ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, February 24, 2013

ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು.

ಚಿತ್ರಋಣ: ಅಂತರ್ಜಾಲ   
ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು.

ಮುದ್ಗಲ ಮಹರ್ಷಿಗಳು ನದಿ ದಾಟುವ ಅವಸರದಲ್ಲಿದ್ದಾಗ, ಗುಹನೆಂಬ ಬೆಸ್ತರವ ಹರಿಗೋಲನ್ನು ನಡೆಸುತ್ತಿದ್ದ. ಹರಿಗೋಲನ್ನೇರಿ ಕುಳಿತ ಮುದ್ಗಲರು ರಾಮನ ಕಥೆಯನ್ನು ಗುಹನಿಗೆ ತಿಳಿಸಿ, ಆತ ಲೋಕೋಪಕಾರಾರ್ಥವಾಗಿ ಜನಿಸಿದಾತ ಎಂದಿದ್ದೇ ತಡ ಮರುಕ್ಷಣವೇ ಗುಹ ರಾಮನಲ್ಲಿ ಆಸಕ್ತನಾದ. ರಾಮಧ್ಯಾನ ನಿರತನಾಗಿ ತನ್ನ ವೃತ್ತಿಗೇ ಹೋಗದೇ ಕುಟುಂಬ ನಿರ್ವಹಣೆ ಕಷ್ಟವಾಯ್ತು; ಮಡದಿ, ಓಲೆಯನ್ನೇ ಮಾರಾಟಮಾಡಿ ಹೊಟ್ಟೆತುಂಬಿಸಿಕೊಳ್ಳುವುದಕ್ಕಾಗಿ ದಿನಸಿ ತರಲು ಕಳಿಸಿದರೆ, ಕೈಗೆ ಸಿಕ್ಕ ಹಣದಿಂದ ಆತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇದ್ದ ಮಣ್ಣಿನ ರಾಮವಿಗ್ರಹವನ್ನು ಕೊಂಡುತಂದು ಗುಡಿಸಲಲ್ಲಿ ಪೂಜೆಗೆ ಇಟ್ಟ.  ಜ್ಞಾನದೃಷ್ಟಿಯಿಂದ ಇದನ್ನರಿತ ಮುದ್ಗಲರು ಮತ್ತೆ ವಾರದಲ್ಲೇ ಮರಳಲು, ಗುಹನ ಹೆಂಡತಿ ತಾನೇ ಹರಿಗೋಲು ನಡೆಸಿ ದಾಟಿಸುವುದಾಗಿ ತಿಳಿಸಿ, ಗುಹನ ವೈರಾಗ್ಯವನ್ನು ಮುನಿಗೆ ಅರುಹಲು, ಮುದ್ಗಲರು ಧ್ಯಾನಕ್ಕೆ ಕುಳಿತ ಗುಹನನ್ನೇ ಕರೆದು, ಸಂಸಾರವಂದಿಗನಾದವನು  ವೃತ್ತಿಯನ್ನೂ ನಡೆಸುತ್ತಾ ಹೇಗೆ ಅದರಲ್ಲೇ ರಾಮನನ್ನು ಆರಾಧಿಸಬಹುದು ಎಂದು ಆಜ್ಞಾಪಿಸಿ, ರಾಮ ಎಂದಾದರೊಂದು ದಿನ ಬಂದು ನಿನಗೆ ದರ್ಶನವಿತ್ತಾಗ, ರಾಮನ ಪಾದಕ್ಕಂಟಿರುವ ಧೂಳನ್ನು ತೊಳೆದು ಆಮೇಲೆ ನಿನ್ನ ತೆಪ್ಪದಲ್ಲಿ ಕುಳ್ಳಿರಿಸಿಕೋ ಎಂದು ಹೇಳಿದರು. ಅನೇಕ ತಿಂಗಳುಗಳ ತರುವಾಯ ಶ್ರೀರಾಮ, ಸೀತಾ-ಲಕ್ಷ್ಮಣರೊಡಗೂಡಿ ಅಲ್ಲಿಗೈತಂದ. ಹರಿಗೋಲನೇರಲು ಬಂದ ಮೂವರು ದಾರಿಹೋಕರನ್ನು[ರಾಮ-ಸೀತಾ-ಲಕ್ಷ್ಮಣರು ಎಂಬುದು ಗುಹನಿಗೆ ಗೊತ್ತಿಲ್ಲ] ಇನ್ನೇನು ಹರಿಗೋಲಲ್ಲಿ ಕುಳ್ಳಿರಿಸಿಬೇಕೆಂದುಕೊಳ್ಳುವಾಗ ತೆಪ್ಪದಲ್ಲಿ ತಾನು ಪೂಜಿಸುತ್ತಿದ್ದ ರಾಮ ವಿಗ್ರಹಕ್ಕೂ ಹೊರಗೆ ನೆಲದಲ್ಲಿ ನಿಂತಿರುವ ಶ್ರೀರಾಮನಿಗೂ ಹೋಲಿಕೆ ಇರುವುದನ್ನು ಗುಹ ಕಂಡ. ಪಾದದಲ್ಲಿ ಬಹಳ ಧೂಳಿದೆಯೆಂದೂ ತೊಳೆಯಲು ಅನುವುಮಾಡಿಕೊಡಬೇಕೆಂದು ರಾಮನಲ್ಲಿ ವಿನಂತಿಸಿದ! ಗುಹನೆಂದುಕೊಂಡಿದ್ದು ರಾಮ ಕಾಡಿನ ದಾರಿಯಲ್ಲಿ ಓಡಾಡುವಾಗ ಪಾದಕ್ಕೆ ಕೊಳೆ ಅಂಟಿರುವುದರಿಂದ ಅದನ್ನು ಮಹರ್ಷಿಗಳು ತೊಳೆಯಲು ಹೇಳಿದ್ದಾರೆಂದು, ಆದರೆ ಅದರ ಫಲವೇನೆಂಬುದು ಗುಹನ ಅರಿವಿಗೆ ಇರಲಿಲ್ಲ.  ಸಂತೋಷದಿಂದ ಶೀರಾಮ ಪಾದವನ್ನಿತ್ತಾಗ ಗುಹ ರಾಮಪಾದವನ್ನು ತೊಳೆದ, ಕೃತಾರ್ಥನಾದ ಆತನ ಜನ್ಮ ಜನ್ಮಾಂತರ ಪಾಪಗಳು ಆ ಕ್ಷಣದಲ್ಲೇ ನಶಿಸಿಹೋಗಿ ಮರುಜನ್ಮದಲ್ಲಿ ರಾಜೋಚಿತ ಭೋಗಭಾಗ್ಯಗಳನ್ನು ಅನುಭವಿಸುತ್ತಾ ಔನ್ನತ್ಯದೆಡೆಗೆ ಸಾಗಲು ಅದು ಕಾರಣವಾಯ್ತು, ಜೊತೆಗೆ ಈಗಿರುವ ಜನ್ಮದಲ್ಲೂ ಅವನ ಕಷ್ಟಗಳೆಲ್ಲಾ ನಿವಾರಣೆಯಾಗಿ ನೆಮ್ಮದಿಯ ಸಂಸಾರವನ್ನು ನಡೆಸಿದ. ಇದು ಶ್ರೀರಾಮನ ಅನುಗ್ರಹ!! ಇಂತಹ ಅನೇಕ ಉಪಕಥೆಗಳು ನಮ್ಮ ರಾಮಾಯಣ-ಮಹಾಭಾರತ ಕಾವ್ಯಗಳಲ್ಲಿ ಓದಸಿಗುತ್ತವೆ.      

ಒಳ್ಳೆಯದು ಎಲ್ಲಿದ್ದರೂ ಬರಲಿ ಎನ್ನುವ ಅದೆಷ್ಟೋ ಮಂದಿಗೆ ತಮ್ಮ ಕಣ್ಣೆದುರೇ ಇರುವ ಒಳ್ಳೆಯ ವಿಷಯಗಳು ಕಾಣುವುದೇ ಇಲ್ಲ. ವಿದೇಶೀ ಕವಿ-ಸಾಹಿತಿಗಳ ಬಗ್ಗೆ ಅಪಾರವಾದ ಹೊಗಳಿಕೆ ಹಾಕಿದರೆ ತಮ್ಮ ಓದಿನ ವೈಶಾಲ್ಯ ಅಲ್ಲೀತನಕವೂ ಹಬ್ಬಿದೆ ಎಂದು ಮಿಕ್ಕದ ಜನ ತಿಳಿದುಕೊಳ್ಳಲಿ ಎಂಬ ’ಹೋಡ್ ಬುದ್ಧಿವಂತರು’ ಇನ್ನು ಕೆಲವು ಜನ. ಈ ಜಗತ್ತಿನಲ್ಲಿ ರಾಮಾಯಣ ಬರೆದ ವಾಲ್ಮೀಕಿ ಮತ್ತು ಮಹಭಾರತ ಬರೆದ ವೇದವ್ಯಾಸರಂತಹ ಕವಿಗಳು ಮತ್ತೆ ಇದುವರೆಗೂ ಹುಟ್ಟಿಬರಲೇ ಇಲ್ಲ; ಆ ಕಾವ್ಯಗಳು ಬರೇ ಕಾವ್ಯಗಳಲ್ಲಾ ಈ ಭವ್ಯ ಭಾರತದ ಪೂರ್ವೇತಿಹಾಸಗಳು. ಅಲ್ಲಿ ಪ್ರತೀ ಪಾತ್ರವೂ ಬರೇ ಪಾತ್ರವಲ್ಲಾ ಜೀವಂತ ನಡೆದಾಡಿದ ವ್ಯಕ್ತಿಗಳ ವ್ಯಕ್ತಿತ್ವ ಚಿತ್ರಣ. ನೀತಿಬೋಧಕವೂ ನವರಸಭರಿತವೂ ಆದ ಇಂತಹ ಕಾವ್ಯಗಳನ್ನು ಓದುವ ಬದಲು ಯಾರೋ ಒಂದಷ್ಟು ಜನ ಬರೆದ ಕೆಲಸಕ್ಕೆ ಬಾರದ ಕಥೆ-ಕಾದಂಬರಿಗಳನ್ನಷ್ಟೇ ಓದುವುದರಿಂದ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಯಾವ ಒಳ್ಳೆಯ ಅಂಶವನ್ನೂ ಕಲಿಯಲು ಸಾಧ್ಯವಿಲ್ಲ. ಬದುಕಿಗೊಂದು ಉತ್ತಮ ಪಾಠವಾಗಬಲ್ಲ ಈ ಕಾವ್ಯಗಳ ಪ್ರತೀ ಅಧ್ಯಾಯಗಳೂ ಅರ್ಥಪೂರ್ಣ; ಯಾವುದನ್ನೂ ಬೇಡ ಅತಿಯಾಯ್ತು ಎನ್ನುವ ಹಾಗಿಲ್ಲ. ಇಬ್ಬಂದಿತನ ಯಾ ದ್ವಂದ್ವ ಎದುರಾದಾಗ ಹೇಗೆ ನಿಭಾಯಿಸಬೇಕೆಂಬುದನ್ನೂ ಇಂತಹ ಕಾವ್ಯಗಳ ಓದಿನಿಂದ ತಿಳಿದುಕೊಳ್ಳಬಹುದಾಗಿದೆ. ಈ ಕಾವ್ಯಗಳಲ್ಲಿ ಮುಖ್ಯ ಕಥಾನಕಕ್ಕೆ ಸಹಕಾರಿಯಾಗಿ ಬರುವ ಉಪಕಥೆಗಳು ರಂಜನೀಯವೂ ನೀತಿಬೋಧಕವೂ ಆಗಿದ್ದು ಒಂದೊಂದು ಕಥೆ ಒಂದೊಂದು ವಿಭಿನ್ನ ಮಜಲನ್ನೇ ತೆರೆದಿಡುತ್ತದೆ! ನವನಾಗರಿಕತೆಯ ನೆಪದಲ್ಲಿ ನವಜನಾಂಗ, "ರಾಮಾಯಣ-ಮಹಾಭಾರತಗಳು ನಿವೃತ್ತರು ಓದಿಕೊಳ್ಳಬಹುದಾದ ಕಥೆಗಳೆ"ಂದು ಪಕ್ಕಕ್ಕಿಟ್ಟಿದ್ದರಿಂದಲೂ, ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಭ್ರಷ್ಟರಾಜಕಾರಣಿಗಳು "ಅವು ಸನಾತನ ಧರ್ಮದವಾಗಿದ್ದು ಇತರ ಮತಗಳವರಿಗೆ ಅವುಗಳು ಅಡ್ಡಿಪಡಿಸುತ್ತವೆ" ಎಂಬ ಕಾರಣಗಳನ್ನು ಕೊಟ್ಟೂ, ಅವುಗಳನ್ನು ಪ್ರಾಥಮಿಕ ಪಠ್ಯಕ್ರಮದಿಂದ ತೆಗೆದುಹಾಕಿದ್ದು ಈ ದೇಶದ ಮೂಲನಿವಾಸಿಗಳ ಇಂದಿನ-ಮುಂದಿನ ಪೀಳಿಗೆಗಳು ಅನುಭವಿಸಿದ ನಿಜವಾದ ನಷ್ಟ.

ಏನನ್ನೂ ಅರಿಯದ ಜನ, ಏನನ್ನೂ ಓದದ ಜನ ಎಡಪಂಥೀಯರಾಗುತ್ತಾರೆ. ಯಾಕೆಂದರೆ ಅವರಿಗೆ ಯಾವುದೂ ಅರ್ಥವಾಗುವುದಿಲ್ಲ. ಇಲ್ಲಿ "ಕೆಳವರ್ಗದವನಾದ್ದರಿಂದ ಗುಹ ರಾಮನ ಪಾದವನ್ನು ತೊಳೆಯಬೇಕು ಎಂದು ಮಹರ್ಷಿಗಳು ಹೇಳಿದ್ದಾರೆ" ಎಂದು ಅಪಾರ್ಥಕಲ್ಪಿಸಿ ಮಾಧ್ಯಮಗಳಲ್ಲಿ ವಾದಿಸುತ್ತಾ ಕೂರುತ್ತಾರೆ! ಯಾಕೆ ಮಹರ್ಷಿಗಳು ಹಾಗೆ ಹೇಳಿದರು, ಅಲ್ಲಿಗೆ ಅವರು ಬರುವ ಔಚಿತ್ಯವಾದರೂ ಇತ್ತೇ? ಅಥವಾ ರಾಮನಾದರೂ ಅಲ್ಲಿಗೇ ಬರಬೇಕಾಗಿತ್ತೇ ಎಂಬುದರ ಬಗ್ಗೆ ಚಿಂತನೆ ನಡೆಸುವುದಿಲ್ಲ. ಇದೇ ರೀತಿ "ಮಹಾಭಾರತದಲ್ಲಿ ತುಂಡು ಭೂಮಿಗಾಗಿ ದಾಯಾದಿಗಳು ಕಾದಾಡುವಂತೇ ಮಾಡಿದ ಕೃಷ್ಣನಿಗೆ ಏನುಸಿಕ್ಕಿತು? ಲಕ್ಷಾಂತರ ಜನ ಮಡಿದು ನಂತರ ಯುದ್ಧಗೆದ್ಧ ಪಾಂಡವರು ಕೇವಲ ಕೆಲವೇ ಕಾಲ ರಾಜ್ಯಭಾರ ಮಾಡಿದರು-ಇದೆಲ್ಲಾ ಸರಿಯೇ?" ಎಂದು ಕೆಲವರು ವಾದಿಸಿದರೆ, ಬಸುರಿ ಹೆಂಡತಿಯನ್ನು ಕಾಡಿಗಟ್ಟಿದವ ಮನುಷ್ಯನೇ ಅಲ್ಲವೆಂದೊ, ಸೀತೆಯನ್ನು ಮುಟ್ಟದಿದ್ದರೂ ಪರಸ್ತ್ರೀಯನ್ನು ಬಯಸಿದವ ಎಂಬ ಮಾತ್ರಕ್ಕೆ ರಾವಣನನ್ನು ವಧಿಸಲಾಯ್ತೆಂದೂ ವಾದಿಸುತ್ತಾರೆ. ಆದರೆ ಮೂಲಕಥೆಗಳ ಹಂದರದ ವಿಶಾಲ ಪರಿಕಲ್ಪನೆಯಾಗಲೀ, ಕಥೆಗಳ ಆಳಗಲಗಳಾಗಲೀ ಆಮೂಲಾಗ್ರವಾಗಿ ತಿಳಿಯದ ಅಜ್ಞಾನಿಗಳ ಅಥವಾ ಅರ್ಧ ಓದಿಕೊಂಡವರ ವಿತಂಡ ವಾದ ಇದಾಗಿರುತ್ತದೆ. ಭಾರತದ ಪ್ರಾಗೈತಿಹಾಸವಾದ ರಾಮಾಯಣ-ಮಹಾಭಾರತಗಳನ್ನು ಇಂದು ಓದಿಕೊಂಡವರೆಷ್ಟು ಎಂದರೆ ಬೆರಳೆಣಿಕೆಯಷ್ಟು ಎಂದರೆ ತಪ್ಪಲ್ಲ. ಕೇವಲ ರಾವಣವಧೆಯಷ್ಟೇ ರಾಮಾಯಣವಲ್ಲ, ಕೇವಲ ಕುರುಕ್ಷೇತ್ರ ಯುದ್ಧವಷ್ಟೇ ಮಹಭಾರತವಲ್ಲ. ಆದರೆ ಚಿಲ್ಲರೆ ವಿಷಯಗಳನ್ನಷ್ಟೇ ಓದಿಕೊಂಡ ಎಡಪಂಥೀಯ ಜನ ತಮ್ಮ ಚಿಲ್ಲರೆ ಬುದ್ಧಿಯಿಂದ ಹೊರಬರಬೇಕಾದರೆ ಈ ಕಾವ್ಯಗಳನ್ನು ಪದಪದಗಳನ್ನೂ ಬಿಡದಂತೇ ಓದಿಕೊಳ್ಳಬೇಕು. ಗೋರಖ್ ಪುರ ಪ್ರೆಸ್ ನವರು ಹಿಂದಿ, ಇಂಗ್ಲೀಷ್ ಮತ್ತು ಇನ್ನಿತರ ಭಾಷೆಗಳಲ್ಲಿ ಅವುಗಳನ್ನು ಹೊರತಂದಿದ್ದಾರೆ, ವರ್ಷದಲ್ಲೇ ಕನ್ನಡದಲ್ಲೂ ಅವು ಲಭ್ಯವಾಗಲಿಕ್ಕಿವೆ. ರಾಮಕೃಷ್ಣಾಶ್ರಮದವರು ಇಂಥಾ ಮಹಾನ್ ಕಾವ್ಯಗಳ ಅರ್ಥವನ್ನು ಹೊರತಂದಿದ್ದಾರೆ, ರಾಷ್ಟ್ರೋತ್ಥಾನ ಪ್ರಕಾಶನದವರೂ ಸಹ ರಾಮಾಯಣ-ಭಾರತ ಕಥೆಗಳನ್ನು ಕನ್ನಡದಲ್ಲಿ ಮುದ್ರಿಸಿದ್ದಾರೆ. ಆದರೆ ಅವುಗಳ ಪ್ರಯೋಜನ ಪಡೆದುಕೊಂಡವರೆಷ್ಟು? ತಾವೂ ಬುದ್ಧಿಜೀವಿಗಳು, ತಮಗೂ ಎಲ್ಲಾ ಗೊತ್ತಿದೆ ಎಂದು ಪೋಸುಕೊಡುವ ಎಡಪಂಥೀಯರೇನಾದರೂ ಇವುಗಳನ್ನು ಓದಿದ್ದಾರ್ಯೇ? ಖಂಡಿತಕ್ಕೂ ಇಲ್ಲ!

ನಾವು ಪ್ರಾಥಮಿಕ ಶಾಲೆಯಲ್ಲಿ ಓದುವ ಹಂತದಲ್ಲಿ ನಮಗೆ ’ಕಥಾರೂಪ ಇತಿಹಾಸ’ವೆಂಬ ಹೊತ್ತಗೆ, ಪಠ್ಯದಲ್ಲಿರದಿದ್ದರೂ ಓದಲು ದೊರೆತಿತ್ತು. ಅದರಲ್ಲಿ ಭಾರತದ ಪ್ರಾಗೈತಿಹಾಸದ ಕಥೆಗಳೂ ಮತ್ತು ವರ್ಣಮಯ ಚಿತ್ರಗಳೂ ಇದ್ದವು. ಚಿಕ್ಕ ವಯಸ್ಸಿಗರಾದ ನಮಗೆ ತಾಟಿಕೆಯ ವಧೆಯಂತಹ ಚಿತ್ರಗಳನ್ನು ಕಣ್ಣರಳಿಸಿ ನೋಡುವುದು ಬಹಳ ಉಲ್ಲಾಸದಾಯಕವಾಗಿತ್ತು. ಮನೆಯ ಹಿರಿಯರು ರಾಕ್ಷಸರ ರಾಕ್ಷಸೀ ಕೃತ್ಯಗಳನ್ನು ತಿಳಿಸಿ ಹೇಳಿ, ಅದಕ್ಕಾಗಿ ರಾಮ ಬಾಣ ಹೊಡೆದು ಆಕೆಯನ್ನು ಕೊಂದ ಎಂದು ಅರ್ಥ ಬಿಡಿಸಿ ಹೇಳುತ್ತಿದ್ದರು. ಇವತ್ತು ಅಂತಹ ಪುಸ್ತಕಗಳು ಪಠ್ಯಗಳಲ್ಲಿರಲಿ ಶಾಲಾ ವಾಚನಾಲಯ[ಲೈಬ್ರರಿ]-ಇದ್ದರೆ ಅಲ್ಲೂ ನೋಡಸಿಗುವುದಿಲ್ಲ; ಇದಕ್ಕೆಲ್ಲಾ ಕಾರಣವೇನು ಗೊತ್ತೇ ಎಡಪಂಥೀಯತೆ. ಇಡೀ ಜಗತ್ತೇ ಭಗವದ್ಗೀತೆಯನ್ನು ’ಬೆಸ್ಟ್ ಮ್ಯಾನೇಜ್ ಮೆಂಟ್ ಬುಕ್’ ಎಂದು ಕೊಂಡಾಡಿದ್ದರೂ ಗೀತೆ ಹುಟ್ಟಿದ ಈ ನೆಲದ ನಮ್ಮ ಮಕ್ಕಳಿಗೇ ಅದನ್ನು ಬೋಧಿಸುವ ಹಾಗಿಲ್ಲ, ಅದಕ್ಕೆ ಹಿಂದೂ ಧರ್ಮಗ್ರಂಥವೆಂಬ ಹಣೆಪಟ್ಟಿ ಬರೆದ ಎಡಪಂಥೀಯ ಜನ, ರಾಜಕಾರಣಿಗಳನ್ನೂ ಸೇರಿಸಿಕೊಂಡು ರಾಜಕೀಯ ಮಾಡಿದ್ದಾರೆ! ನಮ್ಮ ಯುವ ಪೀಳಿಗೆಗೂ ಗೀತೆಯ ಬಗ್ಗೆ ಏನೂ ಗೊತ್ತಿಲ್ಲ!! ಯಾಕೆಂದರೆ ಭಗವದ್ಗೀತೆಯಲ್ಲಿ ಏನಿದೆ ಎಂಬುದನ್ನು ಅವರು ತೆರೆದು ನೋಡಿದವರೇ ಅಲ್ಲ! ಯಾರೋ ಬೇಡಾ ಎಂದು ಕೂಗುವಾಗ ಅವರಲ್ಲಿಯೂ ಕೆಲವರು ಬೇಡಾ ಎಂದು ಕೂಗುತ್ತಾರೆ. ಬರಿದೇ "ಬೇಡಾ" ಎನ್ನುವ ಸಮೂಹ ಸನ್ನಿಗೆ ಒಳಗಾಗುವ ಬದಲು ಯುವಪೀಳಿಗೆಯ ಜನ ಆಂಗ್ಲ ಮಾಧ್ಯಮದಲ್ಲಿ ಅನುವಾದಗೊಂಡ ಗೀತೆಯನ್ನಾದರೂ ಓದಿ ತಿಳಿಯಲು ಪ್ರಯತ್ನಿಸಬಹುದಿತ್ತು-ಆದರೆ ಅದು ಅವರ್ಯಾರಿಗೂ ಬೇಕಾದಹಾಗೆ ಕಾಣಿಸಲಿಲ್ಲ! ಯುವ ಪೀಳಿಗೆಯಲ್ಲಿನ ಸಾಫ್ಟ್ ವೇರ್ ತಂತ್ರಜ್ಞರಲ್ಲಿ ವಿಚ್ಛೇದನಗಳು ಯಾಕೆ ಹೆಚ್ಚುತ್ತಿವೆ ಎಂಬುದರ ಬಗ್ಗೆ ಅವರು ಚಿಂತನ-ಮಂಥನ ನಡೆಸಿಕೊಂಡಿದ್ದರೆ ಅಲ್ಲಿ ಗೀತೆಯ ಪ್ರಸ್ತುತಿ ಕಾಣುತ್ತಿತ್ತು!! ಕೈಲಾಗದೇ ಸೋತರೆ, ಜಾಬು ಕಳೆದುಕೊಂಡು/ಉದ್ಯಮದಲ್ಲಿ ನಷ್ಟ ಅನುಭವಿಸಿ ದಿಗ್ಮೂಢರಾದರೆ, ವಾಸಿಯಾಗದ ಕಾಯಿಲೆಗಳಿಂದ ಬಳಲುವ ಪ್ರಸಂಗ ಎದುರಾದರೆ ಅಲ್ಲಿ ಗೀತೆಯ ಮಹತ್ವ ಬೆಳಕಿಗೆ ಬರುತ್ತದೆ.    

ರಾಮಾಯಣ-ಮಹಾಭಾರತಗಳನ್ನು ಹಿಂದಕ್ಕೆ ಮನೆ ಮನೆಗಳಲ್ಲಿ ಪೂಜಿಸಿ, ವಾಚಿಸಿ, ಸಪ್ತಾಹಗಳನ್ನು ನಡೆಸುತ್ತಿದ್ದರು. ಇಂದು ಅಂತಹ ಪೂಜನೀಯ ಕೆಲಸಗಳು ನಡೆಯುವುದಿರಲಿ, ವಾಚಿಸುವ ಗಮಕಿಗಳೂ ಇಲ್ಲ, ಕೇಳಲು ಆಸೆಪಡುತ್ತಿದ್ದ ಶ್ರೋತ್ರವರ್ಗವೂ ಇಲ್ಲ. ನವರಸಗಳು ತುಂಬಿದ ಪದ್ಯಗಳನ್ನು ನವರಸ ಭಾವ ಪೂರಿತವಾಗಿ, ರಾಗಪೂರಿತವಾಗಿ ಗಮಕಿಗಳು ಹಾಡಿದಾಗ, ವಿದ್ವಾಂಸರು ಅರ್ಥವಿವರಿಸಿದಾಗ, ಅದೆಂತಹ ಅನನ್ಯ ಅನುಭವ ಗೊತ್ತೇ? ನಮ್ಮ ಜೀವನದ ಕುಂದುಕೊರತೆಗಳನ್ನು ಕಾವ್ಯಗಳಲ್ಲಿನ ಪಾತ್ರಗಳೂ ಅನುಭವಿಸಿದ್ದವು ಎಂಬುದರ ಜೊತೆಗೆ ಎದುರಾದ ಸಮಸ್ಯೆಗಳನ್ನು ಅವರು ಹೇಗೆ ನಿಭಾಯಿಸಿದರು ಎಂಬುದನ್ನು ತಿಳಿದಾಗ ಮನಸ್ಸು ನಿರಾಳವಾಗುತ್ತಿತ್ತು. ಮನಸ್ಸಿಗೆ ದುರಹಂಕಾರದ ಮೋಡ ಕವಿಯುತ್ತಿರಲಿಲ್ಲ. ಜೀವನದಲ್ಲಿ ಅತಿಯಾಸೆ-ಕೊಳ್ಳುಬಾಕತನ ಮೈಗೂಡುತ್ತಿರಲಿಲ್ಲ, ಹಾಸಿಗೆ ಇದ್ದಷ್ಟೇ ಕಾಲುಚಾಚುವ ಮನೋವೃತ್ತಿ ಬೆಳೆದು, ಒಂದೇ ಒಂದು ದಿನವೂ ಎದೆನೋವಾಗಲೀ ಹೃದ್ರೋಗವಾಗಲೀ, ಮಧುಮೇಹ-ಅಧಿಕರಕ್ತದೊತ್ತಡವಾಗಲೀ ಕಾಣಿಸಿಕೊಳ್ಳುತ್ತಿರಲಿಲ್ಲ! ಇದನ್ನೆಲ್ಲಾ ಹೇಳಿದರೆ ಅಸಡ್ಡೆಮಾಡುವ ಇಂದಿನ ಜನರಿಗೆ, ಆ ಗಾಳಿ ತಾಗದಿರುವುದಕ್ಕೆ ಸರಕಾರದ ’ತ್ಯಾಜ್ಯ ವಿಲೇವಾರಿ’ಪದ್ಧತಿಯ ಶಿಕ್ಷಣವೇ ಕಾರಣ ಎನ್ನಬಹುದಾಗಿದೆ. ಯಾವುದು ಜೀವನಕ್ಕೆ ಪ್ರಮುಖವಾಗಿ ಬೇಕೋ ಅಂಥಾದ್ದೇ ಪಠ್ಯಕ್ರಮದಲ್ಲಿ ಇರುವುದಿಲ್ಲ, ಯಾವುದು ಬೇಡದ ತ್ಯಾಜ್ಯವೋ ಅಂಥಾದ್ದನ್ನೆಲ್ಲಾ ತುಂಬಿಸಿದ ಪಠ್ಯಕ್ರಮವನ್ನು ನಾವಿಂದು ನಮ್ಮ ಮಕ್ಕಳಿಗೆ ಬೋಧಿಸುತ್ತಿದ್ದೇವೆ, ಇದು ಈಗಲ್ಲಾ ನಾವು ಚಿಕ್ಕವರಿರುವಾಗಿನಿಂದ ಅಂದರೆ ಸುಮಾರು ೨೮ ವರ್ಷಗಳ ಹಿಂದೆಯೇ ಆರಂಭವಾಯ್ತು!

ಹೋಗಲಿಬಿಡಿ, ನಮ್ಮಂಥಾ ಕೆಲವು ಆಸಕ್ತರು ಸ್ವಾಧ್ಯಾಯದಿಂದ ಅನೇಕ ವಿಷಯಗಳನ್ನು ಅರಿತೆವು, ಓದಿಕೊಂಡೆವು. ಆದರೆ ಇಂದಿನ ಮಕ್ಕಳಿಗೆ ಅದೂ ಕೂಡ ಲಭ್ಯವಾಗದೇ ಹೋಗಬಹುದು, ಓದುವ ಗೀಳೇ ಇರದಿರಬಹುದು. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಬರಬೇಕಿದ್ದರೆ, ನಮ್ಮ ಮಕ್ಕಳು ಸುಲಲಿತ ಜೀವನ ಕ್ರಮವನ್ನು ಅನುಸರಿಸಬೇಕಿದ್ದರೆ ಅವರಿಗೆ ಖಾಸಗಿಯಾಗಿ ನಾವು ರಾಮಾಯಣ-ಮಹಾಭಾರತಗಳನ್ನು ಬೋಧಿಸಬೇಕು. ಬಿಡುವಿನಲ್ಲಿ, ಶಾಲಾರಜಾದಿನಗಳಲ್ಲಿ ಆ ಕೆಲಸ ನಡೆಯಬೇಕು. ನಮ್ಮ ಮಕ್ಕಳು ಪಠ್ಯಕ್ರಮದಲ್ಲಿ ’ಆರ್ಯರು ಭಾರತಕ್ಕೆ ಬಂದರು’ ಎಂಬಂಥಾ ತಿರುಚಿದ ಇತಿಹಾಸವನ್ನು ಓದುತ್ತಿದ್ದಾರೆ; ಇದು ಸರಿಯಲ್ಲ. ಆರ್ಯರು ಭಾರತಕ್ಕೆ ಬರಲಿಲ್ಲ, ಬದಲಾಗಿ ಭಾರತ ಆರ್ಯರದ್ದೇ ಆಗಿದೆ, ಇಲ್ಲಿ ಆರ್ಯರು-ದ್ರಾವಿಡರು ಎಂಬ ಭೇದ ಇರಲಿಲ್ಲ, ಅದನ್ನು ಹುಟ್ಟಿಸಿದವರು ಬ್ರಿಟಿಷರು. ಸನಾತನಿಗಳನ್ನು ದಾರಿ ತಪ್ಪಿಸಿದವರು ಮ್ಲೇಚ್ಛರು. ಪರಕೀಯರ ಅಟ್ಟಹಾಸದಿಂದ ನೊಂದ ಸನಾತನಿಗಳಿಗೆ ಈಗ ಪಠ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ತಮ್ಮದೇ ಆದ ನಿಜವಾದ ಇತಿಹಾಸವನ್ನು ಬೋಧಿಸುವ ಹಾಗಿಲ್ಲ-ಕಲಿಯಲು ಅವಕಾಶವಿಲ್ಲ! ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರೆಂದರೆ ಚಾಚಾ ನೆಹರೂ ಎಂಬಲ್ಲಿಂದ ಹೇಳುತ್ತಾರೆಯೇ ಹೊರತು ಸುಭಾಸ್ ಚಂದ್ರ ಬೋಸರು ಸ್ವಾತಂತ್ರ್ಯಾ ನಂತರವೂ ಬದುಕಿದ್ದ ಬಗ್ಗೆ ನಮಗೇ ಅರಿವಿರಲಿಲ್ಲ, ಇನ್ನು ಅವರಿಗೆ ಹೇಗೆ? ಭಗತ್ ಸಿಂಗ್, ಮಂಗಲಪಾಂಡೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ್, ವೀರ ಸಾವರ್ಕರ್ ಇಂತಹ ಅನೇಕರ ಬಗ್ಗೆ ಇಂದಿನ ಪಠ್ಯಕ್ರಮದಲ್ಲಿ ಅಳವಡಿಸಲ್ಪಟ್ಟ ಇತಿಹಾಸ ಏನನ್ನೂ ಹೇಳುವುದಿಲ್ಲ. ನಿಜದ ಅರಿವಿಲ್ಲದವರಿಗೆ ದೇಶಭಕ್ತಿಯಾದರೂ ಎಲ್ಲಿ ಮೂಡೀತು? ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂಬ ಪ್ರಜ್ಞೆ ಹೇಗೆ ಬೆಳೆದೀತು?

ಸನಾತನಿಗಳಲ್ಲಿ ನನ್ನದೊಂದು ವಿನಂತಿ ಈ ರೀತಿ ಇದೆ: ನಮ್ಮ ಪ್ರಾಗೈತಿಹಾಸವಾದ ರಾಮಾಯಣ-ಮಹಾಭಾರತಗಳನ್ನೂ ಜೊತೆಗೆ ಭಾರತದ ನಿಜವಾದ ಇತಿಹಾಸವನ್ನೂ ನಮ್ಮ ಮಕ್ಕಳಿಗೆ ರಜಾದಿನಗಳಲ್ಲಿ ಬೋಧಿಸುವಂತೇ ಅನುಕೂಲ ಕಲ್ಪಿಸಿಕೊಡಿ. ಅದಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಆದಷ್ಟು ಒದಗಿಸಿ. ಸಂಘಗಳು ತಮ್ಮ ಶಾಖೆಗಳಲ್ಲಿ ಈ ಕೆಲಸವನ್ನು ಮಾಡುವಂತಾದರೆ ಬಹಳ ಒಳ್ಳೆಯದು. ಚಳಿಗಾಲದಲ್ಲಿ[ಅಕ್ಟೋಬರ್-ಡಿಸೆಂಬರ್ ಪ್ರಾದೇಶಿಕ ರಜಾದಿನಗಳಲ್ಲಿ ನೋಡಿಕೊಂಡು] ಮತ್ತು ಬೇಸಿಗೆಯಲ್ಲಿ ಈ ಬೋಧನಾಕ್ರಮವನ್ನು  ಶಿಬಿರಗಳ ಮೂಲಕ ಆಯೋಜಿಸಬೇಕು. ಬಂದ ಮಕ್ಕಳಿಗೆ ಉಚಿತವಾದ ಕೊಡುಗೆಗಳನ್ನು ಉಳ್ಳವರು ಕೊಡಲು ಮುಂದಾಗಬೇಕು. ಊಟ-ತಿಂಡಿ-ವಸತಿ ವ್ಯವಸ್ಥೆಯ ಜೊತೆಗೆ ಯೋಗ-ವ್ಯಾಯಾಮ-ಪ್ರಾಣಾಯಾಮಗಳನ್ನೂ ಸೇರಿಸಿ ವಾರ ಅಥವಾ ತಿಂಗಳದಿನ ಇಂತಹ ಕಾರ್ಯಕ್ರಮಗಳನ್ನು ದೇಶದ ಹಳ್ಳಿ ಹಳ್ಳಿಗಳಲ್ಲಿಯೂ ಅಲ್ಲಲ್ಲಿಯ ಭಾಷೆಗಳಲ್ಲಿಯೇ ನಡೆಸಬೇಕು. ನಮ್ಮ ಮುಂದಿನ ಜನಾಂಗ ಎಡಪಂಥೀಯವಾಗಿ ಬೆಳೆಯಬಾರದು, ಅವರಿಗೆ ಅಜ್ಞಾನ-ಅವಿದ್ಯೆ-ಅಧ್ಯಾಸಗಳೆಂಬ ಮೋಡ ಕವಿಯಬಾರದು. ಅವರು ನೀತಿವಂತರಾಗಿ, ಉತ್ತಮ ರೀತಿ-ರಿವಾಜು ಉಳ್ಳವರಾಗಿ ಬೆಳೆಯಬೇಕು. ಜೊತೆಗೇ ದೇಶಭಕ್ತಿಯೂ ಸನಾತನತೆಯೂ ಮೈಗೂಡಬೇಕು. ಈ ಕೆಲಸವನ್ನು ಸರಕಾರವಂತೂ ಮಾಡುವುದಿಲ್ಲ ಏಕೆಂದು ಮೊದಲೇ ಹೇಳಿದ್ದೇನಲ್ಲಾ! ಸರಕಾರ ಮಾಡದ ಈ ಉನ್ನತ ಕೆಲಸವನ್ನು ನಾವು ಸನಾತನ ಭಾರತೀಯರು ಮಾಡಬೇಕು. ತನ್ಮೂಲಕ, ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು. ಇದಕ್ಕೆ ದೇಶಭಕ್ತರ ಸಹಕಾರವನ್ನು ಕೋರುತ್ತೇನೆ, ಸಂಬಂಧಿಸಿದ ಸಂಘಟನೆಗಳ-ಶಾಖೆಗಳ-ಪದಾಧಿಕಾರಿಗಳ ಸಹಕಾರವನ್ನು ಕೋರುತ್ತೇನೆ, ಧನ್ಯವಾದಗಳು.    

No comments:

Post a Comment