ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, November 9, 2010

ಢಂ ಪುಸ್ ಡಬೋಲ್ !!


ಢಂ ಪುಸ್ ಡಬೋಲ್ !!

ದೀಪಾವಳಿಗೆ ಮೂರುದಿವಸ ದಿನಕ್ಕೊಂದರಂತೇ ಪಟಾಕಿ ಸಿಡಿಸಿದರೆ ಎಂಬ ಆಸೆ ಇತ್ತು. ಆದರೆ ಮಳೆಯಲ್ಲಿ ದೀಪಾವಳಿ ಪಟಾಕಿಯೆಲ್ಲಾ ಟುಸ್ ಆದಾಗ ಮರೆವಿನ ಹಿತ್ತಲಲ್ಲಿ ಆಪದ್ರಕ್ಷಕವಾಗಿ ಹೂತಿಟ್ಟ ಔಷಧೀಯ ಮೂಲಿಕೆಗಳನ್ನು ಹೊರತೆಗೆದು ಬಳಸಿದರೆ ಹೇಗೆ ಎಂಬ ಭಾವನೆ ಬಂತು. ಹೀಗಾಗಿ ಇವತ್ತು ಸ್ವಲ್ಪ ಮಳೆಯೂ 'ನಿಂತಿದ್ದೇನೆ ' ಅಂತ ಕೆಲವುಕಡೆ ಬೋರ್ಡು ಹಾಕಿರುವುದರಿಂದ ನಿನ್ನೆಯ ಮಳೆಯಿಂದಾದ ಶೀತ ನೆಗಡಿಗೆ ನನ್ನ ಮೂಲಿಕೆಗಳೇ ಸಾಕಾಗಬಹುದು ಎಂಬ ಭಂಡ ಧೈರ್ಯದಿಂದ ನೆಲ ಅಗೆದು ಹೊರಗೆಳೆದೆ ನೋಡಿ ....... ಆಗ ಸಿಕ್ಕಿದ್ದೇ ಢಂ ಪುಸ್ ಡಬೋಲ್ !

ಢಂ !

ನಾವು ಚಿಕ್ಕವರಿರುವಾಗ ಅಂದರೆ ಕನ್ನಡಶಾಲೆಯಲ್ಲಿ ಓದುತ್ತಿರುವಾಗ ನಮಗೆ ಓದು, ಬರಹ ಬರುತ್ತಿತ್ತೇ ವಿನಃ ಹೊರಜಗತ್ತಿನ ಯಾವುದೋ ರಾಜಕೀಯಕ್ಕೋ ವ್ಯವಹಾರಗಳಿಗೋ ತಲೆ ಹಾಕಿದ ಜನವಲ್ಲ ನಾವು. ನಾವಾಯಿತು ನಮ್ಮ ಪಾಡಾಯಿತು ದೊಗಳೆ ಚಡ್ಡಿಯನ್ನು ಜಗ್ಗುತ್ತಾ ಹರಿದ ಚಪ್ಪಲಿಯನ್ನು ಸೂಜಿ ದಾರದಿಂದ ಹೊಲಿದು ಕಿತ್ತುಹೋದ ಸಂಸಾರದ ಗಂಡ-ಹೆಂಡಿರ ವೈಮನಸ್ಯ ಬಗೆಹರಿಸಿ ವಿಚ್ಛೇದನವನ್ನು ರದ್ದುಗೊಳಿಸುವಂತೇ ಎಲ್ಲಕ್ಕೂ ಪರಿಹಾರ ಕಂಡುಕೊಳ್ಳುತ್ತಾ ಬದುಕಿದ ಬಡಪಾಯಿ ಹುಡುಗರು ನಾವು. ಯಾರಾದರೂ ದಾರಿಹೋಕರು ಕಣ್ಣುಹಿಗ್ಗಿಸಿದರೆ ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಳ್ಳುವಷ್ಟು ಅಸಾಧಾರಣ ಧೈರ್ಯವಂತರು ನಾವು. ಇರಲಿ ಬಿಡಿ ಸಾಕು ಹೇಳ ಹೊರಟಿದ್ದು ನಮ್ಮಕಥೆಯನ್ನಲ್ಲ....ಸುಬ್ಬಕ್ಕನದು.

ಸುಬ್ಬಕ್ಕ ನಮ್ಮ ಪಕ್ಕದ ಮನೆಯ ಸಂಬಂಧಿ. ಆಗಾಗ ನಮ್ಮನೆಗೆ ಬರುತ್ತಿದ್ದಳು. ಸುಮಾರು ೬೦ ವಯಸ್ಸಿನ ಹೆಂಗಸು. ನೋಡುವುದಕ್ಕೆ ಸಹ್ಯಾದ್ರಿ ಸಮೂಹದ ಯಾವುದೋ ಬೆಟ್ಟ! ಬಂದಾಗ ನಮ್ಮಲ್ಲಿ ಊಟ-ತಿಂಡಿಗೆ ನಿಲ್ಲುವುದಿತ್ತು. ಅನಿರೀಕ್ಷಿತವಾಗಿ ಬರುವ ಆಕೆ ಕೆಲವೊಮ್ಮೆ ಬೇರೆ ಅಭ್ಯಾಗತರಿರುವಾಗ ಬಂದು ಕಿರಿಕಿರಿಯುಂಟುಮಾಡುವುದೂ ಇತ್ತು. ಹಾಗಂತ ನಾವೆಂದೂ ಅವಳನ್ನು ಅವಳ ಮುಂದೆ ಬೈಯ್ಯಲಿಲ್ಲ ! ಯಾಕೆಂದರೆ ಅವಳು ಮದುವೆಯಾಗಿ, ಸಂಸಾರ ಹೂಡಿ, ಕೆಲವು ಪೆದ್ದ ಮಕ್ಕಳನ್ನು ಹೆತ್ತು ಆಮೇಲಾಮೇಲೆ ಗಂಡನಕೂಡ ಜಗಳವಾಡಿ ಕೊನೆಗೊಂದು ದಿನ ಬಡ್ಡಾಕುಳಿ ತಲೆಯ ಯಜಮಾನ ರಾಮ ತನಗೆ ಬಂದ ಕೋಪವನ್ನು ಹೆಂಡತಿಯ ಮೇಲೆ ಹಾಯಿಸುವ ರಭಸದಲ್ಲಿ ತನ್ನ ಸಂಪೂರ್ಣ ಸ್ಥಿರಾಸ್ಥಿಯನ್ನು ಅದೇ ಊರಿನ ಅಣ್ಣೇ ಮನೆಗೆ ಬರೆದುಬಿಟ್ಟ ! ಢಂ ! ಶಬ್ದ ಕೇಳಲಿಲ್ಲವೇ ? ಇದೇ ಆಗಿದ್ದು ಪಾಪ, ಜೀವಮಾನದಲ್ಲಿ ಆಕೆಗೂ ಆಕೆಯ ಮಕ್ಕಳಿಗೂ ಪರರ ಮನೆಯ ಕೂಲಿ ಕೆಲಸಮಾಡುತ್ತಾ ಹೇಗೇಗೋ ಹೊಟ್ಟೆಹೊರೆದುಕೊಳ್ಳಬೇಕಾಗಿ ಬಂತು. ಇದನ್ನೇ ವಿಧಿಯಾಟವೆನ್ನೋಣವೇ ? ಹೀಗಾದ್ದರಿಂದ ಅಲ್ಲಿಂದಲಾಗಾಯ್ತು ಸುಬಕ್ಕನದು ಎಲ್ಲಿಗೆ ಹೋದರೂ ಅದೇ ಹಾಡು: ತನ್ನ ಗಂಡನ ಬೋಳಿಗೆ ಎಣ್ಣೆ ಸವರಿ ನಮ್ಗೆಲ್ಲಾ ನಾಮಹಾಕಿದ ಅಣ್ಣೇ ಮನೆಯವರು ಹಾಳುಬಿದ್ದೋಗಲಿ --ಎಂಬುದು.

ಇಲ್ಕೇಳಿ ಹೋಯ್ ಮೊದಮೊದ್ಲು ನಮಗೂ ಆಕೆ ಯಾಕೆ ಹಾಗೆ ಹೇಳುತ್ತಾಳೆ ಎಂದು ತಿಳಿದಿರಲಿಲ್ಲ. ಅಂತೂ ನಿಧಾನವಾಗಿ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದ್ದೆವು. ಒಮ್ಮೆ ನಮ್ಮನೆಗೆ ಬಂದ ಸುಬ್ಬಕ್ಕ

" ತಮಾ ಒಂದ್ ಕಾಗ್ದ ತಗ್ಯ ನಾ ಹೇಳ್ದಾಂಗ್ ಬರಿ ಆಯ್ತಾ " ಎಂದಳು.

ನಾನು " ಹೂಂ ಆಯ್ತು" ಅಂದೆ

ಬರ್ಯೋ " ಸುಬ್ಬಕ್ಕ ಅನಾಥರಕ್ಷಳಿರುತ್ತಾಳೆ "

ನನ್ನ ತಲೆಗೆ ಏನೂ ಹೊಳೆಯಲಿಲ್ಲ, ಎಷ್ಟೇ ಚಿಂತಿಸಿದರೂ ನನಗೆ ಆ ಶಬ್ದದ ಅರ್ಥವೇ ಆಗಲಿಲ್ಲ. ಬಹಳ ಹೊತ್ತು ಕಾಲಹರಣ ಮಾಡಲು ಸುಬ್ಬಕ್ಕನನ್ನು ಕಳಿಸಬೇಕಾಗಿತ್ತಲ್ಲ ಅದಕ್ಕೇ ಅವಳು ಹೇಳಿದಹಾಗೆಲ್ಲಾ ಬರೆದುಕೊಟ್ಟೆ.

ನಾವು ಬುದ್ಧಿ ತಿಳಿದು ದೊಡ್ಡವರಾಗುವ ಹೊತ್ತಿಗೆ ನನಗೆ ತಿಳಿದದ್ದು, ಅವಳು ಬರೆಯಿಸಿದ್ದು ಅರ್ಜಿ ಎಂಬುದು. ಅರ್ಜಿಯ ಹಲವು ಕಡೆ ಸುಬ್ಬಕ್ಕ ಅನಾಥರಕ್ಷಳು ಎಂದು ಬರೆದಿದ್ದೆನಲ್ಲ ಅದರ ಅರ್ಥ ಸುಬ್ಬಕ್ಕ ಅನಕ್ಷರಸ್ಥಳು ! ತಾನು ಅನಕ್ಷರಸ್ಥಳಾಗಿರುವುದರಿಂದ ತನಗೆ ಓದಲು/ಬರೆಯಲು ಬಾರದೇ ಇರುವುದರಿಂದ ಸ್ವಲ್ಪ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ಯಜಮಾನರು ತಮ್ಮ ಆಸ್ತಿಯನ್ನೆಲ್ಲಾ ತನಗೆ ತಿಳಿಯದೇ ಯಾರಿಗೋ ಬಿಡಿಗಾಸನ್ನೂ ತೆಗೆದುಕೊಳ್ಳದೇ ಬರೆದುಕೊಟ್ಟಿದಾರಾಗಿಯೂ ಮತ್ತು ಹಾಗೆ ಮಾಡುವಂತೇ ಅಣ್ಣೇಮನೆಯವರು ಸತತವಾಗಿ ಪ್ರೇರೇಪಿಸಿದ್ದರಿಂದ ತನ್ನ ಗಂಡನಿಗೆ ಬುದ್ಧಿಯಿಲ್ಲದ್ದನ್ನು ತಿಳಿದು ದುರುಪಯೋಗಮಾಡಿಕೊಂಡರು ಎಂದು ಕೆಲವು ಅಧಿಕಾರಿಗಳಿಗೆ ಕಳಿಸಲು ಆಕೆ ನನ್ನ ಕೈಲಿ ಅರ್ಜಿ ಬರೆಯಿಸಿದ್ದಳು !

ಪುಸ್ !

ಕೆಲವರಿಗೆ ಮಾತಿನ ಮಧ್ಯೆ ಆಗಾಗ ಏನಾದರೂ ಒಂದೆರಡು ಶಬ್ದಗಳನ್ನು ಉಪಯೋಗಿಸುವ ಹವ್ಯಾಸ. ಇಂತಹ ಒಬ್ಬರು ನಮ್ಮ ಬಳಗದಲ್ಲಿದ್ದರು. " ನಾ ಹೇಳದ್ ತಿಳೀಲಿಲ್ಲಾ ? " ಎಂಬ ಒಕ್ಕಣಿಕೆಯನ್ನು ಅವರು ಸದಾ ಉಪಯೋಗಿಸುತ್ತಿದ್ದರು. ತೀರಾ ಪುಕ್ಕಲುತನದ ಈ ಮನುಷ್ಯನಿಗೆ ಬೆಕ್ಕುಗಳೆಂದರೆ ಭಾರೀ ಹೆದರಿಕೆ. ದೂರದಲ್ಲಿ ಬೆಕ್ಕುಗಳನ್ನು ಕಂಡರೂ ದಾರಿಬದಲಾಯಿಸಿ ಹೋಗಿಬಿಡುವ ವ್ಯಕ್ತಿ ಈತ. ನಮ್ಮನೆಗೆ ಬಂದಾಗ ನಮಗೆಲ್ಲಾ ಬೆಕ್ಕುಗಳ ವರ್ಣನೆ ಮಾಡಿ ಬೆಕ್ಕುಗಳು ಹುಲಿ-ಸಿಂಹಗಳಿಗಿಂತಾ ಕ್ರೂರ ಎಂಬಂತೇ ಬಣ್ಣಿಸಿ ನಮ್ಮಲ್ಲೂ ಕೆಲವು ಕಾಲ ಹೆದರಿಕೆ ಉಂಟಾಗುವಂತೇ ಮಾಡಿಬಿಟ್ಟಿದ್ದ ಆಸಾಮಿ !

ಹಾಗಂತ ಈತ ಚಿಕ್ಕವನೇನೂ ಅಲ್ಲ. ಆಗಲೇ ಮದುವೆ ವಯಸ್ಸಿಗೆ ಬಂದ ಮಗನೂ ಇದ್ದ. ಮಗನ ಮದುವೆ ಮಾಡುತ್ತೇನೆ ಎಂದು ಊರತುಂಬಾ ಡಂಗುರ ಸಾರಿದ್ದರಿಂದ ಅನೇಕಜನ ಹೆಣ್ಣು ಹೆತ್ತವರು ಈತನ ಮಗನಿಗೆ ಹೆಣ್ಣುಕೊಡುವ ಸಲುವಾಗಿ ವಧುಪರೀಕ್ಷೆಯ ಕಾರ್ಯವನ್ನು ಇಟ್ಟುಕೊಳ್ಳುತ್ತಿದ್ದರು. ಅಲ್ಲಿ ಇಲ್ಲಿ ಕರೆದಾಗ ಈತ ಹೆಂಡತಿ ಮಗನೊಟ್ಟಿಗೆ ಹೋಗಿ ನೋಡಿಬರುತಿದ್ದ. ಒಮ್ಮೆ ಹೀಗೇ ಹೊರಟಿತ್ತು ಮೇಳ. ದಾರಿಯಲ್ಲಿ ಒಂದು ಬೆಕ್ಕು ದೂರದಲ್ಲಿ ಓಡಿಬರುತ್ತಿತ್ತು.

" ನಾ ಬರುದಿಲ್ಲ ನೀವೇ ಹೋಗ್ಬನ್ನಿ " ಕಾಲೆಳೆಯುತ್ತಾ ಅಡ್ಡರಸ್ತೆಯಲ್ಲಿ ತಿರುಗಿದ ಈತ.

" ಬನ್ನಿ ನೀವು ಬರ್ದೇ ಇದ್ರೆ ಅವ್ರು ಏನ್ ತಿಳ್ಕೋತಾರೋ ಗೊತ್ತಿಲ್ಲಾ, ಯಾಕ್ ಹೀಗೆ ಬನ್ನಿ " ಎಂದು ಹೆಂಡತಿ ಕೇಳುತ್ತಿದ್ದರೂ ಆತನಿಂದ ಉತ್ತರಬಂದಿದ್ದು ಇಷ್ಟೇ

" ನಾ ಬರುದಿಲ್ಲ ನಾ ಹೇಳದ್ ತಿಳೀಲಿಲ್ಲಾ ? "

ಹೇಗೋ ಏನೋ ಊರ ಹಲವರಿಗೆ ಈತ ಬೆಕ್ಕಿಗೆ ಹೆದರುವ ವಿಷಯ ಗೊತ್ತಿತ್ತು. ಆದರೆ ಅದನ್ನೇ ನೇರವಾಗಿ ’ಬೆಕ್ಕಿಗೆ ಹೆದರಾಂವ ’ ಎನ್ನುವ ಬದಲು ’ನಾ ಹೇಳದ್ ತಿಳೀಲಿಲ್ಲಾ’ ಎಂದು ಜನ ಈತನಿಗೆ ಅಡ್ಡಹೆಸರು ಇಟ್ಟಿದ್ದರು. ಯಾರಾದರೂ ಈತನ ಮನೆಯ ಹಾದಿಯಲ್ಲಿ ಹೋಗುವಾಗ ಬರುವಾಗ ಇನ್ನೊಬ್ಬರಿಗೆ ಅವರು ಗುರುತು ಹೇಳುತ್ತಿದ್ದುದು " ನೋಡೋ ಇದು ’ನಾ ಹೇಳದ್ ತಿಳೀಲಿಲ್ಲಾ ’ ಮನೆ." ಬೆಕ್ಕಿಗಿಂತಾ ಅಪಸಂಶಯದ ಪ್ರಾಣಿಯಾದ ಈತನ ಮಗನಿಗೆ ಯಾವ ಸಂಬಂಧಗಳೂ ಕೂಡಿಬರಲಿಲ್ಲ. ಬಹುತೇಕ ಮನೆಗಳಲ್ಲಿ ಬೆಕ್ಕುಗಳಿದ್ದವು--ಅದು ಕಾರಣ. ಇನ್ನು ಕೆಲವು ಮನೆಗಳಿಗೆ ಹೋಗುವಾಗ ಬರುವಾಗ ಬೆಕ್ಕುಗಳು ಕಣ್ಣಿಗೆ ಬಿದ್ದುದು ಕಾರಣ. ಅಪ್ಪನ ಈ ಮಹಾನಡಾವಳಿಯನ್ನು ನೋಡಿ ಜಿಗುಪ್ಸೆಗೊಂಡ ಮಗ ಒಂದಿನ ರಾತ್ರಿ ಮನೆಬಿಟ್ಟು ಓಡಿಹೋದ. ನಂತರದ ದಿನಗಳಲ್ಲಿ ಮಾನಸಿಕವಾಗಿ ಖಿನ್ನನಾದ ಈತ ತಾನೂ ಬೆಕ್ಕಿನ ರೀತಿಯಲ್ಲೇ ವರ್ತಿಸುತ್ತಿದ್ದ!

ಹಾಗಂತ ಬಹಳ ಜನ ಸೇರಿದ ಜಾಗದಲ್ಲಿ ದೂರದಲ್ಲಿ ಬೆಕ್ಕುಗಳಿದ್ದರೂ ಈತ ಆಕಡೆಗೇ ನೋಡುತ್ತಿರಲಿಲ್ಲ ಬಿಟ್ಟರೆ ಆಗೆಲ್ಲಾ ಒಳ್ಳೆ ಧೈರ್ಯ! ಇಂತಹ ಮನುಷ್ಯನಿಗೆ ಒಮ್ಮೆ ಛಾಯಚಿತ್ರದ ಗೀಳು ಹಿಡೀತು. ಮದುವೆಯೊಂದರಲ್ಲಿ ಫೋಟೋ ತೆಗೆಯುವಂತೇ ದುಂಬಾಲುಬಿದ್ದ. ಆಗೆಲ್ಲಾ ಸ್ಟಿಲ್ ಕ್ಯಾಮರಾಗಳ ಕಾಲ. ರೀಲನ್ನು ಹಾಕಿ ಫೋಟೋ ತೆಗೆದು ಅದನ್ನು ಸಂಸ್ಕರಿಸಬೇಕಾಗುತ್ತಿತ್ತು. ಇವನ ಹಠ ನೋಡಿ ಅಲ್ಲಿ ಸೇರಿದ್ದ ಕೆಲಜನ

" ನಿನ್ನ ಮುಂದಿನ ಎರಡು ಹಲ್ಲು ಕ್ಯಾಮರಾ ರೀಲಿಗೆ ಸಿಕ್ಕಾಕೊಂಡು ಫೋಟೋ ತೊಳೆಯಲು ಬರುದಿಲ್ಲ ಮಾರಾಯ "

ಅಂದಿದ್ದೇ ತಡ ಊರಲ್ಲಿ ಮತ್ತೊಂದೆಡೆಗೆ ಮದುವೆ ನಡೆಯುವುದನ್ನೇ ಎದುರುನೋಡುತ್ತಿದ್ದ. ಒಂದು ಮದುವೆ ಇದ್ದುದು ತಿಳಿದಿತ್ತು. ಮದುವೆಗೆ ವಾರ ಮುಂಚಿತವಾಗಿ ತಯಾರಾಗಿಬಿಟ್ಟ! ಮದುವೆಯ ದಿನ ಬಂದೇ ಬಂತು. ಮದುವೆಮನೆಗೆ ಬಂದವನೇ ಅಲ್ಲಿಗೆ ಬಂದ ಅದೇ ಹಳೆಯ ಫೋಟೋಗ್ರಾಫರ್ ಕೈಲಿ ಫೋಟೋ ತೆಗೆಯುವಂತೇ ಹೇಳಿದ.

" ನೋಡಯ್ಯಾ ನೀ ಹೇಳಿದ್ಯಲ್ಲ ಹಲ್ಲು ಕ್ಯಾಮರಾ ರೀಲಿಗೆ ಸಿಕ್ಕಾಕೊಂಡ್ಬುಡುತ್ತೆ ಅಂತ ಅದ್ಕೇ ಹೋಗಿ ಮುಂದಿನ ಹಲ್ಲು ಕಿತ್ತಾಕ್ಸೊಂಡು ಬಂದಿದೀನಿ, ತೆಗೀ ಈಗ ಫೋಟೋ, ನಾ ಹೇಳದ್ ತಿಳೀಲಿಲ್ಲಾ " ಎಂದ

ಸುತ್ತ ಇದ್ದವರಿಗೆಲ್ಲಾ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

ಡಬೋಲ್

ಕಡಕಾಲ್ ರಾಮಣ್ಣ ಎಂದ್ರೆ ವರ್ಲ್ಡ್ ಫೇಮಸ್ಸು ! ಆತನ ವಿಷಯ ನೀವು ನಮ್ಮೂರಿಗೆ ಹೋಗಿ ಕೇಳದ್ರೆ ಈಗ್ಲೂ ಹೇಳ್ತಾರೆ ಜನ. ಜಕಣಾಚಾರಿಯನ್ನಾದ್ರೂ ಜನ ಮರೀಬಹುದು ಆದರೆ ರಾಮಣ್ಣನನ್ನು ಮರೆಯಲು ಸಾಧ್ಯವೇ ? ಹಳೆಯ ಕಾಲಮಾನ. ಆಗ ಗದ್ದೆಗಳಲ್ಲಿ ಮಾಳಗಳನ್ನು ಹಾಕಿ ರಾತ್ರಿ ಕಾವಲು ಕಾಯುತ್ತಿದ್ದರು. ಕಾಡು ಊರಿಗೆ ಹತ್ತಿರವಿರುತ್ತಿದ್ದುದರಿಂದ ನರಿ, ತೋಳ, ಹಂದಿ ಇತ್ಯಾದಿ ಹಲವು ಕಾಡುಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಹಾಗೆ ಕಾಯುವುದು ಬೇಕಾಗುತ್ತಿತ್ತು. ರಾತ್ರಿ ಆಗಾಗ ಗದ್ದೆಯ ಬದುವಿನ ಮೇಲೆ ಓಡಾಡಿಬರುವುದು, ಒಮ್ಮೊಮ್ಮೆ ಕಾಲಿಯಾದ ತಗಡಿನ ಎಣ್ಣೆ ಡಬ್ಬವನ್ನು ಬೋರಲುಹಾಕಿ ಜೋರಾಗಿ ಕೋಲಿನಿಂದ ಬಡಿದು " ತಾವಿದ್ದೇವೆ " ಎಂದು ಕಾಡುಪ್ರಾಣಿಗಳಿಗೆ ಸೂಚಿಸುವುದು ರೂಢಿ. ನಾಲ್ಕು ಸೆಲ್ಲಿನ ಅಗಲ ಗಾಜಿನ ಬ್ಯಾಟರಿ [ಟಾರ್ಚ್] ಹಿಡಿದು ಗದ್ದೆಯಲ್ಲಿ ಓಡಡುವುದೆಂದರೆ ಕೆಲವರಿಗೆ ಬಹಳ ಆಸಕ್ತಿ.

ಅದರಲ್ಲಂತೂ ರಾಮಣ್ಣ ನಡುವಯಸ್ಕ. ಆತನಿಗೆ ಬೀಡೀ ಸೇದುವ ಚಟ. ಮೂವತ್ತು ಮಾರ್ಕಿನ ಬೀಡಿಗಳನ್ನು ಅಂಗಿಯ ಜೇಬಿನಲ್ಲಿ ಇಟ್ಟುಕೊಂಡು ಮಲಗಿಬಿಟ್ಟರೆ ರಾತ್ರಿ ನೆನಪಾದಾಗ ಒಂದೊಂದು ಅಂಟಿಸಿಕೊಂಡು ಸೇದುತ್ತಿದ್ದ. ಹಂದಿಗಳ ಉಪಟಳ ಜಾಸ್ತಿಯಾಗಿದ್ದರಿಂದ ನಿಗ್ರಹಿಸಲು ಸಾಧ್ಯವಾಗದೇ ಹೊಸದಾಗಿ ಕಂಡುಕೊಂಡ ದಾರಿ ಆಗಾಗ ಪಟಾಕಿ ಹೊಡೆಯುವುದು. ಆಗ ಸಿಗುತ್ತಿದ್ದ ಬಿಡಿಬಿಡಿಯಾದ ಲಕ್ಷ್ಮೀ ಪಟಾಕಿಯನ್ನು ಜೇಬಲ್ಲೇ ಬೀಡಿಯೊಟ್ಟಿಗೆ ಇಟ್ಟುಕೊಂಡುಬಿಟ್ಟ. ಮಲಗಿದವನಿಗೆ ನಿದ್ದೆಯ ಮಂಪರು ಹತ್ತಿತ್ತು. ಸ್ವಲ್ಪ ಎಚ್ಚರವಾದಂತಾದಾಗ ಅಲ್ಲೆಲ್ಲೋ ಗದ್ದೆಯ ಒಂದು ಮೂಲೆಯಲ್ಲಿ ಯಾವುದೋ ಪ್ರಾಣಿಯ ಸದ್ದು ಕೇಳಿಬರುತ್ತಿತ್ತು. ಅಪರಾತ್ರಿಬೇರೆ. ಹಂದಿಗಳು ಬಹಳ ಅಪಾಯಕಾರಿಯಾದ್ದರಿಂದ ಮಾಳ ಇಳಿದು ಹೋಗಲೂ ಹೆದರಿಕೆ.

ರಾಮಣ್ಣ ತಡಮಾಡಲೇ ಇಲ್ಲ. ಜೇಬಿನಿಂದ ಬೀಡಿಯೊಂದನ್ನು ತೆಗೆದು ಸೇದುತ್ತಾ ನೋಡೋಣ ಎಂದುಕೊಂಡ. ಹಚ್ಚಿದ ಬೀಡಿ ಸುರ್ ಸುರ್ ಎಂದು ಅರ್ಧ ನಿಮಿಷದಲ್ಲಿ " ಡಬೋಲ್ " ಎಂಬ ಸದ್ದಿನೊಡನೆ ಸ್ಪೋಟಗೊಂಡಾಗಲೇ ರಾಮಣ್ಣನಿಗೆ ಜೇಬಿನಲ್ಲಿ ಇಟ್ಟುಕೊಂಡಿದ್ದ ಪಟಾಕಿಯ ನೆನಪಾಗಿದ್ದು. ಪರಿಣಾಮ ಕಣ್ಣೊಂದು ಬರ್ಬಾದಾಗಿ ಹೋಯಿತು. ಮಾರನೇದಿನ ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಕಣ್ಣು ಮರಳಿ ಬರಲೆ ಇಲ್ಲ. ದೀಪಾವಳಿಯಲ್ಲಿ ಮಿಕ್ಕುಳಿದ ಪಟಾಕಿಯನ್ನು ಹಂದಿ ಓಡಿಸಲು ರಾಮಣ್ಣ ಮಾಡಿದ ಪ್ಲಾನೇನೋ ಸರಿ. ಆದರೆ ಆತ ವಿಷಕಾರಿಯಾದ ಆ ಸ್ಪೋಟಕವನ್ನು ಬೀಡಿಯೊಂದಿಗೆ ಜೇಬಿನಲ್ಲಿಟ್ಟುಕೊಂಡು ಸೇದಿ ಬೆಳಗಾಗುವುದರೊಳಗೆ ಸುತ್ತ ಹತ್ತಾರು ಹಳ್ಳಿಗಳಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದ!