ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, December 19, 2012

ವಿಶ್ವಕ್ಕೇ ಗೊತ್ತು ಭಾರತದ ತಾಕತ್ತು! ಅದು ನಿತ್ಯ ನೂತನ; ಸತ್ಯ ಸನಾತನ.

ಿತ್ರಋಣ: ಅಂತರ್ಜಾಲ
ವಿಶ್ವಕ್ಕೇ ಗೊತ್ತು ಭಾರತದ ತಾಕತ್ತು! ಅದು ನಿತ್ಯ ನೂತನ; ಸತ್ಯ ಸನಾತನ. 

[ ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ
ಅಧ್ಯಾಯ-೩ ]

ನೀವೀಗ ಕೇಳುತ್ತೀರಿ ’ಇದರಲ್ಲಿ ಹೊಸದೇನಿದೆ ಭಟ್ಟರೇ?’, ಹೊಸದು ಎಂದರೆ ಹೊಸದಲ್ಲ, ಹಳೆಯದಾಗಲು ಸಾಧ್ಯವಿಲ್ಲ ಅಂಥಾ ಕೆಲವು ವಿಷಯಗಳು ನಮಗೆ ಆಗಾಗ ಅಲ್ಲಲ್ಲಿ ಸಿಗುತ್ತವೆ; ಕಾಣುತ್ತವೆ, ಮನದಲ್ಲಿ ನೆಲೆನಿಂತು ಕಾಡುತ್ತವೆ; ಆತ್ಮೀಯವಾಗಿ ಆತುಕೊಳ್ಳುತ್ತವೆ; ಸ್ನೇಹಿತರ ಥರಾ ಜೋತುಬೀಳುತ್ತವೆ. ಅವು ನಮ್ಮವೇ ಮತ್ತು ನಮ್ಮವರದೇ ವಿಷಯಗಳು, ಗೊತ್ತಿರುವವೇ ಆದರೂ ಮತ್ತೊಮ್ಮೆ ಕೇಳುವ, ಕೆದಕುವ, ಕಾಣುವ, ತಿಳಿಯುವ ತಣಿಯದ ಕುತೂಹಲ! ರಾಮಕಥೆ ನಡೆಯುವಲ್ಲೆಲ್ಲಾ ಬೊಗಸೆಯಗಲಿಸಿ ಪ್ರೀತಿಯನ್ನೂ ದಯೆಯನ್ನೂ ಸದಾ ಅದೇ ಶ್ರೀರಾಮರೂಪ ದರುಶನವನ್ನೂ ಬೇಡುತ್ತ ಆನಂದಬಾಷ್ಪ ಸುರಿಸುವ ಹನುಮ ನಿಂತಿರುವ ಹಾಗೇ, ಇಂಥಾ ವಿಷಯಗಳು ಪ್ರಸ್ತಾಪವಾದಾಗಲೆಲ್ಲಾ ನಾವು ಹನುಮರಾಗುತ್ತೇವೆ-ಕಥಾನಾಯಕರು ರಾಮರಾಗುತ್ತಾರೆ; ಯಾಕೆಂದರೆ

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಬೀಡು

ನಮ್ಮ ಕನ್ನಡನಾಡು. ಅಷ್ಟೇ ಏಕೆ ಈ ಪುಣ್ಯಭೂಮಿ ಭಾರತ ಕೂಡಾ. ರಾಮಾಯಣ, ಮಹಾಭಾರತಗಳಂಥಾ ಅದ್ಭುತ ಕೃತಿಗಳು ಪ್ರಪಂಚದಲ್ಲಿ ಇನ್ನೆಲ್ಲೂ ಕಾಣುವುದಿಲ್ಲ. ಕೋಟಿ ಕೋಟಿ ಕೃತಿಕಾರರು ಜನಿಸಿ, ಬರೆದು ಸಾಗಿ ಸಂದರೂ ನಮ್ಮನೆಲದ ಈ ಕಾವ್ಯಗಳನ್ನು ಅವಲೋಕಿಸಿದರೆ ಬೇರಾವ ಕಾವ್ಯಗಳಿಗೂ ಆ ಸಾರ್ವಕಾಲಿಕತೆ ಇಲ್ಲ, ದಕ್ಕುವುದೂ ಇಲ್ಲ. ವ್ಯಕ್ತಿಯೊಬ್ಬ ಉತ್ತಮನಾದರೆ ಯಾವ ಫಲ? ಮಧ್ಯಮನಾದರೆ ಯಾವುದು? ಅಧಮನಾದರೆ ಏನು ಫಲ? ಯಾರ ಸಂಗ ಮುಕ್ತಿತರಂಗ? ಇನ್ಯಾರ ಸಂಗ ಇಹದ ವಂಗ? ಮತ್ತಿನ್ಯಾರ ಸಂಗ ಮಾನಭಂಗ? ಹೀಗೇ ಮನುಜ ಜೀವನಕ್ಕೆ ಯಾವುದು ವಿಹಿತ, ಯಾವುದು ಹಿತ ಮತ್ತು ಯಾವುದು ಅಹಿತ ಎನ್ನುವುದನ್ನು ಆಧಾರಸಹಿತವಾಗಿ ಎತ್ತಿಕೊಡುವ ಅದಮ್ಯ ಆಕರಗಳು ನಮ್ಮ ರಾಮಾಯಣ-ಮಹಾಭಾರತಗಳು.

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ |
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||

ನಿಶ್ಚಲ ತತ್ವವನ್ನು ಹೇಗೆ ಪದಕ್ರಮದಲ್ಲಿ ಶ್ರೀಶಂಕರರು ಬೋಧಿಸಿದರು ಎಂಬುದನ್ನು ಕಾಣುತ್ತೇವೆ. ಸಾಗರ ವಿಶಾಲವಾಗಿದೆ, ಸಂತೋಷಕೊಡುತ್ತದೆ. ಸಾಗರಗರ್ಭದಲ್ಲಿ ಮುತ್ತು-ರತ್ನಗಳೇ ಅಡಗಿವೆ. ಸಮೂಹದೊಡನೆ ವಿಹರಿಸುವಾಗ ಮಹಾಸಮುದ್ರ ಸುಖದ ಕಡಲು; ಅದೇ ಏಕಾಂತದಲ್ಲಿ ಒಬ್ಬರೇ ಕಡಲಕಿನಾರೆಯಲ್ಲಿ ಬಹುಕಾಲ ವಿಶ್ರಮಿಸಿದರೆ ಆಗ ಅಳುಬರುತ್ತದೆ ಎಂಬುದು ಕೂತು ನೋಡಿದವರ ಅನುಭವ. ಕಾರಣವಿಷ್ಟೇ: ನಾವು ಯಾರೆಂಬುದರ ಮೂಲವನ್ನು ಅಲ್ಲಿ ನಾವು ಕಾಣತೊಡಗುತ್ತೇವೆ! ನಾನು ನಿಜವಾಗಿಯೂ ಯಾರು? ಇಂಥವರ ಮಗನೇ, ಇಂಥಾ ಹುಡುಗನ ಅಪ್ಪನೇ-ಅಮ್ಮನೇ? ಇಂಥಾ ವ್ಯಕ್ತಿ ಗಂಡ ಯಾ ಹೆಂಡತಿಯೇ? ಎಲ್ಲವೂ ಹೌದು, ಆದರೆ ಅದಕ್ಕೂ ಮೀರಿ ನನ್ನೊಳಗೇನಿದೆ? ಹುಟ್ಟಿದಾಗ ಜೀವ ಎಂಬುದು ಎಲ್ಲಿಂದ ಬರುತ್ತದೆ, ಸತ್ತಾಗ ಅದೆಲ್ಲಿ ಮರೆಯಾಗಿ ಹೋಗುತ್ತದೆ? ಹೀಗೆ ಸಾಗುವ ಮನೋರಥದ ವೇಗ ಆ ಕಿನಾರೆಗೆ ಸೀಮಿತವಲ್ಲ; ಅದು ಆಕಾಶದ ಅವಕಾಶದ ಅನಂತತೆಯಲ್ಲಿ ಅದೇನನ್ನೋ ಹುಡುಕುತ್ತದೆ; ಹುಡುಕಲು ಹಾತೊರೆಯುತ್ತದೆ. ಮನುಷ್ಯನಿಗೆ ಇಡೀ ದಿನ ಕೆಲಸಮಾಡಿ ದಣಿದಾಗ ನಿದ್ದೆ ಆವರಿಸುತ್ತದೆ, ೨೪ ಗಂಟೆಗಳಲ್ಲಿ ಸಾಮಾನ್ಯವಾಗಿ ೫-೬ ಗಂಟೆಗಳ ಕಾಲ ನಿದ್ದೆಯಲ್ಲಿ ಕಳೆಯುತ್ತದೆ. ನಿದ್ದೆ ಮಾಡಿ ಎದ್ದರೇನೇ ಮುಂದಿನ ಕೆಲಸ ಸಲೀಸು, ನಿದ್ದೆ ಇಲ್ಲದಿದ್ದರೆ ಯಾವ ಕೆಲಸವೂ ಸಾಧ್ಯವೇ ಇಲ್ಲವೆಂಬ ಭಾವನೆ.

ನಿದ್ದೆಗೊಮ್ಮೆ ನಿತ್ಯಮರಣ
ಎದ್ದಸಲ ನವೀನ ಜನನ
ನಮಗೆ ಏಕೆ ಬಾರದೋ
ಎಲೆ ಸನತ್ಕುಮಾರದೇವ
ಎಲೆ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ನಮ್ಮನಷ್ಟೆ ಮರೆತಿದೆ !

ಬೇಂದ್ರೆಯವರ ಹಾಡು ಹಲವರಿಗೆ ಗೂಢ, ಕೆಲವರಿಗೆ ಘನತರ, ಅವು ವೇದಾಂತವನ್ನು ಸಾರುತ್ತವೆ. ಆ ವೇದಾಂತದಲ್ಲೇ ನಮ್ಮ ಮೂಲದ ಸೂತ್ರ ಅಡಗಿದೆ:

ಯೋ ವೇದಾದೌ ಸ್ವರಃ ಪ್ರೋಕ್ತೋ
ವೇದಾಂತೇ ಚ ಪ್ರತಿಷ್ಠಿತಃ |
ತಸ್ಯಃ ಪ್ರಕೃತಿ ಲೀನಸ್ಯ
ಯಃ ಪರಃ ಸಃ ಮಹೇಶ್ವರಃ ||

ನಮ್ಮ ಸುತ್ತ ನಡೆದಾಡಲು, ಬೆಳೆತೆಗೆಯಲು, ಮನೆಕಟ್ಟಿ ಸಂಸಾರ ನಡೆಸಲು ಈ ಭೂಮಿ ಇದೆ, ಕುಡಿಯಲು ಶುದ್ಧ ನೀರು ಸಾಕಾರಗೊಳ್ಳುತ್ತದೆ, ಉಸಿರಾಡಲು ಹವೆಯಿದೆ-ತಂಗಾಳಿಯಿದೆ, ಕಾಯಿಸಲು-ಬೇಯಿಸಲು-ದಹಿಸಲು ಅಗ್ನಿಯಿದೆ-ಬೆಂಕಿಯಿದೆ, ಇವೆಲ್ಲಾ ತನ್ನೊಳಗೇ ಇರಲು ಆಕಾಶವಿದೆ-ಅವಕಾಶವಿದೆ. ಬಿಸಿಲಿಗೆ ಸೂರ್ಯನಿದ್ದಾನೆ, ಬೆಳದಿಂಗಳಿಗೆ ಚಂದ್ರನಿದ್ದಾನೆ. ಆದರೆ ಅವು ನಮಗೆ ಸಕಲರೀತಿಯಲ್ಲಿ ನೆರವನ್ನು ನೀಡುತ್ತಿದ್ದರೂ ಅವುಗಳಲ್ಲೇ ಅವಿತಿರುವ ನಮ್ಮ ಮೂಲದ ಅರಿವು ನಮಗಿಲ್ಲ! ಈ ನೆಲದಲ್ಲಿ ರಾಮನಿದ್ದ-ಸಾರ್ವಭೌಮನಿದ್ದ, ಈ ನೆಲದಲ್ಲಿ ಕೃಷ್ಣನಿದ್ದ-ಜಗದ್ಗುರುವಿದ್ದ. ನಿರ್ಗುಣವು ನಮಗಾಗಿ ಸಗುಣವಾಗಿ ಬಂದಾಗ ಅದನ್ನು ಕಾಣುವ ಭಾಗ್ಯ ನಮಗಿರಲಿಲ್ಲ, ಕೆಲವರಿಗೆ ಸಿಕ್ಕಾಗ ಏನು ಕೇಳಬೇಕೆಂಬುದೇ ತಿಳಿಯಲಿಲ್ಲ. ಕೆಲವರಿಗೆ ಸಿಕ್ಕಾಗ ಏನೇನೂ ದಕ್ಕಲಿಲ್ಲ! ’ಭಗವಂತ ಸಿಕ್ಕರೆ ಏನು ಕೇಳುತ್ತೀಯ?’ ಎಂದು ಹಲವರಲ್ಲಿ ಪ್ರಶ್ನೆಮಾಡಿದರೆ, ಕೆಲವರಿಗೆ ದಿಕ್ಕೇ ತೋಚುವುದಿಲ್ಲ, ಇನ್ನೂ ಕೆಲವರಿಗೆ ಸಂಸಾರ ತಾಪ-ತ್ರಯಗಳ ಸಮಸ್ಯೆಗಳೇ ಪ್ರಧಾನವಾಗಿ ಗೋಚರಿಸಿ ಮತ್ತಿನ್ನೇನೂ ಕೇಳಲು ಉಳಿದಿರುವುದಿಲ್ಲ!

ನವನಾಗರಿಕತೆ ಎಂಬ ಆಮಿಷಕ್ಕೆ ಬಲಿಯಾದ ನಮ್ಮ ಯುವಪೀಳಿಗೆಯ ಹಲವರಿಗೆ ನಮ್ಮ ಸಂಸ್ಕೃತಿ-ಸಂಸ್ಕಾರಗಳ ಬಗ್ಗೆ ಅರಿವಿಲ್ಲ, ಸರಿಯಾಗಿ ಅರಿಯದೇ ಇರುವ ಹಿರಿಯರ-ಪಾಲಕ-ಎಡಪಂಥೀಯರ ದುರ್ಧೋರಣೆಯಿಂದ ನಮ್ಮ ಸಂಸ್ಕೃತಿಗೆ ಬೆಲೆಯಿಲ್ಲ! ಯುವ ಬರಹಗಾರರನ್ನು ಕೇಳಿದರೆ ಯಾವುದೋ ವಿದೇಶೀ,ಪರದೇಶೀ ಕವಿಗಳನ್ನು ಹೆಸರಿಸಿ ಉದ್ದುದ್ದ ಅಡ್ಡಡ್ಡ ಕೊರೆಯುತ್ತಾರೆ ಬಿಟ್ಟರೆ ಬಹುತೇಕರಿಗೆ ನಮ್ಮ ಕಾಳಿದಾಸನ ಕೃತಿಗಳ ಒಡನಾಟವಿಲ್ಲ, ಚಾಣಕ್ಯನ ಅರ್ಥಶಾಸ್ತ್ರದ ಸಾಂಗತ್ಯವಿಲ್ಲ, ಬಾಣ, ಭವಭೂತಿ, ಪಾಣಿನಿ, ವರಾಹಮಿಹಿರ, ಭಾಸ್ಕರ, ಆರವಿ ಯಾರದೂ ಹಿಡಿಸುವುದಿಲ್ಲ!-ಯಾಕೆಂದರೆ ಅರ್ಥವಾಗುತ್ತಿಲ್ಲ, ಅರ್ಥಗ್ರಹಿಸಿದವರನ್ನು ಕೇಳುವ ಮನಸ್ಸಿಲ್ಲ. ದೀಪದ ಚಿತ್ರಕ್ಕೂ ಉರಿಯುವ ದೀಪಕ್ಕೂ ಇರುವ ಸಹಜ ವ್ಯತ್ಯಾಸದ ಪರಿಕಲ್ಪನೆಯಿಲ್ಲ. ಪರದೇಶಗಳ ಪ್ರಲೋಭನೆಯಲ್ಲೇ-ಎಲ್ಲಾ, ಕೇಳುತ್ತಾರೆ ’ಅಲ್ಲಿ ಏನುಂಟು ಏನಿಲ್ಲ?’! ವಿದೇಶೀ ಕವಿ-ಸಾಹಿತಿಗಳನ್ನು ತಾನೂ ಓದಿದ್ದೇನೆ ಎಂಬುದನ್ನು ಕೊಚ್ಚಿಕೊಳ್ಳುವ-ಆ ಮೂಲಕ ’ವಿಶಾಲ ಓದುಗ’ ಎಂಬ ಬಿರುದನ್ನು ಪಡೆಯುವ ಹುಮ್ಮಸ್ಸು ನಮ್ಮ ಪ್ರಾಚೀನ ಕವಿ-ಸಾಹಿತಿಗಳನ್ನು ಮರೆಮಾಚಿಬಿಡುತ್ತದೆ. ಸಂಸ್ಕೃತಭಾಷೆ ಮತ್ತು ಅದರಲ್ಲಿನ ಕವಿ-ಕಾವ್ಯ-ಸಾಹಿತ್ಯಗಳನ್ನು ನಾವು ಬ್ರಾಹ್ಮಣೀಕರಿಸಿಬಿಟ್ಟಿದ್ದೇವೆ! ಅದು ಬ್ರಾಹ್ಮಣರದ್ದು ಎಂದು ಸೀಲು ಹೊಡೆದು ತೆಗೆಯಲಾರದಂತೇ ಮುಚ್ಚಳ ಜಡಿದುಬಿಟ್ಟಿದ್ದೇವೆ; ಕಂಡಲ್ಲಿ ಹೂಂಕರಿಸುತ್ತೇವೆ, ಧಿಕ್ಕರಿಸುತ್ತೇವೆ. ಆದರೆ ಒಮ್ಮೆ ಅಂಥಾ ಕೃತಿಗಳ ಬಗ್ಗೆ ಕಿಂಚಿತ್ತಾದರೂ ತಿಳಿದುಕೊಂಡರೆ ನಾವೇರ್ನು ಈ ಜಗತ್ತಿನಲ್ಲಿ ಎಂಬುದನ್ನು ಅರಿಯಲು ಅದು ಸಹಕರಿಸುತ್ತದೆ. ಈ ಜನಸಾಗರದ ಕಿನಾರೆಯಲ್ಲಿ ಕುಳಿತು ನಮ್ಮನ್ನು ನಾವು ಮತ್ತೊಮ್ಮೆ ಯಾರು?-ಎಂದು ಪ್ರಶ್ನಿಸಿಕೊಳ್ಳುವುದಕ್ಕೆ ಅದು ಅನುಕೂಲ ಕಲ್ಪಿಸುತ್ತದೆ.

ಆಗೊಮ್ಮೆ ಈಗೊಮ್ಮೆ ನಮಗೆ ಕೆಲವು ವಿಶೇಷ ಘಟನೆಗಳು ಕಾಣುತ್ತವೆ. ೧೯ನೇ ಶತಮಾನದ ಅಂತ್ಯದ ಮತ್ತು ೨೦ನೇ ಶತಮಾನದ ಆದಿಯಲ್ಲಿ ಜೀವಿಸಿದ್ದ ಶ್ರೀನಿವಾಸ ರಾಮಾನುಜನ್ ಎಂಬ ಗಣಿತಜ್ಞ, ಸಮಾಜಕ್ಕೆ ಹಲವಾರು ವಿಶಿಷ್ಟ ಕೊಡುಗೆಗಳನ್ನು ಕರುಣಿಸಿದ ವಿಶ್ವೇಶ್ವರಯ್ಯ, ಕಾವ್ಯವನ್ನೇ ಉಸಿರಾಗಿ ಬದುಕಿ ಅದರಲ್ಲೇ ಸರಸವಾಡಿದ ಮುದ್ದಣ, ಸಿಗುವುದೆಲ್ಲವನ್ನೂ ತ್ಯಜಿಸಿ ತ್ಯಾಗಿಯಾಗಿ-ಯೋಗಿಯಾಗಿ ಬದುಕಿದ ಡಿವಿಜಿ, ರಾಮಾಯಣ ದರ್ಶನವನ್ನು ತನ್ನದೇ ವ್ಯಾಖ್ಯಾನದಲ್ಲಿ ಬರೆದ ಕುವೆಂಪು, ಮಕ್ಕಳ ಅವಸಾನಗಳನ್ನು ಕಾಣುತ್ತಲೇ ನಾಕುತಂತಿಯನ್ನು ಮೀಟಿದ-ಗಂಗಾವತರಣವನ್ನು ತೋರಿಸಿದ ಬೇಂದ್ರೆ, ಬಡತನದಲ್ಲೂ ಸುಖದಾಂಪತ್ಯದ ಸೊಬಗನ್ನು ಮಲ್ಲಿಗೆಯಾಗಿ ಪೋಣಿಸಿದ ನರಸಿಂಹಸ್ವಾಮಿ ಇವರೆಲ್ಲಾ ನಮ್ಮ ನಡುವಿನ ಆಶ್ಚರ್ಯವಾಗುತ್ತಾರೆ! ಅವತಾರಗಳಂತೇ ಕಾಣುತ್ತಾರೆ! ಕುವೆಂಪು, ವಿಶೇಶ್ವರಯ್ಯನವರವನ್ನುಳಿದು [ವಿಶ್ವೇಶ್ವರಯ್ಯನವರಿಗೂ ರಾಜಾಶ್ರಯ ಸಿಗುವ ಮೊದಲು ಕೂಳಿಗೂ ಕಷ್ಟವಿತ್ತು!] ಇನ್ನುಳಿದ ಎಲ್ಲರ ಮನೆಗಳಲ್ಲೂ ಬಡತನ ಹೇಗಿತ್ತು ಎಂಬುದರ ಬಗ್ಗೆ ಮತ್ತೆ ಹೊಸ ವ್ಯಾಖ್ಯಾನ ಬೇಡ. ಅವರೆಲ್ಲಾ ಆ ಯಾ ಕೆಲಸಗಳಿಗಾಗಿಯೇ ಜನಿಸಿದರು, ಬಾಳಿದರು. ರಾಮಾನುಜನ್ ಜೀವಿಸಿದ್ದು ೩೨ ವರ್ಷ, ಮುದ್ದಣ ಬದುಕಿದ್ದು ೩೧ ವರ್ಷ, ಆದಿಶಂಕರರು ಬದುಕಿದ್ದು ೩೨ ವರ್ಷ, ಆದರೆ ಸಾಮಾನ್ಯನೊಬ್ಬನ ಜೀವಿತದಲ್ಲಿ ಸಾಧಿಸಲಾಗದ್ದನ್ನು ಅವರು ಸಾಧಿಸಿ ತೋರಿಸಿದರು. ಇವರ್ಯಾರಿಗೂ ಅವರ ಉಪಜೀವನ, ಜೀವಿತಕ್ಕೆ ಬಳಸುವ ವಸ್ತುಗಳು-ಉಪಕರಣಗಳು, ವಾಹನಗಳು, ಅನುಕೂಲತೆಗಳು, ಸಂವಹನ ಮಾಧ್ಯಮದ ಸವಾಲುಗಳು ಸಾಧನೆಗೆ ಅಡ್ಡಿಬರಲಿಲ್ಲ; ಯಾರೂ ಪೂರ್ವಾಗ್ರಹ ಪೀಡಿತರಾಗಿರಲಿಲ್ಲ. 

ಜಟಿಲೋ ಮುಂಡೀ ಲುಂಛಿತಕೇಶಃ
ಕಾಷಾಯಾಂಬರಬಹುಕೃತವೇಷಃ|
ಪಶ್ಯನ್ನಪಿ ಚ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ ||

ಹರಿ-ಹರ ಭೇದವೆಣಿಸದ ಭಗವತ್ಪಾದ ಶಂಕರರದ್ದು

ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ||

ಎಂಬ ಭಾವ. ಹಾಗಾಗಿ ಅವರು ಜೀವನದ ಕೊನೆಯಲ್ಲಿ ಭಜಗೋವಿಂದಮ್ ಎನ್ನಿ ಎನಲಿಲ್ಲ ಎಂಬುದು, ಹಾಗೆ ವಾದಿಸುವ ಮೂಢರಿಗೆ ನನ್ನ ಉತ್ತರವಾಗಿದೆ.  ’ಉದರನಿಮ್ಮಿತ್ತಂ ಬಹುಕೃತವೇಷಃ’ ಎಂದು ಅದೆಷ್ಟೋ ಸಾರಿ ಬಳಸುತ್ತೇವೆ-ಅದು ಎಲ್ಲಿಂದ ಬಂತೆಂಬುದು ನಮಗೆ ಗೊತ್ತಿರುವುದಿಲ್ಲ; ಯಾಕೆಂದರೆ ’ಭಜಗೋವಿಂದಮ್’ ಸ್ತೋತ್ರವನ್ನು ನಾವು ಪೂರ್ಣವಾಗಿ ಪಠಿಸಲಿಲ್ಲ; ಅದು ಯಾರೋ ಸಂನ್ಯಾಸಿ ಹೇಳಿದ್ದೆಂಬ ಅಸಡ್ಡೆಯಿಂದ ನಮಗೆ ಬೇಕಾಗಿಯೂ ಇಲ್ಲ! ಅಲ್ಲವೇ?  ವೈದ್ಯ, ತಂತ್ರಜ್ಞ, ವಿಜ್ಞಾನಿ, ಬರಹಗಾರ, ರೈತ, ರಾಜಕಾರಣಿ ಯಾವುದೇ ವೇಷವನ್ನು ತೊಟ್ಟರೂ ಎಲ್ಲವೂ ನಮ್ಮ ಉದರಂಭರಣೆಯ ಮೂಲೋದ್ದೇಶದಿಂದಲೇ ಆಗಿವೆ. ಹಸಿದವನಿಗೆ ಹೊಟ್ಟೆ ತುಂಬಿಸುವ ಚಿಂತೆ, ಹೊಟ್ಟೆ ತುಂಬಿದಮೇಲೆ ಹಾಯಾಗಿ ನಿದ್ರಿಸುವ ಚಿಂತೆ, ಉಂಡು ಹಾಯಾಗಿ ನಿದ್ರಿಸುವಷ್ಟರಮಟ್ಟಿಗೆ ಅನುಕೂಲವುಳ್ಳ ವ್ಯಕ್ತಿಗೆ ಮೈಥುನದ ಚಿಂತೆ,  ಹೀಗೇ ಈ ಸಂಸಾರ ’ಸಂನ್ಯಾಸಿ ಸಾಕಿದ ಬೆಕ್ಕಿನ ಕಥೆ’ಯಂತಾಗುತ್ತದೆ!

ಅಂಗಂ ಗಲಿತಂ ಪಲಿತಂ ಮುಂಡಂ
ದಶನವಿಹೀನಂ ಜಾತಂ ತುಂಡಂ |
ವೃದ್ಧೋ ಯಾತಿ ಗ್ರಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾ ಪಿಂಡಂ ||

ಎಲ್ಲವೂ ಸರಿಯಿದ್ದರೆ ಕೊಳ್ಳುಬಾಕರಾಗುತ್ತೇವೆ. ಜೀವನಕ್ಕೆ ಬೇಡವಾದ ಕ್ರೆಡಿಟ್ ಕಾರ್ಡ್ ಮೊರೆಹೋಗುತ್ತೇವೆ, ಸಾಲದಲ್ಲಿ ಕಾರು ಕೊಳ್ಳುತ್ತೇವೆ, ಸಾಲಮಾಡಿ ಇನ್ಯಾರೂ ಕಟ್ಟದ ಬಂಗಲೆ ಕಟ್ಟುತ್ತೇವೆ! ಬೇರಾರಲ್ಲೂ ಇರದ ದಿರಿಸುಗಳೇ ಬೇಕು, ವಿದೇಶೀ ಪರಿಮಳದ್ರವ್ಯಗಳೇ ಬೇಕು. ಹೀಗೇ ಅತಿಯಾಶೆ ನಮ್ಮನ್ನು ದೋಚಿಬಿಡುತ್ತದೆ; ಎಲ್ಲದರ ಅರಿವಾಗುವಾಗ ಬೆಳಗಾಗಿಹೋಗಿರುತ್ತದೆ, ಆದರೆ ನಮ್ಮ ಮನಸ್ಸಿಗೆ ಮಾತ್ರ ಅಂಧಕಾರ ಹೆಚ್ಚುತ್ತಲೇ  ಹೋಗುತ್ತದೆ! 

ನೀರವದ ನಡುರಾತ್ರಿಯಲ್ಲಿ ರಾಜಕುಮಾರ ಸಿದ್ಧಾರ್ಥ ಹಯವನ್ನಡರಿ ಹೊರಟಿದ್ದ! ಕುದುರೆಗೆ ಅಪರಾತ್ರಿಯ ಕತ್ತಲ ಹಾದಿಯಲ್ಲಿ ಅದೆಲ್ಲಿಗೋ ತೆರಳುವ ಯೋಚನೆ, ಯೋಜನೆ ವಿಚಿತ್ರವಾಗಿ ಕಂಡಿತು. ಆದರೆ ಸಿದ್ಧಾರ್ಥನ ಮನಸ್ಸು ದೃಢವಾಗಿತ್ತು, ಅಚಲವಾಗಿತ್ತು. ಲೋಕಪರ್ಯಟನೆಯನ್ನು ಮಾಡಿದ್ದ ಆತ ಪ್ರಜೆಗಳಲ್ಲಿನ ಸುಖದುಃಖಗಳ ಸಂಭವನೀಯತೆಯನ್ನು ಮನದಲ್ಲೇ ಕೂಡಿ-ಕಳೆದು, ಎಣಿಸಿ-ಗುಣಿಸಿ ಜೀವನದಲ್ಲಿ ಸುಖಕ್ಕಿಂತ ಹೆಚ್ಚಿನ ಭಾಗ ದುಃಖವೇ ಎಂಬುದನ್ನು ಮನಗಂಡಿದ್ದ. ಸುಖವನ್ನೀವ ಈ ಜಾಗದ ಎಲ್ಲಾ ಭೋಗವಸ್ತುಗಳೂ ಪರೋಕ್ಷ ದುಃಖವನ್ನೇ ಕೊಡುವಂಥವು ಎಂಬುದು ಅವನ ಮನಸ್ಸಿಗೆ ನಿಲುಕಿಬಿಟ್ಟಿತ್ತು. ಜನರ ಕೊನೆಮೊದಲಿಲ್ಲದ ದುಃಖಕ್ಕೆ ಕಾರಣವನ್ನು ಕಾಣಬಯಸಿದ ಸಿದ್ಧಾರ್ಥ ಪರಚಿಂತನೆಯಲ್ಲಿ ತೊಡಗಿಕೊಂಡಿದ್ದ, ಈ ರಾಜ್ಯ-ಈ ಸತಿಸುತರು-ಈ ಧನಕನಕ ಭೋಗಭಾಗ್ಯಗಳೆಲ್ಲಾ ನಶ್ವರವೆನಿಸಿದವು. ಪ್ರೀತಿಯ ಕುದುರೆಯನ್ನಡರಿ ಬಹುದೂರದ ಕಾಡಿಗೆ ಯುವರಾಜ ತೆರಳುವ ಸಂದರ್ಭದಲ್ಲಿ  ಕುದುರೆಗೆ ತಿಳಿಹೇಳಿದ ಬಗೆಯನ್ನು ಕವಿ ಹೀಗೆ ಬಣ್ಣಿಸಿದ್ದಾರೆ :

ತಿರುತಿರುಗಿ ನನ್ನ ಮೊಗ ನೋಡದಿರು ಬೇಡದಿರು
ಕೊರಗದಿರು ಮರುಗದಿರು ನನ್ನ ಸಲುವಾಗಿ
ಅರಿವಿನಾ ಮಾರ್ಗವಿದು ಪರದ ಸನ್ಮಾರ್ಗವಿದು
ಧರೆಯ ದುಃಖದ ಭಾರವಿಳಿಪ ಮಾರ್ಗವಿದು

ನಡೆ ಹಯವೇ ನಡೆ ಮುಂದಕೀಗ
ಸಾರವಿಲ್ಲದ ಸುತಸತಿ ವ್ಯಾಮೋಹದಿಂ ದೂರ
ಸಾರಿಹೋಗುವ ನಾವು ಮುಂದಕೀಗ

ಬೋಧೀವೃಕ್ಷದ ಕೆಳಗೆ ಆಸೀನನಾದ ಸಿದ್ಧಾರ್ಥ, ನಮಸ್ಕರಿಸಿ ಕುದುರೆಯನ್ನು ಮರಳಿ ರಾಜಧಾನಿಗೆ ಕಳುಹಿಸಿದ. ಬಹುಕಾಲದ ತಪಸ್ಸಿನ ಬಳಿಕ ಒಂದುದಿನ ಜ್ಞಾನೋದಯವಾಯಿತು. ’ಆಸೆಯೇ ದುಃಖಕ್ಕೆ ಮೂಲ’ ಎಂಬ ಕಾರಣ ಅವನ ದೃಷ್ಟಿಗೆ ಗೋಚರಿಸಿತು. ಆಸೆಯನ್ನು ತೊಡೆದುಹಾಕಿ ನಿರುಮ್ಮಳರಾಗಲು ಜನರಿಗೆ ಕರೆ ನೀಡಿದ ಸಿದ್ಧಾರ್ಥ, ಗೌತಮ ಬುದ್ಧನೆನಿಸಿದ. ಇದೇ ಆಶಯವನ್ನು ಸನಾತನ ಧರ್ಮಸೂತ್ರ ಆ ಮೊದಲೇ ಪರೋಕ್ಷ ಹೇಳಿತ್ತು. ತನ್ನ ಜೀವಿತಕ್ಕೆ ಅತ್ಯಾವಶ್ಯಕವಾದ ವಸ್ತು-ಒಡವೆಗಳನ್ನು ಬಿಟ್ಟು ಮಿಕ್ಕರೀತಿಯಲ್ಲಿ ಧನ-ಕನಕ-ಆಸ್ತಿ-ವಸ್ತುಗಳ ಸಂಚಯನ ಸರಿಯಲ್ಲವೆಂದು ಅದು ಸಾರಿದೆ. ’ಸರಳ ಜೀವನ ಮತ್ತು ಉನ್ನತ  ಚಿಂತನ’ಇದು ಸನಾತನ ಜೀವನಧರ್ಮದಲ್ಲಿ ನಡೆದುಬಂದ ಪರಂಪರೆ-ಇದನ್ನು ಗಾಂಧೀಜಿ ಕೂಡ ಅನುಸರಿಸಿದರು. ವಿದೇಶಕ್ಕೆ ಸೂಟು ಬೂಟಿನಲ್ಲಿ ತೆರಳಿದ್ದ ಗಾಂಧೀಜಿ ಅರಿವಿನ ಮೆಟ್ಟಿಲನ್ನು ಏರುತ್ತಾ ಹೋದಂತೇ ಅವುಗಳನ್ನೆಲ್ಲಾ ಕಿತ್ತೆಸೆದು ಪಂಚೆಗಳೆರಡರಲ್ಲೇ ದೇಶದುದ್ದಗಲ ಸಂಚರಿಸುತ್ತಿದ್ದರು. ಮಾಯಾಲೋಕದ ಮಾಯೆಯ ಮೋಡಿಗೆ ಒಳಗಾಗದೇ ಬದುಕುವ ಸರಳ ಜೀವಿತವನ್ನು ಬದುಕುತ್ತಾ ಉಳಿದವರಿಗೆ ತೋರಿಸಿದರು. 

ತಿರುಕನೊಬ್ಬ ಕನಸುಕಂಡ, ಕನಸಿನಲ್ಲಿ ಆ ರಾಜ್ಯದ ರಾಜ  ಸತ್ತುಹೋಗಿದ್ದ, ವಾರಸುದಾರರಿಲ್ಲದ ಕಾರಣ ಅಮಾತ್ಯರು ಪಟ್ಟದಾನೆಯ ಸೊಂಡಿಲಲ್ಲಿ ಹಾರವನ್ನು ಕೊಟ್ಟು, ನೂತನ ರಾಜನನ್ನು ಆಯ್ಕೆಮಾಡುವಂತೇ ವಿನಂತಿಸುತ್ತಾರೆ. ಗಜ-ಗಾಂಭೀರ್ಯದಲ್ಲಿ ಮುಂದರಿದು ಬಂದು ಹಾರಹಾಕಿ ತಾನೇ ರಾಜನಾದ ಹಾಗೇ ಅನ್ನಿಸುತ್ತದೆ. ಆಹಹಾ ಎಂಥಾ ಭಾಗ್ಯ! ಯಾರುಗುಂಟು ಯಾರಿಗಿಲ್ಲ. ತುಸು ನಿಮಿಷ ತಡೆದು ಸಿಟ್ಟಿಗೆದ್ದ ರಾಜನ ಸೈನಿಕರು ಮನೆಗೆ ಮುತ್ತಿಗೆ ಹಾಕಿದಹಾಗೇ ಭಾಸವಾಗಿ ಎಚ್ಚರವಾಗುತ್ತದೆ-ತಿರುಕ ಮಗ್ಗಲು ಬದಲಾಯಿಸಿ ಹೆದರಿ ಎದ್ದು ಕುಳಿತುನೋಡುತ್ತಾನೆ-ನಡೆದಿದ್ದು ಕನಸು, ನಿಜವಲ್ಲ!  ಆದರೆ ನಿಜವೇ ಎನ್ನುವ ಭಾವನೆಮಾತ್ರ ಅದಷ್ಟು ಕಾಲ ಸುಳ್ಳಾಗಿರಲಿಲ್ಲ. ವೇದಿಕೆಯಲ್ಲಿ ಸತ್ತಂತೇ ಮಲಗಿದ ವ್ಯಕ್ತಿಯನ್ನು ಮೇಲೆತ್ತಲು ಯಾವ ಉಪಕರಣದ ಸಹಾಯವನ್ನೂ ಪಡೆಯದೇ ಐಂದ್ರಜಾಲಿಕ ಮೇಲೆತ್ತುತ್ತಾನೆ, ವೇದಿಕೆಯನ್ನೇ ಸುಂದರ ಪುಷ್ಪೋದ್ಯಾನವನ್ನಾಗಿ ಮಾಡುತ್ತಾನೆ. ಇಂದ್ರಜಾಲ ಪ್ರದರ್ಶನ ಮುಗಿಯುವವರೆಗೂ ಅದು ಸುಳ್ಳಲ್ಲ, ಆಚೆ ಎದ್ದು ಬಂದಮೇಲೆ ಅದು ನಿಜವಲ್ಲ! ಸಾವಿರಾರು ರೂಪಾಯಿಗಳ ನೋಟುಗಳನ್ನು ಚಕಚಕನೇ ಸೃಜಿಸುವ ಜಾದೂಗಾರನಿಗೆ ಮನೆಯಲ್ಲಿ ಬಡತನ!! ಹಾಗಾದರೆ ನಾವು ನೋಡಿದ್ದು ಸುಳ್ಳೇ? ಸುಳ್ಳಲ್ಲ, ಅದು ನಿಜವೇ. ಆದರೆ ಅದೊಂದು ಭ್ರಮಾಲೋಕ; ಅದರಂತೇ ಈ ಲೋಕ! ಅದಕ್ಕೇ ಈ ಲೋಕ ಮಿಥ್ಯಾಲೋಕ; ಇದು ಇಂದ್ರಜಾಲ, ಮಹೇಂದ್ರನಾಡುವ ಮಹೇಂದ್ರಜಾಲ.

ಕಸ್ತ್ವಂ ಕೋಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ  ತಾತಃ |
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಂ ||


ಹೆತ್ತಾತನರ್ಜುನನು ಮುತ್ತಯ್ಯ ದೇವೇಂದ್ರ
ಮತ್ತೆ ಮಾತುಲನು ಶ್ರೀಹರಿಯಿರಲು|ಅಭಿಮನ್ಯು
ಸತ್ತನೇಕಯ್ಯ ? ಸರ್ವಜ್ಞ

ಯಾರ ಮಗನೇ ಆದರೂ ಯಾರೇ ಜೊತೆಯಲ್ಲಿದ್ದರೂ ವಿಧಿ ಬರಹವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅಭಿಮನ್ಯು ಅಮ್ಮನ ಉದರಲ್ಲಿದ್ದಾಗ ಚಕ್ರವ್ಯೂಹವನ್ನು ಭೇದಿಸಿ ಒಳನುಗ್ಗುವವರೆಗಿನ ಕಥೆ ಕೇಳಿದ್ದ, ನಂತರದ ತಂತ್ರಗಾರಿಕೆ ಅವನಿಗೆ ಗೊತ್ತಿರಲಿಲ್ಲ. ಈ ಪ್ರಪಂಚ ಕಂಡ ಅತೀ ಎಳವೆಯ ಮಹಾನ್ ಪರಾಕ್ರಮಿ ಎಂಬುದರಲ್ಲಿ ಎರಡುಮಾತಿಲ್ಲ, ಅರ್ಜುನನ ಮಗನೂ ಹೌದು, ಅಜ್ಜ ದೇವೇಂದ್ರನ ಮೊಮ್ಮಗನೂ ಹೌದು, ಹತ್ತಿರದಲ್ಲೇ ಮಾವನೆನಿಸಿಕೊಂಡ ಕೃಷ್ಣ ಕೂಡ ಇದ್ದಾನೆ. ಆದರೂ ಅಭಿಮನ್ಯು ಸತ್ತನೇಕೆ ಎಂಬುದು ನಮ್ಮ ಸರ್ವಜ್ಞ ಕವಿಯ ಪ್ರಶ್ನೆ. ಯಾರೇ ಇದ್ದರೂ ಆ ಯಾರೋ ಯಾರೂ ಅಲ್ಲ! ಅವರೆಲ್ಲಾ ನಿಮಿತ್ತಮಾತ್ರ. ನಾಟಕದ ಪಾತ್ರಗಳಂತೇ, ಯಕ್ಷಗಾನದ ವೇಷಗಳಂತೇ ಆ ಯಾ ಕಾಲಕ್ಕೆ ಹಾಗೆ ಗೋಚರವಷ್ಟೇ. ಯಾವುದು ಸತ್ಯ ಎಂದರೆ ಈ ಜಗದ ಆಚೆ ಇರುವ ಪರವೇ ನಿಜವಾದ ಸತ್ಯ.  ಬ್ರಹ್ಮಾಂಡ ಪುರಾಣದ ಲಲಿತೋಪಾಖ್ಯಾನದಲ್ಲಿ ಬ್ರಹ್ಮಾಂಡದ ವರ್ಣನೆ ಬರುತ್ತದೆ: ದೇವಿಯನ್ನು ’ಅನೇಕ ಕೋಟಿ ಬ್ರಹ್ಮಾಂಡ ಜನನಿ’ ಮತ್ತು ಲಲಿತಾ ತ್ರಿಶತಿಯಲ್ಲಿ ’ಲಕ್ಷ ಕೋಟ್ಯಂಡ ನಾಯಿಕಾ’ಎಂದೂ ವರ್ಣಿಸಲಾಗಿದೆ. ಕೇವಲ ನಾವಿರುವ ಈ ಬ್ರಹ್ಮಾಂಡವನ್ನು ತೆಗೆದುಕೊಂಡರೆ: ಉದ್ದ ಒಂದು ಲಕ್ಷ ಜ್ಯೋತಿರ್ವರ್ಷಗಳು ಅರ್ಥಾತ್ ೬೦,೦೦೦,೦೦೦,೦೦೦ ಕೋಟಿ ಮೈಲುಗಳು. ನಮ್ಮ ಆಯುಷ್ಯ ೧೦೦ವರ್ಷವಿದ್ದು, ಗಂಟೆಗೆ ೧೦೦೦ಮೈಲುಗಳ ವೇಗದಲ್ಲಿ ದಿನ-ವಾರ-ತಿಂಗಳು-ವರ್ಷ-ಜನ್ಮವಿಡೀ ಪಯಣಿಸುತ್ತಲೇ ಹೋದರೆ, ಗುರಿಯನ್ನು ತಲ್ಪುವುದಕ್ಕೆ ನಮಗೆ ಅಂತಹ ೭೦ ಕೋಟಿ ಜನ್ಮಗಳು ಬೇಕು!!! ಈ ಬ್ರಹ್ಮಾಂಡದ ಎಡಪಾರ್ಶ್ವದಲ್ಲಿ, ಬ್ರಹ್ಮಾಂಡದ ಕೇಂದ್ರಬಿಂದುವಿನಿಂದ ೨೦,೦೦೦,೦೦೦,೦೦೦ ಕೋಟಿ ಮೈಲುಗಳ ದೂರದಲ್ಲಿ ಸೂಜಿಯ ಮೊನೆಗಿಂತಾ ಚಿಕ್ಕದಾಗಿ ಕಾಣುವುದೇ ನಮ್ಮ ಸೌರಮಂಡಲ!!ಈ ಸೌರಮಂಡಲದ ವ್ಯಾಸ ೭೩೩ ಕೋಟಿ ಮೈಲುಗಳು. ನಮ್ಮ ಬ್ರಹ್ಮಾಂಡದ ಎಂಟುಕೋಟಿ ಭಾಗಗಳಲ್ಲಿ ಇದು ಒಂದು ಭಾಗಮಾತ್ರ! ವಿಸ್ತಾರದ ಮರುಭೂಮಿಯ ಅತಿ ಚಿಕ್ಕ ಮರಳುಕಣದಂತೇ ಎನ್ನಬಹುದಾದ ಇದರಲ್ಲಿ, ನಮ್ಮ ಪೃಥ್ವಿಯೂ ನವಗ್ರಹಗಳೂ ಅಡಗಿವೆ. ನಮ್ಮ ಪೃಥ್ವಿಯ ವ್ಯಾಸ ೭೯೨೬ ಮೈಲುಗಳು, ಅಂದರೆ ಮರಳಿನ ಕಣವನ್ನು ಮತ್ತಷ್ಟು ವಿಭಜಿಸಿ ೧೦ ಲಕ್ಷ ಭಾಗಮಾಡಿದರೆ ಆಗ ಸಿಗುವ ಒಂದು ಭಾಗ ಮಾತ್ರ ನಮ್ಮ ಪೃಥ್ವಿ!!

ನಮ್ಮ ಬ್ರಹ್ಮಾಂಡದ ಅಗಲ ಅದರ ಉದ್ದದ ಒಂಭತ್ತನೇ ಒಂದು ಭಾಗ. ಲಟ್ಟಣಿಗೆಯ ಆಕಾರದಲ್ಲಿರುವ ನಮ್ಮ ಬ್ರಹ್ಮಾಂಡದ ಉಬ್ಬು ಹೊಟ್ಟೆಯಂತಿರುವ ಭಾಗದಲ್ಲಿ ಅಜಮಾಸು ೫,೦೦೦ ಕೋಟಿ ನಕ್ಷತ್ರಗಳಿವೆಯೆಂಬುದು ವಿಜ್ಞಾನಿಗಳ ಒಂದು ಅಂದಾಜು. ಬ್ರಹ್ಮಾಂಡದ ಒಳಭಾಗದಲ್ಲಿ ಇರುವ ಒಟ್ಟೂ ನಕ್ಷತ್ರಗಳ ಸಂಖ್ಯೆ ೧೦,೦೦೦ ಕೋಟಿ. ನಕ್ಷತ್ರಗಳ ನಡುವಿನ ಜಾಗದಲ್ಲಿ, ಆ ಅವಕಾಶದಲ್ಲಿ ಒಂದು ಬಗೆಯ ಅನಿಲ ತುಂಬಿಕೊಂಡಿದೆ. ಈ ಬ್ರಹ್ಮಾಂಡದ ಒಳಭಾಗದಲ್ಲಿ ನಮ್ಮ ಸೌರಮಂಡಲವನ್ನೇ ಹೋಲುವ ಸಹಸ್ರ ಲಕ್ಷ ಸೌರಮಂಡಲಗಳಿವೆ ಎಂಬುದು ಅನೇಕ ವಿಜ್ಞಾನಿಗಳ ಊಹೆ. ಆದರೆ ಅವು ನಮ್ಮ ಕಣ್ಣಿಗೆ ಕಾಣಿಸುತ್ತಿಲ್ಲ! ಬ್ರಹ್ಮಾಂಡದ ಜನನ ಸರಿಸುಮಾರು ೧೫೦೦ ಕೋಟಿವರ್ಷಗಳ ಹಿಂದೆ ಆಗಿರಬಹುದೆಂಬುದು ಒಂದು ಅಂಬೋಣ. ಜನನಕ್ಕೆ ಕಾರಣ ಪ್ರಳಯದಂತಹ ಮಹಾಸ್ಫೋಟ! [ಬಿಗ್ ಬ್ಯಾಂಗ್]ಎಂದು ನಂಬಲಾಗಿದೆ. ಸ್ಫೋಟಕ್ಕೆ ಕಾರಣಗಳು ತಿಳಿದುಬಂದಿಲ್ಲ! ಹಬ್ಬಲ್, ಐನ್ ಸ್ಟೀನ್ ಮುಂತಾದ ಕೆಲ ವಿಜ್ಞಾನಿಗಳು ಕೊಟ್ಟ ಕಾರಣಗಳು ಹೀಗಿವೆ: ಮಹಾಸ್ಫೋಟಕ್ಕೆ ಚಣಕಾಲ ಮುಂಚೆ ವಿಶ್ವವು ಅತ್ಯುಚ್ಚ ತಾಪಮಾನದಲ್ಲಿತ್ತು. ಗಾತ್ರ ಶೂನ್ಯವಾಗಿದ್ದು ಒತ್ತಡ ಅತ್ಯಧಿಕಗೊಂಡು ಸ್ಫೋಟಿಸಿತು. ಸ್ಫೋಟದ ನಂತರ ವಿಶ್ವವು ಹಿಗ್ಗಿ ತಣ್ಣಗಾಯ್ತು! ವಿಕಿರಣವೇ ಪ್ರಧಾನವಾಗಿದ್ದ ಆ ಸಮಯದಲ್ಲಿ ಕಾಲಾನಂತರದಲ್ಲಿ ಉಪ-ಪರಮಾಣು ಕಣಗಳಿಂದ ಹಗುರವಾದ ಜಲಜನಕ, ಹೀಲಿಯಂ ಮೊದಲಾದ ಮೂಲಧಾತುಗಳು ಅಸ್ತಿತ್ವಕ್ಕೆ ಬಂದವು. ವಿಶ್ವದ ವಯಸ್ಸು ಹೆಚ್ಚಿದಂತೇ ತಾಪಮಾನ ಕಮ್ಮಿಯಾಗುತ್ತಾ ಅದರಲ್ಲಿ ಅಸಂಖ್ಯ ಬ್ರಹ್ಮಾಂಡಗಳು ಹೆಪ್ಪುಗಟ್ಟಿ ಘನಾಕಾರ ಪಡೆಯಲು ಆರಂಭಿಸಿದವು.

ಈ ಸಂದಿನಲ್ಲೇ ನಿಂತು ಆಮೂಲಾಗ್ರ ಚಿಂತನ-ಮಂಥನ ನಡೆಸಿದಾಗ,

ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣ ಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ || 

ಎಂಬ ಶ್ಲೋಕದ ಅರ್ಥವ್ಯಾಪ್ತಿಗೆ ಹೊಸ ಹೊಳಹು ಲಭಿಸುತ್ತದೆ. ಒಂದು ಪೂರ್ಣವಿತ್ತು-ಅದರಿಂದ ವಿಭಜನೆಗೊಂಡ ತುಣುಕುಗಳು ಹಲವು ಅಪೂರ್ಣವಾದರೂ ಮೂಲಮಾತ್ರ ಪೂರ್ಣವೇ, ಪರಿಪೂರ್ಣವೇ! ಮಣ್ಣಿನಿಂದ ಮಡಕೆ-ಕುಡಿಕೆ-ಬೋಗುಣಿ-ಮೊಗೆ-ಹಣತೆ-ತಾಟು ಮೊದಲಾದ ಪಾತ್ರೆಗಳನ್ನೋ ಅಲಂಕಾರಿಕ ವಸ್ತುಗಳನ್ನೋ ಸಿದ್ಧಪಡಿಸಲಾಗುತ್ತದೆ, ಆದರೆ ಅವುಗಳಲ್ಲೆಲ್ಲಾ ಇರುವುದು ಮಣ್ಣೇ ಮತ್ತು ಅವು ಒಡೆದು ಮಣ್ಣೊಳಗೆ ಮತ್ತೆ ವಿಲೀನವಾದಾಗ ಇರುವುದು ಮಣ್ಣೇ ಸರಿ. ಮಿಸುನಿಗೆ ಕೆಲವು ಲೋಹಗಳನ್ನು ಸೇರಿಸಿ ಕಾಯಿಸಿ ಎರಕಹೊಯ್ದು ಪುಟಕೊಟ್ಟಾಗ ಬಂಗಾರದ ವಿವಿಧ ಆಕಾರದ ಆಭರಣಗಳು ತಯಾರಾಗುತ್ತವೆ. ಬಳಸಿ ನೋಡುತ್ತ ಹಳಸಿ ಬೇಸರಗೊಂಡ ಆಭರಣಗಳನ್ನು ಕರಗಿಸಿದಾಗ ಬಂಗಾರವನ್ನೇ ಮರಳಿ ಪಡೆಯಬಹುದಾಗಿದೆ. ನೀರಿನ ಆಗರದಲ್ಲಿ ನೀರು ಪೂರ್ಣವಾಗಿದೆ, ತುಂಬಿಕೊಂಡ ಪಾತ್ರೆಯಲ್ಲಿ ಆ ಯಾ ಪಾತ್ರೆಯ ಆಕಾರವಾಗಿ ಗೋಚರಿಸುವ ನೀರಿಗೆ ಸ್ಪಷ್ಟವಾದ ಸ್ವತಂತ್ರ ಆಕಾರವಿಲ್ಲ! ತುಂಬಿಕೊಂಡ ನೀರನ್ನು ಮತ್ತೆ ಅದೇ ಮೂಲದಲ್ಲಿ ಚೆಲ್ಲಿದರೆ ಅದು ಅಲ್ಲಿರುವ ನೀರಿನಲ್ಲಿ ಸೇರಿಹೋಗುತ್ತದೆಯೇ ಹೊರತು ತಾನು ಬೇರೇ ಎಂದು ತೋರ್ಪಡಿಸುವುದಿಲ್ಲ.

ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವರಂತೆ ಕಾಣಿರೊ
ಹರಿಯ ಕರುಣದೊಳಾದ ಭಾಗ್ಯವ
ಹರಿಸಮರ್ಪಣೆ ಮಾಡಿ ಬದುಕಿರೊ 

ಎಂಬ ದಾಸರ ಹಾಡೂ ಕೂಡ ನೆನಪಾಗುತ್ತದೆ. ದಾಸರು ಭಗವಂತ ಕೊಟ್ಟ ವಸ್ತುಗಳನ್ನೂ ಧನ-ಕನಕ-ಧಾನ್ಯಾದಿಗಳನ್ನೂ ಹರಿಸೇವೆಗೆ ಸಮರ್ಪಿಸುವ ಕುರಿತು ಹೇಳುವುದಕ್ಕೆ ಮಾತ್ರ ಇದನ್ನು ಸೀಮಿತವಾಗಿಸಿದ್ದಾರೆ, ಆದರೆ ಅದನ್ನೇ ಆಳವಾಗಿ ನಿರಾಳವಾಗಿ ಯೋಚಿಸಿದರೆ ನಮ್ಮೊಳಗಿನ ’ನಾನು’ ವನ್ನು ನಮ್ಮ ಹೊರಗೆಲ್ಲಾ ಇರುವ ’ನಾನು’ವಿನಲ್ಲಿ ಚೆಲ್ಲಿದರೆ ಆಗ ದೊರೆವುದೇ ಮೋಕ್ಷ! ಚಿಂತಿಸುವುದು ಸುಲಭ ಎಸಗುವುದು ಕಷ್ಟವಾದ ಈ ಕಾರ್ಯವನ್ನು ನಾವು ಮಾಡಿದ್ದೇ ಆದರೆ ಇಂಥಾ ಬ್ರಹ್ಮಾಂಡದ ನಾಯಕನಲ್ಲಿ ಲೀನವಾಗಿ ಆನಂದಮಯಕೋಶವನ್ನು ಸೇರಿಬಿಡುತ್ತಿದ್ದೆವು-ಜರಾಮರಣ ಚಕ್ರದಿಂದ ಬಿಡುಗಡೆ ಪಡೆಯುತ್ತಿದ್ದೆವು! ಇಂತಹ ದೈವೀ ಚಿಂತನೆಯಿರುವೆಡೆಗೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ನಿಧಾನವಾಗಿ ಹಿಂಜರಿಯುತ್ತವೆ. ಆ ಹಿಂಜರಿಕೆಗೆ ಕಾರಣವೇನೆಂದರೆ ಇಡೀ ಪ್ರಪಂಚದ ತುಂಬ ನಮಗೆ ವೈರಿಗಳೇ ಇಲ್ಲದಂತೇ, ಇಡೀ ಈ ಬ್ರಹ್ಮಾಂಡವೇ ನಮ್ಮ ಮನೆಯಂತೇ ಭಾವನೆ ಒಡಮೂಡುವುದು. ಹಾಗೊಮ್ಮೆ ಅಂಥಾ ಭಾವನೆ ಬಂದಿದ್ದೇ ಆದರೆ ಐಹಿಕ ಮನೋವೈಕಲ್ಯಗಳು ದೂರವಾಗುತ್ತವೆ,ಜಗಳ-ದೊಂಬಿ-ಕೋಲಾಹಲ-ಕೊಲೆ-ಸುಲಿಗೆ-ದರೋಡೆ-ಹಿಂಸೆ-ದಗಾ-ಮೋಸ ಇತ್ಯಾದಿಯಾಗಿ ಎಲ್ಲಾ ಅನೀತಿಗಳಿಗೂ ಆಸ್ಪದ ಕಮ್ಮಿಯಾಗುತ್ತದೆ. ನಾವು ನಾವಾಗಿ, ನಮ್ಮ ನಿಜದ ನೆಲೆಯನ್ನು ಅರಿತು, ಹಿನ್ನೆಲೆಯನ್ನು ಅರಿತು, ಪ್ರಕೃತಿ ಸಹಜ ಸನಾತನ ಮಾನವ ಜೀವನದ ಲಕ್ಷಣಗಳನ್ನು ರೂಢಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ನಮ್ಮನ್ನು ಕರೆದೊಯ್ಯುವ ದಾರಿ ದೀವಿಗೆಗಳಾದ ರಾಮಾಯಣ-ಮಹಾಭಾರತಗಳ ಮೂಲದಿಂದ ಹರಿದುಬಂದ ಜ್ಞಾನಗಂಗೆ ಹಲವು ಕವಿಗಳಿಗೆ ಸ್ಫೂರ್ತಿಯಾಯ್ತು, ಅಂತಹ ಅನರ್ಘ್ಯರತ್ನಗಳನ್ನು ತಮ್ಮದಾಗಿಸಿಕೊಂಡ ಮಹಾನುಭಾವರುಗಳು ಋಷಿಸದೃಶರಾದರು, ಋಷಿಸದೃಶರೇ ಕವಿಗಳಾಗಿ ಅನೇಕ ಕಾವ್ಯ-ಸಾಹಿತ್ಯಗಳನ್ನು ಬರೆದರು. ಅಂಥಾ ಸಂಗತ ಜ್ಞಾನವನ್ನು ಪಡೆದ ಅವರಲ್ಲಿ ಎಡಪಂಥೀಯರು ಜನಿಸಲಿಲ್ಲ ಯಾಕೆಂದರೆ ಹಿಮಾಲಯವನ್ನು ಕಂಡ ಮಧುಗಿರಿಯ ಬೆಟ್ಟಕ್ಕೋ ಹೊಂಗಲದ ಬಯಲಿಗೋ ತಮ್ಮ ಎತ್ತರದ ಮತ್ತು ಸಾಮರ್ಥ್ಯಗಳ ಪರಿಮಿತಿ ಅರಿವಿಗೆ ಬರುತ್ತದಲ್ಲವೇ?  ಪ್ರಾಚೀನ ಕವಿಗಳಲ್ಲಿ ಒಬ್ಬೊಬ್ಬರು ಒಂದೊಂದು ವಿಷಯಕವಾಗಿ ತಮ್ಮ ಮೇರುಸದೃಶ ಕೃತಿಗಳನ್ನು ಲೋಕಕ್ಕೆ, ಈ ಅಖಂಡ ಭಾರತಕ್ಕೆ ಕೊಡುಗೆಯಾಗಿ ನೀಡಿದರು; ಕೃತಿಗಳ ರಚನೆಯ ಹಿಂದೆ ಸನಾತನ ಸಂಸ್ಕೃತಿಯನ್ನು ಮುನ್ನಡೆಸುವುದರ ಜೊತೆಗೆ ಸಾಮಾಜಿಕ ಲೋಕಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ ಮಹತ್ವ ಪಡೆದಿತ್ತೇ ವಿನಃ ತಮ್ಮ ತೀಟೆಗಾಗಿ ಅವರೆಂದೂ ಕೃತಿಗಳನ್ನು ರಚಿಸಲಿಲ್ಲ. ಹೀಗಿದ್ದ ನಾಡಲ್ಲಿ, ದೇಶದಲ್ಲಿ ಶಾಂತತೆಗೆ ಭಂಗವಿರಲಿಲ್ಲ!

ಬೆಟ್ಟದ ಬುಡದಲೊಂದು ಮನೆಯಮಾಡಿ ಮೃಗ-ಪಕ್ಷಿಗಳಿಗಂಜಿದೊಡೆಂತಯ್ಯಾ
ಸಮುದ್ರದಾ ತಡಿಯಲೊಂದು ಮನೆಯಮಾಡಿ ನೆರೆ-ತೊರೆಗಳಿಗಂಜಿದೊಡೆಂತಯ್ಯಾ 
ಸಂತೆಯೊಳಗೊಂದು ಮನೆಯಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯಾ

ಎಂಬ ಶರಣರ ವಚನದಂತೇ ಹೊರಜಗದಲ್ಲಿ ಗೌಜು-ಗಲಾಟೆ ಏನೇ ಇದ್ದರೂ ತಮ್ಮೊಳಗೇ ತಾವು ಶಾಂತವಾಗಿರುವುದಕ್ಕೆ, ಚಿತ್ತವನ್ನು ಪ್ರಶಾಂತ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಆರ್ಷೇಯ ಸಂಸ್ಕೃತಿ ಕಾರಣವಾಗಿತ್ತು. ಅದೇ ರೂಢಮೂಲದಿಂದ ಇಂದಿಗೂ ಭಾರತ ವಿಶ್ವಕ್ಕೇ ಮಾದರಿಯಾಗಿದೆ! ಅಮೇರಿಕದಂತಹ ದೊಡ್ಡಣ್ಣ ಎನಿಸಿಕೊಂಡ ಪರಮಾಣು ನಿಪುಣನಿದ್ದರೂ, ರಷ್ಯಾದಂತಹ ಮುಂದುವರಿದ ರಾಷ್ಟ್ರವಿದ್ದರೂ, ಜಪಾನ್ ನಂತರ ಶ್ರೇಷ್ಠ ತಂತ್ರಜ್ಞಾನ ನಿಪುಣ ದೇಶವಿದ್ದರೂ ಭಾರತ ಎಲ್ಲವುಗಳ ನಡುವೆ ವಿಶಿಷ್ಟವಾಗಿ ಕಂಗೊಳಿಸುತ್ತದೆ ಯಾಕೆಂದರೆ ಇಲ್ಲಿರುವ ವ್ಯಕ್ತಿಗಳೊಬ್ಬೊಬ್ಬರಲ್ಲೂ ಸುಪ್ತವಾಗಿ ರಾಮಾನುಜನ್, ವಿಶ್ವೇಶ್ವರಯ್ಯ, ಕುವೆಂಪು, ಡೀವಿಜಿ, ಮುದ್ದಣ, ಪಂಪ, ಕುಮಾರವ್ಯಾಸ ಮೊದಲಾದವರು ಅವಿತಿದ್ದಾರೆ!! ಜಗತ್ತಿನಲ್ಲಿ ತಾನೇ ಮುಂದು ಎಂದು ಬೆನ್ನು ತಟ್ಟಿಕೊಳ್ಳುವ ಪರದೇಶ ಮೆರೆಯತೊಡಗಿದಾಗ ಅಗೋಚರಶಕ್ತಿಯೊಂದು ಭಾರತಕ್ಕೆ ನವಚೈತನ್ಯವನ್ನು ನೀಡುತ್ತದೆ! ಆ ಮೂಲಕ ಹೊಸದೊಂದು ಆವಿಷ್ಕಾರ ಭಾರತದಲ್ಲಿ ಹುಟ್ಟಿಕೊಂಡು ಭಾರತ ಮುನ್ನಡೆಯುತ್ತದೆ; ವಿಶಿಷ್ಟವೆಂದು ಪರಿಗಣಿಸಲ್ಪಡುತ್ತದೆ. ಜಗತ್ತಿನ ಸರ್ವರ ಕ್ಷೇಮವನ್ನು ಬಯಸಿ, ಹಿತವನ್ನು ಬಯಸಿ ಯುಗಯುಗಗಳಿಂದ ಇಲ್ಲಿನ ಋಷಿಗಳು ಘೋರ, ಅಖಂಡ ತಪಸ್ಸನ್ನಾಚರಿಸಿ, ತಮ್ಮ ತಪಸ್ಸಿನ ಫಲವನ್ನು ಈ ನಮ್ಮ ಭಾರತಕ್ಕೆ ಕೊಟ್ಟು ತೆರಳಿದ್ದಾರೆ; ಕೆಲವರು ನಮಗೆ ಕಾಣಿಸದಂತೇ ಹಿಮಾಲಯದೆಡೆಯಲ್ಲಿ ಇನ್ನೂ ಜೀವಂತವಾಗಿದ್ದಾರೆ!

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ |
ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ ||

ಜಗತ್ತಿನಲ್ಲಿಯೇ ಅತ್ಯುಚ್ಚವಾದ ಸಂಸ್ಕೃತಿಯನ್ನು ತಮ್ಮ ದೂರದರ್ಶಿತ್ವದಿಂದ, ಜ್ಞಾನಚಕ್ಷುವಿನಿಂದ ಅನುಗ್ರಹಿಸುವ ತಪಸ್ವಿಗಳು ನೆಲೆಸಲು ಹಿಮಾಲಯ ನಮ್ಮ ಪಾಲಿಗೆ ಸಹಕಾರಿಯಾಯ್ತು. ಅಂತಹ ಹಿಮಾಲಯವನ್ನು ಉತ್ತರಕ್ಕೆ ಹೊಂದಿ, ಹಿಂದೂ ಮಹಾಸಾಗರವೆಂಬ ಸಮುದ್ರವನ್ನು ದಕ್ಷಿಣಕ್ಕೆ ಹೊಂದಿರುವ ಈ ನಮ್ಮ ಭಾರತಮಾತೆ ಆಗಾಗ ಆಗಾಗ ಅತಿಶಯ ಶ್ರೇಷ್ಠ ಸಾಧಕರನ್ನು ಹಲವು ರಂಗಗಳಲ್ಲಿ ಹಡೆಯುತ್ತಲೇ ಇರುತ್ತಾಳೆ. ಅಂಥಾ ತಾಯಿ ಭಾರತಿಗೆ ನಮಸ್ಕಾರಗಳು, ಸನಾತನ ಋಷಿಪರಂಪರೆಗೆ ನಮಸ್ಕಾರಗಳು, ಮತ್ತು ಸುದೀರ್ಘ ಬರಹವನ್ನು ಮನವೆಂಬ ನಾಸಿಕದಿಂದ ಆಘ್ರಾಣಿಸಿದ ನನ್ನ ಭಾರತದ ಸಹೋದರ ಸಹೋದರಿಯರಾದ ನಿಮಗೂ ನಮಸ್ಕಾರಗಳು.    

[ಈ ಅಧ್ಯಾಯವನ್ನು ಮುಗಿಸುವ ಮುನ್ನ ಒಂದು ವಿಜ್ಞಾಪನೆ: ಭಗವದ್ಗೀತೆಯನ್ನು ಕಂಠಪಾಠಮಾಡಿಕೊಂಡು, ಕೇಳಿದ ಭಾಗವನ್ನು ಹೇಳಿದವರಿಗೆ, ಕೆಲವುವರ್ಷಗಳಿಂದ ನಿರಂತರವಾಗಿ, ದಕ್ಷಿಣಾಮ್ನಾಯ ಶೃಂಗೇರೀ ಶ್ರೀಶಾರದಾಪೀಠದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ನಗದು ಬಹುಮಾನ ೨೫,೦೦೦ ರೂಪಾಯಿಗಳನ್ನು ಕೊಟ್ಟು ಆಶೀರ್ವದಿಸುತ್ತಾರೆ. ಕುಸಿದ ಸಾಮಾಜಿಕ ಮೌಲ್ಯವನ್ನು ಮರಳಿ ಕಟ್ಟುವ ಪ್ರಾತಃಸ್ಮರಣೀಯರ ಈ ಪ್ರಯತ್ನ ಅಭಿನಂದನೀಯ. ಕೇವಲ ಹಣಕ್ಕಾಗಿಯಲ್ಲದೇ, ಓದುಗ ಸಮೃದಯರು ಈ ವಿಷಯದಲ್ಲಿ ಆಸಕ್ತಿ ತಳೆದು ಗೀತೆಯನ್ನು ಓದಿ, ಮನನಮಾಡಿ, ಅದರ ಸನಾತನ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ಈ ಬರಹಗಾರನ ಅಪೇಕ್ಷೆ ಕೂಡ ಆಗಿದೆ.]

ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭುರ್ವ್ಯಾಪ್ಯ ಸರ್ವತ್ರ ಸರ್ವೇಂದ್ರಿಯಾಣಾಂ |
ಸದಾ ಮೇ ಸಮತ್ವಂ ನ ಮುಕ್ತಿರ್ನ ಬಂಧಃ
ಚಿದಾನಂದ-ರೂಪಃ ಶಿವೋಹಂ ಶಿವೋಹಂ ||