ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 28, 2013

ಓಲೆ-ನತ್ತನ್ನು ಬಿಟ್ಟು ಬಾಕಿ ಎಲ್ಲ ಆಭರಣವನ್ನೂ ದಾನಮಾಡಿದ ಗೌರಮ್ಮ ಮತ್ತೆ ಮತ್ತೆ ಎದುರಾಗುತ್ತಾಳೆ!

 ಚಿತ್ರಋಣ: ಅಂತರ್ಜಾಲ 
ಓಲೆ-ನತ್ತನ್ನು ಬಿಟ್ಟು ಬಾಕಿ ಎಲ್ಲ ಆಭರಣವನ್ನೂ ದಾನಮಾಡಿದ ಗೌರಮ್ಮ ಮತ್ತೆ ಮತ್ತೆ ಎದುರಾಗುತ್ತಾಳೆ! 

ವೈದ್ಯರೆದುರೇ ಮನು ಸತ್ತಾಗ ಆತನಿಗಾಗಿ ಬಹಳವಾಗಿ ಅತ್ತವಳು ರಾಜಮ್ಮ. ಆ ಕ್ಷಣದಲ್ಲಿ ರಾಜಮ್ಮನಿಗೂ ಮನುವಿಗೂ ಅಂಥಾದ್ದೇನು ಸಂಬಂಧವೆಂಬುದು ವೈದ್ಯರಿಗೂ ಅರಿಯದು! ರಾತ್ರಿ ಊಟದಹೊತ್ತು, ಸುಬ್ಬು ತಂದ ಕರೆಯನ್ನು ತಿರಸ್ಕರಿಸಿ, "ಬೆಳಿಗ್ಗೆ ಬರ್ತೀನಿಂತ ಹೇಳು" ಎಂದಿದ್ದ ವೈದ್ಯರು, ಸುಬ್ಬು ಮತ್ತೆ ತಡರಾತ್ರಿ ಬಂದು ಕರೆದಾಗ ರಾಜಮ್ಮನ ಮನೆಗೆ ಚಿಕಿತ್ಸೆಗೆ ನಡೆದುಹೋದವರು. ಆ ನಡುರಾತ್ರಿಯಲ್ಲಿ, ಸತ್ತವನ ದೇಹವನ್ನು ಬಿಟ್ಟು ಆ ಮನೆಯಲ್ಲಿ ಇದ್ದುದು ರಾಜಮ್ಮಳೊಬ್ಬಳೇ. ಅದನ್ನೇ ಗಮನಿಸಿದ ವೈದ್ಯರು ಏಕಾಂಗಿಯಾಗಿರುವ ರಾಜಮ್ಮ ಎಲ್ಲಿ ಹೆದರಿಕೊಂಡಾಳು ಎಂಬ ಮಾನವೀಯತೆಯಿಂದ ಬೆಳಗಾಗುವವರೆಗೂ ಅಲ್ಲೇ ಇದ್ದು ಮರಳುತ್ತಾರೆ. ವಾರದ ತರುವಾಯ ವೈದ್ಯರ ಹೆಸರಿಗೆ ರಾಜಮ್ಮನಿಂದ ಬಂದ ಅಂಚೆ ರಾಜಮ್ಮ-ಮನುವಿನ ಕಥೆಯನ್ನು ಬಿಚ್ಚಿಡುತ್ತದೆ! ವೇಶ್ಯೆಯ ಮಗಳಾಗಿ ತಾನು ಜನಿಸಿದ್ದು, ತಾಯಿಗಿದ್ದ ಹಣದ ವ್ಯಾಮೋಹ, "ಯಾರಿಗೂ ಹೃದಯದಲ್ಲಿಸ್ಥಾನಕೊಡಬೇಡ"ವೆಂದು ಬೋಧಿಸಿದ ತಾಯಿ, ಹರೆಯಕ್ಕೆ ಬಂದಾಗ ತನ್ನ ರೂಪಕ್ಕೆ ಮನಸೋತು ತಾಯಿಯಲ್ಲಿ ಪ್ರಸ್ತಾವಿಸಿದ ಸಿರಿವಂತರು, ಅವರಲ್ಲಿ ತನ್ನನ್ನು ಬಹುವಾಗಿ ಆಕರ್ಷಿಸಿದ ಸಿರಿವಂತರ ಮನೆಯ ಯುವಕ ಮನು, ಆತನ ಸಂಪತ್ತನ್ನೆಲ್ಲಾ ಆತ ತನಗಾಗಿ ಸುರಿದಿದ್ದು, ಆತನಿಗೆ ತನ್ನ ಹೃದಯವನ್ನು ತಾನು ಕೊಟ್ಟಿದ್ದು, ಇಬ್ಬರೂ ಪರಸ್ಪರ ಪ್ರೀತಿಸಿದ್ದು, ನಿತ್ಯವೂ ಆತ ಬಂದು ತನ್ನೊಡನೆ ಇರುತ್ತಿದ್ದುದು, ತಮ್ಮನ್ನು ಬೇರ್ಪಡಿಸಲು ತಾಯಿ ಹೇಳಿದ ಸುಳ್ಳು, ಆ ಸುಳ್ಳಿನಿಂದ ಅರೆಹುಚ್ಚನಾದ ಮನು, ಆತನನ್ನು ಹುಡುಕಿ ತೆರಳಿ ಅವನ ಸ್ಥಿತಿಗೆ ಮರುಗಿ, ಅವನೊಟ್ಟಿಗೆ ಊರು ತೊರೆದು ಯಾರಿಗೂ ಹೇಳದೇ ಈ ಊರಿಗೆ ಬಂದು ಕಳೆದಮೂರು ವರ್ಷಗಳಿಂದ ಬದುಕು ನಡೆಸಿದ್ದ ತನ್ನ ಪರಿ, ನೂರಕ್ಕೆ ನೂರು ಮೊದಲಿಂತಾಗದ ಮನುವಿನ ಬಗ್ಗೆ ತನಗಿದ್ದ ನೋವು-ತುಡಿತ ಮತ್ತು ಅವನ ಅಕಾಲಿಕ ಸಾವು, ’ಮನುಷ್ಯರೆನಿಸಿ’ ಪರಿಚಿತರಾಗಿದ್ದು ಸುಬ್ಬು ಎಂಬ ಬಾಲಕ ಮತ್ತು ವೈದ್ಯರು ಮಾತ್ರ --ಎಂಬೀ ಎಲ್ಲದರ ಚಿತ್ರಣವನ್ನು ನೋಡುವಾಗ ವೇಶ್ಯೆಯ ಮಗಳು ಅನಿವಾರ್ಯವಾಗಿ ವೇಶ್ಯೆಯೆಂದು ಗುರುತಿಸಲ್ಪಟ್ಟರೂ, ಅವಳಲ್ಲಿಯೂ ಇರಬಹುದಾದ ಮಾನವೀಯ ಆಂತರ್ಯ, ಅಲ್ಲದೇ, ಗೊಂದಲಗಳ ನಡುವೆಯೂ ಕರ್ತವ್ಯದ ಕರೆಗೆ ಓಗೊಟ್ಟ ವೈದ್ಯ ಆಕೆಯ ಕಾಗದ ತಲ್ಪಿದ ಮರುದಿನ ಸಪತ್ನೀಕನಾಗಿ ಆಕೆಯನ್ನು ಕಾಣಲು ಹೋಗುವುದು-- ಈ ಎಲ್ಲ ಅಂಶಗಳು ಕಥೆಯನ್ನು ಜೀವಂತವಾಗಿಸುತ್ತವೆ. ಚಿಕ್ಕ ಕಥೆಯೊಂದು ಕಾದಂಬರಿಗಿಂತ ಹೆಚ್ಚಿನ ಗಾಢ ಪರಿಣಾಮ ಬೀರುತ್ತದೆ. ಓದುತ್ತಿದ್ದಂತೆಯೇ ದೃಶ್ಯಗಳು ಕಣ್ಣಮುಂದೆ ಹಾದುಹೋದಾಗ ಸಿನಿಮಾ ನೋಡಿದಷ್ಟೇ ತೃಪ್ತಿ ಓದುಗರಿಗಾಗುತ್ತದೆ. ಈ ಕಥೆಯ ಹೆಸರು 'ಮನುವಿನ ರಾಣಿ'. 

ಪುರಾತನ ಜೀವನಕ್ರಮವನ್ನು ತೊರೆದು ಅಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದ, ೨೦ನೇ ಶತಮಾನದ ಮೂವತ್ತರ ದಶಕದಲ್ಲಿ, ಜನಜೀವನ ಹೇಗಿತ್ತೆಂಬುದನ್ನು ಕಥೆಗಳಲ್ಲಿ ಪರೋಕ್ಷವಾಗಿ ಹೇಳುತ್ತಾ, ಅಂದಿನ ಸಮಾಜದಲ್ಲಿ ಹೆಣ್ಣಿನ ಜೀವನ ಯಾವೆಲ್ಲಾ ರೀತಿಯಲ್ಲಿ ಇರಬಹುದಿತ್ತು ಎಬುದಕ್ಕೆ ಒತ್ತುಗೊಡುತ್ತಾ, ಕಾದಂಬರಿಯ ಜಾಡಿನಲ್ಲಿ ಸಾಗುವ ಕಥೆಗಳು, ಮಧ್ಯದಲ್ಲೆಲ್ಲೋ ತಿರುವು ಪಡೆದು ಅಡ್ಡಡ್ಡ ಸಾಗಿ ಮತ್ತೆ ಬಂದು ಮುಖ್ಯಹಾದಿಯನ್ನು ಸೇರಿಕೊಳ್ಳುವುದು ಗೌರಮ್ಮನ ಕಥೆಗಾರಿಕೆಯಲ್ಲಿನ ವೈಶಿಷ್ಟ್ಯ; ಸಂಭಾಷಣೆಗಳಲ್ಲಿನ ಬಿಸುಪು ಕಥೆಗಳನ್ನು ಓದುಗರು ಇನ್ನಷ್ಟು ಮೆಚ್ಚುವಂತೇ ಮಾಡುತ್ತವೆ. ಎಳೆಯ ವಿಧವೆಯೊಬ್ಬಳು ತನ್ನನ್ನು ಮದುವೆಯಾಗಲು ತುದಿಗಾಲಲ್ಲಿ ತಹತಹಿಸಿ ನಿಂತ ವಿಧುರನಿಗೇ ಮರ್ಮಾಘಾತವಾಗುವ ಪ್ರಶ್ನೆ ಎಸೆದು ದಿಗಿಲು ಹುಟ್ಟಿಸಿ ಬಾಯಿಮುಚ್ಚಿಸಿದ್ದು ’ಪುನರ್ವಿವಾಹ’ದಲ್ಲಿದ್ದರೆ, ಇನ್ನೋರ್ವ ಹೆಣ್ಣಿನ ಕುಟುಂಬದಲ್ಲಿ ಒಡಕುಮೂಡಬಾರದೆಂಬ ವಿವೇಕದಿಂದ-ತನ್ನ ಜೀವೋತ್ಕರ್ಷದ ಆಯ್ಕೆಯನ್ನೇ ಹಿಂದಕ್ಕೆ ಜರುಗಿಸಿಕೊಂಡ ವಾಣಿಯ ಪಾತ್ರ-’ವಾಣಿಯ ಸಮಸ್ಯೆ’ಯಲ್ಲಿನ ಅತ್ಯಪೂರ್ವ ಚಿತ್ರಣ. ಪ್ರತಿಯೊಂದೂ ಕಥೆಯಲ್ಲಿ ಸಹಜಗತಿ, ನಿರ್ಭೀತ ನಡೆ, ಹೊಸತನವನ್ನು ಸ್ವೀಕರಿಸುತ್ತಾ ಹಳೆಯ ಮೌಢ್ಯಗಳನ್ನು ಪಕ್ಕಕ್ಕೆ ಸರಿಸಿ ನಿಲ್ಲುವ ಹೆಣ್ಣಿನ ಪಾತ್ರಗಳು, ಜೀವ-ಭಾವಗಳ ತಾಕಲಾಟ, ತರ್ಕ, ಅಂದಿನ ಸಾಮಾಜಿಕ ವಿದ್ಯಮಾನ ಇವೆಲ್ಲವನ್ನೂ ಮೇಳೈಸಿ ಕಟ್ಟಿಕೊಟ್ಟ ಶೈಲಿ, ಗೌರಮ್ಮನನ್ನು ಉತ್ತಮ ಕಥೆಗಾರ್ತಿ ಎನ್ನಿಸಿವೆ. ಕಥೆಗಳಲ್ಲಿ ಇರುವ ಬಹುತೇಕ  ಮಹಿಳಾ ಪಾತ್ರಗಳು ಹದಿಹರೆಯದವೇ ಆಗಿದ್ದು, ಹದಿಹರೆಯದಲ್ಲಿನ, ವಯೋಸಹಜ ಸಡಗರ, ಜೀವನೋತ್ಸಾಹ, ಮೋಜು-ಮಸ್ತಿ, ತಮಾಷೆ, ಪ್ರೀತಿ-ಪ್ರೇಮ ಎಲ್ಲವೂ ಸಹಿತ ಓದುಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ.

ಬರೆದ ಎಲ್ಲಾ ಕಥೆಗಳೂ ಒಂದಕ್ಕಿಂತ ಒಂದು ವಸ್ತು-ವಿಷಯದಲ್ಲೂ ಭಿನ್ನವಾಗಿವೆ. ಪೌರಾಣಿಕ ಕಥೆಗಳಷ್ಟೆ ಪ್ರಾಮುಖ್ಯತೆ ಪಡೆದಿದ್ದ ಆ ಕಾಲಘಟ್ಟದಲ್ಲಿ, ಕನ್ನಡದಲ್ಲಿ ಬರಹಗಾರ್ತಿಯರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು ಎನ್ನಬಹುದು. ಶ್ಯಾಮಲಾ ಬೆಳಗಾಂವ್ಕರ್, ಸರಸ್ವತೀಬಾಯಿ ರಾಜವಾಡೆ ಮತ್ತು ಕೊಡಗಿನ ಗೌರಮ್ಮ ಎಂಬೀ ಮೂವರು ಮಾತ್ರ ಬರಹಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ’ರಾಷ್ಟ್ರಬಂಧು’, ’ಜಯಕರ್ನಾಟಕ’, ’ಜಯಂತಿ’, ’ಪ್ರಜಾಮತ’, ’ಕೇಸರಿ’, ’ಕಥಾವಳಿ’ ಮತ್ತು ’ಜೀವನ’ ಮೊದಲಾದ ಪತ್ರಿಕೆಗಳಲ್ಲಿ ಇವರೆಲ್ಲರ ಬರಹಗಳು ಅದರಲ್ಲೂ ಹೆಚ್ಚಾಗಿ ಕಥೆಗಳು ಪ್ರಕಟಗೊಳ್ಳುತ್ತಿದ್ದವು. ವಿಷಯಗಳು ಹೇರಳವಾಗಿದ್ದರೂ ಅಭಿವ್ಯಕ್ತಗೊಳಿಸುವಲ್ಲಿ ಅನೇಕ ಮಹಿಳೆಯರು ಸಫಲರಾಗಿರಲಿಲ್ಲ; ಕೆಲವರಿಗೆ ಅಷ್ಟೊಂದು ಧೈರ್ಯವೂ ಇರಲಿಲ್ಲ; ಇನ್ನು ಕೆಲವರಿಗೆ ಆ ಆರ್ಥಿಕ, ಕೌಟುಂಬಿಕ ಅನುಕೂಲವಿರಲಿಲ್ಲ. ಆ ವಿಷಯದಲ್ಲಿ ಗೌರಮ್ಮ ನಿಜಕ್ಕೂ ಭಾಗ್ಯವಂತೆಯೇ ಸರಿ. ಮಡಿಕೇರಿಯಲ್ಲಿ ಆ ಕಾಲದಲ್ಲಿ ಹೆಸರುವಾಸಿ ವಕೀಲರಾಗಿದ್ದ ಎನ್.ಎಸ್. ರಾಮಯ್ಯ ಮತ್ತು ಅವರ ಪತ್ನಿ ನಂಜಕ್ಕನ ಮಗಳಾಗಿ ೧೯೧೨ ರ ಮಾರ್ಚ್ ೫ ರಂದು ಜನಿಸಿದವರೇ ಕೊಡಗಿನ ಗೌರಮ್ಮ. ಬಾಲ್ಯದಲ್ಲಿಯೇ ತಾಯಿ ಗತಿಸಿಹೋದರೂ ತಂದೆಯೇ ಆಕೆಗೆ ತಂದೆ-ತಾಯಿ ಎರಡೂ ಆಗಿ ಬೆಳೆಸಿದರು. ಅಮ್ಮನ ಪ್ರೀತಿಯನ್ನು ಜಾಸ್ತಿ ಪಡೆಯಲಾಗದಿದ್ದರೂ, ಆಗಿನ ಮನೆತನದ ಬದುಕಿನ ಬಿಗಿವಾತಾವರಣವೂ ಗೌರಮ್ಮನನ್ನು ತೀರಾ ಬಿಗಿಯಾಗಿ ಅಪ್ಪಲಿಲ್ಲ ಎಂಬುದು ವೇದ್ಯ. ಹೀಗಾಗಿ ಚಿಕ್ಕಂದಿನಲ್ಲೇ ಅವರಿವರೊಟ್ಟಿಗೆ ವ್ಯವಹರಿಸುತ್ತಾ ಬೆಳೆಯಬೇಕಾದ ಅನಿವಾರ್ಯತೆ, ಅವರ ವ್ಯಕ್ತಿತ್ವ ವಿಕಸನಕ್ಕೊಂದು ಅವಕಾಶ ಕಲ್ಪಿಸಿತು. ೧೩ನೇ ವಯಸ್ಸಿಗೇ ಅಂದರೆ ೧೯೨೫ ರಲ್ಲೇ, ತಮ್ಮ ಸಂಬಂಧಿಕರೇ ಆದ ಶುಂಠಿಕೊಪ್ಪದ ಬಿ.ಟಿ.ಗೋಪಾಲಕೃಷ್ಣಯ್ಯನವರನ್ನು ವಿವಾಹವಾದ ಗೌರಮ್ಮ, ನಂತರ ತಮ್ಮ ಬರಹಗಳಲ್ಲಿ, ವ್ಯವಹಾರಗಳಲ್ಲಿ ಶ್ರೀಮತಿ ಬಿ.ಟಿ.ಜಿ.ಕೃಷ್ಣ ಎಂದೇ ಗುರುತಿಸಿಕೊಂಡರು. ಪತ್ನಿಯ ವ್ಯಕ್ತಿತ್ವವನ್ನು ಗೌರವದಿಂದ ಕಾಣುವ ಗಂಡಂದಿರು ಆ ಕಾಲಘಟ್ಟದಲ್ಲಿ ಸ್ವಲ್ಪ ಕಮ್ಮಿಯೇ ಎನ್ನಬೇಕು. ಏನಿದ್ದರೂ ಪತಿಯ ನೆರಳಾಗಿ ಹಿಂಬಾಲಿಸಿಕೊಂಡು ಗಂಡ ಹೇಳಿದ್ದನ್ನು ಕಣ್ಮುಚ್ಚಿ ಪಾಲಿಸಿಕೊಂಡು ಹೋಗುವ ಗರತಿಯರ ಕಾಲ, ಗಂಡಂದಿರೆನಿಸಿಕೊಂಡವರು ಅಹಮಿಕೆ ಮೆರೆದ ಕಾಲ ಅದಾಗಿತ್ತು! ಆದರೂ ಬಿ.ಟಿ. ಗೋಪಾಲಕೃಷ್ಣಯ್ಯ ಮಾತ್ರ ಗೌರಮ್ಮನನ್ನು ಆ ರೀತಿ ನಡೆಸಿಕೊಳ್ಳಲಿಲ್ಲ; ಗೌರಮ್ಮ ಸ್ವತಂತ್ರವಾಗಿ ಬದುಕುತ್ತಾ, ಮನೆವಾರ್ತೆಯೊಟ್ಟಿಗೆ ಸಾಮಾಜಿಕ, ರಾಜಕೀಯ, ಕೌಟುಂಬಿಕ ಮತ್ತು ಸಾಹಿತ್ಯಕ  ಹೀಗೇ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವಲ್ಲಿ ಇದು ವರದಾನವಾಯ್ತು.        

ಯಾವಕಾಲದಲ್ಲಿ ಹೆಂಗಸರು ಒಳಮನೆಯಿಂದ ಹೊರಗೆ ಗಂಡಸರೆದುರು ನಿಂತೋ ಕುಳಿತೋ ಮಾತನಾಡಲು ಹಿಂಜರಿಯುತ್ತಿದ್ದರೋ ಅದೇ ಕಾಲದಲ್ಲಿ ಗೌರಮ್ಮ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡರು. ಪ್ರತಿನಿತ್ಯ ಟೆನಿಸ್ ಆಡುವುದು ಮತ್ತು ಈಜುವುದು ಅವರ ಹವ್ಯಾಸವಾಗಿತ್ತು. ಕನ್ನಡದ ಹಿರಿಯ ಕವಿಗಳಾದ ಬೇಂದ್ರೆ, ಪು.ತಿ.ನ. ಬಿ.ಎಂ.ಶ್ರೀ, ಮಾಸ್ತಿ, ರಾಜರತ್ನಂ ಇಂಥವರ ಬರಹಗಳನ್ನೆಲ್ಲಾ ಗೌರಮ್ಮ ಓದುತ್ತಿದ್ದರು. ಓದುತ್ತಾ ಓದುತ್ತಾ ಅವರೊಳಗೇ ಒಬ್ಬ ಕಥೆಗಾರ್ತಿ ಜನಿಸಿದ್ದಳು. ಸಾಮಾಜಿಕ ಶೋಷಣೆ ಮತ್ತು ಮೌಢ್ಯಗಳ ವಿರುದ್ಧ ಆ ಕಥೆಗಾರ್ತಿ ಸದಾ ಬರೆಯತೊಡಗಿದ್ದಳು! ೧೯೩೧ ರಲ್ಲಿ ಪುತ್ರೋತ್ಸವವೂ ಆಗಿ, ಮಗನಿಗೆ ’ವಸಂತ’ ಎಂದು ಹೆಸರಿಟ್ಟಿದ್ದರು. ಸಮೃದ್ಧ ಕುಟುಂಬದ ನೆಮ್ಮದಿಯ ಜೀವನ ಅವರದಾಗಿದ್ದರೂ, ತಾಯಿಯಿಲ್ಲದ ಕೊರಗು ಮಾತ್ರ ಅವರನ್ನು ಸದಾ ಬಾಧಿಸುತ್ತಲೇ ಇತ್ತು. ಮಗನಿಗೆ ಮಾತ್ರ ಆ ನೋವು ತಟ್ಟದಿರಲಿ ಎಂದು ಅವರು ಬಯಸಿದ್ದರು. ಸಮಾಜಮುಖಿ-ಬರಹಗಾರ್ತಿಯಾದ ಅವರಿಗೆ ಸ್ನೇಹಿತರ ವಿಶಾಲ ಬಳವೂ ಇತ್ತು. ಗಾಯಕಿಯಾಗಿದ್ದ ಶಕುಂತಲಾಚಾರ್, ಲೇಖಕಿಯರಾದ ಆರ್. ಕಲ್ಯಾಣಮ್ಮ, ಪದ್ಮಾವತಿ ರಸ್ತಗಿ ಮೊದಲಾದವರು ಅವರ ಸ್ನೇಹಿತರಾಗಿದ್ದು, ಮಾಸ್ತಿ, ಬೇಂದ್ರೆ, ರಾಜರತ್ನಂ ಇವರೆಲ್ಲಾ ’ಮನೆಜನ’ ಎಂಬಷ್ಟು ಬಳಕೆಯಲ್ಲಿದ್ದವರು. ಗೆಳೆಯರಲ್ಲಿ ಬಬ್ಬರಾದ ದ.ಬಾ.ಕುಲಕರ್ಣಿಯವರ ತಾಯಿಯೇ ತನ್ನ ತಾಯಿ ಎಂದು ತಿಳಿದುಕೊಂಡ ಗೌರಮ್ಮ, ಒಂದು ವರ್ಷ, ತುಲಾಸಂಕ್ರಮಣದ ಸಂದರ್ಭದಲ್ಲಿ, ಕಾವೇರಿಯ ತೀರ್ಥೋದ್ಭವದ ಹಬ್ಬಕ್ಕೆ ಬರುವಂತೇ ಅವರಿಗೆ ಕಾಗದ ಬರೆದಿದ್ದರು. ’ತಾಯಿಗೆ ಮಗಳಮನೆಗೆ ಬರಬೇಕೆಂಬ ಹಠವಿದ್ದರೂ ಅನಾರೋಗ್ಯದಿಂದ ಬರಲಾಗುತ್ತಿಲ್ಲ’ ಎಂಬ ಉತ್ತರ ದ.ಬಾ.ಕುಲಕರ್ಣಿಯರಿಂದ ಬಂದು ತಲ್ಪಿದಾಗ, "ಕಣ್ಣೆರಡೂ ಮಂಜಾಗಿ ಹೃದಯ ತುಂಬಿಬಂತು" ಎಂದು ಮತ್ತೆ ಮರಳಿ ಕಾಗದ ಬರೆದಿದ್ದರು. ಮಡಿಕೇರಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಗೌರಮ್ಮ ಹಿಂದೀ ವಿಶಾರದೆಯೂ ಆಗಿದ್ದರು. ಆಂಗ್ಲ ಭಾಷೆಯ ಬಳಕೆಯೂ ಇದ್ದು ಆಂಗ್ಲ ಸಾಹಿತ್ಯವನ್ನೂ ಸಾಕಷ್ಟು ಓದಿಕೊಂಡಿದ್ದರು. ಕುಟುಂಬದ ಹಿರಿಯರು ಅಂದಿನ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಸಕ್ರಿಯ ಸದಸ್ಯರಾಗಿ ಪಾಲ್ಗೊಂಡಿದ್ದರ ಪರಿಣಾಮ, ಗೌರಮ್ಮ ರಾಜಕೀಯದಲ್ಲೂ ಆಸಕ್ತರಾಗಿದ್ದರು. ಇದು ಗೌರಮ್ಮನ ಕೌಟುಂಬಕ, ವ್ಯಾವಹಾರಿಕ, ಸಮಾಜಿಕ ಹಿನ್ನೆಲೆ.

ಕೊಡಗಿನ ಬರಹಗಾರರಿಗೆ ಅವರದ್ದೇ ಆದ ಲೋಕದಲ್ಲಿ ವಿಹರಿಸುತ್ತಾ ಬರೆದುಕೊಳ್ಳುವ ನೈಸರ್ಗಿಕ ವಾತಾವರಣ ಆಗ ಹೆಚ್ಚಿನದಾಗಿ ಇತ್ತು ಈಗಲೂ ಹಾಗೆ ಕೆಲಮಟ್ಟಿಗೆ ಇದೆ. ಅಲ್ಲಿನ ಬೆಳಗು, ಅಲ್ಲಿನ ಮಳೆಗಾಲದ ಮುಸಲಧಾರೆ-ಚಳಿಗಾಲದ ಬಿಟ್ಟೂಬಿಡದ ಚಳಿ-ಇಬ್ಬನಿಸುರಿಸುವ ಮಂಜುಮುಸುಕಿದ ವಾತಾವರಣ, ಅಲ್ಲಿನ ಕಾಫೀ ತೋಟ-ಕೆಲಸದ ಸುಗ್ಗಿ-ಕೂಲಿಯಾಳುಗಳಲ್ಲಿನ ಪ್ರೇಮ ಕಥೆಗಳು, ವಿವಿಧ ತೆರನಾದ ಹೂವುಗಳು, ಜೇನು-ದುಂಬಿ-ಕೀಟ ವೈಭವಗಳು, ವನ್ಯಮೃಗಗಳ ಅಟ್ಟಹಾಸಗಳು, ಸೂರ್ಯೋದಯ-ಸೂರ್ಯಾಸ್ತಗಳು, ನಿರ್ಜರ ಜಲಪಾತಗಳು, ಹುಟ್ಟಿ ಹರಿವ ಹಲವು ತೊರೆಗಳು, ನಿತ್ಯಹರಿದ್ವರ್ಣ ಕಾಡುಗಳ ಜೊತೆಜೊತೆಗೇ ಹಸಿರುಟ್ಟ ಗದ್ದೆ-ತೋಟ-ಸಾಗುವಳಿಮಾಡಿದ ಭೂಭಾಗಗಳು...ಹೀಗೇ ಅಲ್ಲಿನ ದೃಶ್ಯ ವೈವಿಧ್ಯ, ಅಲ್ಲಿನ ವರ್ಣ ವೈವಿಧ್ಯ ನಯನಾನಂದಕರ ಮತ್ತು ಮನೋಲ್ಲಾಸಕರ. ಅಂತಹ ಯಾವೊಂದೂ ವಿಷಯವಸ್ತುವನ್ನು ಆದಿಯಲ್ಲಿ ನೆಚ್ಚಿಕೊಳ್ಳದೇ ತೀರಾ ಬೇರೆಯದೇ ಆದ ಆಯಾಮದಲ್ಲಿ ಬರವಣಿಗೆಗೆ ತೊಡಗಿದ್ದು ನಿಜಕ್ಕೂ ಅಚ್ಚರಿ ಮೂಡಿಸುವಂತಹ ವಿಷಯ. ಇಷ್ಟೇ ಅಲ್ಲ, ನಮ್ಮ ಗೌರಮ್ಮ ಸ್ವಲ್ಪ ಹಠಮಾರಿ ಕೂಡಾ; ಅಂದುಕೊಂಡಿದ್ದು ಆಗಲೇಬೇಕೆಂಬ ಜಾಯಮಾನ ಅವರದ್ದು; ತನ್ನ ನಿರ್ಧಾರದಲ್ಲಿ ತಪ್ಪಿರಲು ಸಾಧ್ಯವಿಲ್ಲಾ ಎಂಬ ದಾರ್ಷ್ಟ್ಯವೂ ಅವರಲ್ಲಿತ್ತು! ಕೊಡಗಿಗೆ ಗಾಂಧೀಜಿ ಬಂದಾಗ ವ್ಯವಸ್ಥಾಪಕರು ಅವರನ್ನು ಗುಂಡುಕುಟ್ಟಿಯಲ್ಲಿ, ಗೌರಮ್ಮನ ಮನೆಯ ಪಕ್ಕದ ಮನೆಯಲ್ಲೇ ಉಳಿದುಕೊಳ್ಳುವಂತೇ ಏರ್ಪಾಟುಮಾಡಿದ್ದು ಗೌರಮ್ಮನಿಗೂ ಗೊತ್ತಾಗಿಬಿಟ್ಟಿತ್ತು. ಗಾಂಧೀಜಿಯ ಪಾದಧೂಳಿ ತಮ್ಮ ಮನೆಗೂ ಬೀಳಲೆಂಬುದು ಅವರ ಅಪೇಕ್ಷೆಯಾಗಿತ್ತಾದರೂ ವ್ಯವಸ್ಥಾಪಕರು ಅದನ್ನು ಪುರಸ್ಕರಿಸಲಿಲ್ಲ. ತನ್ನ ಮನೆಗೆ ಗಾಂಧೀಜಿಯವರು ಬರುವುದಿಲ್ಲವೆಂಬುದನ್ನು ಕೇಳಿದಾಗಿನಿಂದ ಉಪವಾಸಕ್ಕೆ ಕುಳಿತ ಗೌರಮ್ಮನ ಈ ಸುದ್ದಿ ಗಾಂಧೀಜಿ ಉಳಿದುಕೊಂಡಿದ್ದ ಮನೆಯಲ್ಲೂ ಸದ್ದುಮಾಡಿದಾಗ, ಗಾಂಧೀಜಿ ಗೌರಮ್ಮನ ಮನೆಗೆ ಹೊರಡಲನುವಾದರು. ಅದನ್ನು ಕೇಳಿ ಸ್ವತಃ ಗೌರಮ್ಮ ತಾವೇ ಅಲ್ಲಿಗೆ ಹೋಗಿ ಗಾಂಧೀಜಿಯನ್ನು ಕರೆತಂದರು; ಅಭೂತಪೂರ್ವ ಆತಿಥ್ಯದ ಜೊತೆಗೆ ಕೊರಳಲ್ಲಿದ್ದ ಕರಿಮಣಿ[ತಾಳಿಯೊಂದನ್ನುಳಿದು ಇಡೀ ಸರವೇನೂ ಬಂಗಾರದ್ದಾಗಿರಲಿಲ್ಲ], ಓಲೆ ಮತ್ತು ನತ್ತು ಇವುಗಳನ್ನು ಬಿಟ್ಟು ಮಿಕ್ಕೆಲ್ಲಾ ತನ್ನ ಬಂಗಾರದ ಆಭರಣಗಳನ್ನು ಗಾಂಧೀಜಿಯ ಹರಿಜನ ಸೇವಾಕಾರ್ಯಕ್ಕೆ ದಾನವಾಗಿ ನೀಡುತ್ತಾ, "ಬದುಕಿನಲ್ಲಿ ಇನ್ನುಮುಂದೆ ಓಲೆ-ನತ್ತು ಎರಡನ್ನು ಬಿಟ್ಟು ಇನ್ನೇನನ್ನೂ ಇನ್ನೆಂದೂ ಧರಿಸುವುದಿಲ್ಲ"ವೆಂದು ಪಣತೊಟ್ಟರು! ಸಾತ್ವಿಕರಾದ ಗಾಂಧೀಜಿಯ ಕಣ್ಣಲ್ಲಿ ಈ ಸಂದರ್ಭದಲ್ಲಿ ಆನಂದಬಾಷ್ಪ ಉದುರದೇ ಇರಲಿಲ್ಲ. ಆದರೆ ಇದ್ಯಾವುದೂ ಗೌರಮ್ಮನವರ ಕಥೆಗಳಲ್ಲಿ ಪ್ರತಿಫಲಿಸಲಿಲ್ಲವೆಂಬುದನ್ನು ಗಮನಿಸಬೇಕು![ಇವತ್ತು ೧೦ ರೂಪಾಯಿ ಕೊಟ್ಟರೂ ದಾನಿಗಳ ಯಾದಿಯಲ್ಲಿ ಹೆಸರು ಬರೆಸಿಕೊಳ್ಳುವ ಜನ ಎಷ್ಟಿಲ್ಲ!] ತಾನು ಬದುಕಿದ ರೀತಿಯಿಂದಲೇ ತಾನು ಮಾದರಿ ಹೇಗೆ ಎಂಬುದನ್ನು ಗೌರಮ್ಮ ಈ ವಿಧದಲ್ಲಿ ತೋರಿಸಿಕೊಟ್ಟಿದ್ದಾರೆ.

ಬಡತನದಲ್ಲಿ ಹೊಟ್ಟೆಪಾಡಿಗಾಗಿ ಹೆಣಗಾಡುವವರಿಗೆ ಅಗ್ಗದ ಆಮಿಷ ದೊರೆತಾಗ, ಸಂದೇಹಗಳ ತಾಕಲಾಟದಲ್ಲಿ ಜಾತಿಬಿಟ್ಟು, ಮತಾಂತರಗೊಳ್ಳುವ ಮತ್ತು ಪ್ರೀತಿ-ಪ್ರೇಮ-ಪ್ರಣಯದ ಗುಂಗಿನಲ್ಲಿ ಎಲ್ಲಾಬಿಟ್ಟು ಮತಾಂತರಗೊಳ್ಳುವ ಒಂದೆರಡು ಕಥೆಗಳನ್ನು ಬರೆಯಬೇಕೆಂಬ ಇಚ್ಛೆ ಅವರದಾಗಿತ್ತು ಎನಿಸುತ್ತದೆ. ನಂತರ ಕೆಲವು ಕಥೆಗಳನ್ನು, ಕೊಡಗಿನ ನಿಸರ್ಗದ ಸುತ್ತ ಪೇರಿಸಿದ ರಮಣೀಯ ದೃಶ್ಯ ವೈಭವಗಳನ್ನೂ ಸಮೀಕರಿಸಿ ಬರೆಯುತ್ತಿದ್ದರೋ ಏನೋ. ಆದರೆ ಇಂತಹ ಅನೇಕ ಕಥೆಗಳನ್ನು ಬರೆಯುವುದಕ್ಕೆ ಅವರಿಗೆ ಅವಕಾಶವುಳಿಯಲಿಲ್ಲ. ಅರ್ಧ ಬರೆದ ಕಥೆಯ ಮಸಿ ಹಸಿಹಸಿಯಾಗಿ ಇನ್ನೂ ಹಾಗೇ ಇದ್ದಂತೆಯೇ ಈಜಲು ಹೋದ ಗೌರಮ್ಮ ಮರಳಿಬಾರದ ಲೋಕಕ್ಕೆ ತೆರಳಿದಾಗ ಅವರಿಗೆ ೨೯ ವಯಸ್ಸು. ತಮ್ಮ ಪ್ರಥಮ ಕಥಾಸಂಕಲನಕ್ಕೆ ’ಕಂಬನಿ’ ಎಂದು ಪ್ರಕಟಣಾ ಪೂರ್ವವೇ ಹೆಸರಿಸಿದ್ದ ಅವರು, ಪ್ರಕಟಿಸುವ ಜವಾಬ್ದಾರಿಯನ್ನು ದ.ಬಾ.ಕುಲಕರ್ಣಿಯವರಿಗೆ ವಹಿಸಿದ್ದರು. ’ಕಂಬನಿ’ ಹೊರಬರುವ ಮುನ್ನವೇ ಗೌರಮ್ಮ ಎಲ್ಲರ ಕಣ್ಣಲ್ಲೂ ಕಂಬನಿ ಹರಿಸಿಬಿಟ್ಟರು! ಅವರ ನಿಧನಾನಂತರ ’ಕಂಬನಿ’ ಮತ್ತು ’ಚಿಗುರು’ ಎರಡೂ ಕಥಾ ಸಂಕಲನಗಳು ಪ್ರಕಟಗೊಂಡವು. ’ಹೆಣ್ಣುಮಕ್ಕಳ ಕೃತಿ ಎಂಬ ಪೊಳ್ಳು ಸಹಾನುಭೂತಿಯ ಹೊರೆಯನ್ನು ಬಿಟ್ಟರೆ ನಮ್ಮ ಕೃತಿಗಳನ್ನು ವಿಮರ್ಶಿಸಿ ಬರೆಯುವ ಒಬ್ಬ ಪುಣ್ಯಾತ್ಮರೂ ಇಲ್ಲ’ ಎಂದು ’ರಂಗವಲ್ಲಿ’ ಕಥಾಸಂಗ್ರಹದಲ್ಲಿ [೧೯೩೭ರಲ್ಲಿ] ಅವರು ಹೇಳಿದ್ದರು. ಹಬ್ಬಕ್ಕೋ ಹುಣ್ಣಿಮೆಗೋ ಬರುತ್ತಲೇ ಇರುತ್ತಿದ್ದ ಬೇಂದ್ರೆಯವರಿಗೆ ಮುನ್ನುಡಿ ಬರೆದುಕೊಡುವಂತೇ ಕೇಳಿದ್ದರ ಪರಿಣಾಮವಾಗಿ, ಬೇಂದ್ರೆಯವರು ’ಕಟುಮಧುರ ಕತೆಗಾರ್ತಿ’ ಎಂದು ಬರೆದು ಹರಸಿದ ಮುನ್ನುಡಿ ಗೌರಮ್ಮ ಬದುಕಿರುವಾಗ ಅವರಿಗೆ ಸಿಗಲೇ ಇಲ್ಲ; ಸಿಕ್ಕಿದ್ದರೆ ಅವರು ಅದೆಷ್ಟು ಸಂತಸಪಡುತ್ತಿದ್ದರೋ ಅದನ್ನು ಪದಗಳಲ್ಲಿ ಹೇಳುವುದು ಸಾಧ್ಯವಾಗುವುದಿಲ್ಲ; ಬಾವುಕ ಜೀವಿಗಳಿಗೆಲ್ಲರಿಗೂ ಇಂತಹ ಮೆಚ್ಚುಗೆಯ ನುಡಿಗಳೇ ಬಹುದೊಡ್ಡ ಪುರಸ್ಕಾರಗಳಲ್ಲವೇ? ಗೌರಮ್ಮ ಬದುಕಿದ್ದರೆ ಈಗವರಿಗೆ ೧೦೩ ವರ್ಷಗಳ ವಯೋಮಾನ ಇರುತ್ತಿತ್ತು; ಇದ್ದ ೨೯ ವರ್ಷಗಳಲ್ಲೇ ೨೭ಕ್ಕೂ ಅಧಿಕ ಮನೋಜ್ಞ ಕಥೆಗಳನ್ನು ಬರೆದ ಗೌರಮ್ಮ ಪ್ರಾಯಶಃ ನೂರಕ್ಕೆ ನೂರು ಬಾರಿಸಿಬಿಡುತ್ತಿದ್ದರು-ಸೆಂಚುರಿ ಬಾರಿಸಿ ಜಗದ್ವಿಖ್ಯಾತಿ ಗಳಿಸಿ, ಲಾಬಿ-ಮಸಲತ್ತು ರಹಿತವಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಿದ್ದರು ಎಂಬುದು ಸಂಶಯಾತೀತ. ಶ್ರೇಷ್ಠ ಸಾಮಾಜಿಕ ಕಥೆಗಳಲ್ಲಿ ಹಲವು ಹೆಣ್ಣುಮಕ್ಕಳ ಪಾತ್ರಗಳನ್ನು ಚಿತ್ರಿಸಿದ ಕೊಡಗಿನ ಗೌರಮ್ಮ, ಕಥೆಯೊಂದಕ್ಕೆ ತಾನೇ ವಸ್ತುವಾಗಿ ಕಥೆಯಾದರು; ಕನ್ನಡ ಸಾರಸ್ವತ ಲೋಕದ ಮಿನುಗುವ ನಕ್ಷತ್ರಗಳಲ್ಲಿ ಒಂದು ನಕ್ಷತ್ರವಾದರು.