ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 24, 2010

ಎಲ್ಲಿ ತೆರಳಲೇಕೆ ನಾನು ?



ಶ್ರೀರಾಮನವಮಿಯ ಸುತ್ತಮುತ್ತ ನಡೆಸುತ್ತಿರುವ ವಿಷಯ ಸಂಚಾಲಿತ ಕಥನ-ಕವನದಲ್ಲಿ ಇಂದಿನ ಪಾತ್ರ ರಾಮಾಯಣದಲ್ಲಿ ಅಂತ್ಯಕಾಲದ ' ಲಕ್ಷ್ಮಣನ ಸ್ವಗತ '.

ಬಹುತೇಕ ರಾಮಾವತಾರ ಮುಕ್ತಾಯಕ್ಕೆ ಬಂದ ಸಮಯ. ಪ್ರಭು ಶ್ರೀರಾಮನ ರಾಮರಾಜ್ಯ ಬಹಳ ಪ್ರಸಿದ್ಧಿ ಪಡೆದಿದೆ. ಪ್ರಜೆಗಳೆಲ್ಲ ಉಂಡುಟ್ಟು ಸುಖದಿಂದಿರುವಾಗ, ರಾಜಕಾರ್ಯದಲ್ಲಿ ರಾಮಾದಿಗಳು ತೊಡಗಿರುವ ವೇಳೆ ಕಾಲ ಪುರುಷ ಶ್ರೀರಾಮನನ್ನು ನೋಡಬೇಕು ಎಂದು ಬರುತ್ತಾನೆ. ಸಿನ್ಹಾಸನಾರೂಢ ರಾಮಚಂದ್ರನಿಗೆ ದೂರದಲ್ಲಿ ಬಂದು ನಿಂತಿರುವ ಕಾಲಪುರುಷ ಕಾಣಿಸುತ್ತಾನೆ, ರಘುವೀರ ಆತನನ್ನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಆತ ಬಂದಾಗಲೇ ಗೊತ್ತು ರಾಮನಿಗೆ 'ನಮ್ಮ ಕಾಲ ಸನ್ನಿಹಿತವಾಗಿದೆ' ಎಂದು ! ಆದರೂ ಪ್ರತ್ಯಕ್ಷ ಅವನಲ್ಲಿ ಕೇಳಲು ಹೋಗುವುದಿಲ್ಲ. ಬಂದ ಕಾಲ ಆತಿಥ್ಯ ಸ್ವೀಕಾರಮಾಡಿದ ಮೇಲೆ ಮತ್ತೆನಾಗಬೇಕೆಂಬ ಪ್ರಶ್ನೆ ಕೇಳುತ್ತಾನೆ ಶ್ರೀರಾಮ. ' ರಾಮನ ಕೂಡ ಏಕಾಂತದಲ್ಲಿ ಮಾತನಾಡಬೇಕು, ಅಲ್ಲಿಗೆ ಯಾರೂ ಬರಕೂಡದು' ಎಂಬ ಶರತ್ತನ್ನು ವಿಧಿಸಿ ಕಾಲಪುರುಷ ರಾಮನಿಗೆ ಹೇಳುತ್ತಾನೆ. ರಾಮ ತಮ್ಮ ಲಕ್ಷ್ಮಣನನ್ನು ಕರೆದು ಏಕಾಂತದ ಮಾತುಕತೆಗೆ ಏರ್ಪಾಟುಮಾಡುವಂತೆಯೂ, ಏಕಾಂತಕ್ಕೆ ಭಂಗ ಬಂದರೆ ದೇಹಾಂತ ಶಿಕ್ಷೆ ವಿಧಿಸಲಾಗುವುದು ಎಂದು ಕಾಲನ ಇಚ್ಛೆಯಂತೆ ತಮ್ಮನಿಗೆ ಹೇಳುತ್ತಾನೆ. ಅಣ್ಣನ ಮಾತನ್ನು ಎಂದೂ ಎಂದೆಂದೂ ಶಿರಸಾವಹಿಸಿದ ತಮ್ಮ ಲಕ್ಷ್ಮಣ ಅಂದೂ ಕೂಡ ಹಾಗೇಯೇ ನಡೆದುಕೊಳ್ಳುತ್ತಾನೆ. ಏಕಾಂತ ಪ್ರಾರಂಭವಾಗುತ್ತದೆ. ಅಲ್ಲಿ ಕಾಲಪುರುಷ ರಾಮನಿಗೆ ಅವತಾರ ಸಮಾಪ್ತಿಗೊಳಿಸಿ ಭುವಿಯಲ್ಲಿ ಸ್ಥಿರವಾಗಿರದೇ ವೈಕುಂಕ್ಕೆ ಮರಳಲು ನೆನಪಿಸುತ್ತಿರುತ್ತಾನೆ.

ಎಲ್ಲೆಲ್ಲೋ ಅಂಡಲೆಯುತ್ತಿದ್ದ ದೂರ್ವಾಸರು ತಿರುಗುತ್ತಾ ತಿರುಗುತ್ತಾ ಅಯೋಧ್ಯೆಗೆ ಬಂದುಬಿಡುತ್ತಾರೆ. ಬಂದವರನ್ನು ಲಕ್ಷ್ಮಣ ಅಣ್ಣನ ಪರವಾಗಿ ಸ್ವಾಗತಿಸಿ, ಅರ್ಘ್ಯ-ಪಾದ್ಯಗಳನ್ನಿತ್ತು ಸತ್ಕರಿಸುತ್ತಾನೆ. ತಾನು ರಾಮನನ್ನು ನೋಡಲೆಂದೇ ಬಂದಿರುವುದಾಗಿಯೂ ತನಗೆ ತುರ್ತಾಗಿ ರಾಮನನ್ನು ನೋಡಲೇ ಬೇಕೆಂದೂ ದೂರ್ವಾಸರು ಸಾರುತ್ತಾರೆ. ಒಂದು ಕಡೆ ಅಣ್ಣನ ಆಜ್ಞೆ, ಇನ್ನೊಂದು ಕಡೆ ಮುನಿಯ ಅಪೇಕ್ಷೆ. ಮುನಿಯೆಂದರೆ ಆತ ಮುನಿಯುವ ಮುನಿ, ಬಹಳ ಜನ ಅವರಿಂದ ದೂರವೇ ವಾಸವಿದ್ದರೆ ಸಾಕು ಎಂಬಂತೆ ಹೆದರಿಕೆ ಉಂಟುಮಾಡಿರುವ ಕೋಪದ ಪ್ರತಿರೂಪವಾದ ದೂರ್ವಾಸ ! ತಲೆನೋವು ತಂದುಕೊಂಡ ಲಕ್ಷ್ಮಣ ಏನು ಮಾಡಬೇಕೆಂದು ತೋಚದೆ ಕಂಗಾಲಾಗುತ್ತಾನೆ. ದೂರ್ವಾಸರ ಕೋಪ ಪ್ರಾರಂಭವಾಗಿರುತ್ತದೆ. ರಾಮದರ್ಶನ ಬಯಸಿಬಂದ ಯಾರಿಗೇ ಆಗಲಿ ಲಕ್ಷ್ಮಣ ಇಲ್ಲಾ ಎಂದಿರಲಿಲ್ಲ. ಅಣ್ಣನ ಆಜ್ಞೆಯಿದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಅಂದರೂ ದೂರ್ವಾಸರು ಕೇಳಬೇಕಲ್ಲ ! ಲಕ್ಷ್ಮಣ ಶತಪಥ ತಿರುಗುತ್ತ ಅಣ್ಣ ಎಲ್ಲಾದರೂ ಕಿಟಕಿಯಲ್ಲಾದರೂ ಕಾಣಸಿಗುವನೇ ಎಂದು ನೋಡುತ್ತಾನೆ. ಉಹುಂ ! ಇಲ್ಲ, ಮಾತಿಗೆ ಅಣ್ಣ ಸಿಗುತ್ತಿಲ್ಲ. ಏನುಮಾಡಲಿ ಏನುಮಾಡಲಿ ಎಂದು ಕೈಕೈ ಹೊಸಕಿಕೊಳ್ಳುತ್ತ ಕೊನೆಗೊಮ್ಮೆ ಮುನಿಯ ಆವೇಶ,ಆಕ್ರೋಶ ತಾಳಲಾರದೆ ದೂರ್ವಾಸರನ್ನು ಒಳಗೆ ಪ್ರವೇಶಕ್ಕೆ ಬಿಟ್ಟುಬಿಡುತ್ತಾನೆ. ಏಕಾಂತಕ್ಕೆ ಭಂಗಬಂತೆಂದು ಕಾಲಪುರುಷ ಕೆಲಕ್ಷಣಗಳಲ್ಲೇ ಹೊರಟುಹೋಗುತ್ತಾನೆ,ಹೋಗುವ ಮುನ್ನ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ನೀಡುವಂತೆ ತಾಕೀತು ಮಾಡಿ ಹೋಗುತ್ತಾನೆ. ಆ ಬಳಿಕ ರಾಮ ಬಂದ ದೂರ್ವಾಸರನ್ನು ಉಪಚರಿಸಿದ ನಂತರ ಆಜ್ಞೆಯ ಉಲ್ಲಂಘನೆ ಆಗಿದ್ದಕ್ಕೆ ಪ್ರೀತಿಯ ತಮ್ಮನಲ್ಲಿ ಪ್ರಸ್ತಾವಿಸಿ ಶಿಕ್ಷೆಯನ್ನು ಅಂಗೀಕಾರಮಾಡದೇ ವಿಧಿಯಿಲ್ಲ ಎನ್ನುತ್ತಾನೆ.

ಪ್ರಜಾಪಾಲಕ ಸಾರ್ವಭೌಮ ರಾಮ ಇಂದು ಈ ವಿಷಯದಲ್ಲಿ ನಿರ್ವೀರ್ಯನಾಗಿದ್ದಾನೆ. ಸಾವಿರ ಸಾವಿರ ಜನರ ಆರ್ತನಾದ ಆಲಿಸಿ ಮನ್ನಿಸುವ-ಅವರ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಕೈ ಇಂದು ಪರಿಹಾರವಿಲ್ಲದ ಬರಿಗೈಯ್ಯಾಗಿ ಬೆವರ ಹನಿಗಳೂ ಬತ್ತಿಹೋದ ಸ್ಥಿತಿಯಲ್ಲಿವೆ.ಕಣ್ಣಾಲಿಗಳು ತುಂಬಿ ಬಂದರೂ ಹನಿಗಳುದುರಿದರೆ ಸಭಿಕರು ನೋಡಿ ಏನೆಂದಾರು ಎಂಬ ಅನಿಸಿಕೆ ಕಾಡುತ್ತಿದೆ. ಕಾಡಿನಲ್ಲೂ ನಾಡಿನಲ್ಲೂ ತನ್ನ ಜೊತೆಗೇ ಇದ್ದು, ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಪೂರೈಸುತ್ತಿದ್ದ, ತನ್ನ ಶರೀರದ ಒಂದು ಅವಿಭಾಜ್ಯ ಅಂಗವಾದ ನಲ್ಮೆಯ ತಮ್ಮ ಲಕ್ಷ್ಮಣ ಇಂದು ಭಾಜ್ಯವಾಗಿ ದೂರಹೊಗಬೇಕಾಗಿ ಬಂದಿದೆ. ಲಕ್ಷೋಪಲಕ್ಷ ಜೀವಜಂತುಗಳಿಗೆ ಜೀವಿತವನ್ನು ವಿಸ್ತರಿಸಿದ ರಾಮ, ಕಲ್ಲಾಗಿ ಬಿದ್ದ ಅಹಲ್ಯೆಗೆ ಜೀವ ತುಂಬಿದ ರಾಮ, ಶರಣು ಎಂದ ವಿಭೀಷಣಗೆ ಪಟ್ಟಗಟ್ಟಿದ ರಾಮ, ಅಳಿಲು ಸೇವೆಯನ್ನೂ ಪರಿಗಣಿಸುತ್ತ ಅಳಿಲಿಗೂ ಪ್ರೀತಿಯ ಹಸ್ತರೇಖೆ ಎಳೆದು ಹರಸಿದ ರಾಮ ಅಧೀರನಾಗಿದ್ದಾನೆ! ತನ್ನಷ್ಟಕ್ಕೇ ತಾನು ಎಲ್ಲವನ್ನೂ ನೆನೆನೆನೆದು ಗಡಗಡ ನಡುಗುತ್ತಿದ್ದಾನೆ! ಆದರೆ ಹೊರಗಡೆ ವ್ಯಕ್ತಪಡಿಸಲಾರದ ರಾಜಾರಾಮ ಅವನು! ರಾಜನಾಗಿ ವಿಧಿಸಿದ್ದ ಕರಾರಿನ ಪ್ರಕಾರ ಶಿಕ್ಷೆ ನೀಡಲೇಬೇಕು. ತಮ್ಮನ ಮೇಲೆ ಇರುವ ಪ್ರೀತಿ ಅಂತಹುದು, ಅದು ಹೇಳಬರುವಂತಿಲ್ಲ. ಬಾಲ್ಯದಿಂದ ಇದುತನಕ ಆಡಿ ಅನುಭವಿಸಿದ ಆ ಪ್ರೀತಿಯನ್ನು, ಆ ಪ್ರೀತಿಯ ಬಂಧನವನ್ನು, ಆ ಪ್ರೇಮ ಸಂಕೋಲೆಯನ್ನು ಹರಿಯಲಾರದ, ಹರಿಯದಿರಲಾರದ ಇಬ್ಬಂದಿತನದಲ್ಲಿ ಸಿಕ್ಕಿ ರಾಮ ನಲುಗಿದ್ದಾನೆ. ದೃಷ್ಟಿ ಬೇರೆಕಡೆಗಿಟ್ಟು ಕೊನೆಗೊಮ್ಮೆ ಮತ್ತೊಮ್ಮೆ ಖಡಾಖಂಡಿತವಾಗಿ ಹೇಳಿದ್ದಾನೆ -

" ಲಕ್ಷ್ಮಣಾ, ಮಾಡಿದ ತಪ್ಪಿಗೆ ದೇಹಾಂತ ಶಿಕ್ಷೆ ವಿಧಿಸಿದ್ದೇನೆ, ಹೋಗು ಅನುಭವಿಸು "

ಲಕ್ಸ್ಮಣ ಅಂದು ಸೀತೆಗಾಗಿ ಮರುಗಿದ, ಇಂದು ತನಗಾಗಿ ಅಲ್ಲ, ಅಣ್ಣನ ಸಾಂಗತ್ಯ ತಪ್ಪಿಹೋಗುತ್ತಿರುವುದಕ್ಕೆ ಪರಿತಪಿಸುತ್ತಾ ಕೆಲ ಕ್ಷಣ ಕಳೆಯುತ್ತಾನೆ. ಅವನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಘಟನೆಗಳನ್ನೂ ಮೆಲುಕು ಹಾಕುತ್ತಾನೆ.

ರಾಮನಿಲ್ಲದ ಬದುಕು ಗೊತ್ತೇ ಇಲ್ಲ ಲಕ್ಷ್ಮಣನಿಗೆ, ರಾಮ ಸೀತೆಯನ್ನಾದರೂ ಬಿಟ್ಟಿದ್ದ ದಿನಗಳಿವೆ ಆದರೆ ತಮ್ಮ ಲಕ್ಷ್ಮಣನನ್ನು ಬಿಟ್ಟಿರಲಿಲ್ಲ. ಸದಾ ಅಣ್ಣನ ಅನುವರ್ತಿಯಾಗಿ ಅದರಲ್ಲೇ ಸಂಪೂರ್ಣ ತೃಪ್ತ ಲಕ್ಷ್ಮಣ. ಅಣ್ಣನ ಸಲ್ಲಕ್ಷಣಗಳನ್ನು ಸಂಪೂರ್ಣ ಮೈಗೂಡಿಸಿಕೊಂಡ ಲಕ್ಷ್ಮಣ ಪತ್ನಿ ಊರ್ಮಿಳೆಯನ್ನಾದರೂ ಬಿಟ್ಟು ಬದುಕಿಯಾನು ಆದರೆ ಅಣ್ಣನಿಂದ ಅಗಲುವಿಕೆ ಕನಸಲ್ಲೂ ಸಾಧ್ಯವಾಗದ ಮಾತು. ತನ್ನ ಪಕ್ಕದಲ್ಲೇ ಅಣ್ಣ ಕುಳಿತು ವಿಜ್ರಂಭಿಸಿದ ಸಿಂಹಾಸನಕ್ಕಾಗಿ ಆ ಆಳುವ ಖುರ್ಚಿಗಾಗಿ ಲಕ್ಷ್ಮಣ ಎಂದೂ ಹಂಬಲಿಸಲಿಲ್ಲ,ಹಪಹಪಿಸಲಿಲ್ಲ! ತಂದೆಯ ಪರೋಕ್ಷ ಆಜ್ಞೆಯಂತೆ ಕಾಡಿಗೆ ರಾಮ ತೆರಳುವಾಗ ಹಠದಿಂದ ಹಿಂಬಾಲಿಸಿದ ವ್ಯಕ್ತಿ ಲಕ್ಷ್ಮಣ. ರಾಮನೊಟ್ಟಿಗೆ ಕಾಡಿನಲ್ಲಿ ಹದಿನಾಲ್ಕು ವರುಷಗಳನ್ನು ಕಳೆದುಬಂದಿದ್ದ. ಕಾಡಲ್ಲಿರುವಾಗ ಕ್ರೂರ ರಕ್ಕಸರನ್ನು ಸದೆಬಡಿದಿದ್ದು, ಕಂದಮೂಲಾದಿ ಫಲಗಳನ್ನು ಅಣ್ಣ-ಅತ್ತಿಗೆಯರ ಜೊತೆಗೆ ಹಂಚಿ ತಿಂದು ನಾರುಟ್ಟು ಬದುಕಿದ್ದು, ಮದುವೆಯಾಗುವಂತೆ ಹಿಂಸಿಸಿದ ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದು, ಸೀತಾಮಾತೆಯ ಆಜ್ಞೆಯಂತೆ ಜಿಂಕೆ ಹುಡುಕಿ ಹೊರಟ ' ರಾಮನ ಕೂಗ ' ನ್ನು ಅನುಸರಿಸಿ ಹೊರಡುತ್ತಾ ಲಕ್ಷ್ಮಣ ತನ್ನ ಹೆಸರಲ್ಲೇ ಸತ್ಯ ಶಪಥದ ರಕ್ಷಣಾ ರೇಖೆ ಬರೆದಿದ್ದು.........ಒಂದೇ ಎರಡೇ ಮರೆಲಸಾಧ್ಯ ದಿನಗಳವು. ತಂದೆ-ತಾಯಿ ಬಂಧು ಬಳಗದ ಎಲ್ಲರ ಪ್ರೀತಿಯನ್ನು ಕೇವಲ ತನ್ನಣ್ಣನಲ್ಲೇ ಕಂಡಿದ್ದ ಲಕ್ಷ್ಮಣ. ಅಣ್ಣನೇ ಆತನಿಗೆ ಜಗತ್ತು ! ಅದರ ಹೊರತು ಮಿಕ್ಕುಳಿದಿದ್ದೆಲ್ಲಾ ಗೌಣ ಆತನಿಗೆ. ಊಟ ಬಿಟ್ಟಾನು-ನಿದ್ದೆ ಬಿಟ್ಟಾನು, ಅಣ್ಣನನ್ನು ಮಾತ್ರ ಬಿಡ. ಅಣ್ಣನ ಸೇವೆ ಮಾಡಿ, ಅಣ್ಣ ಉಂಡು ಪ್ರೀತಿಯಿಂದ ತನ್ನ ತಲೆ ನೇವರಿಸಿ ತನ್ನ ಮೇಲೊಮ್ಮೆ ಬಾಚಿ ಅಪ್ಪುತ್ತ ಏನೇ ಹೇಳಿದರೂ, ಕೇಳಿದರೂ ಅದನ್ನು ಕೊಟ್ಟುಬಿಡುತ್ತಿದ್ದ,ಮಾಡಿಬಿಡುತ್ತಿದ್ದ ಲಕ್ಷ್ಮಣ ಅಣ್ಣ ಮಲಗಿದ ಮೇಲೆ ಅಣ್ಣನ ಪದತಲದಲ್ಲಿ ಕೆಳಗಡೆ ಹಾಸಿಕೊಂಡು ಮಲಗಿ ನಿದ್ರಿಸುತ್ತಿದ್ದ ಲಕ್ಷ್ಮಣ, ಅಣ್ಣನ ಕಣ್ಣ ನೋಟ ಮಾತ್ರದಿಂದಲೇ ಅದರ ಅರ್ಥಗ್ರಾಹಿಯಾಗಿ ಕೆಲಸ ಪೂರೈಸುತ್ತಿದ್ದ ಲಕ್ಷ್ಮಣ ಅಣ್ಣ ಕೊಟ್ಟ ಶಿಕ್ಷೆಗೆ ಹೆದರಿದ್ದಾನೆ! ಅಲ್ಲಲ್ಲ ಅಣ್ಣನನ್ನು ತೊರೆದುಹೋಗುವುದಕ್ಕೆ ಹೆದರಿದ್ದಾನೆ! ಮತ್ತೆಂದೂ ಸಿಗಲಾರದ ಅಣ್ಣನ ಆ ಪ್ರೀತಿಯ ಅಪ್ಪುಗೆಗೆ, ಸಾಂತ್ವನದ ನುಡಿಗಳಿಗೆ, ಕರುಣಾರ್ದ್ರ ಹೃದಯಕ್ಕೆ, ಆ ನೀತಿಗೆ-ಆ ರೀತಿಗೆ, ಆ ಸಮ್ಮೋಹಕ ವ್ಯಕ್ತಿತ್ವಕ್ಕೆ ತನ್ನನ್ನೇ ತಾನು ಅರ್ಪಿಸಿಕೊಂಡ ಲಕ್ಷ್ಮಣ ಅದನ್ನೆಲ್ಲ ಕಳೆದುಕೊಳ್ಳುವ ಭಯದಿಂದ ಮನದಲ್ಲಿ ನರಳಿದ್ದಾನೆ, ಅಣ್ಣನಲ್ಲಿ ಹೇಳಲಾರ, ಅಣ್ಣನ ಮನಸ್ಸಿಗೆ ಎಂದೂ ನೋವು ತರಲಾರ, ಅಣ್ಣನ ಅಣತಿಗೆ ವಿರುದ್ಧವಾಗಿ ನಡೆಯಲಾರ, ಅಣ್ಣನ ಅಪೇಕ್ಷೆಯನ್ನು ಉಪೇಕ್ಷಿಸಲಾರ, ಅಣ್ಣನ ಮುಖಾರವಿಂದದಲ್ಲಿ ಕಂಡಿರುವ ಆ ಮುಗ್ಧ-ಮನಮೋಹಕ ಮುಗುಳು ನಗುವನ್ನು ಕಸಿದುಕೊಳ್ಳಲಾರ, ಅಣ್ಣನ ಸುಮಧುರ ಪಾದಸ್ಪರ್ಶವನ್ನು ತಪ್ಪಿಸಿಕೊಳ್ಳಲಾರ, ಅಣ್ಣನ ಹುಸಿಕೋಪವನ್ನು ನೋಡದೇ ಇರಲಾರ, ಚಂದದಿ ಅಣ್ಣ ಸಿಂಹಾಸನದಲ್ಲಿ ಕುಳಿತು ಧರ್ಮರಾಜ್ಯಭಾರ ಮಾಡುವುದನ್ನು ಕಣ್ತುಂಬಿಸಿಕೊಳ್ಳದೇ ಇರಲಾರ--ಇದೆಲ್ಲ ಪುನಃ ತನಗೆ ಸಿಕ್ಕೀತೆ --ಕಾಡುತ್ತಿದೆ ಮನಸ್ಸು. ಕನಸಲ್ಲೂ ಮನಸಲ್ಲೂ ರಾಮಣ್ಣನನ್ನೇ ತುಂಬಿಸಿಕೊಂಡು ಅವನ ನಗುವಲ್ಲೇ ತನ್ನ ನಗುವನ್ನ ಕಂಡ,ತನ್ನ ನಲಿವನ್ನ ಕಂಡ ನಿಸ್ಪ್ರಹ ಲಕ್ಷ್ಮಣ ಕ್ಷಣ ಕ್ಷಣದಲ್ಲೂ ಮನಸಾ ಪೂಜಿಸುವ, ಆರಾಧಿಸುವ, ಆಸ್ವಾದಿಸುವ, ಆಲಂಗಿಸುವ, ಆಲೈಸುವ ಆ ಪ್ರೇಮಮುದಿತ ರಾಮನಿಗಾಗಿ ಹಂಬಲಿಸುತ್ತಿದೆ ಮನಸ್ಸು. ಇನ್ನೆಲ್ಲಿ ನನ್ನ ರಾಮ ಇನ್ನೆಲ್ಲಿ ನನ್ನ ರಾಮಣ್ಣ, ಇನ್ನೆಲ್ಲಿ ಆ ಪ್ರೇಮ, ಇನ್ನೆಲ್ಲಿ ಆ ಕರುಳಿನ ಪ್ರೀತಿಯ ಹರಹು- ಹೊಕ್ಕುಳ ಬಳ್ಳಿಯ ಸಂಬಂಧ ? ಮನದಲ್ಲೇ ಅತ್ತಿದ್ದಾನೆ ಲಕ್ಷ್ಮಣ,ಪುನಃ ಸಿಗಲಾರದ ಈ ಅಣ್ಣ-ತಮ್ಮರ ಬಾಂಧವ್ಯಕ್ಕೆ ಮರುಗಿದ್ದಾನೆ ತಾನು. ಕಾಲ ಕಳೆದುಹೋಗುತ್ತಿದೆ, ಕಾಲನಪ್ಪಣೆಯಾಗಿದೆ, ಮೇಲಾಗಿ ರಾಜಾರಾಮನ ಆಜ್ಞೆಯಾಗಿದೆ! ಆಗಲೇ ಸತ್ತುಹೋದ ಅನುಭವದಿಂದ ಬತ್ತಿಹೋಗಿ ಹೊಲಿದುಕೊಂಡ ತುಟಿಗಳು, ನಿಂತ ನೀರಿನ ಮಡುಗಳಾದ ಕಣ್ಣಾಲಿಗಳು,ಕಬ್ಬಿಣದ ಕವಾಟದಂತೆ ಕೇಳಿಸದೆ ಕಿವುಡಾದ ಕಿವಿಗಳು,ಕಾಲಿಬಿಟ್ಟ ಬಂದೂಕಿನಂತೆ ನಿಸ್ತೇಜವಾದ ನಾಸಿಕ, ಸ್ವಂತಿಕೆ ಕಳೆದುಕೊಂಡ ಮೈಮನ, ಜಡಗಟ್ಟಿ ಮರಗಟ್ಟಿ ಹೋಗಿದ್ದಾನೆ ಲಕ್ಷ್ಮಣ, ಆ ಹರಹಿನಲ್ಲೇ ಹೀಗೊಮ್ಮೆ ನೆನೆದುಕೊಂಡಿದ್ದಾನೆ ---


ಎಲ್ಲಿ ತೆರಳಲೇಕೆ ನಾನು ?

ಅಣ್ಣಾ ನಿನ್ನ ಬಿಟ್ಟು ಎಲ್ಲಿ ತೆರಳಲೇಕೆ ನಾನು ?
ಕಣ್ಣ ಹನಿಯ ಒರೆಸುವುದಕೆ ಬರುವುದಿಲ್ಲವೇನು ?
ಅಣ್ಣಾ .....ಅಣ್ಣಾ....ಅಣ್ಣಾ.....ಅಣ್ಣಾ ...ಶ್ರೀ.. ರಾಮಚಂದ್ರ

ಹುಟ್ಟಿನಿಂದ ಇಲ್ಲೀವರೆಗೆ ನಿನ್ನ ಜೊತೆಯಲೀ
ಕಷ್ಟಮರೆತು ಸಾಗಿಬಂದೆ ಇಹದ ಬದುಕಲೀ
ಎಷ್ಟು ಕಠಿಣವಾಯ್ತು ವಿಧಿಯು ಎಮ್ಮ ಬಾಳಲೀ
ಮುಷ್ಠಿಯಲ್ಲಿ ಹಿಡಿದು ತಿರುಚಿ ನರಳಿಸುತ್ತಲೀ

ಊಟತಿಂಡಿ ಆಟಪಾಠ ನಿನ್ನ ಜೊತೆಯಲೇ
ನೋಟದಲ್ಲಿ ಅಣ್ಣಾ ಮರೆತೆ ನಿನ್ನ ತನದಲೇ
ಕಾಟ ತೊರೆಯಲೆಂದು ಪಿತಗೆ ಕೈಕೆಯಿಂದಲೇ
ಓಟಕಿತ್ತೆ ನಾಡತ್ಯಜಿಸಿ ಕಾಡ ಕಡೆಯಲೇ

ತಂದೆಯಾಜ್ಞೆಯಂತೆ ನಡೆದೆ ನೀನು ಕಾಡಿಗೆ
ಬಂದೆ ನಿನ್ನೀ ಅನುಜ ಜೊತೆಗೆ ನನ್ನ ಪಾಡಿಗೆ
ಕಂದನಂತೆ ನೋಡ್ದ ನಿನ್ನ ಜೀವನಾಡಿಗೆ
ಇಂದು ಏಕೆ ತೆರೆಯನೆಳೆವೆ ನನ್ನ ಜೋಡಿಗೆ ?

ಪ್ರೀತಿಯಿಂದ ನೀನು ಕೊಟ್ಟ ಹಲವು ತುತ್ತನು
ನೀತಿಯೆಂಬ ಮುತ್ತು ರತ್ನದೊಡವೆ ಹುತ್ತನು
ರೀತಿಯಿಂದ ನಿನ್ನ ಜೊತೆಗೆ ಬಳಸುತಿರ್ದೆನು
ಭೀತಿಯಿರದೆ ಬದುಕು ತುಂಬ ಮೆರೆಯುತಿದ್ದೆನು

ಜಿಂಕೆ ಹಿಡಿಯೆ ಮುಂದೆ ತೆರಳಿ ನೀನು ಹೋಗಲು
ಮಂಕುಕವಿದ ಮನವದಾಯ್ತು 'ನೀನು ಕೂಗಲು'
ಸಂಕಟದಲಿ ಗುಡಿಯ ತೊರೆದು ನಿನ್ನ ಸೇರಲೂ
ಅಂಕಿತವನ್ನು ಇಟ್ಟು ಬರೆದೆ ರೇಖೆ ಭುವಿಯೊಳು

ಕಳೆದ ಮಾತೆ ಸೀತೆ ಯನ್ನು ಮನವು ನೆನೆಯುತಾ
ಒಳಗೆ ಉರಿದ ಬೆಂಕಿಯಲ್ಲೇ ದಿನವ ಕಳೆಯುತಾ
ಉಳಿದ ದಿನವ ನಿನ್ನ ಜೊತೆಗೆ ಹಾಗೇ ಸವೆಸುತಾ
ತೊಳೆದೆ ನನ್ನ ಪಾಪಕರ್ಮ ಪಾದ ಸ್ಮರಿಸುತಾ

ಕಾಲಪುರುಷ ಬಂದ ಸಮಯ ಹಲವು ಬಗೆದೇನೂ
ಲೀಲೆಯನ್ನು ಕೇಳಿ ತಿಳಿದು ಭಯದಲಿದ್ದೆನು
ಬಾಲಿಶತನ ಮುಗ್ದ ರೂಪ ಕಾಲ ಮೆರೆದನೂ
ಅಲಿಸೆಂದು ನಿನ್ನ ಕರೆದು ಗೆಲುವಮೆರೆದನೂ !

ಒಮ್ಮೆ ನನ್ನ ಅಪ್ಪಿ ಮುದ್ದ ನೀಡು ಎನುತಲೀ
ಒಮ್ಮತದಲೇ ಆಜ್ಞೆ ನಡೆಪೆ ಎನುತ ಭರದಲೀ
ಹೆಮ್ಮೆಯೆನಗೆ ಅಣ್ಣ ಕೊಟ್ಟ ಶಿಕ್ಷೆ ಪಡೆವಲೀ
ಅಮ್ಮನಂತೆ ಪೊರೆದ ನಿನ್ನ ಕಣ್ಣ ಎದುರಲೀ

ಮಾಟಮಂತ್ರ ಏನದಾಯ್ತು ನಮ್ಮನಗಲಿಸೆ ?
ಪಾಠ ಹೊಸದು ಕಾಲ ಕೊಟ್ಟ ಬದುಕ ತೀರಿಸೆ
ನೋಟವೊಮ್ಮೆ ಬೀರು ಸಾಕು ಪ್ರೇಮತೋರಿಸೆ
ಸಾಟಿಯಿಲ್ಲ ಅಣ್ಣಾ ನಿನ್ನ ಕರುಣೆಮೀರಿಸೆ !