ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, May 25, 2012

ಮಹಾಂತೇಶ್ ಹತ್ಯೆಯನ್ನು ಅಪಘಾತವೆಂದು ಘೋಷಿಸ ಹೊರಟಾಗಲೇ ಅನುಮಾನ !

ಚಿತ್ರಋಣ: ಅಂತರ್ಜಾಲ
ಮಹಾಂತೇಶ್ ಹತ್ಯೆಯನ್ನು ಅಪಘಾತವೆಂದು ಘೋಷಿಸ ಹೊರಟಾಗಲೇ ಅನುಮಾನ !


’ಅನುಮಾನದ ಹುತ್ತ’ ಎಂಬುದು ಸಮಾನ್ಯವಾಗಿ ಬಳಕೆಯಾಗುವ ಪದ. ಯಾಕೆಂದರೆ ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದು ಯಾರಿಗೂ ಮೊದಲೇ ತಿಳಿದಿರುವುದಿಲ್ಲ; ಅದನ್ನು ತಿಳಿದುಕೊಳ್ಳಲು ಯಾವುದೇ ಯಂತ್ರಗಳ ಸಂಶೋಧನೆಗೂ ಯಾರೂ ತೀರಾ ತಲೆಕೆಡಿಸಿಕೊಂಡಿಲ್ಲ. ದೂರ ದರ್ಶಕಗಳು, ದೂರ ಸಂವೇದೀ ಯಂತ್ರಗಳೆಲ್ಲಾ ಇದ್ದರೂ ಜನಸಾಮಾನ್ಯರು ಹೋದೆಡೆಗೆಲ್ಲಾ ಅವುಗಳನ್ನು ಹೊತ್ತೊಯ್ಯುವುದು ಸಾಧ್ಯವಿಲ್ಲವಲ್ಲ? ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳು ಕೆಲಸಮಾಡುತ್ತಿದ್ದರೂ ಅವುಗಳ ಕಾರ್ಯಕ್ಷಮತೆಯಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಇನ್ನೂ ಸರಿಯಾಗಿ ಸಿಗುತ್ತಿಲ್ಲ; ಮಾಸಲು ಮಾಸಲಾಗಿ ಕಾಣುವ ಬಿಂಬಗಳ ಜಾಡು ಹಿಡಿದು ಜಾಲಾಡುವುದು ಕಷ್ಟವಾದಾಗ ಅಪರಾಧಿಗಳಿಗೆ ಅದು ಅನುಕೂಲವಾಗಬಹುದು. ರಾಜಕಾರಣಿಗಳಿಗೂ ಧೂರ್ತರಿಗೂ ಅದು ಪರೋಕ್ಷ ಅನುಕೂಲವನ್ನೇ ಕಲ್ಪಿಸಬಹುದು.  

ಸರಕಾರಿ ಅಧಿಕಾರಿಗಳಿಗೆ ಬೆದರಿಕೆ, ಹತ್ಯೆ ಇತ್ತೀಚೆಗೆ ಬಹಳ ಸಲೀಸಾಗಿ ನಡೆಯುತ್ತಿರುವ ವಿಚಾರ! ದಾಂಡೇಲಿಯಲ್ಲಿ ವಾರದ ಹಿಂದೆ ಎ.ಸಿ.ಎಫ್ ಮದನ್ ನಾಯಕ್ ಅವರನ್ನು ಕ್ಷುಲ್ಲಕ ಕಾರಣಕ್ಕೆ ಹೊಡೆದು ಮುಗಿಸಿದರು. ಅದೇ ರೀತಿ ಬೆಂಗಳೂರಿನ ಜನನಿಬಿಡ ಪ್ರದೇಶವಾದ ಏಟ್ರಿಯಾ ಹೋಟೆಲ್ ಎದುರಿಗೇ ಮಹಾಂತೇಶ್ ಅವರನ್ನು ನೆಲಕ್ಕೆ ಉರುಳಿಸಿಕೊಂಡು ಬಡಿದು ಹಲ್ಲೆ ನಡೆಸಿದ್ದು ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಜೀವಕ್ಕೆ ಬೆಲೆಯೇ ಇಲ್ಲವೇ ಎನ್ನುವಷ್ಟು ಸುಲಭವಾಗಿ ಸೊಳ್ಳೆ ಹೊಡೆದ ರೀತಿಯಲ್ಲಿ ಇಂತಹ ಅಧಿಕಾರಿಗಳನ್ನು ಹೊಡೆಯುವುದನ್ನು ಕಂಡಾಗ ಸರಕಾರೀ ಅಧಿಕಾರಿಗಳಾಗುವವರ ಗತಿ ಮುಂದೇನು ಎಂಬ ಪ್ರಶ್ನೆಕೂಡ ಕಾಡುತ್ತದೆ. ಒಂದುಕಡೆ ರಾಜಕೀಯ ಪ್ರೇರಿತ ಒತ್ತಡಗಳಿಂದ ಎತ್ತಂಗಡಿ ಸಮಸ್ಯೆ-ಅವುಗಳ ಶಮನಕ್ಕೆ ಮತ್ತು ತಮಗೆ ಬೇಕಾದ ಜಾಗಕ್ಕೆ ವರ್ಗಾ ಮಾಡಿಸಿಕೊಳ್ಳಲು ಲಂಚತೆರಬೇಕಾದ ಸಮಸ್ಯೆ, ಇನ್ನೊಂದೆಡೆ ರಾಜಕೀಯ ಇಚ್ಛಾಶಕ್ತಿಗಳ ಕೈವಾಡದಿಂದ ಎದುರಾಗುವ ಪ್ರಾಣ ಭೀತಿ--ಈ ಮೂರರ ನಡುವೆ ಸಾಚಾ ಅಧಿಕಾರಿಗಳ ಸ್ಥಿತಿ ಬಹಳ ಡೋಲಾಯಮಾನ. ಆಡುವುದಕ್ಕಿಲ್ಲ; ಅನುಭವಿಸುವುದು ತಪ್ಪುವುದಿಲ್ಲ!

ದಾಂಡೇಲಿಯಲ್ಲಿ ಮೊಸಳೆ ಪಾರ್ಕ್ ನಿರ್ಮಿಸಿದ್ದನ್ನು ಕೆಲವು ವರ್ಷಗಳ ಹಿಂದೆಯೇ ಕೇಳಿದ್ದೆ. ಅಲ್ಲಿ ಅನೇಕ ಮೊಸಳೆಗಳಿವೆ ಎಂಬುದೂ ಗೊತ್ತಿದ್ದ ವಿಷಯವೇ ಆಗಿತ್ತು. ಆದರೆ ಆ ಪ್ರದೇಶದಲ್ಲಿ ಪೂಜೆ-ಬಲಿ-ಬಾಡೂಟ ಇವುಗಳ ಬಗ್ಗೆ ತಿಳಿದಿರಲಿಲ್ಲ. ಮಹಾರಾಷ್ಟ್ರ ಮೂಲದ ಕೆಲಜನ ಬಲಿಹಾಕಿದ ಕುರಿಯ ಬಾಡೂಟ ನಡೆಸಿ, ಮಿಕ್ಕುಳಿದ ಮಾಂಸವನ್ನು ನದೀಪಾತ್ರದ ಹೊರಗೆ ಚೆಲ್ಲಿ ಮೊಸಳೆಗಳನ್ನು ಕರೆದಿದ್ದಾರೆ. ಮೊಸಳೆಗಳು ಬಂದು ತಿನ್ನುತ್ತಿರುವುದನ್ನು ಅಲ್ಲಿಗೆ ಅನಿರೀಕ್ಷಿತವಾಗಿ ಬಂದ ಮದನ್ ನಾಯಕ್ ಅವರು ಕಂಡಿದ್ದಾರೆ; ಹಾಕಿದವರಿಗೆ ಹಾಗೆ ಹಾಕಬಾರದಿತ್ತು ಎಂದು ಕಿವಿಮಾತು ಹೇಳಿದ್ದಾರೆ. ಎಲ್ಲದಕ್ಕೂ ತಮ್ಮದೇ ಆದ ಧೋರಣೆಯನ್ನು ಕಾಯ್ದೆಯನ್ನೂ ಮಾಡಿಕೊಳ್ಳುವ ಕೆಲವು ಜನ ಇಂತಹ ಸಮಯದಲ್ಲಿ ವಾದಕ್ಕಿಳಿಯುತ್ತಾರೆ. ಮೊಸಳೆ ಪಾರ್ಕಿಗೆ ಸಂಬಂಧಿಸಿದ ಹಿರಿಯ ಅರಣ್ಯಾಧಿಕಾರಿ ತಾನು ಎಂಬುದನ್ನು ಹೇಳಿದಮೇಲೂ "ನೀನ್ಯಾರು ದೊಣ್ಣೆ ನಾಯ್ಕ, ಮಾಡೋಕೆ ಬೇರೇ ಕೆಲಸ ಇಲ್ವಾ?"  ಎಂಬೀ ಥರದ ಮಾತುಗಳು ಹೊರಬಂದಿವೆ. ಮಾತಿಗೆ ಮಾತು ಬೆಳೆದು ತನ್ನ ಖಾಸಗೀ ವಾಹನದಲ್ಲಿ ಕುಳಿತಿದ್ದ ಮದನ್ ನಾಯಕ್ ಅವರನ್ನು ಹೊರಗೆಳೆದು ಜಗಳವಾಡಿ ಹೊಡೆದಿದ್ದಾರೆ. ತಲೆಗೆ, ಎದೆಯ ಭಾಗಕ್ಕೆ ತೀರಾ ಜಾಸ್ತಿ ಎನಿಸುವಷ್ಟು ಪೆಟ್ಟು ತಗುಲಿದ ನಾಯಕರನ್ನು ತ್ವರಿತ ಗತಿಯಲ್ಲಿ ಆಸ್ಪತ್ರೆಗೆ ಸಾಗಿಸುವ ಬದಲು ನಮ್ಮ ಪೋಲೀಸರು ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಿಕೊಂಡು ಮಾಹಿತಿ ಪಡೆದುಕೊಂಡಿದ್ದಾರೆ. ನೋವು ಉಲ್ಬಣಿಸಿ "ತಲೆನೋವು" ಎಂದು ಬಡಬಡಿಸಿದರೂ ಇನ್ನೂ ವಿವರ ಕೇಳುತ್ತಿದ್ದರೇ ಹೊರತು ದವಾಖಾನೆಗೆ ಕರೆದೊಯ್ಯಲಿಲ್ಲ. ತಡವಾಗಿ ಕರೆದೊಯ್ಯುವಷ್ಟರಲ್ಲಿ ಮದನ್ ನಾಯಕ್ ಇಹಲೋಕವನ್ನು ತ್ಯಜಿಸಿದ್ದಾರೆ.     

ಸಂಬಂಧಪಟ್ಟ ಕಡತಗಳಿಗೆ ಕಣ್ಮುಚ್ಚಿ ಸಹಿಮಾಡಲೊಪ್ಪದ ಮತ್ತು ದಾಖಲೆಗಳನ್ನು ಬದಲಾಯಿಸಲು ಅವಕಾಶ ಕೊಡದ ಮಹಾಂತೇಶರ ವಿರುದ್ಧ ಯಾರೋ ಕಿಡಿಕಾರುತ್ತಿದ್ದರೆಂದೂ, ಆಗಾಗ ಧಮಕಿ ಹಾಕುತ್ತಿದ್ದು ಹಿಂದೆ ಮೂರ್ನಾಲ್ಕು ಬಾರಿ ಚಿಕ್ಕಪ್ರಮಾಣದ ಹಲ್ಲೆಗಳು ಮಹಾಂತೇಶ್ ಅವರಮೇಲೆ ನಡೆದಿದ್ದವೆಂದೂ ಕೆಲವು ಬಲ್ಲ ಮೂಲಗಳು ತಿಳಿಸುತ್ತವಾದರೂ, ಯಾರಲ್ಲೂ ಅಧಿಕೃತ ದಾಖಲೆಗಳಾಗಲೀ ಸಾಕ್ಷಿಗಳಾಗಲೀ ಇಲ್ಲ. ಸಹಜವಾಗಿ ಅನೇಕ ಪ್ರಾಮಾಣಿಕ ವ್ಯಕ್ತಿಗಳು ಹೇಳಿಕೊಳ್ಳಲಾಗದಂತಹ ಸನ್ನಿವೇಶಗಳನ್ನು ಹೇಗೋ ನಿಭಾಯಿಸುವಂತೇ ಹಾಗೇ ಮುಂದುವರಿದವರು ಮಹಾಂತೇಶ್. ಮೊನ್ನೆ ಗುನ್ನೆ ನಡೆಯುವ ಕೆಲವು ದಿನಗಳ ಹಿಂದೆ ಕೂಡ ಪ್ರತಿನಿತ್ಯ ಕಾಡುವ-ದೂರವಾಣಿ ಕರೆಗಳು ಬರುತ್ತಿದ್ದು ಅವರು ಖಿನ್ನವದನರಾಗಿದ್ದರು ಎಂದು ಅವರ ಮನೆಯ ಮೂಲಗಳು ತಿಳಿಸುತ್ತವೆ. ಆದರೆ ಯಾರ ಕರೆಗಳು, ಯಾರು ಯಾತಕ್ಕಾಗಿ ಹಾಗೆ ಮಾಡುತ್ತಿದ್ದಾರೆ ಎಂಬುದನ್ನು ಮಹಾಂತೇಶ್ ಯಾರಲ್ಲೂ ಹೇಳಿಕೊಳ್ಳಲಿಲ್ಲ. ಹೇಳಿಕೊಂಡರೂ ಮುಗಿಸುತ್ತಿದ್ದರು; ಹೇಳದೇ ಇದ್ದರೂ ಈಗ ಮುಗಿಸಿದ್ದಾರೆ!  

ದಕ್ಷ ಅರಣ್ಯಾಧಿಕಾರಿಯೋರ್ವರು ನಾಟಾ ಕಳ್ಳಸಾಗಾಣಿಕೆಯಾಗುವುದನ್ನು ಕೇಳಿ ತಿಳಿದು, ರಾತ್ರಿ ಕಾದು ನಿಂತು, ಮಾಲು ತುಂಬಿದ ಲಾರಿಗಳನ್ನು ಹಿಡಿದರೆ, ಕೆಲವೇ ಕ್ಷಣಗಳಲ್ಲಿ ಚರದೂರವಾಣಿಗಳಲ್ಲಿ ಬೇಡದಮಾತುಗಳು ಕೇಳಿಬರುತ್ತವೆ; ಪ್ರಾಮಾಣಿಕ ಅಧಿಕಾರಿಗಳಿಗೆ ಜೀವ ಭಯವನ್ನೊಡ್ಡುವ ರಾಜಕೀಯ ಕುತಂತ್ರಿಗಳು ತಮ್ಮ ಮತ್ತು ತಮ್ಮ ಅನುಯಾಯಿಗಳಿಗೆ ಬೇಕಾದ ಕೆಲಸವನ್ನು ಆ ಮೂಲಕ ಪೊರೈಸಿಕಳ್ಳಲು ಹಿಡಿದ ಮಾಲಿನ ಸಮೇತ ಲಾರಿಗಳನ್ನು ಹಾಗೇ ಬಿಟ್ಟುಬಿಡುವಂತೇ ಆಜ್ಞೆಮಾಡುತ್ತಾರೆ. ಸರಕಾರದ/ಪ್ರಜೆಗಳ ಉಪ್ಪನ್ನವನ್ನು ತಿಂದ ಋಣಕ್ಕೆ ಪ್ರಾಮಾಣಿಕವಾಗಿ ಕೆಲಸಮಾಡುವ ಹಾಗೂ ಇಲ್ಲ, ಮಾಡದೇ ಇರುವ ಹಾಗೂ ಇಲ್ಲ. ಮಾಡಿದರೆ ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಬೇಕು; ಮಾಡದಿದ್ದರೆ ನಾಗರಿಕರಿಂದ ’ನಿಷ್ಪ್ರಯೋಜಕ’ನೆಂಬ ಅವಹೇಳನಕ್ಕೆ ಒಳಗಾಗಬೇಕು. ಪೈಸೆ ತಿನ್ನದೇ ಪ್ರಾಮಾಣಿಕವಾಗಿ ಪಡೆದ ಸಂಬಳದಲ್ಲಿ ಕುಟುಂಬನಡೆಸಿಕೊಂಡು, ವರ್ಗಾವರ್ಗಿಗೆ ಕೊಡುವ ಲಂಚದ ಸಲುವಾಗಿ ಎರಡೆರಡು ವರ್ಷಗಳಿಗೆ ಇಂತಿಷ್ಟು ಎಂದು ದೊಡ್ಡ ಹುಂಡಿ ತಯಾರಿಸಿಟ್ಟುಕೊಂಡು ದುಡಿದ ಪ್ರಾಮಾಣಿಕ ಸಂಬಳದಲ್ಲಿ ಅರ್ಧವನ್ನು ಅದಕ್ಕೆ ಸುರಿಯಬೇಕು!"ನೋಡಪ್ಪಾ ನೀನು ಊಟ ಮಾಡಿದ್ಯೋ ಬಿಟ್ಯೋ ನಮಗದ್ ಬ್ಯಾಡ, ನಮ್ಮ ಹೊಟ್ಟೆಗೆ ಆಹಾರ ಇಡೋದ್ ಕಲೀತಿಯೋ ನಿನಗೂ ಕ್ಷೇಮ, ನಿನ್ನ ಕುಟುಂಬಕ್ಕೂ ಕ್ಷೇಮ" ಎಂಬಂತಹ ಮಾತುಗಳು ಧೂರ್ತ ರಾಜಕಾರಣಿಂದ ಪ್ರಾಮಾಣಿಕ ಅಧಿಕಾರಿಗಳ ಕಿವಿ ತಲುಪಿದಾಗ ’ಬಡವನ ಕೋಪ ದವಡೆಗೆ ಮೂಲ’ ಎನ್ನುವ ರೀತಿಯಲ್ಲಿ ಕೆಟ್ಟ ರಾಜಕಾರಣಿಗಳನ್ನು ಬೇರು ಸಹಿತ ನಿರ್ನಾಮಮಾಡುವ ರೋಷಾವೇಶ ಅಧಿಕಾರಿಗಳ ಒಳತೋಟಿಯಲ್ಲಿ ಹರಿಯುತ್ತದೆ; ಪ್ರಾಮಾಣಿಕತೆಗೆ ಸಿಕ್ಕ ಅಗೌರವಕ್ಕೆ ಅವರ ರಕ್ತ ಕೊತಕೊತ ಕುದಿಯತೊಡಗುತ್ತದೆ. ಆದರೂ ನಿರ್ವಾಹವಿಲ್ಲದೇ ಸಹಿಸಿಕೊಂಡಿರಬೇಕಾಗುತ್ತದೆ; ತನಗಲ್ಲದಿದ್ದರೂ ತನ್ನನ್ನೇ ನಂಬಿದ ಸಂಸಾರಕ್ಕೆ ಆದಾಯಮೂಲ ಬತ್ತಿಹೋಗಬಹುದಾದ ಕಾರಣದಿಂದ ಹೆದರಿ ಸುಮ್ಮನಾಗುತ್ತಾರೆ.  

ಅಧಿಕಾರಿಯೊಬ್ಬರು ನನ್ನಲ್ಲಿ ಹೇಳುತ್ತಿದ್ದರು: ವಿಧಾನಸೌಧದಲ್ಲಿರುವ ಕುರ್ಚಿಗಳೆಲ್ಲಾ ಕಾಸು ಕೇಳುತ್ತವೆ ಎಂದು! ಹರಿದ ಪೈಜಾಮಾದಲ್ಲಿ, ೧೯೮೦ ರಲ್ಲಿ ನಮ್ಮೂರ ಕಡೆಗೆ "ಚುನಾವಣೆಗೆ ನಿಲ್ಲುತ್ತೇನೆ ದಯಮಾಡಿ ಮತನೀಡಿ" ಎಂದು ಬೇಡುತ್ತಿದ್ದ ಬಿಳಿತಲೆಯೊಂದು, ದಶಕದ ಹಿಂದೆ ಮಂತ್ರಿಯಾಗಿದ್ದು ಇಂದು ಕೈಪಡೆಯಲ್ಲಿದೆ. ಉತ್ತರಕರ್ನಾಟಕದ ನೆರೆಪೀಡಿತರಿಗೆ ಸಾರ್ವಜನಿಕರಿಂದ ದೇಣಿಗೆಯಾಗಿ ಬಂದ, ’ಕೈಬಳಗ’ ಸಂಗ್ರಹಿಸಿದ ನಿಧಿಯಲ್ಲಿ ಒಂದಷ್ಟನ್ನು ಬಸಿದುಕೊಂಡು ನುಂಗಿದ ’ಹೆಗ್ಗಳಿಕೆ’ಗೆ ಪಾತ್ರವಾದ ಆ ತಲೆ ಅತ್ಯಂತ ಕೆಟ್ಟ ತಲೆ ಎಂಬುದಾಗಿ ಕೇಳಿದ್ದೇನೆ. "ಬಾರೊ ಬೋಳೀಮಗನೆ ಸೂಟ್ ಕೇಸ್ ತಂದಿದೀಯಾ ?" ಎಂದೇ ಅಧಿಕಾರಿಗಳನ್ನು ಮಾತನಾಡಿಸುತ್ತಿದ್ದ ಆ ಮಾಜಿ ಮುಂದೆ ಮತ್ತೆ ಹಾಲಿಯಾಗಲೂ ಬಹುದು-ಯಾಕೆಂದರೆ ಇದು ಪ್ರಜಾತಂತ್ರ! ಹಾಡಾ ಹಗಲೇ ಮಾಡಿದ ಘನತರವಾದ ಅಪರಾಧಗಳು ಪ್ರಜೆಗಳ ಮನಸ್ಸಿನಿಂದ ಮಾಯವಾಗಿಬಿಡುತ್ತವೆ. ಅಪರಾಧೀ ಹಿನ್ನೆಲೆಯುಳ್ಳದಿದ್ದರೆ ರಾಜಕಾರಣಿಗಳಾಗುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ; ಒಂದೊಮ್ಮೆ ಶಾಸಕರೋ ಮಂತ್ರಿಯೋ ಆದರೂ, ಕೊಟ್ಟ ಖಾತೆ ತೆಗೆದುಕೊಳ್ಳಬೇಕು, ಪಕ್ಷದಲ್ಲಿ ಪರರು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರಬೇಕು-ಬಾಯಿ ಬಿಟ್ಟರೋ ಖಾತೆ ಮಗುಚಿಬಿದ್ದು ಶಾಸಕಸ್ಥಾನಕ್ಕೆ ರಾಜೀನಾಮೆ ಕೊಡಿಸುವವರೆಗಿನ ಜವಾಬ್ದಾರಿಯನ್ನು ಮಿಕ್ಕುಳಿದ ಭಕಗಳೇ ಹೊರುತ್ತವೆ! ಹಿಂದೆ ಯಾವುದೋ ಕಾವ್ಯದಲ್ಲಿ ಓದಿದ್ದೆ ಭಕ, ಘೂಕ, ಬಲ್ಲುಕ, ಜಂಬುಕ ಮೊದಲಾದ ಪ್ರಾಣಿಗಳು ಲೋಹಿತಾಶ್ವನನ್ನು ಅಟ್ಟಾಡಿಸಿ ತಿಂದವೋ ಏನೋ ಇನ್ನೂ ಬರಲಿಲ್ಲಾ ಎಂದು ಚಂದ್ರಮತಿ ಪ್ರಲಪಿಸುವ ಹಂತ ಅದು. ಇವತ್ತು ಆ ಎಲ್ಲಾ ’ಪ್ರಾಣಿಗಳು’ ವಿಧಾನಸೌಧದಲ್ಲೇ ಕಾಣಸಿಗುತ್ತವೆಯೇ ಹೊರತು ಕಾಡುಗಳಲ್ಲಿ ಅವುಗಳ ವಂಶ ನಿರ್ವಂಶವಾಗಿ ಹೋಗಿದೆ.    

ಇನ್ನೊಂದು ಹೊಸ ಸಂಗತಿಯೆಂದರೆ, ಎಫ್.ಐ.ಆರ್ ದಾಖಲಿಸಿಕೊಳ್ಳುವಾಗ ಇವತ್ತಿನ ಕೆಲವು ಠಾಣೆಗಳಲ್ಲಿ ಆರಕ್ಷಕರು ನೋವುಂಡವರಲ್ಲಿ ಹೀಗೇ ಬರೆಯಿರಿ ಎಂದು ತಾಕೀತುಮಾಡುತ್ತಾರೆ! ವಾರದ ಹಿಂದೆ ನಮ್ಮ ಏರಿಯಾದ ಒಬ್ಬರ ಮನೆಯಲ್ಲಿ ಕಳ್ಳತನ ನಡೆಯಿತು. ಯಜಮಾನ ದುಬೈಯಲ್ಲಿ ಕೆಲಸಮಾಡುತ್ತಾರೆ; ಇಲ್ಲಿ ಅಮ್ಮ-ಮಗ ಮಾತ್ರ ಇರುತ್ತಿದ್ದರು. ಮಗನಿಗೆ ರಜಾಕಾಲವಾದ್ದರಿಂದ ಅಮ್ಮ-ಮಗ ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದರಂತೆ. ಮನೆಯ ಮೇಲ್ಗಡೆ ಇರುವ ಪರಿಚಿತರ ಮನೆಯಲ್ಲಿ ಕೀಲಿ ನೀಡಿದ್ದು ಆಗಾಗ ನೋಡಲು ತಿಳಿಸಿದ್ದರಂತೆ. ಇನ್ನೇನು ಅವರು ಹಿಂದಿರುಗಿ ಬರುತ್ತಾರೆ ಎನ್ನುವ ದಿನ ಕುಡಿಯುವ ನೀರು ಬಿಂದಿಗೆ ತುಂಬಿಸಿಡಲು ಆ ಪರಿಚಿತ ಮಹಿಳೆಗೆ ಕರೆಮಾಡಿದ್ದಾರೆ. ಕೀಲಿ ಹೊಂದಿದ್ದ ಮಹಿಳೆ ಕೆಳಗಡೆ ಮನೆಯ ಬಾಗಿಲು ತೆರೆದು ನೀರು ತುಂಬಿಸಬೇಕು ಎಂದುಕೊಂಡರೆ ಮನೆಯ ಹಿಂದಿನ ಬಾಗಿಲು ತೆರೆದೇ ಇತ್ತು. ಗಲಿಬಿಲಿಗೊಂಡು ಅಡಿಗೆಮನೆಗೆ ಹೋದರೆ ಡಬ್ಬಗಳು ಚೆಲ್ಲಾಪಿಲ್ಲಿಯಾಗಿದ್ದವು. ಹೆದರಿಕಂಗಾಲಾದ ಆ ಮಹಿಳೆ, ಊರಿಂದ ಮರಳುತ್ತಿದ್ದ ಆ ಮನೆಯ ವಾರಸುದಾರಿಣಿಗೆ ತಿಳಿಸಿದ್ದಾರೆ. ನೋಡಿದರೆ ಮನೆ ಕಳ್ಳತನವಾಗಿತ್ತು. ಮನೆಯ ಮುಂಭಾಗದಲ್ಲಿಸುತ್ತಾ ಗ್ರಿಲ್ ಗಳಿದ್ದೂ ಹೊರಗಿನಿಂದ ಯಾರೂ ಬರುವಂತಿರಲಿಲ್ಲ, ಹಿಂದುಗಡೆ ಮಾತ್ರ ಒಂದು ಸಣ್ಣ ಶೀಟ್ ಮನೆ ಇದ್ದು ಅಲ್ಲಿ ಒಬ್ಬ ಪ್ಲಂಬರ್ ಸಂಸಾರ ವಾಸವಿದೆಯಂತೆ. ಹೇಳಿಕೇಳಿ ಪ್ಲಂಬರ್ ವೃತ್ತಿ, ಎದುರಿನ ಮನೆಯಲ್ಲಿ ಯಾರೂ ಇಲ್ಲಾ ಎಂಬುದನ್ನು ಖಚಿತಪಡಿಸಿಕೊಂಡು ತಾವೇ ಏಕೆ ಮಾಡಿರಬಾರದು ಎಂಬುದು ಕಳ್ಳತನಕ್ಕೆ ಒಳಗಾದ ಮಹಿಳೆಯ ಆರೋಪ.  ಹತ್ತು ಸಾವಿರ ನಗದು, ೬ ಜೊತೆ ಕಿವಿಯೋಲೆಗಳು, ದೊಡ್ಡ ಬೆಳ್ಳಿಯ ತಟ್ಟೆ ಸೇರಿದಂತೇ ೪ ಲಕ್ಷ ಮೌಲ್ಯದ ಸಾಮಾನುಗಳು ಕಳ್ಳತನವಾಗಿವೆಯಂತೆ. ಪೋಲೀಸರು ಎಲ್ಲದಕ್ಕೂ ಖರೀದಿಯ ರಶೀದಿ ಕೇಳಿದ್ದಾರೆ. ಬಂದಕಳ್ಳ ಕ್ರೆಡಿಟ್ ಕಾರ್ಡ್ ಸಮೇತ ಎಲ್ಲಾ ರಶೀದಿಗಳಿರುವ ಬ್ಯಾಗನ್ನೂ ಹೊತ್ತುಹೋಗಿದ್ದಾನೆ ಎಂದರೆ ಅರ್ಥವನ್ನೇ ಮಾಡಿಕೊಳ್ಳದ ಪೋಲೀ[ಸ್]ಮಂದಿ "ಕೇವಲ ೨೫ ಸಾವಿರ ಮೌಲ್ಯವೆಂದು" ಬರೆಯಿರಿ ಎಂದಿದ್ದಾರೆ. ಆಭರಣಗಳನ್ನು ಇಟ್ಟುಕೊಂಡಿದ್ದ ಮಹಿಳೆಗೆ ಅಲ್ಲಿ ಸುಮಾರು ಎಷ್ಟು ಮೌಲ್ಯದ ನಗಗಳಿದ್ದವು ಎಂಬುದು ಗೊತ್ತಿರದೇ ಇರುತ್ತದೆಯೇ?

ಇದೇ ರೀತಿಯಲ್ಲಿ, ಪೋಲೀಸರು ಮಹಾಂತೇಶ್ ಪ್ರಕರಣದಲ್ಲೂ ಅದು ಹಲ್ಲೆಯಲ್ಲ ಅಪಘಾತ ಎಂಬ ಹೊಸ ತಿರುವನ್ನು ನೀಡಬಯಸಿದ್ದರು; ಈಗ ಅದು ಇನ್ನೊಂದು ಹೊಸ ತಿರುವಿಗೆ ಸಿಕ್ಕು ಯಾವುದೋ ಕಾಲ್ ಗರ್ಲ್ ಪ್ರಕರಣವೆಂದು ಹೇಳಲ್ಪಡುತ್ತಿದೆ. ಹೊರಗಿನಿಂದ ನೋಡಿದಾಗಲಂತೂ ಮಹಾಂತೇಶ್ ಮೇಲಿನ ಹಲ್ಲೆಯಲ್ಲಿ ರಾಜಕೀಯದವರ ಕೈವಾಡ ಇದೆ ಎಂಬುದು ತೋರಿಬರುತ್ತದೆ; ಅದನ್ನು ಮುಚ್ಚಿಹಾಕುವ ತಂತ್ರಗಳೂ ನಡೆಯುತ್ತಿವೆ ಎಂಬುದು ಮನದಟ್ಟಾಗುತ್ತದೆ. ಈ ಲೇಖನ ಸಿದ್ಧಗೊಳ್ಳುತ್ತಿರುವ ವೇಳೆಯಲ್ಲಿ ಬಿ.ಬಿ.ಎಂ.ಪಿ ಎಂಜಿನೀಯರ್ ಒಬ್ಬರಿಗೆ ಆರುಜನರ ಗುಂಪು ಬೆದರಿಕೆ ಹಾಕಿದ ಸುದ್ದಿ ಬಿತ್ತರಗೊಂಡಿದೆ; ಅದು ಮತ್ಯಾವ ತಿರುವು ಪಡೆದುಕೊಳ್ಳುತ್ತದೋ ತಿಳಿಯದು. ಕೆಲವೊಮ್ಮೆ ಪೋಲೀಸರೂ ರಾಜಕೀಯದವರ ಒತ್ತಡಕ್ಕೆ ಮಣಿದು ಮೂಲಕಥೆಯನ್ನು ’ಕಟ್ಟುಕಥೆ’ಯಾಗಿ ಪರಿವರ್ತಿಸಿದಾಗ ವಕೀಲರುಗಳು ಪೋಲೀಸರಮೇಲೆ ದಾಳಿ ಮಾಡಿದ್ದು ಸರಿಯೇ ಇತ್ತೇನೋ ಅನಿಸುವಷ್ಟು ಸಹನೆಯ ಕಟ್ಟೆ ಒಡೆಯುತ್ತದೆ. ಒಟ್ಟಿನಲ್ಲಿ ಯಾರು ಯಾರನ್ನು ಸಂಭಾಳಿಸಬೇಕು? ಯಾರು ಯಾರಿಗೆ ಪ್ರಾಮಾಣಿಕರಾಗಿರಬೇಕು ಎಂಬುದನ್ನು ಸಮಾಜ ನಿರ್ಧರಿಸಬೇಕಾಗಿದೆ; ಇಲ್ಲದಿದ್ದರೆ ಅಧಿಕಾರಿಗಳೂ ಹತರಾಗುತ್ತಾರೆ, ಅಪಮೌಲ್ಯಗಳೇ ಮೌಲ್ಯಗಳಾಗಿ ರೌಡೀರಾಜ್ಯಭಾರವಾಗುವುದರಲ್ಲಿ ಅನುಮಾನವಿಲ್ಲ, ಇದು ಅನುಮಾನವಿಲ್ಲದ ಹುತ್ತವಾಗಿರುತ್ತದೆ-ಕಾಣಿಸುವ ಹಾವುಗಳು ಕಾಣಕಾಣುತ್ತಲೇ ಕಚ್ಚುವ ಮೊದಲು ಅವುಗಳನ್ನು ನಿರ್ನಾಮ ಮಾಡುವುದು ಸಾರ್ವಜನಿಕರ / ನಾಗರಿಕರ ಮುಂದಿರುವ ಏಕೈಕ ಸೂತ್ರವಾಗಿದೆ. ನಾಗರಿಕರು ಎಚ್ಚೆತ್ತುಕೊಳ್ಳುವರೇ?