ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, June 15, 2012

"ಬಡವರ ಮನೆಯಲ್ಲಿ ಮಗುವಾಗಿ ಜನಿಸುವುದಕ್ಕಿಂತಾ ಧನಿಕರ ಮನೆಯಲ್ಲಿ ಕುನ್ನಿಯಾಗಿ ಹುಟ್ಟುವುದೇ ಮೇಲು"

ಚಿತ್ರಋಣ : ಅಂತರ್ಜಾಲ 

"ಬಡವರ ಮನೆಯಲ್ಲಿ ಮಗುವಾಗಿ ಜನಿಸುವುದಕ್ಕಿಂತಾ ಧನಿಕರ ಮನೆಯಲ್ಲಿ ಕುನ್ನಿಯಾಗಿ ಹುಟ್ಟುವುದೇ ಮೇಲು"

ಒತ್ತಿಹಾಕುವ ಡಬ್ಬದ ಮುಚ್ಚಳ ಗಟ್ಟಿಯಾಗಿದ್ದರೆ ತೆರೆಯಲು ಬಳಸುವುದು ಉಗುರುಗಳನ್ನು. ನೋಡುವುದಕ್ಕೆ ಉಗುರುಗಳು ಬರೇ ಅಲಂಕಾರಿಕ, ಆದರೆ ಅವುಗಳ ಕೆಲಸಮಾತ್ರ ಜಾಸ್ತಿ ಪರಿಗಣಿತವಾಗುವುದಿಲ್ಲ. ಮನೆಯ ಮುಂದಿನ ಕುನ್ನಿಗೆ ಅಂತಹ ಕೆಲಸವಾದರೂ ಏನು ? ಆದರೆ ಅದರ ಕೆಲಸ ಏನು ಎಂಬುದು ಅದಕ್ಕೆ ಮಾತ್ರ ಗೊತ್ತು! ಅದಕ್ಕೇ ನಮ್ಮಲ್ಲೊಂದು ಗಾದೆ ಇದೆ: " ಕುನ್ನಿಗೆ ಕೆಲಸವಿಲ್ಲ ಕೂರಲು ಪುರುಸೊತ್ತಿಲ್ಲ." ಈಗೀಗ ನಗರಗಳಲ್ಲಿ ಕುನ್ನಿಗಿಂತಾ ಪಾಪ ಕುನ್ನಿ ಮಾಲೀಕರಿಗೇ ಹೆಚ್ಚಿನ ಕೆಲಸ. ನಿತ್ಯ ಕುನ್ನಿ ಮೈ ತೊಳೆಸಬೇಕು, ಕೂದಲು ಬಾಚಬೇಕು, ಸ್ನೋ ಪೌಡರ್, ಬಟ್ಟೆ ಬೆಲ್ಟು [ಚಡ್ಡಿ, ಟೈ] ವಗೈರೆ ಹಾಕಬೇಕು. ಊಟಕ್ಕೆ ದುಬಾರಿ ಬೆಲೆಯ, ಎಲುಬಿನ ಆಕಾರದ ಬ್ರಾಂಡೆಡ್ ತಿನಿಸುಗಳನ್ನು ತಂದುಕೊಡಬೇಕು. ಬೆಳ್ಳಂಬೆಳಗ್ಗೆ ಪಕ್ಕದ ಮನೆಯವ ಏಳುವ ಮೊದಲೇ ಕುನ್ನಿಯನ್ನು ಒಯ್ದು ಅವರ ಮನೆ ಕಂಪೌಂಡ್ ಹೊರಗಿನ ರಸ್ತೆಯಲ್ಲಿ ಕಕ್ಕ-ಸೂಸು ಮಾಡಿಸಿಕೊಂಡು ವಾಪಸ್ಸಾಗಬೇಕು. ಸಾಯಂಕಾಲ ಕುನ್ನಿಗೆ ವಾಕಿಂಗ್ ಮಾಡಿಸಬೇಕು. ಛೆ ಛೆ ಪ್ರೀತಿಯ ನಾಯಿಗೆ ಅಷ್ಟೂ ಮಾಡದಿದ್ದರೆ ಹೇಗೆ ಪಾಪ ?

ನಮ್ಮಲ್ಲೆಲ್ಲಾ ಗಾಂವ್ಟಿ ಕುನ್ನಿಗಳಿದ್ದವು. ಹೆಸರೇ ದಾಸ, ಹಂಡ, ಕಾಳ ಇತ್ಯಾದಿ ಇರುತ್ತಿದ್ದು ನಾವು ತಿನ್ನುವ ಆಹಾರವನ್ನೇ ಕುನ್ನಿಗೆ ಕೊಡುತ್ತಿದ್ದೆವು. ಕುನ್ನಿಗೆ ನಿತ್ಯ ಸೇವೆ ಎಂದು ಹೆಚ್ಚಿನದೇನೂ ಇರುತ್ತಿರಲಿಲ್ಲ. ಮನೆಯ ಅಂಗಳದ ಮೂಲೆಯಲ್ಲಿ ಮಲಗಿದ್ದು ತನ್ನ ಕೆಲಸಗಳನ್ನು ಮಾಡಿಕೊಂಡಿರುತ್ತಿತ್ತು. ಈಗ ನಗರಗಳಲ್ಲಿ ಕುನ್ನಿಗೆ ನಮ್ಮ ಜೊತೆಗೇ ಬೆಡ್ಡು, ನಮ್ಮ್ ಜೊತೆಗೇ ಬ್ರೆಡ್ಡು! "ಬಡವರ ಮನೆಯಲ್ಲಿ ಮಗುವಾಗಿ ಜನಿಸುವುದಕ್ಕಿಂತಾ ಧನಿಕರ ಮನೆಯಲ್ಲಿ ಕುನ್ನಿಯಾಗಿ ಹುಟ್ಟುವುದೇ ಮೇಲು" ಎಂಬ ಹೊಸ ಗಾದೆಯನ್ನು ಬರೆದಿಟ್ಟಿದ್ದೆ-ಈಗ ನಿಮಗೆ ಕೊಡುತ್ತಿದ್ದೇನೆ; ಸಾಂದರ್ಭಿಕವಾಗಿ ಉದಾರವಾಗಿ ಬಳಸಿಕೊಳ್ಳಬಹುದು! ಪುಣ್ಯಕ್ಷೇತ್ರಗಳಲ್ಲಿ ದೇವರಿಗೆ ಆ ಸೇವೆ ಈಸೇವೆ ಎಂತ ನೂರೆಂಟು ಸೇವೆಗಳನ್ನು ನಡೆಸುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಅಲ್ಲಿ ದೇವರಿಗೆ ಹೊತ್ತಿನಿಂದ ಹೊತ್ತಿಗೆ ಹೇಗೆ ಸೇವೆಗಳು ಸಲ್ಲಿಸಲ್ಪಡುತ್ತವೋ ಹಾಗೇ ಅಥವಾ ಅದಕ್ಕಿಂತಾ ಉತ್ತಮ ಸಮಯ ಪರಿಜ್ಞಾನದಿಂದ ನಗರವಾಸಿಗಳು ತಮ್ಮ ಕುನ್ನಿಗೆ ಸೇವೆ ಸಲ್ಲಿಸುತ್ತಾರೆ. ಹೆಣ್ಣಾದರೆ ಕಾಡಿಗೆ, ಬಿಂದಿ ಬಣ್ಣದ ರಿಬ್ಬನ್ನು, ಲೇಸ್ ಹಚ್ಚಿದ ಫ್ರಾಕು, ಇನ್ನೇನು ಲಿಪ್ ಸ್ಟಿಕ್ ಕೂಡಾ ಬಳಸುವ ದಿನ ಹತ್ತಿರದಲ್ಲೇ ಇದೆ!

ಜಾತೀ ನಾಯಿಗಳಲ್ಲಿ ಹಲವು ವಿಧಗಳು ಅಂತ ತಿಳಿದಿದೆಯಲ್ಲಾ, ಅವುಗಳ ಮುಖವನ್ನೊಮ್ಮೆ ನೋಡುತ್ತಿರಿ: ಕೆಲವು ಪೋಲೀಸ್ ಇನ್ಸ್ಪೆಕ್ಟರ್ ನಂತೇ ನೋಡುತ್ತಿರುತ್ತವೆ, ಕೆಲವುಗಳ ಮುಖ ಟ್ರಾಫಿಕ ಪೇದೆ ಮೂಗಿಗೆ ಏರ್ ಫಿಲ್ಟರ್ ಹಾಕಿಕೊಂಡಾಗ ಹೇಗೆ ಕಾಣಿಸುತ್ತಾನೋ ಹಾಗಿರುತ್ತದೆ, ಕೆಲವು ಹಳೇಕಾಲದ ದಫೇದಾರರು ನಡೆದಂತೇ ನಡೆಯುತ್ತಾ ನಿಧಾನವಾಗಿ ಅಡ್ಡಡ್ಡ ಆಚೀಚೆ ನೋಡುವ ದೊಡ್ಡ ಮುಖದವು, ಇನ್ನು ಕೆಲವು ಮೈಗಿಂತಾ ಮುಖವೇ ಉದ್ದವೇನೋ ಎಂಬ ರೀತಿ ಮುಖವನ್ನು ಪಡೆದಿವೆ, ಕೆಲವಕ್ಕೆ ಉರುಟುರುಟು ಮುಖ, ಇನ್ನೂ ಕೆಲವಕ್ಕೆ ದೊಡ್ಡ ಕಣ್ಣು- ಕಣ್ಣ ಹುಬ್ಬಿನಲ್ಲಿ ಉದ್ದುದ್ದ ಕೂದಲು. ಬಣ್ಣದಲ್ಲಿ ಕೆಲವು ಸಿಮೆಂಟ್ ವಿಗ್ರಹಗಳಂತೇ ಕಂಡರೆ ಕೆಲವು ಹಂಡುಪಟ್ಟೆ [ಕಪ್ಪು-ಬಿಳುಪು, ಕಂದು ಬಿಳುಪು]. ಕೇಸರಿ ಬಣ್ಣದ ಕುನ್ನಿಯೊಂದು ಎದುರಾದಾಗ ಬಿಜೆಪಿಗೆ ಹೇಳಿಮಾಡಿಸಿದ್ದು ಎನಿಸಿತಾದರೂ ಕೈಗೆ ಮಿಶ್ರಬಣ್ಣದ್ದನ್ನ ಹೇಗೋ ಒದಗಿಸಿಕೊಂಡರೂ ದಳದಕ್ಕೆ ಏನು ಮಾಡೋಣ ಎಂಬ ಚಿಂತೆ ಜಾಸ್ತಿಯಾಗ್ಹೋಯ್ತು ಹೀಗಾಗಿ ಸತ್ಕೊಂಡ್ ಹೋಗ್ಲಿ ಎಂದು ಸುಮ್ನಾಗಿಬಿಟ್ಟೆ. ಅಂದಹಾಗೇ ಹಸಿರು ಮತ್ತು ನೀಲಿ ನಾಯಿಗಳು ಜಗತ್ತಿನ ಕೆಲವು ಭಾಗಗಳಲ್ಲಿ ಪ್ರಾಯೋಗಿಕವಾಗಿಯಾದರೂ ಬಳಕೆಯಲ್ಲಿರಬಹುದು ಎಂದು ಈಗ ಹೊಸ ಆಲೋಚನೆ ಒಡಮೂಡಿದೆ.

ಹಳ್ಳಿಕಡೆ ಹತ್ತುಮಂದಿ ಸಾಕಿದ ಬಡಕಲು ನಾಯಿ ಕಂಡಾಗ, ಪಾಪ ನಾಯಿ ಜಾತಿ ಎಂದು ನಾವು ತಮಾಷೆಯಾಡುವುದಿತ್ತು. ಸಣಕಲು ಶರೀರದ, ಇನ್ನೇನು ಸತ್ತೇ ಹೋಗುವುದೇನೋ ಎಂಬಂತಿರುವ ಅಂತಹ ಕುನ್ನಿಗಳಿಗೆ ಎಲ್ಲೋ ಬೀದಿಗಳಲ್ಲೋ ತೋಟದ ಬದುಗಳಲ್ಲೋ ಜನ ತಿಂದು ಮಿಕ್ಕಿದ್ದನ್ನು ಬಿಸಾಕಿದರೇ ಉಂಟು ಇಲ್ಲದಿದ್ದರೆ ಇಲ್ಲ. ಕೆಲವೊಮ್ಮೆ ಅವುಗಳನ್ನು ಕಂಡಾಗ ನಿಜವಾದ ’ಉಪವಾಸ’ದ ಅರ್ಥವೇನು ಮತ್ತು ಉಪವಾಸ ಮಾಡುವುದು ಹೇಗೆ ಎಂಬುದನ್ನು ಅವುಗಳಿಂದ ತಿಳಿದುಕೊಳ್ಳಬಹುದೇನೋ ಅನಿಸುತ್ತಿತ್ತು. ಹಾದಿಯಲ್ಲಿ ಸಿಗುವ ಹುಚ್ಚರನ್ನು ಕಂಡೋ ಇನ್ಯಾವುದೋ ಸದ್ದನ್ನು ಆಲಿಸಿಯೋ ಅವೂ ಕೂಗುತ್ತವೆ!  ಅಂದಹಾಗೇ ನಮ್ಮ ಹಳ್ಳೀಲಿ ಒಬ್ಬರ ಮನೇಲಿ ಒಂದು ಕುನ್ನಿ ಸಾಕಿದ್ದರು. ಅವರ ಲೆಕ್ಕದಲ್ಲಿ ಬಹಳ ಪರಾಕ್ರಮಿ! ನಡೆದಿದ್ದಿಷ್ಟೇ: ಒಂದು ಕಾರ್ತೀಕದ ರಾತ್ರಿ ಊರ ನಡುವಿನ ದೇವಸ್ಥಾನದಲ್ಲಿ ರಾತ್ರಿಯ ದೀಪೋತ್ಸವ ಮುಗಿಸಿಕೊಂಡು ನಾನು ಮರಳುತ್ತಿದ್ದೆ. ಕಾಲುದಾರಿಯಲ್ಲಿ ಕೇರಿಯ ಮೂಲಕ ಸಾಗಿಬರುವಾಗ ಆ ಕುನ್ನಿ ಮಾಲೀಕರ ಮನೆ ಸಿಗುತ್ತಿತ್ತು. ರಾತ್ರಿ ೯ ಮೀರಿ ಹೋಗಿತ್ತು,  ಆ ಮನೆಯ ಆಜುಬಾಜು ದೀಪ ಕಾಣುತ್ತಿರಲಿಲ್ಲ. ಮಾಲೀಕರು ಒಂದೇ ಮಲಗಿರಬೇಕು; ಇಲ್ಲಾ ಇನ್ನೆಲ್ಲೋ ಹೋಗಿರಬೇಕು. ಸರಿ, ನನ್ನ ಪಾಡಿಗೆ ನಾನು ಟಾರ್ಚ್ ಹಾಕಿಕೊಂಡು ಸಾಗುತ್ತಾ ಬಂದಾಗ ದೂರದಿಂದಲೇ ಅವರ ನಾಯಿಯ ’ಘರ್ಜನೆ’ ಕೇಳುತ್ತಿತ್ತು. ಮುಂದೆ ಹಾದಿ ತುಳಿದರೆ ಎಲ್ಲಾದ್ರೂ ಕಚ್ಚಿಬಿಟ್ರೆ ಎಂಬ ಭಯ ನನ್ನಲ್ಲಿ ಉದ್ಭವವಾದರೂ, ನೋಡೋಣ ಅಂದ್ಕೊಂಡು  ಟಾರ್ಚನ್ನು ಸ್ವಲ್ಪ ಕೂಗುವ ನಾಯಿಯ ಮುಖದೆಡೆಗೆ ತಿರುಗಿಸಿದೆ, ಇಲ್ಲಾ ಸರಪಳಿ ಹಾಕಿಲ್ಲ, ದಪ್ಪ ನಾಯಿ ಬೇರೆ! ಮೈಮೇಲೆ ಹಾರಿದರೂ ಹಾರಿಬಿಡಬಹುದು ಎಂಬುದು ನನ್ನ ಆ ಕ್ಷಣದ ಅನಿಸಿಕೆ.             

ಯಾವಾಗ ಮುಖದಮೇಲೆ ಬೆಳಕು ಬಿತ್ತೋ ನಾಯಿ ಅವರ ಮನೆಯ ಆ ಕಡೆ ಪಕ್ಕಕ್ಕೆ ಸ್ವಲ್ಪ ಸರಿದ ಹಾಗೇ ಕಂಡಿತು. ಓಹೋ ಆ ಕಡೆ ಹೋಗಿ ಕ್ರಿಕೆಟ್ ಬೌಲರ್ ಥರಾ ಒಮ್ಮೆಲೇ ಜಿಗಿದು ಬರುತ್ತದೇನೋ ಎಂಬ ಅನುಮಾನ ಇದ್ದರೂ ಸ್ವಲ್ಪ ಧೈರ್ಯಮಾಡಿಕೊಂಡು ಮುಂದೆ ಹೆಜ್ಜೆಹಾಕಿ ಆ ಕಡೆ ಸರಿದ ನಾಯಿಗೆ ಮತ್ತೆ ಟಾರ್ಚ್ ಬೆಳಕು ಬಿಟ್ಟೆ. ನಾಯಿ ಆ ಮನೆಯ ಹಿಂದಕ್ಕೆ ಓಡಿಹೋಯ್ತು! ಏನಾಶ್ಚರ್ಯ, ನನಗೂ ನೋಡಿಬಿಡುವ ಹುಮ್ಮಸ್ಸು, ಮನೆಯ ಹಿಂದುಗಡೆ ನಾಯಿಯಿರುವ ಜಾಗದೆಡೆ ಹೋಗುತ್ತಾ ಮತ್ತೆ ಬೆಳಕು ಚೆಲ್ಲಿದೆ, ನಾಯಿ ಮನೆಯ ಪಕ್ಕದ ಎತ್ತರದ  ಜಾಗಕ್ಕೆ ಓಡಿಹೋಗಿ ಅಲ್ಲಿಂದ ಬೊಗಳು ಛೆ...ಛೆ ಘರ್ಜಿಸುತ್ತಿತ್ತು! ಇಷ್ಟೇ ಅಂದುಕೊಂಡು ಮನೆಯ ದಾರಿ ಹಿಡಿದೆ. ನಾನು ದೂರಸಾಗಿದ್ದನ್ನು ಕಂಡ ’ಹುಲಿ’ಯಂತಹ ಆ ನಾಯಿ ಮತ್ತೆ ತನ್ನ ಸ್ವಸ್ಥಾನಕ್ಕೆ ಮರಳಿ ’ಘರ್ಜಿಸ’ತೊಡಗಿತು. ಮಾರನೇ ಬೆಳಿಗ್ಗೆ ನಮ್ಮ ಪಕ್ಕದ ಮನೆಯ ಓರಗೆಯವರಲ್ಲಿ ಹೇಳಿಕೊಂಡು ನಕ್ಕದ್ದೇ ನಕ್ಕಿದ್ದು.

ಬೆಂಗಳೂರಿನ ರಾಜಾಜಿನಗರದಲ್ಲಿ ಬೆಳಿಗ್ಗೆ ಹಾಲುತರಲೆಂದು ನಾನು ಹೋದರೆ ಒಮ್ಮೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಹಾಲಿನ ಪ್ಯಾಕೆಟ್ ಗಳಿಂದ ತುಂಬಿದ ಪ್ಲಾಸ್ಟಿಕ್ ಬ್ಯಾಗೊಂದನ್ನು ನಾಯಿ ಬಾಯಲ್ಲಿ ಕಚ್ಚಿಕೊಂಡು ನಡೆದುಬರುತ್ತಿತ್ತು. ಅದರಿಂದ ಅನತಿ ದೂರದಲ್ಲಿ ಅದರ ಮಾಲೀಕರು ನಡೆದುಬರುತ್ತಿದ್ದರು. ಗುಡಾಣ ಹೊಟ್ಟೆಯ ಮಾಲೀಕರಿಗೆ ನಾಯಿ ಸಲ್ಲಿಸುವ ಸೇವೆಯನ್ನೂ ಮರೆಯಬಾರದಲ್ಲ! ಕೆಲವು ಮನೆಗಳಲ್ಲಿ ಯಜಮಾನ್ ನಾಯಿಗಳಿರುತ್ತವೆ! ಅವು ದಿನಪತ್ರಿಕೆಗಳನ್ನು ತೆರೆದು ಓದುವವರಂತೇ ತಿರುವಿಹಾಕುವುದನ್ನೂ ಮತ್ತೆ ಜೋಡಿಸಿ ಇಡುವ ಸರ್ಕಸ್ಸನ್ನೂ ಕಂಡಿದ್ದೇನೆ. ಇನ್ನು ಕೆಲವು ಮನೆಗಳಲ್ಲಿ ನಾಯಿಗೆ ಮಾಡಿರುವ ಗೂಡುಗಳ ಬಾಗಿಲುಗಳನ್ನು ಅವೇ ತೆರೆದುಕೊಂಡು ಒಳಗೆ ಹೋಗಿ ವಿಶ್ರಮಿಸುತ್ತವೆ. ಕೆಲವು ಮನೆಗಳ ನಾಯಿಗಳು ಅವುಗಳ ಮಾಲೀಕರು ನಡೆದಂತೇ ನಡೆಯುತ್ತವೆ: ಕೆಲವರು ಸ್ವಭಾವತಃ ವಿವಿಧ ರೀತಿಯಲ್ಲಿ ನಡೆಯುತ್ತಾರೆ, ಕೆಲವರು ನಡೆಯುವಾಗ ಇಡೀ ಶರೀರ ಹಳೇಗಡಿಯಾರದ ಲೋಲಕದ ರೀತಿ ಆ ಕಡೆ ಅರ್ಧ ಈ ಕಡೆ ಅರ್ಧ ವಾಲುತ್ತಾ ನಡೆಯುತ್ತಾರೆ, ಇನ್ನು ಕೆಲವರದು ಹವಾಲ್ದಾರ್ ನಡಿಗೆ, ಕೆಲವರು ಮಿಲಿಟ್ರಿ ರಿಟಾಯರ್ಡ್ ಇದ್ದಹಾಗೇ ನಡೆದರೆ ಮತ್ತೆ ಕೆಲವರು ಯಾಕಾದ್ರೂ ಬೇಕಿತ್ತು ಈ ಲೋಕ ಅಂದುಕೊಂಡವರ ಹಾಗೇ ನಡೆಯುತ್ತಾರೆ; ನಡಿಗೆಯಲ್ಲಿ ಅವರ ನಾಯಿಗಳು ಅವರುಗಳನ್ನೇರ್ ಅನುಸರಿಸುವುದನ್ನು ಕಂಡು ಬೆಕ್ಕಸಬೆರಗಾಗಿದ್ದೇನೆ-ಕಣ್ಣಲ್ಲೂ ಅದೆಂಥಾ ಭಾವನೆಯಪ್ಪಾ ಶಿವನೇ!

ಕೆಲವು ಮನೆಗಳಲ್ಲಿ ಕುನ್ನಿ ಮಾಲೀಕರೇ ಸಣಕಲು, ನಾಯಿ ಮಾತ್ರ ದಪ್ಪದಪ್ಪ. ಎತ್ತರದ ಕಾಡುಹಂದಿಯಂತಹ ನಾಯಿಯನ್ನು ಹೊಳೆಯುವ ದಪ್ಪದ ಸರಪಳಿ ಹಾಕಿ ಹಿಡಿದುಕೊಂಡು, ಸರ್ಕಸ್ಸಿನ ರಿಂಗ್ ಮಾಸ್ಟರ್ ಹತ್ತಿರ ಇರುವಂತಹ ಸ್ಟಿಕ್ ತೆಗೆದುಕೊಂಡು, ನಾಯಿಗೆ ಹಾಕಿರುವ ಹೊಟ್ಟೆ-ಕೈಕಾಲುಗಳನ್ನು ಸುತ್ತರಿದ ಬೆಲ್ಟನ್ನೂ ಹಿಡಿದುಕೊಂಡು ಅವರು ನಡೆದುಹೋಗುವಾಗ ಕುನ್ನಿ ಎಳೆದೆಡೆಗೆ ಅವರು ಸಾಗಬೇಕು ಪಾಪ! ಕುನ್ನಿ ಯಾವ ದಿಕ್ಕಿಗೆ ಎಳೆಯುತ್ತದೋ ಆ ದಿಕ್ಕಿಗೆ ಅವರು ಹೋಗುತ್ತಾರೆ. ಹಿಡಿದುಕೊಂಡವರು ಅವರಾದರೂ ಕಂಟ್ರೋಲ್ ಮಾಡುವುದು ನಡೆಯುವ ಕುನ್ನಿ ಎಂಬುದು ನನಗೆ ಆಗಾಗ ಕಾಣಿಸುವ ಮೋಜಿನ ಸಂಗತಿ. ಕೆಲವೊಮ್ಮೆ ಹೆದರಿದ್ದೂ ಇದೆ-ಯಾಕೆ ಗೊತ್ತೋ? ಸರಿಯಾಗಿ ಊಟವನ್ನೇ ಮಾಡದಂತಹ ಮಾಲೀಕನ ಕೈಯ್ಯಿಂದ ತಪ್ಪಿಸಿಕೊಂಡು ಎಲ್ಲಾದ್ರೂ ಮೈಮೇಲೆ ಹಾರಿಬಿಟ್ಟರೆ ಎಂದು. ಯಾರಿಗ್ಬೇಕು ಮಾರಾಯ್ರೆ? ಹದಿನಾಲ್ಕು ಲೋಕಗಳನ್ನೇ ತೋರಿಸುವಂತಹ ಯಾತನೆ ನೀಡುವ ಹೊಕ್ಕಳ ಸುತ್ತಿನ ಹದಿನಾಲ್ಕು ಇಂಜೆಕ್ಷನ್ನು, ಅಂದಹಾಗೇ ಈಗ ಅಲ್ಲೂ ಕಾಸಿನ ವ್ಯವಹಾರ! ಕಾಸು ಜಾಸ್ತಿ ಮಡಗಿದ್ರೆ ತೋಳಿಗೆ ನೀಡಬಹುದಾದ ಮೂರು ಇಂಜೆಕ್ಷನ್ನೂ ಉಂಟು, ಗೊತ್ತಾಯ್ತಲ್ಲ? ಕಾಸಿಲ್ಲದ ಬಡವನಿಗೆ ಹದಿನಾಕೇ ಗತಿ !

ಕೆಲವು ಮನೆಗಳಲ್ಲಿ ನಾಯಿಗಳೇ ಇರುವುದಿಲ್ಲ; ’ನಾಯಿಗಳಿವೆ ಎಚ್ಚರಿಕೆ’ ಎಂಬ ಬೋರ್ಡು ಮಾತ್ರ ಬರೆದಿರುತ್ತದೆ. ಅಂದಹಾಗೇ ತಿಮ್ಮೇಗೌಡರು ತಮ್ಮ ಮನೆ ಗೇಟಿಗೆ ’ನಾಯ್ಗೊಳವೆ ಹೆಚ್ಚರಿಕೆ’ ಎಂಬ ಬೋರ್ಡು ಹಾಕಿದ್ದು ಕಂಡಿದ್ದೆ. ವಾಡಿಕೆಯಿಂದ ಅವರು ಹೇಳಿದ್ದನ್ನು ’ಅಚ್ಚಗನ್ನಡ’ದಲ್ಲಿ ಬರೆದಿದ್ದು ತಮಿಳಿನ ಸೆಲ್ವಂ!  ಬೋರ್ಡು ಹಾಕಿದ ಮನೆಯಲ್ಲಿ ನಾಯಿಗಳಿಲ್ಲದಿದ್ದರೆ ಏನು ತಿಳಿದುಕೊಳ್ಳಬೇಕು ಎಂಬುದನ್ನು ನಿಮ್ಮ ಅನಿಸಿಕೆಗೆ ಬಿಟ್ಟುಬಿಡುತ್ತೇನೆ. ನಾಯಿಗಳಿದ್ದರೂ ಬೋರ್ಡು ಹಾಕದೇ ಇರುವ ದೊಡ್ಡ ಕಂಪೌಂಡಿನ ಮನೆಗಳೂ ಇವೆ. ಅಲ್ಲಿಗೆ ಅಕಸ್ಮಾತ್ ನುಗ್ಗಿದ ಮಾರ್ಕೆಟಿಂಗ್ ಹುಡುಗರ ಕಥೆ ಏನಾಗಿರಬೇಡ? ಮನೆಮನೆಗೆ ಮಾರ್ಕೆಟಿಂಗ್ ಮಾಡಲು ತೆರಳುವ ಹುಡುಗರಿಗೆ ಇನ್ನುಮೇಲೆ ಕಳಿಸುವ ಕಂಪನಿಯವರು ಭದ್ರತಾ ಕವಚವನ್ನೂ ಕೊಟ್ಟು ಕಳಿಸುವುದು ಒಳಿತು; ಬೀಳುವ ವಿಮಾನದಿಂದ ಹೊರಜಿಗಿದು ಪ್ಯಾರಾಚ್ಯೂಟ್ ಬಿಡಿಸಿಕೊಳ್ಳುವ ಯೋಧರಂತೇ, ಹಾರುವ ಕುನ್ನಿಯ ಎದುರು ತಟ್ಟನೆ ಎದ್ದುನಿಲುವ ಎತ್ತರದ ಬೇಲಿಯ ರೀತಿಯ ಕವಚವನ್ನು ಬಿಡಿಸಿಕೊಳ್ಳುವ ’ಮಾರ್ಕೆಟಿಂಗ್ ಯೋಧ’ರನ್ನು ತಯಾರುಮಾಡಿದರೆ ಒಳ್ಳೆಯದು.

ನಾಯಿಗಳನ್ನು ಕಾರಿನಲ್ಲಿ, ಬೈಕಿನಲ್ಲಿ ಕೂರಿಸಿಕೊಂಡು ಹೋಗುವುದು ಮಾಮೂಲಾಗಿಬಿಟ್ಟಿದೆ. ಕಾರಿನ ಹಿಂದುಗಡೆ ಸೀಟಿನಲ್ಲಿ ಕುಳಿತ ಕುನ್ನಿರಾಯರು ಆಗಾಗ ಕತ್ತನ್ನು ಹೊರಚಾಚಿ ಕಾಕಳಿಸುವುದು ನಮ್ಮಂತಹ ಓಡಾಟಪ್ರಿಯರಿಗೆ ಬೇಡವೆಂದರೂ ಎದುರಾಗುವ ಸನ್ನಿವೇಶ. ಹೀಗೇ ಒಮ್ಮೆ ಒಂದು ಸಿಗ್ನಾಲ್ ನಲ್ಲಿ ತಿರುಗಿ ನೋಡಿದೆ, ಆ ಕಡೆ ನಾಯಿಯೊಂದು ಕಾರಿನ ಕಿಟಕಿಯಿಂದ ನೋಡುತ್ತಿತ್ತು. ನನ್ನನ್ನು ನೋಡಿ ನಕ್ಕಿತೋ, ಅಪಹಾಸ್ಯ ಮಾಡಿತೋ ಅರಿಯೆ. ನನ್ನ ಮುಖ ತಿರುಗಿಸಿ ಮತ್ತೆಲ್ಲೋ ನೋಡಿ ನಿಮಿಷದ ನಂತರ ಮತ್ತೆ ನಾಯಿಯೆಡೆ ದೃಷ್ಟಿ ಹೋಯಿತು. ಆ ಕಡೆ ತಿರುಗಿದ್ದ ಕತ್ತನ್ನು ಮತ್ತೆ ನನ್ನೆಡೆ ತಿರುಗಿಸಿ ನೋಡಿದ ನಾಯಿಯ ಮುಖದಲ್ಲಿ ರಾಜಕೀಯ ಪುಢಾರಿಯ ಭಾವವನ್ನು ಕಂಡೆ! ಪಕ್ಕದಲ್ಲಿ  ಕುಳಿತ ವ್ಯಕ್ತಿ ಏನನ್ನೋ ಕೊಟ್ಟಿದ್ದನ್ನು ಬಾಯಲ್ಲಿ ಹಾಕಿಕೊಂಡು ಅಲ್ಲಾಡಿಸುವಾಗ ಸಿನಿಮಾ ಹೀರೋ ಪೋಸು ಕಂಡೆ! ಇನ್ನೊಮ್ಮೆ ಪಮೆರಿಯನ್ ನಾಯಿಯೊಂದು ಹಾಗೆ ನೋಡುತ್ತಿತ್ತು- ’ಹಿಂಭಾಗದ ಸೀಟಲ್ಲಿ ಕೂತ ಜಂಬದ ಹೆಂಗಸಿನ ನೋಟ’ವನ್ನು ಆಗ ಅದರ ಮುಖದಲ್ಲಿ ಕಂಡಿದ್ದೆ.

ಅಲಲಲಲಾ, ಗಂಗಾವತಿ ಪ್ರಾಣೇಶರು ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ದೂರದಿಂದ ತಮಗೆ ಶಾಲು ಎಸೆದು ಸನ್ಮಾಸಿದ್ದನ್ನು ಹೇಳಿದ್ದು ನೆನಪಿಗೆ ಬಂತು! ನಮ್ಮ ಹಳ್ಳಿಗಳಲ್ಲಿ ದಾಸ, ಹಂಡ, ಕಾಳರಿಗೆ ಎಂದೂ ಪಾತ್ರೆಯಲ್ಲಿ ಊಟ ಹಾಕುತ್ತಿರಲಿಲ್ಲ. ಬಾಳೆಲೆಯ ತುಂಡು ಅದೂ ಇರದಿದ್ದರೆ ನೆಲದಮೇಲೇ ಬಡಿಸುವುದು ಪದ್ಧತಿಯಾಗಿತ್ತು. ಬೆಳಗಿನ ದೋಸೆಯನ್ನು ಹತ್ತಾರು ಸಲ ಎತ್ತರಕ್ಕೆ ಹಿಡಿದು, ಅವು ಮುಂಗಾಲೆತ್ತಿ ಹಾರುತ್ತಾ ಪಡೆಯಲು ಪ್ರಯತ್ನಿಸಿದಮೇಲೆ ಬೀಸಿ ಎಸೆಯುವುದಿತ್ತು. ತಿರುಗಾಟಕ್ಕೆ ಅವು-ಅವುಗಳ ಪಾಡಿಗೆ, ನಾವು-ನಮ್ಮ ಪಾಡಿಗೆ. ನಮಗೇ ಕಾರು,ಬೈಕು ಇರಲಿಲ್ಲ-ಇನ್ನು ಕುನ್ನಿಗಳಿಗೆಲ್ಲಿ ಬಂತು ಸ್ವಾಮೀ? ಅಪರೂಪಕ್ಕೆ ತೋಟತುಡಿಕೆಗಳಿಗೆ ನೀರು ಹಾಯಿಸುವಾಗ ಹರಿವ ನೀರಲ್ಲಿ ಅವು ಮಲಗೇಳುವುದು ಬಿಟ್ಟರೆ ಸಾಬೂನು ಹಾಕಿ ಸ್ನಾನಮಾಡಿಸಿದ ನೆನಪಿಲ್ಲ. ಬಿಸ್ಕೀಟು ನಮಗೇ ದುಬಾರಿಯಾಗಿ ನೆಂಟರು ತಂದರೆ ಮಾತ್ರ ದೊರೆಯುತ್ತಿದ್ದ ಆ ಕಾಲದಲ್ಲಿ ನಮ್ಮ ದಾಸ,ಹಂಡ, ಕಾಳ ಅದರ ಹೆಸರನ್ನು ಕೇಳಿದ್ದಾಗಲೀ, ಆಕಾರವನ್ನು ಜೀವಿತದಲ್ಲೇ ಕಣ್ಣಲ್ಲಿ ಕಂಡಿದ್ದಾಗಲೀ ಇದ್ದ ಬಗ್ಗೆ ಯಾವುದೇ ದಾಖಲಾತಿ ಸಿಗುವುದಿಲ್ಲ. ಹೊರಗೆ ಬಿಸಾಕಿದ ಗೋಣಿ ಚಪ್ಪಿನ ಮೇಲೆ ಮಲಗಿದ್ದು ಬಿಟ್ಟರೆ ಹತ್ತಿಯ ಗಾದಿಗಳನ್ನೆಂದೂ ಹತ್ತದ ನಾಯಿಗಳವು. ಆಗಾಗ ಬಚ್ಚಲು ಒಲೆಯ ಬೂದಿಗುಡ್ಡೆಯಲ್ಲಿ ಹೊರಳಾಡುತ್ತಿದ್ದ ಅವುಗಳಿಗೆ ಯಾವುದೇ ಚರ್ಮವ್ಯಾಧಿ ತಗುಲುತ್ತಿರಲಿಲ್ಲ. ಮನೆಗೆ ಬರ-ಹೋಗುವವರನ್ನು ಯಾವುದೇ ತರಬೇತಿ ಇಲ್ಲದೇ ನಿಯಂತ್ರಿಸಬಲ್ಲ ಅವುಗಳ ಬುದ್ಧಿಮತ್ತೆ ನೆನೆದಾಗ ಪಡೆದ ಸೇವೆಯ ಮೌಲ್ಯದ ಅರಿವು ಇಂದಿಗೆ ತಿಳಿಯುತ್ತಿದೆ. ಗೊತ್ತಿರುವ ವ್ಯಕ್ತಿಗಳೂ ತನ್ನನ್ನು ಸಾಕಿದವರಿಗೆ ವಿರುದ್ಧವಾದ ಕೆಲಸವನ್ನು ಮಾಡಹೊರಟಾಗ ನಿರ್ಬಂಧಿಸಿದ ಸಾಹಸದ ಕುನ್ನಿಗಳ ಯಶೋಗಾಥೆ ಅದೆಷ್ಟೋ. ಒಂದೇ ಒಂದು ದಿನ ಹರತಾಳ ಮಾಡಿದ್ದಿಲ್ಲ, ಇಂಥಾದ್ದೇ ಊಟಕೊಡಿ-ಇಂಥಾದ್ದೇ ಸೋಪಲ್ಲಿ ಸ್ನಾನಮಾಡಿಸಿ-ಇಂಥಾ ಹಾಸಿಗೆಯನ್ನೇ ಕೊಡಿ ಎಂದು ಕೇಳಿದ್ದಿಲ್ಲ. ಬಹುಶಃ ಈ ನಿಷ್ಠೆಯನ್ನು ನೆನೆದೇ ಸಿಂಡಿಕೇಟ್ ಬ್ಯಾಂಕಿನವರು ತಮ್ಮ ಲೋಗೋದಲ್ಲಿ ಕುನ್ನಿಯ ಚಿತ್ರ ಹಾಕಿದ್ದಿರಬೇಕು ಎನಿಸುತ್ತದೆ; ಆದರೆ ಆ ಬ್ಯಾಂಕಿನವರಿಗೆ ಅಂಥದ್ದೇ ನಿಷ್ಠೆ ಇದೆಯೇ ಎಂಬುದು ಅನುಭವದಿಂದ ಅವರವರು ಅರಿತುಕೊಳ್ಳಬಹುದಾದ ವಿಷಯ!  

ಬೆಂಗಳೂರಲ್ಲಿ ಮಾತ್ರ ಜನ, ಹತ್ತುಮಂದಿ ನಾಯಿಗೆ ಅಲ್ಲಲ್ಲಿ ಮಾಂಸದ ವೇಸ್ಟೇಜ್ ಹಾಕುತ್ತಾರೆ. ಕುರಿ-ಕೋಳಿಗಳನ್ನು ಕೊಚ್ಚುವ ಬುಚ್ಚರ್ ಗಳ ಅಂಗಡಿಯ ಅಕ್ಕ-ಪಕ್ಕದಲ್ಲಿ ವಾಸಿಸುವ ನಾಯಿಗಳಿಗೆ ಅದೇ ಊಟ. ಕೆಲವು ಜನ ಅಂತಹ ವೇಸ್ಟ್ ಕೊಂಡೊಯ್ದು ದೂರದಲ್ಲಿರುವ ಬೀದಿನಾಯಿಗಳಿಗೆ ಹಾಕುತ್ತಾರೆ. ಯಾವಾಗ ಆಹಾರ ಸಿಕ್ಕದೇ ಹಸಿವಾಗುತ್ತದೋ ಆಗ ಆ ನಾಯಿಗಳು ಯಾರಾದರೇನಂತೆ ಎಂದು ಮಾಂಸವನ್ನು ಹುಡುಕುತ್ತವೆ; ಮಕ್ಕಳು-ದೊಡ್ಡವರು ಯಾರೇ ಸಿಕ್ಕರೂ ಬಿಡದೇ ಅಟ್ಟಿಸಿಹೋಗಿ ಕಚ್ಚಿ ಸಾಯಿಸಿ ತಿನ್ನಲು ಮುಂದಾಗುತ್ತವೆ. ಅದು ಮಾಂಸದ ರುಚಿಕಂಡ ಮತ್ತು ಸದಾ ಅದನ್ನೇ ಉಂಡ ಕೆಲವು ನಾಯಿಗಳ ರಿವಾಜು ಮಾತ್ರ! ಸಹಜಗತಿಯಲ್ಲಿ ಅಲ್ಲಿಲ್ಲಿ ಸಿಕ್ಕಿದ್ದನ್ನುಂಡು ಬೆಳೆವ ಬೀದಿನಾಯಿಗಳು ಹಾಗೆ ಕಂಡವರ ಮೇಲೆ ಹಾಯುವ/ಹರಿಯುವ ಗೋಜಿಗೆ ಹೋಗುವುದಿಲ್ಲ. ಕಾಮಿಸ್ವಾಮಿಯೊಬ್ಬನಿಂದ ಕಾವಿಕುಲಕ್ಕೇ ಅವಮಾನವಾದಹಾಗೇ ಕೆಲವೇ ಕೆಲವು ಮಾಂಸಾಹಾರಿ ನಾಯಿಗಳಿಂದ ಇಡೀ ಬೀದಿನಾಯಿ ಸಂಕುಲ ಒಂದೇ ಹೆಸರಿನಡಿ ಗುರುತಿಸಲ್ಪಟ್ಟಿತು. ಕಾರ್ಪೋರೇಷನ್ ನಿಂದ ಸಂತಾನಹರಣ ಚಿಕಿತ್ಸಾ ಅಭಿಯಾನ ನಡೆಸಲ್ಪಟ್ಟಿತು. ಗಾಡಿಗಳಲ್ಲಿ ಹಿಡಿದೊಯ್ದು ನೇರವಾಗಿ ಮಣ್ಣುಮಾಡುವ ಹಿಂಸಾತ್ಮಕ ಕೃತ್ಯಗಳೂ ನಡೆದವು. ಹುಲಿ-ಸಿಂಹ-ಕತ್ತೆಕಿರುಬಗಳ ಧಾಮಕ್ಕೆ ಆಹಾರವಾಗಿ ಬಿಡುವ ಮಟ್ಟಕ್ಕೂ ಬೆಳೆಯಿತು. ಆದರೂ ಕಾರ್ಪೋರೇಷನ್ ಗಾಡಿ ಬಂದಾಗ ಮೋರಿಗಳಲ್ಲಿ ಅಡಗಿ ತಪ್ಪಿಸಿಕೊಳ್ಳುವ ಪ್ರಯತ್ನ ಬೀದಿ ನಾಯಿಗಳದ್ದು. ಬಂದವರು ಆ ಪ್ರದೇಶದಲ್ಲೆಲ್ಲೂ ಬೀದಿ ನಾಯಿಗಳೇ ಇಲ್ಲವೇನೋ ಎಂದುಕೊಳ್ಳುವಷ್ಟು ಸೈಲೆಂಟ್ ಆಗಿ ಮಲಗಿಬಿಡುವ ಬುದ್ಧಿತೋರಿಸುತ್ತವೆ ಈ ನಾಯಿಗಳು. ಒಂದು ನಾಯಿಗೆ ದೂರದಿಂದಲೇ ನಗರಪಾಲಿಕೆಯ ಗಾಡಿಯ ಸುಳಿವು ಸಿಕ್ಕರೆ ಸಾಕು, ಅವುಗಳ ನಡುವಿನ ನಿತ್ಯದ ವೈಷಮ್ಯಗಳೆಲ್ಲಾ ಮಾಯವಾಗಿ ಉಳಿವಿಗಾಗಿ ಅವು ಮಾಡುವ ಜಾದೂ ವಿದ್ಯೆಯನ್ನೂ ಕಂಡಿದ್ದೇನೆ. ಬೀದಿ ಅಲೆಯುವ ಬೀಡಾಡಿ ನಾಯಿಗೂ ಕೂಡ ಒಂದು ನಿಷ್ಠೆ ಇದೆ; ಅದಕ್ಕೆ ಆಹಾರ ಹಾಕಿದವರನ್ನು ಗೌರವಿಸುವ ಮತ್ತು ಅವರ ಆಜ್ಞೆಗಳನ್ನು ಪಾಲಿಸುವ ವಿಧೇಯತೆ ಇದೆ-ಇದು ಇಲ್ಲದಿರುವುದು ಮನುಷ್ಯರಲ್ಲಿ ಮಾತ್ರ!       

ಶರೀರದಲ್ಲಿ ಪ್ರತಿಯೊಂದು ಅಂಗವೂ ಮುಖ್ಯ, ಯಾವುದೂ ನಗಣ್ಯವಲ್ಲ; ಅಂತೆಯೇ ಪರಿಸರದಲ್ಲಿ ಎಲ್ಲಾ ಜೀವಿಯೂ ಮುಖ್ಯ. ನಾಯಿಯೆಂದು ಕೇವಲವಾಗಿ ಕಾಣುವ ನಮಗೆ ಅವುಗಳ ಅನಿವಾರ್ಯತೆ ತಿಳಿಯುವುದು ಆ ಜಾಗ ಖುಲ್ಲಾ ಹೊಡೆದಾಗ ಮಾತ್ರ. ಹಾಗಂತ ನಾಯಿ ನಾಯಿಯ ಕೆಲಸವನ್ನು ಮಾಡಬೇಕೇ ಹೊರತು ನಾಯಿಯ ಸೇವೆಯನ್ನೇ ದೊಡ್ಡ ಕೈಂಕರ್ಯವನ್ನಾಗಿಸಿಕೊಳ್ಳುವುದು ಸ್ವಲ್ಪ ಅತಿ ಎನಿಸುತ್ತದೆ; ಕೆಲವೊಮ್ಮೆ ಹಾಸ್ಯಾಸ್ಪದವೂ ಆಗಿಬಿಡುತ್ತದೆ. ಉಗುರಿನ ಬಗ್ಗೆ ಆರಂಭಿಸಿದೆ, ಎಡಗೈ ಬೆರಳಿನ ಉಗುರು ಎಂದರೆ ಜಾಸ್ತಿ ಮಹತ್ವ ಕೊಡುವ ಜಾಯಮಾನ ನಮ್ಮದಲ್ಲ; ಆದರೆ ಯಾವುದೋ ಸಮಯದಲ್ಲಿ ಅದರ ಅನಿವಾರ್ಯತೆ ಕೂಡ ಇದೆ ಎಂಬುದು ಗಮನಕ್ಕೆ ಬರುತ್ತದಲ್ಲ! ’ಉಗುರಿನಿಂದ ಹೋಗುತ್ತಿದ್ದುದಕ್ಕೆ ಕೊಡಲಿ ಎತ್ತಿಕೊಂಡರು’ ಎಂಬ ನಾಣ್ನುಡಿ ಕೂಡ ಇದೆಯಲ್ಲಾ ಉಗುರಿನಿಂದಲೂ ಕೆಲವು ಕೆಲಸ ಸಾಧ್ಯ ಎಂಬುದಕ್ಕೆ ಇದೇ ಆಧಾರ ಸಾಕು ಅಲ್ಲವೇ? ಉಗುರಿನ ಹೆಳೆ[ನೆಪ]ಯಲ್ಲಿ ನಾಯಿಯ ಬೆಳೆ[ಅಥವಾ ಬೆಲೆ!] ಕಂಡಿರಿ ಅಲ್ಲವೇ? ಈಗ ನಿಮಗೂ ನನ್ನ ಹೊಸಗಾದೆಯ ಅರ್ಥ ಸಮರ್ಪಕವಾಗಿ ಆಗಿರಲಿಕ್ಕೇಬೇಕು ಎಂಬುದು ನನ್ನ ಈ ಹಂತದ ಅನಿಸಿಕೆ.