ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, October 18, 2010

ನಾವು ನೀವು ಮತ್ತು ಅವರು

ಚಿತ್ರ ಕೃಪೆ : ಅಂತರ್ಜಾಲ
ನಾವು ನೀವು ಮತ್ತು ಅವರು


ಈ ಹೆಸರನ್ನು ಕೇಳುತ್ತಿದ್ದಾಗ ಯಾವುದೋ ಹಿಂದೀ ಸಿನಿಮಾ ತಲೆಬರೆಹವೇನೋ ಅನಿಸುತ್ತದಲ್ಲವೇ ? ಸದ್ಯಕ್ಕೆ ಇದು ಅದಲ್ಲ. ಇದು ಒಬ್ಬ ಮಹಾತ್ಮರ ಕುರಿತಾದ ವಿಷಯ! ಅನೇಕಸಲ ನಾವು ನಮ್ಮ ನಡುವೆ ಯಾರ್ಯಾರೆಲ್ಲ ಇದ್ದಾರೆಂಬುದನ್ನು ಲಕ್ಷ್ಯಕ್ಕೇ ತೆಗೆದುಕೊಳ್ಳುವುದಿಲ್ಲ. ಇಹದಲ್ಲಿ ಹುಟ್ಟಿದ ಪ್ರತೀ ಜೀವಿಗೂ ’ಮರಣವೇ ಮಹಾನವಮಿ’ ಎಂಬುದು ಗಾದೆ. ಆದರೆ ಮಹಾನವಮಿಯಂದು ಅತಿಸಹಜ ಮರಣವನ್ನು ಪಡೆಯಲು ಅದೃಷ್ಟಬೇಕೆಂಬುದು ಬಲ್ಲವರು ತಿಳಿಹೇಳುವ ಸತ್ಯ. ಇಂತಹ ಮಹಾನವಮಿಯ ಮರಣವನ್ನು ಪಡೆದ ಶ್ರೇಷ್ಠ ಸಾಧುವೊಬ್ಬರ ಬಗ್ಗೆ ಬರೆಯಲು ಮನಸ್ಸು ಹವಣಿಸಿತು. ಪ್ರಾಯಶಃ ಇಂಥವರ ಕಥೆಯನ್ನು ಹೇಳುವುದೂ ಕೇಳುವುದೂ ಕೂಡ ಒಂದು ಪುಣ್ಯಭಾಜನ ಕೆಲಸ ಎಂಬನಿಸಿಕೆಯಿಂದ ಇಲ್ಲಿ ಬರೆಯತೊಡಗಿದ್ದೇನೆ.

ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ ಒಬ್ಬ ಹುಡುಗನ ಜನನ: ಸರಿಸುಮಾರು ೯೮ ವರ್ಷಗಳ ಹಿಂದೆ ಆಯಿತು. ಮಗು ಅತಿ ಸಣ್ಣವಿರುವಾಗಲೇ ತಾಯಿ-ತಂದೆಯರ ಅಗಲುವಿಕೆ. ಮನೆಯಲ್ಲಿ ಇನ್ನಾರೂಗತಿಯಿರದ ಸ್ಥಿತಿಯಲ್ಲಿ ಸೋದರಮಾವನಲ್ಲಿ ಒಂದಷ್ಟುಕಾಲ ತಂಗಿದ್ದ ಈ ಹುಡುಗ ಕಾಲಾನಂತರ ತನಗೆ ಸಂಸಾರಿಗಳಿಗಿಂತ ಸನ್ಯಾಸಿಗಳ ಬದುಕೇ ಹತ್ತಿರವಾಗುವುದನ್ನೂ, ಇಷ್ಟವಾಗುವುದನ್ನೂ ಕಂಡ. ಪಾಲಕರಿಲ್ಲದ ಬಾಲ್ಯದಲ್ಲಿ ಆತನಿಗೆ ಅನೇಕ ಕಹಿದಿನಗಳನ್ನು, ಕಷ್ಟಗಳನ್ನು ಮತ್ತು ಮೂದಲಿಕೆಗಳನ್ನು ಅನುಭವಿಸಬೇಕಾಗಿ ಬಂತು. ಅನೇಕ ದೇವಾಲಯಗಳು, ಊರುಗಳು, ಪುಣ್ಯಕ್ಷೇತ್ರಗಳನ್ನು ಸಂಚರಿಸುತ್ತಾ ಬ್ರಾಹ್ಮಣ್ಯದ ಕರ್ತವ್ಯವಾದ ವೇದಗಳನ್ನು ಕಂಠಸ್ಥಮಾಡಿಕೊಂಡ. ಅದ್ವೈತದ ಪ್ರತಿಪಾದಕರಾದ ಶ್ರೀಶಂಕರರ ತತ್ವಗಳು ಬಹಳ ಆಪ್ತವಾದವು. ತಿರುಗುತ್ತಾ ತಿರುಗುತ್ತಾ ಮಧುಕರೀ ಭಿಕ್ಷಾನ್ನಸೇವಿಸುತ್ತ ನೈಷ್ಠಿಕ ಬ್ರಹ್ಮಚರ್ಯವನ್ನು ಪರಿಪಾಲಿಸುತ್ತ ಆತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಲಸೆ ಗ್ರಾಮಕ್ಕೆ ಬಂದ. ಅಲ್ಲಿ ಶೀಗೇಹಳ್ಳಿಯ ಶಿವಾನಂದ ಸ್ವಾಮಿಗಳ ಶಿಷ್ಯರಾದ ಗಣೇಶ ಸಾಧುಗಳ ಪರಿಚಯವಾಗಿ ಅವರೊಂದಿಗೇ ಬದುಕನ್ನು ತಪಸ್ಸಿನಲ್ಲಿ ಕಳೆಯಲು ನಿರ್ಧರಿಸಿದ. ಅಲ್ಲಿ ಈ ರೀತಿ ಮೂರು ಸಾಧಕ ಸಾಧುಗಳು ಒಟ್ಟಿಗೇ ಮಧುಕರೀ ಭಿಕ್ಷಾನ್ನ ಸೇವಿಸುತ್ತ ತಂತಮ್ಮ ತಪಸ್ಸಿನಲ್ಲಿ ಕಳೆದರು.

ಕಾಲಕ್ರಮೇಣ ಸಾಧುಗಳಲ್ಲಿ ಹಿರಿಯರಾದ ಗಣೇಶ್ ಸಾಧುಗಳು ನಿಧನರಾದರು. ಅಲ್ಲಿ ಇಬ್ಬರೇ ಇರಬೇಕಾಯಿತು. ಈ ಪೈಕಿ ಹಾಸನದ ಆ ಸಾಧುವಿಗೆ ಬಹಳಕಾಲ ಅಲ್ಲಿರಲು ಮನಸ್ಸಾಗಲಿಲ್ಲ. ಆಧ್ಯಾತ್ಮದ ಶಿಖರವನ್ನೇರಬಯಸಿದ್ದ ಮನಸ್ಸು ತಕ್ಕ ಪರಿಸರವನ್ನೂ, ಪ್ರಭಾವಿ ಗುರುವನ್ನೂ ಹುಡುಕುತ್ತಿತ್ತು. ಅಲ್ಲಿಂದ ಹೊರಗೆ ನಡೆದುಬಿಟ್ಟರು. ಹೊರಗಡೆ ಚರಯೋಗಿಯಾಗಿ ಅಲೆದಾಡುವಾಗ ಅವರ ನಿತ್ಯದ ಅನ್ನಬೇಯಿಸುವ ಪಾತ್ರೆಗಳನ್ನೂ, ಅವರಹತ್ತಿರವಿದ್ದ ಯಾರೋ ಭಕ್ತರು ನೀಡಿದ್ದ ಕಾಣಿಕೆಯ ಹಣವನ್ನೂ ಪಾಪಿಗಳ್ಯಾರೋ ಕದ್ದರು. ಹೀಗಾಗಿ ಎಲ್ಲೆಲ್ಲೋ ಅಲೆಯುತ್ತ ಇರುವ ಕಾಲವಿದಲ್ಲ, ಮುಪ್ಪಡರಿದ ಈ ವೇಳೆ ತಮಗೆ ಸದ್ಗುರುವೊಬ್ಬರ ದಿವ್ಯ ಕ್ಷೇತ್ರ ಸಿಕ್ಕರೆ ಅದು ಭಾಗ್ಯವೆಂದು ನೆನೆಸುತ್ತಾ ದಿನಗಳೆಯುತ್ತಿರುವಾಗ ಹುಡುಕುತ್ತ ಆತ ಕಂಡಿದ್ದು ವರದಹಳ್ಳಿ ಕ್ಷೇತ್ರ. ಮಹಾಮಹಿಮ ಶ್ರೀ ಶ್ರೀಧರ ಭಗವಾನರು ತಮ್ಮ ಅಖಂಡ ತಪೋಬಲದಿಂದ ತೀರ್ಥವನ್ನು ಸೃಜಿಸಿ, ಅಲ್ಲಿಯೇ ವಾಸವಿದ್ದು-ತಪಗೈದು ಲಕ್ಷಾಂತರ ಜನರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದ, ಸಮಾಧಿಸ್ಥರಾಗಿದ್ದರೂ ಇನ್ನೂ ಭಕ್ತರ ಅಹವಾಲುಗಳನ್ನು ಸ್ವೀಕರಿಸುತ್ತಿರುವ ಸ್ಥಳ ಕಣ್ಣೆದುರಿಗೆ ನಿಂತಿತ್ತು. ಅಲ್ಲಿಗೇ ಹೋಗಿಬಿಡುವುದಾಗಿ ತೀರ್ಮಾನವಾಯಿತು. ಆದರೆ ಅಲ್ಲಿ ಆಶ್ರಮದ ಕಟ್ಟುಪಾಡಿನಂತೇ ಆಶ್ರಮದ ಆಡಳ್ತೆಯ ಪದಾಧಿಕಾರಿಗಳು ಹಾಗೆಲ್ಲ ಕಂಡಕಂಡ ಸಾಧುಗಳಿಗೆ ಪುರಸ್ಕಾರವೀಯುವ ಪರಿಪಾಠವಿರಲಿಲ್ಲ. ತಾನು ಹೀಗೆ ಎಂಬ ಪ್ರಲೋಭನೆಯನ್ನು ಉಂಟುಮಾಡಿ ಉಳಿಯುವ ಮನೋಭಾವ ಈ ವ್ಯಕ್ತಿಯದಲ್ಲ! ಏನುಮಾಡುವುದು ? ಗಣೇಶ್ ಸಾಧುಗಳ ಪೂರ್ವಾಶ್ರಮ ಮನೆತನದಲ್ಲಿ ಕೆಲವರು ಅವರ ಹೊಣೆಗಾರಿಕೆಯನ್ನು ಹೊತ್ತು ತಮ್ಮಲ್ಲೇ ಉಳಿದುಕೊಳ್ಳಲು ಅವಕಾಶಕಲ್ಪಿಸಿದರೂ ಈ ಸಾಧು ಮಹಾತ್ಮ ಬಹಳಕಾಲ ಅಲ್ಲಿರಲು ಒಪ್ಪಲಿಲ್ಲ. ಆಗಲೇ ತುಂಬಾ ವಯಸ್ಸಾಗಿತ್ತು. ಸುಮಾರು ೮೦ಕ್ಕೂ ಹೆಚ್ಚಿನ ವಯಸ್ಸು. ಕೈಕಾಲಿನಲ್ಲಿ ಅಷ್ಟೊಂದು ತ್ರಾಣವಿರಲಿಲ್ಲ. ಆದರೆ ಮನಸ್ಸು ಮಾತ್ರ ಯಾರಸೇವೆಯನ್ನೂ ಪಡೆಯಲು ಒಪ್ಪುತ್ತಿರಲಿಲ್ಲ. ಹಠಯೋಗದಿಂದಲೂ, ದಿನದಲ್ಲಿ ಮಧ್ಯಾಹ್ನದಲ್ಲಿ ಕೇವಲ-ಕೇವಲ-ಕೇವಲ ಒಂದೇ ಊಟದಿಂದಲೂ
ತಮ್ಮ ಭೌತಿಕ ಕಾಯವನ್ನು ಮಣಿಸಿದ್ದರು ಈ ಯೋಗಿಗಳು.

ಅಂತೂ ಹಾಗೂ ಹೀಗೂ ಮಾಡಿ ವರದಹಳ್ಳಿಯ ಅಮ್ಮನವರ ದೇವಸ್ಥಾನದಲ್ಲಿ, ಅಲ್ಲಿನ ಸಮಿತಿಗೆ ಹೇಳಿ ಕೊಠಡಿಯೊಂದು ದೊರೆಯಿತು. ಅಲ್ಲೇ ಅನ್ನಮಾಡಿಕೊಂಡು ಒಪ್ಪೊತ್ತೂಟ ಮುಂದುವರಿಸಿ ತಮ್ಮ ನೇಮನಿಷ್ಠೆಯಲ್ಲಿ ಯಾವಕೊರತೆಯನ್ನೂ ಮಾಡದೇ ಮುಂದುವರಿದರು. ಮುಪ್ಪಿನ ದೇಹದಲ್ಲಿ ವರದಹಳ್ಳಿಯ ಶ್ರೀಧರರ ಸಮಾಧಿ ಸ್ಥಳಕ್ಕೆ ಹೋಗುವ ಮೆಟ್ಟಿಲುಗಳನ್ನು ಏರುವುದು ಅನೇಕರಿಗೆ ಆಗದ ಕೆಲಸ. ಆದರೂ ಈತ ಮಾತ್ರ ನಿತ್ಯವೂ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲೇ ತಣ್ಣೀರಿನಲ್ಲಿ ಶೌಚ-ಸ್ನಾನಾದಿಗಳನ್ನು ಪೂರೈಸಿ, ಅನುಷ್ಠಾನಕ್ಕೆ ಕುಳಿತರೆ ಮಧ್ಯಾಹ್ನ ೧೨ರ ವರೆಗೆ ನಿತ್ಯವೂ ತಪೋನಿರತರಾಗಿರುತ್ತಿದ್ದರು. ಈ ವೇಳೆಯಲ್ಲಿ ಬೆಳಿಗ್ಗೆ ನೀರನ್ನು ಬಿಟ್ಟರೆ ಯಾವುದೇ ಆಹಾರ ಸೇವಿಸುತ್ತಿರಲಿಲ್ಲ.

ಒಮ್ಮೆ ಇವರು ಅಮ್ಮನವರ ದೇವಸ್ಥಾನದಿಂದ ಸಮಾಧಿಮಂದಿರಕ್ಕೆ ಹೋಗಿಬರುವ ವೇಳೆ ಮಳೆಯಲ್ಲಿ ಜಾರಿ ಬಿದ್ದುಬಿಟ್ಟರಂತೆ. ಆಗ ಹಣೆಯಭಾಗ ಒಡೆದು ಬಹಳ ನೋವು ಅನುಭವಿಸಿದರೂ ಆಶ್ರಮದ ಜನರಲ್ಲಿ ಯಾರ ಸಹಾಯವನ್ನೂ ಇವರು ಬಯಸಲಿಲ್ಲ. ಸನ್ಯಾಸ ದೀಕ್ಷೆಯನ್ನು ಪಡೆದರೆ ತಾನು ಕರ್ಮಾಧಿಕಾರವಿಲ್ಲದೇ ಪರರಿಂದ ಸೇವೆಮಾಡಿಸಿಕೊಳ್ಳಬೇಕಾಗುತ್ತದೆಂಬ ಒಂದೇ ಉದ್ದೇಶದಿಂದ ಸನ್ಯಾಸದೀಕ್ಷೆಯನ್ನು ತೆಗೆದುಕೊಳ್ಳದೇ ಸಾಧುವಾಗಿ ಬದುಕಿದ ಈ ಮಹಾನ್ ವ್ಯಕ್ತಿಯ ವ್ಯಕ್ತಿತ್ವದ ಅನುಭವ ಆಶ್ರಮದ ಆಡಳ್ತೆಯವರಿಗೆ ಆಗ ಅರಿವಿಗೆ ಬಂತು. ಅವರನ್ನು ಕರೆದು ಸಮಾಧಿ ಮಂದಿರಕ್ಕೆ ಹತ್ತಿರದಲ್ಲಿರುವ ಗುರುಕುಲ ಕುಟೀರದಲ್ಲಿ ಕೊಠಡಿಯೊಂದನ್ನು ಕೊಟ್ಟರು.

ಏನೇ ಕೊಡಲಿ ಬಿಡಲಿ ತಾನಾಯಿತು ತನ್ನ ಕರ್ತವ್ಯವಾಯಿತು ಎಂದುಕೊಂಡಿದ್ದ ಅವರೇ ಶ್ರೀ ಕೇಶವಮೂರ್ತಿಗಳು. ಮೊನ್ನೆ ಮಹಾನವಮಿಯ ದಿನ ಅನಾಯಾಸವಾಗಿ ಆಶ್ರಮದ ಪರಿಸರದಲ್ಲೇ ತಮ್ಮ ಇಹಲೋಕಯಾತ್ರೆ ಪೂರೈಸಿದ ಈ ಸಾಧುಗಳಿಗೆ ದಿನವೊಂದರಹಿಂದೆ ಸ್ವಲ್ಪ ಅಸ್ವಾಸ್ಥ್ಯ ಬಾಧಿಸಿದ ಕಾರಣ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲು ಕೆಲವು ಭಕ್ತರು ಹವಣಿಸಿದರೂ ಆಗಲೇ ಅವರು ಹೇಳಿದ್ದರಂತೆ " ನನ್ನನ್ನು ಇಲ್ಲೇ ಬಿಡಿ, ನನಗೆ ಚಿಕಿತ್ಸೆ ಬೇಡ, ನಾನು ಇವತ್ತೇ ತೆರಳುತ್ತೇನೆ " ಎಂಬುದಾಗಿ. ಹಾಗೆ ಅವರು ಹೇಳಿದರೂ ಮನಸ್ಸುತಡೆಯದೇ ಅವರನ್ನು ವಾಹನವೊಂದರಲ್ಲಿ ಕುಳ್ಳಿರಿಸಿ ಕರೆದೊಯ್ಯಲು ತಯಾರಿ ನಡೆಸುತ್ತಿರುವಾಗಲೇ ಅವರು ಇಹವನ್ನು ತೊರೆದುಬಿಟ್ಟರು. ವರದಹಳ್ಳಿಯ ಕ್ಷೇತ್ರಕ್ಕೆ ಇಂತಹ ತಪೋಧನರು ಕೆಲವರು ಬರುತ್ತಿರುತ್ತಾರೆ. ಎಷ್ಟೆಂದರೂ ಅದು ಸಾಧಕರೊಬ್ಬರ ಅಪ್ರತಿಮ ಸಾಧನೆಯ ಸಿದ್ಧಿಕ್ಷೇತ್ರ. ಆಶ್ರಮದ ಆಡಳ್ತೆಯವರು, ಆಶ್ರಮದ ವೇದಪಾಠಶಾಲೆಯ ವಿದ್ಯಾರ್ಥಿಗಳು, ಹಾಗೂ ಅನೇಕ ಭಕ್ತರು ಕಣ್ಣೀರ್ಗರೆದರು. ಗುರು ಶ್ರೀಧರಭಗವಾನರ ಇಚ್ಛೆಯಂತೇ ಶ್ರೀ ಕೇಶವಮೂರ್ತಿಗಳ ಮರಣ ಆಶ್ರಮದ ತಾಣದಲ್ಲೇ ನಡೆಯಿತು. ಪುರಜನರು, ಪರಿಜನರು, ಭಕ್ತರು, ವಿದ್ಯಾರ್ಥಿಗಳು ಎಲ್ಲರೂ ಸೇರಿ ಆಶ್ರಮದ ಹೊರವಲಯದ ಬೆಟ್ಟದಲ್ಲಿ ಅವರ ಅಂತ್ಯೇಷ್ಟಿಗಳನ್ನು ನೆರವೇರಿಸಿದರು. ಸಾಧುವೊಬ್ಬರ ದೇಹ ಪಂಚಭೂತಗಳಲ್ಲಿ ಲೀನವಾಯಿತು, ಅವರ ಆತ್ಮ ವರದಹಳ್ಳಿಯ ಪರಿಸರದಲ್ಲಿ ಐಕ್ಯವಾಯಿತು;ಮೋಕ್ಷಪಡೆಯಿತು. ಅವರ ಮುಂದಿನ ಕೃತುಗಳನ್ನು ಆಶ್ರಮದವರು ಮತ್ತು ಭಕ್ತರು ಸೇರಿ ನಡೆಸಲಿದ್ದಾರೆ. ಇದನ್ನೆಲ್ಲಾ ನೋಡಿದ ನನಗೆ ಭಗವಂತ ಗೀತೆಯಲ್ಲಿ ಹೇಳಿದ ಈ ನುಡಿ --

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||

ಯಾರು ನನ್ನಲ್ಲಿ ಅನನ್ಯ ಶರಣತೆಯನ್ನು ಹೊಂದಿರುತ್ತಾರೋ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ, ನಾನೇ ವಹಿಸಿಕೊಳ್ಳುತ್ತೇನೆ.

--ಎಂಬ ಆ ಮಾತನ್ನು ಆಗಾಗ ಆಗಾಗ ನಾವು ದೃಷ್ಟಾಂತಗಳ ಮೂಲಕ ಕಾಣುತ್ತೇವಲ್ಲವೇ ?

ಯಾವಪ್ರಚಾರವನ್ನೂ ಬಯಸದೇ, ಎಲ್ಲಾ ಅರ್ಥದಲ್ಲಿ ಸರ್ವಸಂಗ ಪರಿತ್ಯಾಗಿಗಳಾಗಿ, ಆಶ್ರಮದಲ್ಲಿ ಇದ್ದೂ ಇಲ್ಲದಂತೇ ನೆಲೆಸಿದ್ದ ಇಂತಹ ತಪೋಧನರಿಗೆ ಎತ್ತಿ ಒಮ್ಮೆ ಕೈಮುಗಿದರೆ ನಮ್ಮ ಸಾಸಿವೆಯ ಭಕ್ತಿಯಾದರೂ ಸಂದೀತು ಎನ್ನುವುದು ನನ್ನ ಭಾವನೆ. ಇಂದಿನ ದಿನಮಾನದಲ್ಲಿ ಸಾಧಿಸಂತರಿಗೆ ಅಷ್ಟಾಗಿ ಅನುಕೂಲವಿಲ್ಲ. ಶುದ್ಧ ಆಹಾರ,ವಿಹಾರಗಳಿಗೆ ಅವರಿಗೆ ಮುಕ್ತ ಪರಿಸರ ದೊರೆಯುವುದಿಲ್ಲ. ಶ್ರೀಧರರ ದಿವ್ಯದೃಷ್ಟಿಗೆ ಈ ಚೇತನ ಕಂಡಿತ್ತಿರಬೇಕು. ತನ್ನಲ್ಲಿಗೇ ಕರೆಸಿಕೊಂಡು ತನ್ನಲ್ಲೇ ಇರಿಸಿಕೊಂಡು ತನ್ನಲ್ಲೇ ಅಡಕಮಾಡಿಕೊಂಡರು. ಮಹಾತ್ಮರ ಜನ್ಮವೆಲ್ಲ ಹೀಗೇ! ಅವರೆಲ್ಲಾ ಬೆಂಕಿಯಲ್ಲಿ ಅರಳಿದ ಹೂವುಗಳಾಗಿರುತ್ತಾರೆ. ಶಾಪಾನುಗ್ರಹ ಸಮರ್ಥರಾಗಿದ್ದರೂ ಯಾವ ಅಹಂಕಾರವೂ ಇಲ್ಲದೇ ಸಾತ್ವಿಕರಾಗಿ ನಮ್ಮ ನಡುವೆ ಬಾಳಿ-ಬದುಕಿ ತಮ್ಮ ಬಂದ ಕೆಲಸ ತೀರಿದ ಮೇಲೆ ಕ್ಷಣವೂ ನಿಲ್ಲದೇ ನಿರ್ಗಮಿಸಿಬಿಡುತ್ತಾರೆ. ವರದಹಳ್ಳಿ ಇಂತಹ ಅನೇಕ ತಪೋಧನರ ದಿವ್ಯಕ್ಷೇತ್ರವಾಗಿದೆ ಎಂಬುದು ತೋರಿಬರುವ ಸತ್ಯ. ನಾವೂ ನೀವೂ ಇರುತ್ತೇವೆ, ನಮ್ಮಿಂದ ಹೆಚ್ಚಿನದೇನೂ ಸಾಧಿಸಲಾಗಲಿಲ್ಲ, ಆದರೆ ’ಅವರು’ ಎಂಬುದೇ ಇಲ್ಲಿ ಇಂತಹ ಮಹಾನುಭಾವರಿಗೆ ಬಳಸಿದ ಶಬ್ದ, ಅವರು ನಮ್ಮಂತಲ್ಲ, ಅವರ ಎಳ್ಳಷ್ಟೂ ಯೋಗ್ಯತೆ ನಮ್ಮಲ್ಲಿಲ್ಲ. ಅವರಂತೇ ಆಗಲು ಜನ್ಮಾಂತರಗಳಲ್ಲೂ ಸಾಧ್ಯವೋ ಅಸಾಧ್ಯವೋ ತಿಳಿದಿಲ್ಲ. ಆದರೆ ಆಗಾಗ ಎಲ್ಲಾದರೂ ಕಾಣುವ ಇಂತಹ ’ಅವರಿಗೆ’ ನಾವು ಶರಣಾಗೋಣ, ಶಿರಬಾಗಿ ನಮಿಸೋಣ.