ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, October 27, 2012

ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ


ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ 
ಅಧ್ಯಾಯ-೧

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದ ಕುಣಿವ ಕುಂತಳದ |
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿಸ್ತ
ರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ||

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿಪುರಾಣಾಗಮ ಸಿದ್ಧಿದಾಯಕಿಯೆ |
ಶೌರಿಸುರಪತಿ ಸಕಲಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ||

ತನ್ನ ದೇಶ ಕಾಲಗಳ ಬಗ್ಗಾಗಲೀ ತನ್ನ ಬಗ್ಗಾಗಲೀ ಏನೂ ತಿಳಿಸದೇ ಮಹಾಕವಿ ಕುಮಾರವ್ಯಾಸ ತನ್ನದೇ ಆದ ವಿಶಿಷ್ಟ ಛಾಪಿನಲ್ಲಿ ಕರ್ಣಾಟ ಭಾರತ ಕಥಾಮಂಜರಿ ಅರ್ಥಾತ್ ಕುಮಾರವ್ಯಾಸ  ಭಾರತವನ್ನು ಬರೆದ. ಋಷಿಸಂಸ್ಕೃತಿಯ ಕವಿ-ಸಾಹಿತಿಗಳ ಮನದಲ್ಲಿ ಚಣಕಾಲ ನೆಲೆನಿಂತು ಬರೆಯಿಸುವ ಶಕ್ತಿ ಕಣ್ಣಿಗೆ ಗೋಚರವಲ್ಲ! ಒಮ್ಮೆ ಬರೆದಿದ್ದನ್ನು ಮತ್ತೆ ತೆರೆದು ಓದಿದರೆ ತಾವೇ ಬರೆದದ್ದು ಹೌದೇ ಎನಿಸುವ ಅನೇಕ ಅದ್ಭುತ ಕಥಾನಕಗಳ ಕೃತಿಕಾರರ ಮನದಲ್ಲಿ ಉತ್ತಮಕೃತಿಗಳ ರಚನೆಯನ್ನು ರಚಿಸುವಂತೇ, ನಿಂತು ನಡೆಸಿದ ಅಂತಹ ದಿವ್ಯ ಶಕ್ತಿಯ ಜಾಡು ಹಿಡಿದು ಹೊರಟರೆ ತಿಳಿಯುವುದು ಪರಬ್ರಹ್ಮ ಸ್ವರೂಪ!! ಅಂತಹ ಶಕ್ತಿಯನ್ನು ಆದಿಯಲ್ಲಿ ಗುರುವಾಗಿ, ಗಣಪತಿಯಾಗಿ, ಶಾರದೆಯಾಗಿ, ಶೌರಿ-ಸುರಪತಿ-ವರವಿರಂಚಿ-ಮಹೇಶ್ವರನಾಗಿ ಕಂಡು ಕೈಮುಗಿಯುವುದು ಸತ್ಸಂಪ್ರದಾಯ. ಹಾಗೊಮ್ಮೆ ಎಲ್ಲ ದೇವಾನುದೇವತೆಗಳಿಗೂ ನಮಿಸುತ್ತಾ, ಕವಿಜನಸಂದಣಿಗೆ ಬಲಬಂದು,  ’ಸನಾತನ ಜೀವನ ಧರ್ಮ’ ದ ಬಗೆಗೆ ಬರೆಯಲು ಅನುವು ಮಾಡಿಕೊಡಿರೆಂದು ಪ್ರಾರ್ಥಿಸುತ್ತಿದ್ದೇನೆ.  

ಬಹುಕಾಲದಿಂದ ಅನೇಕರ ಪ್ರಶ್ನೆ ನನ್ನಲ್ಲಿ: "ನೀವು ಯಾಕೆ ಯಾವಾಗಲೂ ಧಾರ್ಮಿಕ ವಿಷಯಗಳ ಬಗ್ಗೆ ಜಾಸ್ತಿ ಒತ್ತುಕೊಡುತ್ತೀರಿ?"

ಅನೇಕಾವರ್ತಿ ಹೇಳಿದ್ದನ್ನೇ ಮತ್ತೊಮ್ಮೆ ಹೇಳುತ್ತಿದ್ದೇನೆ: ನನ್ನದು ವೇದ ಸಂತುಲಿತ ಜೀವನ. ಅಪೌರುಷೇಯವಾದ ವೇದಗಳನ್ನು ಸದಾ ಭಾಗಶಃ ಆಸ್ವಾದಿಸುತ್ತಾ, ಆಮೋದಗೊಳ್ಳುತ್ತಾ ಆ ಗುಂಗಿನಲ್ಲಿಯೇ ಮನದ ಕೆಳಸ್ತರಗಳಲ್ಲಿ ಉದ್ಭವಗೊಳ್ಳುವ ಲೌಕಿಕಭಾವಗಳನ್ನು ಕವನ-ಲೇಖನಗಳ ರೂಪದಲ್ಲಿ ಬರೆಯುವುದು ನನ್ನ ಅಭ್ಯಾಸ. ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ನನ್ನಿಂದ ಬರೆಯಿಸಿದ ಆ ಶಕ್ತಿ ಎಲ್ಲವನ್ನೂ ಒಂದು ಮೂಲಾಧಾರಸೂತ್ರದಲ್ಲಿ ಬಂಧಿಸುತ್ತದೆ-ಅದು ಮಾನವ ಸಹಜ ಜೀವನ ಧರ್ಮ. ಧಾವಂತದ ಜೀವನದಲ್ಲಿ ಅನೇಕರಿಗೆ ಬಿಡುವಿಲ್ಲ, ಕೆಲವರಿಗೆ ಆಸಕ್ತಿಯೂ ಇಲ್ಲ, ಇನ್ನು ಕೆಲವರಿಗೆ ಸಮರ್ಪಕ ವಿಷಯ ಸಿಗುತ್ತಿಲ್ಲ. ಜನಸಾಮಾನ್ಯರಾದ ನಮಗೆ ಸನಾತನ ಧರ್ಮದ ಮಹತ್ವದ ಅರಿವಿಲ್ಲದೇ ಯಾರೋ ಹೇಳಿದ ಇನ್ಯಾವುದನ್ನೋ ಹಿಂಬಾಲಿಸಿ ನಡೆಯುತ್ತಿದ್ದೇವೆ. ಒಮ್ಮೆ ಸನಾತನ ಧರ್ಮ ಎಷ್ಟು ನಿಸರ್ಗ ಸಹಜವಾಗಿದೆ ಮತ್ತು ಅತ್ಯುತ್ತಮವಾಗಿದೆ ಎಂಬುದನ್ನು ತಿಳಿದರೆ, ಮತ್ತೆ ಪ್ರಶ್ನೆಗಳು/ಸಂದೇಹಗಳು ಹುಟ್ಟುವುದಿಲ್ಲ. ಈ ಒಂದು ಕಾರಣಕ್ಕಾಗಿ ಅಕ್ಷರಪ್ರಿಯ ಸ್ನೇಹಿತರೆಲ್ಲರ ಓದಿಗಾಗಿ ಆರಂಭಗೊಂಡಿದ್ದು ಈ ಮಾಲಿಕೆ. ಜನಸಾಮಾನ್ಯರ ಎಲ್ಲಾ ಪ್ರಶ್ನೆಗಳನ್ನೂ ಮನದಲ್ಲಿ ಒಡಮೂಡಿಸಿಕೊಂಡು ಬರೆಯುವ ಉತ್ತರರೂಪೀ ಕಥಾನಕಗಳ ಮಾಲಿಕೆ ಇದಾಗಿರುತ್ತದೆ. ತೆಂಗಿನಕಾಯಿಯೇ ಮಧುರ-ಅದಕ್ಕೆ ಬೆಲ್ಲವನ್ನು ಸೇರಿಸಿದಾಗ ಹೇಗೆನಿಸಬಹುದು?  ಕಾಯಿ-ಬೆಲ್ಲ ಮೆಲ್ಲುವುದು ಬಹುಸಂಖ್ಯಾಕರಿಗೆ ಸಂತಸ ತರುವ ವಿಷಯ; ಅದೇ ರೀತಿ ಸಾಹಿತ್ಯಕ ಕ್ರೀಡೆಗಳಲ್ಲಿ ಆಸಕ್ತರಾದವರಿಗೆ ಮಹಾಕವಿಗಳ ಕಾವ್ಯಧಾರೆ ಕಾಯಿ-ಬೆಲ್ಲ ಇದ್ದಹಾಗೇ. ಕವಿಗಳ ಹೇಳಿಕೆಗಳ ಸಹಯೋಗದೊಂದಿಗೆ, ಅನೇಕ ಕಂತುಗಳಲ್ಲಿ ಈ ಕಥಾನಕ ನಡೆದುಬರುತ್ತದೆ.

ಹಿಂದುತ್ವ-ಭಾರತೀಯತೆ, ಸಂಸ್ಕೃತಿ-ನಾಗರಿಕತೆ, ಧರ್ಮ-ಮತ, ಪಂಚಾಂಗ, ಸ್ನಾನ-ಶೌಚ, ಆಹಾರ, ಜಪ-ಧ್ಯಾನ, ಯೋಗ-ಪ್ರಾಣಾಯಾಮ-ಸೂರ್ಯನಮಸ್ಕಾರ, ವೇದಗಳು, ಹಬ್ಬಗಳು, ಹಿಂಸೆ-ಅಹಿಂಸೆ, ಸತ್ಯ-ಅಸತ್ಯ, ಸ್ವಾಧ್ಯಾಯ, ದೇಹಾಲಂಕಾರ, ಪೂಜೆ-ಪುನಸ್ಕಾರ-ದಾನ, ಸಂಸ್ಕಾರಗಳು, ದೈನಂದಿನ ಚರ್ಯೆಗಳು ಹೀಗೆ ಹಲವು ಹತ್ತು ಅಧ್ಯಾಯಗಳು ಈ ಮಾಲಿಕೆಯಲ್ಲಿ ಪ್ರಸ್ತಾಪಿತಗೊಳ್ಳುತ್ತವೆ. ಸೀಮಿತ ಪರಿಮಿತಿಯಲ್ಲಿ ಸಂವಾದಗಳಿಗೆ ಅವಕಾಶವೂ ಇರುತ್ತದೆ.

ಹಿಂದೂಗಳು ಎಂದರೆ ಯಾರು ?

ಹಿಂದೂಗಳು ಎಂದರೆ ಯಾರು ಎಂಬುದನ್ನು ಅರಿಯುವ ಮೊದಲು ಒಂದು ನಿವೇದನೆ: ಜಗತ್ತಿನಲ್ಲಿರುವ ಎಲ್ಲರ ಶಾಂತಿಗಾಗಿ, ಸಮೃದ್ಧಿಗಾಗಿ, ಸಂತೃಪ್ತಿಗಾಗಿ ಎಲ್ಲರೂ ವಿವಿಧ ರೂಪಗಳಲ್ಲಿ ಪರಾಶಕ್ತಿಯನ್ನು ಕಾಣಲು ಬಯಸುತ್ತಾರೆ. ಯಾರು ಯಾವ ರೂಪದಲ್ಲೇ ಕಂಡರೂ, ನೆನೆದರೂ ಶಕ್ತಿಯಿರುವುದು ಒಂದೇ ಎರಡಲ್ಲ ಎಂಬುದನ್ನು ನೆನಪಿಸುವ ಶ್ಲೋಕ ಈ ರೀತಿ ಇದೆ:

ಯಂ ವೈದಿಕಾಃ ಮಂತ್ರದೃಶಃ ಪುರಾಣಾಃ ಇಂದ್ರಂ ಯಮಂ ಮಾತರಿಶ್ವಾನಮಾಹುಃ |
ವೇದಾಂತಿನೋ ನಿರ್ವಚನೀಯಮೇಕಂ ಯಂ ಬ್ರಹ್ಮಶಬ್ದೇನ ವಿನಿರ್ದಿಶಂತಿ ||
ಶೈವಾಯಮೀಶಂ ಶಿವ ಇತ್ಯವೋಚನ್ ಯಂ ವೈಷ್ಣವಾಃ ವಿಷ್ಣುರಿತಿಸ್ತುವಂತಿ |
ಬುದ್ಧಸ್ತಥಾರ್ಹನ್ನಿತಿ ಬೌದ್ಧಜೈನಾಃ ಸತ್ಶ್ರೀ ಅಕಾಲೇತಿ ಚ ಸಿಖ್ಖಸಂತಃ ||
ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರಃ ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ |
ಯಂ ಪ್ರಾರ್ಥಯಂತೇ ಜಗದೀಶಿತಾರಂ ಸ ಏಕ ಏವ ಪ್ರಭುರದ್ವಿತೀಯಃ ||  

ಸನಾತನಿಗಳ ಪರಮೋಚ್ಚ ಆದರ್ಶವೆಂದರೆ ಯಾರನ್ನೂ ಹಿಂಸಿಸದೇ ಬದುಕುವುದು. ವಿವಿಧ ಮತಗಳಿಂದ ಕೂಡಿದ ಭಾರತ ಹಿಂದೊಮ್ಮೆ ಸಂಪೂರ್ಣ ಸನಾತನಿಗಳಿಂದಲೇ ತುಂಬಿತ್ತು! ಕಾಲಗತಿಯಲ್ಲಿ, ಐಹಿಕ ಸುಖವನ್ನಷ್ಟೇ ಪ್ರಧಾನವನ್ನಾಗಿ ಬಯಸಿದ ಮನಸ್ಸುಗಳು ಯಾವುದೋ ಹೊಸತನವನ್ನು ಬಯಸಿ ಬೇರೇನನ್ನೋ ಹುಡುಕಹೊರಟವು. ಏನನ್ನೋ ಕಂಡಹಾಗೇ ಭಾವಿಸಿದವು. ಹಾಗೆ ಸ್ಥಾಪಿತವಾದ ಹೊಸಮತಗಳ ಪ್ರತಿಪಾದಕರಿಗೆ ಅನುಯಾಯಿಗಳೂ ಜನಿಸಿದರು. ಹಾಗೇ ಮತಗಳ ಸಂಖ್ಯೆಯಲ್ಲೂ ಮತ್ತು ಅವುಗಳ ಅನುಯಾಯಿಗಳ ಸಂಖ್ಯೆಯಲ್ಲೂ ವೃದ್ಧಿಯಾಯ್ತು. ಸನಾತನಿಗಳಲ್ಲೇ ಹಲವು ಮತಗಳು ಹುಟ್ಟಿಕೊಂಡರೂ ಮೂಲದಲ್ಲಿ ಎಲ್ಲರೂ ಸನಾತನಿಗಳೇ ಆಗಿದ್ದರು; ಮತ್ತು ಅರಿಯದೇ ತಾವು ಆಚರಿಸುತ್ತಿರುವ ಇಂದಿನ ಹೊಸ ಮತಗಳೇ ಸರಿಯೆಂದು ವಾದಿಸುವ ಅವರಿಗೆ ನಿಜದ ನೆಲೆಯ ಅರಿವಾದರೆ ಸನಾತನಿಗಳ ದೊಡ್ಡತನದ ಅರಿವೂ ಆದೀತು. ಹುಟ್ಟಾ ಯಾರೂ ಏನನ್ನೂ  ತರಲಿಲ್ಲ, ಹೋಗುವಾಗ ಕೊಂಡೊಯ್ಯುವುದಿಲ್ಲ ಎಂಬುದೆಲ್ಲಾ ಸರಿ. ಆದರೆ ಬದುಕಿರುವವರೆಗೆ ಯಾವ ರೀತಿ ಇದ್ದರೆ ಎಲ್ಲೂ ಎಂದೂ ಯಾರಿಗೂ ಯಾವುದಕ್ಕೂ ಘಾಸಿಯಾಗುವುದಿಲ್ಲ ಎಂಬುದನ್ನು ಪ್ರತಿಪಾದಿಸುವ ಏಕೈಕ ಧರ್ಮವೆಂದರೆ ಅದು ಸನಾತನ ಧರ್ಮ. ಇದ್ದುದನ್ನು ಇದ್ದಹಾಗೇ ಇರಲು/ಬಾಳಲು ಬಿಡು ಎಂಬ ಸನಾತನ ತತ್ವವನ್ನು ಇಲ್ಲೊಮ್ಮೆ ಅವಲೋಕಿಸಬೇಕು. 

ಹಿಂದೂ ಸಮಾಜವನ್ನು ದೂಷಿಸುವವರು ಕ್ರೈಸ್ತ ಮಿಶನರಿಗಳೋ ಮುಸ್ಲಿಂ ಮದರಸಾಗಳವರೋ ಅಥವಾ ಪಾಶ್ಚಾತ್ಯರ ಮಾನಸ ಪುತ್ರರಂತಾಗಿರುವ ನಮ್ಮವರೋ ಸನಾತನ ಧರ್ಮವನ್ನು ಸರಿಯಾಗಿ ಅರ್ಥೈಸದೇ ಹಾಗೆ ಮಾಡುತ್ತಾರೆ. ವಿಶೇಷವೆಂದರೆ ಪಾಶ್ಚಾತ್ಯ ವಿದ್ವಾಂಸರನೇಕರಲ್ಲಿ ಸರಿಯಾದುದನ್ನು ಅರಿಯುವ, ಅರಿತು ಅಳವಡಿಸಿಕೊಳ್ಳುವ ಔದಾರ್ಯ ಇದೆಯೆಂಬುದನ್ನು ಅಲ್ಲಗಳೆಯಲಾಗದು. ಹಿಂದೂ ಎಂಬ ಪದ ಪರಕೀಯರು ನಮಗಿಟ್ಟಿದ್ದು ಎಂಬ ತಪ್ಪುಕಲ್ಪನೆ ಇದೆ. ಹಿಂದೂ ಎಂದರೆ ಬೇರೇ ಭಾಷೆಗಳಲ್ಲಿ ಹೇಡಿ, ತಿರಸ್ಕಾರ ಸೂಚಕ ಶಬ್ದ ಎಂಬೆಲ್ಲಾ ಹೇಳಿಕೆಗಳೂ ಇವೆ. ಆದರೆ ವಾಸ್ತವ ಅದಲ್ಲ. ಹಿಂದೂ ಎಂದರೆ ಸಿಂಧೂ ಎಂಬ ಪದದ ಅಪಭ್ರಂಶ. ಸಪ್ತ ಮಹಾನದಿಗಳು ಅಥವಾ ಸಪಸಿಂಧೂ ಭೂಮಿ ಈ ಭಾರತ. ಸಪ್ತ ಎಂಬ ಪದ ಹಪ್ತ ಎಂದಾಗಿದ್ದು ನಮಗೆ ಗೋಚರಿಸುತ್ತದೆ. ಅದೇ ರೀತಿ ಸಪ್ತಸಿಂಧೂ ಹೋಗಿ ಹಪ್ತಹಿಂದೂ ಆಗಿ ಅದರಲ್ಲೂ ಹಿಂದೂ ಉಳಿದುಕೊಂಡಿದೆ. ಹಿಂದೂ ಎಂಬುದಕ್ಕಿಂತಾ ಭಾರತೀಯ ಅಥವಾ ಸನಾತನ ಎಂಬುದು ಉತ್ತಮ ಪದ. ಭಾರತದ ನಿವಾಸಿಗಳೆಲ್ಲಾ ಹಿಂದೂಗಳೇ. ಹಿಂದೂ ಎಂಬ ಒಂದೇ ಪದ ಪ್ರಸಕ್ತ ಭಾರತ ನಿವಾಸಿಗಳೆಲ್ಲರನ್ನೂ ತನ್ನೊಳಗೆ ಅಡಕಮಾಡಿಕೊಳ್ಳುತ್ತದೆ. ಯಾಕೆಂದರೆ ಹಿಂದೂ ಎಂದರೇ ಭಾರತೀಯತೆಯಲ್ಲದೇ ಬೇರೇ ಅಲ್ಲ. ಹಿಂದೂ  ಎನಿಸಿಕೊಂಡ ಮಾತ್ರಕ್ಕೆ ಆತ ಸನಾತನ ದೇವರುಗಳನ್ನೇ ಪೂಜಿಸಬೇಕೆಂಬ ಅರ್ಥವಲ್ಲ; ಆದರೆ ಹಿಂದೂ ಎನಿಸಿಕೊಂಡವನು ವೈಜ್ಞಾನಿಕ ನೆಲೆಗಟ್ಟಿನ ಭಾರತೀಯ ಮೂಲದ್ದಾದ ಸತ್ಸಂಪ್ರದಾಯಗಳನ್ನು [ಯಾವುದೇ ಪೂರ್ವಾಗ್ರಹಪೀಡಿತನಾಗದೇ] ಪಾಲಿಸುವುದು ಆತನ ಧರ್ಮವಾಗುತ್ತದೆ. ಹಾಗಾದ್ರೆ ಇಲ್ಲೊಂದು ಪ್ರಶ್ನೆ ನಿಮ್ಮಲ್ಲೇಳುವುದು ಸಹಜ. ಭಾರತೀಯರಲ್ಲಿ ಅನ್ಯ ಮತಗಳಿಗೆ ಸೇರಿದವರೂ ಇದ್ದಾರಲ್ಲಾ ..ಅವರೇನು ಮಾಡಬೇಕು. ಇದಕ್ಕೆ ಉದಾಹರಣೆ ಇಷ್ಟೇ: ಅಮೇರಿಕಾದಲ್ಲಿ ನೆಲೆಸಿದವರು ಅಲ್ಲಿನ ಕಾಯ್ದೆ-ಕಾನೂನು ಸಂಪ್ರದಾಯಗಳನ್ನು ಮೀರುವಂತಿಲ್ಲವಷ್ಟೇ? ಅದೇ ರೀತಿ ಭಾರತದಲ್ಲಿ ನೆಲೆಸಿದ ಪ್ರತೀ ವ್ಯಕ್ತಿಯೂ ಇಲ್ಲಿನ ಮೂಲ ಸಂಸ್ಕೃತಿ-ಸಂಪ್ರದಾಯಗಳಿಗೆ ಧಕ್ಕೆಯಾಗದಂತೇ ನಡೆದುಕೊಳ್ಳುವುದು ಭಾರತವಾಸಿಗಳ ಧರ್ಮ.

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ |
ವರ್ಷಂ ತದ್ ಭಾರತಂ ನಾಮ ಭಾರತೀಯತ್ರ ಸಂತತಿಃ ||

ಪ್ರಸಕ್ತ ಸಮುದ್ರದಿಂದ ಉತ್ತರಕ್ಕೂ ಹಿಮಾಲಯದಿಂದ ದಕ್ಷಿಣಕ್ಕೂ ಇರುವ ಭೂಭಾಗದ ನಿವಾಸಿಗಳೆಲ್ಲಾ ಭಾರತೀಯರೇ ಆಗಿದ್ದಾರೆ. ಆಂಗ್ಲರು ಭಾರತಕ್ಕೆ ಬಂದರು, ಭಾರತವನ್ನು ಒಡೆದು ಆಳಿದರು. ಒಡೆದಾಳುವುದೇ ನೀತಿಯೆಂದುಕೊಂಡ ಅವರು ಆರ್ಯರು ಭಾರತಕ್ಕೆ ಬಂದು ಭಾರತೀಯ ಮೂಲನಿವಾಸಿಗಳನ್ನು ಯುದ್ಧಮಾಡಿ ಗೆದ್ದು ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದರು ಎಂಬ ಕಥೆ ಕಟ್ಟಿದರು. ಆ ಕಥೆ ಎಷ್ಟು ವ್ಯಾಪಕವಾಯ್ತೆಂದರೆ ಇವತ್ತಿಗೂ ಇತಿಹಾಸವನ್ನು ಓದುವ ವಿದ್ಯಾರ್ಥಿಗಳನೇಕರು ಆರ್ಯರು ಭಾರತಕ್ಕೆ ಬಂದರು ಎಂಬುದಾಗಿಯೇ ಓದುತ್ತಾರೆ, ಭಾವಿಸುತ್ತಾರೆ. ಆರ್ಯರು ಹೊರಗಿನವರಲ್ಲಾ ಅವರೂ ಭಾರತದಲ್ಲೇ ಯುಗಯುಗಗಳಿಂದಲೂ ಇದ್ದರು ಎಂಬುದಕ್ಕೆ ಪ್ರಾಗೈತಿಹಾಸ ಮತ್ತು ತತ್ಸಂಬಂಧೀ ಹಲವು ದಾಖಲೆಗಳು, ಕುರುಹುಗಳು ಇಂದಿಗೂ ಸಿಗುತ್ತವೆ! ಆಂಗ್ಲ ಭಾಷೆಯ ರೆಲಿಜನ್ ಎಂಬ ಪದವನ್ನು ತರ್ಜುಮೆಮಾಡುವಾಗ ಅನುವಾದಕರಿಗೆ ಅದರ ಅರಿವಿರದ ಕಾರಣ ಧರ್ಮ ಮತ್ತು ಮತ ಎಂಬ ಪದಗಳನ್ನು ಒಂದೇ ಎಂಬಂತೇ ಭಾವಿಸಿ ರೆಲಿಜನ್ ಎಂಬುದನ್ನು ಧರ್ಮ ಎಂದಿದ್ದಾರೆ. ನಮ್ಮ ಪೂರ್ವಜರು ಮತಕ್ಕಿಂತಾ ಭಿನ್ನವಾದ ಧರ್ಮವನ್ನು ಸನಾತನ ಎಂದು ಕರೆಯುತ್ತಿದ್ದರು, ಸನಾತನ ಪದವೇ ಅವರಿಗೆ ಇಷ್ಟವಾಗಿತ್ತು. ಯಾವುದು ಯಾರಿಂದಲೂ ಸ್ಥಾಪಿತವಾಗದ ಧರ್ಮವೋ ಯಾವುದು ಮಾನವನ ಅತಿ ಸಹಜ ಬದುಕುವ ಧರ್ಮವೋ ಅದು ಸನಾತನ ಧರ್ಮ ಅರ್ಥಾತ್ ಹಿಂದೂ ಧರ್ಮ. ಈ ಭುವಿಗೆ ಬಂದ ವ್ಯಕ್ತಿಯೋರ್ವ ತನ್ನ ಇರುವಿಕೆಯಿಂದ, ತನ್ನ ಬದುಕಿಗಾಗಿ, ತನ್ನ ಬೆಳವಣಿಗೆಗಾಗಿ ಇನ್ನೊಂದು ಜೀವಿಗೆ, ಪರಿಸರಕ್ಕೆ ಹಾನಿಯುಂಟುಮಾಡಬಾರದೆಂಬುದೇ ಹಿಂದೂ ಧರ್ಮದ ಮೂಲ ಸಂದೇಶ. ಧರ್ಮ ಮತ್ತು ಮತಗಳ ವ್ಯತ್ಯಾಸ ತಿಳಿಯದಿದ್ದುದೇ ಇಂದಿನ ಸಮಾಜದಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ತಿಳಿಯೋಣ.

ನಮ್ಮ ದೇಶದಲ್ಲಿ ಬಹುಸಂಖ್ಯಾಕರು ವೇದ ಮತಾನುಯಾಯಿಗಳಿರಬಹುದು. ಆದರೆ ರಾಷ್ಟ್ರೀಯತಾ ಸೂಚಕವಾದ ಹಿಂದೂ ಪದದಲ್ಲಿ ವೇದೇತರ ಮತಾನುಯಾಯಿಗಳೂ ಚಿಂತಕರೂ ಇದ್ದಾರೆ. ವೈದಿಕ ಮತವೇ ಹಿಂದುತ್ವ ಎಂಬುದು ದುರಾಗ್ರಹ. ಸರ್ವ ಸಂಗ್ರಾಹಕಗುಣ ಹಿಂದೂ ಪದದ ವ್ಯಾಪ್ತಿ. ತಾವು ವೈದಿಕ ಪಂಗಡಕ್ಕೆ ಸೇರಿದವರು ಎಂಬ ಭಾವನೆ ತೊಡೆದುಹಾಕಲು ಬೌದ್ಧರು, ಜೈನರು, ಪಾರಸಿಕರು, ವೀರಶೈವರು, ಸಿಖ್ಖರೇ ಮೊದಲಾದವರು ತಮ್ಮನ್ನು ಹಿಂದೂಗಳಲ್ಲ ಎಂದುಕೊಂಡರು! ಹಿಂದೂ ಒಂದು ರಾಷ್ಟ್ರೀಯತೆಯೇ ವಿನಃ ಅದು ಮತದ ಸಂಕೇತವಲ್ಲ, ಮತವನ್ನು ಬಣ್ಣಿಸುವ ಪದವೂ ಅಲ್ಲ. ಮೊದಲೇ ಹೇಳಿದಹಾಗೇ  ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಕಾವೇರಿ ಈ ಏಳ ಮಹಾನದಿಗಳ [ಸಪ್ತ ಸಿಂಧೂಗಳ ಮತ್ತು ಅವುಗಳ ಉಪನದಿಗಳ] ಸರಹದ್ದಿನಲ್ಲಿ ವಾಸಿಸುವ ಎಲ್ಲಾ ಜನರೂ ಹಿಂದೂಗಳೇ. ಬ್ರಹ್ಮ ಸಮಾಜ, ಅರ್ಯಸಮಾಜ ಕೆಲವು ಸುಧಾರಿತ ಪಂಥಗಳು ಹಿಂದಿನಿಂದ ನಾವು ನಡೆಸಿಬಂದ ಕೆಲವು ಪದ್ಧತಿಗಳನ್ನು ಅಲ್ಲಗಳೆದರು ಎಂದಮಾತ್ರಕ್ಕೆ ಅವರು ಹಿಂದೂಗಳಲ್ಲ ಎನ್ನಲಾಗುವುದಿಲ್ಲ. ನೂರಾರು ಮಂದಿ ಮಹಾಪುರುಷರು ನಮ್ಮ ಸಮಾಜದಲ್ಲಿ ಹುಟ್ಟಿ, ಹೊಸ ಆಧ್ಯಾತ್ಮಿಕ  ಮತ್ತು ಮತೀಯ ಅಚಾರ-ವಿಚಾರಗಳನ್ನು ರೂಪಿಸಿ, ಪಂಥಗಳನ್ನು ಸ್ಥಾಪಿಸಿ ಸಮಾಜ ಸುಧಾರಣೆಗೆ ಯತ್ನಿಸಿದ್ದಾರೆ. ಇಂತಹ ಪ್ರಯತ್ನಗಳು ಈ ಹಿಂದೆ ನಡೆದಂತೇ ಮುಂದೆಯೂ ಹಲವು ನಡೆಯಬಹುದಾಗಿದೆ. ಆದರೆ ಹಿಂದುತ್ವದ ಮೂಲಸ್ವರೂಪಕ್ಕೆ ಧಕ್ಕೆಯಾಗದು. ಕೆಲವೊಂದು ರೂಢಿಗಳನ್ನು ಮಾತ್ರ ಹಿಂದುತ್ವದ ಲಕ್ಷಣಗಳು ಎಂದು ಬಗೆದಲ್ಲಿ ಅನೇಕರನ್ನು ಹಿಂದೂಗಳೇ ಅಲ್ಲ ಎನ್ನಬೇಕಾದೀತು, ಹೀಗಾಗಿ ಹಿಂದೂ ಶಬ್ದವನ್ನು ರಾಷ್ಟ್ರೀಯತೆಯ ಪದವನ್ನಾಗಿ ಬಳಸಲಾಗಿದೆ.  

ಇವತ್ತು ಭಾರತವಲ್ಲದೇ ಜಗದ ನಾನಾ ದೇಶಗಳಲ್ಲಿ ಹಿಂದೂಗಳು ನೆಲೆಸಿದ್ದಾರೆ. ಗಯಾನಾ, ಫಿಜಿ ಮೊದಲಾದ ಕೆಲವು ದೇಶಗಳಲ್ಲಂತೂ ಅವರೇ ಬಹುಸಂಖ್ಯಕರು! ಮಾರಿಷಸ್ ನಂತಹ ಕೆಲವು ಕಡೆ ಹಿಂದೂಗಳ ಸಂಖ್ಯೆಯೇ ದೊಡ್ಡದು. ಅವರಲ್ಲಿ ಬಹಳಮಂದಿ ಅಲ್ಲಲ್ಲಿಯೇ ಹುಟ್ಟಿಬೆಳೆದ ರತೀಯ ಮೂಲದವರ ವಂಶಸ್ಥರು ಅಷ್ಟೇ. ಅನೇಕರು ಅಲ್ಲಲ್ಲಿನ ರಾಷ್ಟ್ರೀಯತೆಯನ್ನೇ ಪಡೆದುಕೊಂಡಿದ್ದಾರೆ. ಆದರೂ ಸಾಂಸ್ಕೃತಿಕವಾಗಿ ಅವರು ಹಿಂದೂಗಳಾಗಿದ್ದಾರೆ. ಅಮೇರಿಕೆಯಂತಹ ಮುಂದುವರಿದ ರಾಷ್ಟ್ರಗಳಲ್ಲಿನ ಜನ ಹಿಂದೂ ಸಂಸ್ಕೃತಿಯನ್ನು ಒಪ್ಪಿದ್ದಾರೆ, ಭಾರತಕ್ಕೆ ಬಂದು ಇಲ್ಲಿನ ವೇದ-ಆಯುರ್ವೇದಗಳ ಬಗ್ಗೆ ಯೋಗ-ಪ್ರಾಣಾಯಾಮಗಳ ಬಗ್ಗೆ ಆಸ್ಥೆಯಿಂದ ಅಭ್ಯಾಸ ನಡೆಸುತ್ತಾರೆ, ತಾವು ಹಿಂದೂಗಳೆಂದೇ ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಅಂಥವರನ್ನು ನಾವು ಸಾಂಸ್ಕೃತಿಕ ಹಿಂದೂಗಳೆಂದು ಕರೆಯಬೇಕಾಗುತ್ತದೆ. ಮಹರ್ಷಿ ಅರವಿಂದರು ಹೇಳುತ್ತಾರೆ " ಒಂದುಕಡೆ ಹಿಮಾಲಯ ಮತ್ತೊಂದು ಕಡೆ ಸಮುದ್ರ ಈ ನಡುವಿನ ಭೂಭಾಗದಲ್ಲಿ ಬೆಳೆದುಬಂದ ಪವಿತ್ರವೂ ಪ್ರಾಚೀನವೂ ಆದ ಈ ಧರ್ಮವನ್ನು, ಈ ಪರ್ಯಾಯ ದ್ವೀಪದಲ್ಲಿ ಯುಗಯುಗಗಳ ಕಾಲಪ್ರವಾಹದಲ್ಲೂ ಸುರಕ್ಷಿತವಾಗಿ ಇಡಲೋಸುಗ ಆರ್ಯಜನಾಂಗಕ್ಕೆ ಭಗವಂತನಿಂದ ನೀಡಲ್ಪಟ್ಟ ನಿಧಿ ಇದು. ಆದರೆ ಇದು ಒಂದು ದೇಶಕ್ಕೆ ಸೀಮಿತವಲ್ಲ. ಇದು ನಿಜವಾಗಿಯೂ ಸನಾತನ ಧರ್ಮ ಮತ್ತು ಇತರ ಮತಗಳನ್ನು ಒಳಗೊಂಡಿರುವ ವಿಶ್ವಧರ್ಮ." 

ಭಾರತೀಯರ್ಷಿ ಸಂಪ್ರೋಕ್ತಾನ್ ಇಹಾಮುತ್ರಾರ್ಥಸಾಧಕಾನ್ |
ಯೋsಂಗೀಕರೋತಿ ಸಶ್ರದ್ಧಂ ಸತ್ ಸಿದ್ಧಾಂತಾನ್ ಸನಾತನಾನ್ ||
ಮಹಾತ್ಮಿಭಿಃ ದಿವ್ಯಶೀಲೈಃ ಕಾಲೇ ಕಾಲೇ ಪ್ರವರ್ತಿತಾನ್ |
ಸಂಪ್ರದಾಯಾನಾದ್ರೀಯತೇ ಯಃ ಸರ್ವಾನ್ ಪಾರಮಾರ್ಥಿಕಾನ್ ||
ಯತ್ರಕುತ್ರಾಪಿ ಜಾತೋsಸೌ ಅಸ್ತು ಯಃ ಕೋsಪಿ ಜನ್ಮನಾ |
ಸಚ್ಛೀಲೋದಾರಚರಿತಃ ಸೋsತ್ರ ಹಿಂದುರಿತಿ ಸ್ಮೃತಃ ||

ದೇವ ಮಂದಿರ ಭಜನೆ ಪೂಜೆ ಪ್ರಸಾದಗಳು
ಜೀವನದಲಂಕಾರ ಮನಸಿನುದ್ಧಾರ
ಭಾವವಂ ಕ್ಷುಲ್ಲ ಜಗದಿಂ ಬಿಡಿಸಿ ಮೇಲೊಯ್ವು
ದಾವುದಾದೊಡಮೊಳಿತು -ಮಂಕುತಿಮ್ಮ

ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಮಾಡುವ ಪೂಜೆ, ಅರತಿ, ಭಜನೆ, ಪ್ರಸಾದ ಸ್ವೀಕರಣೆ, ಜಪ-ತಪ, ಹೋಮ-ನೇಮ ಇವೆಲ್ಲಾ ಜೀವನಕ್ಕೆ ಅಲಂಕಾರವಾಗಿವೆ ಮತ್ತು ಮನಸ್ಸನ್ನು ಮುದಗೊಳಿಸಿ ಉನ್ನತ ವೈಚಾರಿಕತೆಗೆ ಏರುವಲ್ಲಿ ಸಹಾಯಕವಾಗಿವೆ. ಕ್ಷುಲ್ಲಕ ಭಾವಗಳೇ ಮನದಲ್ಲಿ ಸದಾ ತುಂಬಿದ್ದರೆ ಬದುಕಿನ ನಿಜಧ್ಯೇಯವನ್ನು ಸಾಧಿಸುವುದು ಸಾಧ್ಯವಾಗುವುದಿಲ್ಲ. ಕ್ಷಣಿಕವಾದ ಈ ಜಗದಲ್ಲೇ ಸುತ್ತುತ್ತಾ ಬಳಲುವ ನಮಗೆ ಉನ್ನತ ವಿಚಾರಗಳು ಮನದಲ್ಲಿ ಒಡಮೂಡಲು ತನ್ಮೂಲಕ ಮೋಕ್ಷವನ್ನು ಪಡೆಯುವತ್ತ ನಾವು ನಡೆಯಲು ಸಹಕಾರಿಯಾಗುವ ಕಾರ್ಯಗಳೇ ಪೂಜಾ ಕಾರ್ಯಗಳು. ಉನ್ನತ, ಉದಾತ್ತ ವಿಚಾರಗಳನ್ನು  ಹೇಳುವ ಯಾವ ಕೆಲಸವೇ ಆದರೂ, ಸಂಸ್ಕಾರವಾದರೂ ಅವು ಒಳ್ಳೆಯವೇ. ದೈವ ಸಾನ್ನಿಧ್ಯದಲ್ಲಿ ವಿಶೇಷವಾದ ಶಕ್ತಿ ಸಂಚಯನವಾಗುತ್ತದೆ ಮತ್ತು ಅದು ಮೋಕ್ಷವನ್ನು ಪಡೆಯುವ ಮಾರ್ಗವನ್ನು ತೋರುತ್ತದೆ ಎಂಬುದು ಡಿ.ವಿ.ಜಿಯವರ ಹೇಳಿಕೆಯಾಗಿದೆ. ಸಮಾಜದಲ್ಲಿ ಬೇಕಾದ್ದು ಬೇಡಾದ್ದು ಎಲ್ಲಾ ತುಂಬಿರುತ್ತವೆ. ಎಲವೊಮ್ಮೆ ಯಾವುದು ಒಳಿತು  ಮತ್ತು ಯಾವುದು ಕೆಡುಕು ಎಂಬುದನ್ನು ನಿರ್ಣಯಿಸುವುದೇ ಕಷ್ಟವಾಗಿಬಿಡಬಹುದು. ಇಂತಹ ಸಂದಿಗ್ಧದಲ್ಲಿ ಸನಾತನ ಸೂತ್ರಗಳು ನಮಗೆ ಸಹಕಾರಿಯಾಗಿವೆ. ಹಲವು ಸಹಸ್ರಮಾನಗಳ ಅನುಭವಗಳಿಂದಲೂ ಮತ್ತು ದರ್ಶನಗಳಿಂದಲೂ ಅವು ನಿಖರವಾದ ಮಾಹಿತಿಯನ್ನು ಒದಗಿಸುತ್ತವೆ. 

ಚಿಕ್ಕವರಿರುವಾಗ ನಮ್ಮ ನಿರ್ಧಾರಗಳಿಗೆ ಅಡ್ಡಿಪಡಿಸುವ ನಮ್ಮ ಅಪ್ಪನಿಗೆ ಬುದ್ಧಿ ಇಲ್ಲವೆಂದು ನಾವೆಂದುಕೊಳ್ಳುತ್ತೇವೆ. ಬೆಳೆಯುತ್ತಾ ನಮ್ಮಪ್ಪ ಮಾಡಿದ್ದು ಕೆಲವು ಭಾಗ ಸರಿ ಎಂದು ಒಪ್ಪುತ್ತೇವೆ. ಇನ್ನೂ ಬೆಳೆದು ವಯಸ್ಸು ಜಾಸ್ತಿಯಾಗತೊಡಗಿದಾಗ ಅಪ್ಪ ನಮ್ಮ ಸಲುವಾಗಿ ಮಾಡಿದ ಅನೇಕ ಕೆಲಸಗಳು ಮತ್ತು ನಿರ್ಧಾರಗಳು ಸರಿ ಎಂಬ ಅನುಭವ ನಮ್ಮದಾಗುತ್ತದೆ. ಆದರೂ ಅಪ್ಪನದು ಪೂರ್ತಿ ಸರಿಯೆಂದು ನಾವು ಒಪ್ಪುವ ಹಂತಕ್ಕೆ ಇನ್ನೂ ಬಂದಿರುವುದಿಲ್ಲ. ಯಾವಾಗ ನಮಗೆ ಮದುವೆಯಾಗಿ ಮಕ್ಕಳಾಗಿ ನಾವೇ ’ಅಪ್ಪ’ ಎನಿಸಿಕೊಳ್ಳುತ್ತೇವೋ ಆಗ ಅಪ್ಪಮಾಡಿದ್ದು ಸಂಪೂರ್ಣ ಸರಿಯೆನಿಸುತ್ತದೆ; ಅಪ್ಪನ ಅನುಭವ ಸುಳ್ಳಲ್ಲವೆಂಬುದನ್ನು ತೆಪ್ಪಗೆ ಒಪ್ಪಿಕೊಳ್ಳುತ್ತೇವೆ. ಒಬ್ಬ ಸಾಮಾನ್ಯ ಅಪ್ಪ ತನ್ನ ಮಗುವಿಗಾಗಿ ಇರುವುದರಲ್ಲಿ ಉತ್ತಮ ನಿರ್ಧಾರಗಳನ್ನೇ ಕೈಗೊಂಡಿರುತ್ತಾನೆ ಎಂದಮೇಲೆ ಜಗತ್ತಿನ ಜನರನ್ನೆಲ್ಲಾ ತಮ್ಮ ಮಕ್ಕಳೆಂದೇ ತಿಳಿದ ಆರ್ಷೇಯ ಋಷಿಗಳ ಪಾರಂಪರಿಕ ಅನುಭವ ಸುಳ್ಳೆನಲು ಸಾಧ್ಯವೇ? ಪರಂಪರಾಗತವಾಗಿ ಶ್ರುತಿಯಾಗಿ ಹರಿದುಬಂದ ಜೀವನಧರ್ಮ ಸೂತ್ರಗಳೇ ವೇದಗಳು ಎಂದರೆ ತಪ್ಪಾಗುವುದಿಲ್ಲ. ಅವುಗಳಿಗೆ ಲೇಖಕರು ಇಲ್ಲ; ತಯಾರಿಸಿದ ವಸ್ತುವೊಂದಕ್ಕೆ ತಯಾರಕರೇ ಉಪಯೋಗಿಸುವ ರೀತಿನೀತಿಗಳನ್ನೂ, ಗುಣಮಟ್ಟಕ್ಕೆ ಸಮಯಾಧಾರಿತ ಖಾತ್ರಿಯನ್ನೂ ಕೊಡುವಂತೇ ವೇದಗಳ ಸೃಷ್ಟಿಕರ್ತ ಅವುಗಳ ಸಮಯವನ್ನು ಸಾರ್ವಕಾಲಿಕವನ್ನಾಗಿ ಮಾರ್ಪಡಿಸಿದ್ದಾನೆ. ಸರಿಯಾಗಿ ಅರಿತು ಬಳಸಿದರೆ ಅವುಗಳಲ್ಲಿನ ಜ್ಞಾನ ನಮ್ಮ ಅಧುನಿಕ ವಿಜ್ಞಾನಕ್ಕಿಂತಲೂ ಮಿಗಿಲು ಎಂಬುದನ್ನು ಕಾಣಬಹುದಾಗಿದೆ. ಯಾವ ಮತದ ಯಾವುದೇ ಸೂತ್ರವೂ ತಪ್ಪಾಗಿ ಗ್ರಹಿತವಾಗಿರಬಹುದು, ಯಾಕೆಂದರೆ ಅನೇಕ ಮತಗಳು ಮಾನುಷ ನಿರ್ಮಿತವಾಗಿವೆ. ಅವು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಜೀವನಧರ್ಮಗಳಾಗುವ ಪರಿಪಕ್ವತೆಯನ್ನು ಹೊಂದಿಲ್ಲದಿರುವುದು ತುಲನೆಮಾಡಿದಾಗ ತಿಳಿದುಬರುತ್ತದೆ. ಪಕ್ವವಾದ ಮತ್ತು ಯುಕ್ತವಾದ ಮಾಹಿತಿಯನ್ನು ಮಾತ್ರ ವೇದಗಳು ಒಳಗೊಂಡಿರುವುದರಿಂದ ಯಾವ ರೀತಿಯಲ್ಲೂ ಯಾವ ನೀತಿಯಲ್ಲೂ ಅವು ನಗಣ್ಯವಲ್ಲ, ಲೋಪಗಳನ್ನು ಹೊಂದಿರುವುದಿಲ್ಲ.     

ಪಂಚತಂತ್ರದ ಒಂದು ಚಿಕ್ಕ ಕಥೆಯೊಂದಿಗೆ ಆರಂಭಿಕ ಅಧ್ಯಾಯವನ್ನು ಮುಗಿಸೋಣ. ದೇಶವೊಂದರಲ್ಲಿ ಧರ್ಮಬುದ್ಧಿ ಮತ್ತು ಪಾಪ ಬುದ್ಧಿ ಎಂಬಿಬ್ಬರು ಗೆಳೆಯರಿದ್ದರು. ಹೆಸರೇ ಸೂಚಿಸುವಂತೇ ಧರ್ಮಬುದ್ಧಿ ಧರ್ಮಾತ್ಮ ಮತ್ತು ಪಾಪಬುದ್ಧಿ ಪಾಪಾತ್ಮನೆಂದು ತಿಳಿದುಕೊಳ್ಳಿ. ಪಾಪಬುದ್ಧಿಗೆ ವಿಶೇಷವಾದ ವಿದ್ಯೆಯಾಗಲೀ ಪರಿಣತಿಯಾಗಲೀ ಇರಲಿಲ್ಲ. ಆದರೆ ಧರ್ಮಬುದ್ಧಿ ಘನಪಾಠಿಯಾಗಿದ್ದ. ಕುತಂತ್ರಗಳಲ್ಲಿ ಪಾಪಬುದ್ಧಿ ಬಹಳ ಮುಂದಿರುತ್ತಿದ್ದ. ಒಮ್ಮೆ ಹೇಗಾದರೂ ಮಾಡಿ ಧರ್ಮಬುದ್ಧಿಯನ್ನು ಬಳಸಿಕೊಂಡು ಒಂದಷ್ಟು ಹಣಗಳಿಸಬೇಕೆಂಬ ಆಸೆ ಪಾಪಬುದ್ಧಿಯದು.

ಧರ್ಮಬುದ್ಧಿಗೆ ಪಾಪಬುದ್ಧಿ ಹೇಳಿದ "ಮಿತ್ರಾ ನೋಡು ನೀನು ಪಂಡಿತನಾದ ಮಾತ್ರಕ್ಕೆ ಜನ ನಿನ್ನನ್ನು ಹಾಗೆ ಮೆಚ್ಚುವುದಿಲ್ಲ. ದೇಶಗಳನ್ನು ಪರ್ಯಟನೆಮಾಡಿ ಹಲವು ಜನರನ್ನು ಸಂಪರ್ಕಿಸುವುದರಿಂದ ಹೆಚ್ಚಿನ ಧನ-ಕನಕ ಸಂಪಾದನೆಯಾಗುತ್ತದೆ. ಬರುವುದಾದರೆ ಬಾ ನಾನು ವಿದೇಶಯಾತ್ರೆಗೆ ಹೋಗುವವನಿದ್ದೇನೆ." ಗೆಳೆಯನ ಮಾತಿನಲ್ಲಿ ಧೂರ್ತ ಭಾವವನ್ನು ಗ್ರಹಿಸದ ಧರ್ಮಬುದ್ಧಿ ಗೆಳೆಯನೊಟ್ಟಿಗೆ ವಿದೇಶ ಯಾತ್ರೆಗೆ ನಡೆದ. ವಿದೇಶ ಸಂಚಾರದಲ್ಲಿ ಅವರೀರ್ವರೂ ಹೇರಳ ಧನ-ಕನಕಗಳನ್ನು ಸಂಪಾದಿಸಿ ಮನೆಗೆ ಮರಳಲು ಮುಂದಾದರು. ಊರು ಸಮೀಪಿಸುತ್ತಿರುವ ಸಮಯದಲ್ಲಿ ಪಾಪಬುದ್ಧಿ ಧರ್ಮಬುದ್ಧಿಗೆ ಹೇಳಿದ: "ಗೆಳೆಯಾ, ನಾವೀಗ ಹೇರಳ ಸಂಪತ್ತುಗಳನ್ನು ಗಳಿಸಿದ್ದೇವೆ. ಇದು ಪರಭಾರೆಯಾಗಬಾರದಷ್ಟೇ? ಊರಿಗೆ ಕೊಂಡೊಯ್ದರೆ ಮನೆಯಲ್ಲಿನ ಜನರಿಗೋ ನೆಂಟರಿಗೋ ಪಾಲುಕೊಡಬೇಕಾದ ಪ್ರಮೇಯ ಬರುತ್ತದೆ. ಮೇಲಾಗಿ ನೀರಿನಲ್ಲಿರುವ ಮೀನು, ಹಾರುವ ಹಕ್ಕಿ, ಭೂಮಿಯಮೇಲಿರುವ ಪ್ರಾಣಿಗಳು ಮಾಂಸಭಕ್ಷಕರ ಪಾಲಾಗುವುದು ಸರಿಯಷ್ಟೇ? ಅದೇರೀತಿ ನಗದು ಸಂಪತ್ತನ್ನು ಇಟ್ಟುಕೊಂಡವರಿಗೆ ಕಳ್ಳರಕಾಟ ತಪ್ಪಿದ್ದಲ್ಲ, ಸಂಪತ್ತನ್ನು ಕಾದುಕೊಳ್ಳುವುದು ಕಠಿಣ ಕೆಲಸ. ಹೀಗಾಗಿ ಇಲ್ಲೇ ಕಾಡಿನಲ್ಲಿ ಮರವೊಂದರ ಬುಡದಲ್ಲಿ ಸಂಪತ್ತನ್ನು ಹೂತಿಡೋಣ ಮತ್ತು ಖರ್ಚಿಗೆ ಬೇಕಾದಾಗ ಬೇಕಾದಷ್ಟನ್ನೇ ತೆಗೆದುಕೊಳ್ಳುತ್ತಾ ಇರೋಣ ಆಗದೇ?" ಎಂದ. ಧರ್ಮಬುದ್ಧಿ ಅದಕ್ಕೂ ಸಮ್ಮತಿಸಿದ. ತಂದಿದ್ದ ಸಂಪತ್ತನ್ನು ಮರವೊಂದರ ಬುಡದಲ್ಲಿ ಹೂತಿಟ್ಟು ಈರ್ವರೂ ಊರಿಗೆ ಮರಳಿ ನಿಶ್ಚಿಂತೆಯಿಂದಿದ್ದರು.

ಕೆಲವುದಿನಗಳ ನಂತರ ಒಂದು ಮಧ್ಯರಾತ್ರಿ ಪಾಪಬುದ್ಧಿ ಕಾಡಿಗೆ ತೆರಳಿ, ಮರದ ಬುಡದಲ್ಲಿದ್ದ ಸಂಪತನ್ನು ಪೂರ್ತಿಯಾಗಿ ಎತ್ತಿಕೊಂಡು ಪುನಃ ಆ ಜಾಗಕ್ಕೆ ಮಣ್ಣುತುಂಬಿಸಿ ಮನೆಗೆ ಮರಳಿದ. ಮಾರನೇದಿನ ಧರ್ಮಬುದ್ಧಿಯನ್ನು ಕರೆದು ತನಗೆ ಹಣದ ಅಗತ್ಯ ಹೆಚ್ಚಿರುವುದಾಗಿಯೂ ಕಾಡಿಹೋಗಿ ತರೋಣವೆಂತಲೂ ಒತ್ತಾಯಿಸಿದ. ಸಮ್ಮತಿಸಿದ ಧರ್ಮಬುದ್ಧಿಯ ಜೊತೆ ಕಾಡಿಗೆ ತೆರಳಿ ಮರದಬುಡದಲ್ಲಿ ಅಗೆಯಲಾಗಿ ಹುದುಗಿಸಿಟ್ಟಿದ್ದ ಸಂಪತ್ತು ಇಲ್ಲವಾಗಿತ್ತು! ತನಗೇನೂ ಸಂಶಯವೇ ಇಲ್ಲವೆಂದೂ ಧರ್ಮಬುದ್ಧಿಯೇ ಅದನ್ನು ತೆಗೆದುಕೊಂಡಿದ್ದಾನೆಂದೂ ಪಾಪಬುದ್ಧಿ ಜಗಳ ತೆಗೆದ. ಜಗಳ ರಾಜ್ಯದ ರಾಜನ ನ್ಯಾಯಾಲಯಕ್ಕೆ ಹೋಯ್ತು. ನ್ಯಾಯಾಧಿಕಾರಿಗಳ ಸಮ್ಮುಖದಲ್ಲಿ ವಿಷಯ ಮಂಡಿತವಾಯ್ತು. ಸಂಪತ್ತು ಇಟ್ಟಬಗ್ಗೆಯಾಗಲೀ, ಕದ್ದಬಗ್ಗೆಯಾಗಲೀ ಲಿಖಿತ ರೂಪದ ದಾಖಲೆಗಳು, ಸಾಕ್ಷಿಗಳು ಇಲ್ಲದಿರುವುದರಿಂದ ದೇವರಮುಂದೆ ಆಣೆಪ್ರಮಾಣ ಮಾಡಬೇಕೆಂದು ನ್ಯಾಯಾಧೀಶರು ಹೇಳಿದರು. ತನಗೆ ದೇವರಮೇಲೆ ನಂಬಿಕೆಯಿದ್ದು ಮರದಲ್ಲಿರುವ ವನದೇವಿ ತನ್ನ ಪರವಾಗಿ ಸಾಕ್ಷಿ ನುಡಿಯುವ ಖಾತ್ರಿ ಇರುವುದರಿಂದ ಕಾಡಿಗೇ ತೆರಳಿ ಮರದ ಸಾಕ್ಷಿ ಕೇಳಲು ಅನುಮತಿಸಬೇಕೆಂದು ಪಾಪಬುದ್ಧಿ ವಿನಂತಿಸಿದ. ನ್ಯಾಯಾಲಯ ಅದಕ್ಕೆ ಸಮ್ಮತಿಸಿ ಸಂಬಂಧಿಸಿದ ಅಧಿಕಾರಿಗಳನ್ನು ಕಳಿಸಲು ಒಪ್ಪಿತು. ಅಂದಿನ ನ್ಯಾಯಾಲಯದ ಕಲಾಪ ಮುಗಿಸಿಕೊಂಡ ಪಾಪಬುದ್ಧಿ ಶೀಘ್ರ ಮನೆಗೆ ದೌಡಾಯಿಸಿದ. ತಂದೆಯನ್ನು ಕಂಡು ನಡೆದ ಘಟನೆ ತಿಳಿಸಿ, "ಅಪ್ಪಾ ನೀನು ಮನಸ್ಸುಮಾಡಿ ಒಂದು ವಾಕ್ಯ ಉಸುರಿದರೆ ಸಂಪತ್ತೂ ನಮ್ಮದಾಗುತ್ತದೆ ಮತ್ತು ನನ್ನ ತಯೂ ಉಳಿಯುತ್ತದೆ" ಎಂದ. ಮಗನ ಒತ್ತಾಯಕ್ಕೆ ಅಪ್ಪ ಮಣಿದ. ಮರದಲ್ಲಿ ದೊಡ್ಡ ಪೊಟರೆಯೊಂದು ಇರುವುದೆಂದೂ ಅದರಲ್ಲಿ ಅಪ್ಪ ಅವಿತಿರಬೇಕೆಂದೂ ಮಗ ತಿಳಿಸಿದ.

ಮಾರನೇ ಬೆಳಿಗ್ಗೆ ಸ್ನಾನ ಮುಗಿಸಿ ಹೊಸ ಬಟ್ಟೆ ತೊಟ್ಟ ಪಾಪಬುದ್ಧಿ,  ಧರ್ಮಬುದ್ಧಿ ಮತ್ತು ನ್ಯಾಯಾಲಯದ ಅಧಿಕಾರಿಗಳೊಡನೆ ಅಡವಿಯ ಮರದ ಹತ್ತಿರ ಬಂದ. ಮರದಮುಂದೆ ನಿಂತು " ಎಲೈ ಸೂರ್ಯ-ಚಂದ್ರರೇ, ವಾಯು-ಅಗ್ನಿಗಳೇ, ಸ್ವರ್ಗ ಮತ್ತು ಭೂಮಿಗಳೇ, ಹೃದಯ ಮತ್ತು ಮನಸ್ಸುಗಳೇ, ಹಗಲು ರಾತ್ರಿಗಳೇ, ಸೂರ್ಯೋದಯ ಮತ್ತು ಸೂರ್ಸ್ತಗಳೇ ನೀವೆಲ್ಲವೂ ಧರ್ಮಮಯವಾಗಿದ್ದೀರಿ. ಮನುಷ್ಯನ ಪ್ರತಿಯೊಂದು ಕರ್ಮಗಳನ್ನೂ ನೀವು ಪ್ರತ್ಯಕ್ಷವಾಗಿ ನೋಡುತ್ತೀರಿ. ಮರದಲ್ಲಿರುವ ದೇವತೆಯೇ ನಿನ್ನಲ್ಲಿ ಪ್ರಾರ್ಥಿಸುತ್ತೇನೆ. ನಮ್ಮೀರ್ವರಲ್ಲಿ ಯಾರು ಕಳ್ಳರು ಎಂಬುದನ್ನು ಸಾರಿಬಿಡು" ಎಂದು ಜೋರಾಗಿ ಕೂಗಿ ಹೇಳಿದ. ಮಗನ ಮಾತನ್ನು ಆಲೈಸಿದ ಪಾಪಬುದ್ಧಿಯ ತಂದೆ ಅವಿತಿದ್ದ ಪೊಟರೆಯಿಂದ ಹೇಳಿದ:" ಕೇಳೀ ಕೇಳೀ ಹಣವನ್ನು ಕದ್ದಿದ್ದು ಧರ್ಮಬುದ್ಧಿಯೇ." ದಂಡಾಧಿಕಾರಿಗಳಿಗೆ ಅಶರೀರವಾಣಿಯಿಂದ ಅಚ್ಚರಿಯಾಯ್ತು! ನ್ಯಾಯಲಯದ ಅಪ್ಪಣೆಯಂತೇ ಧರ್ಮಬುದ್ಧಿಗೆ ಶಿಕ್ಷೆನೀಡಲು ಅವರು ಸಿದ್ಧತೆ ನಡೆಸಿದರು. ಧರ್ಮಬುದ್ಧಿ ಮರುಮಾತನಾಡಲಿಲ್ಲ. ಮರದ ಸುತ್ತ ಒಮ್ಮೆ ಸುತ್ತಿದ ಧರ್ಮಬುದ್ಧಿ ತ್ವಿತಾಗಿ ಉರಿಯುವಸ್ತುವಿನಿಂದ ಮರದ ಬುಡಕ್ಕೆ ಬೆಂಕಿಹಚ್ಚಿದ. ಧಗಧಗನೇ ಮರ ಹೊತ್ತಿ ಉರಿಯುವಾಗ ಮರದ ಪೊಟರೆಯೊಳಗೆ ಅವಿತಿದ್ದ ಪಾಪಬುದ್ಧಿಯ ತಂದೆ ಚೀರುತ್ತಾ ಕೆಳಕ್ಕೆ ಉರುಳಿದ. ದಂಡಾಧಿಕಾರಿಗಳು " ಏನಪ್ಪಾ ಇದು?" ಎಂದು ಆತನನ್ನು ಗದರಿದರು. ಆತ ನಿಜವನ್ನು ಒಪ್ಪಿಕೊಂಡ ಮತ್ತು ಮರುಘಳಿಗೆಯಲ್ಲೇ ಪ್ರಾಣಬಿಟ್ಟ. ತಪ್ಪುಮಾಡುವುದರೊಂದಿಗೆ ತಪ್ಪನ್ನು ಮುಚ್ಚಲು ಮತ್ತಷ್ಟು ತಪ್ಪುಮಾಡಿರುವ ಪಾಪಬುದ್ಧಿಗೆ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತು. ಅನ್ಯಾಯವಾಗಿ ಕಾಡಿನ ಮರ ಬೆಂಕಿಗೆ ಆಹುತಿಯಾಗುವಂತೇ ಮಾಡಿದ ಪಾಪಬುದ್ಧಿ ತನ್ನಪ್ಪನ ಹಾಗೂ ತನ್ನ ಸಾವನ್ನು ತಾನೇ ತಂದುಕೊಂಡ.

ಈ ಕಥೆಯಲ್ಲಿ ನೀತಿಯನ್ನು ಹೊಸದಾಗಿ ಹೇಳಬೇಕಿಲ್ಲ. ತಪ್ಪುಮಾಡುವುದು ಮಾನವ ಸಹಜವಾಗಿರಬಹುದು; ಆದರೆ ತಪ್ಪನ್ನೇ ಮಾಡದಂತೇ ಆಧಾರಸಹಿತವಾಗಿ ಆದೇಶ ನೀಡುವುದು ಹಿಂದೂಧರ್ಮ. ಇನ್ಯಾವುದೋ ಧರ್ಮ  ಕಳ್ಳತನ ಮಾಡು-ಆದರೆ ಸಿಕ್ಕಿಬೀಳಬೇಡ ಎಂದೂ ಹೇಳಬಹುದು, ಆದರೆ ಅದು ನಿಜವಾದ ಮಾರ್ಗವಲ್ಲ. ಕಳ್ಳತನ ತರವಲ್ಲ ಎಂದು ತಿಳಿಸುವುವೇ ನಿಜವಾದ ಜೀವನಧರ್ಮ. ಅಂತಹ ಧರ್ಮ ಜಗತ್ತಿನಲ್ಲಿಯೇ ಏಕೈಕ, ಅದು ನಮ್ಮ ಸನಾತನ ಜೀವನಧರ್ಮ ಎಂದು ಹೇಳುತ್ತಾ ಪ್ರಥಮೋಧ್ಯಾಯವನ್ನು ಪೂರೈಸಿದ್ದೇನೆ, ನಮಸ್ಕಾರ.