ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, November 12, 2011

ಯುರೇಕಾ ಯುರೇಕಾ ಅಲ್ಲ ಇದು ಅರೇಕಾನಟ್ಟು !





ಹಣ್ಣಡಕೆ

ಚಾಲಿ ಅಡಕೆ

ಮದ್ರಾಸ್ ಅಥವಾ ಅಂಬಾಡಿ ಎಲೆ

ಯುರೇಕಾ ಯುರೇಕಾ ಅಲ್ಲ ಇದು ಅರೇಕಾನಟ್ಟು !

ವೈದಿಕರಿಗೆ ಎಷ್ಟೇ ಧವಸ ಧಾನ್ಯ ಬಟ್ಟೆ ಬಂಗಾರ ಏನು ಕೊಟ್ಟರೂ " ಐಶ್ವರ್ಯಮಸ್ತು " ಎನ್ನುವುದಿಲ್ಲ; ಹಾಗೆ ಹೇಳಲು ಅವರಿಗೂ ಶಾಸ್ತ್ರೋಕ್ತವಾಗಿ ಅಧಿಕಾರ ಪ್ರಾಪ್ತವಾಗುವುದು ತಾಂಬೂಲ ಕೊಟ್ಟಾಗ ಮಾತ್ರ. " ತಾಂಬೂಲಾನಿಪಾಂತು ಐಶ್ವರ್ಯಮಸ್ತು " ಎಂದು ಹರಸುತ್ತಾರೆ. ಅದಕ್ಕೇ ತಾಂಬೂಲ ಎಲ್ಲೆಲ್ಲೂ ತನ್ನದೇ ಆದ ಘನತೆಯನ್ನು ಇಂದಿನ ನವಯುಗದಲ್ಲೂ ಉಳಿಸಿಕೊಂಡಿದೆ. ಕೇಂದ್ರ ಸರಕಾರದವರು ಪಾನ್ ನಿಷೇಧ ಮಾಡಬೇಕು ಎಂದುಬಿಟ್ಟರು. ಪಾನ್ ನಲ್ಲಿ ಮುಖ್ಯವಾಗಿ ಬಳಸಬೇಕಾಗಿರುವುದು ಅಡಕೆ ಮತ್ತು ವೀಳ್ಯದೆಲೆ. ಅಡಕೆ ಜಗಿಯುವ ಕೆಲವರನ್ನು ಕಂಡು ಅದಕ್ಕೆ ಹೊಸರೂಪಕೊಡುವ ನೆಪದಲ್ಲಿ ರಾಸಾಯನಿಕ ಪರಿಮಳದ್ರವ್ಯಗಳನ್ನು ಸೇರಿಸಿ ಪ್ಲಾಸ್ಟಿಕ್ ಪೌಚ್‍ಗಳಲ್ಲಿ ತುಂಬಿಸಿ ಕಾಸು ಸಂಪಾದಿಸುವ ಅಡ್ಡ ಕಸುಬಿ ಕಂಪನಿಗಳು ಹುಟ್ಟಿಕೊಂಡು ತಾಂಬೂಲದ ಹೆಸರಿಗೆ ಮಸಿ ಬಳಿದರು. ಅಡಕೆ ಅಗಿಯುವುದು ಮಾರಕವೇ ? ಅಡಕೆ ಬೆಳೆ, ಅದರ ಆಗು-ಹೋಗು, ಅದನ್ನು ಬಳಸುವುದರಿಂದ ಆಗುವ ಉಪಕಾರಗಳ ಬಗ್ಗೆ ಕೊಂಚ ಚಿಂತಿಸೋಣ.

ದಕ್ಷಿಣಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಅಡಕೆ ಬೀಜರೂಪದಲ್ಲಿ ಬಂದದ್ದು ಆಸ್ಸಾಂ ನಿಂದ ಎನ್ನುತ್ತಾರೆ. ಆಸ್ಸಾಂ ನಲ್ಲಿ ಇದೊಂದು ಗುಡ್ಡಗಾಡು ಬೆಳೆ. ಆದರೆ ನಮ್ಮ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಅಡಕೆಯನ್ನು ಕ್ರಮಬದ್ಧ ಭಾಗಾಯಿತ ಪದ್ಧತಿಯಲ್ಲಿ ಬೆಳೆಯಲಾಗುತ್ತದೆ. ಪ್ರಾಯಶಃ ರಾಜರುಗಳ ಕೃಪಾಶ್ರಯ ಕೈಬಿಟ್ಟು ಹೋದನಂತರ ರಾಜರುಗಳೇ ಕೊಟ್ಟಿದ್ದ ಅಗ್ರಹಾರವೆಂಬ ಪ್ರದೇಶಗಳಲ್ಲಿ ತಮ್ಮ ವಸತಿಗಳ ಸುತ್ತ ಇಲ್ಲಿನ ಬ್ರಾಹ್ಮಣರು ಅಡಕೆಯನ್ನು ಬೆಳೆದರು, ಯಾಕೆಂದರೆ ಆ ಒಂದು ಸಂದರ್ಭದಲ್ಲಿ ವೇದಾಂತಿಗಳಿಗೆ, ವೇದಾಧ್ಯಯನ ಮಾಡಿದವರಿಗೆ, ಪುರೋಹಿತ ವೃತ್ತಿಯಲ್ಲಿದ್ದವರಿಗೆ ರಾಜಾಶ್ರಯವಿಲ್ಲದಾದಾಗ ಬೇರಾವ ನೌಕರಿಯನ್ನು ಮಾಡುವ ಹೊಸ ವಿದ್ಯೆಗಳ ಕುರಿತಾದ ಪದವಿಗಳು ಅವರಲ್ಲಿ ಇರಲಿಲ್ಲ. ಹೀಗಾಗಿ ಉಪಜೀವನದ ಅನಿವಾರ್ಯತೆಗಾಗಿ ಅವರು ಅಡಕೆಯನ್ನೋ ಭತ್ತ ಮತ್ತಿತರ ಬೆಳೆಗಳನ್ನೋ ಬೆಳೆಯಬೇಕಾಗಿ ಬಂತು. ಆಮೇಲಾಮೇಲೆ ಸಮಾಜದ ಎಲ್ಲಾ ವರ್ಗಗಳೂ ಅಡಕೆ ಬೆಳೆಯನ್ನು ಬೆಳೆದವು. ಇದು ಈಗ ಇತಿಹಾಸ.

ಸಂಸ್ಕೃತದಲ್ಲಿ ಪೂಗವೃಕ್ಷ ಎಂದು ಕರೆಯಲ್ಪಡುವ ಅಡಕೆಮರ ಇದ್ದ ಹೊರತು ದೇವಸ್ಥಾನಗಳಲ್ಲಿ ಹಿಂದೆ ಪ್ರತಿಷ್ಠಾಪನೆಗಳು ನಡೆಯುತ್ತಿರಲಿಲ್ಲವಂತೆ. ಒಂದೊಮ್ಮೆ ಹತ್ತಿರದಲ್ಲಿ ಸಿಗದಿದ್ದರೂ ದೂರದಿಂದ ತರಿಸುವ ವಹಿವಾಟಿತ್ತು ಎನ್ನುತ್ತಾರೆ ಅರಿತವರು. ಉತ್ತರಕರ್ನಾಟಕದ ಬಿಸಿಲು ಪ್ರದೇಶಕ್ಕೆ ಅಡಕೆ ಒಗ್ಗುವುದಿಲ್ಲ ಎಂಬುದು ಅಲ್ಲಿನವರ ಅನುಭವದ ಮಾತು. ಅರಸೀಕೆರೆ, ಬೀರೂರು, ಕಡೂರು, ಮಂಡ್ಯ, ಮೈಸೂರು ಜಿಲ್ಲೆಯ ಕೆಲವು ಭಾಗಗಳಲ್ಲೂ ಅಡಕೆ ಬೆಳೆಯುತ್ತಾರೆ. ಆದರೆ ಕರಾವಳಿಯಲ್ಲಿ ಬೆಳೆದ ಅಡಕೆಯ ಗುಣಮಟ್ಟಕ್ಕೆ ಇವುಗಳು ಸಾಟಿಯಲ್ಲ. ಅಲ್ಲಿನ ಭೂಗುಣ ಮತ್ತು ಹವಾಮಾನ ಅಡಕೆ ಬೆಳೆಗೆ ಪ್ರಶಸ್ತವಾಗಿದೆ ಎಂಬುದು ಸತ್ಯ. ಅಡಕೆ ಬಹಳ ನೀರಾವರಿಯನ್ನು ಬೇಡುವ ವರ್ಷದಲ್ಲಿ ಒಂದೇ ಸಲ ಫಸಲು ನೀಡುವ ಬೆಳೆ. ಬೆಳೆದ ಫಸಲನ್ನು ಕೊಯ್ಯುವಾಗ ಮತ್ತು ಸಂಸ್ಕರಿಸುವಾಗ ಬೇರೇ ಬೇರೇ ಪದ್ಧತಿಗಳನ್ನು ಅನುಸರಿಸಿ ಕೆಂಪಡಕೆ, ಚಾಲಿ, ಆಪಿ ಇತ್ಯಾದಿ ಹಲವು ತೆರನಾದ ಅಡಕೆಗಳನ್ನು ತಯಾರಿಸುತ್ತಾರೆ. ಆಮೇಲೆ ಅವು ಮಾರುಕಟ್ಟೆಯಲ್ಲಿ ಬಿಕರಿಗೊಂಡು ಮಧ್ಯವರ್ತಿಗಳ ಮೂಲಕ ಉತ್ತರಭಾರತ ಮತ್ತು ಇನ್ನಿತರ ಹೊರದೇಶಗಳಿಗೂ ಸಾಗಿಸಲ್ಪಡುತ್ತವೆ. ಮಧ್ಯವರ್ತಿಗಳಲ್ಲಿ ಹಲವರು ಅಡಕೆಗಳಿಗೆ ಪುನಃ ಸಂಸ್ಕಾರ ಕೊಟ್ಟು, ಇಂಡಿ, ಪಾಡ್ಚಾ, ಪುಡಿ, ಬಟ್ಲಡಕೆ, ಚೂರು ಹೀಗೇ ವಿವಿಧ ರೀತಿಯಲ್ಲಿ ಗ್ರೇಡ್ ಮಾಡುತ್ತಾರೆ. ಸಾಗುತ್ತಾ ಸಾಗುತ್ತಾ ಈ ಗ್ರೇಡೆಡ್ ಅಡಕೆಗಳು ಪುನಃ ಪುನಃ ರೂಪದಲ್ಲಿ ಮಾರ್ಪಾಡುಗೊಳಿಸಲ್ಪಡುತ್ತವೆ. ಮೂಲ ಅಡಕೆಯಲ್ಲಿ ಯಾವುದೇ ಹಾನಿಕಾರಕ ಕಲ್ಮಶ ಇರುವುದಿಲ್ಲ. ಅದಕ್ಕಾಗೇ ಅದನ್ನು ದೇವರಿಗೂ ಸಮರ್ಪಿಸಬಹುದೆಂದು ವೇದೋಕ್ತ ಮಂತ್ರಗಳೂ ಹೇಳುತ್ತವೆ.

ಫೂಗೀಫಲ ಸಮಾಯುಕ್ತಂ/ ಮಹದ್ದಿವ್ಯಂ ನಾಗವಲ್ಲೀ ದಲೈರ್ಯುತಂ |
ಕರ್ಪೂರ ಚೂರ್ಣ ಸಂಯುಕ್ತಂ ತಾಂಬೂಲಂ ಪ್ರತಿಗ್ರಹ್ಯತಾಂ ||

ಅಂದರೆ: ಅಡಕೆ, ವೀಳ್ಯದೆಲೆ , ಪಚ್ಚಕರ್ಪೂರ ಲವಂಗಾದಿಗಳನ್ನು ಇಟ್ಟು ಈ ತಾಂಬೂಲ ಕೊಡುತ್ತಿದ್ದೇನೆ ಪರಮಾತ್ಮಾ ಸ್ವೀಕರಿಸು ಎನ್ನುತ್ತೇವೆ. ಮದುವೆ, ಮುಂಜಿ ಅಥವಾ ಯಾವುದೇ ಮಂಗಲಕಾರ್ಯಗಳಲ್ಲಿ ಅಡಕೆ ಇಲ್ಲದೇ ನಡೆಯುವುದೇ ಇಲ್ಲ! ಹಳೆಯ ಕಾಲದ ವ್ಯವಹಾರಗಳಲ್ಲಿ ಗುತ್ತಿಗೆ ಹಿಡಿಯುವಾಗ ಅಥವಾ ವ್ಯವಹಾರ ನಡೆಸುವಾಗ ಸಂಚಕಾರ ಕೊಡೋದು ಅಥವಾ ವೀಳ್ಯಕೊಡೋದು ಎಂಬ ಪದ್ಧತಿ ಚಾಲ್ತಿಯಲ್ಲಿತ್ತು. ಈಗಲೂ ಹಿಂದಿಯಲ್ಲಿ ಸುಪಾರಿ ಕೊಡೋದು ಎಂದು ಕರೆಯುತ್ತಾರಾದರೂ ಹಾಳು ಕೊಲೆಗಡುಕರ ಬಳಕೆಯಿಂದ ಈ ಶಬ್ದವನ್ನು ಬಳಸಲು ಕೆಲವರು ಹಿಂಜರಿಯುತ್ತಾರೆ. ಸ್ವಲ್ಪವಾದರೂ ಹಣವನ್ನು ವೀಳ್ಯದೆಲೆ ಅಡಕೆಯ ಮೇಲೆ ಇಟ್ಟು ಕೊಡುವುದು ಅಂದಿನ ರೂಢಿಯಾಗಿತ್ತು. ರಾಜರುಗಳ ಕಾಲದಲ್ಲಿ ಧುರವೀಳ್ಯ ಕೊಡುವುದು ಎಂದಿತ್ತು. ಧುರವೀಳ್ಯವೆಂದರೆ ಯುದ್ಧಕ್ಕೆ ಕರೆಕೊಡುವುದು. ಇಂದಿಗೂ ಪುರೋಹಿತರಿಗೆ, ವೈದಿಕರಿಗೆ ಸಂಭಾವನೆಯಾಗಿ ಕೊಡುವ ಹಣವನ್ನು ವೀಳ್ಯದೆಲೆ-ಅಡಕೆಯ ಮೇಲೆ ಇಟ್ಟೇ ಕೊಡಲಾಗುತ್ತದೆ. ಹಣ ಎಷ್ಟಿದೆ ಕಾಣಬಾರದೆಂದು ಲಕೋಟೆಗಳನ್ನು ಬಳಸಿದರೂ ಜೊತೆಗೆ ತಾಂಬೂಲ ಅನಿವಾರ್ಯ. ಇಷ್ಟೆಲ್ಲಾ ದೇದೀಪ್ಯಮಾನ ಸ್ಥಾನವನ್ನು ಅಲಂಕರಿಸಿದ ಅಡಕೆಯನ್ನು ಯಾಕೆ ಕೇಂದ್ರ ಸರಕಾರ ಪ್ರೋತ್ಸಾಹಿಸಿಲ್ಲಾ ಎಂಬುದನ್ನು ಗಮನಿಸಿದರೆ ಅದರ ಹಿಂದೆ ಗುಟ್ಕಾ, ಪಾನ್ ಪರಾಗ್ ಮೊದಲಾದ ಕೆಮಿಕಲ್ ತಯಾರಕರ ದಂಡು ಕಾಣುತ್ತದೆ.

ಬೆಂಗಳೂರಿನ ಪಾನ್ ಬೀಡಾ

ಅಗಿಯುವ ಅಡಕೆಗೆ ಕೆಮಿಕಲ್ ಸೇರಿಸಿ ಹೊಸಹೊಸ ಸ್ವಾದ ಬರುವಂತೇ ಕಿಕ್ ಹೊಡೆಯುವಂತೇ ತಂಬಾಕು ಮಿಶ್ರಮಾಡಿ ಮಾರಾಟ ಮಾಡುವುದರಿಂದ ಇದೊಂದು ದುಶ್ಚಟವೆಂದು ಗುರುತಿಸಲ್ಪಟ್ಟಿತು. ದೇವರಿಗೆ ಸಮರ್ಪಿಸುವ ರೂಪದಲ್ಲಿ ಇರುವ ಅಡಕೆಯನ್ನು ಅಗಿದರೆ ಯಾವ ಹಾನಿಯೂ ಆಗುವುದಿಲ್ಲ, ಬದಲಾಗಿ ಅದು ಒಳ್ಳೆಯದೇ. ಅಲ್ಲಿ ತಂಬಾಕು ಅಥವಾ ಕೆಮಿಕಲ್ ಹಾಕಿರುವುದಿಲ್ಲವಲ್ಲ. ಸರಕಾರ ನಡೆಸುವ ಜನ ಅಡಕೆಯೇ ಹಾನಿಕಾರಕ ಎಂದು ತಪ್ಪುತಿಳಿದಿದ್ದರು. ಈಗೀಗ ವೈಜ್ಞಾನಿಕ ಸಂಶೋಧನೆಗಳು ನಡೆದು ಸಮಜಾಯಿಸಿ ಸಿಕ್ಕಮೇಲೆ ಮೂಲ ಅಡಕೆ ಹಾನಿಕರವಲ್ಲ ಎಂಬುದು ಅವರಿಗೆ ತಿಳಿಯಿತಾದರೂ ಪ್ಲಾಸ್ಟಿಕ್ ನಿಷೇಧಿಸುವ ಇಚ್ಛೆಯಿಂದ ಅಡಕೆ ಪೌಚ್‍ಗಳನ್ನು ನಿಷೇಧಿಸಿದೆ. ಹೀಗಾಗಿ ಅಡಕೆ ಮಾರುಕಟ್ಟೆಗೆ ಸ್ವಲ್ಪ ಹೊಡೆತ ಬಿದ್ದಿದೆ. ಆದರೂ ಅಡಕೆ ಕೇವಲ ಅದನ್ನಷ್ಟೇ ಅವಲಂಬಿಸಿಲ್ಲ. ಹೀಗಾಗಿ ಅಡಕೆ ಬೆಳೆಗಾರರು ಬದುಕಿಕೊಂಡರು!

ಸಹಜವಾಗಿ ಎಲ್ಲಾ ರೈತರಂತೇ ಭೂಮಿತಾಯಿ ಕೈಬಿಡುವುದಿಲ್ಲವೆಂಬ ಒಂದೇ ನಂಬಿಕೆಯಮೇಲೆ ಬೆಳೆ ತೆಗೆಯುವವರು ಅಡಕೆ ಬೆಳೆಗಾರರು. ಮಳೆ-ಬಿಸಿಲು-ಚಳಿಗಳನ್ನು ಅವಲಂಬಿಸಿದ ಬೆಳೆಯೂ ಹೌದು. ಮಳೆ ಸಕಾಲಕ್ಕೆ ಆಗಬೇಕು, ಹಿತಮಿತವಾಗಿರಬೇಕು. ಬಿಸಿಲು ಅತಿಯಾಗಬಾರದು, ಚಳಿಯೂ ತುಂಬಾ ಅತಿಯಾದರೆ ಅನುಕೂಲವಲ್ಲ. ಮಳೆಗಾಲದಲ್ಲಿ ಮಳೆಯ ಮಧ್ಯೆಯೇ ಕೊಳೆರೋಗಕ್ಕೆ ಪರಿಹಾರವಾಗಿ ತಾಮ್ರದ ಸಲ್ಫೇಟ್ ಎಂಬ ದ್ರಾವಣವನ್ನು ಸುಣ್ಣದನೀರಿನೊಡನೆ ಮಿಶ್ರಣಮಾಡಿ ಸಿಂಪಡಿಸಲಾಗುತ್ತದೆಯೇ ಹೊರತು ಮತ್ಯಾವ ರಾಸಾಯನಿಕಗಳನ್ನೂ ಬಳಸುವುದಿಲ್ಲ. ಅದೂ ದಪ್ಪದ ಸಿಪ್ಪೆಗೆ ತಾಗುತ್ತದಷ್ಟೇ. ಒಮ್ಮೆ ಆ ಮಿಶ್ರಣವನ್ನು ತಿಂದರೂ ಅದು ಅಂತಹ ಹಾನಿಕಾರಕವಲ್ಲ. [ಟೂತ್ ಪೇಸ್ಟ್ ತಿಂದರೆ ಹೇಗೆ ಹಾನಿಯಿಲ್ಲವೋ ಹಾಗೇ !]

ಖರ್ಚುವೆಚ್ಚಗಳನ್ನು ಗಮನಿಸಿದರೆ ಒಬ್ಬ ಅಡಕೆ ಬೆಳೆಗಾರನಿಗೆ ಆತನ ಹೊಟ್ಟೆ-ಬಟ್ಟೆಗೆ ಸಾಲುವಷ್ಟು ಮಾತ್ರ ದಕ್ಕುತ್ತದೆ. ಅಡಕೆ ಬೆಳೆಗೆ ಹೊಸ ಕೆಂಪು ಮಣ್ಣು, ಕೊಟ್ಟಿಗೆ ಗೊಬ್ಬರ ಬಹಳ ಪ್ರಾಮುಖ್ಯ. ರಾಸಾಯನಿಕ ಗೊಬ್ಬರ ಉಪಯೋಗಿಸಿದರೆ ಒಮ್ಮೆ ಅಧಿಕ ಇಳುವರಿ ಬರುತ್ತದೇನೋ ಹೌದು ಆದರೆ ಮರದ ತಿರುಳು ಬೆಂಡಿನಂತಾಗಿ ಮರ ಕೊಬ್ಬಿ ತನ್ನ ಗಡಸುತನವನ್ನು ಕಳೆದುಕೊಳ್ಳುವುದರ ಜೊತೆಗೆ ಗಾಳಿಮಳೆಗೆ ಮರ ನೆಲಕ್ಕೆ ಉರುಳುತ್ತದೆ. ಇಂದಿನ ದಿನಗಳಲ್ಲಿ ಕೊಟ್ಟಿಗೆ ಗೊಬ್ಬರ ಒದಗಿಸುವುದು ಕಷ್ಟಕರವಾಗಿದೆ. ಎರಡನೆಯದಾಗಿ ಮರಕಸುಬು ಗೊತ್ತಿರುವ ನುರಿತ ಕೆಲಸಗಾರರು ಕೊಳೆ ಔಷಧಿ ಸಿಂಪಡಿಸುವಾಗಲೂ ಮತ್ತು ಕೊನೆ ಕೊಯ್ಯುವಾಗಲೂ ಬೇಕಾಗುತ್ತಾರೆ. ಇದು ಬಹಳ ರಿಸ್ಕೀ ಜಾಬ್. ಸ್ವಲ್ಪ ಎಡವಟ್ಟಾದರೆ ಮರದಿಂದ ಕೆಳಗೆ ಬಿದ್ದು ಸೊಂಟ ಮುರಿದೀತು ಅಥವಾ ಕೆಲವೊಮ್ಮೆ ಮರವೇ ಮುರಿದುಬೀಳುವ ಸಾಧ್ಯತೆಯೂ ಇರುವುದರಿಂದ ಮರಹತ್ತುವಾಗಲೇ ಅವರ ಅನುಭವವೇ ಅವರಿಗೆ ಮಾಹಿತಿ ನೀಡುತ್ತದೆ. ಹೀಗಾಗಿ ಎಲ್ಲಾ ಕೆಲಸಗಾರರನ್ನೂ ಅಡಕೆ ತೋಟದಲ್ಲಿ ಬಳಸಿಕೊಳ್ಳಲು ಆಗುವುದಿಲ್ಲ. ಮರಕಸುಬಿನವರಿಗೆ ಧೈರ್ಯ, ಸಾಹಸ ಮತ್ತು ಗಾಳಿಗೆ ಬೇಕಾಬಿಟ್ಟಿ ತಲೆದೂಗುವ ಮರಗಳನ್ನು ಸಂಬಾಳಿಸುವ ಚಾಕಚಕ್ಯತೆ ಬೇಕಾಗುತ್ತದೆ. ಮರವೇರುವಾತ ತೀರಾ ವಯೋವೃದ್ಧನಾದರೂ ಕಷ್ಟ ತೀರಾ ಎಳಬನಾದರೂ ಕಷ್ಟ. ಹೀಗಾಗಿ ತಲೆತಲಾಂತರದಿಂದ ಕೆಲವರು ತಾವೇ ಇಷ್ಟಪಟ್ಟು ಮಾಡುವ ವೃತ್ತಿ ಇದು.

ಕೊಯ್ದ ಕೊನೆಗಳಿಂದ ಅಡಕೆ ಬೇರ್ಪಡಿಸುವುದು, ಅವುಗಳನ್ನು ಬಿಸಿಲಲ್ಲಿ ಒಣಗಿಸುವುದೋ,[ಕಾಯಡಕೆಯಾದರೆ ಸುಲಿದು ಬಿಸಿನೀರಲ್ಲಿ ಬೇಯಿಸುವುದೋ] ನಡೆಯುತ್ತದೆ. ಅವುಗಳನ್ನು ಸುಲಿಯುವುದಕ್ಕೇ ಸುಮಾರು ಮಂದಿ ಬೇಕಗುತ್ತದೆ. ಈಗೆಲ್ಲಾ ಇದಕ್ಕೆ ಯಂತ್ರಗಳು ಬಂದಿದ್ದರೂ ಯಂತ್ರಗಳು ಎಲ್ಲರ ಕೈಗೆಟಕುವ ದರದಲ್ಲಿ ಸಿಗುತ್ತಿಲ್ಲ. ಸಹಕಾರ ಸಂಘಗಳನ್ನು ಮಾಡಿಕೊಂಡು ಅದನ್ನು ಖರೀದಿಸಿ ಅಡಕೆ ಸುಲಿಯುವ ಪ್ರಕ್ರಿಯೆಗೆ ಕೆಲವರು ಮುಂದಾಗಿದ್ದಾರೆ. ಹಣವುಳ್ಳವರು ಯಂತ್ರಕೊಂಡು ಹಣಪಡೆದು ಅಡಕೆ ಸುಲಿದು ಕೊಡುವ ಕೆಲಸವೂ ಇನ್ನು ಕೆಲವು ದಿನಗಳಲ್ಲಿ ಆರಂಭವಾಗಬಹುದು. ಮಳೆಗಾಲದಲ್ಲಿ ಸಕಾಲದಲ್ಲಿ ಔಷಧಿ ಸಿಂಪಡಿಸಲು ಮರಕಸುಬಿನವರು ಸಿಗದೇ ಇದ್ದಲ್ಲಿ ಸಂಪೂರ್ಣ ಅಡಕೆಪೀಚುಗಳು ಕೊಳೆತು ಉದುರಿಬೀಳುವುದು ತಪ್ಪಿದ್ದಲ್ಲ. ದೀಪಾವಳಿ ಸಮಯದಲ್ಲಿ ಹಣ್ಣದ ಅಡಕೆಯನ್ನೋ ಕೆಲವು ಪ್ರದೇಶಗಳಲ್ಲಿ ಕಾಯಡಕೆಯನ್ನೋ ಕೊಯ್ಯಲು ಮರಕಸುಬಿನವರು ಸಿಗಲಿಲ್ಲವೆಂದರೆ ಮತೆ ಪೀಕಲಾಟ. ಹರಸಾಹಸದ ನಡುವೆ ಗೊಬ್ಬರಕ್ಕಾಗಿ ದನಗಳ ಸಾಂಗತ್ಯವೂ ಬೇಕು, ಅವುಗಳ ಆರೋಗ್ಯ, ಉಪಚಾರ ನೋಡಿಕೊಳ್ಳಬೇಕು. ಚಳಿ ಮತ್ತು ಬೇಸಿಗೆಯಲ್ಲಿ ತೋಟಕ್ಕೆ ನೀರುಹಾಯಿಸುವ ವ್ಯವಸ್ಥೆಯಾಗಬೇಕು. ಹೀಗೇ ಹಲವು ಹತ್ತು ಕೆಲಸಗಳು ಅಡಕೆ ಬೆಳಗಾರನಿಗೆ. ಕೆಲವೊಮ್ಮೆ ಅಡಕೆ ತಯಾರಾಗಿ ಮಾರುಕಟ್ಟೆಗೆ ಕಳಿಸುವ ಸಮಯದಲ್ಲಿ ಉತ್ತಮ ಧಾರಣೆ ಸಿಗುವುದೇ ಇಲ್ಲ. ಒಮ್ಮೊಮ್ಮೆ ಧಾರಣಮಟ್ಟ ಕುಸಿದಾಗ ಖರ್ಚು-ವೆಚ್ಚ ಕೂಲಿ-ಮಜೂರಿ ಎಲ್ಲಾ ಕಳೆದು ಗಂಜಿ ಊಟಕ್ಕೂ ಹಿಂಜರಿಯದೇ ಇರಬೇಕಾಗುತ್ತದೆ. ಅಡಕೆಗೆ ಸರಕಾರದ ಬೆಂಬಲ ಬೆಲೆ ಇರಲಿಲ್ಲವಾಗಿ ಆರಕ್ಕೋ ಮೂರಕ್ಕೋ ಕೇಜಿ ಮಾರಿಕೊಂಡು ಕಾಲಹಾಕಬೇಕಾಗಿತ್ತು. ೧೯೭೨ರಿಂದ ಪ್ರತೀ ಹತ್ತುವರ್ಷಗಳಿಗೊಮ್ಮೆ ಅಡಕೆ ಧಾರಣೆ ನೆಲಕಚ್ಚಿಬಿಟ್ಟಿದ್ದು ಈಗ ದಾಖಲೆಗಳಲ್ಲಿ ನೋಡಸಿಗುತ್ತದೆ. ಬೆಳೆಗಾರನಲ್ಲಿ ಖಾಯಿಲೆ-ಕಸಾಲೆಗೆ ಖರ್ಚುಮಾಡಲೂ ಕಾಸಿರಲಿಲ್ಲ! " ಬಿಡಿ ಅತ್ಲಗೆ ಅದು ಹೇಳಿ ಪ್ರಯೋಜನವಿಲ್ಲ " ಎಂದವರು ಬಹಳಮಂದಿ.

ಅಡಕೆ ಬೇರೇ ಬೇರೇ ಭಾಷೆಗಳಲ್ಲಿ ಹೇಗೆ ಗುರುತಿಸಲ್ಪಟ್ಟಿದೆ ನೋಡೋಣವೇ? [ಅಂತರ್ಜಾಲದಲ್ಲಿ ಸಂಗ್ರಹಿಸಿದ ಆಂಗ್ಲ ಭಾಷೆಯಲ್ಲಿರುವ ಈ ಕೆಲ ಮಾಹಿತಿಗಳು ನಿಮಗಾಗಿ] :

Botanical Name: Areca catechu L. Family Name : ARECACEAE

Usage : Tree Used In Ayurveda, Folk, Homeopathy, Tibetian, Unani, Sidha and Modern

Distribution :

This speices is globally distributed in Indo-Malesia. It is cultivated in tropical America, Africa and India. Within India, it has been recorded Assam, Meghalaya, West Bengal, Karnataka, in the coastal regions, from Maharashtra to Kerala and Tamil Nadu and in the Deccan Plateau and Andaman and Nicobar Islands. It is also cultivated in the areas of its occurrence for its nuts which are commercially important.

Arabic (6) faufil, fofal, fofal or foufal, fofal or fouzal, foufal, fufal

Assamese (1) guwa

Bengali (1) supari

English (4) areca nut, betel palm, betelnut, pinang

Hindi (4) supari, supiari, suppari, supyari

Kannada (24) adake, adaki, adike, adike kaayi, adike mara, betta, bettadake, bettadike, bette, chautaki, chikaniyadike, chikke, cikaniyadike, cikke, gotadike, kangu, kaungu, khapura, khhapura, kowngu, puga, pugiphala, tambula, thaamboolagotu

Malayalam (28) adaka, adakai, adakka, atakka, ataykkamaram, atekka, atekkai, caunga, cavooghoo, chempalukka, cuanga, ghhonta, ghonta, kalunnu, kamugu, kamuka, kamuku, kamunnu, kavungu, kavunnu, kazhangu, kazhunnu, khhapuram, kramukam, pakavakka, pakka, pakku, pugam

Manipuri (1) kwa

Marathi (7) madi, pophal, pophala, pophali, pung, supaaree, supari

Mizoram (2) kuva, kuvathing

Oriya (12) kuva, kuvathing, trynodrumo

Persian (4) gird-chob, girdchob, popal, pupal

Sanskrit (32) a, akota, akotaja, chhataphala, chikkana, dirghapadapa, dridhavalkala, ghonta, gopadala, gubak, guvaka, kabukah, kapitana, karamattam, khapura, khipura, kramuka, kramukah, kramukam, kuvara, phalam, pooga, puga, puga-phalam, pugah, pugi, rajatala, suranjana, tambula, tantusara, udvegam, valkataru

Tamil (65) akotam, ataikkay, cakuntam#, cakuntam@, cakuntikai, cakuntikaimaram, cattamarkkam, ciram 2, curancanam, inippilapatitam, inippilatitamaram, iracatalam, kaiccikam, kaiccikamaram, kalacattiram, kalaymaram, kamugu, kamuku, kandi, kanti, kapuram#, kapuram@, katti, kiramamuki 1, kiramamukimaram, kiramugam, kiramukam, kiramukam#, kiramukam@, kirantimukam, kirumukam, kontai 2, kottai paakku, kottai pakku, kottai-pakku, kugagam, kukacamaram, kukakam, kuntal 2, kuvakam, maturapakam, maturapakamaram, nattukkamuku, paak, pakku, pakkumaram, pakkuppanai, paku-kotai, palacankiyam, palacinikiyamam, piramataru, piramatarucam, pirumaniyam, pugam, pukaram 1, putakam, talattiram, tampulavatanimaram, tantucaram, tantucaramaram, tarpati, taru, tiritavalkam, tuvarkkay, tuvarkkaymaram

Telugu (18) chikinamu, chikini, gautupoka, kazhangu, khapuramu, kolapoka, kramukamu, oppulu, oppuvakkulu, pakavakka, pogamu, poka, poka chettu, poka-vakka, prakka, pugamu, vakka, vakkalu

Tibetan (6) gla gor zo sa, go yu, kra ma ka (p), kra mra sa, sla bor se sa (d), zu (m) khan

Urdu (12) chalia jalai hui, chalia purani jalai hai, chalia sokhta, chhalia, chhalia kohna sokhta, chikni chhalia, fufal (chalia), gond supari, gul supari, katha, supari, supari chikni pisi hui


ಗುಟ್ಟೊಂದು ಹೇಳುವೆ ಕೇಳಿ :

ವಾರಕ್ಕೊಮ್ಮೆಯಾದರೂ ಎಲೆಯಡಕೆ ತಿನ್ನುವುದರಿಂದ ಹಲ್ಲುಗಳ ಮತ್ತು ಒಸಡುಗಳ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮೂರಲ್ಲಿ ಎಲೆಯಡಕೆಗೆ ’ಕವಳ’ ಎಂಬರು. ಕವಳ ಎಂದರೆ ಊಟ. ರಸಗವಳ ಎಂದರೆ ಮೃಷ್ಟಾನ್ನ ಭೋಜನ. ಊಟದಷ್ಟೇ ಮಹತ್ವ ಎಲೆಯಡಕೆಗೂ ಇರುವುದರಿಂದ ಪೂರ್ವಜರು ಅದನ್ನು ಕವಳ ಎಂದಿದ್ದಾರೆ. ನಮ್ಮ ಹಿರಿಯರ ಪರಿಚಿತರು ಸ್ನೇಹಿತರು ನಮ್ಮೂರಕಡೆ ಕೆಲವೊಮ್ಮೆ ಬಂದಾಗ " ಗಡಿಬಿಡಿ ಇದೆ, ಊಟಗೀಟ ಏನೂ ಬೇಡ ಒಂದು ಕವಳ ಕೊಡಿ ಸಾಕು " ಎಂದು ಕವಳಹಾಕಿಕೊಂಡು ಹೋಗುತ್ತಾರೆ. ಕವಳ ಅಷ್ಟು ಉತ್ತೇಜನಕಾರಿಯಾಗಿದೆ. ಕೆಲವರಿಗೆ ಕವಳ ಇದ್ದ ಹೊರತು ಕೆಲಸವೇ ನಡೆಯುವುದಿಲ್ಲ! ಶುಭಕಾರ್ಯಗಳ ದಿನ ಊಟದ ನಂತರ ತಾಂಬೂಲ ಕೊಡುವುದು ಶಾಸ್ತ್ರೋಕ್ತ ಪದ್ಧತಿಯಾಗಿರುತ್ತದೆ. ಅದರೊಟ್ಟಿಗೆ ಅಲ್ಲಿಯೇ ಹಾಕಿಕೊಳ್ಳಲು ರಸಭರಿತ ಪಾನ್ ಬೀಡಾಗಳನ್ನು ಕೊಡುವುದೂ ವಾಡಿಕೆಯಲ್ಲಿದೆ ಅಲ್ವೇ?

ಬಾಯಲ್ಲಿ ನೀರೂರಿಸುವ ಮಘೈ ಪಾನ್

ಕವಳದಲ್ಲಿ ಏನೆಲ್ಲಾ ಇರಬೇಕು :


೧. ನಾಗವಲ್ಲೀ ----ನಾಗವಲ್ಲೀ ಎಂದರೆ ಸಿನಿಮಾದಲ್ಲಿ ನೋಡಿದ್ದು ನೆನಪಾಗಿ ಹೆದರಿ ಓಡಿಹೊಗಬೇಡಿ. ಇದೊಂದು ಜಾತಿಯ ಬಳ್ಳಿ. ಇದರ ಎಲೆಯೇ ಕವಳಕ್ಕೆ ಶ್ರೇಷ್ಟ. ಇದು ಮತ್ತದೇ ನಮ್ಮ ಕರಾವಳಿ ಜಿಲ್ಲೆಗಳಲ್ಲಿ, ಮಲೆನಾಡಿನಲ್ಲಿ, ಬಯಲು ಸೀಮೆಯಲ್ಲಿ[ಸ್ವಲ್ಪ] ಮತ್ತು ಮೈಸೂರಿನಲ್ಲಿ ಬೆಳೆಯಲ್ಪಡುತ್ತದೆ. ಮೈಸೂರಿನ ಎಲ ಹೆಸರುವಾಸಿಯಾದರೂ ಕರಾವಳೀ ವೀಳ್ಯದೆಲೆ ಅದಕ್ಕೆ ಯಾವುದರಲ್ಲೂ ಕಮ್ಮಿಯಿಲ್ಲ. [ಮದ್ರಾಸ್ ಎಲೆ ಅಥವಾ ಅಂಬಾಡಿ ಎಲೆಯನ್ನು ಬಳಸುತ್ತಾರಾದರೂ ಅದು ವಿಶೇಷವಲ್ಲ. ಇನ್ನು ಸವಣೂರು, ಕಲ್ಕತ್ತಾ ಹೀಗೇ ಹಲವಾರು ತಳಿಯ ಎಲೆಗಳಿವೆ]

೨. ಅಡಕೆ : ಕೆಂಪಡಕೆ ತುಣುಕುಗಳು ಅಥವಾ ಚಾಲಿ ಅಡಕೆ ತುಣುಕುಗಳು

೩. ಸುಣ್ಣ: ಕಲ್ಲು ಸುಣ್ಣ ಅಥವಾ ಚಿಪ್ಪಿ ಸುಣ್ಣ [ಸ್ವಲ್ಪ]

ಹೆಚ್ಚುವರಿಯಾಗಿ ಉತ್ತಮ ಸ್ವಾದಕ್ಕಾಗಿ :

೪. ಪಚ್ಚಕರ್ಪೂರ [ಅತಿ ಚಿಕ್ಕ ಅಂಶ]

೫. ಲವಂಗ/ ಯಾಲಕ್ಕಿ : ಒಂದು

೬. ಖರ್ಜೂರ : ಉತ್ತುತ್ತಿ / ಖರ್ಜೂರ ಚಿಕ್ಕ ತುಣುಕುಗಳು

೭. ಕೊಬ್ಬರಿ : ಹಸಿ ಕಾಯಿಯ ತುಣುಕು ಅಥವಾ ಕೊಬ್ಬರಿಯ ತುಂಡು

೮. ಬೆಣ್ಣೆ ಗುಲ್ಕನ್ : ಸ್ವಲ್ಪ

ಅಡಕೆ, ವೀಳ್ಯದೆಲೆ, ಸುಣ್ಣ ಹದವಾಗಿ ಬೆರೆತಾಗ ಅದರಲ್ಲಿರುವ ಕ್ಯಾಲ್ಶಿಯಮ್ ಮತ್ತು ಇನ್ನಿತರ ನೈಸರ್ಗಿಕ ರಸಾಯನದ ಅಂಶಗಳು ಹಲ್ಲುಗಳು ಮತ್ತು ಒಸಡುಗಳನ್ನು ಕಾಪಾಡುವಲ್ಲಿ ಪ್ರಯೋಜನಕಾರಿಯಾಗಿವೆ. ಕವಳ ಹಾಕುವ ಹಿರಿಯರನೇಕರಿಗೆ ಹಲ್ಲುನೋವಿನ ಬಾಧೆಯೇ ಇರಲಿಲ್ಲ ! ನನ್ನ ಅಜ್ಜ ೮೮ ವರ್ಷಗಳ ಕಾಲ ಬದುಕಿದ್ದರೂ ಒಂದೇ ಒಂದು ದಿನ ಹಲ್ಲು ನೋವು ಎನ್ನಲಿಲ್ಲ, ಅವರ ಹಲ್ಲುಗಳು ಗಟ್ಟಿಮುಟ್ಟಾಗಿದ್ದವು. ಅವರು ಉಪ್ಪು ಇದೆಯೆಂದು ಪ್ರಚಾರಗಿಟ್ಟಿಸುವ ಕಾಲ್ಗೇಟ್ ಬಳಸುತ್ತಿರಲಿಲ್ಲ ಬದಲಿಗೆ ಭತ್ತದ ಉಮಿ ಮತ್ತು ಕರ್ಪೂರ ಇತ್ಯಾದಿ ಸೇರಿಸಿದ ಪುಡಿಯನ್ನು ತೆಂಗಿನಕಾಯಿ ಸಿಪ್ಪೆಯ ಜೂಬಿನಲ್ಲಿ ಒಂದಷ್ಟು ತೆಗೆದುಕೊಂಡು ಗಸಗಸ ಹಲ್ಲುಜ್ಜುತ್ತಿದ್ದರು. ಹಲ್ಲುಗಳು ಫಳಫಳ ಹೊಳೆಯುತ್ತಿದ್ದವು. ಸನ್ಯಾಸಿಗಳು ಇಂಥದ್ದೇ ಮಿಶ್ರಣಕ್ಕೆ ಲವಂಗ ಮತ್ತು ಸ್ಫಟಿಕದ ಪುಡಿಗಳನ್ನು ಬೆರೆಸಿ ಹಲ್ಲುಜ್ಜುತ್ತಾರೆ ಎಂದು ಕೇಳಿಬಲ್ಲೆ. ಹಲ್ಲುಜ್ಜಲು [ಸಾಧ್ಯವಿದ್ದರೆ] ಬೇವಿನ ಕಡ್ಡಿ, ಬೈನೆಕಡ್ಡಿ ಮುಂತಾದ ಆಯುರ್ವೇದದಲ್ಲಿ ಹೇಳಿರುವ ಸಾಧನಗಳನ್ನೂ ಬಳಸಬಹುದಾಗಿದೆ. ಕವಳ ತಿಂದರೆ ಹಲ್ಲಿನ ಮೇಲೆ ಕಲೆ ಶಾಶ್ವತ ಎಂಬ ಮಾತು ಸುಳ್ಳು, ಅದು ನಾವು ಯಾವ ರೀತಿ ಕವಳ ತಿನ್ನುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಹಾಗೂ ಡೌಟಿದ್ದರೆ ನಿತ್ಯ ಬಳಸುವ ಬದಲು ವಾರಕ್ಕೊಮ್ಮೆ ಬಳಸಬಹುದಲ್ಲ ?

ಕವಳಕ್ಕೆ ಯಾವುದು ಬೇಡ :

ಗುಟ್ಕಾ, ಪಾನ್ ಪರಾಗ್, ಜರ್ದಾ, ಇನ್ನಿತರ ಕೆಮಿಕಲ್ ಗಳು ಮತ್ತು ತಂಬಾಕು. ಯಾಕೆಂದರೆ ಇವೆಲ್ಲಾ ಹಾನಿಕಾರಕಗಳಾಗಿವೆ. ಹಲ್ಲು ಕರೆಗಟ್ಟುವುದು, ಹಾಳಾಗುವುದು, ಬಾಯಿ ಹುಣ್ಣಾಗುವುದು, ಕ್ಯಾನ್ಸರ್ ಬಾಧೆ ತಗಲುವ ಸಾಧ್ಯತೆ ಇರುವುದು, ಒಸಡು ಹುಣ್ಣಾಗಿ ದುರ್ನಾತ ಬೀರುವುದು ಹೀಗೇ ಈ ಎಲ್ಲಾ ಆಗುವುದು ಕೇವಲ ಕೆಮಿಕಲ್ ಮತ್ತು ತಂಬಾಕಿನಿಂದ.


ಸಂಶೋಧನೆಗಳ ಫಲವಾಗಿ ರೆಡಾಕ್ಸೈಡ್ [ ಗೋಡೆಯ ಕೆಳಭಾಗಕ್ಕೆ ಬಳಿಯುವ ಬಣ್ಣ]ನ್ನು ಕೆಂಪಡಕೆಯಿಂದ ತಯಾರಿಸಲು ಬರುತ್ತದೆ ಎಂಬುದು ಗೊತ್ತಾಗಿ ಈಗ ತಯಾರಾಗುತ್ತಿದೆ. ಅಡಕೆಮರಗಳ ವೇಸ್ಟ್ ಗಳಿಂದ ಬಯೋ ಡೀಸೆಲ್ ತಯಾರಿಸಲು ಬರುತ್ತದೆಂಬ ವಾದವೂ ಪರಿಶೀಲನೆಯಲ್ಲಿದೆ. ಗುಣಮಟ್ಟದ ಆದ್ಯತೆಯಿಂದ ನಮ್ಮ ದೇಶದಲ್ಲಿನ ಅಡಕೆಗಳು ಕೆಲವೊಮ್ಮೆ ಭೂತಾನ್, ಪಾಕಿಸ್ತಾನ, ಅರೇಬಿಯನ್ ದೇಶಗಳಿಗೂ ರಫ್ತಾಗುತ್ತವೆ.

ಇಂಡೋನೇಷ್ಯಾದ ಅಡ್ಕತ್ರಿ

ಇಂಡೋನೇಷ್ಯಾದ ಅಜ್ಜನ ಕವಳ ಉಕ್ಕಿ ಹರಿದ ಸಂತೋಷ ನೋಡಿ ಮಜಾ ತಕಳಿ !

ಭೌಗೋಳಿಕವಾಗಿ, ವ್ಯಾವಹಾರಿಕವಾಗಿ ಉಪಯೋಗಕಾರೀ ವಸ್ತುವಾಗಿ ಮಂಗಳದ್ರವ್ಯಗಳ ಮಧ್ಯೆ ಆಸೀನವಾಗುವ ಅಡಕೆಯನ್ನು ಆಂಗ್ಲರು ಅರೇಕಾನಟ್ ಎಂದರು. ಇಷ್ಟೆಲ್ಲಾ ಕಥೆಕೇಳಿದಮೇಲಾದರೂ ಯುರೇಕಾ ಯುರೇಕಾ ಅಲ್ಲ ಅರೇಕಾನಟ್ಟು ಅಂದರೆ ಅದರ ಮಟ್ಟ ನಿಮ್ಮ ನಿಲುವಿಗೆ ನಿಲುಕಿರಬೇಕಲ್ಲ? ದುಬಾರಿಯಲ್ಲ ಬಿಡಿ; ಬೇರೇ ಹಣ್ಣು-ಕಾಯಿ ಒಡವೆ ವಸ್ತುಗಳಿಗೆ ಹೋಲಿಸಿದರೆ ಬೆಲೆ ಕಮ್ಮಿಯೇ ! ಮುಗಿಸುವುದಕ್ಕೂ ಮುನ್ನ ಹೇಳಿಬಿಡುತ್ತೇನೆ : ನಾನು ನಿಮ್ಮಗಳ ಮನೆಗೆ ಬಂದಾಗಕವಳಕೊಟ್ಟರೆ ಮಾತ್ರ ಐಶ್ವರ್ಯ ಪ್ರಾಪ್ತಿಯಾಗಲಿ ಎಂದು ಹಾರೈಸುತ್ತೇನೆ, ಗೊತ್ತಾಯ್ತಲ್ಲ?