ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 29, 2013

ಯಕ್ಷಚಂದ್ರನ ಸುವರ್ಣ ಸಂಭ್ರಮದ ಹೊನಲಲ್ಲಿ !

ಚಿತ್ರಋಣ: ಅಂತರ್ಜಾಲ 
ಯಕ್ಷಚಂದ್ರನ ಸುವರ್ಣ ಸಂಭ್ರಮದ ಹೊನಲಲ್ಲಿ !

ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತ ಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ |
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗ ವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ||

ತುಂಬಿದ ಸಭೆಯ ವೇದಿಕೆಯಲ್ಲಿ ಯಕ್ಷರಂಗದ ಹಿರಿಯ ಕೋಗಿಲೆಯೊಂದು ಕಲರವವನ್ನು ಹೊರಡಿಸಿತ್ತು! ಇಂತಹ ಕಲರವವನ್ನು ನಾನಂತೂ ಕೇಳದೇ ಸರಿಸುಮಾರು ೧೫ ವರ್ಷಗಳೇ ಕಳೆದುಹೋಗಿವೆ. ಹಲವರಿಗೆ ಪೂರ್ವಜನ್ಮದ ಸ್ಮರಣೆಯಾದ  ಹಾಗೇ ಭಾಸ; ಕಾರಣವಿಷ್ಟೇ ಇಂದಿನ ಭಾಗವತರಲ್ಲಿ ವೃತ್ತಿ ತಾದಾತ್ಮ್ಯತೆ, ಅಕ್ಷರಶುದ್ಧ ಉಚ್ಚಾರ, ಲಯಗಳ ಏರಿಳಿತ, ತಾಳದ ಗಚ್ಚು, ಶಾರೀರದ ಏರಿಳಿತ, ನೂರಕ್ಕೆ ನೂರು ಯಕ್ಷರಂಗದ ರಾಗಗಳನ್ನು ಬಳಸಿಕೊಳ್ಳುವ ಪರಿ, ಆ ತಿಟ್ಟುಗಳನ್ನು ಉಳಿಸಿಕೊಳ್ಳುವ ಪರಿ ಕಾಣಿಸುತ್ತಿಲ್ಲ-ಇದು ಇಂದಿನ ಬಡಗು ತಿಟ್ಟಿನ ಪ್ರೇಕ್ಷಕರ ದುರ್ದೈವ. ಪೂರ್ಣರಾತ್ರಿ ಯಕ್ಷಗಾನವನ್ನು ನೋಡುತ್ತಿದ್ದ ನಮಗೆ ೩ ತಾಸಿನ ಸಮಯಮಿತಿ ಯಕ್ಷಗಾನ ’ಅನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ಎಂಬ ರೀತಿಯಲ್ಲಿ ಆಗಿಬಿಟ್ಟಿದೆ! ಅದರಲ್ಲೂ ಹಣದ ಗಂಟಿಗೇ ಅಂಬಿನ ಅಲಗನ್ನು ಗುರಿಯಾಗಿಸಿಕೊಂಡು ಏರ್ಪಡಿಸುವ ಹಲವು ಪ್ರಸಂಗಗಳ ಸಮ್ಮಿಶ್ರ ಸಮಯ-ಕಲಾಪ ಯಕ್ಷಗಾನಕ್ಕೆ ಮಾರಕವಾಗಿ ಪರಿಣಮಿಸಿಬಿಟ್ಟಿದೆ. ಇಂತಹ ಹೊತ್ತಿನಲ್ಲಿ ನಿಜನೆಲೆಯ ಯಕ್ಷಗಾನ ಯಾವುದು ಎಂಬುದನ್ನು ಹೆಕ್ಕಿ ತೆಗೆಯುವುದು ಬೆಣ್ಣೆಯ ಮೇಲಿನ ಕೂದಲನ್ನು ಹೆಕ್ಕಿತೆಗೆವಂತಹ ಕೆಲಸ.

ಕಾರ್ಯಕ್ರಮದ ಆದಿಯಲ್ಲಿ ಆರಂಭಗೊಂಡ ’ಹಿಮ್ಮೇಳ ವೈಭವ’ದ ಆದಿಯಲ್ಲಿ, ಹಾದಿ ಸುಗಮಗೊಳಿಸೆಂದು ಮಹಾಕವಿ ಕುಮಾರವ್ಯಾಸ ರಚಿತ ಭಾಮಿನಿಯನ್ನು ಶ್ರುತಪಡಿಸಿದವರು ನೆಬ್ಬೂರು ಭಾಗವತರು. ವಯಸ್ಸಿನಿಂದ ಹಣ್ಣಾದರೂ ಕಂಠವನ್ನು ಅದೇ ಗತಿಯಲ್ಲಿ ಕಾಪಿಟ್ಟುಕೊಂಡು ಇಂದಿಗೂ ಹಾಡಬಲ್ಲ ಆ ಚೈತನ್ಯಕ್ಕೆ ನಮಸ್ಕಾರ.  ಮಿಕ್ಕೆಲ್ಲಾ ಕಲೆಗಳಿಗೆ ಆರಾಧ್ಯ ದೈವವಿದ್ದಂತೇ ಯಕ್ಷಗಾನಕ್ಕೊಬ್ಬ ಆರಾಧ್ಯ ದೈವನಿದ್ದಾನೆ: ಆತನೇ ಗಣಪ. ಯಕ್ಷಗಾನದ ಸೃಷ್ಟಿಗೆ ಪ್ರೇರಿತನಾದ ಗಣಪ ಅದಕ್ಕೆ ಕರ್ತೃವಾಗಿ ಆತ ಬಳಸಿಕೊಂಡ ಪಾರ್ತಿ ಸುಬ್ಬನಿಂದ ಹಿಡಿದು ಕಳೆದ ಶತಮಾನದಲ್ಲಿ ಆಗಿಹೋದ ಮಹಾಮಹಾ ಕಲಾವಿದರೆಲ್ಲರೂ ಅದನ್ನು ಅನುಸರಿಸಿ ಬಂದಿದ್ದರು. ಸರಳ ಜೀವನಕ್ಕೆ ಒಗ್ಗಿಕೊಂಡಿದ್ದ ಅಂದಿನ ಯಕ್ಷಗಾನದ ಕಲಾವಿದರಿಗೆ ತುರ್ತಾಗಿ ಮತ್ತೆಲ್ಲಿಗೋ ಹಾರುವ ತರಾತುರಿಯ ವ್ಯವಹಾರ ಇರಲಿಲ್ಲ. ಹರಿಕಥೆಯಂತೆಯೇ, ಮಹಾವಿಷ್ಣುವಿನ ದಶಾವತಾರಗಳು ಮತ್ತು ಪುರಾಣಗಳ ಪುಣ್ಯಕಥಾನಕಗಳನ್ನು ಯಕ್ಷಗಾನದ ಕವಿಗಳು ಸೊಬಗಿನ ಸೋಬಾನೆ, ಭಾಮಿನಿ, ಸೋಬಾನೆ, ಚೌಪದಿ ಮೊದಲಾದ ಛಂದಸ್ಸುಗಳನ್ನು ಬಳಸಿ ವಿರಚಿಸಿದರು; ಸ್ವರ-ತಾಳ-ಲಯಬದ್ಧವಾಗಿ ಆಂಗಿಕ, ವಾಚಿಕ, ಶಾಬ್ದಿಕ, ಸಾತ್ವಿಕ ಮೊದಲಾದ ಅಭಿನಯದ ಮಟ್ಟುಗಳನ್ನು ಬಳಸಿ, ಕುಳಿತ ಪ್ರೇಕ್ಷಕರಿಗೆ ಕಥಾಹಂದರವನ್ನು ರಂಜನೀಯವಾಗಿ ಉಣಬಡಿಸುವುದು ದೇವರ ಸೇವೆ ಎಂಬರ್ಥದಲ್ಲಿ ಯಕ್ಷಗಾನ ನಡೆದುಬಂತು.

ಹಿಂದಕ್ಕೆ ಕಲಾವಿದರು, ಚೌಕಿಯಲ್ಲಿ ಇಟ್ಟ ಗಣಪತಿಯ ಮರದ ವಿಗ್ರಹ/ಚಿತ್ರಪಟ/ಕಿರೀಟಕ್ಕೆ ಹೂವಿಟ್ಟು, ಧೂಪ-ದೀಪಾರತಿಗಳನ್ನು ಬೆಳಗಿ, ಹಣ್ಣು-ಕಾಯಿ ಸಮರ್ಪಿಸುತ್ತಿದ್ದರು. ತಮ್ಮ ಕಲಾಸಮಯ ನಿರ್ವಿಘ್ನವಾಗಿ ಸಂಪನ್ನಗೊಳ್ಳುವುದಕ್ಕೆ ಸಾಕ್ಷೀಭೂತನಾಗಿ ರಂಗಕ್ಕೆ ಖುದ್ದಾಗಿ ಬರುವಂತೇ ನೀಡುವ ಆಹ್ವಾನವದು. ಪೂಜೆಯಿಂದ ಸಂಪ್ರೀತನಾದ ಗಣಪತಿ ಚೌಕಿಯಿಂದ ರಂಗಕ್ಕೂ ತರಲ್ಪಟ್ಟು ಮತ್ತೆ ಪೂಜೆಗೊಳ್ಳಲ್ಪಡುತಿದ್ದ.  ಬಾಲಗೋಪಾಲ ವೇಷದವರು ನರ್ತಿಸಿ ಸಭಾಮಧ್ಯದ ಪೀಠದಲ್ಲಿರಿಸಿದ ಗಜಮುಖನಿಗೆ ಆರತಿ ಬೆಳಗಿ ತೆರಳಿದಮೇಲೆ, ಸಭಾಲಕ್ಷಣವೆಂಬ ಪೂರ್ವರಂಗದ ಕಾರ್ಯಕ್ರಮದಲ್ಲಿ ಸ್ತ್ರೀವೇಷಧಾರಿಗಳು ಗಣಪನನ್ನು ಹಾಡಿಹೊಗಳುವ ರೀತಿಯಲ್ಲಿ ನುತಿಸಲಾಗುತ್ತಿತ್ತು. ನಂತರ ತೆರೆಕುಣಿತ, ಆಮೇಲೆ ಒಡ್ಡೋಲಗ, ಹೀಗೇ ಕ್ರಮಕ್ರಮವಾಗಿ ಯಕ್ಷಗಾನದ ಪೂರ್ವರಂಗ ಪ್ರಕಾರಗಳು ಮುಗಿದು, ಕುಳಿತ ಪ್ರೇಕ್ಷಕರ ಮನಸ್ಸನ್ನು ಯಕ್ಷಗಾನದಲ್ಲಿ ತಲ್ಲೀನಗೊಳಿಸುವೆಡೆಗೆ ಕಾರ್ಯಗತವಾಗುತ್ತಿದ್ದವು. ಇಂದು ಪೂರ್ವರಂಗದ ಮಾತೇ ಇಲ್ಲ. ಪಶ್ಚಿಮರಂಗ ಅರ್ಥಾತ್ ಮುಕ್ತಾಯದಲ್ಲೂ ತರಾತುರಿ, ಒಂದೇ ಮಂಗಳ ಶ್ಲೋಕವನ್ನು ಹೇಳಿದರೂ ಹೇಳಿದರೆ ಬಿಟ್ಟರೂ ಬಿಟ್ಟರೆ. ಆಟ ಮುಗಿದಾನಂತರ ಮತ್ತೆ ಗಣಪತಿ ಪೂಜೆ ಚೌಕಿಯಲ್ಲಿ; ಹಿಡಿದ ಕಾರ್ಯವನ್ನು ನಿರ್ವಿಘ್ನವಾಗಿ, ಯಥಾಯೋಗ್ಯವಾಗಿ ಸಂಪನ್ನಗೊಳಿಸಿಕೊಟ್ಟಿದ್ದಕ್ಕೆ ಆಭಾರಿಗಳಾಗಿ ಗೋಪಾಲವೇಷದವರಿಂದ ಹಿಡಿದು ಪ್ರಮುಖ ವೇಷಧಾರಿಗಳವರೆಗಿನ ಎಲ್ಲಾ ಕಲಾವಿದರೂ ಭಾಗವಹಿಸುತ್ತಿದ್ದರು.               

ಶಿಷ್ಟಕಲೆಯಾದ ಯಕ್ಷಗಾನವನ್ನು ಪ್ರಾಯಶಃ ಹುರಿದುಂಬಿಸಿದ್ದು ಗಣಪನ ಅಲಂಕಾರಗಳೇ ಎನ್ನಬೇಕು. ಗಣಪನ ಚಿತ್ರಗಳಲ್ಲಿ, ಮೂರ್ತಿಗಳಲ್ಲಿ ನಾವು ಕಾಣುವ ಅನೇಕ ಆಭರಣಗಳನ್ನು ಯಕ್ಷಗಾನ ಬಳಸಿಕೊಂಡಿದೆ. ಮೇಲಾಗಿ, ಕುಣಿತದಲ್ಲಿ ಅಪ್ಪನನ್ನೂ ಮೀರಿಸಿದ ಮಹಾನಿಪುಣ ನೃತ್ಯಗಾರ ಗಣಪತಿ ಎಂಬುದು ಹಲವರ ಅಭಿಮತ. ಮೃದಂಗವನ್ನು ಬಡಿದುಕೊಳ್ಳುತ್ತಾ ತಾನೇ ನರ್ತಿಸುವ ವಿಗ್ರಹಗಳೂ ಕೂಡ ನೋಡಸಿಗುತ್ತವೆ.

ವಾದ್ಯಂ ವಾದಯಿತುಂ ಸಮಾಂಕುಶಧರಾ
ಸಂತ್ಯುತ್ಸುಕಾ ವಾದಕಾ |

ಎಂದು ಇಡಗುಂಜಿ ಗಣಪತಿಯನ್ನು ದಿವಂಗತ ವಿದ್ವಾನ್ ಬ್ರಹ್ಮಶ್ರೀ ಊರಕೇರಿ ಗಜಾನನ ಶಾಸ್ತ್ರಿಗಳು ಬರೆದ ಸುಪ್ರಭಾತ ಸ್ತೋತ್ರದಲ್ಲಿ ಹೇಳಿದ್ದಾರೆ. ಗಣಪತಿಯ ಹೆಸರನ್ನು ಎತ್ತಿಕೊಂಡು ನಡೆಸುವ ಕಾರ್ಯಕ್ರಮಗಳಲ್ಲಿ ವಿಶಿಷ್ಟ ಸ್ಫೂರ್ತಿ ಸಿಗುವುದು ಸುಳ್ಳಲ್ಲ.

|| ಬಾಹುಭ್ಯಾಂ ನಮತಿ ಸಂಪತತ್ರೈಃ ದ್ಯಾವಾ ಪೃಥಿವೀ ಜನಯಂ ದೇವ ಏಕಃ ||

--ಎಂಬ ವೇದಮಂತ್ರ ದೇವರು ಒಬ್ಬನೇ ಎಂಬುದನ್ನು ಪುಷ್ಟೀಕರಿಸುತ್ತದೆ; ಎಂದಮೇಲೆ ಅಪ್ಪನೂ-ಅಮ್ಮನೂ-ಮಗನೂ ಅವನೇ, ದೇವರಂತಹ ಏಕಪಾತ್ರಾಭಿನಯಧಾರಿಯನ್ನು ಇನ್ನೆಲ್ಲಿ ಕಾಣಲು ಸಾಧ್ಯ? ಹೀಗಿದ್ದರೂ, ಸರಕಾರದಲ್ಲಿ ಒಂದೊಂದು ಕಾರ್ಯಕ್ಕೆ ಒಂದೊಂದು ಇಲಾಖೆ ಇರುವಹಾಗೇ, ದೇವರ ಆಡಳಿತದಲ್ಲಿ ಆತನೇ ಬಹುರೂಪಿಯಾಗಿ ಹಲವುಸ್ತರಗಳಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬುದನ್ನು ನಾವು ಗ್ರಹಿಸಬೇಕು. ಇರಲಿ, ಯಕ್ಷಗಾನವನ್ನು ಸಮಯಮಿತಿಗೆ ಅಳವಡಿಸುವ ಪ್ರಯತ್ನವನ್ನು ಪ್ರಥಮವಾಗಿ ಮಾಡಿದವರು ಕೆರೆಮನೆ ಶಂಭು ಹೆಗಡೆಯವರು. ಆಗಲೇ ಲೋಪಗಳಾಗಬಹುದು ಎಂದು ಮಹಾಬಲ ಹೆಗಡೆಯವರು ಅದನ್ನು ಒಪ್ಪುತ್ತಿರಲಿಲ್ಲ. ಈಗೀಗ ಬರುಬರುತ್ತಾ, ಅಂತಹ ಹಿರಿಯ ಕಲಾವಿದರೆಲ್ಲ ಅಳಿದಮೇಲೆ, ’ಮುಂಡೇ ಮದುವೆಯಲ್ಲಿ ಉಂಡವನೇ ಜಾಣ’ಎಂಬರೀತಿಯಲ್ಲಿ, ತೀರಾ ಅರ್ಜೆಂಟಾಗಿ ಮನಸ್ಸಿನ ಬಾಯಿಗೆ ಏನನ್ನೋ ತುರುಕಲು ಪ್ರಯತ್ನಿಸುತ್ತಾರೆ. ಕಥೆಯ ಹಿನ್ನೆಲೆಯಾಗಲೀ, ಕಥೆಯಲ್ಲಿ ಬರಬೇಕಾದ ಪೂರಕ ಪಾತ್ರಗಳಾಗಲೀ ಕಾಣಿಸದೇ ಇರುವುದರಿಂದಲೂ, ಹಲವು ಪದ್ಯಗಳನ್ನು ಹಾರಿಸಿಬಿಡುವುದರಿಂದಲೂ ಪ್ರೇಕ್ಷಕರಿಗೆ ನವರಸಗಳ ಅನುಭವ ಸಿಕ್ಕುವುದೂ ಇಲ್ಲ, ಕಥಾ ಸಂದರ್ಭದ ಅರ್ಥ ದಕ್ಕುವುದೂ ಇಲ್ಲ!!

"ಡಾಕ್ಟ್ರೇ, ಬಾಳ ಹೊಟ್ಟೆನೋವು ಮಾತ್ರೆ ಕೊಡಿ, ಇವತ್ತೇ ಒಂದು ಮದುವೆ ಊಟಕೂಡ ಉಂಟು ಮಾರಾಯ್ರೆ" ಎಂದು ಯಾರೋ ಒಬ್ಬಾತ ವೈದ್ಯರಲ್ಲಿ ಹೇಳಿದ್ದನ್ನು ಅವರು ಪ್ರಸ್ತಾಪಿಸಿದ್ದು ನೆನಪಿಗೆ ಬಂತು. ಸಂಘಟಕರಲ್ಲಿ ಬಹುತೇಕರಿಗೆ ದುಡ್ಡಿನ ಮೇಲೆ ಕಣ್ಣಿದ್ದರೆ, ಯುವಕಲಾವಿದರಿಗೆ ಪ್ರಸಂಗ ಮುಗಿಸ್ ಹೊತ್ತಾಕಿ, ಬೇರೇ ಪ್ರಸಂಗ ಅಲ್ಲೇರ್ ಆಜೂಬಾಜುಗೆಲ್ಲಾದರೂ ಇದ್ದರೆ ಅಲ್ಲೂ ನಟಿಸುವ ಆಸೆ [ಅವರಿಗೂ ಹಣದಮೇಲೆ ಪ್ರೀತಿ!] ಕೆಲವು ಕಲಾವಿದರ ಕಾಲ್ ಶೀಟು ಎಂಬುದು ಸಿನಿಮಾ ಹೀರೋಗಳ ಕಾಲ್ ಶೀಟುಗಳಿಗಿಂತಲೂ ಸಮಯದ ಅಭಾವಕ್ಕೆ ಒಳಪಟ್ಟಿದ್ದು! ಬೆಳಿಗ್ಗೆ ಮಂಗಳೂರಿನಲ್ಲಿ ಆಟವಿದ್ದರೆ, ರಾತ್ರಿ ಬೆಂಗಳೂರಿನಲ್ಲಿ, ಮಾರನೇದಿನ ಬೆಳಿಗ್ಗೆ ಕುಂದಾಪ್ರದಲ್ಲಿ ಮಾರಾಯ್ರೆ! ೩೬೫ ದಿವಸಗಳಲ್ಲಿ, ಅಷ್ಟೂದಿನಗಳಲ್ಲೂ ಒಂದೋ ಅಥವಾ ಒಂದಕ್ಕಿಂತಾ ಹೆಚ್ಚೋ ಪಾತ್ರಗಳನ್ನು ಬುಕ್ ಮಾಡಿಕೊಳ್ಳುವ ನಟರು ಇದ್ದಾರೆ!!-ಎಂದಾಗ ಯಕ್ಷಗಾನದ ಪಾತ್ರದೊಳಗೆ ಅವರ ತಾದಾತ್ಮ್ಯತೆ ಎಂಥದ್ದು? ಮೇಲಾಗಿ ಕಲಾವಿದರಿಗೆ ಇಲ್ಲದ ಚಟಗಳ ಅವಲಂಬನೆ ಎಂಬುದು ಎಲ್ಲಾ ಪ್ರೇಕ್ಷಕರಿಗೂ ಗೊತ್ತಿರುವ ಸೂಪರ್ ಸೀಕ್ರೆಟ್ಟು!

ಪಟ್ಟಾಭಿಷೇಕದ ದಶರಥನನ್ನೋ, ರಾಮ ನಿರ್ಯಾಣದ ರಾಮನನ್ನೋ, ಹರಿಶ್ಚಂದ್ರನನ್ನೋ, ಕರ್ಣನನ್ನೋ ಇಂದು ಚಿತ್ರಿಸಲು ಶಂಭು ಹೆಗಡೆಯವರಂತಹ ನಟರೇ ಇಲ್ಲ. ಭೀಷ್ಮ, ಜಮದಗ್ನಿ, ಕೃಷ್ಣ, ಬಿಲ್ಲಹಬ್ಬದ ಕಂಸ ಮೊದಲಾದ ಪಾತ್ರಗಳಿಂದ ಬೆರಗು ಹುಟ್ಟಿಸುವ ಮಹಾಬಲ ಹೆಗಡೆಯಂಥವರಿಲ್ಲ. ಯಕ್ಷಗಾನ ಕಲೆಗೆ ತನ್ನದೇ ಆದ ಛಾಪನ್ನು ಕೊಟ್ಟಿದ್ದು ಕೆರೆಮನೆ ಮನೆತನದ ಹೆಗ್ಗಳಿಕೆ. ಅವರ ನೈತಿಕತೆ, ಚಟರಹಿತ ಜೀವನ ವಿಧಾನ ಮೊದಲಾದ ಅಂಶಗಳು ಬೇರೆಲ್ಲರಿಗೆ ಮಾದರಿ. ಸುಗಂಧದ ಸಂಸರ್ಗದಿಂದ ದುರ್ಗಂಧವೂ ಉಡುಗಿಹೋದಂತೇ, ಕೆರೆಮನೆ ಕಲಾವಿದರ ಹಾಗೂ ಅವರ ಮೇಳದ ಸಂಸರ್ಗದಿಂದ ಅನೇಕ ಕಲಾವಿದರು ಸುಸಂಕೃತರಾಗಿ ಬೆಳೆದಿದ್ದರು. ಕೆರೆಮನೆ ಶಿವರಾಮ ಹೆಗಡೆಯವರ ಸಮಕಾಲೀನರಾದ ಅಚ್ಚು-ರಾಮಪ್ಪಿ[ಲಕ್ಷ್ಮಣ ಹೆಗಡೆ-ರಾಮ ಹೆಗಡೆ] ಎಂಬ ಕಲಾವಿದ ಸಹೋದರರು ಹೊನ್ನಾವರ ತಾಲೂಕಿನ ಬೇರಂಕಿ ಗ್ರಾಮದ ಕೊಂಡದಕುಳಿ ಎಂಬ ಮಜರೆಯಲ್ಲಿ ಆಗಿಹೋದರು. ಅಚ್ಚು ಆಂಜನೇಯನ ವೇಷ ಧರಿಸಿ ವೇದಿಕೆಗೆ ಬಂದಾಗ, ವೇದಿಕೆಯ ಪಕ್ಕದ ಕಂಬಗಳನ್ನೇ ಹತ್ತಿ ತೋರಿಸುತ್ತಿದ್ದ ನೈಜ ಕಲಾತ್ಮಕತೆ ಇವತ್ತೆಲ್ಲಿದೆ? ರಾಮಪ್ಪಿಯವರ ವೇಷದ ತಿಟ್ಟು ಕೆರೆಮನೆ ಶಿವರಾಮ ಹೆಗಡೆಯವರ ವೇಷವನ್ನೇ ಹೋಲುತ್ತಿತ್ತು ಎಂಬುದು ಇಂದಿನ ವೃದ್ಧ ಪ್ರೇಕ್ಷಕರ ಹೇಳಿಕೆ. ಈ ಪೈಕಿ ರಾಮ ಹೆಗಡೆಯವರ ಮೊಮ್ಮಗನಾಗಿ ಇವತ್ತು ಪ್ರಬುದ್ಧ ಕಲಾವಿದನಾಗಿ ಬೆಳೆದು ನಿಂತ, ಸಭ್ಯ-ಸುಶೀಲ-ಸದಾಚಾರೀ ಸರಳ ವ್ಯಕ್ತಿ ಕೊಂಡದಕುಳಿ ರಾಮಚಂದ್ರ ಹೆಗಡೆ. 

ಮೊನ್ನೆ ಮೊನ್ನೆ ಗುಂಡಬಾಳಾದಲ್ಲಿ ರಾಮಚಂದ್ರ ಕಲಿಯುತ್ತಿದ್ದುದನ್ನು ಕಂಡಿದ್ದ ಅನೇಕರಿಗೆ ಅದು ಆಡಾಡ್ತಾ ಕಳೆದುಹೋದ ೩೦ ವರ್ಷ ಎಂಬುದು ಗಮನಕ್ಕೆ ಬರುವುದೇ ಇಲ್ಲ!! ಗುಂಡಬಾಳೆಯ ಮುಖ್ಯಪ್ರಾಣನೆದುರು  ಕೆಲವಾರು ವರ್ಷಗಳಕಾಲ ಪ್ರತೀ ಬೇಸಗೆಯ ನಾಕು ತಿಂಗಳು ಸೇವೆನಡೆಸಿದ ರಾಮಚಂದ್ರ, ಅಜ್ಜನ ಹೆಸರಿಗೆ ಹೊಸ ಗರಿಯನ್ನು ಮೂಡಿಸುವಲ್ಲಿ ಹಾದುಬಂದ ಹಾದಿ ಅಜಮಾಸು ೩೫ ವರ್ಷಗಳು. ಈ ಸುದೀರ್ಘ ಅವಧಿಯಲ್ಲಿ, ಯಕ್ಷಗಾನವನ್ನೇ ವೃತ್ತಿಯನ್ನಾಗಿಸಿಕೊಂಡು ನಡೆಸಿಬಂದ ಅವರಿಗೆ ಎದುರಾಗಿರಬಹುದಾದ ಆರ್ಥಿಕ ಸಂಕಷ್ಟಗಳನ್ನು ನಾವು ಗಮನಿಸಬೇಕು. ಇಂದು ಯಕ್ಷಗಾನ ಕಲಾವಿದರು ಹಣಕ್ಕಾಗಿ ತಮ್ಮ ಕಲೆಯನ್ನು ಮಾರಿಕೊಳ್ಳುವ ಉದ್ದೇಶದ ಹಿಂದೆ ಇರುವ ಕರಾಳ ಛಾಯೆ ಅದು. ರಾಮಚಂದ್ರರು ಹರೆಯದವರಾಗಿದ್ದಾಗ ಇಂದಿನಂತೇ ಮಳೆಗಾಲದಲ್ಲೂ ಆಗುತ್ತಿದ್ದುದ ಆಟಗಳು ಸಂಖ್ಯೆ ತೀರಾ ಕಮ್ಮಿ. ಕಲಾವಿದರಿಗೆ ಎಷ್ಟೋ ದಿನ ಹೊಟ್ಟೆಯಮೇಲೆ ತಣ್ಣೀರುಪಟ್ಟೆ! ಆರು ತಿಂಗಳು ಗಣನೀಯವಲ್ಲದ ಆದಾಯ, ಇನ್ನಾರು ತಿಂಗಳು ಆದಾಯ ರಹಿತ ವ್ಯವಸಾಯ! ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸಿಯೂ ಹೊಸ ಸಾಹಸಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅಧ್ಯಯನ ಶೀಲರಾಗಿ ಯಕ್ಷಗಾನ ಕಲೆಯಲ್ಲಿ ಇರುವ ಕೊರತೆಗಳನ್ನು ನೀಗಿಸಲು ಉದ್ಯುಕ್ತರಾದವರಲ್ಲಿ ರಾಮಚಂದ್ರ ಹೆಗಡೆ ಕೂಡ ಒಬ್ಬರು.

ಬದಲಾವಣೆ ಬಯಸುವ ಯುವಪ್ರೇಕ್ಷಕರ ಸಿನಿಕತೆಗೆ ತಕ್ಕದಾಗಿ ಅದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುವ ಸಲುವಾಗಿ ದಕ್ಷಿಣಕನ್ನಡದ ಕೆಲವು ಜನ ಹೊಸ ಹೊಸ ಸಾಮಾಜಿಕ ಪ್ರಸಂಗಗಳನ್ನು ಬರೆದರು. ಛಂದಸ್ಸು, ವ್ಯಾಕರಣ, ತಾಳಗತಿ ಎಲ್ಲದರಲ್ಲೂ ಯಡವಟ್ಟುಗಳನ್ನೇ ತುಂಬಿಸಿಕೊಂಡ ಅಂತಹ ಪ್ರಸಂಗಗಳು ಮೂಲ ಯಕ್ಷಗಾನದ ಧ್ಯೇಯೋದ್ದೇಶವನ್ನು ಗಾಳಿಗೆ ತೂರಿದವು. ನೈತಿಕತೆ, ವೈಚಾರಿಕತೆ, ಸತ್ಯನಿಷ್ಠ ನಡೆ ಮೊದಲಾದ ಧನಾತ್ಮಕ ಅಂಶಗಳನ್ನು ಬೋಧಿಸಬೇಕಾದ ಪ್ರಸಂಗಗಳ ಬದಲಾಗಿ, ಹಾದರ, ಅಪರಾಧ, ಕಾಮುಕತೆ ಇಂತಹ ಅಂಶಗಳನ್ನೇ ಟಿವಿ ಧಾರಾವಾಹಿಗಳಂತೇ ಬಿಂಬಿಸ ಹೊರಟಿದ್ದು, ಯಕ್ಷಗಾನದ ಮೇಲೆ ನಡೆದ ಅತ್ಯಾಚಾರ ಎಂದರೆ ತಪ್ಪಲ್ಲ. ಇಂತಹ ಸಾಮಾಜಿಕ ಪ್ರಸಂಗಗಳನ್ನು ಧಿಕ್ಕರಿಸಿ ಪೌರಾಣಿಕ ಪ್ರಸಂಗಗಳನ್ನೇ ಆಡುವ ಕಳಕಳಿಯನ್ನು ಉಳಿಸಿಕೊಂಡವರು ಅಂದಿಗೂ ಇಂದಿಗೂ ಕೆರೆಮನೆ ಮೇಳದವರು ಮಾತ್ರ! ಅಂತಹ ಪೌರಾಣಿಕ ಪ್ರಸಂಗಗಳನ್ನೇ ಆತುಕೊಳ್ಳುವ ಇನ್ನೊಬ್ಬ ಕಲಾವಿದನನ್ನು ನಾವು ಹುಡುಕಬಹುದಾದರೆ ಅದು ರಾಮಚಂದ್ರರಲ್ಲಿ. ೧೨-೧೩ ವರ್ಷಗಳ ಹಿಂದೆ ದಕ್ಷಿಣಕನ್ನಡದ ಕುಂಭಾಶಿಯಲ್ಲಿ ನೆಲೆಸಿ, ಅಲ್ಲಿಂದಲೇ ’ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ, ಕೊಂಡದಕುಳಿ, ಕುಂಭಾಶಿ’ ಎಂಬ ಮೇಳವೊಂದನ್ನು ಕಟ್ಟಿಕೊಂಡು ನಡೆಸುತ್ತಾ ಬರುತ್ತಿದ್ದಾರೆ; ಮೇಳದ ದಶಮಾನೋತ್ಸವವನ್ನೂ ಆಚರಿಸಿದ್ದಾರೆ. 

"ಪೂರ್ವರಂಗದ ಅಭಿನಯಕ್ಕೆ ಯಾರೂ ಸಿದ್ಧರಿಲ್ಲ" ಎಂಬ ಅವರ ಅನಿಸಿಕೆಯನ್ನು ಅವರು ಹೇಳಿದಾಗ ನಾನು ಕೇಳಬೇಕೆಂದಿದ್ದೆ: ಪೂರ್ವರಂಗವನ್ನು ಪ್ರಮುಖರಂಗದ ಸಹಕಲಾವಿದರೇ ನಿರ್ವಹಿಸುವಂತೇ ಮಾಡಿದರೇನಾಗುತ್ತದೆ? ಯಾರೂ ಇಲ್ಲ ಎಂಬ ಕ್ಷುಲ್ಲಕ ಕಾರಣ ಕೊಟ್ಟು ಶಿಷ್ಟ ಸಂಪ್ರದಾಯವನ್ನು ಮುರಿಯುವುದು ಔಚಿತ್ಯವೇ? ಪೂರ್ವರಂಗವಿಲ್ಲದ ಕಲೆ ಎಷ್ಟುಕಾಲ ತನ್ನ ಛಾಪನ್ನು ಇಟ್ಟುಕೊಂಡೀತು? ಕೆರೆಮನೆ ಮೇಳ ನಡೆಸುವ ಆಟಗಳಲ್ಲಿ ಇಂದಿಗೂ ತಕ್ಕಮಟ್ಟಿಗೆ ಪೂರ್ವರಂಗ ಇದೆಯಲ್ಲಾ? ಹಾಗೇ ಮಿಕ್ಕಿದ ’ಹೆಕ್ಕುಮೇಳ’ಗಳಲ್ಲೂ ಅದು ಆಗದು ಯಾಕೆ? "ರಾಮಚಂದ್ರ ತನ್ನದೇ ಮೇಳಕ್ಕೆ ಬದ್ಧನಾಗಿರಬೇಕು, ಅತಿಥಿ ಕಲಾವಿದನಾಗಿ ಕರೆದೆಡೆಗೆಲ್ಲಾ ಹೋಗಬಾರದು, ಅದರಿಂದ ತನ್ನ ಮೇಳದಲ್ಲಿ ಇರುವ ಕಲಾವಿದರಿಗೂ ಬದ್ಧತೆ ಇರುವುದಿಲ್ಲ, ಅವರನ್ನು ನಿಯಂತ್ರಿಸುವುದು ಕಷ್ಟಸಾಧ್ಯ" ಎಂದು ನೆಬ್ಬೂರು ಭಾಗವತರು ಹೇಳಿದ್ದು ಸರಿಯಾಗೇ ಇದೆ. ಪ್ರೇಕ್ಷಕ ಉತ್ತಮವಾದುದನ್ನು ಎಲ್ಲಿದ್ದರೂ ಹುಡುಕುತ್ತಾನೆ ಮತ್ತು ಅದನ್ನು ಹೇಗಾದರೂ ಪಡೆಯಲು ಪ್ರಯತ್ನಿಸುತ್ತಾನೆ. ಅತಿಥಿ ಕಲಾವಿದನಾಗಿ ಭಾಗವಹಿಸದ ಪಕ್ಷದಲ್ಲಿ ಯಾವ ಪ್ರೇಕ್ಷಕನೂ ವಂಚಿತನಾಗುವುದಿಲ್ಲ. ನಡೆಸುವ ಮೇಳದಲ್ಲಿ ಉತ್ತಮ ಕಲಾವಿದರನ್ನು ಇರಿಸಿಕೊಂಡರೆ ಎಲ್ಲರೂ ಅದೇ ಮೇಳದ ಪ್ರದರ್ಶನಗಳನ್ನೇ ನೋಡುತ್ತಾರೆ. ಇದಕ್ಕೊಂದು ರೂಪ ಬೇಕಾಗುತ್ತದೆ, ಕಲಾವಿದರಿಗೆ ನಿಗದಿತ ಸಂಬಳ ವಗೈರೆ ಪರಿಕಲ್ಪನೆಯಾಗಬೇಕಾಗುತ್ತದೆ, ಕಲಾವಿದರು ಮಾತುಕೊಟ್ಟಮೇಲೆ ಮೇಳಕ್ಕೆ ಬದ್ಧರಾಗಿರಬೇಕಾಗುತ್ತದೆ. ಇವತ್ತಿನ ಕಾಲಧರ್ಮಕ್ಕನುಸರಿಸಿ ಲಿಖಿತ ಒಡಂಬಡಿಕೆಯನ್ನೂ ಮಾಡಿಕೊಳ್ಳಬಹುದಾಗಿದೆ. ಹಾಗೊಮ್ಮೆ ಮೇಳಕ್ಕೊಂದು ರೂಪ ಬಂದರೆ ಆಗ ಹಾರುವ ಕಲಾವಿದರು ಹಾರಾಡದಂತಾಗುತ್ತದೆ! ಅವರೂ ನಡೆಯಲಿಕ್ಕೆ ಕಲಿಯುತ್ತಾರೆ ಮತ್ತು ಯಕ್ಷಗಾನದ ಮೂಲಸ್ರೋತ ಸತ್ವಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಾರೆ.   

ಏನಾಗಿದೆ ಎಂದರೆ ಕೊಂಡದಕುಳಿಯವರಂತಹ ಕಲಾವಿದರು ಯಾರೊಡನೆಯೂ ವೈಷಮ್ಯವನ್ನು ಕಟ್ಟಿಕೊಳ್ಳಲು ಬಯಸುವುದಿಲ್ಲ, ವೈಷಮ್ಯ ತುಸುಮಟ್ಟಿಗೆ ಆದರೂ ಸಹಿಸಿಕೊಂಡು ಮೇಳವನ್ನು ಒಂದು ವಿಶಿಷ್ಟ ಸ್ವರೂಪಕ್ಕೆ ಒಗ್ಗಿಸುವ ಇಚ್ಛೆ ರಾಮಚಂದ್ರರಿಗಿದ್ದಂತಿಲ್ಲ. ಸಮಯಮಿತಿಯ ಮೇಳಗಳಲ್ಲಿ ಭಾಗವಹಿಸುವ ಕಲಾವಿದರು ಅಂತಹ ಅವಕಾಶಗಳು ಎಲ್ಲಿದ್ದರೂ ಅಲ್ಲಿಗೆ ಹಾರುತ್ತಾರೆ. ಬೆಳಿಗ್ಗೆ ಈ ಮೇಳದಲ್ಲಿ ಭಾಗವಹಿಸಿದ ಕಲಾವಿದನೇ ಸಂಜೆ ಇನ್ನೊಂದು ಮೇಳದ ಪ್ರದರ್ಶನದಲ್ಲಿ ಭಾವಹಿಸುತ್ತಾನೆ! ಆತ ಯಾವ ಮೇಳದವ ಎಂದು ಪ್ರೇಕ್ಷಕ ತಿಳಿಯಬೇಕು? ಸಿನಿಮಾ ನಟರಂತೇ ಬೇರೆ ಬೇರೇ ಬ್ಯಾನರುಗಳಡಿಯಲ್ಲಿ ಕೆಲಸಮಾಡುವ ಸಿನಿಕತೆ ಯಕ್ಷಗಾನ ಕಲಾವಿದರಲ್ಲಿ ಇರಬಾರದಲ್ಲ? ಕೊನೇಪಕ್ಷ ಹಿಡಿದ ಮೇಳದಲ್ಲಿ ಒಂದು ವರ್ಷವಾದರೂ ಇದ್ದು, ಅಲ್ಲಿಂದಾಚೆಗೆ ಬೇಲಿ ಹಾರದೇ ಬದ್ಧತೆಯನ್ನು ಮೆರೆದರೆ ಅದು ಮೇಳಕ್ಕೂ, ಕಲಾವಿದರಿಗೂ, ಯಕ್ಷಗಾನ ಕಲೆಗೂ ಕ್ಷೇಮ ಎಂಬುದು ನನ್ನಂತಹ ಹಲವರ ಅಭಿಪ್ರಾಯ.  

೫೦ ವರ್ಷಗಳಲ್ಲಿ ರಾಮಚಂದ್ರರು ನಡೆಸಿದ ಪಾತ್ರಗಳಿಗೂ ಉಳಿದ ಕಲಾವಿದರು ವಹಿಸಿದ ವೇಷಗಳಿಗೂ ಅಜಗಜಾಂತರವಿದೆ. ಪಾತ್ರವನ್ನು ಪೋಷಿಸುವುದಾದರೆ ಅದಕ್ಕೊಂದಷ್ಟು ಪೂರ್ವಸಿದ್ಧತೆ ಬೇಕು. ಪಾತ್ರಗಳನ್ನು ಪೋಷಿಸಲು ಸಾಕಷ್ಟು ಅಧ್ಯಯನಶೀಲರಾಗಿರಬೇಕು. ಮಹಾಕಾವ್ಯಗಳನ್ನು ಓದಿಕೊಂಡರೆ ಪಾತ್ರಗಳ ಒಳಹೊರಗಿನ ಮಹಿಮೆ ತಿಳಿಯುತ್ತದೆ. ಕೇವಲ ಅನ್ಯರು ವಹಿಸಿದ್ದ ಪಾತ್ರಗಳನ್ನು ನೋಡಿ, ಅವರ ಮಾತುಗಳನ್ನು ಕೇಳಿ, ಅನುಕರಿಸುವ ಜಾಯಮಾನದವರು ಪಾತ್ರಪೋಷಿಸಿದರೆ ಜನ ಬಹುಕಾಲ ಅದನ್ನು ಮೆಚ್ಚಲಾರರು. ಕಿವಿಗಡಚಿಕ್ಕುವಂತೇ ಒದರುವುದು, ಸುಗಮ ಸಂಗೀತದ ಮಾದರಿಯಲ್ಲಿ ಯಕ್ಷಗಾನದ ಹಾಡುಗಳನ್ನು ಹೇಳುವುದು, ತಾಳ-ಲಯಗಳ ತಪ್ಪುವಿಕೆ ಮೊದಲಾದವು ಇಂದಿನ ಭಾಗವತರನೇಕರ ಬಡಿವಾರದ ಬಂಡವಾಳ. ಚಪ್ಪಾಳೆಗಳ ಮಧ್ಯೆ ಇಂದ್ರಲೋಕದಿಂದ ಧರೆಗಿಳಿದಂತೇ  ರಂಗಕ್ಕೆ ಬಂದು ಆಸೀನರಾಗುವ ಕೆಲವು ಭಾಗವತರು ನಿಜಕ್ಕೂ ಯಕ್ಷಗಾನದ ಮೂಲರಸಕ್ಕೆ ಹಾಲಹಲವನ್ನು ಸೇರಿಸಿಬಿಟ್ಟಿದ್ದಾರೆ. ಯಕ್ಷಗಾನ ಒಂದು ವಿಭಿನ್ನ ಪ್ರಕಾರದ ಸಂಗೀತವೇ ಹೊರತು ಸಂಗೀತವೇ ಯಕ್ಷಗಾನವಲ್ಲ ಎಂಬುದನ್ನು ಅಂಥವರಿಗೆ ತಿಳಿಸಿಹೇಳುವವರು ಯಾರೂ ಇಲ್ಲ! ಬಡಾ ಬಡಗಿನ ಮಹೋನ್ನತ ತಿಟ್ಟುಗಳನ್ನು ಯಥಾವತ್ತಾಗಿ ನಿರೂಪಿಸುತ್ತಾ ಸಾತ್ವಿಕ ಭಾವದಿಂದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ರಾಮಚಂದ್ರರು ಯಶಸ್ಸು ಗಳಿಸಿದ್ದಾರೆ; ಅವರು ರಾಮನೂ ಆಗಬಲ್ಲರು, ರಾವಣನಾಗಿಯೂ ಅಷ್ಟೇ ಲೀಲಾಜಲವಾಗಿ ಅಭಿನಯಿಸಬಲ್ಲರು.

೫೦ನೇ ವಯಸ್ಸಿನ ಹೊಸ್ತಿಲಲ್ಲಿ, ಅಭಿಮಾನಿಗಳು ನಡೆಸಿದ ಕಾರ್ಯಕ್ರಮ ಸುಂದರವಾಗಿತ್ತು. ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ನಿನ್ನೆ ಅಂದರೆ ೨೮.೦೪.೨೦೧೩ ಭಾನುವಾರದಂದು ರಾಮಚಂದ್ರರ ಕಲಾಭಿಮಾನಿಗಳಿಗೆ ಸಂತಸ. ಸಭಾ ಕಾರ್ಯಕ್ರಮದಲ್ಲಿ ಅನೇಕ ಸಹಕಲಾವಿದರು ಒಡನಾಟದ, ಒಡಲಾಳದ ಅನುಭವಗಳನ್ನು ಹಂಚಿಕೊಂಡರು. ಮುಂಬೈನ ಪಲ್ಯ ಉಮೇಶ್ ಶೆಟ್ಟರು, ವಿಜಯವಾಣಿಯ ತಿಮ್ಮಪ್ಪ ಭಟ್ಟರು, ಆಕಾಶವಾಣಿಯ ದಿವಾಕರ ಹೆಗಡೆಯವರು, ಕೋಕಿಲವಾಣಿಯ ನೆಬ್ಬೂರು ನಾರಾಯಣ ಭಾಗವತರು, ಎನ್. ಆರ್. ಹೆಗಡೆಯವರು ಮೊದಲಾದವರು ಮಾತನಾಡಿದರು. ನಂತರ ಕೊಂಡದಕುಳಿಯವರಿಗೆ ಬಂಗಾರದ ಕಡಗ ತೊಡಿಸಿ, ಶಾಲುಹೊದೆಸಿ, ಬೆಳ್ಳಿಯ ಮೆರುಗಿನ ಕಿರೀಟ-ಸ್ಮರಣಿಕೆ-ಮಾನ ಪತ್ರ ನೀಡಿ ಸನ್ಮಾನ ನಡೆಯಿತು. ಕೊಂಡದಕುಳಿಯವರು ಭಾಗವಹಿಸಿದ ಯಕ್ಷಗಾನ ಪ್ರಸಂಗಗಳ ಡಿವಿಡಿ [ದೃಶ್ಯ ಸಾಂದ್ರಿಕೆ] ಬಿಡುಗಡೆಮಾಡಲಾಯ್ತು. ಸಭೆಯ ನಂತರದಲ್ಲಿ ’ಸತ್ಯವಾನ್ ಸಾವಿತ್ರಿ’ ಎಂಬ ಪೌರಾಣಿಕ ಪ್ರಸಂಗವನ್ನು ಆಡಿತೋರಿಸಿದರು.

ಸುವರ್ಣವರ್ಷವನ್ನು ತಲ್ಪಿದ ಕೊಂಡದಕುಳಿಯವರ ಸಾರ್ಥಕ ಸೇವೆ ಶತಕಾಲ ಮುನ್ನಡೆಯಲಿ, ಇನ್ನೂ ವಿವಿಧ ಆಯಾಮಗಳಲ್ಲಿ ಯಕ್ಷಗಾನದ ಮೆರುಗನ್ನು ಹೆಚ್ಚಿಸುವತ್ತ ಅವರ ಸಾತ್ವಿಕ ಕಳೆ ಜನರನ್ನು ರಂಜಿಸಲಿ, ಹಲವು ನ-ಕಾರಗಳ ಮಧ್ಯೆಯೂ, ತನ್ನಂತಹ ಭರವಸೆಯ ಕಲಾವಿದರನ್ನು ಹುಟ್ಟುಹಾಕುವ ಗುರು-ಶಿಷ್ಯ ವ್ಯವಸಾಯದ ಓಂಕಾರ ಅವರಿಂದ ಆಗಲಿ ಎಂಬುದು ಅಭಿಮಾನೀ ಬಳಗದ ಎಲ್ಲರ ಹಾರೈಕೆ, ಅಪೇಕ್ಷೆ ಮತ್ತು ನಿರೀಕ್ಷೆ ; ಈ ದನಿಯಲ್ಲಿ ನನ್ನ ದನಿಯೂ ಸೇರಿದೆ ಎಂದು ಹೊಸದಾಗಿ ಹೇಳಬೇಕಿಲ್ಲವಲ್ಲಾ?