ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 18, 2010

ಸೃಷ್ಟಿ - ಸುರಭೋಗ

ಸೃಷ್ಟಿಯ ಸೊಬಗು ಅನನ್ಯ-ಅಪರಿಮಿತ. ಅದರಿಂದ ಸಿಗುವ ಆನಂದವೇ ಬೇರೆ! ಆ ಆತ್ಮತೃಪ್ತಿ ದುಡ್ಡುಕೊಟ್ಟು ಕೊಂಡುಕೊಳ್ಳಲಾಗದ್ದು ! ಎಷ್ಟೇ ದುಡ್ದಿರಲಿ ಅದರಿಂದ ಮಾತ್ರವೇ ಸುಖ-ನೆಮ್ಮದಿ ಎಂಬುದು ಸುಳ್ಳು. ಮುಂದಿನವಾರ 'ತಲಕಾಡಿಗೆ ಪಿಕ್ನಿಕ್ ಇದೆ' ಅನ್ನಿ ನಮ್ಮೆಲ್ಲರ ಕಿವಿ ನಿಮಿರುತ್ತದೆ! ಯವುದೋ ನಿಸರ್ಗಧಾಮವೆಂದರೆ, ಜಲಪಾತವೆಂದರೆ ಇದ್ದ-ಬದ್ದ ರಜಗುಜರಾಯಿಸಿ ಹೊರಟುಬಿಡುತ್ತೇವೆ, ಸ್ವಲ್ಪ ನೆಗಡಿ-ಜ್ವರ ಇದ್ದರೂ ಮಾತ್ರೆ ತೆಗೆದುಕೊಂಡಾದರೂ ಪ್ರವಾಸ ಹೊರಡುತ್ತೇವೆ! ಯಾಕೆಂದರೆ ಮನುಷ್ಯ ಕೂಡ ಒಂದು ಪ್ರಾಣಿ. ಇಹದ ಪ್ರತೀ ಜೀವಿಯೂ ಸೃಷ್ಟಿಯ ನಿಯಮಕ್ಕೊಳಪಟ್ಟಿದೆ. 'ಹಸಿರು' ಕಣ್ಣಿಗೆ ಹಬ್ಬವನ್ನು ಕಟ್ಟುತ್ತದೆ ! ನಿತ್ಯ ಹಸಿರಿನ ವನಗಳಲ್ಲಿ ಕಾಡು ಪ್ರಾಣಿಗಳ-ಪಕ್ಷಿಗಳ ಆವಾಸದ ಮಧ್ಯೆ ಒಂದಷ್ಟು ಹೊತ್ತು ಕಳೆದರೆ ಮನಸ್ಸಿಗೆ ಪುನಃಶ್ಚೇತನ ! ಅವುಗಳ ನಿತ್ಯ ನೈಸರ್ಗಿಕ ಬದುಕು-ಹಾರುವ-ಕೂಗುವ-ಕುಣಿಯುವ ರೀತಿ ನಮಗೆ ಹರುಷವನ್ನುಂಟುಮಾಡುತ್ತದೆ. ಬಹಳ ದಿನಗಳ ಬಳಿಕ ತಮಗೆ ಇದರಬಗೆಗೊಂದು ಗೀತೆ ಕಟ್ಟಿಕೊಡುತ್ತಿದ್ದೇನೆ. ನೀವಿದನ್ನ ಮನಸಾ ಅನುಭವಿಸಿ ಆನಂದಿಸಿದರೆ ನನ್ನ ಕೆಲಸ ಸಾರ್ಥಕ.ಸೃಷ್ಟಿ - ಸುರಭೋಗ

ದಟ್ಟಕಾಡಿನಲೊಂದು ಪುಟ್ಟ ತೊರೆಯೆಡೆಯಲ್ಲಿ
ಮಟ್ಟಿಬಿದಿರನು ಬಳಸಿ ಗೂಡು ಕಟ್ಟಿಹೆನು
ಬೆಟ್ಟದಿಂದಿಳಿಯುತಾ ಬೆಳ್ಳಿ ನೊರೆಯನು ಚೆಲ್ಲಿ
ಹುಟ್ಟಿ ಹರಿಯುವ ನೀರಲೆನ್ನಮರೆತಿಹೆನುನವಿಲಿನಾ ನರ್ತನಕೆ ಕೋಗಿಲೆಯ ಗಾಯನವು

ಭುವಿಯ ನಂದನವಿದುವೆ ಎಂಥ ಸುರಭೋಗ
ಕವಿದ ಕಾರ್ಮೋಡಗಳ ಜಾತ್ರೆಯದು ಹೊರಟಾಗ
ಅವಧಿ ಮೀರಿದ ಕುಣಿತ ಇದು ರಾಜಭೋಗ !


ಶುಕ-ಪಿಕಗಳಾದಿ ಪಕ್ಷಿಗಳೆಲ್ಲ ಸಭೆ ಸೇರಿ
ಶಕುತಿ ಮೀರುತ ಹಾಡಿ ದಣಿಯುವಾ ವೇಳೆ
ಯುಕುತಿಯಿಂದಲ್ಲಲ್ಲಿ ಅಡಗುತ್ತ ನಾ ಕಳೆದೆ
ಭಕುತಿ ಮೂಡಿತು ಮನದಿ ಈ ಸೃಷ್ಟಿಮೇಲೆ
ಜಿಂಕೆ ಸಾರಂಗಗಳು ಕಡವೆ ಹಂದಿಗಳೆಲ್ಲ

ಮಂಕುಬಡಿದಾ ರೀತಿ ನಿಂತು ನೋಡಿಹವು
ಬಿಂಕದಾ ಕೆಂಭೂತ ಬಿನ್ನಾಣ ತೋರಿಸುತ
ಅಂಕದಾ ಪರದೆಯನು ಸರಿಸಿತೆರೆಯುತಿರೆ


ಚಿಟ್ಟೆಗಳು ಹಾರಾಡಿ ಬಣ್ಣದೋಕುಳಿಯಾಡಿ
ಮಟ್ಟಸದಿ ಸೃಜಿಸಿದವು ದೃಶ್ಯ ರೂಪಗಳ
ಒಟ್ಟಿನಲಿ ಹಾರಾಡಿ ಮಕರಂದ ಹೀರುತ್ತ
ಕಟ್ಟಿಹವು ಕಲಶಗಳ ಕುಶಲ ಜೇನುಗಳು


ರವಿಕಾಣದೀ ಜಾಗ ಅಹ ಎಂಥ ವೈಭೋಗ !
ಸವಿಯುತಿರೆ ಹೃನ್ಮನದ ಭಾವವದು ಕೆರಳಿ
ಕಿವಿಗಿಂಪು ಮನತಂಪು ಜುಳು ಜುಳು ನಿನಾದದಲಿ
ಕವಿ ಸೋತೆ ಶರಣು ಜನಕನ ಸೃಷ್ಟಿಯಲ್ಲಿ