ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, December 9, 2012

ನಿನ್ನನಿನಿಸು ಹರುಷಗೊಳಿಸೆ ಬರೆದೆ ಬರಹವ; ಇನ್ನದೆಂತು ನೋಡಿನಗುತಲೊರೆವೆ ಸರಸವ ?

ಚಿತ್ರಋಣ :ಅಂತರ್ಜಾಲ
ನಿನ್ನನಿನಿಸು ಹರುಷಗೊಳಿಸೆ ಬರೆದೆ ಬರಹವ; ಇನ್ನದೆಂತು ನೋಡಿನಗುತಲೊರೆವೆ ಸರಸವ ?

ಮಹಾಸ್ವಾನಿಗಳು ಮೈತುಂಬಾ ಕೆಂಪುಶಾಲನ್ನು ಹೊದ್ದಿದ್ದರು. ತಲೆಗೆ ಕೆಂಪು ರೇಷ್ಮೆಯ ಮುಂಡಾಸನ್ನು ಸುತ್ತಿದ್ದರು. ಹಣೆಯಲ್ಲಿ ಧರಿಸಿದ್ದ ವಿಭೂತಿಯ ಅವಶೇಷವೂ ಇತ್ತು. ನಿಧಾನವಾಗಿ ಭಾವುಕರಾಗಿ,  ಇಳಿಸಂಜೆ ಮೋಡಕವಿದ ವಾತಾವರಣದಲ್ಲಿ ಗಾಂಧೀಬಜಾರಿನಲ್ಲಿ ಹೆಜ್ಜೆಹಾಕುತ್ತಿದ್ದಾಗ ದೂರದಿಂದಲೇ ಇದನ್ನು ಕಂಡು ಜಂಗಮರೊಬ್ಬರು ಓಡೋಡಿ ಬಂದರು. ನಮಸ್ಕರಿಸುತ್ತಾ "ಶರಣು, ತಮ್ಮದು ಯಾವ ಮಠ?" ನಮ್ಮ ಮಹಾಸ್ವಾಮಿಗಳು ಉತ್ತರಿಸದರು "ನಮ್ಮದು ತಿಮ್ಮಲಿಂಗದೇವರ ಮಠ." ಆಗ ಜಂಗಮರು "ಏನಾದರೂ ತತ್ವ ಅಪ್ಪಣೆಯಾಗಬೇಕು" ಎಂದರು. ಸಂತೋಷಗೊಂಡ ಮಹಾಸ್ವಾಮಿಗಳು ಜಂಗಮರನ್ನು ಬಸವನಗುಡಿಯ ಕ್ಲಬ್ ಎದುರಿಗಿರುವ ಸಣ್ಣ ಉದ್ಯಾನಕ್ಕೆ ಕರೆದೊಯ್ದರು. ಸಂಜೆಯವೇಳೆ ಕ್ಲಬ್ಬಿಗೆ ಬರಬಹುದಾದ ತಮ್ಮ ಪರಿಚಿತರಿಗೆ ಕಾಣದಂತೇ ಕುಳಿತು ತತ್ವಪದಳನ್ನು ಆಶುವಾಗಿ ಕಟ್ಟಿಹೇಳಿದರು:

ನವಕೋಟಿ ಹಣವೇನು ಶಿವಭಕ್ತಿಯಿಲ್ಲದೇ-ಜಂಗಮಯ್ಯ |
ಶಿವಭಕ್ತಿಯಿರುವಾಗ ನವಕೋಟಿ ಹಣವೇಕೆ? ಜಂಗಮಯ್ಯ ||
ಭದ್ರಾಕ್ಷಿಯಿಲ್ಲದೇ ರುದ್ರಾಕ್ಷಿಯಿಂದೇನು ಜಂಗಮಯ್ಯ |
ಭದ್ರಾಕ್ಷಿಯಿದ್ದರೆ ರುದ್ರಾಕ್ಷಿಯೇತಕೋ ಜಂಗಮಯ್ಯ ||
.
.
.
.
.
ಏನೇನೋ ಗತ್ತುಮಾಡಿದ ನಮ್ಮಶಿವ 
ಏನೋ ಗಮ್ಮತುಮಾಡಿದ |
ಪಟ್ಟೆಬೂದಿ ಹಚ್ಚಿಕೊಂಡು | ಬೆಟ್ಟದೋಳ್ನ ಕಟ್ಟಿಕೊಂಡು
ಹುಚ್ಚು ಹುಚ್ಚು ಲೀಲೆಮಾಡಿದ ||
ಬೆತ್ತಲೇಲಿ ನೃತ್ಯಮಾಡಿದ-ನಮ್ಮಶಿವ
ಕತ್ತಲೇಲಿ ಸೃಷ್ಟಿಮಾಡಿದ |
ಬೆತ್ತಲೇಲಿ ನೃತ್ಯಮಾಡಿ | ಕತ್ತಲೇಲಿ ಸೃಷ್ಟಿಮಾಡಿ
ಸೊಟ್ಟಾಪಟ್ಟೆ ಲೋಕಮಾಡಿದ ||

ತಂಬೂರಿ-ಚಿಟಿಕೆಗಳಿಲ್ಲದ ಜಾಗವನ್ನು ಕೈತಟ್ಟಿ ತಾಳಹಾಕಿ ಮೈಕುಲುಕಿಸಿ ರಾಗವಾಗಿ ಹಾಡಿದರು ಮಹಾಸ್ವಾಮಿಗಳು. ತಲೆಯಲ್ಲಾಡಿಸುತ್ತಾ ತತ್ವಪದಗಳನ್ನು ಕೇಳುತ್ತಿದ್ದ ಜಂಗಮರು "ಟೀಪು ಅಪ್ಪಣೆಯಾಗಬೇಕು ಗುರುವೇ" ಎಂದಾಗ ಹಾಡಿದ ತತ್ವಪದಗಳಿಗೆ ವ್ಯಾಖ್ಯಾನವನ್ನೂ ಮಾಡಿದರು. ಈ ಇಡಿಯ ಸಂದರ್ಭವನ್ನು ಆಸ್ವಾದಿಸಬಯಸುವವರು ಡಿವಿಜಿಯವರ ’ಜ್ಞಾಪಕಚಿತ್ರಶಾಲೆ’ಯ ಏಳನೇಭಾಗವನ್ನು ಓದಬೇಕು. ಸರಳಮುಗ್ಧ ಸ್ವಭಾವವನ್ನು ಗೌರವಿಸಿ ಅದರಂತೇ ನಡೆದು ಸಮಾಧಾನ ನೀಡಬಲ್ಲ ಹೃದಯವಂತಿಕೆ ಮತ್ತು ಸರಳಪದಗಳಲ್ಲಿಯ ಹೆಣೆದ ತತ್ವಪದಗಳಲ್ಲಿಯೂ ಗಹನವೇದಾಂತದ ಸಂದೇಶಗಳನ್ನು ಹುದುಗಿಸಿ ಕಟ್ಟಿಕೊಡಬಲ್ಲ ಬಲ್ಮೆ ಡಿವಿಜಿಯವರಿಗೆ ಸಹಜವಾಗಿ ರಕ್ತಗತವಾಗಿತ್ತು. ಅಂದಹಾಗೇ ಗಾಂಧೀಬಜಾರಿನಲ್ಲಿ ಜಂಗಮರಿಗೆ ಸಿಕ್ಕ ಆ ಮಹಾಸ್ವಾಮಿಗಳು ಡಿವಿಜಿ ಎಂದರೆ ಆಶ್ಚರ್ಯಪಡಬೇಡಿ ! ಹರಿಹರ ಭೇದವನ್ನು ಅಳಿಸಲು ತಮ್ಮದು ತಿಮ್ಮ[ಹರಿ]ಲಿಂಗ[ಹರ]ದೇವರ ಮಠ ಎಂದಿದ್ದನ್ನು ಗಮನಿಸಬೇಕು. ಚಿಕ್ಕಂದಿನಿಂದಲೂ ಸಂನ್ಯಾಸ ಮತ್ತು ಪರಿವ್ರಾಜಕತ್ವದೆಡೆಗೆ ಅವರ ಮನಸ್ಸು ವಾಲುತ್ತಿತ್ತು. ಸದಾ ಅವಧೂತಪ್ರಜ್ಞೆಯನ್ನು ಹೊಂದಿದ್ದ ಡೀವಿಜಿ ಅಂತಹ ದಿರಿಸುಗಳಲ್ಲಿ ಅವಧೂತರಂತೆಯೋ ಜಂಗಮರಂತೆಯೋ ಕಾಣುತ್ತಿದ್ದರು ! ಎಪ್ಪತ್ತು ದಾಟಿದ ನಂತರವೂ ಅವರಿಗೆ ಭೈರಾಗಿ-ಜಂಗಮ ಜೀವನದ ಆಕರ್ಷಣೆ ಹೋಗಿರಲಿಲ್ಲ. ಅಂತಹ ಒಂದು ಪ್ರಸಂಗವೇ ಈ ಮೇಲೆ ಹೇಳಿದ್ದು.     

ಮಹಾತ್ಮರಿಗೆ ಜೀವನದಲ್ಲಿ ಕಷ್ಟಗಳಿರುವುದಿಲ್ಲವೆಂದೇನೂ ಅಲ್ಲ; ಎದುರಾದ ಕಷ್ಟಗಳಿಗೆ ತಮ್ಮಲ್ಲೇ ಪರಿಹಾರ ಕಂಡುಕೊಳ್ಳುವುದು ಅವರ ಸಾಮರ್ಥ್ಯ. ಕಷ್ಟ ಮನುಷ್ಯ ಸಹಜ ಎಂಬ ಭಾವದಿಂದ ತನಗೆ ಬಂದ ಕಷ್ಟವನ್ನು ಮೂರನೆಯವರಾಗಿ ಎದುರುನಿಂತು ಉತ್ತರಹೇಳಿಕೊಂಡು ಸಮಾಧಾನ ಪಡುವುದು ಅವರ ಐಚ್ಛಿಕ ನಡೆಗಿರುವ ಹಿರಿಮೆ. ೧೮-೧೯-೨೦ನೇ ಶತಮಾನದ ಕನ್ನಡದ ಬಹುತೇಕ ಕವಿಗಳು ಜೀವನದಲ್ಲಿ ಬಡವರಾಗೇ ಇದ್ದರು. ಬಡತನ ಅವರಿಗೆ ಸಹಿಸಲಸಾಧ್ಯ ವೇದನೆಯಾಗಿ ಕಾಡಲಿಲ್ಲ; ಬಡತನ ತಮಗೆ ದೇವರುಕೊಟ್ಟ ಭಾಗ್ಯ ಎಂದುಕೊಂಡೇ ಅದನ್ನವರು ಅನುಭವಿಸಿದರು; ಮುರುಕು ಗುಡಿಸಲೋ ಹರುಕು ಚಾಪೆಯೋ ಅದರಲ್ಲೇ ತೃಪ್ತಿಯಿಂದ ಕಾವ್ಯ-ಸಾಹಿತ್ಯದ ಕೃಷಿ ನಡೆಸಿದರು. ಬಡತನದಲ್ಲಿ ಕಣ್ಣೆದುರು ಸಾಯುವ ಮಕ್ಕಳ ಅನಿವಾರ್ಯ ಅಗಲಿಕೆಯ ನೋವನ್ನು ಸಹಿಸಿಯೂ ಬದುಕಿದವರು ವರಕವಿ ಬೇಂದ್ರೆ. ದೇಶಪರ್ಯಟನೆಯ ಕನಸನ್ನು ಕಾಣುತ್ತಾ ಆರ್ಥಿಕ ಹೀನ ಸ್ಥಿತಿಯಲ್ಲಿ ಎಲ್ಲಿಗೂ ಹೋಗಲಾರದಾದಾಗ ಇರುವಲ್ಲೇ ಕಾವ್ಯದಲ್ಲಿ, ಕೃತಿಗಳಲ್ಲಿ ವಿಹರಿಸಿದವರು ಸೇಡಿಯಾಪು ಕೃಷ್ಣಭಟ್ಟರು. ಬಡತನ ಅವರನ್ನೆಲ್ಲಾ ಆಳಲಿಲ್ಲ; ಆದರೆ ಅವರಿಗೂ ಬಡತನವಿತ್ತು ಎಂಬುದನ್ನು ಅಂಥವರ ಕೃತಿಗಳಿಂದ ಅಂದಾಜಿಸಿಕೊಳ್ಳಬಹುದಾಗಿದೆ. ಬದುಕಿನ ಬಂಡಿಗಳು ಸಾಗುವ ಮಾರ್ಗಗಳು ವಿಭಿನ್ನ; ಕೆಲವರಿಗೆ ಅವು ಸುಸೂತ್ರ, ಇನ್ನು ಕೆಲವರಿಗೆ ಅವು ಅತಂತ್ರ. ಸಾಗುವ ಹಾದಿ ಸುಗಮವೋ ದುರ್ಗಮವೋ ಅದನ್ನು ಕಾರಣವಾಗಿಸಿಕೊಳ್ಳದೇ ಪಾಲಿಗೆಬಂದದ್ದೇ ಪಂಚಾಮೃತವೆಂದು ಒಪ್ಪಿ, ನ್ಯಾಯ-ನೀತಿ-ಧರ್ಮಮಾರ್ಗದಿಂದ ಬದುಕಿ, ಬದುಕನ್ನು ಆದರ್ಶವಾಗಿ ತೋರಿಸಿದವರು ಆ ಕವಿಗಳು. ಕೆಲವರಿಗಂತೂ ಮನೆಯಲ್ಲಿ ನಿತ್ಯಪಡಿಗೂ ಕಷ್ಟವಿತ್ತು. ಆದರೂ ಅವರ ಮನೆಗಳಲ್ಲಿ ನಂದಾದೀಪ ನಂದುತ್ತಿರಲಿಲ್ಲ; ಬರುವ ಅತಿಥಿಗಳಿಗೆ ಅಶನ-ವಶನಕ್ಕೆ ಕೊರತೆಯಾಗುತ್ತಿರಲಿಲ್ಲ !

ತಲೆಪಾಗಿನೊಳಕೊಳಕ ಪಂಚೆನಿರಿಯೊಳಹರುಕ
ತಿಳಿಸುವೆಯೆ ರಜಕಗಲ್ಲದೆ ಲೋಗರಿಂಗೆ ?
ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ-
ನಿಳೆಗೆ ಹರಡುವುದೇಕೊ-ಮಂಕುತಿಮ್ಮ

ಸವರಿದ ಕೈಗಿದ್ದ ಕೊಳೆಯಿಂದ, ಹರಿದ ಬೆವರಿನಿಂದ ತಲೆಗೆ ಸುತ್ತಿದ ಮುಂಡಾಸು ಹೊಲಸಾಗಿರಬಹುದು, ಉಟ್ಟಪಂಚೆಯ ನಿರಿಗೆಯಲ್ಲಿ ಹರುಕುಕೂಡ ಇರಬಹುದು ಅದನ್ನು ತೊಳೆದುಕೊಡುವ ರಜಕನೊಬ್ಬನಿಗಲ್ಲದೇ ಲೋಕಕ್ಕೆಲ್ಲಾ ಹೇಳುತ್ತಾರ್ಯೇ? "ಹೋಯ್ ನನ್ನ ಪಂಚೆ ಹರಿದುಹೋಗಿದೆ", "ಹೋಯ್ ನನ್ನ ಬಟ್ಟೆ ನಾರುತ್ತಿದೆ" ಎಂದು ಯಾರಾದರೂ ಪ್ರಚಾರಮಾಡುವುದು ವಿಹಿತವೇ? ಅಂತೆಯೇ ನಮ್ಮೊಳಗಿನ ಅಳಲು-ದುಗುಡ-ದುಃಖ-ದುಮ್ಮಾನಗಳನ್ನು ನಮ್ಮೊಳಗೇ ಬಗೆಹರಿಸಿಕೊಳ್ಳಬೇಕು. ನಮ್ಮೊಳಗೇ ಒಬ್ಬನಿದ್ದಾನಲ್ಲ, ಅವನೊಡನೆ ಮಾತ್ರ ಹಂಚಿಕೊಳ್ಳಬೇಕು ಎಂಬುದು ಈ ಕಗ್ಗದ ತಾತ್ಪರ್ಯ.

ತಿಮ್ಮಗುರುವಿಗೆ ಬದುಕು ಪೂರ್ತಿ ನೂರಾರು ಸಮಸ್ಯೆಗಳಿದ್ದರೂ ಅವುಗಳನ್ನವರು ಕಂಡ, ನಿಭಾಯಿಸಿದ ರೀತಿಕಂಡು ಬೆರಗಾಗುತ್ತೇವೆ. ಸರಕಾರಕ್ಕೆ ಒದಗಿಸಿದ ಸೇವೆಗೆ ಸಂದ ಅದೆಷ್ಟೋ ಧನಾದೇಶ ಪತ್ರ[ಚೆಕ್ಕು]ಗಳನ್ನು ಅವರು ಹಣವಾಗಿ ಪರಿವರ್ತಿಸಲೇ ಇಲ್ಲ. ಸಾರ್ವಜನಿಕರು ಕಟ್ಟಿದ ತೆರಿಗೆಯ ನಯಾಪೈಸೆಯೂ ಸಾರ್ವಜನಿಕ ಕೆಲಸಗಳಿಗೋ ಸರಕಾರದ ಕೆಲಸಗಳಿಗೋ ವಿನಿಯೋಗವಾಗಬೇಕೇ ಹೊರತು ಇನ್ಯಾವುದೋ ಕಾರಣಗಳಿಗೆ ಯಾರ್ಯಾರದೋ ಕೈಸೇರಬಾರದು ಎಂಬ ಅಭಿಲಾಶೆ ಅವರದಾಗಿತ್ತು. ಬಯಸಿದರೆ ಬೇಕಷ್ಟು ಹಣಗಳಿಸಿ ಸಿರಿವಂತರಾಗಿ ಬದುಕುವ ಅವಕಾಶಗಳೂ ಅರ್ಹತೆಯೂ ಡಿವಿಜಿಯವರಿಗಿದ್ದವು. ತನ್ನ ಸಾಮಾನ್ಯ ಜೀವನಕ್ಕೆ ಎಷ್ಟು ಕಮ್ಮಿ ಧನ ಬೇಕೋ ಅಷ್ಟನ್ನು ಮಾತ್ರ ನೇರವಾಗಿ ತಾನು ನಡೆಸಿದ ವೃತ್ತಿಯಿಂದ ಗಳಿಸಿದರೇ ಹೊರತು ಬಹುಮಾನವಾಗಿಯೋ, ಸನ್ಮಾನವಾಗಿಯೋ ಬಂದ ಹಣವನ್ನೂ ಸಲಹೆಗಳಿಗೆ ಗೌರವವಾಗಿ ಸಲ್ಲಿಸಲ್ಪಟ್ಟ ಹಣವನ್ನೋ ಅವರು ಸ್ವೀಕರಿಸಲೇ ಇಲ್ಲ. ಸರ್.ಎಂ. ವಿಶ್ವೇಶ್ವರಯ್ಯನವರು ಡಿವಿಜಿಯವರ ಸಮಕಾಲೀನರಾಗಿದ್ದು ಸರಕಾರದ ಹಲವು ಕಾರ್ಯಕ್ರಮಗಳಿಗೆ, ಕೆಲಸಗಳಿಗೆ ರಾಜನೀತಿಯ ಸಲಹೆಗಳನ್ನು ಗುಂಡಪ್ಪನವರಿಂದ ಪಡೆಯುತ್ತಿದ್ದರು. ಅದಕ್ಕಾಗಿ ಮೈಸೂರು ಸರಕಾರ ಅವರಿಗೆ ಒತ್ತಾಯಪೂರ್ವಕವಾಗಿ ಧನಾದೇಶಗಳನ್ನು ನೀಡುತ್ತಿತ್ತು; ಸ್ವೀಕರಿಸಲು ಒಪ್ಪದೇ ಇದ್ದರೆ ಮುಂದೆ ಅಂತಹ ಸಲಹೆಗಳನ್ನು ಕೇಳುವುದಿಲ್ಲ ಎಂದೂ ಸರಕಾರದ ಅಧಿಕಾರಿಗಳು ತಿಳಿಸಿದಾಗ, ಸಾರ್ವಜನಿಕರ ಹಿತಕ್ಕಾಗಿ ತಾನು ಸಲಹೆಗಳನ್ನು ಕೊಡುವುದು ಒಳಿತು-ಅದರಿಂದ ವಿಮುಖನಾಗಬಾರದು ಎಂಬ ದೃಷ್ಟಿಯಿಂದ ಹೊರನೋಟಕ್ಕೆ ಧನಾದೇಶಗಳನ್ನು ಪಡೆಯಲು ಒಪ್ಪಿದರು; ಪಡೆದ ಎಲ್ಲಾ ಧನಾದೇಶಗಳನ್ನೂ  ಕಬ್ಬಿಣದ ಪೆಟ್ಟಿಗೆಯಲ್ಲಿ[ಟ್ರಂಕ್] ಹಾಗೇ ಇಟ್ಟುಬಿಟ್ಟರು! ಇದು ಸರಕಾರದ ಗಮನಕ್ಕೂ ಬರಲಿಲ್ಲ!

ಹೀಗೆ ಬಾಳಿದ ತಿಮ್ಮಗುರುವಿನ ಸತಿಸುತರ ಬಗ್ಗೆ ನಾವು ಬಹಳಷ್ಟನ್ನು ಕೇಳಿಲ್ಲ. ಕಾರಣವಿಷ್ಟೇ: ತಿಮ್ಮಗುರು ತಮ್ಮ ವೈಯ್ಯಕ್ತಿಕವನ್ನು ಬಹಳವಾಗಿ ಯಾರಲ್ಲೂ ಪ್ರಸ್ತಾವಿಸುತ್ತಿರಲಿಲ್ಲ. ಡಿವಿಜಿಯವರು ನಿತ್ಯ ಪುರಂದರದಾಸರೆಂಬುದನ್ನು ಎಲ್ಲರೂ ಬಲ್ಲರು. ಅದೇ ಬದುಕಿಗೆ ಗುಂಡಪ್ಪನವರು ತಮ್ಮನ್ನು ಒಗ್ಗಿಸಿಕೊಂಡುಬಿಟ್ಟಿದ್ದರು. ಅವರ ಮಡದಿ ಭಾಗೀರಥಮ್ಮನವರು ಆರ್ಥಿಕವಾಗಿ ಅನುಕೂಲವುಳ್ಳ ಕುಟುಂಬದಿಂದಲೇ ಬಂದವರಾದರೂ ಪತಿಯೊಂದಿಗೆ ಬದುಕುವಾಗ ಪತಿಯ ಇಚ್ಛೆಯನ್ನೇ ಅನುಸರಿಸಿದವರು. ಎಂದೂ ಗಂಡ ಗುಂಡನ ಆಶಯಗಳಿಗೆ ವಿರುದ್ಧವಾಗಿ ನಡೆದವರಲ್ಲ. ’ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದ ಬಿಕ್ಕಟ್ಟಿನ ಕಾಲದಲ್ಲಿ ಗುಂಡಪ್ಪನವರ ಹತ್ತಿರದ ನೆಂಟರೊಬ್ಬರ ಮನೆಯಲ್ಲಿ ಕಾರ್ಯಕ್ರಮವೊಂದು ನಡೆಯುವುದಿತ್ತು. ಹೆಂಡತಿಮಕ್ಕಳು ಅಲ್ಲಿಗೆ ತೆರಳಬೇಕೆಂದು ಹೇಳಿ ತಾವು ಯಾವುದೋ ಬರವಣಿಗೆಗೆ ತೊಡಗಿದ್ದರು. ಸಂಜೆಯಾದರೂ ಹೆಂಡತಿ ಹೊರಟಂತೇ ಕಾಣಲಿಲ್ಲ. ಆ ಬಗೆಗೆ ಪ್ರಶ್ನಿಸಿದಾಗ "ಮಕ್ಕಳನ್ನು ಕಳುಹಿಸಿದ್ದೇನೆ" ಎಂಬ ಉತ್ತರ ಪಡೆದು "ಇಲ್ಲಾ ಇಲ್ಲಾ ತೀರಾ ಹತ್ತಿರದವರ ಮನೆ ನೀನು ಹೋಗಲೇಬೇಕು" ಎಂದು ಅನುಜ್ಞೆ ನೀಡಿದಾಗ ಉಪಾಯಗಾಣದ ಭಾಗೀರಥಮ್ಮನವರು ಗದ್ಗದಿತರಾಗಿ ಹೇಳಿದರು "ನೋಡಿ, ನೀವು ಹೋಗುವಂತೇ ಬಲವಂತಮಾಡುತ್ತಿದ್ದೀರಿ. ನನಗಿರುವುದು ಇದೊಂದೇ ಸೀರೆ. ಇದೂ ಅಲ್ಲಲ್ಲಿ ಹರಿದಿದೆ. ಇಂಥಾ ಸೀರೆಯುಟ್ಟು ಬಂಧುಗಳ ಮನೆಯ ಸಮಾರಂಭಕ್ಕೆ ಹೋಗುವುದು ಅವರಿಗೂ ಮುಜುಗರ ಉಂಟುಮಾಡಬಹುದು. ನನಗೇನೋ ಇದರಲ್ಲೇ ಸಮಾಧಾನವಿದೆ. ಆದರೆ ಜನ ನಿಮ್ಮ ಬಗ್ಗೆ ಆಡಿಕೊಳ್ಳುತ್ತಾರೆ. ಅದು ನನಗೆ ಹಿಡಿಸುವುದಿಲ್ಲ. ಧರ್ಮಪತ್ನಿಯಾಗಿ ನಾನು ನಿಮ್ಮ ಮರ್ಯಾದೆಯನ್ನು ಕಾಪಾಡಬೇಕಲ್ಲವೇ? ಹೊಸಸೀರೆ ಬೇಕೆಂದು ನಾನೇನೂ ಬಯಸುತ್ತಿಲ್ಲ, ಆದರೆ ಈ ಸಂದರ್ಭದಲ್ಲಿ ಯುಕ್ತವಾದ ನಿರ್ಧಾರವನ್ನು ನಾನು ಕೈಗೊಂಡಿದ್ದೇನೆ, ಅದಕ್ಕೆ ನೀವು ಅಡ್ಡಿಯಾಗಬಾರದೆಂಬುದು ನನ್ನ ಬೇಡಿಕೆ."   

ಕವಿ ನರಸಿಂಹಸ್ವಾಮಿಯವರಿಗೆ ವೆಂಕಮ್ಮ ಹೇಗೆ ಅನ್ವರ್ಥವಾದ ಮಡದಿಯಾಗಿದ್ದರೋ ಹಾಗೆಯೇ ಅಥವಾ ಅದಕ್ಕೂ ತುಸು ಮಿಗಿಲಾದ ರೀತಿಯಲ್ಲೇ ಗಂಡನ ನೆರಳಾಗಿ ಬದುಕಿದವರು ಭಾಗೀರಥಮ್ಮ. ಇಂಥಾ ಭಾಗೀರಥಮ್ಮ ಎಳವೆಯಲ್ಲೇ, ಹರೆಯದಲ್ಲೇ ಅಗ್ನಿಆಕಸ್ಮಿಕಕ್ಕೆ ಬಲಿಯಾದರು. ಆಗಿನ್ನೂ ಡಿವಿಜಿಯರಿಗೆ ಮೂವೈತ್ತೈದೂ ತುಂಬಿರಲಿಲ್ಲ. ಮನದನ್ನೆಯ ಅವಸಾನವನ್ನು ಸಹಿಸಿಕೊಂಡು ತನ್ನ ’ನಿವೇದನ’ವನ್ನು ಆ ನೆನಪಿನಲ್ಲಿ ರಚಿಸಿದರೆಂದು ಕೆಲವರ ಅಭಿಪ್ರಾಯ. ಅದರಲ್ಲಿನ ಶೀರ್ಷಿಕಾ ಕವನ ಡಿವಿಜಿಯವರ ಮನದ ನವಿರಾದ ಭಾವನೆಗಳನ್ನು ಸ್ಪಷ್ಟಪಡಿಸುತ್ತವೆ: 

ಎನ್ನಮನೆಯೊಳೆಸೆದ ಬೆಳಕೆ
ಎನ್ನ ಬದುಕಿನೊಂದು ಸಿರಿಯೆ
ನಿನ್ನನಿನಿಸು ಹರುಷಗೊಳಿಸೆ
ಬರೆದೆ ಬರಹವ |
ಇನ್ನದೆಂತು ನೋಡಿನಗುತ
ಲೊರೆವೆ ಸರಸವ ||

ಕಿರಿಯ ಮಕ್ಕಳಳುವ ದನಿಗೆ
ಹಿರಿಯರಿಡುವ ಕಣ್ಣಪನಿಗೆ
ಕರಗದೆದೆಯ ಬಿದಿಯು ಬಣಬು
ಕವಿತೆಗೊಲಿವನೇಂ |
ಮರುಳು ನುಡಿಯನಿದನು ನಿನ್ನ
ಕಿವಿಯೊಳುಲಿವನೇಂ ||

ನಿಡುಗಾಲ ತನ್ನ ಬಯಕೆಗಳನ್ನೆಲ್ಲಾ ಅದುಮಿ ಪತಿಸೇವೆಗೈದ ಹರೆಯದ ಮನದನ್ನೆ, ಸಾಧ್ವಿ ಸತ್ತು ಮಲಗಿದಾಗ, ಎಳೆಯ ಮಕ್ಕಳು ಕಂಬನಿಗರೆಯುತ್ತಿರುವಾಗ, ಸುತ್ತಸೇರಿದ ಹಿರಿಯರೂ ಕಂಡೂಕಾಣಿಸದಂತೇ ಅತ್ತು ಕಣ್ಣೊರೆಸಿಕೊಳ್ಳುತ್ತಿರುವಾಗ ಕವಿಯಲ್ಲುಂಟಾದ ಭಾವಗಳು ಹೇಗಿದ್ದವು ಎಂಬುದಕ್ಕೆ ಇದು ಕನ್ನಡಿ. ತನಗಾಗಿ ಬದುಕನ್ನೇ ಅರ್ಪಿಸಿಕೊಂಡು, ಗಂಡ ಗುಂಡಪ್ಪನ ಬದುಕುವ ರೀತಿಯನ್ನೇ ಒಪ್ಪಿಕೊಂಡು ಅದೇ ತನ್ನ ಭಾಗ್ಯವೆಂದು ಪರಿಗಣಿಸಿ ಡಿವಿಜಿಯವರೊಡನೆ ಹೆಜ್ಜೆಹಾಕಿದವರು ಭಾಗೀರಥಮ್ಮನವರು. ಎಷ್ಟೇ ಆರ್ಥಿಕ ಮುಗ್ಗಟ್ಟು ಎದುರಾದರೂ ಅದನ್ನೆಲ್ಲಾ ಧಿಕ್ಕರಿಸಿ, ಸಹಿಸಿ, ವಹಿಸಿಕೊಂಡು, ಬರೆದಂತೆಯೇ ಬದುಕಿದ ಅತ್ಯಂತ ವಿರಳ ಸಾಹಿತಿ-ಕವಿ ಗುಂಡಪ್ಪನವರು. ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಸಮಾಜಸೇವೆ ಹೀಗೇ ಹಲವಾರು ಪ್ರಕಾರಗಳಲ್ಲಿ ದೇಶಕ್ಕಾಗಿ ದುಡಿದವರು, ನುಡಿದವರು, ಮಿಡಿದವರು ಡಿವಿಜಿ. ಸಂಸಾರಿಯೋ? ಹೌದು ಸಂಸಾರಿ, ಅವಧೂತರೋ? ಹೌದು ಅವಧೂತರು, ವೇರ್ದಾಂತಿಯೋ? ಹೌದು ವೇದಾಂತಿ-ಹೀಗೇ ಹಲವು ಮುಖಗಳಲ್ಲಿ ಶೋಭಿಸುತ್ತಾ ಆಸ್ತಿಕತೆಯಲ್ಲಿರುವ ನಾಸ್ತಿಕತೆಯನ್ನೂ ನಾಸ್ತಿಕತೆಯಲ್ಲಿರುವ ಆಸ್ತಿಕತೆಯನ್ನೂ ಹೊರತೆಗೆದು ತೋರಿಸುತ್ತಾ ’ಪರೋಪಕಾರಾರ್ಥಮಿದಂ ಶರೀರಂ’ ಎಂಬ ವ್ಯಾಖ್ಯೆಗೆ ಸಮರ್ಪಕ ಉದಾಹರಣೆಯಾಗಿ ನಿಲ್ಲುವ ಧೀಮಂತ ವ್ಯಕ್ತಿ ಗುಂಡಪ್ಪನವರು. ಅನೇಕಬಾರಿ ಆಲೋಚಿಸುವಾಗ ಅವರೊಬ್ಬ ವ್ಯಕ್ತಿ ಎನಿಸುವುದಕ್ಕಿಂತಾ ಹೆಚ್ಚಾಗಿ ಒಂದು ಸಂಸ್ಥೆ ಅಥವಾ ಸಂಸ್ಥಾನ ಎಂದರೇ ಸಮಂಜಸ ಎನಿಸುತ್ತದೆ; ನಾನು ಎನ್ನುವುದನ್ನು ಮರೆತು ನಾವು ಎಂಬುದನ್ನೇ ಆತುಕೊಂಡಿದ್ದ ಅವರಿಗೆ ದೇಶದ ಎಲ್ಲರ ಸಂಸಾರವೂ ಅವರದೇ ಆಗಿತ್ತು! ದೇಶವೇ ಅಥವಾ ಜಗವೇ ಅವರ ಕುಟುಂಬವಾಗಿತ್ತು. ||ವಸುಧೈವ ಕುಟುಂಬಕಮ್|| ಎಂಬುದನ್ನು ಅಕ್ಷರಶಃ ನಡೆಸಿದವರು, ಹಾಗೆ ಬಾಳಿದವರು ಡಿವಿಜಿ. ಇಂಥಾ ಮಹಾತ್ಮನ ಜೀವನದ ಘಳಿಗೆಗಳನ್ನು ಸೆರೆಹಿಡಿಯಲು ಪ್ರಾಮಾಣಿಕವಾಗಿ ನಡೆದ ಪ್ರಯತ್ನ ’ಬ್ರಹ್ಮಪುರಿಯ ಭಿಕ್ಷುಕ’ ಎಂಬ, ಅವಧಾನಿ ಗಣೇಶರು ಬರೆದ ಪುಸ್ತಕ. ವೇಗದ ಓದುಗರು ೪೫ ನಿಮಿಷಗಳಲ್ಲಿ ಓದಿಸಾಗಬಹುದಾದ ೧೫೮ ಪುಟಗಳ ಸಂಗ್ರಹಾರ್ಹ ಹೊತ್ತಿಗೆ ಮತ್ತೊಮ್ಮೆ ನಿಮ್ಮ ನೆನಪಿಗಾಗಿ ಈ ಹೊತ್ತಿಗೆ! ನಮಸ್ಕಾರ.