ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 16, 2011

ಜಪಾನ್ ಬಂಧುಗಳಿಗೆ ಶುಭ ಹಾರೈಕೆಗಳು


ಜಪಾನ್ ಬಂಧುಗಳಿಗೆ ಶುಭ ಹಾರೈಕೆಗಳು

ಮತ್ತೆ ಕಟ್ಟಿರಿ ನೀವು ಓ ನನ್ನ ಬಂಧುಗಳೇ
ಸುತ್ತ ನೂರಡಿ ಎತ್ತರದಾ ಕೋಟೆಯನು
ಹತ್ತಿ ಬಂದರೂ ನೀರು ಹೆದರದೇ ತಳ್ಳುತಿರಿ
ಎತ್ತ ಹೋದರೂ ಸಿಗದಂತೇ ಬೇಟೆಯನು

ಸತ್ತು ಹೋದವರೆಷ್ಟೋ ಅತ್ತು ಕರೆದವರೆಷ್ಟೋ
ಕತ್ತು ತಿರುಗಿಸಿ ನೋಡಲೆಲ್ಲ ಅವಶೇಷ
ಅತ್ತ ಭೂಕಂಪನವು ಅಣುಸ್ಥಾವರದ ಸ್ಫೋಟ
ತತ್ತರಿಸಿ ನಿಲುವಂತೆ ಮಾಡಿದಕೆ ಕ್ಲೇಶ

ಹೊತ್ತುಮುಳುಗದ ದೇಶ ಉತ್ತಮದ ಕಾರ್ಯಸಿರಿ
ತುತ್ತತುದಿಯಲಿ ಮೆರೆದ ಶ್ರಮಜೀವಿಗಳಿರಾ
ತುತ್ತಿಲ್ಲದಾ ಹೊತ್ತು ಆಯಾಸವನೇ ಮರೆತು
ಕಿತ್ತುಹೋದಾ ಬದುಕ ಕಟ್ಟಲೆಣಿಸುವಿರಾ ?

ಪತ್ತಿನಲಿ ಕೈಯ್ಯೊಡ್ಡಿ ಕೇಳದಂತಹ ಮನಸು
ನೆತ್ತಿಯಲಿ ಕತ್ತಿ ಕುಣಿದಾಡೆ ದಣಿವಿರದೇ !
ಪುತ್ಥಳಿಗಳಂತಿರುವ ನಿಮ್ಮ ನೋಡುತ ನಾವು
ತೆತ್ತು ಕಲಿತರೂ ಕಮ್ಮಿ ಅರಿವೆಮಗೆ ಬರದೇ !

ಹುತ್ತನಾಗೆದ್ದಲುಗಳ್ ಕಟ್ಟುತಲೆ ಇರುವಂತೇ
ಮೆತ್ತಗೆ ಓಡಾಡಿ ಎತ್ತಿ ದೇಶವನು
ಕುತ್ತು ಬಾರದೆ ಇರಲಿ ನಾವೆಲ್ಲ ಪ್ರಾರ್ಥಿಪೆವು
ನತ್ತು ಜಗಕದು ನಿಮ್ಮಾ ಚಿಕ್ಕ ಜಪಾನು