ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 14, 2012

ಏಕೆ ಹೀಗೆ ನಮ್ಮ ನಡುವೆ ಹಮ್ಮು ಬೆಳೆದಿದೆ ?

ಚಿತ್ರಕೃಪೆ : ಅಂತರ್ಜಾಲ
ಏಕೆ ಹೀಗೆ ನಮ್ಮ ನಡುವೆ ಹಮ್ಮು ಬೆಳೆದಿದೆ ?

ಸ್ವಲ್ಪ ಯೋಚಿಸಬೇಕಾಸದ ಸಾಮಾನ್ಯ ಹಾಗೂ ಉತ್ತಮ ಪ್ರಶ್ನೆ! ನಾವು ಬಡಮರ್ಜಿಯಲ್ಲಿದ್ದಾಗ, ನಮ್ಮ ಕುದುರೆ ಸೋತಾಗ, ನಾವು ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಾಗ, ನಾವು ಚುನಾವಣೆಗಳಲ್ಲಿ ಸೋತಾಗ, ನಮಗೆ ಉದ್ಯೋಗ ಸಿಗದಾಗ, ಸಿಕ್ಕ ಉದ್ಯೋಗ ಕಳೆದುಕೊಂಡಾಗ, ಯಾವುದೋ ರೀತಿಯಲ್ಲಿ ಶಾರೀರಿಕ ಅಸೌಖ್ಯವುಂಟಾದಾಗ, ಅಸಹಾಯ ಸ್ಥಿತಿ ಬಂದೊದಗಿದಾಗ, ಹೊರಲಾರದ ಸಂಸಾರದ ಭಾರ ಜಾಸ್ತಿಯಾದಾಗ, ಶಾರೀರಿಕ/ಮಾನಸಿಕ ವಿಕಲ ಮಕ್ಕಳು ಅಕಸ್ಮಾತ್ ಜನಿಸಿಬಿಟ್ಟಾಗ....ಹೀಗೇ ಹಲವಾರು ಸಮಯಗಳಲ್ಲಿ ನಾವು ಎಲ್ಲರೊಳಗೊಂದು ಎಂಬ ರೀತಿ ಇದ್ದುಬಿಡುತ್ತೇವೆ.

ನಾನು ನೋಡುತ್ತಲೇ ಬಂದಿದ್ದೇನೆ. ಊರಲ್ಲಿ ಕನ್ನಡ ಶಾಲೆಯ ಒಬ್ಬ ಬಡ ಮಾಸ್ತರರಿದ್ದರು. ಒಬ್ಬರ ದುಡಿಮೆ, ಅಂದಿನಕಾಲಕ್ಕೆ ಸಂಬಳವೂ ಅಷ್ಟೆಲ್ಲಾ ಇರಲಿಲ್ಲ. ನಾಲ್ಕು ಮಕ್ಕಳು ಇರುವ ಆರುಮಂದಿಯ ಕುಟುಂಬ. ಮಾಸ್ತರರ ಅಮ್ಮನ ಮುದುಕಿಯೊಬ್ಬಳೂ ಸೇರಿದಂತೇ ಲೆಕ್ಕಹಾಕಿದರೆ ಏಳುಮಂದಿ. ಎಲ್ಲಾ ನಡೆಯಬೇಕಲ್ಲ? ಅಗೆಲ್ಲಾ ಊರ ಜನರೊಟ್ಟಿಗೆ ಸಾದಾ ಸೀದಾ ಇದ್ದ ಮಾಸ್ತರರು ಎಲ್ಲರೊಂದಿಗೂ ಬೆರೆತು ಜನಪ್ರಿಯರಾಗಿದ್ದರು. ಮಾಸ್ತರಿಗೆ ವರ್ಗವಾಯ್ತು, ಬೇರೇ ಊರಿಗೆ ತೆರಳಿದರು, ಮಕ್ಕಳು ಬೆಳೆದವು. ಈಗ ಮಾಸ್ತರರ ಮಕ್ಕಳು ಎಮ್.ಎನ್.ಸಿ ಕಂಪನಿಯಲ್ಲಿ ಕೆಲಸಮಾಡುತ್ತಾರೆ, ಮಾಸ್ತರರಿಗೆ ನಿವೃತ್ತಿಯಾದರೂ ಆಗ ಸಿಕ್ಕ ಹಣದಲ್ಲಿ ಮನೆ ಕಟ್ಟಿದ್ದಾರೆ, ಮಕ್ಕಳು ಅಪ್ಪನಿಗೆ ಕಾರು ಕೊಡಿಸಿದ್ದಾರೆ! ಅಂತೂ ಮಾಸ್ತರರು ಈಗ ಬಡತನ ಎಂಬ ಮಟ್ಟದಲ್ಲಿಲ್ಲ. ಅದಕ್ಕೆ ತಕ್ಕಹಾಗೇ ಮಾಸ್ತರರು ಯಾರೊಡನೆಯೂ ಬೆರೆಯುವುದೂ ಇಲ್ಲ; ತಮ್ಮ ಸರ್ಕಲ್ಲೇ ಬೇರೆ ಎನ್ನುವ ತಂತ್ರಾಂಶ ತಂತ್ರಂಜ್ಞರಂತೇ ಮಾಸ್ತರರಿಗೆ! ’ಅಲ್ಪನಿಗೆ ಐಶ್ವರ್ಯ ಬಂದರೆ ತಿಂಗಳಬೆಳಕಲ್ಲೂ ಕೊಡೆ ಹಿಡಿದನಂತೆ’ ಎಂಬ ಗಾದೆ ಇದೆಯಲ್ಲಾ ಅದೇ ರೀತಿ ಮಾಸ್ತರು ೨ ಫರ್ಲಾಂಗು ದೂರ ಹೋಗುವುದಾದರೂ ಕಾರು ಬೇಕೇ ಬೇಕು. ಬೆಳೆದುನಿಂತ ಮಗಳನ್ನು ಸಾಮಾನ್ಯದ ಯಾರಿಗೂ ಮದುವೆಮಾಡಲು ಸಿದ್ಧರಿಲ್ಲ. ಅಮೇರಿಕಾದಲ್ಲಿರುವ ವ್ಯಕ್ತಿಗಾಗಿ ಹುಡುಕುತ್ತಿದ್ದಾರೆ.

ಇದು ಮಾಸ್ತರರೊಬ್ಬರ ವಿಷಯವಲ್ಲ. ಅಮೇರಿಕಾದಂತಹ ದೇಶಗಳಲ್ಲಿ ಆರ್ಥಿಕ ಮುಗ್ಗಟ್ಟು ಆರಂಭವಾಯ್ತೆಂದರೆ ನನಗೆ ಪಾಪ ಎನ್ನಿಸುವುದು ನಮ್ಮ ಭಾರತದ ಅದರಲ್ಲೂ ಬೆಂಗಳೂರಿನ ತಂತ್ರಾಂಶ ತಂತ್ರಜ್ಞರನ್ನು ನೋಡಿ! ಏಸಿ ಕಾರಿನಲ್ಲಿ ಧುತ್ತನೇ ಬಂದು ಹಠಾತ್ತನೆ ಬ್ರೇಕು ಗುದ್ದಿ ನಿಲ್ಲಿಸಿ, ರಸ್ತೆಬದಿಯಲ್ಲಿ ಸೌತೇಕಾಯಿ ಖರೀದಿಸಿ ೧೦೦ರೂಪಾಯಿಗಳ ನೋಟನ್ನು ಕೊಟ್ಟು ಚಿಲ್ಲರೆಯನ್ನೇ ಮರೆತುಹೋಗುತ್ತಿದ್ದ ಲೌಕಿಕ ವ್ಯಾವಹಾರಿಕ ಪರಿಜ್ಞಾನವನ್ನು ಕಳೆದುಕೊಂಡ ಈ ಜನ [ಕ್ಷಮಿಸಿ, ಅಪವಾದಗಳಿರಬಹುದು]ರೀಸೆಶನ್ ಎಂಬ ವಾರ್ತೆ ಕೇಳಿಯೇ ನಲುಗಿಹೋಗುತ್ತಾರೆ! ಯಾವಾಗ ಪಿಂಕ್ ಸ್ಲಿಪ್ ಬರುತ್ತದೋ ಎಂಬ ಭಯದಲ್ಲೇ ಕಾಲಹಾಕುತ್ತಾ ಬೆಂಕಿಪೊಟ್ಟಣ ಖರೀದಿಸಿದರೂ ಒಂದು ರೂಪಾಯಿಕೊಟ್ಟು ಚೌಕಾಸಿ ನಡೆಸುತ್ತಾರೆ; ಅಕ್ಕ-ಪಕ್ಕದ ಮನೆಗಳ ಜನರನ್ನು ಅನಾದಿಕಾಲದ ಆತ್ಮೀಯರಂತೇ ಹತ್ತಿರನಿಂತು ಮಾತನಾಡಿಸಲು ತೊಡಗಿಬಿಡುತ್ತಾರೆ! ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಅವರನ್ನು ಮಾತನಾಡಿಸಲು ಸಾಧ್ಯವಿತ್ತೇ? ಬೇರೇ ಗ್ರಹದಿಂದ [ಪ್ಲಾನೆಟ್ಟಿನಿಂದ] ಬಂದ ಅದ್ವಿತೀಯ ಜೀವಿಗಳಂತೇ ತಮ್ಮದೇ ಸರ್ಕಲ್ ಮಾತ್ರ ಬೇರೇ ಎಂದುಕೊಳ್ಳುವ ಅವರನ್ನು ನೋಡುವಾಗಲೂ ಹಲವು ಬಾರಿ ನನಗೆ ಕಾಡಿದ ಪ್ರಶ್ನೆ ಅದೇ : ಏಕೆ ಹೀಗೆ ನಮ್ಮ ನಡುವೆ .....?

ಗಂಡ-ಹೆಂಡತಿ ಇಬ್ಬರೂ ನೌಕರಿ ಮಾಡುತ್ತಿದ್ದರೆ, ಮನೆಯಲ್ಲೇ ಬೇರೇ ಬೇರೇ ಅಕೌಂಟುಗಳು, ಬೇರೇ ಬೇರೇ ನೋಟಗಳು. ಅವರಲ್ಲೇ ಪರಸ್ಪರ ಮೇಲರಿಮೆ-ಕೀಳರಿಮೆ. ಕೂತು ಮಾತಾಡಲು ಸಮಯವಿಲ್ಲ; ಯಾರಿಗೆ ಬೇಕಾಗಿದೆ ಅವೆಲ್ಲಾ? ಎಂಬ ಉದಾಸೀನತೆ. ಎಳೆಯ ಮಕ್ಕಳಿಗೆ ಪಾಲಕರ ಪ್ರೀತಿಸಿಗದ ಗೋಳು, ಇರಬಹುದಾದ ವೃದ್ಧರಿಗೆ ನಾಯಿಪಾಡು! " ಏ ನಿಮ್ಮ ಅಪ್ಪ ಎಲ್ಲೋ?"ಎಂದು ಹೆಂಡತಿ ಮಗುವನ್ನೇ ಕೇಳುತ್ತಾಳೆ, " ನಿಮ್ಮ ಅಮ್ಮನಿಗೆ ಹೀಗಂತೆ ಅಂತ ಹೇಳು" ಹೇಳಿಕಳಿಸುತ್ತಾನೆ ಗಂಡ. ರಾತ್ರಿ ಅಂತೂ ಅಕ್ಕಪಕ್ಕದಲ್ಲೇ ಮಲಗಿದ್ದರೂ ಚೈನಾಮಹಾಗೋಡೆಯಂತಯ ಮನೋಗೋಡೆ! ಮನದ ತುಂಬಾ ದುಗುಡ-ದುಮ್ಮಾನ; ಒಂದೇ ನದಿಯ ಎಂದಿಗೂ ಸೇರದ ಎರಡುದಡಗಳಾದ ಅನುಭವ. ಯಾರಲ್ಲಿ ಹೇಳುವುದು, ಯಾರನ್ನು ಕೇಳುವುದು? ಹೊರನೋಟಕ್ಕೆ ಎಲ್ಲವೂ ಬಹಳ ಉತ್ತಮ, ಸತ್ಯನಾರಾಯಣ ಪೂಜೆ ಇಟ್ಟುಕೊಂಡರೆ ಬಂದ ನೆಂಟರೆದುರು ಅದೇನ್ ಪ್ರೀತಿ ಅದೇನ್ ನಗು ! ನೆಂಟರೂ ಬಂದ ದೇವರೂ ಮನೆಗೆ ತೆರಳಿದ ತರುವಾಯ ಮತ್ತೆ ಯಥಾಸ್ಥಿತಿ !

ಅದೂ ಇದೂ ಬರೆದ್ಕೊಂಡು ಮಾತಾಡ್ಕೊಂಡು ಫೇಸ್ ಬುಕ್ಕಿನಲ್ಲಿ ನಮ್ಮ ಪಕ್ಕಪಕ್ಕದಲ್ಲೇ ಇರೋ ಕೆಲವುಜನ ಮಾಧ್ಯಮವಾಹಿನಿಗೋ ಪತ್ರಿಕೆಗೋ ಕೆಲಸಕ್ಕೆ ಸೇರಿದಮೇಲೆ ಏಕಾಏಕಿ ಬದಲಾಗಿಹೋಗುತ್ತಾರೆ! ನಗರದ/ಪಟ್ಟಣದ ಬೀದಿಗಳಲ್ಲಿ ಕಂಡರೂ ಕಾಣಲಿಲ್ಲವೇನೋ ಎಂದು ತಿರುಗಿಯೂ ನೋಡದೇ ಸರ್ರನೆ ಸರಿದುಹೋಗುವ ಜಾಣಕುರುಡರಂತೇ ಯಾರಿಗೂ ಮಾತನಾಡುವ ವ್ಯವಧಾನ ಇರುವುದಿಲ್ಲ. ಕುಳಿತ ಸ್ಥಾನದ ಮಹಿಮೆ ಇರಬಹುದೇ? ಅಕಸ್ಮಾತ್ ಅಲ್ಲಿ ಕೆಲಸಕಳೆದುಕೊಂಡರೆ/ಹೊರನೂಕಲ್ಪಟ್ಟರೆ ಆಗ ಮತ್ತೆ ಅವರ ಆಟವೇನು ನೋಟವೇನು ಫೇಸ್ ಬುಕ್ಕಿನಲ್ಲಿ ಎಲ್ಲರಿಗೂ ಸಲ್ಲಿಸುವ ಪ್ರತಿಕ್ರಿಯೆಗಳೇನು...ಅಹಹ ಇವರು ಅವರೇನಾ ಅಥವಾ ಬೇರೇನೋ ಎಂದು, ಇದು ಮೇ ಫ್ಲವರೋ ಜೂನ್ ಫ್ಲವರೋ ನೋಡುವ ಪ್ರಸಂಗಬರುತ್ತದೆ. ಕೆಲವರಂತೂ ’ತಾಯಿಗೆ ಬಾಯೊಳು ಮೂಜಗ ತೋರಿದ..’ ಎಂದು ದಾಸರೆಂದಂತೇ ನಮ್ಮ ಪತ್ರಿಕೆಯಲ್ಲೇ/ನಮ್ಮ ಮಾಧ್ಯಮವಾಹಿನಿಯಲ್ಲೇ ನಾವು ಮೂರೂಜಗವನ್ನು ತೋರುವ ತಾಕತ್ತುಳ್ಳವರು ಅಂದುಕೊಂಡು ಬೇರೇ ಯಾವುದೂ ಲೆಕ್ಕಕ್ಕೇ ಇಲ್ಲಾ ಅನ್ನೋ ರೀತಿಯಲ್ಲಿ ಆಡುತ್ತಾರೆ. ಕಂಡರೂ ಕಾಣದಂತೆ ಕೆಲಸವಿಲ್ಲದೇ ಖಾಲೀ ಇದ್ದರೂ ’ಬ್ಯೂಸಿ’ ಎನಿಸಿಕೊಳ್ಳುವ [ಲೇಖಕಿ ಶೋಭಾ ಡೇ ಹೀಗೇ ಅಂತೆ ಅಂತ ಎಲ್ಲೋ ಓದಿದ ನೆನಪು]ಕೆಲವರನ್ನು ಕಂಡಾಗ ನನಗೆ ಉದ್ಭವಿಸುವ ಪ್ರಶ್ನೆ ಮತ್ತದೇ: ಏಕೆ ಹೀಗೆ ನಮ್ಮ ನಡುವೆ ...?

ಹಳ್ಳಿಯಲ್ಲಿ ಹುಟ್ಟಿಬೆಳೆದು ನಮ್ಮನಿಮ್ಮಂತೇ ಸಹಜವಾಗಿ ಕಷ್ಟಕೋಟಲೆಗಳನ್ನು ಅನುಭವಿಸಿ ಬೆಳೆದ ಹುಡುಗನೊಬ್ಬ ಚುನಾವಣೆಗೆ ನಿಂತು ರಾಜಕೀಯಕ್ಕೆ ಧುಮುಕಿದಾಗ ಏಕಾಏಕೀ ಬದಲಾಗಿ ಹೋಗುತ್ತಾನೆ! ಆತನ ಮುಗ್ಧಭಾವಗಳೆಲ್ಲಾ ಬದಲಾಗಿ ಇನ್ವೆಸ್ಟ್ ಮೆಂಟ್ ಚೌಕಟ್ಟಿಗೆ ಆತ ಸೇರಿಕೊಳ್ಳುತ್ತಾನೆ. ಜನಸೇವೆ ಎಂಬ ಸ್ಲೋಗನ್ನು ಬಳಸಿ ಆರಿಸಿಬಂದಾತನನ್ನು ಅರಿಸಿದ ಜನ ಹಗಲಲ್ಲೇ ಟಾರ್ಚ್ ಹಿಡಿದು ಹುಡುಕಿದರೂ ಸಿಗುವುದು ದುರ್ಲಭವಾಗುತ್ತದೆ. ಯಾರೋ ಆತನ ಜಿಲ್ಲೆಯಿಂದ ಆತನ ಶಾಸಕೀಯ/ಸಂಸದೀಯ ಆಳ್ವಿಕೆಗೆ ಒಳಪಡುವ ಪ್ರದೇಶದವರು ಹುಡುಕಿಕೊಂಡು ಬಂದರೆ "ಸೂಟ್ ಕೇಸ್ ತಂದಿದ್ದೀರೋ?" ಎನ್ನುತ್ತಾನೆ! ನಿಂತಲ್ಲಿ ಕುಂತಲ್ಲಿ ಎಲ್ಲೆಲ್ಲಿ ಯಾವ್ಯಾವ ರೀತಿ ಎಣಿಸಿ ಬಾಚಿಕೊಳ್ಳಲಿ ಅಂತ ನೋಡುತ್ತಾನೆ. ಅಕಸ್ಮಾತ್ ಮತ್ತೊಂದು ಚುನಾವಣೆಯಲ್ಲಿ ಸೋತರೆ ಆಗ ಮರಳಿ ಎಲ್ಲರ ಜೊತೆಗೆ ಮಾತಿಗೆ ಬರುವ ವ್ಯಕ್ತಿಯಾಗುತ್ತಾನೆ. ಇದನ್ನೆಲ್ಲಾ ನೋಡುತ್ತಿರುವ ನನಗೆ ಕಾಡುವುದು ಮತ್ತದೇ ಪ್ರಶ್ನೆ : ಏಕೆ ಹೀಗೆ ನಮ್ಮ ನಡುವೆ......?

ಪಂಡಿತರಿಗೆ ಪಂಡಿತರೇ ವೈರಿಗಳಂತೇ ಕಾಣುತ್ತಾರಂತೆ, ಅದರಂತೇ ಸಂಗೀತಗಾರರಿಗೆ ಸಂಗೀತಗಾರರು, ಕಲಾವಿದರಿಗೆ ಕಲಾವಿದರು ಹೀಗೇ ಆಯಾಯ ವೃತ್ತಿಯಲ್ಲಿ ಒಬ್ಬೊಬ್ಬರೂ ತಮ್ಮನ್ನು ಮೀರಿಸುವ ಮತ್ತೊಬ್ಬರಿಲ್ಲಾ ಎಂಬ ಹುಂಬತನದಿಂದ ಕೂಡಿರುತ್ತಾರೆ. ಇದು ಬಹುಹಿಂದೆ ರಾಜರುಗಳ ಇತಿಹಾಸದಲ್ಲೇ ನೋಡಸಿಗುತ್ತದೆ. ನಮ್ಮ ತೆನ್ನಾಲಿ ರಾಮಕೃಷ್ಣನ ’ಸರ್ ಡಬ್ ವಾಂಯ್’, ’ತಿಲಕಾಷ್ಠ ಮಹಿಷಬಂಧನ’ ಇವೆಲ್ಲಾ ಹುಟ್ಟಿಕೊಂಡಿದ್ದೇ ಹಾಗೆ ಅಲ್ಲವೇ? ಪ್ರಸಂಗದ ವಿವೇಚನೆ ಸರಿಯಾಗಿಲ್ಲದೇ ತಾನೇ ಸಾರ್ವಭೌಮ ಎಂದು ಹೇಳಿಸಿಕೊಳ್ಳುವ ಹಪಾಹಪಿ ಉಂಟಾದಾಗ ಪಂಡಿತ ಕೂಪ ಮಂಡೂಕವಾಗುತ್ತಾನೆ. ಇನ್ನು ಕೆಲವು ಪಂಡಿತರು ತಾವು ಹೇಳುವುದೇ ಸತ್ಯ ಅಂದುಕೊಳ್ಳುವರೋ ಅಥವಾ ಹೇಗೇ ಹೇಳಿದರೂ ಆಗುತ್ತದೆ ಎಂದುಕೊಳ್ಳುವರೋ ತಿಳಿಯದು. ಅನೇಕ ಬರಹಗಾರರು ಕವಿಗಳ ಮೂಲ ಕಾವ್ಯವನ್ನು ತಿದ್ದಿ ಹೇಗೇ ಹೇಗೋ ಬರೆದುಬಿಡುತ್ತಾರೆ. ತಮಗೂ ಗೊತ್ತಿದೆ ಎಂದು ತೋರಿಸಿಕೊಳ್ಳುವ ಪರಿಯೋ ಅಥವಾ ಕವಿಯೇ ತಪ್ಪುಮಾಡಿರಬಹುದೆಂದು ತಿದ್ದುವ ಪರಿಯೋ ಗೊತ್ತಿಲ್ಲ. ಅಂತೂ ಏನೋ ಬರೆಯುತ್ತಾರೆ: ಮನ್ನಣೆಯ ದಾಹ! ಕವಿಗಳ ಮೂಲ ಕಾವ್ಯವನ್ನು ತಿದ್ದುವುದು ಅವರ ಅನುಮತಿಯಿಲ್ಲದೇ ಸಲ್ಲ.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ
ತಿನ್ನುವುದು ಆತ್ಮವನೆ-ಮಂಕುತಿಮ್ಮ

ಒಂದು ವಿಷಯದಲ್ಲಿ ಜ್ಞಾನಿ ಎಂದಮಾತ್ರಕ್ಕೆ ಎಲ್ಲದರಲ್ಲೂ ತಿಳುವಳಿಕೆ ಇದೆ ಎಂದು ತಿಳಿದುಕೊಳ್ಳುವುದು ತಪ್ಪಾಗುತ್ತದೆ. ವೇದವನ್ನೋದಿದವನಿಗೆ ದೋಣೀನಡೆಸುವ ಕಲೆ ತಿಳಿಯದೇ ಇರಬಹುದು, ವೈದ್ಯನಾದವನಿಗೆ ಅಡಿಗೆಯ ಮಹತ್ವದ ಅರಿವು ಇರದೇ ಇರಬಹುದು. ರೈತನಿಗೆ ಕೋಟಿಬಂಡವಾಳದ ವ್ಯಾಪಾರ-ವ್ಯವಹಾರ ತಿಳಿಯದೇ ಇರಬಹುದು, ಕೋಟಿ ಬಂಡವಾಳದವನಿಗೆ ಮೇಟಿವಿದ್ಯೆ ಗೊತ್ತಿಲ್ಲದಿರಬಹುದು. ಆದರೆ ಎಲ್ಲವಕ್ಕೂ ಅಷ್ಟಷ್ಟೇ ಮೌಲ್ಯ ಇರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಆಯಾಯ ವೃತ್ತಿಯವರು ಅದರದರ ಪಾಂಡಿತ್ಯವನ್ನು ತಕ್ಕಮಟ್ಟಿಗೆ ಗಳಿಸಿಯೇ ಇರುತ್ತಾರೆ, ಈ ನೀತಿ ಇಂದಿನ ಕೆಲವು ಅಡ್ಡಕಸುಬಿಗಳಿಗೆ ಅನ್ವಯಿಸುವುದಿಲ್ಲ! ಅಡ್ಡಕಸುಬಿಗಳಾದ ಜನ ತಾವು ಮಾಡಿದ ತಪ್ಪುಗಳನ್ನೇ ಸಮರ್ಥಿಸಿಕೊಳ್ಳುತ್ತಾರೆ. ಇವತ್ತಿನ ದಿನ ಏನೂ ಗೊತ್ತಿಲ್ಲದಿದ್ದರೂ ಗುಂಪುಗಾರಿಕೆ ಗೊತ್ತು. ಒಬ್ಬನಿಗೆ "ಇದು ತಪ್ಪು" ಎಂದು ಹೇಳಹೊರಟರೆ ಸೀಳುನಾಯಿಗಳಂತೇ ಅಟ್ಟಿಸಿಕೊಂಡು ಬರುವ ಗುಂಪೇ ಇರುತ್ತದೆ. ತಪ್ಪಿಲ್ಲದಿದ್ದರೂ ತಪ್ಪನ್ನು ತೋರಿಸಿದವನನ್ನೇ ಬೆಪ್ಪನನ್ನಾಗಿ ಮಾಡುವ, ಪ್ರವಾಹದ ವಿರುದ್ಧ ಈಜುವ ’ಪಂಡಿತರ’ ಗುಂಪು ಅದು. ಸಮಾಜದಲ್ಲಿ ನಮಗೆ ಆಗಾಗ ಇಂತಹ ಜನ ಸಿಗುತ್ತಲೇ ಇರುತ್ತಾರೆ. ತಪ್ಪು ಮಾಡಿಯೂ ಒಪ್ಪದ ಜನರನ್ನು ಕಂಡಾಗ ನನಗೇಳುವ ಪ್ರಶ್ನೆ : ಏಕೆ ಹೀಗೆ ನಮ್ಮ ನಡುವೆ ....?

ಅರಿಯದೇ ತಪ್ಪುಗಳಾಗುವುದು ಸಹಜ. ಗೊತ್ತಿದ್ದೂ ತಪ್ಪು ನಡೆಯುವುದೂ ಒಮ್ಮೊಮ್ಮೆ ಆಗಿಬಿಡಬಹುದು. ಆದರೆ ಮಾಡಿದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುವ ಹಂತಕ್ಕೆ ಇಳಿಯಬಾರದು. ಒಮ್ಮೆ ಮಾಡುವುದು ’ತಪ್ಪು’, ಇನ್ನೊಮ್ಮೆ ಅದನ್ನೇ ಮರುಕಳಿಸಿದರೆ ಅದು ’ಅಪರಾಧ’ವೆನಿಸುತ್ತದೆ. ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವ ಮನೋಭಾವ ಇಂದಿನ ಯುವಜನಾಂಗದಲ್ಲಿ ಕೆಲವರಲ್ಲಿ ಮಾತ್ರ ಇದೆ! ಇದಕ್ಕೆ ತಪ್ಪನ್ನು ಒಪ್ಪದೇ ಇರುವ ಕೆಟ್ಟ ಸ್ವಾಭಿಮಾನ ಅಥವಾ ಅಹಂಕಾರವೇ ಕಾರಣವಾಗಿರುತ್ತದೆ. ಸ್ವಾಭಿಮಾನವೇ ಅತಿಯಾದಾಗ ಅಹಂಕಾರವಾಗುತ್ತದೆ.

ಮಹಾಭಾರತದಲ್ಲಿ, ತುಂಬಿದ ಸಭೆಯಲ್ಲಿ ಮೂರುಲೋಕದ ಗಂಡನೂ ಸೇರಿರುವ ಪಂಚಪಾಂಡವರ ಎದುರಿನಲ್ಲೇ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಹಲವರನ್ನು ಕರೆಯುತ್ತಾಳೆ ದ್ರೌಪದಿ. ಯಾರೂ ಮಾನಕಾಪಾಡಲು ಅರ್ಹರಲ್ಲ ಎಂದು ಗೊತ್ತಾದಾಗ ಕೃಷ್ಣನಲ್ಲಿ ಮೊರೆಯಿಡುತ್ತಾಳೆ. ಒಂದೊಂದೇ ಕೈಯ್ಯಿಂದ ಅವಳು ಮಾನ ಮುಚ್ಚಿಕೊಳ್ಳುವ ಪ್ರಯತ್ನ ನಡೆಸುತ್ತಾಳೆ. ಒಂದು ಕೈ ಮೇಲೂ ಇನ್ನೊಂದು ಶರೀರದ ಮೇಲೂ ಇರುವಾಗಲೂ ಕೃಷ್ಣ ಬರಲಿಲ್ಲ. ಯಾವಾಗ ಎರಡೂ ಕೈ ಮೇಲೆತ್ತಿ ತನ್ನಿಂದ ಸಾಧ್ಯವಿಲ್ಲಾ ಎಂದು ಗೋಳಿಟ್ಟಳೋ ಆಗ ಅಕ್ಷಯಾಂಬರ ಪ್ರಾಪ್ತವಾಯ್ತು! ಖಾಂಡವವನವನ್ನೇ ಅಗ್ನಿಗೆ ನೈವೇದ್ಯವಿತ್ತು ಗಾಂಡೀವಿ ಎಂದು ಬಿರುದುಪಡೆದ ಅರ್ಜುನ ಮಗನಾದ ಬಬ್ರುವಾಹನನಿಂದಲೇ ಒಮ್ಮೆ ಹತನಾಗಬೇಕಾಗಿ ಬಂತು! ಹುಡುಕಿದರೆ ಒಂದಲ್ಲ ಸಾವಿರಾರು ಘಟನೆಗಳು ಪುರಾಣಗಳಲ್ಲಿ ಕಾಣುತ್ತವೆ. ಅಹಂಕಾರವೇ ಅಧಃಪತನಕ್ಕೆ ಕಾರಣ ಎಂಬುದನ್ನೂ ತಿಳಿಸುತ್ತವೆ. ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳಲು ಎಲ್ಲೀವರೆಗೆ ನಾವು ಸಿದ್ಧರಿಲ್ಲವೋ ಅಲ್ಲೀವರೆಗೂ ನಮ್ಮ ಅಹಂಕಾರಕ್ಕೆ ಮತ್ತಷ್ಟು ಮೆರುಗು ಬರುತ್ತಲೇ ಇರುತ್ತದೆ. ಹೇಗೆ ಶರೀರದಲ್ಲಿ ಬಂದುಕುಳಿತ ಬೊಜ್ಜನ್ನು ನೀಗಿಸುವುದು ಕಷ್ಟವೋ ಅಹಂಕಾರವನ್ನು ನೀಗಿಸುವುದು ಇನ್ನೂ ಕಷ್ಟ. ಮೇಲಿನ ನನ್ನ ಪ್ರಶ್ನೆಗೆ ಉತ್ತರ ತಿಳಿಯಿತಲ್ಲ? ನಮ್ಮ-ನಮ್ಮ ನಡುವೆ ಇರುವ ಈ ಭೇದಕ್ಕೆ ನಮ್ಮೊಳಗೆ ಸ್ಥಾಪಿತವಾಗಿರುವ ಅಹಂಕಾರವೇ ಕಾರಣವಾಗಿರುತ್ತದೆ. ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳುವುದೂ ಗುರುವಿಗೆ ಶರಣಾಗುವುದೂ ವ್ಯಕ್ತಿಯ ಸೌಜನ್ಯದ, ಔನ್ನತ್ಯದ ಲಕ್ಷಣ. ಅದು ಇಂದಿನ ಯುವಜನಾಂಗದಲ್ಲಿ ಮತ್ತೆ ರೂಢಿಗೆ ಬರಬೇಕಾಗಿದೆ.