ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್
ಮಂಗನ ಕೈಲಿ ಮಾಣಿಕ್ಯ ಕೊಟ್ಟರೆ
ಅಂಗಕೆ ಒರೆಸಿ ನೋಡಿತದು
ಕಂಗಳಿಗೇನೂ ಕಾಣದೆ ಇರಲು
ಮುಂಗಡೆಗೆಲ್ಲೋ ಎಸೆಯಿತದು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ಪ||
ಬೆಂಗಳೂರ ಜನ ಮೊಬೈಲು ಸಿಕ್ಕರೆ
ಪುಂಗಿಯ ಮುಂದಿನ ಹಾವಂತೇ
ತಿಂಗಳ ಬೆಳಕಲೋ ಬಿರುಬಿಸಿಲಲ್ಲೋ
ಭಂಗವಿರದೆ ಮಾತನಾಡುವರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ೧ ||
ಬಂಗಾಳಿಗಳು ಬಿಹಾರಿಗಳು ತಾವ್
ಸಂಘವ ಕಟ್ಟಿ ಬಂದಿಹರು
ನಂಗಳಜನಗಳಿಗಿಲ್ಲದ ಕೆಲಸವ
ತಿಂಗಳೊಳಗೆ ಗಿಟ್ಟಿಸುತಿಹರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ೨ ||
ರಂಗಿನ ನಾರಿಯರೆಲ್ಲರು ರಂಜಿಸಿ
ಮುಂಗಡ ಸೇರುತ ಮಾಲ್ಗಳಲಿ
ತಂಗಿತಮ್ಮ ಬಳಗವ ಕರೆದೆಳೆಯುತ
ನಿಂಗೇನ್ ನೋಡು ಎನ್ನುತಲಿಹರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ೩ ||
’ಮಂಗಳ ಮುಖಿ’ಯರು ಕಂಡೆಡೆ ಚಾಚುತ
ಹಿಂಗೇನಾವಿರೋದು ಎನ್ನುತಲಿ
ಚಂಗನೆ ಜಿಗಿಯುತ ಹಲವರ ತಟ್ಟುತ
ಹೆಂಗಾದರೂ ಮಾಡಿ ಕೀಳುವರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ೪ ||
ಸಂಘಟಕರು ಕರೆಯೋಲೆಯ ಮುದ್ರಿಸಿ
ಬೆಂಗಡೆಯಲಿ ದೇಣಿಗೆ ಕೂಪನ್
ಮಂಗಳಮೂರುತಿ ಕೂರಿಸುವುದಕೆನೆ
ಅಂಗಳದಲಿ ಕರೆಯುತಲಿಹರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ೫ ||
ಅಂಗಿ ಪ್ಯಾಂಟನು ಕಿತ್ತೆಳೆದಾಡುತ
ನಂಗೇನ್ಕಮ್ಮಿ ಮಂತ್ರಿಯಮಾಡಿ
ಮಂಗನಮಾಡಿದಿರೆನ್ನುತ ಬೆಂಕಿಯ
ಕಂಗೆಡಿಸಲು ಹಚ್ನೋಡಿದರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ೬ ||
ಕಾಂಗೈ ದಳಗಳು ಕಮಲವ ಮುದುಡಿಸೆ
ಭಾಂಗೀಕಟ್ಟಲು ಶುರುವಿಟ್ಟು
ಸಾಂಗೋಪಾಂಗದಿ ನೆಂಟರೇ ಮೊದಲಲಿ !
ಮ್ಯಾಂಗೋ ಜೂಸನು ಕುಡಿದಿಹರು ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ೭ ||
ಮಂಗಳಕರುಮಾರಮ್ಮನ ಬೇಡುತ
ಹೆಂಗೋ ಮುಗಿಸಿರೆ ಸಂಪುಟವ
ಹಿಂಗೇ ಆದರೆ ನಮ್ ಸಂಪಂಗಿಯ
ಹೆಂಗ್ಬಿಡ್ತಾರೆಂದ್ರು ಕೋಲಾರದಲಿ ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ೮ ||
ಅಂಗದ ಜಾಂಬವ ಹನುಮರು ಜಿಗಿದರು
ಅಂಗಾಂಗಕೆ ಮಸ್ಸಾಜಿರದೇ !
ಹೆಂಗೈತೊಮ್ಮೆ ನೋಡಿರಿ ಎಂದರು
ಹಿಂಗಡೆ ಬೇರೆ ತೋರಿಸುತ ! ಹೋಯ್ |
ಕೋಲು ಕೋಲಣ್ಣ ಕೋಲು ಬಣ್ಣದ್ ಕೋಲೆ ಹೋಯ್ || ೯ ||