ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 1, 2011

ವಸುಧೈವ ಕುಟುಂಬಕಮ್


ವಸುಧೈವ ಕುಟುಂಬಕಮ್

ಹೃದಯವರಿತಮೇಲೆ ನಮ್ಮ ನಿಮ್ಮ ನಡುವೆ ಭೇದವೇ?
ಅದುವೆ ಮಂತ್ರವಾಗಲೊಮ್ಮೆ ಜಗದ ತುಂಬಾ ನಾದವೇ

ಒಂದೇ ತಾಯ ಹೊಟ್ಟೆಯಲ್ಲಿ ಹುಟ್ಟಿ ಬೆಳೆದ ಮರಿಗಳು
ತಿಂದು ಬೆಳೆದು ತಿಳಿಯದಾಗ ಜಗಳಮಾಳ್ಪ ಕುರಿಗಳು !

ಗರುವದಿಂದ ಹರಿದು ದೇಶ ಕೋಶ ರಾಜ್ಯಂಗಳ
ಮೆರೆದರೆಲ್ಲ ಮಣ್ಣಾದರು ಕರಗುತ ವ್ಯಾಜ್ಯಂಗಳ

ನಡೆವ ನಡತೆ ನುಡಿವ ನುಡಿಯು ಉತ್ತಮವಿರೆ ಯೋಗವ
ಒಡವೆ ವಸ್ತ್ರ ಕಡೆಗೆ ಕೀರ್ತಿ ಪಡೆವರೆಲ್ಲ ಭೋಗವ


ಹುಂಡು ಹೆಚ್ಚು-ಕಮ್ಮಿ ಇರಲು ಸಹಿಸಿ ನಡೆಯೆ ಮಾನವ
ತಂಡ ಕಟ್ಟಿ ಭುಜವ ತಟ್ಟಿ ಹೋರಲಾತ ದಾನವ

ಮುಂದೆ ನಮ್ಮ ಅಂತ್ಯವೆಂತೋ ಯಾರು ಅದನು ಬಲ್ಲರು ?
ಇಂದು ಇರುವ ಜಾಗದಲ್ಲಿ ಸುಖದಿ ಬದುಕಲೆಲ್ಲರು