ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, June 27, 2010

ಕರೆದಳಾರಾಧೆ


ಕೃಷ್ಣನ ಬಗ್ಗೆ ರಾಧೆಗಿದ್ದ ಪ್ರೀತಿ ಅಪ್ರತಿಮ. ಅದು ಅಮೋಘ,ಉತ್ಕಟ,ಅನನ್ಯ,ಅನೂಹ್ಯ, ಬಣ್ಣಿಸಲಸದಳ. ಪ್ರಾಯಶಃ ಈ ಪ್ರಪಂಚದಲ್ಲಿ ಬೇರಾವ ಸಂಗಾತಿಯೂ ಕೊಡಲಾರದ ಪ್ರೇಮವನ್ನು ತನ್ನ ಕೃಷ್ಣನಿಗಾಗಿ ಆಕೆ ಮೀಸಲಿರಿಸಿದ್ದಾಳೆ. ಕೃಷ್ಣನೊಬ್ಬ ಕಳ್ಳ, ಹೆಂಗುಸರ ಮಳ್ಳ, ಕೃಷ್ಣನೊಬ್ಬ ತಲೆಹಿಡುಕ, ಕೃಷ್ಣನೊಬ್ಬ ವಾಚಾಳಿ, ಕೃಷ್ಣನೊಬ್ಬ ಗೊಲ್ಲ, ಕೃಷ್ಣನೊಬ್ಬ ಕುತ್ಸಿತ-ಕಪಟ ನಾಟಕರಂಗ ಹೀಗೇ ಜನಸಮುದಾಯುದಲ್ಲಿ ಅಲ್ಲಲ್ಲಿ ಗುಲ್ಲೆದ್ದಿದ್ದರೂ ಆ ಬೆಂಕಿಯ ಕಿಡಿಗೆ ತನ್ನ ಬದುಕಿನ ಪ್ರೀತಿಯನ್ನು ಬಲಿಕೊಡುವ ಸಾದಾ ಹೆಣ್ಣಾಗಿರಲಿಲ್ಲ ರಾಧೆ! ಲೋಕದ ಕಣ್ಣಿಗೆ ರಾಧೆ ಹೆಣ್ಣೇ ಸರಿ ಆದರೆ ಅವಳ ಆಂತರ್ಯದಲ್ಲಿ ಕೃಷ್ಣನ ಮೂರ್ತಿ ಕಡೆದು ನಿಲ್ಲಿಸಲ್ಪಟ್ಟಿತ್ತು;ಪ್ರತಿಷ್ಠಾಪಿಸಲ್ಪಟ್ಟಿತ್ತು. ಕೃಷ್ಣನಿಗಾಗಿ ಅವಳು ಏನನ್ನೂ ಮಾಡಿಯಾಳು. ಆಗೊಮ್ಮೆ ಈಗೊಮ್ಮೆ ಕೃಷ್ಣನನ್ನು ಹುಡುಕಲು ತನ್ನ ಸಖಿಯರನ್ನು ಕಳಿಸುವಳು, ಅವರು ತಾವು ಒಲ್ಲೆ ಎಂದಾಗ ಪುರಸ್ಕಾರದ ಆಮಿಷವೊಡ್ಡಿ ತನ್ನ ಮನದಿನಿಯನನ್ನು ಹುಡುಕಿಕೊಡುವಂತೆ ಗೋಗರೆಯುವಳು.

ರಾಜಕಾರ್ಯದಲ್ಲಿ ಮಗ್ನನಾದ ಕೃಷ್ಣ ಮನೆಗೆ ಬರುವುದು ವಿಶ್ರಾಂತಿಗಾಗಿ ಮಾತ್ರ, ಅದೂ ನಡುರಾತ್ರಿ ಕಳೆದ ಮೇಲೆ ಬಂದು ಮತ್ತೆ ಬೆಳಗಿನ ನಸುಕಿನಲ್ಲೇ ಎದ್ದು ಹೋಗುವ ಪರಿಪಾಟ! ಯಾವ ಹೆಂಡತಿ ಸಹಿಸಿಯಾಳು?ಸರಿಯಾದ ಮಾತಿಲ್ಲ,ಕಥೆಯಿಲ್ಲ, ಊಟ-ತಿಂಡಿ ಜೊತೆಗಿದ್ದು ಮಾಡಿ ವರುಷಗಳೇ ಕಳೆದಿವೆ!ತನ್ನ ಹೆಣ್ತನದ ನೋವನ್ನು ಯಾರಲ್ಲಿಯೂ ಹೇಳಿಕೊಳ್ಳಲಾರಳು. ಅಕ್ಕಪಕ್ಕದ ಮನೆಯ ಹೆಂಗಳೆಯರು ಯಾಕಮ್ಮಾ ನಿನ್ನ ಕೃಷ್ಣ ಪ್ರತೀ ರಾತ್ರಿ ತಡವಾಗಿ ಬರುವುದು ಎಂದು ಪರಸ್ಪರರು ನೋಡಿಕೊಂಡು ನಕ್ಕಾಗ ಕರುಳಿಗೆ ಬೆಂಕಿಯಿಟ್ಟಂತೆ ಚುಂಯ್ ಗುಡುವ ಅನುಭವ,ಆದರೂ ಮುಚ್ಚಿಕೊಳ್ಳುತ್ತಿದ್ದಳು! ನೋವನ್ನ ಬಚ್ಚಿಟ್ಟುಕೊಳ್ಳುತ್ತಿದ್ದಳು!ಒಸರುವ ಕಣ್ಣೀರನ್ನು ಸೆರಗಿನಿಂದ ಒರೆಸಿ ಆ ಕ್ಷಣ ಅದು ಅವರ ಕಣ್ಣಿಗೆ ಕಾಣದಂತೆ ಮಾಡುತ್ತಿದ್ದಳು. ಅವರಿಗೆ ಸರಿಯಾಗಿ ಬೈದು ಮರಳಿಬಂದು ಬಾಗಿಲು ಹಾಕಿಕೊಂಡು ಪಲ್ಲಂಗದ ಮೇಲೆ ಬೋರಲು ಬಿದ್ದು ಮನ ಹಗುರಾಗುವವರೆಗೂ ಅತ್ತುಬಿಡುವಳು.


ತಂಗದಿರನ ಪೂರ್ಣರಾತ್ರಿಗಳಲ್ಲಿ, ಮಂದ ಮಾರುತ ಹಾಯ್ದು ಮೈಯೆಲ್ಲ ಪುಳಕಗೊಳ್ಳುವಾಗ ಕೃಷ್ಣ-ತನ್ನ ಸಖ ಹತ್ತಿರವಿದ್ದರೆ ಪರಮಸುಖ ಎಂದುಕೊಳ್ಳುವಳು. ಆತ ಬರಬೇಕಲ್ಲ. ಆತ ಬಂದಾಗ ಹಿಂದಿನ ಕಥೆಗಳನ್ನೆಲ್ಲ ಮರೆತು ಹೊಸ ಬದುಕು ಪ್ರಾರಂಭಿಸೋಣವೆಂಬ ಬಯಕೆ ಆಕೆಯದು;ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂದಿದ್ದು ಬಹುಶಃ ರಾಧಾ-ಕೃಷ್ಣರನ್ನು ನೋಡಿಯೇ ಇರಬೇಕು! ಮನಸು ಹೇಳ ಬಯಸಿದೆ ನೂರೊಂದು ! ನನಸಮಾಡಲಾಗದಾ ಮಾತೊಂದು !

ಒಮ್ಮೊಮ್ಮೆ ಕೃಷ್ಣ ಬರುವ ಸಮಯ ಎಚ್ಚರವಿದ್ದು ಚೆನ್ನಾಗಿ ಬೈದು ಮಂಗಳಾರತಿ ಎತ್ತುವಾ ಎನಿಸುತ್ತದೆ, ಆತನ ಕೂಡ ಘನ ಘೋರ ಮಾತಿನ ಕಾಳಗ ನಡೆಸಿ ಮತ್ತಿನ್ನಾತ ಎಲ್ಲೂ ಹೋಗದೇ ಸಂಜೆಯೊಳಗೇ ಮನೆ ಸೇರುವಂತೆ ಮಾಡಬೇಕೆನಿಸುತ್ತದೆ. ಚಿವುಟಿ ಕೃಷ್ಣನನ್ನು ಗುದ್ದಾಡಿ ಹಣ್ಣುಗಾಯಿ-ನೀರುಗಾಯಿ ಮಾಡುವ ಕೋಪ ಆವರಿಸುತ್ತದೆ. ನೀನು ಬರಲೇ ಬೇಡ ಎಂದು ಬಾಗಿಲು ಹಾಕಿ ಬಿಡುವಾ ಎನಿಸುತ್ತದೆ. ಸವತಿಯರ ನೆನಪಾದಾಗ ಅವಡುಗಚ್ಚಿ ಸೊಂಟಕಟ್ಟಿ ಎಲ್ಲರ ಸೊಂಟ ಮುರಿದುಹಾಕುವ ಈರ್ಷ್ಯೆ ಉಕ್ಕಿಬರುತ್ತದೆ! ಬರಿಗೈಲಿ ಕೃಷ್ಣನನ್ನು ಎಲ್ಲೂ ಕಾಣಲಿಲ್ಲ ಎಂದು ಬರುವ ಸಖಿಯರಿಗೆ ನಖದಿಂದ ಶಿಖದವರೆಗೂ ಬೈಯ್ದು ಅಟ್ಟುವ ಕ್ರೋಧ ಆವರಿಸುತ್ತದೆ! ಆದರೆ ಕೃಷ್ಣ ಬರುತಿದ್ದಂತೆ ದೀಪಕ್ಕೆ ಮುತ್ತಿಡುವ ಪತಂಗದಂತೇ ತನ್ನ ಸ್ಥಿತಿ. ಕೃಷ್ಣ ಬಂದಾಗ ಆತ ತನ್ನ ತೋಳ್ತೆಕ್ಕೆಯಲ್ಲಿ ಒಂದೇ ಒಂದು ನಿಮಿಷ ಬಂಧಿಸಿ ರಮಿಸಿದರೆ ಸಾಕು ಸುಯ್ಯನೆ ಬಂದ ಬಿರುಗಾಳಿ ತರಗೆಲೆಯನ್ನು ಹಾರಿಸಿಕೊಂಡು ಹೋದಂತೆ ತನ್ನಲ್ಲಿರುವ ಎಲ್ಲಾ ವೈರುಧ್ಯಗಳೂ ಮಾಯ! ಹೀಗಾಗಿ ಕೃಷ್ಣನ ಈ ಮಾಯೆಯಲ್ಲಿ ತನ್ನನೇ ಮೀಯಿಸಿಕೊಂಡ ರಾಧೆ ಕೃಷ್ಣನನ್ನು ಅರ್ಥವಿಸತೊಡಗುತ್ತಾಳೆ.

ಕೃಷ್ಣ ಜಗತ್ತಿಗೇ ಗುರುವಾಗತಕ್ಕವನು, ಕೃಷ್ಣನೊಬ್ಬ ಲೋಕೋದ್ಧಾರಕ, ಕೃಷ್ಣನೊಬ್ಬ ಸಕ್ರಿಯ ಪರಿಪೂರ್ಣ ಆದರ್ಶ ರಾಜಕಾರಣಿ, ಕೃಷ್ಣ ಹಲವು ಗೋಪ-ಗೋಪಿಕೆಯರ ಅಹವಾಲು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವ ಘನಾಢ್ಯ, ಕೃಷ್ಣನೊಬ್ಬ ಸಾವಿರ ಸಾವಿರ ಸಂಖ್ಯೆಯ ಗೋವುಗಳನ್ನು ಮೈದಡವಿ ಸಂತೈಸಿ ಅವುಗಳಿಗೆ ಹುಲ್ಲು-ನೀರು-ಆಸರೆ ಕಲ್ಪಿಸುವ ವ್ಯವಸ್ಥಾಪಕ, ಕೃಷ್ಣನೊಬ್ಬ ಸಮಾಜ ಘಾತುಕನಾದ ಕಾಳೀಯನ ಮರ್ದಕ,ಕೃಷ್ಣನೊಬ್ಬ ಮುರಳೀಗಾನ ವಿಲೋಲ, ಕೃಷ್ಣನೊಬ್ಬ ಅಸುರೀ ಶಕ್ತಿ ಭಂಜಕ...ಹೀಗೇ ತನ್ನಲ್ಲಿ ತನಗೇ ಗೊತ್ತಿಲ್ಲದಂತೆ ಮನಸ್ಸಿನ ಉದ್ದಗಲ-ಆಳಗಳಲ್ಲಿ,ಮನದ ಪ್ರತೀ ಮೂಸೆ ಮೂಸೆಯಲ್ಲಿ, ಶರೀರದ ಅಣು ಅಣುವಿನಲ್ಲಿ-ಕಣ ಕಣದಲ್ಲಿ ಆತನನ್ನು ಆಹ್ವಾನಿಸಿಕೊಳ್ಳುತ್ತಾಳೆ. ಆ ಮೋಹ ವ್ಯಮೋಹ, ಅತಿ ವ್ಯಾಮೋಹ, ಅದು ಬಿಟ್ಟಿರಲಾರದ ನಂಟು. ಅದು ಪ್ರೀತಿಯ ಸಾರ್ಥಕ್ಯದ ಗಂಟು, ಅದು ಸುಲಲಿತ ದಾಂಪತ್ಯದ ’ಸರಿಗಮಪದನಿಸ’. ಇಂತಹ ವೇಳೆ ರಾಧೆ ಕೃಷ್ಣನ ಕುರಿತಾಗಿ ಯೋಚಿಸಿದ್ದು ಹೀಗೆ--

ಕರೆದಳಾರಾಧೆ

ನಗುಮೊಗದಿ ಕರೆದಳಾರಾಧೆ
ವರ ಕೃಷ್ಣಗೆ ನೀಡುತ ಸರಸದ ಬೋಧೆ

ಕಡೆಗಣ್ಣ ನೋಟ ತಾ ಹರಿಸಿ
ಒಡೆಯನ್ನ ಹೃದಯದಲಿ ಇರಿಸಿ
ನಡುರಾತ್ರಿವರೆಗೆ ಬಾರದಿಹ
ಒಡಲಾಳದ ನೋವನು ಮರೆಸಿ

ತಂಗದಿರನ ತಂಪು ಬೆಳಕಲ್ಲಿ
ಅಂಗಳದ ತುಂಬ ಹಾಲ್ ಚೆಲ್ಲಿ
ಮಂಗಳದ ಸೌಕುಮಾರ್ಯ
ರಂಗೆದ್ದು ಕುಣಿಯಿತದೋ ಅಲ್ಲಿ

ತಂಗಾಳಿ ತುಸುವೆ ತಾ ಬೀಸಿ
ಅಂಗಾಂಗಕೆ ಪರಿಮಳ ಪೂಸಿ
ಸಂಗಾತಿಯ ಕರೆಯುತ ಮನಸು
ಸಂಘರ್ಷಗಳನು ಪರಿಹರಿಸಿ

ಅದು ನಿಲ್ಲದ ಪ್ರೀತಿಯ ಮೋಹ
ಬದಲಾಗದ ಅತಿ ವ್ಯಾಮೋಹ
ಅದುಮಿಟ್ಟು ಕೊಳದ ಆ ಶರೀರ
ವದರಿತ್ತು ಮುರಳಿಯೇನಮಃ

ಹದಿನಾರು ಸಾವಿರದ ನೂರು
ಚದುರುತ್ತ ಸವತಿಯರು ಜೋರು!
ಎದುರಾಳಿ ಸತ್ಯಭಾಮೆಯೆನಗೆ
ಅದಕಿಲ್ಲ ಕೋಪ ಬಳಿಸಾರು