ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 18, 2010

ಮಾರುತಿ ಪ್ರತಾಪಮಾರುತಿ ಪ್ರತಾಪ

ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ |
ದೇವಕೀ ಪರಮಾನಂದಂ ಕೃಷ್ಣ ವಂದೇ ಜಗದ್ಗುರುಂ ||

ಯಯಾತಿ ಮಹಾರಾಜ ಕಾರಣಾಂತರಗಳಿಂದ ತನ್ನ ಮುಂದಿನ ಯಾದವ ಪೀಳಿಗೆಯಲ್ಲಿ ಸಿಂಹಾಸನದಲ್ಲಿ ಒಬ್ಬರು ಕುಳಿತು ರಾಜ್ಯಭಾರವನ್ನು ನಡೆಸಲಾರದಂತೆ ಶಪಿಸಿದ ಪ್ರಯುಕ್ತ ಯಾದವ ಕುಲ ಹಾಗೇ ಅರಾಜಕತೆಯಿಂದ ಕೂಡಿದ್ದ ಕಾಲವದು. ಅಂತಹ ಸಮಯದಲ್ಲಿ ಭಗವಾನ್ ಮಹಾವಿಷ್ಣು ಶ್ರೀಕೃಷ್ಣನಾಗಿ, ದೇವಕಿ-ವಸುದೇವರ ಮಗನಾಗಿ ಜನಿಸುತ್ತಾನೆ. ಕೃಷ್ಣನ ಅಣ್ಣನಾಗಿ ಬಲರಾಮ ಇರುತ್ತಾನೆ. ರಾಮಾಯಣದಲ್ಲಿ ಲಕ್ಷ್ಮಣನಾಗಿ ರಾಮನ ಸೇವೆಗೈದ ವಾಸುಕಿಯೇ ಈಗ ಬಲರಾಮನಾಗಿ ಜನಿಸಿರುತ್ತಾನೆ. ದಕ್ಷ ಆಡಳಿತವನ್ನು ನಡೆಸುವ ರಾಜನೆಂದು ಹೆಸರುಪಡೆಯುತ್ತ ಬಲರಾಮ ಒಂದುದಿನ ಒಡ್ಡೋಲಗದಲ್ಲಿ [ ರಾಜಸಭೆಯಲ್ಲಿ ] ತಮ್ಮ ಕೃಷ್ಣ ಹದಿನಾರು ಸಾವಿರದ ನೂರೆಂಟು ಹೆಣ್ಣುಮಕ್ಕಳನ್ನು ಮದುವೆಯಾಗಿದ್ದು ನ್ಯಾಯವಲ್ಲ ಎಂಬ ಕಾರಣದಿಂದ ಕೋಪಗೊಂಡು ಶ್ರೀಕೃಷ್ಣನನ್ನು ಧಿಕ್ಕರಿಸುತ್ತಾನೆ. ಹೊರಗಡೆ ಎಲ್ಲೋ ಇದ್ದ ಆತ ಅಸ್ಥಾನವನ್ನು ಪ್ರವೇಶಿಸದಂತೆ ತಡೆಯಲು ದೂತನಿಗೆ ಆಜ್ಞೆಮಾಡುತ್ತಾನೆ. ದೂತನಿಗೆ ಇದು ಕಷ್ಟದ ಕೆಲಸ ಅಂತ ಗೊತ್ತಾದರೂ ರಾಜಬಲರಾಮರ ಆಜ್ಞೆಗೆ ಪ್ರತಿರೋಧಿಸಲಾರದೇ ಹಾಗೇ ಆಗಲಿ ಎಂಬಂತೆ ಕೃಷ್ಣ ಪ್ರವೇಶಿಸದಂತೆ ತಡೆಯುವ ಕೆಲಸವನ್ನು ಮಾಡುತ್ತಿರುತ್ತಾನೆ,ಇತ್ತ ಕೃಷ್ಣ ಎಂದಿನಂತೆ ಸಹಜವಾಗಿ ಬಂದು ಅಣ್ಣ ಬಲರಾಮನ ಆಸ್ಥಾನಕ್ಕೆ ಹೋಗಬೇಕು ಎಂಬಷ್ಟರಲ್ಲಿ ದೂತ ತಡೆದು ನಿಲ್ಲಿಸುತ್ತಾನೆ. ಅನೇಕಾವರ್ತಿ ದೂತ ಹೇಳಿದರೂ ದೂತನಿಗೆ ತಿಳಿಹೇಳಿ ಅಂತೂ ಕೃಷ್ಣ ಬಲಾರಾಮನ ಆಸ್ಥಾನಕ್ಕೆ ಪ್ರವೇಶಿಸಿಬಿಡುತ್ತಾನೆ. ಅಣ್ಣ ತಮ್ಮರಲ್ಲಿ ನಾಲ್ಕು ಮಾತು ಬೆಳೆಯುತ್ತದೆ. ತಮ್ಮನನ್ನು ತುಂಬಾ ಹಳಿದ ಬಲರಾಮ ಆಸ್ಥಾನದಿಂದ ಹೊರದಬ್ಬಿಬಿಡುತ್ತಾನೆ. ಅವಮಾನಿತನಾದ ಶ್ರೀಕೃಷ್ಣ ಮನದಲ್ಲೇ ಅಂದುಕೊಳ್ಳುತ್ತಾನೆ,

" ಎಲೈ ನಾನು ಮಲಗಿಕೊಳ್ಳುವ ಶೇಷನೇ ರಾಮಾಯಣದಲ್ಲಿ ತಮ್ಮ ಲಕ್ಷ್ಮಣನಾಗಿ ಸೇವೆಗೈದ ಫಲಕ್ಕೆ ಈ ಮಹಾಭಾರತದಲ್ಲಿ ಅಣ್ಣ ಬಲರಾಮನಾಗಿ ಜನಿಸಿದೆಯಲ್ಲ, ಆದರೆ ತಾನು ಉರಗಪತಿ ಎಂಬುದನ್ನೇ ಮರೆತು ಧನಮದ, ರಾಜ್ಯಮದದಿಂದ ಕೊಬ್ಬಿ ನನ್ನನ್ನೇ ಧಿಕ್ಕರಿಸಿದೆಯಲ್ಲ,ನಿನ್ನ ಅಹಂಕಾರವನ್ನು ಮುರಿಯಬೇಕು " ಅಂತಂದುಕೊಂಡು ಬಂದ ಬೇಸರವನ್ನು ನಿವಾರಿಸಿಕೊಳ್ಳುವ ನೆಪದಲ್ಲಿ ಮಡದಿ ಸತ್ಯಭಾಮೆಯ ಅಂತಃಪುರಕ್ಕೆ ಹೋಗುತ್ತಾನೆ. ದೂತನೊಟ್ಟಿಗೆ ಅಲ್ಲಿಗೆ ಬಂದ ಆತ ೩ ದಿನಗಳಿಂದ ಅಲ್ಲಿಗೆ ಬಂದಿರಲಿಲ್ಲ. ಇದೇ ನೆಪವೊಡ್ಡಿ ಸತ್ಯಭಾಮೆ ಗಂಡ ಶ್ರೀಕೃಷ್ಣನಿಗೆ ಪುನಃ ಇಲ್ಲೂ ಕೊಡ ಪ್ರವೇಶ ನಿರಾಕರಿಸುತ್ತಾಳೆ. ಒಳಗೆಬಂದ ಕೃಷ್ಣನನ್ನು ಛೇಡಿಸಿ ಝರಿದು, ಎಷ್ಟೇ ಪರಿಪರಿಯಾಗಿ ರಮಿಸಿದರೂ ಕೇಳದೇ ಕೃಷ್ಣನನ್ನು ಹೊರಗೆ ಅಟ್ಟುತ್ತಾಳೆ. ಕ್ರುದ್ಧನಾದ ಶ್ರೀಕೃಷ್ಣ ಚಿಂತಾಕ್ರಾಂತನಾಗಿರುವಾಗ ದೇವರ್ಷಿ ನಾರದರು ಅಲ್ಲಿಗೆ ಬರುತ್ತಾರೆ. ನಾರದರ ಆಗಮನವನ್ನು ಕೃಷ್ಣ ಅರಮನೆಯ ತನ್ನ ವಾಸದಲ್ಲಿದ್ದು ಗಮನಿಸದಂತೆ ಬೇರೇನೋ ಚಿಂತೆಯಲ್ಲಿರಲು ನಾರದರು ತಯಾರಾಗುತ್ತಾರೆ. ಎಚ್ಚೆತ್ತ ಶ್ರೀಕೃಷ್ಣ ಅವರನ್ನು ಆಸನದಲ್ಲಿ ಕೂರಿಸಿ ಅವರಲ್ಲಿ ತನ್ನ ದುಃಖವನ್ನು ನಿವೇದಿಸಿಕೊಳ್ಳುತ್ತಾನೆ. ನಾರದರು ಪೂರ್ವೇತಿಹಾಸವನ್ನು ಕೃಷ್ಣನಿಗೆ ಆತನ ತಪ್ಪೇ ಹಲವಾರಿದೆ ಎಂಬಂತೆ ಅದನ್ನೆಲ್ಲ ಕೆದಕುತ್ತ ತ್ರೇತಾಯುಗದ ಆಂಜನೇಯನಿಗೆ ರಾಮನಾಗಿ ದರುಶನ ನೀಡುವ ಭರವಸೆ ಕೊಟ್ಟಿದ್ದನ್ನು ಈಡೇರಿಸುವಂತೆ ಹೇಳುತ್ತಾರೆ. ಸೊಕ್ಕಿದ ಬಲರಾಮ ಮತ್ತು ಸತ್ಯಭಾಮೆಯರ ಗರ್ವವನ್ನು ಇಳಿಸಲು ಕೃಷ್ಣ ಆ ಕೆಲಸಕ್ಕೆ ಹನುಮನೆ ಸರಿ ಎಂಬ ಧೋರಣೆಯಿಂದ ಹನುಮನನ್ನು ಕರೆತರಲು ನಾರದರಲ್ಲೇ ಪ್ರಾರ್ಥಿಸಿ ಕಳುಹಿಸಿಕೊಡುತ್ತಾನೆ. ಮೊದಲು ಹೆದರಿದ ನಾರದರಿಗೆ ಅಭಯವನ್ನಿತ್ತು ಕಳುಹಿಸಿಕೊಡುತ್ತಾನೆ.

ನಾರದರು ಹೊರಟು ಮೇರು ಪರ್ವತದಲ್ಲಿ ಘನಘೋರ ತಪಸ್ಸಿನಲ್ಲಿ ನಿಮಗ್ನನಾದ ಆಂಜನೇಯನನ್ನು ಕರೆತರಲು ನಡೆಯುತ್ತಾರೆ. ನಡೆದೂ ನಡೆದೂ ಹನುಮನಿದ್ದಲ್ಲಿಗೆ ಬಂದ ನಾರದರು ಆತನ ತಪೋಭಂಗ ಮಾಡಲು ಸಂನದ್ಧರಾಗುತ್ತಾರೆ.

ರಾಮ ರಾಮ ಜಯ ರಾಮ ರಾಮ ಜಯ ರಾಮ ರಾಮ ಜಯ ರಾಮ
ರಾಮ ರಾಮ ಜಯ ರಾಮ ರಾಮ ಜಯ ಶೃಂಗಾರ ರಾಮ ಗುಣಧಾಮ
ರಾಮ ರಾಮ ಜಯ ರಾಮ ರಾಮ ಜಯ ಲಾವಣ್ಯ ರಾಮ ರಘುರಾಮ
ರಾಮ ರಾಮ ಜಯ ರಾಮ ರಾಮ ಜಯ ಪಟ್ಟಾಭಿರಾಮ ಪ್ರಭು ರಾಮ

" ರಾಮಾ ರಾಮಾ ರಾಮಾ " ಎನ್ನುತ್ತಾ ಬಂದ ಯಾರದೋ ಧ್ವನಿಗೆ ಹನುಮ ಎಚ್ಚರಗೊಳ್ಳುತ್ತಾನೆ. ಕಡುಕೋಪದಿಂದ ತಪೋಭಂಗಗೈದವರನ್ನು ಹುಡುಕುತ್ತ ಅನತಿ ದೂರದಲ್ಲಿ ವ್ಯಕ್ತಿಯೋರ್ವನನ್ನು ಕಾಣುತ್ತಾನೆ, ದರದರನೆ ಆತನನ್ನು ಎಳೆದುತಂದು ಇನ್ನೇನು ಎರಡು ಬಿಡಬೇಕು ಎನ್ನುವಷ್ಟರಲ್ಲಿ ನಾರದರು ಪುನಃ ರಾಮನಾಮವನ್ನು ಜೋರಾಗಿ ಪಠಿಸುತ್ತಾರೆ. " ಯಾರು ನೀನೆಂದು ಹೇಳು " ಎಂದು ಹನುಮ ಕೂಗುತ್ತಿರಲು, ಶ್ರೀರಾಮಚಂದ್ರನ ಆಣೆಯಾಗಿ ತನಗೆ ತೊಂದರೆ ಕೊಡುವುದಿಲ್ಲಾ ಎಂದರೆ ಹೇಳುತ್ತೇನೆ ಎನ್ನುತ್ತಾರೆ. ಒಪ್ಪಿದ ಹನುಮ ಜೀವ ಹೋಗುವ ಸನ್ನಿವೇಶದಲ್ಲೂ ರಾಮನನ್ನು ನೆನೆಯುವ ನೀನು ಯಾರೆಂದು ಬಹಳ ಸಂತಸದಿಂದ ಕೇಳಿ ವಿಷಯ ತಿಳಿದು ಪ್ರಸನ್ನನಾಗುತ್ತಾನೆ. ನಾರದರಿಂದ ರಾಮನ ಬಗ್ಗೆ ತಿಳಿದ ಹನುಮ ರಾಮದರ್ಶನಕ್ಕಾಗಿ ನಾರದರ ಜೊತೆ ಹೊರಟು ದ್ವಾರಕೆಗೆ ಬರುತ್ತಾನೆ. ದ್ವಾರಕಾ ಪಟ್ಟಣದಲ್ಲಿ ಬಹಳ ವಿಜೃಂಭಣೆಯಿಂದ ಕಂಗೊಳಿಸುವ ಉದ್ಯಾನವೊಂದನ್ನು ನೋಡುತ್ತಾ ಅದರ ಬಗ್ಗೆ, ಆ ರಾಜ್ಯ-ರಾಜ ಇದರ ಬಗ್ಗೆ ಎಲ್ಲಾ ಕೇಳುತ್ತಾನೆ. ರಾಜನ ಹೆಸರು ಬಲರಾಮ ಎಂಬುದನ್ನು ತಿಳಿದ ಆಂಜನೇಯ ತನ್ನ ಒಡೆಯ ಶ್ರೀರಾಮ, ಈತನ್ಯಾರು ಬಲರಾಮ ಎಂದುಕೊಳ್ಳುತ್ತ ಕ್ರುದ್ಧನಾಗುತ್ತಾನೆ.

ಉಲ್ಲಂಘ್ಯಸಿಂಧೋಃ ಸಲಿಲಂ ಸಲೀಲಂ
ಯಃ ಶೋಕವಹ್ನಿಂ ಜನಕಾತ್ಮಜಾಯಾಃ |
ಆದಾಯ ತೇನೈವ ದದಾಹ ಲಂಕಾಂ
ನಮಾಮಿ ತಂ ಪ್ರಾಂಜಲಿರಾಂಜನೇಯಮ್ ||

ಕ್ರುದ್ಧನಾದ ಹನುಮನಿಗೆ ಉದ್ಯಾನವನವನ್ನು ಹಾಳುಗೆಡಹುವಂತೆ ಹೇಳಿದ ನಾರದರು ಹನುಮನನ್ನು ಅಲ್ಲೇ ಬಿಟ್ಟು ಸೀದಾ ಬಲರಾಮನ ಆಸ್ಥಾನಕ್ಕೆ ಬರುತ್ತಾರೆ. ತಾನು ದಾರಿಯಲ್ಲಿ ಬರುತ್ತಾ ಉದ್ಯಾನದಲ್ಲಿ ಕಪಿಯೊಂದನ್ನು ಕಂಡೆನೆಂತಲೂ ಜನರಿಗೆ ಹೆದರದ ಆ ಕಪಿ ಉದ್ಯಾನವನ್ನು ಹೇಳುಗೆಡವಿತು ಎಂತಲೂ ಹೇಳುತ್ತಾರೆ,ಮತ್ತು ಅದನ್ನು ಅಟ್ಟಿಸಿ ಓಡಿಸುವಂತೆ ಬಲರಾಮನಿಗೆ ಹೇಳುತ್ತಾರೆ. ಅದೆಲ್ಲಾ ಯಾವ ಮಹಾ ಕೆಲಸ ಎಂದುಕೊಂಡ ಬಲರಾಮ ನೇರವಾಗಿ ಉದ್ಯಾನಕ್ಕೆ ಬರುತ್ತಾನೆ. ಕೋಪದಲ್ಲಿದ್ದ ಹನುಮ ಬಲರಾಮನಿಗೆ ನಾಲ್ಕೇಟು ಬಿಗಿದು ಬಲರಾಮನ ಹಲಾಯುಧವನ್ನು ಎತ್ತುಕೊಂಡು ಅಲ್ಲಿಂದ ನಾಪತ್ತೆಯಾಗುತ್ತಾನೆ. ನೋವಿರುವ ಮೈಕೈಯ್ಯನ್ನು ನೀವಿಕೊಳ್ಳುತ್ತ ಎದ್ದ ಬಲರಾಮನಿಗೆ ಪುನಃ ನಾರದರು ಕಾಣುತ್ತಾರೆ, ಅವರಲ್ಲಿ ಮಾತನಾಡುವಾಗ ಕೃಷ್ಣ ಅಲ್ಲಿಗೆ ಬರುತ್ತಾನೆ. ಪೆಟ್ಟು ತಿಂದಿದ್ದ ಬಲರಾಮನನ್ನು ಮಾತನಾಡಿಸಲಾಗಿ ನೋವನ್ನು ಬಚ್ಚಿಡಲು ಪ್ರಯತ್ನಿಸಿದ ಬಲರಾಮನನ್ನು ತನ್ನ ಕೈಯಿಂದ ಕೃಷ್ಣ ಸ್ಪರ್ಶಿಸುತ್ತಾನೆ. ಕೇವಲ ಆ ಸ್ಪರ್ಶದಿಂದ ತಾಳಲಾರದಷ್ಟಿದ್ದ ನೋವು ತಕ್ಷಣದಲ್ಲಿ ಮಾಯವಾಗುತ್ತದೆ. ಆಗ ಬಲರಾಮನಿಗೆ ಕೃಷ್ಣನ ಅತಿಮಾನುಷ ಶಕ್ತಿಯ ಅರಿವಾಗಿ ಆತ ಸಾಮಾನ್ಯನಲ್ಲ ಎಂಬ ಅರಿವುಮೂಡುತ್ತದೆ. ನಂತರ ಹನುಮನನ್ನು ಕರೆದು ಬಲರಾಮ ಹಿಂದೆ ಲಕ್ಷ್ಮಣನಾಗಿದ್ದ ಕಥೆಯನ್ನು ಹನುಮನಿಗೆ ಕೃಷ್ಣ ವಿವರಿಸುತ್ತಾನೆ. ಸೀತೆಯನ್ನು ತೋರಿಸುವ ನೆಪವೊಡ್ಡಿ ಹನುಮನ್ನು ಸತ್ಯಭಾಮೆಯಿದ್ದಲ್ಲಿಗೆ ಕರೆದುಕೊಂಡು ಹೋಗಿ ಸ್ವಲ್ಪ ಆಕೆಯ ಮದವಿಳಿಸುವಂತೆ ಕೃಷ್ಣ ನಾರದರಲ್ಲಿ ಕೇಳಿಕೊಳ್ಳುತ್ತಾನೆ.

ಸೀತೆಯನ್ನು ತೋರಿಸುವ ಪೂರ್ವಭಾವಿ ತಯಾರಿ ನಡೆಸಲು ಹನುಮ ಸತ್ಯಭಾಮೆಯಿದ್ದಲ್ಲಿಗೆ ಬಂದು ಆಕೆಗೆ ಹನುಮನ ಕಥೆಯನ್ನೂ, ಆತ ಸೀತೆಯನ್ನು ನೋಡಲು ಬಯಸುವ ಕಥೆಯನ್ನೂ ಹೇಳುತ್ತಾರೆ. ಮದದಿಂದ ಎಲ್ಲಾ ತಾನೇ ಎಂದುಕೊಳ್ಳುವ ಸತ್ಯಭಾಮೆಗೆ ಇರುವಷ್ಟೂ ಆಭರಣಗಳನ್ನು ಹಾಕಿ ಅಲಂಕರಿಸಿಕೊಳ್ಳಲು ಹೇಳುತ್ತಾರೆ. ಕಾಡಲ್ಲಿ ಬಿಸಿಲಲ್ಲಿ ಅಲೆದಲೆದು ಸೀತೆ ಕಪ್ಪಾಗಿದ್ದಳು,ಹೀಗಾಗಿ ಮುಖತುಂಬ ಕಪ್ಪು ಬಣ್ಣ ಬಳಿದುಕೊಂಡರೆ ಮಾತ್ರ ಹನುಮ ಸೀತೆ ಎಂದು ಒಪ್ಪಿಯಾನು ಎನ್ನುತ್ತಾ ಸತ್ಯಭಾಮೆಯ ಹತ್ತಿರ ಮುಖದ ತುಂಬಾ ಮಸಿಬಳಿದುಕೊಂಡು ಬರಲು ಹೇಳುತ್ತಾರೆ ನಾರದರು. ಸರ್ವಾಲಂಕೃತ ಕಪ್ಪುಬಳಿದ ಸತ್ಯಭಾಮೆಯನ್ನು ಹನುಮನಿದ್ದಲ್ಲಿಗೆ ಕುಂಟುತ್ತಾ ಬರಲು ಹೇಳುತ್ತಾರೆ ನಾರದರು! ಹಾಗೇ ಬಂದ ಸತ್ಯಭಾಮೆಯನ್ನು ಕೃಷ್ಣನ ಪಕ್ಕ ಕುಳ್ಳಿರಿಸಿದಾಗ ಹನುಮ ಆಕೆ ಯಾರೆಂದು ವಿಚಾರಿಸುತ್ತಾನೆ. ಆಕೆ ಸೀತೆ ಎಂದರೆ ಆತ ಒಪ್ಪುವುದಿಲ್ಲ, ಬದಲಾಗಿ ಆಕೆಗೆ ಧರ್ಮದೇಟುಗಳನ್ನು ಕೊಡಲು ಉದ್ಯುಕ್ತನಾಗುತ್ತಾನೆ. ಒಂದೆರಡು ಬಾರಿ ಕೈಯ್ಯೆತ್ತಿ ಇನ್ನೇನು ಬಿಡಬೇಕು ಎನ್ನುವಾಗ ಸತ್ಯಭಾಮೆ ಕಂಗಾಲಾಗಿ ಕೃಷ್ಣನ ಮೊರೆ ಹೋಗುತ್ತಾಳೆ. ಸತ್ಕರಿಸದೆ ತಿರಸ್ಕರಿಸಿದ ತನ್ನ ತಪ್ಪನ್ನು ಮನ್ನಿಸಿ ತನ್ನನ್ನು ಹನುಮನಿಂದ ರಕ್ಷಿಸುವಂತೆಯೂ ತನಗೆ ಈಗ ಕೃಷ್ಣನ 'ನಿಜದ' ಅರಿವು ಬಂತೆಂದೂ ಪ್ರಾರ್ಥಿಸುತ್ತಾಳೆ. ಅಂತೂ ಪ್ರಾರ್ಥನೆ ಆಲಿಸಿದ ಕೃಷ್ಣ ಕೊನೆಗೊಮ್ಮೆ ಒಪ್ಪಿ ಮನ್ನಿಸಿ ಹನುಮನಿಗೆ ಶಾಂತನಾಗುವಂತೆ ಹೇಳುತ್ತಾನೆ.

ಬಲರಾಮ ಮತ್ತು ಸತ್ಯಭಾಮೆಯರ ಗರ್ವ ಮರ್ದಿಸಿದ ಹನುಮ, ರಾಮ ತನಗೆ ಕೊಟ್ಟ ಮಾತಿನಂತೆ ಮೂಲರೂಪದಲ್ಲೇ ಸಪತ್ನೀಕನಾಗಿ ಲಕ್ಷ್ಮಣ ಸಹಿತನಾಗಿ ತನಗೆ ದರ್ಶನ ನೀಡುವಂತೆ ಕೇಳಿಕೊಂಡಾಗ, ಅದನ್ನು ಪೂರೈಸಲು ಕೃಷ್ಣ ಬಲರಾಮ,ಸತ್ಯಭಾಮೆಯರೊಂದಿಗೆ ನಿಂತು ತಾನು ರಾಮಾವತಾರದಲ್ಲಿ ಹೇಗೆ ಇದ್ದೆನೋ ಹಾಗೇ ಆ ರೂಪವನ್ನು ಆಂಜನೇಯನಿಗೆ ಪ್ರದರ್ಶಿಸುತ್ತಾನೆ.

ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇಚ ಜನಕಾತ್ಮಜಾ |
ಪುರತೋ ಮಾರುತಿರ್ಯಸ್ಯ ತಂ ವಂದೇ ರಘುನಂದನಮ್ ||


ಆಲಸ್ಯ ಗುರಿತಲುಪುವ ವ್ಯಕ್ತಿಗೆ ಮಾರಕ

ಆಲಸ್ಯ-ಗುರಿತಲುಪುವ ವ್ಯಕ್ತಿಗೆ ಮಾರಕ

ಒಂದಾನೊಂದು ರಾಜ್ಯವಿತ್ತು, ಆ ರಾಜ್ಯದಲ್ಲಿ ರಾಜನಿಗೆ ಇಬ್ಬರು ಹೆಂಡಂದಿರು. ಒಬ್ಬೊಬ್ಬರಲ್ಲಿ ಒಬ್ಬೊಬ್ಬ ಗಂಡು ಸಂತತಿಯಾಗಿತ್ತು. ಕರುಳಿನ ಕುಡಿಗಳು ಬೆಳೆದು ದೊಡ್ಡವರಾಗುತ್ತಾ ನಡೆದರು. ಇಬ್ಬರಲ್ಲಿ ಒಬ್ಬನಿಗೆ ಯುವರಾಜ ಪಟ್ಟವನ್ನು ಕೊಡಲೇಬೇಕಲ್ಲ. ಹೀಗಾಗಿ ಆ ಪಟ್ಟವನ್ನು ಯಾರಿಗೆ ಕೊಡಬೇಕು ಎಂಬುದು ರಾಜನಿಗೆ ಉದ್ಭವಿಸಿದ ಸಮಸ್ಯೆ. ಎರಡೂ ಮಕ್ಕಳು ಎರಡು ಕಣ್ಣುಗಳಿಗೆ ಸಮ. ಅಂದಮೇಲೆ ಈಗ ಯಾರಿಗೆ ಯುವರಾಜ ಪಟ್ಟವನ್ನು ಕಟ್ಟಲಿ? --ಇದನ್ನೇ ತಲೆಯಲ್ಲಿ ತುಂಬಿಕೊಂಡು ರಾಜ ಬಹಳ ಶತಾಯ ಗತಾಯ ತಿರುಗುತ್ತಿದ್ದ. ರಾಜನಿಗೆ ಆ ಕ್ಷಣಕ್ಕೆ ರಾಜಗುರುಗಳ ಸ್ಮರಣೆಯಾಯಿತು. ಅವರನ್ನು ಆಸ್ಥಾನಕ್ಕೆ ಕರೆಯಿಸಿ ಏಕಾಂತದಲ್ಲಿ ಈ ವಿಷಯ ಅವರಲ್ಲಿ ಹೇಳಿಕೊಂಡ. ರಾಜಗುರುಗಳು ಕೆಲವೊಂದು ಸಮಯ ಕಳೆಯಲಿ ಎಂದೂ, ಅಷ್ಟರಲ್ಲಿ ಹಲವಾರು ರೀತಿಯಲ್ಲಿ ತಾವು ಈರ್ವರನ್ನೂ ಪರೀಕ್ಷಿಸಿ ಕೊನೆಗೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು. ರಾಜ ಅದಕ್ಕೆ ಸಮ್ಮತಿಸಿದ.

ದಿನಗಳು ಉರುಳಿದವು. ರಾಜಗುರುಗಳು ಇಬ್ಬರೂ ರಾಜಕುಮಾರರನ್ನು ಪ್ರಜೆಗಳ ವಾಸಸ್ಥಾನದ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿಸಿದರು. ಮಧ್ಯೆ ಮಧ್ಯೆ ಅನೇಕ ಥರದ ಸಮಸ್ಯೆಗಳನ್ನು ಅವರ ಮುಂದೊಡ್ಡಿ ಅದಕ್ಕೆ ರಾಜನಾದವನು ಯಾವರೀತಿ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ಅವರಿಂದ ಕೇಳುತ್ತಿದ್ದರು. ಹೀಗೇ ಕೆಲಸಮಯದ ನಂತರ ಒಂದು ಗ್ರಾಮದಲ್ಲಿ ಒಬ್ಬ ರೈತನನ್ನು ಭೇಟಿಯಾದರು. ಮಾರುವೇಷದಲ್ಲಿರುವ ಇವರ ಬಗ್ಗೆ ತಿಳಿಯದ ರೈತ ಸಹಜವಾಗಿ ಯಾರೋ ಒಬ ಮುನಿಮಹಾತ್ಮ ಮತ್ತು ಅವರ ಶಿಷ್ಯರು ಬಂದಿದ್ದಾರೆ ಎಂದು ತಿಳಿದು ಬಹಳ ಸಂತೋಷದಿಂದ ಹಣ್ಣು-ಹಂಪಲು ಹಾಲು ಇತ್ಯಾದಿ ಇತ್ತು ಸತ್ಕರಿಸಿದ. ನಂತರ ತನ್ನ ಮಕ್ಕಳಿಬ್ಬರ ಬಗ್ಗೆ ಹೇಳಿಕೊಂಡ. " ಸ್ವಾಮೀ ನನಗೆ ಇಬ್ಬರು ಗಂಡು ಮಕ್ಕಳು, ಇಬ್ಬರೂ ಪ್ರಾಯ ಪ್ರಬುದ್ಧರು. ಒಬ್ಬ ಮಾತ್ರ ನಿಧಾನವಾಗಿಯಾದರೂ ಕೆಲಸ ಮಾಡೇ ಮಾಡುತ್ತಾನೆ, ಆದರೆ ಇನ್ನೊಬ್ಬ ಕೆಲಸ ಮಾಡಿದರೆ ಮಾಡಿಬಿಡಬಹುದು, ಇಲ್ಲವೇ ಮಧ್ಯೆ ಆಲಸ್ಯದಿಂದ ಕುಳಿತುಬಿಟ್ಟರೆ ಕೆಲಸ ಮುಗಿಯುತ್ತದೆ ಎಂಬುದನ್ನೇ ಹೇಳಲಾಗದು. ಕೆಲಸ ಮಾಡುವಲ್ಲಿ ಆತನೂ ಯೋಗ್ಯನೇ ಆದರೆ ವಿನಾಕಾರಣ ಮಧ್ಯೆ ಆಲಸ್ಯ ಅವನಿಗೆ, ಅದು ಸರಿಯೇ ಎಂಬ ವಾದ ಅವನದ್ದು, ಇದಲ್ಲದೆ ಇನ್ನೊಬ್ಬನನ್ನು ಆತ ಹೆಳವ ಅಂತ ಅಪಹಾಸ್ಯಮಾಡುತ್ತಾನೆ.ಮತ್ತೊಬ್ಬ ಮಗ ಎಲ್ಲಾ ನಿಧಾನ, ಏನು ಹೇಳಿದರೂ ಆತ ಬೇಗ ಮಾಡಲೊಲ್ಲ, ಆದರೆ ಆತ ತಾನಾಯಿತು ತನ್ನ ಪಾಡಾಯಿತು ಎಂದು ಕೆಲಸದಲ್ಲೇ ಸದಾ ಮಗ್ನನಾಗಿರುತ್ತಾನೆ. ಇದರ ಬಗ್ಗೆ ತಮ್ಮ ಅಭಿಪ್ರಾಯವೇನು ? ಅವರಿಗೆ ಬೇರೆ ತರಬೇತಿ ಬೇಕೇ ಅಥವಾ ಹೀಗೇ ಮುನ್ನಡೆಯಲೇ ಎಂದು ತಿಳಿಯದಾಗಿದೆ,ತಾವು ಮಹಾತ್ಮರು ಏನಾದರೊಂದು ಮಾರ್ಗ ತೋರಿಸಬೇಕು " ರೈತನ ಅಲವತ್ತುಕೊಳ್ಳುವಿಕೆ ರಾಜಗುರುಗಳಿಗೆ ಅರ್ಥವಾಯಿತು. ಅವರು ಆ ವಿಷಯವದಲ್ಲಿ ಯಾರದ್ದು ಸರಿ ಎಂಬ ಪ್ರಶ್ನೆಯನ್ನು ಮಾರುವೇಷದಲ್ಲಿರುವ ರಾಜಕುಮಾರರ ಮುಂದಿಟ್ಟರು.

ರಾಜಕುಮಾರರು ಒಬೊಬ್ಬರು ಒಬ್ಬೊಬ್ಬರನ್ನು ಬೆಂಬಲಿಸಿದರು. ಒಬ್ಬ ಹೇಳವನನ್ನೂ, ಇನ್ನೊಬ್ಬ ಆಳಸಿಯನ್ನೂ ಬೆನ್ನು ತಟ್ಟಿದರು. ಅಲ್ಲಿಗೆ ಮುನಿಗೆ ಅವರ ಮನೋಗತ ಅರ್ಥವಾಯಿತು. ಆಳಸಿಗಿಂತ ಮಂದಗತಿಯಲ್ಲಿ ಕೆಲಸಮಾಡುವವನೇ ಮೇಲು ಎಂದು ಒಂದು ಉದಾಹರಣೆಯ ಸಹಿತ ಹೇಳಿದರಲ್ಲದೇ ಆಲಸ್ಯವನ್ನು ದೂರಮಾಡಿದರೇ ಗುರಿಯನ್ನು ಸಕಾಲದಲ್ಲಿ ತಲುಪಲು ಸಾಧ್ಯ ಎಂಬ ಮಾತನ್ನು ಹೇಳಿದರು, ರೈತನ ಮಕ್ಕಳಿಗೆ ಬುದ್ಧಿ ಹೇಳುವ ನೆಪದಲ್ಲಿ ರಾಜಕುಮಾರರಿಗೂ ಲೋಕದ ಪರಿಜ್ಞಾನ ಬೆಳೆಸಿದರು.ರಾಜಕುಮಾರರ ಪರೀಕ್ಷೆ ಇಲ್ಲಿಗೇ ಮುಗಿಯದಿದ್ದರೂ ಅವರ ಆಂತರ್ಯವನ್ನು ಅರಿಯುವಲ್ಲಿ ಇದೂ ಒಂದು ಸಹಕಾರಿಯಾಯಿತು. ಮುನಿಗಳು ಅಂದು ಒಂದು ಕಥೆಯ ಮೂಲಕ ಅವರೆಲ್ಲರಿಗೆ ತಿಳುವಳಿಕೆ ಹೇಳಿದರು ---
ಗಚ್ಛತ್ ಪಿಪೀಲಿಕಾಯಾತಿ
ಯೋಜನಾನಾಂ ಶತಾನ್ಯಪಿ |
ಅಗಚ್ಛನ್ ವೈನತೇಯೋಪಿ
ಪದಮೇಕಂ ನ ಗಚ್ಛತಿ ||

ಇದೊಂದು ಸುಭಾಷಿತ, ರತ್ನದ ಇನ್ನೊಂದು ರೂಪ ಅಂತ ಪ್ರತ್ಯೇಕ ಹೇಳಬೇಕಿಲ್ಲ ! ಇದರ ಅರ್ಥ ಇಷ್ಟೇ - ಆಮೆ ಮತ್ತು ಗರುಡ ಇವುಗಳ ನಡುವೆ ಒಂದು ಸ್ಪರ್ಧೆ. ಆಮೆ ನಿಧಾನ ನಡಿಗೆಗೆ ಹೆಸರಾದ ಪ್ರಾಣಿ. ಆದರೆ ಗರುಡ [ವೈನತೇಯ] ಜಗತ್ತನ್ನೇ ಶೀಘ್ರಗತಿಯಲ್ಲಿ ಸುತ್ತಬಲ್ಲ ಪಕ್ಷಿ.ಇವುಗಳ ನಡುವೆ ಒಂದೇ ಸ್ಥಳವನ್ನು ತಲಪುವ ಬಗ್ಗೆ ಯಾರು ಬೇಗ , ಯಾರು ಮೊದಲು ತಲಪುತ್ತಾರೆ ಎಂಬ ಬಗ್ಗೆ ಏರ್ಪಟ್ಟ ಸ್ಪರ್ಧೆ. ಪ್ರಾರಂಭವಾಯಿತು. ಎರಡೂ ಹೊರಟಿವೆ. ಆಮೆ ಅದರಪಾಡಿಗೆ ಆಮೆನಡಿಗೆಯಲ್ಲಿ ಹೊರಟಿತು, ಗರುಡ ಕೇಳಬೇಕೇ? ಬುರ್ರನೆ ಹಾರಿ ಕ್ಷಣಾರ್ಧದಲ್ಲಿ ಅಷ್ಟು ದೂರ ಕ್ರಮಿಸಿ ಮಾರ್ಗ ಮಧ್ಯದ ಒಂದು ಮರದ ಮೇಲೆ ಕುಳಿತು ಹೇಗೂ ಆಮೆ ನಿಧಾನ ಬರುತ್ತದೆಯಾದ್ದರಿಂದ ಸ್ವಲ್ಪ ವಿಶ್ರಮಿಸಲು ತೊಡಗಿತು, ಹಾಗೆ ವಿಶ್ರಮಿಸುತ್ತ ನಿದ್ದೆಗೆ ಜಾರಿಬಿಟ್ಟಿತು. ಇತ್ತ ಆಮೆರಾಯರು ನಿಧಾನವಾಗಿ ನಡೆಯುತ್ತಾ ನಡೆಯುತ್ತಾ ಕ್ರಮಿಸುತ್ತ, ಗರುಡ ಮರದಮೇಲೆ ಕುಳಿತಿರುವ ಪರಿವೆಯೂ ಇಲ್ಲದೇ ಹಾಗೇ ಮುಂದೆ ಸಾಗಿತು. ಸಂಜೆಯಾಗುವಷ್ಟರಲ್ಲಿ ಆಮೆ ಆ ನಿರ್ಧರಿತ ಸ್ಥಳವನ್ನು ತಲಪಿತು. ತಲುಪಿದ ನಂತರ ಮಿತ್ರ ಗರುಡ ಬಹಳ ಮೊದಲೇ ಬಂದಿರಬೇಕೆಂದು ಚಿಂತನೆ ನಡೆಸಿತು.ಮರದ ಮೇಲೆ ಕುಳಿತ ಗರುಡ ಮಹಾರಾಜರಿಗೆ ಎಷ್ಟೋ ಹೊತ್ತಿನ ನಂತರ ಎಚ್ಚರಿಕೆಯಾಯಿತು. ನೋಡುತ್ತಾರೆ ಸಂಜೆಯಾಗಿಬಿಟ್ಟಿದೆ. ಆಮೆ ಇನ್ನೂ ಬಂದಿಲ್ಲವಾಗಿರಬೇಕು ಎಂದು ಕೊಳ್ಳುತ್ತಾ ಒಮ್ಮೆ ಗರಿಗೆದರಿ ಹಾರಿ ನಿರ್ಧರಿತ ಅದೇ ಆ ಸ್ಥಳಕ್ಕೆ ತಲಪಿತು. ನೋಡಿದರೆ ಆಮೆ ಮೊದಲೇ ಹಾಜರಿದ್ದು ವಿಶ್ರಮಿಸಿಕೊಂಡಿತ್ತು. ಆಗ ಗರುಡನಿಗೆ ಆಮೆಯ ವೇಗವನ್ನು ಲೆಕ್ಕಹಾಕುತ್ತ ಅಲ್ಲಿ ನಿದ್ದೆ ಮಾಡಿದ್ದು ತಪ್ಪು ಎಂದು ಅರ್ಥವಾಯಿತು.

ಹೀಗೆ ಜೀವನದಲ್ಲಿ ಇನ್ನೊಬ್ಬರ ತಾಕತ್ತನ್ನು ಅವಲೋಕಿಸಿ, ತನ್ನೊಂದಿಗೆ ಹೋಲಿಸುತ್ತ ಕೆಲಸಮಾಡುವಲ್ಲಿ ವಿಳಂಬಮಾಡಿದರೆ ಇದೇ ರೀತಿ ಅಂತೂ ಮಾಡಿರುವ ಸಾಲಿಗೆ ಸೇರಬಹುದೇ ಹೊರತು ತ್ವರಿತ ಮತ್ತು ಉತ್ತಮ ಕೆಲಸ ಅದಗಲಾರದು. ಯಾವುದು ಸಕಾಲದಲ್ಲಿ ಪೂರೈಸಲ್ಪಡುತ್ತದೋ ಅದು ಮಾತ್ರ ಉತ್ತಮ ಕೆಲಸ.