ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, August 25, 2010

ಬಂದೆಯಾ ಗುರುರಾಯಾ .....ದಯಮಾಡಿಸು ಮಹನೀಯ


ಬಂದೆಯಾ ಗುರುರಾಯಾ .....ದಯಮಾಡಿಸು ಮಹನೀಯ

ಶ್ರಾವಣ ಮಾಸವೇ ಹೀಗೆ! ಒಂದಿಲ್ಲೊಂದು ಹಬ್ಬ, ಸಡಗರ, ಪೂಜೆ ನಡೆದೇ ಇರುತ್ತದೆ. ಅದರಲ್ಲೂ ಹಳ್ಳಿಗಳಲ್ಲಿ ನಿಸರ್ಗದ ಮಡಿಲಲ್ಲಿ ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಬಹುಬೇಗ ಎದ್ದು, ಸುರಿವ ಸೋನೆಮಳೆಯಲ್ಲಿ ಕೊಡೆಹಿಡಿದು ಸಲ್ಸಲ್ಪ ಮೈಗೆ ಹಾರುವ ಮಳೆಯ ಹನಿಗಳನ್ನು ಸಹಿಸಿಕೊಂಡು ದೇವಸ್ಥಾನ, ಮಠ ಇಂತಹ ಜಾಗಗಳಲ್ಲಿ ನಡೆಯುವ ಪೂಜೆ-ಪುನಸ್ಕಾರಗಳಿಗೆ ಹೋಗುವುದು ಬಲು ಹಿತಕರ ಸಂಗತಿ. ಅಲ್ಲಿನ ಹೋಮದ ಧೂಮ, ಕರ್ಪೂರದ ಆರತಿಯ ಪರಿಮಳ, ಬಳಸಿದ ಮಂಗಳ ದ್ರವ್ಯಗಳ ಸುಗಂಧ, ತುಪ್ಪದ ಜ್ಯೋತಿಯಿಂದ ಹೊರಸೂಸುವ ಅಪ್ಪಟ ದೀಪದ ಅಗರು, ಹಲವು ವಿಧದ ಬಣ್ಣ ಬಣ್ಣದ ಹೂಗಳ ಅಲಂಕಾರ, ಥರಥರದ ರಂಗೋಲಿ ಇವನ್ನೆಲ್ಲಾ ನೆನೆಸಿಕೊಂಡರೆ ಒಂದೊಮ್ಮೆ ನಾವೌ ಇಂತಹ ದೃಶ್ಯಗಳನ್ನು ಪ್ರತ್ಯಕ್ಷ ನೋಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಮನಸ್ಸು ಬೇಸರಗೊಳ್ಳುತ್ತದೆ ಎಂದರೆ ತಪ್ಪಲ್ಲ.

ಪ್ರಾಯಶಃ ಇದು ಆಸ್ತಿಕರಿಗೆ ಮಾತ್ರ. ನಾಸ್ತಿಕರಿಗೆ ದೇವರು-ದಿಂಡರ ರಗಳೆಯೇ ಇಲ್ಲ ಅಥವಾ ಅವರ ಲೆಕ್ಕದಲ್ಲಿ ಇದೆಲ್ಲಾ ಒಂದು ರಗಳೆ. ಜೀವನದಲ್ಲಿ ಪೂರ್ವಜ್ನ್ಮದ ಸುಕೃತದಿಂದ ಅಂತಹ ದೊಡ್ಡ ತೊಂದರೆ ಅನುಭವಿಸಿರುವುದಿಲ್ಲ, ಯಾವುದೇ ಕಾಯಿಲೆ-ಕಸಾಲೆಗಳಿಗೆ ಈಡಾಗಿರುವುದಿಲ್ಲ ಮತ್ತು ಅವರು ಮುಟ್ಟಿದ್ದೆಲ್ಲಾ ಹೊನ್ನಾಗುವಂತ ಯೋಗವನ್ನು ಪಡೆದಿರುತ್ತಾರೆ--ಹೀಗಾಗಿ ಅವರಿಗೆ ಈ ಜನ್ಮದಲ್ಲಿ ದೇವರ ಅಸ್ಥಿತ್ವವಾಗಲೀ ಅವಶ್ಯಕತೆಯಾಗಲೀ ಬಂದಿರುವುದಿಲ್ಲ-ಬೇಕಾಗಿರುವುದಿಲ್ಲ. ಯಾವಾಗ ತಿರುಗುವ ಯಂತ್ರ ನಿಂತುಕೊಂಡಿತೋ, ಚಲಿಸುವ ಗಾಲಿ ಹೂತು ಹೋಯಿತೋ, ಮನೆಯಲ್ಲಿ ಅನಾರೋಗ್ಯ, ವಿರಸ, ಆರ್ಥಿಕ ನಷ್ಟ ಉಂಟಾಯಿತೋ ಆ ಘಳಿಗೆಯಿಂದ ನಮ್ಮ ಸರಕಾರೀ ಬಸ್ಸುಗಳ ಬೋರ್ಡು ಬದಲಾದ ಹಾಗೇ ತಾವೂ ಆಸ್ತಿಕರೇ ಎಂಬ ಪೋಸುಕೊಡುತ್ತ ಬರುತ್ತಾರೆ. ದೇವರೆಂಬ ದೇವರಿಗೆ ಇವರ ಬೇರು-ಬಿತ್ತು ಎಲ್ಲಾ ಗೊತ್ತಿರುವುದಿಲ್ಲವೇ ! ಯಾವಾಗ ಆ ಘಳಿಗೆಯಲ್ಲಿ ಮಾತ್ರ ನೆನೆಯ ಬರುತ್ತಾರೋ ಅಂಥವರನ್ನು ಇನ್ನೂ ಪರೀಕ್ಷೆಗೊಳಪಡಿಸುವ ಅದ್ಬುತ ಚೈತನ್ಯವೇ ದೇವರು. ಇಂತಹ ಅರ್ಜೆಂಟಿಗೆ ದೇವರ ದಾಸರಾಗುವವರನ್ನು ನೆನೆದು ನಮ್ಮ ಪೂರ್ವಜರು ’ ಸಂಕಟ ಬಂದಾಗ ವೆಂಕಟರಮಣ’ ಎಂಬ ಗಾದೆ ಮಾಡಿದರು! ನಾಸ್ತಿಕರಲ್ಲಿ ನಾನು ಯಾವಾಗಲೂ ಕೇಳುತ್ತಿದ್ದುದು ಎರಡೇ ಪ್ರಶ್ನೆ- ಮೊದಲನೆಯದು: ಆಕಾಶ ಕಾಯಗಳನ್ನು ಗುರುತ್ವಾಕರ್ಷಣ ಶಕ್ತಿಯಿಂದ ಸರಿಯಾದ ಹಿಡಿತದಲ್ಲಿ ನಿಯಂತ್ರಿಸಿಡುವ ಶಕ್ತಿ ಯಾವುದು ? [ ಹಾಗೆ ಕರೆಯುವ ಆ ಗುರುತ್ವಾಕರ್ಷಣ ಶಕ್ತಿ ಹೇಗೆ ಹುಟ್ಟಿಕೊಳ್ಳುತ್ತದೆ ? ] ಎರಡನೇದು: ಆತ್ಮವೆಂಬ ಚೈತನ್ಯ ದೇಹಕ್ಕೆ ಬರುವ ಮೊದಲು ಎಲ್ಲಿರುತ್ತದೆ? ಯಾವ ರೂಪದಲ್ಲಿರುತ್ತದೆ ? ಸತ್ತಮೇಲೆ ಎಲ್ಲಿಗೆ ಹೋಗುತ್ತದೆ ?

ಜನಸಾಮಾನ್ಯರಲ್ಲಿ ನಾವು ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡರೆ ಸತ್ತದಿನವನ್ನು ದುಃಖದಿಂದ ಶ್ರಾದ್ಧವಾಗಿ ಆಚರಿಸುತ್ತೇವೆ. ಸಾಧು-ಸಂತ, ಸನ್ಯಾಸಿಗಳೂ ಯತಿಗಳೂ ಹುಟ್ಟಿದ ಮತ್ತು ಕಾಲವಾದ ಎರಡೂ ದಿನಗಳು ನಮಗೆ ಸಂಭ್ರಮಾಚರಣೆಯ ದಿನಗಳೇ ಆಗಿರುತ್ತವೆ. ಯಾಕೆಂದರೆ ಮಹಾತ್ಮರ ಹುಟ್ಟು ಮತ್ತು ಸಾವುಗಳೇ ಹಾಗೆ. ಅವರೆಲ್ಲ ಕಾರಣವಿಲ್ಲದೇ ಹುಟ್ಟುವುದೂ ಇಲ್ಲ, ಕಾಲವಾಗುವುದೂ ಇಲ್ಲ! ಹಾಗಾದರೆ ಅವರ ಹುಟ್ಟು-ಸಾವಿಗೆ ಏನುಕಾರಣ ಎಂದು ಅಂದಾಜಿಸಹೊರಟರೆ ನಮಗೆ ಸಿಗುವ ಸಾಮಾನ್ಯ ಉತ್ತರ ’ಜಗದೋದ್ಧಾರ’ ಅರ್ಥಾತ್ ಜಗತ್ತಿನ ಕೆಲವು ಭೂ ಪ್ರದೇಶಗಳಲ್ಲಿ ತಮ್ಮ ಕಾರ್ಯವನ್ನು ಹಮ್ಮಿಕೊಂಡು ಜನರಿಗೆ ಒಳಿತನ್ನು ಮಾಡಲೋಸುಗ ಅವರು ಅಂಶಾಂಶಾವತಾರಿಗಳಾಗಿ ಭೂಮಿಯ ಮೇಲೆ ಅವತರಿಸುತ್ತಾರೆ. ಹೀಗೆ ಅವತರಿಸಿದ ಆ ಮಹನೀಯರು ಒಂದಷ್ಟು ಕಾಲ ಭುವಿಯಲ್ಲಿದ್ದು ಅಲ್ಲಿ ತಮ್ಮ ಸೇವೆಗೈದು ಪೂರ್ವನಿಗದಿತ ಸಮಯಕ್ಕೆ ಸರಿಯಾಗಿ ದೇಹಾಂತ್ಯವನ್ನು ಕಾಣುತ್ತಾರೆ. ಅವರ ಆ ಭೌತಿಕ ಕಾಯದಿಂದ ಅವರ ಆತ್ಮ ಹೊರಟು ನಡೆದರೂ ಅವರ ಪಾರ್ಥಿವ ಶರೀರವನ್ನು ಸಮಾಧಿಮಾಡಿದ ಸ್ಥಳದಲ್ಲಿ ಅವರ ತಪದ ಪ್ರಭೆ ಅಡಗಿರುತ್ತದೆ. ಸಮಾಧಿಯಲ್ಲಿರುವ ಅವರ ಭೌತಿಕ ಶರೀರದ ಅವಶೇಷಗಳು ನಾವಿವತ್ತು ಹೇಳುವ ಕಾಸ್ಮಿಕ್ ರೇಡಿಯೇಶನ್ ಉಂಟುಮಾಡುತ್ತಿರುತ್ತವೆ. ಹೀಗೇ ಕಾಲವಾದ ಸನ್ಯಾಸಿ ಜನರ ನೆನಪಿನಲ್ಲಿ ಅವರು ಸಮಾಧಿಸ್ಥರಾದ ಆ ಮಿತಿಯಂದು ಪ್ರತೀ ವರ್ಷ ಅವರ ಯತಿಶ್ರಾದ್ಧವನ್ನು ವಿದ್ವಜ್ಜನರು ಸೇರಿ ವಿಧಿವತ್ತಾಗಿ ವೇದಮಂತ್ರಗಳೊಂದಿಗೆ ಆಚರಿಸುತ್ತಾರೆ-ಇದೇ ’ಆರಾಧನೆ’ ಎಂದು ಕರೆಸಿಕೊಳ್ಳುತ್ತದೆ.



ನಮ್ಮ ಇಂದಿನ ಈ ಯುಗದಲ್ಲಿ ಒಂದೆರಡು ಸನ್ಯಾಸಿಗಳ ಸಜೀವ ಸಮಾಧಿಗಳು ನಮಗೆ ನೋಡ ಸಿಗುತ್ತವೆ. ಒಂದು ಶೃಂಗೇರಿಯ ಶ್ರೀ ವಿದ್ಯಾಶಂಕರ ದೇಗುಲ.ಸರಿಸುಮಾರು ಹನ್ನೆರಡನೇ ಶತಮಾನದ ಅಂತ್ಯಭಾಗದಲ್ಲಿ ನೂರಾ ಐದು ವರ್ಷಗಳ ವರೆಗೆ ದೇಹದಿಂದಿದ್ದ ಶ್ರೀ ವಿದ್ಯಾಶಂಕರ ಮಹಾಸ್ವಾಮಿಗಳು ತಪಸ್ಸಿನಲ್ಲಿ ಬಹಳ ಉತ್ತುಂಗಕ್ಕೆ ಏರಿದವರು. ಅವರ ನಂತರದಲ್ಲಿ ಬಂದ ಶ್ರೀ ವಿದ್ಯಾರಣ್ಯ ಮಹಾಮುನಿಗಳು [ಹಂಪೆ ಮತ್ತು ವಿಜಯನಗರಕ್ಕೆ ಕಾರಣೀಭೂತರಾದವರು] ವಿದ್ಯಾಶಂಕರ ದೇಗುಲವನ್ನು ಕಟ್ಟಿಸಿದರು ಎನ್ನುತ್ತವೆ ಶೃಂಗೇರಿ ಮಠದ ದಾಖಲೆಗಳು. ಇಲ್ಲಿನ ವಿಶೇಷವೆಂದರೆ ಸೂರ್ಯರಶ್ಮಿ ಒಂದೊಂದು ಋತುವಿನಲ್ಲೂ ಅಲ್ಲಿರುವ ವಿವಿಧ ಮಧ್ಯಭಾಗದ ಬಾಗಿಲು ಮತ್ತು ಕಿಟಕಿಗಳ ಮೂಲಕ ಹಾದು ದೇವಸ್ಥಾನದ ಒಳಗೆ ಹೋಗಿ ಲಿಂಗವನ್ನು ದರ್ಶಿಸುತ್ತವೆ, ಇಲ್ಲಿನ ಹನ್ನೆರಡು ಕಂಬಗಳು ಹನ್ನೆರಡು ರಾಶಿಗಳನ್ನು ಬಿಂಬಿಸುತ್ತವೆ. ವಿದ್ಯಾ ಶಂಕರರಿಗೆ ನಮಸ್ಕರಿಸಿ ಇನ್ನೊಬ್ಬ ಮುನಿಯ ಬಗ್ಗೆ ತಿಳಿಯೋಣ.

ಮತ್ತೊಂದು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಂದಿರ. ತಮ್ಮ ಸಾಧನೆ ಮುಗಿದ ಮೇಲೆ ಅರೆಘಳಿಗೆಯೂ ನಿಲ್ಲದ ಈ ಮುನಿಜನ ತಮ್ಮ ಸ್ವ ಇಚ್ಛೆಯಿಂದ ಸಮಾಧಿಯ ಆಳದಲ್ಲಿ ಪದ್ಮಾಸೀನರಾಗಿ ಕುಳಿತು ಮೇಲೆ ತಮ್ಮನ್ನು ಮುಚ್ಚಿಬಿಡುವಂತೆ ತಮ್ಮ ಶಿಷ್ಯಂದಿರಿಗೆ ಆಜ್ಞಾಪಿಸುತ್ತಾರೆ. ಇದು ಶಿಷ್ಯಂದಿರನ್ನು ಚಣಕಾಲ ದುಃಖಕ್ಕೆ ಈಡುಮಾಡಿದರೂ ಗುರುವಾಜ್ಞೆಯನ್ನು ಮೀರಲಾಗದ ಶಿಷ್ಯರು ಹಾಗೆ ಮಾಡುತ್ತಾರೆ. ಅಂತಹ ಕೊನೇಘಳಿಗೆಯಲ್ಲಿ ಗುರು-ಶಿಷ್ಯರ ಮಾತುಕತೆ ನಡೆದು ಶಿಷ್ಯರ ಅನುವು-ಆಪತ್ತಿನಲ್ಲಿ ಗುರುವು ಸಹಕರಿಸುವುದಾಗಿ ಭರವಸೆ ನೀಡುತ್ತಾರೆ. ಇಂತಹ ಹೃದಯವಿದ್ರಾವಕ ಸನ್ನಿವೇಶದಲ್ಲಿ ಸಮಾಧಿಸ್ಥರಾಗುವ ಮುನಿಜನರು ತಮ್ಮ ದಿವ್ಯಚೈತನ್ಯದಿಂದ ಬಹುಕಾಲ ಅಲ್ಲಿ ಸುಪ್ತಸ್ಥಿತಿಯಲ್ಲಿ ನೆಲೆಸಿ ಭಕ್ತರನ್ನು ಹರಸುತ್ತಿರುತ್ತಾರೆ. ಈ ದಿವ್ಯ ಚೈತನ್ಯ ಸ್ವರೂಪೀ ಮುನಿಜನರು ಕಾಲವಾದ ದಿನವನ್ನು ಹಬ್ಬದ ರೀತಿ ಆಚರಿಸುವುದೇ ಪುಣ್ಯ.


ಬಹುತೇಕರಿಗೆ ಗುರುವಾಗಿ, ಬಹಳ ಜನಪ್ರಿಯರಾಗಿ, ಜನರ ಭಾವನೆಗಳಿಗೆ ತ್ವರಿತ ಸ್ಪಂದಿಸಿದ್ದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ೩೩೯ನೇ ಆರಾಧನೆ ಇಂದು ನಡೆಯುತ್ತಿದೆ. ಅಂದರೆ ಇಂದಿಗೆ ೩೩೯ ವರ್ಷಗಳ ಹಿಂದೆ ಗುರುರಾಯರು ಬದುಕಿದ್ದರು, ನಮ್ಮಂತಹ ಜನರೊಟ್ಟಿಗೆ ಮನುಷ್ಯದೇಹದಿಂದ ತಿರುಗಾಡುತ್ತ ಜಪತಪಾದಿ ಹಲವು ಅನುಷ್ಠಾನದಲ್ಲಿದ್ದರು. ಆದರೆ ನಾವೇ ಹತಭಾಗ್ಯರು-ಅವರನ್ನು ನೇರವಾಗಿ ನೋಡಲಿಲ್ಲ, ಒಂದೊಮ್ಮೆ ನೋಡಿದ್ದರೂ ನಮಗದರ ಅರಿವಿಲ್ಲ! ಬದುಕಿದ್ದಾಗಲೇ ಸಮಾಧಿಮಾಡಿಸಿಕೊಂಡರೂ ತದನಂತರವೂ ಜನರಿಗೆ ಅಲ್ಲಿಂದಲೇ ಸಹಾಯ ಹಸ್ತನೀಡಿದ ಗುರುವು ತನ್ನ ವೈಯಕ್ತಿಕ ಬದುಕನ್ನ ಕಡೆಗಣಿಸಿ ಸಮಾಜಕ್ಕಾಗಿ ತನ್ನ ಬದುಕನ್ನು ಧಾರೆ ಎರೆದಿದ್ದಾರೆ. ತನ್ನ ಅನುಪಸ್ಥಿತಿಯಲ್ಲಿ ಬೇಸರಗೊಂಡು ಬಾವಿಗೆ ಹಾರಿ ಪ್ರಾಣತೆತ್ತ ಪೂರ್ವಾಶ್ರಮದ ಸಹಧರ್ಮಿಣಿಗೆ ಮೋಕ್ಷವನ್ನು ಕರುಣಿಸಿದ್ದಾರೆ. ಲೌಕಿಕದ ಹಲವು ಜನರಿಗೆ ಇದೆಲ್ಲಾ ಅರ್ಥವಿಹೀನವೆನಿಸಿದಂತೆ ಕಂಡರೂ ಸನ್ಯಾಸಿಗಳಿಗೆ ಅವರ ಆತ್ಮಜ್ಞಾನ ಎಲ್ಲವನ್ನೂ ಹೇಳುತ್ತದೆ. ಯಾವುದನ್ನು ತೊರೆಯಲಾಗದೋ ಅಂತಹ ವ್ಯಾಮೋಹವನ್ನೇ ಹಿಂದಕ್ಕೆ ಹಾಕಿ ತಾನು ಮುನ್ನಡೆದರು ಶ್ರೀ ರಾಘವೇಂದ್ರರು.

ಹಲವಾರು ಜನರು ವಿವಿಧ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತ ಅವರನ್ನು ನೆನೆದು ಫಲವನ್ನು ಪಡೆದಿದ್ದಾರೆ. ಇಂತಹ ಸದ್ಗುರುವಿನ ಸ್ಮರಣೆ ಇವತ್ತಿನ ಭಕ್ತಿಸಿಂಚನದಲ್ಲಿ-

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ಋತಾಯಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||


ತುಂಗೆಯ ದಡದಲಿ ಮನೆಮಾಡಿಹ
ಮಹನೀಯ ಮುನಿಯೆ ನಿನ್ನನು ನೆನೆವೆ
ಅಂಗಳದಲಿ ಚಿತ್ರವು ಎದುರಾಗಲು
ಒಮ್ಮೆ ನಿನಗೆ ನಾ ಕೈಮುಗಿವೆ

ಮಂಚಾಲೆಯ ಆ ಊರಲಿ ನೆಲೆಸುತ
ಸಂಚಿತ ವ್ಯಾಧಿಗಳನು ಕಳೆದೆ
ಅಂಚೆಯ ತೆರದಲಿ ಭಕುತರ ದೂರನು
ಕೊಂಚವೂ ಬಿಡದೆ ಆಲಿಸುವೆ

ವೀಣಾಗಾನ ವಿನೋದನೆ ನುತಿಸಲು
ತ್ರಾಣವು ಯುಕ್ತಿಯು ನಮಗಿಲ್ಲ
ಪ್ರಾಣದೇವನೆಂದೆನಿಸಿದ ಗುರುವರ
ಗಾಣದ ಎತ್ತುಗಳ್ ನಾವೆಲ್ಲ !

ಜನನೊಂದರು ಸ್ವೀಕರಿಸೆ ಸಮಾಧಿಯ
ಮನಬೇಗುದಿ ತಾಳದೆ ಅಂದು
ಅನುದಿನ ಜನಸಮುದಾಯವ ಹರಸುವ
ಘನಮಹಿಮನೆ ಜಯನಮೋ ಎಂದು

ಆರಾಧಿಸುವೆವು ಭಾವ ತರಂಗದಿ
ನಾರಯಣ ರೂಪನೆ ನಮನ
ಕಾರಣಗಳ ನೀ ಹೇಳದೆ ಮನ್ನಿಸು
ಘೋರದುರಿತಗಳ ಕಳೆದು ದಿನಾ

ಬ್ರಹ್ಮಾನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿ ಲಕ್ಷ್ಯಮ್ |
ಏಕಂ
ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ
ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||