ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, November 6, 2011

ಆ ಆ ಆ ಅಮೇರಿಕಾ ......


ಆ ಆ ಆ ಅಮೇರಿಕಾ ......

ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ತನ್ನ ಹತೋಟಿಯಲ್ಲಿ ನಿಯಂತ್ರಿಸುವ ಅಣ್ಣನೆಂದು ಗುರುತಿಸಿಕೊಂಡಿರುವ ಅಮೇರಿಕಾ ಯಾಕೆ ಈ ರೀತಿ ಆರ್ಥಿಕ ದುರ್ಭರ ಪರಿಸ್ಥಿತಿ ಎದುರಿಸುತ್ತಿದೆ ಎಂಬುದರ ಬಗ್ಗೆ ನಾನು ಸಾಕಷ್ಟು ತಲೆಕೆಡಿಸಿಕೊಂಡಿದ್ದಿದೆ. ಜನಸಂಖ್ಯೆ ಕಮ್ಮಿ ಇರುವ ವಿಶಾಲವಾದ ಭೂಭಾಗವುಳ್ಳ ಅಮೇರಿಕಾಕ್ಕೆ ಹಣಕಾಸಿನ ಮುಗ್ಗಟ್ಟು ಬರುವಂತಹ ಯಾವ ಅನಿವಾರ್ಯತೆ ಎದುರಾಯ್ತು ಎಂಬುದನ್ನು ಸ್ವಲ್ಪ ವಿಶ್ಲೇಷಿಸಿದಾಗ ಕೆಲವು ಗೂಢ ಸಂಗತಿಗಳು ಗೋಚರಿಸುತ್ತವೆ. ಲಕ್ಷ್ಮಿ ಚಂಚಲೆ ಆಕೆ ಒಂದೆಡೆ ನಿಲ್ಲೋದಿಲ್ಲ ಎಂಬುದು ನಮ್ಮೆಲ್ಲರ ನಂಬಿಕೆ, ಇವತ್ತು ಲಕ್ಷಾಧಿಪತಿಯಾದವ ನಾಳೆ ಭಿಕ್ಷಾಧಿಪತಿಯಾಗಲೂ ಬಹುದೆನ್ನುವ ಮಾತು ಸುಳ್ಳೇನಲ್ಲ. ಬುದ್ಧಿವಂತರ ದೇಶವೆನಿಸಿದ ಅಮೇರಿಕಾದಲ್ಲೂ ಬುದ್ಧಿಕಮ್ಮಿಯಾದ ಕೆಲಸ ನಡೆಯಿತೇ ? ಅಥವಾ ಅತೀಬುದ್ಧಿವಂತಿಕೆ ಇದಕ್ಕೆ ಕಾರಣವಾಯ್ತೇ ಯೋಚಿಸಬೇಕಾಗುತ್ತದೆ.

ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬುದು ನಮ್ಮ ಅನಿಸಿಕೆಯಾದರೆ ಕಾಲು ಚಾಚುವಷ್ಟಕ್ಕೂ ಹಾಸಿಗೆ ಹೊಲಿಸಿಕೋ ಎಂಬುದು ಅಮೇರಿಕನ್ನರ ತತ್ವ. ಈ ಭರದಲ್ಲಿ ಈಶ್ವರ ಭಸ್ಮಾಸುರನಿಗೆ ವರ ಕೊಟ್ಟು ಸಿಕ್ಕಾಕಿಕೊಂಡಂತೇ ಅವರು ಜಾರಿಗೊಳಿಸುವ ಕೆಲವು ಆರ್ಥಿಕ ಸೂತ್ರಗಳು ಅವರನ್ನೇ ಮತ್ತೆ ಮುತ್ತಿಕೊಂಡು ಪರಿಸ್ಥಿತಿಯನ್ನು ವಿಷಮತೆಗೆ ತಳ್ಳುವುದು ಕಳೆದ ಕೆಲವು ದಶಕಗಳ ಅಲ್ಲಿನ ವ್ಯವಹಾರ ವೈಖರಿಗಳನ್ನು ನೋಡಿದವರಿಗೆ ವೇದ್ಯವಾಗುವ ವಿಷಯ. ಇರುವುದನ್ನು ಅನುಭವಿಸುವುದು ಬಿಟ್ಟು ಮೊದಲೇ ಹಲವು ಸೌಲತ್ತುಗಳನ್ನು ಹೆಸರಿನ ಮೌಲ್ಯದಲ್ಲಿ ಸಾಲವಾಗಿ ಪಡೆದು ಆಮೇಲೆ ಅದನ್ನು ತೀರಿಸುತ್ತಾ ನಡೆಯುವ ಪ್ರಕ್ರಿಯೆಗೆ ಚಾಲನೆ ಕೊಟ್ಟವರೇ ಅವರು! ಕೊಟ್ಟ ಸಾಲ ಮಿತಿಮೀರಿದಾಗ, ಸಾಲಪಡೆದಾತ ತೀರಿಸಲು ಅಶಕ್ತನಾಗಿ ಅವನಲ್ಲಿ ಸಾಲದ ಹಣ ಮರಳಿಸಲು ಏನೂ ಇಲ್ಲದಾದಾಗ ಸಾಲ ಕೊಟ್ಟ ಅಲ್ಲಿನ ಬ್ಯಾಂಕುಗಳ ಸ್ಥಿತಿ ಹಡಾಲೆದ್ದು ಹೋಗಿದೆ.

ಸಾಲ ಸೌಲಭ್ಯ ಒಂದು ಹಂತಕ್ಕೆ ಬೇಕು ನಿಜ. ಆದರೆ ಸಾಲ ಪಡೆಯುವಾತನಿಗೂ ಪಡೆದ ಸಾಲವನ್ನು ಮರಳಿ ಕೊಡಲು ಸಾಧ್ಯವೇ ಎಂಬ ಮುಂದಾಲೋಚನೆ ಇರಬೇಕಾಗುತ್ತದೆ. ’ಗಂಡಾಗುಂಡಿಮಾಡಿಯಾದರೂ ಗಡಿಗೆ ತುಪ್ಪ ಕುಡೀಬೇಕು’ ಎಂಬುದು ನಮ್ಮಲ್ಲಿ ಪ್ರಚಲಿತದಲ್ಲಿರುವ ಗಾದೆಯಾದರೂ ಹಾಗೆ ಸುಖಾಸುಮ್ಮನೇ ಸಾಲಮಾಡಲು ನಮ್ಮಲ್ಲಿನ ಜನ ಹೆದರುತ್ತಾರೆ ಮಾತ್ರವಲ್ಲ ಮಾಡಿದ ಸಾಲವನ್ನು ಮರಳಿಸುವಲ್ಲಿ ನಮ್ಮವರು ಮುಂಚೂಣಿಯಲ್ಲಿರುತ್ತಾರೆ; ಆದಾಗ್ಯೂ ಅಲ್ಲಲ್ಲಿ ಐಸಿಐಸಿಐನಂತಹ ಕೆಲವು ಬ್ಯಾಂಕುಗಳು ಸಾಲ ವಸೂಲಾತಿಗೆ ರೌಡಿಗಳನ್ನು ಕಳುಹಿಸಬೇಕಾದ ಅನಿವಾರ್ಯತೆ ತಲೆದೋರಿದೆ ಎಂದರೆ ಇನ್ನು ಅಮೇರಿಕಾದಂತಹ ಧಾರಾಳಿಗರ ರಾಷ್ಟ್ರದಲ್ಲಿ ಸಾಲದ ಮರುಪಾವತಿ ವಿಷಯ ಹೇಗಿರಬಹುದು ?

ಯಾವುದೋ ವ್ಯಕ್ತಿಯೋ ಸಂಸ್ಥೆಯೋ ದುಂದುಗಾರಿಕೆಯನ್ನೋ, ಹಣವ್ಯತ್ಯಯವನ್ನೋ ಅಥವಾ ಆರ್ಥಿಕ ಅವ್ಯವಹಾರಗಳನ್ನು ಮಾಡಿ ಲೆಕ್ಕಪತ್ರಗಳಲ್ಲಿ ಅವುಗಳನ್ನು ಗೌಪ್ಯವಾಗಿಡುವುದನ್ನೋ ಕಂಡರೆ ನಾವು ಅದನ್ನು ನಿಯಂತ್ರಿಸುತ್ತೇವೆ, ನಿರ್ಬಂಧಿಸುತ್ತೇವೆ, ಆಯಾ ವ್ಯಕ್ತಿ ಅಥವಾ ಸಂಸ್ಥೆಗೆ ತಕ್ಕ ಶಿಕ್ಷೆಯನ್ನೂ ವಿಧಿಸಿ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಮಾರ್ಗಹುಡುಕುತ್ತೇವೆ. ಇದಕ್ಕೆ ನಿನ್ನೆ ಜೈಲಿನಿಂದ ಬಿಡುಗಡೆಯಾದ ಸತ್ಯಂ ಕಂಪ್ಯೂಟರ್ಸ್‍ನ ರಾಮಲಿಂಗ ರಾಜುವೇ ಉದಾಹರಣೆ. ಆದರೆ ಒಂದು ಸರಕಾರವೋ ಆಡಳಿತ ಯಂತ್ರವೋ ಈ ತರಹದ ಅಪವ್ಯಯಗಳಿಗೋ ದುಂದುಗಾರಿಕೆಗೋ ಮುಂದಾಗಿ ಬಹಳಕಾಲದ ತನಕ ತನ್ನ ನಿಜದನೆಲೆಯನ್ನು ಬಚ್ಚಿಟ್ಟು, ಮುಚ್ಚಿಟ್ಟು ಆಗಾಗ ಕೈನಡೆಯದಾಗ ಆರ್ಥಿಕ ಹಿನ್ನಡೆತ ಎಂದು ಘೋಷಿಸಿದರೆ ಅದಕ್ಕೆ ಪರಿಹಾರ ಸುಲಭ ಸಾಧ್ಯವೇ ? ಅಥವಾ ಅಂತಹ ಸರಕಾರಕ್ಕೋ ಆಡಳಿತ ಯಂತ್ರವನ್ನು ನಡೆಸುತ್ತಿರುವವರಿಗೋ ಯಾವುದಾದರೂ ಶಿಕ್ಷೆ ಇದೆಯೇ ? ಗೊತ್ತಾಗಿಲ್ಲ.

ಅಮೇರಿಕಾದ ಆರ್ಥಿಕ ಹಿಂಜರಿತಕ್ಕೆ ಸಾಮಾನ್ಯ ಅವಲೋಕನದಲ್ಲಿ ಕಾಣಬಹುದಾದ ಕೆಲವು ಕಾರಣಗಳು ಹೀಗಿವೆ:

೧. ಪ್ರತೀವರ್ಷ ೧೧ ರಿಂದ ೨೨ ಬಿಲಿಯನ್ ಡಾಲರ‍್ ಗಳನ್ನು ಜನಕಲ್ಯಾಣಕ್ಕೆ ಎಂಬ ಸೋಗಿನಲ್ಲಿ ಬೇನಾಮಿ ಕಂಪನಿಗಳ ಸಹಯೋಗದೊಂದಿಗೆ ವ್ಯಯಿಸಲಾಗುತ್ತದೆ! ref : http://tinyurl.com/zob77

೨. ಪ್ರತೀವರ್ಷ ೨.೨ ಬಿಲಿಯನ್ ಡಾಲರ್ ಗಳನ್ನು ಆಹಾರ ಸಾಮಗ್ರಿಗಳ ಸರಬರಾಜು ಮತ್ತು ವಿತರಣೆ, ಶಾಲಾಮಕ್ಕಳ ಮಧ್ಯಾಹ್ನದ ಊಟಕ್ಕೆ ಎಂತೆಲ್ಲಾ ಬೇನಾಮಿ ಸಂಸ್ಥೆಗಳಿಗೆ ಪಾವತಿಸುವುದು. ref : www.cis.org/articles/2004/fiscalexec.html

೩. ಪ್ರತೀವರ್ಷ ೨.೫ ಬಿಲಿಯನ್ ಡಾಲರ್ ಗಳನ್ನು ಔಷಧೋಪಚಾರದ ಅಗತ್ಯತೆಗೆ ಬೇನಾಮಿ ಕಂಪನಿಗಳಿಗೆ ಕೊಡಲಾಗುತ್ತದೆ ! ref : http://www.cis.org/articles/2004/fiscalexec.html

೪. ಪ್ರತೀವರ್ಷ ೧೨ ಬಿಲಿಯನ್ ಡಾಲರ್ ಗಳನ್ನು ಪ್ರಾಥಮಿಕ ಶಿಕ್ಷಣಕ್ಕೆ ಅಂತ ಖರ್ಚುಮಾಡಿದರೂ ಶಿಕ್ಷಣಕ್ಕಾಗಿ ಅದು ವ್ಯಯಿಸಲ್ಪಡುವುದಿಲ್ಲ.

೫. ೧೭ ಬಿಲಿಯನ್ ಡಾಲರ್ ಗಳನ್ನು ಆಂಕರ್ ಬೇಬೀಸ್ ಎನ್ನುವ ದರ್ಜೆಯ ಅಮೇರಿಕಾದಲ್ಲಿ ಹುಟ್ಟಿ ಬೆಳೆಯುವ ಮಕ್ಕಳ ಶೈಕ್ಷಣಿಕ ಸೌಲಭ್ಯಗಳಿಗಾಗಿ ಮತ್ತದೇ ಬೇನಾಮೀ ಮಧ್ಯವರ್ತಿಗಳ ಸಹಯೋಗದೊಂದಿಗೆ ವ್ಯಯಿಸಲಾಗುತ್ತದೆ

೬. ಪ್ರತಿನಿತ್ಯ ೩ ಮಿಲಿಯನ್ ಡಾಲರ್ ಗಳನ್ನು ಅಪರಾಧಿಗಳು ಮತ್ತು ಆಪಾದಿತರ ಶಿಕ್ಷೆಗೆ ಗುರಿಪಡಿಸುವ ಕೆಲಸಗಳಿಗಾಗಿ ಬೇನಾಮಿ ಕೈಗಳ ಸಹಾಯದೊಂದಿಗೆ ಖರ್ಚುಮಾಡಲಾಗುತ್ತದೆ. http://transcripts.cnn.com/TRANSCRIPTS/0604/01/ldt.01.html

೭. ಖೈದಿಗಳಲ್ಲಿ ೩೦ ಪ್ರತಿಶತ ಬೇನಾಮಿ ಖೈದಿಗಳಿದ್ದಾರೆ ಎಂಬುದು ಬಹಳ ಜನರಿಗೆ ತಿಳಿದಿಲ್ಲ http://transcripts.cnn.com/TRANSCRIPTS/0604/01/ldt.01.html

೮. ಅಮೇರಿಕಾದ ತೆರಿಗೆದಾರರಿಂದ ವಸೂಲಾದ ಹಣದಲ್ಲಿ ೯೦ ಬಿಲಿಯನ್ ಡಾಲರ್ ಗಳು ಬೇನಾಮಿ ಜನರ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಕೆಲಸಕ್ಕೆ ಖರ್ಚಾಗುತ್ತವೆ.

೯. ಬೇನಾಮಿ ಖಾತೆಗಾಗಿ ೨೦೦ ಬಿಲಿಯನ್ ಡಾಲರ್ ಗಳನ್ನು ಅಮೇರಿಕಾದ ಕೂಲಿಖಾತೆಯನ್ನು ಹತ್ತಿಕ್ಕಿ ಬಳಸಲಾಗುತ್ತದೆ. ref : http://transcripts.cnn.com/TRANSCRIPTS/0604/01/ldt.01.html

೧೦. ಅನೈತಿಕತೆಯಿಂದ ದೇಶವಾಸಿಗಳಾಗಿರುವ ಜನರ ಸಂಖ್ಯೆ ಅಮೇರಿಕಾದ ಮೂಲನಿವಾಸಿಗಳ ಹಾಗೂ ಬೇನಾಮಿ ಮೂಲನಿವಾಸಿಗಳ ಸಂಖ್ಯೆಯ ಎರಡೂವರೆ ಪಟ್ಟು ದೊಡ್ಡದಿದ್ದು ಮುಂಬರುವ ವರ್ಷಗಳಲ್ಲಿ ಅಮೇರಿಕಾಕ್ಕೆ ವಲಸೆಬಂದಿರುವರೆಂದು ಘೋಷಿಸಲ್ಪಟ್ಟ ಬೇನಾಮಿ ಜನಸಂಖ್ಯೆಲ್ಲಿ ಮಕ್ಕಳು-ಮರಿ ಅಂತ ಬೆಳೆದು ಆ ಖಾತೆಯಲ್ಲಿ ನಡೆಯಬಹುದಾದ ಅವ್ಯವಹಾರಗಳು ಇನ್ನೂ ಜಾಸ್ತಿಯಾಗುತ್ತವೆ. ref: http://transcripts.cnn.com/TRANSCRIPTS/0606/12/ldt.01.html

೧೧. ೨೦೦೫ ರಲ್ಲಿ ಸರಿಸುಮಾರು ೪ ರಿಂದ ೧೦ ಮಿಲಿಯನ್ ಅನಧಿಕೃತ ಜನರ ಸೇರ್ಪಡೆ ಅಮೇರಿಕಾದ ದಕ್ಷಿಣಭಾಗದಿಂದಾಗಿದ್ದು ಅದರಲ್ಲಿ ೧೯,೫೦೦ ವ್ಯಕ್ತಿಗಳು ಭಯೋತ್ಫಾದಕ ದೇಶಗಳಿಗೆ ಸೇರಿದವರಾಗಿದ್ದಾರೆ. ಮಿಲಿಯನ್ ಟನ್ ಗಳಷ್ಟು ಕೊಕೈನ್, ಮಾರಿಜುವಾನಾ, ಹೇರಾಯ್ನ ಮೊದಲಾದ ಮಾದಕ ಪದಾರ್ಥಗಳು ದೇಶದೊಳಕ್ಕೆ ಸಾಗಿಸಲ್ಪಟ್ಟಿವೆ Ref : Homeland Security Report: http://tinyurl.com/t9sht

೧೨. ಅನಧಿಕೃತವಾಗಿ ಉಳಿದಿರುವ ವಿದೇಶೀಯರನ್ನು ದೇಶದ ಹೊರಕ್ಕೆ ಸಾಗಹಾಕಲು ಒಟ್ಟೂವೆಚ್ಚ ಸುಮಾರು ೨೦೬ ರಿಂದ ೨೩೬ ಬಿಲಿಯನ್ ಡಾಲರ್ ಗಳು ಅಥವಾ ವಾರ್ಷಿಕ ೪೧ ರಿಂದ ೪೬ ಬಿಲಿಯನ್ ಡಾಲರ್ ಗಳು ಬೇಕಾಗಬಹುದೆಂದು ’ದಿ ನ್ಯಾಷನಲ್ ಪಾಲಿಸಿ ಇನ್ಸ್‍ಟಿಟ್ಯೂಟ್’ ಅಂದಾಜುಮಾಡಿದೆ. http://www.nationalpolicyinstitute.org/pdf/deportation.pdf

೧೩. ೨೦೦೬ರಲ್ಲಿ ೪೬ ಬಿಲಿಯನ್ ಡಾಲರ್ ಗಳನ್ನು ತಂತಮ್ಮ ದೇಶಗಳಿಗೆ ಈ ಅನಧಿಕೃತ ನಿವಾಸಿಗಳು ಕಳಿಸಿದ್ದು ತಿಳಿದುಬಂದಿದೆ.

೧೪. ದೇಶದಲ್ಲಿ ಅನಧಿಕೃತವಾಗಿ ವಾಸವಿರುವವರ ಇನ್ನೊಂದು ಕೃತ್ಯವೆಂದರೆ ಹತ್ತಿರ ಹತ್ತಿರ ಒಂದು ಮಿಲಿಯನ್ ನಷ್ಟು ಲೈಂಗಿಕ ದುಷ್ಕೃತ್ಯಗಳು ಮತ್ತು ಕೊಲೆಗಳು ಅವರಿಂದಲೇ ನಡೆಸಲ್ಪಟ್ಟಿವೆ.

ಸರಿಯಾಗಿ ಹೇಳಬೇಕೆಂದರೆ ಹಲವು ರಾಷ್ಟ್ರಗಳ ಅನಿವಾಸಿಗಳು ಅಲ್ಲಿಗೆ ಉದ್ಯೋಗಗಳನ್ನರಸಿ ಹೋಗಿರುವುದರಿಂದ ಅಲ್ಲಿರುವ ಬಹಳ ಜನರಿಗೆ ಯಾರು ಯಾರಾಗಿರಬಹುದು ? who is who ? ಎಂಬ ಸಂದೇಹವಿದೆ. ಭಾರದಲ್ಲಿ ಬೇನಾಮಿ ಹೆಸರುಗಳಲ್ಲಿ ಅಡಗಿರುವಂತೇ ಅಲ್ಲಿಯೂ ಬಹಳ ಬೇನಾಮೀ ದೇಶವಾಸಿಗಳು ತಯಾರಾಗಿಬಿಟ್ಟಿದ್ದಾರೆ. ಮನೆಯ ಹೊರಗೆ ಕಾಲಿಟ್ಟರೆ ಎದುರಾಗುವ ವ್ಯಕ್ತಿಯ ಪರಿಚಯ ಗೊತ್ತಿರುವುದಿಲ್ಲ. ಅಲ್ಲಿಯೂ ಕಳ್‍ನೋಟು ಅಂತ ನಾವು ಕರೆಯುವ ಡೂಪ್ಲಿಕೇಟ್ ಡಾಲರ್ ಗಳು ಹೇರಳವಾಗಿ ಹರಿದಾಡಿರುವ ಸಂಭವನೀಯತೆ ಇದೆ. ಯಾವಾಗ ಡೂಪ್ಲಿಕೇಟ್ ಕರೆನ್ಸಿಗಳು ದೇಶವನ್ನು ಸೇರುತ್ತವೋ ಅವುಗಳನ್ನು ಆ ದೇಶದೊಳಕ್ಕೆ ತಳ್ಳಿದ ಧೂರ್ತರು ನಿಧಾನವಾಗಿ ಆಕ್ಟೋಪಸ್ ತಾನು ಆಹಾರವಾಗಿ ಹಿಡಿಯುವ ಜೀವಿಯನ್ನು ಕಬಳಿಸಿದಂತೇ ತಮ್ಮ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತಾರೆ. ಹಣದುಬ್ಬರ ಹಿಡಿತತಪ್ಪಿ ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲಾಗುತ್ತದೆ.

ಇಷ್ಟೆಲ್ಲಾ ಆಗುವಾಗ ದೇಶದ ಆಡಳಿತ ಹತೋಟಿ ಕೈತಪ್ಪಿಹೋಗುವ ಅಥವಾ ಮುಗ್ಗರಿಸುವ ಸಾಧ್ಯತೆ ಇದ್ದೇ ಇರುತ್ತದೆ. ಹಿಂದೊಂದು ಕಾಲಕ್ಕೆ ಸಾಲದಲ್ಲಿ ಭಾರತೀಯರು ಏನನ್ನೂ ಕೊಳ್ಳುತ್ತಿರಲಿಲ್ಲ!

ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲವನು ಮರಳಿ ಕೊಡುವಾಗ ಕಿಬ್ಬದಿಯ
ಕೀಲು ಮುರಿದಂತೆ | ಸರ್ವಜ್ಞ

ಎಂದು ಸರ್ವಜ್ಞ ಹೇಳಿದ್ದಾನೆ. ಸಾಲವೆಂಬುದು ಹೊನ್ನ ಶೂಲ ಎಂದು ಪೂರ್ವಿಕರಲ್ಲಿ ಅನಿವಾರ್ಯತೆಗೆ ಅಲ್ಲಲ್ಲೇ ಕೈಗಡ ಪಡೆದು ಅನುಭವಿಸಿದವರು ತಿಳಿಸಿ ಗಾದೆ ಮಾಡಿದ್ದಾರೆ. ಇವತ್ತಿನ ದಿನಮಾನ ಹಾಗಿಲ್ಲ. ಅಡಂಬರಕ್ಕೆ ನಮಗೊಂದು ಕಾರು ಬೇಕು. ಬಂಗ್ಲೆಯಂತಹ ಮನೆಯೇ ಆಗಬೇಕು. ಮನೆಯೊಳಗೆ ಮನೆಬಳಕೆಗೆ ಸಿಗಬಹುದಾದ ಎಲ್ಲಾ ಯಂತ್ರೋಪಕರಣಗಳೂ ಇರಬೇಕು. ’ಪಕ್ಕದವರಿಗಿಂತ ನಾನೇ ಪರವಾಗಿಲ್ಲ’ ಎನಿಸಿಕೊಳ್ಳಬೇಕು. ಇದು ಇಂದಿನ ನಮ್ಮವರ ಮನೋಗತವಾಗಿದೆ. ಈ ಜನ್ಮ ಚಿಕ್ಕದು ಆದಷ್ಟೂ ಎಂಜಾಯ್ ಮಾಡೋಣ ಎಂಬ ಕುತ್ಸಿತ ಬುದ್ಧಿಯೂ ಇದೆ. ಹಾಗಂತ ಎಲ್ಲರಿಗೂ ಅರ್ಹತೆಯಿಲ್ಲವೆಂದಲ್ಲ. ಆದರೆ ನವಿಲು ಕುಣಿದಾಗ ಕೆಂಬೂತವೂ ಕುಣಿದರೆ ಅದು ನವಿಲಾಗಲು ಸಾಧ್ಯವಿಲ್ಲ. ಜಾಸ್ತಿ ಕುಣಿದರೆ ಜನ ಬೇಸತ್ತು ಕಲ್ಲು ಹೊಡೆದಾರು!

ಅಮೇರಿಕನ್ನರು ಒಂದು ವಿಷಯದಲ್ಲಿ ಸ್ವಲ್ಪ ಧಾರಾಳಿಗಳು. ಅವರು ಪ್ರತಿಯೊಬ್ಬನಿಗೂ ಅವನ ಬದುಕಿಗೆ ಬೇಕಾಗಬಹುದಾದ ಖರ್ಚುವೆಚ್ಚಗಳಿಗಾಗುವಷ್ಟು ಹಣವನ್ನು ಅವನ ವೃತ್ತಿ ಒದಗಿಸುವಂತೇ ನೋಡಿಕೊಳ್ಳುತ್ತಿದ್ದರು. ಒಂದು ಅಂಗಿಗೆ ೨೦೦ ಡಾಲರ್ ಎಂದರೆ " ಯಾಕೆ? " ಎಂಬ ಪ್ರಶ್ನೆ ಅಲ್ಲಿರುವುದಿಲ್ಲ. ಹಾಗೇ ಗಳಿಸು ಹಾಗೇ ವ್ಯಯಿಸು ಎಂಬ ಅನುಮೋದಿತ ಸ್ಥಿತಿ ಅಲ್ಲಿನದು. ನಮ್ಮವರು ಅಲ್ಲಿಗೆ ಹೋದವರು ಅಲ್ಲೇ ಉಳಿಯುವುದು ಅಲ್ಲಿನ ಈ ರಿವಾಜಿಗಾಗಿ. ನಮ್ಮವರು ವ್ಯಯಿಸದೇ ಉಳಿಸಿದ ಡಾಲರ್ ಗಳು ಭಾರತಕ್ಕೆ ಬಂದಮೇಲೆ ಅವರಿಗೆ ಕೂಡಿಟ್ಟ ಹಣವಾಗಿ ನಮ್ಮ ರೂಪಾಯಿಗಳಲ್ಲಿ ಅನುಕೂಲಕರ ಮೊತ್ತವಾಗಿ ಸಿಗುವುದರಿಂದ ಹಾಗೆ ಅಲ್ಲಿ ದುಡಿಯ ಬಯಸುತ್ತಾರೆ. ಇಲ್ಲಿನ ನಮ್ಮ ಸಾಫ್ಟ್‍ವೇರ್ ಕಂಪನಿಗಳು ಎಂಜಿನೀಯರ್ ‍ಗಳಿಗೆ ಜಾಸ್ತಿ ಸಂಬಳ ಕೊಡುತ್ತಿದ್ದುದು ಯಾಕೆ ಎಂದರೆ ಗಳಿಕೆಯ ಮೂರುಭಾಗದಲ್ಲಿ ಒಂದು ಭಾಗಕ್ಕಿಂತಲೂ ಕಮ್ಮಿಭಾಗವನ್ನು ಅವರು ಸಂಬಳವಾಗಿ ವಿನಿಯೋಗಿಸುತ್ತಾರೆ. ಉದಾಹರಣೆಗೆ ವ್ಯಕ್ತಿಯೊಬ್ಬ ಇನ್ಫೋಸಿಸ್ ಗೆ ಕೆಲಸಮಾಡುವಾಗ ಅವನಿಗೆ ೫೦,೦೦೦ ರೂಪಾಯಿಗಳನ್ನು ಸಂಬಳವಾಗಿ ಕೊಟ್ಟರೆ ಅವನ ದುಡಿಮೆಯಿಂದ ಕಂಪನಿಗೆ ದೊರೆಯಬಹುದಾದ ಆದಾಯ ೧,೫೦,೦೦೦ ರೂಪಾಯಿಗಳಿಗಿಂತಾ ಜಾಸ್ತಿ ಇರುತ್ತದೆ!

ಅಮೇರಿಕದ ಜನರಿಗೆ ತಂತ್ರಾಂಶವನ್ನು ಮಾಡುವ ತಲೆಯಾಗಲೀ, ಮಾಡುತ್ತಾ ಕುಳಿತುಕೊಳ್ಳುವ ಕಲೆಯಾಗಲೀ ಅಥವಾ ಮಾಡುವುದಕ್ಕೆ ಬೇಕಾಗುವ ವ್ಯಕ್ತಿಗಳ ಬೆಲೆಯಾಗಲೀ ತಿಳಿದಿಲ್ಲ. ಅವರದು ಏನಿದ್ದರೂ ದುಡಿಸಿಕೊಳ್ಳುವ ರಾಜಗಿರಿ! ಈ ರಾಜಗಿರಿಯಿಂದಾಗಿಯೇ ಭಾರತದ ಎಂಜಿನೀಯರ್ ಗಳು ಮೈಕ್ರೋಸಾಫ್ಟ್ ನಂತಹ ಕಂಪನಿಗಳ ಬೆಳವಣಿಗೆಗೆ ಕಾರಣರಾದರು! ಇದೇ ಕಾರಣದಿಂದ ಭಾರತ ಸಾಫ್ಟ್‍ವೇರ್ ತಂತ್ರಜ್ಞಾನದಲ್ಲಿ ಮುನ್ನಡೆ ಪಡೆಯಿತು ಮತ್ತು ಜಗತ್ತಿನಲ್ಲಿಯೇ ಹೆಸರನ್ನೂ ಮತ್ತು ಆ ಮೂಲದ ಆದಾಯವನ್ನೂ ಗಳಿಸುವ ರಾಷ್ಟ್ರವಾಯ್ತು. ತಂತ್ರಾಂಶದ ಅಭಿವೃದ್ಧಿಯಲ್ಲಿ ಈಗೀಗ ಅಮೇರಿಕಾ ಕಡೆಯ ಪ್ರಾಜೆಕ್ಟ್ ಗಳು ಮುಗಿದು ಐರೋಪ್ಯ ರಾಷ್ಟ್ರಗಳ ಪ್ರಾಜೆಕ್ಟ್ ‍ಗಳು ನಡೆಸಲ್ಪಡುತ್ತಿವೆ. ಹೀಗಾಗಿ ಕೆಲವು ಕಂಪನಿಗಳು ಅಮೇರಿಕಾ ಕೆಲಸ ಕೊಡದಿದ್ದರೂ ಬದುಕಿಕೊಂಡಿವೆ! ಆದರೂ ಪೆಟ್ರೋಲ್ ದರದಲ್ಲಿ ಹೆಚ್ಚಳವಾದಾಗ ಪರೋಕ್ಷವಾಗಿ ಎಲ್ಲಾ ವಸ್ತು-ವ್ಯವಸ್ಥೆಗಳಲ್ಲಿ ಹೆಚ್ಚಿನ ಖರ್ಚು ಹೇಗೆ ಅನಿವಾರ್ಯವೋ ಹಾಗೇ ಜಾಗತಿಕ ಆರ್ಥಿಕ ಹಿನ್ನಡೆ ಎಂಬ ಬೋರ್ಡಿನಲ್ಲಿ ಕೆಲಸಗಳೂ ಕಮ್ಮಿಯಾಗುವುದರಿಂದ ಭಾರತೀಯ ಮೂಲದ ಕಂಪನಿಗಳಿಗೂ ಅದರ ಬಿಸಿ ತಟ್ಟಿದೆ; ತಟ್ಟುತ್ತದೆ. ಆಡಂಬರವನ್ನು ಬಿಟ್ಟು ಇದ್ದುದರಲ್ಲೇ ಪ್ರಸನ್ನತೆಯ ಬದುಕು ಬದುಕಿರುವ ಜನರಿಗೆ, ಕ್ರೆಡಿಟ್ ಕಾರ್ಡ್ ಸಂಸ್ಕೃತಿಯನ್ನು ಮರೆತು ನಿರಾಳ ಬದುಕಿಗೆ ಆತುಕೊಂಡವರಿಗೆ ತಲೆಮೇಲೆ ಕೈಹೊತ್ತು ಕೂರುವ ಪ್ರಮೇಯ ಎಂದಿಗೂ ಬರುವುದಿಲ್ಲ. ಆಸೆ ಅತಿಯಾಗಿ, ಕೊಳ್ಳುಬಾಕತನ ಜಾಸ್ತಿಯಾಗಿ, ಆಕಾಶಕ್ಕೆ ಏಣಿಹಾಕುವ ಆಡಂಬರಿಗಳಾದಾಗ ಆಯತಪ್ಪಿ ಕೆಳಗೆ ಬೀಳುವ ಸಾದ್ಯತೆ ಇದೆ, ಆಸೆ ಇರಲಿ-ಅದು ಆಯ-ವ್ಯಯವನ್ನು ಹೊಂದಿಕೊಂಡಿರಲಿ ಎಂಬುದು ಯುವಕರಿಗೆ ನನ್ನ ಸಲಹೆ.