ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, September 26, 2012

ಕಾರ್ಯಗತಗೊಳಿಸುವ ಮುನ್ನ ಯೋಚನೆಯಿರಲಿ; ವಿವೇಚನೆಯಿರಲಿ


ಚಿತ್ರಋಣ: ಅಂತರ್ಜಾಲ
ಕಾರ್ಯಗತಗೊಳಿಸುವ ಮುನ್ನ ಯೋಚನೆಯಿರಲಿ; ವಿವೇಚನೆಯಿರಲಿ

ಒಂದೂರಲ್ಲಿ ಅಗಸನೊಬ್ಬನಿದ್ದ. ಆತ ಕತ್ತೆಯೊಂದನ್ನು ಸಾಕಿದ್ದ. ಅದರ ಹೆಸರು ಉದ್ಧಟ. ಉದ್ಧಟ ಕೃಶಕಾಯನಾಗಿದ್ದ. ಪ್ರತಿನಿತ್ಯ ಒಡೆಯನ ಕೆಲಸದಲ್ಲಿ ಮಣಭಾರದ ಬಟ್ಟೆಯ ಮೂಟೆಗಳನ್ನು ಹೊತ್ತು ಸಹಕರಿಸುತ್ತಿದ್ದ-ಉದ್ಧಟ. ಒಡೆಯ ನೀಡುವ ಆಹಾರ ಆತನಿಗೆ ಸಾಲುತ್ತಿರಲಿಲ್ಲ; ಈ ವಿಷಯದಲ್ಲಿ ಉದ್ಧಟ ಮನದಲ್ಲೇ ನೊಂದಿದ್ದ. ರಾತ್ರಿಯ ಹೊತ್ತು ಸುತ್ತಲ ಹೊಲಗದ್ದೆಗಳಿಗೆ ಹೋಗಿ ಸಿಕ್ಕಿದ್ದನ್ನು ಕದ್ದು ತಿನ್ನುತ್ತಿದ್ದ. ಬೆಳಗಾಗುವುದರೊಳಗೆ ಮನೆಗೆ ಬಂದುಬಿಡುತ್ತಿದ್ದ. ಒಮ್ಮೆ ಹೀಗೇ ರಾತ್ರಿ ಹೊರಟಾಗ ನರಿಯಣ್ಣನೊಬ್ಬ ಆತನಿಗೆ ಎದುರಾದ. ನರಿಗೂ ಹೊಟ್ಟೆ ಹಸಿದಿತ್ತು. ಇಬ್ಬರೂ ಹೊಟ್ಟೆ ತುಂಬಿಸಿಕೊಳ್ಳುವ ಗುರಿಹೊಂದಿದ್ದರಿಂದ ಇದೊಂಥರಾ ||ಸಮಾನ ಶೀಲೇಷು ವ್ಯಸನೇಷು ಸಖ್ಯಮ್|| ಅನ್ನೋ ಹಾಗೇ ಇಬ್ಬರೂ ಸ್ನೇಹಿತರಾದರು. ಆಹಾರ ಹುಡುಕುತ್ತಾ ಹೋದವು. ಅಲ್ಲೊಂದು ಸೌತೇ ತೋಟ ಕಂಡಿತು. ಬೇಲಿಹಾರಿ ನಿಧಾನಕ್ಕೆ ಒಳಗೆ ಹೋಗಿ ಕತ್ತಲಲ್ಲೇ ಸೌತೇಕಾಯಿಗಳನ್ನು ಹೊಟ್ಟೆತುಂಬಾ ಮೆದ್ದವು. ಉದ್ಧಟನಿಗೆ ಅಪಾರ ಸಂತೋಷವಾಯ್ತು. "ದಿನಾ ಇಲ್ಲೇ ಬರೋಣ" ಎಂದು ನರಿಯಣ್ಣನ ಕೂಡ ಹೇಳಿದ. ನರಿಯಣ್ಣಕೂಡ ತಲೆ ಅಲ್ಲಾಡಿಸಿದ. 

ಕಾಲ ಕಳಿಯಿತು. ಕೆಲವೇ ದಿನಗಳಲ್ಲಿ ಉದ್ಧಟ ಮೈಕೈ ತುಂಬಿಕೊಂಡು ಒಳ್ಳೇ ದಪ್ಪಗಾದ; ದಪ್ಪಗಾಗಿದ್ದಕ್ಕೆ ಕಾರಣಮಾತ್ರ ಯಾರಿಗೂ ತಿಳಿಯಲಿಲ್ಲ! ಹೀಗೇ ಒಂದು ರಾತ್ರಿ ಯಥಾವತ್ತಾಗಿ ಸೌತೇತೋಟಕ್ಕೆ ಹೋದ. ಸ್ನೇಹಿತ ನರಿಯಣ್ಣನೂ ಜೊತೆಯಾದ. ಇಬ್ಬರೂ ಯಥೇಚ್ಛ ಸೌತೇಕಾಯಿ ಕಬಳಿಸಿ ತೇಗಿದವು. ಹೊಟ್ಟೆತುಂಬಿದಮೇಲೆ ಉದ್ಧಟನಿಗೆ ಎಲ್ಲಿಲ್ಲದ ಆನಂದ ಉಕ್ಕೇರಿ ಹಾಡುವ-ನರ್ತಿಸುವ ಮನಸ್ಸಾಯ್ತು! ಅದನ್ನಾತ ಸ್ನೇಹಿತ ನರಿಯಣ್ಣನ ಹತ್ತಿರ ಹೇಳಿಕೊಂಡ. ನರಿಯಣ್ಣ "ಅಯ್ಯೋ ಪುಣ್ಯಾತ್ಮ, ಅಕಸ್ಮಾತ್ ನೀನು ಹಾಡತೊಡಗಿದರೆ  ಕಾಯಲು ಹೊಲದಲ್ಲಿ ಮಲಗಿರುವ ಕಾವಾಲುಗಾರನಿಗೆ ಎಚ್ಚರವಾಗುತ್ತದೆ. ಎಚ್ಚರಗೊಂಡ ಕಾವಲುಗಾರ ಅಟ್ಟಿಸಿಕೊಂಡು ಬಂದು ನಮ್ಮನ್ನು ಥಳಿಸಿ ಸಾಯಿಸುತ್ತಾನೆ. ಕೇಳು ನನ್ನ ಮಾತು. ನೀನು ಇನ್ನೆಲ್ಲಾದರೂ ಹಾಡುವೆಯಂತೆ, ಇಲ್ಲಿಮಾತ್ರ ಹಾಡಬೇಡ" ಎಂದು ಸಲಹೆ ನೀಡಿದ. ಉದ್ಧಟನಿಗೆ ನರಿಯಣ್ಣನ ಮಾತು ಹಿಡಿಸಲಿಲ್ಲ. ಅವನ ಮನಸ್ಸಿನಲ್ಲಿ ಹತ್ತಿಕ್ಕಲಾರದಂಥಾ ಹಾಡುವ ಆಸೆ ಮೇಲೆದ್ದುಬಂದಿತ್ತು. ಹಾಡದೇ ತಾಳಲಾರೆನೆಂದ. ಮತ್ತೆ ನರಿಯಣ್ಣ "ಬೇಡಾ" ಎಂದ. ಇದು ಸಾಕಷ್ಟು ಸರ್ತಿ ನಡೆಯಿತು. ಎಷ್ಟೇ ಬೇಡಾ ಎಂದರೂ "ನನಗಾದ ಸಂತೋಷವನ್ನು ಅನುಭವಿಸಲು ಹಾಡುವುದೇ ಸೈ ಎಂದ ಉದ್ಧಟ ಈಗ ಹಾಡಿಯೇ ಬಿಡುತ್ತೇನೆ" ಎಂದ. " ಆಯ್ತು ಮಾರಾಯಾ, ಒಂದು ಕೆಲಸಮಾಡು, ನೀನು ಹಾಡುವುದಕ್ಕೂ ಮುನ್ನ ನಾನು ಬೇಲಿಯನ್ನು ಹಾರಿ ಹೊಲದಿಂದ ಹೊರಕ್ಕೆ ಹೋಗಿ ನಿಂತು ನಿನಗಾಗಿ ಕಾಯುತ್ತೇನೆ. ನಾನು ಹಾಗೆ ಆಚೆಹೋದಮೇಲೆ ನೀನು ಹಾಡಬಹುದು" ಎಂದ ನರಿಯಣ್ಣ ಉದ್ಧಟನ ಉತ್ತರಕ್ಕೂ ಕಾಯದೇ ಬೇಲಿ ಹಾರಿ ಆಚೆ ನಿಂತ.

ಉದ್ಧಟನ ಸಂಗೀತ ಕಛೇರಿ ಆರಂಭವಾಯ್ತು. ಆಹಹಾ ಈ ಜಗತ್ತೆಷ್ಟು ಸುಂದರ ಎಂದುಕೊಂಡು ಉದ್ಧಟ ಹಾಡೇ ಹಾಡಿದ. ಹೊಲದ ಇನ್ನೊಂದು ಕಡೆಯಲ್ಲಿ ಮಲಗಿದ್ದ ಕಾವಲುಗಾರನಿಗೆ ವಿಚಿತ್ರ ಕೂಗು ಕೇಳಿ ಎಚ್ಚರವಾಯ್ತು. ಆಲಿಸುತ್ತಾನೆ ಗರ್ದಭ ಸಂಗೀತರಸಧಾರೆ ! "ನಮ್ಮ ಸೌತೇ ತೋಟದಲ್ಲಿ ಇಷ್ಟು ದಿನ ಕಾಯಿಗಳನ್ನು ತಿನ್ನುತ್ತಿದ್ದ ಕತ್ತೆ ನೀನೇಯೋ ಇರು ಮಾಡಿಸ್ತೀನಿ" ಎಂದು ಹಲ್ಲುಕಡಿದ ಕಾವಲುಗಾರ ಕೈಯ್ಯಲ್ಲಿ ದೊಣ್ಣೆಹಿಡಿದು ಬೆಕ್ಕಿನ ಹೆಜ್ಜೆಯಿಟ್ಟು ಉದ್ಧಟ ಇರುವೆಡೆಗೆ ಬಂದ. ಹಾಡುವಿಕೆಯಲ್ಲಿ ತನ್ಮಯನಾಗಿ ಲೋಕವನ್ನೇ ಮರೆತಿದ್ದ ಉದ್ಧಟನಿಗೆ ಸೊಂಟ ಮುರಿದುಹೋಗುವ ಹಾಗೇ ನಾಕು ರುಯ್ಯರುಯ್ಯನೇ ಬಿದ್ದಾಗಲೇ ಎಚ್ಚರ! " ಅಯ್ಯಯ್ಯೋ ಸಾಕಪ್ಪಾ ಸಾಕು ಸಾಕಪ್ಪಾ ಸಾಕು" ಎಂದು ತನ್ನದೇ ಕೂಗಿನಲ್ಲಿ ಹೇಳಿದ ಉದ್ಧಟನಿಗೆ ಜೀವ ಉಳಿದಿದ್ದೇ ದೊಡ್ಡದು. "ಇನ್ನೇನಾದ್ರೂ ಬಂದ್ರೆ ಜೀವ ಸಹಿತ ಬಿಡೋದಿಲ್ಲ ನಿನ್ನ, ಬಾ ಮತ್ತೆ ಮಾಡ್ತೀನಿ" ಎಂದ ಕಾವಲುಗಾರ ಮಾತನ್ನು ಕೇಳುತ್ತಾ, ತಾಳಲಾರದ ನೋವನ್ನು ಹೇಗೋ ಸಹಿಸಿಕೊಂಡು ಸಾವರಿಸಿಕೊಳ್ಳುತ್ತಾ ಬೇಲಿಯ ಹೊರಗೆ ಬಂದ ಉದ್ಧಟನನ್ನು ಬೇಸರದಿಂದಲೇ ನೋಡಿದ ನರಿಯಣ್ಣ. "ಗೆಳೆಯಾ, ನೋಡಪ್ಪಾ , ನಾನು ನಿನಗೆ ಸಾಕಷ್ಟು ಸಲ ಹೇಳಿದ್ದೆ. ಈಗ ಇಲ್ಲಿ ಹಾಡಬೇಡ, ಕಾವಲುಗಾರ ಬಿಡುವುದಿಲ್ಲಾ ಎಂದು, ನೀನು ಕೇಳಲಿಲ್ಲ. ನಾಳೆಯಿಂದ ಹೊಟ್ಟೆಗೂ ಇಲ್ಲ" ಎಂದ. ನರಿಯಣ್ಣನ ಮಾತು ಈಗ ನಿಜವೆನಿಸಿತು ಉದ್ಧಟನಿಗೆ. ತಪ್ಪುಮಾಡಿಬಿಟ್ಟೆ ಎನಿಸಿದ್ದರೂ ಗೆಳೆಯನ ಸಲಹೆಯನ್ನು ಆಲೋಚಿಸಿ ನೋಡದೇ ಏಕಾಏಕಿ ಹಾಡಲು ತೀರ್ಮಾನಿಸಿ ಹಾಡಿಬಿಟ್ಟಿದ್ದ. ಹಾಡಿದ್ದಕ್ಕೆ ವಾರ ಸಾಕಾಗುವಷ್ಟು ಅಸಾಧ್ಯ ನೋವು! ರಾತ್ರಿ ಕಳೆದು ಬೆಳಗಾದರೆ ಮತ್ತೆ ಮೂಟೆ ಹೊರಬೇಕು. ಉದ್ಧಟನ ಕಣ್ಣಲ್ಲಿ ಧಾರಾಕಾರ ನೀರು. ಇನ್ನುಮುಂದೆ ಯೋಚಿಸದೇ ಏನನ್ನೂ ಕಾರ್ಯಗತಗೊಳಿಸುವುದಿಲ್ಲಾ ಎಂದು ಮನದಲ್ಲೇ ಅಂದುಕೊಂಡನಾತ.

ವಿದೇಶೀ ಬಂಡವಾಳ ಧಾರಾಳವಾಗಿ ಬರುವಾಗ, ವಿದೇಶೀ ಮಳಿಗೆಗಳು ಭಾರತಕ್ಕೆ ಲಗ್ಗೆ ಇಡಲು ಪ್ರಯತ್ನಿಸುತ್ತಿರುವಾಗ ಹಿಂದೆಮುಂದೆ ಯೋಚಿಸದೇ ಕಾಂಗೈ ಸರಕಾರ ಅನುಮತಿಸುತ್ತಿರುವುದನ್ನು ನೋಡಿದರೆ ಈ ಕಥೆಯ ನೆನಪಾಗುತ್ತದೆ. ಉದ್ಧಟನ ಪಟ್ಟವನ್ನು ಸನ್ಮಾನ್ಯ ಮನಮೋಹನ ಸಿಂಘರಿಗೆ ಕೊಡುವುದೋ ಸೋನಿಯಾ ಗಾಂಧಿಗೆ ಕೊಡುವುದೋ ಇನ್ನೂ ತೊಳಲಾಟದಲ್ಲಿದ್ದೇನೆ! ಖೋತಾಬಿದ್ದ ಖಜಾನೆ ಭರ್ತಿಗೆ ದಾರಿಯನ್ನು ಕಂಡ ಭರದಲ್ಲಿ ’ಅನುಮತಿಸುತ್ತೇವೆ’ ಎಂಬ ಹಾಡುಹಾಡುತ್ತಿದ್ದಾರೆ. ಇಲ್ಲಿ ಭಾರತವೇ ಸೌತೇ ತೋಟ, ಪ್ರಜೆಗಳೇ ಕಾವಲುಗಾರರು. ಪ್ರಜೆಗಳು ನಿದ್ದೆಮಾಡುತ್ತಿದ್ದಾರೆ ಎಂಬುದಕ್ಕೆ ಇಂಧನ ತೈಲಗಳೂ ಸೇರಿದಂತೇ ಎಲ್ಲದರ ಬೆಲೆಯೇರಿಕೆಯೇ ಸಾಕ್ಷಿಯಾಗುತ್ತದೆ; ಈ ಬೆಲೆಯೇರಿಕೆ ಒಂದಲ್ಲಾ ಎರಡಲ್ಲಾ...ತಿಂಗಳಿಗೊಮ್ಮೆಯಂತೂ ಕಾಯಮ್ಮಾಗಿ ಏರುತ್ತಲೇ ಇದೆ. ಸಿಂಘರು ಹಣದುಬ್ಬರದ ಕಾರಣ ಕೊಡುತ್ತಾರೆ. ಭಾರತೀಯರು ಯೋಚಿಸಬೇಕಾದ ಕಾಲ ಬಂದಿದೆ-ಇನ್ನೂ ಇಂತಹ ಕೆಟ್ಟ ಆಡಳಿತ ನೀಡುವ ಬ್ರಷ್ಟ ರಾಜಕಾರಣಿಗಳು ನಮಗೆ ಬೇಕೇ? ಇಲ್ಲಾ ದೇಶಭಕ್ತರನ್ನು ಅನುಮೋದಿಸಿ ಅವರಿಂದ ಹೊಸದೊಂದು ಸರಕಾರ ರಚಯಿತವಾಗುವುದಕ್ಕೆ ಅನುಕೂಲ ಕಲ್ಪಿಸಿಕೊಡಬೇಕೇ ಎಂಬುದನ್ನು ನಿಶ್ಚಿತವಾಗಿಯೂ ಚಿಂತಿಸಬೇಕಾಗಿದೆ.

ವಿದೇಶೀಯರ್ಯಾರೋ ಬರುತ್ತಾರೆ-ನಮ್ಮ ಉದ್ಧಾರಕ್ಕಾಗಿ ಬರುತ್ತಾರೆ ಎಂಬುದು ತಪ್ಪುಕಲ್ಪನೆ. ಕೇವಲ ೫-೬ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯ ಸ್ಥಿತಿ ಬದಲಾಗಿ ಹೋಗುತ್ತದೆ; ಸುಮಾರು ೨.೫ ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು ಅವರನ್ನು ಅವಲಂಬಿಸಿದ ಜನ ಸೇರಿದಂತೇ ಒಟ್ಟೂ ೨೦ ಕೋಟಿ ಜನಸಂಖ್ಯೆ ಉದ್ಯೋಗ ರಹಿತವಾಗುತ್ತದೆ. ಎಲ್ಲಿಗೆ ಹೋಗಬೇಕು? ಯಾವ ರೀತಿಯಲ್ಲಿ ಅವರು ದುಡಿಮೆ ಮಾಡಬೇಕು? ಈಗಾಗಲೇ ಗೃಹಕೈಗಾರಿಕೆಗಳು, ಕುಲಕಸುಬುಗಳೂ ನೆಲಕಚ್ಚಿವೆ, ಸಣ್ಣಕೈಗಾರಿಕೆಗಳಿಗೂ ಜಾಗತಿಕ ಮಾರುಕಟ್ಟೆಯ ಪೈಪೋಟಿಯ ಬಿಸಿ ತಟ್ಟಿದೆ. ವಿದೇಶೀ ಕಂಪನಿಗಳು ಆರಂಭದಲ್ಲಿ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಬಹುದು, ಆದರೆ ಅದು ಶಾಶ್ವತವಲ್ಲ, ಕಾಲಾನಂತರ ಬೆಲೆಯಲ್ಲಿ ಹಿಡಿತವಿರುವುದಿಲ್ಲ; ಅವರು ಹೇಳಿದಷ್ಟು ಕೊಟ್ಟು ಖರೀದಿಸಬೇಕಾಗುತ್ತದೆ ಯಾಕೆಂದರೆ ಇನ್ನೆಲ್ಲೂ ಪರ್ಯಾಯ ವ್ಯಾಪಾರಸ್ಥರು ಆಗ ಇರುವುದಿಲ್ಲ!  

ಇನ್ನೊಂದು ಕಥೆಯೊಂದಿಗೆ ಈ ಕಥೆಯನ್ನು ಮುಕ್ತಾಯಮಾಡಿದರೆ ಒಳಿತೆನಿಸುತ್ತದೆ, ಇದು ನೀವು ಕೇಳಿದ್ದೇ ಕಥೆ: ಒಂದಾನೊಂದು ಕಾಲದಲ್ಲಿ ಅನೇಕ ಪಾರಿವಾಳಗಳಿದ್ದ ಒಂದು ಗುಂಪು ಆಹಾರವನ್ನರಸಿ ಹೊರಟಿತ್ತು. ಅವುಗಳಲ್ಲಿನ ರಾಜ ಅವುಗಳನ್ನು ನಿರ್ದೇಶಿಸುತ್ತಿದ್ದ. ಬಹುದೂರ ಹಾರಿದಣಿದ ಪಾರಿವಾಳಗಳಿಗೆ ಆಹಾರ ಸಿಗಲೇ ಇಲ್ಲ. ಸುಸ್ತಾಗಿ ಕುಳಿತ ಅವುಗಳಿಗೆ "ಇಷ್ಟೆಲ್ಲಾ ದೂರ ಕ್ರಮಿಸಿದ್ದೇವೆ, ತುಸುದೂರ ಹಾರಿದರೆ ಏನಾದರೂ ಸಿಗಬಹುದೆಂಬ ವಿಶ್ವಾಸ ನನಗಿದೆ, ಪ್ರಯತ್ನಿಸಿ" ಎಂದ ರಾಜನ ಮಾತಿಗೆ ಅವು ಒಪ್ಪಿ ಮತ್ತೆ ಹಾರಿದವು. ದೂರದಲ್ಲಿ ಆಲದಮರದ ಕೆಳಗಡೆ ಕಾಳುಗಳು ಹೇರಳವಾಗಿ ಬಿದ್ದಿದ್ದನ್ನು ಕಂಡವು. ಅಲ್ಲಿಗೆ ಧಾವಿಸಿ ಇಳಿದು ಕಾಳುತಿನ್ನಬೇಕೆನ್ನುವಷ್ಟರಲ್ಲಿ ಮೇಲಿನಿಂದ ದೊಡ್ಡದಾದ ಬಲೆಯೊಂದು ಬಿತ್ತು! ಕ್ಷಣಮಾತ್ರದಲ್ಲಿ ಅವು ಬೇಟೇಗಾರನ ಬಲೆಯಲ್ಲಿ ಸಿಕ್ಕಿಬಿದ್ದಿದ್ದವು. ಬೇಟೇಗಾರ ದೂರದಲ್ಲಿ ನಡೆದುಬರುವುದು ಕಾಣಿಸುತ್ತಿತ್ತು. ಇನ್ನೇನು ಎಲ್ಲಾ ಪಾರಿವಾಳಗಳೂ ತಮ್ಮ ಕಥೆ ಮುಗಿಯಿತು ಎಂದುಕೊಂಡವು.

ಪಾರಿವಾಳಗಳ ರಾಜ ಬಹಳ ಚಾಣಾಕ್ಷನಾಗಿದ್ದ. ಎಂತಹ ಗಂಡಾಂತರ ಪ್ರಸಂಗಗಳಲ್ಲಿಯೂ ವಿವೇಚಿಸಿ ನಡೆಯುವ ಚಾಕಚಕ್ಯತೆಯನ್ನು ಆತ ಹೊಂದಿದ್ದ. ಆತ ಹೇಳಿದ "ನೋಡೀ ಗೆಳೆಯರೇ, ನಾವೆಲ್ಲಾ ಬದುಕಲು ದಾರಿಯೊಂದೇ ಇದೆ. ನಾವು ಎಲ್ಲರೂ ಒಟ್ಟಾಗಿ ಒಮ್ಮೆಲೇ ಈ ಬಲೆಯನ್ನು ಹೊತ್ತುಕೊಂಡೇ ಹಾರಬೇಕು. ಹಾಗಾದರೆ ಮಾತ್ರ ನಾವು ತಪ್ಪಿಸಿಕೊಳ್ಳಲು ಸಾಧ್ಯ." ರಾಜನ ಮಾತು ಮತ್ತು ಸನ್ನೆಯನ್ನು ಅರಿತ ಪಾರಿವಾಳದ ತಂಡ ಹಾಗೇ ಮಾಡಿತು. ಬೇಟೇಗಾರ ಬಲೆಯನ್ನೇ ಎತ್ತಿಕೊಂಡು ಹಾರುತ್ತಿರುವ ಪಾರಿವಾಳಗಳನ್ನು ನೋಡಿ ಹುಚ್ಚನಂತೇ ಅರಚಿದ, ಅವುಗಳ ಬೆನ್ನಹಿಂದೇ ಓಡತೊಡಗಿದ. ಪಾರಿವಾಳಗಳು ಎಲ್ಲೂ ಕೆಳಗಿಳಿಯಲಿಲ್ಲ. ಬೆಟ್ಟ ಕಣಿವೆಗಳನ್ನು ದಾಟಿ ಬಹುದೂರ ಬಂದು ಇನ್ನೇನು ಬೇಟೇಗಾರ ತನ್ನ ಪ್ರಯತ್ನ ಕೈಬಿಟ್ಟ ಎಂಬುದು ಖಾತ್ರಿಯಾದಾಗ ಪಾರಿವಾಳಗಳ ರಾಜ ಹೇಳಿದ" ಇನ್ನು ನಾವು ತುಸು ವಿಶ್ರಮಿಸಿಕೊಂಡು ಪಕ್ಕದ ಪಟ್ಟಣಕ್ಕೆ ಹೋಗೋಣ, ಅಲ್ಲಿ ನನ್ನ ಮಿತ್ರ ಇಲಿಯೊಬ್ಬನಿದ್ದಾನೆ. ಆತ ಬಲೆಯನ್ನು ಕತ್ತರಿಸಿ ನಮ್ಮನ್ನು ಪಾರುಮಾಡುತ್ತಾನೆ" ಕೆಲಹೊತ್ತಿನ ಬಳಿಕ ಅವು ಹಾಗೇ ಮಾಡಿದವು. ಎತ್ತರದ ದೇವಸ್ಥಾನವೊಂದರ ಪಕ್ಕದ ಬಿಲದೆದುರು ದೊಪ್ಪೆಂದು ಹಾರಿ ಕುಳಿತ ಸದ್ದಿಗೆ ಇಲಿ ಒಳಸೇರಿಕೊಂಡಿತು.

 " ಅರೇ ಮಿತ್ರಾ ಇಲಿಯಾ, ನಾನು ಬಂದಿದ್ದೇನೆ...ಪಾರಿವಾಳಗಳ ರಾಜ" ಎಂಬ ಮಾತು ಕೇಳಿ ಇಲಿ ಹೊರಗೆ ಬಂತು. " ಅಯ್ಯೋ ಮಿತ್ರಾ ನೀನು ಇಲ್ಲಿ ? ಇದೆಲ್ಲಾ ಹೇಗೆ?"-ಕೇಳಿತು ಇಲಿ. ಇಲಿಗೆ ನಡೆದ ವೃತ್ತಾಂತವನ್ನು ಅರುಹಿ, ಬಲೆಯನ್ನು ಬಾಯಿಂದ ಕಡಿದು ತಮ್ಮನ್ನು ಬಿಡಿಸುವಂತೇ ಕೇಳಿತು ಪಾರಿವಾಳಗಳ ರಾಜ. ಒಪ್ಪಿದ ಇಲಿ ಪಾರಿವಾಳಗಳ ರಾಜ ಕುಳಿತ ಕಡೆಯಲ್ಲಿ ಬಲೆಯನ್ನು ಕಡಿಯತೊಡಗಿತು. "ಹೇಯ್ ಮೊದಲು ನನ್ನ ಅನುಚರರನ್ನು ಮುಕ್ತಗೊಳಿಸು...ರಾಜನಾದವನಿಗೆ ಅನುಚರರು ಚೆನ್ನಾಗಿದ್ದರೇ ತೃಪ್ತಿ, ಅದಿಲ್ಲದೇ ರಾಜ ಹೇಗೆ ಸಂತಸದಿಂದಿದ್ದಾನು? ನನ್ನ ಮಿತ್ರರನ್ನೇ ಮೊದಲು ಮುಕ್ತಗೊಳಿಸು... ಎಲ್ಲರನ್ನೂ ಬಿಡಿಸಿದಮೇಲೆ ನನ್ನನ್ನು ಬಿಡಿಸು."  ಪಾರಿವಾಳದ ರಾಜನ ಮಾತನ್ನು ಕೇಳಿದ ಇಲಿ ಗೆಳೆಯನ ಔದಾರ್ಯವನ್ನೂ ಆದರ್ಶವನ್ನೂ ಕೊಂಡಾಡಿತು ಮತ್ತು ಇತರ ಪಾರಿವಾಳಗಳು ಇದ್ದೆಡೆ ಬಲೆಯನ್ನು ಮೊದಲು ಕಡಿದು ಅವುಗಳನ್ನು ಬಿಡುಗಡೆಗೊಳಿಸಿತು. ಕೊನೆಯಲ್ಲಿ ರಾಜನೂ ಆಚೆಬಂದ. ಪಾರಿವಾಳಗಳೆಲ್ಲಾ ಇಲಿಗೆ ತಮ್ಮ ಅನಂತ ಕೃತಜ್ಞತೆಗಳನ್ನು ತಿಳಿಸಿ ಅಲ್ಲಿಂದ ತಮ್ಮೂರ ಕಡೆಗೆ ಬೀಳ್ಕೊಂಡವು.

ನೋಡುವುದಕ್ಕೆ ಅಂತಹ ಮಹಾ ದೊಡ್ಡದೇನೂ ಅಲ್ಲದಿದ್ದರೂ ವಿಷ್ಣುಶರ್ಮನೆಂಬಾತ ಬರೆದ ’ಪಂಚತಂತ್ರ’ದ ಇಂತಹ ಕಥೆಗಳು ಇವತ್ತಿಗೂ ನೀತಿಬೋಧಕವೇ. ಈ ಕೊನೆಯ ಕಥೆಯಲ್ಲಿ ಪಾರಿವಾಳಗಳು ಈ ದೇಶದ ಪ್ರಜೆಗಳು. ಬೇಟೇಗಾರರು ವಿದೇಶೀ ವ್ಯವಹಾರಸ್ಥರು! ನಮ್ಮಲ್ಲಿ ಹಾಲಿ ಇರುವ ರಾಜರಿಗೆ ತಲೆ ಸರಿ ಇರುವಹಾಗೇ ಕಾಣುತ್ತಿಲ್ಲ! ರಾಜರ ಹುಡುಕಾಟದಲ್ಲೇ ನಾವಿದ್ದೇವೆ ಎಂದರೆ ತಪ್ಪಲ್ಲ. ನಮ್ಮ ಸಹಾಯಕ್ಕೆ ಬರುವುವುದು ಚುನಾವಣೆ ಎಂಬ ಇಲಿಮಾತ್ರ. ಆದರೆ ಚುನಾವಣಾ ಇಲಿಯನ್ನು ತಲ್ಪುವವರೆಗೆ ಹಾರುವುದಕ್ಕಾಗಿ ಆದೇಶಿಸುವ ರಾಜ ನಮಗಿಲ್ಲದ ನಿಮಿತ್ತ ನಮಗೆ ನಾವೇ ಹೇಳಿಕೊಂಡು ಒಟ್ಟಿಗೇ ಹಾರಬೇಕಾಗಿದೆ; ವಿದೇಶೀಯರು ಬೀಸುವ ಬಲೆಯಿಂದ ತಪ್ಪಿಸಿಕೊಳ್ಳಬೇಕಾಗಿದೆ; ಬದುಕಿಕೊಳ್ಳಬೇಕಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಈ ದೇಶದ ಆರ್ಥಿಕ ಸ್ಥಿತಿಯನ್ನೇ ಅಡವಿಡಲು ಮುಂದಾಗುತ್ತಿರುವ ಜನರನ್ನು ತಹಬಂದಿಗೆ ತರುವುದು ನಮ್ಮೆಲ್ಲರ ಆದ್ಯತೆಯಾಗಬೇಕಾಗಿದೆ. ಭಾರತ ಬಡರಾಷ್ಟ್ರವಲ್ಲ, ಇಲ್ಲಿ ಬೇಕಾದಷ್ಟು ಹಣವಿದೆ-ಅದು ಕೆಲವೇ ಜನರ ಸೊತ್ತಾಗಿ ಸ್ವಿಸ್ ಬ್ಯಾಂಕಿನಲ್ಲಿದೆ. ಮೇಲಾಗಿ ದೇಶವ್ಯಾಪೀ ತುಂಬಿಕೊಂಡ ದೇಶದ್ರೋಹಿಗಳ ತಂಡ ನಕಲೀ ನೋಟುಗಳನ್ನು ಹೇರಳವಾಗಿ ಚಾಲನೆಗೆ ಬಿಟ್ಟಿದೆ. ಪಾಕಿಸ್ತಾನ ಪ್ರೇರಿತ ಭಾರತೀಯ ಮೂಲದ ತಂಡಗಳು ಬಾಂಗ್ಲಾದ ಕಡೆಯಿಂದ ಖೋಟಾನೋಟುಗಳನ್ನು ಒಳಕ್ಕೆ ತರುತ್ತಿದ್ದಾವೆ! ಜೊತೆಗೇ ಇರುವ ಹಲವು ವ್ಯಾಘ್ರಗಳ ಮುಖಮಾತ್ರ ಗೋವಿನದಾಗಿದೆ! ಎಲ್ಲಿಯವರೆಗೆ ಇದನ್ನೆಲ್ಲಾ ನಿಲ್ಲಿಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೂ ಹಣದುಬ್ಬರ ಕಮ್ಮಿ ಆಗುವುದಿಲ್ಲ. ಎಲ್ಲಿಯವರೆಗೆ ಬ್ರಷ್ಟಾಚಾರ ಮತ್ತು ವೋಟ್ ಬ್ಯಾಂಕ್ ರಾಜಕಾರಣ ನಿಲ್ಲುವುದಿಲ್ಲವೋ ಅಲ್ಲೀವರೆಗೆ ಇಂತಹ ಕೃತ್ಯಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ! ನಿಜವಾದ ದೇಶಭಕ್ತರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಸಿಕ್ಕಿದ ಸ್ವಾತಂತ್ರ ಮತ್ತೆ ಪಾರತಂತ್ರ್ಯವಾಗಲಿದೆ. ಕೇವಲ ನಮ್ಮ ವೈಯ್ಯಕ್ತಿಕ ಹಿತಾಸಕ್ತಿಗಳನ್ನೊಂದೇ ಪರಿಗಣಿಸದೇ ಸಮಷ್ಟಿಯಲ್ಲಿ ದೇಶಪ್ರಜ್ಞೆ ಜಾಗೃತವಾಗಬೇಕಾಗಿದೆ. ದೇಶಭಕ್ತರೇ ನೀವು ಮಾತಾಡಿ, ಯಾರ ಕೈಗೆ ನಮ್ಮ ಮುಂದಿನ ಆಳ್ವಿಕೆ ನೀಡಬೇಕು? ಈಗಿರುವ[ಎಲ್ಲಾಪಕ್ಷಗಳಲ್ಲೂ] ಕಳ್ಳರೇ ಬೇಕೇ? ಅಥವಾ ದೇಶಭಕ್ತರ ಹೊಸದೊಂದು ದಂಡು ಸಿದ್ಧವಾಗಬೇಕೆ? ಸಮಯ ಕಡಿಮೆ ಇದೆ; ನಿರ್ಧಾರ ತ್ವರಿತವಾಗಿ ಆಗಬೇಕಾಗಿದೆ.