ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, May 29, 2013

ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...ಮಿಸುಕಾಡುತಿರುವೆ ನಾನು

ಚಿತ್ರ ಋಣ: ಯುನಿಸೆಫ್ , ದ್ವಾರಾ : ಅಂತರ್ಜಾಲ 
ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...ಮಿಸುಕಾಡುತಿರುವೆ ನಾನು

ಪತ್ರಕರ್ತ ಖುಷ್ವಂತ್ ಸಿಂಗ್ ಹೇಳುತ್ತಾರೆ: ಇವತ್ತಿನ ಪತ್ರಿಕೆಗಳಲ್ಲಿ ಓದುವುದಕ್ಕಿಂತಾ ಓದದೇ ಇರಬೇಕಾದ ಕಾಲಕಸದಂತಹ ಕೆಲಸಕ್ಕೆ ಬಾರದ ಹೂರಣಗಳೇ ಹೆಚ್ಚು ಎಂದು. ದೇಶವಿದೇಶಗಳಿಂದ ಮಿಂಚಂಚೆಯ ಮೂಲಕ ಲೇಖನಗಳು, ಸುದ್ದಿಗಳು ಸಂಪಾದಕರನ್ನು ತಲ್ಪಿದಾಗ, ಅವುಗಳನ್ನೆಲ್ಲಾ ಅಳೆದು-ಸುರಿದು-ತೂಗಿ ನೋಡುವ ಕೆಲಸ ಕೇವಲ ಪ್ರಧಾನ ಸಂಪಾದಕನಿಂದ ಸಾಧ್ಯವಿಲ್ಲ, ಹಲವು ಕೈಗಳು ಸೇರಿ ಇಂದು ಪತ್ರಿಕೆಗಳನ್ನು ನಡೆಸುತ್ತವೆ. ಪತ್ರಿಕೆಗಳಲ್ಲಿ ಬರುವ ವಿಷಯಗಳು ಪತ್ರಿಕೆಯ ಮಾಲೀಕರ ನಿಯಂತ್ರಣಕ್ಕೂ ಒಳಪಟ್ಟಿರುತ್ತವೆ ಎನ್ನುತ್ತಾರವರು. ಪತ್ರಕರ್ತ ಮತ್ತು ಸಾಹಿತಿಯಲ್ಲಿ ತಾನಂತೂ ವ್ಯತ್ಯಾಸವನ್ನು ಕಾಣುತ್ತಿರಲೇ ಇಲ್ಲ, ಪತ್ರಕರ್ತ ತನ್ನ ಸಾಮಾಜಿಕ ಹೊಣೆಯನ್ನರಿತು ಲೇಖನಗಳನ್ನು ಸಿದ್ಧಪಡಿಸುವಾಗ ಆತನೊಬ್ಬ ಬರಹದ ಕಲಾವಿದನಾಗಿರುತ್ತಾನೆ ಎಂಬುದು ಅವರ ಅಂಬೋಣ. ಮೊದಲ ನಾಲ್ಕು ಸಾಲುಗಳಲ್ಲಿ ಓದುಗರನ್ನು ಆಕರ್ಷಿಸಲು ವಿಫಲನಾದರೆ ಲೇಖಕನ ಇಡೀ ಬರಹವೇ ಬಿದ್ದುಹೋಗುತ್ತದೆ ಎಂಬುದು ಅವರ ಅಭಿಪ್ರಾಯ; ಅವರ ಈ ಅಭಿಪ್ರಾಯಕ್ಕೆ ನನ್ನ ಕೀರಲು ದನಿಯನ್ನೂ ಸೇರಿಸಿ ನಿಮ್ಮ ಮುಂದಿಡುತ್ತಿರುವುದೇ ಈ ಲೇಖನ.  

ಭಟ್ಟರ ಚಾ ದುಖಾನಿನಲ್ಲಿ ದೊನ್ನೆ ಬಿರ್ಯಾನಿಯನ್ನು ನಿರೀಕ್ಷಿಸಿ ಬರುವವರು ಯಾರೂ ಇರಲಾರರು ಎಂಬುದು ನನ್ನ ವೈಯ್ಯಕ್ತಿಕ ಅನಿಸಿಕೆ; ಅದನ್ನು ನಿರೀಕ್ಷಿಸುವುದು ತರವಲ್ಲ ಕೂಡ.  ಹಾಗಂತ ಹುಳಿ ಇಡ್ಲಿ-ಹಳಸಿದ ಸಾಂಬಾರು ಇಟ್ಟುಕೊಂಡು, ನೆಗೆದೆದ್ದು ಮುತ್ತುತ್ತ ಕೂರುವ ನೊಣಗಳನ್ನು ಹಾರಿಸುತ್ತಿದ್ದರೆ ಜನ ಬರುತ್ತಾರ್ಯೇ?ಇಲ್ಲ. ಬಿಸಿಬಿಸಿಯಾಗಿ ಸರ್ವ್ ಮಾಡಬಲ್ಲ ನೀರುದೋಸೆ, ಗೋಳಿಬಜೆ[ಮಂಗಳೂರು ಬಜ್ಜಿ], ಪಕೋಡ, ಮಿರ್ಚಿ, ಉದ್ದಿನವಡೆ ಇತ್ಯಾದಿಗಳನ್ನಿಟ್ಟು ನಿರೀಕ್ಷಿಸಿದರೆ ನಿಮ್ಮಂತಹ ಹಲವು ಗಿರಾಕಿಗಳು ಬರಹದ ತಿಂಡಿಗಳನ್ನು ತಿನ್ನಲು ಬಂದೇಬರುತ್ತಾರೆ ಎಂಬುದು ನನಗೆ ಎಂದೋ ಖಚಿತವಾಗಿಬಿಟ್ಟಿದೆ. ಮೈಸೂರು ಮಲ್ಲಿಗೆಯ ನರಸಿಂಹಸ್ವಾಮಿಗಳು ಜೀವನದುದ್ದಕ್ಕೂ ಬಡತನವನ್ನೇ ಅನುಭವಿಸಿದವರು; ಆದರೆ ಅವರ ಕಾವ್ಯಶ್ರೀಮಂತಿಕೆಗೆ ಯಾವುದೇ ಕೊರತೆಯಾಗಲಿಲ್ಲ. ಮಾತ್ರವಲ್ಲಾ, ಕವಿ-ಸಾಹಿತಿ-ಬರಹಗಾರ ತನ್ನೊಳಗಿನ ನೋವನ್ನು ಮರೆತು ಸಂತಸವನ್ನು ಹಂಚಿಕೊಳ್ಳುತ್ತಾ ಪರರ/ಓದುಗರ/ಗ್ರಾಹಕರ ಸಂತಸಕ್ಕೆ ಕಾರಣವಾಗಬೇಕು ಎನ್ನುತ್ತಿದ್ದರಂತೆ.

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ | ಬಂಗಾರವಿಲ್ಲದ ಬೆರಳು...

ಹಾಡನ್ನು ಗಾಯಕ ಅಶ್ವತ್ಥರ ದನಿಯಲ್ಲಿ ಅನೇಕಾವರ್ತಿ ಕೇಳಿದ ನನಗೆ ಆ ಹಾಡನ್ನು ಕೇಳುವಾಗಲೆಲ್ಲಾ ನರಸಿಂಹಸ್ವಾಮಿ ಆವರಿಸಿಕೊಂಡ ಅನುಭವ ಆಗುತ್ತದೆ. ನರಸಿಂಹಸ್ವಾಮಿಯವರ ಈ ದನಿಗೂ ನನ್ನ ದನಿಯ ಬೆಸುಗೆಯಾಗಿದೆ! ಅಷ್ಟುದೂರದಿಂದ ನೀವೆಲ್ಲಾ ಭಟ್ಟರ ಅಂಗಡಿಗೆ ಬರುವುದು ಯಾವುದೋ ಒಂದು ಉತ್ತಮ ತಿಂಡಿ ಸಿಗುತ್ತದೆ ಎಂಬ ಭರವಸೆಯ ಗಂಟನ್ನು ಹೊತ್ತು. ಹೀಗಿರುವಾಗ ಕೇವಲ ರಾಜಕೀಯ, ಕೇವಲ ಸಾಮಾಜಿಕ ಸುದ್ದಿಗಳನ್ನಷ್ಟೇ ಬಿತ್ತರಿಸುತ್ತಿದ್ದರೆ  ಭಟ್ಟರ ರೇಡಿಯೋ ಎತ್ತಿ ಬಿಸಾಕಿ ಬಣ್ಣದ ಸುದ್ದಿಗಳನ್ನು ತೋರಿಸುವ ಟಿವಿಗಳ ಮುಂದೆ ನೀವು ಹೋದೀರಿ! ಶಿವಸೇನೆಯ ವಿರುದ್ಧ ಲೇಖನ ಬರೆದರೂ ಶಿವಸೇನೆಯವರು ಕಚೇರಿಗೆ ಮುತ್ತಿಗೆ ಹಾಕಿ ಕಲ್ಲುಹೊಡೆಯದಂತೇ ನಿಭಾಯಿಸುವ ಅಕ್ಷರಕಲೆ ಬರಹಗಾರನ ತಾಕತ್ತು ಎಂದ ಖುಷ್ವಂತ ಸಿಂಗರ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ. ಯಾವುದೇ ಉದ್ವೇಗವಿದ್ದರೂ ಅದನ್ನು ಉಪಾಯವಾಗಿ ಪರ್ಯಾಯ ಪದಗಳಲ್ಲಿ ಬಗೆಗೊಳಿಸುವುದು ಬರಹಗಾರನ ಚಾತುರ್ಯವೇ ಸರಿ. ಯಕ್ಷಗಾನ ನೋಡಿ ಬಲ್ಲವರಿಗೆ ವೇಷಗಳ ’ಪ್ರವೇಶ’ಕ್ಕೆ ಇರುವ ಮಹತ್ವ ಗೊತ್ತು. ಕೇವಲ ಪ್ರವೇಶದಿಂದಲೇ ಪ್ರಮುಖ ಕಲಾವಿದರ ಆ ದಿನದ ಮನೋಭೂಮಿಕೆಯನ್ನು ಅಳೆಯುತ್ತಿದ್ದವರು ನಾವು; ತಮ್ಮ ಖಾಸಗೀ ಬದುಕಿನ ನೋವು-ಕಾವುಗಳನ್ನು ಕಿಂಚಿತ್ತೂ ತೋರ್ಗೊಡದೇ ಕಲೆಗಾಗಿ ಬದುಕಿದವರು ಅನೇಕ ಮಹನೀಯರು. ಅವರಲ್ಲಿನ ಅಂತರಾಳವೂ ಕೂಡ ಅದನ್ನೇ ಹೇಳುತ್ತಿತ್ತು: ಪಾಪ, ಅಷ್ಟುದೂರದಿಂದ ನಮ್ಮ ಪಾತ್ರವನ್ನು ನೋಡಲಾಗಿ ಬಂದಿದ್ದಾರೆ-ನಮ್ಮೊಳಗಿನ ನೋವನ್ನು ಮರೆತು ನಲಿವನ್ನು ಉಣಬಡಿಸೋಣ. ಯಕ್ಷಕಲಾವಿದರ ಈ ಅಂತರಾಳಕ್ಕೂ ನನ್ನ ಅಂತರ್ಯದ ತಂತಿ ಮೀಟಿದೆ.    

ಕಥೆಗಳನ್ನು ಜಾಸ್ತಿ ಓದದಿದ್ದವ ಕಥೆಯೊಂದನ್ನು ಓದಿಬಿಟ್ಟೆ. ಕೃಶಕಾಯದ-ಕೈಲಾಗದ ಗಂಡನ ವಿಪರೀತ ಕುಡಿತಕ್ಕೆ ಬೇಸತ್ತ ಮಹಿಳೆಯ ಆರ್ಥಿಕ ಅಸಹಾಯದ ದಿನವೊಂದರಲ್ಲಿ, ಸಿರಿವಂತ ಕುಟ್ಟಿ ಆಕೆಯನ್ನು ಬಳಸಿಕೊಂಡಿದ್ದನ್ನು ಪರೋಕ್ಷವಾಗಿ ಅರಿತ ಆಕೆಯ ಗಂಡ, ಆಕೆಯನ್ನು ರಾತ್ರಿಯಿಡೀ ಹೊಡೆಯುತ್ತಾನೆ, ಗಾಯಗೊಳಿಸುತ್ತಾನೆ. ಚಿಕ್ಕ ಮಗ ಅದನ್ನು ನೋಡಿಯೂ ತಪ್ಪಿಸಲಾಗದೇ ಕಾರಣವನ್ನೂ ತಿಳಿಯಲಾಗದೇ ಒದ್ದಾಡುತ್ತಾನೆ. ಮಾರನೇ ಬೆಳಿಗ್ಗೆ ಬಿಸಿಲೇರುವ ಹೊತ್ತಿಗೆ ಅಪ್ಪನೆಲ್ಲೋ ಹೊರಟುಹೋದದ್ದನ್ನು ಹುಡುಗ ಕಾಣುತ್ತಾನೆ. ಮನೆಯೊಳಗೆ ರಕ್ತದ ಕಮಟುವಾಸನೆ ಹರಡಿರುತ್ತದೆ. ಕೆಲಸಮಯದಲ್ಲೇ ಕೆಂಪುಸೀರೆಯನ್ನುಟ್ಟ ಅಮ್ಮ, ತುಸುಹೊತ್ತಿನಲ್ಲೇ ಅಲ್ಲಿಗೆ ಬಂದ ಕುಟ್ಟಿಯೊಡನೆ ಎಲ್ಲಿಗೋ ಹೊರಟುನಿಲ್ಲುತ್ತಾಳೆ. ಸೀರೆಯಲ್ಲಿ ಅಂದು ಬಹಳ ಚಂದವಾಗಿ ಕಾಣಿಸುವ ಅಮ್ಮನನ್ನು "ಎಲ್ಲಿಗೆ ಹೊರಟೆ" ಎಂದರೆ ಅಮ್ಮನಿಂದ ಮಾತಿಲ್ಲ, ಕೈಗೆ ಹತ್ತರ ನೋಟನ್ನು ತುರುಕಿ, ಕೊನೆಯಬಾರಿ ಎಂಬಂತೇ ಮುದ್ದಿಸಿ, ಕುಟ್ಟಿಯೊಡನೆ ಹೆಜ್ಜೆಹಾಕಿದ ಅಮ್ಮನನ್ನು ಮತ್ತೆ ತಡೆದು ಕೇಳಿದಾಗ, ಅಮ್ಮನನ್ನು ಪಕ್ಕಕ್ಕೆ ಸರಿಸಿ, ಹಿಂಗಾಲಲ್ಲಿ ಕುಟ್ಟಿ ಎದೆಗೆ ಒದೆದಾಗ, ಚೇತರಿಸಿಕೊಳ್ಳುವ ಮೊದಲೇ ಎದುರಿನ ಜಾಗದಲ್ಲಿ ಯಾರೂ ಇರದಿರುವುದು ಮಗುವಿಗೆ ಕಾಣುತ್ತದೆ."ಅಬ್ಬೇ...ಅಬ್ಬೇ" ಎಂದು ಬೊಬ್ಬಿರಿದ ದನಿ ಕೇವಲ ಅರಣ್ಯರೋದನವಾಗಿ ಅಬ್ಬೆಯ ಪ್ರೀತಿಯಿಂದ ವಂಚಿತನಾಗಿ ಬೆಳೆಯುವ ಆ ಮಗು ಕೆಲಕಾಲದಲ್ಲೇ ಅಪ್ಪನನ್ನೂ ಕಳೆದುಕೊಂಡು ಒಂಟಿಯಾಗಿ ಹೇಗೆ ಬೆಳೆದ ಎಂಬ ಕಥೆಯ ಹಿಂಚುಮುಂಚಿನ ಎಲ್ಲಾ ಘಟನೆಗಳಿಗಿಂತಾ ಹಡೆದಮ್ಮನೆದುರೇ ಕುಟ್ಟಿ ಮಗುವನ್ನು ಒದೆದಿದ್ದು-ಹಡೆದಮ್ಮ ಹೃದಯ ಕಲ್ಲುಮಾಡಿಕೊಂಡು ಮಾತನಾಡದೇ ಬಿಟ್ಟುಹೋಗಿದ್ದು-ಅಬ್ಬೇ ಅಬ್ಬೇ ಎಂದು ಏನೂ ಅರಿಯದ ಆ ಚಿಕ್ಕ  ಮಗು ಅತ್ತಿದ್ದು ---ಈ ಸನ್ನಿವೇಶಗಳು ಹೃದಯವನ್ನು ಹಿಂಡಿ ಮನಸ್ಸಿಗೆ ಅರಿವಳಿಕೆ ನೀಡಿಬಿಟ್ಟವು. ||ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ|| [ಒಬ್ಬ ಕೆಟ್ಟ ಮಗು ಜನಿಸಬಹುದು ಆದರೆ ಒಬ್ಬ ಕೆಟ್ಟ ತಾಯಿ ಇರಲಾರಳು] ಎಂಬ ಆದಿಶಂಕರರ ಮಾತನ್ನು ಗಮನಿಸಿದೆ. ಬದುಕಿನ ಯಾವ ಅನಿವಾರ್ಯತೆಯಲ್ಲಿ ಆ ಮಾತಿಗೆ ಅಪವಾದವೆನಿಸುವ ಕೆಲವು ತಾಯಂದಿರೂ ಇರುತ್ತಾರೆ ಎಂಬುದು ಅರ್ಥವಾಗದೇ ಹೋಯ್ತು. 

ಮುಂಜಿಮನೆಯೊಂದರಲ್ಲಿ ಊಟಮಾಡಿ ಕೈತೊಳೆದು ಬಾಯೊರೆಸಿಕೊಳ್ಳುತ್ತಾ ಎದುರು ಸಿಕ್ಕ ಪರಿಚಿತರ, ನೆಂಟರ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದೆ. ಆಪ್ತವೆನಿಸುವ ಮುಖವೊಂದನ್ನು ಕಂಡು ಮಾತನಾಡಿಸಿದಾಗ, ತನ್ನ ಹೃದಯದ ಭಾವಗಳಿಗೆ ಮಾತುಗಳ ರೂಪಕೊಟ್ಟ ವೃದ್ಧ ಮಹಿಳೆಯ ಕಣ್ಣಾಲಿಗಳಲ್ಲಿ ಮಡುಗಟ್ಟಿದ ನೋವು ಮೈಕೊಡವಿ ಎದ್ದುನಿಂತಿತ್ತು. ಜೀವನದ ಸಂಜೆಯ ಭಾಗದಲ್ಲಿ ಪಾರ್ಶ್ವವಾಯುವಿನಿಂದ ಪೀಡಿತರಾಗಿ ಕಳೆದೆಂಟು ವರ್ಷಗಳಿಂದ ಮಲಗಿಯೇ ಇರುವ ಪತಿಯ ಬಗೆಗೆ ಆಕೆ ಹೇಳಿಕೊಂಡರು. ಅಶಕ್ತವಾದ ಶರೀರದಲ್ಲಿ ಮಲಗಿದಲ್ಲೇ ಸೊಂಟದ ಕೀಲುಗಳು ಸ್ವಲ್ಪ ಜಾರಿ, ಕಟ್ ಆಗಿ  ಸರಿಪಡಿಸಲಾಗದ ಸ್ಥಿತಿಯಲ್ಲಿ, ನೋವನ್ನು ಅನುಭವಿಸುತ್ತಾ ದಿನಗಳನ್ನು ನೂಕುತ್ತಿರುವ ಗಂಡನ ಆರೈಕೆಯೇ ಆಕೆಯ ದಿನಚರ್ಯೆಯ ಬಹುಮುಖ್ಯ ಭಾಗವಂತೆ. ಮಧ್ಯಾಹ್ನದ ಒಂದೆರಡು ಗಂಟೆಗಳ ಕಾಲ ಮಾತ್ರ ಹತ್ತಿರದಲ್ಲೇ ಎಲ್ಲಾದರೂ ನೆಂಟರಿಷ್ಟರ ಬಳಗದಲ್ಲಿ ಮದುವೆ-ಮುಂಜಿ ಕಾರ್ಯಕ್ರಮಗಳಿದ್ದರೆ, ಮನೆಯಲ್ಲಿರುವ ಸೊಸೆಯಂದಿರಿಗೆ ಹೇಳಿ ಹೊರಬಂದು ಹೋಗುವುದೇ ಪ್ರಯಾಸದ ಕೆಲಸ; ಅದು ಕೇವಲ ತನ್ನನ್ನು ಆಮಂತ್ರಿಸಿದ ನೆಂಟರ ಓಲೈಕೆಗಾಗಿ ಮಾತ್ರ ಎಂದ ಆಕೆಯ ಕಣ್ಣಲ್ಲಿ ಬದುಕಿನ ಅರ್ಥದ ಜಾಡನ್ನು ಕಂಡೆ!

"ಇದೇ ನನ್ನ ಪಾಲಿಗೆ ಬಂದ ಪಂಚಾಮೃತವೆಂದು ನಿರ್ಧರಿಸಿಬಿಟ್ಟಿದ್ದೇನೆ; ದೇವರು ಇಟ್ಟಹಾಗೇ ಇದ್ದು ಅದೇ ನನ್ನ ಸುಖ-ಸಂತೋಷವೆಂದು ಸ್ವೀಕರಿಸಿಬಿಟ್ಟಿದ್ದೇನೆ. ನಾನು ಮಾಡುತ್ತಿರುವ ಕರ್ತವ್ಯದಲ್ಲಿ ನನಗೆ ಸಮಾಧಾನವಿದೆ, ಆದರೆ ಯಜಮಾನರು ಬಳಲುವುದನ್ನು ನೋಡಿ ಬೇಸರವಾಗುತ್ತದೆ" ಎನ್ನುತ್ತಾ ತನ್ನ ಒಳಗನ್ನು ನನ್ನಲ್ಲಿ ಹರಹಿಕೊಂಡ ಆ ತಾಯಿಗೆ ನನ್ನ ಮಾತುಗಳಿಂದ ಸಾಂತ್ವನ ಹೇಳಲು ಸಾಧ್ಯವೇ? ಅಷ್ಟಕ್ಕೂ ನನ್ನ ಕಿರಿಯ ವಯಸ್ಸಿಗೂ ಅವಳ ಹಿರಿಯ ವಯಸ್ಸು-ವರ್ಚಸ್ಸಿಗೂ ಅಜ-ಗಜಾಂತರ ಕಾಣುತ್ತಿತ್ತು. ಸಾರಸ್ವತಲೋಕದ ಜನರನ್ನು ಅಪಾರವಾಗಿ ಗೌರವಿಸುವ ಆಕೆಗೆ, ಪತಿಯ ಪಕ್ಕದ ಬಿಡುವಿನ ವೇಳೆಗಳಲ್ಲಿ ಪುಸ್ತಕಗಳೇ ಜೀವಾಳವಂತೆ. ಉತ್ತಮ ಬರಹಗಾರರ ಪುಸ್ತಕಗಳಲ್ಲಿ ಹುದುಗಿದ ಕಥೆ-ಕವನ-ಕಾದಂಬರಿ-ಪ್ರಬಂಧ-ಹಾಸ್ಯ ಇವೆಲ್ಲವುಗಳಲ್ಲಿ ಬರುವ ಪಾತ್ರಗಳು ಬಿಂಬಿಸುವ ನವರಸಗಳು ಅವಳ ಹೃದ್ಗತವನ್ನು ಪ್ರತಿನಿಧಿಸಿ, ಅವಳೊಡನೆ ಮಾತನಾಡುತ್ತವಂತೆ. ಬರಹಾರನೊಬ್ಬನ ಬರಹಗಳು ಅಷ್ಟರಮಟ್ಟಿಗೆ ಜೀವಂತಿಕೆ ಇಟ್ಟುಕೊಂಡರೆ ಆ ಬರಹಗಾರನಿಗೆ ಇನ್ಯಾವ ಪ್ರಶಸ್ತಿಯ ಅಗತ್ಯ ಬೀಳುತ್ತದೆ?   

ಮಲ್ಲೇಶ್ವರದಲ್ಲಿ ನಾನುಕಂಡ ವೃದ್ಧ ದಂಪತಿಯ ಬಗೆಗೆ ತಿಳಿಸಿ, ಮಕ್ಕಳು ಓದಿ, ವಿದೇಶವಾಸಿಗಳಾಗಿ, ಮುಪ್ಪಿನ-ಅನಾರೋಗ್ಯದ ಸಮಯದಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಆ ದಂಪತಿಯ ಬವಣೆಯ ಬಗ್ಗೆ ಆ ತಾಯಿಗೆ ತಿಳಿಸಿದೆ. ಕೇಳಿದ ಆ ಕ್ಷಣದಲ್ಲಿ "ಹೌದಪ್ಪಾ ಮಕ್ಕಳ ಬಾಲ್ಯ, ಅವರು ಅಂಬೆಹರೆದ ದಿನಗಳು, ತೊದಲುಮಾತುಗಳನ್ನಾಡುತ್ತಿದ್ದ ದಿನಗಳು ಇವನ್ನೆಲ್ಲಾ ಯಾವ ತಾಯಿಯೂ ಮರೆಯಲಾರಳು." ಎಂದ ಆಕೆಗೆ  ತನ್ನಂತಹ ಅನೇಕ ಜನ ಜೀವನದಲ್ಲಿ ವಿವಿಧ ತೆರನಾಗಿ ಅಸಹಾಯರಾಗಿರುವ ಸಂಗತಿಗಳು  ನೆನಪಿಗೆ ಬಂದಿರಬೇಕು. ಅವಿಭಕ್ತ ಕುಟುಂಬ-ಸಂಸ್ಕೃತಿ ಕಾಲುಶತಮಾನದ ಹಿಂದಿನ ಇತಿಹಾಸದ ಭಾಗವಾಗಿ ಹೋದ ಈ ದಿನಗಳಲ್ಲಿ, ಮಕ್ಕಳು ಬೆಳೆದು ಉನ್ನತ ವ್ಯಾಸಂಗಗಳನ್ನು ಮುಗಿಸಿಕೊಂಡು ತಮ್ಮ ಪಾಡಿಗೆ ತಾವು ತಮ್ಮ ಜೀವನವನ್ನು ಕಟ್ಟಿಕೊಂಡು ದೂರವೇ ಇರಬೇಕಾಗುತ್ತದೆ. ಅವಕಾಶವಿದ್ದರೂ, ಅಧುನಿಕ ಜೀವನ ಶೈಲಿಗಾಗಿಯೋ, ಹೆಂಡತಿಯ ಮಾತು ಕೇಳಿಕೊಂಡೋ ಅದೆಷ್ಟೋ ಜನ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಇನ್ನೂ ಕೆಲವು ’ಬುದ್ಧಿಜೀವಿ ಮಕ್ಕಳು’ ಪಾಲಕರ ಅನಾರೋಗ್ಯದಲ್ಲಿ, ಅವರಿಗೆ ಸಮಯಕ್ಕೆ ಸರಿಯಾಗಿ ಉಪಚಾರ ನಡೆಯಲಿ ಎಂಬ ಕಾರಣಕ್ಕಾಗಿ ವೃದ್ಧಾಶ್ರಮಗಳಲ್ಲಿ ಬಿಟ್ಟುದಾಗಿ ಹೇಳುತ್ತಾರೆ.  ಹಣದಿಂದ ಸೇವೆಯನ್ನು ಖರೀದಿಸಿ ಕೊಡಬಹುದು ಆದರೆ ಪ್ರೀತಿಯನ್ನಲ್ಲ ಎಂಬುದು ಈ ಮೇಲಿನ ತರಗತಿಯ ಮಕ್ಕಳಿಗೆ ತಿಳಿದಿದೆಯೇ? ಗೊತ್ತಿಲ್ಲ. ಪ್ರೀತಿಸಿ, ಮುದ್ದಿಸಿ ವಿದ್ಯೆ-ಬುದ್ಧಿ ಕಲಿಸಿ ಬೆಳೆಸಿದ ನನ್ನಮ್ಮನಿಂದ ದೂರದಲ್ಲಿ ವಾಸವಾಗಿರುವ  ನಾನು ಈ ಮಾತನ್ನು ಹೇಳಲು ಹಕ್ಕುದಾರನೇ? ಖಂಡಿತಕ್ಕೂ ಅಲ್ಲ. ಮರೆಯಲಾಗದ, ಮರೆಯಬಾರದ ಆಮ್ಮನ ಋಣಕ್ಕೆ ಬೆಲೆಕಟ್ಟಲು ಬರುವುದೇ? ಆ ಪ್ರೀತಿ ಜೀವನದಲ್ಲಿ ಇನ್ಯಾರಿಂದಲಾದರೂ ದೊರೆವುದೇ? ದೇವರಾಣೆಗೂ ಇಲ್ಲ. ಅಂತಹ ಮಾತಾಮಹಿಗೊಂದು ಸಾಷ್ಟಾಂಗ ನಮಸ್ಕಾರ.

೧೯೬೯ ರಲ್ಲಿ ವಿದೇಶದಲ್ಲಿದ್ದಾಗಲೇ ’ಇಲ್ಲಸ್ಟ್ರೇಟೆಡ್ ವೀಕ್ಲಿ’ಗೆ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡವರು ಖುಷ್ವಂತ್ ಸಿಂಗರು; ಅದು ನಾನು ಕೇಳಿದ ಕಥೆ. ಹುಟ್ಟಿ-ಬೆಳೆದು-ಬುದ್ಧಿ ಬಲಿತು, ತಡವಾಗಿ ಕೆಲವೆಡೆ ಹಳೆಯ ಪುಸ್ತಕಗಳನ್ನೆಲ್ಲಾ ಹುಡುಕಿ, ಸಿಕ್ಕ ಇಲ್ಲಸ್ಟ್ರೇಟೆಡ್ ವೀಕ್ಲಿಯ ಆ ಕಾಲದ ಕೆಲವು ಸಂಚಿಕೆಗಳಲ್ಲಿ ಅವರ ಬರಹಗಳನ್ನು ಓದಿದ್ದೇನೆ. ಸಂಪಾದಕರಾಗಿ, ಬರಗಾರರಾಗಿ, ಪತ್ರಕರ್ತರಾಗಿ ಅವರು ಬರೆದ ಪ್ರತಿಯೊಂದೂ ಲೇಖನ, ಸಂಪಾದಕೀಯ ಎಲ್ಲವೂ ವಿಶಿಷ್ಟವಾಗಿವೆ. ಇಂದಿನ ಬರಹಗಾರರಿಗೆ ಓದಿನ ಕೊರತೆಯಿದೆ ಎನ್ನುವ ಅವರ ಹೇಳಿಕೆಯಲ್ಲಿ ಪತ್ರಿಕಾಮಾಧ್ಯಮ ಪರಸ್ಪರ ಪೈಪೋಟಿಯಲ್ಲಿ, ಬೇಡದ ವಿಷಯಗಳನ್ನು ಬಣ್ಣಗಳ ಮೆರುಗುಹಚ್ಚಿ ಬಡಿಸುತ್ತಿದೆ ಎಂಬ ವಿಷಾದವಿದೆ. ಪತ್ರಿಕಾರಂಗದ ಹೊಸಶಕೆಗಾರನೆನ್ನಿಸಿದ ಖುಷ್ವಂತ್ ಸಿಂಗ್ ಅವರ ಬರಹಗಳ ಹಿಂದೆ ಸತತ ಓಡಾಟದ ಪರಿಶ್ರಮವಿದೆ, ನಿರಂತರ ಓದಿನ ಜಾಗತಿಕ ಮಾಹಿತಿ ಭಂಡಾರವಿದೆ. ಓದುಗರ ಹೃದಯದ ಭಾವಗಳಿಗೆ ಅವರು ಬರಹಗಳ ರೂಪಕೊಟ್ಟಿದ್ದಾರೆ; ಆ ಬರಹಗಳಲ್ಲಿ ಜನ ತಮ್ಮ ಪ್ರತಿಬಿಂಬಗಳನ್ನು ಕಂಡು, ಅವುಗಳನ್ನು ಇಷ್ಟಪಟ್ಟಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು, ಅದರಲ್ಲೂ ಪತ್ರಕರ್ತರು ತಮ್ಮ ವೃತ್ತಿಬದುಕು-ಪ್ರವೃತ್ತಿಬದುಕು ಮತ್ತು ಖಾಸಗೀ ಬದುಕಿನಲ್ಲಿ ಶುದ್ಧ ಚಾರಿತ್ರ್ಯ ಉಳ್ಳವರಾಗಿರಬೇಕು-ಆಡಿದ್ದನ್ನೇ ತಾವೂ ಮಾಡಿತೋರಿಸುವವರಾಗಿರಬೇಕು ಎಂಬುದು ಖುಷ್ವಂತ್ ಸಿಂಗರ ಬಯಕೆ. ಆದರೆ ಎಷ್ಟು ಪತ್ರಕರ್ತರು ಇಂದು ಹಾಗಿದ್ದಾರೆ? ಪ್ರಶ್ನೆ ಹಾಗೇ ಉಳಿಯುತ್ತದೆ! 

ಬಹುಕಾಲದಿಂದ ನನಗೊಂದು ಚಾಳಿಯಿದೆ: ಅದೆಂದರೆ ಮನೆಯಲ್ಲಿ, ಕಚೇರಿಯಲ್ಲಿ, ಕಣ್ಣೆದುರಲ್ಲಿ ಚಲನೆಯುಳ್ಳ, ಚಾಲನೆಯುಳ್ಳ ವಸ್ತುಗಳನ್ನು ನೋಡಬಯಸುವುದು; ಆ ದೃಷ್ಟಿಯಿಂದ ಹಳೆಯ ಗಡಿಯಾರಗಳಲ್ಲಿದ್ದಂತಹ ಓಲಾಡುವ ಪೆಂಡೂಲಂ ನನಗೆ ವಿಶಿಷ್ಟವೆನಿಸುತ್ತದೆ. ಇಂದಿನ ಇಲೆಕ್ಟ್ರಾನಿಕ್ ಕ್ಲಾಕ್ ಗಳಲ್ಲಿರುವ ಸೇಕಂದು ಮುಳ್ಳಿನ ಹಾರುವ ತಿರುಗಾಟ ಇಷ್ಟವಾಗುತ್ತದೆ. ಸದಾ ಉರಿಯುತ್ತಿರುವ ಎಣ್ಣೆ-ಬತ್ತಿಯ ದೀಪ ಇಷ್ಟವಾಗುತ್ತದೆ. ದಿನದ ಯಾವುದೇ ಘಳಿಗೆಯಲ್ಲೂ ಸೂರ್ಯನ ಬೆಳಕು ಇಷ್ಟವಾಗುತ್ತದೆ. ನಿಶೆಯಲ್ಲಿ ಚಂದ್ರಮನ ಬೆಳದಿಂಗಳು ಇಷ್ಟವಾಗುತ್ತದೆ. ಮಂದಮಾರುತಕ್ಕೆ ಮೈಕುಲುಕುವ ಗಿಡಮರಗಳು ಇಷ್ಟವಾಗುತ್ತವೆ. ಸದಾ ಲವಲವಿಕೆಯಿಂದ ಹಾರುವ-ಕೂಗುವ ಹಕ್ಕಿಪಕ್ಷಿಗಳು ಇಷ್ಟವಾಗುತ್ತವೆ. ಆಲಸ್ಯದ ನಾಯಿ, ಮಲಗೇ ಇರುವ ಬೆಕ್ಕು, ದಟ್ಟಗೆ ಕವಿದು ಗಂಟೆಗಟ್ಟಲೆ ಹಾಗೇ ನಿಂತಿರುವ ಮೋಡಗಳು, ಬೊಂಬೆಯಂತೇ ಅಲ್ಲಾಡದೇ ನಿಂತ ಗಿಡಮರಗಳು ಇಂಥವೆಲ್ಲಾ ನನಗೆ ಇಷ್ಟವಲ್ಲ; ನಿಂತುಹೋದ ಗಡಿಯಾರ, ಆರಿಹೋದ ಎಣ್ಣೆಬತ್ತಿಯ ದೀಪ ಮೊದಲಾದ ಕೆಲವನ್ನು ನಾನು ನೋಡಲು ಬಯಸುವುದಿಲ್ಲ. ವ್ಯಕ್ತಿ ಆಕ್ಟಿವ್ ಆಗಿರಬೇಕೆಂದರೆ ತನ್ನ ಸುತ್ತಲಿನ ಜಾಗದಲ್ಲಿ ಅಂತಹ ಆಕ್ಟಿವ್ ನೆಸ್ ಅನುಭವಿಸಬೇಕು. ಸುತ್ತಲಿನ ವಸ್ತು, ವಿಷಯಗಳಲ್ಲಿ ಜೀವಂತಿಕೆಯನ್ನು ಕಾಣಬೇಕು. ಬಿದ್ದುಕೊಂಡಿರುವ ಕಲ್ಲಿನಲ್ಲೂ ಮೂರ್ತಿಯರಳಬಲ್ಲ ಆಲೋಚನೆ ವ್ಯಕ್ತಿಯಲ್ಲಿ ಮೂಡಬೇಕು. ಅಂತಹ ಚಲನಶೀಲತೆಯನ್ನು ವ್ಯಕ್ತಿ ತನ್ನೊಳಗೆ ಆಹ್ವಾನಿಸಿ ತನ್ನ ಜೀವಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ವ್ಯಕ್ತಿಗೆ ಬದುಕಿನ ಬಹುಮುಖಗಳ, ಮಜಲುಗಳ ಅನುಭವ ಪ್ರಾಪ್ತವಾಗುತ್ತಾ ಹೋಗುತ್ತದೆ. ನೀರವದ ನಕಾರಾತ್ಮಕತೆಯಲ್ಲೂ ಸಕಾರಾತ್ಮಕವಾಗಿ ಚಿಂತಿಸುವ ಮನಸ್ಸು ಸಿದ್ಧಗೊಳ್ಳುತ್ತದೆ.  

ಪತ್ರಕರ್ತನೊಬ್ಬ ಅಧ್ಯಯನಶೀಲನಾದರೆ ಸಮಾಜಕ್ಕೂ, ಸರಕಾರಕ್ಕೂ, ಅಷ್ಟೇ ಏಕೆ ವಿದ್ಯೆಕಲಿಸುವ ಉಪಾಧ್ಯಾಯರುಗಳಿಗೂ ಆತ ಅಧ್ಯಾಪಕನಾಗಬಹುದು! ತನ್ನ ಓದಿನಾಳದಿಂದ ಹಲವು ಅನುಭವದ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು  ಬೊಗಸೆಗಟ್ಟಲೆ ಹೆಕ್ಕಿ ಹೆಕ್ಕಿ ಸಮಾಜಕ್ಕೆ ಬಡಿಸಬಹುದು. ಸಮಾಜದ ಸಕಲ ಕ್ಷೇತ್ರಗಳ, ಸಕಲ ವರ್ಗಗಳ ಜನರಿಗೆ ’ಇದಮಿತ್ಥಂ’[ಇದು ಹೀಗೇ ಸರಿ] ಎಂಬುದನ್ನು ಮನದಟ್ಟುಮಾಡಿಸಬಹುದು. ಅಧ್ಯಯನದ ಕೊರತೆಯಿರುವ ಜನಗಳೂ ಲೇಖಕರಾಗಿರುವ ಇಂದಿನ ದಿನಗಳಲ್ಲಿ ಯಾವ ಮೌಲ್ಯದ ಬರಹಗಳನ್ನು ನಿರೀಕ್ಷಿಸಲು ಸಾಧ್ಯ?  ಬರಹವೆಂದರೆ ನಾಲ್ಕಾರು ಪದಗಳ ಸರ್ಕಸ್ಸಲ್ಲ, ಬರವಹೆಂದರೆ ಕೇವಲ ಒಮ್ಮುಖವಾಗಿ ಹೊಮ್ಮುವ ಭಾವಗಳ ಮಿಡಿತವಲ್ಲ, ಬರವೆಂದರೆ ಕೇವಲ ಯಾವುದೋ ಒಂದು ಜನಾಂಗದ ಖಾಸಗೀ ಧೋರಣೆಗಳ ಅಭಿವ್ಯಕ್ತಿಯಲ್ಲ, ಬರಹವೆಂದರೆ ಸಿನಿಮಾ-ಚಿತ್ರಗಳ-ಗಾಸಿಪ್ ಗಳ ಕಲಸುಮೇಲೋಗರವಲ್ಲ, ಬರಹವೆಂದರೆ ಬರಹಗಾರನ ಸ್ವಂತದ ಅಭಿಪ್ರಾಯ ಕೂಡ ಅಲ್ಲ. ಹಾಗಾದರೆ ಬರಹವೆಂದರೆ ಏನು ಎಂದರೆ ಬರಹವೆನ್ನುವುದು ಬರಹಗಾರನ ವಿಶ್ವತೋಮುಖತ್ವದ ಅಭಿವ್ಯಕ್ತಿ; ಬರೆಯುವ ಬರಹಗಳು ಸರ್ವಸಮ್ಮತವಾಗಬೇಕು, ಬರೆಯುವ ಬರಹಗಳು ಸಮಾಜಕ್ಕೆ ತಿಳುವಳಿಕೆ ನೀಡುವಂತಿರಬೇಕು, ಬರೆಯುವ ಬರಹಗಳು  ರಂಜನೆಯ ಜೊತೆಜೊತೆಗೆ ಉದಾತ್ತ ಜೀವನಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಹೀಗಾದಾಗ ಮಾತ್ರ ಬರಹಗಾರನ ಬರಹಗಳಲ್ಲಿ ಜೀವಂತಿಕೆ ಮೇಳೈಸಿರುತ್ತದೆ. ಅಂಥವರ ಬರಹಗಳ ಮಾನಸ ಸರೋವರಗಳಲ್ಲಿ ಖುಷ್ವಂತ್ ಸಿಂಗ್ ರಂತಹ ಉತ್ತಮ ಬರಹಗಾರರೆಲ್ಲರೂ ಈಜು ಹೊಡೆಯುತ್ತಿರುತ್ತಾರೆ! ಬರಹವೆಂಬುದು ಸಾರಸ್ವತ ಪೀಠದಿಂದ ಹೊಮ್ಮುವ ಅಭಿಪ್ರಾಯವಾದರೆ ಅಂತಹ ಘನತರದ ಪೀಠದಲ್ಲಿ ಕುಳಿತು ಬರೆಯಲು ತಾನು ಸಮರ್ಥನೇ ಎಂಬುದನ್ನು ಬರಹಗಾರ ತನ್ನಲ್ಲೇ ಸದಾ ಕೇಳಿಕೊಳ್ಳುತ್ತಿರಬೇಕು; ಅನರ್ಹನೆಂದು ಅಂತರಾತ್ಮ ಘೋಷಿಸಿದ ಕ್ಷಣದಿಂದ ಆ ಪೀಠವನ್ನು ತ್ಯಜಿಸಿ ಬರೆಯುವುದನ್ನು ನಿಲ್ಲಿಸಿಬಿಡಬೇಕು.