ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 23, 2010

’ಮಳೆಗಾಲದ ಒಂದು ದಿನ’


’ಮಳೆಗಾಲದ ಒಂದು ದಿನ’

ಬಹಳ ಜನ ಸೇರಿದ್ದರೂ ಮೊದಮೊದಲು ಯಾಕೆಂಬುದು ತಿಳಿಯಲಿಲ್ಲ. ನಂತರ ನನ್ನನ್ನು ಅಜ್ಜಿ-ಅಮ್ಮ ಆಗಾಗ ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡು " ಹುಷಾರಾಗುತ್ತದೆ ಹೆದರಬೇಡ" ಎನ್ನುವಾಗಲೇ ಏನೋ ಅನುಮಾನ ಶುರುವಾಗಿದ್ದು! ಅದನ್ನು ಅರ್ಥೈಸಿಕೊಳ್ಳಲು ಬಹಳ ಸಮಯ ಹಿಡಿಯಲಿಲ್ಲ. ಯಾಕೆಂದರೆ ಅದು ಮೊದಲು ಮನಸ್ಸಿಗೆ ಗೊತ್ತಾಗಿ ಮರೆತಿದ್ದ ವಿಷಯ ಅಷ್ಟೇ !

ಮಳೆಗಾಲ ನಮ್ಮ ಕರಾವಳಿಯಲ್ಲಿ ಬಹಳ ಜೋರು. ಒಮ್ಮೊಮ್ಮೆ ಧೋ ಎನ್ನಹತ್ತಿದರೆ ಬರೋಬರಿ ಮೂರು ನಾಲ್ಕುದಿನಗಳವರೆಗೆ ಬಿಡದೇ ಇರುವ ಮಳೆಯೂ ಇತ್ತು. ವಾರಗಳತನಕ ಸುರಿದೂ ಸುರಿದೂ ಸುರಿದೂ ಬೇಸರಹುಟ್ಟಿಸುವಷ್ಟು ಮಳೆ ಬರುತ್ತಿತ್ತು. ಅಂದಿನ ಆ ಬೇಸರದ ಮಳೆಯ ದಿನಗಳಲ್ಲಿ ಕಾಲಹಾಕಲೇಂದೇ ಯಕ್ಷಗಾನದ ತಾಳಮದ್ದಲೆಯ ರೂಪ ಬಂದಿದ್ದು! ಯಾರಾದರೂ ಒಳ್ಳೆಯ ಮಾತುಗಾರರು ಬಂದ ಸುದ್ದಿ ತಿಳಿದರೆ ಪ್ರಸಂಗ ಯಾವುದೇ ಇರಲಿ ನಾವು ಹೋಗಿ ಅಕ್ಕ ಪಕ್ಕದ ಮನೆಗಳಲ್ಲೋ ದೇವಸ್ಥಾನದಲ್ಲೋ ಅದೆಲ್ಲಿ ತಾಳಮದ್ದಲೆ ನಡೆಯುತ್ತಿತ್ತೋ ಅಲ್ಲಿಗೆ ಧೌಡಾಯಿಸಿ ಕುಳಿತುಕೊಳ್ಳುತ್ತಿದ್ದೆವು. ಆದರೆ ದಿನಂಪ್ರತಿ ಪ್ರಸಂಗ[ತಾಳಮದ್ದಲೆ]ಇರುತ್ತಿರಲಿಲ್ಲ. ಆಗೆಲ್ಲ ಕಥೆ ಹೇಳುವವರನ್ನು ಹುಡುಕುವುದು! ಯಾರು ಚೆನ್ನಾಗಿ ಕಥೆ ಹೇಳುತ್ತಾರೋ ಅವರನ್ನು ಹುಡುಕಿ ದುಂಬಾಲು ಬೀಳುವುದು. ಅಂತೂ ಬ್ಯಾಂಕಿನಿಂದ ಸಾಲಪಡೆದಷ್ಟು ಕಷ್ಟಪಟ್ಟಾದರೂ ಅವರಿಂದ ಕಥೆ ಕೇಳಲೇಬೇಕು! ಇದು ನಮ್ಮ ಸಂಕಲ್ಪ ಸಿದ್ಧಿ!

ಮಳೆಗಾಲದ ನಮ್ಮ ಶಾಲೆಗಳಲ್ಲಿ ದಾಖಲೆ ನಿರ್ಮಿತ ಒಂದು ಕಾಯಂ ಪ್ರಬಂಧವೆಂದರೆ ’ಮಳೆಗಾಲದ ಒಂದು ದಿನ’ ! ಮಕ್ಕಳೇ ನಾಳೆ ಎಲ್ಲರೂ ಪ್ರಬಂಧ ಬರೆದುಕೊಂಡು ಬನ್ನಿ ಎಂದುಬಿಟ್ಟರೆ ನಾವೆಲ್ಲ ಬರೆಯೋದಕ್ಕೆ ಅಷ್ಟಾಗಿ ಗಟ್ಟಿಗರಲ್ಲದ ಕಾಲ ಅದಾಗಿದ್ದರಿಂದ ಬೆಕ್ಕಿಗೆ ಬರೆಹಾಕಿದಂತಾಗುತ್ತಿತ್ತು. " ಹ್ಯಾಗಾದ್ರೂ ತಪ್ಪಿಸ್ಕೊಳ್ಬೇಕಲ್ಲೋ ಸದಾಶಿವ " ಅಂತ ನಮ್ನಮ್ಮೊಳಗೆ ನಾವು ಮಾತಾಡಿಕೊಳ್ಳುತ್ತಿದ್ದೆವು. ಯಾಕೆಂದರೆ ಪ್ರಬಂಧ ಚೆನ್ನಾಗಿರಲಿಲ್ಲವೆಂದರೆ ನಮ್ಮ ಸರ್ ನಮ್ಮನ್ನು ಇತರ ಹುಡುಗರ ಮುಂದೆ ಛೇಡಿಸುವುದಾಗಾಲೀ ಗೇಲಿಮಾಡುವುದಾಗಲೀ ನಮಗೆ ಸತ್ತಷ್ಟಾಗುತ್ತಿತ್ತು, ಮರ್ಯಾದೆವಂತರು ನೋಡಿ! ಅದಕ್ಕೇ ಸಹವಾಸವೇ ಬೇಡ ಅಂತ ಯಾವುದಾದರೂ ಕಾರಣ ಹುಡುಕಿ ರಜಾಗುಜರಾಯಿಸಿಬಿಟ್ಟರೆ ಆಮೇಲೆ ಸರು ಅವರೇ ಕರಿಹಲಗೆಯ ಮೇಲೆ ಬರೆಯಿಸಿಕೊಡುವುದನ್ನು ನಕಲುಮಾಡಿಕೊಂಡರೆ ಸರಿ ಎಂಬುದು ನಮ್ಮ ಅಂಬೋಣ.

ವಿಷಯಕೇಳಿ ! ಮಳೆಗಾಲದ ಒಂದು ದಿನ ಅಂತ ಈಗ ಬರೆಯಲು ಹೇಳಿದರೆ ಒಂದಲ್ಲ, ಮಳೆಗಾಲದ ಸಾವಿರದಿನ ಬೇಕಾದರೂ ಬರೆದು ಕೊಟ್ಟೇವು, ಆದರೆ ಅಂದಿಗೆ ನಮಗದು ಆಗುತ್ತಿರಲಿಲ್ಲ. ಏನು ಬರೆಯಬೇಕೆಂಬುದೇ ತಿಳಿಯುತ್ತಿರಲಿಲ್ಲ. ಅಸಲಿಗೆ ನಾವು ವಿದ್ಯಾವಂತರೇನೋ ಹೌದಾಗಿದ್ದೆವು, ಅಂದರೆ ಪತ್ರಿಕೆಗಳನ್ನು ತಲೆಕೆಳಗಾಗಿ ಹಿಡಿದರೆ ನಮಗೆ ದೂರದಿಂದಲೇ ಗೊತ್ತಾಗುತ್ತಿತ್ತಪ್ಪ ಇನ್ನೇನು ಬೇಕು ಹೇಳಿ ? ಹಾಗಂತ ಕಮ್ಮಿ ಎಂದುಕೊಳ್ಳಬೇಡಿ ನಮ್ಮ ಚಿಕ್ಕಪ್ಪ, ಅಜ್ಜ ಎಲ್ಲಾ ಹೇಳಿದ್ದರು ದಿನಾಲೂ ರೇಡಿಯೋ ವಾರ್ತೆಕೇಳಿ ಲೋಕದ ಎಲ್ಲಾವಿಷಯ ಗೊತ್ತಾಗುತ್ತದೆ ಅಂತ. ನಿಜಹೇಳಲಾ ವಾರ್ತೆ ಮುಗಿದ ತಕ್ಷಣ ಬರುವ ಸಿನಿಮಾ ಹಾಡುಗಳು ನಮ್ಮ ಮನಕದ್ದುಬಿಟ್ಟಿದ್ದವು! ನಮಗೆ ವಾರ್ತೆಗೀರ್ತೆ ಎಲ್ಲಾ ಬೇಕಾಗುತ್ತಿರಲಿಲ್ಲ, ಆದರೆ ಹಾಡು ಕೇಳುವ ಚಟದಿಂದ ರೇಡಿಯೋ ಹತ್ತಿರವೇ ಸುಳುಕಾಡುವುದು ಜಾಸ್ತಿ ಇತ್ತು. ದೊಡ್ಡವರು ಬಂದರೆ ವಾರ್ತೆಕೇಳುವುದನ್ನು ತೋರಿಸುವುದು ಜೋರು! ಇಲ್ಲೂ ಅಷ್ಟೇ-ಅವರು ಬೈಯ್ದರೆ ತಡಕೊಳ್ಳುವ ತಾಕತ್ತು ನಮಗಿರಲಿಲ್ಲ,ಮರ್ಯಾದೆ ಪ್ರಶ್ನೆ ನೋಡಿ-ಅದಕ್ಕೇ ಅವರು ಹೇಳಿದ ಹಾಗೇ ವಾರ್ತೆ ಕೇಳಿದ ಹಾಗೇ ಕೇಳಿ ನಂತರ ಹಾಡು ಶುರುವಾದಾಗ ಸಣ್ಣಗೆ ಎಲೆ ಅಡಿಕೆ ಜೊತೆಗಿರುವ ಸುಣ್ಣದ ಅಂಡೆಯ ಥರದ ಅದೇನನ್ನೋ ತಿರುಗಿಸಿ ಸ್ವಲ್ಪ ಶಬ್ಢ ಜೋರಾಗಿ ಬರುವಂತೆ ಇಟ್ಟುಕೊಳ್ಳುತ್ತಿದ್ದೆವು. ಯಾರಾದರೂ ದೊಡ್ಡವರು ದೊಡ್ಡಬಾಯಿಮಾಡಿದರೆ [ಎನೋ ಕೂಗಿಕರೆದರೆ] ನಮಗೆ ಅನಿರೀಕ್ಷಿತವಾಗಿ ದೊಡ್ಡ ರೋಡ್ ಹಂಪ್ ಸಿಕ್ಕಿದ ಅನುಭವ ! ಹಾಡಿನ ಶಬ್ಢ ಸಣ್ಣಗಾಗಿಬಿಡುತ್ತಿತ್ತು !

ಸುಮ್ಮನೇ ಹೇಳುವುದಕ್ಕಲ್ಲ ದಿ|ಹೈಗುಂದ ಡಾಕ್ಟರು ಎಂದರೆ ನಮ್ಮಲ್ಲಿ ಆಗ ಜನಜನಿತ. ಜನರ ನಡುವೆ ತನ್ನನ್ನು ತೊಡಗಿಸಿಕೊಂಡ, ತೀರಾ ಬದುಕುವುದಕ್ಕೆ ಬೇಕಾಗುವಷ್ಟು ಮಾತ್ರ ಶುಲ್ಕ ಪಡೆದು ತುಲನಾತ್ಮಕ ನಾಡಿ ಪರೀಕ್ಷೆಯೇ ಮೊದಲಾದ ಕೆಲವು ಕ್ರಮಗಳಿಂದ ರೋಗಿಗಳ ರೋಗವಾಸಿಮಾಡುವ ಸೇವಾಭಾವನೆಯ ಆಯುರ್ವೈದ್ಯ ಅವರಾಗಿದ್ದರೂ ಪ್ರಸಂಗದ ಅರ್ಥ ಹೇಗೆ ಹೇಳುತ್ತಿದ್ದರು ಬಲ್ಲಿರೋ ಕೂತವ ಕೂತೇ ಇರಬೇಕು-ಬಾಯಿ ತೆರೆದುಕೊಂಡು! ಅವರ ಜೊತೆ ಎದುರಿಗೆ ಅಪರೂಪಕ್ಕೆ ಕೆರೆಮನೆ ದಿ|ಮಹಾಬಲ ಹೆಗಡೆಯವರು ಬಂದುಬಿಟ್ಟರೆ ಮುಗಿಯಿತು- ಅಲ್ಲಿ ಬೆಳಗಾಗುವವರೆಗೂ ಹಬ್ಬವೇ! ಕೇಳುವ ಕಿವಿಗೆ ರಸದೌತಣ. ಮಹಾಬಲರು ತಮ್ಮ ತೋಟ ಗದ್ದೆಗಳಲ್ಲೂ ತಿರುಗಾಡುತ್ತ " ನೋಡಿದೆಯಾ ವಿದುರ ಕೌರವನೊಡ್ಡೋಲಗವ......." ಎಂದು ಅಲ್ಲಿ ಹುಟ್ಟಿ ಬೆಳೆದ ಕಳೆಯ ಸಸಿಗಳೆಡೆಗೆ ಅಡ್ಡಡ್ಡ ಕೈತೋರಿಸುತ್ತ ನಡೆಯುತ್ತಿದ್ದರಂತೆ!ಇನ್ನೂ ವಿಶೇಷ ಎಂದರೆ ಬಾಂಬೆಗೋ ಎಲ್ಲಿಗೋ ಹೋಗಿ ಮರಳಿಬಂದವರು ಅಲ್ಲೆಲ್ಲೋ ಊರಕಡೆಯಲ್ಲಿ ಎಳೆನೀರನ್ನು ಕುಡಿದು ನೂರು ರುಪಾಯಿ ನೋಟು ಕೊಟ್ಟು [ಅಂದಿನ ಕಾಲಕ್ಕೆ ನೂರು] ಚಿಲ್ಲರೆ ಪಡೆಯದೇ ಯಕ್ಷಗಾನದ ಹಾಡು ಹೇಳಿಕೊಳ್ಳುತ್ತಾ ಹಾಗೇ ಹೋಗಿದ್ದರಂತೆ! ಅಂದರೆ ಯಕ್ಷಗಾನವನ್ನೇ ತನ್ನ ಉಸಿರಾಗಿ ಅನುಭವಿಸಿದ ಮಹಾನ್ ಕಲಾವಿದರಲ್ಲಿ ಮಹಾಬಲರೂ ಒಬ್ಬರು. ಇಂತಹ ಘಟಾನುಘಟಿಗಳು ಪ್ರಸಂಗ ನಡೆಸಿಕೊಡುವದಿನ ನಾವೆಲ್ಲಾ ಅಲ್ಲಿ ಹಾಜರು! ಮಾರನೇ ದಿನ ಶಾಲೆಯಲ್ಲಿ ಕಣ್ಣಲ್ಲಿ ಆಗಾಗ ಆಗಾಗ ಹಲವು ಕಲಾವಿದರು ಪ್ರಸಂಗದ ಅರ್ಥಹೇಳುವಂತೇ ಭಾಸ!

ಎಲ್ಲೋ ಒಮ್ಮೊಮ್ಮೆ ಗುರು ಮಾಸ್ತರು ಕ್ಲಾಸು ತೆಗೆದುಕೊಂಡರೆ ’ಮಳೆಗಾಲದ ಒಂದುದಿನ’ ಬರೆಯಬೇಕಾಗಿಯೇ ಬರುತ್ತಿತ್ತು. ಈ ಪ್ರಬಂಧ ಇದೆಯಲ್ಲ ಇದನ್ನು ಬರೆಸದ ಶಾಲೆಗಳು ಹಾಗೂ ತರಗತಿಗಳು ಇಲ್ಲವೆಂದರೆ ತಪ್ಪಿಲ್ಲವೇನೋ! ಏನೇನೋ ಸರ್ಕಸ್ಸು ಮಾಡಿ ಅದನ್ನು ಬರೆಯಹೊರಟರೆ ಮತ್ತದೇ ಪ್ರಶ್ನೆ- ಏನಂತ ಬರೆಯಬೇಕು. ಪ್ರಬಂಧದ ಗಂಧ-ಗಾಳಿಯೂ ಇರದ ಜನ ನಾವು, ಅಷ್ಟಿದ್ದೂ ಪ್ರಬಂಧ ಬರೆಯುತ್ತೇವೆಂದು ಹೊರಟರೆ ಸ್ಥಿತಿಗತಿ ಏನಾಗಬೇಡ! ಅವರಿವರ ಹತ್ತಿರ ಕೇಳುವುದು. ಅದೂ ಇದೂ ಸೇರಿಸಿ ಕೊನೆಗೊಮ್ಮೆ ಅದನ್ನು ಪ್ರಬಂಧ ಅಂತ ಕರೆದುಬಿಡುವುದು ನಮ್ಮ ವಿಶ್ವಪ್ರಯತ್ನ! [ಭಗೀರಥ ಪ್ರಯತ್ನಕ್ಕಿಂತ ದೊಡ್ಡದು ಎಂದು ತಿಳಿದುಕೊಳ್ಳಿ]

ಹೀಗೇ ಒಂದು ಮಳೆಗಾಲ. ಹಲಸಿನ ಹಪ್ಪಳ ತಿನ್ನುವ ಕಾಲ! ಹೊರಗೆ ಹನಿಹನಿ ಸೋನೆ ಮಳೆಯಿತ್ತು. ನಾನು ಮತ್ತು ಅಜ್ಜಿ ಅಡಿಗೆಮನೆಯಲ್ಲಿ ಹಲಸಿನ ಹಪ್ಪಳವನ್ನು ತಿನ್ನುವ ಪೂರ್ವ ತಯಾರಿಯಲ್ಲಿ ತೊಡಗಿದ್ದೆವು. ನಾನು ನೋಡುವುದು-ಅಜ್ಜಿ ತಯಾರುಮಾಡುವುದು. ಎರಡು ಹಲಸಿನ ಹಪ್ಪಳ ನಿಗಿನಿಗಿ ಇಂಗಾಳದ[ಕೆಂಡದ] ಒಲೆಯಲ್ಲಿಟ್ಟು ಸುಟ್ಟು ಅವುಗಳ ಎರಡೂ ಮೈಗೆ ಕೊಬ್ಬರಿ ಎಣ್ಣೆ ಸವರಿ ಮೇಲೆ ಕಾಯಿತುರಿ ಇಟ್ಟು ಅಜ್ಜಿ ನನ್ನ ಹತ್ತಿರ ಅದನ್ನು ಕೊಟ್ಟು ಮಹಡಿಯಲ್ಲಿ ಕುಳಿತು ಓದುತ್ತಿದ್ದ ನನ್ನ ಚಿಕ್ಕಪ್ಪನಿಗೆ ಕೊಟ್ಟುಬರಲು ತಾಕೀತು ಮಾಡಿದಳು. ಭಕ್ತಿಯಿಂದ ಅದನ್ನು ಶಿರಸಾವಹಿಸಿ ನಡೆಸಲು ಸುಕುಮಾರನಾದ ನಾನು ಮನೆಯ ಒಳಗಡೆಯ ಮರದ ಏಣಿಯನ್ನು ಹತ್ತಿ ಹೋಗಿ ಅದನ್ನು ಚಿಕ್ಕಪ್ಪನಿಗೆ ಕೊಟ್ಟು ನನ್ನ ಪಾಲಿನ ಹಪ್ಪಳದ ವಸೂಲಿಗೆ ವಾಪಸ್ಸು ಬರುತ್ತಿದ್ದೆ. ಅಲ್ಲೇ ನೋಡಿ ಎಡವಟ್ಟಾಗಿದ್ದು- ಏಣಿಯು ಹೊರ ಕಿಟಕಿಗೆ ಹತ್ತಿರವಿದ್ದುದರಿಂದ ಮಳೆಯ ನೀರಿನ ಸಣ್ಣ ಹನಿಗಳು ಗಾಳಿಗೆ ಕಿಟಕಿ ಮೂಲಕ ಹಾರಿ ಏಣಿಯ ಮೆಟ್ಟಿಲ ಮೇಲೆ ಬಿದ್ದಿದ್ದವು. ಇದನ್ನು ತಿಳಿಯದೇ ಇಳಿಯುತ್ತಿದ್ದ ನಾನು ಏಣಿಯ ತುದಿಯಿಂದ ಕೆಳತನಕ ಎಷ್ಟು ಮೆಟ್ಟಿಲು ಇದೆಯೆಂಬುದನ್ನು ಒಂದೇ ಸಲಕ್ಕೆ ಲೆಕ್ಕಹಾಕಿಬಿಟ್ಟಿದ್ದೆ! ಹಾಗೆ ಬಿದ್ದ ಪರಿಣಾಮ [ಬಿದ್ದ ಎನ್ನಬೇಡಿ-ಮರ್ಯಾದೆ ಪ್ರಶ್ನೆ ಮಾರಾಯರೆ] ಹಣೆಯ ಮೂಲೆಗೆ ಏನೋ ಬಡಿದು ಆಳವಾದ ಗಾಯದ ಜೊತೆಗೆ ನನಗೆ ಪ್ರಜ್ಞೆ ಇರಲಿಲ್ಲ. ಅಷ್ಟು ಮಾತ್ರ ತಿಳಿದಿತ್ತೇ ವಿನಃ ನಂತರದ್ದು ನನಗೆ ಏನೂ ಗೊತ್ತಿರಲಿಲ್ಲ.

ತಿಳಿದಿದ್ದು ಇಷ್ಟು- ನಾನು ಬಿದ್ದಮೇಲೆ ರಕ್ತ ಸುಮಾರು ಹೋಯಿತು. ನಂತರ ಕಂಗಾಲಾದ ಮನೆಯ ಹಿರಿಯರು ಅದು ಹೇಗೋ ಗಾಡಿ ಹಿಡಿದು ಹತ್ತು ಕಿಲೋಮೀಟರ್ ದೂರಕ್ರಮಿಸಿ ಅಡಿಗ ವೈದ್ಯರನ್ನು ಕರೆತಂದರು. ಅಡಿಗ ವೈದ್ಯರು ಬಂದವರೇ ಅದೇನೇನೋ ಚಿಕಿತ್ಸೆ ಮಾಡಿ ಹಣೆಯ ಗಾಯಕ್ಕೆ ಬ್ಯಾಂಡೇಜು ಕಟ್ಟಿ, ನನಗೆ ನೋವು ತಿಳಿಯದಂತೆ ಏನೇನೋ ಮಾಡಿದ್ದರು. ಇದನ್ನೆಲ್ಲ ಕಂಡು ಹೌಹಾರಿ ಹೆದರಿಬಿದ್ದ ನನ್ನ ಅಜ್ಜಿ-ಆಮ್ಮ ಎಲ್ಲಾ ಸೇರಿ ಮಳೆಗೆ ಹಿಡಿಶಾಪ ಹಾಕಿದರಿರಬೇಕು! ಅಂತೂ ನನಗಾದ ಸ್ಥಿತಿ ನೋಡಿ ಅವರು ನನಗೆ ಇನ್ನೇನಾಗುತ್ತದೋ ಎಂಬ ಒಳ ಮನಸ್ಸಿನ ಹೆದರಿಕೆಯಿಂದ " ಹೆದರಬೇಡ ಹೆದರಬೇಡ " ಎನ್ನುತ್ತ ತಲೆನೇವರಿಸುತ್ತಿದ್ದರು. ಅಂತೂ ಕೊನೆಗೊಮ್ಮೆ ನಿರುಂಬಳವಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು! ಆಮೇಲೆ ಸರಿಸುಮಾರು ತಿಂಗಳಕಾಲ ನನ್ನ ಬ್ಯಾಂಡೇಜು ಬಿಡಿಸಿರಲಿಲ್ಲ. ಕೊನೆಕೊನೆಗೆ ಅದಕ್ಕೆ ಮೇಲಿಂದ ಕೊಬ್ಬರಿ ಎಣ್ಣೆ ಬಿಡುತ್ತ ಅದು ತಂತಾನೇ ಜಾರುವಂತೆ ಮಾಡಿದರು. ತಿಂಗಳ ಮೇಲೆ ಅದ್ಯಾವುದೋ ಒಂದು ರಾತ್ರಿ ಮಲಗಿರುವಾಗ ಹಾಸಿಗೆಯಲ್ಲೇ ಅದು ತನ್ನಿಂದ ತಾನೇ ಬಿದ್ದುಹೋಯಿತು. ಮಳೆಗಾಲವನ್ನು ವಿನಾಕಾರಣ ಬೈದರೇ ಹೊರತು ಅದರದ್ದೇನು ತಪ್ಪು!

ಅದಾದಮೇಲೆ ಮಳೆಗಾಲದ ಹಲವು ದಿನಗಳು ಬಂದುಹೋದವು. ಆದರೆ ಬರೆಯಬೇಕಾದ ಆ ಪ್ರಬಂಧಮಾತ್ರ ಹಾಗೆಯೇ ಕುಳಿತಿರುತ್ತಿತ್ತು. ಮಳೆ ಜೋರಾದಾಗ ಮರದಮೇಲೆ ನೆನೆಯುತ್ತ ಕೂರುವ ಮಂಗಗಳು " ಸಾಯ್ಲಿ ಹಾಳಾದ್ ಮಳೆಗಾಲ, ನಾಳೆ ಬೆಳಗಾಗಲಿ ನಾವೆಲ್ಲ ಸೇರಿ ಮನೆ ಕಟ್ಟಿಯೇ ಬಿಡೋಣ " ಎಂದುಕೊಳ್ಳುತ್ತವಂತೆ. ಬೆಳಗಾದಾಗ ಆಹಾರ ಹುಡುಕುವ ಗಡಿಬಿಡಿಯಲ್ಲಿ ರೊಯ್ಯ ರೊಯ್ಯನೆ ಮರದಿಂದ ಜಿಗಿಜಿಗಿದು ಹಾರೋಡಿ ಪರಾರಿ, ಮತ್ತೆ ಮರುರಾತ್ರಿ ಮಳೆಬಂದಾಗ ಅದೇ ಮನೆಕಟ್ಟುವ ಮೀಟಿಂಗು! ಇದರ ಪುನರಾವರ್ತನೆ ಮಳೆಗಾಲ ಮುಗಿಯುವವರೆಗೂ. ಒಂದರ್ಥದಲ್ಲಿ ಮಾಡಬೇಕು ಮಾಡಬೇಕು ಎನ್ನುತ್ತ ಹಾಗೇ ಮುಂದೂಡುವ ಕೆಲಸಗಳಿಗೆ ನಮ್ಮಲ್ಲಿ ಇಂದಿಗೂ ಬಳಸುವ ಗಾದೆ ’ಮಂಗ ಮನೆಕಟ್ಟಿದ ಹಾಗೇ ’ ಅಂತ. ಇಲ್ಲಿ ’ಮಳೆಗಾಲದ ಒಂದುದಿನ’ ಕೂಡ ಮಂಗ ಮನೆಕಟ್ಟಿದ ಹಾಗೇ ಅಲ್ಲವೇ ?