ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, November 4, 2010

ವಿಜ್ಞಾನ ದೀಪಾವಳಿ



ವಿಜ್ಞಾನ ದೀಪಾವಳಿ

ಈ ಹೆಸರು ಬಹುಶಃ ನಿಮಗೆ ವಿಚಿತ್ರವೆನಿಸುತ್ತದೆ. ದೀಪಾವಳಿಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅವಲೋಕಿಸಿ ಜತೆಗೆ ಕೆಲವು ಪೌರಾಣಿಕ ಮಹತ್ವಗಳನ್ನೂ ಆಚರಣೆಯನ್ನೂ ಸ್ವಲ್ಪ ಅರಿಯೋಣವೆಂದು ಅತ್ತಕಡೆ ಹೊರಳಿದೆ. ಅದರ ಪರಿಣಾಮವಾಗಿ ಸಿಕ್ಕ ಕೆಲವು ಮಾಹಿತಿಗಳನ್ನು ಹಲವು ಶುಭಾಶಯಗಳೊಂದಿಗೆ ನಿಮಗೆ ವರ್ಗಾಯಿಸಿಬಿಟ್ಟರೆ ದೀಪಾವಳಿ ಕೆಲಮಟ್ಟಿಗೆ ಅರ್ಥಪೂರ್ಣವಾಗಬಹುದೆಂಬ ಧೋರಣೆಯಿಂದ ಈ ಲೇಖನ.

ತ್ರಯೋದಶಿ: ಆಚರಣೆ ಪ್ರಾರಂಭ
ಇವತ್ತು ಹಳ್ಳಿಗಳಲ್ಲಿ ಹಂಡೆಯನ್ನು ತೊಳೆದು, ಅದರ ಹೊರಮೈಗೆ ಕೆಮ್ಮಣ್ಣು ಬರೆದು, ನೀರನ್ನು ತುಂಬಿ, ಹಂಡೆಯ ಕಂಠಭಾಗಕ್ಕೆ ಶಿಂಡ್ಲೆ ಅಥವಾ ಹಿಂಡ್ಲೆ[ಕಹಿ ಹಿಂಡ್ಲೆ] ಬಳ್ಳಿಯನ್ನು ಸಾಂಕೇತಿಕ ರಕ್ಷಾಸೂತ್ರವಾಗಿ ಹಾಕುತ್ತಾರೆ. ಮಾರನೇ ದಿನದ ಅಭ್ಯಂಜನಕ್ಕೆ ಇಂದೇ ತಯಾರಿ. ಇಲ್ಲಿ ವಿಶೇಷವಾದ ವೈಜ್ಞಾನಿಕತೆಯಿರದಿದ್ದರೂ ತಾಮ್ರದ ಹಂಡೆಯಲ್ಲಿ ರಾತ್ರಿಯೆಲ್ಲಾ ಉಳಿಯುವ ನೀರು ಅದರ ಕಿಲುಬನ್ನು ಭಾಗಶಃ ಹೀರಿಕೊಂಡು ನಮ್ಮ ಮೈಗೆ ಬೇಕಾದ ಪೂರಕ ತಾಮ್ರದ ಅಂಶವನ್ನು ಒದಗಿಸುತ್ತದೆ. ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿದರೂ ಬಹಳ ಒಳ್ಳೆಯದೆಂಬುದು ನಮಗೆ ತಿಳಿದೇ ಇದೆ. ಲೋಹಗಳಲ್ಲಿ ಉತ್ಕೃಷ್ಟ ಲೋಹವೆಂದರೆ ಬಂಗಾರ. ನಾವು ಈಗ ಪ್ಲಾಟೀನಮ್ ಎಂದೆಲ್ಲಾ ಏನೇ ಕೊಚ್ಚಿದರೂ ಬಂಗಾರದ ಮೆರುಗು ಅದಕ್ಕಿಲ್ಲ. ನಂತರ ಬರುವುದು ಬೆಳ್ಳಿ, ಆ ನಂತರ ತಾಮ್ರ, ನಂತರ ಹಿತ್ತಾಳೆ, ನಂತರ ಕಂಚು, ನಂತರ ಕಬ್ಬಿಣ ಹೀಗೇ.... ಹಾಗಂತ ಹಂಡೆಯನ್ನು ಬಂಗಾರದಲ್ಲಿ ಹಿಂದಿನ ಕಾಲದ ಅರಸರೂ ಮಾಡಿಸಿದ್ದು ಸುಳ್ಳು. ಅದರ ಬದಲಿಗೆ ತಾಮ್ರವನ್ನೇ ಬಹುತೇಕ ಎಲ್ಲೆಡೆಗೂ ಬಳಸಲಾಗುತ್ತದೆ.

ಏನೂ ಇಲ್ಲದ ಬಡವರಿಗೆ ಮಣ್ಣಲ್ಲಿ ತಯಾರಾದ ಹಂಡೆ ಕೂಡ ಸಿಗುತ್ತದೆ. ನಮ್ಮಲ್ಲಿ ಆಚರಣೆ ನಡೆಸುವಾಗ ಎಲ್ಲರಿಗೂ ಅದು ಸಮನ್ವಯವಾಗಲಿ ಎನ್ನುವ ದೃಷ್ಟಿಯಿಂದ ಮಣ್ಣ ಹಂಡೆಗೂ ಕೂಡ ಮಹತ್ವವಿದೆ. ಮಣ್ಣ ಬೋಗುಣಿಗಳಲ್ಲಿ ಮಡಿಕೆಕುಡಿಕೆಗಳಲ್ಲಿ ಮಾಡುವ ಅಡಿಗೆಯ ರುಚಿ ಇವತ್ತಿನ ಯಾವ ಪಾತ್ರೆಯಲ್ಲೂ ನಮಗೆ ಸಿಗುವುದಿಲ್ಲ. ನಾವು ಹುಟ್ಟಿಬಂದ ಈ ಭೂಮಿಯ ಧಾತುವನ್ನೇ ಬಳಸಿ ಮಾಡುವ ಪಾತ್ರೆಗಳು ಶ್ರೇಷ್ಠವೇ ಸರಿ.

ಇನ್ನು ಹಂಡೆಯ ಸುತ್ತ ಬರೆಯುವ ಕೆಮ್ಮಣ್ಣು ಮತ್ತು ಹಾಕುವ ಶಿಂಡ್ಲೆ ಬಳ್ಳಿ ಕೇವಲ ನಮ್ಮ ಸಂಭ್ರಮಕ್ಕೆ. ಅಂದು ನರಕ ಚತುರ್ದಶಿಯಂದು ಶ್ರೀಕೃಷ್ಣ ನರಕಾರಸುರನನ್ನು ವಧಿಸಿದಾಗ ಆದ ಮೈಕೈ ನೋವನ್ನು ಅಭ್ಯಂಜನಮಾಡಿ ಕಳೆದುಕೊಂಡನಂತೆ. ಆ ನೆನಪಿಗೆ ಅಂದಿನಿಂದ ಜನ ಉತ್ಸವಕ್ಕೆ, ಉತ್ಸುಕತೆಗೆ ಬೇಕಾಗಿ ಅಲಂಕಾರಕ್ಕಾಗಿ ಅದನ್ನು ಬಳಸಿರಬೇಕು.

ಬೂದುಗಳು ಅಥವಾ ಬೂರೆ ಕಳು [ಬೂರೆ ಹಾಯುವುದು ]

ಕೆಲವುಕಡೆ ಈ ರಾತ್ರಿ ತಮಾಷೆಗೆ ಕಳ್ಳತನಮಾಡುವುದಿದೆ. ಈ ರಾತ್ರಿ ಕದ್ದವರು ಸಿಕ್ಕಿಬಿದ್ದರೂ ಯಾರೂ ಶಿಕ್ಷಿಸುವುದಿಲ್ಲ. ಆದರೆ ತಮಾಷೆ ಅತಿಯಾದರೆ ಮಾತ್ರ ಅದು ಅಪಾಯಕಾರಿಯಾಗುತ್ತದೆ! ಒಂದು ತಮಾಷೆಯ ಮತ್ತೊಂದು ಅಪಾಯದ ಎರಡು ನೈಜ ಘಟನೆಗಳನ್ನು ಹೇಳುತ್ತೇನೆ ಕೇಳುವಂತವರಾಗಿ:

ನಾವು ಚಿಕ್ಕವರಿದ್ದಾಗ ಬೂರೆಹಬ್ಬ ಅಥವಾ ಬೂದೆ ಹಬ್ಬ ಎಂದರೆ ಒಂಥರಾ ಒಳಗೊಳಗೇ ನಮಗೆಲ್ಲಾ ಹೆದರಿಕೆ ಮಿಶ್ರಿತ ಸಂತೋಷ. ಬೂದೆ ಹಬ್ಬದ ರಾತ್ರಿ ಕಳ್ಳತನ ಸರ್ವೇ ಸಾಮಾನ್ಯವಾಗಿದ್ದ ಕಾಲ. ಆ ಕಾಲದಲ್ಲಿ ನಮ್ಮ ಹಳ್ಳಿಯ ತೋಟಗಳಲ್ಲಿ ಅಡಿಕೆ-ತೆಂಗಿನ ಮರಗಳನ್ನು ಹತ್ತಿ ಗೊನೆಗಳನ್ನೂ, ಸೀಯಾಳಗಳನ್ನೂ[ಎಳೆನೀರುಗೊನೆಗಳನ್ನೂ] ಕಡಿದು ಇಳಿಸಿ ಅವುಗಳಲ್ಲಿ ಕೆಲವನ್ನು ಉಪಯೋಗಿಸಿ ಮತ್ತೆ ಕೆಲವನ್ನು ಎಲ್ಲಿಗೋ ಕೊಂಡುಹೋಗಿ ಬಿಟ್ಟುಹೋಗುತ್ತಿದ್ದರು. ಕೆಲವೊಮ್ಮೆ ಪಕ್ಕದ ಮನೇದು ನಮ್ಮನೆಗೆ ನಮ್ಮನೇದು ಮತ್ಯಾರದೋ ಮನೆಗೆ ಅದ್ಯಾವುದೂ ಇಲ್ಲದಿದ್ದರೆ ಎಲ್ಲವನ್ನೂ ಹೊತ್ತು ಹತ್ತಿರದ ದೇವಸ್ಥಾನದ ಅಂಗಳಕ್ಕೆ ಹೀಗೆಲ್ಲಾ. ಒಂದು ವರ್ಷ ರಾತ್ರಿ ಕೊಟ್ಟಿಗೆಗೆ ಹೋಗಿ, ಅಟ್ಟದಲ್ಲಿರುವ ಒಣಹುಲ್ಲು ತೆಗೆದು ದನಗಳಿಗೆ ತಿನ್ನಲು ಕೊಟ್ಟು, ಅವುಗಳನ್ನು ಹೆದರಿಸಿ ಕೂಗಿಸಿ, ಹುಲ್ಲಿನಿಂದ ಬೆಚ್ಚುಮಾಡಿ ಕೊಟ್ಟಿಗೆಯ ಬಾಗಿಲಲ್ಲಿ ನಿಲ್ಲಿಸಿ, ಅದರ ಕೈಲಿ ದೊಣ್ಣೆಯೊಂದನ್ನು ಕೊಟ್ಟು, ಆ ಬೆಚ್ಚಿನ ಕಾಲ ಪಕ್ಕದಲ್ಲಿ ಎರಡು ತಿನ್ನಲುಬಾರದಷ್ಟು ಎಳೆಯ ಬಾಳೆಗೊನೆ[ಬಾಳೆ ಜಿಕ್ಕು] ತಂದಿಟ್ಟು ಹೋಗಿದ್ದರು. ಯಾರು ಎಂದು ಯಾರೂ ಕೇಳುವುದಿಲ್ಲ, ಯಾರೂ ಆಬಗ್ಗೆ ಬೇಸರಗೊಳ್ಳುವುದೂ ಇಲ್ಲ. ಇದು ಹಬ್ಬದ ಒಂದು ಅಂಗ.

ಇನ್ನು ಅಪಾಯದ ಒಂದು ಘಟನೆ: ನಮ್ಮೂರ ಮುಖ್ಯರಸ್ತೆಯಲ್ಲಿ ನಮ್ಮೂರಿಂದ ಸುಮಾರು ೩ ಕೀ.ಮೀ ದೂರದಲ್ಲಿ, ದೊಡ್ಡ ದೊಡ್ಡ ಸೈಜುಗಲ್ಲುಗಳನ್ನು ತಂದು ಹಾಕಿ ಅದನ್ನು ತೆಂಗಿನ ಮಡಲಿನಿಂದ[ತೆಂಗಿನ ಗರಿಯಿಂದ] ಮುಚ್ಚಿಬಿಟ್ಟಿದ್ದರಂತೆ. ನಮ್ಮ ತಾಲೂಕಿನ ವೈದ್ಯರೊಬ್ಬರು ಯಾರದೋ ಅನಿವಾರ್ಯತೆಯಲ್ಲಿ ರೋಗಿಯೊಬ್ಬನಿಗೆ ಚಿಕಿತ್ಸೆ ಕೊಡಲು ಹೋಗಿದ್ದವರು ಇದೇ ರಸ್ತೆಯಲ್ಲಿ ಮರಳುತ್ತಿದ್ದರು. ಹೇಳಿಕೇಳಿ ಶೀಕು ಯಾರನ್ನೂ ಕೇಳಿಯೋ ಹಬ್ಬದ ಸಮಯ ಆಮೇಲೆ ಬರೋಣ ಅಂತೆಲ್ಲಾ ನೋಡಿಯೋ ಬರುವುದಿಲ್ಲವಲ್ಲ! ರಾತ್ರಿ ಸುಮಾರು ೧೧ ಘಂಟೆಯ ವೇಳೆ ಅಂತ ಲೆಕ್ಕ ಆಮೇಲೆ ತೆಗೆದಿದ್ದು. ಡಾಕ್ಟರು ಪರತ್ ಹೊರಟವರು ಮಬ್ಬಿನ ಬೆಳಕಿನಲ್ಲಿ, ಮುಚ್ಚಿಟ್ಟ ಕಲ್ಲುಗಳಮೇಲೆ ಬೈಕು ಓಡಿಸಿ ಬಿದ್ದು ತಲೆಯೊಡೆದು ಹೋಯಿತು. ಆ ನಂತರ ಅದು ಹಳ್ಳಿಯ ರಸ್ತೆ, ಯಾರೂ ಆ ಕಡೆಯಿಂದ ಪಾಸಾಗಿರಲಿಲ್ಲ. ಯಾರೋ ಪುಣ್ಯಾತ್ಮರು ಅನಿರೀಕ್ಷಿತವಾಗಿ ಅಲ್ಲಿಗೆ ತಮ್ಮ ಬೈಕಿನಲ್ಲಿ ಬಂದವರು ಕಂಡು ಹತ್ತಿರದ ಹಳ್ಳಿಯ ಮನೆಗಳಿಗೆ ಓಡಿ ಜನರನ್ನು ಕರೆತರುವಾಗ ವೈದ್ಯರು ಸಣ್ಣ ಜೀವದಿಂದಿದ್ದರು. ಎಲ್ಲರೂ ಸೇರಿ ಅವರಿಗೆ ನೀರು ಹಾಕಿ ಹೊತ್ತುಕೊಂಡು ಬೇರೆ ಯಾವುದೋ ಸಿಕ್ಕವಾಹನದಲ್ಲಿ ದೂರದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದರಾದರೂ ವೈದ್ಯರು ಬದುಕುಳಿಯಲಿಲ್ಲ. ಅನ್ಯಾಯವಾಗಿ ಸಾವು ಉತ್ತಮ ಹಾಗೂ ಒಳ್ಳೆಯ ವೈದ್ಯರೊಬ್ಬರನ್ನು ಸೆಳೆದುಕೊಂಡಿತು.[ ಆ ವೈದ್ಯರ ಹೆಸರು ಡಾ| ಅವಧಾನಿ.] ರಸ್ತೆಯಲ್ಲಿ ಕಲ್ಲುಹಾಕಿ ಮಜಾನೋಡಿದ ಆ ಅವಿವೇಕಿಗಳು ಯಾರು ಎಂಬುದು ಇಂದಿಗೂ ನಿಗೂಢ. ಆದರೆ ಅಂತಹ ಘಟನೆ ಮತ್ತೆ ಮರುಕಳಿಸಲಿಲ್ಲ ಎಂಬುದು ಸಂತಸದ ವಿಷಯ.

ಮೊದಲನೆಯ ದಿನದ ಆಚರಣೆ

ನಸುಕಿನಲ್ಲೇ ಎದ್ದು ಮುಖಮಾರ್ಜನೆ-ಶೌಚವನ್ನು ಪೂರೈಸಿ ಒಳಬಂದಮೇಲೆ ದೇವರಕೋಣೆಯಲ್ಲಿ ಹಾಕಿರುವ ಮಣೆಯಮೇಲೆ ಮಕ್ಕಳನ್ನೂ ಸೇರಿಸಿದಂತೇ ದೊಡ್ಡವರಿಗೆಲ್ಲಾ ಹೆಂಗಳೆಯರು ಎಣ್ಣೆಹನಿಸಿ[ ನೆತ್ತಿಗೆ, ಭುಜಗಳಿಗೆ ಎಣ್ಣೆ ಯನ್ನು ಚಮಚದಿಂದ ಬಸಿಯುವುದು] ಆರತಿ ಬೆಳಗುವುದು, ಮಂಗಲಾಕ್ಷತೆ ಎರಚುವುದು ಸಂಪ್ರದಾಯ. ಅಂದಿನ ದಿನ ಶ್ರೀಕೃಷ್ಣನಿಗೆ ಮೈಗೆಲ್ಲಾ ಎಣ್ಣೆ ಹಚ್ಚಿ ಮಾಲಿಶ್ ಮಾಡಿದ್ದರಂತೆ. ಅದೇ ನೆನಪಿನಲ್ಲಿ ಈ ಪ್ರಕ್ರಿಯೆ. ವೈಜ್ಞಾನಿಕವಾಗಿ ನೋಡಿದರೆ ಈಗ ಚಳಿಗಾಲ ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ ಚರ್ಮ ಒಡೆಯುತ್ತದೆ. ಅದರ ರಕ್ಷಣೆಗೆ ಎಣ್ಣೆಮಜ್ಜನ ಒಳ್ಳೆಯ ಮಾರ್ಗ. ಹೀಗಾಗಿ ಚರ್ಮ ರಕ್ಷಣೆಯೇ ಮುಖ್ಯಕಾರಣವಾಗಿ ವರುಷದಲ್ಲಿ ಒಮ್ಮೆಯಾದರೂ ಈ ರೀತಿ ಸ್ನಾನ ಮಾಡಲಿ ಎಂದು ಅದನ್ನೇ ಶಾಸ್ತ್ರವನ್ನಾಗಿಸಿದರು. ನಾವು ಚಿಕ್ಕವರಿದ್ದಾಗ ಎಲ್ಲಾದರೂ ತಪ್ಪಿಸಿಕೊಂಡು ಓಡುವುದಿತ್ತು. ಅದಕ್ಕೇ "ಎಣ್ಣೆ ಹಚ್ಚಿ ಸ್ನಾನಮಾಡದವರ ಮೈ ಬೂದಿ ಬೂದಿಯಾಗುತ್ತದಂತೆ " ಎಂದು ಹೆದರಿಸುತ್ತಿದ್ದರು. ಪ್ರಾಯಶಃ ಈ ದೃಷ್ಟಿಯಲ್ಲಿ ಇದು ಬೂದೆ ಹಬ್ಬ.

ಬೂದೆ ಹಬ್ಬದ ದಿನ ಕೊಟ್ಟಿಗೆಯಲ್ಲಿರುವ ದನಗಳಿಗೂ ನಮಗೆ ಸಿಕ್ಕ ಮನ್ನಣೆಯೇ ಸಿಗುತ್ತದೆ. ನಸುಬೆಳಕಿನಲ್ಲಿ ದೀಪವೊಂದನ್ನು ಉರಿಸಿ ಎಲ್ಲಾ ದನಗಳಿಗೂ ಮಂಗಲಾಕ್ಷತೆ ಎರಚಿ, ಎಣ್ಣೆಹನಿಸುವುದು ಪದ್ಧತಿ. ಬೇಗ ಎಬ್ಬಿಸಿದ್ದು ಯಾಕೋ ಎಂದು ದನಗಳು ಕಂಗಾಲಾಗಿ ನೋಡುತ್ತಿರುವಾಗ ಹಿರಿಯದನಗಳು ಚಿಕ್ಕವುಗಳಿಗೆ ತಮ್ಮ ಹಿಂದಿನ ಅನುಭವ ಹೇಳುತ್ತಿದ್ದವೋ ಏನೋ! ಆನಂತರ ಅವುಗಳಿಗೆ ಹುಲ್ಲು ಹಾಕಿ ನಮಸ್ಕರಿಸಿದ ನಂತರವೇ ನಮಗೆಲ್ಲಾ ಎಣ್ಣೆಹನಿಸುವುದು.

ಮೂರು ದಿನದ ಭಾಗ್ಯ --ಬಲೀಂದ್ರ ರಾಜ್ಯಭಾರ

ಪ್ರಹ್ಲಾದನ ಮೊಮ್ಮಗ ಬಲಿ. ತನ್ನ ಧಾರಾಳತನದಿಂದ ಬಲಿಚಕ್ರವರ್ತಿಯಾದ. ಸಂಪತ್ತು ಹೇರಳ ಸಂಗ್ರಹಣೆಯಾದ ಮೇಲೆ ರಾಜ್ಯವನ್ನು ಬೇಕಷ್ಟು ವಿಸ್ತರಿಸಿದ. ಒಮ್ಮೆ ಆತನಿಗೊಂದು ಆಸೆ ಬಂತು. ತಾನು ಯಾಕೆ ದೇವಲೋಕವನ್ನೂ ಆಳಬಾರದು ಎಂದು. ಅದಕ್ಕೆ ಬೇಕಾಗಿ ಆತ ೧೦೦ ಯಾಗಗಳನ್ನುಮಾಡಿದ. ಯಾಗದ ಫಲವಾಗಿ ಅಜೇಯ ರಕ್ಷಾಕವಚವನ್ನೂ ಪಡೆದ. ದೇವಲೋಕಕ್ಕೆ ದಾಳಿಯಿಟ್ಟು ದೇವತೆಗಳನ್ನೆಲ್ಲಾ ನಡುಗಿಸಬೇಕು, ಅದಕ್ಕೂ ಮುನ್ನ ಪುಣ್ಯಸಂಚಯ ಸ್ವಲ್ಪ ಜಾಸ್ತಿ ಬೇಕಾಗಿ ಆಚಾರ್ಯರೆಲ್ಲಾ ಹೇಳಿದ್ದರಿಂದ ದಾನವನ್ನು ಕೈಗೊಂಡ. ಬೇಕಾದವರು ಬೇಕಾದದ್ದನ್ನೆಲ್ಲಾ ದಾನವಾಗಿ ಪಡೆದರು. ಆ ಘಳಿಗೆಯಲ್ಲಿ ದೇವತೆಗಳ ಇಚ್ಛೆಯಂತೇ ಅವರ ರಕ್ಷಣೆಮಾಡಲಾಗಿ ಮಹಾವಿಷ್ಣು ವಾಮನನಾಗಿ ಬಂದ! ವಾಮನ ಅಂದರೆ ಕುಬ್ಜ, ಕುಳ್ಳ. ಕುಬ್ಜ ಬ್ರಾಹ್ಮಣ ವಟುವೊಬ್ಬ ಬಂದು ದಾನಸ್ವೀಕರಿಸಲು ಕುಳಿತಾಗ ಬಲಿ ಆತ್ಮೀಯವಾಗಿ ಸ್ವಾಗತಿಸಿದ. ವಾಮನ ಬೇಡಿದ ಮೂರು ಹೆಜ್ಜೆ ನೆಲವನ್ನು ನೆನೆದು " ಅಷ್ಟು ಸಣ್ಣ ದಾನವನ್ನು ಯಾಕೆ ಕೇಳುತ್ತೀರಿ ಬೇರೇ ಏನನ್ನಾದರೂ ಕೇಳಬಾರದೇ ? " ಎಂದ ಬಲಿ. ವಾಮನ ತನಗಷ್ಟೇ ಸಾಕು ಎಂದ. ಬಲಿಗೆ ಬಂದವ ಮಹಾವಿಷ್ಣುವೆಂಬ ಅರಿವಿರಲಿಲ್ಲ. ಆದರೆ ಆತನ ಗುರು ಶುಕ್ರಾಚಾರ್ಯರಿಗೆ ಇದು ತಿಳಿದುಹೋಯಿತು. ಅವರು ಬಲಿಗೆ ತಿಳಿಸಿ ಹೇಳಿ ಈ ದಾನವನ್ನು ಕೊಡುವುದರ ಬದಲು ಬೇರೇನಾದರೂ ಧನಕನಕವನ್ನು ಕೊಡು ಎಂದು ಸೂಚಿಸಿದರೂ " ಕೊಟ್ಟೆ " ಎಂದು ಆಡಿದ ಮಾತಿಗೆ ತಪ್ಪಲಾರೆ ಎಂದುತ್ತರಿಸಿದ ಬಲಿ. ದಾನಕ್ಕೆ ತುಳಸೀ ನೀರು ಬಿಡುವಾಗ ಕೊಂಬಿನ ಗಿಂಡಿಯಲ್ಲಿ ಸೂಕ್ಷರೂಪದಲ್ಲಿ ಕುಳಿತು ನೀರು ಬರದ ಹಾಗೇ ತಡೆದ ಶುಕ್ರಾಚಾರ್ಯ! ಇದನ್ನರಿತ ವಾಮನ ತನ್ನಲ್ಲಿರುವ ದರ್ಬೆಯಿಂದ ಆ ತೂತಿನೊಳಗೆ ಇರಿದಾಗ ಶುಕ್ರಾಚಾರ್ಯರ ಒಂದು ಕಣ್ಣು ಹೋಯಿತಂತೆ! ಅದಕ್ಕೆ ಕೆಲವೊಮ್ಮೆ ವಾಡಿಕೆಯಲ್ಲಿ ಒಂದೇ ಕಣ್ಣಿರುವವರಿಗೆ ಒಕ್ಕಣ್ಣ ಶುಕ್ರಾಚಾರ್ಯ ಎನ್ನುವುದಿದೆ ! ಅಂತೂ ದಾನ ನಡೆದು ಹೊಯಿತು. ದಾನ ಪಡೆದ ಮರುಕ್ಷಣ ವಾಮನ ಆಕಾಶದೆತ್ತರಕ್ಕೆ ಬೆಳೆದ, ಬೆಳೆದೂ ಬೆಳೆದೂ ಆತನಿಗೆ ಜಾಗವೇ ಸಾಲದಾಯಿತು. ಮೊದಲನೇ ಹೆಜ್ಜೆಯಿಂದ ಇಡೀ ಭೂಮಂಡಲವನ್ನೂ ಎರಡನೇ ಹೆಜ್ಜೆಯಿಂದ ಇಡೀ ಸ್ವರ್ಗಲೋಕವನ್ನೂ ಆಕ್ರಮಿಸಿದ ವಾಮನ ಬಲಿಗೆ " ನೀನು ವಚನಬ್ರಷ್ಟ " ಎಂದು ಬೈದ. ದಾರಿಕಾಣದ ಬಲಿ ಎರಡೂ ಕೈಜೋಡಿಸಿ " ನಿನ್ನ ಮೂರನೇ ಹೆಜ್ಜೆಯನ್ನು ನನ್ನ ಶಿರದಮೇಲಿಡು" ಎಂಬುದಾಗಿ ವಿನಂತಿಸಿದ. ಆ ಮಾತಿನಂತೇ ಮೂರನೇ ಹೆಜ್ಜೆಯನ್ನು ಬಲಿಯ ತಲೆಯಮೇಲಿಟ್ಟ ವಾಮನ ತನ್ನ ಬಲವಾಗಿ ಬಲಿಯನ್ನು ಪಾತಾಳಕ್ಕೆ ನೂಕಿದ.

ಬಂದಾತ ಮಹಾವಿಷ್ಣುವೆಂದು ಶುಕ್ರಾಚಾರ್ಯರು ಅಂತರಂಗದಲ್ಲಿ ಕಿವಿಯಲ್ಲಿ ಉಸುರಿದ್ದು ಅರ್ಥವಾಗಿಹೋಗಿತ್ತು ಬಲಿಗೆ. ಆದರೆ ಆಡಿದ ಮಾತಿಗೆ ತಪ್ಪದ ಅಪ್ಪಟ ರಾಜರ್ಷಿ ಈ ಮಹಾಬಲಿ! ತನ್ನನ್ನು ಪಾತಾಳಕ್ಕೆ ಕಳುಹಿದ್ದು ನ್ಯಾಯವೇ ಎಂಬುದಾಗಿ ಮಹಾವಿಷ್ಣುವಿನಲ್ಲಿ ಕೇಳಲಾಗಿ, ಭಕ್ತ ಬಲಿಗೆ ಒಲಿದ ಮಹಾವಿಷ್ಣು ತನ್ನ ನಿಜರೂಪದಲ್ಲಿ ದರ್ಶನವಿತ್ತು, ಕಾರಣಗಳನ್ನೆಲ್ಲಾ ತಿಳಿಸಿ, ವರ್ಷದಲ್ಲಿ ಮೂರು ದಿನ ದೀಪಾವಳಿಯ ವೇಳೆ ಭೂಮಿ ನಿನ್ನದೇ ರಾಜ್ಯಭಾರದಲ್ಲಿರುತ್ತದೆಂದೂ ಆಗ ಸ್ವತಃ ತಾನು ಬಲಿಯ ಬಾಗಿಲ ಕಾಯುವ ಭಟನಾಗಿ ನಿಂತು ಸೇವೆಮಾಡುವೆನೆಂದೂ ವರವಿತ್ತ. ಇದು ಬಲಿಯ ದಾನಕ್ಕೆ, ಆತನ ನಿಸ್ಪೃಹ ಪ್ರವೃತ್ತಿಗೆ ಸಂದ ಗೌರವ. ಹೀಗಾಗಿ ಪ್ರತೀವರ್ಷ ಬಹುತೇಕ ಫಸಲುಗಳು ಕೈಗೆ ಬರುವ ಹೊತ್ತಿನ ಈ ದೀಪಾವಳಿಯಲ್ಲಿ ಮೂರುದಿನ ಭುವಿಯ ರಾಜ್ಯಭಾರವನ್ನು ಬಲಿ ನೆರವೇರಿಸಿ, ತನ್ನ ಸತ್ಪ್ರಜೆಗಳಿಗೆ ಹಿಂದೆ ತನ್ನ ರಾಜ್ಯದಲ್ಲಿ ಹೇಗೆ ರಾಮರಾಜ್ಯದಂತೇ ಯಾವ ಕೊರತೆಯೂ ಇರಲಿಲ್ಲವೋ ಅದೇ ರೀತಿ ಯಾವ ಕುಂದುಕೊರತೆಗಳೂ ಬಾಧಿಸದಿರಲಿ ಎಂದು ಹರಸುತ್ತಾನೆ ಎಂಬುದು ಪ್ರತೀತಿ; ಪ್ರತೀತಿ ಹೇಗಿದ್ದರೂ, ಆತ ರಕ್ಕಸಕುಲದಲ್ಲೇ ಹುಟ್ಟಿದ ರಾಜನಾದರೂ ಈ ಭೂಮಿಯ ಎಲ್ಲರಿಗೂ[ಕಥೆ ಗೊತ್ತಿರುವವರಿಗೆ] ಬಲಿಯೆಂದರೆ ಪ್ರೀತಿ. ಇಂದ್ರನಾಗಬೇಕೆಂದು ಬಯಸಿದ್ದ ಬಲಿಗೆ ಇಂದ್ರನ ಹೆಸರಲ್ಲೇ ಪೂಜೆ: ಹೀಗಾಗಿ ಆತ ಬಲೀಂದ್ರ.

ಬಲೀಂದ್ರನನ್ನು ಕರೆತರುವುದಕ್ಕೆ ತ್ರಯೋದಶಿಯ ಸಾಯಂಕಾಲವೇ ಸಾಕಷ್ಟು ಸಿದ್ಧತೆಗಳು ನಡೆದಿರುತ್ತವೆ. ನವಧಾನ್ಯಗಳನ್ನು ಲೋಟ,ಚೊಂಬು ಮುಂತಾದ ಪಾತ್ರೆಗಳಲ್ಲಿಟ್ಟು, ಕೆಮ್ಮಣ್ಣು ತೀಡಿ ಶೇಡಿ[ರಂಗೋಲಿ ಪುಡಿ]ಯಿಂದ ಹಸೆಬರೆದ ಮಣೆಯಮೇಲೆ ಅವುಗಳನ್ನು ಪೇರಿಸಿ ಇಟ್ಟು, ಬೆಳ್ಳಿ-ಬಂಗಾರದ ನಾಣ್ಯಾದಿಗಳನ್ನೆಲ್ಲಾ ಇಟ್ಟು, ತೆಂಗಿನ ಕಾಯಿ, ಮೊಗೇಕಾಯಿ[ಮಂಗಳೂರು ಸೌತೇಕಾಯಿ] ಇವುಗಳನ್ನೆಲ್ಲಾ ಇಟ್ಟಿರುತ್ತಾರೆ. ಸಾಂಕೇತಿಕವಾಗಿ ಚಕ್ರವರ್ತಿ ಬಲಿಯನ್ನು ಹೊರಾಂಗಣದಲ್ಲಿರುವ ತುಳಸಿಯ ಮುಂಭಾಗದಲ್ಲಿ ಅಡಿಕೆಗೊನೆಯ[ಕೆಲವುಕಡೆ ವೀಳ್ಯದೆಲೆಯಡಿಕೆ] ಮೇಲೆ ಆಹ್ವಾನಿಸಿ, ಅಲ್ಲಿಯೇ ಮೊದಲಾಗಿ ಒಂದು ಪೂಜೆ ನೆರವೇರಿಸಿ ಆಮೇಲೆ ದೇವರಕೋಣೆಗೆ ಬಿಜಯಂಗೈಯ್ಯುವುದು. ಬಂದ ಬಲೀಂದ್ರನಿಗೆ ಆ ದಿನವೆಲ್ಲಾ ವಿಶೇಷ ತಿನಿಸುಗಳು ಭಕ್ಷ-ಭೋಜ್ಯ ನಿವೇದಿಸಿ ಮಹಾಮಂಗಲಾರತಿ ನೆರವೇರಿಸುವುದು ನಮ್ಮಲ್ಲಿಯ ರೂಢಿ. ಈ ಎಲ್ಲಾ ಕಾರ್ಯಕ್ರಮಗಳಿಗೆ ಪ್ರತೀ ಹೆಜ್ಜೆಯಲ್ಲೂ ಹೆಂಗಳೆಯರು ಹಾಡುವ ಅಜ್ಞಾತ ಕವಿಗಳ ಭಾವತುಂಬಿದ ಭಕ್ತಿಗೀತೆಗಳು ಹೃದಯಂಗಮ, ಆದರೆ ಇಂದು ಅವುಗಳು ಸಿಕ್ಕುವುದೇ ದುರ್ಲಭ.

ಮನೋವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ನಮ್ಮ ಜನ ರಾಜನೊಬ್ಬನ ಆದರ್ಶಗಳನ್ನು ಬಹುವಾಗಿ ಮೆಚ್ಚುತ್ತಿದ್ದರು. ಆದರ್ಶರಾಜ ಪ್ರಜೆಗಳಿಗೆ ದೇವರಾಗಿಬಿಡುತ್ತಿದ್ದ. ರಾಜಾ ಪ್ರತ್ಯಕ್ಷ ದೇವತಾ ಎಂಬಂತೇ ತಮ್ಮ ಕಷ್ಟ-ಸುಖಗಳಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ ರಾಜನನ್ನು ಪ್ರಜೆಗಳು ಆದರಿಸುತ್ತಿದ್ದರು, ಆರಾಧಿಸುತ್ತಿದ್ದರು. ಬಲಿ ಅಂತಹ ಚಕ್ರವರ್ತಿಗಳ ಸಾಲಿನಲ್ಲಿ ಮಹಾಮೇರು. ಅಂತಹ ಬಲಿಯನ್ನು ನಮ್ಮ ಜನ ಮರೆಯಲೊಲ್ಲರು. ಮೇಲಾಗಿ ಭಗವಂತನ ಮಾತನ್ನು ಶಿರಸಾವಹಿಸುವ ಕಳಕಳಿ ಕೂಡ ಇದರಲ್ಲಿ ಅಡಗಿದೆ. ಬಲೀಂದ ರಾಜ್ಯದಲ್ಲಿ ಇರದ್ದೇ ಇಲ್ಲವಂತೆ ! ಅಷ್ಟೊಂದು ಪ್ರಜಾರಂಜಕನಾಗಿ, ರಕ್ಷಕನಾಗಿ ಎಲ್ಲರ ಹೃದಯಸಿಂಹಾಸನದಲ್ಲಿ ಶಾಶ್ವತವಾಗಿ ಕುಳಿತುಬಿಟ್ಟಿದ್ದಾನೆ ಬಲಿ. ಬಲಿಯ ಕಥೆಯನ್ನು ಕೇಳಿದರೇ ಆತನ ನಡವಳಿಕೆಯ ಮನವರಿಕೆಯಾಗುತ್ತದೆ. ಆತನ ಸ್ಮರಣ, ಪೂಜನ, ಪ್ರಾರ್ಥನೆಗಳಿಂದ ತಮ್ಮೆಲ್ಲರ ಮನೆಗಳಲ್ಲೂ ಸಮೃದ್ಧಿ ನೆಲೆಸಲಿ ಎಂಬುದು ಮನದಿಂಗಿತ.

ಎರಡನೇ ದಿನ ಅಮಾವಾಸ್ಯೆ

ಬಲೀಂದ್ರ ಸನ್ನಿಧಿಯಲ್ಲಿ ಯಾವುದಕ್ಕೂ ಕಮ್ಮಿಯೇ ಇರಲಿಲ್ಲವಂತೆ. ಅವನ ರಾಜ್ಯದಲ್ಲಿ ಲಕ್ಷ್ಮಿ ಸ್ಥಿರವಾಗಿ ನೆಲೆಸಿದ್ದಳು. ಈ ಹಿನ್ನೆಯಲ್ಲಿ ಬೆಳೆದುಬಂದ ಧಾನ್ಯಲಕ್ಷ್ಮಿಯೊಂದಿಗೆ ಧನಲಕ್ಷ್ಮಿಯನ್ನೂ ಆಹ್ವಾನಿಸಿ ಬಲೀಂದ್ರ ಸಮ್ಮುಖದಲ್ಲಿ, ಸನ್ನಿಧಿಯಲ್ಲಿ ಪೂಜೆ ನಡೆಸುತ್ತಾರೆ. ಕೆಲವರ ಮನೆಗಳಲ್ಲಿ ಇದು ವಿಶೇಷವಿರದಿದ್ದರೂ ಅನೇಕರು ಇದನ್ನು ನಡೆಸುವುದು ಕಂಡುಬರುತ್ತದೆ. ಇದೇ ವೇಳೆ ಅಂಗಡಿಕಾಕರು, ವ್ಯಾಪಾರಿಗಳು ತಮ್ಮ ವ್ಯವಹಾರದ ಜಾಗದಲ್ಲಿ ಲಕ್ಷ್ಮೀ ಪೂಜೆಯನ್ನು ನೆರವೇರಿಸುತ್ತಾರೆ.

ಎಲ್ಲರೀತಿಯ ಸುಗ್ಗಿಯ ಕಾಲ. ಫಸಲು ಬೆಳೆದು ರೈತನ ಕಸೇರಿರುವ ಕಾಲ. ಬೆಳೆದು ಮನೆಸೇರಲಿರುವ ಫಸಲಿಗೊಮ್ಮೆ ಲಕ್ಷ್ಮೀ ಎಂಬ ಭಾವದಿಂದ ಸಾಂಕೇತಿಕ ಪೂಜೆ. ಹೀಗೆ ಪೂಜೆ ನಡೆಸುವುದರಿಂದ ಲಕ್ಷ್ಮಿಯ ಸ್ಥಿರತೆ ಜಾಸ್ತಿಯಾಗಿ ಸಮೃದ್ಧಿ ನೆಲೆಸುತ್ತದೆ ಎಂಬುದು ಕಲ್ಪನೆ, ಭಾವನೆ.

ಈ ರಾತ್ರಿ ನಮ್ಮಲ್ಲಿ ಕಡುಬುಗಳನ್ನು ಮಾಡಿ ಬಲೀಂದ್ರನಿಗೆ ನಿವೇದಿಸಿ ನಂತರ ಕೊಟ್ಟಿಗೆಗೆ ಹೋಗಿ, ದನಕರುಗಳ ಕಾಲು-ಬಾಯಿ ತೊಳೆದು[ಸಾಂಕೇತಿಕವಾಗಿ ಉದ್ಧರಣೆಯಿಂದ ನೀರು ಹಾಕುತ್ತ] ಆಮೇಲೆ ಕಡುಬುಗಳನ್ನು ಅವುಗಳಿಗೆ ತಿನ್ನಿಸುವುದು. ತಿಂದು ಪ್ರೀತಿಯಿಂದ ನಾಲಿಗೆ ಆಡಿಸುತ್ತಿರುವಾಗ ಮತ್ತೆ ಕಾಲು-ಬಾಯಿ ತೊಳೆದು, ಹುಲ್ಲು ಹಾಕಿ ನಮಸ್ಕರಿಸಿ ಮನೆಗೆ ಮರಳುವುದರೊಂದಿಗೆ ಎರಡನೇ ದಿನದ ಮುಕ್ತಾಯ.

ಮೂರನೇ ದಿನ - ಬಲಿ ಪಾಡ್ಯ[ಮಿ]

ಬಲೀಂದ್ರ ಇವತ್ತು ತನ್ನ ರಾಜ್ಯಭಾರವನ್ನು ಪೂರೈಸಿ ಸ್ವಸ್ಥಾನಕ್ಕೆ ಹಿಂದಿರುಗುತ್ತಾನೆಂಬ ನಂಬಿಕೆ. ಗೋಪೂಜೆ ಇಂದಿನ ಮಹತ್ವದ ಕಾರ್ಯ. ಜಾವದಲ್ಲೇ ಎದ್ದು ದನಕರುಗಳಿಗೆ ಸ್ನಾನಮಾಡಿಸಿ, ಕೊಟ್ಟಿಗೆ ಶುದ್ಧೀಕರಿಸಿ, ಅವುಗಳ ಮೈಗೆ ಕೆಮ್ಮಣ್ಣು ಮತ್ತು ಶೇಡಿಗಳಿಂದ ದೊಡ್ಡ ಸೊನ್ನೆಯಾಕಾರಕ್ಕೆ ಲೋಟವೇ ಮೊದಲಾದವುಗಳನ್ನು ಬಳಸಿ ಅಚ್ಚು ಹಾಕುವುದು [ಹುಬ್ಬು ಹಾಕುವುದು]. ನಂತರ ಅವುಗಳ ಕೋಡಿಗೆ ಬಣ್ಣಗಳನ್ನು ಬಳಿಯುವುದು, ಝರಿಯ ಗೊಂಡೆಗಳನ್ನು ಕಟ್ಟುವುದು, ಕೊರಳಿಗೆ ಹೊಸ ಹಗ್ಗ ಮತ್ತು ಗಂಟೆ ಕಟ್ಟುವುದು ಇವೆಲ್ಲಾ ನಡೆಯುತ್ತವೆ. ನಂತರ ಚಂಡು ಹೂವು, ದನಮಾಲೆ [ಕಾಡಿನಲ್ಲಿ ಸಿಗುವ ಸುವಾಸ್ನೆ ಭರಿತ ಹೂಗೊಂಚಲು]ಹೂವು ಇವುಗಳನ್ನೆಲ್ಲ ಕಟ್ಟುವುದು. ಮನೆಯಲ್ಲಿ ಬಲೀಂದ್ರ ಪೂಜೆ ನೆರವೇರಿಸಿ, ಗ್ರಾಮದ ದೇವಸ್ಥಾನಗಳಿಗೆ ಹಣ್ಣು-ಕಾಯಿ ಅರ್ಪಿಸಿ ಪ್ರಸಾದ ತಂದು ಕೊಟ್ಟಿಗೆಯ ಪೂಜೆಗೆ ಮುಂದಾಗುವುದು ಕ್ರಮ.

ಮನೆಯ ಯಜಮಾನ ಕೊಟ್ಟಿಗೆಗೆ ಬಂದು, ಮಣೆಯಮೇಲೆ ಗಣಪತಿಯ ಮಂಡಲ ಬರೆದು ಮೊದಲಾಗಿ ಆತನನ್ನು ಪೂಜಿಸಿ, ನಂತರ ದನಕರುಗಳ ಮೈ,ಕಾಲು-ಬಾಯಿ ಇವುಗಳನ್ನೆಲ್ಲಾ ಸಾಂಕೇತಿಕವಾಗಿ ತೊಳೆದಮೇಲೆ ಅವುಗಳಿಗೆ ಗಂಧ, ಅರಿಶಿನ, ಕುಂಕುಮ, ಅಕ್ಷತೆ ಹಚ್ಚುತ್ತಾನೆ. ನಂತರ ಅಡಿಕೆಯ ಸರ ಹಾಗೂ ಚಾಟಿ[ ಅಡಿಕೆ, ವೀಳ್ಯದೆಲೆ, ಶಿಂಗಾರ, ತೆಳ್ಳವು ಎಂಬ ದೋಸೆ [ಇದು ಕೆಲವು ಕಡೆ ಇಲ್ಲ] ಇವುಗಳನ್ನೆಲ್ಲಾ ಸೇರಿಸಿ ಮಾಡಿದ ಮಾಲೆಯ ಥರದ್ದು] ಕಟ್ಟುವುದು. ನಂತರ ಧೂಪಾರತಿ. ಹಣ್ಣು-ಕಾಯಿ ಮತ್ತು ಗೋಗ್ರಾಸ[ಅನ್ನಕ್ಕೆ ತುಪ್ಪ, ಬೆಲ್ಲ, ಬಾಳೆಹಣ್ಣು, ಕಾಯಿತುರಿ ಸೇರಿಸಿ ಪಾಕ ಬರಿಸಿದ್ದು] ನಿವೇದಿಸಿ, ಗೋಗ್ರಾಸವನ್ನು ದನಕರುಗಳಿಗೆ ತಿನ್ನಲು ಕೊಡುತ್ತೇವೆ. ನಂತರ ಮತ್ತೆ ಅವುಗಳ ಬಾಯಿ ತೊಳೆದು ಮಂಗಳಾರತಿ. ಇದಾದಮೇಲೆ ಮಾತುಬಾರದಿದ್ದರೂ ಜೀವನದಲ್ಲಿ ಎರಡನೆಯ ಅಮ್ಮನಾಗಿ ಜೀವಿತದುದ್ದಕ್ಕೂ ಹಾಲುಣಿಸುವ ಗೋವಮ್ಮನಲ್ಲಿ ಪ್ರಾರ್ಥನೆ. ವರ್ಷವಿಡೀ ಹುಲ್ಲಿಗಾಗಲೀ ನೀರಿಗಾಗಲೀ ಚಿಂತಿಸದಿರು ಎಂಬ ಮನೋನಿವೇದನೆ. ಪ್ರಸಾದ ಸ್ವೀಕರಣೆಯಾದ ಮೇಲೆ ಜೋರಾಗಿ ಜಾಗಟೆಬಡಿಯುತ್ತಾ ದನಕರುಗಳನ್ನು ಹಗ್ಗದಿಂದ ಬಿಡಿಸಿ ಗೋಮಾಳಕ್ಕೆ ಕಳುಹಿಸುವುದು. ನಂತರ ಪ್ರಾದೇಶಿಕವಾಗಿ ಅಲ್ಲಲ್ಲಿಯ ಚೌಡಿ, ನಾಗ, ಹುಲಿಯಪ್ಪ ಹೀಗೇ ಎಲ್ಲಾ ದೇವರಿಗೂ ದನಕರುಗಳ ಸಂಖ್ಯೆಯಷ್ಟೇ ಕಾಯಿ ಒಡೆದು ಅವುಗಳ ಉಳಿವನ್ನು ಬಯಸಿ ಪ್ರಾರ್ಥಿಸುವಷ್ಟರಲ್ಲಿ ಮಧ್ಯಾಹ್ನದ ಭೋಜನದ ಸಮಯವಾಗಿರುತ್ತದೆ.

ಇದು ನಮಗೆ ಆ ಮೂಕ ಪ್ರಾಣಿಯ ಜೊತೆಗಿರುವ ಅವಿನಾಭಾವ ಸಂಬಂಧಕ್ಕೆ ಕೃತಜ್ಞತೆ ಸಲ್ಲಿಸುವ ಕ್ರಮವಾಗಿದೆ. ದಿನಂಪ್ರತಿ ಇಷ್ಟೆಲ್ಲಾ ಮಾಡಲು ಸಾಧ್ಯವೇ ? ಹಾಗಂತ ಅವುಗಳಿಗೂ ಮನ್ನಣೆ, ರಕ್ಷಣೆ ಎಲ್ಲವನ್ನೂ ತೋರಬೇಕಲ್ಲವೇ ? ತನ್ನ ಎಳೆಗರುವನ್ನು ತನ್ನ ಮುಂದೇ ದರದರನೆ ಎಳೆದು ಪಕ್ಕಕ್ಕೆ ಕಟ್ಟಿ ತನ್ನ ಹಾಲು ಹಿಂಡಿಕೊಳ್ಳುವಾಗ ಬೇಡವೆನ್ನುವುದಿಲ್ಲ ಆ ತಾಯಿ. ಹೋರಿಗರುವನ್ನು ನೀಡಿ ಅವುಗಳ ಭುಜಬಲದಿಂದ ಗದ್ದೆಯನ್ನು ಹಸನುಮಾಡಲು ಅನುಕೂಲ ಕಲ್ಪಿಸುವುದೂ ಅವಳ ಸಹಾಯ. ಬೇಕಾದ ಹೈನಕ್ಕೆ, ಗೊಬ್ಬರಕ್ಕೆ ಎಲ್ಲಕ್ಕೂ ಗೋವೇ ಮೂಲವಾಗಿ ಗೋವಾಧಾರಿತ ಜೀವನ ಕೃಷಿಕನದಾಗಿದೆ. ಅವಳ ಉಪಕಾರ ಸ್ಮರಣೆಗಾಗಿ ಈ ಕಾರ್ಯ.

ಬಲೀಂದ್ರ ವಿಸರ್ಜನೆ

ಮೂರನೇ ದಿನದ ಸಾಯಂಕಾಲ ಬಲೀಂದ್ರನಿಗೆ ಮತ್ತೆ ಪೂಜೆ. ಕೆಲಸಗಾರರು ಹಿಂದೆಲ್ಲಾ ಪ್ರೀತಿಯಿಂದ ಹಬ್ಬಗಾಣಿಕೆ ನೀಡುತ್ತಿದ್ದರು. ಹಾಗೆ ಬಂದ ಹಬ್ಬಗಾಣಿಕೆ ಹಣ್ಣು-ಕಾಯಿ-ಮರದ ಸಾಮಾನುಗಳನ್ನು ಬಲೀಂದ್ರನಿಗೆ ಅರ್ಪಿಸುವುದು ನಡೆದು ಬಂದಿತ್ತು. ಒಟ್ಟಾರೆ ಬಂದು, ಮೂರುದಿನ ನಮ್ಮ ಮನೆಗಳಲ್ಲಿದ್ದು, ನಮ್ಮ ಹಬ್ಬವನ್ನು ಚೆನ್ನಾಗಿ ನಡೆಸಿಕೊಟ್ಟು, ಅದನ್ನು ಸಾಕ್ಷೀಕರಿಸಿ ಮರಳುವ ದೊರೆರಾಯನಿಗೆ ಹಾರ್ದಿಕ ಬೀಳ್ಕೊಡುಗೆಯ ತಯಾರಿ. ಹಣ್ಣು-ಕಾಯಿ-ಹಾಲು ನೈವೇದ್ಯ. ನಾಲ್ಕಾರು ವಿಧದ ಮಂಗಳಾರತಿ. ಪ್ರಾರ್ಥನೆ. ನಂತರ ಪ್ರಸಾದ ಸ್ವೀಕರಿಸಿ, ಸಾಂಕೇತಿಕವಾಗಿ ಕುಳಿತ ಸ್ಥಾನದಿಂದ ವಿಸರ್ಜನೆ. ಆಮೇಲೆ ದೊಂದಿಗಳು, ಕರ್ಪೂರ ಜ್ಯೋತಿಗಳು, ತಾಳ, ಜಾಗಟೆ, ಶಂಖ ಮೊದಲಾದ ಹಲವು ಮನೆವಾದ್ಯಗಳೊಂದಿಗೆ ಅಡಿಕೆಗೊನೆಯನ್ನು ಎಬ್ಬಿಸಿ ನಿಧಾನಕ್ಕೆ ಕೊಂಡೊಯ್ದು ತುಳಸಿಯ ಮುಂದೆ ಕೂರಿಸುವುದರೊಂದಿಗೆ ಬಲಿಚಕ್ರವರ್ತಿ ಪಾತಾಳಕ್ಕೆ ಮರಳುತ್ತಾನೆಂಬ ಐತಿಹ್ಯ. ಆತನ ಮೈಮೇಲಿನ ಪ್ರಸಾದವನ್ನು " ಕಟ್ಟಿದ್ದೇ ಕರೆಯಲಿ, ಬಿತ್ತಿದ್ದೇ ಬೆಳೆಯಲಿ ಬಲೀಂದ್ರನ ರಾಜ್ಯವೇ ಆಗಲಿ " ಎನ್ನುತ್ತಾ ಮನೆಯ ಛಾವಣಿಯ ಮೇಲೆ ಎಸೆದು ಪ್ರಾರ್ಥಿಸುವುದು ನಮ್ಮ ಅನ್ಯೋನ್ಯತೆ! ಹೀಗೇ ಮೂರುದಿನಗಳ ರಾಜ್ಯಭಾರದ ಭಾಗ್ಯವನ್ನು ಪಡೆದ ಬಲೀಂದ್ರ ಇವತ್ತಿಗೂ ಭಾರತದಾದ್ಯಂತ ಜನಮಾನಸದಲ್ಲಿ ಸಲ್ಲುವ ಚಕ್ರವರ್ತಿ.

ಇಂದಿನಿಂದ ಆರಭ್ಯ ಕಾರ್ತೀಕ ಮಾಸ ಪೂರ್ತಿ ಪಿತೃಗಳ ನೆನಪಿಗಾಗಿ, ಸ್ವರ್ಗದಲ್ಲಿರುವ ಪೂರ್ವಜರಿಗಾಗಿ ಮುಡಿಪಾಗಿಡುವ ಆಕಾಶಬುಟ್ಟಿಗಳನ್ನು ಎತ್ತರದಲ್ಲಿ ಕಟ್ಟಿ ಅದರಲ್ಲಿ ವಿದ್ಯುದ್ದೀಪ ಉರಿಸಲಾಗುತ್ತದೆ [ಹಿಂದಕ್ಕೆ ಅವುಗಳಲ್ಲೂ ಎಣ್ಣೆಯ ದೀಪಗಳನ್ನೇ ಉರಿಸುತ್ತಿದ್ದರಂತೆ!]

ಈ ನಡುವೆ ಕೆಲವುಕಡೆ ಮೂರನೇ ದಿನ ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದ ನೆನಪಿಗೆ ಗೋವರ್ಧನ ಪೂಜೆಯನ್ನೂ ಸಾಂಕೇತಿಕವಾಗಿ ನಡೆಸುತ್ತಾರೆ. ಮೂರನೇ ದಿನದ ಮಾರನೇ ದಿನ ನಮ್ಮೂರ ಕಡೆಯಲ್ಲಿ ದೇವರ ಹಬ್ಬ! ಅಂದರೆ ಇಲ್ಲೀತನಕ ಮಾಡಿದ್ದು ದೇವರ ಹಬ್ಬವಲ್ಲವೇ ? ಹಾಗಲ್ಲ ಸ್ವಾಮೀ, ಇದು ದೇವಸ್ಥಾನಗಳಲ್ಲಿ ನಡೆಯುವಂಥದ್ದು. ಗ್ರಾಮದಲ್ಲಿ ಸಾಧ್ಯವಾದ ಎಲ್ಲರೂ, ನವದಂಪತಿಗಳೊಂದಿಗೆ ದೇವಸ್ಥಾನಗಳಿಗೆ ತೆರಳುತ್ತಾರೆ. ಅಲ್ಲಿ ಸರ್ವಾಭರಣ ಭೂಷಿತವಾದ ದೇವರ ದರ್ಶನ ಪಡೆದೆಯುತ್ತಾರೆ. ಸಾರ್ವತ್ರಿಕ ಪೂಜೆಯೊಂದು ನಡೆದು ಮಂಗಳಾರತಿಯಾಗಿ ಪ್ರಸಾದ ವಿತರಣೆಯಾಗುತ್ತದೆ. ಇಲ್ಲಿಗೆ ದೀಪಾವಳಿ ಇನ್ನು ಮುಂದಿನ ವರ್ಷ!


ಮೂರೂ ದಿವಸ ಜಾನಪದ ಆಟಗಳದ್ದೇ ಕಾರುಬಾರು. ಕಂಬಳಿಯಲ್ಲಿ ಅವಿತುಕೊಂಡವನಿಗೆ ಪಪ್ಪಾಯಿಯನ್ನು ಹೊಡೆಯುವ ಹೊಂಡೆ, ಈಡುಗಾಯಿ, ಕಬಡ್ಡಿ, ಓಟ, ಜಿಗಿತ, ಅದೂ-ಇದೂ ಎತ್ತುವುದು, ಎಣ್ಣೆಗಂಬ ಹತ್ತುವುದು....ಇವೇ ಮೊದಲಾದ ಆಟಗಳು. ಅನೇಕ ಕಡೆ ತಾಳಮದ್ದಲೆ, ಯಕ್ಷಗಾನಗಳು. ಹಲವು ವಿಧದ ಸ್ಪರ್ಧೆಗಳು. ಒಟ್ಟರ್ಥದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಪ್ರತೀದಿನ ಮನೋರಂಜನೆ. ಮೂರೂ ದಿನಗಳಂದು ಸಾಯಂಕಾಲ ದೀಪಗಳನ್ನು ಬೆಳಗುತ್ತಾರೆ. ಕಾರ್ತೀಕ ಮಾಸದ ಆರಂಭವಾಗುವುದರಿಂದ ಕೆಲವರು ದೇವಸ್ಥಾನಗಳಲ್ಲಿ ದೀಪೋತ್ಸವವನ್ನು [ಬಿದಿಗೆಯಿಂದ] ಆರಂಭಿಸುತ್ತಾರೆ. ಹಗಲು ಕಡಿಮೆಯಾಗಿ ಇರುಳ ಕತ್ತಲೆಯಲ್ಲಿ ಅನುಕೂಲಕ್ಕೂ ಅಲಂಕಾರಕ್ಕೂ ಆಗಲೆಂದು ಹಚ್ಚುವುದೇ ದೀಪ. ಈ ದೀಪ ಕೊಡುವ ಆನಂದವನ್ನು ವಿದ್ಯುದ್ದೀಪ ಕೊಡುವುದಿಲ್ಲ ಎಂದರೆ ತಪ್ಪಾಗಲಾರದೇನೋ. ಇಷ್ಟೆಲ್ಲಾ ಪುರಾಣ ಕೇಳಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು, ಅಭಿವಂದನೆಗಳು ಮತ್ತು ಹಾರ್ದಿಕ ಶುಭಾಶಯಗಳು.