ಚಿತ್ರಋಣ : ಅಂತರ್ಜಾಲ
ಸಿಂಪಲ್ಲಾಗ್ ಒಂದ್ ಗೌಡಾ ಇನ್ನೊಂದ್ ಡಬ್ಬಲ್ ಡಾಕ್ಟರೇಟು !
[ ಅತ್ಮೀಯ ಓದುಗ ಮಿತ್ರರೇ, ಕಾಲದ ಗತಿ ಹೇಗೆಂದರೆ ಮನುಷ್ಯ ಕೈ ಇಟ್ಟಲೆಲ್ಲಾ ಭ್ರಷ್ಟಾಚಾರ ಹುಟ್ಟುತ್ತಲೇ ಇರುತ್ತದೆ. ಇತರೆ ಪ್ರಾಣಿಗಳು ನಡೆದಾಡಿದ ಜಾಗದಲ್ಲಿ ಗರಿಕೆಯಾದರೂ ಹುಟ್ಟಬಹುದು, ಚಿಗುರಬಹುದು ಆದರೆ ಮಾನವ ನಡೆದಾಡುವ ಹಾದಿಯಲ್ಲಿ ಅದೂ ಸಾಧ್ಯವಿಲ್ಲ. ಈಗೀಗ ಎಲ್ಲಿ ನೋಡಿದರೂ ಹುಟ್ಟುವ ಹುಲ್ಲುಗಳ ಗೋಜೇ ಬೇಡವೆಂಬ ಕಾರಣದಿಂದ ಬೇಡದೆಡೆಯಲ್ಲೂ ಅಗಲಗಲದ ಚತುಷ್ಪಥಗಳನ್ನೋ ಮರ್ದೊಂದನ್ನೋ ಮಾಡಿ, ತನ್ಮೂಲಕ ಒಂದಷ್ಟು ಕೋಟಿ ಸಾರ್ವಜನಿಕ ಕಾಂಚಾಣವನ್ನು ರಾಜಕಾರಣಿಗಳು ಕಬಳಿಸಿದ್ದಾಗಿದೆ! ವಿದ್ಯೆ, ಸಾಹಿತ್ಯ, ಸಂಸ್ಕ್ರ್ಋತಿ, ಸಂಶೋಧನೆ, ಸೇವೆ, ಆಧ್ಯಾತ್ಮ ಇತ್ಯಾದಿ ಹಲವು ರಂಗಗಳಲ್ಲೂ ರಾಜಕೀಯ ಸೇರಿಕೊಂಡು ಮಾನವೀಯ ಜೀವನ ಮೌಲ್ಯಗಳ ಮೌಲ್ಯಗಳು ತೀರಾ ನಿಕೃಷ್ಟವಾಗಿವೆ, ಕಡೆಗಣಿಸಲ್ಪಟ್ಟಿವೆ. ಕೊಡಮಾಡುವ ಪ್ರಶಸ್ತಿಗಳೂ ಮತ್ತು ಪದವಿಗಳೂ ಶಿಷ್ಟಾಚಾರದ ಮುಸಿಕಿನಲ್ಲೇ ಭ್ರಷ್ಟಾಚಾರದ ಒಳತೋಟಿಯನ್ನು ಆಧರಿಸಿವೆ, ಆತುಕೊಂಡಿವೆ! ತುಮಕೂರು ವಿವಿ ಯ ಬಗ್ಗೆ ವರ್ಷದ ಹಿಂದೆ ಗುಸುಗುಸು ಸುದ್ದಿಯಿತ್ತು. ಈಗೀಗ ಎಲ್ಲಾ ವಿವಿಗಳೂ ಅದೇ ನಡೆಯನ್ನೇ ಅನುಕರಿಸುತ್ತಿವೆ. ಯಡ್ಯೂರಪ್ಪನವರ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ವಿದೇಶೀ ವಿವಿಯೇ ಅವರಿಗೆ ಗೌಡಾ ನೀಡಿದಾಗ, ಕರೀನಿಲುವಂಗಿ ಧರಿಸಿ ತಲೆಗೆ ಜರಿಯ ಗೊಂಡೆಸುತ್ತಿದ ಟೋಪಿಯನ್ನು ಧರಿಸಿನಿಂತ ಸನ್ಮಾನ್ಯ ಯಡ್ಯೂರ್ ಅವರ ಸರ್ವಾಭರಣ ಸೇವೆಯನ್ನು ನೋಡಿ ಜನ ಬಾಯ್ತುಂಬಾ ನಕ್ಕಾಗಿದೆ. ಇತ್ತೀಚೆಗೆ ಗೌಡಾ ಪಡೆದ, ತರಂಗದ ಸಂಪಾದಕಿ ಸಂಧ್ಯಾ ಪೈ ಅವರು, ತಮಗಾದ ಅತೀವ ಸಂತೋಷವನ್ನು ತೋರಿಸಿಕೊಳ್ಳುತ್ತಾ, ತಮ್ಮನ್ನು ಇನ್ನುಮುಂದೆ ’ಡಾ|| ಸಂಧ್ಯಾ ಪೈ’ ಎಂದೇ ಕರೆಯಬೇಕು ಎಂಬ ರೀತಿ, ಅವರ ಸಂಪಾದಕೀಯದ ಕೊನೆಯಲ್ಲಿ ಹಾಗೇ ಸಹಿಮಾಡಿದ್ದು ಹಲವರ ನಗೆಗೆ ಗ್ರಾಸವಾಗಿದೆ. ಇನ್ನೂ ಕೆಲವರು[ಗೌಡಾ ಪಡೆದ ಜನ] ನನಗೆ ಮಿಂಚಂಚೆ ಕಳಿಸುವಾಗ ’ಡಾ|’ ಎಂದು ಬರೆದುಕೊಳ್ಳುವುದನ್ನು ನಾನು ಪರಾಂಬರಿಸುತ್ತಲೇ ಇದ್ದೇನೆ.
ಕಾಲವೊಂದು ಹೀಗಿತ್ತು: ಸಮಾಜ ತಮ್ಮ ಕೆಲಸವನ್ನೋ, ಸೇವೆಯನ್ನೋ, ಸಾಧನೆಯನ್ನೋ ಕಂಡು ಕೊಡಮಾಡಿದ ಹಾರ-ತುರಾಯಿಗಳನ್ನು ಸಂಬಂಧಿಸಿದ ವ್ಯಕ್ತಿಗಳು ಕೈಯಲ್ಲಿ ಮುಟ್ಟಿ ಪಕ್ಕಕ್ಕೆ ಇರಿಸಿಬಿಡುತ್ತಿದ್ದರು. ಹಿಂದಿನಕಾಲದ ನಮ್ಮ ಜನ ದೇವರ ಪ್ರಸಾದವಾಗಿ ದೊರೆಯುವ ಹಾರವನ್ನು ಬಿಟ್ಟರೆ, ಮದುವೆಯ ಹಾರವನ್ನು ಮಾತ್ರ ಪೂರ್ಣಧಾರಣೆ ಮಾಡುತ್ತಿದ್ದರೇ ವಿನಃ ಸಭೆಗಳಲ್ಲಿ ತಮಗೆ ಅರ್ಪಿಸುವ ಹಾರವನ್ನು ಪೂರ್ತಿಯಾಗಿ ಧರಿಸಿಕೊಂಡು ಛಾಯಾಚಿತ್ರ ಗ್ರಹಣಕ್ಕೆ ಪೋಸು ನೀಡಿದ್ದು ತೀರಾ ತೀರಾ ಕಮ್ಮಿ. ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೆಂಗಸರು ತಾವು ಮದುವೆಯಾಗಿ ಇನ್ನೊಬ್ಬರ ಮಡದಿಯಾಗಿ ಸಂಸಾರಿ ಎಂಬುದನ್ನೂ ಮರೆತು, ಅರೆತೆರೆದ ದಿರಿಸುಗಳ ಮೂಲಕ [ಅಥವಾ ಅಂತಹ ಛಾಯಾಚಿತ್ರಗಳ ಮೂಲಕ] ಇತರರಿಗೆ ಸೌಂದರ್ಯವನ್ನು ಪ್ರದರ್ಶಿಸಿ ಷಹಭಾಸು ಗಿಟ್ಟಿಸುವ ಮನೋವೃತ್ತಿಯವರಾಗಿದ್ದಾರೆ; ತಾವು ಸಿನಿಮಾ ನಟೀಮಣಿಗಳಿಗಿಂತ ಏನೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡಲು ಮುಂದಾದ ಹಾಗೇ ತೋರುತ್ತದೆ. ಅದೇರೀತಿ, ಅನೇಕ ಮಠಾಧೀಶರು, ಧರ್ಮಾಧಿಕಾರಿಗಳು/ಧರ್ಮದರ್ಶಿಗಳು ತಮಗೊಂದು ಗರಿಯೆಂಬ ಕಾರಣಕ್ಕಾಗಿ ಗೌಡಾವನ್ನು ಪಡೆದುಕೊಂಡಿದ್ದಾರೆ! ಅಂಥವರು ಸಮಾಜದಲ್ಲಿ ಶ್ರೀಸಾಮಾನ್ಯನಿಗಿಂತಾ ಎತ್ತರದಲ್ಲಿ ನಿಲ್ಲುವವರಾಗಿದ್ದು ಕೊಡುವ ಕೈಯ್ಯವರಾಗಿರಬೇಕೇ ಹೊರತು ಚಾಚುಚ ಕೈ ಅವರದಾಗಬಾರದು. ದೇಶದ ಪ್ರಜೆಗಳು ಗೌರವದಿಂದ ಕಾಣುವುದಷ್ಟನ್ನೇ ಅವರು ಉಳಿಸಿಕೊಂಡರೆ ಅದು ಅವರಿಗೂ ಕ್ಷೇಮ, ಸ್ವಸ್ಥ ಸಮಾಜಕ್ಕೂ ಉತ್ತಮ ನೇಮ. ಅದುಬಿಟ್ಟು ಇದ್ದ ಬದ್ದ ಪ್ರಶಸ್ತಿಗಳೆಲ್ಲಾ ತಮಗೂ ಬರಲಿ ಎಂಬ ಧೋರಣೆ ಇದೆಯಲ್ಲಾ ಅದು ಇಂಥವರನ್ನು ಆ ಪದದಿಂದ ಕೆಳಗಿಳಿಸುವುದಕ್ಕೆ ಸಹಕಾರಿಯಾಗುತ್ತದೆ ಎಂದಷ್ಟೇ ಹೇಳಬಯಸುತ್ತೇನೆ.
ಇನ್ನು ವೇದಿಕೆಗಳಲ್ಲಿ ಅವಕಾಶ ಸಿಗುವಂತೇ ಮಾಡಿಕೊಳ್ಳುವ, ಅಲ್ಲಿ ಹಾರ-ತುರಾಯಿ ಹಾಕಿಸಿಕೊಂಡು ಅದನ್ನು ೧೦ನಿಮಿಷ ಹಾಗೇ ಇಟ್ಟು ಎಲ್ಲರಿಗೂ ಪ್ರದರ್ಶಿಸುವ ಗೀಳು ಅನೇಕರದ್ದಾಗಿದೆ. ತಮಗೂ ಮಾನ್ಯತೆ ಬೇಕು, ತಮಗೂ ಬಿಟ್ಟಿಯಲ್ಲಿ ಹಣ ಸಿಗಬೇಕು, ತಮಗೂ ಎಲ್ಲರಿಂದ ಗೌರವ ಸಿಗಬೇಕು ಎಂಬೀ ಹಪಾಹಪಿಯಲ್ಲಿ, ಹಾತೊರೆಯುವಿಕೆಯಲ್ಲಿ, ಸಾಮಾಜಿಕ ಮಾನದಂಡಗಳು ನಮ್ಮೆದುರೇ ನಿಂತು ನಮ್ಮನ್ನು ಅಣಕಿಸಿ ನಗುವಂತೇ ಭಾಸವಾಗುತ್ತದೆ. ಇಂದಿನ ವಿಶ್ವವಿದ್ಯಾಲಯಗಳಲ್ಲಿ ಅವಿದ್ಯಾ ’ಪಂಡಿತ’ರೇ ಹೆಚ್ಚಾಗಿ ಅಲ್ಲಿನ ಆಡಳಿತ ಕಲುಷಿತಗೊಂಡಿದೆ. ಅರ್ಹತೆಯಿಲ್ಲದವರೂ ಅಪಾತ್ರರೂ ಮಾನ್ಯತೆಯನ್ನು ಖರೀದಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ!! ಬಹಳ ಹಿಂದೆಯೇ, ’ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ’ ಎಂಬೊಂದು ಲೇಖನ ಬರೆದಿದ್ದೆ; [ http://nimmodanevrbhat.blogspot.in/2010/11/blog-post.html] ಅದೂ ಇದನ್ನೇ ಪ್ರತಿಬಿಂಬಿಸಿದ ಲೇಖನವಾಗಿತ್ತು. ನನಗೆ ಗೊತ್ತಿರುವ ಕೆಲವು ಮಂದಿ, ಕೆಲಸಕ್ಕೆ ಬಾರದ ತಮ್ಮ ಪುಸ್ತಕಗಳನ್ನು, ಇನ್ನೂ ಯಾರೂ ನೆಟ್ಟಗೆ ಓದುವ ಮೊದಲೇ, ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಪ್ರಶಸ್ತಿಯೊಂದನ್ನು ಖರೀದಿಸಿ ತಂದರು!! ಆ ಪ್ರಶಸ್ತಿ ನಮ್ಮ ಪ್ರಖ್ಯಾತ ಕವಿಯೋರ್ವರ ಹೆಸರಿನಲ್ಲಿ ಇರುವುದರಿಂದ ಇಲ್ಲಿ ಅದನ್ನು ಹೆಸರಿಸಬಯಸುವುದಿಲ್ಲ. ಖರೀದಿಸಿದ ಮಾರನೇದಿನದಿಂದಲೇ ಆ ಪುಸ್ತಕಗಳ ಮುಖಪುಟದಲ್ಲೇ ’.....ಪ್ರಶಸ್ತಿ ಪಡೆದಿದೆ’ ಎಂದು ಅಚ್ಚಿಸಲಾಯ್ತು!! ನನ್ನ ಮಿತ್ರ ಬರಹಗಾರರೊಬರಲ್ಲಿ ನಾನು ಆಗಲೇ ಭವಿಷ್ಯ ನುಡಿದಿದ್ದೇನೆ: "ನೋಡಿ ಮುಂದಿನಸರ್ತಿ ಜ್ಞಾನಪೀಠ ಪ್ರಶಸ್ತಿ ಕೂಡ ಇಂಥವರಿಗೇ ಸಲ್ಲುತ್ತದೆ" ಎಂದು.
ವಿಶ್ವವಿದ್ಯಾನಿಯಲಗಳು ಕೊಡಮಾಡುವ ಗೌಡಾಕ್ಕೆ ಯಾವ ಗೌರವವೂ ಇಲ್ಲ! ಅದನ್ನು ಪಡೆಯುವುದೇ ಅಗೌರವವಾಗಿದೆ; ಯಾಕೆಂದರೆ ಎಲ್ಲರೂ ಪಡೆದವರನ್ನು ಸಂಶಯದಿಂದಲೇ ನೋಡುವಂತಾಗಿದೆ. ಡಾಕ್ಟರೇಟ್ ಪಡೆಯಲು ಮಂಡಿಸುವ ಪ್ರಬಂಧಗಳನ್ನು ಯಾರೂ ಓದಿದ ಹಾಗೇ ಕಾಣಿಸುತ್ತಿಲ್ಲ. ಹಾಗೆ ನೋಡಿದರೆ ಇಂದು ಡಾಕ್ಟರೇಟ್ ಗಳಿಸಲು ಮಂಡಿಸುವ ಪ್ರಬಂಧಕ್ಕೆ ಪೂರಕವಾದ ವಿಷಯಗಳ ಆಯ್ಕೆಯನ್ನು ನೋಡಿದರೇ ಅವರೆಂಥಾ ಡಾಕ್ಟರು ಎಂಬುದು ನಮಗೆ ಸ್ಪಷ್ಟವಾಗಿಬಿಡುತ್ತದೆ. ಹೀಗೇ ಸ್ಥಾನಮಾನ ಪಲ್ಲಟವಾದ ’ಡಾ’ ಮತ್ತು ’ಗೌಡಾ’ ಗಳ ಬಗ್ಗೆ ನನಗೆ ಹಿರಿಯ ಮಿತ್ರರಾದ ಮಾನ್ಯ ಎಂ. ಎಸ್. ಹೆಬ್ಬಾರ್ ಅವರು ಮಿಂಚಂಚೆ ಕಳಿಸಿದ್ದಾರೆ. ಅದನ್ನು ನೀವೇ ಓದಿ:
----------ಶ್ರೀ ವಿ. ಆರ್. ಭಟ್ಟರೇ,
ಡಾ|| ಸಂಧ್ಯಾರವರ ಬಗ್ಗೆ ಶ್ರೀ ಜೋಷಿಯವರ ನಿರ್ಭೀತ ನುಡಿಗಳನ್ನು ಈಗ ತಾನೇ ಓದಿದೆ.
ನಿಮ್ಮಂಥಹ ಬರಹಗಾರು ಬರೆದರೇ ಅದಕ್ಕೆ ಸ್ವಲ್ಪ ಬೆಲೆ.
ಹಾಗಾಗಿ ಈ ನನ್ನ ಬಹುದಿನದ ಅನಿಸಿಕೆಯನ್ನು ನಿಮ್ಮ ಮಾತಿನ ಮೋಡಿಯಲ್ಲಿ ಮೂಡಿ ಬಂದರೆ ಸರಿ ಅನಿಸಿತು.
ಈ ಗೌರವ ಡಾಕ್ಟರ್ ಪದವಿಯಲ್ಲಿ " ಕೊಡು ಮತ್ತು ತೆಗೆದಿಕೋ" ಎಂಬ ಎರಡು ಪದಗಳಿವೆ. ಸೃಷ್ಠಿ ನಿಯಮದಂತೆ ಕೊಡುವವನ ಕೈ ಮೇಲೆ ಹಾಗೂ ತೆಗೆದು ಕೊಳ್ಳುವವನ ಕೈ ಕೆಳಗೆ ( ದೇಹಿ! )
ಈ ನಿಯಮದ ಪ್ರಕಾರ ಸಮಾಜವನ್ನೇ ತಿದ್ದುವ ಮಠಾಧೀಶರುಗಳು ಕೊಡುವವರೇವಿನಹ ತೆಗೆದುಕೊಳ್ಳುವವರಲ್ಲ.
ಘನವೆತ್ತ ಧರ್ಮಾದೀಶ ಧರ್ಮಸ್ಥಳದ ಶ್ರೀ ಹೆಗ್ಗಡೆಯವರು " ಗೌ. ಡಾ."ಪದವಿಗೆ ಕೈ ಚಾಚಿದ್ದು / ಒಪ್ಪಿಕೊಂಡಿದ್ದು - ಧರ್ಮಸ್ಥಳದಲ್ಲಿ / ಧಾರ್ಮಿಕತೆಯಲ್ಲಿ ಗೌರವಯಿಟ್ಟ ನನಗೆ ಮುಜುಗರವೆನಿಸಿತ್ತು. ಈ ರೀತಿ ಉದಹರಿಸಲು ಅನೇಕ ಮಠಾಧೀಶರುಗಳೂ ಇದ್ದಾರೆ ಅನ್ನಿ.
ನಿಮ್ಮ ನಿರ್ಭೀತ ನುಡಿಗಳು ಹೊರಹೊಮ್ಮೀತೇ?
ಇತಿ, ನಿಮ್ಮ ಪ್ರೀತಿಯ
ಮ. ಶ್ರೀ. ಹೆಬ್ಬಾರ.
-------------
ಹೆಬ್ಬಾರರ ಅನಿಸಿಕೆ ಎಲ್ಲರ ಅನಿಸಿಕೆ ಎಂಬುದನ್ನು ನಾವು ಮನಗಾಣಬೇಕಾಗಿದೆ. ಅವರ ಮಿಂಚಂಚೆಗೆ ಉತ್ತರಿಸುತ್ತಾ ಹಾಸ್ಯ ರಸಾಯನವೊಂದನ್ನು ಬರೆಯುತ್ತೇನೆಂದು ತಿಳಿಸಿದ್ದೆ. ಅದರಂತೇ ಈ ಕೆಳಗೆ ಆ ಕೆಲಸವನ್ನು ನಡೆಸಿಕೊಡುತ್ತಿದ್ದೇನೆ, ಓದಿ ಚಣಕಾಲ ನಿಮಗೆ ರಂಜನೀಯವಾಗುವುದರ ಜೊತೆಗೆ ವಿವಿಗಳ ಇಂದಿನ ಸ್ಥಿತಿಗತಿಗಳ ಬಗ್ಗೆಯೂ ಪರೋಕ್ಷ ತಿಳಿಹೇಳುವ ರಸಾಯನ, ನಿಮ್ಮೆಲ್ಲರಗಾಗಿ ಇಲ್ಲಿದೆ: ]
-------------------------------------------------------------------------------------------
"ಅಲ್ಲಲೇ ಸೀನ, ಎಸ್ಟ್ ದಿನ ಅಂತ ಇಂಗೇ ಇರ್ತೀಯ? ವಸಿ ರೊಕ್ಕ ಕರ್ಚ್ಮಾಡುದ್ರೆ ದಿಲ್ ದಾರ್ ಆಗಿ ಮೆರೀಬೋದ್ ಕಣ್ಮಗಾ. ಕೆಲ್ಸಾ ಮಾಡೋದಂತೂ ಮಾಡ್ಲೇ ಬೇಕಾ? ಡಾಕ್ಟರೇಟ್ ಮಾಡ್ಕೊಂಬುಟ್ರೆ ಸಂಬ್ಳಾನೂ ಜಾಸ್ತಿ ಸಿಗುತ್ತೆ ಏನೇ ಮಾಡ್ಲಿ ಯಾರೂ ಜಾಸ್ತಿ ತಗಾದೆ ಎತ್ತೋಕೂ ಬರಲ್ಲ. ಏನಂತೀಯಾ?"
"ಒಳ್ಳೇ ಐಡ್ಯಾ ಕಣೋ ಮಂಜ. ಸುಮ್ನೇ ನಿಂಗೆ ಕಳ್ ಮಂಜ ಅಂತೆಲ್ಲಾ ಕರೀತಾರಲ್ಲಾ ಅಂತವ್ರೀಗೆ ತಲೆಯಿಲ್ಲ. ಯಾರೋ ಪೋಲೀಸಪ್ಪಗಳು ಇಲ್ದೇ ಹೋದ ಅಪವಾದ ಮಡಗ್ತರೆ ಅಂದ್ರೆ ಜನಾನಾರು ತಿಳ್ಕಬೇಕಾ ಇಲ್ವಾ?"
"ಹೌದ್ ಕಣಯ್ಯಾ ಸೀನಾ ಆ ಕತೆ ಬುಡು ಈಗೆ ನಿನ್ ಕತೆ ಯೋಳಪ್ಪ. ಏನ್ ನಾನ್ ಯೋಳ್ದಂಗೆ ಮಾಡ್ಕತೀಯ ಅತ್ವಾ ಅಂಗಂಗೇ ಇದ್ಕತೀಯ?"
"ಏನಯ್ಯಾ ಮಾಡ್ಬಕು? ನಂಗೆ ಡಿಗ್ರಿ ಎಲ್ಲಾ ಆಗದೆ ಅದೇನೋ ಸರಿ. ಆದ್ರೆ ಈ ಥೀಸಿಸ್ ಗೀಸಿಸ್ ಅವೆಲ್ಲಾ ನಂಗೆ ತಿಳೀದು. ನಿಂತಾವ ಏನಾರ ಐಡ್ಯಾ ಇದ್ರೆ ಮಾಡ್ಬೋದಪ್ಪ."
" ಅದ್ಕ್ಯಾಕಯ್ಯ ತೊಂದ್ರೆ? ’ನಾಯಿ ಬಾಲ ಡೊಂಕು’ ಹನ್ನೋದ್ನೇ ಥೀಸಿಸ್ ಆಗಿ ಇಟ್ಕ. ಬರೀ ಬರೀ ಬರೀ ಒಂದಷ್ಟ ಸಾವರ ಪೇಜ್ ಬರ್ದ್ಬುಡು. ಚೆನ್ನಾಗಿ ಕಂಪೂಟ್ರಗೆ ಪುಸ್ತ್ಕ ಮಾಡಿಸ್ಕ್ಯಂಡು ನಮ್ಮ ಕಾಳಪ್ನೋರ ಹತ್ರ ಕೊಟ್ಬುಟ್ಟು ಪ್ರೈವೇಟ್ ಆಗಿ ಮಾತಾಡ್ಕ ಬತ್ತೀನಿ."
"ಓ ಅಂಗೇನ್ಲಾ ಸಿವಾ ನಂಗವೆಲ್ಲಾ ಗೊತ್ತಿಲ್ಲ. ಅಯ್ತ್ಕಣಪ್ಪ ಒಸಿ ದಿವ್ಸ ಬಿಟ್ಕಂಡು ನಾನಿಂಗೆ ಫೋನಾಕ್ತಿನಿ. ನೀನು ಬಂದ್ಬುಟ್ಟು ಪುಸ್ತ್ಕ ಇಸ್ಕಂಡೋಗಿ ಅದೇನ್ ಮಾಡಿಯೋ ನೋಡು."
"ಬರೇ ಪುಸ್ತ್ಕ ನಡೀದ್ ಕಣಮ್ಮೀ ಜೊತೇಲೇ ಒಂದಷ್ಟ್ ಕಾಸ್ನೂ ಮಡಗ್ಬುಡು."
" ಹೌದಾ? ಎಷ್ಟ್ ಕರ್ಚಾಯ್ತದೆ? "
" ಒಟ್ಟೆಷ್ಟು ಅಂತಾವ ಆಮೇಲೆ ಯೋಳ್ತೀನಿ ನಾನಿನ್ನೂ ಮಾತಾಡಿಲ್ಲ. ಮೊನ್ನೆ ತಾವರೇಕೆರೆ ಜಂಗಮಯ್ನೋರ ಮನೆ ಮದ್ವೇಲಿ ಭೇಟಿ ಆಗಿದ್ದೆ. ನನ್ ಕಾಣುತ್ಲೇ ನಗ್ಯಾಡ್ಬುಟ್ಟು ಇಸ್ ಮಾಡುದ್ರು. ಆಮೇಲೆ ಅದೇನೋ ಅರ್ಜೆಂಟೈತೆ ಅಂತ ಬೇಗ ಒಂಟೋದ್ರು. ಐವತ್ತ್ ಸಾವರ ಮಡಗು ಆಮೇಲೆ ನೋಡ್ಕಳೋಮಿ."
" ಸಿವಾ ನಾ ಇಲ್ಲೀಗಂಟ ದುಡ್ದುದ್ದೇ ಕಮ್ಮಿ ಐತ್ ಕಣ್ಲಾ. ಅಬ್ಬಬ್ಬಾಂದ್ರೆ ೨೮-೩೦ ಆಗ್ಬೋದು. ಅಷ್ಟಕ್ಕಾದ್ರೆ ಓಕೆ. ಆಮೇಲೆ ಜಾಸ್ತಿ ಗೀಸ್ತಿ ಆದ್ರೆ ಇನ್ನೇನಾರ ಉಪಾಯಮಾಡಿ ನೋಡೋಮಿ."
" ಹಾಯ್ತ್ ಕಣಪ್ಪಾ ಅಂಗೇ ಆಗ್ಲಿ"
___________________________
[ವನಕಪಿ ಯುನಿವರ್ಸಿಟಿಯಲ್ಲಿ]
"ಸಾರ್ ನಾನು ಉಗನೇಸ್ವರ ದೊಡ್ಡಿ ಮಂಜ. ಪರ್ಚಯ ಐತಲ್ವಾ? ಅದೇ ಕಳೆದ್ ತಿಂಗ್ಳು ಜಂಗಮಯ್ನೋರ ಮನೆ ಮದ್ವೇಲಿ ಭೇಟಿ ಆಗಿದ್ವಲಾ....."
" ಓ ಮಂಜ ಅಂತ್ಲಾ ಆಗ್ಲಿ ಏನ್ ವಿಸ್ಯ?"
" ಏನಿಲ್ಲಾ ನನ್ ಪ್ರೆಂಡೊಬ್ಬ ಡಾಕ್ಟರೇಟು ಮಾಡ್ಬೇಕು ಅಂತವನೆ ಸಾರ್. ಶಾನೆ ದಿವ್ಸ ಆಯ್ತು. ಚಡ್ಡಿ ದೋಸ್ತು, ಬೇಡಾ ಅಂದ್ರೆ ಕೇಳಾಂಗಿಲ್ಲ. ಅದೂ ಹಿಂದೆಲ್ಲೋ ತಾವು ಪರ್ಚಯ ಅದೀರಿ ಅಂತ ಯೋಳ್ಬುಟ್ಟಿದ್ನಾ ಬಿಟ್ಟೂ ಬಿಡ್ದಲೇ ಇಡ್ಕಂಬುಟ್ಟವ್ನೆ ಸಾರ್."
" ಅದ್ಸರಿ ಡಾಕ್ಟರೇಟು ಮಾಡೂಕೆ ಥೀಸಿಸ್ ಎಲ್ಲಾ ಬೇಕಲ್ಲಪ್ಪಾ. ಒಂದಷ್ಟ್ ತಿಂಗಳ ನಮ್ಕಡೆ ನಮ್ಮ್ ಹಿಂದೆ ಇದ್ಗಂಬುಟ್ಟು ನಾವು ಗೈಡು ಅಂತ ಬೇರೇ ಜನೀಕ್ಕೆಲ್ಲಾ ಯೋಳ್ಬೇಕು."
" ಅದೆಲ್ಲಾ ಸರಿ ಸಾರ್. ನಮ್ಮುಡ್ಗ ಬಲ್ ನನ್ಮಗ. ಶಾನೆ ಉಸಾರು. ಅವನಾಗವ್ನೇ ಒಂದ್ ಥೀಸಿಸ್ ಬರ್ದುಬುಟ್ಟವ್ನೆ. ಇಕಳಿ ಇಲ್ಲೇ ತಂದಿವ್ನಿ...ತಮ್ ಕೈಯಾಗೆ ಹಾಕ್ಬುಟ್ಟು ಓಗ್ಬುಟ್ರೆ ಎಲ್ಲಾ ಆಗೋತದೆ ಅಂದ್ಕಂಡು ಬಂದೆ. ತಮ್ದೇನೈತೆ ಅದರ ಬಗ್ಗೆ ನಾವ್ ರೆಡಿ."
"ಎಂತಾ ಥೀಸಿಸ್ ಮಾಡವ್ನಪ್ಪಾ....ಓ ’ನಾಯಿ ಬಾಲ ಡೊಂಕು’ ಅನ್ನೋ ಸಬ್ಜೆಕ್ಟು. ಇಸ್ಯ ಏನೋ ಹೊಸದೇ ಐತೆ. ಲೋಕಕ್ಕೆ ನಾಯಿ ಬಾಲ ಡೊಂಕು ಅನ್ನೋದ್ನ ವಿವರವಾಗಿ ಕಾರಣ ಯೋಳ್ಬುಟ್ಟು ತಿಳಿಸ್ದೋರಿಲ್ಲ. ಆ ಲೆಕ್ದಾಗೆ ನೋಡುದ್ರೆ ಇಸ್ಯ ಗಂಭೀರಾನೇ ಐತೆ. ಆದ್ರೂ....."
" ಸಾರ್..ಆದ್ರೂ ಗೀದ್ರೂ ಅನ್ಬ್ಯಾಡಿ ಸಾರ್. ನಮ್ಮುಡ್ಗ ಬಡವ. ಅಪ್ಪ ಕೂಲಿಮಾಡಿ ಮಗುನ್ನ ಓದಸ್ಯವ್ನೆ. ಈಗೇನೋ ಮಗ ಕಷ್ಟಪಟ್ಟು ಅವನ ಕರ್ಚ್ಗೆ ವರಮಾನ ಮಾಡ್ಕಂಡವ್ನೆ. ಇಂತೋರ್ಗೆ ತಮ್ಮ ಬೆಂಬ್ಲ ಬೇಕು."
" ಹಾಯ್ತಪ್ಪಾ ಮಂಜ, ಬಾಕಿ ಸಮಾಚಾರ ಯೋಳಪ್ಪಾ...ಇಷ್ಟೊತ್ಗಂಟ ನೀ ಯೋಳಿದ್ದೇ ವೇದಾ ಕೇಳಿದ್ದಾಯ್ತು."
" ಸಾರ್ ..ಅದೇ ಯೋಳ್ಲಿಲ್ವಾ ತಮ್ದೇನದೆ ಅದುನ್ನ ತಿಳ್ಸುದ್ರೆ....."
" ಲಕ್ಸ ಕರ್ಚ್ ಬತದೆ ಕಣಪ್ಪಾ ಆಗ್ವಾಂಗಿದ್ರೆ ಯೋಳು."
" ಆಯ್ತು ಸಾರ್. ಹದ್ಕೆ ಏರ್ಪಾಟ್ ಮಾಡ್ಕಂಬತ್ತೀನಿ. ನೀವಿದ್ಕೆ ಬೇಕಾದ ಯವಸ್ತೆನೆಲ್ಲಾ ಮಾಡ್ ಮಡ್ಗಿರಿ ಸಾರ್ ಆಗ್ಬೋದಾ?"
" ಹಾಗೇ ಆಗ್ಲಿ ಮಂಜ ..ಯಾವಾಗ ಬತ್ತೀಯ?"
" ವಾರದೊಳಗೇ ಬತ್ತೀನಿ ಸಾರ್. ಹೋಗ್ಬುಟ್ ಬತ್ತೀನಿ ನಮುಸ್ಕರ."
" ಆಯ್ತಾಯ್ತು. ಹೋಗ್ಬುಟ್ಬಾ."
___________________________
" ನೋಡಯ್ಯಾ ಸೀನ ಪ್ರೊ|ಕಾಳಪ್ಪೋರ್ ತಾವ ಮಾತಾಡಿವ್ನಿ. ಮಾಡ್ತೀನಿ ಅಂದವ್ರೆ. ಎತ್ತದ್ ಮಾತ್ಗೇ ನಿಮ್ಮಪ್ಪ ಕೂಲಿ ಅಂದ್ಬುಟ್ಟೆ. ಹೊಲಮನೆ ಎಲ್ಲಾ ಐತೆ ಅಂದ್ರೆ ಜಾಸ್ತಿ ಡಿಮ್ಯಾಂಡ್ ಮಾಡ್ತರೆ. ಹದ್ಕೇಯ ಈ ಉಪಾಯ. ಐದ್ಲಕ್ಸ ಕರ್ಚಾಯ್ತದೆ ಅಂದವ್ರೆ."
" ಅಣಾ ಆ ಪಾಟಿ ಅಣ ನಂತಾವ ಎಲ್ಲೈತೆ ಗುರೂ? ಮೂರ್ ಮಾಡ್ಕೊಳಕ್ ಯೋಳು. ಏನೋ ಬ್ಯಾಂಕು ಪಾಂಕು ಅಲ್ಲಿ ಇಲ್ಲಿ ಚಿಲ್ರೆ ಮಡಗಿದ್ದು, ಚೀಟಿ, ಕೈಸಾಲ ಅಂದ್ಬುಟ್ಟು ಯವಸ್ತೆ ಮಾಡ್ತೀನಿ."
" ನೋಡಯ್ಯಾ ನಿಂಗೆ ಸರ್ಕಾರೀ ನೌಕ್ರೀಲಿ ಈಗ್ಲೇ ತಿಂಗ್ಳಾ ನಲ್ವತ್ತ್ ಬತ್ತದೆ. ಮದ್ವೆ ಬೇರೇ ಆಗಿಲ್ಲ. ಹೊಲದಿಂದ ಬೇರೇ ವರಮಾನ ಬತ್ತದೆ. ಸಣ್ಣ ಕುಟುಂಬ. ದುಡ್ಡೆಲ್ಲಾ ನೀ ಯೇನೋ ಮಾಡಿ?"
" ಎಲ್ಲಣಾ ಗುರುವೇ? ನೌಕ್ರೀ ಹಿಡ್ಯಕೆ ಮಾಡ್ಕಂಡಿರೋ ಸಾಲಾನೇ ಇನ್ನೂ ತೀರ್ಲಿಲ್ಲ. ಕಂಡೋರ್ಗೇನೋ ಜಾಸ್ತೀನೇರ್ ಕಾಣ್ತದೆ. ಒಳಗಿನ್ ಇಸ್ಯಾನೇ ಬೇರೆ. ಮೂರಕ್ಕೆ ಆಯ್ತದೆ ಅಂತಾದ್ರೆ ಮಾಡ್ಸು.ಯಿಲ್ಲಾ ಬಿಟ್ಟಾಕತ್ಲಗೆ."
" ಸೀನಾ ನಾ ಯೇಳೂದ್ನ ಒಸಿ ಕೇಳ್ಕ: ನಿಂಗೆ ಮುಂದೊಳ್ಳೇದಾಯ್ತದೆ. ಮದ್ವೆ ಗಂಡು ಡಾಕ್ರ್ಟರೇಟು ಮಾಡವ್ನೆ ಅಂದ್ರೆ ಮಾವಂದ್ರಾಗೋರು ಅಂಗೇ ಕೇಳ್ದಸ್ಟು ಸುರೀತರೆ ತಿಳ್ಕ! ಇನ್ನೊಂದ್ಕಿತಾ ಮಾತಾಡ್ಬುಟ್ಟು ನಾಕುಕ್ಕಾದ್ರು ಮಾಡಿ ಅಂತಿವ್ನಿ. ನೋಡಾವ, ಆಗ್ಬೋದಾ ? ಇಲ್ಲಾಂದ್ರೆ ಬುಡು. ನೀ ಕೊಟ್ಟ ಪುಸ್ತ್ಕ ಮತ್ ಕಾಸು ಅವರ್ತಾವ ಕೊಟ್ಟಿವ್ನಿ ಹೋಗಿ ಇಸ್ಕಂಬಾ ಎಲ್ಲೀಂತ ಯೋಳ್ತೀನಿ."
" ಮಂಜಣಾ ಬರೇ ಇದೇ ಆಗೋಯ್ತು ನಿಂದು. ಹೋಗ್ಲಿ, ಹೋಗ್ಬುಟ್ಟು ನಾಕಕ್ಕೆ ಮಾತಾಡ್ಕಂಬಾ ಏನಾರಾ ಮಾಡೋಮಿ."
______________________________
[ ತಿಂಗಳುಗಳ ಮೇಲೆ ವನಕಪಿ ಯುನಿವರ್ಸಿಟಿಯ ವೇದಿಕೆಯಲ್ಲಿ ಘಟಿಕೋತ್ಸವ ]
ಸನ್ಮಾನ್ಯ ಕುಲಪತಿರವರೂ ಹಿರಿಕರೂ ಆದಂತಾ ರಾಜಾ ಚೋರಗುರುರವರೇ, ಪ್ರೊ.ಬೋಳಪ್ಪರವರೇ, ಕ್ಯಾತ ಸಾಯಿತಿ ಪ್ರೊ.ಅಡ್ಮಲ್ಗೋ ಮಾದೇವರವರೇ, ಪ್ರೊ.ಯಡವಟ್ ದ್ವಾರಕಾನಾತ್ ರವರೇ ಮತ್ತು ಇಡಿಮಾಯ್ನಮಿಡಿ ಮಹಾಸಂಸ್ಥಾನ ಮಠದ ಡಾ|ಪರಮವೀರ ಸುದ್ದಿಲಿಂಗ ಅಸಂತ್ರುಪ್ತ ಬೆಳ್ಳಜೊಲ್ಲು ಶ್ರೀಗಳೇ, ನಾವೆಲ್ಲಾ ಇಂದು ಇಷ್ಟೊಂದು ಸಂಭ್ರಮಿಸುತ್ತಿರೋದು ನಮ್ಮ ವನಕಪಿ ವಿಶ್ವವಿದ್ಯಾಲಯದ ಮೇಲ್ಮಟ್ಟದ ಸಾಧನೆಗಾಗಿ. ಎಂತೆಂತೋರವರೆ ನಮ್ಮ ವಿಶ್ವವಿದ್ಯಾಲಯ್ದಾಗೆ ಅಂತಂದ್ರೆ ಹೊತ್ತಿಂದೊತ್ಗೆ ಹೊಟ್ಟೆಗನ್ನ ತಿನ್ದಿರೋ ಕಿತ್ತುತಿನ್ನೋ ಬಡತನದಾಗೆ ತಾವಿದ್ಗಂಬುಟ್ಟು, ಜೀವನದಾಗೆ ಏನಾರಾ ಸಾಧುಸ್ಲೇ ಬೇಕು ಅನ್ನೋ ಅಟ ಇಟ್ಕಂಡು ಇಂದು ನಮ್ಮ ಡಾಕ್ಟರೇಟ್ ಪದವಿ ಪಡೆಯೋಮಟ್ಟಕ್ಕೆ ನಮ್ಮ ವಿದ್ಯಾರ್ಥಿಗ್ಳು ಬೆಳದವ್ರೆ. ಒಬ್ಬೊಬ್ಬರ್ದೂ ಇಸ್ಯ ಬಾಳ ವಿಸಿಷ್ಟ್ ವಾಗಿದೆ. ಅದ್ರಲ್ಲಂತೂ ನನ್ನ ಮಾರ್ಗದರ್ಸನದಲ್ಲಿ ದೊಂಬಾರಳ್ಳಿ ಅಂಜಿನಪ್ಪ ಶ್ರೀನಿವಾಸ್[ದೊ.ಅ.ಶ್ರೀನಿವಾಸ್]ರವರು ’ನಾಯಿ ಬಾಲ ಡೊಂಕು’ ಎಂಬ ವಿಸ್ಯದಮೇಲೆ ಮಹತ್ತರವಾದ ಸಂಶೋಧನೆ ನಡೆಸಿ, ತಮ್ಮ ಕಾರ್ಯದಲ್ಲಿ ಯಸಸ್ಸು ಗಳಿಸಿದ್ದಾರೆ. ಕೂಲಿ ಮಾಡಿ ಬದುಕು ಸಾಗಿಸುತ್ತಿರುವ ಬಡ ಅಪ್ಪನ ಮಗನಾಗಿ ಬೆಳೆದು, ತಮ್ಮ ಕಷ್ಟದ ಬದುಕಿನಲ್ಲೇ ಇಂತಾ ಸಾಹಸವನ್ನು ಮಾಡಿದ ದೊ.ಅ. ಶ್ರೀನಿವಾಸ್ ರವರಿಗೆ ಈ ವೇದಿಕೆಯಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಆಗ್ತಿರೋದು ನಮಗೆಲ್ಲಾ ಎಮ್ಮೆಯ ವಿಸ್ಯ.
.
.
.
.
.
.
.
_________________________________
[ಮಾರನೇದಿನದ ದಿನಪತ್ರಿಕೆಗಳಲ್ಲಿ]
ಕಳೆದ ಗುರುವಾರ ನಗರದಲ್ಲಿ ವನಕಪಿ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಿತು. ಘಟಿಕೋತ್ಸವದ ಅಂಗವಾಗಿ ೧೫೦ ಜನರಿಗೆ ಡಾಕ್ಟರೇಟ್ ಮತ್ತು ೨೫ ನಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿಪ್ರದಾನ ಮಾಡಲಾಯಿತು. ಕೂಲಿ ಕೆಲಸದವರ ಮಗನಾಗಿ ಹುಟ್ಟಿ, ಪದವಿ ಪಡೆದು, ಸರ್ಕಾರೀ ಗ್ರಂಥಾಲಯದಲ್ಲಿ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ದೊ.ಅ. ಶ್ರೀನಿವಾಸ್ ರವರು ’ನಾಯಿ ಬಾಲ ಡೊಂಕು’ ಎಂಬ ವಿಷಯದಮೇಲೆ ಮಂಡಿಸಿದ ಸುದೀರ್ಘ ಸಂಶೋಧನಾ ಪ್ರಬಂಧ ಮತ್ತು ’ಸರಕಾರೀ ಇಲಾಖೆಯಲ್ಲಿ ಹೇರಳ ಹಣಗಳಿಸುವ ಸುಲಭ ಕೈಪಿಡಿ’ ಎಂಬ ಪ್ರಬಂಧ ಎರಡನ್ನೂ ಮಾನ್ಯಮಾಡಿ, ವನಕಪಿ ವಿವಿ ಅವರಿಗೆ ಡಬ್ಬಲ್ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ’ನಿರಪರಾಧೀ ದೇಶಭಕ್ತ ಅಫ್ಜಲ್ ಗುರು’ ಎಂಬ ಪ್ರಬಂಧವನ್ನು ಮಂಡಿಸಿದ ಏಜಾಜ್ ಅಷ್ರಫ್ ಎಂಬ ಪತ್ರಕರ್ತರಿಗೂ ಅಲ್ಪಸಂಖ್ಯಾತ ತಳಹದಿಮೇಲೆ ಡಾಕ್ಟರೇಟ್ ನೀಡಲಾಯ್ತು. ’ಗೋಮಾಂಸ ಭಕ್ಷಣೆಯಿಂದ ಕಬ್ಬಿಣದ ಪೋಷಕಾಂಶ ದೊರೆಯುತ್ತದೆ’ ಎಂಬ ವಿಸ್ತೃತ ವಿಶ್ಲೇಷಣಾ ವರದಿಯನ್ನು [ಕಣ್ತಪ್ಪಿ ಆಗಿದೆ ಎಂದುಕೊಳ್ಳುತ್ತಾ] ಮುದ್ರಿಸಿದ ರೆಹಮಾನ್ ಖಾನ್ ಅವರಿಗೂ ಮತ್ತು ಈ ಸಲದ ಖೋಟಾಕ್ಕಿಂತಾ ಹೆಚ್ಚುವರಿಯಾಗಿ, ’ಅಪ್ರಬುದ್ಧ ಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಸಗಣಿ ಸುಬ್ಬರಾಜು ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯ್ತು. ಸಭೆಯಲ್ಲಿ ಕುಲಪತಿ ರಾಜಾ ಚೋರಗುರು, ಪ್ರೊ. ಕಾಳಪ್ಪ, ಪ್ರೊ ಬೋಳಪ್ಪ, ಪ್ರೊ.ಅಡ್ಮಲ್ಗೋ ಮಾದೇವ, ಪ್ರೊ.ಯಡವಟ್ ದ್ವಾರಕಾನಾಥ್ ಹಾಗೂ ಇಡಿಮಾಯ್ನಮಿಡಿ ಮಹಾಸಂಸ್ಥಾನ ಮಠದ ಡಾ|ಪರಮವೀರ ಸುದ್ದಿಲಿಂಗ ಅಸಂತ್ರುಪ್ತ ಬೆಳ್ಳಜೊಲ್ಲು ಮಹಾಸ್ವಾಮಿಗಳು ಭಾಗವಹಿಸಿದ್ದರು. ಮಲಗಿಕೊಂಡೇ ಏನೆಲ್ಲಾ ಸಾಧಿಸಬಹುದು ಎಂಬ ರಹಸ್ಯದಬಗ್ಗೆ, ಕ್ಯಾತ ಸಾಹಿತಿ ಪ್ರೊ.ಅಡ್ಮಲ್ಗೋ ಮಾದೇವ ವಿಶದವಾಗಿ ಮಾತನಾಡಿ ವಿವರಿಸಿದರು. ದೇಶದಲ್ಲಿ ಗೌರವ ಡಾಕ್ಟರೇಟನ್ನು ಇನ್ನುಮುಂದೆ ಪ್ರತಿಯೊಬ್ಬನೂ ಪಡೆಯತಕ್ಕದ್ದು ಅದು ಅವರ ಜನ್ಮಸಿದ್ಧ ಹಕ್ಕು ಎಂದು ಇಡಿಮಾಯ್ನಮಿಡಿ ಮಹಾಸಂಸ್ಥಾನ ಮಠದ ಡಾ|ಪರಮವೀರ ಸುದ್ದಿಲಿಂಗ ಅಸಂತ್ರುಪ್ತ ಬೆಳ್ಳಜೊಲ್ಲು ಶ್ರೀಗಳು ಎಲ್ಲರಿಗೂ ಕರೆಯಿತ್ತರು. ಬಾಡೂಟದ ಸುಬ್ಬಯ್ಯರವರ ಕಾರ್ಯಕ್ರಮ ನಿರ್ವಹಣೆಯಲ್ಲಿ, ಪ್ರೊ.ಮುದ್ದೇಗೌಡರು ಕಾರ್ಯಕ್ರಮವನ್ನು ನಿರೂಪಿಸಿದರು.