ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, December 1, 2010

ಮರೆಯಲಾಗದ ಹಾಡುಗಳು


ಮರೆಯಲಾಗದ ಹಾಡುಗಳು

ಹಾಡುಗಳು ಎಲ್ಲರಿಗೂ ಇಷ್ಟವೇ ! ಲಘು ಸಂಗೀತ ಅಥವಾ ಸುಗಮ ಸಂಗೀತವನ್ನು ಬಯಸದ ವ್ಯಕ್ತಿ ಯಾರು ? ನಮ್ಮೆಲ್ಲರ ಜೀವನದಲ್ಲಿ ನಮ್ಮ ನೋವನ್ನೇ ಆಗಲಿ ನಲಿವನ್ನೇ ಆಗಲಿ ಹಾಡುಕೇಳಿಯೋ ಹಾಡಿಯೋ ಅನುಭವಿಸುವುದರಲ್ಲಿ ಇರುವ ಸುಖವೇ ಬೇರೆ. ಹಾಡು ನೋವಿನದ್ದೇ ಆದರೂ ನಮ್ಮ ಮನಸ್ಸು ಆ ಹಾಡನ್ನು ಕೇಳುತ್ತಾ ಎಲ್ಲವನ್ನೂ ಮರೆಯುತ್ತದೆ. ಸಂತೋಷ ಹೆಚ್ಚಲು ಹಾಡುಗಳೇ ಹಲವೊಮ್ಮೆ ಕಾರಣವಾಗುತ್ತವೆ. ಅಲ್ಲಿ ಕೆಲವೊಮ್ಮೆ ಭಾಷೆಯ ಬಂಧನ ಕೂಡ ಮೀರಿಹೋಗುತ್ತದೆ ! ಬೆಳಗಾಗೆದ್ದಾಗ ಮರಾಠಿ ಅಭಂಗಗಳು, ಭಜನೆಗಳು ಕೇಳಲು ಬಹಳ ಹಿತವಾದರೆ ಮಿಕ್ಕುಳಿದ ಸಮಯದಲ್ಲಿ ನಮ್ಮದೇ ಆದ ಕನ್ನಡ ಅಥವಾ ಹಿಂದಿ ಹಾಡುಗಳು ಇಷ್ಟವಾಗುತ್ತವೆ ಅಲ್ಲವೇ ? ಸಂಗೀತವೇ ಇಲ್ಲದ ಪ್ರಪಂಚವನ್ನು ಊಹಿಸುವುದೂ ಕಷ್ಟ!

ರಾಗವಾಗಿ ಹಾಡುವವರನ್ನು ಕಂಡಾಗ ನನಗೆ ನಾನೂ ಹಾಡುವ ಆಸೆ ಹುಟ್ಟುತ್ತದೆ. ಚಿಕ್ಕಂದಿನಲ್ಲಿ ಹಾಡಿ ಶಾಲೆಗಳಲ್ಲಿ ಮೊದಲ ಸ್ಥಾನವನ್ನು ಪಡೆದದ್ದೂ ಇದೆ ಎನ್ನಿ. ಆದರೆ ಬರುತ್ತಾ ಬರುತ್ತಾ ರಾಯರ ಕುದುರೆ ಆ ವಿಷಯದಲ್ಲಿ ಸ್ವಲ್ಪ ಕತ್ತೆಯಾಯಿತು. ಈಗಲೂ ನಾನೊಬ್ಬ ’ಬಾತರೂಮ್ ಸಿಂಗರ್’ ಗಿಂತ ಸ್ವಲ್ಪ ಮೇಲೇ ಅನ್ನಿ! ಆದರೂ ಹಾಡಲಿಕ್ಕೆ ನಿಂತರೆ ಮಾತ್ರ ಸುತ್ತಲಿನ ನೆಲವೆಲ್ಲಾ ಕಂಪಿಸಲಿಕ್ಕೆ ಆರಂಭವಾಗಿಬಿಡುತ್ತದೆ. ನಾನು ಇದ್ದಲ್ಲೇ ಇರುತ್ತೇನೆ. ಅದಕ್ಕೇ ಹಲವಾರು ಬಾರಿ ನಾನು ಕನ್ನಡಿಯ ಮುಂದೆ ನಿಂತು ಹಾಡಲು ಪ್ರಯತ್ನಿಸುವುದಿದೆ, ಆಗಾಗ ದೂರದರ್ಶನದ ಮಹೇಶ್ ಜೋಶಿಯವರಂತೇ ಇರುವ ಕಂಠದಲ್ಲೇ ಮೈಕು ಹಿಡಿದಿದ್ದಿದೆ ! ಆದರೆ ಅದ್ಯಾಕೋ ನಾನು ಅನಂತಸ್ವಾಮಿಯವರ ಅಥವಾ ಅಶ್ವತ್ಥ್‍ರ ಶಿಷ್ಯನಾಗಲೇ ಇಲ್ಲ.

’ಹಾಡು ಹಳೆಯದಾದರೇನು ಭಾವ ನವನವೀನ’ ಎನ್ನುವ ಹಾಡಾದರೇನು ’ಎದೆತುಂಬಿಹಾಡಿದೆನು ಅಂದು ನಾನು’ ಎನ್ನುವ ಗೀತೆಯಾದರೇನು ಅಂತೂ ಹಾಡು ನಮಗೆ ಬೇಕೇಬೇಕು. ಹಾಡಿನ ಪ್ರಭಾವ ಜಾಸ್ತಿಯಾದ ಕಾರಣವೇ ಈಗ ಹಲವುಕಡೆ ಸಂಗೀತ ಕಲಿಯುವ ಆಸಕ್ತಿ ಚಿಕ್ಕ ಹುಡುಗರಲ್ಲೂ ಮೂಡುತ್ತಿದೆ; ಪಾಲಕವೃಂದ ಅದನ್ನು ಮೂಡಿಸುತ್ತಿದೆ. ಆದರೆ ಯುವಕರು ವಯಸ್ಕರು ಹಾಡುವ ಹಾಡುಗಳನ್ನೆಲ್ಲಾ ಅವರಿಗಿಂತಾ ಭಾವಪೂರ್ಣವಾಗಿ ಎಳೆಯ ಮಕ್ಕಳು ಹಾಡುವುದನ್ನು ನೋಡಿದಾಗ ಮಕ್ಕಳು ಬಹಳ ಬೇಗನೇ ವಯಸ್ಕರ ಅನುಭವಗಳನ್ನು ಪಡೆಯುತ್ತಿದ್ದಾರೆಯೇ ಎಂಬ ಆತಂಕ ಕೂಡ ಉಂಟಾಗುತ್ತದೆ. ಮಕ್ಕಳಿಗೆ ಸಂಗೀತ ಕಲಿಸುವಾಗ ಪಾಲಕರು ಅವರ ವಯಸ್ಸಿಗೆ ಅನುಗುಣವಾದ ಹಾಡುಗಳನ್ನು ಆಯ್ಕೆಮಾಡಿಕೊಳ್ಳುವುದು ಸೂಕ್ತವೆನಿಸುತ್ತದೆ.

ಜೀವಕ್ಕೂ ಭಾವಕ್ಕೂ ಸೇತುವೆ ನಿರ್ಮಿಸಿ ಅದರಮೇಲೆ ಹದವಾದ ವೇಗದಲ್ಲಿ ನವರಸಗಳ ಲಹರಿಯೆಂಬ ವಾಹನವನ್ನು ಓಡಿಸುವುದೇ ಸಂಗೀತ. ಸಂಗೀತವನ್ನಾತು ಅದರ ಸಪ್ತಸ್ವರಲಾಲಿತ್ಯದಲ್ಲಿ ಓಲಾಡುವ ಶಬ್ದಗಳ ಸರಮಾಲೆಯೇ ಇಂಪಾದ ಹಾಡೆನಿಸುತ್ತದೆ. ಸ್ವರಲಾಲಿತ್ಯದ ಪರಿಜ್ಞಾನವಿಲ್ಲದಿದ್ದರೆ ಹಾಡನ್ನು ಹಾಡುವುದು ಸುಲಭವಾಗುವುದಿಲ್ಲ. ಅಥವಾ ಅಂತಹ ಹಾಡುಗಳನ್ನು ಜನ ಕೇಳಬೇಕಾಗಿ ಬಂದಾಗ ತಪ್ಪಿಸಿಕೊಂಡು ಓಡುತ್ತಾರೆ! ಹಾಡಿಗೆ ಸಾಹಿತ್ಯ ಒಳ್ಳೆಯದಾಗಿರಬೇಕು, ಸ್ವರಸಂಯೋಜನೆ ಸರಿಯಾಗಿ ಆಗಬೇಕು, ರಾಗರಂಜಿತವಾಗುವಂತಿರಬೇಕು, ಹಾಡುವವರ ಕಂಠ ಶಾರೀರ ಉತ್ಕೃಷ್ಟವಾಗಿರಬೇಕು, ವಾದ್ಯಪರಿಕರಗಳ ಬಳಕೆ ಹಿತಮಿತವಾಗಿರಬೇಕು ಇಷ್ಟೆಲ್ಲಾ ಇದ್ದಾಗ ಮಾತ್ರ ಹಾಡಿಗೊಂದು ಸಂಪೂರ್ಣ ಕಳೆ ಬರುತ್ತದೆ! ಹಾಳೆಯಮೇಲೆ ಕವಿಯೊಬ್ಬ ಕವನ ಬರೆದುಕೊಟ್ಟರೆ ಅದಕ್ಕೆ ಸ್ವರಪ್ರಸ್ತಾರ ಹಚ್ಚುವ ಮೊದಲು ಓದುಗ ಇಷ್ಟಪಡುವದು ಅಷ್ಟಕ್ಕಷ್ಟೇ ! ಇದಕ್ಕೆ ಉದಾಹರಣೆ ನಮ್ಮ ಕೆ.ಎಸ್.ನ ಅವರ ’ಮೈಸೂರು ಮಲ್ಲಿಗೆ.’ ಒಂದೊಮ್ಮೆ ಸಂಗೀತಕ್ಕೆ ಅದು ಅಳವಡಿಸಲ್ಪಡದಿದ್ದರೆ ಅದು ಇಷ್ಟೊಂದು ಜನಪ್ರಿಯತೆ ಗಳಿಸುತ್ತಿತ್ತೋ ಇಲ್ಲವೋ!

ಸಂಗೀತಗಾರನೊಬ್ಬ ಹಾಡಿಗೆ ಸಂಗೀತ ಸಂಯೋಜಿಸುವಾಗ ಮೂಲ ಕವಿಯ ಆಶಯಗಳನ್ನೂ, ಕಲ್ಪನೆಗಳನ್ನೂ, ಸನ್ನಿವೇಶಗಳನ್ನೂ ತಿಳಿದು ಆ ಕೆಲಸ ಕೈಗೊಂಡರೆ ಆಗ ಹಾಡು ಅದ್ಬುತವಾಗಿ ಹೊರಹೊಮ್ಮುತ್ತದೆ. ಕವಿಯ ಉಪಸ್ಥಿತಿಯಿಲ್ಲದೇ ತನ್ನದೇ ಕಲ್ಪನೆಯಲ್ಲಿ ಸಂಗೀತ ಕೊಟ್ಟರೆ ಆಗ ಅದರ ಗತ್ ಸ್ವಲ್ಪ ಬದಲಾಗುತ್ತದೆ. ಇನ್ನು ಹೇಗಾದರಾಗಲಿ ಎಂದು ಇದ್ದಬದ್ದ ವಾದ್ಯಗಳನ್ನೆಲ್ಲಾ ಬಾರಿಸಿದರೆ ಆಗ ಹಾಡಿನ ಗತಿ ಅಧೋಗತಿ! ಕವಿಯೊಬ್ಬನ ನವಿರಾದ ಭಾವನೆಯನ್ನು ಅರ್ಥಮಾಡಿಕೊಳ್ಳುವ ತಾಳ್ಮೆ ಸಂಗೀತಗಾರನಿಗೆ ಬರಲೇಬೇಕು. ಉಷಾ ಉತ್ತುಪ್ಪರ ಹಾಡುಗಳನ್ನು ಬಯಸುವ ಜನರು ಸ್ವಲ್ಪ ಕಮ್ಮಿಯೇ ಇರುತ್ತಾರೆ ಸಮಾಜದಲ್ಲಿ. ಪಾಪ್ ಸಂಗೀತವನ್ನು ನಾನೆನ್ನುವುದು ಪಾಪಮಾಡಿದವರ ಸಂಗೀತ ಅಂತ ! ಸಂಗೀತದಲ್ಲೇ ವೇದ ಕೂಡ ಅಡಗಿದೆ. ಆದಿಭಾರತ [ಮಹಾಭಾರತ]ಕ್ಕೆ ಅದನ್ನು ವ್ಯಾಸರು ಕಾವ್ಯರೂಪವಾಗಿ ಗಣಪನಿಗೆ ಹೇಳಿದಾಗ, ಅದನ್ನು ಅರ್ಥೈಸಿಕೊಂಡು ಆನಂದತುಂದಿಲನಾಗಿ ಬರೆಯುತ್ತಾ ಹೋದ ಗಣಪ ಕೊನೇಗೊಮ್ಮೆ ಈ ಕಾವ್ಯ ಪಂಚಮವೇದವಾಗಲಿ ಎನ್ನುತ್ತಾನೆ! ಪ್ರಾಯಶಃ ಅದಕ್ಕೂ ಮೊದಲು ಸಂಗೀತಕ್ಕೆ ಅಷ್ಟೊಂದು ಪ್ರಾಶಸ್ತ್ಯ ದೊರೆತಿತ್ತೋ ಇಲ್ಲವೋ ಸಂದೇಹ. ಭಾರತೀಯ ಸಂಗೀತದ ಉಚ್ಚ ಸ್ಥಾಯಿ [ಹೈ ನೋಟ್]ಯಲ್ಲಿ ತಲ್ಲೀನನಾದ ಹಾಡುಗಾರನಿಗೆ ಪರಮಾನಂದದ ಅನುಭವವಾಗುತ್ತದೆ ಎಂಬುದು ವಿಜ್ಞಾನಿ ಡಾ| ರಾಜಾರಾಮಣ್ಣನವರ ಇಂಗಿತವಾಗಿತ್ತು. ಪಿಯಾನೋ ನುಡಿಸುತ್ತಿದ್ದುದು ಪಾಶ್ಚಾತ್ಯ ವೈಖರಿಯಲ್ಲಾದರೂ ಅವರಿಗೆ ನಮ್ಮಲ್ಲಿನ ಸಂಗೀತವೇ ಇಷ್ಟವಾಗಿತ್ತು.

ಕೆಲವು ಹಾಡುಗಳನ್ನು ನಾವು ಮರೆಯಲು ಆಗದಂತೇ ಕೆಲವು ಸಂಗೀತಜ್ಞರು ಅದನ್ನು ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮಕ್ಕೆ ಅಳವಡಿಸಿದ್ದಾರೆ. ಅಂತಹ ಹಾಡುಗಳು ಎಷ್ಟೇ ಸಲ ಕೇಳಿದರೂ ಇನ್ನೂ ಮತ್ತೂ ಕೇಳಲು ಬೇಸರವಾಗದ ಹಾಡುಗಳು. ಅದರಲ್ಲಂತೂ ಭಾವನಗಳಿಗೆ ಭರಪೂರ ಮಹತ್ವವೀಯುವ ಹಾಡುಗಳಾದರೆ ಅವು ನಮ್ಮಮೇಲೆ ಉಂಟುಮಾಡುವ ಪ್ರಭಾವವೇ ಬೇರೆ. ಅಂತಹ ಕೆಲವು ಹಾಡುಗಳನ್ನು ಆಗಾಗ ಆಗಾಗ ಗುನುಗುನಿಸುತ್ತಲೇ ಇರಬೇಕೆನಿಸುತ್ತದೆ. ಅಂತಹ ಹಾಡುಗಳು ತರುವ ನೆಮ್ಮದಿಯನ್ನು ಶಬ್ದಗಳಲ್ಲಿ ಸೆರೆಹಿಡಿಯಲು ಸಾಧ್ಯವಿಲ್ಲ. ಕವಿ ದಿ| ಶ್ರೀ ಗೋಪಾಲಕೃಷ್ಣ ಅಡಿಗರು ರಚಿಸಿ ನಿರ್ದೇಶಕ ಶ್ರೀನಾಗಾಭರಣ ದೃಶ್ಯಮಾಧ್ಯಮಕ್ಕೆ ಅಳವಡಿಸಿ ಗಾಯಕಿ ಶ್ರೀಮತಿ ಮಂಜುಳಾ ಗುರುರಾಜ್ ಹಾಡಿರುವ ಅಂಥ ಒಂದು ಹಾಡನ್ನು ತಮಗೆ ಕೇಳಿಸುತ್ತಾ ಇವತ್ತಿಗೆ ನಿಮ್ಮಿಂದ ಬೀಳ್ಕೊಳ್ಳುತ್ತಿದ್ದೇನೆ ಕೇಳಿ ಆನಂದಿಸಿ :