ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 2, 2010

ಕುಸುಮಾಗ್ರಜರು

ಕವಿ ಸ್ಮರಣೆಯಲ್ಲಿ ಬರೆದ ಕೆಲವು ಚುಟುಕಗಳು, ಹಿರಿಯ ಸ್ನೇಹಿತರೂ ಕವಿ-ಸಾಹಿತಿಗಳೂ ಆದ ಶ್ರೀ ಜಯಂತ್ ಕಾಯ್ಕಿಣಿಯವರಿಗೆ 'ಕುಸುಮಾಗ್ರಜ' ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಕೆಲವು ಕವಿ-ಸಾಹಿತಿಗಳನ್ನು ಕಲೆಹಾಕಿ ನೆನೆಸಲು ಪ್ರಯತ್ನಿಸಿದ ರೀತಿ.


ಕುಸುಮಾಗ್ರಜರು


ಕಾವ್ಯವನು ಬರೆದಂದು ಹಬ್ಬ ಕವಿಮನೆಯಲ್ಲಿ
ದಿವ್ಯ ಮಂಗಳ ಕೂಸ ಹಡೆದ ರೀತಿಯಲಿ
ಭವ್ಯ ಭಾರತದ ಕನಸನು ಹೊತ್ತು ತಾ ಬರೆವ
ನವ್ಯನೋವನು ಮರೆತು | ಜಗದಮಿತ್ರ

ಧರ್ಮವೆಂಬುದು ಮನುಜಮತದ ತತ್ವವದಕ್ಕು
ಕರ್ಮವೆಂಬುದು ನಮ್ಮ ಕ್ರಿಯೆಯ ಪ್ರಕ್ರಿಯೆಯು
ನಿರ್ಮಾಣಮಾಡು ನೀ ವಿಶ್ವ ಕುಟುಂಬವನು
ಮರ್ಮವರಿಯುತ ಬದುಕೋ | ಜಗದಮಿತ್ರ


ಕಾರಂತರೆಂಬವರು ಮೇರೆಮೀರಿದ ವ್ಯಕ್ತಿ
ಭಾರೀ ಗಾತ್ರದ ಕೊಡುಗೆ ಕನ್ನಡಮ್ಮನಿಗೆ
ಯಾರ ಹಂಗಿಲ್ಲದಲೆ ನಡೆದರವರದೇ ದಾರಿ
ಭೂರಿ ಭೋಜನ ತಲೆಗೆ | ಜಗದಮಿತ್ರ



ವರಕವಿಯು ತಾನೆಂಬ ಗುರುತು ಮರೆಯುತ ಬೇಂದ್ರೆ
ಚರಕದಲಿ ತೆಗೆದರದೊ ಹಲವು ನೂಲುಗಳ
ಮರಕತ ಮಾಣಿಕ್ಯ ವೇದ ವೇದಾಂತಗಳ
ಸರಕು ತುಂಬುತ ನೋಡು | ಜಗದಮಿತ್ರ




ನರಸಿಂಹನೆಂಬ ಕವಿ ಬರಸೆಳೆದು ಕನ್ನಡವ
ಹರನ ಹೃದಯದಿ ಹರಿಯ ಕಂಡರದೋ ತಿಳಿದು
ಬರಿದೇ ಭಾಗವ ಮಾಡಿ ಪೂಜಿಸುವ ಜನರಲ್ಲಿ
ಗುರಿ ತೋರಿದರು ಹದದಿ | ಜಗದಮಿತ್ರ




ಮಂಗೇಶಕವಿತಾನು ಪುಂಗಿಯೂದುತ ಕರೆದ
ಮಂಗಳದ ಅಂಗಳಕೆ ಕಬ್ಬದಾವುಗಳ !
ಮಂಗಳೂರಿನ ಜನತೆ ಸತತ ನೆನೆಯುವಹಾಗೆ
ಬೆಂಗಳೂರನೂ ಮಿಳಿಸಿ | ಜಗದಮಿತ್ರ




ವಸುಮತೀಶನ ದಯದಿ ಕವನಕುಸುಮಂಗಳನು
ಕಸುವಿನಲ್ಕಡೆದು ಕೊಡಲದುವೆ ಮಹಾಕಾವ್ಯ
ಹಸುವಿನಂದದಿ ಕವಿಯು ಉಪಕಾರಿ ಲೋಕದಲಿ
ಕುಸುಮಾಗ್ರಜರ ನುತಿಸು | ಜಗದಮಿತ್ರ