ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, September 13, 2012

ಮುಗಿದುಬಿಡಲೀ ಬಂಧನ !

ಕೇವಿನ್ ಕಾರ್ಟರ್ ಅವರ ಚಿತ್ರಋಣ: ಅಂತರ್ಜಾಲ
 
ಮುಗಿದುಬಿಡಲೀ  ಬಂಧನ !

ಜಗನಾಳುವ ಶಕ್ತಿ ಮಗುವ ರೂಪದೆ ಬಂದು
ಬಗೆಬಗೆಯ ಆಟಿಕೆಯ ಎತ್ತಿ ನಲಿದಾಡಿ
ನಗುತ ನಲಿವುಣಿಸಿ ತಾ  ಮರಳಿ ತೆರಳುವ ಮುನ್ನ
ನಗದು ವರವನು ಬೇಡು | ಜಗದಮಿತ್ರ

ಜಗದಮಿತ್ರನ ನಗದು ವ್ಯವಹಾರ ಯಾವುದು ಎಂಬುದನ್ನು ನೀವು ಅಮೇಲೆ ತಿಳಿಯುತ್ತೀರಿ. ಯಾವ ಬಂಧನದ ಬಗ್ಗೆ ನಿನ್ನೆ ಹೇಳುತ್ತಿದ್ದೇನೋ ಅದರ ಉತ್ತರಾರ್ಧವಾಗಿ ಇಂದು ಮುಂದುವರಿಸಿದ್ದೇನೆ.

ಜಗದ ಜೀವಿತದಲ್ಲಿ ಕೆಲವು ಸ್ವಯಂ ನಿರ್ಮಿತ ತೊಂದರೆಗಳಾದರೆ ಇನ್ನು ಕೆಲವು ತಂತಾನೇ ಘಟಿಸುವಂಥವು. ಅನುಭವಿಸುವವರು ಮಾತ್ರ ಅನುಭವಿಸಲೇಬೇಕು. ಮೂರು ಘಟನೆಗಳನ್ನು ಹೇಳುತ್ತೇನೆ ಒಂದಕ್ಕಿಂತಾ ಒಂದು ಭಿನ್ನ, ಆದರೂ ಮೂರನ್ನೂ ಸಹಿಸಿಕೊಳ್ಳಲು ಎದೆ ಗಟ್ಟಿ ಇರಬೇಕು.

ಮಗನಿಗೆ ಇವತ್ತು ಶಾಲೆಗೆ ರಜೆ. ಸುತ್ತಲ ಯಾವ ಶಾಲೆಗಳಿಗೂ ರಜೆಯಿಲ್ಲಾ ಆದರೆ ನಿಮ್ಮ ಶಾಲೆಗೆ ಮಾತ್ರ ಯಾಕೆ ರಜೆ?ಎಂದು ಕೇಳಿದೆ, ಕಾರಣ ಆತನಿಗೂ ಗೊತ್ತಿರಲಿಲ್ಲ! ಕಾರಣವನ್ನು ಪತ್ತೆ ಹಚ್ಚಲು ಇನ್ನೊಬ್ಬ ಪರಿಚಿತ ಶಿಕ್ಷಕಿಗೆ ನಾವು ಕರೆಮಾಡಿದಾಗ ಗೊತ್ತಾಗಿದ್ದು, ಆ ಶಾಲೆಯ ಶಿಕ್ಷಕಿಯೊಬ್ಬರ ಮಗಳು ನಿನ್ನೆ ಸತ್ತುಹೋಗಿದ್ದಾಳೆಂದು. ಮಂಗಳವಾರ ಶಾಲೆಗೆ ಬಂದಿದ್ದಳಂತೆ ಆ ಹುಡುಗಿ. ಬಹಳ ಜಾಣೆ, ಕಲಿಕೆಯಲ್ಲಿ ಪ್ರಥಮಸ್ಥಾನ, ಬೆಂಗಳೂರು ನಗರ ಜಿಲ್ಲಾ ಮಟ್ಟದಲ್ಲಿ ಒಂದೆರಡು ಸ್ಪರ್ಧೆಗಳಲ್ಲಿ ಗೋಲ್ಡ್ ಮೆಡಲ್ ಪಡೆದವಳು. ೫ನೇ ತರಗತಿಯಲ್ಲಿ ಓದುತ್ತಿರುವ ಆಕೆಗೆ ಅಂತಹ ಕಾಯಿಲೆಯೇನೂ ಕಾಣಲಿಲ್ಲ. ಅಮ್ಮ ಅದೇ ಶಾಲೆಯಲ್ಲಿ ಶಿಕ್ಷಕಿ, ೬ ವರ್ಷಗಳ ಹಿಂದೆ ಗಂಡ ತೀರಿಕೊಂಡಾಗ ಅಮ್ಮನಿಗೆ ಪದವಿಯೂ ಇರಲಿಲ್ಲ. ಮಗಳ ಶಾಲೆಯಲ್ಲೇ ಅದೂ ಇದೂ ಕೆಲಸಮಾಡಿಕೊಂಡಿದ್ದ ಅವಳ ಅಳಲನ್ನು ಆಲಿಸಿ ಶಾಲೆಯ ಯಜಮಾನಿ ಆಕೆಯನ್ನು ಓದಿಸಿದಳು, ಕೆಲಸದ ಜೊತೆಗೆ ಪದವಿಯನ್ನೂ ಪೂರೈಸಿಕೊಂಡು ಈಗ ಅಲ್ಲೇ ಶಿಕ್ಷಕಿಯಾಗಿದ್ದಾಳೆ. ಅಂತಹ ಬಡ ಸುಶಿಕ್ಷಿತ ಶಿಕ್ಷಕಿಯ ಮಗಳು ತೀರಿ ಹೋದಳು. ಲೋ ಬಿ.ಪಿ. ಆಗಿತ್ತಂತೆ ಎಂಬ ಸುದ್ದಿ. ಮೊನ್ನೆಯ ದಿನ ಶಾಲೆಯ ಸಮಯದ ನಂತರ, ಏನೋ ಕೆಲಸದಲ್ಲಿ ಇದ್ದ ತಾಯಿಯ ಜೊತೆ ಶಾಲೆಯಲ್ಲೇ ಇದ್ದಳು. ಕೆಮ್ಮು ಬಂದು ರಕ್ತ ವಾಂತಿಮಾಡಿಕೊಂಡಳಂತೆ. ಹತ್ತಿರದ ಆಸ್ಪತ್ರೆಗೆ ತ್ವರಿತವಾಗಿ ಕರೆದೊಯ್ದಾಗ ಅವರು ಎಮ್.ಎಸ್.ರಾಮಯ್ಯ ಆಸ್ಪತ್ರೆಗೆ ಸೇರಿಸಲು ಹೇಳಿದರಂತೆ. ಅಲ್ಲಿಗೆ ಹೋದಾಗಲೇ ಹುಡುಗಿಗೆ ಎಚ್ಚರತಪ್ಪಿತ್ತು. ಐ.ಸಿಯೂ ನಲ್ಲಿ ಇಡ್ಲಾಯ್ತಾದರೂ ಮಗು ಉಳಿಯಲಿಲ್ಲ. ಮಗು ಸತ್ತ ಸುದ್ದಿಯನ್ನು ಶಾಲೆಯವರು ಒಂದು ದಿನ ಹೇಳಲಿಲ್ಲ, ಉಳಿದ ಮಕ್ಕಳ ಮನಸ್ಸಿನಮೇಲೆ ಪರಿಣಾಮ ಆಗದಿರಲಿ; ಅವರು ಅಳದಿರಲಿ ಎಂಬ ಇಚ್ಛೆ. ಆದರೆ ಎಷ್ಟುದಿನ ತನೇ ಬಚ್ಚಿಡಲು ಸಾಧ್ಯ? ಮಗನಿಗೆ ಕಾರಣ ಗೊತ್ತಿಲ್ಲದೇ ರಜೆ! ನಮಗೆ ಕಾರಣ ಗೊತ್ತಾದಾಗ ಹೊರಗಿದ್ದೂ ಸಜೆ!

ಹಿಂದೆ ಸುಮಾರು ಸರ್ತಿ ಲೋ ಬಿ.ಪಿ. ಆಗಿತ್ತಂತೆ. ಅಮ್ಮನ ಬಡತನಕ್ಕೆ ಆಕೆ ಅದೆಲ್ಲಿ ಯಾವ ವೈದ್ಯರಲ್ಲಿ ತೋರಿಸಿದಳೋ ಗೊತ್ತಿಲ್ಲ. ವೈದ್ಯರು ಸರಿಯಾಗಿ ನಿರ್ವಹಿಸಿದರೇ? -ಇದು ಯಕ್ಷಪ್ರಶ್ನೆ. ಹೃದಯದಲ್ಲಿ ತೂತು ಇದ್ದಿರಬಹುದು ಎಂಬುದು ನನ್ನ ಮಿತ್ರರ ಹೇಳಿಕೆ. ಈ ಘಟನೆ ಮನಸ್ಸನ್ನು ಆವರಿಸಿಕೊಂಡಿರುವಾಗಲೇ ನಮ್ಮೂರಕಡೆಯ ಆಚಾರಿಯೊಬ್ಬರ ಮಕ್ಕಳ ನೆನಪಾಯ್ತು. ಆಚಾರಿ ಮರಗೆಲಸದವನು; ಬಹಳ ಒಳ್ಳೆಯ ಮನುಷ್ಯ. ಹೆಂಡತಿಗೆ ಉಬ್ಬಸದ ಕಾಯಿಲೆ. ಆಚಾರಿ ದಂಪತಿಗೆ ನಾಲ್ಕು ಹೆಣ್ಣು ಮಕ್ಕಳು, ಒಬ್ಬ ಮಗ. ಮಕ್ಕಳಲ್ಲಿ ಕೆಲವರಿಗೆ ಅಮ್ಮನಿಂದ ಅನುವಂಶೀಯವಾಗಿ ಬಂದ ಉಬ್ಬಸದ ಕಾಯಿಲೆ-ಅಸ್ತಮಾ. ಆಚಾರಿ ನಮ್ಮ ಪರಿಚಿತರಲ್ಲೊಂದು ಕಡೆ ಕೆಲಸಮಾಡುತ್ತಿದ್ದ ಕಾಲದಲ್ಲಿ ಮಕ್ಕಳಿನ್ನೂ ಚಿಕ್ಕವರು. ಕೆಲಸ ಮುಗಿಸಿ ಮನೆಗೆ ಮರಳಿದ, ಕೆಲಸಕ್ಕೂ ಮೊದಲೇ ಸಾಲವಾಗಿ ಪಡೆದ ಹಣವೂ ಸೇರಿದಂತೇ ಖರ್ಚು ಹೆಚ್ಚುತ್ತಿತ್ತು. ಅಶಕ್ತ ಮಕ್ಕಳನ್ನು ಹೆಚ್ಚಿನ ವೈದ್ಯ ಚಿಕಿತ್ಸೆಗೆ ಕರೆದೊಯ್ಯಲಾರ. ಆದರೂ ಒಮ್ಮೆ ಅಂಥಾ ಪ್ರಸಂಗದಲ್ಲಿ ಪ್ರಯತ್ನಿಸಿದ, ಮಗು ಉಳಿಯಲಿಲ್ಲ.

ಕಂಬಾರರು ತಮ್ಮ ಪದ್ಯದಲ್ಲಿ ಬರೆದಂತೇ ಉತ್ತರಕರ್ನಾಟಕದ ಬರಪೀಡಿತ ಪ್ರದೇಶಗಳ ಬಡತನ ಹೇಗಿದೆಯೆಂದರೆ ಮಕ್ಕಳನ್ನು ಮಾರಿ ಬದುಕಿಕೊಳ್ಳುವ ಡಾರ್ವಿನ್ ವಿಕಾಸ ವಾದ! ನಗರಗಳಲ್ಲಿ ಎಷ್ಟೋ ಶ್ರೀಮಂತರ ಬಂಗಲೆಗಳಲ್ಲಿ ಇನ್ನೂ ಅಮಾಯಕ ಬಾಲ ಕಾರ್ಮಿಕರು ಇದ್ದಾರೆ; ಅಪ್ಪ-ಅಮ್ಮ ಹಣಪಡೆದು ಮಾರಿಬಿಟಿದ್ದಾರೆ. ಬದುಕಬೇಕೇ ? ಹೇಳಿದ ಕೆಲಸಗಳನ್ನು ಮಾಡಬೇಕು, ಕೊಟ್ಟ ಶಿಕ್ಷೆ ಅನುಭವಿಸಬೇಕು, ಕೊಟ್ಟರೆ ತಿನ್ನಬೇಕು-ಇಲ್ಲದಿದ್ದರೆ ಸುಮ್ಮನಿರಬೇಕು. ಎಷ್ಟೋ ಮನೆಗಳಲ್ಲಿ ನಾಯಿಯನ್ನು ಚೆನ್ನಾಗಿ ಸಾಕುತ್ತಾರೆ ಆದರೆ ಕೆಲಸಕ್ಕೆ ಕರೆತಂದ ಈ ಮಕ್ಕಳ ಪಾಡು ನಾಯಿಪಾಡಿಗಿಂತಾ ಗೋಳು. ಅದನ್ನು ನೋಡಿದಾಗ ಅಂತಹ ಮಕ್ಕಳಿಗೆ ನಾಯಿಯಾಗಿಯಾದರೂ ಹುಟ್ಟಬಾರದಿತ್ತೇ ಎನಿಸಿರಬಹುದು. ನಾವೂ ಮನುಷ್ಯರು; ಆದರೆ ಮನುಜಮತವನ್ನು ಧರ್ಮವನ್ನೂ ಮೀರಿ ನಡೆವ ರಾಕ್ಷಸರು!

ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಪ್ರದೇಶದಲ್ಲಿ ತುಳಸೀ ಉದ್ಯಾನವೊಂದಿದೆ. ಅದಕ್ಕೆ ಆ ಹೆಸರು ಹೇಗೆ ಬಂತು ಎಂಬುದು ಇಲ್ಲಿ ಅಪ್ರಸ್ತುತ. ಬಹಳ ಹಿಂದೆ ಬೆಂಗಳೂರಿಗೆ ನಾನು ಬಂದಾಗ ಕೆಲವರು ಹೇಳಿದ್ದು ನೆನಪಾಯ್ತು. ಯಾವುದೋ ಕಾರಣಕ್ಕೆ ಪಾಲಕರಿಂದ ತಪ್ಪಿಸಿಕೊಂಡು ಬಂದ ಮಕ್ಕಳು ಯಾರದೋ ಹೇಳಿಕೆಯಿಂದ ಅಲ್ಲಿ ಕೂತಿರುತ್ತಿದ್ದರಂತೆ. ಆ ಕಾಲದಲ್ಲಿ ಮಾಧ್ಯಮಗಳಿನ್ನೂ ಅಷ್ಟೊಂದು ಸಬಲವಾಗಿರಲಿಲ್ಲ. ಅಲ್ಲಿ ಕೆಲವು ಏಜೆಂಟರುಗಳು ಬರುತ್ತಿದ್ದರಂತೆ. ಹಸಿದ, ಕಂಗೆಟ್ಟ ಮಕ್ಕಳಿಗೆ ತಿಂಡಿಪೊಟ್ಟಣ ನೀಡಿ ಸ್ನೇಹಗಳಿಸಿ ಕರೆದೊಯ್ದು ಆಮೇಲೆ ನಗರದ ಗಲ್ಲಿಗಳಲ್ಲಿರುವ ಹೋಟೆಲ್ ಮಾಲೀಕರಿಗೆ ಮಾರುತ್ತಿದ್ದರಂತೆ! ಆಮೇಲೆ ಆ ಮಕ್ಕಳಿಗೆ ಅದು ಅಕ್ಷರಶಃ ನರಕ! ಮಾಲೀಕ ಹೇಳಿದ್ದನ್ನು ಮಾಡಬೇಕು, ಬೆಳಗಿನ ಜಾವ ತಮ್ಮ ವಯಸ್ಸಿಗರು ಸುಖನಿದ್ದೆಯಲ್ಲಿರುವ ಹೊತ್ತಲ್ಲಿ ಇವರು ಹಿಟ್ಟು ರುಬ್ಬುವುದು, ನೀರು ಹೊರುವುದು, ಪಾತ್ರೆ ತೊಳೆಯುವುದು ಇತ್ಯಾದಿ ಕೆಲಸಗಳಲ್ಲಿ ನಿರತರಾಗಬೇಕಿತ್ತು. ಆಜ್ಞೆ ಪಾಲಿಸದಿದ್ದರೆ ಮೊದಲು ಕೆನ್ನೆಗೆ ಏಟು, ಆಮೇಲೆ ಛಡಿ ಏಟು. ಮೈಮೇಲೆ ಬಾಸುಂಡೆ ಎದ್ದು ರಕ್ತ ಒಸರಿದರೂ ಕೇಳುವವರಿಲ್ಲ; ಅಪ್ಪ-ಅಮ್ಮನ ಸಂಪರ್ಕ ಕಡಿದುಹೋಗಿರುವುದರಿಂದ ಅವರನ್ನು ಸಂಪರ್ಕಿಸುವ ಅನುಕೂಲವಿರುತ್ತಿರಲಿಲ್ಲ. 

ಬದುಕು ಜಟಕಾಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್ ಅವನು ಹೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದಕಡೆಗೋಡು
ಪದಕುಸಿಯೆ ನೆಲವಿಹಿದು-ಮಂಕುತಿಮ್ಮ 

ಈ ಬದುಕಿಗೆ ಬಂದ ತಪ್ಪಿಗೆ ವಿಧಿ-ಸೂತ್ರಧಾರ ಹೇಳಿದ ಜಾಗಕ್ಕೆ ಓಡಲೇಬೇಕು, ಹೇಳಿದ ಕೆಲಸ ಮಾಡಲೇಬೇಕು. ಇಲ್ಲಿ ತಲುಪುವ ಗಮ್ಯಸ್ಥಾನ ಕುದುರೆಗೋ ಪ್ರಯಾಣಿಕನಿಗೂ ಗೊತ್ತಾಗದಲ್ಲಾ! ಮದುವೆ ಮನೆಗೆ ಹೊರಟ ದಿಬ್ಬಣ ಮಸಣ ಸೇರಿದ ಘಟನೆ ಆಗಾಗ ವರದಿಯಾಗುತ್ತಲೇ ಇರುತ್ತದೆ! ಹೊರಟಮೇಲೆ ಮದುವೆಯೋ ಮಸಣವೋ ಎಂದು ನಿರ್ಧರಿಸುವುದು ಆ ವಿಧಿ. ಮಹಾತ್ಮ, ಸಂತ, ಕವಿ  ಡೀವೀಜಿ ಹೇಳಿದ ಮಾತು ಎಷ್ಟು ಸತ್ಯ ಅಲ್ಲವೇ?  

ಸೂಡಾನ್ ಎಲ್ಲಿದೆಯೆಂಬುದು ನಿಮಗೆಲ್ಲಾ ತಿಳಿದಿದೆ. ಉತ್ತರ ಆಫ್ರಿಕಾ ಖಂಡದಲ್ಲಿರುವ ಸೂಡಾನ್ ಒಂದು ಅರಬ್ ರಾಷ್ಟ್ರ. ಕೆಲವು ವರ್ಷಗಳ ಹಿಂದೆ ಅಲ್ಲಿ ಯುದ್ಧಗಳು ಘಟಿಸಿದ್ದರಿಂದ ಆ ದೇಶ ಕ್ಷಾಮಕ್ಕೆ ತುತ್ತಾಯ್ತು. ದೇಶದ ಜನರಲ್ಲಿ ಅನೇಕರು ಸೋಮಾಲಿಯಾ ಮೂಲದವರು ಎಂದು ಹೇಳಲಾಗುತ್ತದೆ. ಬಡತನ ಎಷ್ಟರಮಟ್ಟಿಗೆ ದೇಶವನ್ನು ತಿಂದುಹಾಕಿತು ಎಂದರೆ ಯಾರಿಗೂ ಹೊಟ್ಟೆಗೆ ಅನ್ನ-ನೀರು ಇರಲಿಲ್ಲ. ಇದ್ದುದನೆಲ್ಲಾ ಮಾರಿ ಮಾರಿ ಮಾರಿ ಅನುಕೂಲಸ್ಥರು ಹೊಟ್ಟೆ ತುಂಬಿಸಿಕೊಂಡರೆ, ಎಸೆದ ಆಹಾರದ ತುಣುಕು ಸಿಕ್ಕರೂ ಅದನ್ನೇ ತಿಂದು ವಾರಗಟ್ಟಲೇ ಹಸಿವು ತಡೆದುಕೊಂಡು ಜೀವಹಿಡಿದ ಜನ ಇದ್ದರು. ಸಂತ್ರಸ್ತರ ನೆರವಿಗೆ ವಿಶ್ವಸಂಸ್ಥೆಯ ಶಿಬಿರ ಅಲ್ಲಲ್ಲಿ ಇದ್ದರೂ ಅಲ್ಲಿಯವರೆಗೆ ನಡೆಯಲೂ ಅಶಕ್ತವಾದ ಜನ ಅದೆಷ್ಟೋ. ಸಾವಿರಾರು ಜನ ತಮ್ಮ ತಾತ್ಕಾಲಿಕ ತಂಬುಗಳಲ್ಲಿ ಅನ್ನ-ನೀರಿಲ್ಲದೇ ಹತರಾಗಿ ಹೋದರು. ಅನ್ನಾಂಗಗಳು ಆಹಾರ ಕೊರತೆಯಿಂದ ವಿಚಿತ್ರ ಆಕಾರಕ್ಕೆ ಬಂದವು. ಮೇಲಿನ ಚಿತ್ರದಲ್ಲಿ ಮಗುವೊಂದು ಹಸಿದಿದೆ, ಮಗುವಿನ ಹಿಂದೆ ತುಸು ದೂರದಲ್ಲಿ ಕುಳಿತಿರುವ ಹದ್ದು ಕೂಡ ಹಸಿದಿದೆ! ಮಗು ನಿತ್ರಾಣವಾಗಿ, ೧ ಕಿಲೋಮೀಟರಿನಷ್ಟು ದೂರವಿರುವ ಜಾಗಕ್ಕೆ ಹೋಗಲಾರದ ಸ್ಥಿತಿಯಲ್ಲಿದೆ, ಹದ್ದು ಮಗು ಸಾಯುವುದನ್ನೇ ಕಾದಿದೆ. ಹಸಿವು ಎರಡೂ ದೇಹಗಳನ್ನು ಕಂಗೆಡಿಸಿದೆ-ಯಾವುದೋ ಒಂದು ಹಸಿವನ್ನು ನೀಗಿಸಿಕೊಳ್ಳಬೇಕು. ಮುಂದೇನಾಯ್ತು ಎಂಬುದನ್ನು ನೀವೇ ಊಹಿಸಿಕೊಳ್ಳಬಹುದಾಗಿದೆ.

ಪ್ರಪಂಚದಲ್ಲಿಯೇ ಅತ್ಯಂತ ಸುಪ್ರಸಿದ್ಧ ಛಾಯಾಚಿತ್ರ ಗ್ರಾಹಕನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ಕೇವಿನ್ ಕಾರ್ಟರ್ ೧೯೯೩ ರಲ್ಲಿ ತೆಗೆದ ಛಾಯಾಚಿತ್ರವಿದು. ಬರಗಾಲದ ಸೂಡಾನ್ ನಲ್ಲಿನ ಹಲವು ಚಿತ್ರಗಳನ್ನು ಆತ ತೆಗೆದಿದ್ದಾರೆ. ಈ ಚಿತ್ರ ತೆಗೆದ ನಂತರ ಅವರ ಮನಸ್ಸಿಗೆ ಬಹಳ ನೋವಾಯ್ತಂತೆ. ಬಹಳಕಾಲ ಇದನ್ನೇ ವೀಕ್ಷಿಸುತ್ತಿದ್ದ ಕೇವಿನ್ ಕಾರ್ಟರ್ ಪ್ರಪಂಚದಲ್ಲಿ ಇಂಥಾ ದಾರುಣ ಸ್ಥಿತಿ ಯಾರಿಗೂ ಬಾರದಿರಲಿ ಎಂದು ಹಾರೈಸಿದ್ದಾರೆ. ನೋಡ್ತಾ ನೋಡ್ತಾ ಅವರಿಗೆ ಈ ನೋವೇ ಕಾರಣವಾಗಿ ಬದುಕೇ ಬೇಡವೆನ್ನಿಸಿತಂತೆ. ಈ ಲೋಕದ ಇಂತಹ ನೋವನ್ನು ತಲೆತುಂಬಾ ತುಂಬಿಕೊಂಡ ಕೇವಿನ್ ಕಾರ್ಟರ್ ಜೀವನಕ್ಕೆ ವಿದಾಯ ಹೇಳಿದ್ದಾರೆ; ಆತ್ಮಹತ್ಯೆ ಮಾಡಿಕೊಂಡುಬಿಟ್ಟಿದ್ದಾರೆ. 

ಬದುಕಿನ ಹಲವು ಮುಖಗಳನ್ನು ಚಿತ್ರಿಸುವಾಗ ಕಾಣದ ಶಕ್ತಿಯಲ್ಲಿ ನನ್ನದೊಂದು ಬಿನ್ನಹ: ಓ ದೇವನೇ ಪ್ರಪಂಚದಲ್ಲಿ ಇಂಥಾ ದಾರುಣ ಸ್ಥಿತಿಯನ್ನು ಮಾತ್ರ ತರಬೇಡ. ಅನ್ನಾಹಾರ ವಿಲ್ಲದೇ ಜನ-ಜಾನುವಾರು ಸಾಯುವ ಸ್ಥಿತಿ, ಅಂತಹ ಕ್ಷಾಮ ಬಾರದಿರಲಿ. ಅದರಲ್ಲಂತೂ ಮಕ್ಕಳ ಗೋಳನ್ನು ನಾವು ಸಹಿಸಲಾರೆವು. ಮಕ್ಕಳ ಮನಸ್ಸು ಅದು ನಿನ್ನ ಮನಸ್ಸು; ಪಾಪದ ಮಕ್ಕಳು ಏನೊಂದೂ ಅರಿಯವು. ತಮ್ಮ ಪಾಡಿಗೆ ತಾವು ಶಾಲೆಗಳಿಗೆ ಹೋಗುತ್ತಲೋ, ಇರುವ ಪರಿಸ್ಥಿತಿಯಲ್ಲಿ ಇನ್ನೇನೋ ಕೆಲಸಮಾಡುತ್ತಲೋ ಕಾಲಹಾಕುತ್ತಾರೆ. ನೀನೇ ಮಗುವಾಗಿ ಶ್ರೀರಾಮನಾಗಿ, ಶ್ರೀಕೃಷ್ಣನಾಗಿ ಜನಿಸಿದೆ, ಇನ್ನೊಮ್ಮೆ ನೀನು ಮಗುವಾಗಿ ಜನಿಸಿದರೆ ನಮ್ಮ ಜನ ನಿನ್ನನ್ನು ಖುದ್ದಾಗಿ ಕಂಡು, ಈ ಲೋಕದ ಕರ್ಮಬಂಧನದಿಂದ ಆದಷ್ಟೂ ಬಿಡುಗಡೆಗೊಳಿಸುವಂತೇ ಪ್ರಾರ್ಥಿಸಲಿ:

ಜಗನಾಳುವ ಶಕ್ತಿ ಮಗುವ ರೂಪದೆ ಬಂದು
ಬಗೆಬಗೆಯ ಆಟಿಕೆಯ ಎತ್ತಿ ನಲಿದಾಡಿ
ನಗುತ ನಲಿವುಣಿಸಿ ತಾ ಮರಳಿ ತೆರಳುವ ಮುನ್ನ
ನಗದು ವರವನು ಬೇಡು | ಜಗದಮಿತ್ರ