ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, April 10, 2012

ರಸಿಕ ಜನಗಳೆ ಕೇಳಿ ರಸದ ಔತಣವ ಕಸುವ ತೋರುವ ಕಲೆಯ ಬಿಸುಪಿನಾಲಯವ

ಚಿತ್ರಋಣ: ಅಂತರ್ಜಾಲ
ರಸಿಕ ಜನಗಳೆ ಕೇಳಿ ರಸದ ಔತಣವ
ಕಸುವ ತೋರುವ ಕಲೆಯ ಬಿಸುಪಿನಾಲಯವ

ಭಾಮಿನಿಯೊಂದನ್ನು ಬರೆದು ಯಕ್ಷಗಾನ ಲೋಕಕ್ಕೆ ನಿಮ್ಮನ್ನು ತಾತ್ಕಾಲಿಕವಾಗಿ ಕರೆದೊಯ್ಯುವ ಅಭಿಲಾಷೆ ನನ್ನದು:

ಬಡಗು ತೆಂಕಿನ ಎರಡು ತಿಟ್ಟೊಳು
ಬೆಡಗು ಬಿನ್ನಾಣಗಳ ವೈಭವ
ನಡೆವುದತಿಶಯ ಸುಖದ ಸೇವೆಯು ಕಲೆಯ ರಸಿಕರಿಗೆ |
ಅಡಿಗಡಿಗೆ ಸಂಗೀತಗಾಯನ
ಒಡನೊಡನೆ ಮುದಗೊಳಿಪ ನರ್ತನ
ಕೊಡುವುದುತ್ತಮ ನೀತಿ ಪಾಠವ ಕುಳಿತ ಸಭಿಕರಿಗೆ ||

ಯಕ್ಷಗಾನದಲ್ಲಿ ಆದಿಪ್ರಾಸಕ್ಕೆ ನಮ್ಮ ಕವಿಗಳು ಒತ್ತುಕೊಟ್ಟಿದ್ದಾರೆ. ಸನ್ನಿವೇಶಕ್ಕೆ ಸರಿಯಾಗಿ ಪದ್ಯವನ್ನು ಆದಿಪ್ರಾಸದಲ್ಲಿ ರಚಿಸಿದ್ದು, ಯಕ್ಷಗಾನದ ಆದಿಕವಿಗಳ ರಸಾಭಿರುಚಿಯನ್ನು ತೋರಿಸುತ್ತದೆ. ಕನ್ನಡ ಸಾರಸ್ವತ ಲೋಕದಲ್ಲಿ ಬಳಕೆಯಾದ ಅನೇಕ ಹಳ-ನಡು-ಹೊಸಗನ್ನಡ ಪದಗಳನ್ನು ಯಕ್ಷಗಾನದಲ್ಲಿ ಕಾಣಬಹುದಾಗಿದೆ. ಯಕ್ಷಗಾನದ ಹಾಡು ಒಮ್ಮೆ ಕೇಳಿದರೆ ಮರೆತು ಹೋಗುವಂಥದ್ದಲ್ಲ! ನೋಡಿದ ಪ್ರಸಂಗದ ಕೆಲವು ಪದ್ಯಗಳು ಅನೇಕ ತಿಂಗಳುಗಳತನಕ ಮನದಲ್ಲೇ ಗುನುಗುನಿಸುವುದಿದೆ. ಪದ್ಯಗಳಲ್ಲಿನ ಸಾಹಿತ್ಯಕ ಪದಗಳು ನೆನಪಿಗೆ ಬಾರದೇ ಇದ್ದರೂ, ಆ ರಾಗಗಳು ಆ ತಾಳಗಳು ನಮ್ಮನ್ನು ಮತ್ತೆ ಮತ್ತೆ ಯಕ್ಷಲೋಕದಲ್ಲಿ ವಿಹರಿಸುವಂತೇ ಮಾಡುತ್ತವೆ. ನೋಡುಗನನ್ನು ಅವನು ಹೊಸಬನೋ ಹಳಬನೋ ಕಲೆ ಗೊತ್ತಿರುವವನೋ ಗೊತ್ತಿರದವನೋ ಇದಾವುದರ ಭೇದವಿಲ್ಲದೇ ಕುಳಿತಲ್ಲೇ ಕಟ್ಟಿಹಾಕುವ ತಾಕತ್ತಿರುವ ಒಂದೇ ಸಮಗ್ರ ಕಲೆ ಎಂದರೆ ಅದು ಯಕ್ಷಗಾನ ಮಾತ್ರ! ಹುಟ್ಟಿನಿಂದ ಉಡುಪಿಯವನಾದಮಾತ್ರಕ್ಕೆ ಕವಿ ಮುದ್ದಣ ಯಕ್ಷಗಾನ ಪ್ರಸಂಗಗಳನ್ನು ರಚಿಸಬೇಕಿರಲಿಲ್ಲ. ಅವಿಭಜಿತ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಹಿಂದೆ ಅದೆಷ್ಟೋ ಕವಿಗಳು ಆಗಿ ಹೋಗಿದ್ದಾರೆ. ಉತ್ತರಕನ್ನಡದ ಖ್ಯಾತ ಯಾನ ತಾಣವಾದ ’ಯಾಣ’ ಎಂಬುದೊಂದು ನಿತ್ಯಹರಿದ್ವರ್ಣ ಕಾಡುಮಟ್ಟೆ. ಅಲ್ಲಿ ಇತ್ತೀಚಿನವರೆಗೂ ಯಾವುದೇ ವಾಹನಗಳ ಓಡಾಟ ಸಾಧ್ಯವಿರದಷ್ಟು ಕಾಡಿತ್ತು; ಸರಿಯಾದ ರಸ್ತೆ ಇರಲಿಲ್ಲ-ಅಂತಹ ಕಾಡಿನಲ್ಲೂ ಹಿಂದೆಂದೋ ಜೀವಿಸಿದ್ದ ಬತ್ತಲೇಶ್ವರ ಎಂಬ ಕವಿ ’ಬತ್ತಲೇಶ್ವರ ರಾಮಾಯಣ’ವನ್ನು ಬರೆದಿದ್ದಾನೆ. ಅಂದಿನಿಂದ ಇಂದಿನವರೆಗೆ ಅದೆಷ್ಟೋ ಅಜ್ಞಾತ ಕವಿಗಳು ಕರಾವಳಿ ಜಿಲ್ಲೆಗಳಲ್ಲಿ ಆಗಿಹೋಗಿದ್ದಾರೆ. ಮಳೆಗಾಲದ ೬ ತಿಂಗಳು ಬಿಡದೇ ಧೋಗುಟ್ಟುವ ಮುಸಲಧಾರೆಯಲ್ಲಿ, ಹೊರಗೆ ಯಾವ ಕೆಲಸಕ್ಕೂ ತೆರಳಲಾಗದ ಆ ಕಾಲಘಟ್ಟದಲ್ಲಿ, ಕವಿಗಳ ಮನದಲ್ಲಿ ರೂಪುಗೊಂಡ ಕಲೆ ’ಯಕ್ಷಗಾನ’.

ನಾನು ಹಲವರಲ್ಲಿ ಹೇಳಿಕೊಂಡಿದ್ದೇನೆಂದರೆ ನನ್ನಲ್ಲಿ ಆದಿಪ್ರಾಸದ ಆಸೆ ಹುಟ್ಟಿಸಿದ್ದು, ಹಾಗೆ ಬರೆಯುವ ಪ್ರವೃತ್ತಿ ಬೆಳೆಸಿ ಪೋಷಿಸಿದ್ದು ಇದೇ ಯಕ್ಷಗಾನ! ಮೂಲದಲ್ಲಿ ತಾಳಮದ್ದಳೆಯ ರೂಪದಲ್ಲಿ ಆವಿರ್ಭವಿಸಿದ ಯಕ್ಷಗಾನಕ್ಕೆ ಚಂಡೆಯ ಉಪೋದ್ಘಾತದ ಅಬ್ಬರವಿರಲಿಲ್ಲ. ಚಂಡೆ ಎಂಬುದು ಇಂದಿಗೂ ನೇರವೇದಿಕೆಯ ಕುಣಿತ ಮಿಳಿತದ ಆಟಗಳಿಗೆ ಮಾತ್ರ ಸಂಬಂಧಿಸಿದ್ದಾಗಿದೆ. ಆದರೂ ಚಂಡೆಯ ಸದ್ದನ್ನು ಕೇಳುವ ಬಯಕೆಯಿಂದ ಈಗೀಗ ತಾಳಮದ್ದಳೆಯಲ್ಲೂ ಅದನ್ನು ಬಳಸುತ್ತಿದ್ದಾರೆ. ಪ್ರಸಂಗಗಳು ಅವವೇ ಆಗಿದ್ದರೂ ನೋಡಿದಷ್ಟೂ ಇನ್ನೂ ಮತ್ತೂ ನೋಡಲು ಮನಸ್ಸು ಹಾತೊರೆಯುತ್ತದೆ. ಹಿಂದಿನ ನಮ್ಮ ಪೂರ್ವಜರನೇಕರಿಗೆ ಇಡೀ ಪ್ರಸಂಗಗಳೇ ಬಾಯಿಪಾಠವಾಗಿರುತ್ತಿದ್ದವು ಎಂದರೆ ಎಷ್ಟರಮಟ್ಟಿಗೆ ಅವರು ಆ ಪ್ರಸಂಗಗಳನ್ನು ನೋಡಿರಬಹುದು ಎಂಬುದು ಗೊತ್ತಾಗುತ್ತದೆ. ೧೭-೧೮ನೇ ಶತಮಾನದಲ್ಲಿ ನಮ್ಮ ಹಳ್ಳಿಗಳಲ್ಲಿ ಧ್ವನಿವರ್ಧಕಗಳಾಗಲೀ ವಿದ್ಯುತ್ತಾಗಲೀ ಇದ್ದಿರಲಿಲ್ಲವಲ್ಲ. ಸೇರಿದ ಸಾವಿರಾರು ಸಭಾಸದರಿಗೆ ಕಲೆಯ ಸೊಬಗನ್ನು ಉಣಬಡಿಸುವ ಕಾರ್ಯ ಕೇವಲ ದೊಂದಿಗಳ ಬೆಳಕಿನಲ್ಲೇ ಆಗಬೇಕಾದ ಪ್ರಮೇಯವಿತ್ತು. ಪಾತ್ರಧಾರಿಗಳಿಗೂ[ಕುಣಿಯುವವರಿಗೂ] ಸೂತ್ರಧಾರಿಗಳಿಗೂ[ಭಾಗವತರಿಗೂ] ಗರಳು ಸರಿಯಾಗಿ ಇರಬೇಕಾಗುತ್ತಿತ್ತು. ಸಹಜವಾಗಿ ಅಂದು ಅವರು ಮಾತನಾಡಿದರೆ ಯಾ ಹಾಡಿದರೆ ಆ ಇಡೀ ಸಭೆಗೆ ಅದು ಕೇಳಿಸುತ್ತಿತ್ತು ಮಾತ್ರವಲ್ಲ ರಕ್ಕಸ ಪಾತ್ರಧಾರಿ "ಅಲಲಲ ಕೀ ಹ" ಮುಂತಾಗಿ ವಿಚಿತ್ರವಾದ ಪದಗಳಿಂದ ಕೂಗುವುದಿತ್ತು. ಹಾಗೆ ಕೂಗಿದ್ದು ೪-೫ ಕಿ.ಮೀ. ದೂರದವರೆಗೆ ಕೇಳಿಸುತ್ತಿತ್ತು ಎಂದವರಿದ್ದಾರೆ! ಅದಕ್ಕೆ ಬಹುಶಃ ಶಬ್ದಮಾಲಿನ್ಯ ರಹಿತ ಅಂದಿನ ದಿನಮಾನಗಳೂ ಕಾರಣವಾಗಿದ್ದಿರಬಹುದು. ಇವತ್ತು ಆ ಮಟ್ಟಿನ ಗತ್ತು ಗೈರತ್ತು ಕಾಣಸಿಗುವುದಿಲ್ಲ ಎನ್ನುವವರೂ ಇದ್ದಾರೆ.

ತಾಳಮದ್ದಳೆಯಲ್ಲಿ ಭಾಗವಹಿಸುತ್ತಲೇ ಹೊಸ ಆಯಾಮ ಕೊಟ್ಟು, ಮತ್ತಷ್ಟು ಅಂದವಾಗಿ ಯಕ್ಷಕಲೆಯನ್ನು ಪ್ರಚುರಪಡಿಸುವ ಸಲುವಾಗಿ, ಯಾರೋ ಪುಣ್ಯಾತ್ಮ ತೊಡಗಿಕೊಂಡಿರಬೇಕು! ತಲೆಯ ಮೇಲೆ ಕಿರೀಟ ಅಥವಾ ಮುಂಡಾಸು[ಪೊಗಡೆ], ಭುಜದಮೇಲೆ ಭುಜಕೀರ್ತಿ ಎಂಬ ಆಭರಣ, ಕೊರಳಿಗೆ ಕಂಠಹಾರ, ತೋಳಿಗೆ ತೋಳ್ಬಂಧಿ, ಎದೆಯಗಲದ ಎದೆಗವಚ, ಕರ್ಣಕುಂಡಲದ ರೀತಿಯ ಕಿವಿಯಾಭರಣ, ಕೇದಗೆ ಮುಂದಲೆ, ಕೈಬಳೆಗಳ ರೀತಿಯ ಆಭರಣ, ವಡ್ಯಾಣ, ಕೆಂಪು ಚೌಕುಳಿ ಧೋತಿಯ ಒಳಗಡೆ ಕಪ್ಪು ಪೈಜಾಮಿನ ರೀತಿಯ ತೊಡುಗೆ, ಕಾಲಿಗೆ ಬಿಗಿಗೊಳಿಸುವ ಬಳೆಗಳು ಮತ್ತು ಗೆಜ್ಜೆ, ಆಭರಣಗಳ ಬಣ್ಣಕ್ಕೆ ಹಿನ್ನೆಲೆ ಹೊಂದಾಣಿಕೆಯಾಗಿ ಕೆಂಪು/ಹಸಿರು/ಕಪ್ಪು ಬಣ್ಣದ ಅಂಗಿಗಳು,[ದೈತ್ಯ ವೇಷಕ್ಕೆ ಕಪ್ಪು ಅಂಗಿಯನ್ನೂ ಶ್ರೀಕೃಷ್ಣ ವೇಷಕ್ಕೆ ಹಸಿರು ಅಂಗಿಯನ್ನೂ, ರಾಜಪಾತ್ರಗಳಿಗೆ ಕೆಂಪು ಅಂಗಿಯನ್ನೂ ತೊಡುವುದು ಯಕ್ಷಗಾನದ ಸಂಪ್ರದಾಯ]ವಿವಿಧ ಅಂಗವಸ್ತ್ರಗಳು, ವಿಪುಲ ಕಪ್ಪು ಕೇಶರಾಶಿಯ ವಿನ್ಯಾಸ ಇವುಗಳನ್ನೆಲ್ಲಾ ಗಮನಿಸಿದರೆ ಪ್ರಾಯಶಃ ಇದಕ್ಕೆ ಒಂದು ಕಲಾಮೇಳವೇ ತೊಡಗಿಕೊಂಡಿತ್ತೇನೋ ಎನಿಸುತ್ತದೆ. ತನ್ನ ಹೆಚ್ಚುಗಾರಿಕೆಯಿಂದ ಈಗೀಗ ದೇಶವ್ಯಾಪೀ ಅಷ್ಟೇ ಏಕೆ ವಿದೇಶಗಳವರೆಗೂ ತನ್ನ ಕಂಪನ್ನು ಬೀರಿರುವ ಈ ಕಲೆಯ ಛಾಯಾಚಿತ್ರಗಳು ಎಲ್ಲಿದ್ದರೂ ನೋಡುಗರ ಕಣ್ಣನ್ನು ಅರೆನಿಮಿಷ ಸೆಳೆಯದೇ ಇರುವುದಿಲ್ಲ!

ರಸಿಕ ಜನಗಳೆ ಕೇಳಿ ರಸದ ಔತಣವ
ಕಸುವ ತೋರುವ ಕಲೆಯ ಬಿಸುಪಿನಾಲಯವ

ಹೆಸರು ಕೇಳಿದ ಜನರು ಹೊಸದಾಗಿ ಕಂಡು
ಬೆಸಗೊಂಡು ಕರೆತಂದರದೊ ನೋಡಿ ದಂಡು !

ಹಸನಾದ ಬೆಣ್ಣೆಯನು ಮೆಲುವ ಗೋಪಾಲ
ಕಸೆಯಂಗಿ ಕುಣಿತದಾ ಹಾಸ್ಯಸಖ ಲೋಲ

ಬುಸುಗುಡುವ ಮಾಗಧನು ಕೌರವಾದಿಗಳು
ನಸುನಗುವ ಶ್ರೀರಾಮ ಶಬ್ದವೇದಿಗಳು !

ತುಸುವೇಳೆಯಲ್ಲಿಯೇ ವೇಷಕಟ್ಟುವರು
ನಸುಕು ಹರಿಯುವವರೆಗೆ ಕೋಶಕೊಟ್ಟವರು


--ಹೀಗೊಂದು ನನ್ನ ಪ್ರಾಸಬದ್ಧ ರಚನೆಯೊಂದಿಗೆ ನಿಮ್ಮನ್ನು ಮತ್ತೊಮ್ಮೆ ಹಂಗಿಸುವ ನೆನಪಾಯ್ತು. ಕಾಲವೊಂದರಲ್ಲಿ ರಾತ್ರಿ ೯:೩೦ ರಿಂದ ಮಾರನೇ ಬೆಳಗಿನ ೬:೩೦ರ ವರೆಗೆ ಯಕ್ಷಗಾನ ನಡೆಯುವಾಗ ಎರಡು ಪ್ರಸಂಗಗಳನ್ನು ನಡೆಸುತ್ತಿದ್ದರು. ಚಳಿಗಾಲದಲ್ಲಿ ಆರಂಭವಾಗುವ ವೃತ್ತಿಪರ ಮೇಳಗಳು ಮಳೆಗಾಲದ ಆರಂಭದ ವರೆಗೂ ಸುಮಾರು ನಾಲ್ಕು ತಿಂಗಳು ಪ್ರತಿನಿತ್ಯ ಬೇರೆ ಬೇರೆ ಕಡೆಗಳಲ್ಲಿ ತಂಬು ಹೂಡಿ ಆಟವಾಡಿ ಜನರನ್ನು ರಂಜಿಸುತ್ತಿದ್ದವು. ದುಡ್ಡಿಲ್ಲದ ಕೆಲವು ಜನ ಯಕ್ಷಗಾನವನ್ನು ನಿತ್ಯ ನೋಡುವ ಮಹದಾಸೆಯಿಂದ ತಂಬು ಕಟ್ಟುವ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು. ನಮ್ಮಂತಹ ಎಳೆಯ ಕರುಗಳು ಚೌಕಿ[ಗ್ರೀನ್ ರೂಮ್]ಗೆ ಹೋಗಿ ಯಕ್ಷಗಾನದ ವೇಷಧಾರಿಗಳನ್ನು ಕಂಡುಬರುವುದಿತ್ತು. ವೇಷತೊಟ್ಟವರು ಪರಿಚಯ ಹಿಡಿದು ನಕ್ಕರೂ ನಮಗೆ ಅವರು ಯಾರು ಎಂಬುದು ಕೆಲವೊಮ್ಮೆ ಸ್ಪಷ್ಟವಾಗದೇ ಗೊಂದಲವುಂಟಾಗುತ್ತಿತ್ತು. ನಿಜಜೀವನದಲ್ಲಿ, ಖ್ಯಾತ ನಟರೋರ್ವರ ತಲೆಯ ಒಂದು ಭಾಗ ಸ್ವಲ್ಪ ಓರೆಯಿದ್ದು, ಅವರು ಕೀಚಕನ ವೇಷಹಾಕಿದ್ದಾಗ ತಗುಲಿದ ಭೀಮನ ಹೊಡೆತಕ್ಕೆ ಹಾಗಾಗಿರಬಹುದೆಂಬ ಊಹೆಗಳೂ ಮನದಲ್ಲಿ ಎದ್ದುಬಿಡುತ್ತಿದ್ದವು! [ಸಾಯುವುದಿಲ್ಲ ಸಾಯುವಂತೇ ನಾಟಕವಾಡುತ್ತಾರೆ ಎಂದು ಯಾರೋ ಹೇಳಿದ್ದರು; ಹೀಗಾಗಿ ಕೀಚಕ ಮುಂತಾದ ವಧೆಗೊಳಗಾಗುವ ಪಾತ್ರಗಳನ್ನು ಮಾಡಿದವರು ಸಾಯುವುದಂತೂ ಇಲ್ಲ ಎಂಬುದು ಖಾತ್ರಿಯಾಗಿತ್ತು!]

ಯಕ್ಷಗಾನದ ಪರಿಪೂರ್ಣ ಅಭಿರುಚಿ ಇರುವವರಿಗೆ ನೋಡಿದ ಅದೇ ಪ್ರಸಂಗ ಇನ್ನೊಮ್ಮೆ ನೋಡಿದಾಗ ಹೆಚ್ಚಿಗೆ ಸಿಗುವ ಬೋನಸ್ ಎಂದರೆ : ವಿಶಿಷ್ಟ ಕುಣಿತದ ವಿಭಿನ್ನ ಪಾತ್ರಧಾರಿಗಳು, ಪಾತ್ರಧಾರಿಗಳ ಭಾಷಾಪ್ರಯೋಗದಿಂದ ಅವರವರ ವೈಯ್ಯಕ್ತಿಕ ಜೀವನದ ಮಜಲುಗಳನ್ನೂ ಬಿಂಬಿಸುವ-ಜೊತೆಗೆ ಪ್ರಸಕ್ತ ವಿದ್ಯಮಾನಗಳನ್ನು ಲೋಕಾಭಿರಾಮವಾಗಿ ಅಳವಡಿಸಿಕೊಳ್ಳುವ-ಆಮೂಲಕ ಏಟಿಗೆದಿರೇಟು ಎಂಬ ಸನ್ನಿವೇಶ ನಿರ್ಮಿಸಿ ಜಾಣತನ ತೋರಿಸುವ ಅರ್ಥಗಾರಿಕೆ, ಇನ್ನೂ ಹೆಚ್ಚೆಂದರೆ ಪಾತ್ರಧಾರಿಗಳ ಆಳವಾದ ಅಧ್ಯಯನಶೀಲತೆಯಿಂದ ದೊರೆಯಬಹುದಾದ ಕಥೆಯ ಆಳ-ಅಗಲದ ವ್ಯಾಪ್ತಿಗೆ ಮೆರುಗು ನೀಡುವ ಸಭಿಕರಿಗೆ ಗೊತ್ತಿರದ ಅಂಶಗಳ ಸೇರ್ಪಡೆ. ಯಕ್ಷಗಾನ ಸಮಗ್ರ ಕಲೆ ಎನಿಸಿಕೊಳ್ಳಲಿಕ್ಕೆ ಇದೂ ಒಂದು ಕಾರಣ. ಇಲ್ಲಿ ಪ್ರಸಂಗ ಪುಸ್ತಕಗಳಿವೆಯೇ ಹೊರತು ಕಥೆಗಳು ಗದ್ಯದಲ್ಲಿ ಹೇಳಲ್ಪಟ್ಟಿಲ್ಲ ಅಥವಾ ಸಂಭಾಷಣೆ ಬರೆಯಲ್ಪಟ್ಟಿಲ್ಲ. ಸಂಭಾಷಣೆ ಎಂಬುದು ಬಾಯಿಪಾಠ ಮಾಡಿಕೊಂಡು ಹೇಳುವ ರಿವಾಜಿನದಲ್ಲ. ಬದಲಾಗಿ ಅದು ವ್ಯಕ್ತಿಗತವಾಗಿರುತ್ತದೆ. ರಾಮನ ಪಾತ್ರ ನಿರ್ವಹಿಸುವಾತ ಶ್ರೀರಾಮನನ್ನು ಸಮಗ್ರವಾಗಿ ಅಧ್ಯಯನ ಮಾಡಿರಬೇಕು, ರಾಮನ ಜೀವನದ ಸಂಪೂರ್ಣ ಪರಿಚಯ ಆತನಿಗಿರಬೇಕು, ಜೊತೆಗೆ ಅಂದು ಆಡಲಿರುವ ಪ್ರಸಂಗದಲ್ಲಿ ಪೂರಕವಾಗಬಲ್ಲ ಅಂಶಗಳನ್ನು ಆತ ಹೇಳುವಂತಿರಬೇಕು. ಉದಾಹರಣೆಗೆ ಹನುಮಂತನಿಗೆ ವಾನರ ಸೈನ್ಯವನ್ನು ಕಟ್ಟುವಂತೇ ಶ್ರೀರಾಮ ಹೇಳುವಾಗ ವಾನರವೀರರ ಬಗೆಗಿನ ಮಾಹಿತಿ ರಾಮಪಾತ್ರಧಾರಿಗಿರಬೇಕು. ಹನುಮಂತನ ಪಾತ್ರಧಾರಿ ಜಾಂಬವ, ಅಂಗದ ಮೊದಲಾದ ಹಲವು ಹೆಸರುಗಳನ್ನು ಹೇಳುತ್ತಾನೆ. ಹನುಮನ ಪಾತ್ರ ನಿರ್ವಹಿಸುವ ವ್ಯಕ್ತಿಗೆ ಆ ಹೆಸರುಗಳೂ ಮತ್ತು ಅವರ ಪಾತ್ರಪರಿಚಯವೂ ಚೆನ್ನಾಗಿ ಇದ್ದರೆ ಮಾತು ಸರಾಗವಾಗಿಯೂ ಸುಂದರವಾಗಿಯೂ ಹೊರಹೊಮ್ಮಬಹುದು.

ಊರ ಜಾತ್ರೆಗಳಲ್ಲಿ ಪೂರ್ಣರಾತ್ರಿ ಯಕ್ಷಗಾನ ನೋಡುವ ಪರಿಪಾಟವಿತ್ತು. ಜಾತ್ರೆಯಲ್ಲಿ ತೇರನೇರಿ ಮೆರೆದು ಇಳಿದ ದೇವರು ಪಲ್ಲಕ್ಕಿಯಲ್ಲಿ ಕೂತು ಮೃಗಯಾವಿಹಾರಕ್ಕೆ ಭೇರಿತಾಡನದ ಮೂಲಕ ಹೋಗಿ ಬರುವ ಪದ್ಧತಿ ಇರುತ್ತದೆ. ನಮ್ಮಲ್ಲಿನ ಕೆಲವೆಡೆ ರಥವನ್ನು ಎಳೆಯುವುದು ಸಾಯಂಕಾಲ ೬:೦೦ ಗಂಟೆಗೆ. ಅದರ ನಂತರ ನಿರ್ದಿಷ್ಟ ಪಡಿಸಿದ ಜಾಗದಲ್ಲಿ ಅಷ್ಟಿಷ್ಟು ಸುಡುಮದ್ದು ಪ್ರದರ್ಶನ. ಅದಾದ ನಂತರ ’ಮೃಗಯಾವಿಹಾರ’! ಮೃಗಯಾವಿಹಾರವೆಂದರೆ ಮೃಗಬೇಟೆ. ದೇವರನ್ನು ರಾಜನೆಂದೇ ಭಾವಿಸಿ ದೇವರಿಗೆ ರಾಜೋಪಚಾರ ಪೂಜೆ ನಡೆಸುವುದು ಜಾತ್ರೆಯ/ಉತ್ಸವದ ವೈಭವಗಳಲ್ಲೊಂದು ಅಂಗ. ವೇದ-ವೇದಾಂಗಗಳಿಂದಲೂ, ಸಂಗೀತ-ಸಾಹಿತ್ಯಗಳಿಂದಲೂ, ಶೃತಿ-ಮೌರಿ ವಾದ್ಯಗಳಿಂದಲೂ ಅಷ್ಟಾಂಗ ಸೇವೆ ನಡೆಸಿದ ಸ್ವಲ್ಪ ಸಮಯದಲ್ಲೇ ಉತ್ಸವ ಮೂರ್ತೀ-ಮಹಾರಾಜರನ್ನು ಪಲ್ಲಕ್ಕಿಯಲ್ಲಿಟ್ಟು, ರಾಜ ಮೃಗಬೇಟೆಗೆ ನಡೆದ ಎಂಬಂತಹ ಸನ್ನಿವೇಶವನ್ನು ಸೃಷ್ಟಿಸಿ, ಡೋಲು, ಭೇರಿ, ನಗಾರಿ, ಫಳ, ಶಂಖ, ಜಾಗಟೆ, ಕೊಂಬು-ಕಹಳೆ, ಪಂಚವಾದ್ಯ ಮೊದಲಾದ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಇಡೀ ರಥಬೀದಿಯುದ್ಧಕ್ಕೂ ಕರೆದೊಯ್ದು ಒಂದು ನಿಶ್ಚಿತ ಅರಳೀ ಕಟ್ಟೆಯೋ ಮತ್ತೆಲ್ಲೋ ಸ್ವಲ್ಪ ಹೊತ್ತು ವಿಶ್ರಮಿಸಿ, ಅಲ್ಲಿ ಮತ್ತೆ ಚಿಕ್ಕದೊಂದು ಆರತಿಯೋ ಲಘು ಪೂಜೆಯೋ ನಡೆಸಿ, ಮರಳಿ ದೇವರು ದೇವಸ್ಥಾನದೊಳಕ್ಕೆ ಬಿಜಯಂಗೈಯ್ಯುವಂತೇ ಮಾಡುವುದೇ ಮೃಗಯಾವಿಹಾರ. ಪಲ್ಲಕ್ಕಿಯಲ್ಲಿ ಈ ಸಮಯದಲ್ಲಿ ಸಾಂಕೇತಿಕ ಬಿಲ್ಲು-ಬಾಣಗಳೂ ಇಡಲ್ಪಡುತ್ತವೆ! ಮೃಗಯಾವಿಹಾರ ಮುಗಿದ ತರುವಾಯ ನಮ್ಮಂಥವರಿಗೆ ಯಕ್ಷಗಾನ ಇರದಿದ್ದರೆ ಜಾತ್ರೆ ಅಪೂರ್ಣ! ಎಷ್ಟೋ ಕಡೆ ದೇವರಿಗೆ ಹರಕೆ/ಸೇವೆಯ ಆಟವಾಗಿ ವೃತ್ತಿಮೇಳಗಳವರು ಅಂದು ಮುಫ್ತಿಯಾಗಿ ಆಟವನ್ನು ನಡೆಸಿಕೊಡುತ್ತಿದ್ದರು. ಕರಾವಳಿ ಜಿಲ್ಲೆಗಳಲ್ಲಿ ಮಕ್ಕಳಾಡುವ ಆಟ ಮಕ್ಕಳಾಟವಾದರೆ ದೊಡ್ಡವರಾಡುವುದು ಬಹುತೇಕ ಯಕ್ಷಗಾನವೇ ಆಗಿತ್ತು, ಅದನ್ನೂ ಬಯಲಲ್ಲಿ ಆಡುತ್ತಿದ್ದುದರಿಂದ ’ಬಯಲಾಟ’ ಎಂಬ ಹೆಸರು ಪಡೆದಿತ್ತು.

ನಸುನಾಚಿದವಳ ಮೊಗ ಹಿಡಿದೆತ್ತಿ ಕೇಳಿ
ಪಿಸುಮಾತಲವಳ ಸೌಂದರ್ಯವನು ಹೇಳಿ

ಬಸಿದು ಕೊಡುವೆನು ಜೇನು ಸನಿಹಬಾರೆನುತ
ಕೊಸರಿಕೊಂಡವಳ ಬರಸೆಳೆದು ಕೂರೆನುತ

ಹಸೆಮಣೆಗೆ ಏರುವರು ಹೊಸದು ಎಂಥದಿದು ?
ಬಿಸಜನಾಭನ ದಯೆಯು ಎಮ್ಮಮೇಲಿಹುದು

ಶೃಂಗಾರ ರಸದ ಅಭಿವ್ಯಕ್ತಿಯಂತೂ ಬಹಳೇ ಮುದನೀಡುತ್ತದೆ. ಕಾಲಕ್ಕೆ ತಕ್ಕಂತೇ ನಮ್ಮ ಯುವ ಪೀಳಿಗೆಯ ಸ್ತ್ರೀ ವೇಷಧಾರಿಗಳು ಉಡುಪು-ತೊಡುಪುಗಳಲ್ಲಿ ಸಾಕಷ್ಟು ಮಾರ್ಪಾಟುಗಳನ್ನು ಮಾಡಿಕೊಂಡು ಇಂದಿನ ನಿಜವಾದ ಸ್ತ್ರೀಯರನ್ನೂ ನಾಚಿಸುವಷ್ಟು ನೈಜತೆಯನ್ನು ತಮ್ಮ ಕಲೆಗಾರಿಕೆಯಲ್ಲಿ ತೋರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಶೃಂಗಾರ ಸನ್ನಿವೇಶಗಳಿಗೆ ತಕ್ಕಂತೇ ಪದ್ಯಗಳೂ ಹಂಸಧ್ವನಿ ರಾಗವನ್ನೋ ಮೋಹನ ರಾಗವನ್ನೋ ಬಳಸುವುದು ಬಹಳ ಚಂದ.

ಒಟ್ಟಂದದ ರಾಜನ ಒಡ್ಡೋಲಗದಿಂದ ಹಿಡಿದು ವನವಿಹಾರ, ಜಲಕ್ರೀಡೆ, ಪ್ರೇಮಸಲ್ಲಾಪ, ಯುದ್ಧ, ಸಂಧಾನ, ವಿಜಯಯಾತ್ರೆ, ಮದುವೆ, ವಿಯೋಗ, ವಿರಹ, ನಿರ್ಯಾಣ ಮೊದಲಾದ ಮಾನವ ಜೀವನದ ಎಲ್ಲಾ ಮಜಲುಗಳನ್ನೂ ದಶಾವತಾರದ ಕಥೆಗಳ ಮೂಲಕ ತಿಳಿಸುವ ಈ ಕಲೆಗೆ ಈಗೀಗ ಸಾಮಾಜಿಕ ಕಥೆಗಳೂ ಸೇರಿವೆಯಾದರೂ ಪೌರಾಣಿಕ ಕಥಾಭಾಗಗಳ ನೀತಿಬೋಧೆಯನ್ನು ಹೇಳುವಲ್ಲಿ ಸಾಮಾಜಿಕ ಕಥೆಗಳು ಹಿಂದೆಬೀಳುತ್ತಿವೆ. ಮೇಲಾಗಿ ಇಂದಿನ ಯಕ್ಷಗಾನದ ಕವಿಗಳು ಛಂದಸ್ಸನ್ನೂ ವ್ಯಾಕರಣವನ್ನೂ ಮನಸಿಗೆ ಬಂದ ಹಾಗೇ ಬಳಸುತ್ತಿದ್ದಾರೆ ಎಂಬುದೂ ತೋರಿಬರುತ್ತದೆ. ಯಕ್ಷಗಾನ ಕಲೆ ಬಾಳಬೇಕಾದರೆ ಅದನ್ನು ಪೌರಾಣಿಕ ಪ್ರಸಂಗಗಳಿಗಷ್ಟೇ ಮೀಸಲಾಗಿರಿಸಬೇಕು ಎಂಬುದು ಹಲವು ಯಕ್ಷಗಾನ ಪ್ರಿಯರ ಅನಿಸಿಕೆಯಾಗಿದೆ.

ಪ್ರಸವ ವೇದನೆಯಲ್ಲಿ ಛಂದಗಳ ಮರೆತು
ಹಸಿದವಗೆ ಉಣಬಡಿಸೆ ಅದು ಹೋಕು ಸೋತು !

ಕಸವ ಗುಡಿಸುವುದದರ ಧರ್ಮ ಮೂಲದಲಿ
ಒಸಗೆ ಈವುದೆ ರೀತಿ ನೀತಿ ಮಾರ್ಗದಲಿ ?

ಕೆಲವರು, ಯಕ್ಷಗಾನದ ಬೆಳವಣಿಗೆಗೆ ಹೊಸಹೊಸ ಪ್ರಸಂಗಗಳ ಸೇರ್ಪಡೆಯೂ ಆಗಬೇಕು ಎನ್ನುವವರಿದ್ದಾರೆ. ನನ್ನ ದೃಷ್ಟಿಕೋನ ಹೀಗಿದೆ: ಪುರಾಣಗಳಲ್ಲಿ ಇನ್ನೂ ಹಲವು ಸನ್ನಿವೇಶಗಳಿವೆ; ಅವುಗಳಿನ್ನೂ ಯಕ್ಷಗಾನದಲ್ಲಿ ಪ್ರಸಂಗಗಳಾಗಿ ಅಳವಡಿಕೆಯಾಗಿಲ್ಲ! ನವಕವಿಗಳು ಯಾರು ಯಕ್ಷಗಾನ ಬರೆಯುತ್ತಾರೋ ಅಂಥವರು ಪುರಾಣಗಳನ್ನು ಸರಿಯಾಗಿ ಅರಿತುಕೊಂಡರೆ, ಆಗ ಹೊಸ ಪೌರಾಣಿಕ ಪ್ರಸಂಗಗಳನ್ನೇ ಸಿದ್ಧಪಡಿಸಬಹುದಾಗಿದೆ. ಹಾಗೆ ಬರೆಯುವಾಗ ಕನ್ನಡದ ವ್ಯಾಕರಣ, ಛಂದಸ್ಸು, ಪ್ರಾಸ ಇವುಗಳನ್ನೆಲ್ಲ ಕರತಲಾಮಲಕವನ್ನಾಗಿ ಮಾಡಿಕೊಂಡು ಬರೆದರೆ ಉತ್ತಮ. ರಂಜನೆಯ ಜೊತೆಜೊತೆಗೆ ಸಮಾಜದಲ್ಲಿನ ಕೊಳೆಯನ್ನು ತೊಳೆಯಲು ಯಕ್ಷಗಾನ ಪ್ರಸಂಗ ಬಳಸುವಂತಿರಬೇಕು. ಹೇಗೋ ಬರೆದು ಮುಗಿಸಿ ಆಡಲು ಕೊಟ್ಟರೆ ಆಗ ಪ್ರಸಂಗವೇನೋ ರಂಜಿಸಬಹುದಾದರೂ ಇಂದಿನ ಕಮರ್ಷಿಯಲ್ ಸಿನಿಮಾಗಳ ರೀತಿ ಮೌಲ್ಯಗಳು ನೆಲಕಚ್ಚುವ ಸಾಧ್ಯತೆಯೇ ಜಾಸ್ತಿ.

ಯಕ್ಷಗಾನವೆಂಬ ನಮ್ಮ ಕನ್ನಡನೆಲದ ಈ ಅದ್ಭುತ ಕಲೆ ಸದಾ ಎಲ್ಲೆಡೆ ದಂತಕಥೆಯಾಗಿರಲಿ; ಎಲ್ಲೆಲ್ಲೂ ಜನ ಖುಷಿಯಿಂದ ನೋಡಿ ಆನಂದಪಡುವ ಸ್ಥಾನಮಾನ ಕಾಪಾಡಿಕೊಳ್ಳಲಿ; ಮಾನವ ಸಹಜಧರ್ಮದ ನೀತಿಧ್ಯೇಯಗಳನ್ನು ಎತ್ತಿಹಿಡಿಯಲಿ ಎಂದು ಆಶಿಸುತ್ತಾ, ಯಕ್ಷಗಾನ ಪಾತ್ರಧಾರಿಗಳಿಂದಲೂ, ಸೂತ್ರಧಾರಿಗಳಿಂದಲೂ ಮತ್ತು ಪ್ರಸಂಗಕರ್ತರಿಂದಲೂ ಅದನ್ನೇ ಅಪೇಕ್ಷಿಸುತ್ತಾ, ನಿರೀಕ್ಷಿಸುತ್ತಾ ಮತ್ತೆ ಅವರೆಲ್ಲರಿಗೂ ಶುಭ ಹಾರೈಸುತ್ತಾ, ಎತ್ತಿದ ಸ್ವರಚಿತ ಪದ್ಯದ ಸೊಲ್ಲಿನಿಂದಲೇ ಮಂಗಳಹಾಡುತ್ತಿದ್ದೇನೆ :

ರಸಿಕ ಜನಗಳೆ ಕೇಳಿ ರಸದ ಔತಣವ
ಕಸುವ ತೋರುವ ಕಲೆಯ ಬಿಸುಪಿನಾಲಯವ