ಮಹಾರುದ್ರ ಹನುಮನ ಹಿನ್ನೆಲೆಯರಿಯುವತ್ತ ಸರಿದ ಮನ
ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂವರಿಷ್ಠಮ್|
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ||
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ||
ಹನುಮನ ಹುಟ್ಟಿನ ಬಗೆಗೆ ಅರಿಯಲು ಮನಸ್ಸು ಬಹಳಕಾಲದಿಂದ ತವಕಿಸುತ್ತಿತ್ತು. ಬೆಂಗಳೂರಿನ ಕೆಲವು ಜನ ಮಳೆಗಾಲದಲ್ಲಿ ಹನುಮಜ್ಜಯಂತಿಯನ್ನು ಆಚರಿಸುವುದುದನ್ನು ಕಂಡಿದ್ದೆ; ಅದೇ ರೀತಿ ನಮ್ಮಲ್ಲಿನ ಜನ ಚೈತ್ರ ಶುದ್ಧ ಪೌರ್ಣಮಿಯ ದಿನ ಹನುಮಜ್ಜಯಂತಿಯ ವ್ರತ ನಡೆಸುತ್ತಾರೆ. ಹನುಮ ಹೇಗೆ ಹುಟ್ಟಿದ? ಆತ ಯಾರು? ಆತನಿಗೂ ರಾಮನಿಗೂ ಯಾವ ತೆರನಾದ ಸಂಬಂಧ ? ಎಂಬುದರ ಬಗ್ಗೆ ಬಹಳವಾಗಿ ಅಲೋಚಿಸಿದವ ನಾನು. ರಾಮ ಭಕ್ತ ಹನುಮಾನ್ ಎಂಬುದು ಸಾಧಾರಣವಾಗಿ ಎಲ್ಲರಿಗೂ ತಿಳಿದ ವಿಷಯ, ಆದರೆ ಆ ರಾಮಭಕ್ತಿಯ ಹಿಂದಿನ ನಿಜಸಂಗತಿಯನ್ನು ಆಮೂಲಾಗ್ರ ಅರಿತುಕೊಳ್ಳುವ ಬಯಕೆಗೆ ಸಿಗಬಹುದಾದ ಎಲ್ಲಾ ಹೊತ್ತಗೆಗಳಲ್ಲೂ ಹುಡುಕಿದ್ದೇನೆ. ಹನುಮ ಮಹಾರುದ್ರ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ ಮತ್ತು ಆತನ ಹುಟ್ಟು ಚೈತ್ರ ಶುದ್ಧ ಪೌರ್ಣಮಿ ಮಂಗಳವಾರ ನಡೆಯಿತು ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ!
ಜಗನ್ನಿಯಾಮಕ ಶಕ್ತಿ ಹರಿಹರಬ್ರಹ್ಮರೆಂಬ ತ್ರಿಮೂರ್ತಿರೂಪದಲ್ಲಿ ಕೆಲಸಮಾಡುತ್ತದೆ ಎಂಬುದನ್ನು ನಾವು ಕೇಳಿದ್ದೇವೆ. ಇಂತಹ ತ್ರಿಮೂರ್ತಿಗಳ ಮೂಲ ಪರಬ್ರಹ್ಮನೇ ಆಗಿದ್ದಾನೆ ಅಂದರೆ ಇಲ್ಲಿ ಹರಿ ಬೇರೆ ಹರ ಬೇರೆ ಅಥವಾ ಬ್ರಹ್ಮ ಬೇರೆ ಎಂಬುದಿಲ್ಲ. ಈ ಮೂವರಲ್ಲಿ ಹರಿ ತನ್ನ ದಶಾವತಾರಗಳ ಮೂಲಕ ಭೂಲೋಕದಲ್ಲಿ ಜನಿಸಿ ದುಷ್ಟ ಶಿಕ್ಷೆ ಮತ್ತು ಶಿಷ್ಟ ರಕ್ಷೆ ಕೈಗೊಂಡವನಾದರೆ ಹರ ತನ್ನ ಹಲವು ಅವತಾರಗಳಿಂದ ಹರಿಗೆ ಸಹಾಯಕನಾಗಿ ನಿಂತವನು. ಈ ಇಬ್ಬರ ಕೆಲಸಕ್ಕೆ ಅನುವಾಗುವ ನಿಸರ್ಗವನ್ನು ಸೃಷ್ಟಿಸುವುದು ಮತ್ತು ವರಗಳನ್ನಿತ್ತು ನಡೆಸುವುದು ಬ್ರಹ್ಮನ ಕೆಲಸವಾಗಿದೆ. ಹೀಗಿರುವಾಗ ಭಗವಾನ್ ಶಂಕರ ಮಡದಿ ಪಾರ್ವತಿಯೊಡನೆ ಕೈಲಾಸ ಶಿಖರದಲ್ಲಿ ವಿರಾಜಮಾನನಾಗಿದ್ದ ಒಂದು ದಿನ ಧ್ಯಾನಮಗ್ನನಾಗಿ ಯೋಗಸಮಾಧಿಗೆ ಜಾರಿದ್ದ. "ರಾಮ ರಾಮ" ಎನ್ನುತ್ತಾ ಎಚ್ಚೆತ್ತ ಶಂಕರ ತನ್ನ ಕಡೆಗೇ ಅಪೂರ್ವ ನೋಟ ಬೀರಿದ್ದನ್ನು ಶಿವೆ ಕಂಡಿದ್ದಾಳೆ. ಮನದೊಳಗುದ್ಭವಿಸಿದ ಭಾವನೆಯನ್ನು ಶಿವೆಗೆ ಅರುಹಿದ ಶಂಕರ ಇವತ್ತು ತನ್ನ ಮನದಲ್ಲಿ ಶುಭಸಂಕಲ್ಪವೊಂದು ಒಡಮೂಡುತ್ತಿದೆ, ಯಾರನ್ನು ಕುರಿತು ತಾನು ತಪಸ್ಸು ಮಾಡುತ್ತಿರುವೆನೋ ಆ ತನ್ನ ಪ್ರಭುವು ಅವತಾರವೆತ್ತಿ ಭೂಲೋಕಕ್ಕೆ ಬರುತ್ತಿದ್ದಾನೆ. ಎಲ್ಲಾ ದೇವತೆಗಳೂ ಅವನ ಜೊತೆಗೇ ನಾನಾ ರೂಪದಿಂದಿದ್ದು ಸೇವೆ ಮಾಡಲು ಇಚ್ಛಿಸುತ್ತಿದ್ದಾರೆ, ಅದರಲ್ಲಿ ತಾನೂ ಬಬ್ಬನಾಗಿದ್ದೇನೆ ಎಂದಿದ್ದಾನೆ.
ಶಿವನ ಮಾತುಗಳನ್ನು ಕೇಳಿ ಚಣಕಾಲ ದಂಗಾದ ಶಿವೆ, ಹಾಗೆ ಅವತಾರಿಯಾಗಿ ನಡೆದರೆ ತನಗೆ ಇಷ್ಟದೇವನಾದ ಶಿವನನ್ನು ನಿತ್ಯವೂ ಜೊತೆಗಿದ್ದು ಪೂಜಿಸಲು ಸಾಧ್ಯವಿಲ್ಲವಲ್ಲಾ, ಅದಕ್ಕೇನಾದರೂ ಪರಿಹಾರವಿದೆಯೇ? ಎಂದಿದ್ದಕ್ಕೆ, ತಾನು ಇನ್ನೊಂದುರೂಪದಲ್ಲಿ ಅವತಾರವೆತ್ತಿದರೂ ಮೂಲರೂಪದಲ್ಲಿ ಸದಾ ಕೈಲಾಸದಲ್ಲೇ ಇರುತ್ತೇನೆ. ಅದೂ ಅಲ್ಲದೇ ರಾವಣನೆಂಬ ರಕ್ಕಸ ಆತನ ಹತ್ತು ತಲೆಗಳನ್ನೂ ಅರ್ಪಿಸಿ ಈ ಶಿವನ ಹನ್ನೊಂದು ರೂಪವನ್ನು ಪೂಜಿಸಿದರೂ ಇನ್ನೊಂದನ್ನು ಅವಹೇಳನ ಮಾಡಿದ್ದಾನೆ. ಈಗ ಆ ರೂಪಮೂಲದಿಂದಲೇ ಬೇರೇ ಅವತಾರವೆತ್ತಿ ರಾವಣನನ್ನು ವಿರೋಧಿಸುತ್ತೇನೆ ಎಂದಿದ್ದಾನೆ ಪರಶಿವ.
ಇದು ಒಂದೆಡೆ ನಡೆದ ಮಾತುಕತೆಯಾದರೆ, ಇಂದ್ರನ ಅಮರಾವತಿಯಲ್ಲಿ ಪುಂಜಿಕಸ್ಥಲಾ ಎಂಬ ಅಪ್ಸರೆಯೊಬ್ಬಳು ಇರುತ್ತಿದ್ದು ಒಂದು ದಿನ ಅವಳಿಂದ ಏನೋ ಅಪರಾಧವೊಂದು ಘಟಿಸುತ್ತದೆ. ಮಾಡಿದ ತಪ್ಪಿಗೆ ಋಷಿಯೊಬ್ಬರಿಂದ ಶಾಪಗ್ರಸ್ತಳಾದ ಪುಂಜಿಕಸ್ಥಲಾ ವಾನರಳಾಗಿ ಭೂಮಿಯಲ್ಲಿ ಜನಿಸಬೇಕಾಗುತ್ತದೆ! ಋಷಿಯನ್ನು ಪರಿಪರಿಯಾಗಿ ಪ್ರಾರ್ಥಿಸಿದಮೇಲೆ ಶಾಪಗ್ರಸ್ತಳಾದ ಆಕೆ ಇಷ್ಟಬಂದ ರೂಪವನ್ನು ಧರಿಸಲು ಯೋಗ್ಯಳು ಎಂಬ ವರವನ್ನೂ ಪಡೆದುಕೊಳ್ಳುತ್ತಾಳೆ. ಕ್ಷಣಾರ್ಧದಲ್ಲಿ ಭೂಮಿಯಲ್ಲಿ ವಾನರಳಾಗಿ ಭೂಮಿಗಿಳಿದ ಆಕೆಯನ್ನು ವಾನರ ರಾಜ ಕೇಸರಿಯು ವರಿಸುತ್ತಾನೆ. ಕೇಸರಿಗೆ ’ಅಂಜನಾದೇವಿ’ ಎಂದು ವಾನರಳಾಗಿ ಬದಲಾದ ಪುಂಜಿಕಸ್ಥಲೆ ಎಂದರೆ ಬಹಳ ಪ್ರೀತಿಯಿತ್ತು. ಅವಳು ಸಹಜವಾಗಿ ಸುಂದರಿಯಾಗಿದ್ದಳು.
ಕೆಲವೊಮ್ಮೆ ಅವರಿಬ್ಬರೂ ಮಾನವ ರೂಪ ಧರಿಸಿ ತಮ್ಮ ರಾಜ್ಯದ ಸುಮೇರು ಪರ್ವತದಮೇಲೆ ವಿಹರಿಸುತ್ತಿದ್ದರು. ಒಮ್ಮೆ ಹಾಗೆ ವಿಹರಿಸುತ್ತಿದ್ದಾಗ ಮಂದವಾಯು ಬೀಸುತ್ತಿತ್ತು. ಬೀಸುತ್ತಿದ್ದ ಆ ಮಂದಗಾಳಿಯಲ್ಲೇ ಅಂಜನಾದೇವಿಯ ಸೀರೆಯ ಸೆರಗು ಹಾರಿ ಮೇಲಕ್ಕೆದ್ದಿತು. ಅವಳಿಗೆ ಯಾರೋ ತನ್ನ ದೇಹವನ್ನು ಸ್ಪರ್ಶಿಸುತ್ತಿರುವ ಅನುಭವವಾಯ್ತು. ಅವಳು ತನ್ನ ಸೀರೆಯನ್ನು ಸರಿಪಡಿಸಿಕೊಂಡು ಸ್ವಲ್ಪ ದೂರ ಸರಿದು ನಿಂತುಕೊಂಡು " ನನ್ನೆದುರೇ ನನ್ನ ಪತಿದೇವನಿರುವಾಗ ನನ್ನ ಪಾತಿವ್ರತ್ಯವನ್ನು ಭಂಗಪಡಿಸಲು ಪ್ರಯತ್ನಿಸಿದ ದುಷ್ಟ ಯಾರು ? ಈಗಲೇ ನಾನು ಶಾಪಕೊಟ್ಟು ಆತನನ್ನು ಭಸ್ಮ ಮಾಡುತ್ತೇನೆ " ಎಂದು ಕೋಪಾವಿಷ್ಟಳಾದಳು. " ದೇವೀ, ನಿನ್ನ ವ್ರತವನ್ನು ನಾನು ಕೆಡಿಸಲಿಲ್ಲ. ನಿನಗೆ ನನ್ನಷ್ಟೇ ತೇಜಸ್ವಿಯೂ ಬಲಶಾಲಿಯೂ ಆದ ಮತ್ತು ಬುದ್ಧಿಯಲ್ಲಿ ಅದ್ವಿತೀಯನಾದ ಮಗನು ಜನಿಸುತ್ತಾನೆ. ನಾನು ಅವನನ್ನು ರಕ್ಷಿಸುತ್ತೇನೆ" ಎಂದು ವಾಯುದೇವನೇ ಆಕೆಯ ಕಿವಿಯಲ್ಲಿ ಉಸುರಿದಂತೆನಿಸಿತು. ಅನಂತರ ಅಂಜನಾ ಮತ್ತು ಕೇಸರಿ ತಮ್ಮ ಸ್ವಸ್ಥಾನಕ್ಕೆ ಹೊರಟುಬಂದರು. ಭಗವಾನ್ ಶಂಕರನು ಅಂಶರೂಪದಿಂದ ಅಂಜನಾದೇವಿಯ ಕಿವಿಯಮೂಲಕ ಅವಳ ಗರ್ಭದಲ್ಲಿ ಪ್ರವೇಶಿಸಿದನು.
ದಿನಗಳು ಕಳೆದು, ಚೈತ್ರ ಶುಕ್ಲ ಪೌರ್ಣಮಿ ಮಂಗಳವಾರ ಅಂಜನಾದೇವಿ ವಾನರಮಗುವಿಗೆ ಜನ್ಮವಿತ್ತಳು. ಅಂಜನಾ ಮತ್ತು ಕೇಸರಿ ಇದರಿಂದ ಬಹಳ ಸಂತಸಪಟ್ಟರು. ಶುಕ್ಲಪಕ್ಷದ ಚಂದ್ರನಂತೇ ಮಗು ಬೆಳೆಯುತ್ತಲೇ ನಡೆಯಿತು. ಸಾಮಾನ್ಯವಾಗಿ ಆ ಬಾಲಕನನ್ನು ಅಂಜನಾದೇವಿ ಎದೆಗಪ್ಪಿಕೊಂಡೇ ಹೊರಗೆ ಹೋಗಿಬರುತ್ತಿದ್ದಳು. ಕೇಸರಿ ಬೆನ್ನಮೇಲೆ ಕೂರಿಸಿಕೊಂಡು ಆಟವಾಡುವುದಿತ್ತು. ಬಾಲಕನೊಬ್ಬನನ್ನೇ ಬಿಟ್ಟು ಎಲ್ಲಿಗೂ ಹೋದದ್ದಿಲ್ಲ. ಒಂದು ದಿನ ಮಾತ್ರ ಅಂಜನಾದೇವಿ ಹೂವು-ಹಣ್ಣು ತರಲೆಂದು ಹೊರಗೆ ಹೋಗುವ ಮುನ್ನವೇ ಯಾವುದೋ ಕೆಲಸದ ನಿಮಿತ್ತ ಕೇಸರಿ ಹೊರಗೆ ಹೋಗಿದ್ದ. ಆ ಸಮಯದಲ್ಲಿ ಬಾಲಕ ಒಬ್ಬನೇ ಮನೆಯಲ್ಲುಳಿದ. ಹೊಟ್ಟೆ ಬಹಳೇ ಹಸಿಯುತ್ತಿತ್ತು. ಪ್ರಾತಃಕಾಲದ ಸಮಯವಾದ್ದರಿಂದ ಸೂರ್ಯ ಪೂರ್ವದಲ್ಲಿ ಮೇಲೇರಿ ಬರುತ್ತಿದ್ದ. ಬಾಲಕನಿಗೆ ಆ ಸೂರ್ಯ ಹಣ್ಣಿನಂತೇ ಕಾಣಿಸಿದ. ತಿನ್ನುವುದಕ್ಕೂ ಆಟಕ್ಕೂ ಎರಡಕ್ಕೂ ಆಯ್ತು ಎಂದುಕೊಂಡ ಬಾಲಕ ಸೂರ್ಯನಲ್ಲಿಗೆ ಜಿಗಿದ! ವಾಯುಪುತ್ರನಾಗಿ ಜನಿಸಿದ ಶಂಕರನ ಶಕ್ತಿಗೆ ಇದೆಲ್ಲಾ ಹೆಚ್ಚೇ ?
ಆಕಾಶದಲ್ಲಿ ಹಾರುತ್ತಿರುವ ಬಾಲಕನನ್ನು ನೋಡಿ ದೇವತೆಗಳು, ಗಂಧರ್ವರು, ಕಿನ್ನರ-ಕಿಂಪುರುಷರಾದಿಯಾಗಿ ಎಲ್ಲರೂ ವಿಸ್ಮಯಗೊಂಡರು. ಸಂದೇಹಗೊಂಡ ವಾಯು ಮಗ ಸೂರ್ಯನ ಶಾಖದಿಂದ ಸುಟ್ಟುಹೋಗಬಹುದೆಂದು ಹಿಮಾಲಯ ಮತ್ತು ಮಲಯಾಚಲಗಳಿಂದ ತಂಪನ್ನು ಒಗ್ಗೂಡಿಸಿಕೊಂಡು ಬಾಲಕನ ಹಿಂದೆ ನಡೆದ. ಆಶ್ಚರ್ಯಚಕಿತನಾಗಿ ದಿಟ್ಟಿಸಿದ ಸೂರ್ಯನಿಗೆ ಬಾಲಕನ ನಿಜರೂಪ ಗೋಚರಿಸದೇ ಇರಲಿಲ್ಲ! ತನಗೆ ಪಿತೃತುಲ್ಯನಾದ ವಾಯುದೇವನಿಂದಲೇ ಈತನ ಜನನವಾಗಿದೆಯಾದ್ದರಿಂದ ಸ್ವತಃ ವಾಯುವೇ ಬಾಲಕನ ರಕ್ಷಣೆಗೆ ಬರುತ್ತಿದ್ದಾನೆ ಎಂಬುದೂ ತಿಳಿಯಿತು. ಸೂರ್ಯ ತನ್ನ ತೀಕ್ಷ್ಣ ಕಿರಣಗಳನ್ನು ತಂಪಾಗಿಸಿದ. ಆ ತಂಪು ಯಾವರೀತಿ ಇತ್ತೆಂದರೆ ತನ್ನ ಕೋಮಲ ಕರಗಳಿಂದ ತಮ್ಮನಾದ ಆ ಬಾಲಕನನ್ನು ಮುದ್ದಿಸುವಂತಿತ್ತು! ಜಗತ್ತಿಗೇ ತಂದೆಯಾದ ಶಂಕರನು ತನ್ನ ಹತ್ತಿರಕ್ಕೆ ಬರುತ್ತಿರುವುದನ್ನು ಕಂಡ ಸೂರ್ಯ ಅವನನ್ನು ಸ್ವಾಗತಿಸಿದ. ಬಾಲಕ ಸೂರ್ಯನ ರಥದ ಹತ್ತಿರ ಬಂದು ಆಡತೊಡಗಿದ.
ಗ್ರಹಣದ ದಿನವಾದ್ದರಿಂದ ಛಾಯಾಗ್ರಹವಾದ ರಾಹುವು ಸೂರ್ಯನನ್ನು ನುಂಗಲುಪಕ್ರಮಿಸಿದ. ಅದು ದೇವೇಂದ್ರನ ಅಪ್ಪಣೆಕೂಡ. ಹಾಗೆ ಸಾಗಿ ಬರುವಾಗ ಸೂರ್ಯರಥದಮೇಲೆ ವಾನರ ಬಾಲಕನೊಬ್ಬ ಕುಳಿತಿದ್ದುದನ್ನು ರಾಹು ದೂರದಿಂದಲೇ ಕಂಡ. ಆದರೂ ಛೇ ಇದಕ್ಕೆಲ್ಲಾ ಗಮನೆ ಕೊಡಲೇ ಎನ್ನುತ್ತಾ ಸೂರ್ಯನತ್ತ ನಡೆದಾಗ ಬಾಲಕನ ಬಲಿಷ್ಠ ಕೈಗೆ ಸಿಕ್ಕಿ ತಪ್ಪಿಸಿಕೊಳ್ಳಲು ಹರಸಾಹಸ ಪಡಬೇಕಾಯ್ತು! ನಡೆದ ಸಂಗತಿಯನ್ನು ಇಂದ್ರನಿಗೆ ತಿಳಿಸಿದ ರಾಹುವಿಗೆ ಮತ್ತೊಮ್ಮೆ ಪ್ರಯತ್ನಿಸುವಂತೇ ಇಂದ್ರ ತಾಕೀತುಮಾಡಿದ. ಮರಳಿ ಬಂದ ರಾಹುವು ಸೂರ್ಯನನ್ನು ಹಿಡಿಯಲು ಮುಂದಾದಾಗ, ತಿನ್ನಲು ತಕ್ಕವಸ್ತುವೆಂದು ರಾಹುವನ್ನೇ ಹಿಡಿಯಲು ಬಾಲಕ ಮುಂದಾದ! ಭಯಭೀತನಾಗಿ ಕೂಗಿ ಕರೆದ ರಾಹುವಿನ ದನಿಗೆ, ಇಂದ್ರ ಓಡೋಡಿ ಅಲ್ಲಿಗೆ ಬಂದು ಸನ್ನಿವೇಶ ಕಂಡು ತನ್ನ ವಜ್ರಾಯುಧ ಬೀಸಿದ. ವಜ್ರಾಯುಧ ಬಾಲಕನ ಗದ್ದ[ಹನು]ವನ್ನು ಹರಿಯಿತು. ಗಾಯಾಳುವಾದ ಬಾಲಕ ದೊಪ್ಪನೆ ಕೆಳಕ್ಕೆ ಪರ್ವತದ ತೊಪ್ಪಲಲ್ಲಿ ಬಿದ್ದ.
ಬಿದ್ದ ಮಗನ ನೋವನ್ನು ಅರಿತ ವಾಯುವು ಆತನನ್ನು ಎತ್ತಿಕೊಂಡು ಗುಹೆಯೊಳಕ್ಕೆ ನಡೆದ ಮತ್ತು ಎಲ್ಲಾ ಲೋಕಗಳಲ್ಲೂ ತನ್ನ ಸಂಚಾರವನ್ನೇ ನಿಲ್ಲಿಸಿಬಿಟ್ಟ. ಎಲ್ಲರಿಗೂ ಉಸಿರುಗಟ್ಟಿ ಎಲ್ಲೆಲ್ಲೂ ಎಲ್ಲರೂ ಮರಗಟ್ಟಿದಂತಾಗಿ ಹೋದರು. ಇಂದ್ರನಮೇಲಿನ ಕೋಪದಿಂದ ವಾಯು ತನ್ನ ಸಂಚಾರ ನಿಲ್ಲಿಸಿದ್ದರಿಂದ ದೇವತೆಗಳೆಲ್ಲಾ ಹೆದರಿ ಬ್ರಹ್ಮನಲ್ಲಿಗೆ ತೆರಳಿದರು. ಬ್ರಹ್ಮ ಬಾಲಕನಿರುವ ಗುಹೆಯೊಳಕ್ಕೆ ಬಂದು ಬಾಲಕನ ಗದ್ದವನ್ನು ಸ್ಪರ್ಶಿಸಿ ಚೇತನವನ್ನು ನೀಡಿದ. ಬಾಲಕ ಪ್ರಸನ್ನನಾದ. ಬಾಲಕ ಯಾರೆಂಬ ಅರಿವಿದ್ದ ಬ್ರಹ್ಮ ಎಲ್ಲಾ ದೇವತೆಗಳಿಗೂ ವರನೀಡುವಂತೇ ತಿಳಿಸಿದ. ಇಂದ್ರ ತನ್ನ ವಜ್ರಾಯುಧದಿಂದ ಇನ್ನೆಂದೂ ಬಾಲಕನಿಗೆ ಘಾಸಿಯಾಗದೆಂದೂ ಮತ್ತು ಹನು ಮುರಿದಿದ್ದರಿಂದ ’ಹನುಮಂತ’ ಎಂಬ ಹೆಸರಿನಿಂದ ಖ್ಯಾತನಾಗಲೆಂದೂ ಹರಸಿದ. ಸೂರ್ಯ ತನ್ನ ತೇಜಾಂಶದಲ್ಲಿ ನೂರನೇ ಒಂದುಭಾಗವನ್ನು ಬಾಲಕನಿಗೆ ನೀಡಿದ್ದೂ ಅಲ್ಲದೇ ರೂಪ ಬದಲಾಯಿಸಿಕೊಳ್ಳುವ ತಾಕತ್ತನ್ನೂ ಮತ್ತು ತನ್ನಿಂದ ಸಕಲ ವಿದ್ಯಾ ಪಾರಂಗತನಾಗುವ ಅವಕಾಶವನ್ನೂ ವರವಾಗಿ ನೀಡಿದ. ವರುಣ ತನ್ನ ಪಾಶ ಮತ್ತು ಜಲದಿಂದ ನಿರ್ಭಯನಾಗೆಂದು ವರವಿತ್ತರೆ, ವಿಶ್ವಕರ್ಮ ತಾನು ನಿರ್ಮಿಸಿದ ಶಸ್ತ್ರಾಸ್ತ್ರಗಳನ್ನಿತ್ತು ಅವಧ್ಯನಾಗಲೆಂದು ವರವಿತ್ತ. ಕುಬೇರಾದಿ ದೇವತೆಗಳು ತಮತಮಗೆ ತೋಚಿದ ವರಗಳನ್ನು ನೀಡಿದರೆ, ಬ್ರಹ್ಮನು ಬಾಲಕ ಬ್ರಹ್ಮಜ್ಞಾನಿಯಾಗಿ ಚಿರಾಯುವಾಗಲೆಂದೂ ಬ್ರಹ್ಮಾಸ್ತ್ರ ಮತ್ತು ಬ್ರಹ್ಮಪಾಶಗಳು ಬಾಲಕನನ್ನು ಎಂದೂ ಬಾಧಿಸದಂತೇ ನಿರ್ಮುಕ್ತಗೊಳಿಸಿದ್ದಾಗಿಯೂ ತಿಳಿಸಿದ. ಹೊರಟುನಿಂತ ಬ್ರಹ್ಮದೇವ "ಹೇ ವಾಯುವೇ, ನಿನ್ನ ಮಗನು ಇಚ್ಛಾರೂಪಿಯೂ, ವೀರಾಧಿವೀರನೂ, ಮನೋವೇಗದಲ್ಲಿ ಸಂಚರಿಸುವವನೂ ಆಗುತ್ತಾನೆ. ಆತನ ವೇಗವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಮುಂದೆ ನಡೆಯಲಿರುವ ರಾಮ-ರಾವಣರ ಯುದ್ಧದಲ್ಲಿ ರಾಮಸೇವಕನಾಗಿ ರಾಮನ ಪ್ರೀತಿಪಾತ್ರನಾಗುತ್ತಾನೆ ಮಾತ್ರವಲ್ಲ ಅಮರನಾಗುತ್ತಾನೆ" ಎಂದು ವರವಿತ್ತು ಅಲ್ಲಿಂದ ನಿರ್ಗಮಿಸಿದ. ಇದರಿಂದ ಅಂಜನಾ ಮತ್ತು ಕೇಸರಿ ದಂಪತಿಗೆ ಬಹಳ ಸಂತೋಷವಾಯ್ತು.
ಬಾಲ ಹನುಮ ಸಿಕ್ಕಾಪಟ್ಟೆ ಕಿಲಾಡಿಯಾಗಿದ್ದ. ಚಿಕ್ಕವರಿದ್ದಾಗ ಜಗತ್ಕಿಲಾಡಿಗಳೆನಿಸಿದವರು ಇಬ್ಬರೇ!! ಒಬ್ಬ ಕಿಲಾಡಿ ಕಿಟ್ಟ[ಶ್ರೀಕೃಷ್ಣ] ಇನ್ನೊಬ್ಬ ಕಿಲಾಡಿ ಹನುಮ! ಇಂದಿಗೂ ಕಿಲಾಡಿ ಮಕ್ಕಳಿಗೆ ನಮಲ್ಲಿ ಈ ಎರಡರಲ್ಲಿ ಒಂದು ಹೆಸರನ್ನು ಬಳಸಿ ಅಣಕಿಸುವುದಿದೆ. ವಾನರ ಬಾಲಕ ಹನುಮ ಸುತ್ತಲ ಪರಿಸರದಲ್ಲಿ ಇದ್ದ ಋಷಿಗಳ ಆಸನಗಳನ್ನು ಮರಕ್ಕೆ ನೇತು ಹಾಕಿಬಿಡುತ್ತಿದ್ದ! ಅವರ ಕಮಂಡಲದ ನೀರನ್ನು ಚೆಲ್ಲುತ್ತಿದ್ದ. ಅವರ ಲಂಗೋಟಿ ಹರಿದು ಬಿಡುತ್ತಿದ್ದ. ಕೆಲವೊಮ್ಮೆ ಯಾವುದೋ ಋಷಿಯ ಮಡಿಲಲ್ಲಿ ಕೂತು ಆಡುತ್ತಿದ್ದ. ಕೆಲವರ ಗಡ್ಡ ತಿರುಚಿ ಎಳೆದು ಓಡುತ್ತಿದ್ದ! ಅವನನ್ನು ಯಾರೂ ನಿಗ್ರಹಿಸಲು ಶಕ್ತರಾಗಿರಲಿಲ್ಲ. ವಿದ್ಯಾಭ್ಯಾಸದ ಕಾಲ ಸಮೀಪಿಸಿದ್ದರಿಂದ ಅವನಿಗೆ ಹೇಗಾದರೂ ತಿಳಿಹೇಳಬೇಕೆಂದು ವಾನರ ದಂಪತಿ ಋಷಿಗಳಲ್ಲಿ ಪ್ರಾರ್ಥಿಸಿದರು. ಋಷಿಗಳೆಲ್ಲಾ ಸೇರಿ, ಹನುಮನ ಅಹಂಕಾರಕ್ಕೆ ಅವನಲ್ಲಿರುವ ಅಗಾಧ ಶಕ್ತಿಗಳೇ ಕಾರಣವಾಗಿದ್ದರಿಂದ, ಆ ಶಕ್ತಿಗಳ ನೆನಪು ಉಡುಗಿಹೋಗಿ ವಿಸ್ಮೃತಿಯುಂಟಾಗಲೆಂದೂ ಯಾರಾದರೂ ಆತನ ಕೀರ್ತಿಯ ಸ್ಮರಣೆ ಮಾಡಿಕೊಟ್ಟರೆ ಮತ್ತೆ ಎಲ್ಲವೂ ನೆನಪಾಗಿ ಸಕಲ ಶಕ್ತಿಗಳೂ ಪುನರ್ಪ್ರಾಪ್ತವಾಗಲೆಂದೂ ಶಪಿಸಿದರು. ವಾನರರಾಜ ಕೇಸರಿಯು ಯಥೋಚಿತ ಸಂಸ್ಕಾರಗಳನ್ನು ಪೂರೈಸಿ, ವಿದ್ಯಾಭ್ಯಾಸಕ್ಕಾಗಿ ಹನುಮನನ್ನು ಸೂರ್ಯನೆಡೆಗೆ ಕಳುಹಿಸಿದ. ಸಾಕ್ಷಾತ್ ಶಂಕರನಾದ ಅವನಿಗೆ ವೇದಾಧ್ಯಯನ ಬೇಕೇ ? ಆದರೂ ಲೋಕದ ಕಣ್ಣಿಗೆ ಸಂಪ್ರದಾಯದ ಅನುಸರಣೆಯನ್ನು ಕ್ರಿಯಾತ್ಮಕವಾಗಿ ತೋರಿಸುವ ಸಲುವಾಗಿ ಹನುಮ ವೇದಾಧ್ಯಯನ ಮಾಡಿ ವಿದ್ಯಾಸಂಪನ್ನನಾದ. ವೇದವೇದಾಂತ ಪಾರಂಗತನಾದ ವಿದ್ವಾನ್ ಹನುಮ ತಂದೆತಾಯಿಗಳಲ್ಲಿಗೆ ಮರಳಿದ.
ಇತ್ತ ಅಯೋಧ್ಯೆಯಲ್ಲಿ ರಾಮನ ಅವತಾರವಾಗಿತ್ತು! ರಾಮನ ಬಾಲಲೀಲೆಗಳನ್ನು ಕಣ್ಣಾರೆ ಕಂಡು ಆನಂದಪಡುವ ಬಯಕೆಯಿಂದ ಭಗವಾನ್ ಶಂಕರ ನಿತ್ಯವೂ ಒಂದಿಲ್ಲೊಂದು ರೂಪದಲ್ಲಿ ಅಯೋಧ್ಯೆಗೆ ಬರುತ್ತಲೇ ಇದ್ದ. ಒಂದು ದಿನ ಜ್ಯೋತಿಷಿಯಾಗಿ ಅರಮನೆಗೆ ಬಂದರೆ ಮತ್ತೊಂದುದಿನ ಭಿಕ್ಷುಕನಾಗಿ ಬರುತ್ತಿದ್ದ, ಮಗದೊಂದು ದಿನ ಸನ್ಯಾಸಿಯಾಗಿ ಅಲ್ಲಿ ಕಾಣಿಸಿಕೊಳ್ಳುತ್ತಿದ್ದ. ಹೀಗೆ ಒಂದು ದಿನ ಮಂಗನಾಡಿಸುವ ವ್ಯಕ್ತಿಯಾಗಿ ನಡೆದುಬಂದ. ಆತನ ಕೈಯ್ಯಲ್ಲಿ ಸುಂದರವಾದ ಕೋತಿಯೊಂದು ಇದ್ದು ಬಹಳ ಸುಂದರವಾಗಿ ಆಟವಾಡುತ್ತಿತ್ತು. ಬುಡಬುಡಿಕೆ ಆಡಿಸುತ್ತಾ ಹಾಡುಹೇಳುತ್ತಾ ಅರಮನೆಯ ಬಾಗಿಲಿಗೆ ಬಂದ ಮಂಗನಾಡಿಸುವವನನ್ನು ಕಂಡು ಅಲ್ಲಿರುವ ಮಕ್ಕಳೆಲ್ಲಾ ಸೇರಿದರು. ಬಾಲರಾಮನೂ ಮಂಗನನ್ನು ಕಾಣಲು, ತನ್ನ ಸಹೋದರರ ಜೊತೆಗೆ ಅಲ್ಲಿಗೆ ಬಂದ. [ತನ್ನ ಪ್ರಭು ಶ್ರೀರಾಮನನ್ನು ಪ್ರಸನ್ನಗೊಳಿಸುವ ಸಲುವಾಗಿ ಭಗವಾನ್ ಶಂಕರ ನಡೆಸಿದ ಆಟವಾಗಿತ್ತದು. ಅಸಲಿಗೆ ಕುಣಿಸುವವನೂ ಕುಣಿಯುವವನೂ ಇಲ್ಲಿ ಪರಶಿವನಲ್ಲದೇ ಬೇರಾರೂ ಆಗಿರಲಿಲ್ಲ!] ಆಟ ಮುಗಿಯುತ್ತಿದ್ದಂತೇ ಎಲ್ಲರೂ ಹೊರಟರು ಶ್ರೀರಾಮ ಮಾತ್ರ ಅಲ್ಲೇ ನಿಂತಿದ್ದ.
ತನಗೆ ಈ ಕಪಿ ಆಡಲು ಬೇಕೆಂದು ಶ್ರೀರಾಮ ಹಠ ಹಿಡಿದ. ಕೋತಿಯ ಬದಲಿಗೆ ಧನವನ್ನು ತೆಗೆದುಕೊಂಡು ಅದರ ಯಜಮಾನ ಕೋತಿಯನ್ನು ತನ್ನ ಮಗನಿಗೆ ಕೊಡಬೇಕೆಂದು ರಾಜಾ ದಶರಥ ಆಜ್ಞೆಮಾಡಿದ. ಶ್ರೀರಾಮ ತನ್ನ ಕೈಗಳಿಂದಲೇ ಆ ಕಪಿಯನ್ನು ಸ್ವೀಕರಿಸಿದ. ಇಲ್ಲಿಯವರೆಗೆ ಕಪಿಯ ರೂಪದಲ್ಲಿದ್ದ ಪರಶಿವನು ತನ್ನನ್ನು ತಾನೇ ಕುಣಿಸಿಕೊಳ್ಳುತ್ತಿದ್ದ ಈಗ ಶ್ರೀರಾಮ ಕುಣಿಸುವವನಾದ, ಕಪಿರೂಪದ ಶಿವ ಕುಣಿಯುವವನಾದ! ಶಿವನ ಯುಗಯುಗಗಳ ಅಭಿಲಾಷೆ ಪೂರ್ಣವಾಯ್ತು. ಕಪಿಚೇಷ್ಟೆಗಳನ್ನೂ ಕುಣಿತಗಳನ್ನೂ ಜನ ನೋಡಿಯೇ ನೋಡಿದರು. ಆ ಜನರ ಗುಂಪಿನ ನಡುವೆ ಮಂಗನಾಡಿಸುವವ ಕಣ್ಮರೆಯಾಗಿದ್ದ; ಆತ ಮಂಗನಲ್ಲೇ ಐಕ್ಯನಾದನೋ ಅಥವಾ ಮತ್ತೆಲ್ಲೋ ನಡೆದುಹೋದನೋ ತಿಳಿಯಲೇ ಇಲ್ಲ! ಕಪಿರೂಪದಲ್ಲಿ ಹನುಮಂತನು ಶ್ರೀರಾಮನ ಸೇವೆಯನ್ನೂ ಆತನಿಗೆ ಮನೋರಂಜನೆಯನ್ನೂ ಬಹಳದಿನಗಳವರೆಗೆ ನೀಡಿದ. ಯಾವಾಗ ವಿಶ್ವಾಮಿತ್ರರು ರಾಮ-ಲಕ್ಷ್ಮಣರನ್ನು ಕರೆದೊಯ್ಯಲು ಬಂದರೋ ಆಗ ಶ್ರೀರಾಮ ಮತ್ತು ಹನುಮರ ನಡುವೆ ಏಕಾಂತದ ಮಾತುಕತೆ ನಡೆಯಿತು! "ಓ ಪ್ರಿಯ ಹನುಮಾ, ನೀನು ನನ್ನ ಅಂತರಂಗದ ಸಖನಾಗಿರುವೆ. ನನ್ನ ಲೀಲೆಯಬಗ್ಗೆ ನಿನ್ನಲ್ಲೇನು ಗೌಪ್ಯ? ಮುಂದೊಂದು ದಿನ ನಾನು ರಾವಣನನ್ನು ಕೊಲ್ಲುವ ಸಮಯದಲ್ಲಿ ನನಗೆ ವಾನರರ ಅವಶ್ಯಕತೆಯಿದೆ. ರಾವಣನು ವಾಲಿಯ ಜೊತೆ ಸೇರಿದ್ದಾನೆ. ಖರ-ದೂಷಣ, ತ್ರಿಶರಾ, ಶೂರ್ಪನಖಿ ಮೊದಲಾದವರು ದಂಡಕಾರಣ್ಯದಲ್ಲಿದ್ದಾರೆ. ಮಾರೀಚ, ಸುಬಾಹು, ತಾಟಕಿ ನಮ್ಮ ನೆರೆಯ ಕಾಡಿನಲ್ಲೇ ಇದ್ದಾರೆ. ಅವರ ಜಾಲ ನಾಕು ದಿಕ್ಕಿನಲ್ಲೂ ಹರಡಿದೆ. ನೀನು ಶಬರಿಯನ್ನು ಭೇಟಿಮಾಡಿ ಋಷ್ಯಮೂಕ ಪರ್ವತಕ್ಕೆ ತೆರಳು. ಅಲ್ಲಿ ಸುಗ್ರೀವನ ಸ್ನೇಹಬೆಳೆಸು. ನಾನು ನಿಧಾನವಾಗಿ ಮಾರ್ಗ ಕಂಟಕಗಳನ್ನು ನಿವಾರಿಸಿಕೊಳ್ಳುತ್ತಾ ಅಲ್ಲಿಗೇ ಬರುತ್ತೇನೆ. ನನಗೆ ನೀನು ಸುಗ್ರೀವನನ್ನು ಭೇಟಿ ಮಾಡಿಸುವುದರ ಮೂಲಕ ವಾನರ ಸೈನ್ಯವನ್ನು ಒಗ್ಗೂಡಿಸು. ನಂತರ ರಾವಣನನ್ನು ಕೊಂದು ಅವತಾರ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ" ಎಂದ ಶ್ರೀರಾಮ.
ಭಗವಾನ್ ಶ್ರೀರಾಮನನ್ನು ಬಿಟ್ಟು ಹೋಗಲು ಇಚ್ಛೆಯಿಲ್ಲವಾದರೂ, ಮಾರುತಿ ಅವನ ಆಜ್ಞೆಯನ್ನು ಶಿರಸಾವಹಿಸಿ ರಾಮನಾಮ ಸ್ಮರಣೆಗೈಯ್ಯುತ್ತಾ ಋಷ್ಯಮೂಕದೆಡೆಗೆ ನಡೆದ. ಹೀಗಾಗಿ ರಾಮ-ಹನುಮರ ಭೇಟಿ ಆನಂತರದಲ್ಲಿ ಋಷ್ಯಮೂಕ ಪರ್ವತದಲ್ಲಿ ಔಪಚಾರಿಕವಾಗಿ ನಡೆದರೂ, ಪರೋಕ್ಷವಾಗಿ ಅದು ಅಯೋಧ್ಯೆಯ ಅರಮನೆಯಲ್ಲೇ ನಡೆದಿತ್ತು ಮತ್ತು ಪರಸ್ಪರರಿಗೆ ತಾವೀರ್ವರೂ ಒಂದೇ ಮೂಲದವರು ಎಂಬುದರ ಅರಿವಿತ್ತು ಎಂಬುದು ಈ ಕಥೆಯಿಂದ ನಮಗೆ ತಿಳಿದುಬರುತ್ತದೆ. ಹನುಮನ ಸೇವೆ ನಡೆಸುವುದು ಹರಿಸೇವೆಯೂ ಮತ್ತು ಹರಸೇವೆಯೂ ಆಗಿದೆ ಎಂಬುದು ನಾವು ನೆನಪಿಡಬೇಕಾದ ಅಂಶ. ಅಂತೆಯೇ ಹನುಮನಿಗೆ ಅಭಿಷೇಕವೂ ಇಷ್ಟ ಮತ್ತು ಅಲಂಕಾರವೂ ಇಷ್ಟ ಎಂಬುದನ್ನೂ ತಿಳಿದುಕೊಳ್ಳಬೇಕಾಗುತ್ತದೆ.