ? ಮೇಷ್ಟ್ರು ಹೇಳಿಕೊಡಲಿಲ್ಲವೋ ? ಫಜೀತಿಗೆ ಬಂತಲ್ಲ !!]
" ಇದು ಯುದ್ಧ ಭೂಮಿ, ಈಗ ಶಸ್ತ್ರಾಭ್ಯಾಸ, ಮುರಳೀ ಗಾಯನ ಸಲ್ಲ, ನೀನು ಮುಗಿಸಿ ಬರುತ್ತೀಯಲ್ಲ ಆಗ ಯಾವುದೋ ಒಂದು ಗಾಯನ ಮಾಡೋಣ ಬಿಡು "

....................................../................ಅಂತೂ ಭಾವನಾ ಲೋಕ ಅಧ್ಬುತ! ಇಲ್ಲಿ ಇಳಿದರೆ ಆಳ-ಅಗಲಗಳ ವ್ಯತ್ಯಾಸ ತಿಳಿಯದು, ಹೀಗೆ ನನ್ನ ಮನಸ್ಸು ಪ್ರಾರಂಭಿಸಿತು. ಮತ್ತೆ ಸಮಯವಾದಾಗ ನಿಮ್ಮೊಟ್ಟಿಗೆ ಇರುತ್ತೇನೆ,ಬರಲೇ ....