ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, November 21, 2010

ಬದುಕು ಜಟಕಾ ಬಂಡಿ ..........

ಚಿತ್ರ ಕೃಪೆ : ಅಂತರ್ಜಾಲ [ಕೇವಲ ಕಾಲ್ಪನಿಕ ]

ಬದುಕು ಜಟಕಾ ಬಂಡಿ ..........

ಮಾನವ ಸಂಪನ್ಮೂಲದ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸಮಾಡುತ್ತಿರುವ ಗಿರೀಶ್ ಗೆ ನಿತ್ಯವೂ ಬಿಡುವಿಲ್ಲದ ಕೆಲಸ. ಕಂಪನಿಯನ್ನು ಉತ್ತಮ ದರ್ಜೆಗೆ ಏರಿಸಲು ಒಳ್ಳೆಯ ಕೆಲಸಗಾರರೂ ಕೂಡ ಒಂದು ಕಾರಣ ಎಂಬುದನ್ನು ಆತ ನಂಬಿದ ವ್ಯಕ್ತಿ. ಮೇಲಧಿಕಾರಿಗಳ ಜೊತೆ ಮಾತನಾಡುವಾಗ ಇನ್ನು ಮುಂದೆ ಮತ್ತಷ್ಟು ಪರಿಶ್ರಮದಿಂದ ಇನ್ನೂ ಉತ್ತಮ ಅರ್ಹತೆಯುಳ್ಳ ಕೆಲಸಗಾರರನ್ನು ಆಯ್ಕೆಮಾಡುವುದಾಗಿ ಆತ ಭರವಸೆ ಕೊಟ್ಟಿದ್ದ. ತಾನು ಅಲಂಕರಿಸಿದ ಹುದ್ದೆಗೆ ನ್ಯಾಯ ಒದಗಿಸುವ ಉದ್ದೇಶ ಆತನಿಗಿತ್ತು. ಸೇರಿದ ಒಳ್ಳೆಯ ನೌಕರರನ್ನು ಕಂಪನಿಬಿಟ್ಟು ಬೇರೇ ಕಂಪೆನಿಗೆ ಹಾರದಂತೆ ನಿಲ್ಲಿಸಿಕೊಳ್ಳುವುದೂ ಅಷ್ಟೇ ಕೌಶಲದ ಕೆಲಸವಾಗಿತ್ತು. ಆಗೀಗ ಬಿಟ್ಟು ಹೋಗುವ ಕೆಲವು ಕೆಲಸದವರ ಬದಲಾಗಿ ಆಗಾಗ ಹೊಸ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವುದು ಮತ್ತು ಅವರಲ್ಲಿ ಉತ್ತಮವಾಗಿರುವವರನ್ನು ಆಯ್ಕೆಮಾಡಿಕೊಳ್ಳುವುದು ಸದಾ ಜಾರಿಯಲ್ಲಿದ್ದ ಪ್ರಕ್ರಿಯೆಯಾಗಿಬಿಟ್ಟಿತ್ತು. ಹೀಗೇ ಅಂದೂ ಕೂಡ ಒಂದು ತಾಂತ್ರಿಕ ಸೇವಾ ಹುದ್ದೆಗೆ ಸಂದರ್ಶನಕ್ಕೆ ಕರೆದಿದ್ದ. ಸುಮಾರು ೨೮-೩೦ ಅಭ್ಯರ್ಥಿಗಳು ಬಂದಿದ್ದರು. ಬಂದವರಲ್ಲಿ ಹುಡುಗರೂ ಇದ್ದರು ಹುಡುಗಿಯರೂ ಇದ್ದರು.

ಒಂದುಕಾಲದಲ್ಲಿ ಕೇವಲ ಹುಡುಗರೇ ನಿಭಾಯಿಸಬಹುದಾದ ಹುದ್ದೆಯನ್ನು ಇಂದು ಮಡಿವಂತಿಕೆ ತೊರೆದು ಧೈರ್ಯದಿಂದ ಹುಡುಗಿಯರೂ ನಿಭಾಯಿಸುತ್ತಿದ್ದರು. ಹುಡುಗಿಯರು ಕೊಟ್ಟ ನೌಕರಿಯಲ್ಲಿ ಆದಷ್ಟೂ ಹೆಚ್ಚಿನ ಕಾಲ ನಿಲ್ಲುವ ಒಂದು ಲಕ್ಷಣ ಆತನಿಗೆ ಬಹಳ ಹಿಡಿಸುತ್ತಿತ್ತು. ಅವರು ಕೆಲಸವನ್ನೂ ಆದಷ್ಟು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ ಬರುಬರುತ್ತಾ ರಾಯರ ಕುದುರೆ ಕತ್ತೆಯಾಗತೊಡಗಿತು ! ಈಗೀಗ ನೌಕರಿಯಲ್ಲಿ ಕಂಪನಿಯಿಂದ ಕಂಪನಿಗೆ ಜಿಗಿಯುವ ಕೆಲಸದಲ್ಲಿ ಹುಡುಗಿಯರೇ ಮುಂಚೂಣಿಯಲ್ಲಿದ್ದಾರೆ ಎಂಬುದು ಮನವರಿಕೆಯಾಗಿ ಈ ಸರ್ತಿ ಹುಡುಗರಿಗೇ ಆದ್ಯತೆ ಕೊಡಬೇಕೇನೋ ಎಂದುಕೊಂಡಿದ್ದ.

" ನೆಕ್ಸ್ಟ್ "

ಆತ ಕರೆದಾಗ ಒಳಗೆ ಬಂದಿದ್ದು ಶೀತಲ್. ಶೀತಲ್ ಬಹಳ ಸುಂದರ ಹುಡುಗಿ. ಸುಮಾರು ೨೬ ವರ್ಷ ವಯಸ್ಸು. ಮೆಕಾನಿಕಲ್ ತಂತ್ರಜ್ಞಾನ ಓದಿಕೊಂಡವಳು. ೩-೪ ವರ್ಷಗಳ ಒಳ್ಳೆಯ ಅನುಭವ ಕೂಡ ಹೊಂದಿದ್ದಳು. ತನ್ನ ವಿವರಣೆಗಳುಳ್ಳ ಬಯೋಡಾಟಾವನ್ನು ಗಿರೀಶ್ ಕೈಯ್ಯಲ್ಲಿ ಕೊಟ್ಟಳು. ಆತ ಕೂರ್ಲೌ ಹೇಳಿದನಂತರ ಎದುರುಗಡೆಗಿರುವ ಆಸನದಲ್ಲಿ ಕುಳಿತಳು. ಕೆಲವೊಂದು ತಾಂತ್ರಿಕ ವಿಷಯಗಳನ್ನು ಆಕೆಯಲ್ಲಿ ಕೇಳಿ ಉತ್ತರಪಡೆದ ನಂತರ ಆಕೆಯನ್ನು ಸೇರಿಸಿಕೊಳ್ಳುವುದೇ ಬಿಡುವುದೇ ಎಂಬುದು ಮನಸ್ಸಿನ ಹೊಯ್ದಾಟವಾಗಿತ್ತು ಗಿರೀಶ್ ನಿಗೆ. ಆಕೆಯ ಸ್ನಿಗ್ಧ ಸೌಂದರ್ಯ ಇಂದೇಕೋ ಆತನನ್ನು ಸೆಳೆಯುತ್ತಿತ್ತು. ಆಕೆಗೆ ನೌಕರಿ ಕೊಡದಿದ್ದರೂ ಆಕೆಯನ್ನು ಕಳೆದುಕೊಳ್ಳಲು ಆತ ಸಿದ್ಧನಿರಲಿಲ್ಲ. ಆಕೆಯ ಭಾವುಕ ಬೊಗಸೆ ಕಂಗಳು ತನ್ನೆದುರು ಬಿತ್ತರಿಸಿದ ಹಲವು ಭಾವನೆಗಳಿಗೆ ಆತನ ಮನಸ್ಸು ಕವನ ಹೊಸೆಯತೊಡಗಿತ್ತು. ಆದರೂ ತನ್ನ ವೈಯ್ಯಕ್ತಿಕ ಹಿತಾಸಕ್ತಿಯನ್ನು ಆತ ಹೇಳಿಕೊಳ್ಳಲಾಗುವುದೇ ? ಅದಕ್ಕೇ ಆತ ಆಕೆಯನ್ನು ಸ್ವಲ್ಪ ಹೊತ್ತು ಹೊರಗೆ ಕುಳಿತಿರಲು ಹೇಳಿದ. ಮುಂದೆ ಇನ್ನೆರಡು ಅಭ್ಯರ್ಥಿಗಳಿದ್ದರು. ಅವರ ಸಂದರ್ಶನ ಮುಗಿಸಿದಮೇಲೆ ಇನ್ನೊಮ್ಮೆ ಆಕೆಯನ್ನು ಮಾತನಾಡಿಸುವ ಇರಾದೆ ಆತನದಾಗಿತ್ತು. ಆಕೆ ಅಭ್ಯರ್ಥಿಯೇ ಆದರೂ ತನ್ನೆದುರು ಆಕೆ ಕುಳಿತಾಗ ಹೃದಯ ಹಾಡುವ ಹಲವು ರಾಗಗಳು ಮನದಲ್ಲಿ ಉದ್ಭವಿಸಿ ಕಣ್ಣುತುಂಬುವ ಹಲವು ಬಣ್ಣದ ಚಿತ್ತಾರಗಳು ಆತನಿಗೆ ಮುಂದೇನುಮಾಡಬೇಕೆಂಬುದನ್ನೇ ಮರೆಸುತ್ತಿದ್ದವು.

" ನೆಕ್ಸ್ಟ್ "

ಆಗ ಒಳಬಂದಿದ್ದು ರಾಜೀವ. ಬಹಳ ಒಳ್ಳೆಯ ಹುಡುಗ. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಕಷ್ಟಾರ್ಜಿತದಲ್ಲಿ ಮಾಧ್ಯಮಿಕ ಹಂತದವರೆಗೆ ವಿದ್ಯಾಭ್ಯಾಸ ಪೂರೈಸಿ ನಂತರ ಭಾಗಶಃ ಅಲ್ಲಿಲ್ಲಿ ಕೆಲಸಮಾಡಿಕೊಂಡು ತಾಂತ್ರಿಕ ಪದವಿ ಗಳಿಸಿದ್ದ. ತೆಳ್ಳಗಿನ ವ್ಯಕ್ತಿಯ ಕಣ್ಣ ತುಂಬಾ ಸಾಧಿಸಬೇಕೆಂಬ ಹಂಬಲ ಎದ್ದು ಕಾಣುತ್ತಿತ್ತು. ಅನುಭವವೂ ಸಾಕಷ್ಟು ಇದ್ದುದರಿಂದ ಈತ ಹುದ್ದೆಗೆ ಒಂದರ್ಥದಲ್ಲಿ ತಕ್ಕುದಾದ ವ್ಯಕ್ತಿಯಾಗಬಹುದಿತ್ತು. ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಕೊಟ್ಟಿದ್ದ ರಾಜೀವ. ವೈಯ್ಯಕ್ತಿಕ ವಿಚಾರಗಳನ್ನು ಕೇಳುತ್ತಾ ತಂದೆಯ ಬಗೆಗೆ ಕೇಳಿದ್ದ. ತನ್ನೆರಡು ಕಣ್ಣಲ್ಲಿ ಹನಿಗಳನ್ನು ತುಂಬಿಕೊಂಡು ಮುಗ್ಧ ಮಗುವಿನ ರೀತಿ ಕಣ್ಣೊರೆಸಿಕೊಳ್ಳುತ್ತ ಉತ್ತರಿಸಿದ ರಾಜೀವ ತಾನು ಅತೀ ಅವನಿರುವಾಗಲೇ ಯಾವುದೋ ಹಾವು ಕಡಿದು ತಂದೆ ತೀರಿಹೋದನೆಂದೂ, ತಂದೆಯ ಪ್ರೀತಿಯನ್ನು ಕಳೆದುಕೊಂಡ ಹತಭಾಗ್ಯನೆಂದೂ ಹೇಳಿದ.

ಅಪ್ಪನೆಂದರೆ ಈ ರೀತಿಯ ಅನನ್ಯತೆ ಇರುತ್ತದೆಂಬುದನ್ನು ಇದೇ ಮೊದಲಾಗಿ ಅನುಭವಿಸುತ್ತಿದ್ದ ಗಿರೀಶ್. ತಾನು ಚಿಕ್ಕವನಿದ್ದಾಗ ಅಪ್ಪ-ಅಮ್ಮ ಇಬ್ಬರೂ ಪ್ರೀತಿಯಿಂದಿದ್ದರು. ತಾನು ೪-೫ ವಯಸ್ಸಿನವನಾಗುವ ಹೊತ್ತಿಗೆ ಅಪ್ಪ-ಅಮ್ಮ ದಿನಾಲೂ ಜಗಳವಾಡುತ್ತಿದ್ದರು. ಮೊದಲೆಲ್ಲಾ ತನ್ನೊಟ್ಟಿಗೇ ತನ್ನನ್ನು ಮಧ್ಯೆ ಮಲಗಿಸಿಕೊಂಡು ಆಚೆ ಈಚೆ ಮಲಗುತ್ತಿದ್ದ ಅಪ್ಪ-ಅಮ್ಮ ಕ್ರಮೇಣ ಬೇರೆ ಬೇರೆ ಕೋಣೆಗಳಲ್ಲಿ ಮಲಗುತ್ತಿದ್ದರು. ಈ ವಿಷಯದಲ್ಲಿ ಅಪ್ಪನನ್ನು ಕೇಳಲಿ ಅಮ್ಮನನ್ನು ಕೇಳಲಿ ತನ್ನನ್ನು ಗದರಿಸುತ್ತಿದ್ದರು. ಕೊನೆಗೊಂದು ದಿನ ಅಪ್ಪ-ಅಮ್ಮ ಒಬ್ಬರನ್ನೊಬ್ಬರು ಥಳಿಸುತ್ತಿದ್ದರು. ಆ ರಾತ್ರಿ ಅಪ್ಪ ಅಮ್ಮನನ್ನೂ ತನ್ನನ್ನೂ ಮನೆಯಿಂದ ಹೊರಗೆ ನೂಕಿಬಿಟ್ಟರು. ಅಳುತ್ತಿದ್ದ ಅಮ್ಮನನ್ನು ನಾನು ತಾನು ಓಡೋಡಿ ಅಪ್ಪಿಕೊಂಡೆ. ಆಮೇಲೆ ಅಮ್ಮ ಏನುಹೇಳಿದರೂ ಕೇಳಿಸಿಕೊಳ್ಳದ ಅಪ್ಪ ಬಾಗಿಲು ತೆರೆಯಲೇ ಇಲ್ಲ. ತನ್ನನ್ನು ನೋಡಲೂ ಬರಲಿಲ್ಲ. ಅರೆಗತ್ತಲೆಯಲ್ಲಿ ಅಮ್ಮ ತನ್ನ ಕೈಹಿಡಿದುಕೊಂಡು ದೂರ ನಡೆದಳು. ತನಗೆ ಕಾಲು ನೋವುಬಂದು ನಡೆಯಲಾಗುತ್ತಿರಲಿಲ್ಲ. ತಾನು ಅಮ್ಮನ ಮುಖವನ್ನೇ ಆಗಾಗ ನೋಡುತ್ತಿದ್ದೆ. ಅಮ್ಮನಿಗೆ ಬೇಸರವಾಗಿದೆಯೆಂಬುದು ಸ್ಪಷ್ಟವಾಗಿತ್ತು. ಅವಳಿಗೆ ಮತ್ತೂ ಬೇಸರಮಾಡುವುದು ಬೇಡವೆಂದು ತಾನು ನೋವಾದರೂ ನಡೆಯುತ್ತಿದ್ದೆ. ನಡೆದೂ ನಡೆದೂ ನಡೆದೂ ಸುಮಾರು ತಾನು ಎಂದಿಗೂ ನಡೆದಿರದ ದೂರವನ್ನು ಕ್ರಮಿಸಿದ್ದೆವು. ಅಲ್ಲಿ ಅಮ್ಮನ ಗೆಳತಿಯ ಮನೆಯೊಂದಿತ್ತು ಎಂಬುದು ಆಮೇಲೆ ತನಗೆ ಗೊತ್ತಾಗಿದ್ದು. ಅಮ್ಮ ಬಾಗಿಲು ತಟ್ಟಿ ಎಬ್ಬಿಸಿದಾಗ ಕತ್ತಲು ತುಂಬಿದ ನೀರವ ರಾತ್ರಿಯಲ್ಲಿ, ನಾಯಿಗಳ ಬೊಗಳುವಿಕೆಗಳ ಮಧ್ಯೆ ಯಾರು ಬಂದಿದ್ದಾರೆಂದು ಅಮ್ಮನ ಗೆಳತಿ ಬಾಗಿಲ ಪಕ್ಕದ ಕಿಟಕಿಯಿಂದ ನೋಡಿದಳು. ತಿಳಿದ ನಂತರ ಬಾಗಿಲು ತೆರೆದು ಬರಮಾಡಿಕೊಂಡಳು.

ಅಮ್ಮ ತುಂಬಾ ದಣಿದಿದ್ದಳು. ಆಕೆಗೆ ದಣಿದದ್ದಕಿಂತ ಹೆಚ್ಚು ಅಪ್ಪಬೈದಿದ್ದು ಬೇಸರವಾಯಿತಿರಬೇಕು. ಗೆಳತಿ ಶರ್ಮಿಳಾ ಆಶ್ಚರ್ಯದಿಂದ ಕೇಳಿದಾಗ ಆಮ್ಮ ಆಕೆಯ ಹೆಗಲಮೇಲೆ ತಲೆಯಾನಿಸಿ ಗಳಗಳನೇ ಅತ್ತಳು. ಶರ್ಮಿಳಾ ಆಂಟಿ ಅಮ್ಮನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಕುಡಿಯಲು ನೀರು ಕೊಟ್ಟು, ಊಟಕ್ಕೆ ಸಜ್ಜುಗೊಳಿಸಲು ಅಡಿಗೆಮನೆಗೆ ಹೋದರು. ಶರ್ಮಿಳಾ ಆಂಟಿಯ ಯಜಮಾನರು ಅಂದು ಊರಲ್ಲಿರಲಿಲ್ಲ. ಆಗ ತಾನು ಮತ್ತು ಅಮ್ಮ ಇಬ್ಬರೇ ಜಗುಲಿಯಲ್ಲಿ ಕುಳಿತಿದ್ದೆವು. ಅಮ್ಮನನ್ನು ಕೇಳಿದರೆ ಮತ್ತೆ ಅಳಲೂಬಹುದು ಎಂಬ ಸಂದೇಹ ತನಗಿತ್ತು. ಆದರೂ ಅಪ್ಪ ಯಾಕೆ ಅಷ್ಟು ಕಟುಕ ಮನಸ್ಸಿನವರಾದರು ಎಂಬುದು ಮಾತ್ರ ತನಗೆ ತಿಳಿಯಲಿಲ್ಲ. ಅದನ್ನು ತಿಳಿಯುವ ಕುತೂಹಲವಿದ್ದರೂ ಅಮ್ಮನಿಗಲ್ಲದೇ ಮತ್ತಿನ್ಯಾರಿಗೆ ಅದು ಗೊತ್ತಿರಲು ಸಾಧ್ಯ ? ತನ್ನ ಪ್ರಶ್ನೆಗಳನ್ನು ಹಾಗೇ ತನ್ನ ಪುಟ್ಟ ಮೆದುಳಿನಲ್ಲಿ ಬಂಧಿಸಬೇಕಾಯಿತು. ಅಪ್ಪನ ಮೇಲೆ ತನಗೂ ಕೋಪ ಬಂದಿತ್ತು. ಆದರೆ ಒಳಗೊಳಗೇ ಪ್ರೀತಿಯೂ ಇತ್ತು. ಆತ ಅಮ್ಮನನ್ನು ಮಾತ್ರ ಹೀಗೆ ಬೈದ ಹೊಡೆದ ಎಂಬ ಕಾರಣಕ್ಕೆ ಅವನನ್ನು ಏಕಾಏಕೀ ಎದುರಿಸುವ ಧೈರ್ಯ ತನಗಿರಲಿಲ್ಲ. ಅಕಸ್ಮಾತ್ ತನಗೂ ಆತ ಎರಡಿಟ್ಟರೆ ಎಂಬ ಭಯ ತನ್ನಲ್ಲಿತ್ತು. ಆದರೂ ಒಂದೆರಡು ಬಾರಿ ಜೋರಾಗಿ " ಅಪ್ಪಾ ಏನ್ಮಾಡ್ತಾ ಇದ್ದೀರ ...ಅಮ್ಮನ್ನ ಹೊಡೀತೀರ ಯಾಕೆ ? " ಎಂದು ಜೋರಾಗಿ ಕೂಗಿದ್ದಿದೆ. ಆದರೆ ಅಪ್ಪ ಅದಕ್ಕೆಲ್ಲಾ ಉತ್ತರಿಸುವ ಗೋಜಿಗೆ ಹೋಗದೇ ಅಮ್ಮನನ್ನು ಬೈಯ್ಯುವ ದೂಡುವ ಕಾರ್ಯದಲ್ಲಿ ನಿರತರಾಗೇ ಇದ್ದರು.

ಊಟಕ್ಕೆ ಅಣಿಗೊಳಿಸಿದ ಶರ್ಮಿಳಾ ಆಂಟಿ ತಮ್ಮನ್ನು ಕರೆದರು. ತಾವು ಹೋಗಿ ಕುಳಿತಾಗ ಅಮ್ಮ ಅದೇನೇನೋ ಇಂಗ್ಲೀಷಿನಲ್ಲಿ ತಮ್ಮ ಗೆಳತಿಯೊಂದಿಗೆ ಸಂಭಾಷಿಸಿದರು. ತನಗದು ಸದ್ಯ ಅರ್ಥವಾಗದ್ದು. ಊಟದ ಶಾಸ್ತ್ರ ಮುಗಿಸಿದರು ಅಮ್ಮ. ಆಗಲೇ ರಾತ್ರಿ ೧೨:೩೦ ರ ಮೇಲೆ ಆಗಿಹೋಗಿತ್ತು. ಕೋಣೆಯೊಂದರಲ್ಲಿ ಹಾಸಿಗೆಹಾಸಿ ತಮಗೆ ನಿದ್ರಿಸಲು ಅನುವುಮಾಡಿಕೊಟ್ಟಿದ್ದಳು ಶರ್ಮಿಳಾ ಆಂಟಿ. ಆ ಇಡೀ ರಾತ್ರಿ ಅಮ್ಮ ಏನೇನೋ ಸಣ್ಣಗೆ ಗುನುಗುತ್ತಾ ಅಳುತ್ತಿದ್ದರು. ಅಮ್ಮ ನಿದ್ರಿಸುವುದಿಲ್ಲವೇಮ್ದು ತಿಳಿದು ತನಗೂ ನಿದ್ರೆ ಬೇಡವಾಗಿತ್ತು. ಅದೇ ಕೊನೆಯಿರಬೇಕು. ಅಲ್ಲಿಂದಾಚೆ ಅಮ್ಮ ಮತ್ತೆ ಅಪ್ಪನಿದ್ದೆಡೆ ಹೋಗಲಿಲ್ಲ. ತಾನು ಹುಟ್ಟಿ ಇಷ್ಟುದಿನ ಬೆಳೆದು ಆಡಿದ ಆ ಮನೆ, ಅಲ್ಲಿನ ಸುತ್ತಲ ಪರಿಸರದಲ್ಲಿ ವಾಸವಿದ್ದ ಪೂಜಾ ಆಂಟಿ, ಪವಿತ್ರಾ ಆಂಟಿ, [ಮಂಚ್ ಕೊಡುತ್ತಿದ್ದ ಪಕ್ಕದ ಮನೆ] ತಾತ, ಸೀಬೆಕಾಯಿ ಆಂಟಿ, ಆಡಲು ಬರುತ್ತಿದ್ದ ಸ್ಕೂಲ್ ಸ್ನೇಹಿತರಾದ ರವಿ, ಸುಧೀಶ್, ಚಿರಂತ್, ಸ್ನೇಹಾ, ಇಂಚರ ಇವರೆಲ್ಲರನ್ನೂ ತಾನು ಕಳೆದುಕೊಂಡೆ. ಮತ್ತೆಂದೂ ಅಪ್ಪ ತನಗಾಗಿ ಹುಡುಕಿ ಬರಲೇ ಇಲ್ಲ. ಆಸೆ ಕಂಗಳಿಂದ ನೋಡುತ್ತಿದ್ದ ತನಗೆ ದಿನವೂ ನಿರಾಸೆಯೇ ಕಾದಿತ್ತು. ಈಗ ತನ್ನಜೊತೆ ಚೌಕಾಬಾರ್ , ಕಣ್ಣಾಮುಚ್ಚೆ, ಕೇರಮ್ಮು ಎಲ್ಲಾ ಆಡಲಿಕ್ಕೆ ಯಾರೂ ಇರಲಿಲ್ಲ. ಆಡುವ ವಸ್ತುಗಳೂ ಇರಲಿಲ್ಲ. ಮನೆಯಿಂದ ತಂದಿದ್ದು ಏನೂ ಇರಲಿಲ್ಲ. ಹಾಕಿಕೊಂಡು ಬಂದ ಚಡ್ಡಿ-ಪ್ಯಾಂಟು ಬಿಟ್ಟರೆ ತನ್ನೆಲ್ಲಾ ವಸ್ತುಗಳು ಆ ಮನೆಯಲ್ಲೇ ಇದ್ದವು. ತನಗಿಷ್ಟವಾದ ಜೀನ್ಸ್, ಬಣ್ಣದ ದಿರಿಸುಗಳು, ಕ್ರೆಯಾನ್ಸ್, ರಬ್ಬರು, ಪೆನ್ಸಿಲ್ ಪುಸ್ತಕಗಳು ಎಲ್ಲವೂ ಅದೇ ಮನೆಯಲ್ಲಿದ್ದವು. ಹೋಗಿ ತರೋಣವೆಂದರೆ ಅಮ್ಮ ನೊಂದುಕೊಂಡಾರೆಂಬ ಅನಿಸಿಕೆ.

ಅಪ್ಪ ಯಾಕೆ ಹಾಗಾದನೆಂಬ ಕಾರಣ ಮಾತ್ರ ಗೊತ್ತಗಲೇ ಇಲ್ಲ. ಮೊದಲೆಲ್ಲಾ ಚೆನ್ನಾಗೇ ಇದ್ದರು. ತನ್ನನ್ನು ಬಹಳ ಪ್ರೀತಿಮಾಡುತ್ತಿದ್ದರು, ಮುದ್ದುಮಾಡುತ್ತಿದ್ದರು, ಚಾಕೊಲೇಟ್-ಹೊಸ ಹೊಸ ಬಟ್ಟೆ ಎಲ್ಲಾ ತಂದು ಕೊಡೋರು. ತಾನೇನಾದರೂ ಕೇಳಿದರೆ ಆದಷ್ಟೂ ಬೇಗನೇ ತಂದುಕೊಟ್ಟು " ಈಗ ಖುಷಿ ಆಯ್ತಾ ನಿಂಗೆ ಮರೀ ? " ಎನ್ನುತ್ತಾ ಲಲ್ಲೆಗರೆಯುತ್ತಿದ್ದರು. ಅಮ್ಮನೇ ಆಗಾಗ ಗದರಿಕೊಳ್ಳುವುದು ಬಿಟ್ಟರೆ ಅಪ್ಪ ತನ್ನನ್ನೆಂದೂ ಹೊಡೆದಿರಲಿಲ್ಲ. ಅಮ್ಮನೊಂದಿಗೂ ತುಂಬಾ ಪ್ರೀತಿಯಿಂದ ನಗುತ್ತಾ ಮಾತನಾಡುತ್ತಿದ್ದರು. ಚಳಿಗಾಲದಲ್ಲಿ ಅವರಿಬ್ಬರ ಮಧ್ಯೆ ಹಾಸಿಗೆಯಲ್ಲಿ ಬೆಚ್ಚಗೆ " ಅಮ್ಮ ಹೊದಿಕೆ-ಅಪ್ಪ ಹೊದಿಕೆ " ಎಂದುಕೊಂಡು ಅವರೀರ್ವರು ಹೊದ್ದ ಹೊದಿಕೆಗಳಲ್ಲೂ ಪಾಲು ಪಡೆದು ಒಂದರಮೇಲೊಂದು ಹೊದೆದುಕೊಂಡು ಮಲಗುತ್ತಿದ್ದೆ ತಾನು. ಸ್ಕೂಲಿಗೆ ಹೊತ್ತಾಗುತ್ತೆ ಏಳೋ ಎಂದು ಅಮ್ಮ ಕೂಗಿದರೂ ಅವರೀರ್ವರೂ ಎದ್ದುಹೋಗಿ ಬಹಳ ಸಮಯವಾದರೂ ಏಳುತ್ತಲೇ ಇರಲಿಲ್ಲ ತಾನು. ರಾತ್ರಿ ಊಟವಾದಮೇಲೆ ’ಪೋಗೋ’ ನೋಡುತ್ತ ತಡವಾಗಿ ನಿದ್ರಿಸುವ ತನನ್ನು ಅದೆಷ್ಟೋ ಹೊತ್ತಿಗೆ ಅಪ್ಪ ಮೆಲ್ಲನೆ ಎತ್ತುತಂದು ಹಾಸಿಗೆಯ ಮಧ್ಯಭಾಗದಲ್ಲಿ ಮಲಗಿಸಿಕೊಳ್ಳುತ್ತಿದ್ದರು. ಅವರಿಗೆ ಬೇರಾವ ಚಾನೆಲ್ ನೋಡಲೂ ತಾನು ಬಿಡದಾಗ " ಮರೀ ಸ್ವಲ್ಪ ಹೊತ್ತು ಕಣೋ ನ್ಯೂಸ್ ನೋಡಬೇಕು " ಎಂದೆಲ್ಲಾ ತನ್ನಲ್ಲಿ ಕೇಳುತ್ತಿದ್ದರು. ಸ್ಕೂಲ್ ಹೋಮ್ ವರ್ಕ್ ಮುಗಿಸಲು ಅಪ್ಪನಾಗಲೀ ಅಮ್ಮನಾಗಲೀ ಸಹಾಯಮಾಡುತ್ತಿದ್ದರು. ಯಾವುದೋ ವಸ್ತು ಸರಿಯಿಲ್ಲವೆಂದು ಅತ್ತರೆ ಮಾರನೇದಿನವೇ ಹೊಸದನ್ನು ತಂದುಕೊಡುವ ಜಾಯಮಾನ ಅಪ್ಪನದಾಗಿತ್ತು. ಮೈಕೈ ತುರಿಕೆ ಇದ್ದರೆ ಇಡೀ ಮೈಗೆ ಕೊಬ್ಬರಿ ಎಣ್ಣೆ ಸವರುತ್ತಿದ್ದುದೂ ಅಪ್ಪನೇ ! ಹೊತ್ತಲ್ಲೇ ಎದ್ದು ತನ್ನ ಸ್ಕೂಲ್ ಬ್ಯಾಗ್ ತಯಾರಿಮಾಡಿ, ತನ್ನ ಸಮವಸ್ತ್ರಕ್ಕೆ ಇಸ್ತ್ರಿ ಹಾಕಿ, ಅದನ್ನು ತನಗೆ ತೊಡಿಸಿ, ಕಾಲುಚೀಲ, ಬೂಟು ಇವನ್ನೆಲ್ಲಾ ಹಾಕಿ ಅಣಿಗೊಳಿಸುವುದು ಅಪ್ಪನಾದರೆ, ಸ್ನಾನಮಾಡಿಸಿ, ದೇವರ ಸ್ತೋತ್ರ ಹೇಳಿಸಿ, ತಿಂಡಿಬ್ಯಾಗ್ ತಯಾರಿಮಾಡಿ, ತಿಂಡಿ ತಿನ್ನಿಸಿ-ಹಾಲುಕೊಟ್ಟು ಮುಂತಾದ ಕೆಲಸವನ್ನು ಅಮ್ಮ ಮಾಡುತ್ತಿದ್ದಳು. ಅಪ್ಪ ಗಾಡಿಯಲ್ಲಿ ಕರೆದೊಯ್ಯುವಾಗ ಅಮ್ಮ ಬಾಗಿಲ ಹೊರಗಿನ ಗೇಟಿನವರೆಗೂ ಬಂದು ಬೀಳ್ಕೊಟ್ಟು ಹೋಗುತ್ತಿದ್ದರು.

ಈಗಲೋ ಅಮ್ಮ ಇಲ್ಲಿ, ಅಪ್ಪ ಅಲ್ಲಿ. ಅಪ್ಪನ ಮನೆಗೆ ಮತ್ತೆ ಹೋಗೋಣವೇ ಎಂದು ಕೇಳುವ ಮನಸ್ಸಾಗುತ್ತಿತ್ತಾದರೂ ಅಮ್ಮ ನೊಂದುಕೊಳ್ಳಬಾರದಲ್ಲ. ಅದಕ್ಕೇ ತಾನು ಸುಮ್ಮನಿದ್ದೆ. ನೋಡುತ್ತಾ ನೋಡುತ್ತಾ ಬೆಳಗಾಗಿಹೋಯಿತು. ಅಮ್ಮನಿಗೆ ಶರ್ಮಿಳಾ ಆಂಟಿ ಸ್ವಲ್ಪ ಹಣ ಕೊಟ್ಟಳು. ಅಮ್ಮ-ತಾನು ತಿಂಡಿತಿಂದು ಶರ್ಮಿಳಾ ಆಂಟಿಗೆ ಕೃತಜ್ಞತೆ ಸಲ್ಲಿಸಿ ಅಜ್ಜನಮನೆ ಊರಿಗೆ ಪ್ರಯಾಣಬೆಳೆಸಿದೆವು. ಕೆಲಸದ ದಿನವಾದ್ದರಿಂದ ಅನಿರೀಕ್ಷಿತವಾಗಿ ಮಧ್ಯಾಹ್ನ ೩ ಗಂಟೆಗೆಲ್ಲಾ ಬಂದಿಳಿದ ತಮ್ಮನ್ನು ನೋಡಿ ಅಜ್ಜ-ಅಜ್ಜಿಗೆ ಆಶ್ಚರ್ಯವಾಯಿತು. ಏನೋ ಕಾರಣವಿರಬೇಕೆಂಬ ಗುಮಾನಿ ಅಜ್ಜನಿಗೆ ಬಂದಿರಬೇಕು. ಒಳಮನೆಗೆ ಕರೆದು ಊಟ-ಉಪಚಾರ ವಗೈರೆ ನಡೆಸಿದರು. ಎಷ್ಟೇ ಕೇಳಿದರೂ ಅಮ್ಮ ಆಕ್ಷಣಕ್ಕೆ ಏನನ್ನೂ ಹೇಳಲಿಲ್ಲ. ಸರಿ ಮಗಳು-ಮೊಮ್ಮಗ ಬಂದಿದ್ದಾರೆ ಅಂತ ಅಜ್ಜ-ಅಜ್ಜಿ ಸುಮ್ಮನಾಗಿಬಿಟ್ಟರು.

ದಿನಗಳು ಕಳೆಯುತ್ತಲೇ ಇದ್ದವು. ತನಗೆ ಸ್ಕೂಲೂ ಇರಲಿಲ್ಲ, ಸ್ನೇಹಿತರೂ ಇರಲಿಲ್ಲ. ಅಜ್ಜನ ಮನೆಯ ಸುತ್ತಲ ಮನೆಯ ಕೆಲವು ಹುಡುಗರು " ನೀನು ಸ್ಕೂಲಿಗೆ ಹೋಗುವುದಿಲ್ವೇನೋ ? " ಎಂದು ಗೋಳುಹುಯ್ದುಕೊಳ್ಳುತ್ತಿದ್ದರು. ಅವರೆಲ್ಲರ ಮನೆಯಲ್ಲಿ ಅಪ್ಪ್-ಅಮ್ಮ ಹಾಯಾಗಿದ್ದರು. ಅವರೆಲ್ಲಾ ಅ ಹಳ್ಳಿಯ ಶಾಲೆಗೆ ಹೋಗುತ್ತಿದ್ದರು. ಅವರನ್ನೆಲ್ಲಾ ನೋಡಿದಾಗ ತನಗೂ ಅಪ್ಪನ ನೆನಪು ಸದಾ ಕಾಡುತ್ತಿತ್ತು. ಅಪ್ಪನ ಮನೆಗೆ ಅಮ್ಮ ಹೋಗುವುದು ಯಾವಾಗ, ಮೊದಲು ನಾವು ಊರಿಗೆ ಬಂದಾಗ ದಿನವೂ ದೂರವಾಣಿ ಕರೆ ಮಾಡಿದ ಹಾಗೇ ಈಗಲೂ ಕೊನೆಗೊಮ್ಮೆ ಮಾಡಬಹುದೇ? ಅಮ್ಮ ಯಾಕೆ ಹೀಗೆ ಮಾಡಿದಳು. ತಿರುಗಿ ಒಮ್ಮೆ ಅಪ್ಪನನ್ನು ಓಲೈಸಿ ಮನೆಗೆ ಹೋಗಬಾರದಿತ್ತೇ ? ಉತ್ತರವಿಲ್ಲದ ಪ್ರಶ್ನೆಗಳು ಕಾಡುತ್ತಲೇ ಇದ್ದವು. ಹೀಗೇ ತಿಂಗಳುಗಳ ಮೇಲೆ ತಿಂಗಳುಗಳೇ ಕಳೆದುಹೋದವು. ಅಪ್ಪ ತಮ್ಮನ್ನೆಲ್ಲಾ ಮರೆತಿರಬಹುದೇ? ಈಗ ಹೇಗಿರಬಹುದು? ಆತನ ಕೋಪ ತಣ್ಣಗಾಗಿರಬಹುದೇ ? ಎಂದು ಯೋಚಿಸುತ್ತಿದ್ದೆ. ಅನಿರೀಕ್ಷಿತವಾಗಿ ಬಂದ ಅಂಚೆಮಾಮ " ಮರಿ ಶಾಲ್ಮಲಿ ಅಂದ್ರೆ ಯಾರು ಕೂಗು " ಅಂದರು. ಅಮ್ಮನನ್ನು ಕೊಗಿದೆ. ರಜಿಸ್ಟರ್ ಮಾಡಿದ ಪತ್ರವೊಂದು ಬಂದಿದೆಯೆಂದು ಆತ ತಿಳಿಯಿತು. ಹಾಗಂತ ಅಮ್ಮನೇ ಹೇಳಿದ್ದು. ಪತ್ರ ಬಂತಲ್ಲ, ಬಹುಶಃ ಅಪ್ಪನದ್ದೇ ಇರಬೇಕು, ಇನ್ನೇನು ತಮ್ಮನ್ನು ಕರೆದುಬಿಡುತ್ತಾನೆ ಎಂದುಕೊಂಡೆ.

ಅಮ್ಮ ಗಳಗಳನೇ ಅಳಲು ಶುರುಮಾಡಿದ್ದರು. ಬಂದ ಪತ್ರದಲ್ಲಿ ಏನಿತ್ತು ಎಂಬುದು ತನಗೆ ಅರ್ಥವಾಗದ್ದು. ಮತ್ತದೇ ಅರ್ಥವಾಗದ ನೋವುಗಳು. ಕಾಡುವ ಪ್ರಶ್ನೆಗಳು, ಮರೆಯಲಾಗದ ನೆನಪುಗಳು. ಅಂದು ಮಾತ್ರ ಅಮ್ಮ ಎಲ್ಲರೆದುರೂ ತನ್ನ ಮನಸ್ಸನ್ನು ಬಿಚ್ಚಿ ಹೇಳಲೇಬೇಕಾಯಿತು. ಅಮ್ಮನಿಗೆ ಅಪ್ಪ ನ್ಯಾಯಾಲಯದ ಮೂಲಕ ಸೋಡಚೀಟಿ ಕೊಡುತ್ತಿರುವ ಸಂದೇಶ ಕಳಿಸಿದ್ದ. ಹಾಗಂದರೇನು ಮುಂದೇನಾಗುತ್ತದೆ ಎಂಬುದು ತನ್ನರಿವಿಗೆ ನಿಲುಕದ ವಿಷಯ. ಅಮ್ಮನೊಂದಿಗೆ ಅಜ್ಜ-ಅಜ್ಜಿಯೂ ಅತ್ತಾಗ ತನಗೂ ಅಳುತಡೆಯಲಾಗಲಿಲ್ಲ. ಗಂಟೆಗಟ್ಟಲೆ ಇಡೀ ಕುಟುಂಬ ಅತ್ತಿದ್ದೆವು. ಆಮೇಲೆ " ಎದೆಗಟ್ಟಿ ಮಾಡಿಕೋ ಮಗಾ ದೇವರಿದ್ದಾನೆ .......ನಿನಗೆ ಹೇಗೂ ಮಗನೊಬ್ಬನಿದ್ದಾನಲ್ಲ .......ಅವನ ಮುಖನೋಡಿ ನಿನ್ನ ನೋವನು ಮರೆ" ಎಂದು ಅಜ್ಜ ಹೇಳುತ್ತಿದ್ದರು. ಅಪ್ಪ ಏನು ಕಳಿಸಿದ್ದಾನೆ ಎಂಬುದು ನನಗೆ ಕೊನೆಗೂ ತಿಳಿಯದ ವಿಷ್ಯವೇ ಆಗಿತ್ತು. ಹಠಮಾಡಿದ್ದಕ್ಕೆ ಅಜ್ಜ ಹೇಳಿದ್ದು " ನಿಮ್ಮಪ್ಪನಿಗೆ ನೀವು ಬೇಡವಂತೆ ಕಣೋ ....ಅದಕ್ಕೇ ಆತ ಬೇರೆ ಮದುವೆಯಾಗುತ್ತಾನಂತೆ.....ಇನ್ನು ನಿನ್ನ ಪಾಲಿಗೆ ಅಮ್ಮನೇ ಅಪ್ಪ ಮಗೂ ...ಜಾಸ್ತಿ ಏನೂ ಕೇಳಬೇಡ...ನಿನಗೀಗ ಅರ್ಥವಾಗೊಲ್ಲ...ಮುಂದೊಂದು ದಿನ ನೀನು ದೊಡ್ಡವನಾಗಿ ಚೆನ್ನಾಗಿ ಓದಿ ಒಳ್ಳೆಯ ಹುದ್ದೆಯಲ್ಲಿದ್ದು ಅಮ್ಮನ್ನ ಚೆನ್ನಾಗಿ ನೋಡಿಕೋ ....ದೇವರು ನಿಮಗೆ ಒಳ್ಳೇದು ಮಾಡುತ್ತಾನೆ " ಅಜ್ಜ ಮತ್ತೆ ಪಂಚೆಯ ತುದಿಯಿಂದ ಕಣ್ಣೊರೆಸಿಕೊಳ್ಳ ಹತ್ತಿದ್ದರು.

ಕಳೆದೆರಡು ವರ್ಷಗಳಲ್ಲಿ ಅಷ್ಟೊಂದು ಪ್ರೀತಿಸಿದ್ದ ಅಪ್ಪ ಇಂದೇಕೆ ತಮ್ಮನ್ನು ಬೇಡವೆಂದು ಹೇಳುತ್ತಿದ್ದಾನೆ ಎಂಬುದು ಕಗ್ಗಂಟಾದ ಸಂಗತಿಯಾಗಿತ್ತು. ಅಪ್ಪನ ಹರವಾದ ಎದೆಯಮೇಲೆ ಮಲಗಿಕೊಂಡು ಆಟವಾಡುತ್ತಾ ಆತನ ಎದೆಗೂದಲನ್ನು ಎಳೆದು ನೋವುಂಟುಮಾಡಿ ಆತ ಕಿರುಚಿದಾಗ ಸಂತಸಗೊಳ್ಳುತ್ತಿದ್ದ ಆ ರಜಾದಿನಗಳು ಮತ್ತೆ ಸಿಗುವುದೇ ? ಅಪ್ಪನ ಬೆನ್ನಮೇಲೆ ಹತ್ತಿ ಆನೆಯಾಟವಾಡುವ, ಆತನನ್ನು ಕೂರಿಸಿ ಆತನ ಮೈಮೇಲೆ ಟವೆಲ್ ಹೊದಿಸಿ, ತಲೆಗೆ ನೀರು ಸಿಂಪಡಿಸಿ, ಹಣಿಗೆ ತೆಗೆದುಕೊಂಡು ಕ್ಷೌರಿಕನ ಆಟವಾಡುವ ದಿನಗಳು ಮತ್ತೆ ಲಭ್ಯವೇ ? ಅಪ್ಪನೇ ಖುದ್ದಾಗಿ " ಇನ್ನು ನೀವು ಬರುವುದೇ ಬೇಡ..." ಎಂದು ಸಂದೇಶ ಕಳಿಸಿದ ಮೇಲೆ ಇನ್ನೆಲ್ಲಿ ಮತ್ತೆ ಅಪ್ಪ ಕರೆಯುವುದು ಸಾಧ್ಯವೇ ? ಮತ್ತದೇ ಮೂಕ ಭಾವಗಳು, ನಾಕಾರು ಪ್ರಶ್ನೆಗಳು .....ಯಾವುದೂ ಮನಸ್ಸಿಗೆ ಸುಸೂತ್ರವಿಲ್ಲ. ಅಳುವ ಅಮ್ಮನ-ಅಜ್ಜ-ಅಜ್ಜಿಯ ಮುಖಗಳನ್ನೇ ನೋಡುತ್ತಾ ಆ ಎಲ್ಲವನ್ನೂ ಮರೆತು ಆಡಲು ಪ್ರಯತ್ನಿಸಿದವ ತಾನು. ವಾಸ್ತವದಲ್ಲಿ ತನಗೆ ಆಟವೂ ಬೇಡ...ಊಟವೂ ಬೇಡ.....ಅಪ್ಪ ಸಿಕ್ಕರೆ ಸಾಕಾಗಿತ್ತು.

ಅಂತೂ ಅಪ್ಪ ಬಾರದಾದ. ತಾವಿಲ್ಲಿದ್ದಾಗ ಉಲಿಯುತ್ತಿದ್ದ ದೂರವಾಣಿ ಯಂತ್ರ ಈಗ ಸುಮ್ಮನೇ ಹಂಗಿಸುತ್ತಿತ್ತು. ಬೇಡದ ಪತ್ರಗಳೇ ಬರುತ್ತಿದ್ದವು. ತಮ್ಮ ಜೀವನ ಸದ್ಯ ಇಲ್ಲಿಯೇ ಎಂಬುದು ತನಗರಿವಾದದ್ದು ಆ ದಿನಗಳಲ್ಲಿ. ಅಜ್ಜ ಅವರಿವರನ್ನು ಕಂಡು ತನ್ನನ್ನು ಹಳ್ಳಿಯ ಶಾಲೆಗೆ ಸೇರಿಸಿದ. ತನಗೆ ಕನ್ನಡ ಬರುತ್ತಿರಲಿಲ್ಲ. ಹೊಸದಾಗಿ ಅಭ್ಯಸಿಸಬೇಕಾಗಿತ್ತು. ಆದರೂ ಹೊಸ ಗೆಳೆಯರೊಂದಿಗೆ ಹೊಂದಿಕೊಂಡು, ಅಜ್ಜ-ಅಜ್ಜಿಯರೊಡನೆಯೂ ಆಟವಾಡುತ್ತಾ ಅಮ್ಮ-ಅಜ್ಜ-ಅಜ್ಜಿ ಹೇಳುವ ಹಲವು ಕಥೆಗಳನ್ನೂ, ವೀರಪುರುಷರ ಜೀವನಗಾಥೆಗಳನ್ನೂ ಕೇಳುತ್ತಾ ಅಪ್ಪನಿಲ್ಲದ ನೋವನ್ನು ಮರೆತೆ. ಮುಂದೊಂದು ದಿನ ಬೆಳೆದು ದೊಡ್ಡವನಾಗಿ ಅಜ್ಜನಿಗೂ-ಅಜ್ಜಿಗೂ-ಅಮ್ಮನಿಗೂ ಖುಷಿತರುವ ಇಚ್ಛೆ ತನಗೆ ಬಂದಿತ್ತು. ಸಾಧ್ಯವಾದರೆ ಮತ್ತೆ ಅಪ್ಪ ತಮ್ಮನ್ನು ಕರೆದೊಯ್ಯಬಹುದೆಂಬ ಆಸೆಯೂ ಇತ್ತು; ಬತ್ತಿಹೋಗಿರಲಿಲ್ಲ.

ತಾನು ಹೈಸ್ಕೊಲ್ ಗೆ ೧೦ನೇ ಈಯತ್ತೆಗೆ ಹೋಗುವಾಗಲೇ ತಿಳಿದದ್ದು ’ಅಮ್ಮನನ್ನು ಅಪ್ಪ ಬಿಟ್ಟುಬಿಟ್ಟಿದ್ದಾನೆ’ ಅಂತ. ಅದಕ್ಕೆ ಕಾರಣವಿಷ್ಟೆ ಅಪ್ಪ ಇನ್ಯಾವುದೋ ಹುಡುಗಿಯ ಪ್ರೇಮಪಾಶದಲ್ಲಿ ಬಿದ್ದಿದ್ದ. ಆಕೆ ಅಮ್ಮನಿಗಿಂತಾ ಸುಂದರಿಯಂತೆ. ಒಳ್ಳೆಯ ನೌಕರಿಯಲ್ಲಿದ್ದಾಳಂತೆ. ಅದುಹೇಗೋ ಅಪ್ಪನಿಗೆ ಅಂತರ್ಜಾಲದ ಮೂಲಕ ಸಂಪರ್ಕ ಬೆಳೆದು ಇಬ್ಬರೂ ಮಾತನಾಡತೊಡಗಿದರಂತೆ. ಆಮೇಲೆ ಅವಳು ಅಪ್ಪನ ಜಂಗಮವಾಣಿಗೆ ಆಗಾಗ ಕರೆಮಾಡುತ್ತಿದ್ದಳಂತೆ. ಈ ವಿಷಯ ಅದು ಹೇಗೋ ಅಮ್ಮನಿಗೆ ತಿಳಿದುಬಿಟ್ಟಿದೆ. ಅಮ್ಮ ಅಂದೇ ಬಹಳ ಅತ್ತಳಂತೆ. ಆಮೇಲೆ ಆಗಾಗ ಪರಿಪರಿಯಾಗಿ ಅಪ್ಪನಲ್ಲಿ ಆ ಸಂಬಂಧ ಬಿಡುವಂತೇ ಗೋಗರೆದಳಂತೆ. ಆದರೆ ಅಪ್ಪನ ಹುಚ್ಚುಪ್ರೀತಿ ಕುರುಡಾಗಿ ಅಮ್ಮನ ಇರವನ್ನು ಮರೆತಿತ್ತು. " ಬೇಕಾದ್ರೆ ನೀನೂ ಇರು ಇಲ್ಲಾಂದ್ರೆ ಅವಳೊಬ್ಬಳೇ ಸಾಕು ....." ಎಂದು ಅಪ್ಪ ಒತ್ತಾಯಿಸಿದಾಗ ಅಮ್ಮನಿಗೆ ಮನಸ್ಸು ತಾಳದೇ ಜಗಳ ಆರಂಭಿಸಿದ್ದಾಳೆ. ಈ ವಿಷಯ ತನ್ನಲ್ಲೇ ಇರಲಿ ಎಂದು ಕೊನೆಯ ದಿನದವರೆಗೂ ಯಾರಿಗೂ ಹೇಳಿರಲಿಲ್ಲ. ಯಾವಾಗ ಅಪ್ಪ ತಾನು ಪ್ರೀತಿಸಿದ ಇನ್ನೊಬ್ಬ ಹುಡುಗಿಯನ್ನು ಶೀಘ್ರವೇ ಮದುವೆಯಾಗುತ್ತೇನೆ ಎಂದನೋ ಆಗ ಮಾತ್ರ ಜಗಳ ತಾರಕ್ಕಕೇರಿತು. ಅದೇ ಕೊನೆ. ಅಮ್ಮನೂ ಮನಸ್ಸು ಗಟ್ಟಿ ಮಾಡಿಕೊಂಡು ಏನಾದರಾಗಲಿ ಎಂದು ಜಗಳವಾಡಿದ್ದು. ಯಾವ ಹೆಣ್ಣೆ ಆಗಲಿ ಇನ್ನೊಂದು ಹೆಣ್ಣಿಗೆ ತನ್ನ ಗಂಡನನ್ನು ಕೊಡಲು ಒಪ್ಪುವಳೇ ? ಖಾರವಾದ ಮಾತುಗಳು ಕೈಕೈಮಿಲಾಯಿಸುವವರೆಗೆ ಬೆಳೆದು ಅಮ್ಮ-ಅಪ್ಪ ನಿಜಕ್ಕೂ ಬಡಿದಾಡಿದರು. ಅಂದೇ ರಾತ್ರಿ ಅಪ್ಪ ದಯೆ, ಕರುಣೆ, ವಾತ್ಸಲ್ಯ, ನೀತಿ, ಪ್ರೀತಿ ಎಲ್ಲವನ್ನೂ ಗಾಳಿಗೆ ತೂರಿ ಹದಿಹರೆಯದ ಹುಡುಗನಂತೇ ಆ ಹುಡುಗಿಗಾಗಿ ಹಂಬಲಿಸುತ್ತಾ ತಮ್ಮನ್ನು ಮನೆಯಿಂದ ಹೊರದಬ್ಬಿದ್ದರು !

ಮುಪ್ಪಿನ ವಯಸ್ಸಿನ ಅಜ್ಜ-ಅಜ್ಜಿ ತಮ್ಮ ಕೃಷೀಜೀವನದ ಕಷ್ಟಾರ್ಜಿತದಲ್ಲಿ ತಮ್ಮನ್ನು ಅದುಹೇಗೋ ಸಾಕಿ-ಸಲಹಿದರು. ಗಂಡುಮಕ್ಕಳಿಲ್ಲದ ಅವರಿಗೆ ತಾನೇ ಗಂಡುಮಗುವಂತಾಗಿ ಬೆಳೆದೆ. ಪದವಿ ಮುಗಿಸಿ ನಂತರ ’ಮಾನವ ಸಂಪನ್ಮೂಲ ಮತ್ತು ಅದರ ಅಭಿವೃದ್ಧಿ, ತರಬೇತಿ ’ ಈ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಇಂದು ಒಂದು ಹಂತಕ್ಕೆ ಬಂದಿದ್ದೇನೆ.

" ಸರ್ ....ಅಪ್ಪ ನಾನು ಚಿಕ್ಕವನಿರುವಾಗಲೇ " ಎಂಬ ರಾಜೀವನ ಪುನರುಕ್ತಿಗೆ ಮರಳಿ ಲೋಕಕ್ಕೆ ಬಂದ ಗಿರೀಶ್ ಆತನನ್ನು ಆಯ್ಕೆಮಾಡಿದ. ಅಪ್ಪನಿಲ್ಲದ ಬದುಕು ಯಾವ ಮಗುವಿಗೂ ನೋವಿನ ಬದುಕೇ ಸರಿ ಎಂಬುದು ಅವನ ಮನದಿಂಗಿತವಾಗಿತ್ತು. ತಾನೆಂದೂ ಹೆಣ್ಣಿನ ಸೌಂದರ್ಯಕ್ಕಾಗಿ ಸೋತು ಬಾಳುಕೊಟ್ಟ, ಕೈಹಿಡಿದ ಹೆಣ್ಣಿಗೆ ವಂಚಿಸಬಾರದು ಎಂದುಕೊಂಡ ಗಿರೀಶ್ ಕಛೇರಿಯ ಸಹಾಯಕನನ್ನು ಕರೆದು ಹೊರಗೆ ಕೂತಿರುವ ಶೀತಲ್ ಳನ್ನು ಒಳಗೆ ಕಳಿಸಲು ಹೇಳಿದ. ನೌಕರಿ ಗಿಟ್ಟಿಸಿದ ರಾಜೀವನ ಕೈಕುಲಿಕಿದ, ರಾಜೀವ ನಮಸ್ಕರಿಸಿ ಹೊರಟುಹೋದ. ಆ ನಂತರ ಒಳಗೆಬಂದ ಶೀತಲ್ ಗೆ " ಇವತ್ತಿನ ಸಂದರ್ಶನದಲ್ಲಿ ನಿಮಗೆ ಇನ್ನೂ ಹಲವು ಪ್ರಶ್ನೆಗಳನ್ನು ಕೇಳುವುದಿತ್ತು... ಆದರೆ ಇವತ್ತು ಸಮಯ ಸಾಲುತ್ತಿಲ್ಲ...ಕಾಯಿಸಿದ್ದಕ್ಕಾಗಿ ಕ್ಷಮಿಸಿ....ಇನ್ನೊಮ್ಮೆ ನಿಮಗೆ ಸಂದೇಶ ಕಳಿಸಿ ಹೊಸದಾಗಿ ಸಂದರ್ಶಿಸುತ್ತೇನೆ " ಎಂದು ಕಳುಹಿಸಿಕೊಟ್ಟ. ತಾನಿನ್ನೂ ಮದುವೆಯಾಗಿರದ ವ್ಯಕ್ತಿಯೇ ಆಗಿದ್ದರೂ ತನ್ನ ಬಾಲ್ಯದಲ್ಲಿ ಅಪ್ಪ ನಡೆಸಿದ ಕಥೆ ಗಿರೀಶ್ ನ ಮನದ ತುಂಬಾ ತುಂಬಿಕೊಂಡಿತ್ತು.