ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, February 13, 2010

ಪ್ರೀತಿ ಶಾಶ್ವತ

[ಚಿತ್ರ ಕೃಪೆ : ಅಂತರ್ಜಾಲ ]


ಪ್ರೀತಿ ಶಾಶ್ವತ

ನಾನು ಅವಳು ಕಂಡೆವು
ಕಣ್ಣಿನಲ್ಲೇ ಕೊಂಡೆವು
ನೆನಪಿನಲ್ಲೇ ಉಳಿದೆವು ಬಹಳಕಾಲವೂ

ಕಾಲ ಕೆಳೆದು ಹೋಯಿತು
ಶುಭ ಘಳಿಗೆಯು ಬಂದಿತು
ಮತ್ತೆ ಭೇಟಿಯಾದೆವೂ-ಆಗುತ್ತಿದ್ದೆವೂ

ಪಾರ್ಕಿನಲ್ಲಿ ಸುಮ್ಮನೇ
ತಬ್ಬಿಕೊಂಡು ಭಿಮ್ಮನೆ
ಪ್ರೀತಿಯಲ್ಲಿ ಕಳೆದೆವೂ ಬಹಳ ದಿನಗಳೂ

ಅಪ್ಪ ಕಣ್ಣು ಬಿಟ್ಟರು
ಅಮ್ಮ ಮುದುಡಿ ಅತ್ತರು
ಯಾರು ಜೀವ ತೆತ್ತರೂ ಬಿಡಿಸದಾ ಋಣ !

ಮಾವ ಬೀಸಿ ಅಸ್ತ್ರವ
ಅಗಲಿಸಲಿಕೆ ಶಸ್ತ್ರವ
ಏರಿ ಮೇಲೆ ಹಾರಲೂ ಬಗ್ಗದಾ ಕ್ಷಣ!

ಏನಿದಂತ ಪ್ರೀತಿಯು
ಇದಕೆ ಯಾವ ರೀತಿಯು
ಕೇಳಲಿಲ್ಲ ನಮ್ಮಯಾ ಮಧುರ ಮನಗಳು!

ಮಂಜಹನಿಯು ಮರಕತ
ಮುಂಜಾವಲಿ ನೆನೆಯುತ
ಗುಂಜಿಸಿದ ದಿನಗಳಾ ನೆನಪು ಶಾಶ್ವತ

ನಿಮ್ಮ ಜೊತೆಯಿಲಿದ್ದರೆ
ಮರೆವುದೆಲ್ಲ ತೊಂದರೆ
ಎಂದುಕೊಂಡು ಸವಿದೆವು ವರುಷವರುಷವೂ

ನಾವು ಈಗ ಇಬ್ಬರು
ನಮಗೆ ಕೀರ್ತಿಗೊಬ್ಬರು
ಬಂದಮೇಲೆ ಆಯಿತೂ ಪ್ರೀತಿ ಶಾಶ್ವತ

ಚಿಂದಿ ಆಯುವ ಬದುಕು

'ಸಾಮಾಜಿಕ ಕಳಕಳಿ' ಎಂಬುದು ನಮ್ಮೆಲ್ಲರ ಕರ್ತವ್ಯವೇ ಹೊರತು ಅದು ಹೊರೆಯಲ್ಲ. ನಮ್ಮ ಸುತ್ತ-ಮುತ್ತ ನಾವು ಓಡಾಡುವಾಗ ಪ್ರಕೃತಿಯ ಪಾಪದ ಕೂಸುಗಳಾದ ಚಿಂದಿ ಆಯುವ ಜನರನ್ನು ನೋಡುತ್ತೇವೆ. ಇತ್ತೀಚಿಗೆ ಅವರಿಗೆ ಕೆಲಸವೂ ಸಿಗದೇ ಬಹಳ ಕಾಲ ಉಪವಾಸದಲ್ಲೇ ಜೀವಿಸುತ್ತಾರೆ. ಕಂಡಲ್ಲೇ ಮಲಗುತ್ತ, ಡ್ರಗ್ ಗಳಿಗೆ ಆಡಿಕ್ಟ್ ಆಗಿ ಗತಿಯಿರದ ಚಿಕ್ಕ ಚಿಕ್ಕ ಹುಡುಗರೆಲ್ಲ ಸತ್ತವರ ರೀತಿಯಲ್ಲಿ ಬದುಕುತ್ತಾರೆ. ಅಲ್ಲೇ ಸಿಕ್ಕಿದ್ದನ್ನು ತಿನ್ನುತ್ತಾರೆ, ಅಲ್ಲೇ ಮಲಗುತ್ತಾರೆ, ಎಲ್ಲಾ ಅಲ್ಲಲ್ಲೇ, ತಿಪ್ಪೆಗಳೇ ಪ್ರಧಾನ ಕಾರ್ಯಾಲಯವಾಗಿರುವ ಅವರಿಗೆ ಅದೇ ಇಷ್ಟ ಅಥವಾ ಅನಿವಾರ್ಯ! ಅಪ್ಪ ಯಾರೋ ಅಮ್ಮ ಯಾರೋ ಸರಿಯಾಗಿ ಅರಿತಿರದ ತಪ್ಪಿನ ಕಂದಮ್ಮಗಳಿವು! ಅವರದಲ್ಲದ ತಪ್ಪಿಗೆ ಅವರು ಪಡುವ ಪಾಡು ಒಂದು ರೀತಿಯಲ್ಲಿ ಹೃದಯವಿದ್ರಾವಕ. ಇವರಲ್ಲಿ ಯವುದೋ ಊರಿಂದ ಪಾಲಕರಮೇಲೆ ಸಿಟ್ಟುಗೊಂಡು ಬಂದವರಿರಬಹುದು, ರೈಲ್ವೆ, ಬಸ್ ಗಳಲ್ಲಿ ಪಾಲಕರನ್ನು ಮಿಸ್ ಮಾಡಿಕೊಂಡು ಬಂದು ಸೇರಿದ ಮಕ್ಕಳಿರಬಹುದು. ಆ ಚಿಕ್ಕ ಮಕ್ಕಳು ಯಾವುದಕ್ಕೋ ಕಿತ್ತಾಡಿಕೊಂಡು ಅಳುವುದನ್ನು ನೋಡಿದಾಗ, ಯಾರೂ ಕೇಳುವರಿಲ್ಲ,ಯಾರೂ ಮರುಗುವುದಿಲ್ಲ, ಯಾರೂ ಸಂತೈಸುವುದಿಲ್ಲ, ಸ್ನಾನ ಕಂಡಿಲ್ಲ, ತಲೆಗೆ ಎಣ್ಣೆ ಇಲ್ಲ-ಕೂದಲು ಬಾಚಿಲ್ಲ, ಯಾರೋ ಬಿಸಾಕಿದ ಹರಿದ ಬಟ್ಟೆ, ಒಂದು ಹರಕು ಪ್ಲಾಸ್ಟಿಕ್ ಚೀಲ ಇವಷ್ಟೇ ಇರುವುದು. ಅವರಬಗ್ಗೆ ಮನ ಮಮ್ಮಲ ಮರುಗುತ್ತದೆ. ದೈವವೆಂಬ ಶಕ್ತಿ ಇಂಥವರನ್ನೂ ಸೃಷ್ಟಿಸಬೇಕೆ ? ಅವರಿಗೆ ಬೇರೆ ಬದುಕು ಕೊಡಬಾರದಿತ್ತೇ ಎಂದೆನಿಸುತ್ತದೆ.




ಚಿಂದಿ ಆಯುವ ಬದುಕು

ಜೀವ ಸೃಷ್ಟಿಯಲಿ ಯಾವ ಗಳಿಗೇಲಿ ಬಂತೋ
ಕಾಣದಾಗಿದೆ ತುಸುವೇ ಹರುಷ ಹಣೆ ಬರಹ
ರಾಜ ಭೋಗವು ಬೇಡ ಕಾಡುವಾ ದಿನ ಬೇಡ
ಸಿಗಲಿ ಬದುಕದು ನಮಗೆ 'ಮಧ್ಯಮದ' ತರಹ

ಭೂರಮೆಯ ಪಾದದೊಳು ಹಲವುವಿಧ ಭಾಗದೊಳು
ನೋವು ಕಾವುಗಳಲ್ಲಿ ಬೇಯುವಾ ಬದುಕು
ಖಾರಮಯ ಕೆಂಗಣ್ಣ ಭಾರೀ ಗಾತ್ರದ ಹಿರಿಯ
ಸಾರಿ ಹತ್ತಿರ ಬಂದು ಬೈಯ್ಯುವುದು ಸಾಕು

ಬೆಳ ಬೆಳಗು ನಮನಮಗೆ ಹಗಲು ರಾತ್ರಿಯೇ ಇಲ್ಲ
ಒಳಗೊಳಗೇ ಹೊಗೆಯುತಿಹ ದೊಂಬಿ-ಜಗಳ
ಹಳೆಯದಾಗಿವೆ ಬಟ್ಟೆ ಹರಿದ ಮನಸಿನ ತೆರದಿ
ಖಳರು ಓಡಾಡುವರು ಸುಮ್ಮನೇ ಬಹಳ !

ಯಾರೋ ಇಟ್ಟರೆ ಊಟ ಇಲ್ಲದಿರೆ ಪರಿಪಾಟ
ಯಾರುಯಾರಿಗೆತಾನೆ ಬರುವರೆಷ್ಟು ದಿನ ?
ಊರು ಕೇರಿಯಲೆಲ್ಲ ಅಲೆದಲೆದು ಪೂರ್ತಿದಿನ
ಹೇರಿಕೊಂಡೆವು ಹೆಗಲ ಮೇಲೆ ಸಿಕ್ಕಿದನಾ

ಚಿಂದಿ ಆಯ್ವರು ಎಂಬ ನಮ್ಮೊಳಗೇ ಒಣ ಜಂಬ !
ಹಂದಿ-ನಾಯಿ ಕೂಡ ಸಹಬಾಳ್ವೆ ನಮದು
ಕುಂದು ಕೊರತೆಯ ಬಗೆಗೆ ಎಂದೂ ತಕರಾರಿಲ್ಲ
ಹೊಂದಿಕೊಂಡೀನಂಟು ತುಂಬಾ ಹಳೆಯದು

ಮುಂಬರುವ ದಿನಕಷ್ಟ ! ಪಾಲಿಕೆಯ ಸುತ್ತೋಲೆ
ತುಂಬಿಹೋಗುವರೆಲ್ಲಾ ಕಸದ ರಾಶಿಯನಾ
ಹುಂಬತನದಲಿ ಹೇಗೋ ಇಷ್ಟು ದಿನ ದೂಡಿದೆವು
ಸಂಬಳದ ಕೆಲಸವನು ಕೊಡುವರೇನಣ್ಣಾ?