ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, April 4, 2012

ಮಂಗನಿಂದ ಮಾನವನಾದ ಎನ್ನುವುದು ಬರೇ ಅಪವಾದ !


ಮಂಗನಿಂದ ಮಾನವನಾದ ಎನ್ನುವುದು ಬರೇ ಅಪವಾದ !

ಇಷ್ಟಕ್ಕೂ ನಾವು ಓದಿದ ಜೀವಶಾಸ್ತ್ರದಲ್ಲಿ ಅಥವಾ ಸಮಾಜಶಾಸ್ತ್ರಲ್ಲಿ ಮಾನವನ ಹುಟ್ಟಿನ ಬಗೆಗೆ ನಾವು ತಿಳಿದುಕೊಂಡ ಸತ್ಯ ಎಂಬುದು ಸುಳ್ಳು. ಅದೊಂದು ಹೋಲಿಕೆಯ ಕಥೆ ಅಷ್ಟೇ! ಯಾಕೆ ಎಂದು ಯಾರೂ ಚಿಂತಿಸಿದವರಿಲ್ಲ. ಹರಪ್ಪ ಮತ್ತು ಮೊಹೆಂಜೊದಾರೋ ಸ್ಥಳ ಸಂಶೋಧನೆಗಳಲ್ಲಿ ಸಿಕ್ಕಿದವು ಎನ್ನಲಾದ ಕಲ್ಲಿನ ಆಯುಧಗಳು, ಉಪಯೋಗಿಸಿರಬಹುದಾದ ಮಣ್ಣಿನ ಮಡಕೆ-ಕುಡಿಕೆಗಳು, ಗುಹೆಗಳಲ್ಲಿನ ಗೋಡೆ ಚಿತ್ರಗಳು ಕೇವಲ ಇವುಗಳನ್ನೇ ಅವಲಂಬಿಸಿ ಕಟ್ಟಿದ ಅಂದಾಜು ಕಥೆಯೇ ಮಂಗನಿಂದ ಮಾನವ ಎಂಬುದಾಗಿದೆ!ಇದಕ್ಕೆ ಇದಮಿತ್ಥಂ ಎಂದು ಸಾಕ್ಷೀಕರಿಸುವ ಯಾವುದೇ ಪುರಾವೆಗಳು ಇರುವುದಿಲ್ಲ. ಆದಿ ಮಾನವ ಕಾಡೊಳಗೇ ವಾಸವಾಗಿದ್ದನೆಂದೂ ಮೊದಲು ಹಸಿ ಮಾಂಸವನ್ನಷ್ಟೇ ತಿಂದು ಬದುಕಿದ್ದನೆಂದೂ ನಂತರ ಬೆಂಕಿಯನ್ನು ಕಂಡುಹಿಡಿದನೆಂದೂ ಹಲವಾರು ಮೈನವಿರೇಳಿಸುವ ರೋಚಕ ಕಥೆಗಳನ್ನು ಕೇಳುತ್ತೇವೆ. ಕಲ್ಲಿನ ಚೂಪಾದ ಆಯುಧಗಳಿಂದ ಪ್ರಾಣಿಗಳನ್ನು ವಧಿಸುತ್ತಿದ್ದ ಮಾನವ ಕ್ರಮೇಣ ಲೋಹವನ್ನೂ ಕಂಡುಕೊಂಡು ಚಿಕ್ಕಪುಟ್ಟ ಲೋಹದ ಆಯುಧಗಳನ್ನು ತಯಾರಿಸಿಕೊಂಡ ಎಂದು ನಮಗೆ ಹೇಳಿದ ಕಥೆಗಳು ಸಾರುತ್ತವೆ. ನನಗನಿಸುತ್ತಿದೆ ಅವೆಲ್ಲಾ ಬರೇ ಕಟ್ಟುಕಥೆಗಳಾಗಿವೆ; ಅವುಗಳಲ್ಲಿ ಯಾವುದೇ ಹುರುಳಿಲ್ಲ.

ಭಾರತೀಯ ಆಯುರ್ವೇದಕ್ಕೆ ೩೦೦೦ ವರ್ಷಗಳ ದಾಖಲೆಯಿದೆ. ಎಷ್ಟೋಕಡೆ ೫೦೦೦ ವರ್ಷಗಳಷ್ಟು ಹಳೆಯ ದಾಖಲೆಗಳೂ ಸಿಗುತ್ತಿವೆ. ಒಂದೊಮ್ಮೆ ಹಾಗೆ ಮಂಗನಿಂದ ಮಾನವ ಎಂದಾದರೆ ನಮ್ಮ ಪೂರ್ವಜರು ಅಷ್ಟೊಂದು ಹಿಂದೆಯೇ ಬರೆದಿದ್ದ ಗ್ರಂಥಗಳು, ಪುರಾಣೇತಿಹಾಸಗಳು, ಮಹಾಕಾವ್ಯಗಳು, ವೇದ-ವೇದಾಂತಗಳೆಲ್ಲಾ ಸುಳ್ಳೇ? ಅವರು ಆ ಕಾಲದಲ್ಲೇ ಕಂಡುಕೊಂಡಿದ್ದ ಆಕಾಶಕಾಯಗಳು ಮತ್ತು ಅವುಗಳ ಚಲನೆಯ ಕರಾರುವಾಕ್ಕಾದ ಗಣಿತಗಳೆಲ್ಲಾ ಹೇಗೆ ಜನಿಸಿದವು ? ಕಾಂಬೋಡಿಯಾದಂತಹ ದೇವಾಲಯದಂತಹ ನಿರ್ಮಾಣಗಳು ಹಲವುಸಾವಿರ ವರ್ಷಗಳಿಂದ ತಾವಿರುವ ಗುರುತನ್ನು ತೋರಿಸುತ್ತವೆ. ಪಂಚಭೂತಗಳೆನಿಸಿದ ಭೂಮಿ, ಆಕಾಶ, ವಾಯು, ಬೆಂಕಿ[ಅಗ್ನಿ]ಮತ್ತು ನೀರು ಇವುಗಳ ಆವಿಷ್ಕಾರದ ಬಗ್ಗೆ ಅವು ಅನುಕ್ರಮವಾಗಿ ಒಂದರ ನಂತರ ಒಂದು ಹೇಗೆ ಸೃಷ್ಟಿಗೊಂಡವು ಎಂಬ ಬಗ್ಗೆ ವೇದದಲ್ಲಿ ತಿಳಿಸಲಾಗಿದೆ. ಪ್ರಪಂಚ ಪರಿಕಲ್ಪನೆಯಲ್ಲಿರುವ ಮೂರುಪಾಲು ನೀರು ಮತ್ತು ಒಂದುಪಾಲು ನೆಲ ಎಂಬ ತತ್ವವನ್ನೂ ಅಲ್ಲಿ ತಿಳಿಸಲಾಗಿದೆ. ಹೀಗಿರುವಾಗ ಮಹತ್ತರವಾದ ಈ ಉದ್ಗ್ರಂಥಗಳು ಮಂಗನಿಂದಾದ ಮಾನವನ ಮೂಲಕ ಬರೆಯಲ್ಪಟ್ಟಿದ್ದವೆಂದರೆ ಅದು ಅಸಾಧ್ಯವೆಂಬುದು ಸ್ಪಷ್ಟವಾಗುತ್ತದೆ.

ಹಾಗೆ ನೋಡಿದರೆ ಈಗಲೂ ಆದಿವಾಸಿಗಳೂ ಕಾಡುವಾಸಿಗಳೂ ಪ್ರಪಂಚದಲ್ಲಿ ಅಲ್ಲಲ್ಲಿ ಕಾಣಸಿಗುತ್ತಾರೆ. ಮಂಗಗಳ ರೂಪಕ್ಕೂ ಅವರುಗಳ ರೂಪಕ್ಕೂ ಬಹಳ ಹತ್ತಿರದ ಸಾಮ್ಯ ಈಗಲೂ ಕಾಣುತ್ತದೆ. ಅದೂ ಅಲ್ಲದೇ ನಾಗರಿಕ ಜನಾಂಗದ ಮಧ್ಯೆಯೇ ವಸಿಸುತ್ತಿರುವ ಅದೆಷ್ಟೋ ಜನರನ್ನು ನೋಡುವಾಗ ಮಂಗಗಳ ’ಋಣಾನುಬಂಧ’ವಿರುವಹಾಗೇ ಕಾಣುವ ಅವರ ಆಕಾರ, ವಿಕಾರ, ವರ್ತನೆ ಇವುಗಳ ’ದಿವ್ಯಾನುಭೂತಿ’ ಯಾವ ತಪಸ್ಸೂ ಇಲ್ಲದೇ, ಆಗಾಗ ಪುಕ್ಕಟೆಯಾಗಿ ನಮಗೆ ಲಭಿಸುತ್ತಿರುತ್ತದೆ. ಆಗೆಲ್ಲಾ ನನ್ನೊಳಗೇ ನಾನು ಅಂದುಕೊಳ್ಳುವುದಿದೆ ಮಂಗನಿಂದ ಮಾನವನಾದುದು ಹೌದೇ? ಎಂದು. ಪ್ರಪಂಚದಲ್ಲಿ ೮೦ ಕೋಟಿಗೂ ಅಧಿಕ ಜೀವ ಪ್ರಭೇದಗಳನ್ನು ಸೃಜಿಸಿದ್ದೇನೆ ಎಂಬ ಭಗವಂತನ ಹೇರ್‍ಳಿಕೆಯನ್ನು ತೆಗೆದುಕೊಂಡರೆ ಮಾನವ ವಿಜ್ಞಾನಿಗಳು ಗುರುತಿಸಿದ ಒಟ್ಟೂ ಪ್ರಭೇದಗಳೆಷ್ಟು ಕಮ್ಮಿ ಎಂಬುದೂ ಅರಿವಾಗುತ್ತದೆ. ನಿಸರ್ಗದಲ್ಲಿ ಮಳೆಗಾಲದಲ್ಲಿ ಅಲ್ಲಲ್ಲಿ ಕಾಣುವ ಚಿತ್ರ-ವಿಚಿತ್ರ ಪ್ರಾದೇಶಿಕ ಹುಳುಹುಪ್ಪಟೆಗಳೆಲ್ಲವನ್ನೂ ವೈಜ್ಞಾನಿಕವಾಗಿ ಗುರುತಿಸಲಾಗಿಲ್ಲ. ವಿಜ್ಞಾನಿಗಳಿಗೆ ಸಿಕ್ಕಷ್ಟನ್ನಷ್ಟೇ ದಾಖಲಿಸಿದ್ದಾರೆ-ಹೆಸರು ಕೊಟ್ಟಿದ್ದಾರೆ, ಇನ್ನೂ ಆ ಕಾರ್ಯ ನಡೆಯುತ್ತಲೇ ಇದೆಯೇ ಹೊರತು ಅದು ಮುಗಿದ ಕೆಲಸವಲ್ಲ!

ಬುದ್ಧಿವಂತ ಮಾನವ ನಿಯಂತ್ರಣ ತಪ್ಪಿ ಹಾರುವಾಗ ಹೊಸ ಹೊಸ ಕಾಯಿಲೆಗಳನ್ನು ಹುಟ್ಟಿಸುವ ಈ ನಿಸರ್ಗದ ಆಂಗ್ಲ ಔಷಧೀಯ ಪದ್ಧತಿಯಲ್ಲಿ ಕೆಲವಕ್ಕಂತೂ ಔಷಧಗಳೆನಿಸಿದ ಕೆಮಿಕಲ್ ಗಳು ಇಲ್ಲವೇ ಇಲ್ಲ! ಇನ್ನು ಎಷ್ಟೋ ಕಾಯಿಲೆಗಳ ಮೂಲಸ್ವರೂಪ ಮತ್ತು ಕಾರಣಗಳು ಆ ಪದ್ಧತಿಗೆ ಅರಿವಿಲ್ಲ. ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ಎಂಬ ವಿಚಿತ್ರ ರೋಗವೊಂದು ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬಂದಿದೆ. ಇದಕ್ಕೆ ಔಷಧಗಳೇ ಇಲ್ಲ. ಹಣೆಬರಹ ಗಟ್ಟಿ ಇದ್ದರೆ ಬದುಕಬೇಕಷ್ಟೇ. ಆದರೆ ಇದಕ್ಕೆ ಔಷಧಗಳನ್ನು ಆಯುರ್ವೇದೀಯ ಕ್ರಮದಲ್ಲಿ ಹೇಳಲಾಗಿದೆ-ಅದು ನಮ್ಮಲ್ಲಿನ ಆಧುನಿಕ ಆಯುರ್ವೇದ ಪ್ರಾಚಾರ್ಯರುಗಳಿಗೆ ಅರ್ಥವಾಗಿಲ್ಲ. ಆಯುರ್ವೇದದ ಚರಕ ಮತ್ತು ಸುಶ್ರುತರೆಂಬ ಆಚಾರ್ಯ ವೈದ್ಯರುಗಳು ಬರೆದ ಗ್ರಂಥಗಳ ಸಮಗ್ರ ಅಧ್ಯಯನ ಇಂದಿನ ಯಾವ ವೈದ್ಯರಿಂದಲೂ ಆಗುತ್ತಿಲ್ಲ; ಓದಿದರೂ ಸರಿಯಾಗಿ ಅರ್ಥೈಸಿಕೊಳ್ಳಲು ಆಗುತ್ತಿಲ್ಲ! ಆಂಗ್ಲ ಔಷಧೀಯ ಪದ್ಧತಿ ಉಚ್ಛ್ರಾಯ ಸ್ಥಿತಿಗೆ ಬರುವ ಮುನ್ನವೇ ಸುಮಾರು ೩೦೦೦ ವರ್ಷಗಳ ಹಿಂದೆಯೇ ಈ ಅಯುರ್ವೇದ ಪಂಡಿತರು ಭಾರತದಲ್ಲಿ ಶಸ್ತ್ರಕ್ರಿಯೆಯನ್ನು ನಡೆಸಿ ಯಶಸ್ವಿಯಾದ ದಾಖಲೆಗಳು ಕಾಣಸಿಗುತ್ತವೆ. ಅವುಗಳ ಅನುಸರಣೆಯ ಕ್ರಮಗಳನ್ನೂ ತಿಳಿಯಬಹುದಾಗಿದೆ. ಆದರೆ ಆಧುನಿಕತೆಯ ಭರದಲ್ಲಿ ಅವೆಲ್ಲಾ ಮೂಲೆಗುಂಪಾಗಿವೆ. ಓದುವವರೂ ಇಲ್ಲ, ತಿಳಿದು-ತಿಳಿಸುವ ವಿದ್ವಾಂಸರೂ ಇಲ್ಲ.

ನಮ್ಮ ಈ ನೆಲದಲ್ಲಿ ಅಗೆದಷ್ಟೂ ಮೊಗೆವಷ್ಟು ಐತಿಹಾಸಿಕ ಕುರುಹುಗಳು ಸಿಗುತ್ತಿವೆ. ಪುರಾತನ ವಿಗ್ರಹಗಳು, ದೇಗುಲಗಳ ಅವಶೇಷಗಳು, ಪ್ರಾಚೀನರ ಬಳಕೆಯ ಸಾಮಾನುಗಳು, ಪ್ರಾಚೀನ ಭಾರತದ ಸಂಸ್ಕೃತಿ ಸಾರುವ ಲೋಹದ ಎರಕದ ವಸ್ತುಗಳು, ಶಾಸನಗಳು, ಕಟ್ಟಡಗಳ ಅವಶೇಷಗಳು ಹೂಳುತುಂಬಿ ಇತಿಹಾಸದ ಆಳಗರ್ಭದಲ್ಲಿ ಸೇರಿಹೋಗಿವೆ. ಅಚ್ಚರಿಯೆಂದರೆ ಬೆಂಗಳೂರಿನಂತಹ ಮಹಾನಗರದ ಮಧ್ಯೆ ಮಣ್ಣಲ್ಲಿ ಹುದುಗಿದ್ದ ದೇವಸ್ಥಾನವೊಂದು ಅನಿರೀಕ್ಷಿತವಾಗಿ ಅನಾವರಣಗೊಂಡಿದ್ದು ತೀರಾ ಇತ್ತೀಚೆಗೆ! ಅಲ್ಲೂ ಕೂಡ ಆ ದೇವಸ್ಥಾನದಲ್ಲಿ ನಂದಿಯ ಬಾಯಿಂದ ಸತತವಾಗಿ ಶುದ್ಧ ನೀರು ಬೀಳುವ ವ್ಯವಸ್ಥೆ, ಬಿದ್ದ ನೀರು ಎದುರಿಗಿರುವ ಕಲ್ಯಾಣಿ ಸೇರಿ ನಂತರದಲ್ಲಿ ಮತ್ತೆಲ್ಲೋ ಹರಿದುಹೋಗುವ ಪರಿ ಅಲ್ಲಿನ ವಾಸ್ತುಶಾಸ್ತ್ರದ ಮಹತ್ವವನ್ನು ತೋರಿಸುತ್ತದೆ. ಆ ಕಾಲದ ರಥಗಳು, ಅವುಗಳ ಭಾರಹೊತ್ತ ಚಲನೆಗೆ ಲೆಕ್ಕಚಾರದ ತಕ್ಕ ಚಕ್ರಗಳು, ಜನಪದ ಕಲೆಯಲ್ಲಿ ಬಳಸಲ್ಪಡುವ ಹಲವು ವಸ್ತುಗಳು ಇವೆಲ್ಲಾ ನಮ್ಮ ಪ್ರಾಚೀನ ಸಂಸ್ಕೃತಿ ನಡೆದುಬಂದ ರೀತಿಯನ್ನು ಪ್ರತಿಬಿಂಬಿಸುತ್ತವೆ. ತನ್ನದೇ ದೇಹದ ಭಾರಕ್ಕೆ ಕಾಲುಗಳು ಚಿಕ್ಕವೇನೋ ಎನಿಸುವ ಸಲಗದ ಬೆನ್ನಮೇಲೆ ೭೫೦ ಕ್ವಿಂಟಾಲು ತೂಕದ ಅಂಬಾರಿಯನ್ನು ಇಟ್ಟು ಮೈಲುಗಟ್ಟಲೆ ನಡೆಸುವ ಲೆಕ್ಕಾಚಾರವನ್ನೂ ಕಂಡಿದ್ದೇವೆ. ಅಂದರೆ ಹಿಂದಿನ ಜನರಲ್ಲಿ ತಂತ್ರಜ್ಞಾನಕ್ಕೇನೂ ಕಮ್ಮಿ ಇರಲಿಲ್ಲ. ನಮ್ಮ ರಾಮಾಯಣದಲ್ಲೇ ಪುಷ್ಪಕ ವಿಮಾನದ ಪರಿಕಲ್ಪನೆ ಇತ್ತೆಂದರೆ ಜಗತ್ತಿಗೆ ಮೊದಲಾಗಿ ವಿಮಾನವನ್ನು ಪರಿಚಯಿಸಿದ ಹೆಚ್ಚುಗಾರಿಕೆ ಭಾರತದ್ದಾಗಿದೆ!

ಮೊನ್ನೆಯಷ್ಟೇ ಯುಗಾದಿ ಕಳೆಯಿತು. ಇದು ಯಾವ ಯುಗದ ಆದಿ? ಕೃತ, ತ್ರೇತ, ದ್ವಾಪರ, ಕಲಿ ಇವುಗಳಲ್ಲಿ ಯಾವುದರ ಆದಿ ಎಂದರೆ ಈ ಯುಗಾದಿ ಇವುಗಳ ಆದಿಯಲ್ಲಾ ಬದಲಾಗಿ ಈ ಬ್ರಹ್ಮಾಂಡ ಹುಟ್ಟಿದ ದಿನ ಎಂಬುದು ಸ್ಪಷ್ಟವಾಗುತ್ತದೆ ಯಾಕೆಂದರೆ ಕಲಿಯುಗ ಆರಂಭಗೊಂಡಿದ್ದು ಮಾಘ ಪೌರ್ಣಮಿಯ ದಿನ! ದಿನವೊಂದಕ್ಕೆ ಇಷ್ಟು ಜಾವ, ಇಂತಹ ನಕ್ಷತ್ರದ ಸಾಂಗತ್ಯ, ಇಂಥಾ ರಾಶಿ, ಇಂಥಾ ಮಾಸ, ಘಳಿಗೆ-ಲಿಪ್ತಿ, ತಿಥಿ-ಮಿತಿಗಳ ಲೆಕ್ಕ, ಗ್ರಹಣ ನಡೆಯುವ ಲೆಕ್ಕ ಮುಂತಾದ ಲೆಕ್ಕಗಳನ್ನು ಯಾವ ಉಪಕರಣಗಳೂ ಇಲ್ಲದ ಪುರಾತನ ಹಿಂದೂಸ್ಥಾನವೇ ಅರಿತಿತ್ತು ಎಂದಮೇಲೆ ಅವರಲ್ಲಿನ ವಿದ್ಯೆ ಎಂಥದ್ದಿತ್ತು ? ಯುಗವೊಂದಕ್ಕೆ ಇಂತಿಷ್ಟು ವರ್ಷಗಳು, ಸೃಷ್ಟಿಕರ್ತನ ಹಗಲು-ರಾತ್ರಿಗಳ ಲೆಕ್ಕ, ಕಲ್ಪ ಎಂಬುದರ ಕಲ್ಪನೆ, ಸೂರ್ಯನನ್ನೂ ಚಂದ್ರನನ್ನೂ ಅವಲಂಬಿಸಿ ಋತುಮಾನಗಳು, ಅಯನಗಳು ಇವುಗಳನ್ನೆಲ್ಲಾ ಲೆಕ್ಕಹಿಡಿದು ಹೇಳುವ ಅವರ ಚಾತುರ್ಯ ಬಹಳ ದೊಡ್ಡದಾಗಿತ್ತಲ್ಲವೇ? ಶೃಂಗೇರಿಯ ವಿದ್ಯಾಶಂಕರ ದೇಗುಲದಲ್ಲಿ ಮಾಸಕ್ಕೆ ತಕ್ಕಂತೇ ಸೂರ್ಯ ಆಯಾಯ ಗತಿಯಲ್ಲಿ ಆ ಯಾ ಕಂಬಗಳಮೇಲೆ ತನ್ನ ಪ್ರಕಾಶ ಬೀರುವುದು, ಬೆಂಗಳೂರಿನ ಗುಹಾಂತರ ಗವಿಗಂಗಾಧರೇಶ್ವರ ಲಿಂಗದಮೇಲೆ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯ ಉಪಕ್ರಮಿಸುವ ಮಕರಸಂಕ್ರಾಂತಿಯ ದಿನ ತನ್ನ ಕಿರಣಗಳಿಂದ ಅಭಿಷೇಚಿಸುವುದು ಪುರಾತನರ ಬುದ್ಧಿ ಸೂತ್ರಕ್ಕೆ ಹಿಡಿದ ಕನ್ನಡಿಯಲ್ಲವೇ?

ಜೀವರಾಶಿಗಳಲ್ಲಿ ಹಲವು ಪ್ರಭೇರ್‍ದಗಳಿರುವಂತೇ ಮಂಗವೂ ಒಂದು ಮತ್ತು ಮಂಗಗಳ ಜಾತಿಯಲ್ಲೇ ಹಲವು ಪ್ರಭೇದಗಳನ್ನು ಕಾಣುತ್ತೇವಲ್ಲಾ? ಮಂಗಗಳಿಗೂ ಬುದ್ಧಿ ಜಾಸ್ತಿ ಇತ್ತು ಎಂಬುದನ್ನು ರಾಮಾಯಣದಲ್ಲಿ ಕಾಣುತ್ತೇವಲ್ಲವೇ? ಅಂದಮೇಲೆ ಮಂಗಗಳು ಮನುಷ್ಯನಿಗಿಂತ ಬೇರೇಯೇ ಆಗಿವೆಯೇ ಹೊರತು ಅವುಗಳು ಕ್ರಮೇಣ ನಿಲ್ಲಲು ಪ್ರಯತ್ನಿಸಿದವು, ಬಾಲ ಕಳೆದುಕೊಂಡವು, ಆಮೇಲೆ ನಡೆದಾಡಿದವು, ನಂತರದ ಶತಮಾನಗಳಲ್ಲಿ ನಿಧಾನವಾಗಿ ರೂಪದಲ್ಲೂ ಬದಲಾಗುತ್ತಾ ಮೈಮೇಲಿನ ಕೂದಲುಗಳು ಮಾಯವಾಗಿ ಮಾನವರಾದವು ಎಂಬ ’ಸಂಶೋಧಕ ಮಂಗ’ಗಳಿಗೆ ಏನನ್ನೋಣ ? ಇಂದಿಗೂ ಚಿಂಪಾಂಜಿ ಮತ್ತು ಗೋರಿಲ್ಲಾಗಳು ನೋಡಸಿಗುತ್ತವಲ್ಲಾ ಅವುಗಳೂ ಕ್ರಮೇಣ ಬದಲಾಗಿ ಬದಲಾಗಿ ಮುಂದೆ ಹುಟ್ಟುವ ತಳಿ ಮಾನವರಾಗಬಹುದಿತ್ತಲ್ಲಾ ಆಗುವುದಿಲ್ಲ ಯಾಕೆ? ಜೀವಿಗಳಲ್ಲಿ ಸಹಜವಾಗಿ ಇರುವ ಪ್ರಭೇದಗಳ ಮಧ್ಯೆ ಮನುಷ್ಯ ಮನುಷ್ಯನಾಗಿಯೇ ಹುಟ್ಟಿದನೇ ಹೊರತು ಮಂಗನಿಂದ ಮಾನವ ಎಂಬ ತತ್ವವನ್ನು ನಾನು ಒಪ್ಪುವುದಿಲ್ಲ! ನಮ್ಮ ಅಂಧಕಾರದಿಂದ ಯಾರೋ ಬ್ರಿಟಿಷರು ಹೇಳಿಕೊಟ್ಟ ’ರೀ-ಸರ್ಚ್’ ಎಂಬ ಕೀಳು ಪದ್ಧತಿಯಲ್ಲಿ ನಾವು ಮಂಗನಿಂದ ಮಾನವ ಎಂದು ಹೇಳುತ್ತಾ ಅದನ್ನೇ ನಮ್ಮ ಮನಸ್ಸಿಗೆ ಒಪ್ಪಿಸುತ್ತಾ ಬಂದೆವೇ ವಿನಃ ಮಾನವ ಆವಿಷ್ಕಾರದ ಬಗ್ಗೆಯಾಗಲೀ ಬೇರೇ ಜೀವವೈವಿಧ್ಯಗಳ ಆವಿಷ್ಕಾರದ ಬಗ್ಗೆಯಾಗಲೀ ನಿರ್ದಿಷ್ಟವಾದ ಯಾವ ಮೂಲವನ್ನೂ ಕಾಣಲಾಗಲಿಲ್ಲ. ಜಗತ್ತಿನಲ್ಲಿ ಮೊಟ್ಟೆಮೊದಲೋ ಕೋಳಿಮೊದಲೋ? ಬೀಜ ಮೊದಲೋ ಸಸ್ಯಮೊದಲೋ?- ಎಂಬುದಕ್ಕೆ ಇವತ್ತಿನ ಯಾವ ವಿಜ್ಞಾನವೂ ಸಮರ್ಪಕ ಉತ್ತರವನ್ನು ಹೇಳದಲ್ಲ !

ಜೀವ ಪ್ರಭೇದಗಳಲ್ಲಿ ಹುಟ್ಟುವ ಜೀವಿಗಳಿಗೆ ಆಯಾಯ ಜನ್ಮಕ್ಕೆ ತಕ್ಕಂತೇ ಪಂಚೇಂದ್ರಿಯಗಳನ್ನೂ ಅಥವಾ ಸಂವೇದನಾ ಅಂಗಾಂಗಗಳನ್ನೂ ಸಾಂಪರ್ಕಿಕ ಮತ್ತು ಪ್ರತಿರೋಧಕ ಅವಯವಗಳನ್ನೂ ಕೊಟ್ಟು ನಡೆಸುವ ಸೃಷ್ಟಿಕರ್ತನಿಗೆ ಮಿಗಿಲಾದ ಮ್ಯಾನುಫ್ಯಾಕ್ಚರರ್ ಯಾರಾದರೂ ಇದ್ದಾರೆಯೇ ? ಮಾನವ ಶರೀರವನ್ನೇ ತೆಗೆದುಕೊಳ್ಳಿ: ಎಲ್ಲೆಲ್ಲೂ ಒಂದೂ ಗಂಟೂ ಕಾಣಿಸುತ್ತಿಲ್ಲ! [ಕೆಲವರ ಕೈಮೇಲೋ ಮೈಮೇಲೋ ಡೈಮಂಡ್ ಸ್ಟಡ್ಡೆಡ್ ಅನ್ನೋಹಾಗೇ ಗಂಟುಗಳ ಉದ್ಭವವಾಗಿರಬಹುದು, ಅದು ಅವರ ಕರ್ಮ]ಆದರೆ ಚರ್ಮ ಎಂಬ ಹೊದಿಕೆಯಿಂದ ಎಲ್ಲವನ್ನೂ ಬೈಂಡ್ ಮಾಡಲಾಗಿದೆ. ಶರೀರದ ಒಳಕ್ಕೆ ಆಹಾರ ಸ್ವೀಕೃತಿಗೆ ಬಾಯಿ ಇದೆ. ಸುಖ-ದುಃಖಗಳ ಬಾಷ್ಪವನ್ನು ಹೊರಹಾಕಲಿಕ್ಕೂ ನೋಡಲಿಕ್ಕೂ ಕಣ್ಣು ಎಂಬ ಅಂಗ ಇದೆ. ಮಲವಿಸರ್ಜನೆಗೆ ತಕ್ಕುದಾದ ಅಂಗಗಳಿವೆ. ಕೇಳಲು ಕಿವಿ, ನೋಡಲು ಕಣ್ಣು, ರುಚಿಸಲು ನಾಲಿಗೆ, ಆಘ್ರಾಣಿಸಲು ಮೂಗು, ಸ್ಪರ್ಶಿಸಲು ಚರ್ಮ ಇವುಗಳನ್ನು ನೀಡಿ ಮೆದುಳೆಂಬ ಅಂಗದಿಂದ ಎಲ್ಲವನ್ನೂ ನಿಯಂತ್ರಿಸುವ ಯಂತ್ರವನ್ನು ಸೃಜಿಸಿದ ಎಂಜಿನೀಯರಿಂಗ್ ಅದ್ಭುತವಲ್ಲವೇ? ಮನುಷ್ಯರಲ್ಲೇ ಕೆಲವರಂತೆಯೇ ಕಂಡರೂ ಮನುಷ್ಯ ಮೆದುಳನ್ನೂ ಮತ್ತು ಶರೀರ ಸೌಷ್ಟವಗಳನ್ನೂ ಹೊಂದಿರದ ಚಿಂಪಾಂಜಿಗಳನ್ನು ನೋಡಿದರೆ ಅವುಗಳಿಂದ ಮಾನವ ಹುಟ್ಟಿದನೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗೊಮ್ಮೆ ಹೌದಾದರೆ ಮುಂದುವರಿದ ಚಿಂಪಾಂಜಿಯ ಅಥವಾ ಗೋರಿಲ್ಲಾದ ವಂಶಗಳು ಮನುಷ್ಯರೇ ಆಗಿ ಆ ಜೀವ ಪ್ರಭೇದಗಳು ಕಾಣದಾಗಬೇಕಿತ್ತಲ್ಲಾ?

ಪಂಚಭೂತಗಳ ಆವಿಷ್ಕಾರ ಹೇಗಾಯ್ತು ಎಂಬುದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ಉಪಗ್ರಹಗಳನ್ನು ಸೃಷ್ಟಿಸಿ ಹಾರಿಸಿ ನಿಯಂತ್ರಿಸಿದರೂ ನಿಸರ್ಗದ ಆಕಾಶ ಕಾಯಗಳ ಪರಿಪೂರ್ಣ ಅಧ್ಯಯನ ಸಾಧ್ಯವಾಗುತ್ತಿಲ್ಲ. ಆಕಾಶದಲ್ಲಿರುವ ಗುರುತ್ವ ಪೊಳ್ಳುಗಳ ಆಚೆ ಏನಿದೆ ಎಂದು ಯಾರೂ ಹೇಳುವುದಿಲ್ಲ; ಹೇಳಲು ಅರಿಯಲಾಗಬೇಕಲ್ಲ? ಸೂರ್ಯನಲ್ಲಿ ಅಪರಿಮಿತ ಹೀಲಿಯಂ ಇದೆಯೆಂದು ದೂರದ ಲೆಕ್ಕಾಚಾರವೇ ಬಿಟ್ಟರೆ ಸೂರ್ಯನ ಹತ್ತಿರಕ್ಕೆಂದಾದರೂ ಹೋಗಲು ಸಾಧ್ಯವೇ? ಕೋಟ್ಯಂತರ ಮೈಲಿ ದೂರದಿಂದ ಹಾಯ್ದುಬಂದು, ದುರ್ಬೀನಿನ ಮೂಲಕ ಹಾಯುವ ಸೂರ್ಯ ಕಿರಣ ವಸ್ತುಗಳಲ್ಲಿ ಬೆಂಕಿಯ ಜನನಕ್ಕೆ ಕಾರಣವಾಗುತ್ತದೆ ಎಂದಮೇಲೆ ಸೂರ್ಯನ ಮಹತ್ತಾದರೂ ಎಂಥದ್ದು ಅಲ್ಲವೇ? ಮರಗಿಡಗಳು ತಮ್ಮ ಆಹಾರಗಳನ್ನು ನಿಂತಲ್ಲಿ ತಾವೇ ತಯಾರಿಸಿಕೊಳ್ಳುವ ಹಾಗೇ ಪತ್ರಹರಿತ್ತನ್ನು ಅವುಗಳಲ್ಲಿಟ್ಟು ಮೇಲಿಂದ ಸೂರ್ಯಪ್ರಕಾಶ ಹರಿಸುವುದು ಯಾರು ಮಾಡಿದ ನಿಯಮ ? ಮನುಷ್ಯನಿಗೂ ಮುಂಚಿನ ಮಂಗ ಮಾಡಿತೆ?

ಕಾಲವೊಂದರಲ್ಲಿ ವಾಹನಗಳ ಸೌಕರ್ಯವೇ ಇಲ್ಲದಾಗ ಪ್ರಪಂಚದಾದ್ಯಂತ ಇರುವ ಭೂಖಂಡಗಳು ಇಷ್ಟು, ಆಯಾ ಭೂಖಂಡಗಳ ವ್ಯಾಪ್ತಿ-ಪ್ರಾಪ್ತಿ, ಅವುಗಳ ವೈಶಿಷ್ಟ್ಯಗಳು, ಸಪ್ತ ಸಾಗರಗಳು ಇವುಗಳನ್ನೆಲ್ಲಾ ಇಷ್ಟಿಷ್ಟೇ ಎಂದು ಮಂಗ ನಿರ್ಧರಿಸಿತೇ? ದಶದಿಕ್ಕುಗಳು ಅವುಗಳ ಮಹತ್ವ, ಭೂಮಿ ಕಾಂತದ ಪರಿಣಾಮ ಇವುಗಳನ್ನೆಲ್ಲಾ ತಿಳಿದದ್ದು ಹೇಗೆ? ಭೂಮಿಯೆಂಬುದು, ಮಹಾಸ್ಫೋಟದಿಂದ ಸೂರ್ಯನ ಕಿಡಿ ಸಿಡಿದು ಆಮೇಲೆ ತಣ್ಣಗಾಗುತ್ತಾ ತಯಾರಾಯ್ತು ಎನ್ನುತ್ತೇವೆ. ಸಿಡಿದ ಸೂರ್ಯನ ತುಣಿಕಿನ ಮೇಲೆ ಎಷ್ಟೋ ಸಾವಿರ ವರ್ಷಗಳು ಮಳೆಸುರಿದು ಭೂಮಿ ತಣ್ಣಗಾಯ್ತು ಎನ್ನುತ್ತೇವೆ. ಭೂಮಿಯ ಮೇಲೆಯೇ ಸಮುದ್ರಗಳಿವೆಯಲ್ಲಾ ಸಮುದ್ರಗಳ ನೀರು ಆವಿಯಾಗಿ ಮಳೆಯಾಗಬೇಕಲ್ಲಾ? ಆಗ ಇಲ್ಲದಿದ್ದ ಸಮುದ್ರಗಳಿಂದ ಆವಿಯಾದರೂ ಹೇಗಾಯ್ತು? ಎಲ್ಲಿಂದ ಮಳೆ ಬಂತು? ಸಾವಿರಗಟ್ಟಲೆ ವರ್ಷಗಳು ಮಳೆ ಸುರಿದ ನಂತರ ತಣ್ಣಗಾದ ಭೂಮಿಯ ಅತೀ ಒಳಭಾಗದಲ್ಲಿ ಇನ್ನೂ ಲಾವಾರಸ ಹಾಗೇ ಇದೆ ಎನ್ನುತ್ತೇವೆ, ಅದೇ ಜ್ವಾಲಾಮುಖಿಯಾಗಿ ಆಗಾಗ ಭೋರ್ಗರೆದು ಹರಿಯುತ್ತದೆ ಎನ್ನುತ್ತೇವೆ. ಹಾಗಾದರೆ ಕಂಡಲ್ಲೆಲ್ಲಾ ಜ್ವಾಲಾಮುಖಿ ಯಾಕೆ ಸ್ಫೋಟಿಸುವುದಿಲ್ಲ? ಭೂಮಿ ಸೂರ್ಯನ ತುಣುಕು ಎಂದಮೇಲೆ ಅಲ್ಲೂ ಮಣ್ಣು-ಕಲ್ಲುಗಳು ಬೆಂಕಿಯ ರೂಪದಲ್ಲಿರಬೇಕಲ್ಲ ? ಇದು ಕೇವಲ ಅಂದಾಜಿಸಿದ್ದು, ಮಾನವ ಊಹೆ. ಊಹೆಗೆ ನಿಲುಕದ ವಿಚಾರಗಳೇ ಹಲವು!

ವಿಚಾರಮಾಡಿದರೆ ಮನುಷ್ಯ ಬಾವಿಯೊಳಗಿನ ಕಪ್ಪೆ; ಕೂಪ ಮಂಡೂಕ. ತನ್ನ ಜಗತ್ತನ್ನು ಬಿಟ್ಟರೆ ಬೇರೇ ಜಗತ್ತು ಇಲ್ಲಾ ಎನ್ನುತ್ತದಂತೆ ಕಪ್ಪೆ. ಅದರಂತೇ ತನ್ನ ಜಗತ್ತನ್ನು ಬಿಟ್ಟರೆ ಬೇರೇ ಜಗತ್ತನ್ನು ಅರಿಯಲಾರದ ಮಿತಿಯನ್ನು ಹೇರಿದೆ ಮಾನವನಿಗೆ ಆ ಸೃಷ್ಟಿ; ಆದನ್ನು ಮೀರುವುದಕ್ಕೆ ಒಂದು ಹೊಸ ಆಯಾಮದ ಕೀಲೀಕೈ ಇಟ್ಟಿದೆ, ಆದರೆ ಎಲ್ಲರಿಂದಲೂ ಆ ಕೀಲಿ ತಿರುಗಿಸುವುದು ಸಾಧ್ಯವಿಲ್ಲ! ಕೀಲಿ ತಿರುಗಿಸಲಾರದ ನಮಗೆ ನಮ್ಮದೇ ವ್ಯಾಪ್ತಿ, ನಮ್ಮ ಪ್ರಯತ್ನಕ್ಕೆ ತಕ್ಕಹಾಗೇ ಫಲಪ್ರಾಪ್ತಿ. ಸಾಮಾನ್ಯರು ಸಾದಾ ಕೀಲಿ ಹೊಂದಿದ್ದರೆ ವಿಜ್ಞಾನಿಗಳು ಸ್ವಲ್ಪ ಹೊಸರೀತಿಯ ಕೀಲಿ ಪಡೆದಿರುತ್ತಾರೆ. ಮುಮುಕ್ಷುಗಳು ಮತ್ತು ಭಾರತೀಯ ಸಾಧನಾ-ಪರಮೋಚ್ಚ ಸನ್ಯಾಸಿಗಳು ಮಾತ್ರ ಮಾಸ್ಟರ್ ಕೀಲಿ ಹೊಂದಿರುತ್ತಾರೆ. ಹೊರಜಗತ್ತಿನ ಪರಿವೆ ತೆರೆದುಕೊಳ್ಳುವುದು ಕೇವಲ ಮಾಸ್ಟರ್ ಕೀಲಿಯಿಂದ ಮಾತ್ರ ಸಾಧ್ಯ! ವಿಜ್ಞಾನಿಗಳು ಇದೇ ಜಗತ್ತಿನ ಉನ್ನತ ಸ್ತರಗಳ ವರೆಗೆ ಹಾರುವ/ತಲ್ಪುವ ಅನುಮತಿಯನ್ನು ಪಡೆದಿರುತ್ತಾರೆ!-ಹಾಗಾಗಿ ಚಂದ್ರಲೋಕಗಳಂತಹ ಕೆಲವು ಭಾಗಗಳಿಗೆ ಹೋಗಲು ಸಾಧ್ಯ, ವಿಮಾನ-ಹಡಗು-ರೈಲು ಮುಂತಾದ ಪರಿಕರಗಳನ್ನು ತಯಾರಿಸಲು ಸಾಧ್ಯ. ಅದರಿಂದಾಚೆಗಿನ ವ್ಯಾಪ್ತಿ ವಿಜ್ಞಾನಿಗಳಿಗೆ ಕಾಣಿಸುವುದಿಲ್ಲ; ಕಾಣಲು ನಡೆಸುವ ಪ್ರಯತ್ನವೂ ಸಫಲವಾಗುವುದಿಲ್ಲ.

ಇತಿಹಾಸದಲ್ಲಿ, ’ಮಂಗನಿಂದ ಮಾನವ’ ಎಂದಂತೇ ಹಲವು ತಪ್ಪುದಾಖಲೆಗಳನ್ನೇ ಸರಿಯೆಂದು ನಮಗೆ ಬೋಧಿಸಲಾಗಿದೆ. ತಾವು ಕಂಡಿದ್ದೇ ಸತ್ಯ ಎಂದು ತಿಳಿದ ಕೆಲವು ಮಾನವರು ಅದನ್ನೇ ಮಿಕ್ಕವರಿಗೂ ಉಣಬಡಿಸಿದ್ದಾರೆ. ಕಾಲಕಾಲಕ್ಕೆ ಈ ’ಸತ್ಯ’ ಸುಳ್ಳಾಗಿ ಹೊಸ ’ಸತ್ಯ’ ಹೊರಬರುತ್ತಲೇ ಇರುತ್ತದೆ. ಆದರೆ ಇವಾವುವೂ ಸತ್ಯವೇ ಅಲ್ಲ ಎಂಬುದನ್ನು ಮಾನವ ಬುದ್ಧಿ ಅರಿಯುವ ಮಟ್ಟಕ್ಕೆ ಹೋಗುವುದೇ ಇಲ್ಲ; ಇಲ್ಲೇ ಮಾನವ ಮಂಗನಾಗುತ್ತಾನೆ ಬಿಟ್ಟರೆ ಮಂಗನಿಂದ ಮಾನವ ಎಂಬುದು ಸುಳ್ಳು. ಆಯುರ್ವೇದದಲ್ಲಿ ಹೇಳಿದಂತೇ ಮಾನವ ಚರ್ಮದಲ್ಲಿ ಏಳು ಪದರಗಳಿವೆ ಎಂಬುದನ್ನು ಈಗೀಗ ಆಂಗ್ಲ ವಿಜ್ಞಾನಿಗಳು ಒಪ್ಪಿದ್ದಾರೆ;ಯಾಕೆಂದರೆ ಏಳು ಪದರಗಳನ್ನು ವಿಂಗಡಿಸಲು ಅವರಿಂದ ಇದುವರೆಗೆ ಸಾಧ್ಯವಾಗಿರಲಿಲ್ಲ. ಇಲ್ಲಿಯವರೆಗೆ ಚರ್ಮ ಒಂದೇ ಪದರದಿಂದಾಗಿದೆ ಎಂದು ನಮಗೆ ಜೀವಶಾಸ್ತ್ರ ಹೇಳುತ್ತಿತ್ತು! ಈಗ ’ಏಳುಪದರಗಳಿಂದಾಗಿದೆ’ ಎಂದು ತಿದ್ದಿಕೊಳ್ಳುವ ಅನಿವಾರ್ಯತೆ ಬಂದಿದೆ ಹೇಗೋ ಹಾಗೆಯೇ ಮಂಗನಿಂದ ಮಾನವನಲ್ಲ, ಮಂಗಗಳ ಪ್ರಭೇದವೇ ಬೇರೆ ಮತ್ತು ಮಾನವ ಪ್ರಭೇದವೇ ಬೇರೆ ಎಂಬುದನ್ನು ಸಂಶೋಧಕರು ಬಿಡುವುಮಾಡಿಕೊಂಡು ಹುಡುಕಬೇಕಾಗಿದೆ. ಇದು ಹೊಸದಾಗಿ ಪಿ.ಎಚ್.ಡಿ ಮಾಡುವ ಜೀವರಸಾಯನ ಶಾಸ್ತ್ರದ/ ಇತಿಹಾಸದ ವಿದ್ಯಾರ್ಥಿಗಳಿಗೆ ನಾನೊಡ್ಡುವ ಸವಾಲಾಗಿದೆ. ಈ ತಿರುವಿನಲ್ಲಿ ನನಗೆ ಸಂಸ್ಕೃತ ಪ್ರಾರ್ಥನೆಯೊಂದು ಹೀಗೆ ರಸವತ್ತಾಗಿ ಕಾಣಿಸುತ್ತದೆ :

ಓಂ
ಅಸತೋಮಾ ಸದ್ಗಮಯ |
ತಮಸೋಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾ ಅಮೃತಂಗಮಯ |

ಓಂ ಶಾಂತಿಃ ಶಾಂತಿಃ ಶಾಂತಿಃ ||