ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, July 3, 2012

ಪಾರ್ಕಿನ್ಸನ್ಸ್ ಎಂಬ ಹೆಮ್ಮಾರಿಗೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ !

ಚಿತ್ರಗಳ ಋಣ: ಅಂತರ್ಜಾಲ
ಪಾರ್ಕಿನ್ಸನ್ಸ್ ಎಂಬ ಹೆಮ್ಮಾರಿಗೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ !

ವೈಜ್ಞಾನಿಕವಾಗಿ ಗಣಕಯಂತ್ರಗಳಂತಹ ಅದ್ಭುತಗಳನ್ನು ಸೃಜಿಸಿದ ಮನುಷ್ಯ ತನ್ನ ಕೆಲಸಕಾರ್ಯಗಳಿಗಾಗಿ ಸ್ವನಿಯಂತ್ರಿತ ಯಂತ್ರೋಪಕರಣಗಳನ್ನೂ ಸೃಷ್ಟಿಸಿದ, ಓಡಾಟಕ್ಕಾಗಿ ಭೂ-ಜಲ-ವಾಯುಸಾರಿಗೆ ವಾಹನಗಳನ್ನೂ ತಯಾರಿಸಿಕೊಂಡ. ವೈರಿಗಳನ್ನು ಬಗ್ಗುಬಡಿಯಲು ಪರಮಾಣು ಸಂತುಲಿತ ನಿರೋಧಕಗಳನ್ನೂ ವಿನಾಶಕಗಳನ್ನೂ ಮೇಲಾಗಿ ಸೊಳ್ಳೆಯ ಆಕಾರದ ರೋಬೋಟಿಕ್ ಬೇಹುಗಾರಿಕಾ ಯಂತ್ರಗಳನ್ನೂ ಹುಟ್ಟಿಸಿದ. ಆದರೆ ಮಾನವನಿಗೇ ಬಂದೆರಗುವ ಕೆಲವು ಕಾಯಿಲೆಗಳಿಗೆ ವೈದ್ಯರಾಸಾಯನಿಕದಲ್ಲಿ ಪರಿಹಾರ ಕಾಣುವಲ್ಲಿ ಇನ್ನೂ ಯಶಸ್ಸು ಪಡೆದಿಲ್ಲ! ಜೀವರಾಸಾಯನಿಕಗಳಲ್ಲಿ ಕೌತುಕಮಯ ಸಂಗತಿಗಳು ಜೀನ್ಸ್ ರೂಪದಲ್ಲಿ ಅಡಗಿರುತ್ತವೆ ಎಂಬುದನ್ನೂ ಗ್ರಹಿಸಿದ ವಿಜ್ಞಾನಿಗಳಿಗೆ ಯಾವ ಜೀನ್ಸ್ ಎಲ್ಲಿ ಹೇಗೆ ಅನುವಂಶೀಯವಾಗಿ ವರ್ಗಾವಣೆಗೊಳ್ಳುತ್ತದೆ ಎಂಬುದನ್ನು ಕಾಣಲು ಇನ್ನೂ ಸಾಧ್ಯವಾಗಿಲ್ಲ. ವಂಶದಲ್ಲೇ ಇಲ್ಲದ ಅಪರೂಪದ ಕಾಯಿಲೆಗಳು ಅನಿರೀಕ್ಷಿತವಾಗಿ ಅಮರಿಕೊಂಡು ವ್ಯಕ್ತಿಯ ಜೀವನವನ್ನೇ ಹಾಳುಗೆಡವಿ ನಂತರ ಆತನ ವಂಶದಲ್ಲಿ ಅನುವಂಶೀಯವಾಗಿ ಉಳಿದುಬಿಡುವ ಘಟನೆಗಳೂ ಕಾಣಸಿಗುತ್ತವೆ; ಕಾರಣಗಳು ಮಾತ್ರ ನಿಖರವಾಗಿ ತಿಳಿದುಬರುವುದಿಲ್ಲ. ಗಾದೆಯೊಂದು ಹೀಗಿದೆ: ’ಯಾವಹುತ್ತದಲ್ಲಿ ಯಾವ ಹಾವಿರುತ್ತದೋ ಬಲ್ಲವರಾರು?’ ನಿಜ, ಅದು ಯಾರಿಗೂ ಮೊದಲೇ ಗೊತ್ತಾಗುವ ವಿಷಯವಲ್ಲ. ಅದೇ ಗಾದೆ ಹೀಗೂ ಬಳಕೆಯಾಗಬಹುದು: ಕಾಯಿಲೆಯೇ ಇಲ್ಲದ ಹುಡುಗಿ/ಹುಡುಗ ಎಂದು ಒಪ್ಪಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಯಾವುದೋ ಕಾಯಿಲೆ ಕಾಣಿಸಿಕೊಳ್ಳಬಹುದು, ಜೀವಹರಣಗೈಯ್ಯಲೂ ಬಹುದು. ರೋಗಗ್ರಸ್ತ  ಎಂದು ತಿರಸ್ಕರಿಸಲ್ಪಟ್ಟ ವ್ಯಕ್ತಿಗೆ ಬದುಕುಕೊಟ್ಟ ನಂತರ ರೋಗನಿವಾರಣೆಯಾಗಿ ದೀರ್ಘಕಾಲ ಬದುಕಲೂ ಬಹುದು! ಒಟ್ಟಾರೆ ಮಾನವ ಬದುಕಿನಲ್ಲಿ ಪ್ರತಿಯೊಂದೂ ನಮ್ಮ ನಿಯಂತ್ರಣದಲ್ಲೇ ಇದೆ ಎಂದುಕೊಳ್ಳುವುದು ತಪ್ಪು ಎಂಬುದಕ್ಕೆ ಆಧುನಿಕ ಸಮಾಜದಲ್ಲಿ ನಾವು ಕಾಣುತ್ತಿರುವ ಪಾರ್ಕಿನ್ಸನ್ಸ್ ಕಾಯಿಲೆ ಸಾಕ್ಷಿಯಾಗಿ ನಿಲ್ಲುತ್ತದೆ.     

ನಾವೆಲ್ಲಾ ಚಿಕ್ಕವರಿರುವಾಗ, ನಮ್ಮ ಊರಿನಲ್ಲಿ ಯುವಕ ಸಂಘದವರು ನಮ್ಮ ಕನ್ನಡಪ್ರಾಥಮಿಕ ಶಾಲೆಯ ಮಕ್ಕಳ ವಾರ್ಷಿಕೋತ್ಸವದ ರಾತ್ರಿ ಸಾಮಾಜಿಕ ನಾಟಕಗಳನ್ನು ಪ್ರಸ್ತುತಪಡಿಸುತ್ತಿದ್ದರು. ವಾರ್ಷಿಕೋತ್ಸವ ಬಂತೆಂದರೆ ನಮಗೆ ಎಲ್ಲಿಲ್ಲದ ಸಂಭ್ರಮ. ಶಾಲೆಯ ಹಳೆಯ ವಿದ್ಯಾರ್ಥಿಗಳೂ ಸೇರಿದಂತೇ ಹಲವು ಯುವಕರು ಊರ ದೇವಸ್ಥಾನಗಳಲ್ಲಿ ನಾಟಕದ ತಾಲೀಮು ನಡೆಸುತ್ತಿದ್ದರು. ಶಾಲೆಯ ಅಂಗಳದಲ್ಲಿ ನಾವು ಮಕ್ಕಳೆಲ್ಲಾ ಸೇರಿ ’ಶ್ರಮದಾನ’ವೆಂಬ ಕಾರ್ಯದಲ್ಲಿ ಭಾಗಿಗಳಾಗಿ ಕಲ್ಲು-ಮಣ್ಣು ಹೊತ್ತು ವೇದಿಕೆ ಯನ್ನು ಆ ಕಾಲಕ್ಕೆ ಶಾಶ್ವತವಾಗಿ ನಿರ್ಮಿಸಿದ್ದೆವು. [ಅದಕ್ಕೂ ಮೊದಲು ವೇದಿಕೆಯೇ ಇರಲಿಲ್ಲ.]ಅಂತಹ ವೇದಿಕೆಗೆ ಚಪ್ಪರ-ಚಾವಡಿ ಕಟ್ಟಿ, ಮಣ್ಕಿ ಮಡಿವಾಳರ ಬಣ್ಣದ ಪರದೆ-ಸೀನ್ಸ್ಗಳನ್ನೂ,ಅಕ್ಕ-ಪಕ್ಕದಲ್ಲಿ ಕಮ್ಮಿಬಿದ್ದ ಜಾಗಗಳಲ್ಲಿ ಊರ ಹೆಂಗಳೆಯರ ಬಣ್ಣದ ಸೀರೆಗಳನ್ನೂ ಕಟ್ಟುತ್ತಿದ್ದರು. ದೂರದ ಊರಿಂದ ಹಾರ್ಮೋನಿಯಮ್, ತಬಲಾ ಇತ್ಯಾದಿ ಸಂಗೀತ ಪರಿಕರಗಳನ್ನು ನುಡಿಸುವ ಕಲಾವಿದರನ್ನು ಕರೆಸುತ್ತಿದ್ದರು. ಗೋವಿಂದ ಹೆಗಡೆಯವರ ಪರ್ಪೋ ಪೈಪುಗಳು ವೇದಿಕೆಯಲ್ಲಿ ಇಳಿಬಿಡುವ ಸೀನರಿಗಳ ಮೇಲ್ಗಡೆ ಕೆಳಗಡೆ ಕಟ್ಟಲ್ಪಡುತ್ತಿದ್ದವು. ನಾಗೇಶ್ ಶೆಟ್ಟರ ಚಿಮಣಿ[ಸೀಮೆ] ಎಣ್ಣೆ ಗ್ಯಾಸ್ ಲೈಟೂ ಸೇರಿದಂತೇ ಊರ ಕೆಲವು ಮನೆಗಳಿಂದ ಕಾಡಿ-ಬೇಡಿ ತಂದ ಸೀಮೆ ಎಣ್ಣೆ ಗ್ಯಾಸ್ ಲೈಟುಗಳು ಅಲ್ಲಲ್ಲಿ ಇರುತ್ತಿದ್ದು ಕರೆಂಟು ಹೋದರೆ  ಎಮರ್ಜೆನ್ಸಿ ದೀಪಗಳಾಗಿ ಕೆಲಸಮಾಡುತ್ತಿದ್ದವು. ಲೈನ್ಮನ್ ವೆಂಕಟೇಶ ನಮ್ಮ ಕಾರ್ಯಕ್ರಮಕ್ಕೆ ಅನಾಮತ್ತಾಗಿ ಕಂಬದ ಹತ್ತಿರದಿಂದ ಸರ್ವಿಸ್ ವೈರ್ ಹಾಕಿ ಕರೆಂಟು ಪೂರೈಸುತ್ತಿದ್ದ; ಅದಕ್ಕೆ ಯಾವುದೇ ಅನುಮತಿಯ ಅವಶ್ಯಕತೆ ಅಂದಿಗೆ ಇರಲಿಲ್ಲ. ಇಂತಹ ವೇದಿಕೆಗಳಲ್ಲಿ ಲೀಲಾಜಾಲವಾಗಿ ಕನ್ನಡ ಸಿನಿಮಾ ತಾರೆ ಜ್ಯೂಲಿಲಕ್ಷ್ಮಿ ಮಿಂಚಿದಂತೇ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದ ವ್ಯಕ್ತಿ ಜಿ.ಪಿ.ಹೆಗಡೆ. ಊರ ಜನ ಅಕ್ಕರೆಯಿಂದ ಕರೆಯುವುದು ಜೀಪಿ ಎಂದೇ. ಅರೆನಿಮಿಷ ಕೂರದ ಈ ಚಾಲಾಕೀ ವ್ಯಕ್ತಿ ಇಂದು ಅರೆಜೀವವಾಗಿ ಮಲಗಿದ್ದು ನೋಡಿದರೆ ಜೀಪಿ ಎಂಬ ವ್ಯಕ್ತಿ ಅಷ್ಟೆಲ್ಲಾ ಮಾಡಿದ್ದು ಹೌದೇ ಎಂದು ನಾವೇ ಕಕ್ಕಾಬಿಕ್ಕಿಯಾಗಿ, ಅನುಮಾನಾಸ್ಪದವಾಗಿ ತಲೆಕೆರೆದುಕೊಳ್ಳಬೇಕಾದ ಪ್ರಸಂಗ ಒದಗಿದೆ. ಸೊಂಟದ ಕೆಳಭಾಗಕ್ಕೆ ತ್ರಾಣವೇ ಇಲ್ಲದ ಈ ಕಾಯಿಲೆ ಯಾವುದು ಎಂಬುದು ನಮಗೆಲ್ಲಾ ಮೊದಲು ತಿಳಿದಿರಲಿಲ್ಲ; ಅದೇ ಪಾರ್ಕಿನ್ಸನ್ಸ್ !

ನ್ಯೂರಾನ್, ಡೆಂಡ್ರೈಟ್ಸ್ ಮತ್ತು ಆಕ್ಸನ್


ಪಾರ್ಕಿನ್ಸನ್ಸ್ ಎಂಬ ಕಾಯಿಲೆಗೆ ನಿಗದಿತ ಕಾರಣಗಳು ಕಂಡುಬರುವುದಿಲ್ಲವಾದರೂ ಹೀಗಿರಬಹುದು ಹಾಗಿರಬಹುದು ಎಂಬ ಊಹೆಗಳು ಪಟ್ಟಿಮಾಡಲ್ಪಟ್ಟಿವೆ:

೧. ಆಧುನಿಕ ಜೀವನಕ್ರಮದಲ್ಲಿ ಬಳಸಲ್ಪಡುವ ಆಂಗ್ಲ ಅಥವಾ ಅಲೋಪಥಿಕ್ ಔಷಧಿಯ ಪದ್ಧತಿಯಲ್ಲಿ ಅತಿಯಾದ ಮಾನಸಿಕ ತುಮುಲ, ಗೊಂದಲ, ಅನಿಯಂತ್ರಿತ ಭಯ ಮೊದಲಾದವುಗಳನ್ನು ನಿಭಾಯಿಸಲು ಬಳಸುವ ರಾಸಾಯನಿಕಗಳು ಈ ಕಾಯಿಲೆಯ ಲಕ್ಷಣಗಳನ್ನು ಅಭಿವ್ಯಕ್ತಗೊಳಿಸುತ್ತವೆ.

೨. ಶೈ ಡ್ರಾಗರ್ ಸಿಂಡ್ರೋಮ್ ಅಥವಾ ಲಜ್ಜೆಬಡುಕುತನ ಈ ರೋಗದ ಲಕ್ಷಣವನ್ನೇ ಬಿಂಬಿಸುತ್ತದೆ.

೩. ಹಾದಿಬೀದಿಯಲ್ಲಿ ಮಾರಲ್ಪಡುವ ಹೇರಾಯ್ನ್, ಬ್ರೌನ್ ಶುಗರ್ ಮೊದಲಾದ ಡ್ರಗ್ಗಳು ಈ ರೋಗಕ್ಕೆ ಕಾರಣವಾಗುತ್ತವೆ.

೪. ಅಪಧಮನಿ ಮತ್ತು ಅಭಿಧಮನಿ ಅಥವಾ ರಕ್ತನಾಳಗಳು ದಪ್ಪವಾಗಿ ಸಮರ್ಪಕ ರಕ್ತಸಂಚಾರ ಆಗದೇ ಇರುವುದು ಈ ರೋಗಕ್ಕೆ ಕಾರಣವಾಗಬಹುದು.

ಹೀಗೇ ಇಂತಹ ಕೆಲವು ಕಾರಣಗಳನ್ನು ನಮೂದಿಸುತ್ತಾರೆಯೇ ವಿನಃ ಯಾರೂ ನಿಗದಿತವಾಗಿ ಈ ಕಾಯಿಲೆಗೆ ಇದೇ ಕಾರಣ ಎಂದು ಹೇಳುವ ಮಟ್ಟಕ್ಕೆ ಬೆಳೆದಿಲ್ಲ.

ಇರಬಹುದು: ಆಧುನಿಕ ಜೀವನಕ್ರಮದಲ್ಲಿ ನಮ್ಮ ಆಹಾರ-ವ್ಯವಹಾರ ವೈಖರಿಗಳು ಬದಲಾಗಿವೆ; ದೂಷಿತವಾಗಿವೆ. ಕಾಶಿಯಲ್ಲಿ ಪವಿತ್ರವಾದ ಗಂಗೆಯೇ ಮಲಿನವಾದಂತೇ ನಮ್ಮ ದೈನಂದಿನ ಆಹಾರಗಳೂ ರಾಸಾಯನಿಕಗಳಿಂದ ಕಲುಷಿತಗೊಂಡಿವೆ. ಉಸಿರಾಡುವ ಹವೆ ದೂಷಿತ, ಕುಡಿಯುವ ನೀರು ದೂಷಿತ, ಧರಿಸುವ ದಿರಿಸು ದೂಷಿತ, ಸೇವಿಸುವ ಔಷಧಗಳೂ ದೂಷಿತ! ಅನಿವಾರ್ಯವಾಗಿ, ನಮ್ಮ ಅರ್ಜೆಂಟಿಗೆ ಪರಿಹಾರವಾಗಿ, ಎದುರಿಗೆ ಸಿಕ್ಕ ಸುಲಭದ ಸೂತ್ರಗಳನ್ನು ಬಳಸುವ ನಮಗೆ ನಮ್ಮ ಪೂರ್ವಜರು ಬಳಸ್ದುತ್ತಿದ್ದ ಸಾಂಪ್ರದಾಯಿಕ ಕ್ರಮಗಳು ಸುತರಾಂ ಹಿಡಿಸುವುದಿಲ್ಲ. ೩೦೦೦ ವರ್ಷಗಳ ಹಿಂದೆಯೇ ಹೇಳಲ್ಪಟ್ಟ ಭಾರತೀಯ ಆಯುರ್ವೇದದ ಉಪಚಾರಗಳನ್ನು ಅನೌಪಚಾರಿಕವಾಗಿ, ಅನುವಂಶೀಯವಾಗಿ ನಡೆಸಿಬಂದ ನಾಟಿವೈದ್ಯರನ್ನು ’ಅಳಲೇಕಾಯಿ ಪಂಡಿತರು’ ಎಂದು ಹೀಗಳೆದು ಅಸಡ್ಡೆ ಮಾಡಿದ್ದೇವೆ; ಕೆಲವೊಮ್ಮೆ  ಆ ಪಂಡಿತರುಗಳ ’ಅಳಲೇಕಾಯಿ’ ಮದ್ದು ಉತ್ತಮ ಪರಿಣಾಮಗಳನ್ನು ಕೊಡುವುದನ್ನು ಕಂಡರೂ ಒಪ್ಪಿಕೊಳ್ಳದ ಆಧುನಿಕ ಮಂದಿ ನಾವಾಗಿದ್ದೇವೆ.

ಹಾಗಾದರೆ ಪಾರ್ಕಿನ್ಸನ್ಸ್ ಕಾಯಿಲೆ ಮೂಲದಲ್ಲಿ ಎಲ್ಲಿ ಉದ್ಭವಗೊಳ್ಳುತ್ತದೆ ಎಂದರೆ ಅದು ಮೆದುಳಿನಲ್ಲೇ! ನ್ಯೂರಾನ್ ಎಂದರೆ ನರಕೋಶ. ಒಂದು ನ್ಯೂರಾನ್ ಸೋಮಾ ಎನ್ನುವ ಕೋಶಶರೀರವನ್ನೂ, ಡೆಂಡ್ರೈಟ್ಸ್ ಅಥವಾ ಕವಲುಗಳಂತಹ ರಚನೆಗಳನ್ನೂ, ಅಕ್ಸಾನ್ ಎಂಬ ದಾರದಂತಹ ಎಳೆಯನ್ನೂ ಹೊಂದಿರುತ್ತದೆ. ಇಂತಹ ಲಕ್ಷೋಪಲಕ್ಷ ಕೋಶಗಳು ಸೇರಿ ನರಗಳ ರಚನೆಯಾಗಿರುತ್ತದೆ. ಒಂದು ಅಂದಾಜಿನ ಪ್ರಕಾರ ಪ್ರತೀ ಮಾನವನಲ್ಲಿ ೧೦೦ ಬಿಲಿಯನ್ ನ್ಯೂರಾನ್ಗಳು ಇರುತ್ತವೆ ಎನ್ನಲಾಗಿದೆ. ಸರಿಸುಮಾರು ೨೧೪ ಹೆಸರಿಸಲ್ಪಟ್ಟ ನರಗಳು ಇರುತ್ತಿದ್ದು ಒಟ್ಟಾರೆಯಾಗಿ ೪೨೮ ನರಗಳು ಇವೆ ಎನ್ನುವ ಇನ್ನೊಂದು ವಾದದಕ್ಕೆ ಪ್ರತಿವಾದವಾಗಿ ಸಾವಿರಾರು ಇವೆಯೆಂದೂ ಮತ್ತು ಅವು ಮೂರು ಮುಖ್ಯ ವಿಭಾಗಗಳಲ್ಲಿ ಕೆಲಸಮಾಡುತ್ತವೆ ಎಂದೂ ದಾಖಲಿಸಿದ್ದು ತಿಳಿದುಬಂದಿದೆ. ಪ್ರತೀ ನರದಲ್ಲೂ ಸ್ಪಂದಿಸುವ ಸೆನ್ಸರ್ಗಳು ಎಲ್ಲೆಲ್ಲೂ ತುಂಬಿವೆ. [ಪ್ರಾಯಶಃ ಇಂದಿನ ನಮ್ಮ ವಿದ್ಯುನ್ಮಾನೀಯ ಸೆನ್ಸರ್ಗಳ ತಯಾರಿ ಮಾನವ ಶರೀರದ  ಸೆನ್ಸರ್ಗಳನ್ನು ಅವಲೋಕಿಸಿದ ನಂತರವೇ ಜರುಗಿರಬೇಕು] ಇಂತಹ ನ್ಯೂರಾನ್ಗಳ ಸಹಜ ಕಾರ್ಯಪ್ರವೃತ್ತಿಯಿಂದ ನಮ್ಮ ದೇಹ ಸುಲಲಿತವಾಗಿ ತನ್ನ ಕೆಲಸಕಾರ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಯಾವಾಗ ನ್ಯೂರಾನ್ಗಳು ಅಥವಾ ನರಕೋಶಗಳು ಶಿಥಿಲವಾಗುವವೋ ಆಗ ಇಡೀ ಶರೀರ ತನ್ನ ಹತೋಟಿಯನ್ನು ಕಳೆದುಕೊಳ್ಳತೊಡಗುತ್ತದೆ. ಮೆದುಳಿನ ನ್ಯೂರಾನ್ಗಳಲ್ಲಿ ಕೆಲವು ಭಾಗಶಃ ಶಿಥಿಲಾವಸ್ಥೆಗೆ ಬಂದಾಗ ಶರೀರದ ಭಾಗಗಳು ಅಥವಾ ನಮ್ಮ ಅಂಗಾಂಗಗಳು ತಮ್ಮ ಮಾಮೂಲೀ ಗತಿಯನ್ನು ಕಳೆದುಕೊಳ್ಳುತ್ತವೆ. ಅರ್ಧಾಂಗವಾಯು, ಗಾಳಬೀಸು, ವಾತ, ಪಾರ್ಶ್ವವಾಯು ಎಂದೆಲ್ಲಾ ಪೀಡನೆಗೆ ಒಳಗಾದವರಂತೇ ಕಾಲುಗಳಲ್ಲಿ ನಿತ್ರಾಣ, ಕೈಗಳಲ್ಲಿ ನಿತ್ರಾಣ ಮತ್ತು ಪೂರ್ತಿ ಸೊಂಟದ ಕೆಳಭಾಗ ನಿತ್ರಾಣರಾದವರನ್ನು ಕಾಣಬಹುದಾಗಿದೆ. ಬಹುತೇಕ ಈ ಕಾಯಿಲೆಗಳಿಗೆ ಶಿಥಿಲಾವಸ್ಥೆಗೊಳಗಾದ [ಡೀಜನರೇಟಿವ್]ಅಥವಾ ಸೋಂಕು ತಗುಲಿದ ನ್ಯೂರಾನ್ಗಳು ಕಾರಣೀಭೂತವಾಗಿವೆ. ಶಿಥಿಲಾವಸ್ಥೆಗೊಳಪಡುವ ನ್ಯೂರಾನ್ಗಳು ಯಾಕೆ ಹಾಗೆ ರೋಗಗ್ರಸ್ತವಾಗುತ್ತವೆ ಎಂಬುದು ಇನ್ನೂ ಸಮರ್ಪಕವಾಗಿ ನಮ್ಮ ವಿಜ್ಞಾನಿಗಳಿಗೆ ತಿಳಿದುಬಂದಿಲ್ಲ! ಹೀಗಾಗಿ ಪರಿಪೂರ್ಣವಾದ ಔಷಧವೂ ಕೂಡ ಲಭ್ಯವಿಲ್ಲ.   

ಪಾರ್ಕಿನ್ಸನ್ಸ್ ಕಾಯಿಲೆ ಇಂಥವರಿಗೇ ಬರುತ್ತದೆ ಎಂದಾಗಲೀ ಅಥವಾ ಇಂಥವರಿಗೇ ಬರಬೇಕೆಂದಾಗಲೀ ಇಲ್ಲ. ಅದು ಅನುವಂಶೀಯವಾಗಿ ಹರಿಯುತ್ತದೆಂಬ ಬಗ್ಗೆಯೂ ಯಾವುದೇ ಸಾಕ್ಷಿ-ಪುರಾವೆ ಇಲ್ಲ. ಇದ್ದಕ್ಕಿದ್ದಂತೇ [ಪಕ್ಕದಮನೆಯ ವ್ಯಕ್ತಿ ನಮ್ಮ ಜಾಗವನ್ನು ರಾತ್ರೋರಾತ್ರಿ ಅತಿಕ್ರಮಿಸಿಕೊಳ್ಳುವ ರೀತಿ]ಯಾವ ವ್ಯಕ್ತಿಯೂ ಇದರಿಂದ ಬಳಲಬಹುದು. ಇದಕ್ಕೆ ಹೊತ್ತುಗೊತ್ತು ಇರುವುದಿಲ್ಲ; ಅಥವಾ ಹೊತ್ತೇ ಗೊತ್ತಿರುವುದಿಲ್ಲ. ಮೆದುಳಿನಲ್ಲಿ ನರಕೋಶಗಳು ಡೀಜನರೇಟಿವ್ ಆಗಿ ಪರಿವರ್ತಿತವಾಗುವುದು ಮೊದಲೇ ತಿಳಿದುಬರುವ ಅಂಶವೂ ಅಲ್ಲ. ಸಂಭವನೀಯ ಡೀಜನರೇಶನ್ ಕಾಯಿಲೆಗಳ ಯಾದಿ ಈ ರೀತಿ ಇದೆ:

Examples of degenerative diseases

    Amyotrophic Lateral Sclerosis (ALS), a.k.a., Lou Gehrig's Disease
    Alzheimer's disease
    Parkinson's Disease
    Multiple system atrophy
    Niemann Pick disease
    Atherosclerosis
    Progressive supranuclear palsy
    Cancer
    Essential tremor
    Tay-Sachs Disease
    Diabetes
    Heart Disease
    Keratoconus
    Inflammatory Bowel Disease (IBD)
    Prostatitis
    Osteoarthritis
    Osteoporosis
    Rheumatoid Arthritis
    Huntington's Disease
    Chronic traumatic encephalopathy

ಒಬ್ಬ ವೈದ್ಯರಲ್ಲಿಗೆ ಯಾವುದೋ ಕಾರಣದಿಂದ ಸಂದರ್ಶನಕ್ಕೆ ತೆರಳಿದಾಗ ಅಲ್ಲಿ ಒಬ್ಬರ ಪರಿಚಯವಾಯ್ತು. ಅವರ ತಲೆಗೆ ಯಾವುದೋ ಗಾಯವಾಗಿ ಅದರ ಚಿಕಿತ್ಸೆಗಾಗಿ ಆತ ಅಮೇರಿಕಾದಿಂದ ಭಾರತಕ್ಕೆ ಅದೂ ಬೆಂಗಳೂರಿಗೆ ಬಂದಿದ್ದರು! ಹೇಳಿಕೇಳಿ ಅವರು ಮೈಸೂರು ಮೂಲದವರೇ ಆದರೂ ಅವರ ಸಂತತಿ ನೆಲೆಸಿರುವುದು ಅಮೇರಿಕಾದಲ್ಲಿ. ಕೆಲವು ವರ್ಷಗಳ ಹಿಂದೆ ಸೆಂಟ್ರಲ್ ಅಟಾಮಿಕ್ ಪವರ್ ರಿಸರ್ಚ್ ಸೆಂಟರ್ನಲ್ಲಿ ಕೆಲಸಮಾಡುತ್ತಿದ್ದ ಅವರಿಗೆ ವಿಚಿತ್ರ ಕಾಯಿಲೆಯೊಂದು ಕಾಣಿಸಿತ್ತು: ನಡೆಯುತ್ತಿರುವಂತೆಯೇ ಆ ವ್ಯಕ್ತಿ ಕುಸಿದು ಬಿದ್ದು ಹೋಗುತ್ತಿದ್ದರು. ಮತ್ತು ಅತಿಯಾದ ನೋವು ಕಾಣಿಸಿಕೊಳ್ಳುತ್ತಿತ್ತು. ಅಮೇರಿಕಾದಲ್ಲಿ ಅತಿರಥ ಮಹಾರಥರೆನಿಸಿದ ವೈದ್ಯರುಗಳಿದ್ದಾರಲ್ಲಾ ಹಾಗಾಗಿ ಅವರ ಮಕ್ಕಳು ಅವರನ್ನು ಅಲ್ಲಿನ ಮಹಮಹಾದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ದರು. ಯಾವುದೇ ಆಸ್ಪತ್ರೆಯ ಯಾವುದೇ ವೈದ್ಯರೂ ಅವರಿಗೆ ಪರಿಹಾರ ನೀಡುವುದಿರಲಿ ಇದು ಇಂಥದ್ದೇ ಕಾಯಿಲೆ ಎಂದು ಕಂಡುಹಿಡಿಯುವಲ್ಲಿ ವಿಫಲರಾದರು. "ಇಟ್ ಈಸ್ ನ್ಯೂರೋಲೊಜಿಕಲ್ ಡಿಸಾರ್ಡರ್, ಕಾಂಟ್ ಬಿ ಕ್ಯೂರ್ಡ್, ಬಟ್ ವಿ ವಿಲ್ ಟೀಚ್ ಯೂ ಪೇನ್ ಮ್ಯಾನೇಜಮೆಂಟ್" ಎಂದು ತಿಳಿಸಿ ಪೇನ್ ಬಂದಾಗ ಹೇಗೆ ತಡೆದುಕೊಳ್ಳಬೇಕು ಎಂಬುದನ್ನೂ ಪೇನ್ ಕಿಲ್ಲರ್ ಮಾತ್ರೆಗಳನ್ನು ಉಪಯೋಗಿಸುವ ಕ್ರಮವನ್ನೂ ಹೇಳಿ ಕೈಬಿಟ್ಟರಂತೆ. ಬದುಕಿರುವವರೆಗೆ ಇದು ಯಾವ ಹಣೆಬರಹ ಎಂದುಕೊಂಡ ಅವರು ಭಾರತೀಯ ಆಯುರ್ವೇದವನ್ನು ಒಮ್ಮೆ ಯಾಕೆ ಬಳಸಬಾರದು ಎಂದುಕೊಂಡು ಯಾರ್ಯಾರದೋ ಪರಿಚಯದ ಮೂಲಕ ಒಬ್ಬ ವೈದ್ಯರ ಬಳಿ ಬಂದರು. ವೈದ್ಯರ ಪಂಚಕರ್ಮ ಚಿಕಿತ್ಸೆ ಆರಂಭವಾಗಿ ತಿಂಗಳಲ್ಲಿ ಸಯುವಷ್ಟು ಸಣಕಲಾದರು; ಅದೇ ಮಾರನೇ ತಿಂಗಳು ಮತ್ತೆ ನಿಧಾನವಾಗಿ ಬಲಾಢ್ಯರಾಗುತ್ತಾ ಬಂದರು. ಪಂಚಕರ್ಮದ ನಂತರ ಸತತ ನಾಲ್ಕುವರ್ಷಗಳ ಕಾಲ ಆಯುರ್ವೇದೀಯ ಮೂಲಿಕೆಗಳ ಔಷಧಗಳನ್ನು ಪಡೆದರು, ಬಳಸಿದರು. ಈಗ ಆರಾಮಾಗಿ ಇದ್ದಾರೆ-ಕುಸಿದು ಬೀಳುವ ಪ್ರಮೇಯವೇ ಇಲ್ಲ. ಅವರ ರೋಗಕ್ಕೆ ಕಾರಣ: ದೇಹದಲ್ಲಿ ಅಣುವಿಕಿರಣದಿಂದ ಬಾಡೀ ಟಾಕ್ಸಿನ್ ಬಹಳ ಜಾಸ್ತಿಯಾಗಿತ್ತು. ಇಡೀ ಶರೀರವನ್ನೇ ಹಿಂಡಿ ಅನಗತ್ಯ ಟಾಕ್ಸಿನ್ ಹೊರತೆಗೆದ ಬಳಿಕ ಅವರು ಹುಷಾರಾದರು ಎಂಬ ಕಥೆಯನ್ನು ಹೇಳಿ ವೈದ್ಯರನ್ನೂ ಆಯುರ್ವೇದವನ್ನೂ ತುಂಬಾ ಸ್ಮರಿಸಿಕೊಂಡರು-ಕೊಂಡಾಡಿದರು.      

ಪಾರ್ಕಿನ್ಸನ್ಸ್ ಕಾಯಿಲೆಗೆ ಒಳಗಾದ ವ್ಯಕ್ತಿಗೆ ನೋವು ಎನಿಸುವುದೇನೂ ಕಾಣುವುದಿಲ್ಲವಾದರೂ ನಿತ್ರಾಣ ಸ್ಥಿತಿ ಆತನನ್ನು ದುರ್ಬಲಗೊಳಿಸುವುದರ ಜೊತೆಗೆ ಮಾನಸಿಕ ನೆಮ್ಮದಿ ಇಲ್ಲದಂತೇ ಮಾಡುತ್ತದೆ. ಓಡಾಡಲು ಆಗದ ಪರಿಸ್ಥಿತಿಯಲ್ಲಿ ಇನ್ನೊಬ್ಬರ ನೆರವಿನ ಅಗತ್ಯ ಬೀಳುತ್ತದೆ. ಮೆದುಳಿನ ’ಸಬ್ಸ್ಟೇನ್ಶಿಯಾ ನಿಗ್ರಾ’ ಎಂಬ ಭಾಗದ ನರಕೋಶಗಳು ಶಿಥಿಲವಾದಾಗ ಈ ಸ್ಥಿತಿ ಉಂಟಾಗುತ್ತದೆ. ’ಡೋಪಮೈನ್’ ಎಂಬುದು ನರಗಳಲ್ಲಿ ಸಂದೇಶವಾಹಕವಾಗಿ ಕೆಲಸಮಾಡುವ ರಾಸಾಯನಿಕ. ನರಕೋಶಗಳಲ್ಲಿ ಬಿಡುಗಡೆಯಾಗುವ ಡೋಪಮೈನ್ ನಿಗದಿತ ಗುಣಮಟ್ಟವನ್ನು ಹೊಂದಿರದೇ ಇದ್ದರೆ ಅಥವಾ ಡೋಪಮೈನ್ ಪ್ರಮಾಣದಲ್ಲಿ ವ್ಯತ್ಯಯವುಂಟಾದರೆ ಆಗ  ನರಕೋಶಗಳಲ್ಲಿ ಸಂವಹನ ಕ್ರಿಯೆ ನಿಷ್ಕ್ರಿಯಗೊಳ್ಳಲೂ ಬಹುದು ಅಥವಾ ಬೇರೇಯದೇ ಸಂದೇಶಗಳು ರವಾನಿಸಲ್ಪಟ್ಟು ಆಗಬೇಕಾದ ಕಾರ್ಯ ಆಗದೇ ಯಾವ್ಯಾವುದೋ ಮಾರ್ಪಾಡು ನಡೆಯಬಹುದು. ಮೊದಮೊದಲು ೬೦ ವಯಸ್ಸಿಗೂ ಹಿರಿಯರಲ್ಲಿ ಜನಸಂಖ್ಯೆಯ ೧% ಪ್ರತಿಶತ ಈ ಕಾಯಿಲೆ ಇರುತ್ತದೆ ಎಂದು ತಿಳಿಯಲ್ಪಟ್ಟಿತ್ತಾದರೂ ಕಾಲಕ್ರಮೇಣ ನಡೆದ ಗಣತಿಯಲ್ಲಿ ಹದಿಹರೆಯದ ಅಥವಾ ಮಧ್ಯವಯಸ್ಕರಲ್ಲೂ ಈ ಕಾಯಿಲೆ ಕಾಣಿಸಿಕೊಳ್ಳಬಹುದು ಎಂಬುದು ಸಾಬೀತಾಗಿದೆ. ಹಾಗಾದರೆ ಈ ಡೋಪಮೈನ್ ಬಿಡುಗಡೆ ಸರಿಯಗಿ ಯಾಕೆ ಆಗಲಾರದು ಎಂಬ ಬಗ್ಗೆ ಸದ್ಯಕ್ಕೆ ಯಾರಲ್ಲೂ ಉತ್ತರವಿಲ್ಲ! ಡೋಪಮೈನ್ ಸರಿಯಾಗಿ ಬಿಡುಗಡೆಗೊಳ್ಳುವಂತೇ ಮಾಡುವ ಔಷಧವೂ ಇಲ್ಲ. 


 
ನಾಯಿಸೊಣಂಗಿ ಬಳ್ಳಿ,  ಬೀನ್ಸ್ ಮತ್ತು ಬೀಜಗಳು ಜೊತೆಗೆ ಬೀಜದ ಹುಡಿತುಂಬಿ ತಯಾರಿಸಿದ ಕ್ಯಾಪ್ಸೂಲ್ ಬಾಟ್ಲಿ

ಪಾರ್ಕಿನ್ಸನ್ಸ್ ಕಾಯಿಲೆಗೆ ಕ್ಷಣಿಕ ಪರಿಹಾರವಾಗಿ ಉರ್ಸಣಿಗೆ ಬಳ್ಳಿ, ಚೊಣಗಿಬಳ್ಳಿ, ನಾಯಿಸೊಣಂಗುಬಳ್ಳಿ ನಸುಗುನ್ನಿ ಬಳ್ಳಿ ಎಂದು ಕನ್ನಡದಲ್ಲೂ, ಪಿಲ್ಲಿಯಾಡುಗು ಎಂದು ತೆಲುಗಿನಲ್ಲೂ, ಅಕ್ಲೋಚಿ ಎಂದು ಬೆಂಗಾಲಿಯಲ್ಲೂ ಗುರುತಿಸಲ್ಪಟ್ಟಿರುವ ’ಮ್ಯೂಕುನಾ ಪ್ರೂರೀನ್ಸ್’ [Mucuna pruriens]ಎಂಬ ಸಸ್ಯದ ಬೀಜಗಳನ್ನು ಬಳಸಿಕೊಳ್ಳಬಹುದಾಗಿದೆ! ನೆಲದಲ್ಲಿ ಹಬ್ಬುವ ಈ ಬಳ್ಳಿಯಲ್ಲಿ ವಿಶಿಷ್ಟ ರೀತಿಯಲ್ಲಿ ನೇರಳೆಬಣ್ಣದ ಹೂಗಳು ಬಿಡುತ್ತವೆ. ನಂತರ ಸೋಡಿಗೆಗಳು[ಬೀನ್ಸ್] ಬಿಡುತ್ತವೆ. ಬಲಿತ ಸೋಡಿಗೆಗಳನ್ನು ಕುಯ್ದು, ಒಣಗಿಸಿ, ಅದರಲ್ಲಿರುವ ಬೀಜಗಳನ್ನು ಬಿಡಿಸಿಕೊಳ್ಳುತ್ತಾರೆ. ಆ ಬೀಜಗಳನ್ನು ಹುರಿದು ಮಿಕ್ಸಿಯಲ್ಲಿ ಪುಡಿಮಾಡಿಕೊಂಡು ಅದನ್ನು ಕಷಾಯದ ರೀತಿ ಮಾಡಿಕೊಂಡು ಕುಡಿದರೆ, ಕುಡಿದ ೧೦ ನಿಮಿಷಗಳಲ್ಲಿ ನರಸಂವೇದನೆ ಶೀಘ್ರಗೊಳ್ಳುತ್ತದೆ; ಪಾರ್ಕಿನ್ಸನ್ಸ್ ಇರುವಾತ ಯಾರ ಬೆಂಬಲವೂ ಇಲ್ಲದೇ ನಡೆದಾಡಬಹುದು, ಮಹಡಿ ಏರಬಹುದು. ಆದರೆ ಇದು ಬ್ಯಾಟರಿ ಚಾರ್ಜ್ ಇದ್ದಹಾಗೇ ಎಂಬುದನ್ನು ಮರೆಯಕೂಡದು! ಒಂದುಸಲ ಮರಳಿ ಪಡೆದ ಈ ಭಾಗ್ಯ ಕೇವಲ ಒಂದೆರಡು ಗಂಟೆಮಾತ್ರ ಇರುತ್ತದೆ. ಮತ್ತೆ ಮರಳಿ ಆ ಶಕ್ತಿಯನ್ನು ಗಳಿಸಲು ಪುನಃ ಆ ಬೀಜದ ಕಷಾಯವನ್ನು ಕುಡಿಯಬೇಕು. ಕಷಾಯದ ಪ್ರಮಾಣ ತೀರಾ ಜಾಸ್ತಿಯಾಗಲೂ ಬಾರದು ತೀರಾ ಕಮ್ಮಿಯಾಗಲೂಬಾರದು. ಜಾಸ್ತಿಯಾದರೆ ಅತಿ ಉತ್ಸಾಹವಾಗಿ ನಿಂತಲ್ಲೇ ನಿಲ್ಲುವುದು ಕಷ್ಟವಾಗುತ್ತದೆ; ಕಮ್ಮಿಯಾದರೆ ನಿತ್ರಾಣತನ ಹಾಗೇ ಇರುತ್ತದೆ-ಇದು ಕೇವಲ ವ್ಯಕ್ತಿಗತ ಅನುಭವದಿಂದ ರೋಗಿಯೇ ಪ್ರಮಾಣವನ್ನು ನಿರ್ಧರಿಸಿಕೊಳ್ಳಬೇಕಾದ ವಿಷಯವಾಗಿರುತ್ತದೆ. ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೆಲವು ಮಳಿಗೆಗಳಲ್ಲಿ ಈ ಬೀಜ ತೂಕದ ಲೆಕ್ಕದಲ್ಲಿ ಸಿಗುವುದಾಗಿ ತಿಳಿದುಬಂದಿದೆ, ಮಹಾನಗರಗಳಲ್ಲಿ ಅಲ್ಲಲ್ಲಿ ಹುಡುಕಿದರೆ ಸಿಗಬಹುದು. ಪಾರ್ಕಿನ್ಸನ್ಸ್ ಕಾಯಿಲೆಯವರಿಗಾಗಿಯೇ ಈ ಸಸ್ಯವನ್ನು ಬೆಳೆಸಿ ಬೀಜ ತಯಾರಿಸುವವರೂ ಇದ್ದಾರೆ ಎಂದು ಕೇಳಿದ್ದೇನೆ.        

ಇಂತಹ ಬಳಲುವಿಕೆಯನ್ನು ಕಂಡಾಗ ನನಗೆ ಅನಿಸಿದ್ದಿಷ್ಟು: ನಮ್ಮ ಆಹಾರ-ವಿಹಾರಗಳಲ್ಲಿ ಹಿಂದಿನ ಸಂಪ್ರದಾಯಗಳನ್ನು ವಿವೇಚನೆಯಿಂದ ಅನುಸರಿಸುವುದು ಉತ್ತಮ. ಶರೀರಮಾತ್ರ ನಾವಲ್ಲ, ಮನಸ್ಸೂ ನಾವೇ-ಅಂದರೆ ಮಾನವ ಶರೀರ ಮತ್ತು ಮನಸ್ಸುಗಳ ಮಿಳಿತದಿಂದ ಪರಸ್ಪರ ಸಹಯೋಗದಿಂದ ಜೀವಿ ಎನಿಸಿದ್ದಾನೆ. ಪ್ರತೀ ಜೀವಿಯಲ್ಲೂ ದೇಹ ಮತ್ತು ಮನಸ್ಸುಗಳ ಬಾಂಧವ್ಯವಿರುತ್ತದೆ; ಮನಸ್ಸಿಗೆ ಆಶ್ರಯ ನೀಡಿರುವ ಮೆದುಳಿನ ತಾಕತ್ತು ಬದಲೀ ಪ್ರಮಾಣದಲ್ಲಿರುತ್ತದೆ ಅಷ್ಟೇ. ನಾಯಿಗೆ, ಹಂದಿಗೆ, ಹಾವಿಗೆ ಅಷ್ಟೇ ಏಕೆ ಹಾರುವ ಸೊಳ್ಳೆಗೂ ಮೆದುಳು ಇದ್ದೇ ಇರುತ್ತದೆ. ಮೆದುಳಿನ ಆವಿಷ್ಕಾರ ವಿಧವಿಧವಾಗಿರುತ್ತದೆ, ಆಕಾರ  ಚಿಕ್ಕದು ದೊಡ್ಡದು ಹೀಗೇ ಹಲವು ತೆರನಾಗಿರುತ್ತದೆ. ಯಾವಾಗ ಮನಸ್ಸಿನ ಹತೋಟಿ ತಪ್ಪುತ್ತದೋ ಅಥವಾ ಮನಸ್ಸಿಗೆ ವಿರೋಧವಾಗಿ ನಾವು ಸತತವಾಗಿ ನಡೆದುಕೊಳ್ಳುತ್ತೇವೋ ಆಗ ಇಂತಹ ಡಿಸಾರ್ಡರ್ಗಳು ಘಟಿಸಬಹುದು. ಹಿತಮಿತವಾದ-ಶುಚಿಯಾದ ಆಹಾರ, ನಿಯಮಿತ ವಾಯುವಿಹಾರ, ಸ್ನಾನ-ಪವನ, ಯೋಗ-ಧ್ಯಾನ-ಪ್ರಾಣಾಯಾಮ ಇವುಗಳಿಂದ ಡೀಜನರೇಶನ್ ನಡೆಯದಂತೇ ನಿಯಂತ್ರಿಸಬಹುದಾಗಿದೆ; ಇನ್ನೂ ಕೆಲವರಿಗೆ ಇದೆಲ್ಲವನ್ನೂ ನಡೆಸಿಯೂ ಅಂತಹ ಕಾಯಿಲೆಗಳು ಬಂದರೆ ಅದನ್ನು ಅವರ ಪೂರ್ವಜನ್ಮದ ಕರ್ಮ ಎನ್ನಲಡ್ಡಿಯಿಲ್ಲ.