ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, February 1, 2011

ತಲ್ಲಣ

[ಚಿತ್ರ ಕೇವಲ ಕಾಲ್ಪನಿಕ, ರೂಪದರ್ಶಿ: ಸೊನಾಲಿ ಬೇಂದ್ರೆ ]

ತಲ್ಲಣ

ಜಾಲಹಳ್ಳಿಯ ಅಯ್ಯಪ್ಪ ಬ್ಲಾಕಿನ ನಾಲ್ಕನೇ ಮುಖ್ಯರಸ್ತೆಯಲ್ಲಿರುವ ೨೮/೬೭ ನಂಬರಿನ ಮನೆಯ ಮುಂದೆ ಪೋಲೀಸ್ ಜೀಪು ಬಂದು ನಿಂತಿತ್ತು. ಗೌತಮ್‍ಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಆತ ಅಲ್ಲಿರುವ ವಿಷಯವನ್ನು ಪೋಲೀಸರು ಪತ್ತೆ ಹಚ್ಚಿರುವುದು ಅವನಿಗೆ ಆಶ್ಚರ್ಯವಾಗಿತ್ತು. ಅದು ಆತನ ದೂರದ ಸಂಬಂಧಿಕರ ಮನೆ. ಅಲ್ಲಿರುವ ನೆಂಟ ಹಾಗೂ ಮಿತ್ರ ನವೀನ್‍ನಿಗೆ ಪತ್ರ ಬರೆದು "ವಾರದ ಮಟ್ಟಿಗೆ ಬೆಂಗಳೂರಿಗೆ ಬರಬೇಕೆಂದಿದ್ದೇನೆ ಅಲ್ಲೇ ಎಲ್ಲಾದರೂ ನೌಕರಿ ಹುಡುಕಿ ಆಮೇಲೆ ಬಾಡಿಗೆ ಮನೆ ಪಡೆದು ಇದ್ದು ಬಿಡುವ ತೀರ್ಮಾನಕ್ಕೆ ಬಂದಿದ್ದೇನೆ, ಎಲ್ಲಾದರೂ ಉಳಿಯಲು ತುರ್ತಾಗಿ ವ್ಯವಸ್ಥೆ ಮಡುತ್ತೀಯಾ " ಎಂದು ಕೇಳಿದ್ದ ಮಿಂಚಂಚೆಗೆ ನವೀನ್ ತಮ್ಮನೆಯಲ್ಲೇ ಇರಲು ಆಹ್ವಾನಿಸಿದ್ದ. ಹೇಗೂ ಗೊತ್ತಿರುವ ಹಳೆಯ ಸಂಬಂಧ. ಒಳ್ಳೆಯ ಹುಡುಗ ಗೌತಮ್. ಹೀಗಾಗಿ ಆತನಿಗೆ ಸಣ್ಣ ಸಹಾಯವಾದರೆ ಆಗಲಿ ಎಂಬ ಅನಿಸಿಕೆಯಿಂದ ನವೀನ್ ತಂದೆ-ತಾಯಿಗಳೂ ಒಪ್ಪಿ ಆಹ್ವಾನಿಸಿದ್ದರು.

ಯಾರದೇ ಜೊತೆಗೂ ಜಗಳವಾಡದ, ಎಲ್ಲರಿಗೂ ಬೇಕಾದ ಸ್ಥಳೀಯ ಜನಪ್ರಿಯ ಜನರಾಗಿದ್ದ ಅವರ ಮನೆಯ ಮುಂದೆ ಪೋಲೀಸ್ ಜೀಪು ಬಂದಿದ್ದು ನೋಡಿ ಆ ರಸ್ತೆಯಲ್ಲಿರುವ ಎಲ್ಲಾ ಮನೆಗಳ ಅನೇಕರು ಒಬ್ಬೊಬ್ಬರಾಗಿ ಬಂದು ಜಮಾಯಿಸತೊಡಗಿದರು. ಎಸ್.ಐ. ಕೂಗುತ್ತಿದ್ದ " ಏನ್ರೀ ಗೌತಮ್ ಎನ್ನುವ ವ್ಯಕ್ತಿಗೆ ನೀವು ಆಶ್ರಯ ಕೊಟ್ಟಿದ್ದೀರಾ ? "

ಮನೆಯ ಯಜಮಾನಿ ಮೆಲುದನಿಯಲ್ಲಿ ಹೇಳಿದರು " ಹೌದು ಸರ್, ಆತ ತುಂಬಾ ಒಳ್ಳೇ ಹುಡುಗ, ಏನಾಗ್ಬೇಕಾಗಿತ್ತು ಸರ್ ? "

" ಮೊದಲು ಆತನನ್ನು ಹೊರಗೆ ಕಳಿಸಿ ಆಮೇಲೆ ಮಾತಾಡೋಣ "

ಗೌತಮ್ ದಿಂಬಿನಲ್ಲಿ ಮುಖ ಹುದುಗಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಆತನನ್ನು ಕರೆಯಲು ಬಂದ ಆ ಮನೆಯ ಯಜಮಾನಿಗೆ ಆತ ಮುಖತೋರಿಸಲಾರ. " ಯಾಕಪ್ಪಾ ಗೌತಮ್ ಏನು ಮಾಡಿದ್ದೀಯಾಂತ ? ಪೋಲೀಸರು ನಿನ್ನನ್ನು ಕರೀತಾ ಇದ್ದಾರಲ್ಲ ಯಾಕೆ ? ಬಾ ಬಾ ಮಾತಾಡು....ತಪ್ಪಿಲ್ಲದಿದ್ದರೆ ನೀನ್ಯಾಕೆ ಹೆದರಬೇಕು ? "

ಗೌತಮ್ ಅಳುವುದನ್ನು ಇನ್ನೂ ಜಾಸ್ತಿಯಾಗಿಸಿದನೇ ಹೊರತು ಮುಖವನ್ನು ಎತ್ತಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಷ್ಟೊತ್ತಿಗಾಗಲೇ ಪೇದೆಯೊಬ್ಬ ಬಂದು ಆತನನ್ನು ದರದರನೇ ಎಳೆಯತೊಡಗಿದ. ಬರುವುದಿಲ್ಲಾ ಎನ್ನಲಾಗಲೀ ಏನು ನಡೆಯಿತು ಎನ್ನುವುದನ್ನು ಆ ಮನೆಯ ಯಜಮಾನಿಗೆ ಹೇಳಲಾಗಲೀ ಸಮಯವನ್ನೇ ಕೊಡದೇ ಆತನನ್ನು ಜೀಪಿನಲ್ಲಿ ಒಳಗೆ ದಬ್ಬಿ ಕೂರಿಸಿ ಕೊಂಡು ಹೊರಟೇ ಹೋದರು.

******
ಜೈಲಿನ ಕೋಣೆಯಲ್ಲಿ ಕೂತಿದ್ದ ಗೌತಮ್‍ಗೆ ತಾನು ಮಾಡಿದ ಅಪರಾಧದ ಬಗ್ಗೆ ಬಹಳ ಬೇಸರವಾಗಿತ್ತು. ಅದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಹೌದು. ಹಾಗೊಮ್ಮೆ ತಾನು ವರ್ತಿಸದಿದ್ದಲ್ಲಿ ಎಲ್ಲರಂತೇ ಹೊರಗೆ ಆರಾಮಾಗಿ ತಿರುಗಿಕೊಂಡು ಬೇಕಾದ ಕೆಲಸ ಮಾಡಿಕೊಂಡು ಬದುಕಬಹುದಿತ್ತು. ಉದ್ಯೋಗವೇ ಇಲ್ಲದ ತಾನು ಒಳ್ಳೆಯ ಉದ್ಯೋಗಿಯಾದರೆ ಸಿನಿಮಾ ..ಸಿನಿಮಾ ತಾರೆಯಂತಹ ಹುಡುಗಿಯನ್ನು ವರಿಸಬಹುದಿತ್ತು. ಆದರೆ ಹಾಳಾದ ಪ್ರೀತಿ ಎಲ್ಲವನ್ನೂ ಅರೆಕ್ಷಣ ಮರೆಸಿಬಿಟ್ಟಿತ್ತು! ನಡೆಯಬಾರದ್ದು ನಡೆದೇ ಹೋಗಿತ್ತು.

ಉಪೇಂದ್ರನ ಕೆಲವು ಸಿನಿಮಾಗಳನ್ನು ಬಹಳವಾಗಿ ನೋಡಿದ್ದ ಗೌತಮ್‍ಗೆ ಫೇಸ್‍ಬುಕ್‍ನಲ್ಲಿ ಪರಿಚಯವಾದವಳೇ ಶಿಲ್ಪಾ. ಆಕೆ ಸತತವಾಗಿ ಫೇಸ್‍ಬುಕ್‍ನಲ್ಲೇ ಈಜಾಡುವವಳು. ಕಾಲೇಜು ಓದುತ್ತಿದ್ದರೂ ಸಮಯದ ಬಹುಪಾಲು ಸ್ನೇಹಿತರ ಬಳಗದಲ್ಲಿ ಮತ್ತು ಅಂತರ್ಜಾಲದಲ್ಲಿ ಕಳೆಯುತ್ತಿದ್ದಳು. ಸ್ಫುರದ್ರೂಪಿಯಾಗಿದ್ದ ಅವಳಿಗೆ ತನ್ನ ರೂಪದ ಬಗ್ಗೆ ಅಪಾರವಾದ ಹೆಮ್ಮೆಯಿತ್ತು. ಮಾಡ್ ಆಗಿರುವ ೨೦೦-೩೦೦ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿದ್ದಳು. ಅವಳ ವಿವಿಧ ಭಂಗಿಗಳ ಫೋಟೊಗಳನ್ನು ನೋಡಿಯೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಗೌತಮ್. ಆಕೆ ಅನುಮತಿಸಿದಾಗ ದಿನವೂ ಅವನಿಗೆ ಆಕೆಯ ಫೋಟೊಗಳು ಕಾಮೆಂಟುಗಳು ಇವುಗಳನ್ನೆಲ್ಲಾ ನೋಡುವ ಹವ್ಯಾಸ ಬೆಳೆಯಿತು. ಒಂದೇ ಒಂದು ದಿನವೂ ಆತ ಫೇಸ್‍ಬುಕ್ ಬಿಟ್ಟಿರಲಾರ! ದಿನಗಳೆದಂತೇ ಆತ ನಿಜವಾಗಿಯೂ ಆಕೆಯನ್ನು ಅಪಾರವಾಗಿ ಹಚ್ಚಿಕೊಂಡಿದ್ದ. ಹೇಗೋ ಧೈರ್ಯಮಾಡಿ " ಐ ಲವ್ ಯೂ " ಎನ್ನುವ ಮನಸ್ಸು. ಆದರೆ ಆಗಬೇಕಲ್ಲ? ಆಕೆಯೂ ಅನೇಕರ ಕಾಮೆಂಟುಗಳಿಗೆ ಉತ್ತರಿಸಿದಂತೇ ಈತನ ಕಾಮೆಂಟಿಗೂ ಉತ್ತರಿಸುತ್ತಿದ್ದಳು. " ಯೂ ಆರ್ ಲುಕಿಂಗ್ ವೆರಿ ವೆರಿ ಸ್ವೀಟ್ " ಎಂಬ ಈತನ ಕಾಮೆಂಟಿಗೆ " ಸೋ ನೈಸ್ ಆಫ್ ಯೂ " ಅಂದಿದ್ದಳು. ಹುಡುಗಿಯರಿಗೆ ’ತುಂಬಾ ಚೆನ್ನಾಗಿದ್ದೀಯಾ’ ಎಂದುಬಿಟ್ಟರೆ ಮುಖ ಕತ್ತೆಯ ಥರವಿದ್ದರೂ ಮೂರಡಿ ಏರಿಬಿಡುತ್ತಾರಲ್ಲವೇ. ಇಲ್ಲಂತೂ ಆಕೆ ಸಹಜವಾಗಿಯೇ ಸುಂದರಿ; ಕೇಳಬೇಕೆ! ಚಾಟ್ ಆರಂಭವಾಯಿತು.

ಚಾಟ್ ಮಾಡುತ್ತಾ ಮಾಡುತ್ತಾ ಆಕೆ ಇರುವ ಏರಿಯಾ,ಮನೆ, ಕಾಲೇಜು ಆದಿಯಾಗಿ ಎಲ್ಲವನ್ನೂ ತಿಳಿದುಕೊಂಡ ಗೌತಮ್ ಆಕೆಗೆ ಪರ್ಸನಲ್ ಮಿಂಚಂಚೆ ಕಳಿಸತೊಡಗಿದ. ಆಕೆಯ ಮೊಬೈಲಿಗೆ ಎಸ್.ಎಮ್.ಎಸ್ ಕಳಿಸತೊಡಗಿದ. ಹೇಗಾದರೂ ಆಕೆ ತನ್ನವಳಾಗಿಬಿಟ್ಟರೆ ತನ್ನಂಥಾ ಅದೃಷ್ಟವಂತ ಯಾರು ಈ ಜಗತ್ತಿನಲ್ಲಿ ! ಆದರೂ "ಐ ಲವ್ ಯೂ " ಎಂದಿರಲಿಲ್ಲ, ಯಾಕೋ ಮನಸ್ಸು ಹೆದರುತ್ತಿತ್ತು. ಗೌತಮ್ ಕೂಡ ಸ್ಫುರದ್ರೂಪಿಯೇ. ಜೀನ್ಸ್ ಮತ್ತು ಟೀ ತೊಟ್ಟು ಅಪ್ಪ ಕೊಡಿಸಿದ್ದ ಬೈಕಿನಲ್ಲಿ ಕೂತುಬಿಟ್ಟರೆ ಎಲ್ಲಿಗೇ ಹೋದರೂ ಅಪ್ಪ ಅಷ್ಟಾಗಿ ಕೇಳುತ್ತಿರಲಿಲ್ಲ. ಕೊಡಗಿನಲ್ಲಿಯೇ ಶ್ರೀಮಂತರೆನಿಸಿದ್ದ ಕುಟುಂಬ ಅವರದ್ದು. ಬೈಕ್ ಬದಲಿಗೆ ಕಾರೂ ಕೊಡಿಸಬಹುದಿತ್ತು. ಆದರೂ ಅದ್ಯಾಕೋ ಅಪ್ಪ ಆತನಿಗೆ ಉದ್ಯೋಗ ಸಿಕ್ಕಮೇಲೆ ಆತನೇ ಖರೀದಿಸಲಿ ಎಂಬ ಅನಿಸಿಕೆಯಿಂದ ಬಿಟ್ಟಿರಬೇಕು. ಹಾಗಂತ ನೌಕರಿ ಮಾಡಬೇಕಾದ ಪರಿಸ್ಥಿತಿಯೇನೂ ಇರಲಿಲ್ಲ. ಆದರೂ ಕಾಫೀ ಪ್ಲಾಂಟೇಶನ್‍ನಲ್ಲಿ ಇತ್ತೀಚೆಗೆ ತೀರಾ ಲಾಭಬರುತ್ತಿಲ್ಲ ಮತ್ತು ಕಾರ್ಮಿಕರ ಅಭಾವ ಜಾಸ್ತಿಯೆಂಬ ಕಾರಣಕ್ಕೆ ಮಗ ಬರೇ ಕಾಫೀತೋಟವನ್ನೇ ನೆಚ್ಚಿಕೊಂಡು ಬದುಕುವುದು ಬೇಡವೆಂಬುದು ಅಪ್ಪ ಬೋಪಣ್ಣನವರ ಇರಾದೆ.

ಹುಡುಗು ಬುದ್ಧಿ ತುಡುಗು ಬುದ್ಧಿ ಅಂತಾರಲ್ಲ. ಬೇಲಿಹಾರುವ ವಯಸ್ಸಿನಲ್ಲಿ ಮನಸ್ಸು ನಿಗ್ರಹಕ್ಕೆ ಬರುವುದು ಕಷ್ಟವಾಗಿತ್ತು. ಅಲ್ಲಿಲ್ಲಿ ಒಂದಷ್ಟು ಗೆಳೆಯರೂ ಜೊತೆಯಾಗುತ್ತಿದ್ದರು. ಓದಿನಲ್ಲಿ ಅಷ್ಟಾಗಿ ಆಸಕ್ತಿಯೇ ಬರಲಿಲ್ಲ. ಪಾಸಾದರೂ ಆಯ್ತೂ ಬಿಟ್ಟರೊ ಆಯ್ತು. ಆದರೂ ಬೋಪಣ್ಣ ಮಗನನ್ನು ಕಾಲೇಜಿನಿಂದ ಬಿಡಿಸಿರಲಿಲ್ಲ. ಓದುವಷ್ಟು ಓದಲಿ ಆಮೇಲೆ ಜೀವನ ಅವರವರ ಹಣೆಬರಹ ಎಂಬ ತಿಳುವಳಿಕೆಯುಳ್ಳ ಜನ ಅವರು. ಆದರೂ ಪ್ರಾಯದ ಮಗನನ್ನು ನಿಗಾವಹಿಸಿ ನೋಡಿದ್ದರೆ ಸ್ವಲ್ಪವಾದರೂ ದಿಕ್ಕುತಪ್ಪದಂತೇ ಮಾಡಬಹುದಿತ್ತೇನೋ.

ಗೆಳೆಯರ ಸಂಗದಲ್ಲಿ ಅಲ್ಲಲ್ಲಿ ಇಸ್ಪೀಟು, ಕಂಪ್ಯೂಟರ್ ಗೇಮ್ಸ್ ಆಡುತ್ತಿದ್ದ ಗೌತಮ್‍ಗೆ ಬೇರೇನೂ ಚಟಗಳು ಅಂಟಿರಲಿಲ್ಲ. ಎಲ್ಲೋ ಒಂಚೂರು ಮದ್ಯ ತೆಗೆದುಕೊಳ್ಳುವುದು ಕೊಡವರಿಗೆ ಮಾಮೂಲು ಬಿಡಿ. ಆದರೆ ಅದನ್ನೇ ಬೆನ್ನುಹತ್ತಿದವನಲ್ಲ. ಎಲ್ಲರನ್ನೂ ಮೆಚ್ಚಿಸುವ ಗುಣ. ಯಾರು ಏನೇ ಕೇಳಿದರೂ ’ಇಲ್ಲಾ’ ಎನ್ನದ ಸ್ವಭಾವ. ಹೀಗಾಗಿ ಸ್ನೇಹಿತರೆಲ್ಲರಿಗೂ ಗೌತಮ್ ಎಂದರೆ ಅಚ್ಚುಮೆಚ್ಚು. ಅಂತರ್ಜಾಲ ವೀಕ್ಷಣೆಯನ್ನು ಅಭ್ಯಾಸಮಾಡಿಕೊಂಡ ಗೌತಮ್ ಅದಾಗಲೇ ಫೇಸ್‍ಬುಕ್‍ನಲ್ಲಿ ಖಾತೆ ತೆರೆದಿದ್ದ. ನೋಡುತ್ತಾ ನೋಡುತ್ತಾ ಆತನಿಗೆ ಹುಡುಗಿಯರ ಫೋಟೋಗಳು ಹಿಡಿಸತೊಡಗಿದವು. ಆಗ ಕಂಡವಳೇ ಚೆಲ್ಲು ಚೆಲ್ಲು ಶಿಲ್ಪಾ.

ಕಡೆದಿಟ್ಟ ಶಿಲ್ಪದಂತೇ ಮೈಮಾಟಹೊಂದಿರುವ ಶಿಲ್ಪಾಳ ವಿವಿಧ ಭಂಗಿಗಳ ಚಿತ್ರಗಳನ್ನು ನೋಡತೊಡಗಿದ ಗೌತಮ್‍ಗೆ ನಿತ್ಯವೂ ಗಣಕಯಂತ್ರದಿಂದ ಆಚೆಬಂದಮೇಲೆ ಏನನ್ನೋ ಕಳೆದುಕೊಂಡ ಅನುಭವ. ಆಕೆಯೊಂದಿಗೆ ಇಡೀದಿನ ಚಾಟ್ ಮಾಡುವಾ ಎಂಬ ಆಸೆ. ಆಕೆಯೂ ಮಡೀಕೇರಿಯವಳೇ ಎಂಬುದು ತಿಳಿದಾಗಲಂತೂ ಕುಣಿದಾಡಿಬಿಟ್ಟಿದ್ದ ಆತ. ತನ್ನ ಮನೆಗೂ ಅವಳ ಮನೆಗೂ ಕೇವಲ ಹನ್ನೆರಡು ಕಿಲೋಮೀಟರ್ ಅಂತರ, ಆದರೂ ಓ ದೇವರೇ ನಾವೆಷ್ಟು ದೂರ ದೂರ ಎಂದುಕೊಳ್ಳುತ್ತಿದ್ದ. ಆದಷ್ಟೂ ಶೀಘ್ರ ಆಕೆಯನ್ನು ಭೇಟಿಮಾಡಲೂ ಹಾತೊರೆಯುತ್ತಿದ್ದ. ಆಕೆಯೂ ಈತನ ಎಲ್ಲಾ ಲೀಲೆಗಳಿಗೂ ಸ್ಫಂದಿಸಿದರೂ ಇಬ್ಬರೂ " ಐ ಲವ್ ಯೂ " ಅನ್ನಲಿಲ್ಲ. ಆದರೂ ಇಬ್ಬರೂ ಸಾಕಷ್ಟು ಅನ್ಯೋನ್ಯ ಎಂಬಷ್ಟು ಹತ್ತಿರವಾಗಿದ್ದರು.

******
ಅವಳ ಕಾಲೇಜಿನ ಹೊರಗೆ ತಂದೆಯ ಕಾರಿನಲ್ಲಿ ಕುಳಿತಿದ್ದ ಗೌತಮ್ ಆಕೆ ಬರುವುದನ್ನೇ ಕಾಯುತ್ತಿದ್ದ. ಆತನೇ ಸ್ವತಃ ಡ್ರೈವ್ ಮಾಡಿಬಂದಿದ್ದ. ಜೊತೆಗೆ ಇನ್ಯಾರೂ ಇರಲಿಲ್ಲ. ಅದು ಉದ್ದೇಶಪೂರ್ವಕವೂ ಹೌದು. ತಾನು ಶಿಲ್ಪಾಳನ್ನು ಪ್ರೀತಿಸುತ್ತಿರುವುದು ಯಾರಿಗೂ ತಿಳಿಯದಿರಲಿ ಎಂಬುದೇ ಆತನಲ್ಲಿರುವ ಗುಟ್ಟು. ಹಾಗಂತ ಆತ ಯಾವುದೇ ಕ್ಷಣದಲ್ಲೂ ಆಕೆಯನ್ನು ಮದುವೆಯಾಗಲು ರೆಡಿ. ಆದರೆ ಮನೆಯಲ್ಲಾಗಲೀ ಗೆಳೆಯರಲ್ಲಾಗಲೀ ಈ ವಿಷಯದ ಬಗ್ಗೆ ಹೇಳಿದ್ದಿಲ್ಲ. ಯಾಕೋ ಹಿಂಜರಿಯುತ್ತಿದ್ದ. ಕಡಿ ನೀಲಿ ಬಣ್ಣದ ಮಾರುತಿ ಡಿಸೈರ್ ಕಾರಿನಲ್ಲಿ ಚಲನಚಿತ್ರದ ಹೀರೋ ಕುಳಿತಂತೇ ಪೋಸುಕೊಡುತ್ತಾ ಕುಳಿತಿದ್ದ ಆತನನ್ನು ಹಲವಾರು ಹುಡುಗಿಯರು ನೋಡಿಕೊಂಡು ಮುನ್ನಡೆದರು. ಶಿಲ್ಪಾ ತಡವಾಗಿ ಬಂದವಳು ಮೊದಲ ಭೇಟಿಯಲ್ಲೇ "ಹಾಯ್, ಯಾವುದೋ ಅರ್ಜೆಂಟ್ ಕೆಲಸವಿದೆ ನಾಳೆ ಸಿಗುತ್ತೇನೆ " ಎಂದವಳೇ ಮರುಮಾತಿಗೂ ಕಾಯದೇ ಹೊರಟೇ ಹೋದಳು. ಆಕೆಗೆ ಈ ಥರದ ಹಲವು ಹುಡುಗರು ಫೇಸ್‍ಬುಕ್ ಮೂಲಕ ಸ್ನೇಹಿತರಾಗಿದ್ದರು. ಕಾಲೇಜಿನಲ್ಲಿಯೂ ಬಹಳ ಹುಡುಗರು ಆಕೆಯ ಹಿಂದೆಯೇ ಸುತ್ತುತ್ತಿದ್ದರು. ಒಂದಿಬ್ಬರು ಹರೆಯದ ಗಂಡು ಉಪನ್ಯಾಸಕರೂ ಆಕೆಯನ್ನು ಯಾಕೋ ಏಕೋಭಾವದಿಂದ ದೃಷ್ಟಿಸುತ್ತಿದ್ದರು ! ಇದೆಲ್ಲಾ ಮಾಮೂಲಿಯಾಗಿಬಿಟ್ಟಿದ್ದರಿಂದ ಆಕೆ ಯಾವುದಕ್ಕೂ ಅಷ್ಟಾಗಿ ತಲೆಕೆಡಿಸಿಕೊಂಡವಳಲ್ಲ. ಆದರೂ ಅವಳು ನಗುನಗುತ್ತಾ ಸ್ವಲ್ಪ ಅತಿಯಾಗಿ ಸಂಭಾಷಿಸುವ ಪರಿಯನ್ನು ಆಕೆಯ ಅಭಿಮಾನೀ ಹುಡುಗರೆಲ್ಲಾ ಅಪಾರ್ಥಮಾಡಿಕೊಂಡಿದ್ದರು. ಗೌತಮ್ ಕೂಡ ಅವರಲ್ಲೊಬ್ಬ.

ವಿಧಿಯಿಲ್ಲದೇ ಮರಳಿದ ಗೌತಮ್‍ಗೆ ನಾಳೆ ಯಾವಾಗ ಬರುತ್ತದೆ ಎಂಬ ಕಾತರ. ಆಕೆಯೊಡನೆ ಗಂಟೆಗಟ್ಟಲೇ ಮಾತನಾಡುವ ಆತುರ. ಇಡೀ ದಿನವನ್ನು ಹೇಗುಹೇಗೋ ಕಳೆದ ಆತನಿಗೆ ತಂದೆ ವಹಿಸಿದ ಕೆಲವು ಕೆಲಸಗಳನ್ನೂ ಮನಸ್ಸಿಲ್ಲದ ಮನಸ್ಸಿನಿಂದ ಮಾಡಿಮುಗಿಸುವ ಪ್ರಮೇಯ ಬಂದಿತ್ತು. ಕ್ಷಣವೂ ದಿನಾವಾದಂತೇ ಯಾಕೋ ಬೇಸರ. ಮೈಮುರಿಯುತ್ತಾ ಆಕಳಿಸಿದ ಆತನಿಗೆ ಆ ರಾತ್ರಿ ನಿದ್ದೆಯೇ ಹತ್ತಲಿಲ್ಲ. ದಿಂಬು ಹಾಸಿಗೆ ಎಲ್ಲವನ್ನೂ ಶಿಲ್ಪಾ ಆವರಿಸಿಬಿಟ್ಟಿದ್ದಳು! ಎಲ್ಲಿ ನೋಡಿದರೂ ಅವಳೇ ಕಾಣಿಸುತ್ತಿದ್ದಳು. ಯಾವ ದಿಕ್ಕಿಗೇ ತಿರುಗಿಕೊಂಡರೂ ಅಲ್ಲಿ ಅವಳ ಚಿತ್ರ ಕಾಣುತ್ತಿತ್ತು. ಅಂತೂ ರಾತ್ರಿ ಕಳೆದು ಹಗಲಾಯಿತು. ಭಾರವಾದ ಕ್ಷಣಗಳು ಮತ್ತೆ ಬರಬರನೇ ಓಡತೊಡಗಿದವು. ಸ್ನಾನಮಾಡಿ ಅತಿ ವಿಶೇಷವಾದ ದಿರಿಸನ್ನು ಧರಿಸಿ, ಶಾಸ್ತ್ರಕ್ಕೆ ತಿಂಡಿ ತಿಂದು ಅಪ್ಪ-ಅಮ್ಮರಿಗೆ ಯಾವುದೋ ನೆಪಹೇಳಿ ಅಪ್ಪನ ಕಾರನ್ನು ಮತ್ತೆ ಕೇಳಿ ಪಡೆದು ಹೊರಟು ಶಿಲ್ಪಾಳ ಕಾಲೇಜಿಗೆ ಬಂದಿದ್ದ ಗೌತಮ್.

ಈ ದಿನ ಮಾತ್ರ ಆಕೆ ಗೌತಮ್‍ನನ್ನು ಬಹಳ ಆಪ್ತವಾಗಿ ಮಾತನಾಡಿಸುತ್ತಾ ಆತನೊಡನೆ ಆತ ಕರೆದಲ್ಲಿಗೆ ಹೊರಡಲು ಸಿದ್ಧವಾದಳು. ಈರ್ವರೂ ಮಡಿಕೇರಿಯ ಕಾವೇರಿ ಕಾಂಟಿನೆಂಟಲ್ ಹೋಟೆಲ್ ನಲ್ಲಿ ಕುಳಿತು ಗಂಟೆಗಟ್ಟಲೇ ಮಾತನಾಡುತ್ತಾ ತಿಂಡಿ, ಐಸಕ್ರೀಮ್ ಹೀಗೇ ಸಮಯಕಳೆದಿದ್ದೇ ಗೊತ್ತಾಗಲಿಲ್ಲ. ನಿಸರ್ಗನಿರ್ಮಿತ ಉದ್ಯಾನದಲ್ಲಿ ತುಸುಹೊತ್ತು ಕುಳಿತುಬರೋಣ ಎಂದ ಗೌತಮ್‍ನ ಮಾತಿಗೂ ಅಸ್ತು ಎಂದು ಆತನ ಜೊತೆ ಹೆಜ್ಜೆಹಾಕಿದ್ದಳು ಶಿಲ್ಪಾ. ಸ್ವರ್ಗವೇ ಧರೆಗಿಳಿದ ಖುಷಿಯಲ್ಲಿದ್ದರೂ ಗೌತಮ್‍ಗೆ ಆಕೆಯನ್ನು ಇನ್ನೂ ಹತ್ತಿರ ಹತ್ತಿರ ಸೆಳೆಯುವ ಆಸೆಯಾಗುತ್ತಿತ್ತು. ಹಾಗೂ ಹೀಗೂ ಕಷ್ಟಪತ್ತು " ಐ ಲವ್ ಯೂ " ಎನ್ನಬಯಸಿದ್ದ ಪ್ರಯತ್ನಗಳು ನಾಲಿಗೆಯ ತುದಿಯಲ್ಲೆಲ್ಲೋ ಅಂಟಿಕೊಂಡು ಹೊರಬರದಾಗುತ್ತಿದ್ದವು. ಆಕೆ ಮಾತ್ರ " ಐ ಲವ್ ಯೂ " ಅನ್ನುವ ಮನೋಭಾವದವಳಾಗಿರಲಿಲ್ಲ. ಯಾಕೆಂದರೆ ಆಕೆಗೆ ಅದೊಂದು ಸ್ನೇಹವಷ್ಟೇ! ಅಲ್ಲಿ ಸಿಗುವ ಖುಷಿಯನ್ನು ಪಡೆಯಲಷ್ಟೇ ಆಕೆ ಬಯಸುತ್ತಿದ್ದಳು.

ಅಗಾಗ ಭೇಟಿಯಾಗುತ್ತಿದ್ದ ಈರ್ವರೂ ವಾರಕ್ಕೊಮ್ಮೆ ಭೇಟಿಯಾಗಬಯಸಿದರು. ಕಾಲ ಸರ್ರೆಂದು ಕಳೆಯುತ್ತಿತ್ತು. ಒಂದಾನೊಂದು ದಿನ ಮಿಂಚಂಚೆಯಲ್ಲಿ ತನ್ನ ಇಂಗಿತವನ್ನು ಹೇಗೋ ಅಂತೂ ಪ್ರಯಾಸಪೂರ್ವಕ ನಿವೇದಿಸಿದ್ದ ಗೌತಮ್. ಅದಕ್ಕೆ ಆಕೆ ಉತ್ತರಿಸುವ ಬದಲು ಮೊಬೈಲ್ ನಲ್ಲಿ ನಕ್ಕಳು. ಆಕೆ ಒಪ್ಪಿದಾಳೆಂಬ ಸಂತೋಷದಲ್ಲಿ ಆಕಾಶ ಭೂಮಿಗೇ ಬಾಗಿನಿಂತಿತ್ತು. ಇನ್ನೇನು ಅದಕ್ಕೆ ಮೂರೇಗೇಣು! ಸಂತಸದ ಅಸದೃಶ ಚಳುಕೊಂದು ಬೆನ್ನ ಹುರಿಯಲ್ಲಿ ಹಾದುಹೋದ ಅನುಭವವಾಗಿತ್ತು ಗೌತಮ್‍ಗೆ.

******
ಮಡೀಕೇರಿಯ ಚಳಿಗಾಲ. ಕೇಳಬೇಕೇ ? ಸುತ್ತಲ ಪರಿಸರವೆಲ್ಲಾ ಹಸಿರು, ಮಂಜುಮುಸುಕಿದ ಮತ್ತು ಮೋಡಗಳ ವಾತಾವರಣ. ಚುಮುಚುಮು ಚಳಿಯಲ್ಲೇ ಆ ದಿನ ಶಿಲ್ಪಾಳನ್ನು ಮತ್ತೆ ಕಾಣುವ ಹಸಿದ ಕಣ್ಣುಗಳನ್ನು ಹೊತ್ತು ಬಹಳ ಬೇಗನೇ ಕಾಲೇಜಿನ ಹೊರಗೆ ಕಾಯುತ್ತಿದ್ದ ಗೌತಮ್. ಆಕೆ ಬರುತ್ತೇನೆ ಎಂದಿದ್ದ ಸಮಯ ಅದಾಗಲೇ ಕಳೆದು ಬಹಳ ಸಮಯವಾಗಿತ್ತು. ಮೊಬೈಲಿಗೆ ಕಾಲ್ ಮಾಡಿದ್ದರೆ ’ಯಾವುದೇ ಕರೆಯನ್ನು ಸ್ವೀಕರಿಸುತ್ತಿಲ್ಲ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ’ ಎಂಬ ಉಲಿಕೆ. ಕಾದೂ ಕಾದೂ ಬಳಲಿದ ಆತ ಹೊರಟು ಹಿಂದೆ ತಾವಿಬ್ಬರೂ ಅನೇಕ ಸರ್ತಿ ಕುಳಿತು ತಿಂಡಿತಿಂದಿದ್ದ ಕಾವೇರಿ ಕಾಂಟಿನೆಂಟಲ್ ಹೋಟೆಲ್‍ಗೆ ಬಂದಿದ್ದ. ಹಸಿವೆಯ ಅರಿವು ಕಾಡುತ್ತಿತ್ತು. ಮನಸ್ಸು ಬೇಡವೆಂದರೂ ಹೊಟ್ಟೆ ಬಯಸುತ್ತಿತ್ತು. ತಿಂಡಿಗೆ ಆರ್ಡರ್ ಮಾಡಿದ. ಇನ್ನೇನು ತಿಂದು ಮುಗಿಸಿ ಹೊರಡುವಾಗ ಮಹಡಿಯ ’ಸ್ಪೆಶಲ್ ಸರ್ವಿಸ್ ಹಾಲ್’ ನಿಂದ ಶಿಲ್ಪಾ ಯಾವುದೋ ಯುವಕನೊಡನೆ ಕೆಳಗಿಳಿದು ಬರುತ್ತಿರುವುದು ಕಾಣಿಸಿತು !

ತನ್ನವಳೇ ಎನಿಸಿದ್ದ ಆ ಹುಡುಗಿ ಇನ್ನೊಬ್ಬನೊಟ್ಟಿಗೆ ಚೆಲ್ಲುಚೆಲ್ಲಾಗಿ ವರ್ತಿಸುತ್ತಿರುವುದನ್ನು ಕಂಡ ಗೌತಮ್‍ಗೆ ಭೂಮಿಯಲ್ಲಿಲ್ಲದಂಥಾ ಅಸಾಧ್ಯ ಕೋಪವುಕ್ಕಿಬಂತು. ಕೈ ಕೈ ಹಿಸುಕಿಕೊಂಡನಾದರೂ ಅದನ್ನು ವ್ಯಕ್ತ ಪಡಿಸಲು ಆಗುವುದೇ? ಬೆಳಗಿನಿಂದ ಅಷ್ಟುಹೊತ್ತು ತಾನು ಕಾದಿದ್ದೇ ಬಂತು. ಈ ಹುಡುಗಿ ಇಲ್ಲಿ ನೋಡಿದರೆ ಹಾಯಾಗಿ ಬೇರೊಬ್ಬನೊಡನೆ ಸುತ್ತುತ್ತಾ ಎಂಜಾಯ್ ಮಾಡುತ್ತಿರುವುದನ್ನು ಆತ ಸಹಿಸದಾದ. ವೇಟರ್ ಕರೆದು ಬಿಲ್ಲು ತೆತ್ತು ಹೊರಟುನಿಂತ ಆತ ಶಿಲ್ಪಾ ಇನ್ನೊಬ್ಬನೊಡನೆ ಹತ್ತಿರಬಂದು ನಕ್ಕಾಗ ನಗಲಾರದೇ ನಕ್ಕ. " ಯೂ ನೋ ಹೀ ಈಸ್ ತರುಣ್. ಮೈ ಬೆಸ್ಟ್ ಫ್ರೆಂಡ್ " ಎಂದಾಗ ಯಾಂತ್ರಿಕವಾಗಿ ಆ ಹುಡುಗನ ಕೈಕುಲುಕಿದ. ಆಕೆ ಆತನಿಗೂ ಗೌತಮ್‍ನ ಪರಿಚಯ ಹೇಳಿ " ಮೈ ಫೇಸ್‍ಬುಕ್ ಫ್ರೆಂಡ್" ಎಂದಳು. ಭೂಮಿಗೆ ಬಾಗಿದ್ದ ಆಗಸ ಬರ್ರನೆ ನಿಲುಕದ ಎತ್ತರಕ್ಕೆ ಏರಿಹೋಗಿತ್ತು. ಯಾಕೋ ತನ್ನ ಮನಸ್ಸು ಶಿಲ್ಪಾಳನ್ನು ದ್ವೇಷಿಸುವ ಹಾಗಾಗಿತ್ತು. ಆ ದಿನ ನೋವಿನಲ್ಲೇ ಆ ಜಗದಿಂದ ’ಬೈ ಬೈ’ ಹೇಳಿದ ಗೌತಮ್.

ಮನೆಗೆ ಬಂದವನಿಗೆ ಊಟ ತಿಂಡಿ ಎಲ್ಲಕ್ಕಿಂತಾ ಹೆಚ್ಚಾಗಿ ವಿಶ್ರಾಂತಿಯ ಅವಶ್ಯಕತೆಯಿತ್ತು. ಮಲಗಿದರೂ ನಿದ್ದೆಯೇನೂ ಬರದು...ಆದರೂ ಮಲಗಬೇಕು ಎನಿಸುತ್ತಿತ್ತು. ಶಿಲ್ಪಾ ಯಾಕೋ ದೂರವಾಗುತ್ತಿದ್ದಾಳೆನೋ ಅನಿಸುತ್ತಿತ್ತು. ಅಂತರ್ಜಾಲ ತೆರೆದು ಗುಪ್ತವಾಗಿ ಮೆಸ್ಸೇಜ್ ಕಳಿಸಿದ್ದೂ ಆಯಿತು. ಸಾಕಷ್ಟು ಎಸ್.ಎಮ್.ಎಸ್ ಗಳೂ ಸಂದವು. ಆದರೆ ಅದಕ್ಕೆಲ್ಲಾ ಅವಳ ಉತ್ತರ " ಹಾಗೇನೂ ಇಲ್ಲ " ಎಂಬುದಾಗಿತ್ತು. ಆಕೆಯನ್ನು ಹೇಗೆ ಅರ್ಥಮಾಡಿಕೊಳ್ಳಲಿ ಎಂಬುದೇ ತೋಚದ ಮನ ಹುಚ್ಚುಹುಚ್ಚಾಗಿ ವಿಚಿತ್ರಗಳನ್ನು ಚಿಂತಿಸುತ್ತಿತ್ತು. ಮನದಲ್ಲಿ ನಡೆದ ಈ ಹೊಯ್ದಾಟಗಳನ್ನು ಹೇಳಿಕೊಳ್ಳಲು ಮನೆಯಲ್ಲಿ ಸಾಧ್ಯವಿರಲಿಲ್ಲ, ಗೆಳೆಯರು ನಕ್ಕಾರು ಎಂದೆನಿಸುತ್ತಿತ್ತು. ತಾನೇ ತಾನಾಗಿ ತುಮುಲಗಳು ಬಗೆಹರಿಯಲು ಸಮಯ ಜಾಸ್ತಿ ಬೇಕಲ್ಲವೇ? ಅದಕ್ಕಾಗಿ ಆತ ಮಲಗಿ ಮಲಗಿ ಸೋತ. ಅಪ್ಪ-ಅಮ್ಮ "ಯಾಕೇ ಒಂಥರಾ ಇದೀಯಾ ? " ಎಂದರೆ " ಯಾಕೂ ಇಲ್ಲ ಯಾವುದೋ ಆಟದಲ್ಲಿ ಸೋತುಬಿಟ್ಟೆ ಅದಕೇ ಬೇಜಾರಾಗಿದೆ " ಎಂದಿದ್ದ.

******
ದಿನಗಳು ಕಳೆದರೂ ಆ ಕಹಿ ನೆನಪು ಮಾತ್ರ ಮನದ ಮೂಲೆಯಲ್ಲಿ ಶಾಶ್ವತವಾಗಿ ಬೇರುಬಿಟ್ಟಿತ್ತು. ಶಿಲ್ಪಾ ತನ್ನವಳೇ ಆಗಬಲ್ಲಳೇ ಎಂಬ ಅಳಿದುಳಿದ ಆಸೆ ಇನ್ನೂ ಬತ್ತಿರಲಿಲ್ಲ. ಶಿಲ್ಪಾಗೆ ಸಾಕಷ್ಟು ತಿಳಿಹೇಳಿದರೂ ಅವಳ ಜಾಯಮಾನದಲ್ಲಿ ಬದಲಾವಣೆಯಿರಲೇ ಇಲ್ಲ. "ನಾವಿಬ್ಬರೂ ಮದುವೆಯಾಗೋಣವೇ ? " ಎಂಬ ಪ್ರಶ್ನೆಗೆ "ನನಗೆ ಮದುವೆ ಈಗಲೇ ಇಷ್ಟವಿಲ್ಲ " ಎನ್ನುತ್ತಿದ್ದಳು. ಕೇಳಿ ಕೇಳಿ ಸೋತ ಗೌತಮ್‍ಗೆ ಆಕೆಯನ್ನು ತಾನು ಪಡೆಯಲೇ ಬೇಕೆಂಬ ಬಯಕೆ ತೀರಾ ಅತಿಯಾಗತೊಡಗಿತು. ಒಂದಿನ ಊರ ಹೊರಗಲ್ಲೆಲ್ಲೋ ಹೋಗಿಬರೋಣವೆಂದಿದ್ದಕ್ಕೆ ಶಿಲ್ಪಾ ಸಮ್ಮತಿಸಿದಳು. ಹಾಗೆ ಇಬ್ಬರೂ ಹೋದಾಗ ಸ್ವಲ್ಪ ಸಮಯದ ನಂತರ ತಾನು ಬಲವಂತವಾಗಿ ಆಕೆಯನ್ನು ಮದುವೆಗೆ ಒಪ್ಪಿಸುವ ಪ್ರಯತ್ನ ಮಾಡಿದ್ದ. ಏನೇ ಮಾಡಿದರೂ ಆಕೆ ಒಪ್ಪಲಿಲ್ಲ ಮಾತ್ರವಲ್ಲ " ನಾವಿಬ್ಬರೂ ಸ್ನೇಹಿತರಾಗೇ ಇರೋಣ, ನಮ್ಮ ನಡುವೆ ಮದುವೆಯ ಬಂಧನ ಬೇಡ" ಎಂದುಬಿಟ್ಟಳು.

ಅಕೆಗಾಗಿ ಹಲವಾರು ದಿನಗಳಿಂದ ಆಸೆಹೊತ್ತ ಚಿಗುರು ಮೀಸೆಯ ಪೋರ ಕುಸಿದು ಕುಳಿತಿದ್ದ. ಇನ್ನು ಉಳಿದಿದ್ದು ಆತನಿಗೆ ಉಪೇಂದ್ರ ಹೇಳಿದ್ದ ಕೊನೇ ಅಸ್ತ್ರ. ತನಗೆ ಧಕ್ಕದ ಆಗದ ಇನ್ಯಾರಿಗೂ ಧಕ್ಕದೇ ಹೋಗಲಿ ಎಂಬ ನಿರ್ಧಾರ! ಹಾಗೆ ನಿರ್ಧರಿಸಿದವನೇ ಆಕೆಯನ್ನು ಮತ್ತೊಂದು ದಿನ ಊರ ಹೊರಗಿನ ನಿಸರ್ಗೋದ್ಯಾನಕ್ಕೆ ಕರೆದ. ಆಕೆ ಒಮ್ಮೆ ಹೀಗೆ ಯೋಚಿಸಿದರೂ ಸ್ನೇಹಿತನೆಂಬ ಭಾವನೆಯಿಂದ ಬಂದುಬಿಟ್ಟಳು. ನಿಸರ್ಗೋದ್ಯಾನದಲ್ಲಿ ನಡೆಯುತ್ತಾ ಇರುವಾಗ ಆತ ತನ್ನ ಜೇಬಿನಿಂದ ಯಾವುದೋ ದ್ರವವೊಂದನ್ನು ಆಕೆಯ ಮುಖಕ್ಕೆ ಎರಚಿಬಿಟ್ಟ. ಆಕೆ ಉರಿಯಿಂದ ಚೀರುತ್ತಿರುವಾಗಲೇ ತನ್ನ ಕಾರನ್ನು ಹತ್ತಿ ಪಾರಾರಿಯಾಗಿ ಹೋದ.

******
ಸಾವು ಬದುಕಿನ ತೂಗುಯ್ಯಾಲೆಯಲ್ಲಿ ಹಲವು ದಿನ ಕಳೆದ ಶಿಲ್ಪಾ ಅಂತೂ ಬದುಕಿ ಬಂದಿದ್ದಳು. ಘಟನೆ ನಡೆದಿದ್ದ ದಿನ ಆಸ್ಪತ್ರೆಯಲ್ಲಿ ಆಕೆ ಕೊಟ್ಟಿದ್ದ ಮಾಹಿತಿಯ ಪ್ರಕಾರ ಆಕೆಯ ಪಾಲಕರು ಆರಕ್ಷಕರಲ್ಲಿ ಅರ್ಜಿ ನೀಡಿದ್ದರು. ಅರ್ಜಿಯನ್ನು ಪಡೆದ ಆರಕ್ಷಕರು ಗೌತಮ್‍ನ ಹುಡುಕಾಟಕ್ಕೆ ತೊಡಗಿದ್ದರು. ಆತನ ಮನೆಗೆ ಬಂದಿಳಿದ ಪೋಲೀಸರನ್ನು ಕಂಡು ಆತನ ತಂದೆ ತಾಯಿಗಳು ಹೌಹಾರಿ ನಿಂತರು. ಅವರಿಗೆ ಯಾವೊಂದೂ ವಿಷಯಗಳು ತಿಳಿದಿರಲಿಲ್ಲ. ಪೋಲೀಸರು ಮಾತ್ರ ಅವರನ್ನು ಠಾಣೆಗೆ ಎಳೆದೊಯ್ದು ವಿಚಾರಿಸಿದ್ದರು. ಬೆಳಿಗ್ಗೆಯೇ ಹೊರಟು ಹೋದ ಆತ ಕಾರನ್ನು ಮಾತ್ರ ಮನೆಯಂಗಳದಲ್ಲಿ ತಂದು ನಿಲ್ಲಿಸಿದ್ದು ಕಾಣಿಸಿತ್ತು. ಆದರೆ ಮನೆಯೊಳಗೆ ಆತ ಬಂದಿರಲಿಲ್ಲ. ಇನ್ನೇನು ಸಂಜೆಯೊಳಗೆ ಎಲ್ಲಿದ್ದರೂ ಬರುತ್ತಾನೆ ಎಂದೇ ತಂದೆ-ತಾಯಿ ತಿಳಿದಿದ್ದರೂ ಆತ ಬರದಿದ್ದಾಗ ಆತನ ಹುಡುಕುವಿಕೆಗೇ ಪೋಲೀಸರಲ್ಲಿ ವಿನಂತಿಸುವ ವಿಚಾರ ಅವರದಾಗಿತ್ತು. ಅವರ ವಿಚಾರಣೆ ಮುಗಿಸಿದ ಪೋಲೀಸರು ಘಟನೆಯ ಬಗ್ಗೆ ತಿಳಿಸಿ ಅವರ ಮಗನ ಎಲ್ಲಾ ಸಂಪರ್ಕಗಳ ಜಾಡನ್ನು ತಿಳಿಸುವಂತೇ ತಾಕೀತು ಮಾಡಿದರು. ತಂದೆ-ತಾಯಿಗಳು ವಿಧಿಯಿಲ್ಲದೇ ತಿಳಿದಷ್ಟನ್ನೂ ಹೇಳಿದರು. ಆದರೆ ಅವರು ಹೇಳಿದ ಪಟ್ಟಿಯಲ್ಲಿ ಬೆಂಗಳೂರಿನ ಜಾಲಹಳ್ಳಿಯ ದೂರದ ಸಂಬಂಧಿಕರ ಹೆಸರು ಇರಲಿಲ್ಲ!

ಘಟನೆಯ ಪೂರ್ವಭಾವಿಯಾಗಿ ಬೆಂಗಳೂರಿಗೆ ಹೊರಡುವ ತಯಾರಿನಡೆಸಿದ್ದ ಗೌತಮ್ ಬಂಧು-ಸ್ನೇಹಿತ ನವೀನ್ ಸಂಪರ್ಕ ಸಾಧಿಸಿದ್ದ. ಮತ್ತು ಸೀದಾ ಹೊರಟು ಅವರ ಮನೆಗೆ ಬಂದಿಳಿದಿದ್ದ. ಸುಮಾರಿಗೆ ಪೋಲೀಸರು ತನ್ನನ್ನು ಹುಡುಕಲು ಸಾಧ್ಯವಿಲ್ಲ, ಆದಷ್ಟು ದಿನ ಹೀಗೇ ತಳ್ಳಿ ಬೇರೆಲ್ಲಿಗಾದರೂ ಹೋಗಿಬಿಡೋಣವೆಂಬ ಮನಸ್ಸು ಆತನದ್ದಿತ್ತು.

ಮಡಿಕೇರಿಯ ಪೋಲೀಸರು ಸಾಕಷ್ಟು ಪರಿಶ್ರಮ ವಹಿಸಿದರು. ಗೌತಮ್‍ನ ಮೊಬೈಲ್ ಕರೆಗಳ ವಿವರಗಳನು ಪಡೆದು ಆತನ ಅಡಗುದಾಣವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಅದರಲ್ಲಿ ಅವರು ಇಂದು ಯಶಸ್ಸು ಕಂಡಿದ್ದರು. ಪ್ರೀತಿಯೇ ದ್ವೇಷವಾಗಿ ಹೊಮ್ಮಿ ಪ್ರೇಯಸಿಯ ಜೀವಕ್ಕೇ ಅಪಾಯವೊಡ್ಡಿದ್ದ ಗೌತಮ್ ತನ್ನ ಒಳ್ಳೆಯತನವನ್ನು ಕಳೆದುಕೊಂಡುಬಿಟ್ಟಿದ್ದ. ಕಂಡವರೆಲ್ಲಾ ಛೀಮಾರಿ ಹಾಕುವಾಗ ಸಹಿಸಲಾಗದಷ್ಟು ನೋವಾಗುತ್ತಿತ್ತು. ಯಾಕಾದರೂ ಹೀಗೆ ಮಾಡಿದೆ ಎಂದು ಆತ ಜೈಲಿನ ಕೋಣೆಯಲ್ಲಿ ಕಣ್ಣೀರ್ಗರೆಯುತ್ತಾ ಕುಳಿತಿದ್ದ. ತನಗೆ ಮರಳಿ ಜೀವನವೇ ಬೇಡ ತಾನು ಸಾಯಬೇಕೆಂದು ಬಯಸುತ್ತಿದ್ದ.

*******

" ಗೌತಮ್.... ಹೇ....ಗೌತಮ್ ಬೆಳಗಾಯ್ತು ಕಣೋ....ಯಾಕೋ ಇನ್ನೂ ಎದ್ದಿಲ್ಲಾ ? " ಅಮ್ಮ ಕೂಗಿ ಕರೆದಾಗ ದುಃ ಸ್ವಪ್ನದಿಂದ ಎಚ್ಚೆತ್ತ ಗೌತಮ್ ನಡೆದದ್ದನ್ನು ನೆನೆಸಿ ಬೆವತು ಹೋದ. ತಲೆಯ ಕೆಳಗಿನ ದಿಂಬು ಒದ್ದೆಯಾಗಿತ್ತು.