ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 28, 2013

ಓಲೆ-ನತ್ತನ್ನು ಬಿಟ್ಟು ಬಾಕಿ ಎಲ್ಲ ಆಭರಣವನ್ನೂ ದಾನಮಾಡಿದ ಗೌರಮ್ಮ ಮತ್ತೆ ಮತ್ತೆ ಎದುರಾಗುತ್ತಾಳೆ!

 ಚಿತ್ರಋಣ: ಅಂತರ್ಜಾಲ 
ಓಲೆ-ನತ್ತನ್ನು ಬಿಟ್ಟು ಬಾಕಿ ಎಲ್ಲ ಆಭರಣವನ್ನೂ ದಾನಮಾಡಿದ ಗೌರಮ್ಮ ಮತ್ತೆ ಮತ್ತೆ ಎದುರಾಗುತ್ತಾಳೆ! 

ವೈದ್ಯರೆದುರೇ ಮನು ಸತ್ತಾಗ ಆತನಿಗಾಗಿ ಬಹಳವಾಗಿ ಅತ್ತವಳು ರಾಜಮ್ಮ. ಆ ಕ್ಷಣದಲ್ಲಿ ರಾಜಮ್ಮನಿಗೂ ಮನುವಿಗೂ ಅಂಥಾದ್ದೇನು ಸಂಬಂಧವೆಂಬುದು ವೈದ್ಯರಿಗೂ ಅರಿಯದು! ರಾತ್ರಿ ಊಟದಹೊತ್ತು, ಸುಬ್ಬು ತಂದ ಕರೆಯನ್ನು ತಿರಸ್ಕರಿಸಿ, "ಬೆಳಿಗ್ಗೆ ಬರ್ತೀನಿಂತ ಹೇಳು" ಎಂದಿದ್ದ ವೈದ್ಯರು, ಸುಬ್ಬು ಮತ್ತೆ ತಡರಾತ್ರಿ ಬಂದು ಕರೆದಾಗ ರಾಜಮ್ಮನ ಮನೆಗೆ ಚಿಕಿತ್ಸೆಗೆ ನಡೆದುಹೋದವರು. ಆ ನಡುರಾತ್ರಿಯಲ್ಲಿ, ಸತ್ತವನ ದೇಹವನ್ನು ಬಿಟ್ಟು ಆ ಮನೆಯಲ್ಲಿ ಇದ್ದುದು ರಾಜಮ್ಮಳೊಬ್ಬಳೇ. ಅದನ್ನೇ ಗಮನಿಸಿದ ವೈದ್ಯರು ಏಕಾಂಗಿಯಾಗಿರುವ ರಾಜಮ್ಮ ಎಲ್ಲಿ ಹೆದರಿಕೊಂಡಾಳು ಎಂಬ ಮಾನವೀಯತೆಯಿಂದ ಬೆಳಗಾಗುವವರೆಗೂ ಅಲ್ಲೇ ಇದ್ದು ಮರಳುತ್ತಾರೆ. ವಾರದ ತರುವಾಯ ವೈದ್ಯರ ಹೆಸರಿಗೆ ರಾಜಮ್ಮನಿಂದ ಬಂದ ಅಂಚೆ ರಾಜಮ್ಮ-ಮನುವಿನ ಕಥೆಯನ್ನು ಬಿಚ್ಚಿಡುತ್ತದೆ! ವೇಶ್ಯೆಯ ಮಗಳಾಗಿ ತಾನು ಜನಿಸಿದ್ದು, ತಾಯಿಗಿದ್ದ ಹಣದ ವ್ಯಾಮೋಹ, "ಯಾರಿಗೂ ಹೃದಯದಲ್ಲಿಸ್ಥಾನಕೊಡಬೇಡ"ವೆಂದು ಬೋಧಿಸಿದ ತಾಯಿ, ಹರೆಯಕ್ಕೆ ಬಂದಾಗ ತನ್ನ ರೂಪಕ್ಕೆ ಮನಸೋತು ತಾಯಿಯಲ್ಲಿ ಪ್ರಸ್ತಾವಿಸಿದ ಸಿರಿವಂತರು, ಅವರಲ್ಲಿ ತನ್ನನ್ನು ಬಹುವಾಗಿ ಆಕರ್ಷಿಸಿದ ಸಿರಿವಂತರ ಮನೆಯ ಯುವಕ ಮನು, ಆತನ ಸಂಪತ್ತನ್ನೆಲ್ಲಾ ಆತ ತನಗಾಗಿ ಸುರಿದಿದ್ದು, ಆತನಿಗೆ ತನ್ನ ಹೃದಯವನ್ನು ತಾನು ಕೊಟ್ಟಿದ್ದು, ಇಬ್ಬರೂ ಪರಸ್ಪರ ಪ್ರೀತಿಸಿದ್ದು, ನಿತ್ಯವೂ ಆತ ಬಂದು ತನ್ನೊಡನೆ ಇರುತ್ತಿದ್ದುದು, ತಮ್ಮನ್ನು ಬೇರ್ಪಡಿಸಲು ತಾಯಿ ಹೇಳಿದ ಸುಳ್ಳು, ಆ ಸುಳ್ಳಿನಿಂದ ಅರೆಹುಚ್ಚನಾದ ಮನು, ಆತನನ್ನು ಹುಡುಕಿ ತೆರಳಿ ಅವನ ಸ್ಥಿತಿಗೆ ಮರುಗಿ, ಅವನೊಟ್ಟಿಗೆ ಊರು ತೊರೆದು ಯಾರಿಗೂ ಹೇಳದೇ ಈ ಊರಿಗೆ ಬಂದು ಕಳೆದಮೂರು ವರ್ಷಗಳಿಂದ ಬದುಕು ನಡೆಸಿದ್ದ ತನ್ನ ಪರಿ, ನೂರಕ್ಕೆ ನೂರು ಮೊದಲಿಂತಾಗದ ಮನುವಿನ ಬಗ್ಗೆ ತನಗಿದ್ದ ನೋವು-ತುಡಿತ ಮತ್ತು ಅವನ ಅಕಾಲಿಕ ಸಾವು, ’ಮನುಷ್ಯರೆನಿಸಿ’ ಪರಿಚಿತರಾಗಿದ್ದು ಸುಬ್ಬು ಎಂಬ ಬಾಲಕ ಮತ್ತು ವೈದ್ಯರು ಮಾತ್ರ --ಎಂಬೀ ಎಲ್ಲದರ ಚಿತ್ರಣವನ್ನು ನೋಡುವಾಗ ವೇಶ್ಯೆಯ ಮಗಳು ಅನಿವಾರ್ಯವಾಗಿ ವೇಶ್ಯೆಯೆಂದು ಗುರುತಿಸಲ್ಪಟ್ಟರೂ, ಅವಳಲ್ಲಿಯೂ ಇರಬಹುದಾದ ಮಾನವೀಯ ಆಂತರ್ಯ, ಅಲ್ಲದೇ, ಗೊಂದಲಗಳ ನಡುವೆಯೂ ಕರ್ತವ್ಯದ ಕರೆಗೆ ಓಗೊಟ್ಟ ವೈದ್ಯ ಆಕೆಯ ಕಾಗದ ತಲ್ಪಿದ ಮರುದಿನ ಸಪತ್ನೀಕನಾಗಿ ಆಕೆಯನ್ನು ಕಾಣಲು ಹೋಗುವುದು-- ಈ ಎಲ್ಲ ಅಂಶಗಳು ಕಥೆಯನ್ನು ಜೀವಂತವಾಗಿಸುತ್ತವೆ. ಚಿಕ್ಕ ಕಥೆಯೊಂದು ಕಾದಂಬರಿಗಿಂತ ಹೆಚ್ಚಿನ ಗಾಢ ಪರಿಣಾಮ ಬೀರುತ್ತದೆ. ಓದುತ್ತಿದ್ದಂತೆಯೇ ದೃಶ್ಯಗಳು ಕಣ್ಣಮುಂದೆ ಹಾದುಹೋದಾಗ ಸಿನಿಮಾ ನೋಡಿದಷ್ಟೇ ತೃಪ್ತಿ ಓದುಗರಿಗಾಗುತ್ತದೆ. ಈ ಕಥೆಯ ಹೆಸರು 'ಮನುವಿನ ರಾಣಿ'. 

ಪುರಾತನ ಜೀವನಕ್ರಮವನ್ನು ತೊರೆದು ಅಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದ, ೨೦ನೇ ಶತಮಾನದ ಮೂವತ್ತರ ದಶಕದಲ್ಲಿ, ಜನಜೀವನ ಹೇಗಿತ್ತೆಂಬುದನ್ನು ಕಥೆಗಳಲ್ಲಿ ಪರೋಕ್ಷವಾಗಿ ಹೇಳುತ್ತಾ, ಅಂದಿನ ಸಮಾಜದಲ್ಲಿ ಹೆಣ್ಣಿನ ಜೀವನ ಯಾವೆಲ್ಲಾ ರೀತಿಯಲ್ಲಿ ಇರಬಹುದಿತ್ತು ಎಬುದಕ್ಕೆ ಒತ್ತುಗೊಡುತ್ತಾ, ಕಾದಂಬರಿಯ ಜಾಡಿನಲ್ಲಿ ಸಾಗುವ ಕಥೆಗಳು, ಮಧ್ಯದಲ್ಲೆಲ್ಲೋ ತಿರುವು ಪಡೆದು ಅಡ್ಡಡ್ಡ ಸಾಗಿ ಮತ್ತೆ ಬಂದು ಮುಖ್ಯಹಾದಿಯನ್ನು ಸೇರಿಕೊಳ್ಳುವುದು ಗೌರಮ್ಮನ ಕಥೆಗಾರಿಕೆಯಲ್ಲಿನ ವೈಶಿಷ್ಟ್ಯ; ಸಂಭಾಷಣೆಗಳಲ್ಲಿನ ಬಿಸುಪು ಕಥೆಗಳನ್ನು ಓದುಗರು ಇನ್ನಷ್ಟು ಮೆಚ್ಚುವಂತೇ ಮಾಡುತ್ತವೆ. ಎಳೆಯ ವಿಧವೆಯೊಬ್ಬಳು ತನ್ನನ್ನು ಮದುವೆಯಾಗಲು ತುದಿಗಾಲಲ್ಲಿ ತಹತಹಿಸಿ ನಿಂತ ವಿಧುರನಿಗೇ ಮರ್ಮಾಘಾತವಾಗುವ ಪ್ರಶ್ನೆ ಎಸೆದು ದಿಗಿಲು ಹುಟ್ಟಿಸಿ ಬಾಯಿಮುಚ್ಚಿಸಿದ್ದು ’ಪುನರ್ವಿವಾಹ’ದಲ್ಲಿದ್ದರೆ, ಇನ್ನೋರ್ವ ಹೆಣ್ಣಿನ ಕುಟುಂಬದಲ್ಲಿ ಒಡಕುಮೂಡಬಾರದೆಂಬ ವಿವೇಕದಿಂದ-ತನ್ನ ಜೀವೋತ್ಕರ್ಷದ ಆಯ್ಕೆಯನ್ನೇ ಹಿಂದಕ್ಕೆ ಜರುಗಿಸಿಕೊಂಡ ವಾಣಿಯ ಪಾತ್ರ-’ವಾಣಿಯ ಸಮಸ್ಯೆ’ಯಲ್ಲಿನ ಅತ್ಯಪೂರ್ವ ಚಿತ್ರಣ. ಪ್ರತಿಯೊಂದೂ ಕಥೆಯಲ್ಲಿ ಸಹಜಗತಿ, ನಿರ್ಭೀತ ನಡೆ, ಹೊಸತನವನ್ನು ಸ್ವೀಕರಿಸುತ್ತಾ ಹಳೆಯ ಮೌಢ್ಯಗಳನ್ನು ಪಕ್ಕಕ್ಕೆ ಸರಿಸಿ ನಿಲ್ಲುವ ಹೆಣ್ಣಿನ ಪಾತ್ರಗಳು, ಜೀವ-ಭಾವಗಳ ತಾಕಲಾಟ, ತರ್ಕ, ಅಂದಿನ ಸಾಮಾಜಿಕ ವಿದ್ಯಮಾನ ಇವೆಲ್ಲವನ್ನೂ ಮೇಳೈಸಿ ಕಟ್ಟಿಕೊಟ್ಟ ಶೈಲಿ, ಗೌರಮ್ಮನನ್ನು ಉತ್ತಮ ಕಥೆಗಾರ್ತಿ ಎನ್ನಿಸಿವೆ. ಕಥೆಗಳಲ್ಲಿ ಇರುವ ಬಹುತೇಕ  ಮಹಿಳಾ ಪಾತ್ರಗಳು ಹದಿಹರೆಯದವೇ ಆಗಿದ್ದು, ಹದಿಹರೆಯದಲ್ಲಿನ, ವಯೋಸಹಜ ಸಡಗರ, ಜೀವನೋತ್ಸಾಹ, ಮೋಜು-ಮಸ್ತಿ, ತಮಾಷೆ, ಪ್ರೀತಿ-ಪ್ರೇಮ ಎಲ್ಲವೂ ಸಹಿತ ಓದುಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ.

ಬರೆದ ಎಲ್ಲಾ ಕಥೆಗಳೂ ಒಂದಕ್ಕಿಂತ ಒಂದು ವಸ್ತು-ವಿಷಯದಲ್ಲೂ ಭಿನ್ನವಾಗಿವೆ. ಪೌರಾಣಿಕ ಕಥೆಗಳಷ್ಟೆ ಪ್ರಾಮುಖ್ಯತೆ ಪಡೆದಿದ್ದ ಆ ಕಾಲಘಟ್ಟದಲ್ಲಿ, ಕನ್ನಡದಲ್ಲಿ ಬರಹಗಾರ್ತಿಯರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು ಎನ್ನಬಹುದು. ಶ್ಯಾಮಲಾ ಬೆಳಗಾಂವ್ಕರ್, ಸರಸ್ವತೀಬಾಯಿ ರಾಜವಾಡೆ ಮತ್ತು ಕೊಡಗಿನ ಗೌರಮ್ಮ ಎಂಬೀ ಮೂವರು ಮಾತ್ರ ಬರಹಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ’ರಾಷ್ಟ್ರಬಂಧು’, ’ಜಯಕರ್ನಾಟಕ’, ’ಜಯಂತಿ’, ’ಪ್ರಜಾಮತ’, ’ಕೇಸರಿ’, ’ಕಥಾವಳಿ’ ಮತ್ತು ’ಜೀವನ’ ಮೊದಲಾದ ಪತ್ರಿಕೆಗಳಲ್ಲಿ ಇವರೆಲ್ಲರ ಬರಹಗಳು ಅದರಲ್ಲೂ ಹೆಚ್ಚಾಗಿ ಕಥೆಗಳು ಪ್ರಕಟಗೊಳ್ಳುತ್ತಿದ್ದವು. ವಿಷಯಗಳು ಹೇರಳವಾಗಿದ್ದರೂ ಅಭಿವ್ಯಕ್ತಗೊಳಿಸುವಲ್ಲಿ ಅನೇಕ ಮಹಿಳೆಯರು ಸಫಲರಾಗಿರಲಿಲ್ಲ; ಕೆಲವರಿಗೆ ಅಷ್ಟೊಂದು ಧೈರ್ಯವೂ ಇರಲಿಲ್ಲ; ಇನ್ನು ಕೆಲವರಿಗೆ ಆ ಆರ್ಥಿಕ, ಕೌಟುಂಬಿಕ ಅನುಕೂಲವಿರಲಿಲ್ಲ. ಆ ವಿಷಯದಲ್ಲಿ ಗೌರಮ್ಮ ನಿಜಕ್ಕೂ ಭಾಗ್ಯವಂತೆಯೇ ಸರಿ. ಮಡಿಕೇರಿಯಲ್ಲಿ ಆ ಕಾಲದಲ್ಲಿ ಹೆಸರುವಾಸಿ ವಕೀಲರಾಗಿದ್ದ ಎನ್.ಎಸ್. ರಾಮಯ್ಯ ಮತ್ತು ಅವರ ಪತ್ನಿ ನಂಜಕ್ಕನ ಮಗಳಾಗಿ ೧೯೧೨ ರ ಮಾರ್ಚ್ ೫ ರಂದು ಜನಿಸಿದವರೇ ಕೊಡಗಿನ ಗೌರಮ್ಮ. ಬಾಲ್ಯದಲ್ಲಿಯೇ ತಾಯಿ ಗತಿಸಿಹೋದರೂ ತಂದೆಯೇ ಆಕೆಗೆ ತಂದೆ-ತಾಯಿ ಎರಡೂ ಆಗಿ ಬೆಳೆಸಿದರು. ಅಮ್ಮನ ಪ್ರೀತಿಯನ್ನು ಜಾಸ್ತಿ ಪಡೆಯಲಾಗದಿದ್ದರೂ, ಆಗಿನ ಮನೆತನದ ಬದುಕಿನ ಬಿಗಿವಾತಾವರಣವೂ ಗೌರಮ್ಮನನ್ನು ತೀರಾ ಬಿಗಿಯಾಗಿ ಅಪ್ಪಲಿಲ್ಲ ಎಂಬುದು ವೇದ್ಯ. ಹೀಗಾಗಿ ಚಿಕ್ಕಂದಿನಲ್ಲೇ ಅವರಿವರೊಟ್ಟಿಗೆ ವ್ಯವಹರಿಸುತ್ತಾ ಬೆಳೆಯಬೇಕಾದ ಅನಿವಾರ್ಯತೆ, ಅವರ ವ್ಯಕ್ತಿತ್ವ ವಿಕಸನಕ್ಕೊಂದು ಅವಕಾಶ ಕಲ್ಪಿಸಿತು. ೧೩ನೇ ವಯಸ್ಸಿಗೇ ಅಂದರೆ ೧೯೨೫ ರಲ್ಲೇ, ತಮ್ಮ ಸಂಬಂಧಿಕರೇ ಆದ ಶುಂಠಿಕೊಪ್ಪದ ಬಿ.ಟಿ.ಗೋಪಾಲಕೃಷ್ಣಯ್ಯನವರನ್ನು ವಿವಾಹವಾದ ಗೌರಮ್ಮ, ನಂತರ ತಮ್ಮ ಬರಹಗಳಲ್ಲಿ, ವ್ಯವಹಾರಗಳಲ್ಲಿ ಶ್ರೀಮತಿ ಬಿ.ಟಿ.ಜಿ.ಕೃಷ್ಣ ಎಂದೇ ಗುರುತಿಸಿಕೊಂಡರು. ಪತ್ನಿಯ ವ್ಯಕ್ತಿತ್ವವನ್ನು ಗೌರವದಿಂದ ಕಾಣುವ ಗಂಡಂದಿರು ಆ ಕಾಲಘಟ್ಟದಲ್ಲಿ ಸ್ವಲ್ಪ ಕಮ್ಮಿಯೇ ಎನ್ನಬೇಕು. ಏನಿದ್ದರೂ ಪತಿಯ ನೆರಳಾಗಿ ಹಿಂಬಾಲಿಸಿಕೊಂಡು ಗಂಡ ಹೇಳಿದ್ದನ್ನು ಕಣ್ಮುಚ್ಚಿ ಪಾಲಿಸಿಕೊಂಡು ಹೋಗುವ ಗರತಿಯರ ಕಾಲ, ಗಂಡಂದಿರೆನಿಸಿಕೊಂಡವರು ಅಹಮಿಕೆ ಮೆರೆದ ಕಾಲ ಅದಾಗಿತ್ತು! ಆದರೂ ಬಿ.ಟಿ. ಗೋಪಾಲಕೃಷ್ಣಯ್ಯ ಮಾತ್ರ ಗೌರಮ್ಮನನ್ನು ಆ ರೀತಿ ನಡೆಸಿಕೊಳ್ಳಲಿಲ್ಲ; ಗೌರಮ್ಮ ಸ್ವತಂತ್ರವಾಗಿ ಬದುಕುತ್ತಾ, ಮನೆವಾರ್ತೆಯೊಟ್ಟಿಗೆ ಸಾಮಾಜಿಕ, ರಾಜಕೀಯ, ಕೌಟುಂಬಿಕ ಮತ್ತು ಸಾಹಿತ್ಯಕ  ಹೀಗೇ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವಲ್ಲಿ ಇದು ವರದಾನವಾಯ್ತು.        

ಯಾವಕಾಲದಲ್ಲಿ ಹೆಂಗಸರು ಒಳಮನೆಯಿಂದ ಹೊರಗೆ ಗಂಡಸರೆದುರು ನಿಂತೋ ಕುಳಿತೋ ಮಾತನಾಡಲು ಹಿಂಜರಿಯುತ್ತಿದ್ದರೋ ಅದೇ ಕಾಲದಲ್ಲಿ ಗೌರಮ್ಮ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡರು. ಪ್ರತಿನಿತ್ಯ ಟೆನಿಸ್ ಆಡುವುದು ಮತ್ತು ಈಜುವುದು ಅವರ ಹವ್ಯಾಸವಾಗಿತ್ತು. ಕನ್ನಡದ ಹಿರಿಯ ಕವಿಗಳಾದ ಬೇಂದ್ರೆ, ಪು.ತಿ.ನ. ಬಿ.ಎಂ.ಶ್ರೀ, ಮಾಸ್ತಿ, ರಾಜರತ್ನಂ ಇಂಥವರ ಬರಹಗಳನ್ನೆಲ್ಲಾ ಗೌರಮ್ಮ ಓದುತ್ತಿದ್ದರು. ಓದುತ್ತಾ ಓದುತ್ತಾ ಅವರೊಳಗೇ ಒಬ್ಬ ಕಥೆಗಾರ್ತಿ ಜನಿಸಿದ್ದಳು. ಸಾಮಾಜಿಕ ಶೋಷಣೆ ಮತ್ತು ಮೌಢ್ಯಗಳ ವಿರುದ್ಧ ಆ ಕಥೆಗಾರ್ತಿ ಸದಾ ಬರೆಯತೊಡಗಿದ್ದಳು! ೧೯೩೧ ರಲ್ಲಿ ಪುತ್ರೋತ್ಸವವೂ ಆಗಿ, ಮಗನಿಗೆ ’ವಸಂತ’ ಎಂದು ಹೆಸರಿಟ್ಟಿದ್ದರು. ಸಮೃದ್ಧ ಕುಟುಂಬದ ನೆಮ್ಮದಿಯ ಜೀವನ ಅವರದಾಗಿದ್ದರೂ, ತಾಯಿಯಿಲ್ಲದ ಕೊರಗು ಮಾತ್ರ ಅವರನ್ನು ಸದಾ ಬಾಧಿಸುತ್ತಲೇ ಇತ್ತು. ಮಗನಿಗೆ ಮಾತ್ರ ಆ ನೋವು ತಟ್ಟದಿರಲಿ ಎಂದು ಅವರು ಬಯಸಿದ್ದರು. ಸಮಾಜಮುಖಿ-ಬರಹಗಾರ್ತಿಯಾದ ಅವರಿಗೆ ಸ್ನೇಹಿತರ ವಿಶಾಲ ಬಳವೂ ಇತ್ತು. ಗಾಯಕಿಯಾಗಿದ್ದ ಶಕುಂತಲಾಚಾರ್, ಲೇಖಕಿಯರಾದ ಆರ್. ಕಲ್ಯಾಣಮ್ಮ, ಪದ್ಮಾವತಿ ರಸ್ತಗಿ ಮೊದಲಾದವರು ಅವರ ಸ್ನೇಹಿತರಾಗಿದ್ದು, ಮಾಸ್ತಿ, ಬೇಂದ್ರೆ, ರಾಜರತ್ನಂ ಇವರೆಲ್ಲಾ ’ಮನೆಜನ’ ಎಂಬಷ್ಟು ಬಳಕೆಯಲ್ಲಿದ್ದವರು. ಗೆಳೆಯರಲ್ಲಿ ಬಬ್ಬರಾದ ದ.ಬಾ.ಕುಲಕರ್ಣಿಯವರ ತಾಯಿಯೇ ತನ್ನ ತಾಯಿ ಎಂದು ತಿಳಿದುಕೊಂಡ ಗೌರಮ್ಮ, ಒಂದು ವರ್ಷ, ತುಲಾಸಂಕ್ರಮಣದ ಸಂದರ್ಭದಲ್ಲಿ, ಕಾವೇರಿಯ ತೀರ್ಥೋದ್ಭವದ ಹಬ್ಬಕ್ಕೆ ಬರುವಂತೇ ಅವರಿಗೆ ಕಾಗದ ಬರೆದಿದ್ದರು. ’ತಾಯಿಗೆ ಮಗಳಮನೆಗೆ ಬರಬೇಕೆಂಬ ಹಠವಿದ್ದರೂ ಅನಾರೋಗ್ಯದಿಂದ ಬರಲಾಗುತ್ತಿಲ್ಲ’ ಎಂಬ ಉತ್ತರ ದ.ಬಾ.ಕುಲಕರ್ಣಿಯರಿಂದ ಬಂದು ತಲ್ಪಿದಾಗ, "ಕಣ್ಣೆರಡೂ ಮಂಜಾಗಿ ಹೃದಯ ತುಂಬಿಬಂತು" ಎಂದು ಮತ್ತೆ ಮರಳಿ ಕಾಗದ ಬರೆದಿದ್ದರು. ಮಡಿಕೇರಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಗೌರಮ್ಮ ಹಿಂದೀ ವಿಶಾರದೆಯೂ ಆಗಿದ್ದರು. ಆಂಗ್ಲ ಭಾಷೆಯ ಬಳಕೆಯೂ ಇದ್ದು ಆಂಗ್ಲ ಸಾಹಿತ್ಯವನ್ನೂ ಸಾಕಷ್ಟು ಓದಿಕೊಂಡಿದ್ದರು. ಕುಟುಂಬದ ಹಿರಿಯರು ಅಂದಿನ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಸಕ್ರಿಯ ಸದಸ್ಯರಾಗಿ ಪಾಲ್ಗೊಂಡಿದ್ದರ ಪರಿಣಾಮ, ಗೌರಮ್ಮ ರಾಜಕೀಯದಲ್ಲೂ ಆಸಕ್ತರಾಗಿದ್ದರು. ಇದು ಗೌರಮ್ಮನ ಕೌಟುಂಬಕ, ವ್ಯಾವಹಾರಿಕ, ಸಮಾಜಿಕ ಹಿನ್ನೆಲೆ.

ಕೊಡಗಿನ ಬರಹಗಾರರಿಗೆ ಅವರದ್ದೇ ಆದ ಲೋಕದಲ್ಲಿ ವಿಹರಿಸುತ್ತಾ ಬರೆದುಕೊಳ್ಳುವ ನೈಸರ್ಗಿಕ ವಾತಾವರಣ ಆಗ ಹೆಚ್ಚಿನದಾಗಿ ಇತ್ತು ಈಗಲೂ ಹಾಗೆ ಕೆಲಮಟ್ಟಿಗೆ ಇದೆ. ಅಲ್ಲಿನ ಬೆಳಗು, ಅಲ್ಲಿನ ಮಳೆಗಾಲದ ಮುಸಲಧಾರೆ-ಚಳಿಗಾಲದ ಬಿಟ್ಟೂಬಿಡದ ಚಳಿ-ಇಬ್ಬನಿಸುರಿಸುವ ಮಂಜುಮುಸುಕಿದ ವಾತಾವರಣ, ಅಲ್ಲಿನ ಕಾಫೀ ತೋಟ-ಕೆಲಸದ ಸುಗ್ಗಿ-ಕೂಲಿಯಾಳುಗಳಲ್ಲಿನ ಪ್ರೇಮ ಕಥೆಗಳು, ವಿವಿಧ ತೆರನಾದ ಹೂವುಗಳು, ಜೇನು-ದುಂಬಿ-ಕೀಟ ವೈಭವಗಳು, ವನ್ಯಮೃಗಗಳ ಅಟ್ಟಹಾಸಗಳು, ಸೂರ್ಯೋದಯ-ಸೂರ್ಯಾಸ್ತಗಳು, ನಿರ್ಜರ ಜಲಪಾತಗಳು, ಹುಟ್ಟಿ ಹರಿವ ಹಲವು ತೊರೆಗಳು, ನಿತ್ಯಹರಿದ್ವರ್ಣ ಕಾಡುಗಳ ಜೊತೆಜೊತೆಗೇ ಹಸಿರುಟ್ಟ ಗದ್ದೆ-ತೋಟ-ಸಾಗುವಳಿಮಾಡಿದ ಭೂಭಾಗಗಳು...ಹೀಗೇ ಅಲ್ಲಿನ ದೃಶ್ಯ ವೈವಿಧ್ಯ, ಅಲ್ಲಿನ ವರ್ಣ ವೈವಿಧ್ಯ ನಯನಾನಂದಕರ ಮತ್ತು ಮನೋಲ್ಲಾಸಕರ. ಅಂತಹ ಯಾವೊಂದೂ ವಿಷಯವಸ್ತುವನ್ನು ಆದಿಯಲ್ಲಿ ನೆಚ್ಚಿಕೊಳ್ಳದೇ ತೀರಾ ಬೇರೆಯದೇ ಆದ ಆಯಾಮದಲ್ಲಿ ಬರವಣಿಗೆಗೆ ತೊಡಗಿದ್ದು ನಿಜಕ್ಕೂ ಅಚ್ಚರಿ ಮೂಡಿಸುವಂತಹ ವಿಷಯ. ಇಷ್ಟೇ ಅಲ್ಲ, ನಮ್ಮ ಗೌರಮ್ಮ ಸ್ವಲ್ಪ ಹಠಮಾರಿ ಕೂಡಾ; ಅಂದುಕೊಂಡಿದ್ದು ಆಗಲೇಬೇಕೆಂಬ ಜಾಯಮಾನ ಅವರದ್ದು; ತನ್ನ ನಿರ್ಧಾರದಲ್ಲಿ ತಪ್ಪಿರಲು ಸಾಧ್ಯವಿಲ್ಲಾ ಎಂಬ ದಾರ್ಷ್ಟ್ಯವೂ ಅವರಲ್ಲಿತ್ತು! ಕೊಡಗಿಗೆ ಗಾಂಧೀಜಿ ಬಂದಾಗ ವ್ಯವಸ್ಥಾಪಕರು ಅವರನ್ನು ಗುಂಡುಕುಟ್ಟಿಯಲ್ಲಿ, ಗೌರಮ್ಮನ ಮನೆಯ ಪಕ್ಕದ ಮನೆಯಲ್ಲೇ ಉಳಿದುಕೊಳ್ಳುವಂತೇ ಏರ್ಪಾಟುಮಾಡಿದ್ದು ಗೌರಮ್ಮನಿಗೂ ಗೊತ್ತಾಗಿಬಿಟ್ಟಿತ್ತು. ಗಾಂಧೀಜಿಯ ಪಾದಧೂಳಿ ತಮ್ಮ ಮನೆಗೂ ಬೀಳಲೆಂಬುದು ಅವರ ಅಪೇಕ್ಷೆಯಾಗಿತ್ತಾದರೂ ವ್ಯವಸ್ಥಾಪಕರು ಅದನ್ನು ಪುರಸ್ಕರಿಸಲಿಲ್ಲ. ತನ್ನ ಮನೆಗೆ ಗಾಂಧೀಜಿಯವರು ಬರುವುದಿಲ್ಲವೆಂಬುದನ್ನು ಕೇಳಿದಾಗಿನಿಂದ ಉಪವಾಸಕ್ಕೆ ಕುಳಿತ ಗೌರಮ್ಮನ ಈ ಸುದ್ದಿ ಗಾಂಧೀಜಿ ಉಳಿದುಕೊಂಡಿದ್ದ ಮನೆಯಲ್ಲೂ ಸದ್ದುಮಾಡಿದಾಗ, ಗಾಂಧೀಜಿ ಗೌರಮ್ಮನ ಮನೆಗೆ ಹೊರಡಲನುವಾದರು. ಅದನ್ನು ಕೇಳಿ ಸ್ವತಃ ಗೌರಮ್ಮ ತಾವೇ ಅಲ್ಲಿಗೆ ಹೋಗಿ ಗಾಂಧೀಜಿಯನ್ನು ಕರೆತಂದರು; ಅಭೂತಪೂರ್ವ ಆತಿಥ್ಯದ ಜೊತೆಗೆ ಕೊರಳಲ್ಲಿದ್ದ ಕರಿಮಣಿ[ತಾಳಿಯೊಂದನ್ನುಳಿದು ಇಡೀ ಸರವೇನೂ ಬಂಗಾರದ್ದಾಗಿರಲಿಲ್ಲ], ಓಲೆ ಮತ್ತು ನತ್ತು ಇವುಗಳನ್ನು ಬಿಟ್ಟು ಮಿಕ್ಕೆಲ್ಲಾ ತನ್ನ ಬಂಗಾರದ ಆಭರಣಗಳನ್ನು ಗಾಂಧೀಜಿಯ ಹರಿಜನ ಸೇವಾಕಾರ್ಯಕ್ಕೆ ದಾನವಾಗಿ ನೀಡುತ್ತಾ, "ಬದುಕಿನಲ್ಲಿ ಇನ್ನುಮುಂದೆ ಓಲೆ-ನತ್ತು ಎರಡನ್ನು ಬಿಟ್ಟು ಇನ್ನೇನನ್ನೂ ಇನ್ನೆಂದೂ ಧರಿಸುವುದಿಲ್ಲ"ವೆಂದು ಪಣತೊಟ್ಟರು! ಸಾತ್ವಿಕರಾದ ಗಾಂಧೀಜಿಯ ಕಣ್ಣಲ್ಲಿ ಈ ಸಂದರ್ಭದಲ್ಲಿ ಆನಂದಬಾಷ್ಪ ಉದುರದೇ ಇರಲಿಲ್ಲ. ಆದರೆ ಇದ್ಯಾವುದೂ ಗೌರಮ್ಮನವರ ಕಥೆಗಳಲ್ಲಿ ಪ್ರತಿಫಲಿಸಲಿಲ್ಲವೆಂಬುದನ್ನು ಗಮನಿಸಬೇಕು![ಇವತ್ತು ೧೦ ರೂಪಾಯಿ ಕೊಟ್ಟರೂ ದಾನಿಗಳ ಯಾದಿಯಲ್ಲಿ ಹೆಸರು ಬರೆಸಿಕೊಳ್ಳುವ ಜನ ಎಷ್ಟಿಲ್ಲ!] ತಾನು ಬದುಕಿದ ರೀತಿಯಿಂದಲೇ ತಾನು ಮಾದರಿ ಹೇಗೆ ಎಂಬುದನ್ನು ಗೌರಮ್ಮ ಈ ವಿಧದಲ್ಲಿ ತೋರಿಸಿಕೊಟ್ಟಿದ್ದಾರೆ.

ಬಡತನದಲ್ಲಿ ಹೊಟ್ಟೆಪಾಡಿಗಾಗಿ ಹೆಣಗಾಡುವವರಿಗೆ ಅಗ್ಗದ ಆಮಿಷ ದೊರೆತಾಗ, ಸಂದೇಹಗಳ ತಾಕಲಾಟದಲ್ಲಿ ಜಾತಿಬಿಟ್ಟು, ಮತಾಂತರಗೊಳ್ಳುವ ಮತ್ತು ಪ್ರೀತಿ-ಪ್ರೇಮ-ಪ್ರಣಯದ ಗುಂಗಿನಲ್ಲಿ ಎಲ್ಲಾಬಿಟ್ಟು ಮತಾಂತರಗೊಳ್ಳುವ ಒಂದೆರಡು ಕಥೆಗಳನ್ನು ಬರೆಯಬೇಕೆಂಬ ಇಚ್ಛೆ ಅವರದಾಗಿತ್ತು ಎನಿಸುತ್ತದೆ. ನಂತರ ಕೆಲವು ಕಥೆಗಳನ್ನು, ಕೊಡಗಿನ ನಿಸರ್ಗದ ಸುತ್ತ ಪೇರಿಸಿದ ರಮಣೀಯ ದೃಶ್ಯ ವೈಭವಗಳನ್ನೂ ಸಮೀಕರಿಸಿ ಬರೆಯುತ್ತಿದ್ದರೋ ಏನೋ. ಆದರೆ ಇಂತಹ ಅನೇಕ ಕಥೆಗಳನ್ನು ಬರೆಯುವುದಕ್ಕೆ ಅವರಿಗೆ ಅವಕಾಶವುಳಿಯಲಿಲ್ಲ. ಅರ್ಧ ಬರೆದ ಕಥೆಯ ಮಸಿ ಹಸಿಹಸಿಯಾಗಿ ಇನ್ನೂ ಹಾಗೇ ಇದ್ದಂತೆಯೇ ಈಜಲು ಹೋದ ಗೌರಮ್ಮ ಮರಳಿಬಾರದ ಲೋಕಕ್ಕೆ ತೆರಳಿದಾಗ ಅವರಿಗೆ ೨೯ ವಯಸ್ಸು. ತಮ್ಮ ಪ್ರಥಮ ಕಥಾಸಂಕಲನಕ್ಕೆ ’ಕಂಬನಿ’ ಎಂದು ಪ್ರಕಟಣಾ ಪೂರ್ವವೇ ಹೆಸರಿಸಿದ್ದ ಅವರು, ಪ್ರಕಟಿಸುವ ಜವಾಬ್ದಾರಿಯನ್ನು ದ.ಬಾ.ಕುಲಕರ್ಣಿಯವರಿಗೆ ವಹಿಸಿದ್ದರು. ’ಕಂಬನಿ’ ಹೊರಬರುವ ಮುನ್ನವೇ ಗೌರಮ್ಮ ಎಲ್ಲರ ಕಣ್ಣಲ್ಲೂ ಕಂಬನಿ ಹರಿಸಿಬಿಟ್ಟರು! ಅವರ ನಿಧನಾನಂತರ ’ಕಂಬನಿ’ ಮತ್ತು ’ಚಿಗುರು’ ಎರಡೂ ಕಥಾ ಸಂಕಲನಗಳು ಪ್ರಕಟಗೊಂಡವು. ’ಹೆಣ್ಣುಮಕ್ಕಳ ಕೃತಿ ಎಂಬ ಪೊಳ್ಳು ಸಹಾನುಭೂತಿಯ ಹೊರೆಯನ್ನು ಬಿಟ್ಟರೆ ನಮ್ಮ ಕೃತಿಗಳನ್ನು ವಿಮರ್ಶಿಸಿ ಬರೆಯುವ ಒಬ್ಬ ಪುಣ್ಯಾತ್ಮರೂ ಇಲ್ಲ’ ಎಂದು ’ರಂಗವಲ್ಲಿ’ ಕಥಾಸಂಗ್ರಹದಲ್ಲಿ [೧೯೩೭ರಲ್ಲಿ] ಅವರು ಹೇಳಿದ್ದರು. ಹಬ್ಬಕ್ಕೋ ಹುಣ್ಣಿಮೆಗೋ ಬರುತ್ತಲೇ ಇರುತ್ತಿದ್ದ ಬೇಂದ್ರೆಯವರಿಗೆ ಮುನ್ನುಡಿ ಬರೆದುಕೊಡುವಂತೇ ಕೇಳಿದ್ದರ ಪರಿಣಾಮವಾಗಿ, ಬೇಂದ್ರೆಯವರು ’ಕಟುಮಧುರ ಕತೆಗಾರ್ತಿ’ ಎಂದು ಬರೆದು ಹರಸಿದ ಮುನ್ನುಡಿ ಗೌರಮ್ಮ ಬದುಕಿರುವಾಗ ಅವರಿಗೆ ಸಿಗಲೇ ಇಲ್ಲ; ಸಿಕ್ಕಿದ್ದರೆ ಅವರು ಅದೆಷ್ಟು ಸಂತಸಪಡುತ್ತಿದ್ದರೋ ಅದನ್ನು ಪದಗಳಲ್ಲಿ ಹೇಳುವುದು ಸಾಧ್ಯವಾಗುವುದಿಲ್ಲ; ಬಾವುಕ ಜೀವಿಗಳಿಗೆಲ್ಲರಿಗೂ ಇಂತಹ ಮೆಚ್ಚುಗೆಯ ನುಡಿಗಳೇ ಬಹುದೊಡ್ಡ ಪುರಸ್ಕಾರಗಳಲ್ಲವೇ? ಗೌರಮ್ಮ ಬದುಕಿದ್ದರೆ ಈಗವರಿಗೆ ೧೦೩ ವರ್ಷಗಳ ವಯೋಮಾನ ಇರುತ್ತಿತ್ತು; ಇದ್ದ ೨೯ ವರ್ಷಗಳಲ್ಲೇ ೨೭ಕ್ಕೂ ಅಧಿಕ ಮನೋಜ್ಞ ಕಥೆಗಳನ್ನು ಬರೆದ ಗೌರಮ್ಮ ಪ್ರಾಯಶಃ ನೂರಕ್ಕೆ ನೂರು ಬಾರಿಸಿಬಿಡುತ್ತಿದ್ದರು-ಸೆಂಚುರಿ ಬಾರಿಸಿ ಜಗದ್ವಿಖ್ಯಾತಿ ಗಳಿಸಿ, ಲಾಬಿ-ಮಸಲತ್ತು ರಹಿತವಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಿದ್ದರು ಎಂಬುದು ಸಂಶಯಾತೀತ. ಶ್ರೇಷ್ಠ ಸಾಮಾಜಿಕ ಕಥೆಗಳಲ್ಲಿ ಹಲವು ಹೆಣ್ಣುಮಕ್ಕಳ ಪಾತ್ರಗಳನ್ನು ಚಿತ್ರಿಸಿದ ಕೊಡಗಿನ ಗೌರಮ್ಮ, ಕಥೆಯೊಂದಕ್ಕೆ ತಾನೇ ವಸ್ತುವಾಗಿ ಕಥೆಯಾದರು; ಕನ್ನಡ ಸಾರಸ್ವತ ಲೋಕದ ಮಿನುಗುವ ನಕ್ಷತ್ರಗಳಲ್ಲಿ ಒಂದು ನಕ್ಷತ್ರವಾದರು.        

Sunday, February 24, 2013

ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು.

ಚಿತ್ರಋಣ: ಅಂತರ್ಜಾಲ   
ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು.

ಮುದ್ಗಲ ಮಹರ್ಷಿಗಳು ನದಿ ದಾಟುವ ಅವಸರದಲ್ಲಿದ್ದಾಗ, ಗುಹನೆಂಬ ಬೆಸ್ತರವ ಹರಿಗೋಲನ್ನು ನಡೆಸುತ್ತಿದ್ದ. ಹರಿಗೋಲನ್ನೇರಿ ಕುಳಿತ ಮುದ್ಗಲರು ರಾಮನ ಕಥೆಯನ್ನು ಗುಹನಿಗೆ ತಿಳಿಸಿ, ಆತ ಲೋಕೋಪಕಾರಾರ್ಥವಾಗಿ ಜನಿಸಿದಾತ ಎಂದಿದ್ದೇ ತಡ ಮರುಕ್ಷಣವೇ ಗುಹ ರಾಮನಲ್ಲಿ ಆಸಕ್ತನಾದ. ರಾಮಧ್ಯಾನ ನಿರತನಾಗಿ ತನ್ನ ವೃತ್ತಿಗೇ ಹೋಗದೇ ಕುಟುಂಬ ನಿರ್ವಹಣೆ ಕಷ್ಟವಾಯ್ತು; ಮಡದಿ, ಓಲೆಯನ್ನೇ ಮಾರಾಟಮಾಡಿ ಹೊಟ್ಟೆತುಂಬಿಸಿಕೊಳ್ಳುವುದಕ್ಕಾಗಿ ದಿನಸಿ ತರಲು ಕಳಿಸಿದರೆ, ಕೈಗೆ ಸಿಕ್ಕ ಹಣದಿಂದ ಆತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇದ್ದ ಮಣ್ಣಿನ ರಾಮವಿಗ್ರಹವನ್ನು ಕೊಂಡುತಂದು ಗುಡಿಸಲಲ್ಲಿ ಪೂಜೆಗೆ ಇಟ್ಟ.  ಜ್ಞಾನದೃಷ್ಟಿಯಿಂದ ಇದನ್ನರಿತ ಮುದ್ಗಲರು ಮತ್ತೆ ವಾರದಲ್ಲೇ ಮರಳಲು, ಗುಹನ ಹೆಂಡತಿ ತಾನೇ ಹರಿಗೋಲು ನಡೆಸಿ ದಾಟಿಸುವುದಾಗಿ ತಿಳಿಸಿ, ಗುಹನ ವೈರಾಗ್ಯವನ್ನು ಮುನಿಗೆ ಅರುಹಲು, ಮುದ್ಗಲರು ಧ್ಯಾನಕ್ಕೆ ಕುಳಿತ ಗುಹನನ್ನೇ ಕರೆದು, ಸಂಸಾರವಂದಿಗನಾದವನು  ವೃತ್ತಿಯನ್ನೂ ನಡೆಸುತ್ತಾ ಹೇಗೆ ಅದರಲ್ಲೇ ರಾಮನನ್ನು ಆರಾಧಿಸಬಹುದು ಎಂದು ಆಜ್ಞಾಪಿಸಿ, ರಾಮ ಎಂದಾದರೊಂದು ದಿನ ಬಂದು ನಿನಗೆ ದರ್ಶನವಿತ್ತಾಗ, ರಾಮನ ಪಾದಕ್ಕಂಟಿರುವ ಧೂಳನ್ನು ತೊಳೆದು ಆಮೇಲೆ ನಿನ್ನ ತೆಪ್ಪದಲ್ಲಿ ಕುಳ್ಳಿರಿಸಿಕೋ ಎಂದು ಹೇಳಿದರು. ಅನೇಕ ತಿಂಗಳುಗಳ ತರುವಾಯ ಶ್ರೀರಾಮ, ಸೀತಾ-ಲಕ್ಷ್ಮಣರೊಡಗೂಡಿ ಅಲ್ಲಿಗೈತಂದ. ಹರಿಗೋಲನೇರಲು ಬಂದ ಮೂವರು ದಾರಿಹೋಕರನ್ನು[ರಾಮ-ಸೀತಾ-ಲಕ್ಷ್ಮಣರು ಎಂಬುದು ಗುಹನಿಗೆ ಗೊತ್ತಿಲ್ಲ] ಇನ್ನೇನು ಹರಿಗೋಲಲ್ಲಿ ಕುಳ್ಳಿರಿಸಿಬೇಕೆಂದುಕೊಳ್ಳುವಾಗ ತೆಪ್ಪದಲ್ಲಿ ತಾನು ಪೂಜಿಸುತ್ತಿದ್ದ ರಾಮ ವಿಗ್ರಹಕ್ಕೂ ಹೊರಗೆ ನೆಲದಲ್ಲಿ ನಿಂತಿರುವ ಶ್ರೀರಾಮನಿಗೂ ಹೋಲಿಕೆ ಇರುವುದನ್ನು ಗುಹ ಕಂಡ. ಪಾದದಲ್ಲಿ ಬಹಳ ಧೂಳಿದೆಯೆಂದೂ ತೊಳೆಯಲು ಅನುವುಮಾಡಿಕೊಡಬೇಕೆಂದು ರಾಮನಲ್ಲಿ ವಿನಂತಿಸಿದ! ಗುಹನೆಂದುಕೊಂಡಿದ್ದು ರಾಮ ಕಾಡಿನ ದಾರಿಯಲ್ಲಿ ಓಡಾಡುವಾಗ ಪಾದಕ್ಕೆ ಕೊಳೆ ಅಂಟಿರುವುದರಿಂದ ಅದನ್ನು ಮಹರ್ಷಿಗಳು ತೊಳೆಯಲು ಹೇಳಿದ್ದಾರೆಂದು, ಆದರೆ ಅದರ ಫಲವೇನೆಂಬುದು ಗುಹನ ಅರಿವಿಗೆ ಇರಲಿಲ್ಲ.  ಸಂತೋಷದಿಂದ ಶೀರಾಮ ಪಾದವನ್ನಿತ್ತಾಗ ಗುಹ ರಾಮಪಾದವನ್ನು ತೊಳೆದ, ಕೃತಾರ್ಥನಾದ ಆತನ ಜನ್ಮ ಜನ್ಮಾಂತರ ಪಾಪಗಳು ಆ ಕ್ಷಣದಲ್ಲೇ ನಶಿಸಿಹೋಗಿ ಮರುಜನ್ಮದಲ್ಲಿ ರಾಜೋಚಿತ ಭೋಗಭಾಗ್ಯಗಳನ್ನು ಅನುಭವಿಸುತ್ತಾ ಔನ್ನತ್ಯದೆಡೆಗೆ ಸಾಗಲು ಅದು ಕಾರಣವಾಯ್ತು, ಜೊತೆಗೆ ಈಗಿರುವ ಜನ್ಮದಲ್ಲೂ ಅವನ ಕಷ್ಟಗಳೆಲ್ಲಾ ನಿವಾರಣೆಯಾಗಿ ನೆಮ್ಮದಿಯ ಸಂಸಾರವನ್ನು ನಡೆಸಿದ. ಇದು ಶ್ರೀರಾಮನ ಅನುಗ್ರಹ!! ಇಂತಹ ಅನೇಕ ಉಪಕಥೆಗಳು ನಮ್ಮ ರಾಮಾಯಣ-ಮಹಾಭಾರತ ಕಾವ್ಯಗಳಲ್ಲಿ ಓದಸಿಗುತ್ತವೆ.      

ಒಳ್ಳೆಯದು ಎಲ್ಲಿದ್ದರೂ ಬರಲಿ ಎನ್ನುವ ಅದೆಷ್ಟೋ ಮಂದಿಗೆ ತಮ್ಮ ಕಣ್ಣೆದುರೇ ಇರುವ ಒಳ್ಳೆಯ ವಿಷಯಗಳು ಕಾಣುವುದೇ ಇಲ್ಲ. ವಿದೇಶೀ ಕವಿ-ಸಾಹಿತಿಗಳ ಬಗ್ಗೆ ಅಪಾರವಾದ ಹೊಗಳಿಕೆ ಹಾಕಿದರೆ ತಮ್ಮ ಓದಿನ ವೈಶಾಲ್ಯ ಅಲ್ಲೀತನಕವೂ ಹಬ್ಬಿದೆ ಎಂದು ಮಿಕ್ಕದ ಜನ ತಿಳಿದುಕೊಳ್ಳಲಿ ಎಂಬ ’ಹೋಡ್ ಬುದ್ಧಿವಂತರು’ ಇನ್ನು ಕೆಲವು ಜನ. ಈ ಜಗತ್ತಿನಲ್ಲಿ ರಾಮಾಯಣ ಬರೆದ ವಾಲ್ಮೀಕಿ ಮತ್ತು ಮಹಭಾರತ ಬರೆದ ವೇದವ್ಯಾಸರಂತಹ ಕವಿಗಳು ಮತ್ತೆ ಇದುವರೆಗೂ ಹುಟ್ಟಿಬರಲೇ ಇಲ್ಲ; ಆ ಕಾವ್ಯಗಳು ಬರೇ ಕಾವ್ಯಗಳಲ್ಲಾ ಈ ಭವ್ಯ ಭಾರತದ ಪೂರ್ವೇತಿಹಾಸಗಳು. ಅಲ್ಲಿ ಪ್ರತೀ ಪಾತ್ರವೂ ಬರೇ ಪಾತ್ರವಲ್ಲಾ ಜೀವಂತ ನಡೆದಾಡಿದ ವ್ಯಕ್ತಿಗಳ ವ್ಯಕ್ತಿತ್ವ ಚಿತ್ರಣ. ನೀತಿಬೋಧಕವೂ ನವರಸಭರಿತವೂ ಆದ ಇಂತಹ ಕಾವ್ಯಗಳನ್ನು ಓದುವ ಬದಲು ಯಾರೋ ಒಂದಷ್ಟು ಜನ ಬರೆದ ಕೆಲಸಕ್ಕೆ ಬಾರದ ಕಥೆ-ಕಾದಂಬರಿಗಳನ್ನಷ್ಟೇ ಓದುವುದರಿಂದ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಯಾವ ಒಳ್ಳೆಯ ಅಂಶವನ್ನೂ ಕಲಿಯಲು ಸಾಧ್ಯವಿಲ್ಲ. ಬದುಕಿಗೊಂದು ಉತ್ತಮ ಪಾಠವಾಗಬಲ್ಲ ಈ ಕಾವ್ಯಗಳ ಪ್ರತೀ ಅಧ್ಯಾಯಗಳೂ ಅರ್ಥಪೂರ್ಣ; ಯಾವುದನ್ನೂ ಬೇಡ ಅತಿಯಾಯ್ತು ಎನ್ನುವ ಹಾಗಿಲ್ಲ. ಇಬ್ಬಂದಿತನ ಯಾ ದ್ವಂದ್ವ ಎದುರಾದಾಗ ಹೇಗೆ ನಿಭಾಯಿಸಬೇಕೆಂಬುದನ್ನೂ ಇಂತಹ ಕಾವ್ಯಗಳ ಓದಿನಿಂದ ತಿಳಿದುಕೊಳ್ಳಬಹುದಾಗಿದೆ. ಈ ಕಾವ್ಯಗಳಲ್ಲಿ ಮುಖ್ಯ ಕಥಾನಕಕ್ಕೆ ಸಹಕಾರಿಯಾಗಿ ಬರುವ ಉಪಕಥೆಗಳು ರಂಜನೀಯವೂ ನೀತಿಬೋಧಕವೂ ಆಗಿದ್ದು ಒಂದೊಂದು ಕಥೆ ಒಂದೊಂದು ವಿಭಿನ್ನ ಮಜಲನ್ನೇ ತೆರೆದಿಡುತ್ತದೆ! ನವನಾಗರಿಕತೆಯ ನೆಪದಲ್ಲಿ ನವಜನಾಂಗ, "ರಾಮಾಯಣ-ಮಹಾಭಾರತಗಳು ನಿವೃತ್ತರು ಓದಿಕೊಳ್ಳಬಹುದಾದ ಕಥೆಗಳೆ"ಂದು ಪಕ್ಕಕ್ಕಿಟ್ಟಿದ್ದರಿಂದಲೂ, ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಭ್ರಷ್ಟರಾಜಕಾರಣಿಗಳು "ಅವು ಸನಾತನ ಧರ್ಮದವಾಗಿದ್ದು ಇತರ ಮತಗಳವರಿಗೆ ಅವುಗಳು ಅಡ್ಡಿಪಡಿಸುತ್ತವೆ" ಎಂಬ ಕಾರಣಗಳನ್ನು ಕೊಟ್ಟೂ, ಅವುಗಳನ್ನು ಪ್ರಾಥಮಿಕ ಪಠ್ಯಕ್ರಮದಿಂದ ತೆಗೆದುಹಾಕಿದ್ದು ಈ ದೇಶದ ಮೂಲನಿವಾಸಿಗಳ ಇಂದಿನ-ಮುಂದಿನ ಪೀಳಿಗೆಗಳು ಅನುಭವಿಸಿದ ನಿಜವಾದ ನಷ್ಟ.

ಏನನ್ನೂ ಅರಿಯದ ಜನ, ಏನನ್ನೂ ಓದದ ಜನ ಎಡಪಂಥೀಯರಾಗುತ್ತಾರೆ. ಯಾಕೆಂದರೆ ಅವರಿಗೆ ಯಾವುದೂ ಅರ್ಥವಾಗುವುದಿಲ್ಲ. ಇಲ್ಲಿ "ಕೆಳವರ್ಗದವನಾದ್ದರಿಂದ ಗುಹ ರಾಮನ ಪಾದವನ್ನು ತೊಳೆಯಬೇಕು ಎಂದು ಮಹರ್ಷಿಗಳು ಹೇಳಿದ್ದಾರೆ" ಎಂದು ಅಪಾರ್ಥಕಲ್ಪಿಸಿ ಮಾಧ್ಯಮಗಳಲ್ಲಿ ವಾದಿಸುತ್ತಾ ಕೂರುತ್ತಾರೆ! ಯಾಕೆ ಮಹರ್ಷಿಗಳು ಹಾಗೆ ಹೇಳಿದರು, ಅಲ್ಲಿಗೆ ಅವರು ಬರುವ ಔಚಿತ್ಯವಾದರೂ ಇತ್ತೇ? ಅಥವಾ ರಾಮನಾದರೂ ಅಲ್ಲಿಗೇ ಬರಬೇಕಾಗಿತ್ತೇ ಎಂಬುದರ ಬಗ್ಗೆ ಚಿಂತನೆ ನಡೆಸುವುದಿಲ್ಲ. ಇದೇ ರೀತಿ "ಮಹಾಭಾರತದಲ್ಲಿ ತುಂಡು ಭೂಮಿಗಾಗಿ ದಾಯಾದಿಗಳು ಕಾದಾಡುವಂತೇ ಮಾಡಿದ ಕೃಷ್ಣನಿಗೆ ಏನುಸಿಕ್ಕಿತು? ಲಕ್ಷಾಂತರ ಜನ ಮಡಿದು ನಂತರ ಯುದ್ಧಗೆದ್ಧ ಪಾಂಡವರು ಕೇವಲ ಕೆಲವೇ ಕಾಲ ರಾಜ್ಯಭಾರ ಮಾಡಿದರು-ಇದೆಲ್ಲಾ ಸರಿಯೇ?" ಎಂದು ಕೆಲವರು ವಾದಿಸಿದರೆ, ಬಸುರಿ ಹೆಂಡತಿಯನ್ನು ಕಾಡಿಗಟ್ಟಿದವ ಮನುಷ್ಯನೇ ಅಲ್ಲವೆಂದೊ, ಸೀತೆಯನ್ನು ಮುಟ್ಟದಿದ್ದರೂ ಪರಸ್ತ್ರೀಯನ್ನು ಬಯಸಿದವ ಎಂಬ ಮಾತ್ರಕ್ಕೆ ರಾವಣನನ್ನು ವಧಿಸಲಾಯ್ತೆಂದೂ ವಾದಿಸುತ್ತಾರೆ. ಆದರೆ ಮೂಲಕಥೆಗಳ ಹಂದರದ ವಿಶಾಲ ಪರಿಕಲ್ಪನೆಯಾಗಲೀ, ಕಥೆಗಳ ಆಳಗಲಗಳಾಗಲೀ ಆಮೂಲಾಗ್ರವಾಗಿ ತಿಳಿಯದ ಅಜ್ಞಾನಿಗಳ ಅಥವಾ ಅರ್ಧ ಓದಿಕೊಂಡವರ ವಿತಂಡ ವಾದ ಇದಾಗಿರುತ್ತದೆ. ಭಾರತದ ಪ್ರಾಗೈತಿಹಾಸವಾದ ರಾಮಾಯಣ-ಮಹಾಭಾರತಗಳನ್ನು ಇಂದು ಓದಿಕೊಂಡವರೆಷ್ಟು ಎಂದರೆ ಬೆರಳೆಣಿಕೆಯಷ್ಟು ಎಂದರೆ ತಪ್ಪಲ್ಲ. ಕೇವಲ ರಾವಣವಧೆಯಷ್ಟೇ ರಾಮಾಯಣವಲ್ಲ, ಕೇವಲ ಕುರುಕ್ಷೇತ್ರ ಯುದ್ಧವಷ್ಟೇ ಮಹಭಾರತವಲ್ಲ. ಆದರೆ ಚಿಲ್ಲರೆ ವಿಷಯಗಳನ್ನಷ್ಟೇ ಓದಿಕೊಂಡ ಎಡಪಂಥೀಯ ಜನ ತಮ್ಮ ಚಿಲ್ಲರೆ ಬುದ್ಧಿಯಿಂದ ಹೊರಬರಬೇಕಾದರೆ ಈ ಕಾವ್ಯಗಳನ್ನು ಪದಪದಗಳನ್ನೂ ಬಿಡದಂತೇ ಓದಿಕೊಳ್ಳಬೇಕು. ಗೋರಖ್ ಪುರ ಪ್ರೆಸ್ ನವರು ಹಿಂದಿ, ಇಂಗ್ಲೀಷ್ ಮತ್ತು ಇನ್ನಿತರ ಭಾಷೆಗಳಲ್ಲಿ ಅವುಗಳನ್ನು ಹೊರತಂದಿದ್ದಾರೆ, ವರ್ಷದಲ್ಲೇ ಕನ್ನಡದಲ್ಲೂ ಅವು ಲಭ್ಯವಾಗಲಿಕ್ಕಿವೆ. ರಾಮಕೃಷ್ಣಾಶ್ರಮದವರು ಇಂಥಾ ಮಹಾನ್ ಕಾವ್ಯಗಳ ಅರ್ಥವನ್ನು ಹೊರತಂದಿದ್ದಾರೆ, ರಾಷ್ಟ್ರೋತ್ಥಾನ ಪ್ರಕಾಶನದವರೂ ಸಹ ರಾಮಾಯಣ-ಭಾರತ ಕಥೆಗಳನ್ನು ಕನ್ನಡದಲ್ಲಿ ಮುದ್ರಿಸಿದ್ದಾರೆ. ಆದರೆ ಅವುಗಳ ಪ್ರಯೋಜನ ಪಡೆದುಕೊಂಡವರೆಷ್ಟು? ತಾವೂ ಬುದ್ಧಿಜೀವಿಗಳು, ತಮಗೂ ಎಲ್ಲಾ ಗೊತ್ತಿದೆ ಎಂದು ಪೋಸುಕೊಡುವ ಎಡಪಂಥೀಯರೇನಾದರೂ ಇವುಗಳನ್ನು ಓದಿದ್ದಾರ್ಯೇ? ಖಂಡಿತಕ್ಕೂ ಇಲ್ಲ!

ನಾವು ಪ್ರಾಥಮಿಕ ಶಾಲೆಯಲ್ಲಿ ಓದುವ ಹಂತದಲ್ಲಿ ನಮಗೆ ’ಕಥಾರೂಪ ಇತಿಹಾಸ’ವೆಂಬ ಹೊತ್ತಗೆ, ಪಠ್ಯದಲ್ಲಿರದಿದ್ದರೂ ಓದಲು ದೊರೆತಿತ್ತು. ಅದರಲ್ಲಿ ಭಾರತದ ಪ್ರಾಗೈತಿಹಾಸದ ಕಥೆಗಳೂ ಮತ್ತು ವರ್ಣಮಯ ಚಿತ್ರಗಳೂ ಇದ್ದವು. ಚಿಕ್ಕ ವಯಸ್ಸಿಗರಾದ ನಮಗೆ ತಾಟಿಕೆಯ ವಧೆಯಂತಹ ಚಿತ್ರಗಳನ್ನು ಕಣ್ಣರಳಿಸಿ ನೋಡುವುದು ಬಹಳ ಉಲ್ಲಾಸದಾಯಕವಾಗಿತ್ತು. ಮನೆಯ ಹಿರಿಯರು ರಾಕ್ಷಸರ ರಾಕ್ಷಸೀ ಕೃತ್ಯಗಳನ್ನು ತಿಳಿಸಿ ಹೇಳಿ, ಅದಕ್ಕಾಗಿ ರಾಮ ಬಾಣ ಹೊಡೆದು ಆಕೆಯನ್ನು ಕೊಂದ ಎಂದು ಅರ್ಥ ಬಿಡಿಸಿ ಹೇಳುತ್ತಿದ್ದರು. ಇವತ್ತು ಅಂತಹ ಪುಸ್ತಕಗಳು ಪಠ್ಯಗಳಲ್ಲಿರಲಿ ಶಾಲಾ ವಾಚನಾಲಯ[ಲೈಬ್ರರಿ]-ಇದ್ದರೆ ಅಲ್ಲೂ ನೋಡಸಿಗುವುದಿಲ್ಲ; ಇದಕ್ಕೆಲ್ಲಾ ಕಾರಣವೇನು ಗೊತ್ತೇ ಎಡಪಂಥೀಯತೆ. ಇಡೀ ಜಗತ್ತೇ ಭಗವದ್ಗೀತೆಯನ್ನು ’ಬೆಸ್ಟ್ ಮ್ಯಾನೇಜ್ ಮೆಂಟ್ ಬುಕ್’ ಎಂದು ಕೊಂಡಾಡಿದ್ದರೂ ಗೀತೆ ಹುಟ್ಟಿದ ಈ ನೆಲದ ನಮ್ಮ ಮಕ್ಕಳಿಗೇ ಅದನ್ನು ಬೋಧಿಸುವ ಹಾಗಿಲ್ಲ, ಅದಕ್ಕೆ ಹಿಂದೂ ಧರ್ಮಗ್ರಂಥವೆಂಬ ಹಣೆಪಟ್ಟಿ ಬರೆದ ಎಡಪಂಥೀಯ ಜನ, ರಾಜಕಾರಣಿಗಳನ್ನೂ ಸೇರಿಸಿಕೊಂಡು ರಾಜಕೀಯ ಮಾಡಿದ್ದಾರೆ! ನಮ್ಮ ಯುವ ಪೀಳಿಗೆಗೂ ಗೀತೆಯ ಬಗ್ಗೆ ಏನೂ ಗೊತ್ತಿಲ್ಲ!! ಯಾಕೆಂದರೆ ಭಗವದ್ಗೀತೆಯಲ್ಲಿ ಏನಿದೆ ಎಂಬುದನ್ನು ಅವರು ತೆರೆದು ನೋಡಿದವರೇ ಅಲ್ಲ! ಯಾರೋ ಬೇಡಾ ಎಂದು ಕೂಗುವಾಗ ಅವರಲ್ಲಿಯೂ ಕೆಲವರು ಬೇಡಾ ಎಂದು ಕೂಗುತ್ತಾರೆ. ಬರಿದೇ "ಬೇಡಾ" ಎನ್ನುವ ಸಮೂಹ ಸನ್ನಿಗೆ ಒಳಗಾಗುವ ಬದಲು ಯುವಪೀಳಿಗೆಯ ಜನ ಆಂಗ್ಲ ಮಾಧ್ಯಮದಲ್ಲಿ ಅನುವಾದಗೊಂಡ ಗೀತೆಯನ್ನಾದರೂ ಓದಿ ತಿಳಿಯಲು ಪ್ರಯತ್ನಿಸಬಹುದಿತ್ತು-ಆದರೆ ಅದು ಅವರ್ಯಾರಿಗೂ ಬೇಕಾದಹಾಗೆ ಕಾಣಿಸಲಿಲ್ಲ! ಯುವ ಪೀಳಿಗೆಯಲ್ಲಿನ ಸಾಫ್ಟ್ ವೇರ್ ತಂತ್ರಜ್ಞರಲ್ಲಿ ವಿಚ್ಛೇದನಗಳು ಯಾಕೆ ಹೆಚ್ಚುತ್ತಿವೆ ಎಂಬುದರ ಬಗ್ಗೆ ಅವರು ಚಿಂತನ-ಮಂಥನ ನಡೆಸಿಕೊಂಡಿದ್ದರೆ ಅಲ್ಲಿ ಗೀತೆಯ ಪ್ರಸ್ತುತಿ ಕಾಣುತ್ತಿತ್ತು!! ಕೈಲಾಗದೇ ಸೋತರೆ, ಜಾಬು ಕಳೆದುಕೊಂಡು/ಉದ್ಯಮದಲ್ಲಿ ನಷ್ಟ ಅನುಭವಿಸಿ ದಿಗ್ಮೂಢರಾದರೆ, ವಾಸಿಯಾಗದ ಕಾಯಿಲೆಗಳಿಂದ ಬಳಲುವ ಪ್ರಸಂಗ ಎದುರಾದರೆ ಅಲ್ಲಿ ಗೀತೆಯ ಮಹತ್ವ ಬೆಳಕಿಗೆ ಬರುತ್ತದೆ.    

ರಾಮಾಯಣ-ಮಹಾಭಾರತಗಳನ್ನು ಹಿಂದಕ್ಕೆ ಮನೆ ಮನೆಗಳಲ್ಲಿ ಪೂಜಿಸಿ, ವಾಚಿಸಿ, ಸಪ್ತಾಹಗಳನ್ನು ನಡೆಸುತ್ತಿದ್ದರು. ಇಂದು ಅಂತಹ ಪೂಜನೀಯ ಕೆಲಸಗಳು ನಡೆಯುವುದಿರಲಿ, ವಾಚಿಸುವ ಗಮಕಿಗಳೂ ಇಲ್ಲ, ಕೇಳಲು ಆಸೆಪಡುತ್ತಿದ್ದ ಶ್ರೋತ್ರವರ್ಗವೂ ಇಲ್ಲ. ನವರಸಗಳು ತುಂಬಿದ ಪದ್ಯಗಳನ್ನು ನವರಸ ಭಾವ ಪೂರಿತವಾಗಿ, ರಾಗಪೂರಿತವಾಗಿ ಗಮಕಿಗಳು ಹಾಡಿದಾಗ, ವಿದ್ವಾಂಸರು ಅರ್ಥವಿವರಿಸಿದಾಗ, ಅದೆಂತಹ ಅನನ್ಯ ಅನುಭವ ಗೊತ್ತೇ? ನಮ್ಮ ಜೀವನದ ಕುಂದುಕೊರತೆಗಳನ್ನು ಕಾವ್ಯಗಳಲ್ಲಿನ ಪಾತ್ರಗಳೂ ಅನುಭವಿಸಿದ್ದವು ಎಂಬುದರ ಜೊತೆಗೆ ಎದುರಾದ ಸಮಸ್ಯೆಗಳನ್ನು ಅವರು ಹೇಗೆ ನಿಭಾಯಿಸಿದರು ಎಂಬುದನ್ನು ತಿಳಿದಾಗ ಮನಸ್ಸು ನಿರಾಳವಾಗುತ್ತಿತ್ತು. ಮನಸ್ಸಿಗೆ ದುರಹಂಕಾರದ ಮೋಡ ಕವಿಯುತ್ತಿರಲಿಲ್ಲ. ಜೀವನದಲ್ಲಿ ಅತಿಯಾಸೆ-ಕೊಳ್ಳುಬಾಕತನ ಮೈಗೂಡುತ್ತಿರಲಿಲ್ಲ, ಹಾಸಿಗೆ ಇದ್ದಷ್ಟೇ ಕಾಲುಚಾಚುವ ಮನೋವೃತ್ತಿ ಬೆಳೆದು, ಒಂದೇ ಒಂದು ದಿನವೂ ಎದೆನೋವಾಗಲೀ ಹೃದ್ರೋಗವಾಗಲೀ, ಮಧುಮೇಹ-ಅಧಿಕರಕ್ತದೊತ್ತಡವಾಗಲೀ ಕಾಣಿಸಿಕೊಳ್ಳುತ್ತಿರಲಿಲ್ಲ! ಇದನ್ನೆಲ್ಲಾ ಹೇಳಿದರೆ ಅಸಡ್ಡೆಮಾಡುವ ಇಂದಿನ ಜನರಿಗೆ, ಆ ಗಾಳಿ ತಾಗದಿರುವುದಕ್ಕೆ ಸರಕಾರದ ’ತ್ಯಾಜ್ಯ ವಿಲೇವಾರಿ’ಪದ್ಧತಿಯ ಶಿಕ್ಷಣವೇ ಕಾರಣ ಎನ್ನಬಹುದಾಗಿದೆ. ಯಾವುದು ಜೀವನಕ್ಕೆ ಪ್ರಮುಖವಾಗಿ ಬೇಕೋ ಅಂಥಾದ್ದೇ ಪಠ್ಯಕ್ರಮದಲ್ಲಿ ಇರುವುದಿಲ್ಲ, ಯಾವುದು ಬೇಡದ ತ್ಯಾಜ್ಯವೋ ಅಂಥಾದ್ದನ್ನೆಲ್ಲಾ ತುಂಬಿಸಿದ ಪಠ್ಯಕ್ರಮವನ್ನು ನಾವಿಂದು ನಮ್ಮ ಮಕ್ಕಳಿಗೆ ಬೋಧಿಸುತ್ತಿದ್ದೇವೆ, ಇದು ಈಗಲ್ಲಾ ನಾವು ಚಿಕ್ಕವರಿರುವಾಗಿನಿಂದ ಅಂದರೆ ಸುಮಾರು ೨೮ ವರ್ಷಗಳ ಹಿಂದೆಯೇ ಆರಂಭವಾಯ್ತು!

ಹೋಗಲಿಬಿಡಿ, ನಮ್ಮಂಥಾ ಕೆಲವು ಆಸಕ್ತರು ಸ್ವಾಧ್ಯಾಯದಿಂದ ಅನೇಕ ವಿಷಯಗಳನ್ನು ಅರಿತೆವು, ಓದಿಕೊಂಡೆವು. ಆದರೆ ಇಂದಿನ ಮಕ್ಕಳಿಗೆ ಅದೂ ಕೂಡ ಲಭ್ಯವಾಗದೇ ಹೋಗಬಹುದು, ಓದುವ ಗೀಳೇ ಇರದಿರಬಹುದು. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಬರಬೇಕಿದ್ದರೆ, ನಮ್ಮ ಮಕ್ಕಳು ಸುಲಲಿತ ಜೀವನ ಕ್ರಮವನ್ನು ಅನುಸರಿಸಬೇಕಿದ್ದರೆ ಅವರಿಗೆ ಖಾಸಗಿಯಾಗಿ ನಾವು ರಾಮಾಯಣ-ಮಹಾಭಾರತಗಳನ್ನು ಬೋಧಿಸಬೇಕು. ಬಿಡುವಿನಲ್ಲಿ, ಶಾಲಾರಜಾದಿನಗಳಲ್ಲಿ ಆ ಕೆಲಸ ನಡೆಯಬೇಕು. ನಮ್ಮ ಮಕ್ಕಳು ಪಠ್ಯಕ್ರಮದಲ್ಲಿ ’ಆರ್ಯರು ಭಾರತಕ್ಕೆ ಬಂದರು’ ಎಂಬಂಥಾ ತಿರುಚಿದ ಇತಿಹಾಸವನ್ನು ಓದುತ್ತಿದ್ದಾರೆ; ಇದು ಸರಿಯಲ್ಲ. ಆರ್ಯರು ಭಾರತಕ್ಕೆ ಬರಲಿಲ್ಲ, ಬದಲಾಗಿ ಭಾರತ ಆರ್ಯರದ್ದೇ ಆಗಿದೆ, ಇಲ್ಲಿ ಆರ್ಯರು-ದ್ರಾವಿಡರು ಎಂಬ ಭೇದ ಇರಲಿಲ್ಲ, ಅದನ್ನು ಹುಟ್ಟಿಸಿದವರು ಬ್ರಿಟಿಷರು. ಸನಾತನಿಗಳನ್ನು ದಾರಿ ತಪ್ಪಿಸಿದವರು ಮ್ಲೇಚ್ಛರು. ಪರಕೀಯರ ಅಟ್ಟಹಾಸದಿಂದ ನೊಂದ ಸನಾತನಿಗಳಿಗೆ ಈಗ ಪಠ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ತಮ್ಮದೇ ಆದ ನಿಜವಾದ ಇತಿಹಾಸವನ್ನು ಬೋಧಿಸುವ ಹಾಗಿಲ್ಲ-ಕಲಿಯಲು ಅವಕಾಶವಿಲ್ಲ! ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರೆಂದರೆ ಚಾಚಾ ನೆಹರೂ ಎಂಬಲ್ಲಿಂದ ಹೇಳುತ್ತಾರೆಯೇ ಹೊರತು ಸುಭಾಸ್ ಚಂದ್ರ ಬೋಸರು ಸ್ವಾತಂತ್ರ್ಯಾ ನಂತರವೂ ಬದುಕಿದ್ದ ಬಗ್ಗೆ ನಮಗೇ ಅರಿವಿರಲಿಲ್ಲ, ಇನ್ನು ಅವರಿಗೆ ಹೇಗೆ? ಭಗತ್ ಸಿಂಗ್, ಮಂಗಲಪಾಂಡೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ್, ವೀರ ಸಾವರ್ಕರ್ ಇಂತಹ ಅನೇಕರ ಬಗ್ಗೆ ಇಂದಿನ ಪಠ್ಯಕ್ರಮದಲ್ಲಿ ಅಳವಡಿಸಲ್ಪಟ್ಟ ಇತಿಹಾಸ ಏನನ್ನೂ ಹೇಳುವುದಿಲ್ಲ. ನಿಜದ ಅರಿವಿಲ್ಲದವರಿಗೆ ದೇಶಭಕ್ತಿಯಾದರೂ ಎಲ್ಲಿ ಮೂಡೀತು? ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂಬ ಪ್ರಜ್ಞೆ ಹೇಗೆ ಬೆಳೆದೀತು?

ಸನಾತನಿಗಳಲ್ಲಿ ನನ್ನದೊಂದು ವಿನಂತಿ ಈ ರೀತಿ ಇದೆ: ನಮ್ಮ ಪ್ರಾಗೈತಿಹಾಸವಾದ ರಾಮಾಯಣ-ಮಹಾಭಾರತಗಳನ್ನೂ ಜೊತೆಗೆ ಭಾರತದ ನಿಜವಾದ ಇತಿಹಾಸವನ್ನೂ ನಮ್ಮ ಮಕ್ಕಳಿಗೆ ರಜಾದಿನಗಳಲ್ಲಿ ಬೋಧಿಸುವಂತೇ ಅನುಕೂಲ ಕಲ್ಪಿಸಿಕೊಡಿ. ಅದಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಆದಷ್ಟು ಒದಗಿಸಿ. ಸಂಘಗಳು ತಮ್ಮ ಶಾಖೆಗಳಲ್ಲಿ ಈ ಕೆಲಸವನ್ನು ಮಾಡುವಂತಾದರೆ ಬಹಳ ಒಳ್ಳೆಯದು. ಚಳಿಗಾಲದಲ್ಲಿ[ಅಕ್ಟೋಬರ್-ಡಿಸೆಂಬರ್ ಪ್ರಾದೇಶಿಕ ರಜಾದಿನಗಳಲ್ಲಿ ನೋಡಿಕೊಂಡು] ಮತ್ತು ಬೇಸಿಗೆಯಲ್ಲಿ ಈ ಬೋಧನಾಕ್ರಮವನ್ನು  ಶಿಬಿರಗಳ ಮೂಲಕ ಆಯೋಜಿಸಬೇಕು. ಬಂದ ಮಕ್ಕಳಿಗೆ ಉಚಿತವಾದ ಕೊಡುಗೆಗಳನ್ನು ಉಳ್ಳವರು ಕೊಡಲು ಮುಂದಾಗಬೇಕು. ಊಟ-ತಿಂಡಿ-ವಸತಿ ವ್ಯವಸ್ಥೆಯ ಜೊತೆಗೆ ಯೋಗ-ವ್ಯಾಯಾಮ-ಪ್ರಾಣಾಯಾಮಗಳನ್ನೂ ಸೇರಿಸಿ ವಾರ ಅಥವಾ ತಿಂಗಳದಿನ ಇಂತಹ ಕಾರ್ಯಕ್ರಮಗಳನ್ನು ದೇಶದ ಹಳ್ಳಿ ಹಳ್ಳಿಗಳಲ್ಲಿಯೂ ಅಲ್ಲಲ್ಲಿಯ ಭಾಷೆಗಳಲ್ಲಿಯೇ ನಡೆಸಬೇಕು. ನಮ್ಮ ಮುಂದಿನ ಜನಾಂಗ ಎಡಪಂಥೀಯವಾಗಿ ಬೆಳೆಯಬಾರದು, ಅವರಿಗೆ ಅಜ್ಞಾನ-ಅವಿದ್ಯೆ-ಅಧ್ಯಾಸಗಳೆಂಬ ಮೋಡ ಕವಿಯಬಾರದು. ಅವರು ನೀತಿವಂತರಾಗಿ, ಉತ್ತಮ ರೀತಿ-ರಿವಾಜು ಉಳ್ಳವರಾಗಿ ಬೆಳೆಯಬೇಕು. ಜೊತೆಗೇ ದೇಶಭಕ್ತಿಯೂ ಸನಾತನತೆಯೂ ಮೈಗೂಡಬೇಕು. ಈ ಕೆಲಸವನ್ನು ಸರಕಾರವಂತೂ ಮಾಡುವುದಿಲ್ಲ ಏಕೆಂದು ಮೊದಲೇ ಹೇಳಿದ್ದೇನಲ್ಲಾ! ಸರಕಾರ ಮಾಡದ ಈ ಉನ್ನತ ಕೆಲಸವನ್ನು ನಾವು ಸನಾತನ ಭಾರತೀಯರು ಮಾಡಬೇಕು. ತನ್ಮೂಲಕ, ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು. ಇದಕ್ಕೆ ದೇಶಭಕ್ತರ ಸಹಕಾರವನ್ನು ಕೋರುತ್ತೇನೆ, ಸಂಬಂಧಿಸಿದ ಸಂಘಟನೆಗಳ-ಶಾಖೆಗಳ-ಪದಾಧಿಕಾರಿಗಳ ಸಹಕಾರವನ್ನು ಕೋರುತ್ತೇನೆ, ಧನ್ಯವಾದಗಳು.    

Saturday, February 23, 2013

ಮಹಾಕುಂಭಮೇಳ: ೧೪೪ ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ಮಾತ್ರ ಘಟಿಸುವ ಮಹಾಜಾತ್ರೆ

ಚಿತ್ರಗಳ ಕೃಪೆ : ಶ್ರೀ ಸೂರ್ಯನಾರಾಯಣ ಭಜರಂಗದಳ ಮತ್ತು ಶ್ರೀ ಚಕ್ರವರ್ತಿ ಸೂಲಿಬೆಲೆ
ಮಹಾಕುಂಭಮೇಳ: ೧೪೪ ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ಮಾತ್ರ ಘಟಿಸುವ ಮಹಾಜಾತ್ರೆ


ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗುಸರಯೂ ಶ್ರೀ ಗೋಮತೀ ಗಂಡಕೀ |
ಕಾವೇರೀ ಕಪಿಲಾ ವರಾಹತನಯಾ ನೇತ್ರಾವತೀತ್ಯಾದಯಃ
ನದ್ಯಃ ಶ್ರೀಹರಿಪಾದಪಂಕಜ ಭವಾಃ ಕುರ್ವಂತು ನೋ ಮಂಗಳಂ ||

ಕುಂಭಮೇಳದ ಬಗ್ಗೆ ಒಂದಷ್ಟು ಓದಬಯಸುವ ಆಸ್ತಿಕ ಸನಾತನಿಗಳಿಗೆ ಆದರದ ಸ್ವಾಗತ. ಕುಂಭಕ್ಕೆ ಸನಾತನ ಧರ್ಮ ವಿಶೇಷ ಮಹತ್ವವನ್ನು ನೀಡಿದೆ. ಅದಕ್ಕೆ ಹಲವಾರು ಕಾರಣಗಳಿವೆಯಾದರೂ, ಸಮುದ್ರ ಮಥನದ ಕಾಲದಲ್ಲಿ ಘಟಿಸಿತ್ತು ಎನ್ನಲಾದ ಅಮೃತ ಬಿಂದು ಚೆಲ್ಲಿದ ಘಟನೆಯೇ ಪ್ರಮುಖವಾಗಿ ಕಾರಣವಾಗುತ್ತದೆ. ಭಾಗವತ ಪುರಾಣ, ವಿಷ್ಣು ಪುರಾಣ, ರಾಮಾಯಣ ಮತ್ತು ಮಹಾಭಾರತಗಳಲ್ಲಿ ಈ ಕುರಿತು ಹೇಳಿಕೆಗಳು ದೊರೆಯುತ್ತವೆ. ಗಂಗೆ, ಯಮುನೆ, ಸರಸ್ವತಿ, ನರ್ಮದೆ, ಶಿಪ್ರೆ ಈ ನದಿಗಳೇ ಕುಂಭಮೇಳಗಳ ಪ್ರಮುಖ ನದಿಗಳಾಗಿವೆ. ದೂರ್ವಾಸರಿಂದ ಶಾಪಗ್ರಸ್ತರಾದ ದೇವತೆಗಳು, ದಾನವರೊಡನೆ ಹೋರಾಡಲು ಅಶಕ್ತರಾಗಿ, ಏನೂ ಮಾಡಲೂ ತೋಚದೇ, ಬ್ರಹ್ಮನಲ್ಲಿಗೆ ತೆರಳಿದರು. ಬ್ರಹ್ಮ ಶಿವನಲ್ಲಿಗೂ, ಶಿವ ವಿಷ್ಣುವಿನಲ್ಲಿಗೂ ಅವರನ್ನು ಕಳಿಸಿದ್ದಾಯ್ತು. ತ್ರಿಮೂರ್ತಿಗಳು ಮೂವರೂ ಸೇರಿ ಕ್ಷೀರಸಮುದ್ರವನ್ನು ಮಥಿಸಲು ಸೂಚಿಸಿದರು. ಮೇರುಪರ್ವತವನ್ನು ಕಡೆಗೋಲಾಗಿಯೂ ವಾಸುಕಿಯನ್ನೇ ಹಗ್ಗವಾಗಿಯೂ ಬಳಸಿ ಕಡೆದ ಈ ಕೆಲಸದಲ್ಲಿ ದಾನವರೂ ಪಾಲ್ಗೊಂಡರು. ಮಥನಗೊಂಡ ಕ್ಷೀರಸಾಗರದಲ್ಲಿ ಹಲವು ಸುವಸ್ತುಗಳು ಕಾಣಿಸಿಕೊಂಡವು. ಎದುರಿಗೆ ಬಂದ ಹಾಲಹಲವನ್ನು ಶಿವ ತಾನೇ ಕುಡಿದು ಎಲ್ಲರನ್ನೂ ರಕ್ಷಿಸಿದ. ನಂತರ ಅಮೃತ ಕಲಶಹೊತ್ತ ಧನ್ವಂತರಿ ಹೊರಬಂದ. ಅಮೃತಕುಂಭ ಬಂದಾಗ ದೇವತೆಗಳು-ದಾನವರು ಎರಡೂ ಪಂಗಡಗಳಲ್ಲಿ ನಮಗೆ ಮೊದಲು ತಮಗೆ ಮೊದಲು ಎಂಬ ಜಗಳ ಹುಟ್ಟಿಕೊಂಡಿತು. ಜಗಳ ಬಗೆಹರಿಸಲು ಮೋಹಿನಿಯ ರೂಪಧರಿಸಿ ಬಂದ ಮಹಾವಿಷ್ಣುವನ್ನು ಕಂಡು ದಾನವರು ಮೋಹಗೊಂಡರು. ಅಮೃತಕುಂಭವನ್ನು ಮೋಹಿನಿ ಎರಡೂ ಗುಂಪುಗಳಿಗೆ ಕೊಡುವ ಮೊದಲು ಎತ್ತೊಯ್ಯುತ್ತಿದ್ದಾಗ ಅದರಿಂದ ನಾಲ್ಕು ಹನಿಗಳು ಉದುರಿದವು. ಇವು ಕ್ರಮವಾಗಿ ಪ್ರಯಾಗ, ನಾಸಿಕ, ಉಜ್ಜೈನಿ ಮತ್ತು ಹರಿದ್ವಾರಗಳಲ್ಲಿ ಬಿದ್ದವು. ಅಮೃತದ ಹನಿಗಳು ಬಿದ್ದ ಕ್ಷೇತ್ರಗಳಲ್ಲಿ ನದಿಗಳು ಅಮೃತಸದೃಶ ಫಲನೀಡುತ್ತವೆ ಎಂಬ ಅನಿಸಿಕೆಯಿಂದ ಅಂದಿನಿಂದ ಇಂದಿನವರೆಗೂ ಕುಂಭಮೇಳಗಳು ನಡೆಯುತ್ತಾ ಬಂದಿವೆ. 


ಹೂಯೆನ್ ತ್ಸಾಂಗ್ ಎಂಬ ಚೀನೀ ಯಾತ್ರಿಕ ಹರ್ಷವರ್ಧನನ ಕಾಲದಲ್ಲಿ[ಸುಮಾರು ೬೦೦ ಸಿ.ಈ] ಭಾರತಕ್ಕೆ ಬಂದಿದ್ದ. ಆಗಲೇ ಕುಂಭಮೇರ್ಳ ನಡೆಯುತ್ತಿರುವ ಬಗ್ಗೆ ಆತ ತನ್ನ ಬರಹಗಳಲ್ಲಿ ದಾಖಲಿಸಿದ್ದಾನೆ. ಅದಕ್ಕಿಂತಲೂ ಹಿಂದಿನ ದಾಖಲಿತ ಪುರಾವೆಗಳು ನಮಗೆ ಈಗ ಲಭ್ಯವಿಲ್ಲ; ಅವು ಇತಿಹಾಸದಲ್ಲಿ ಕಾರಣಾಂತರಗಳಿಂದ ಲುಪ್ತವಾಗಿವೆ. ಏನೇ ಇರಲಿ, ಪೂರ್ಣಕುಂಭಕ್ಕೂ ಕೂಡ ಅದೇ ಒಂದು ಹಿನ್ನೆಲೆಯಲ್ಲಿ ಬಹಳ ಮಹತ್ವವನ್ನು ಇತ್ತಿದ್ದಾರೆ. ಸನಾತನಿಗಳಲ್ಲಿ ಮಂಗಳಕಳಶಗಳಿಲ್ಲದ ಪೂಜೆಯೇ ಇಲ್ಲವೆನ್ನಬೇಕು. ಪೂಜೆ ಇದೆಯೆಂತಾದರೆ ಅಲ್ಲಿ ಕೊನೇಪಕ್ಷ ಒಂದು ಕಳಶವನ್ನಾದರೂ ಪೂಜಿಸುತ್ತಾರೆ. 


ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಕಲಶೇಸ್ಮಿನ್ ಸನ್ನಿಧಿಂ ಕುರು ||

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿಸ್ತಥಾ |
               ಆಗಚ್ಛಂತು ಪವಿತ್ರಾಣಿ ಪೂಜಾರ್ಥಂ ಸತತಂ  ಮಮ ||              

ಹೀಗೆ ಮಂತ್ರವನ್ನು ಪಠಿಸುತ್ತಾ ನದಿಗಳನ್ನೂ ಪುಣ್ಯ ಪುಷ್ಕರಣಿಗಳ ತೀರ್ಥವನ್ನೂ ಕಲಶಗಳಲ್ಲಿ ಆವಾಹಿಸಿ ಪೂಜಿಸುತ್ತಾರೆ. ಯಾವುದೇ ಆರಾಧನೆಯಿದ್ದರೂ ಅಲ್ಲಿ ಕಲಶದಲ್ಲಿ ನೀರು ಇದ್ದೇ ಇರುತ್ತದೆ. ನೀರಿಲ್ಲದೇ ಕಲಶ ಅಪೂರ್ಣ, ಕಲಶವಿಲ್ಲದೇ ಪೂಜೆ ಅಪೂರ್ಣ. ಈ ಕಲಶವನ್ನೇ ಇನ್ನೊಂದು ಪದದಲ್ಲಿ ಕುಂಭ ಅಥವಾ ಪೂರ್ಣಕುಂಭ ಎಂತಲೂ ಕರೆಯುತ್ತೇವೆ. ಕುಂಭಗಳು ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆ, ಮಣ್ಣು ಈ ರೀತಿಯಾಗಿ ಅವರವರ ಶಕ್ತ್ಯಾನುಸಾರ ಆಯಾ ಮೂಲವಸ್ತು/ಲೋಹ/ಮಿಶ್ರಲೋಹ/ಮಣ್ಣು ಗಳಿಂದ ತಯಾರಿಸಿಕೊಂಡಿರಬಹುದು/ಖರೀದಿಸಿ ಬಳಸಬಹುದು. ಆದರೆ ಕಬ್ಬಿಣ, ಪ್ಲಾಸ್ಟಿಕ್ ಬಳಕೆಗೆ ಪ್ರಾಶಸ್ತ್ಯವಿಲ್ಲ! ಕುಂಭಮೇಳಗಳು ಭಾರತದಲ್ಲಿ ಪ್ರಮುಖವಾಗಿ ನಾಲ್ಕು ಪ್ರದೇಶಗಳಲ್ಲಿ ನಡೆಯುತ್ತವೆ: ಪ್ರಯಾಗ, ಸಾಸಿಕ, ಉಜ್ಜೈನಿ ಮತ್ತು ಹರಿದ್ವಾರ ಇವೇ ಆ ಕ್ಷೇತ್ರಗಳಾಗಿದ್ದು ಮೂರು ವರ್ಷಗಳಿಗೊಮ್ಮೆ ಕ್ರಮವಾಗಿ ಒಂದೊಂದು ಕ್ಷೇತ್ರಗಳಲ್ಲಿ ಮೇಳ ಜರುಗುತ್ತಾ, ಪ್ರತೀ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಸರದಿಯಲ್ಲಿ ನಡೆಯುತ್ತದೆ. ಪೂರ್ಣಕುಂಭಮೇಳ ಹೀಗೆ ನಡೆದರೂ ಪ್ರಯಾಗ ಮತ್ತು ಹರಿದ್ವಾರಗಳಲ್ಲಿ ಪ್ರತೀ ಆರುವರ್ಷಗಳಿಗೊಮ್ಮೆ ಅರ್ಧಕುಂಭಮೇಳ ನಡೆಯುತ್ತದೆ. ಪ್ರತೀ ೧೪೪ನೇ ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ಮಹಾಕುಂಭಮೇಳ ಜರುಗುತ್ತದೆ-ಅದು ಈ ಸರ್ತಿ[೨೦೧೩]ನಡೆಯುತ್ತಿದೆ. 


ಕುಂಭಮೇಳಗಳು ನಡೆಯುವುದಕ್ಕೆ ಸೂರ್ಯ[ಸೂರ್ಯನನ್ನು ಸನಾತನಿಗಳು ಗ್ರಹವೆಂದೇ ಕರೆಯುತ್ತಾರೆ], ಚಂದ್ರ ಮತ್ತು ಗುರು[ಬೃಹಸ್ಪತಿ] ಗ್ರಹಗಳ ಚಲನೆ ಕಾರಣವಾಗುತ್ತದೆ. ಗುರುವು ವೃಷಭರಾಶಿಯಲ್ಲೂ ಮತ್ತು ಸೂರ್ಯ ಮಕರರಾಶಿಯಲ್ಲೂ ಇದ್ದಾಗ ಕುಂಭಮೇಳ ಪ್ರಯಾಗದಲ್ಲಿ ನಡೆಯುತ್ತದೆ. ಗುರು ಮತ್ತು ಸೂರ್ಯ ಎರಡೂ ಸಿಂಹರಾಶಿಯಲ್ಲಿದ್ದಾಗ ನಾಸಿಕದಲ್ಲಿ ನಡೆಯುತ್ತದೆ. ಗುರು ಮತ್ತು ಸೂರ್ಯ ಎರಡೂ ವೃಶ್ಚಿಕರಾಶಿಯಲ್ಲಿದ್ದಾಗ ಮೇಳ ಉಜ್ಜೈನಿಯಲ್ಲಿ ನಡೆಯುತ್ತದೆ. ಸೂರ್ಯ ಕುಂಭರಾಶಿಯಲ್ಲಿದ್ದಾಗ ಕುಂಭಮೇಳ ಹರಿದ್ವಾರದಲ್ಲಿ ಘಟಿಸುತ್ತದೆ. ಕುಂಭಮೇಳಗಳು ಘಟಿಸುವಲ್ಲಿ ಸುಮಾರು ೧೦-೧೪ ವಿವಿಧ ಅಖಾಡಾಗಳ ಹಿಂದೂ ಜನ ಅಲ್ಲಿಗೆ ಸ್ನಾನಕ್ಕೆ ಬರುತ್ತಾರೆ. ಶೈವರು, ಶಾಕ್ತರು, ವೈಷ್ಣವರು, ಗಾಣಪತ್ಯರು, ಸ್ಕಾಂದರು, ನಾಗಾಸಾಧುಗಳೇ ಮೊದಲಾದ ವಿಭಿನ್ನ ಪಂಥಗಳ ಸನಾತನಿಗಳು ಈ ಮೇಳಗಳಲ್ಲಿ ಭಾಗವಹಿಸುತ್ತಾರೆ. ಮೇಳ ಸರಿಸುಮಾರು ಒಂದೂವರೆಯಿಂದ ಎರಡು ತಿಂಗಳ ಕಾಲ ಘಟಿಸುತ್ತದೆ. ಪುಣ್ಯನದಿಗಳ ಸಂಗಮದಲ್ಲಿ ಶಾಹಿಸ್ನಾನವೆಂಬ ಪುಣ್ಯಸ್ನಾನವೇ ಪ್ರಧಾನವಾದ ಕುಂಭಮೇಳದಲ್ಲಿ, ಸಂನ್ಯಾಸಿಗಳಿಗೆ ಧರ್ಮದೀಕ್ಷೆ, ಪೂಜೆ-ಪುನಸ್ಕಾರ, ಹೋಮ-ಹವನ, ಪುರಾಣ-ಪ್ರವಚನ-ಪಾರಾಯಣಗಳು, ಭಜನೆ-ಭಕ್ತಿ ಸಂಗೀತ-ನಾಮ ಸಂಕೀರ್ತನೆಗಳು, ಹರಿ-ಹರಕಥಾಕಾಲಕ್ಷೇಪಗಳು, ಧರ್ಮೋಪನ್ಯಾಸಗಳು, ಚಿಂತನ-ಮಂಥನ ಶಿಬಿರಗಳು, ಆಯುರ್ವೇದೀಯ ಚಿಕಿತ್ಸಾ ಶಿಬಿರಗಳು, ಯೋಗ-ಧ್ಯಾನ ತರಬೇತಿಗಳು, ಸಂಕಲ್ಪಸ್ನಾನ, ದಾನ-ಅನ್ನದಾನ, ಸಂನ್ಯಾಸಿಗಳ-ಸಾಧುಸಂತರ ಸೇವೆ, ಪ್ರಸಾದ ಭೋಜನ  ಮೊದಲಾದ ಪುಣ್ಯಕಾರ್ಯಗಳು ನಡೆಯುತ್ತವೆ. ದಕ್ಷಿಣ ಭಾರತದ ಕರ್ನಾಟಕದಲ್ಲೂ ಕಾವೇರಿ-ಕಪಿಲಾ, ತುಂಗಾ-ಭದ್ರಾ, ಭೀಮಾ-ಅಮರಜಾ ಮೊದಲಾದ ನದಿಗಳ ಸಂಗಮ ಕ್ಷ್ರ್ಎತ್ರಗಳು ತಿರುಮಕೊಡಲು ನರಸೀಪುರದಂತಹ ತ್ರಿವೇಣಿ ಸಂಗಮಗಳೂ ಇವೆ. ತಿರುಮಕೊಡಲು ನರಸೀಪುರದಲ್ಲಿ ಅನೇಕ ವರ್ಷಗಳಿಂದ ಕುಂಭಮೇಳವನ್ನು ನಡೆಸಲಾಗುತ್ತಿದೆ, ಈ ವರ್ಷವೂ ಅದು ಇನ್ನೇನು ಆರಂಭಗೊಳ್ಳುತ್ತಿದೆ.    ನತೋಸ್ಮಿ ತುಂಗಾಂ ವಿಲತಸ್ತರಂಗಾಂ ಅಘೌಘಭಂಗಾಂ ಹರಿಪಾದಸಂಗಾಂ |
ನತೋಸ್ಮಿ ಭದ್ರಾಂ ಹೃತಪಾಪನಿದ್ರಾಂ ವಿಮುಕ್ತಿ ಪದ್ಯಾಂ ವಿಮಲೈಕ ಸಾಧ್ಯಾಂ||

ಸ್ನಾನಕ್ಕೆ ವಿಶಿಷ್ಟ ಮಹತ್ವವನ್ನು ನೀಡಿದ ಸನಾತನ ಧರ್ಮದಲ್ಲಿ ನದಿಗಳಿಗೆ ಅತ್ಯಂತ ಮಹತ್ವದ ಸ್ಥಾನವನ್ನು ಕಲ್ಪಿಸಿದ್ದಾರೆ. ಪಾಪಿಗಳು, ಪಾಮರರು, ಜನಸಾಮಾನ್ಯರು ಸ್ನಾನಮಾಡುವುದರಿಂದ ನದಿಗಳು ಅಪವಿತ್ರವಾದರೆ ಸಂತ-ಮಹಂತ-ಸಂನ್ಯಾಸಿಗಳು-ಯೋಗಿಗಳು ಸ್ನಾನಮಾಡುವುದರಿಂದ ನದಿಗಳು ಪವಿತ್ರಗೊಳ್ಳುತ್ತವೆ ಎಂದು ಧರ್ಮ ಹೇಳುತ್ತದೆ. ಜನಸಾಮಾನ್ಯರಿಗೆ ನಿತ್ಯವೂ ಸಂಗಮಗಳಲ್ಲಿ ಸಾಧು-ಸಂತರು ದೊರೆಯುವುದು ಕಷ್ಟ. ಕುಂಭಮೇಳಗಳ ಸಮಯದಲ್ಲಿ ಸ್ನಾನದ ಜೊತೆಜೊತೆಗೇ ಸ್ಥಳದಲ್ಲಿಯೇ ಸಾಧು-ಸಂತರ ದರ್ಶನ, ಪಾದಸ್ಪರ್ಶನ, ಪಾದಸೇವನ, ಸಂತಭಿಕ್ಷೆ ಮೊದಲಾದ ಕಾರ್ಯಗಳಿಗೆ ಅವಕಾಶವೊದಗುತ್ತದೆ. ನಿತ್ಯವೂ ಸಂಗಮದಲ್ಲಿ ಸ್ನಾನಮಾಡಲಾಗದ ಸಾಧು-ಸಂತರಿಗೆ ಈ ಸಮಯದಲ್ಲಿ ಅಂಥಾ ಅವಕಾಶ ಲಭಿಸುತ್ತದೆ. ಈ ಕಾರಣಗಳಿಂದ ಕುಂಭಮೇಳಗಳು ನಡೆಯುತ್ತವೆ.  ಅಸಂಖ್ಯ ಸಾಧು-ಸಂತರು ಭಾಗವಹಿಸುವ ಕುಂಭಮೇಳಗಳಲ್ಲಿ ಒಂದೊಂದು ಅಖಾಡಾಗಳಿಗೂ ಸಂಬಂಧಿಸಿದಂತೇ ಅವರವರ ಪ್ರವೇಶ ಮಾರ್ಗಗಳು, ತಾತ್ಕಾಲಿಕ ವಸಾಹತುಗಳು ಆಯಾ ಕ್ಷೇತ್ರಗಳಲ್ಲಿ ನಿರ್ಮಾಣಗೊಳ್ಳುತ್ತವೆ. ಬಂದ ಭಕ್ತನಿಗೆ ಕಣ್ಣು ಹರಿಸಿದಷ್ಟೂ ಎಲ್ಲೆಲ್ಲೂ ಭಗವಾಧ್ವಜಗಳೇ ಕಾಣಿಸುವುದರ ಜೊತೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾಧು-ಸಂತರು ಸಂಗಮದೆಡೆಗೆ ತೆರಳುತ್ತಿರುವುದು ಕಾಣುತ್ತದೆ. ಆಗಾಗ ಮೆರವಣಿಗೆಗಳಲ್ಲಿ ಸಾಗುವ ಮಂಡಲೇಶ್ವರ, ಮಹಾಮಂಡಲೇಶ್ವರ ಮೊದಲಾದ ಹಿರಿಯ ಸಂತರನ್ನು ನಾವು ಕಾಣಬಹುದಾಗಿರುತ್ತದೆ. ಪ್ರಾದೇಶಿಕವಾಗಿ ನಡೆಯುವ ಜಾತ್ರೆಗಳೇ ದೊಡ್ಡದೆನಿಸಿದರೆ ಕುಂಭಮೇಳಗಳು ನಾವರಿಯದ ಬೃಹದ್ ಗಾತ್ರದವಾಗಿರುತ್ತವೆ. ಎಲ್ಲಿ ನೋಡಿದರೂ ಜನ ಜನ ಜನ. ಅಬಾಲವೃದ್ಧರಾದಿಯಾಗಿ ಕುಂಟರು, ಕುರುಡರು, ಹೆಳವರು, ಅಶಕ್ತರೂ ಸಹ ಇತರರ ಸಹಾಯ ಪಡೆದು ಪುಣ್ಯಸ್ನಾನದಲ್ಲಿ ಭಾಗವಹಿಸುತ್ತಾರೆ. ಭಜನೆ, ವಾದ್ಯಘೋಷ, ವೇದಘೋಷ, ಅಖಂಡ ನಾಮಸ್ಮರಣೆ ಇವೆಲ್ಲಾ ಸತತ ನಡೆದೇ ಇರುತ್ತವೆ. ಸರಕಾರ ಕಲ್ಪಿಸುವ ವಿದ್ಯುದ್ದೀಪಗಳಿಂದ ಅಲಂಕೃತವಾದ ಮೇಳಪುರಿಯಂತೂ ಇಂದ್ರನಗರಿಯಂತೇ ಕಂಗೊಳಿಸುತ್ತದೆ. 


ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲಸಕ್ಕರೆಯಾಗಿ ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು-ಮಂಕುತಿಮ್ಮ

ಕಷ್ಟಗಳು ಮನುಷ್ಯ ಸಹಜ. ಸುಖದ ಜೊತೆಗೆ ದುಃಖ ಎಂಬುದು ಅದರ ಇನ್ನೊಂದು ಮುಖ. ಸದಾ ದುಃಖವೇ ಇರುವುದಿಲ್ಲ, ಸದಾ ಸುಖವೂ ಇರುವುದಿಲ್ಲ; ಅವು ಬದಲಾಗುತ್ತಿರುತ್ತವೆ. ಭುವಿಯ ಬದುಕಿಗೆ ಬರುವ ಜೀವಾತ್ಮನ ಬದುಕಿನ ಚಹರೆಗಳೂ ಬದಲಾಗುತ್ತಿರುತ್ತವೆ. ಹಿಂದೆ ಯಾರದೋ ಆಗಿದ್ದ ಆಸ್ತಿ ಇಂದು ನಮ್ಮದಾಗಿರಬಹುದು, ನಾಳೆ ಇನ್ನಾರದೋ ಆಗಲಿದೆ! ಪರಿವರ್ತನೆ ಜಗದ ನಿಯಮ ಎಂದು ಗೀತೆ ಸಾರುತ್ತದೆ. ನಾವು ಇಲ್ಲೇ ಶಾಶ್ವತವಾಗಿ ನೆಲೆಸಿ ಎಲ್ಲದನ್ನೂ ನಮ್ಮದನ್ನಾಗೇ ಇರಿಸಿಕೊಳ್ಳುತ್ತೇವೆ ಎಂಬುದು ಆಗದಮಾತು. ನಮಗಿಂತಾ ಮೂರು-ನಾಲ್ಕು ತಲೆಮಾರಿನ ಹಿಂದಿನ ನಮ್ಮ ಪೂರ್ವಜರ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ! ನಮ್ಮ ನಂತರದ ನಾಲ್ಕು ತಲೆಮಾರಿನವರಿಗೂ ನಮ್ಮ ಬಗೆಗೆ ತಿಳುವಳಿಕೆ ಇರುವುದಿಲ್ಲ. ಗೋಡೆಗೆ ಆನಿಸಿದ ಪೂರ್ವಜರ ಚಿತ್ರಪಟಗಳು ಕಾಲಾನುಕ್ರಮದಲ್ಲಿ ಹಾಳಾಗಿಹೋದಮೇಲೆ ಅಲ್ಲಿ ಬೇರೇ ಚಿತ್ರಪಟಗಳು ಬರಬಹುದು ಅಥವಾ ಗೋಡೆಯೇ ಕುಸಿದು ಹೊಸದಾಗಿ ನಿರ್ಮಾಣಗೊಳ್ಳಬಹುದು! ನಾನು -ನನ್ನದು-ನಮ್ಮದು ಎಂಬ ಆ ಸಂಕುಚಿತ ಭಾವದ ಅಭಾವ ಉಂಟಾಗಬೇಕಾದರೆ ನಾವು ಮಹಾಕುಂಭಮೇಳಗಳಂತಹ ಮೇಳ ನೋಡಬೇಕು. ನಮ್ಮ ಕಷ್ಟಗಳೆಲ್ಲಾ ಒಮ್ಮೆ ಮರೆತುಹೋಗುತ್ತವೆ. ದೈವಸಾನ್ನಿಧ್ಯದಲ್ಲೇ ನಾವಿರುವಂತಹ ಬೇರೊಂದೇ ಲೋಕದ ಅನುಭವವನ್ನು ಕುಂಭಮೇಳ ನಮಗೆ ನೀಡುತ್ತದೆ. ಅನುಕೂಲವುಳ್ಳವರು ದಾನ ಮಾಡುತ್ತಾರೆ, ಅನುಕೂಲವಿಲ್ಲದವರು ದಾನ ಸ್ವೀಕರಿಸುತ್ತಾರೆ. ಪ್ರಸಾದ ಭೋಜನ ಮಾಡುವಾಗ ಸಾಲಿನಲ್ಲಿ ಬಡವ-ಬಲ್ಲಿದ-ಭಿಕ್ಷುಕ ಎಂಬ ಭೇದವಿಲ್ಲದೇ ಎಲ್ಲರೂ ಕುಳಿತು ಅನ್ನಬ್ರಹ್ಮನನ್ನು ನೆನೆದು ಪ್ರಸಾದ ಭುಂಜಿಸುತ್ತಾರೆ. ಭಗವಂತ ಕೊಟ್ಟ ಅವಕಾಶದಲ್ಲಿ ನಾವು ನಮ್ಮದೇ ಒಳಗವಚಗಳನ್ನು ನಿರ್ಮಿಸಿಕೊಂಡು ಒಳ ಅವಕಾಶವನ್ನು ಹುಟ್ಟಿಸಿಕೊಳ್ಳುತ್ತೇವೆ. ಮಡಕೆಯ ಒಳಗೆ ಇರುವ ಅವಕಾಶ [ಜಾಗ] ಮಡಕೆಯೊಡೆದಾಗ ಹೊರಗಿನ ಅವಕಾಶದಲ್ಲಿ ಲೀನವಾಗುತ್ತದೆ. ಮಡಕೆಯೊಳಗೆ ಇರುವ ಜಾಗ ಹೊರಗಿನ ಜಾಗಕ್ಕೆ ಸೇರಿದಾಗ ಹೊರಗಿನ ಜಾಗ ಹೆಚ್ಚಾಯಿತೋ? ಇಲ್ಲ. ಹೊರಗಿನ ಜಾಗದಲ್ಲಿ ಮಡಕೆಯನ್ನೇರ್ಪಡಿದರೆ ಅಲ್ಲಿನ ಜಾಗದಲ್ಲಿ ಕಮ್ಮಿಯೇನೂ ಆಗುವುದಿಲ್ಲ, ಬದಲಾಗಿ ಆ ಜಾಗ ಮಡಕೆಯೊಳಗೆ ಇರುತ್ತದೆ, ಅಷ್ಟೇ. ನದಿಗಳು ವರ್ಷಪೂರ್ತಿ ಹರಿದು ಸಮುದ್ರಕ್ಕೆ ಸೇರಿ ಸೇರಿ ಸೇರಿ ಸಮುದ್ರ ಉಕ್ಕಿಯೋಯ್ತೋ? ಇಲ್ಲ! ಯಾಕೆಂದರೆ ಸಮುದ್ರದ ನೀರೇ ಸೂರ್ಯನ ಕೃಪೆಯೆಂಬ ಕಿರಣಗಳಿಂದ ಆವಿಯಾಗಿ, ಘನೀಕರಿಸಿ ಮೋಡವಾಗಿ, ಮಳೆಯಾಗಿ, ಭೂಮಿಯಲ್ಲಿ ಇಂಗಿ, ಮತ್ತೆ ಬಿಂದುವಾಗಿ-ಹನಿಹನಿ ಸೇರಿ ಹರಿವತೊರೆಯಾಗಿ, ಹಳ್ಳ-ನದಿಯಾಗಿ ಕೊನೆಗೊಮ್ಮೆ ಸಿಂಧುವನ್ನು ಸೇರುವುದೇ ಪ್ರಕೃತಿ ನಿಯಮ. ಈ ಚಾಲನೆಗೆ ಸೃಷ್ಟಿಕರ್ತ ಭಗವಂತ ನಮ್ಮಿಂದ ಪ್ರತಿಫಲವಾಗಿ ಏನನ್ನೂ ಕೇಳುವುದಿಲ್ಲ; ಬದಲಾಗಿ ಕಾಲಕಾಲಕ್ಕೆ ಮಳೆಯಾದರೇ ಭೂಮಿತಾಯಿ ಹಸಿರುಡುತ್ತಾಳೆ, ಫಲಭರಿತವಾಗುತ್ತಾಳೆ. ಅಂತಹ ಅನನ್ಯ ದಿವ್ಯ ಶಕ್ತಿಯ ನೆನಪಿನಲ್ಲಿ, ಆ ದಿವ್ಯ ಸ್ಮರಣೆಯಲ್ಲಿ ಕೆಲಹೊತ್ತು ಕಳೆಯುವ ಮಂಗಲಮಯ ಸನ್ನಿವೇಶವೇ ಕುಂಭಮೇಳ.
ಸಲಿಲ ಗಂಗೆ ಜಲತರಂಗೆ ತುಂಗೆ ಭದ್ರೆ ಪಾವನ
ಜಲಲ ಜಲದಿ ಮಿಂದು ಧನ್ಯವಾಯಿತೆನ್ನ ಜೀವನ
ಕಲಿಕಲ್ಮಷ ಅಘನಾಶಿನಿ ಯಮುನೆ ಸಿಂಧು ಸರಸತೀ
ನಲಿಯುತ ಕಾವೇರಿ ಕಪಿಲೆ ಅದದೊ ಆ ಶರಾವತಿ

ಒಲಿದು ಕಾಳಿ ಕೃಷ್ಣೆ ಭೀಮೆ ಅಮರಜಾ ನರ್ಮದಾ
ಬೆಳೆದ ಶಿಪ್ರ ಅಲಕನಂದ ಕುಮುದ್ವತಿಯರಾಮುದ
ಮಲಪ್ರಭಾ ಆ ಘಟಪ್ರಭಾ ಚಂದ್ರಭಾಗ ಫಲ್ಗುಣಿ
ಹಲವ ನೆನೆವೆ ಗೋದಾವರಿ ಗಂಡಕಿ ನೇತ್ರಾವತಿ

ಇಳೆಯ ಖುಷಿಗೆ ಬೆಳೆಯ ತೃಷೆಗೆ ಬೆಳಕನೀಡೆ ಹರಸುತ
ಕಲಕಲಕಲ ಕಲರವದೊಳು ಮಂದಗಮನೆ ಹರಿಯುತ
ಬಲಗೊಳಿಸುವ ನದಿತಾಯ್ಗಳೆ ಬೆಳಗಲೆಮ್ಮ ಭಾರತ
ಮಿಲನಗೊಂಡ ನಿಮ್ಮ ಕಂಡೆ ಕುಂಭಮೇಳ ಸಾರುತ

ಕೊಳೆತೊಳೆಯಿತು ಮನ ಹರುಷದಿ ಪಡೆದು ಆಯ್ತನನ್ಯವು
ಬಳುವಳಿಯದು ನೆನಪಸಾರ ನೀವದೆಷ್ಟು ಧನ್ಯವು ! 
ಥಳ ಥಳ ಥಳ ಹೊಳೆವ ಜ್ಯೋತಿ ಮಂಗಳನೀರಾಜನ
ಅಲೆಅಲೆಯಲು ನರ್ತಿಸುತಿಹ ನೀವು ಅದಕೆ ಭಾಜನ

[ನದಿತಾಯಂದಿರಿಗೆ ಸ್ವರಚಿತ ಕವನದಾರತಿ]ರಾಮಾಯಣದ ಶ್ರೀರಾಮಚಂದ್ರಮನ ಪೂರ್ವಜ ರಾಜರ್ಷಿ ಭಗೀರಥ, ತನ್ನ ಪೂರ್ವಜ ಸಗರಚಕ್ರವರ್ತಿಯ ಪುತ್ರರೆನಿಸಿ, ಕಪಿಲಮಹರ್ಷಿಯ ಶಾಪದಿಂದ ಬೂದಿಯಾಗಿಬಿದ್ದಿದ್ದ ಸಾವಿರ ಜೀವಾತ್ಮರಿಗೆ ಸದ್ಗತಿಯನ್ನೊದಗಿಸುವ ಸಲುವಾಗಿ, ತನ್ನ ಅಖಂಡ ತಪಸ್ಸಿನಿಂದ ದೇವಗಂಗೆಯನ್ನು ಭೂಮಿಗೆ ತಂದ-ಆಕೆಯೇರ್ ಭಾಗೀರಥಿ. ಅಂತಹ ದೇವಗಂಗೆ-ಭಾಗೀರಥಿ ಮಹರ್ಷಿ ಜಹ್ನುವಿನಿಂದ ಆಪೋಷಣೆಗೊಳಗಾಗಿ, ಆತನ ಕಿವಿಯಿಂದ ಹೊರಹೊರಟು ಜಾಹ್ನವಿಯಾದಳು. [ಕಾಶಿಯಲ್ಲಿ ಆಕೆಯ ಸುತ್ತ ಸಾವಿರಾರು ಕಥೆಗಳು ಜನರ ಬಾಯಲ್ಲಿವೆ. ಅಂತಹ ಕಥೆಗಳಲ್ಲಿ ಪಂಡರಾಪುರದ ಸಂಸ್ಥಾಪಕ ಪುಂಡಲೀಕನ ಕಥೆಯೂ ಒಂದು. ಕಾಶಿಯಲ್ಲಿರುವ ಸ್ನಾನ ಘಟ್ಟಗಳಲ್ಲಿ ಕೋಟ್ಯಂತರ ಭಕ್ತರಿಗೆ ದಿವ್ಯಾನುಭವಗಳು ಆಗಿವೆ.] ನಂತರ ವಿವಿಧ ಹಂತಗಳಲ್ಲಿ ವಿವಿಧ ಹೆಸರುಗಳಲ್ಲಿ ಹರಿದ ಗಂಗಾಮಾಯಿ, ಪ್ರಯಾಗದಲ್ಲಿ, ಸೂರ್ಯಪುತ್ರಿ-ಯಮನ ಸಹೋದರಿಯಾದ ಯಮುನೆಯನ್ನೂ ಜ್ಞಾನವಾಹಿನಿಯಾದ ಸರಸ್ವತಿಯನ್ನೂ ಸಂಗಮಿಸುತ್ತಾಳೆ. ಅಂತಹ ಕ್ಷೇತ್ರವನ್ನು ಧರ್ಮಸೂತ್ರಗಳು ದಾಖಲಿಸಿವೆ. ಬೆಳ್ಳಗಿನ ಅಲೆಗಳ ನದಿಗೆ ಕಪ್ಪುನೀರಿನ ನದಿಯು ಸೇರುವ ಸ್ಥಳದಲ್ಲಿ, ಅಕ್ಷಯವಾದ ಆಲದಮರವಿದೆ. ಅಂತಹ ಸಂಗಮದ ಕ್ಷೇತ್ರ ತೀರ್ಥರಾಜ ಪ್ರಯಾಗವೆನಿಸಿದೆ. ಪ್ರಾಗೈತಿಹಾಸಿಕ ದಾಖಲೆಗಳು ಹೇಳುವ ಇಂತಹ ಪುಣ್ಯ ಸ್ಥಳಗಳಲ್ಲಿ ಸ್ನಾನಮಾಡುವುದು ಸನಾತನಿಗಳಲ್ಲಿ ಹೆಚ್ಚಿನ ಜನರಿಗೆ ಜೀವನದಲ್ಲಿ ಒಮ್ಮೆಮಾತ್ರ ಸಿಗುವ ಭಾಗ್ಯ. ಅದಕ್ಕಾಗಿ ಕುಂಭಮೇಳದಂತಹ ಜಾತ್ರೆಗಳು ನಡೆಸಲ್ಪಡುತ್ತವೆ. 


ಈ ಸರ್ತಿ ನಮ್ಮ ಜೀವಿತಾವಧಿಯಲ್ಲೇ ೧೪೪ ವರ್ಷಕ್ಕೊಮ್ಮೆ ಜರುಗುವ ಮಹಾಕುಂಭಮೇಳ ಈಗ ಪ್ರಯಾಗದಲ್ಲಿ ನಡೆಯುತ್ತಿದೆ. ಆರಂಭದಾರಭ್ಯ ಇಲ್ಲೀವರೆಗೆ ಸರಿಸುಮಾರು ೪೫-೫೦ ಕೋಟಿ ಜನ ಶಾಹಿಸ್ನಾನ ಮಾಡಿ ಪುನೀತರಾಗಿದ್ದಾರೆ. ಜನವರಿ ೨೭ ರಿಂದ ಆರಂಭಗೊಂಡ ಈ ಮಹಾಕುಂಭಮೇಳದಲ್ಲಿ ಕೆಳಕಂಡ ಹಬ್ಬಗಳ ಆಚರಣೆಗಳು ನಡೆದಿವೆ/ನಡೆಯುತ್ತವೆ:

• 14 January 2013 (Monday) – Makar Sankranti
• 27 January 2013 (Sunday) – Paush Purnima
• 6 February 2013 (Wednesday) – Ekadashi Snan
• 10 February 2013 (Sunday) – Mauni Amavasya Snan (Main Bathing Day)
• 15 February 2013 (Friday) – Vasant Panchami Snan
• 17 February 2013 (Sunday) – Rath Saptami Snan
• 21 February 2013 (Thursday) – Bhisma Ekadashi Snan
• 25 February 2013 (Monday) – Maghi Purnima Snana
• 10 March 2013 (Sunday) – Mahashivratriಸ್ಥಾನಿಕ ಸರಕಾರ ಮಹಾಕುಂಭಮೇಳದಲ್ಲಿ ಅತ್ಯುತ್ತಮ ವ್ಯವಸ್ಥೆಯನ್ನು ಕಲ್ಪಿಸಿದೆ. ಸಾವಿರ ಜನ ಸೇರಿದ ಜಾಗದಲ್ಲೇ ಅನಾನುಕೂಲಗಳು, ಕೊರತೆಗಳು, ವ್ಯವಸ್ಥೆಯಲ್ಲಿನ ದೋಷಗಳು ಕಾಣುತ್ತವೆ, ಹೀಗಿರುವಾಗ ಕೋಟ್ಯಂತರ ಜನ ತಿಂಗಳಾನುಗಟ್ಟಲೆ ನಿತ್ಯ ಹರಿದು ಬಂದು-ಹೋಗಿ ಮಾಡುತ್ತಿರುವಾಗ ಯಾವ ಮಟ್ಟದ ವ್ಯವಸ್ಥೆ ಮಾಡಿರಬಹುದೆಂಬುದನ್ನು ನಾವು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾರೊಬ್ಬರೂ ಕೊರತೆಯಾಯ್ತು ಎಂದುಕೊಳ್ಳುವಂತೇ ಇರದ ಕುಂಭಮೇಳ ಎನ್ನಿಸಿದೆ. ತಾತ್ಕಾಲಿಕವಾಗಿ ಹಾಕಿರುವ ತಂಬು-ಗುಡಾರಗಳಲ್ಲಿ ಯಾತ್ರಿಕರು ತಂಗಬಹುದಾಗಿದೆ. ಕುಡಿಯುವ ನೀರಿಗೆ, ಶೌಚಕ್ಕೆ, ಊಟೋಪಚಾರಗಳಿಗೆ, ಸಾಮಾನು ವಗೈರೆ ಬಂದೋಬಸ್ತಾಗಿ ಇಟುಕೊಳ್ಳಲಿಕ್ಕೆ, ರಕ್ಷಣೆಗೆ, ಸಂವಹನಮಾಧ್ಯಮಗಳಿಗೆ, ಮಾಧ್ಯಮಗಳಿಗೆ, ಸಾಗಾಟ-ಸಾರಿಗೆಗೆ, ಕಳೆದುಹೋದವರನ್ನು ಹುಡುಕಲಿಕ್ಕೆ ಎಲ್ಲದಕ್ಕೂ ಪ್ರತ್ಯೇಕ ವಿಭಾಗಗಳಿವೆ. ವಿಶ್ವಹಿಂದೂ ಪರಿಷತ್ತಿನ ವಿರಾಟ್ ಸಭಾಂಗಣದಲ್ಲಿ ಧರ್ಮಸಮ್ಮೇಳನಗಳು ನಿತ್ಯವೂ ನಡೆಯುತ್ತಿವೆ. ಜಗತ್ತಿನಲ್ಲಿಯೇ ಇಷ್ಟುದೊಡ್ಡ ಪ್ರಮಾಣದ ಜಾತ್ರೆ ಇನ್ನೊಂದಿಲ್ಲ ಎಂಬುದು ವಿಶೇಷವಾಗಿದೆ. ಕುಂಭಮೇಳದಲ್ಲಿ ಭಾಗವಹಿಸಿಬಿಟ್ಟರೆ ಮುಗಿಯುವವರೆಗೂ ಇದ್ದುಬಿಡುವ ಮನಸ್ಸಾಗುತ್ತದೆ, ನೋಡಿಮುಗಿಯಿತು ಎಂಬ ಭಾವನೆ ಬರುವುದಿಲ್ಲ; ಇನ್ನೂ ಇನ್ನೂ ನೋಡಬೇಕು, ಮತ್ತಷ್ಟು ಕಣ್ತುಂಬಿಸಿಕೊಳ್ಳಬೇಕು, ನಾನಾ ರೀತಿಯ ಸಾಧು-ಸಂತರನ್ನೂ ಅವರ ವೈಶಿಷ್ಟ್ಯಗಳನ್ನೂ ಕಂಡು-ಕೇಳಿ ತಿಳಿದುಕೊಳ್ಳಬೇಕು ಎನಿಸುತ್ತದೆ. ಇದ್ದರೆ ಇಂಥಾದ್ದೊಂದು ಧರ್ಮವಿರಬೇಕೆಂಬ ಧನ್ಯತೆ ಒಳಗಿನಿಂದ ಹರಿದುಬರುತ್ತದೆ; ಹೊರನಡೆವಾಗ ಹೃದಯ ತುಂಬಿಬಂದು ಕಣ್ಣುಗಳು ತಂತಾನೇ ಆನಂದಬಾಷ್ಪವನ್ನು ಉದುರಿಸುತ್ತವೆ. ತೀರ್ಥರಾಜ ಪ್ರಯಾಗ ಎಂದೂ ಮರೆಯದಂತೆ ಮನದಲ್ಲಿ ಉಳಿದುಹೋಗುತ್ತದೆ. ಸಾಧ್ಯವಾದವರು ಹೋಗಿಬನ್ನಿ, ಸಾಧ್ಯವಾಗದವರು ಕೇಳಿ-ತಿಳಿದು ಆನಂದಿಸಿ, ತೀರ್ಥರಾಜ ಪ್ರಯಾಗಕ್ಕೊಮ್ಮೆ ಸಾಷ್ಟಾಂಗ ನಮಸ್ಕಾರ, ಗಂಗಾ-ಯಮುನಾ-ಸರಸ್ವತಿಯರಿಗೂ ಪ್ರತ್ಯೇಕ ಪ್ರತ್ಯೇಕ ನಮಸ್ಕಾರಗಳು, ಮಹಾಕುಂಭಮೇಳ-ತೀರ್ಥಸ್ನಾನದ ಪುಣ್ಯಕಥೆಯನ್ನು ಕೇಳಿದ ನಿಮಗೂ ನಮಸ್ಕಾರ.                

ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗುಸರಯೂ ಶ್ರೀ ಗೋಮತೀ ಗಂಡಕೀ |
ಕಾವೇರೀ ಕಪಿಲಾ ವರಾಹತನಯಾ ನೇತ್ರಾವತೀತ್ಯಾದಯಃ
ನದ್ಯಃ ಶ್ರೀಹರಿಪಾದಪಂಕಜ ಭವಾಃ ಕುರ್ವಂತು ನೋ ಮಂಗಳಂ ||


Thursday, February 21, 2013

ಆಯುರ್ವೇದದ ತಾಕತ್ತು ಅರ್ಥವಾಗಬೇಕಿದ್ದರೆ ಡಾ. ಗಿರಿಧರ ಕಜೆಯಂತಹ ವೈದ್ಯರು ಇರಬೇಕು!

ಚಿತ್ರಋಣ: ಅಂತರ್ಜಾಲ 
ಆಯುರ್ವೇದದ ತಾಕತ್ತು ಅರ್ಥವಾಗಬೇಕಿದ್ದರೆ ಡಾ. ಗಿರಿಧರ ಕಜೆಯಂತಹ ವೈದ್ಯರು ಇರಬೇಕು!


ಕೃತಘ್ನತೆ
-------

ಪ್ರತೀರಾತ್ರಿ 
ಎರಡು ಜಾಪಾಳ ಮಾತ್ರೆ
ಸೇವಿಸುತ್ತಿದ್ದ
ಆಸಾಮಿ
"ಬಾಳೇಹಣ್ಣು
ತಿಂತೇನೆ
ಹಾಗಾಗಿ
ಮಲವಿಸರ್ಜನೆ
ಸರಿಯಾಗಿ
ಆಗ್ತಿದೆ"
ಎಂದ !
                ------

ದೂರು
------

"ಹೆರಿಡಿಟರಿ ಆಗಿ
ಮಾತ್ರ ಬರುವ
ಈ ಕಾಯಿಲೆ,
೯೯ ಪರ್ಸೆಂಟು
ನಮ್ಮೆಜಮಾನ್ರಿಂದಲೇ
ನಂಗೆ
ಬಂದಿರೋದು ಡಾಕ್ಟ್ರೇ


   -----

"ವೈದ್ಯರೇ, ಬೊಜ್ಜು ಕರಗಿಸಲು ಏನುಮಾಡಬೇಕು?"

"ಪ್ರತಿ ರಾತ್ರಿ ಎರಡು ಚಪಾತಿ ತಿನ್ನಿ"

" ಅದು ಸರಿ, ಎರಡು ಚಪಾತೀನ ಊಟಕ್ಕೆ ಮೊದಲು ತಿನ್ನಲೋ ನಂತರವೋ?"

      ------

ಇಂಥಾ ಜೋಕುಗಳನ್ನೂ ಆಯುರ್ವೇದದ ಬಗೆಗಿನ ಪೂರಕ ಮಾಹಿತಿಗಳ ಲೇಖನಗಳನ್ನೂ ಓದಬೇಕೆಂದರೆ ನೀವೊಂದು ಚಿಕ್ಕ ಕೆಲಸಮಾಡಬೇಕು! ಯಾವ ಕೆಲಸ ಎಂಬುದನ್ನು ಬಾಕಿ ಇಟ್ಟುಕೊಳ್ಳುತ್ತೇನೆ, ಅದು ಸ್ವಲ್ಪ ಸೀಕ್ರೆಟ್ಟು!  

ಮುಖ ನೋಡಿ ಮುದುಕನೊಬ್ಬ ನಕ್ಕ! ನಾನೂ ನಕ್ಕೆ. ನಾನಂತೂ ಪುರಾಣಿಕ ಎಂಬುದು ನಿಮಗೆಲ್ಲಾ ಈಗಾಗಲೇ ತಿಳಿದುಹೋಗಿರುವ ಸೀಕ್ರೆಟ್ಟು. ಮುದುಕನೂ ನನ್ನ ಹಾಗೇನೇ. ಆದರೆ ಮುದುಕ ಕ್ವಾಲಿಫೈಡ್ ಎಂಬುದು ನೋಡಿದ ಕೂಡಲೇ ಗೊತ್ತಾಗ್ತಿತ್ತು; ಅಂದರೆ ನಾನು ಅದಲ್ಲ ಎಂದುಕೊಳ್ಳಬೇಡಿ ಮತ್ತೆ! ಮುದುಕ ಹೇಳಿದ ಕಥೆ ಬಹಳ ದೀರ್ಘವಾಗಿತ್ತು; ಅರ್ಧ ಕೇಳುತ್ತಿರುವಾಗ ನನಗೆ ಕೇಳಲು ಹೆದರಿಕೆಯಾಗಿ ಇನ್ನುಮುಂದೆ ಹೇಳಲೇಬೇಡಿ ಎನ್ನೋಣ ಎಂದುಕೊಂಡೆ, ಆದರೂ ನನ್ನಪಾಡಿಗೆ ನಾನೇ ಧೈರ್ಯ ತಂದುಕೊಂಡು ಸುಮ್ಮನೇ ಹೂಂ ಗುಟ್ಟುತ್ತಿದ್ದೆ. ಕಥೆ ಮುಗಿಯುವವರೆಗೂ ಚಿಕಿತ್ಸೆ ಪಡೆಯುತ್ತಿದ್ದ ರೋಗಿ ಯಾರೆಂಬುದು ಗೊತ್ತಿರದ ಸೀಕ್ರೆಟ್ಟು! ಕಥೆ ಮುಗಿದಾಗ ಮಾತ್ರ ನೆಮ್ಮದಿಯ ದಿನ ನನ್ನದಾಗಬಹುದೆಂಬ ಭಾವನೆ ಮನದೊಳಗೆಲ್ಲೋ ಮೂಡಿದ್ದು ಅಂದು ಯಾರಲ್ಲಿಯೂ ಹೇಳಿಕೊಂಡಿರದ ಸೀಕ್ರೆಟ್ಟು!!   

ಅಂದಹಾಗೇ, ಮೈಸೂರಿನ ರಾಮಕೃಷ್ಣನದ್ದು ನಿವೃತ್ತ ಜೀವನ. ಮಕ್ಕಳು ವಿದೇಶದಲ್ಲೇ ಸೆಟ್ಲ್ ಆಗಿದ್ದರಿಂದಲೂ, ಇಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲವೆಂತಲೂ ವೃದ್ಧಾಪ್ಯ ಕಳೆಯಲು ತೆರಳಿದ್ದು ’ವಿಮಾನದಲ್ಲಿ ಹತ್ತಿರ’ವೆನಿಸುವ ಅಮೇರಿಕೆಗೆ! ಅಮೇರಿಕಾದಲ್ಲಿ ಮಕ್ಕಳ ಮನೆಯಲ್ಲಿ ಉಳಿದುಕೊಂಡು ನೆಮ್ಮದಿಯಿಂದಿದ್ದ ರಾಮಕೃಷ್ಣನಿಗೆ, ನಡೆದಾಡುವಾಗ ಕೆಲವೊಮ್ಮೆ ಇದ್ದಕ್ಕಿದ್ದಂತೇ ಶರೀರದ ಎಡಪಾರ್ಶ್ವದ ತುಂಬಾ ತಡೆಯಲಾರದ ನೋವು ಅನುಭವಿಸುವಂತಹ ದಿನಗಳು ಎದುರಾದವು; ನಡೆಯುವಾಗ ಮನೆಯ ಲಾನ್ ನಲ್ಲಿ ಬಿದ್ದುಬಿಡುತ್ತಿದ್ದ. ಸಹಿಸಲಸಾಧ್ಯ ನೋವು, ಎಡಪಾರ್ಶ್ವದ ಸ್ಥಿಮಿತವೇ ತಪ್ಪಿದ ಅನುಭವ. ಮಕ್ಕಳು ಬಿಡುತ್ತಾರೆಯೇ? ಅಮೇರಿಕೆಯಲ್ಲಿರುವ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆಲ್ಲಾ ಕರೆದೊಯ್ದರು. ನೂರಾರು ರೀತಿಯ ಪರೀಕ್ಷೆಗಳು ನಡೆದವು. ಅನೇಕ ವಿಧದ ಔಷಧಗಳು ಹೊಟ್ಟೆಯನ್ನು ಹೊಕ್ಕು ಉರಿಹೆಚ್ಚಿಸಿದವು. ಅಲ್ಲಿನ ವೈದ್ಯರಿಗೆ ಕಾಯಿಲೆ ಮಾತ್ರ ಗೊತ್ತಾಗಲೇ ಇಲ್ಲ! ರಾಮಕೃಷ್ಣ ಮತ್ತು ಮಕ್ಕಳು ಕೇಳಿದಾಗ ಇನ್ನೂ ಪರೀಕ್ಷೆಯಾಗಬೇಕು ಎನ್ನುತ್ತಿದ್ದರು. ಹೀಗೇ ವರ್ಷಗಟ್ಟಲೆ ಕಾಲ ನೂಕಿದ ರಾಮಕೃಷನಿಗೆ ನೋವು ಬಂದಾಗ ಅದನ್ನು ಸಹಿಸಲು ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳಲು ಹೇಳಿದ್ದರ ಜೊತೆಗೆ ’ಪೇನ್ ಮ್ಯಾನೇಜ್ ಮೆಂಟ್’ಬಗ್ಗೆ ದಿನಗಟ್ಟಲೆ ತರಬೇತಿ ನಡೆಸಿ ಕೈತೊಳೆದುಕೊಂಡರು.

ಇಷ್ಟೇ ತನ್ನ ಜೀವನವೆಂದುಕೊಂಡ ರಾಮಕೃಷ್ಣ[ಅಶ್ವತ್ಥನಾರಾಯಣ], ಸುಮ್ಮನೇ ಮಲಗಿದ್ದಾಗ, ಒಮ್ಮೆ ಮಾತೃನೆಲ ಭಾರತದ ನೆನಪು ಬಂತು, ಇಲ್ಲಿನ ಆಯುರ್ವೇದದ ನೆನಪು ಬಂತು; ಯಾಕಾಗಬಾರದು ಒಮ್ಮೆ ಪ್ರಯತ್ನಿಸೋಣ ಎಂದುಕೊಂಡ ರಾಮಕೃಷ್ಣನಿಗೆ ಗೆಳೆಯರೊಬ್ಬರು ಕೆಲವು ಆಯುರ್ವೇದ ವೈದ್ಯರುಗಳ ಹೆಸರನ್ನು ಕೊಟ್ಟರು. ಭಾರತಕ್ಕೆ ಬಂದಿಳಿದ ರಾಮಕೃಷ್ಣ, ಸೀದಾ ನಡೆದದ್ದು ದಕ್ಷಿಣ ಕನ್ನಡಕ್ಕೆ. ಅಲ್ಲೊಬ್ಬ ಶೆಣೈ ಎನ್ನುವ ಮುಪ್ಪಿನ ಆಯುರ್ವೇದ ವೈದ್ಯರು-ಬೆಳಗಿನ ಪೂಜೆಯನ್ನು ಮುಗಿಸಿ ಮನೆಯ ಹೊರಜಗುಲಿಗೆ ಬಂದರು. ರಾಮಕೃಷ್ಣ ತನ್ನ ತೊಂದರೆಯನ್ನು ಹೇಳಿಕೊಂಡ. ತುಸು ಚಿಂತಿಸಿದ ಶೆಣೈ "ನೋಡಪ್ಪಾ, ನನಗೀಗ ಮುಪ್ಪು ಅವರಿಸಿ ಎಲ್ಲಾ ವಿಧದ ಚಿಕಿತ್ಸೆಗಳನ್ನೂ ಮಾಡಲು ಕಷ್ಟವಾಗುತ್ತದೆ. ನನ್ನ ಸಲಹೆಯನ್ನು ಸ್ವೀಕರಿಸುತ್ತೀಯಾ ಎಂತಾದರೆ ನಿನಗೊಂದು ಮಾತು ಹೇಳುತ್ತೇನೆ."  "ಆಯ್ತು ಹೇಳಿ" ಎಂದ ರಾಮಕೃಷ್ಣನಿಗೆ ಶೆಣೈ ಹೇಳಿದ್ದು"ಬೆಂಗಳೂರಿನಲ್ಲಿ ನನ್ನ ಶಿಷ್ಯ ಗಿರಿಧರ ಕಜೆ ಇದ್ದಾನೆ, ವಿಳಾಸ ಕೊಡುತ್ತೇನೆ, ನಾನೂ ಫೋನಿನಲ್ಲಿ ಹೇಳುತ್ತೇನೆ, ಹೋಗಿ ಅಲ್ಲಿ ಚಿಕಿತ್ಸೆ ಪಡೆ." 

ಡಾ| ಗಿರಿಧರ ಕಜೆ, ಒಮ್ಮೆ ತನ್ನ ಚಿಕಿತ್ಸಾಲಯದಲ್ಲಿ ಇದ್ದಾಗ ಭೇಟಿಗೆ ಬಂದ ರಾಮಕೃಷ್ಣ ನಡೆದ ಕಥೆಯನ್ನೆಲ್ಲ ಹೇಳಿದ. ನಾಡಿ ಪರೀಕ್ಷೆಯಿಂದಲೇ ಎಲ್ಲವನ್ನೂ ಅರಿತ ಡಾ|ಕಜೆ, "ಮೂರು ತಿಂಗಳ ಸಮಯ ಹೆಚ್ಚಿನ ಚಿಕಿತ್ಸೆ ಬೇಕು, ಅಮೇಲೆ ಕೆಲವು ವರ್ಷ ಔಷಧ ಚಿಕಿತ್ಸೆ ಮುಂದುವರಿಸಬೇಕು" ಎಂದರಂತೆ. ಡಾಕ್ಟರು ಹೇಳಿದ್ದನ್ನು ಒಪ್ಪಿದ ರಾಮಕೃಷ್ಣನಿಗೆ ಉಳಿದುಕೊಳ್ಳಲು ಮನೆ ಎಂಬುದೂ ಕೂಡ ಬೆಂಗಳೂರಿನಲ್ಲಿರಲಿಲ್ಲ; ಸಂಬಂಧಿಕರ ಮನೆಯಲ್ಲಿ ಇರುವುದು ಇಷ್ಟವಿರಲಿಲ್ಲ. ದೂರದ ಅಮೇರಿಕೆಯಿಂದ ಇಲ್ಲಿಯವರೆಗೆ, ಆಯುರ್ವೇದವನ್ನು ನಂಬಿ ಬಂದ ರಾಮಕೃಷ್ಣನನ್ನು ಹಾಗೇ ಕಳಿಸುವ ಮನಸ್ಸು ಡಾ. ಕಜೆಯವರಿಗೆ ಇರಲಿಲ್ಲ. ತಮ್ಮ ಪಂಚಕರ್ಮ ಚಿಕಿತ್ಸಾ ಪದ್ಧತಿಗೆ ಮೀಸಲಿಟ್ಟುಕೊಂಡ ಚಿಕಿತ್ಸಾಲಯದಲ್ಲೇ ಒಂದು ಕೊಠಡಿಯಲ್ಲಿ ರಾಮಕೃಷ್ಣನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು. ವಮನ, ವಿರೇಚನ, ಬಸ್ತಿ ಮೊದಲಾದ ಪಂಚಕರ್ಮ ಚಿಕಿತ್ಸೆಯ ವಿಭಾಗಗಳು ಹಂತಹಂತವಾಗಿ ನಡೆಯುತ್ತಿದ್ದ ಹಾಗೇ ರಾಮಕೃಷ್ಣ ತೆಳ್ಳಗಾಗುತ್ತ ನಡೆದ. ದಿನೇ ದಿನೇ ಕೃಶವಾಗುತ್ತಾ ಆಗುತ್ತಾ ಒಂದೂವರೆ ತಿಂಗಳಲ್ಲಿ ಸತ್ತೇ ಹೋಗುವನೇನೋ ಎನ್ನುವಷ್ಟು ಅಶಕ್ತನಾಗಿಬಿಟ್ಟ. ಡಾಕ್ಟರಮೇಲಿದ್ದ ಭರವಸೆ ಕಳೆದೇ ಹೋಗಿತ್ತಂತೆ. ಮಕ್ಕಳಿಗೆ ದೂರವಾಣಿಯಲ್ಲಿ ಮಾತನಾಡಿ "ಸುಖವಾಗಿದ್ದೇನೆ" ಎನ್ನುತ್ತಿದ್ದರೂ, ’ಬದುಕಿದ್ದರೆ ಮರಳಿ ಬರುತ್ತೇನೆ’ ಎಂದು ಮನದಲ್ಲೇ ಅಂದುಕೊಳ್ಳುತ್ತಿದ್ದನಂತೆ. ಗುಳಿಬಿದ್ದ ಕೆನ್ನೆ, ಹೂತುಹೋದ ಕಣ್ಣುಗಳು ಥೇಟ್ ತಪಸ್ಸಿಗೆ ಕುಳಿತ ದಧೀಚಿ! ಹಾಗೂ ಕೊನೆಗೊಮ್ಮೆ ತಾಳಲಾರದೇ "ಡಾಕ್ಟ್ರೇ ನಾನು ಬದುಕುತ್ತೀನಾ?" ಕೇಳಿದ್ದನಂತೆ. ಡಾ|ಕಜೆಗೆ ಎಳೆಯವಸ್ಸಾಗಿದ್ದರಿಂದ ಅನುಭವ ಸಾಲದೇನೋ ಎಂಬ ಅನುಮಾನವೂ ರಾಮಕೃಷ್ಣನಿಗೆ ಬಂದುಬಿಟ್ಟಿತ್ತೋ ಏನೋ. ಡಾಕ್ಟರು "ಏನೂ ಚಿಂತೆಮಾಡಬೇಡಿ, ಇನ್ನು ಮುಂದಿನ ಕೆಲವೇ ದಿನಗಳಲ್ಲಿ ನೀವು ದಪ್ಪಗಾಗುತ್ತೀರಿ, ಶಕ್ತಿ ಬರುತ್ತದೆ" ಎಂದಿದ್ದರಂತೆ. ಮೊದಲ ಒಂದೂವರೆ ತಿಂಗಳ ನಂತರದಲ್ಲಿ ಪಂಚಕರ್ಮದ ಮುಂದಿನ ಭಾಗಗಳು ಆರಂಭವಾದವು. ಕೊಡುವ ಆಹಾರಕ್ರಮದಲ್ಲೂ ಬದಲಾವಣೆಯಾಯ್ತು. ಜೊತೆಗೆ ಔಷಧಿಗಳೂ ಕೊಡಲ್ಪಡುತ್ತಾ ರಾಮಕೃಷ್ಣ ಸ್ವಲ್ಪ ಗಟ್ಟಿ ಆದ; ಬಾಳೆಹಣ್ಣಿಗಿರುವ ಸಿಪ್ಪೆಯಂತೇ, ಸೊರಗಿದ ಶರೀರಕ್ಕೊಂದು ಹೊಸ ಚರ್ಮ ಬಂದಿತ್ತು. ನೋಡಲು ಬಂದ ಅದ್ಯಾರೋ "ಸ್ವಲ್ಪ ಬಣ್ಣ ಆಗಿದ್ದೀರಿ, ಪರವಾಗಿಲ್ಲ’ ಎಂದರಂತೆ. ಮುಂದಿನ ಒಂದೂವರೆ ತಿಂಗಳಲ್ಲಿ ರಾಮಕೃಷ್ಣ ಪೂರ್ತಿ ಗಟ್ಟಿಯಾದ, ದಪ್ಪಗಾದ, ಮಾಮೂಲಾಗಿ ನಡೆದಾಡಹತ್ತಿದ.

ವಾಸಿಯಾಗಿ ಹೊರಟುನಿಂತ ರಾಮಕೃಷ್ಣ ಡಾಕ್ಟರಲ್ಲಿ ಕಾಯಿಲೆ ಬಗ್ಗೆ ವಿಚಾರಿಸಿದ. ಅಣು ವಿದ್ಯುತ್ ಕೇಂದ್ರದಲ್ಲಿ ಯಾವುದೋ ಹುದ್ದೆಯಲ್ಲಿ ಕೆಲಸಮಾಡುತ್ತಿದ್ದ ರಾಮಕೃಷ್ಣನಿಗೆ ಅಣುವಿಕಿರಣದ ಪ್ರಭಾವದಿಂದ ಇಡೀ ಶರೀರದಲ್ಲೂ ಟಾಕ್ಸಿನ್ಸ್ ಜಾಸ್ತಿಯಾಗಿತ್ತು. ಶರೀರ ಸಹಜಸ್ಥಿಯಲ್ಲಿರಲಿಲ್ಲ.  ಇದನ್ನರಿತ ಡಾ. ಕಜೆ ತನ್ನ ಚಿಕಿತ್ಸಾ ಕ್ರಮದಿಂದ ರಾಮಕೃಷ್ಣನನ್ನು ಅದರಿಂದ ಮುಕ್ತನನ್ನಾಗಿಸಿದ್ದರು. ಕೃತಜ್ಞನಾದ ರಾಮಕೃಷ್ಣನಿಗೆ, ಕೆಲವು ತಿಂಗಳಿಗಾಗುವಷ್ಟು ಔಷಧೀ ಮಾತ್ರೆಗಳ ಪೊಟ್ಟಣ ಕೊಟ್ಟು, ಆ ನಂತರ ಅಂತರ್ದೇಶೀಯ  ಕೊರಿಯರ್ ಮೂಲಕ ಬೇಕಾಗುವ ಔಷಧವನ್ನು ಕಳುಹಿಸುವ ಭರವಸೆ ಇತ್ತರು. ರಾಮಕೃಷ್ಣ ಈಗ ಆರೋಗ್ಯವಾಗಿದ್ದಾನೆ. ಕಥೆ ಕೇಳಿದಿರಲ್ಲಾ ಕಥಾನಾಯಕ ರಾಮಕೃಷ್ಣನನ್ನೇ ನಾನು ಮುದುಕ ಎಂದಿದ್ದು! ಅದಿರಲಿ ರಾಮಕೃಷ್ಣನನ್ನು ನಾನು ಭೇಟಿಯಾಗಿದ್ದೂ ಕೂಡ ಅಂಥದ್ದೇ ಒಂದು ವೇದನಾಮಯ ಸನ್ನಿವೇಶದಲ್ಲಿ:

ನನ್ನ ಹತ್ತಿರದ ಬಂಧುವೊಬ್ಬರಿಗೆ ಅನಿರೀಕ್ಷಿತವಾಗಿ ಬೆನ್ನ ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು; ಆ ನೋವು ಅತಿಶೀಘ್ರವಾಗಿ ಎದೆಯೆಭಾಗಕ್ಕೂ ಕಾಲುಗಳವರೆಗೂ ಹಬ್ಬಿ, ಕಾಲುಗಳು ಜೋಮು ಹಿಡಿದಂತೆನಿಸಿ, ನಂತರ ಅರ್ಧಗಂಟೆಯಲ್ಲೇ, ಶರೀರದ ಕೆಳ ಅರ್ಧಭಾಗಕ್ಕೆ [ಸೊಂಟದಿಂದ ಕೆಳಗಿನ ಭಾಗಕ್ಕೆ] ಯಾವ ರೀತಿಯ ಸ್ಪಂದಿಸುವಿಕೆಯೇ ಇರುತ್ತಿರಲಿಲ್ಲ. ಮಲ-ಮೂತ್ರ ವಿಸರ್ಜೆನೆಗೆ ದ್ವಾರಗಳು ತೆರೆದುಕೊಳ್ಳುತ್ತಿರಲಿಲ್ಲ. ಹೀಗಾದಾಗ ನಾವು ಹೋಗದ ಅಲೋಪಥಿ ಆಸ್ಪತ್ರೆಗಳಿಲ್ಲ. ಬೆಂಗಳೂರಿನ ಅತಿ ಪ್ರಸಿದ್ಧ ಅನೇಕ ಆಸ್ಪತ್ರೆಗಳ   ಎಲುವು-ಮೂಳೆ ತಜ್ಞರನ್ನು ಭೇಟಿಯಾಗಿ, ಅವರ ಚಿಕಿತ್ಸೆಗಳು ಫಲಕಾರಿಯಾಗದಾಗ, ಎಕ್ಸರೇ ಯಲ್ಲಿ ಏನೂ ಕಾಣದಾದಾಗ, ನರತಜ್ಞರನ್ನು ಭೇಟಿಯಾಗಿ, ಅವರ ಚಿಕಿತ್ಸೆಗೆ ಪೂರಕವಾಗುವ ಸ್ಕ್ಯಾನಿಂಗ್ ವಗೈರೆ ಮಾಡಿಸಿ, ಅವರು "ಸ್ಲಿಪ್ ಡಿಸ್ಕ್ ಥರಾ ಇದೆ, ಆಪರೇಶನ್ ಮಾಡಿದರೆ ಸರಿಹೋಗುತ್ತದೆ, ಆದರೆ ಅದು ಮತ್ತೆ ಮರಳಿ ಬರಬಹುದು, But, Mr.Bhat, There is no time, you have to admit the patient immediately now, else if delayed, it will be difficult to bring back to the original condition." ಎಂದು ಹೇಳಿಬಿಟ್ಟರು.

Ofcourse it was at one of the top 5 Hospitals in Bangalore, I was totally upset when an expert had declared this,but it was inevitable. I had listened to my innermost voice, which said"Go to Ayurveda" ಬಾಡಿದ ಮುಖಹೊತ್ತು ಏನೂ ಮಾಡಲು ತೋಚದೇ ಇದ್ದ ನನಗೆ ಯಾಕೋ ಒಮ್ಮೆ ಡಾ. ಕಜೆಯ ನೆನಪಾಯ್ತು. ಆಯುರ್ವೇದವನ್ನು ನೆಚ್ಚಿ ಚಿಕಿತ್ಸೆ ಕೊಡಿಸಲು ಮುಂದಾದ ನನ್ನ ನಿರ್ಧಾರವನ್ನು ತಿಳಿದ ಕೆಲವು ಸಂಬಂಧಿಕರು "ಎಲ್ಲೋ ಈತನಿಗೆ ಹುಚ್ಚು, ಹೋಗೀ ಹೋಗೀ ಇದ್ಕೆಲ್ಲಾ ಆಯುರ್ವೇದಾ ನಂಬೋದಾ?" ಎಂದು ಹೇಳಿದ್ದು ಕೇಳಿಬಂತು. ಆದರೂ ನನ್ನ ನಿರ್ಧಾರ ಅಚಲವಾಗಿತ್ತು. ಅಲ್ಲೀವರೆಗೆ ಡಾ.ಕಜೆಯನ್ನು ನಾನು ಬಲ್ಲೆ ಹೇಗೆ ಗೊತ್ತೇ? ಆಯುರ್ವೇದದಲ್ಲಿ ಎಂ.ಡಿ ಮುಗಿಸಿದ ಅವರೊಂದು ಚಿಕ್ಕ ಚಿಕಿತ್ಸಾಲಯ ಆರಂಭಿಸಿದ್ದರು. ಮಲ್ಲೇಶ್ವರದ ಕೆಲವು ಭಾಗಗಳಲ್ಲಿ ಆಯುರ್ವೇದದ ಬಗ್ಗೆ ನಿರರ್ಗಳವಾಗಿ ಉಪನ್ಯಾಸ ಮಾಡುತ್ತಾ ಜನರಿಗೆ ತಿಳುವಳಿಕೆ ಕೊಡುತ್ತಿದ್ದರು. ಕೆಲವೊಮ್ಮೆ ಕೆಲವು ಸಮಾರಂಭಗಳ ಹೊರಭಾಗದಲ್ಲಿ ತಮ್ಮ ಆಯುರ್ವೇದದ ದುಖಾನನ್ನು ಇಟ್ಟು, ಅಲ್ಲಿ ಸ್ವತಃ ಪ್ರತಿಯೊಂದೂ ಔಷಧಗಳ ಬಾಟಲಿಗಳನ್ನು, ಕರಡಿಗೆಗಳನ್ನು ಜೋಡಿಸುತ್ತಿದ್ದರು. ಆಯುರ್ವೇದ ಎಂದರೆ ಮೂಗುಮುರಿಯುವವರ ಮಹಾಪ್ರವಾಹದ ವಿರುದ್ಧ ಈಜಲು ಪ್ರಯತ್ನಿಸುತ್ತಿರುವ ಕೆಲವೇ ವೈದ್ಯರುಗಳ ಪೈಕಿ ಒಬ್ಬರು ಇವರಾಗಿದ್ದರು. ಇದಷ್ಟೇ ನನಗೆ ಗೊತ್ತು ಬಿಟ್ಟರೆ ಡಾಕ್ಟರು ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬಲ್ಲ ನಿಪುಣರು ಎಂಬುದರ ಅರಿವು ಇರಲಿಲ್ಲ. ಆದರೂ ದೇವರ ಮೇಲೆ ಭಾರಹಾಕಿ ನಾವು ನಡೆದಿದ್ದು ಡಾ. ಕಜೆಯವರಲ್ಲಿಗೆ. ಇಲ್ಲೊಂದು ಸೀಕ್ರೆಟ್ಟನ್ನು ಓದಿ :

ಸವಾಲು
-------

ಆರಂಭದಲ್ಲಿ
ಅಧುನಿಕ ವೈದ್ಯರಿಂದ
ರೋಗಿ ಪರೀಕ್ಷೆ,
ಸುತ್ತಿ ಸುತ್ತಿ
ಕೊನೆಯಲ್ಲಿ
ಆಯುರ್ವೇದ
ವೈದ್ಯರಿಗೇ ಪರೀಕ್ಷೆ!

ಇದು ನಮಗೇ ಹೇಳಿದಹಾಗಿದೆಯಲ್ಲ ಎಂದುಕೊಂಡವನು ನಾನು; ಬಹುಶಃ ಇದು ನಮಗೊಂದೇ ಅಲ್ಲ ಅನೇಕರಿಗೆ ಅಪ್ಲೈ ಆಗುವಂಥಾದ್ದು ಎಂದು ಈಗ ಅನ್ನಿಸುತ್ತಿದೆ! ಅಂತೂ ಇಂತೂ ನಾವು ಕಜೆಯವರಲ್ಲಿಗೆ ತಲ್ಪಿದೆವು. ವಾಹನದಿಂದ ರೋಗಿಯನ್ನು ಕುರ್ಚಿಯಲ್ಲಿ ಹೊತ್ತುಕೊಂಡು ಕ್ಲಿನಿಕ್ಕಿಗೆ ಹೋದೆವು. ಹೋಗುವಾಗ ನೋವಿನಿಂದ ಬಳಲುತ್ತಿದ್ದ ರೋಗಿಗೆ, ಕಜೆಯವರ ಸಂದರ್ಶನದ ವೇಳೆಯಲ್ಲೇ ಜಾಸ್ತಿಯಾಗಿ ತಾಳಲಾರದೇ ಅಳುಬಂದಿತು. ತಮ್ಮ ಸಹಾಯಕರ ಮೂಲಕ ಎರಡು ಮಾತ್ರೆಗಳನ್ನು ತರಿಸಿದ ಡಾಕ್ಟರು, ತಕ್ಷಣಕ್ಕೇ ಅದನ್ನು ಕೊಟ್ಟು ನೀರನ್ನೂ ಕೊಟ್ಟು ಉಪಚರಿಸಿದರು. ನಂಬುತ್ತೀರೇ? ಮಾತ್ರೆ ತೆಗೆದುಕೊಂಡ ಐದೇ ಐದು ನಿಮಿಷದಲ್ಲಿ ನೋವು ತಾಳಿಕೊಳ್ಳುವಷ್ಟು ಕಮ್ಮಿಯಾಯ್ತು. ಮುಂದಿನ ಚಿಕಿತ್ಸೆಗಳ ಬಗ್ಗೆ ನಾನು ಕೇಳುವ ಮೊದಲು ಡಾ. ಕಜೆ ನನ್ನಲ್ಲಿ ಕೇಳಿದರು"ಭಟ್ಟರೇ, ನಿಮಗೆ ಆಯುರ್ವೇದದಲ್ಲಿ ನಂಬಿಕೆ ಇದೆಯೇ? ಮತ್ತು ಸ್ವಲ್ಪ ದೀರ್ಘಕಾಲ ಚಿಕಿತ್ಸೆ ಪಡೆಯುವುದಕ್ಕೆ ನಿಮ್ಮ ಒಪ್ಪಿಗೆ ಇದೆಯೇ?" ಈ ಎರಡೂ ಪ್ರಶ್ನೆಗಳಿಗೆ ನಾನು ಗೋಣು ಹಾಕಿದೆ. ನನಗೆ ಆಯುರ್ವೇದದಲ್ಲಿ ನಂಬಿಕೆ ಮತ್ತು ಶ್ರದ್ಧೆ ಎರಡೂ ಇದ್ದವು. ಆದರೆ ಬಹುತೇಕ ಔಷಧಗಳು ವಂಶಪಾರಂಪರಿಕ [proprietory medicines] ಆಗಿರುವುದರಿಂದ ಎಲ್ಲಾ ಡಾಕ್ಟರಿಗೂ ಎಲ್ಲಾ ರೀತಿಯ ಔಷಧ ಮೂಲಿಕೆಗಳ ಬಗ್ಗೆ ಮಾಹಿತಿಯಾಗಲೀ ಅಥವಾ ಅದರ ಲಭ್ಯತೆಯಾಗಲೀ ಇರುವುದಿಲ್ಲ ಎಂಬುದು ನನ್ನ ಅನಿಸಿಕೆಯಾಗಿತ್ತು. ಡಾಕ್ಟರಿಗೆ ಕೈಮುಗಿದು ನಾವು ಮನೆಗೆ ಮರಳಿದೆವು. ಆ ರಾತ್ರಿ ಮತ್ತೆ ನೋವು ಕಾಣಿಸಿಕೊಂಡು ಬಹಳಕಾಲ ಮೂತ್ರ ವಿಸರ್ಜನೆಗೆ ಸ್ನಾಯುಗಳು ಸಮ್ಮತಿಸದೇ ಅತೀವ ತೊಂದರೆಯಾಯ್ತು. ಆಗಿನ್ನೂ ರಾತ್ರಿಯ ೮:೪೫. ಡಾಕ್ಟರಿಗೆ ಫೋನು ಮಾಡಿ "ಸರ್, ತಾವು ಸಾಯಂಕಾಲ ೫ ಗಂಟೆಗೆ ಕೊಟ್ಟ ಮಾತ್ರೆಗಳನ್ನೇ ಮತ್ತೆರಡನ್ನು ಈಗ ಕೊಡಲೇ, ಯಾಕೆಂದರೆ ಪರಿಸ್ಥಿತಿ ಹೀಗಾಗಿದೆ" ಎಂದೆ. " ಭಟ್ಟರೇ, ಅದು ಅಲೋಪಥಿಕ್ ಪೇನ್ ಕಿಲ್ಲರ್ ಮಾತ್ರೆಯಲ್ಲಾ, ನಾನು ಕೊಟ್ಟಿದ್ದು ಶುದ್ಧ ಆಯುರ್ವೇದದ ಮಾತ್ರೆ. ಮತ್ತೆ ಮತ್ತೆ ಹಾಗೆ ಕೊಡುವುದು ಬೇಡಾ, ನಾನು ಹೇಳಿದಂತೇ ಕ್ರಮ ಅನುಸರಿಸಿ, ಕ್ರಮೇಣ ಸರಿಹೋಗುತ್ತದೆ" ಎನ್ನುತ್ತಾ ಒಂದಷ್ಟು ಧೈರ್ಯ ಹೇಳಿದರು. ಒಂದಷ್ಟು ಸಮಯದ ನಂತರ ನೋವು ತಂತಾನೇ ಕಮ್ಮಿಯಾಯ್ತು, ವಿಸರ್ಜನಾ ಕ್ರಿಯೆಗಳನ್ನು ಕಷ್ಟಪಟ್ಟು ಮಲಗಿದಲ್ಲೇ ಮಾಡುವಂತಾಯ್ತು.           

ಅದಾದ ಮಾರನೇ ಬೆಳಿಗ್ಗೆಯಿಂದ ಪ್ರತಿದಿನ ಬೆಳಿಗ್ಗೆ ೬ ಗಂಟೆಗೆ ನಾವು ಕಜೆಯವರ ಪಂಚಕರ್ಮ ಚಿಕಿತ್ಸಾಲಯಕ್ಕೆ ಹೋಗಬೇಕಾಗಿತ್ತು. ರೋಗಿಯಲ್ಲಿ ಪೂರ್ತಿ ಪಂಚಕರ್ಮ ತಡೆದುಕೊಳ್ಳಲಾಗದ ತೊಂದರೆ ಇರುವುದರಿಂದ, ಭಾಗಶಃ ಪಂಚಕರ್ಮ ಚಿಕಿತ್ಸೆಗಳು ನಡೆದವು-೨೪ ದಿನಗಳು. [ಈ ಚಿಕಿತ್ಸೆಗೆ ಅಲ್ಲಿಗೆ ಹೋಗುತ್ತಿದ್ದಾಗ ಒಮ್ಮೆ ರಾಮಕೃಷ್ಣ ಅಲ್ಲಿಗೆ ಬಂದಿದ್ದ! ನಮ್ಮ ರೋಗಿಗೆ ಚಿಕಿತ್ಸೆ ನಡೆಸುವ ವೇಳೆ ನಾನು ಹೊರಜಗುಲಿಯಲ್ಲಿ ಕೂತಾಗ ನನ್ನ-ರಾಮಕೃಷ್ಣನ ನಡುವೆ ಮಾತುಕತೆ ನಡೆದಿತ್ತು]  ಇಷ್ಟಾಗುವಷ್ಟರಲ್ಲಿ ರೋಗಿಗೆ ಬಹುಪಾಲು ಹಿತವೆನಿಸಿತ್ತು. ನೋವು ಬರುತ್ತಿದ್ದರೂ ತಾಳಿಕೊಳ್ಳುವ ಮಟ್ಟವನ್ನು ಮೀರುತ್ತಿರಲಿಲ್ಲ, ಕಾಲುಗಳಿಗೆ ಜೋಮು ಹತ್ತುತ್ತಿರಲಿಲ್ಲ, ಸೊಂಟದ ಕೆಳಗಿನ ಕಂಟ್ರೋಲು ತಪ್ಪುವ ತೊಂದರೆ ಪರಿಹಾರವಾಗಿತ್ತು. ೨೪ ದಿನಗಳ ಚಿಕಿತ್ಸೆ ಮುಗಿದು ನಾವು ಹೊರಟಾಗ ಮುಂದಿನ ಔಷಧಕ್ರಮವನ್ನು ವಿವರಿಸಿ ಸುಮಾರು ೨ ವರ್ಷಗಳ ಕಾಲ ನಡೆಸಬೇಕು ಎಂದರು; ಆ ದಿನ ನಮಗೆ ನಿಜಕ್ಕೂ ಡಾಕ್ಟರು  ದೇವರಂತೇ ಕಂಡರು! ಹೀಗೇ ತಿಂಗಳಿಗೊಮ್ಮೆ ಭೇಟಿಯಾಗುತ್ತಾ ಔಷಧಗಳನ್ನು ಬದಲಾಯಿಸಿಕೊಳ್ಳುತ್ತಾ ಎರಡೂವರೆ ವರ್ಷಗಳು ಕಳೆದವು. ಒಮ್ಮೆ "ಮುಂದಿನ ಸರ್ತಿ ಬರುವಾಗ ಪೂರ್ತಿ ನಿರೋಗಿಯಾಗಿ ಬರುತ್ತೀರಿ, ಇನ್ನು ಔಷಧದ ಅಗತ್ಯ ಬೀಳುವುದಿಲ್ಲ, ಆದರೆ ಸದ್ಯ ಭಾರ ಎತ್ತುವ ಕೆಲಸ ಇತ್ಯಾದಿಗಳನ್ನು ಮಾಡಬೇಡಿ" ಎಂಬುದರ ಜೊತೆಗೆ ಆಹಾರಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಂತೂ ಎರಡೂವರೆವರ್ಷಗಳಲ್ಲಿ ಡಾಕ್ಟರು ರೋಗಿಯ ರೋಗವನ್ನು ವಾಸಿಪಡಿಸಿದ್ದರು. ನನ್ನನ್ನು ಪ್ರತ್ಯೇಕ ಕರೆದು, "ಭಟ್ಟರೇ, ಇದು ಅಪರೂಪದ ತೊಂದರೆ, ವಾಸಿಮಾಡುವುದು ಕಷ್ಟ, ಆದರೆ ನಿಮ್ಮ ಬಂಧುವಿಗೆ ವಾಸಿಯಾಗಿದೆ ಎಂಬುದು ದೇವರ ದಯೆ ಮತ್ತು ನಿಮ್ಮೆಲ್ಲರ ಅದೃಷ್ಟ" ಎಂದರು. ತಾನು ವಾಸಿಮಾಡಿದ ರೋಗಿಯ ಅಥವಾ ತೊಂದರೆಯ ಬಗ್ಗೆ ಎಲ್ಲಿಯೂ ಹೇಳಿಕೊಳ್ಳಲಿಲ್ಲ!   

ಇದಾದ ಕೆಲವೇ ದಿನಗಳಲ್ಲಿ ನಾನು ಬೆಂಗಳೂರು ಸುತ್ತುವಾಗ ಒಮ್ಮೆ ಪ್ರಭಾಕರ ಎಂಬುವರ ಪರಿಚಯವಾಯ್ತು. ಪ್ರಭಾಕರ, ಎಡ್ಮಿನಿಷ್ಟ್ರೇಟರ್ ಆಗಿ ಒಂದು ವಿದ್ಯಾಸಂಸ್ಥೆಯಲ್ಲಿ ಕೆಲಸಮಾಡುತ್ತಾರೆ. ಏನೋ ಸಂದರ್ಭಬಂದು 'ತನ್ನ ಹೆಂಡತಿಗೆ ಸನ್ತದ ಕ್ಯಾನ್ಸರ್ ಆಗಿತ್ತು-ಡಾ. ಕಜೆ ಗುಣಪಡಿಸಿದರು' ಎಂದರು. ಅಲೋಪಥಿ ಪರಿಣತರು ಆಪರೇಷನ್ ಮೂಲಕ ಕತ್ತರಿಸಿ ತೆಗೆಯುತ್ತೇವೆ ಎಂದು ಹೇಳಿದ್ದ ಸಿಸ್ಟ್ ಗಳಿರುವ ಆ ರೋಗಿಯನ್ನು ತನ್ನ ಆಯುರ್ವೇದೀಯ ಚಿಕಿತ್ಸೆಯಿಂದ ಗುಣಪಡಿಸಿದ ಬಗ್ಗೆ ಪ್ರಭಾಕರ ಅರ್ಧಗಂಟೆ ಮಾತನಾಡಿದರು. ಆದರೆ ಒಂದೇ ಒಂದು ದಿನ ಈ ಡಾಕ್ಟರು ನನ್ನಲ್ಲಿ ತಮ್ಮ ಸಾಧನೆಯ ಹೆಗ್ಗಳಿಕೆಯನ್ನು ಹೇಳಿಕೊಳ್ಳಲಿಲ್ಲ. ನಾವು ಅವರ ಪಂಚಕರ್ಮ ಥೆರಪಿ ಸೆಂಟರಿಗೆ ಹೋಗುತ್ತಿದ್ದಾಗ ನಟ ವಿಷ್ಣುವರ್ಧನ್ ಅಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದರಂತೆ. ನಾವು ಬೆಳಿಗ್ಗೆ ೬ ಗಂಟೆಗೆ ಹೋಗುತ್ತಿದ್ದರೆ ಅವರು ಬೆಳಗಿನ ಜಾವ ೫ ಗಂಟೆಗೇ ಬಂದು ಚಿಕಿತ್ಸೆ ಪಡೆದು ತೆರಳುತ್ತಿದ್ದರು ಎಂಬುದನ್ನು ಅಲ್ಲಿನ ಸಹಾಯಕರು ನಮ್ಮಲ್ಲಿ ಹೇಳಿದ್ದರು. ಒಂದು ದಿನವಂತೂ"ನೀವು ೫ ನಿಮಿಷ ಮೊದಲು ಬಂದಿದ್ದರೆ ನಿಮಗೆ ವಿಷ್ಣುವರ್ಧನ್ ಸಿಗುತ್ತಿದ್ದರು"ಎಂದು ಕಾತರ ಕೆರಳಿಸಿದ್ದರು. ಅನೇಕ ಸಿನಿಮಾ ನಟರು, ರಾಜಕಾರಣಿಗಳು ಎಲ್ಲಾ ಬಂದುಹೋಗುತ್ತಿದ್ದರೂ ಡಾಕ್ಟರು ಮಾತ್ರ ಆ ಬಗ್ಗೆ ನಮ್ಮಲ್ಲಿ ಪ್ರಸ್ತಾಪಿಸಲೇರ್ ಇಲ್ಲ!

ನಮ್ಮ ರೋಗಿಗೆ ಕಾಯಿಲೆ ವಾಸಿಯಾದ ಕಾರಣ, ಆ ಅನುಭವದ ಆಧಾರದಮೇಲೆ, ನಮ್ಮ ಸುತ್ತಲಿನ ನೆಂಟರಿಷ್ಟರನ್ನು ಮತ್ತು ಪರಿಚಿತರನ್ನು ಅನೇಕರನ್ನು ನಾವು ಡಾಕ್ಟರಲ್ಲಿಗೆ ಕಳುಹಿಸಿದೆವು. ನಮ್ಮ ಉದ್ದೇಶವಿಷ್ಟೇ: ಆಯುರ್ವೇದವೇ ಅಡ್ಡ ಪರಿಣಾಮಗಳಿಲ್ಲದ ಉತ್ತಮ ಚಿಕಿತ್ಸಾ ಪದ್ಧತಿ. ತುರ್ತು ತಿಕಿತ್ಸೆಯೊಂದನ್ನು ಬಿಟ್ಟರೆ, ಮೂಳೆ ಮುರಿತವೊಂದನ್ನು ಬಿಟ್ಟರೆ ಮಿಕ್ಕಿದ ಕಾಯಿಲೆಗಳಿಗೆ ಆಯುರ್ವೇದವೇ ಒಳ್ಳೆಯದು, ಅದನ್ನು ಇಂಥಾ ಉತ್ತಮರೀತಿಯಲ್ಲಿ ನಡೆಸಿಕೊಡುವ ಡಾಕ್ಟರ್ ಮೂಲಕ ಅವರಿಗೆಲ್ಲಾ ಇರುವ ತೊಂದರೆ ಪರಿಹಾರವಾಗಲಿ ಎಂಬುದು. ಹಾಗೆ ಹೋದವರಲ್ಲಿ ಎಲ್ಲರೂ ಉತ್ತಮ ಅಭಿಪ್ರಾಯಗಳನ್ನೇ ಹೇಳಿದ್ದಾರೆ, ೯೦ ಪ್ರತಿಶತ ಜನ ಕಾಯಿಲೆಗಳಿಗೆ ಪರಿಹಾರ ಪಡೆದಿದ್ದಾರೆ. [ಎಲ್ಲರಿಗೂ ಪರಿಹಾರ ದೊರಕಿದೆ ಎನ್ನಬಹುದು ಆದರೆ ಕೆಲವರು ತೀರಾ ಅಸಡ್ಡೆಮಾಡಿ ಸರಿಯಾಗಿ ಚಿಕಿತ್ಸೆ ಪಡೆಯದೇ ಅವರೇ ತಪ್ಪಿಗೆ ಕಾರಣರಾಗಿರಬಹುದು, ಇನ್ನು ಕೆಲವರಿಗೆ ಅವರ ಹಣೆಬರಹದಲ್ಲಿ ಕೊನೆಯಹಂತವೆಂದು ಬರೆದಿದ್ದು ಚಿಕಿತ್ಸೆಗೆ ಅವಕಾಶವೇ ಇಲ್ಲದ ದಿನಗಳು ಅವರದ್ದಾಗಿರಬಹುದು.] ನಾಡಿ ಪರೀಕ್ಷೆ ಎಲ್ಲರಿಗೂ ಕರಗತವಾಗುವ ವಿದ್ಯೆಯಲ್ಲ. ಕೇವಲ ನಾಡಿಯನ್ನಷ್ಟೇ ಹಿಡಿದು ತಮ್ಮ ಚಿಕಿತ್ಸೆಯ ಮೊದಲ ಸಂದರ್ಶನ ಮುಗಿಸುವ ಡಾ.ಕಜೆಯವರಿಗೆ ರೋಗಿಯ ದೇಹಸ್ಥಿತಿ ಅದರಲ್ಲೇ ಗೊತ್ತಾಗಿಬಿಡುತ್ತದೆ! ಅಲೋಪಥಿಯಲ್ಲಿ ಚಿಕಿತ್ಸೆ ನೀಡಿ ವಾಸಿಯಾಗದೇ ಕೈಬಿಟ್ಟ ಅನೇಕ ರೋಗಿಗಳು ಅವರಲ್ಲಿಗೆ ಬಂದು ಪರಿಹಾರ ಕಂಡುಕೊಂಡಿದ್ದಾರೆ ಎಂಬ ದಾಖಲೆಗಳನ್ನು ಅವರ ಸಹಾಯಕರಿಂದ ಕೇಳಿ ತಿಳಿದುಕೊಂಡಾಗ, ಡಾ. ಕಜೆ ವೈದ್ಯಲೋಕದ ವಿಸ್ಮಯ ಎಂದೇ ಹೇಳಬೇಕಾಗುತ್ತದೆ. ಹದಿಮೂರು ವರ್ಷಗಳಲ್ಲಿ ಅವರ ಸಾಧನೆ ಅಪಾರ. ಶ್ರೀಸಾಮಾನ್ಯನಿಂದ ಹಿಡಿದು ಮಂತ್ರಿ ಸುರೇಶ್ ಕುಮಾರ್ ವರೆಗೆ ಎಲ್ಲರಿಗೂ[ಇದುವರೆಗೆ ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ]ಚಿಕಿತ್ಸೆ ನೀಡುವ ಡಾಕ್ಟರು ರೋಗಿಗಳೊಟ್ಟಿಗೆ ಜಾಸ್ತಿ ಮಾತನಾಡುವುದಿಲ್ಲ ಯಾಕೆ? ಎಂಬ ಪ್ರಶ್ನೆ ಎದುರಾದರೆ, ಆಯುರ್ವೇದದಲ್ಲಿ ಮಾತಿಗಿಂತ ಮಾಡುವ ಚಿಕಿತ್ಸೆ ಪರಿಣಾಮಕಾರಿ ಮತ್ತು ಅಂತಹ ಚಿಕಿತ್ಸೆಗಾಗಿ ಕಾಯುತ್ತಿರುವ ಹಲವಾರು ರೋಗಿಗಳಿಗೆ ಡಾಕ್ಟರರ ಸಂದರ್ಶನ ಸಮಯದಲ್ಲಿ ಅವಕಾಶ ದೊರೆಯಲಿ ಎಂಬ ಕಾರಣದಿಂದ, ತ್ವರಿತಗತಿಯಲ್ಲಿ ಚಿಕಿತ್ಸೆಯನ್ನು ನೀಡಿ ಕಳಿಸುವುದು,  ಜಾಸ್ತಿ ಮಾತನಾಡದಿರುವುದರ ಹಿಂದಿರುವ ಸೀಕ್ರೆಟ್ಟು:  

ವಾಚಾಳಿ
-------

ದಿನವೊಂದಕ್ಕೆ
ನೂರಾ ಇಪ್ಪತ್ತು
ರೋಗಿ ಪರೀಕ್ಷಿಸುವ
ವೈದ್ಯ
ಕೇವಲ ಮೂರು ನಿಮಿಷ
ಮಾತನಾಡಿದರೂ
ದಿನವೊಂದಕ್ಕೆ
ಆರುಗಂಟೆ
ವಟಗುಟ್ಟಿದಂತಾಯ್ತು!
ಡಾಕ್ಟರ್
ಮೌನಿಯೇ?

ಸರಕಾರೀ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವಿಭಾಗವಾದ ’ಆಯುಷ್’, ಡಾಕ್ಟರ್ ಕಜೆಯವರಿಂದ ಸಾಂದರ್ಭಿಕವಾಗಿ ಸಲಹೆಗಳನ್ನು ಪಡೆದಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕಜೆಯವರನ್ನು ಹುಡುಕಿಕೊಂಡು ಬಂದಿದೆ. ವಿವಿಧರಂಗಗಳಿಗೆ ಅವರು ಸಲ್ಲಿಸಿದ ಸೇವಾ ವಿವರಗಳನ್ನು ಪಟ್ಟಿಮಾಡಿದರೆ ಇದನ್ನೆಲ್ಲಾ ಒಬ್ಬ ಡಾಕ್ಟರು ಮಾಡಲು ಸಾಧ್ಯವೇ ಎಂಬ ಸಂದೇಹ ಬರುವಷ್ಟಿದೆ! ಚಿಕ್ಕ ವಯಸ್ಸಿನಲ್ಲೇ, ಲಂಕೆಗೆ ಜಿಗಿದ ಹನುಮಗಾತ್ರದಷ್ಟು ಸಾಧನೆಗಳನ್ನು ಮಾಡಿದವರು ಡಾ. ಕಜೆ. ಆಯುರ್ವೇದ ಸಮ್ಮೇಳನಗಳು, ಆಯುರ್ವೇದೀಯ ಶಿಬಿರಗಳು, ’ಆಯುರ್ವೇದ ಪರಿಕ್ರಮ’, ’ಆಯುರ್ವೇದ ಇನ್ ಎ ನಟ್ ಶೆಲ್’ ಎಂಬ  ಆಯುರ್ವೇದೀಯ ವೈದ್ಯರುಗಳದ್ದೇ ಆದ ಒಂದು ಸಮ್ಮೇಳನ ಹೀಗೆಲ್ಲಾ ಆಯುರ್ವೇದಕ್ಕಾಗಿ, ಆಯುರ್ವೇದದಲ್ಲೇ ಶ್ರದ್ಧೆಯಿರುವ ಆಯುರ್ವೇದ ವೈದ್ಯರನ್ನೂ, ಆಯುರ್ವೇದ ನೆಚ್ಚಿಕೊಳ್ಳುವ ರೋಗಿಗಳನ್ನೂ ಕಲೆಹಾಕಿ, ಆಯುರ್ವೇದದ ಇಂದಿನ ಸ್ಥಿತಿಗತಿ-ಚಿಕಿತ್ಸೆ-ಔಷಧಗಳ ಬಗ್ಗೆ-ಆಯುರ್ವೇದ ಎದುರಿಸುತ್ತಿರುವ ಹೊಸಹೊಸ ಸವಾಲುಗಳ ಬಗ್ಗೆ ತಿಳುವಳಿಕೆ ನೀಡಿದ್ದಾರೆ. ಅದೆಷ್ಟೋ ರಾತ್ರಿಗಳನ್ನು ಆಯುರ್ವೇದ ಗ್ರಂಥಗಳ ಅಧ್ಯಯನಕ್ಕಾಗಿ ಮೀಸಲಿಟ್ಟು, ಭಾನುವಾರದ ರಜಾವನ್ನೂ ತೊರೆದು ’ಆಯುರ್ವೇದ ಪರಿಕ್ರಮ’ ಎಂಬ ಹೃದಯಸ್ಪರ್ಶೀ ಕಾರ್ಯಕ್ರಮ ನಡೆಸಿದ್ದಾರೆ. ಸ್ವಾಧ್ಯಾಯದಿಂದ ಮನದಲ್ಲಿ ಮೂಡಿದ ಹೊಸಹೊಸ ಮೂಲಿಕಾ ಮಿಶ್ರಣಗಳನ್ನು ಕ್ರಿಯಾತ್ಮಕವಾಗಿ ಸಿದ್ಧಪಡಿಸಿ ಅವರದ್ದೇ ಆದ ಅದೆಷ್ಟೋ ಔಷಧಗಳನ್ನು ತಯಾರಿಸಿದ್ದಾರೆ! As far as my view is concerned, in any profession, when profession is a passion it will be a success, when profession is just fashion it is failure. w.r.t. Dr.Kaje: Ayurveda has become his passion &  he could achieve a lot just because of his this nature.

ಪ್ರಾಯಶಃ "ಇಷ್ಟು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ, ಜೈ ಹಿಂದ್" ಎಂದರೆ ಅದು ಶುದ್ಧ ತಪ್ಪು, ಯಾಕೆ ಗೊತ್ತೇ ಆಯುರ್ವೇದವೇ ಪ್ಯಾಶನ್ ಆಗಿರುವ ಈ ಡಾಕ್ಟರಲ್ಲಿ ಒಬ್ಬ ಒಳ್ಳೆಯ ವಾಗ್ಮಿಯಿದ್ದಾನೆ, ಒಬ್ಬ ಸಾಹಿತಿಯಿದ್ದಾನೆ, ಒಬ್ಬ ಕವಿಯಿದ್ದಾನೆ, ಒಬ್ಬ ಹಾಸ್ಯಗಾರನಿದ್ದಾನೆ, ಒಬ್ಬ ಆಡಳಿತಾಧಿಕಾರಿಯಿದ್ದಾನೆ! ಮೇಲೆ ಹೇಳಿದ ಸೀಕ್ರೆಟ್ಟುಗಳೆಲ್ಲಾ ಡಾ.ಕಜೆಯವರ ಹನಿಗವನಗಳು. ಈ ಸೀಕ್ರೆಟ್ಟುಗಳೆಲ್ಲಾ ಸೇರಿದಂತೇ, ಆಯುರ್ವೇದದ ಬಗ್ಗೆ ಅನೇಕ ಮೌಲಿಕ ಲೇಖನಗಳನ್ನು ಬರೆದು ಸೇರಿಸಿ, ಎಲ್ಲವನ್ನೂ ಒತ್ತಟ್ಟಿಗೆ ಪೇರಿಸಿ, ೨೦೦೮ ರಲ್ಲಿ ’ಪ್ರೊಫೆಶನಲ್ ಸೀಕ್ರೆಟ್ಸ್’ ಎಂಬ ಪುಸ್ತಕವನ್ನು ಹೊರತಂದವರು ಡಾ.ಕಜೆ. ಆರುತಿಂಗಳಲ್ಲೇ ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿ ಮತ್ತೆ ಮರುಮುದ್ರಣಗೊಂಡು ಮತ್ತೆ ಮಾರಾಟವಾಗಿ ಈಗ ಮೂರನೇ ಬಾರಿಗೆ ಮುದ್ರಣಗೊಳ್ಳುವಾಗ ಅದನ್ನು ಆಂಗ್ಲಭಾಷೆಗೂ ಅನುವಾದಿಸಿ/ತರ್ಜುಮೆಗೊಳಿಸಿ ಪ್ರಕಟಿಸಿದ್ದಾರೆ. ಡಾಕ್ಟರ್ ಬಗ್ಗೆ ಹೆಚ್ಚಿನ ಅರಿವು ಆ ಪುಸ್ತಕವನ್ನು ಓದುವುದರಿಂದ ಉಂಟಾಗುತ್ತದೆ. ಲಘು ಹಾಸ್ಯಪೂರಿತ ಬರಹಗಳು ಒಬ್ಬರೇ ಕುಳಿತು ಓದುವಾಗಲೂ ನಮ್ಮೊಳಗೇ ನಾವು ನಗುವಂತೇ ಮಾಡುತ್ತವೆ. [ಲೇಖನದ ಆರಂಭದಲ್ಲಿ ’ಚಿಕ್ಕ ಕೆಲಸವೊಂದನ್ನು ಮಾಡಿ’ ಎಂದಿದ್ದೆನಲ್ಲಾ:ಇನ್ನಷ್ಟು  ಇಂಥಾ ಜೋಕುಗಳನ್ನು ಓದಲು ಡಾ.ಕಜೆಯವರ ’ಪ್ರೊಫೆಶನಲ್ ಸೀಕ್ರೆಟ್ಸ್’ ಕೊಂಡು ಓದಿನೋಡಿ!] ಇಷ್ಟೇ ಎಂದುಕೊಳ್ಳಬೇಡಿ, ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ನವರಂಗದ ಹತ್ತಿರ ಕಜೆಯವರ ಹೊಸದೊಂದು ಸುಸಜ್ಜಿತ ಆಯುರ್ವೇದ ಆಸ್ಪತ್ರೆ ನಿರ್ಮಾಣ ಹಂತದಲ್ಲಿದೆ. ಅಲೋಪಥಿ ಚಿಕಿತ್ಸಾ ಆಸ್ಪತ್ರೆಗಳಂತೇ ಈ ಆಸ್ಪತ್ರೆಯಲ್ಲೂ ಹಾಸಿಗೆಗಳು, ಪರೀಕ್ಷಣಾ ಕೊಠಡಿಗಳು, ಅಯುರ್ವೇದೀಯ ವೈದ್ಯರುಗಳು, ಪಂಚಕರ್ಮ ಮೊದಲಾದ ಥೆರಪಿ ಸೆಂಟರ್ ಎಲ್ಲವನ್ನೂ  ಒದಗಿಸಲಾಗುತ್ತದೆ. ದಶಕದ ಸೇವಾವಧಿಯಲ್ಲೇ ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಡಾ.ಕಜೆ ಒಬ್ಬ ವ್ಯಕ್ತಿಯಾಗಿ ಕಾಣುವುದಕ್ಕಿಂತಾ ನನಗೆ ಅವರೊಂದು ಸಂಸ್ಥೆಯಾಗಿ ಕಾಣುತ್ತಾರೆ. ನನಗೆ ಸ್ನೇಹಿತರಾಗಿರುವ ನೂರಾರು ವೈದ್ಯರಿದ್ದಾರೆ. ಒಂದಲ್ಲಾ ಒಂದು ಕಾರಣಕ್ಕೆ ಅವರೆಲ್ಲರ ಸಖ್ಯ ನನಗೆ ದೊರಕಿರುವುದು ನನ್ನ ಸೌಭಾಗ್ಯ; ಆ ಎಲ್ಲರ ಪೈಕಿ ಕೆಲವರು ಮಾತ್ರ ಹೃದಯಕ್ಕೆ ಹತ್ತಿರವಾಗಿದ್ದಾರೆ-ನಮ್ಮ ಮನೆಮಂದಿಯಂತೇ ಆಗಿಬಿಟ್ಟಿದ್ದಾರೆ. ಅಂಥವರಲ್ಲಿ ಡಾ.ಕಜೆ ಕೂಡಾ ಒಬ್ಬರು ಎಂಬುದು ಕೇವಲ ಬಾಹ್ಯ ನುಡಿಯಲ್ಲ!

ಆಯುರ್ವೇದ ಶಾಸ್ತ್ರಕ್ಕೆ ಮೂರುಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಚರಕ ಮತ್ತು ಸುಶ್ರುತರೆಂಬ ಮನೀಷಿಗಳು ತಮ್ಮ ತಪಸ್ಸಿದ್ಧಿಯ ಜೊತೆಗೆ, ತಮ್ಮ ನಿರಂತರ ಪರಿಶ್ರಮದಿಂದ ಆಯುರ್ವೇದದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಅವರೀರ್ವರಿಗಿಂತಲೂ ಹಿಂದೆಯೇ ಆಯುರ್ವೇದ ಇದ್ದರೂ ಅಂದಿನ ಆಯುರ್ವೇದ ಗ್ರಂಥಗಳು ಲುಪ್ತವಾಗಿರುವುದರಿಂದ ನಮಗೆ ಸಿಗುವುದು ಚರಕ-ಸುಶ್ರುತರ ಬರಹಗಳುಳ್ಳ ಪುಸ್ತಕಗಳು ಮಾತ್ರ. ಲೋಕೋಪಕಾರದ ದೃಷ್ಟಿಯಿಂದ ಮಹಾನ್ ಮನೀಷಿಗಳು ತಮ್ಮ ಜೀವಿತವನ್ನೆಲ್ಲಾ ಸವೆಸಿ, ಸಿದ್ಧಪಡಿಸಿದ ವನೌಷಧೀಯ ಚಿಕಿತ್ಸಾ ಕ್ರಮ ಆಯುರ್ವೇದ. ಚರಕ-ಸುಶ್ರುತರ ಕಾಲದಲ್ಲಿ ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆಗಳೂ ನಡೆಯುತ್ತಿದ್ದವಂತೆ! ಆದರೆ ಮಧ್ಯಕಾಲೀನ ಪರಕೀಯ ಆಳರಸರ ದುರಾಡಳಿತದಿಂದ ಆಯುರ್ವೇದದ ಮೇಲೆ ಪರಕೀಯ ಔಷಧೀಯ ಪದ್ಧತಿಗಳು ದಾಳಿನಡೆಸಿದವು. ’ಹಿತ್ತಲಗಿಡ ಮದ್ದಲ್ಲ’ವೆಂಬಂತೇ, ಭಾರತೀಯರು ಸಹಜವಾಗಿ ಪರಕೀಯ ಚಿಕಿತ್ಸಾಕ್ರಮಗಳ ’ರುಚಿನೋಡಲು’ ತೊಡಗಿದರು. ತತ್ಕಾಲಕ್ಕೆ ಕ್ಷಣಿಕ ಪರಿಹಾರವನ್ನು ನೀಡುವ ಪದ್ಧತಿಗಳು ಕಾಲಕ್ರಮದಲ್ಲಿ ಉಂಟುಮಾಡುವ ದುಷ್ಪರಿಣಾಮಗಳ ಲೆಕ್ಕವನ್ನು ಯಾರೂ ಇಡಲಿಲ್ಲ! ಈಗೀಗ ಅದರ ಅರ್ಥವಾಗುತ್ತಿದೆ. ನಮ್ಮ ಮೂಲಗ್ರಂಥಗಳನ್ನು ಬಳಸಿಕೊಂಡು ವಿದೇಶೀಯರು ಪೇಟೆಂಟ್ ಪಡೆಯಲು ಮುಂದಾದಾಗ ನಮ್ಮಲ್ಲಿನ ಜನರಿಗೆ ಅರ್ಥವಾಗಿದೆ! ಹಿತ್ತಲ ಗಿಡವೂ ಕೂಡ ಯಾವುದಾದರೊಂದು ಮದ್ದು ತಯಾರಿಸಲು ಬರುತ್ತದೆ ಎಂಬುದು ಮನದಟ್ಟಾಗಿದೆ.

ಡಾ.ಸತ್ಯನಾರಾಯಣ ಭಟ್ ಎಂಬ ಇನ್ನೊಬ್ಬ ವೈದ್ಯರು ಮಗಳಿಗೆ ತಗುಲಿಕೊಂಡ ಕ್ಯಾನ್ಸರ್ ಬಗ್ಗೆ ’ತರಂಗ’ದಲ್ಲೊಮ್ಮೆ ಬರೆದಿದ್ದರು. ಅಮೇರಿಕಾದ ಅತ್ಯುನ್ನತ ಆಸ್ಪತ್ರೆಗಳು ಕೈ ತಿರುಗಿಸಿದಾಗ ಮರಳಿ ಭಾರತಕ್ಕೆ ಬಂದು, ಮನದಲ್ಲೇ ಆದದ್ದಾಗಲಿ ಎಂದುಕೊಂಡು, ಮನೆಯಲ್ಲೇ ಶುದ್ಧ ಅರಿಶಿನ ಮತ್ತು ಕರಿಮೆಣಸಿನ ಕಾಳು ಸೇರಿಸಿ ಪುಡಿಮಾಡಿ, ಅದನ್ನು ನಿತ್ಯ ಕಷಾಯ ಮಾಡಿ ಮಗಳಿಗೆ ಕೊಡುತ್ತಿದ್ದರಂತೆ. ಅದರಿಂದಲೇ ಆಕೆಯ ಕ್ಯಾನ್ಸರ್ ವಾಸಿಯಾಗಿ ಅಮೇರಿಕಾದ ವೈದ್ಯರು "ಏನು ಚಿಕಿತ್ಸೆ ಮಾಡಿದಿರಿ, ನಮಗೂ ತಿಳಿಸಿ" ಎಂದು ದುಂಬಾಲು ಬಿದ್ದಿದ್ದಾರಂತೆ! ಇಂಥಾ ಅತ್ಯುತ್ಕೃಷ್ಟ ಆಯುರ್ವೇದವನ್ನು ನಾವು ಮರೆಯುವುದು ತರವೇ? ನಾವೆಲ್ಲಾ ಮರೆತರೂ ಆಯುರ್ವೇದವನ್ನೇ ಉಸಿರಾಡುವ ಡಾ.ಕಜೆಯಂತಹ ಕೆಲವು ಜನ ಮರೆಯುವುದಿಲ್ಲ; ಮರೆಯಲೂಬಾರದು. ನಾನು ಇಲ್ಲಿ ಹೀಗೆ ಬರೆಯುತ್ತಿರುವುದು ಡಾ.ಕಜೆಯವರಿಗೆ ತಿಳಿದಿಲ್ಲ, ತಿಳಿದರೆ ’ಬೇಡಾ’ಎನ್ನುತ್ತಾರೆ ಎಂಬ ಅನಿಸಿಕೆಯಿಂದ ಬರೆದಿದ್ದೇನೆ. ಈ ಬರಹ ಅವರಿಗೊಂದು ಕೃತಜ್ಞತೆಮಾತ್ರ. ನಮ್ಮ ಸಮಸ್ಯೆ ಪರಿಹರಿಸಿದ ಅವರಿಗೆ ನಾವು ಇನ್ನೇನು ನೀಡಲು ಸಮರ್ಥರು? ಅಲ್ಲವೇ?  ಪದ್ಮಭೂಷಣವನ್ನು ಡಾ.ಮೋದಿಗೆ ನೀಡಿದಂತೇ, ಡಾ.ಕಜೆಯವರ ಸೇವೆ ಮತ್ತು ಅಪ್ಪಟ ಆಯುರ್ವೇದದ ಬಳಕೆಯನ್ನು ಪ್ರಸರಣಮಾಡುವ ಶ್ರಮಕ್ಕೆ- ಕಜೆಯವರಿಗೂ ಅಂತಹ ಗೌರವ-ಪುರಸ್ಕಾರಗಳನ್ನು ಸರಕಾರ ಕೊಡಮಾಡುವಂತಾಗಲಿ ಎಂದು ಹಾರೈಸುತ್ತೇವೆ. ಅಂದಹಾಗೇ, ಅನೇಕರು ನನ್ನಲ್ಲಿ ಆಗಾಗ ಡಾ.ಕಜೆಯವರ ವಿಳಾಸ, ಅವರ ಲಭ್ಯತೆಗಳ ಬಗ್ಗೆ ವಿವರ ಕೋರುತ್ತಾರೆ. ಓದಿದ ನಿಮ್ಮಲ್ಲೂ ಕೆಲವರು ಹಾಗೆ ಕೇಳುವ ಮೊದಲೇ ತಗೊಳಿ ಕೊಟ್ಟುಬಿಡುತ್ತೇನೆ:

Prashaanthi Ayurvedic Centre
No.51, In between Sampige & Margosa Road, 7th Cross, Malleshwaram, Bangalore-03
Websites: www.kajeayurveda.in, www.drgiridharakaje.in
Email: info@kajeayurveda.in, info@drgiridharakaje.in

Phone Numbers for appointments: 9900041105, 9900051105, 9900061105

Phone Numbers for information : 080-23341105

     Phone Numbers for emergencies : 080-23361105     

you can also get daily health tips@  http://www.facebook.com/drkajeFriday, February 15, 2013

ಅಸ್ಪರ್ಶ ಯೋಗ : ದ್ವೈತ-ಅದ್ವೈತಗಳ ನಿಷ್ಕರ್ಷೆ !

ಚಿತ್ರ ಋಣ : ಅಂತರ್ಜಾಲ 
ಅಸ್ಪರ್ಶ ಯೋಗ : ದ್ವೈತ-ಅದ್ವೈತಗಳ ನಿಷ್ಕರ್ಷೆ !

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದಮದ್ವೈತಪೂರ್ಣಂ|
ಪರಂ ನಿರ್ಗುಣ ನಿರ್ವಿಶೇಷಂ ನಿರೀಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||

ಆಳಕ್ಕೆ ಹೋದರೆ ಇನ್ನೂ ಆಳ, ಅಗಲಕ್ಕೆ ಚಲಿಸಿದರೆ ಇನ್ನಷ್ಟು ಅಗಲ, ಎತ್ತರಕ್ಕೆ ಹೋದರೆ ಇನ್ನೂ ಎತ್ತರ ಎನಿಸುವ ವಿಷಯವಿದ್ದರೆ ಅದು ವೇದ-ವೇದಾಂತಮಾತ್ರ! ಪ್ರತಿಯೊಂದೂ ಪದವೂ ಗೂಢಾರ್ಥಗಳಿಂದ ಕೂಡಿರುವುದರಿಂದ ಅದರ ಅರ್ಥ ಗ್ರಹಿಕೆ ಸುಲಭಸಾಧ್ಯವಲ್ಲ. ಆದರೂ,

ಪದಕ್ರಮವಿಶೇಷಜ್ಞೋ ವರ್ಣಕ್ರಮವಿಚಕ್ಷಣಃ
ಸ್ವರಮಾತ್ರಾ ವಿಶೇಷಜ್ಞೋ ಗಚ್ಛೇದಾಚಾರ್ಯ ಸಂಪದಮ್|
ಸಂಹಿತಾಪಾಠತಃ ಪುಣ್ಯಂ ದ್ವಿಗುಣಂ ಪದಪಾಠತಃ
ತ್ರಿಗುಣಂ ಕ್ರಮಪಾಠೇನ ಜಟಾಪಾಠೇನ ಷಡ್ಗುಣಮ್ ||

ಸಂಹಿತಾಪಾಠ, ಪದಪಾಠ, ಕ್ರಮಪಾಠ, ವರ್ಣೋಚ್ಚಾರಣೆ, ಸ್ವರ,ಮಾತ್ರೆ ಇವುಗಳನ್ನು ತಿಳಿದವನು ಆಚಾರ್ಯನೆನಿಸಿಕೊಳ್ಳುವನು. ಸಂಹಿತೆಯನ್ನು ಪೂರ್ಣವಾಗಿ ಅಧ್ಯಯನ ಮಾಡುವುದರಿಂದ ಪುಣ್ಯಬರುತ್ತದೆ. ಪದಪಾಠದಿಂದ ಅದರ ಎರಡರಷ್ಟೂ, ಕ್ರಮಪಾಠದಿಂದ ಅದರ ಮೂರರಷ್ಟೂ ಮತ್ತು ಜಟಾಪಾಠಮಾಡುವವರಿಗೆ ಅದರ ಆರರಷ್ಟು ಪುಣ್ಯ ಪ್ರಾಪ್ತವಾಗುತ್ತದೆ ಎಂಬುದು ಈ ಮೇಲಿನ ಶ್ಲೋಕದ ಅರ್ಥ. ಜಟಾಪಾಠಕ್ಕೂ ಹೆಚ್ಚಿನದಾದ ಪಾಠಕ್ರಮವನ್ನು ಅನುಷ್ಠಾನ ಮಾಡಿದವರಿಗೆ ಘನಪಾಠಿಗಳು ಎನ್ನುತ್ತಾರೆ. ಶ್ರುತಿಯಾಗಿ, ನಾದವಾಗಿದ್ದ ವೇದ ಆರ್ಷೇಯ ಋಷಿಗಳಿಂದ ಇಲ್ಲಿಯವರೆಗೂ ಹರಿದುಬಂದಿದ್ದು ಈ ಕ್ರಮದಲ್ಲಿ. ಇಂತಹ ಮಹತ್ತರ ನಿಜಜ್ಞಾನಸುಧೆಯನ್ನು ನಮ್ಮಂತಹ ಪಾಮರರ ತನಕ ಹರಿಸಿದ ಸಕಲ ಮುನಿಜನ ಪದಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಆದಿಯಲ್ಲಿ ತಿಳಿಸುತ್ತಾ, ಆದಿಶಂಕರರು ಅದ್ವೈತತತ್ವವನ್ನೇ ಯಾಕೆ ಆಯ್ದುಕೊಂಡರು ಮತ್ತು ಜಗತ್ತು ಮಿಥ್ಯೆ ಎಂದು ಯಾಕೆ ಹೇಳಿದರು ಎಂಬುದನ್ನು ಸ್ಥೂಲವಾಗಿ ತಿಳಿಸುವ ಸರಣಿಯ ಮುಕ್ತಾಯದ ಭಾಗಕ್ಕೆ ಆಸಕ್ತರನ್ನು ವಂದನಾಪೂರ್ವಕ ಸ್ವಾಗತಿಸುತ್ತಿದ್ದೇನೆ.   

ನಿದ್ದೆಗೊಮ್ಮೆ ನಿತ್ಯಮರಣ
ಎದ್ದಸಲ ನವೀನ ಜನನ
ನಮಗೆ ಏಕೆ ಬಾರದೋ ಎಲೆ ಸನತ್ಕುಮಾರದೇವ ?
ಎಲೆ ಸಾಹಸ ಚಿರಂಜೀವ ನಿನಗೆ ಲೀಲೆ ಸೇರದೋ?
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ...

ಎಂದು ವರಕವಿ ಬೇಂದ್ರೆ ಹೇಳಿದ್ದರೆ ಅದರ ಅರ್ಥ-ಆಶಯ ಬಹಳ ಜನರಿಗೆ ಆಗಿರಲಿಲ್ಲ! ಯಾವ ಸನತ್ಕುಮಾರನನ್ನು ಕುರಿತಾಗಿ ಹೇಳಿದರು ಎಂಬುದೇ ಪ್ರಶ್ನೆಯಾಗಿತ್ತು. ಭಗವಂತನ ನಿತ್ಯಸೂರಿಗಳೆನಿಸಿದ ಅವಧೂತರಾದ ಸನಕ ಸನಂದನಾದಿ ಮುನಿಜನರ ಸಾಲಿನಲ್ಲಿರುವ ಸನತ್ಕುಮಾರ ಋಷಿಯಲ್ಲಿ ಬೇಂದ್ರೆ ಹಾಗೆ ಕೇಳಿದರು. ಕವಿಯಾಗಲು ಋಷಿಮನಸ್ಕನಾಗಿರಬೇಕು ಎನ್ನುತ್ತದೆ ಸಂಸ್ಕೃತದ ವ್ಯಾಖ್ಯೆ. ಬೇಂದ್ರೆಯವರ ’ನಾಕುತಂತಿ’ ಅಂತಹ ಋಷಿಮನಸ್ಕ ಸಂದೇಶವೆಂಬುದು ನನ್ನ ಅನಿಸಿಕೆ. ಯಾಕೆಂದರೆ ಅವರ ಕವನಗಳನೇಕವು ವೇದ-ವೇದಾಂತದ ಸಂದೇಶಗಳನ್ನೇ ಪರೋಕ್ಷ ಸಾರುತ್ತವೆ ಎಂಬುದು ನನ್ನ ಅಭಿಮತವಾಗಿದೆ. ಭಗವತ್ಪಾದ ಶಂಕರರ ನಂತರ ಬಂದ ಆಚಾರ್ಯರುಗಳಿಗೆ ಅದ್ವೈತ ದರ್ಶನ ಆಗಲಿಲ್ಲ ಎಂಬುದು ಖೇದದ  ವಿಷಯ! ಅಳಿಸಿಹೋಗಿದ್ದ ಸನಾತನ ಪರಂಪರೆಗೆ ಹೊಸ ಆರಂಭವನ್ನೊದಗಿಸಿದ ಶಂಕರರಿಗೆ, ಮಠಕಟ್ಟಿ ಮೆರವಣಿಗೆ ಮಾಡುವುದೇ ಪರಮೋದ್ದೇಶವಾಗಿರಲಿಲ್ಲ; ತನ್ನ ಅನುಯಾಯಿಗಳ ಸಂಖ್ಯಾವೃದ್ಧಿಯನ್ನು ಮಾಡಬೇಕೆಂಬ ಆಸೆಯೂ ಅಲ್ಲ. ಒಡೆದ ಗಡಿಗೆಗಳಲ್ಲಿ ಒಡೆದುಹಾಳಾಗಿ ಹೋಗುತ್ತಿದ್ದ ಸನಾತನ ವೇದ-ವೇದಾಂತಗಳು-ಧರ್ಮಸೂತ್ರಗಳೆಂಬ ಹಾಲನ್ನು ಸಂಶೋಧಿಸಿ, ಪರಿಷ್ಕರಿಸಿ-ಸಂಸ್ಕರಿಸಿ-ಹೆಪ್ಪುಹಾಕಿ, ಮೊಸರನ್ನು ಕಡೆದು, ಸಮಾಜಕ್ಕೆ ಸನಾತನ ನವನೀತವನ್ನಿತ್ತವರು ಶಂಕರರು. ಕೇರಳದ ರಾಜ ರಾಜಶೇಖರ ಸಂಸ್ಕೃತವನ್ನು ಅಭ್ಯಸಿಸಿದ್ದು, ಸ್ವತಃ ಕವಿಯಾಗಿದ್ದ, ಧರ್ಮ-ಕರ್ಮ ಜಿಜ್ಞಾಸೆಗಳಲ್ಲಿ, ವೇದ-ವೇದಾಂತ ಶಾಸ್ತ್ರಗಳಲ್ಲಿ ಆಸಕ್ತನಾಗಿದ್ದು ಎಲ್ಲವನ್ನೂ ಸೂಕ್ಷ್ಮಗ್ರಾಹಿಯಾಗಿ ಪರಿಶೀಲಿಸುವ ವ್ಯಕ್ತಿತ್ವ ಅವನದ್ದು. ತನ್ನ ರಾಜ್ಯದಲ್ಲೇ ಇರಬೇಕೆಂದೂ ತಾನು ಬೇಕಾದಷ್ಟು ಅನುಕೂಲ-ಸಂಪತ್ತನ್ನು ಒದಗಿಸುವೆನೆಂದೂ ಶಂಕರರಲ್ಲಿ ವಿನಂತಿಸಿದರೂ ಶಂಕರರು ಕೇವಲ ಒಂದೇ ಕಡೆ ಸ್ಥಾಪಿತರಾಗಲಿಲ್ಲ; ಅವರಿಗೆ ಐಹಿಕ ಸಂಪತ್ತಿನ ಅಗತ್ಯತೆ ಕಂಡುಬರಲಿಲ್ಲ! ’ವೈದಿಕೋ ಧರ್ಮಸ್ಥ ಪೀಠವ್ಯಃ ಪ್ರವೃತ್ತಿ ಲಕ್ಷಣೋ ನಿವೃತ್ತಿ ಲಕ್ಷಣಾಶ್ಚ’--ಎಂದು ಹೇಳಿದ ಅವರದು ’ವೈದಿಕ ಧರ್ಮ ಸ್ಥಾಪಿತವ್ಯಃ’ ಎಂಬ ಉದ್ದೇಶವನ್ನು ಹೊಂದಿದ್ದರು. ತಾನು ಅವತಾರೀ ಪುರುಷ ಎಂದು ಎಲ್ಲೂ ಯಾರಲ್ಲೂ ಹೇಳಿಕೊಳ್ಳಲಿಲ್ಲ, ಮೇಲಾಗಿ ಶ್ರೀಕೃಷ್ಣನನ್ನೂ ಅವತಾರಿ ಎನ್ನುವ ಬದಲು ಧರ್ಮರಕ್ಷಕನಾಗಷ್ಟೇ ಕಂಡಿದ್ದಾರೆ. ವೇದಗಳು ಸನಾತನ ಧರ್ಮದ ಕೊಡುಗೆಗಳಾದರೂ ಅವು ಇಂಥಾ ಮತಕ್ಕೇ ಮೀಸಲು ಎಂಬುದಿಲ್ಲ!! ಅವು ಮತಗಳ ಹೊರತಾಗಿ ಜೀವನಧರ್ಮವನ್ನು ಬೋಧಿಸುವಂಥವುಗಳಾಗಿವೆ. ಪುರಾಣಗಳು-ರಾಮಾಯಣ-ಮಹಾಭಾರತ ಇವೆಲ್ಲಾ ಸನಾತನ ಮತವನ್ನಷ್ಟೇ ಹೇಳುತ್ತವಾದ್ದರಿಂದ ಶಂಕರರು ವೇದ-ವೇದಾಂತ ಮತ್ತು ಗೀತೆಯನ್ನು ಮಾತ್ರ ಆದರ್ಶವಾಗಿ ಸ್ವೀಕರಿಸಿದರು. ತನ್ನ ನಂತರ ದೇಶದಲ್ಲಿ ಸನಾತನ ಧರ್ಮಜಾಗೃತಿಗೆ, ಧರ್ಮಾಚರಣೆಯ ಮಾರ್ಗದರ್ಶನಕ್ಕೆ ಬೇಕಾಗಿ ಯತಿಗಳನ್ನು ನಿಯಮಿಸಿದ ಅವರು ಆ ಯತಿಗಳ ಸ್ವಾಧ್ಯಾಯ ಮತ್ತು ಅಧ್ಯಾಪನ ಕಾರ್ಯಗಳಿಗಾಗಿ ಮಠಗಳನ್ನು ಸ್ಥಾಪಿಸಿದರಷ್ಟೇ ಹೊರತು ಅದು ರಾಜಕೀಯ ಬೆರೆತ ಕೆಲಸವಲ್ಲ. 

ಅರ್ಥಮನರ್ಥಂ ಭಾವಯ ನಿತ್ಯಂ
ನಾಸ್ತಿ ತತಃ ಸುಖಲೇಶಃ ಸತ್ಯಂ |
ಪುತ್ರಾದಪಿ ಧನಭಾಜಾಂ ಭೀತಿಃ
ಸರ್ವತ್ರೈಷಾ ವಿಹಿತಾ ರೀತಿಃ ||

ಶಂಕರರು ಏನುಮಾಡಿದರು? ಯಾಕಾಗಿ ಹಾಗೆ ನಿರ್ಧಾರ ಕೈಗೊಂಡರು ಎಂಬ ಅರಿವಿಲ್ಲದೇ ಅನ್ಯಪಥಗಳಲ್ಲಿ ನಡೆದ ಕೆಲವರು, ಅದ್ವೈತವನ್ನು ಖಂಡಿಸಿದರು, ಶಂಕರರ ಅನುಯಾಯಿಗಳನ್ನು ಮಾಯಾವಾದಿಗಳೆಂದು ಹೀಗಳೆದರು. ಅದ್ವೈತದ ಪರಂಪರೆಯ ಕುರುಹು ಕಂಡಲ್ಲೆಲ್ಲಾ ಅದನ್ನು ನಿವಾಳಿಸಿ ಬಿಸುಡಿ ಎಂದು ತಮ್ಮದೇ ಆದ ಶಿಷ್ಯರನ್ನು ಕುಕ್ಕೆ ಸುಬ್ರಹ್ಮಣ್ಯದಿಂದ ಹಿಡಿದು ಘಟ್ಟದ ಮೇಲಿನ ಸೋದೆಯವರೆಗೂ ಆ ಕಾಲಘಟ್ಟದಲ್ಲಿ ಕಳಿಸಿದರು-ಮಠಗಳನ್ನು ನಿರ್ಮಿಸಿದರು.’ಕರ್ನಾಟ ಪ್ರಾಂತ’ದಲ್ಲಿ ಸನಾತನ ಧರ್ಮಕ್ಕೆ ಧಕ್ಕೆ ಬರುವ ಲಕ್ಷಣ ಕಾಣಿಸಿದ್ದರಿಂದ ೧೩ನೇ ಶತಮಾನದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾಪೀಠದ ಮಹರ್ಷಿ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯವನ್ನು[ಕರ್ಣಾಟ ಸಿಂಹಾಸನವನ್ನು] ಸಂಸ್ಥಾಪಿಸಿದ್ದರೂ, ಶತಮಾನಗಳ ನಂತರ ಅದ್ವೈತ ಹಳಿಯುವ ಪಡೆ ಅಲ್ಲಿಗೂ ತನ್ನ ವಸಾಹತನ್ನು ವಿಸ್ತರಿಸಿದ್ದು ಕುಟಿಲ ರಾಜಕೀಯ.  ಆದರೂ ತತ್ವವೇ ಸರಿಯಿರದ ಕಾರಣ ಅದು ದೇಶವ್ಯಾಪೀ ಸಾರ್ವತ್ರಿಕವಾಗಿ ಮಾನ್ಯವಾಗಲಿಲ್ಲ ಎಂಬುದು ಜಗಜ್ಜಾಹೀರಾದ ವಿಷಯ. ಅದೇನೇ ಇದ್ದರೂ, ಅದ್ವೈತವೇ ಎಲ್ಲಕ್ಕೂ ಮೂಲವೆಂಬುದನ್ನು ವೇದವಿಜ್ಞಾನ ಹೇಳುತ್ತದೆ, ವೇದಾಂತ ಸಾರುತ್ತದೆ! ಆ ಕುರಿತು ಕೆಲವು ಅಂಶಗಳನ್ನು ನಿಮ್ಮಮುಂದಿಡಲು ಸಹಜವಾಗಿ ಮುಂದಡಿಯಿಡುತ್ತಿದ್ದೇನೆ.    

"ನನಗೆ ಅದೆಂದರೆ ಪಂಚಪ್ರಾಣ" ಎಂದು ನಾವು ಅದೆಷ್ಟೋ ಸಲ ಬಳಸುವುದಿದೆ. ಹಾಗಾದರೆ ಪಂಚಪ್ರಾಣ ಎಂಬ ಪದ ಹೇಗೆ ಹುಟ್ಟಿಕೊಂಡಿತು? ನೋಡಿ: ನಮ್ಮ ಶರೀರದಲ್ಲಿ ಪ್ರಾಣವಾಯುವಿನ ಸಂಚಾರ ಇದ್ದೇ ಇದೆಯೆಂಬುದು ಎಲ್ಲರ ಅನುಭವಷ್ಟೇ? ಅದರೆ ನಮ್ಮಲ್ಲಿ ಐದುವಿಧದ ವಾಯುರೂಪಗಳಿವೆ! ಅವೇ ಗಾರ್ಹಪತ್ಯ[ಅಪಾನವಾಯು], ದಕ್ಷಿಣಾಗ್ನಿ[ವ್ಯಾನವಾಯು], ಆಹವನೀಯಾಗ್ನಿ[ಪ್ರಾಣವಾಯು], ಉಚ್ವಾಸ-ನಿಶ್ವಾಸಕ್ರಿಯೆಯನ್ನು ನಿರ್ವಹಣೆ ಹೊತ್ತಿರುವ ಸಮಾನವಾಯು ಮತ್ತು ಮನಸ್ಸೆಂಬ ಯಜ್ಞವನ್ನು ನಿರ್ವಹಿಸುವ ಉದಾನವಾಯು. ಈ ಮೂಲದಿಂದ ಪಂಚಪ್ರಾಣ ಎಂಬ ಪದ ಹುಟ್ಟಿಕೊಂಡಿತು! 

ಶಂಕರರು ದ್ವೈತವನ್ನು ಅಲ್ಲಗಳೆದಿಲ್ಲ! ಈ ಜಗತ್ತನ್ನು ಅಲ್ಲಗಳೆದಿಲ್ಲ! ಕಣ್ಣಿಗೆ ಕಾಣುವ ಯಾವುದನ್ನೂ ಸುಳ್ಳು ಎಂದು ಹೇಳಲಿಲ್ಲ. ಅದು ಸತ್ಯವೇ, ಆದರೆ ಅಪರಾಜ್ಞಾನ[ಲೌಕಿಕಜ್ಞಾನ ಅಥವಾ ವ್ಯಾವಹಾರಿಕ ಜ್ಞಾನ] ವನ್ನು ಮೀರಿ ಪರಾಜ್ಞಾನ[ ಅಲೌಕಿಕ ಜ್ಞಾನ, ಪಾರಮಾರ್ಥಿಕ ಜ್ಞಾನ]ವನ್ನು ಪಡೆದವರಿಗೆ ಈ ಜಗತ್ತು, ಇಲ್ಲಿನ ವಸ್ತುಗಳು, ಇಲ್ಲಿನ ಸುಖೋಪಭೋಗಗಳು ಇವುಗಳೆಲ್ಲಾ ಅನಿತ್ಯವಾಗುತ್ತವೆ ಎಂದಿದ್ದಾರೆ. ಭೋರ್ಗರೆಯುವ ಸಾಗರದ ನೀರಿನಿಂದ ಅಲೆಗಳು ಏಳುತ್ತವೆ, ಅಲೆಗಳಲ್ಲಿ ನೀರಿನ ಗುಳ್ಳೆಗಳೂ ಇರುತ್ತವೆ. ಅಲೆ, ಗುಳ್ಳೆ, ನೀರು ಇವೆಲ್ಲಾ ನೀರಿನ ಬಹುರೂಪಗಳಷ್ಟೆ. ನೀರನ್ನೇ ಕಂಡಿರದ ವ್ಯಕ್ತಿಯೊಬ್ಬನಿದ್ದರೆ ಕಾಫಿ-ಟೀಗಳಲ್ಲೂ ಸಹ ಮೂಲದಲ್ಲಿ ನೀರೇ ಇದೆ ಎಂದರೆ ಆತ ಒಪ್ಪಲಾರ! ಅದ್ವೈತವೆಂಬ ದಿವ್ಯಾನುಭೂತಿ ಸಾಂಸಾರಿಕರಿಗೆ ಸಸಾರದಲ್ಲಿ ನಿಲುಕುವುದಿಲ್ಲ. ದೇವರನ್ನೂ ನಮ್ಮನ್ನೂ ಬೇರೆಬೇರೆಯಾಗಿ ಕಾಣುವವರೆಗೊ ನಾವೆಲ್ಲರೂ ದ್ವೈತಿಗಳೇ ಸರಿ; ಹಾಗಾದರೆ ನಾವೇ ದೇವರು ಎಂದುಕೊಂಡು ತಿರುಗಲು ಸಾಧ್ಯವೇ? ಲೌಕಿಕ-ವ್ಯಾವಹಾರಿಕವಾಗಿ ಅದು ದೂರದಮಾತು, ಆದರೆ ನಮ್ಮೊಳಗೇ ದೇವರು ಇದ್ದಾನೆನ್ನುವುದಂತೂ ಅಳಿಸಲಾಗದ ಗಂಭೀರ ಮಾತು. ನಮ್ಮೊಳಗೇ ದೇವರಿದ್ದರೂ ನಮಗವನ ದರ್ಶನವಿಲ್ಲ ಎಂದರೆ ಆಶ್ಚರ್ಯಪಡಬೇಕು! ನಾವು ಈ ಲೋಕದಲ್ಲಿ ಅನುಭವಿಸುವ ಸುಖಗಳೆಲ್ಲಾ ಪರಮಾತ್ಮನ ತುಣುಕುಗಳೇ! ಆದರೆ ಅವು ನಿತ್ಯವಲ್ಲ, ಶಾಶ್ವತವಲ್ಲ. ಅವು ಸಂಪೂರ್ಣ ತೃಪ್ತಿಯನ್ನುಂಟುಮಾಡುವುದಿಲ್ಲ. [ಅತ್ಯಂತ ಹೊಸನಮೂನೆಯ ಕಾರನ್ನು ಕೊಂಡ ಸುಖ, ಅದಕ್ಕಿಂತಲೂ ಸುಂದರವಾದ ಮತ್ತೊಂದು ಕಾರು ಮಾರುಕಟ್ಟೆಗೆ ಬರುವವರೆಗೆ ಇರುತ್ತದೆ-ನಂತರ ಮನಸ್ಸು ತನ್ನಲ್ಲಿ ಆ ಕಾರು ಇಲ್ಲವಲ್ಲಾ ಎಂದು ಬೇಸರಗೊಳ್ಳುತ್ತದೆ] ಹಾಗಾದರೆ ನಮ್ಮೊಳಗೇ ಇರುವ ಪರಬ್ರಹ್ಮನನ್ನು ಹೇಗೆ ಹೇಳುವುದು? ಉತ್ತರ: ಅವಸ್ಥಾತ್ರಯಗಳಾದ ಜಾಗ್ರತ್, ಸ್ವಪ್ನ, ಸುಷುಪ್ತಿ ಗಳಲ್ಲಿ ಸುಷುಪ್ತಿಯಲ್ಲಿ ನಾವು ಅದ್ವೈತವನ್ನೇ ಅನುಭವಿಸುತ್ತೇವೆ. No matter whether he/she is a dwaiti or a vishishtaadwaiti or belongs to someother religion. Every person born on this earth will eperience adwaita in Deep Sleep or Delta Sleep.

ಕಸ್ತ್ವಂ ಕೋsಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ ತಾತಃ |
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಂ || 

ಮೂರು ಅವಸ್ಥೆಗಳನ್ನು ನಾವು ಜನ್ಮದಾರಭ್ಯ ಸಾಯುವವರೆಗೂ  ಪಡೆದೇ ಇರುತ್ತೇವೆ, ತತ್ಸಂಬಂಧೀ ಆ ಮೂರೂ ಶಾರೀರಿಕ ಪ್ರಕ್ರಿಯೆಗಳಿಗೆ ವ್ಯಯವಾಗುವ ಕಾಲಗಳನ್ನು ಕಾಲತ್ರಯ ಎಂದಿದ್ದಾರೆ. ನಮ್ಮ ಶರೀರದ ಯಾವ ಕ್ರಿಯೆಗಳೂ ಪರಿಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ನಿದ್ರೆಯಿಲ್ಲದೇ ನಡೆಯುವುದಿಲ್ಲ, ಮಲ-ಮೂತ್ರ ವಿಸರ್ಜನೆ ಸ್ವಲ್ಪ ತಡವಾಗಿಯಾದರೂ ಮಾಡಲೇಬೇಕಾಗುತ್ತದೆ, ಹಸಿವು-ನೀರಡಿಕೆ-ಜೀರ್ಣಕ್ರಿಯೆ ಇವೆಲ್ಲಾ ಆಟೋಮೇಟೆಡ್, ಹೀಗಿರುವಾಗ ಈ ಮೂರೂ ಅವಸ್ಥೆಗಳನ್ನು [physical+mental combined status] ಮೀರಿ ನಿಲ್ಲುವ ಹಂತ ತಲ್ಪಿದವರಿಗಷ್ಟೇ ಅದ್ವೈತದ ಪರಿಪೂರ್ಣ ಅರಿವು ಬರಲು ಸಾಧ್ಯ! ಹಾಗಾದರೆ ಇದನ್ನು ಹೇಗೆ ಸಾಧಿಸಿಕೊಳ್ಳಬಹುದು? ಅದು ಯೋಗದ ಪರಮೋಚ್ಚ ಸ್ಥಿತಿ: ಸಮಾಧಿಯಿಂದ. ಸುಷುಪ್ತಿಯಲ್ಲೇ ನಿತ್ಯ ನಮಗೆ ಮೋಕ್ಷದಂಥಾ ಸುಖ ಸಿಗುತ್ತದೆ ಎಂಬುದು ಸುಳ್ಳಲ್ಲ. ಸುಷುಪ್ತಿ ಅಥವಾ ಗಾಢನಿದ್ರೆಯಲ್ಲಿ ವ್ಯಕ್ತಿ ತನ್ನ ಐಹಿಕ/ಪ್ರಾಪಂಚಿಕ ವ್ಯವಹಾರ ಬಂಧನವನ್ನು ಕಳೆದುಕೊಳ್ಳುತ್ತಾನೆ. ಆದರೆ ಅವನ ಚಿತ್ತದಲ್ಲಿ ಕರ್ಮಬೀಜಗಳು ಹಾಗೇ ಸ್ಥಾಪಿತವಾಗಿರುತ್ತವೆ, ನಿದ್ದೆಯಿಂದೆದ್ದಾಗ ಅವು ಮತ್ತೆ ವ್ಯಕ್ತಿಯನ್ನು ಈ ಲೋಕದ ವ್ಯವಹಾರಗಳನ್ನು ಮುಂದುವರಿಸುವಂತೆ ಸೆಳೆಯುತ್ತವೆ! ಗಾಢನಿದ್ದೆಯಲ್ಲಿ ಮನುಷ್ಯನ ಮನಸ್ಸಿನಲ್ಲಿ ಮನಸ್ಸಿನ ಪ್ರಚಾರ ಇರುವುದಿಲ್ಲ, ಮನಸ್ಸು ಸ್ತಬ್ಧವಾಗಿರುತ್ತದೆ, ಇಂದ್ರಿಯಗಳೆಲ್ಲಾ ಒಳಮುಖವಾಗಿರುತ್ತವೆ, ಮನಸ್ಸು ಸುಷುಮ್ನಾ ನಾಡಿಯೊಳಕ್ಕೆ ಸೇರಿಬಿಡುತ್ತದೆ. ನಿದ್ರೆ ನೈಸರ್ಗಿಕ ಕ್ರಿಯೆ, ಪರಮಾತ್ಮ ಸಹಜವಾಗಿ ತನ್ನ ಮೂಲದೊಡನೆ ಸಂಪರ್ಕಗೊಳ್ಳುವ ಕ್ರಿಯೆ. ನಿದ್ರೆಯಿಲ್ಲದೇ ಕೆಲ ಸಮಯ ಕಳೆಯಬಹುದೇ ಹೊರತು ನಿದ್ದೆ ಮಾಡದೇ ಇರಲು ಪ್ರಯತ್ನಿಸಿದರೂ ಕೊನೆಗೊಮ್ಮೆ ಆಯಾಸ ಜಾಸ್ತಿಯಾಗಿ ತಂತಾನೇ ನಿದ್ದೆಗೆ ಜಾರಿಬಿಡುತ್ತೇವೆ. ನಿದ್ರೆ ಸರಿಯಾಗಿ ಆದರೆ ಮಾತ್ರ ಶರೀರಕ್ಕೆ ನವಚೈತನ್ಯ ಒದಗುತ್ತದೆ, ಮುಂದಿನ ಕೆಲಸ-ಕಾರ್ಯಗಳನ್ನು ನಡೆಸಲು ತಾಕತ್ತು ಬರುತ್ತದೆ. ಇಂಥಾ ಸುಖತರುವ ಗಾಢ ನಿದ್ರೆ ಇಡೀ ದಿನದಲ್ಲಿ/ರಾತ್ರಿಯಲ್ಲಿ ಕೆಲವು ತಾಸುಗಳು ಮಾತ್ರ. ಮಿಕ್ಕಿದ ಸಮಯದಲ್ಲಿ ಒಂದೋ ನಾವು ಎಚ್ಚೆತ್ತಿರುತ್ತೇವೆ ಅಥವಾ ಕನಸುಕಾಣುತ್ತಿರುತ್ತೇವೆ. ಕನಸಿನಲ್ಲಿ ಭಯಾನಕ ದೃಶ್ಯಗಳನ್ನು ಕಂಡು ಕೂಗಿಕೊಳ್ಳುವವರಿರುತ್ತಾರೆ, ಕನಸಿನಲ್ಲಿ ಎದ್ದು ನಡೆದಾಡುವ ಜನ ಇರುತ್ತಾರೆ, ಮಂಚದಂತಹ ಜಾಗದಿಂದ ಕೆಳಕ್ಕೆ ಬೀಳುವವರಿರುತ್ತಾರೆ! ಕನಸಿನಿಂದ ಮನಸ್ಸಿನಮೇಲೆ ಪರಿಣಾಮ ಉಂಟಾಗುತ್ತದೆ ಎಂಬುದು ಸುಳ್ಳಲ್ಲ. ಇನ್ನು ಎಚ್ಚರವಿದ್ದಾಗ ಎದುರಿಗೆ ಆನೆ ಬಂದರೆ ಅದನ್ನು ಸುಳ್ಳು ಎನ್ನಲಾಗುವುದಿಲ್ಲ! ಕಾರ್ಖಾನೆಯೊಂದು ಬೆಂಕಿಗೆ ಆಹುತಿಯಾದರೆ ಅದು ನಿಜವೇ ಇರುತ್ತದೆ. ಆದರೆ ಅದೆಲ್ಲವೂ ಈ ಲೋಕಕ್ಕೆ ಮಾತ್ರ ಸೀಮಿತವಾದುದು-ಇಹದ ಬದುಕಿಗೆ ಮಾತ್ರ ಸೀಮಿತವಾದುದು. 
ಯೋಗರತೋ ವಾ ಭೋಗರತೋ ವಾ
ಸಂಗರತೋ ವಾ ಸಂಗವಿಹೀನಃ |
ಯಸ್ಯ ಬ್ರಹ್ಮಣಿ ರಮತೇ ಚಿತ್ತಂ
ನಂದತಿ ನಂದತಿ ನಂದತ್ಯೇವ ||

ದೂರದಲ್ಲಿ ಕಾಣುವ ಆಕಾಶದ ಬಣ್ಣ ನೀಲಿಯಾಗಿರುತ್ತದೆ ಆದರೆ ಆಕಾಶ ನೀಲಿಯಲ್ಲ! ಬಿಸಿಲು ಮತ್ತು ಭೂಮಿಯ ಶಾಖ ಸೇರಿಕೊಂಡು ನೀರು ಇರುವ ರೀತಿ ಮರೀಚಿಕೆ ಉಂಟಾಗುತ್ತದೆ-ಆದರೆ ಅಲ್ಲಿ ನೀರು ಇರುವುದಿಲ್ಲ! ಕನ್ನಡಿಯಲ್ಲಿ ಬಿಂಬ ಕಾಣುತ್ತದೆ ಆದರೆ ಕೈಗೆ ಸಿಗುವುದಿಲ್ಲ. ನೀರಿನಲ್ಲಿ ವ್ಯಕ್ತಿ/ವಸ್ತುವಿನ ಪ್ರತಿಬಿಂಬ, ವ್ಯಕ್ತಿ ವಸ್ತುವಿನ ನೆರಳು ಇವೆಲ್ಲಾ ಕೇವಲ ನಮ್ಮ ಕಣ್ಣಿಗೆ ಉಂಟಾಗುವ ಚಮತ್ಕಾರಗಳು. ಅದೇ ರೀತಿಯಲ್ಲಿ ಜಗನ್ನಾಟಕವೂ ಕೂಡ ಅನೇಕವಲ್ಲದ ಏಕಶಕ್ತಿಯ ಮೂಲದಿಂದ ಉಂಟಾದದ್ದು ಎಂಬ ಅರಿವು ಆತ್ಮಜ್ಞಾನ ಪಡೆದವರಿಗೆ ಮಾತ್ರ ಲಭ್ಯವಾಗುತ್ತದೆ. ಸಹಜವಾಗಿ ನಿದ್ದೆಯಲ್ಲಿ ಸಿಗುವ ಬ್ರಹ್ಮನನ್ನು ನಾವು ಅರಿಯಲಾರೆವು ಯಾಕೆಂದರೆ ನಮ್ಮ ಮನಸ್ಸಿನ ಹತೋಟಿ ನಮ್ಮ ಕೈಲಿ ಆಗ ಇರುವುದಿಲ್ಲ! ಮನಸ್ಸನ್ನು ನಮ್ಮ ಕೈಲಿ ಹಿಡಿದು ನಿಯಂತ್ರಿಸಿ ಬ್ರಹ್ಮನನ್ನು ತಲ್ಪುವ ಮಾರ್ಗ ಒಂದೇ ಅದು ಅಸ್ಪರ್ಶಯೋಗ! ಹಾಗಾದರೆ ಗಾಢನಿದ್ದೆಯಲ್ಲಿರುವ ವ್ಯಕ್ತಿಗೆ ಜ್ಞಾನವಿರುತ್ತದೆಯೋ ಇಲ್ಲವೋ? ಇರುತ್ತದೆ ಆದರೆ ಆತ ಪ್ರಾಪಂಚಿಕ ವ್ಯವಹಾರದಿಂದ ಆ ಕ್ಷಣಕ್ಕೊಮ್ಮೆ ದೂರವಾಗಿರುತ್ತಾನೆ, ಆದರೂ ಆತನ ಚಿತ್ತದಲ್ಲಿ ಕರ್ಮಬೀಜಗಳು ನೆಲೆಗೊಂಡಿರುವುದರಿಂದ ಅಲ್ಲಿ ಈ ಲೋಕದ ಸ್ಪರ್ಶವಿದ್ದೇ ಇರುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಿ, ಯೋಗದ ಎಲ್ಲಾಹಂತಗಳನ್ನೂ ಪೂರೈಸಿ, ಸಮಾಧಿ ಸ್ಥಿತಿಯನ್ನು ಸಾಧಿಸಿಕೊಂಡರೆ ಆಗ ಅಲ್ಲಿ ಸಾಧಕನ ಮನಸ್ಸು ಜಾಗ್ರತ್, ಸ್ವಪ್ನ, ಸುಷುಪ್ತಿಯಲ್ಲದ ಸ್ಥಿತಿಯಲ್ಲಿರುತ್ತದೆ! ಕರ್ಮಬೀಜಗಳು ಮನಸ್ಸಿನಲ್ಲಿ ಇರದೇ ಮನಸ್ಸು ನಿಷ್ಕಲ್ಮಷವಾಗಿರುತ್ತದೆ. ವ್ಯಾವಹಾರಿಕ ಪ್ರಪಂಚದ ಯಾವ ಕೊಡು-ಕೊಳ್ಳುವಿಕೆಯ ಸಂಪರ್ಕ, ಸ್ಪರ್ಶ ಇರುವುದಿಲ್ಲವಾದ್ದರಿಂದ ಮನಸ್ಸು ಶಾಂತವಾಗಿರುತ್ತದೆ, ಆತ್ಮಜ್ಯೋತಿಯ ಅನುಭೂತಿ ಅಲ್ಲಿ ಉಂಟಾಗುತ್ತದೆ. ವೃತ್ತಿಜ್ಞಾನ ರಹಿತವಾದ ಈ ಹಂತವನ್ನೇ ಗೌಡಪಾದಾಚಾರ್ಯರು ಅಸ್ಪರ್ಶಯೋಗವೆಂದು ಕರೆದಿದ್ದಾರೆ. ಸುಷುಪ್ತಿಯಲ್ಲಾದರೋ ವ್ಯಕ್ತಿಗೆ ಸುಷುಪ್ತಿಗೂ ಮುನ್ನ ಪೂರ್ವವಿಕಲ್ಪವಿರುವುದು, ಸುಷುಪ್ತಾವಸ್ಥೆ ಮುಗಿದಮೇಲೆ ಮತ್ತೆ ವಿಕಲ್ಪ ಬರುವುದು; ಅದೇ ಅಸ್ಪರ್ಶಯೋಗವನ್ನು ಸಾಧಿಸಿದ ವ್ಯಕ್ತಿಗೆ ಯಾವುದೇ ಮನೋ ವಿಕಲ್ಪಗಳೂ ಇರುವುದಿಲ್ಲ-ಅದೇ ನಿರ್ವಿಕಲ್ಪ ಸಮಾಧಿ ಎನ್ನಿಸಿದೆ.  ಇಂತಹ ಸಮಾಧಿ ಸ್ಥಿತಿಯನ್ನು ಅನುಭವಿಸುವವರಿಗೆ  ನಿದ್ದೆಯೇ ಬೇಕಿಲ್ಲ! ಅವರ ಭೌತಿಕ ಕಾಯಕ್ಕೆ ಬೇಕಾಗುವ ತಾಕತ್ತು ಮತ್ತು ಸ್ಫೂರ್ತಿ ಯೋಗನಿದ್ರೆ[ಸಮಾಧಿ]ಯಲ್ಲಿಯೇ  ಅವರಿಗೆ ಪ್ರಾಪ್ತವಾಗುತ್ತದೆ

ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ|
ಯಸ್ಯಾಂ ಜಾಗೃತಿ ಭೂತಾನಿ ಸಾನಿಶಾ ಪಶ್ಯತೋ ಮುನೇಃ ||

---ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ, ಸುಷುಪ್ತಿಯಲ್ಲಿ ಯಾವಜ್ಞಾನವೂ ಇರುವುದಿಲ್ಲ, ಆದರೆ ಸಮಾಧಿಯಲ್ಲಿರುವವನಿಗೆ ಆತ್ಮದರ್ಶನವಿರುವುದು.

ಸಮಾಧಿಯಲ್ಲೇ ತುರಿಯಾವಸ್ಥೆಯನ್ನು ತಲ್ಪಿದ ವ್ಯಕ್ತಿಗೆ ಪರಬ್ರಹ್ಮ ಸ್ವರೂಪ ಪ್ರಾಪ್ತವಾಗುತ್ತದೆ. ಅಂದರೆ ಜ್ಞಾನವು ಪರಿಪೂರ್ಣತೆಯನ್ನು ಪಡೆದಿರುತ್ತದೆ.ಯಾವವಿಧವಾದ ಅಭಿಲಾಷೆಯೂ, ಹೆಸರೂ, ವಿಚಾರವೂ, ಚಿಂತೆಯೂ ಇಲ್ಲದ ಸ್ಥಿತಿ ಅದು. ಅಭಯವಾದಂಥ, ಶಾಂತವಾದ, ಒಂದೇ ಸಮನಾದ ಜ್ಯೋತಿರೂಪವದ ಸ್ಥಿತಿ ಇರುವುದು. ಅದನ್ನು ಬಿಟ್ಟು ಇನ್ನೊಂದು ವಸ್ತುವೆಂಬುದು ಇರಲಾರದು. ಆತ್ಮಸಂಸ್ಥನಾಗಿರುವ ವ್ಯಕ್ತಿ ಬೆಳಗುತ್ತಿರುತ್ತಾನೆ. ಈ ಸ್ಥಿತಿಯೇ ನಿಜವಾದ ಸ್ಥಿತಪ್ರಜ್ಞ ಸ್ಥಿತಿ. ಸ್ಥಿತಪ್ರಜ್ಞ ಸ್ಥಿತಿಯನ್ನು ಗೀತಾಚಾರ್ಯ ಶ್ರೀಕೃಷ್ಣ ಗೀತೆಯ ಎರಡನೇ ಅಧ್ಯಾಯದಲ್ಲಿ ಬಹಳ ವಿಶದವಾಗಿ ವರ್ಣಿಸಿದ್ದಾನೆ.

ತ್ವಯಿ ಮಯಿ ಚಾನ್ಯತ್ರೈ ಕೋ ವಿಷ್ಣುಃ
ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ |
ಭವ ಸಮಚಿತ್ತಃ ಸರ್ವತ್ರ ತ್ವಂ
ವಾಂಛಸ್ಯಚಿರಾದ್ಯದಿ ವಿಷ್ಣುತ್ವಂ ||

ಎಲ್ಲಾ ಸರಿ, ಈಗ ಆತ್ಮ ಶರೀರದಲ್ಲಿದ್ದು ಹೊರಪ್ರಪಂಚದೊಡನೆ ಹೇಗೆ ಸಂಪರ್ಕಕ್ಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ: ಮನಸ್ಸು-ಬುದ್ಧಿ-ಚಿತ್ತ-ಅಹಂಕಾರ ಈ ನಾಲ್ಕನ್ನು ಸೇರಿಸಿ ಸಾಧನ ಚತುಷ್ಟಯ ಎಂದಿದ್ದಾರೆ ಶಾಸ್ತ್ರಕಾರರು. ಈ ನಾಲ್ಕೂ ಸೇರಿದರೆ ಅಂತಃಕರಣವೆನಿಸುತ್ತದೆ. ಹೊರಗಿನ ಪ್ರಪಂಚಕ್ಕೂ ಆತ್ಮಕ್ಕೂ ನಡುವಿನ ಸಂಪರ್ಕ ಸೇತುವೆಯೇ ಈ ಅಂತಃಕರಣ ಎನ್ನಬಹುದಾಗಿದೆ.  ಇದನ್ನು ನಾವು ತಿಳಿಯುವುದಕ್ಕೂ ಮೊದಲು ಸೋಪಾಧಿಕ ಬ್ರಹ್ಮ ಮತ್ತು ನಿರುಪಾಧಿಕ ಬ್ರಹ್ಮ ಈ ಬಗ್ಗೆ ಅರಿಯೋಣ. ಸೋಪಾಧಿಕ ಬ್ರಹ್ಮನೆಂದರೆ ಬ್ರಹ್ಮಣ ಸಗುಣರೂಪ, ನಿರುಪಾಧಿಕ ಬ್ರಹ್ಮನೆಂದರೆ ನಿರ್ಗುಣರೂಪ. ಬ್ರಹ್ಮ ನೇರವಾಗಿ ಕಾರ್ಯಗಳನ್ನು ಮಾಡುವುದಿಲ್ಲ, ಆದರೆ ಬ್ರಹ್ಮನಲ್ಲಿರುವ ಮಾಯೆಯೇ ವಸ್ತುತಃ ಕಾರ್ಯಕ್ಕೆ ಕಾರಣ, ಬ್ರಹ್ಮ ಇಲ್ಲಿ ಅಧ್ಯಕ್ಷ; ಬ್ರಹ್ಮನೇ ಸಾಕ್ಷಾತ್ ಕಾರಣವಲ್ಲ. ಪ್ರಾಣವು ಐದು + ಜ್ಞಾನೇಂದ್ರಿಯಗಳು ಐದು + ಕರ್ಮೇಂದ್ರಿಯಗಳು ಐದು + ಅಂತಃಕರಣ ನಾಲ್ಕು = ೧೯ ಅಂದರೆ ಏಕೋನವಿಂಶತಿ ಮುಖದಿಂದ ಜೀವಾತ್ಮ ಬಾಹ್ಯಜಗತ್ತಿನೊಡನೆ ಸಂಪರ್ಕಿಸುತ್ತಾನೆ. ದೇಹದಲ್ಲಿರುವ ಆ ಸ್ವರೂಪವನ್ನೇ ವೈಶ್ವಾನರ ಎಂತಲೂ ಹೇಳುತ್ತಾರೆ. |ವಿಶ್ವೇಷು ನರೇಷು ವರ್ತತೇ ಇತಿ ವೈಶ್ವಾನರಃ| ಎಲ್ಲಾ ಪ್ರಾಣಿಗಳಲ್ಲೂ ಇರುವ ಒಂದು ಶಕ್ತಿವಿಶೇಷ ಇದಾಗಿದೆ. ಇದನ್ನು ಆತ್ಮಕ್ಕೆ ಮೊದಲಪಾದವೆಂದಿದೆ ಮಾಂಡೂಕ್ಯ ಉಪನಿಷತ್ತು. ಅಂದರೆ ಜೀವಾತ್ಮನು ಪ್ರಾಣಗಳ ಮೂಲಕ ಅಂತಃಕರಣವನ್ನು ಉಜ್ಜೀವನಮಾಡಿಸಿ  ಬದುಕಿಸಿ, ಅವುಗಳ ಮೂಲಕ ಇಂದ್ರಿಯಜನ್ಯ ಜ್ಞಾನವನ್ನು ಗ್ರಹಿಸಿ, ತಾನು ಅದನ್ನು ವಿಮರ್ಶೆಮಾಡುತ್ತಾನೆ.

Let us compare with an example: In a Computer System, Micro Processor[artificial intelligence] is Atma-soul, hardware is 'Shareera'-body. When a system is powered 'ON', then processor seeks for BIOS [BASIC INPUT OUTPUT SYSTEM-A firmware kept closed to the processor via  contact tracks]information &  executes primary routine which is initiated by BIOS[Loads operating system software into the main memory]. Later it communicates with Interrupts, other memory locations, external storage devices etc. etc. Without software[+processor & firmware] hardware is dumb, without hardware software[+processor & firmware] can exist in some media. Sushupti Status is like execution of a delay routine in a program by the processor where pointer guides processor steps while going out & coming back to the main program. Hibernation status can be treated as Samaadhi, Though this is not so relevant to Metaphysics, Probably these things can easily be understood by the computer programers/software engineers.  

ಇನ್ನೊಬ್ಬರು ನನ್ನ ಲೇಖನವೊಂದಕ್ಕೆ ಪ್ರತಿಕ್ರಿಯಿಸುತ್ತಾ ಶಂಕರರನ್ನು ಬಹಳವಾಗಿ ಆಡಿಕೊಂಡಿದ್ದರು. ಅವರ ಪ್ರಕಾರ ಅಹಂಬ್ರಹ್ಮಾಸ್ಮಿ ಎಂಬುದು ಅಲ್ಲೆಲ್ಲೋ ಯಾಜ್ಞವಲ್ಕ್ಯರ ಕಾಲದಲ್ಲಿ ಯಾರೋ ಹೇಳಿದ್ದು-ಅದನ್ನು ಶಂಕರರು ತಾನು ಹೇಳಿದ್ದು ಎಂದರೆ ಸರಿಯೇ ಎಂಬುದು ಪ್ರಶ್ನೆ, ನಾನು ಉತ್ತರಿಸಿದ್ದೆ: ಶಂಕರರು ಯಾವುದನ್ನೂ ತಾನೇ ಹೊಸದಾಗಿ ಹುಟ್ಟಿಸಿದೆ ಎಂದು ಹೇಳಲಿಲ್ಲ. ಅದ್ವೈತ, ವೇದ-ವೇದಾಂತದಲ್ಲೇ ಹೇಳಲ್ಪಟ್ಟಿದೆ, ಗೀತೆಯಲ್ಲೂ ಅದೇ ಇದೆ, ಮೇಲಾಗಿ ಶಂಕರರಿಗಿಂತ ಮುನ್ನವೇ ಗೌಡಪಾದಾಚಾರ್ಯರೂ ಸಹ ಅದ್ವೈತಿಗಳೇ ಆಗಿದ್ದರು. ’ಅಹಂ ಬ್ರಹ್ಮಾಸ್ಮಿ’[ಬೃಹದಾರಣ್ಯಕ ಉಪನಿಷತ್], ’ತತ್ವಮಸಿ’[ಛಾಂದೋಗ್ಯ ಉಪನಿಷತ್], ’ಅಯಮಾತ್ಮ ಬ್ರಹ್ಮ’, ’ಪ್ರಜ್ಞಾನಂ ಬ್ರಹ್ಮ’ ಎಂಬ ಎಲ್ಲಾ ಮಹಾವಾಕ್ಯಗಳೂ ವೇದಾಂತದಲ್ಲೇ ಇವೆ. ನಮ್ಮ ಮಾಮೂಲಿ ವಾಡಿಕೆಯ ಭಾಷೆಯಲ್ಲಿ ಹೇಳುವುದಾದರೆ ಶಂಕರರು ಹಲವನ್ನು ಪರಿಷ್ಕರಿಸಿ ಫಿಲ್ಟರ್ ಮಾಡಿಕೊಂಡು ತನಗೆ ಬೇಕಾದುದನ್ನು ಆಯ್ದುಕೊಂಡು ಬಳಸಿ, ಆಚರಿಸಿ, ಮಾರ್ಗದರ್ಶಿಸಿದ್ದಾರೆಯೇ ಹೊರತು ಯಾರಿಗೂ ಬಲವಂತದ ಮಾಘಸ್ನಾನ ಮಾಡುವಂತೇ ಮುದ್ರೆಯನ್ನೊತ್ತಿಲ್ಲ!  

ಅಜೋಪಿ ಸನ್ನವ್ಯಯಾತ್ಮಾ ಭೂತಾನಾಮೀಷ್ವರೋಪಿ ಸನ್|
ಪ್ರಕೃತಿಂ ಸ್ವಾಮದಿಷ್ಠಾಯ ಸಂಭವಾಮ್ಯಾತ್ಮಮಾಯಯಾ||

--ಗೀತೆಯ ನಾಲ್ಕನೇ ಅಧ್ಯಾಯದ ೬ನೇ ಶ್ಲೋಕದಲ್ಲಿ ಶ್ರೀಕೃಷ್ಣ ಹೇಳಿದ್ದಾನೆ: ನಾನು ಅಜನ್ಮನು ಮತ್ತು ಅವಿನಾಶಿ ಸ್ವರೂಪನಾಗಿದ್ದರೂ ಸಮಸ್ತ ಪ್ರಾಣಿಗಳ ಈಶ್ವರ[ಒಡೆಯ]ನಾಗಿದ್ದರೂ ಸಹ ನನ್ನ ಪ್ರಕೃತಿಯನ್ನು ಅಧೀನವಾಗಿಸಿಕೊಂಡು ನನ್ನ ಯೋಗಮಾಯೆಯಿಂದ ಪ್ರಕಟವಾಗುತ್ತೇನೆ.

ಅದೂ ಅಲ್ಲದೇ ವೃಕ್ಷವೊಂದರಲ್ಲೇ ನಾವು ನೋಡುವಾಗ ಎಲೆಬೇರೆ, ಹೂವು ಬೇರೆ, ಕಾಯಿ-ಹಣ್ಣು ಬೇರೆ, ಆದರೆ ಎಲ್ಲವೂ ಮರಕ್ಕೆ ಸಂಬಂಧಿಸಿದ್ದೇ ಆಗಿದ್ದು ಒಟ್ಟಂದದಲ್ಲಿ ಅದು ಫಲಭರಿತ ಮರವೇ ಆಗಿರುತ್ತದೆ. ಹಾಗೆಯೇ ಅದ್ವೈತವೆಂಬ ಮರಕ್ಕೆ ದ್ವೈತ ಮತ್ತು ವಿಶಿಷ್ಟಾದ್ವೈತಗಳಾದಿಯಾಗಿ ಹಲವು ಮತ-ಪಂಥಗಳು ಎಲೆ-ಹೂವು-ಕಾಯಿ-ಹಣ್ಣುಗಳೋಪಾದಿಯಲ್ಲಿವೆ. ಅದ್ವೈತ ಎಂಬುದೊಂದು ತತ್ವವೇ ಹೊರತು ಮತವಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ. Adwaita can be experinced by the one who is having Ingenuity or Intutive Ability|| ಮೇಧಾದೇವೀ ಜುಷಮಾಣಾ ನ ಆಗಾ ದ್ವಿಶಾಚೀ ಭದ್ರಾಸುಮನಸ್ಯಮಾನಾ ||--ಎಂಬ ಮೇಧಾಸೂಕ್ತದ ಹೇಳಿಕೆಯಂತೇ ಅದ್ವೈತವನ್ನು ಅನುಭವಿಸುವುದು ಮನುಷ್ಯನ ಸ್ವಯಂ ಪ್ರತಿಭೆ! ಶಂಕರರು ಯಾಕೆ ಪುರಾಣಗಳನ್ನು ಆಯ್ದುಕೊಳ್ಳಲಿಲ್ಲ ಎಂದರೆ ಅವುಗಳ ಕಾಲಮಾನದಲ್ಲಿ ಅವರಿಗೆ ವ್ಯತ್ಯಾಸಗಳು ಕಂಡುಬಂದಿವೆ. ಮತ್ತು ಒಂದೊಂದು ಪುರಾಣವು ಒಂದೊಂದು ದೇವರನ್ನು ಹೊಗಳುತ್ತಾ ಒಂದಕ್ಕೊಂದು ವಿರೋಧಾಭಾಸವನ್ನುಂಟುಮಾಡುತ್ತದೆ. ರಾಮಾಯಣ ಮತ್ತು ಮಹಾಭಾರತಗಳು ಅಪರಾಜ್ಞಾನ[ಲೌಕಿಕ ಜ್ಞಾನ]ಕ್ಕೆ ಸಂಬಂಧಿಸಿದವಾಗಿವೆ. ವೇದಗಳಲ್ಲಿ ಬಹಳಕಡೆ ದೇವರು ಒಬ್ಬನೇ ಎಂಬ ಉಲ್ಲೇಖವಿರುವುದರಿಂದಲೂ, ಅಲ್ಲಿ ವಿಷ್ಣು ಎಂಬ ಪದವನ್ನು ವಿಶಾಲ ಎಂಬರ್ಥದಲ್ಲಿ ಬಳಸಿರುವುದರಿಂದಲೂ, ವಿಷ್ಣು-ರುದ್ರ ಇವನ್ನೆಲ್ಲಾ ಒಂದಕ್ಕೊಂದು ಪರ್ಯಾಯವಾಗಿ ಬಳಕೆಮಾಡಿರುವುದರಿಂದಲೂ ಅದೂ ಅಲ್ಲದೇ ಯಾವುದೇ ಸ್ಪಷ್ಟವಾದ ಆಕಾರಗಳ ಬಗ್ಗೆ ಹೇಳದ್ದರಿಂದಲೂ ಶಂಕರರ ಸಂಶೋಧನೆಯ ಪ್ರಕಾರ ದೇವರು ಎಂಬ ಶಕ್ತಿ ನಿರಾಕಾರ, ನಿರ್ವಿಕಲ್ಪ, ನಿರ್ಗುಣ ಪರಬ್ರಹ್ಮ ಎಂಬುದಾಗಿದೆ. Adishankara is more of a philosoper than a simple saint as I said in my previous article. Before choosing the facts & factorials, he looked into all types of permutations & combinations, with his best capabilities & clear scientific vision he had propagated a best formula, which is accepted worldwide. He said "I have told a philosophy based  on what Vedas Only told" & hence his philosophy is treated as idealistic. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಶ್ರೀ ಆದಿಶಂಕರ ಭಗವತ್ಪಾದರ ’ಅಧ್ಯಾಸ ಭಾಷ್ಯ’ವನ್ನೂ, ಶ್ರೀ ಸಚ್ಚಿದಾನಂದೇಂದ್ರ  ಸರಸ್ವತೀ ಸ್ವಾಮಿಗಳು ಬರೆದ ’ವೇದಾಂತ ಪ್ರಕ್ರಿಯ ಪ್ರತ್ಯಭಿಜ್ಞ’ ಗ್ರಂಥವನ್ನೂ ಓದಿಕೊಳ್ಳಬಹುದಾಗಿದೆ.       

ಪ್ರಾಣಾಯಾಮಂ ಪ್ರತ್ಯಾಹಾರಂ
ನಿತ್ಯಾನಿತ್ಯವಿವೇಕವಿಚಾರಂ |
ಜಾಪ್ಯಸಮೇತ-ಸಮಾಧಿ ವಿಧಾನಂ
ಕುರ್ವವಧಾನಂ ಮಹದವಧಾನಂ ||

ಶಂಕರಾಚಾರ್ಯರ ಹೇಳಿಕೆಯನ್ನು ಸರಿಯಾಗಿ ಅರಿತ ಅನೇಕ ಸಾಧು-ಸಂತರು ಹಿಮಾಲಯದಲ್ಲಿ ಇನ್ನೂ ಇದ್ದಾರೆ; ಕೆಲವರು ಪ್ರಸಕ್ತ ನಡೆಯುತ್ತಿರುವ ಕುಂಭಮೇಳದಲ್ಲೂ ಭಾಗವಹಿಸಿದ್ದಾರೆ. ಅವರಲ್ಲಿ ಪೈಲಟ್ ಬಾಬಾ ಎಂಬವರೂ ಒಬ್ಬರು. ಪಾಕಿಸ್ತಾನದೊಡನೆ ಘಟಿಸಿದ ಮೊದಲ ಘನಘೋರ ಯುದ್ಧದಲ್ಲಿ ಭಾರತೀಯ ನೌಕಾಪಡೆಯಲ್ಲಿ ಪೈಲಟ್ [ಕುನ್ವರ್ ಕಪಿಲ್ ಸಿಂಗ್ ]ಆಗಿ ಕೆಲಸ ನಿರ್ವಹಿಸಿ, ತನ್ನ ಜಾಣ್ಮೆಯಿಂದ ತನ್ನನ್ನು ಸುತ್ತರಿದ ೪-೫ ಪಾಕಿಸ್ತಾನೀ ಯುದ್ಧವಿಮಾನಗಳನ್ನು ಬಾಂಬ್ ಸಿಡಿಸಿ ಭಸ್ಮಗೈದ ಭಾರತೀಯ ಯೋಧ ಇನ್ನೊಂದು ಸಮಯದಲ್ಲಿ ಹಾರಾಡಿಸುತ್ತಿದ್ದ ವಿಮಾನ ಹಿಮಾಲಯದ ಪ್ರಾಂತದಲ್ಲಿ ಅಪಘಾತಕ್ಕೆ ಈಡಾಗುವ ಸನ್ನಿವೇಶ ಎದುರಾಗಿತ್ತು. ಆಗ ಅನಿರೀಕ್ಷಿತವಾಗಿ ಅದರ ಕಾಕ್ ಪಿಟ್ ಮೇಲೆ ಕಾಣಿಸಿಕೊಂಡ ಸಂನ್ಯಾಸಿಯೊಬ್ಬರು ಅದನ್ನು ಅಪಾಯದಿಂದ ಪಾರುಮಾಡಿದರು. ವಿಮಾನ ಸುರಕ್ಷಿತವಾಗಿ ನೇಪಾಳದಲ್ಲಿಳಿದಾಗ ಅವರು ಮಾಯವಾಗಿದ್ದರು. ಇಂತಹ ಅನಿರೀಕ್ಷಿತ ತಿರುವಿಗೆ ಮನಸೋತ ಪೈಲಟ್ ಆಧ್ಯಾತ್ಮದೆಡೆಗೆ ವಾಲಿದರು-ಹಠಯೋಗವನ್ನು ಕಲಿತರು, ತನಗೆ ಕಾಣಿಸಿ ಸಹಾಯಮಾಡಿದ್ದ ಸ್ವಾಮಿಗಳನ್ನು ಹುಡುಕಿಹೊರಟು ಕಾಣುವಲ್ಲಿ ಯಶಸ್ವಿಯಾದರು-ಅವರಿಂದಲೇ ದೀಕ್ಷೆ ಪಡೆದರು. ವೈಜ್ಞಾನಿಕವಾಗಿ ಹಲವು ಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಂಡ ಅವರು ನಿರ್ವಾತ ಗಾಜಿನ ಪೆಟ್ಟಿಗೆಯಲ್ಲಿ ೩ ದಿನಗಳನ್ನು, ನೀರಿನಲ್ಲಿ ಯಾವ ಉಪಕರಣವೂ ಇಲ್ಲದೇ ಮುಳುಗಿ ಸತತ ೨ದಿನಗಳನ್ನೂ ಮತ್ತು ಮಲಗಿದಲ್ಲೇ ದೇಹವನ್ನು ತ್ಯಜಿಸಿ[ಹೃದಯಬಡಿತ ನಿಂತುಹೋಗಿತ್ತು!] ೫ ದಿನಗಳನ್ನು ಕಳೆದು ತೋರಿಸಿ ದಾಖಲೆ ಸ್ಥಾಪಿಸಿದ್ದಾರೆ. ಇವೆಲ್ಲಾ ವಿಜ್ಞಾನಕ್ಕೆ ಸವಾಲಾಗಿವೆ!! ವಿಜ್ಞಾನಕ್ಕೂ ಮೀರಿದ ಹಲವು ಅತೀಂದ್ರಿಯ ವಿಷಯಗಳಿವೆ ಎನ್ನುವ ಈ ಸಂನ್ಯಾಸಿ ಹಿಂದೊಮ್ಮೆ ಪೈಲಟ್ ಆಗಿದ್ದರಿಂದ ಜನ ಅವರನ್ನು ಪೈಲಟ್ ಬಾಬಾ ಎಂದೇ ಕರೆಯುತ್ತಾರೆ. ಇಂತಹ ಯಾವುದೇ ಪ್ರಯೋಗಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳಲಾಗದವರು ಮಾತ್ರ ’ಇತಿಹಾಸ ಪುರಾಣಾರ್ಥ ವೇದಂ ಸರ್ವಂ ವೇದಭ್ಯಂ ಸಮರ್ಥಯೋ’ ಎಂಬ ಪಂಕ್ತಿಯನ್ನು ಇಟ್ಟುಕೊಂಡು ಪ್ರತೀ ಪುರಾಣಕ್ಕೂ ರಾಮಾಯಣಾದಿಗಳಿಗೂ ಆಗಮಾದಿ ಶಾಸ್ತ್ರಗಳಿಗೂ ಪ್ರಮಾಣವಿದೆ ಎಂದು ತಪ್ಪಾಗಿ ತಿಳಿಸುವ ಗೊಡ್ಡು ಪಂಡಿತರಾಗಿದ್ದಾರೆ. ಶಂಕರರ ಜಿಜ್ಞಾಸೆ ವೈಜ್ಞಾನಿಕವಾಗಿದೆ ಮತ್ತು ವಿಜ್ಞಾನದ ಮಜಲನ್ನು ಮೀರಿ ಅತೀಂದ್ರಿಯದೆಡೆಯಲ್ಲಿ ಮುನ್ನಡೆದಿದೆ ಎಂಬುದನ್ನು   ಸೋದಾಹರಣಪೂರ್ವಕ ನಾವು ಗ್ರಹಿಸಬೇಕಾಗುತ್ತದೆ.

"ನನ್ನೊಳಗೂ ಪರಬ್ರಹ್ಮನೇ ಆಡಗಿದ್ದರೆ, ಪರಬ್ರಹ್ಮನನ್ನು ನಾನು ಪೂಜಿಸಿದರೆ-ಹೊಗಳಿದರೆ ನನ್ನನ್ನೇ ನಾನು ಪೂಜಿಸಿಕೊಂಡಂತೇ ಅಲ್ಲವೇ?" ಎಂಬ ದೃಷ್ಟಿಕೋನದಿಂದ, ಬ್ರಹ್ಮಜ್ಞಾನವನ್ನು ಪಡೆದವರಿಗೆ, ನಿವೃತ್ತಿಮಾರ್ಗಿಗಳಿಗೆ ಮೂರ್ತಿಪೂಜೆ ಬೇಕಾಗಿಲ್ಲ ಎಂದು ಶಂಕರರು ಹೇಳಿದ್ದಾರೆ. ಆದರೆ ಅಲ್ಲಿಯವರೆಗೆ ಏಕಾಗ್ರತೆಯನ್ನು ಪಡೆಯುವ ಸಲುವಾಗಿ ಮೂರ್ತರೂಪಗಳಲ್ಲಿ ಪರಮಾತ್ಮನನ್ನು ಕಾಣಬಹುದೆಂದು ತಿಳಿಸಿದ ಅವರು, ಯಾವ ಮತ-ಪಂಥಗಳ ಅನುಸರಣೆಯ ದೇವರನ್ನೂ ಖಂಡಿಸಲಿಲ್ಲ, ಹೀಗಳೆಯಲಿಲ್ಲ. ಗಿರಿ, ಪುರಿ, ನದಿ, ಅನಂದ, ತೀರ್ಥ, ಭಾರತಿ, ಸರಸ್ವತಿ ಮೊದಲಾದ ಹತ್ತು ಹೆಸರುಗಳನ್ನು ವಿವಿಧ ರೀತಿಯ ಸಂನ್ಯಾಸಿಗಳಿಗೆ ಸಂನ್ಯಾಸ ನಾಮವಾಗಿ ನೀಡಿದ ಶಂಕರರು  ಸೂರ್ಯ, ಗಣಪತಿ, [ಶಕ್ತಿ]ಅಂಬಿಕೆ, ಶಿವ, ವಿಷ್ಣು, ಹೀಗೇ ಪರಬ್ರಹ್ಮನನ್ನು ಈ ಐದು ಮೂರ್ತಿಗಳ ರೂಪದಲ್ಲಿ ಆರಾಧಿಸಲು ಅನುಮತಿ ಇತ್ತರು. ಗಮ್ಯವನ್ನು ತಿಳಿಯಲಾಗದ ನಮ್ಮ ಪರಿಮಿತ ಚಿಂತನಾವೈಖರಿಯಲ್ಲಿ ಅಪರಿಮಿತ ಜ್ಞಾನವನ್ನು ಪಡೆದು ಮುನ್ನಡೆದವರನ್ನು ಪರಿಪೂರ್ಣವಾಗಿ ಅರಿತೆನೆನ್ನುವುದು ಅಸಾಧ್ಯವಾದ ಮಾತು; ಚಂದ್ರನಮೇಲೆ ಇಳಿದವರಿಗೆ ಮಾತ್ರ ಚಂದ್ರ ಅಲ್ಲಿ ಹೇಗೆ ಕಾಣುತ್ತಿದ್ದನೆಂಬುದು ಗೊತ್ತು, ಸುತ್ತಲ ತಗ್ಗಿನ ಜಗತ್ತು ಹೇಗೆ ಕಾಣುತ್ತದೆ ಎಂಬುದು ಮೌಂಟ್ ಎವರೆಸ್ಟ್ ತುದಿಯಲ್ಲಿ ನಿಂತವರಿಗೆ ಗೊತ್ತು, ಅದುಬಿಟ್ಟು ಎತ್ತರದ ತುದಿಯಲ್ಲಿ ನಿಂತವರನ್ನು ತಗ್ಗಿನಿಂದ ನಾವು ನೋಡಿ ಅಳೆಯಲು ಹೋದರೆ ಅದು ಹಾಸ್ಯಾಸ್ಪದವಾದೀತು. ಮೂರ್ತಿಪೂಜೆಮಾಡುವ ಸನಾತನಿಗಳಿಗೆ ಕೊನೆಯಲ್ಲಿ ಕರ್ಪೂರದ ಆರತಿಯನ್ನು ಬೆಳಗುವುದು ತಿಳಿದಿದೆ; [ಕೆಲವರು ಕರ್ಪೂರದ ಜೊತೆಗೇ ಬತ್ತಿಯನ್ನಿಟ್ಟು ಆರತಿ ಬೆಳಗುತ್ತಾರೆ-ಇದು ಸರಿಯಲ್ಲ! ಅಲ್ಲಿ ಕರ್ಪೂರಮಾತ್ರವಿರಬೇಕು ಜೊತೆಯಲ್ಲಿ ಶ್ರೀಗಂಧವಿರಬಹುದು] ಆದರೆ ಯಾಕೆ ಹಾಗೆ ಮಾಡಬೇಕೆಂಬುದರ ಅರಿವಿಲ್ಲ! ಕರ್ಪೂರ ತನ್ನ ಭೌತಿಕ ಕಾಯವನ್ನು ಕಳೆದುಕೊಳ್ಳುವುದರ ಮೂಲಕ ಬೆಳಗುತ್ತದೆ, ಪರಿಸರದಲ್ಲಿ ಲೀನವಾಗುತ್ತದೆ, ಅದರ ಘಮಲನ್ನು ಹರಡಿಹೋಗುತ್ತದೆ. ಅದೇ ರೀತಿ ನಮ್ಮಲ್ಲಿರುವ ಅಪೂರ್ಣತೆ ಪೂರ್ಣತೆಯಲ್ಲಿ ಸಂಗಮಿಸಲಿ, ಜೀವಾತ್ಮ ಪರಮಾತ್ಮನಲ್ಲಿ ವಿಲೀನವಾಗಲಿ ಎಂಬುದು ಅಲ್ಲಿನ ಸಂದೇಶವಾಗಿದೆ. ಹಾಗೊಮ್ಮೆ ಚಿಂತನೆ ನಡೆಸಿದಾಗ ಮತ್ತೆ ಕಾಡುವವು ಶಂಕರರು ಬರೆದ ಪ್ರತಿಯೊಂದೂ ಸಾಲುಗಳು:

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ |
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಃ ||

ಜೀವನ್ಮುಕ್ತಿಯನ್ನು ಪಡೆಯುವ ಸೌಭಾಗ್ಯ ಎಲ್ಲರಿಗೂ ಪ್ರಾಪ್ತವಾಗುವ ದಾರಿಯ ಅರಿವು ಎಲ್ಲರಲ್ಲೂ ಉಂಟಾಗಲಿ ಎಂಬ ಶುಭಾಶಂಸನೆಯೊಂದಿಗೆ ಶಂಕರರ ಜಗನ್ಮಿಥ್ಯಾ ವಾದವನ್ನು ನನ್ನಿಂದಾದ ಬಗೆಯಲ್ಲಿ ತಿಳಿಸಿದ ತೃಪ್ತಿ ಹೊಂದಿದ್ದೇನೆ, ನಮಸ್ಕಾರಗಳು.