ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, May 4, 2013

ಕೊಡುವ ಸರಕು ಚೆನ್ನಾಗಿದ್ದರೆ ಕೊಳ್ಳುವ ಗಿರಾಕಿಗಳು ಇದ್ದೇ ಇರುತ್ತಾರೆ

 ಚಿತ್ರಗಳ ಋಣ: ಅಂತರ್ಜಾಲ 
ಕೊಡುವ ಸರಕು ಚೆನ್ನಾಗಿದ್ದರೆ ಕೊಳ್ಳುವ ಗಿರಾಕಿಗಳು ಇದ್ದೇ ಇರುತ್ತಾರೆ
                                                                --(C)ವಿ.ಆರ್.ಭಟ್, ಹಡಿನಬಾಳ

ಒಂದೇ ಮಣ್ಣಿನಲ್ಲಿ ಮಾವು, ಬೇವು, ಹೊಂಗೆ, ನೇರಳೆ, ಹಲಸು, ಬಾಳೆ, ಸೀಬೆ, ಕಿತ್ತಳೆ ಎಲ್ಲವೂ ಬೆಳೆಯುತ್ತವೆ. ಅದೇ ಮಣ್ಣಿನಲ್ಲಿ ಜಾಜಿ, ಜೂಜಿ, ಮಲ್ಲಿಗೆ, ಸಂಪಿಗೆ, ಕೇದಿಗೆ, ಇರುವಂತಿಗೆ, ಸೇವಂತಿಗೆ, ಕಾಕಡ ಮೊದಲಾದ ಹೂಗಿಡಗಳೂ ಬೆಳೆಯುತ್ತವೆ. ಎಲ್ಲದರ ಬಣ್ಣ, ಆಕಾರ, ಗಾತ್ರ, ಪರಿಮಳ, ರುಚಿ ಮೊದಲಾದ ಅಂಶಗಳಲ್ಲಿ ಭಿನ್ನತೆಯಿದೆ, ವೈಶಿಷ್ಟ್ಯವಿದೆ. ಅದೇ ರೀತಿಯಲ್ಲಿ ಹುಟ್ಟಿದ ಪ್ರತೀ ಜೀವಿಯಲ್ಲೂ ಅದರದ್ದೇ ಆದ ಪ್ರತಿಭೆಯಿದೆ! ಅದರಲ್ಲೂ ವಿಕಸಿತ ಮೆದುಳನ್ನು ಹೊಂದಿರುವ ಮನುಷ್ಯರಲ್ಲಿ, ಗುಣ-ನಡತೆ-ವಿದ್ಯೆ-ಸಂಸ್ಕಾರ-ಸಾಮರ್ಥ್ಯ-ಶ್ರಮ-ಕಾರ್ಯದಕ್ಷತೆಯೇ ಮೊದಲಾದ ಹಲವು ಅಂಶಗಳಲ್ಲಿ ಭಿನ್ನತೆಯನ್ನು ಕಾಣಬಹುದಾಗಿದೆ. ಯಾರೂ ನಿಷ್ಪ್ರಯೋಜಕರಲ್ಲ, ಆದರೆ ಅವರವರ ಮಟ್ಟಿಗೆ ಅವರು ಅವರದೇ ಆದ ಪ್ರತಿಭೆಯಿಂದ ಪ್ರಯೋಜವನ್ನು ಪಡೆಯಲಿಕ್ಕೆ ಸಂಯಮ ಬೇಕು, ಛಲಬೇಕು, ನಿರ್ದಿಷ್ಟ ಗುರಿ ಬೇಕು, ಗುರಿ ತಲ್ಪಲು ಆಯ್ದುಕೊಂಡ ಮಾರ್ಗ ಉತ್ತಮವಾಗಿದ್ದು ಅದರಲ್ಲಿ ತಲ್ಲೀನತೆಯುಂಟಾಗುವಂತಿರಬೇಕು. ಮಾಡುವ ಕೆಲಸದಿಂದ, ಸುತ್ತಲ ಸಮಾಜದಲ್ಲಿ ಸಂಬಂಧಿಸಿದ ಗಿರಾಕಿಗಳ ಹೃದಯದ ಬಿಲ್ಲನ್ನು ಹೆದೆಯೇರಿಸಿ, ಝಲ್ಲೆಂದು ಒಮ್ಮೆ ಆ ಸಿಂಜಿನಿಯನ್ನು ನಾವು ಝೇಂಕರಿಸಿಬಿಟ್ಟರೆ, ’ಮೊಗೆಂಬೋ ಖುಷ್ ಹುವಾ’ ಎಂದುಕೊಳ್ಳುವಂತೆಯೇ ಬಹುಕಾಲ ಅವರಲ್ಲಿ ಅದರ ಸದ್ದು ಅನುರಣನಗೊಳ್ಳುತ್ತಲೇ ಇರಬೇಕು.

ಕೆಲವು ವಿಷಯಗಳಲ್ಲಿ ನಟ ಶಾರುಖ್ ಖಾನ್ ಹೇಳಿಕೆಗಳನ್ನು ನಾನು ಒಪ್ಪಿಕೊಳ್ಳದಿದ್ದರೂ, ಆತನ ಒಂದು ಹೇಳಿಕೆಯನ್ನು ಮೆಚ್ಚಿದ್ದೇನೆ. ಒಮ್ಮೆ ಆತ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಾರೋ ಸಿರಿವಂತರ ಮದುವೆ ಪಾರ್ಟಿಯಲ್ಲಿ ನರ್ತನಮಾಡಲು ಬಂದಾಗ, ಮಾಧ್ಯಮದವರು ಕೇಳಿದ್ದರು:"ನೀವೊಬ್ಬ ಖ್ಯಾತ ನಾಯಕನಟ, ಈ ರೀತಿ ಮದುವೆ ಪಾರ್ಟಿಗಳಲ್ಲಿ ಡ್ಯಾನ್ಸ್ ಮಾಡುವುದು ನಿಮ್ಮ ಘನತೆಗೆ ಕಮ್ಮಿಯಲ್ಲವೇ?" ಅದಕ್ಕೆ ಶಾರುಖ್ ಕೊಟ್ಟ ಉತ್ತರ ಹೀಗಿದೆ:"ನಾನೊಬ್ಬ ನಟ, ನಟನೆ-ಡ್ಯಾನ್ಸ್ ಎಲ್ಲಾ ನನ್ನಲ್ಲಿರುವ ಮಾರಾಟಮಾಡಬಲ್ಲ ಸರಕು. ನರ್ತನದಿಂದ ಅಥವಾ ನಟನೆಯಿಂದ ಉತ್ತಮ ಸಂಭಾವನೆ ಸಿಗುವುದಾದರೆ ಅದನ್ನೇಕೆ ತಿರಸ್ಕರಿಸಲಿ?" ಶಾರುಖ್ ರೀತಿಯಲ್ಲೇ ಹಲವು ಕಲಾವಿದರು ತಮ್ಮ ತಮ್ಮ ಪ್ರತಿಭೆಗಳನ್ನು ಆದಾಯವಾಗಿ ಪರಿವರ್ತಿಸಿಕೊಳ್ಳಲು ಎಲ್ಲೆಲ್ಲಿ ಅವಕಾಶ ಸಿಗುವುದೆಂದು ನೋಡುತ್ತಿರುತ್ತಾರೆ. 

ಹತ್ತು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟಂಟ್ ಒಬ್ಬರ ಕಚೇರಿಯಲ್ಲಿ ಕುಳಿತಿದ್ದೆ. ಅವರ ಮೇಜಿನಮೇಲೆ ’ನೆವರ್ ಗಿವ್-ಅಪ್’ ಎಂಬ ಚಿತ್ರವಿತ್ತು. ಚಿತ್ರದಲ್ಲಿ ಕೊಕ್ಕರೆ ಕಪ್ಪೆಯನ್ನು ನುಂಗಲು ಮುಂದಾಗಿದೆ, ಕೊಕ್ಕರೆಯ ಕುತ್ತಿಗೆಯನ್ನು ತನ್ನೆರಡೂ ಮುಂಗಾಲುಗಳಿಂದ ಕಪ್ಪೆ ಬಿಗಿಯಾಗಿ ಹಿಸುಕಿದೆ. ಅರೆಕ್ಷಣ ನನ್ನ ಮನಸ್ಸನ್ನು ಅದು ಸೆಳೆದಿತ್ತು. ಚಿತ್ರ ತಮಾಶೆಯಾಗಿದೆ, ಆದರೆ ಸಂದೇಶ ಬಲವಾಗಿದೆ. ಹಲವರು ಹಲವಾರು ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ; ಆದರೆ  ಮಾಡುವ ಯಾವೊಂದೂ ಕೆಲಸಗಳು ಅವರ ಮನಸ್ಸಿಗೆ ನೆಮ್ಮದಿ ನೀಡುವುದಿಲ್ಲ. "ಯಾಕೆ ಮಾಡುತ್ತೀರಿ" ಎಂದು ಕೇಳಿದರೆ "ಏನೋ ಸಂಬಳ ಸಿಗುತ್ತದಲ್ಲಾ, ಹೊಟ್ಟೆಪಾಡು" ಎನ್ನುತ್ತಾರೆ. ಹೊಟ್ಟೆಪಾಡಿಗಾಗಿ ಮಾತ್ರ ಕೆಲಸಮಾಡಿದರೆ ಆ ಕೆಲಸದಲ್ಲಿ ಶ್ರದ್ಧೆ ಇರುವುದಿಲ್ಲ. ಯಾವಾಗ ಕೆಲಸದಲ್ಲಿ ಶ್ರದ್ಧೆ ಇರುವುದಿಲ್ಲವೋ ಆ ಕೆಲಸ ಉತ್ತಮವಾಗಿ ನಡೆಯುವುದು ಸಾಧ್ಯವೇ ಇಲ್ಲ. ಹಳ್ಳಿಯಿಂದ ಬಂದ ಪದವೀಧರ ಹುಡುಗನೊಬ್ಬ ಬಹಳಕಾಲ ಯಾವುದೂ ಕೆಲಸ ಸಿಗದ ಕಾರಣಕ್ಕೆ ಹೋಟೆಲ್ ಒಂದರಲ್ಲಿ ವೇಟರ್ ಆಗಿ ಸೇರಿಕೊಂಡ. ತಮ್ಮ ಹಳ್ಳಿಯ ಕಡೆಯ ಯಾರಾದರೂ ತಾನಿರುವ ಹೋಟೆಲಿಗೆ ಬಂದರೆ ತನ್ನನ್ನು ಆಡಿಕೊಳ್ಳುವುದಿಲ್ಲವೇ ಎಂಬ ಅಳುಕಿನ ಜೊತೆಗೆ ತಾನು ಪದವೀಧರನಾಗಿಯೂ ಈ ಕೆಲಸ ಮಾಡಬೇಕೆ ಎಂಬ ಕೊರಗು ಅವನನ್ನು ಬಾಧಿಸುತ್ತಿತ್ತು. ಪ್ರತೀ ರಾತ್ರಿಯೂ ಮತ್ತೆ ಕೆಲಸದ್ದೇ ಚಿಂತೆ. ಹಗಲಾದರೆ ಹೋಟೆಲಿಗೆ ಬರಬೇಕು, ಬೇರೇ ಯಾವ ಕೆಲಸವನ್ನೂ ಹುಡುಕಲು ಅವಕಾಶ ಸಿಗುತ್ತಿರಲಿಲ್ಲ. ತೊಳಲಾಟಗಳ ಮಧ್ಯೆ, ಗಿರಾಕಿಗಳನ್ನು ಆದರಿಸುವಲ್ಲಿ ಅವನಿಗೆ ಯಾವುದೇ ಆಸ್ಥೆಯೂ ಇರಲಿಲ್ಲ. ಆರ್ಡರ್  ಬರೆದುಕೊಳ್ಳುವಾಗ ತಪ್ಪಾಗಿ ಕೆಲವು ಐಟೆಮ್ ಗಳನ್ನು ಸೇರಿಸಿಬಿಡುತ್ತಿದ್ದ, ಕೆಲವನ್ನು ಮರೆತು ಬರೆಯದೇ ಬಿಡುತ್ತಿದ್ದ. ಆ ಮೇಲೆ ಗಿರಾಕಿಗಳಲ್ಲಿ ಸಾರಿ ಕೇಳುತ್ತಿದ್ದ. ಇದು ಅಶ್ರದ್ಧೆಗೆ ಉದಾಹರಣೆ.

ಪ್ರತೀ ವ್ಯಕ್ತಿಗೂ ತನ್ನ ಅಂತರ್ಗತ ಅನಿಸಿಕೆಗಳಲ್ಲಿ ತಾನು ಇಂಥಾ ಕೆಲಸವನ್ನು ತುಂಬಾ ಚೆನ್ನಾಗಿ ನಿಭಾಯಿಸಬಲ್ಲೆ ಎಂದು ಗೊತ್ತಿರುತ್ತದೆ. ಕೆಲಸ ಯಾವುದೇ ಆಗಲಿ, ಆ ಕೆಲಸ ಇಷ್ಟವಾಗುವುದಾದರೆ, ಅದು ಸಮಾಜಘಾತುಕ ಕೆಲಸವಲ್ಲ ಎಂದಾದರೆ ಅದನ್ನು ಮಾಡಬಹುದಾಗಿದೆ. ಚೆನ್ನಾಗಿ ನಿಭಾಯಿಸಲು ಬರುವ ಕೆಲಸಕ್ಕೆ ಕೆಲವೊಮ್ಮೆ ಅವಕಾಶ ಸಿಗುವುದು ತಡವಾಗಬಹುದು, ಆದರೂ ಅಂತಹ ಅವಕಾಶಗಳಿಗಾಗಿ ಸದಾ ಹುಡುಕಾಟ ನಡೆಸುತ್ತಲೇ ಇರಬೇಕು. ಚೆನ್ನಾಗಿ ಮಾಡುತ್ತೇನೆ ಎಂದುಕೊಳ್ಳುವ ಆ ಕೆಲಸದಲ್ಲೂ ನೈಪುಣ್ಯ ಸಾಧಿಸಲು ಸಾಧನೆ ಮಾಡಬೇಕು. ಶಿಲ್ಪಿಯ ಮನದಲ್ಲಿ ಮೂಡಿದ ಸುಂದರ ವಿಗ್ರಹ ಮೊದಲು ಆತನಿಗೆ ಮಾತ್ರ ಗೊತ್ತು! ಸಾವಿರ ಚೇಣುಗಳನ್ನು ತಿಂದ ಶಿಲೆ ಮೂರ್ತಿಯಾಗಿ ಅನಾವರಣಗೊಳ್ಳುವವರೆಗೆ ಶಿಲ್ಪಿಯ ಕೆಲಸಕ್ಕೆ ಬೆಲೆಯೇ ಇರುವುದಿಲ್ಲ. ಮೂರ್ತಿ ಪರಿಪೂರ್ಣವಾದಮೇಲೆ ಶಿಲ್ಪಿಯ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲ!  ಸಿದ್ಧಗೊಳ್ಳುವ ಮೂರ್ತಿಯನ್ನು ಯಾರೋ ಕಿಡಿಗೇಡಿಗಳು ಭಗ್ನಗೊಳಿಸಲೂ ಬಹುದು. ಕಲೆಯ ರಸಾನುಭವ ಇಲ್ಲದವರು ಆ ಭವ್ಯ ಮೂರ್ತಿಯನ್ನು ಕಂಡರೂ ಭಾವರಹಿತರಾಗಿ ನಡೆದುಕೊಳ್ಳಬಹುದು. ಮೂರ್ತಿ ಕಡೆಯುವ ಶಿಲ್ಪಿಯ ಮನದಲ್ಲಿ ಮೂರ್ತಿಯ ಚಿತ್ರಣ ಅಸ್ಪಷ್ಟವಾಗಿದ್ದರೆ ಫಲಶ್ರುತಿಯಾಗಿ ತಯಾರಾಗುವ ಮೂರ್ತಿಯೂ ಅನಿರ್ದಿಷ್ಟ ಲಕ್ಷಣಗಳನ್ನು ಹೊಂದಿರುತ್ತದೆ; ಆಗ ಮೂರ್ತಿ ಸುಂದರವೆಂದಾಗಲೀ, ಇಂಥದ್ದೇ ವಿಗ್ರಹ ಎಂದಾಗಲೀ ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. 

ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಮನೆಯ ಮಹಡಿಯಲ್ಲೇ ರಂಗೋಲಿಗಳನ್ನು ಪ್ರದರ್ಶಿಸಿದ್ದರು. ವಾರವಾದರೂ ಒಬ್ಬನೇ ಒಬ್ಬ ವೀಕ್ಷಕನೂ ಸುಳಿದಿರಲಿಲ್ಲ. ಮುಂಬೈ ಕಡೆಯಿಂದ ರಂಗೋಲಿಯ ಪರಿಕರಗಳನ್ನು ತರಿಸಿಕೊಂಡು, ತಿಂಗಳುಗಟ್ಟಲೆ ಸಮಯ ವ್ಯಯಿಸಿ, ಗಣೇಶ, ರಾಮಾಯಣ, ವಿವೇಕಾನಂದ, ಠಾಗೋರ್, ಭಗತ್ ಸಿಂಗ್, ಶಂಕರಾಚಾರ್ಯರೇ ಮೊದಲಾದ ಹಲವು ವ್ಯಕ್ತಿ, ವಿಷಯಗಳ ಕುರಿತು  ರಚಿಸಿದ ರಂಗೋಲಿಗಳು ಅತಿವಿಶಿಷ್ಟವಾಗಿದ್ದವು, ಬಣ್ಣದ ಛಾಯಾಚಿತ್ರಗಳಂತೇ ಸ್ಫುಟವಾಗಿ ರೂಪವನ್ನು ಪರಿಪಕ್ವವಾಗಿ ಬಿಂಬಿಸಿದ್ದವು. ಅಷ್ಟೊಂದು ಸಮಯ, ಹಣ, ಶ್ರಮ ಎಲ್ಲವನ್ನೂ ವ್ಯಯಿಸಿ ನಡೆಸಿದ ಕೆಲಸವನ್ನು ಯಾರೂ ಗಮನಿಸದಿದ್ದರೆ ಹೇಗೆ? ಹಿತೈಷಿಗಳೊಬ್ಬರ ಸಲಹೆಯ ಮೇರೆಗೆ, ಗಣ್ಯರಿಂದ ಪ್ರದರ್ಶನವನ್ನು ಉದ್ಘಾಟಿಸಿದರು. ಮಾಧ್ಯಮಗಳವರನ್ನೂ ಕರೆದರು. ಯಾವಾಗ ಸುದ್ದಿ ಬಿತ್ತರಗೊಂಡಿತೋ ಆಗಿನಿಂದ ಸುಮಾರು ೧೫-೨೦ ದಿನಗಳ ತನಕ ನಿತ್ಯ ನೂರಾರು ಜನ ಬಂದು ವೀಕ್ಷಿಸಿದರು. ಅವರ ಕಲೆಯನ್ನು ಅಸ್ವಾದಿಸುವುದರ ಜೊತೆಗೆ ಅದನ್ನು ಕಲಿಸಿಕೊಡುವಂತೇ ಕೆಲವು ಹೆಂಗಸರು ಕೇಳಿಕೊಂಡರು. ಆಸಕ್ತರಿಗೆ ಅದನ್ನು ಕಲಿಸುವ ವೃತ್ತಿಯಲ್ಲಿ ರಂಗೋಲಿ ಪ್ರದರ್ಶಿಸಿದ ಮಹಿಳೆ ತೊಡಗಿಕೊಂಡಿದ್ದಾರೆ. ರಂಗೋಲಿ ಬರೆಯುವುದು ಅವರಿಗೆ ತೃಪ್ತಿ ನೀಡುವುದರ ಜೊತೆಗೆ ಆದಾಯವನ್ನೂ ನೀಡುತ್ತಿದೆ. ಅಕಸ್ಮಾತ್, ಸಂಯಮ ಕಳೆದುಕೊಂಡು ಬರೆದ ರಂಗೋಲಿಗಳನ್ನು ಅಳಿಸಿಬಿಟ್ಟಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ. 

ಅಬ್ರಹಾಂ ಲಿಂಕನ್ ತನ್ನ ಯೌವ್ವನದಲ್ಲಿ, ಮೊದಲಿಗೆ ಹೋದದ್ದು ಕ್ಯಾಪ್ಟನ್ ಆಗಿ ಯುದ್ಧ ಭೂಮಿಗೆ, ಅಲ್ಲಿ ಹುದ್ದೆ ನಿಭಾಯಿಸುವಲ್ಲಿ ಅವರು ವಿಫಲವಾದರು. ನಂತರ ಉದ್ಯಮದಲ್ಲಿ ತೊಡಗಿ ಅಲ್ಲೂ ಸಾಫಲ್ಯ ಕಾಣಲಿಲ್ಲ. ಅನಂತರ ಸ್ಪ್ರಿಂಗ್ ಫೀಲ್ಡ್ ಎಂಬಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿ, ಆ ವೃತ್ತಿಯಲ್ಲೂ ದೇಡಗತಿ ಹತ್ತಲಿಲ್ಲ. ’ಎಲ್ಲಾ ಬಿಟ್ಟ ಭಂಗಿ ನೆಟ್ಟ’ ಎಂಬ ರೀತಿಯಲ್ಲಿ ರಾಜಕಾರಣಕ್ಕೆ ಧುಮುಕಿದ ಅವರು ಪ್ರಥಮವಾಗಿ ಸಂಸದೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಅಲ್ಲಿನ ಕಾಂಗ್ರೆಸ್ಸಿಗೆ ನಾಮನಿರ್ದೇಶಿತ ವ್ಯಕ್ತಿಯಾಗಿ ಆಯ್ಕೆಯಾಗ ಬಯಸಿ ಅದರಲ್ಲೂ ಯಶಸ್ಸು ಕಾಣಲಿಲ್ಲ. ಜನರಲ್ ಲ್ಯಾಂಡ್ ಆಫೀಸ್ ಕಮಿಶನರ್ ಆಗಿ ನೇಮಕಗೊಳ್ಳಲು ಸಲ್ಲಿಸಿದ ಅರ್ಜಿಯೂ ತಿರಸ್ಕೃತವಾಯ್ತು. ೧೮೫೪ ರಲ್ಲಿ ಸೆನೇಟ್ ಸದಸ್ಯರಾಗಲು ಪ್ರಯತ್ನಿಸಿ ನಕಾರಾತ್ಮಕ ಫಲಶ್ರುತಿ ಪಡೆದರು. ೧೮೫೬ ರಲ್ಲಿ ಉಪಾಧ್ಯಕ್ಷರಾಗಲು ಪ್ರಯತ್ನಿಸಿ ವೈಫಲ್ಯ ಅನುಭವಿಸಿದರು. ೧೮೫೮ ರಲ್ಲಿ ಮತ್ತೆ ಸೆನೇಟ್ ಸದಸ್ಯಸ್ಥಾನಕ್ಕೆ ಯತ್ನಿಸಿ ಆಗಲೂ ಸಹ ಆಯ್ಕೆಗೊಳ್ಳಲಿಲ್ಲ. ಆದರೆ, ತಡವಾಗಿಯಾದರೂ, ಅಮೇರಿಕಾ ಸಂಯುಕ್ತ ಸಂಸ್ಥಾನದ ೧೬ನೇ ಅಧ್ಯಕ್ಷರಾಗಿ ಆಡಳಿತ ನಡೆಸಿದರು ಎಂಬುದು ಗಮನಾರ್ಹ.

ವಿನ್ ಸ್ಟನ್ ಚರ್ಚಿಲ್ ೬ನೇ ತರಗತಿಯಲ್ಲೇ ಅನುತ್ತೀರ್ಣರಾದರು. ಸಾರ್ವಜನಿಕ ಕಚೇರಿಯಲ್ಲಿ ಆಡಳಿತಾತ್ಮಕ ಹುದ್ದೆ ನಿರ್ವಹಿಸಲು ಸ್ಪರ್ಧಿಸಿ ಸೋಲುತ್ತಲೇ ದಿನಗಳೆದ ಅವರು ೬೨ ನೇ ವಯಸ್ಸಿನಲ್ಲಿ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದರು. ಚಾರ್ಲ್ಸ್ ಡಾರ್ವಿನ್ ವೈದ್ಯಕೀಯ ವಿದ್ಯಾರ್ಜನೆಯನ್ನು ಕೈಬಿಟ್ಟಾಗ ಅವರ ತಂದೆ " ನೀನು ಯಾವುದಕ್ಕೂ ಲಾಯಕ್ಕಲ್ಲ. ನೀನೊಬ್ಬ ಗುರಿಕಾರ, ನಾಯಿಗಳನ್ನೂ ಹೆಗ್ಗಣಗಳನ್ನೂ ಹೊಡೆಯುವವ" ಎಂದು ಮೂದಲಿಸಿದರು. ಅವರ ಶಿಕ್ಷಕರು, ಬಂಧು-ಬಳಗ ಎಲ್ಲರೂ ಸಹ, ಡಾರ್ವಿನ್ ತೀರಾ ದಡ್ಡ ವ್ಯಕ್ತಿ ಎಂದುಕೊಂಡರು; ಕಾಲಾನಂತರದಲ್ಲಿ ಡಾರ್ವಿನ್ ವಿಕಾಸವಾದವನ್ನು ಮಂಡಿಸಿದ್ದು ಎಲ್ಲರಿಗೂ ತಿಳಿದೇ ಇದೆ. "ನೀನೊಬ್ಬ ಯಾವುದನ್ನು ಕಲಿಯಲೂ ಆಗದ ಶುದ್ಧ ಮೂರ್ಖ" ಎಂದು ಶಾಲೆಯಲ್ಲಿ ಬೈಸಿಕೊಳ್ಳುತ್ತಿದ್ದ ಥಾಮಸ್ ಎಡಿಸನ್, ನಾನ್-ಪ್ರೊಡಕ್ಟಿವ್[ನಿರುತ್ಪನ್ನಶೀಲ] ಕೆಲಸಗಾರನೆನಿಸಿಕೊಂಡು ಎರಡು ಕಂಪನಿಗಳ ಕೆಲಸಗಳಿಂದ ಹೊರದೂಡಲ್ಪಟ್ಟಿದ್ದರು. ವಿದ್ಯುತ್ ಬಲ್ಬ್ ಸಂಶೋಧಿಸುವುದಕ್ಕೂ ಮುನ್ನ ಸಾವಿರ ಸರ್ತಿ ಅದನ್ನು ಪ್ರಯತ್ನಿಸಿ ಅನುತ್ತೀರ್ಣರಾಗಿದ್ದರು. "ಸಾವಿರ ಸರ್ತಿ ಯಶಸ್ಸು ಕಾಣದ್ದರ ಹಿಂದೆ ನಿಮಗೆ ಏನನ್ನಿಸುತ್ತಿತ್ತು?" ಎಂದು ಸಂದರ್ಶಕ ಕೇಳಿದ ಪ್ರಶ್ನೆಗೆ "ನಾನು ಅನುತ್ತೀರ್ಣನಾಗಲಿಲ್ಲ, ಬೆಳಕಿನ ಬಲ್ಬ್ ಎಂಬುದು ಸಾವಿರ ಹಂತಗಳಲ್ಲಿ ಆವಿಷ್ಕಾರಗೊಂಡಿದೆ" ಎಂದರಂತೆ!

ಐನ್ ಸ್ಟೀನ್ ತನ್ನ ನಾಲ್ಕನೇ ವರ್ಷದ ವರೆಗೆ ಮಾತನ್ನೇ ಆಡಲಿಲ್ಲ ಮತ್ತು ಏಳನೇ ವಯಸ್ಸಿನವರೆಗೆ ಓದಲೇ ಇಲ್ಲ! ಬುದ್ಧಿಮಟ್ಟದಲ್ಲಿ ಸಾಮಾನ್ಯ ಮಕ್ಕಳಿಗಿಂತಾ ತೀರಾ ಕೆಳಗಿನವನು ಎಂದು ತಂದೆ-ತಾಯಿ ಚಿಂತಿಸುತ್ತಿದ್ದರೆ, "ನಿಮ್ಮ ಮಗ ತುಂಬಾ ನಿಧಾನ, ಯಾರಜೊತೆಗೂ ಬೆರೆಯುವವನಲ್ಲ, ಕೆಲಸಕ್ಕೆ ಬಾರದ ಕನಸುಗಳಲ್ಲಿ ತೇಲಾಡುವ ಗುರಿಯಿಲ್ಲದ ಮೂರ್ಖ" ಎಂದವರು ಅವನ ಶಿಕ್ಷಕರು. ಮಾಮೂಲೀ ಶಾಲೆಯಿಂದ ಹೊರದಬ್ಬಲ್ಪಟ್ಟ ನಂತರ ’ಝುರಿಚ್ ಪಾಲಿಟೆಕ್ನಿಕ್ ಸ್ಕೂಲ್’ ನಲ್ಲಿ ಪ್ರವೇಶ ದೊರೆಯಲಿಲ್ಲ. ನಂತರ ನಿಧಾನವಾಗಿ ಮಾತನಾಡಲು ಬರೆಯಲು-ಓದಲು ಕಲಿತ ಬಾಲ ಐನ್ ಸ್ಟೀನ್ ಸ್ವಲ್ಪ ಗಣಿತಗುಣಿತಗಳನ್ನೂ ಮಾಡತೊಡಗಿದ. ಐನ್ ಸ್ಟೀನ್ ಬಗ್ಗೆ ಮುಂದೇನಾಯ್ತೆಂದು ಬಿಡಿಸ ಹೇಳಬೇಕಿಲ್ಲವಲ್ಲ! ಲೂಯಿ ಪ್ಯಾಸ್ಚರ್ ಒಬ್ಬ ಅತೀ ಸಾಮಾನ್ಯ ವಿದ್ಯಾರ್ಥಿಯಾಗಿದ್ದು ೨೨ ವಿದ್ಯಾರ್ಥಿಗಳಿದ್ದ ಚಿಕ್ಕ ಗುಂಪಿನಲ್ಲೇ ೧೫ನೇ ಸ್ಥಾನದಲ್ಲಿ ಉತ್ತೀರ್ಣನಾಗುತ್ತಿದ್ದರು. ಹೆನ್ರಿ ಫೋರ್ಡ್ ಗೆ  ಓದಲು-ಬರೆಯಲು ಬರುತ್ತಿರಲಿಲ್ಲ. ೫ ಸರ್ತಿ ಉದ್ಯಮದಲ್ಲಿ ಸಂಪೂರ್ಣ ವಿಫಲರಾಗಿದ್ದ ಹೆನ್ರಿ ಫೋರ್ಡ್ ನಂತರ ವಾಹನಗಳನ್ನು ತಯಾರಿಸಿ ಖ್ಯಾತನಾಮರಾದರು.

ಮೋಜಿನ ವಿಷಯ ಕೇಳಿ. ವಾಲ್ಟ್ ಡಿಸ್ನಿಯವರು ಒಮ್ಮೆ ಒಬ್ಬ ದಿನಪತ್ರಿಕೆಯ ಸಂಪಾದಕರಿಂದ "ಯಾವುದೇ ಊಹೆಯಾಗಲೀ ಕಲ್ಪನೆಯಾಗಲೀ ಇಲ್ಲದ ನಿರುಪಯುಕ್ತ ವ್ಯಕ್ತಿ" ಎಂದು ಬೈಸಿಕೊಂಡಿದ್ದರು. ಡಿಸ್ನಿ ಲ್ಯಾಂಡ್ ಕಟ್ಟುವ ಮೊದಲು ಅನೇಕಬಾರಿ ಅವರು ದಿವಾಳಿಯಾಗಿದ್ದರು! ಒಂದಷ್ಟು ಕಾಕಪೋಕ ಜನರ ಅಡ್ಡೆಯಾಗುತ್ತದೆ ಎಂಬ ಹೇಳಿಕೆನೀಡಿ  ಅನ್ ಹೀಮ್ ನಗರಪಾಲಿಕೆ ಡಿಸ್ನಿ ಪಾರ್ಕ್ ಗೆ ಜಾಗ ನೀಡಲು ನಿರಾಕರಿಸಿತ್ತು. ಡಿಸ್ನಿ ಲ್ಯಾಂಡ್ ಬಗ್ಗೆ ಈಗ ಯಾರಿಗೆ ತಿಳಿದಿಲ್ಲ? ಅದರಂತೆಯೇ ಹಾಲೀವುಡ್ಡಿನ ಪ್ರಮುಖ ಜನರೆಲ್ಲಾ ಒಂದುಕಾಲದಲ್ಲಿ ಚಾರ್ಲಿ ಚಾಪ್ಲಿನ್ ರ ಹಾಸ್ಯ ಅರ್ಥಹೀನವೆಂದು ಹೀಗಳೆದಿದ್ದರು. ಅದೆಲ್ಲಾ ಹಾಗಿರಲಿ, ಬೀಥೋವನ್ ಪ್ರಥಮವಾಗಿ ವಯೋಲಿನ್ ನುಡಿಸಲು ಆರಂಭಿಸಿದ್ದು ಎದ್ದೋಡಿ ರಾಗಗಳಿಂದ; ಅಪಸ್ವರಗಳ ಅಲೆಯನ್ನು ಕೇಳಲಾರದೇ ಕೇಳುತ್ತಿದ್ದ ಶಿಕ್ಷಕರು "ಭರವಸೆಯಿಡಲಾಗದ ಕೆಟ್ಟ ಸಂಗೀತ ನಿರ್ದೇಶಕ" ಎಂದು ಹೆಸರಿಸಿದ್ದರು. ಸ್ವತಃ ಕಿವುಡನಾಗಿದ್ದ ಬಿಥೋವನ್ ಶ್ರೋತ್ರಗಳಿಗೆ ಮುದನೀಡಬಲ್ಲ ಐದು ಸ್ವರಮೇಳನಗಳನ್ನು ಒದಗಿಸಿದ್ದಾರೆ. 

ನಮ್ಮ ಭಾರತದಲ್ಲೇ ತೆಗೆದುಕೊಳ್ಳಿ: ಕ್ರೀಡಾಪಟು ಮಾಲತಿ ಹೊಳ್ಳ ಇದ್ದಾರೆ, ಕೃತಕ ಕಾಲಿನಲ್ಲಿ ನಿಬ್ಬೆರಗಾಗುವಂತೇ ನರ್ತಿಸುವ ಸುಧಾ ಚಂದ್ರನ್ ಇದ್ದಾರೆ. ದಿ. ಪುಟ್ಟರಾಜ ಗವಾಯಿಗಳು ಕುರುಡರಾಗಿದ್ದರೂ ಶ್ರೇಷ್ಠ ಸಂಗೀತಗಾರರಾಗಿದ್ದರು-ಕಳೆದುಹೋಗಿದ್ದ ಚೊಂಬು ಅದೆಲ್ಲೋ ಸದ್ದು ಹೊರಡಿಸಿದಾಗ, ಸದ್ದನ್ನೇ ಆಲಿಸಿ ಅದು ತಮ್ಮ ಆಶ್ರಮದ ಚೊಂಬು ಎಂದು ಗುರುತಿಸಿದ್ದರು.  ಇದೂ ಅಲ್ಲದೇ ಕೈಗಳಿಲ್ಲದೇ ಕಾಲಿನಿಂದಲೇ ಚಿತ್ರಗಳನ್ನು ಬರೆಯುವ ಕಲಾವಿದರಿದ್ದಾರೆ. ಅಂದರೆ ಅಂಗವೈಕಲ್ಯ ಎಂಬುದು   ಇಂಥವರಿಗೆ ಅಡ್ಡಿಯಾಗಿ ಕಾಣಲೇ ಇಲ್ಲ. ಅವರಲ್ಲೆಲ್ಲಾ ಇದ್ದಿದ್ದು ಒಂದೇ: ಅತೀವ ಶ್ರದ್ಧೆ. ಗಣಿತಜ್ಞ ರಾಮಾನುಜನ್ ಕುಬ್ಜರಾಗಿದ್ದರು ಮತ್ತು ಜಾಸ್ತಿ ಓದಿದವರೂ ಕೂಡ ಅಲ್ಲ. ಉದರಂಭರ್ಣೆಗಾಗಿ ಮದ್ರಾಸ್ ಏರ್ ಪೋರ್ಟಿನಲ್ಲಿ   ಕಾರಕೂನನಾಗಿ ಕೆಲಸ ಮಾಡುತ್ತಿದ್ದರು. ಆದರೆ ಮನಸ್ಸಿನೊಳಗೆ ಗಣಿತದ ಸೂತ್ರಗಳು ಪಟಪಟ ಪಟಪಟನೆ ಮೂಡುತ್ತಿದ್ದವು; ಮೂಡಿದ ಸೂತ್ರಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರು. ಗಣಿತದ ಮೇಲಿನ ಸಂಶೋಧಕ ಬುದ್ಧಿ ಅವರನ್ನು ವಿದೇಶಕ್ಕೆ ಕರೆದೊಯ್ದಿತು. ಬಡತನದಲ್ಲಿ ಬೀದಿ ದೀಪದಲ್ಲಿ ಓದಿ ಎಂಜಿನೀಯರ್ ಆಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರಿಗೆ ಅಣೆಕಟ್ಟು ನಿರ್ಮಿಸಲು ಹೇಳಿಕೊಡುವ ಗುರು ಯಾರೂ ಇರಲಿಲ್ಲ! ಸೀಮೆಂಟ್ ಸರಿಯಾಗಿ ಆವಿಷ್ಕಾರ ಆಗಿಲ್ಲದ ಆ ದಿನಗಳಲ್ಲಿ  ಸುಣ್ಣ-ಮಣ್ಣು-ಬೆಲ್ಲ-ಕೋಳಿಮೊಟ್ಟೆ ಇಂಥಾದ್ದನ್ನು ಮಿಶ್ರಣಮಾಡಿ ಕನ್ನಂಬಾಡಿ ಕಟ್ಟೆ ಕಟ್ಟಿದರು; ಆ ಕಟ್ಟೆ ಇಂದಿಗೂ ಗಟ್ಟಿಯಾಗಿದೆ! ಅವರ ಕೊಡುಗೆಗಳು ಜಗದ್ವಿಖ್ಯಾತವಾಗಿದ್ದು ಅವರಲ್ಲಿನ ಎಂಜಿನೀಯರ್ ತಾದಾತ್ಮ್ಯತೆಯಿಂದ ತನ್ನ ಕೆಲಸಗಳಲ್ಲಿ ತೊಡಗಿಕೊಂಡು ಯಶಸ್ಸು ಪಡೆದಿದ್ದಕ್ಕಾಗಿ.      

’ನೆವರ್ ಗಿವ್ ಅಪ್’ ಚಿತ್ರ ನೀಡಿದ ಸಂದೇಶದ ಆಳಕ್ಕೆ ಇಳಿಯುತ್ತಾ ಇಳಿಯುತ್ತಾ, ಇನ್ನೊಂದು ಮನಕಲಕುವ ಘಟನೆಯನ್ನು ತಿಳಿದುಕೊಂಡೆ: 
 

ಆಯೇಷಾ ಮಹಮ್ಮದ್ ಜಾಯ್ ಎಂಬ ಅಪ್ಘಾನಿಸ್ತಾನದ ಹೆಣ್ಣುಮಗಳ ಕಿವಿ-ಮೂಗುಗಳನ್ನು ಕ್ರೂರಿಯಾದ ಆಕೆಯ ಗಂಡ ಕತ್ತರಿಸಿಹಾಕಿದ್ದ. ಟೈಮ್ ಮ್ಯಾಗಝಿನ್ ನ ಮುಖಪುಟ ವರದಿಯಲ್ಲಿ ಕಾಣಿಸಿಕೊಂಡ ಈ ಮಹಿಳೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಕ್ಕೆ ಜಾಗತಿಕ ಮಟ್ಟದ ಗುರುತಾದಳು. ಹೇಗೋ ಕಷ್ಟಪಟ್ಟು ಅಪ್ಘಾನಿಸ್ತಾನದಿಂದ ಅಮೇರಿಕಾ ತಲ್ಪಿದ ಆಕೆ, ಅಲ್ಲಿನ ನುರಿತ ವೈದ್ಯರ ಸಹಾಯದಿಂದ, ಮರುಸೃಷ್ಟಿಕಾರಕ ಶಸ್ತ್ರಚಿಕಿತ್ಸೆಗಳಿಂದ ಮತ್ತೆ ಕಿವಿ-ಮೂಗುಗಳನ್ನು [ಸ್ವಲ್ಪ ವಿಭಿನ್ನವಾಗಿದ್ದರೂ]ಪಡೆದುಕೊಳ್ಳುವಲ್ಲಿ ಯಶಸ್ಸು ಪಡೆದು ಜೀವನ ನಡೆಸುತ್ತಿದ್ದಾಳೆ. ಗಂಡನ ದೈನಂದಿನ ದೈಹಿಕ-ಮಾನಸಿಕ ದೌರ್ಜನ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇ ಕಿವಿ-ಮೂಗುಗಳನ್ನು ಕತ್ತರಿಸಲು ಕಾರಣವಾಗಿತ್ತಂತೆ! ೧೨ ವರ್ಷದ ಬಾಲೆಯಾಗಿದ್ದ ಅವಳನ್ನು, ಸಾಲ ತೀರಿಸುವ ಸಲುವಾಗಿ ಆಕೆಯ ತಂದೆ, ನಂತರ ಆಕೆಯ ಗಂಡನೆನಿಸಿದ್ದ ತಾಲಿಬಾನಿ ಉಗ್ರನಿಗೆ ಮಾರಿಬಿಟ್ಟಿದ್ದನಂತೆ. ಕುರಿದೊಡ್ಡಿಯಲ್ಲಿ ಮಲಗುವಂತೇ ಮಾಡುತ್ತಿದ್ದ ಗಂಡನ ಚಿತ್ರಹಿಂಸೆ ಸಹಿಸಲಸಾಧ್ಯವಾಗಿತ್ತಂತೆ. ಗಂಡನನ್ನು ಬಿಟ್ಟು ಓಡಿಹೋಗಿ ಇನ್ನೆಲ್ಲಾದರೂ ಬದುಕಿಕೊಳ್ಳಲು ಯತ್ನಿಸಿದ ಆಕೆಯನ್ನು ಹುಡುಕಿ ಅಟ್ಟಿಸಿಕೊಂಡು ಬಂದ ಉಗ್ರನ ಮನೆಯವರು ಹತ್ತಿರದ ಪರ್ವತಶ್ರೇಣಿಯಲ್ಲೇ ಸೆರೆಹಿಡಿದಿದ್ದರಂತೆ. ಓಡಿಹೋಗಲು ಪ್ರಯತ್ನಿಸಿದ್ದಕ್ಕೆ ಶಿಕ್ಷೆಯಾಗಿ ಸ್ಥಳದಲ್ಲೇ ಆಕೆಯ ಕಿವಿ-ಮೂಗುಗಳನ್ನು ಕತ್ತರಿಸಿ- ರಕ್ತಸ್ರಾವವಾಗಿ ಸಾಯಲು ಬಿಟ್ಟಿದ್ದರಂತೆ ಉಗ್ರ ಮತ್ತು ಅವನ ಬಳಗದವರು. ಸಾವರಿಸಿಕೊಂಡು ತೆವಳುತ್ತಾ ತನ್ನ ಅಜ್ಜನ ಮನೆಯನ್ನು ಸೇರಿಕೊಂಡ ಆಕೆಯನ್ನು, ಆಕೆಯ ತಂದೆ ಬಹಳ ಪ್ರಯಾಸಪಟ್ಟು ಅಮೇರಿಕಾದ ಅಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾದನಂತೆ. ಹತ್ತು ವಾರಗಳ ಕಾಲ ಆಸ್ಪತ್ರೆಯಲ್ಲೇ ಉಳಿದ ಆಯೇಶಾಳಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯ್ತಂತೆ.

ಸಿ.ಎನ್.ಎನ್ ಚಾನೆಲ್ ಗೆ ಮಾಹಿತಿ ನೀಡಿದ ಆಕೆ ಹೇಳಿದ್ದು : "ಅವರು ಕಿವಿ-ಮೂಗುಗಳನ್ನು ಕತ್ತರಿಸಿಹಾಕಿದಾಗ ನಾನು ಸತ್ತುಹೋಗಿದ್ದೆ ಎಂದುಕೊಂಡಿದ್ದೆ! ಮಧ್ಯರಾತ್ರಿಯಲ್ಲಿ ನನಗೆ ಎಚ್ಚರವಾಗಿ ಮೂಗಿನಲ್ಲಿ ತಣ್ಣೀರು ಬಂದಂತಹ ಅನುಭವ ಆಯ್ತು. ನಾನು ಕಣ್ತೆರೆದೆನಾದರೂ ರಕ್ತಸಿಕ್ತ ಕಣ್ಣಿನಿಂದ ಏನನ್ನೂ ನೋಡಲು ಸಾಧ್ಯವಾಗಲಿಲ್ಲ."

೨೦೧೦ರಲ್ಲಿ ಗ್ರಾಸ್ಮನ್ ಬರ್ನ್ ಫೌಂಡೇಶನ್ ಎಂಬ ಸಂಸ್ಥೆ, ಅಕೆಯನ್ನು ಅಪ್ಘಾನಿಸ್ತಾನದಿಂದ ಅಮೇರಿಕಾಕ್ಕೆ ಕದ್ದು ಸಾಗಿಸಿತಂತೆ. ಅಲ್ಲಿ ನ್ಯೂಯಾರ್ಕ್ ನಗರದ ಸಮಾಜಸೇವಕ ಸ್ತ್ರೀಯರು ಅವಳನ್ನು ಸ್ವೀಕರಿಸಿ. ಅವಳ ಚಿಕಿತ್ಸೆ, ಪುನರ್ವಸತಿ, ಮುಂದಿನ ಕಲಿಕೆ ಎಲ್ಲದಕ್ಕೂ ಏರ್ಪಾಟು ಮಾಡಿದರಂತೆ. ಅಮೇರಿಕಾಕ್ಕೆ ಬಂದ ಕೆಲಸಮಯದಲ್ಲೇ ಅವಳನ್ನು ಸಂದರ್ಶಿಸಿದ ಟೈಮ್ಸ್ ಮ್ಯಾಗಜಿನ್, ಅವಳ ಬಗ್ಗೆ ಪ್ರಕಟಿಸಿದ ಲೇಖನ ಓದಿ, ಅಪ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗತಿಕಮಟ್ಟದಲ್ಲಿ ಚರ್ಚೆಗಳಾದವು. ನಂತರ ನಡೆದ ಸಂಕೀರ್ಣ ಶಸ್ತ್ರ ಚಿಕಿತ್ಸೆಯಲ್ಲಿ, ಸಿಲಿಕಾನ್ ಬಳಸಿಕೊಂಡು ಅವಳ ಹಣೆಯನ್ನು ಪುಗ್ಗೆಯಂತೇ ಹಿಗ್ಗಿಸಿ, ಅಲ್ಲಿ ದ್ರವಪದಾರ್ಥವನ್ನು ತುಂಬಿ, ಹೆಚ್ಚಿಗೆಯಾಗುವ ಚರ್ಮವನ್ನು ಅಲ್ಲಿಂದ ತೆಗೆದುಕೊಂಡು, ಇನ್ನಷ್ಟನ್ನು ಆಕೆಯ ತೋಳುಗಳಿಂದ ತೆಗೆದುಕೊಂಡು, ಹೊಸದಾಗಿ ಮೂಗನ್ನು ಸಿದ್ಧಪಡಿಸಿದರು. ಶಸ್ತ್ರಕ್ರಿಯೆಯ ನಂತರದ ಜೀವನದಲ್ಲಿ ಪ್ರಥಮಬಾರಿಗೆ ಟೆಲಿವಿಷನ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ತಾನು ಸಂತೋಷವಾಗಿದ್ದು ತನ್ನ ಕಥೆಯನ್ನು ಎಲ್ಲೆಡೆ ಬಿತ್ತರಿಸುವ ಮೂಲಕ ಜಗತ್ತಿನ ಜನರಲ್ಲಿ ತಮ್ಮತನದಲ್ಲಿ ಭರವಸೆ ಬೆಳೆಸಿಕೊಳ್ಳುವುದರ ಬಗ್ಗೆ ಹೇಳಬಯಸಿದ್ದೇನೆ ಎಂದಿದ್ದಾಳೆ. ಅದರಲ್ಲೂ ದೌರ್ಜನ್ಯಗಳಿಂದ ಬಳಲುವ ಮಹಿಳೆಯರು ಎದೆಗುಂದದೇ ಹೆಚ್ಚಿನ ಭರವಸೆಯನ್ನು ಇಟ್ಟುಕೊಳ್ಳಬೇಕೆಂದು ತಿಳಿಸಿದ್ದಾಳೆ.       

ಯಾವುದೋ ಕ್ಷುಲ್ಲಕ ಕಾರಣಗಳಿಗೆ, ಮನಸ್ಸಿನ ಯಾವುದೋ ದುರ್ಬಲ ಕ್ಷಣಗಳಲ್ಲಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ವಿದ್ಯಾರ್ಥಿಗಳನ್ನೂ, ವೃತ್ತಿಪರರನ್ನೂ ಕಾಣುತ್ತೇವೆ. ದೇಶದ ಅಪ್ರತಿಮ ಬಿಲ್ಲುಗಾರ್ತಿಯೋರ್ವರು ಆತ್ಮಹತ್ಯೆಮಾಡಿಕೊಂಡರೆಂದು ವರದಿಯಾಗಿದೆ. ಆತ್ಮಹತ್ಯೆ ಸಮಸ್ಯೆಗಳಿಗೆ ಪರಿಹಾರವಲ್ಲ; ಆತ್ಮಹತ್ಯೆಯಿಂದ ಸಮಸ್ಯೆಗಳು ಮುಂದಿನ ಜನ್ಮಗಳಲ್ಲಿ ಇನ್ನೂ ಬಿಗಡಾಯಿಸಿ ಆ ವಿಷವರ್ತುಲದಿಂದ ಬಿಡುಗಡೆಯೇ ಇರುವುದಿಲ್ಲ. ಹುಟ್ಟಿದ ಪ್ರತೀ ವ್ಯಕ್ತಿಯೂ ಒಂದಿಲ್ಲೊಂದು ದಿನ ಅವನದೇ/ಅವಳದೇ ಆದ ಪ್ರತಿಭೆಯನ್ನು ಹೊರಜಗತ್ತಿಗೆ ತೋರ್ಪಡಿಸುವ ಅವಕಾಶಗಳು ಒದಗುತ್ತವೆ. ಸಾವಿರ ಅಡಿಗಳ ಆಳಕ್ಕೆ ಹೋದ ಗಣಿಯಲ್ಲಿ ಇನ್ನೇನು ಒಂದೆರಡು ಅಡಿ ಹೋದರೆ ಚಿನ್ನದ ಅದಿರು ದೊರೆಯಬಹುದಾದ ಸನ್ನಿವೇಶಗಳು ಇರುತ್ತವೆ; ಸಿಗುವುದಿಲ್ಲವೆಂಬ ವಿಷಾದದ ಛಾಯೆ ಆವರಿಸಿದರೆ ಪ್ರಯತ್ನ ನಿಂತು ಹೋಗುತ್ತದೆ, ಗಣಿಯನ್ನು ಮುಚ್ಚಲಾಗುತ್ತದೆ ಅಲ್ಲವೇ? ನೆವರ್ ಗಿವ್ ಅಪ್ ಎಂಬ ಚಿತ್ರವನ್ನು ಸದಾ ಇಟ್ಟುಕೊಳ್ಳಿ, ಯಶಸ್ಸು ಸಿಗದೇ ಬೇಸರವಾದಾಗ ತೆಗೆದು ನೋಡಿ.

ಇನ್ನೊಂದನ್ನು ಹೇಳಲು ಮರೆತೆ: ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ನಿತ್ಯವೂ ನಿಮ್ಮ ಮನಸ್ಸಿಗೆ ಹೇಳಿಕೊಳ್ಳಿ. ಮನಸ್ಸು, ಬುದ್ಧಿ-ಚಿತ್ತ-ಅಹಂಕಾರಗಳಿಂದ ಕೂಡಿದೆ. ಮನಸ್ಸಿನ ಮರೆಯಲ್ಲಿ ಅಡಗಿರುವ ಆತ್ಮ ಅದಮ್ಯ ಚೇತನವಾಗಿದೆ, ಅದಕ್ಕೆ ಅದ್ಭುತ ಶಕ್ತಿಯಿದೆ. ಆ ಶಕ್ತಿಯನ್ನು ಪ್ರಚುರಗೊಳಿಸಲು ನಮ್ಮ ನಮ್ಮ ಮನಸ್ಸಿಗೆ ನಾವೇ ಧನಾತ್ಮಕ ಸಂದೇಶಗಳನ್ನು ಕೊಡುತ್ತಿರಬೇಕು. ಇದೇ ಕಾರಣಕ್ಕಾಗಿ ನಮ್ಮ ಪೂರ್ವಜರು ನಾಮ ಜಪವನ್ನೂ ಹೇಳಿದ್ದಾರೆ. ಪ್ರತಿನಿತ್ಯ ಆಗಾಗ ಯಶಸ್ಸು ಪಡೆಯುತ್ತೇನೆ ಎಂದು ಮನಸ್ಸಿಗೆ ಹೇಳಿಕೊಳ್ಳುತ್ತಿರುವುದರಿಂದ ಮನಸ್ಸಿನ ಖಿನ್ನತೆ ದೂರವಾಗುತ್ತದೆ. ಮನಸ್ಸು ಪುನಶ್ಚೇತನ ಪಡೆಯುತ್ತದೆ. ಜೀವನದ ಹೆಜ್ಜೆಗಳ ಸಾಲು ಸೋಲಿನದಲ್ಲ, ಅವು ಕಲಿಕೆಯ ಸೋಪಾನ. ಮಗು ನಡೆಯಲು ಕಲಿಯುವಾಗ ಎಡವುತ್ತದೆ, ಬಿದ್ದು ಬಿದ್ದು ಎದ್ದು ಎದ್ದು ಅಂತೂ ನಿಂತು, ಛಲದಿಂದ ನಡೆಯುವುದನ್ನು ಅಭ್ಯಾಸಮಾಡಿಕೊಳ್ಳುತ್ತದೆ. ಮಗುವಿನ ಆ ಪ್ರಯತ್ನವೇ ಎಲ್ಲದಕ್ಕೂ ಮಾದರಿಯಾಗಿದೆ. ನಿಮ್ಮಲ್ಲಿನ ಯಾವುದೋ ಸರಕಿಗೆ ಡಿಮಾಂಡ್ ಬರುತ್ತದೆ, ಅದು ಯಾವ ಸರಕು ಎಂಬುದು ನಿಮ್ಮ ಅಂತರಂಗಕ್ಕೆ ಗೊತ್ತಾಗಿರುತ್ತದೆ.  ಬೇಡದ ಹಲವು ಸರಕುಗಳ ರಾಶಿಯ ಆಳದಿಂದ ಆ ಉತ್ತಮ ಸರಕನ್ನು ಮೇಲಕ್ಕೆ ತೆಗೆಯಿರಿ. ನಿಮ್ಮ ಆ ಪ್ರತಿಭೆ ಪ್ರಕಾಶಿತವಾದಾಗ ನಿಮಗೆ ಆದಾಯವೂ ಸಿಗುತ್ತದೆ, ಮಾನ-ಸನ್ಮಾನವೂ ದೊರೆಯುತ್ತದೆ. ಸೋ, ನೆವರ್ ಗಿವ್-ಅಪ್!!