ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, June 26, 2012

ಭಾವಜೀವಿ ಎಚ್.ಎಸ್.ವಿಯವರ ಬಾಳ ಚಂದದ ಬಾಳಿನ ಗೀತೆ


ಪೂರ್ಣಿಮಾ ಸ್ವಾಮಿ ತೆಗೆದ ಈ ಛಾಯಾಚಿತ್ರವನ್ನು ಕರುಣಿಸಿದ್ದು: ಅಂತರ್ಜಾಲ 

ಭಾವಜೀವಿ ಎಚ್.ಎಸ್.ವಿಯವರ ಬಾಳ ಚಂದದ ಬಾಳಿನ ಗೀತೆ

ಭಾವಜೀವಿಯಾದ ವ್ಯಕ್ತಿಗೆ ಕೆಲವು ಹಾಡುಗಳನ್ನು ಆಲಿಸುತ್ತಾ ಕುಳಿತರೆ ಅವು ನಮ್ಮನ್ನು ಬೇರೊಂದು ಲೋಕಕ್ಕೆ ಸೆಳೆದೊಯ್ದು ಅಲ್ಲಿ ಬೀಡು ಬಿಡುವಂತೇ ಮಾಡುತ್ತವೆ ಎಂಬ ಅನಿಸಿಕೆ ಒಮ್ಮೆಯಾದರೂ ಜೀವಿತದಲ್ಲಿ ಬಂದೇ ಬರುತ್ತದೆ. ಎಲ್ಲೋ ಯಾರೋ ಹಾಗೊಮ್ಮೆ ಗುನುಗುನಿಸಿದರೂ ಮೊದಲೆಲ್ಲೋ ಕೇಳಿದ ಇಂಪಿನ ಕಂಪು ಕಿವಿಯಲ್ಲಿ ಗುಂಯ್ಯೆನ್ನಲು ಆರಂಭಿಸುತ್ತದೆ; ಮನಸ್ಸು ತಾಳಹಾಕುತ್ತ ಸಾಗುತ್ತದೆ! ಹಾಡಿನ ಜಾಡನ್ನೇ ಹಿಡಿದು ಅದರ ಮೂಲವನ್ನು ಅರಸಿ ಹೊರಟಾಗ ಕವಿತಾ ಪಿತೃವಿನ ಪರಿಚಯ ಅಷ್ಟಿಷ್ಟು ಮಾತ್ರ ದೊರೆಯುತ್ತದೆ. ಆಳಕ್ಕೆ ಇಳಿಯುತ್ತಾ ನಡೆದಾಗ ಸಾವಿರ ಮೆಟ್ಟಿಲ ಬಾವಿಯ ಹಾಗೇ ಇನ್ನೂ ಆಳಕ್ಕೆ ಕಾಣುವ ಕವಿಗಳ ಅದ್ಭುತ ಅಂತರಂಗ ಬಹಿರಂಗಗೊಳ್ಳುತ್ತದೆ. ಸೆಳೆಮಿಂಚಿನ ಬೆಳಕಲ್ಲಿ ಕವಿಯ ಸಾಕ್ಷಾತ್ಕಾರವಾದರೆ ಕೋಲ್ಮಿಂಚಿನ ಭರದಲ್ಲಿ ಅವರ ಕೃತಿಗಳ ಸಾಲು ತೋರಿಬರುತ್ತದೆ. ಕವಿಯೊಬ್ಬ ಹಾಗಿರಬಹುದೇ ಹೀಗಿರಬಹುದೇ ಎಂದು ಕಲ್ಪಿಸಿಕೊಳ್ಳುವ ಸೀಮಿತ ಸಂವಹನದ ಕಾಲವೊಂದಿತ್ತು; ಕವಿ ಸಾಹಿತಿಗಳಿಗೆ ಪತ್ರ ಬರೆದು ಅವರುಗಳ ಅನಿಸಿಕೆಗಳಿಗಾಗಿ ಕಾಯುವ ಅದಮ್ಯ ಭಾವವೂ ಇರುತ್ತಿತ್ತು. ಇಂದು ಅಂತರ್ಜಾಲದ ಕಾಲಘಟ್ಟದಲ್ಲಿ ಜಗತ್ತು ಕಿರಿದಾಗಿದೆ; ಕವಿ-ಸಾಹಿತಿಗಳ ಛಾಯಾಚಿತ್ರಗಳೂ ಮಾತುಗಳೂ ಅಲ್ಲಲ್ಲಿ ನೋಡ/ಕೇಳ ಸಿಗುತ್ತವೆ.

ನಮ್ಮ ಗೋಕರ್ಣದ ಗೌರೀಶ್ ಕಾಯ್ಕಿಣಿಯವರು ಉದಯೋನ್ಮುಖ ಬರಹಗಾರರನ್ನು ಕುರಿತು ಹೀಗೆ ಹೇಳುತ್ತಿದ್ದರಂತೆ: "ಅವರು ಬರೆಯಲಿ ಬಿಡಿ, ಒಳ್ಳೆಯದೇ, ದಿನಕ್ಕೆ ಎಷ್ಟುಗಂಟೆ ಅವರು ಬರವಣಿಗೆಯಲ್ಲಿ ತೊಡಗಿರುತ್ತಾರೋ ಅಷ್ಟುಕಾಲ ಅವರಿಂದ ಕೆಟ್ಟ ಯೋಚನೆ, ಸಮಾಜ ಘಾತುಕ ಯೋಚನೆ ದೂರವಿರುತ್ತದೆ. ಬರವಣಿಗೆಯಲ್ಲಿ ಅವರು ಮಹತ್ತರವಾದುದನ್ನು ಸಾಧಿಸಲಾಗದಿದ್ದರೂ ಸಮಾಜಕ್ಕೆ ಅವರ ಆ ಕೆಲಸದಿಂದ ಕೆಲವು ಒಳ್ಳೆಯವ್ಯಕ್ತಿಗಳು ದೊರೆತಂತಾಗುತ್ತದೆ." ಬರವಣಿಗೆ ಸಹ್ಯವಾಗಿಲ್ಲ ಎಂದೆನಿಸಿ ಯಾರೋ ಓದುಗರು ಕೆಲವು ಬರಹಗಾರರ ಬಗ್ಗೆ ಹೇಳಿದಾಗ ಕಾಯ್ಕಿಣಿ ಹಾಗೆ ಹೇಳಿದ್ದರಂತೆ. ಬರವಣಿಗೆ ಸಹ್ಯವೋ ಅಸಹ್ಯವೋ ಅದು ಓದುಗರಿಗೆ ತಿಳಿದಿರುತ್ತದೆ; ಶಿರಸಿ ಪೇಟೆಗೆ ಹೋದರೆ ಜನ ಬೆಂಡೆಗದ್ದೆ ಜಿಲೇಬಿಯನ್ನು ಹುಡುಕಿ ಹೋಗುತ್ತಾರೆ, ರುಚಿಯಾದ ಚೂಡಾಕ್ಕೆ ಕುಮಟಾದ ಅಲಕಾ ಕೆಫೆಯನ್ನೇ ಹುಡುಕಿ ಹೋಗುತ್ತಾರೆ!  ಧಾರವಾಡದ ಬಾಬು ಸಿಂಗ್ ಠಾಕೂರ್ ಪೇಡಾ ಹದವನ್ನು ಬೇರಾರೂ ಕೊಡಲು ಸಾಧ್ಯವಾಗಿಲ್ಲ! ಅದೇರೀತಿ ಬರವಣಿಗೆಯೂ ಸಹ ತನ್ನ ಯುನಿಕ್ ನೆಸ್ ನಿಂದ ಕೂಡಿರುತ್ತದೆ. ಕೆಲವರು ಬರೆದದ್ದನ್ನು ಓದುತ್ತಿದ್ದರೆ ಅಲ್ಲಿಂದ ತಪ್ಪಿಸಿಕೊಳ್ಳುವ ಮನಸ್ಸಾಗುತ್ತದೆ, ಇನ್ನು ಕೆಲವರ ಬರವಣಿಗೆಗೆ ನಮ್ಮನ್ನೇ ಒಪ್ಪಿಸಿಕೊಳ್ಳಬೇಕೆನಿಸುತ್ತದೆ. ನಮ್ಮನ್ನೇ ಓದಿಗೆ ಒಪ್ಪಿಸಿಕೊಳ್ಳುವ ಸೆಳವನ್ನು ತನ್ನ ಬರಹಗಳಲ್ಲಿ ತೋರಿದ ಕೆಲವು ಮಹಾನುಭಾವರಲ್ಲಿ ನಮ್ಮ ಪ್ರೀತಿಯ ಎಚ್.ಎಸ್.ವಿ ಕೂಡ ಒಬ್ಬರು.

ಕನ್ನಡ ಸಾಹಿತ್ಯಲೋಕದಲ್ಲಿ ಕಥೆ, ಕವನ, ಕಥನ ಕವನ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಮುಂತಾದ ವಿಷಯಗಳಲ್ಲಿ ಬೆಳೆತೆಗೆದವರು ಡಾ| ಎಚ್. ಎಸ್. ವೆಂಕಟೇಶಮೂರ್ತಿ. ಎಚ್.ಎಸ್.ವಿಯವರನ್ನು ಪರಿಚಯಿಸಬೇಕೆ ಎಂಬುದು ಪ್ರಸಕ್ತ ನನ್ನ ಮುಂದಿರುವ ಪ್ರಶ್ನೆ! ಯಾಕೆಂದರೆ ಚಿಕ್ಕ ಹುಡುಗನಿಂದ ಮುಪ್ಪಾನ ಮುದುಕರವೆಗೂ ಎಲ್ಲರೊಡನೆ ಬೆರೆತು, ಎಲ್ಲರ ನಡುವೆ ಓಡಾಡಿಕೊಂಡು ಜೀವನ ನಡೆಸುತ್ತಿರುವ ಕವಿ ಎಚ್.ಎಸ್.ವಿ; ಯಾರನ್ನೇ ಕೇಳಿದರೂ ಅವರ ಭಾವಚಿತ್ರ ತೋರಿಸಿ’ಇವರೇ ಎಚ್.ಎಸ್.ವಿ’ ಎಂದು ಬೊಟ್ಟುಮಾಡಿ ತೋರಿಸುವಷ್ಟು ಚಿರಪರಿಚಿತರು. ಹಾಗಾಗಿ ಪರಿಚಿತರನ್ನೇ ಮತ್ತೆ ಪರಿಚಯಿಸುವುದು ದುಸ್ಸಾಹಸದ ಕೆಲಸ ಎನಿಸುತ್ತದೆಯಾದರೂ ಅವರ ಬದುಕಿನ ಕೆಲವು ನೋಟಗಳನ್ನು ಮೆಲುಕುಹಾಕುವ ಪ್ರಯತ್ನಕ್ಕಾಗಿ ಬರೆಯುತ್ತಿದ್ದೇನೆ.  

June 23, 1944ರಂದು ಚನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮದಲ್ಲಿ ನಾರಾಯಣ ಭಟ್ಟರು ಮತ್ತು ನಾಗರತ್ನಮ್ಮನ ಮಗನಾಗಿ ಎಚ್ ಎಸ್ ವೆಂಕಟೇಶಮೂರ್ತಿ ಜನಿಸಿದರು. ತಾಯಿ ಶಿಕ್ಷಕಿಯಾಗಿದ್ದರು. ಪ್ರಾಥಮಿಕ ಶಿಕ್ಷಣ ಹೋದಿಗ್ಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗ. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರಾಗಿ ಉದ್ಯೋಗ ಪ್ರಾರಂಭಿಸಿದರು ಎನ್ನುತ್ತದೆ ಅವರ ಅನಾತ್ಮಕಥನದ ಕಥಾಭಾಗ. ಅಂದಹಾಗೇ ಸದ್ರಿ ಎಚ್.ಎಸ್.ವಿಯವರನ್ನು ಖುದ್ದಾಗಿ ನಾನು ನೋಡಿದ್ದು ಅವರ ’ಅನಾತ್ಮಕಥನ’ದ ಮೊದಲ ಭಾಗ ಬಿಡುಗಡೆಗೊಂಡ ದಿನ; ಅದಕ್ಕೂ ಮೊದಲು ಅವರ ಸಮಗ್ರ ಕೃತಿಗಳ ಬಿಡುಗಡೆ ಇತ್ತಾದರೂ ಆ ಕಾರ್ಯಕ್ರಮಕ್ಕೆ ನನಗೆ ಹೋಗಲಾಗಿರಲಿಲ್ಲ. ಅನಾತ್ಮಕಥನದ ಮೊದಲಭಾಗವನ್ನು ರವಿ ಬೆಳಗೆರೆಗೆ ಅರ್ಪಿಸಿದ್ದು ನನಗೆ ನಿಜಕ್ಕೂ ಸೋಜಿಗ ಹುಟ್ಟಿಸಿದೆ. ರವಿ ಬೆಳಗೆರೆ ವಿಶಿಷ್ಟ ಛಾಪಿನ ಬರಹಗಾರ ಎನ್ನುವುದು ಸುಳ್ಳಲ್ಲವಾದರೂ ಬಹುತೇಕ ಅವರ ಬರವಣಿಗೆಗಳು ಧನಾತ್ಮಕವಾಗಿರುವುದಿಲ್ಲ; ಯಾರನ್ನೋ ಹೀಗಳೆಯಲಿಕ್ಕೆ, ಯಾರನ್ನೋ ಛೇಡಿಸಲಿಕ್ಕೆ, ಇನ್ಯಾರದೋ ತೇಜೋವಧೆಗೆ, ಮತ್ಯಾವುದೋ ಕೃತ್ಯವನ್ನು ತನಗೆ ಬೇಕಾದಂತೇ ತಿರುಗಿಸಿ ಹೇಳಲಿಕ್ಕೆ, ಕಾಮ-ಕ್ರೌರ್ಯಗಳನ್ನು ವೈಭವೀಕರಿಸಿ ಓದುಗರಲ್ಲಿ ಗಲಿಬಿಲಿ ಉಂಟುಮಾಡಲಿಕ್ಕೆ ಅವರ ಬರಹಗಳು ಸೀಮಿತವೆಂಬುದು ಅವರ ಜೀವಿತದ ಇಲ್ಲಿಯವರೆಗಿನ ಪ್ರತೀ ಅಧ್ಯಾಯವೂ ಹೇಳುತ್ತದೆ. ಇದೆಲ್ಲಾ ಗೊತ್ತಿದ್ದೂ ರಾತ್ರಿಕಂಡ ಬಾವಿಯಲ್ಲಿ ಹಗಲು ಬಿದ್ದರು ಅನ್ನೋ ಹಾಗೇ ಬೆಳಗೆರೆಗೆ ತಮ್ಮ ಕೃತಿಯನ್ನು ಅರ್ಪಿಸಿದ್ದಾರೆ!

ಭದ್ರಾವತಿಯಲ್ಲಿ ಡಿಪ್ಲೋಮಾ ಮಾಡುತ್ತಿರುವಾಗ ಹುಡುಗ ಎಚ್.ಎಸ್.ವಿ ಮತ್ತು ಅವರ ಗೆಳೆಯರು ಉಳಿದುಕೊಂಡಿದ್ದ ಪಕ್ಕದ ಮನೆಯಲ್ಲಿ ನವದಂಪತಿ ವಾಸವಿದ್ದರಂತೆ; ಅವರ ಮನೆತನದ ಹೆಸರು ಹಾಲಬಾವಿ ಯೋ ಹಂಸಬಾವಿಯೋ ಇರಬೇಕು. ನವದಂಪತಿಯಲ್ಲಿ ಹರೆಯದ ಹೆಂಡತಿಯನ್ನು ಕಂಡು ಥೇಟ್ ಅಂಥದ್ದೇ ಹುಡುಗಿ ತನ್ನವಳಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹಂಬಲಿಸಿದವರು ಎಚ್.ಎಸ್.ವಿ! ಉಕ್ಕೇರುತ್ತಿರುವ ಹರೆಯ ಮತ್ತೂ ಮತ್ತೂ ಕದ್ದು ಆಕೆಯನ್ನು ನೋಡುವ ಹುಚ್ಚನ್ನು ಹಿಡಿಸಿತ್ತು ಎಂದಿದ್ದಾರೆ: ತಮ್ಮ ಅನಾತ್ಮಕಥನದಲ್ಲಿ. ಕಪ್ಪಗಿನ ಹುಡುಗಿಯನ್ನು ಮನದುಂಬಿಕೊಂಡ ಕವಿಹೃದಯಕ್ಕೆ ಭದ್ರಾವತಿ ಬಿಟ್ಟ ಕೆಲವು ದಿನ ಒಮ್ಮುಖ ವಿರಹವೇದನೆ ಕಾಡಿತ್ತು; ಯಾರಲ್ಲಿಯೂ ಹೇಳಿಕೊಳ್ಳಲೂ ಆಗದ ಮನದಲ್ಲೇ ಅನುಭವಿಸುತ್ತ ಬಚ್ಚಿಟ್ಟುಕೊಳ್ಳಲೂ ಆಗದ ಭಾವದ ಹಾವುಗಳು ಮನವೆಂಬ ಬುಟ್ಟಿಯ ಮುಚ್ಚಳವನ್ನು ತಮ್ಮ ಹೆಡೆಯಿಂದ ತಟ್ಟಿ ತೆರೆಯಲು ಹೊರಡುತ್ತಿದ್ದವು!

ಕಾವ್ಯರಚನೆಯಲ್ಲಿ ಎಳವೆಯಲ್ಲೇ ಆಸಕ್ತಿ ಹೊಂದಿದ ಎಚ್.ಎಸ್.ವಿಯವರು ಪ್ರೌಢ ವಿದ್ಯಾಭ್ಯಾಸವನ್ನು ಹೊಳಲ್ಕೆರೆಯ ಮಲ್ಲಾಡಿಹಳ್ಳಿ ಮಾದಣ್ಣನವರ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಮಾಡಿ ಮುಗಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದುಕೊಂಡರು. ಸುಮಾರು ಮೂವತ್ತು ವರ್ಷ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿರಾಗಿದ್ದಾರೆ. ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಅಂದರೆ ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಇತ್ಯಾದಿಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಅನಾಯಾಸವಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎಚ್.ಎಸ್ಸ್.ವಿ ಚಿತ್ರಕಲೆಯಲ್ಲೂ ನಿಪುಣರು ಎಂಬುದು ಹಲವರಿಗೆ ಗೊತ್ತಿಲ್ಲ! 


ಅನಿರೀಕ್ಷಿತವಾಗಿ ಎದುರುಬದುರು ಮನೆಯವರಾಗಿ, ಸಿಕ್ಕು-ಆಪ್ತರಾಗಿ ಅಪ್ಪಟ ಸ್ನೇಹಿತರಾದವರು ಎಚ್.ಎಸ್.ವಿ ಮತ್ತು ಬಿ.ಆರ್ ಲಕ್ಷ್ಮಣರಾವ್. ಲಕ್ಷ್ಮಣರಾಯರನ್ನು ಕೆದಕಿದರೆ ದಿನಗಟ್ಟಲೆ ಏಕೆ ತಿಂಗಳುಗಟ್ಟಲೆ  ಎಚ್.ಎಸ್.ವಿ ಯವರ ಬಗ್ಗೆ ಹೇಳುತ್ತಾರೆ. ಅಂದಹಾಗೇ ಸ್ನೇಹಕ್ಕೆ ಅಪಾರವಾದ ಗೌರವ ಕೊಡುತ್ತಾ ಲಕ್ಷ್ಮಣರಾಯರಲ್ಲಿನ ಕವಿಯನ್ನು ಗುರುತಿಸಿದ್ದೂ ಇದೇ ಎಚ್.ಎಸ್.ವಿಯವರೇ ಅಂದರೆ ತಪ್ಪಲ್ಲ; ಹಾಗಂತ ಬಿ.ಆರ್.ಎಲ್ ಬಾಯಲ್ಲೇ ನಾನು ಕೇಳಿದ್ದೇನೆ. ಈ ಇಬ್ಬರ ಆ ಸ್ನೇಹ ಹಸಿರಾಗಿರಲಿ. 

ಕಮಲ ಕೆಸರಿನಲ್ಲೇ ಅರಳಬಹುದಾದರೂ, ಬಹುತೇಕ ಜೀವಕೋಟಿಗಳ, ಸಸ್ಯಕೋಟಿಗಳ, ವ್ಯಕ್ತಿಗಳ ಬೆಳವಣಿಗೆಯಲ್ಲಿ ಅವುಗಳ/ಅವರುಗಳ ಎಳವೆಯ ಪರಿಸರ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಬಾಲ್ಯದಲ್ಲಿ ತಮ್ಮ ತಾಯಿಯ ತವರುಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿನ ಮೇಲೆ ಮಾಡಿದ ಪ್ರಭಾವದಿಂದ ಕವನ ಬರೆಯಲು ಪ್ರೇರಣೆ ನೀಡಿದವು ಎನ್ನುತ್ತಾರೆ ಎಚ್.ಎಸ್.ವಿ.  ಬದುಕೇ ಬರವಣಿಗೆ ಎನಿಸಿದಾಗ ಬರಹಗಾರನಿಗೆ ಬಿಡುವೆಲ್ಲಿಯದು? ದಿನನಿತ್ಯದ ತಮ್ಮ ಹಲವು ಸಾಹಿತ್ಯಕ ಕೆಲಸಗಳ ನಡುವೆಯೇ ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡವರು ಎಚ್.ಎಸ್.ವಿ. ’ಚಿನ್ನಾರಿಮುತ್ತ’, ’ಕೊಟ್ರೇಶಿ ಕನಸು’, ’ಕ್ರೌರ್ಯ’, ’ಕೊಟ್ಟ’, ’ಮತದಾನ’ ಚಲನಚಿತ್ರಗಳಿಗೆ ಹಾಡುಗಳನ್ನು ಬರೆದುಕೊಟ್ಟಿದ್ದರೆ ಇನ್ನೂ ಕೆಲವಕ್ಕೆ ಸಂಭಾಷಣೆ ಬರೆದುಕೊಟ್ಟಿದ್ದಾರೆ. ದೂರದರ್ಶನ ’ಯಾವ ಜನ್ಮದ ಮೈತ್ರಿ’, ’ಸವಿಗಾನ’, ’ಮುಕ್ತ’ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ಬರೆದುಕೊಟಿದ್ದಾರೆ. ’ಮಕ್ಕಳ ಗೀತೆಗಳು’, ’ಅನಂತ ನಮನ’, ’ತೂಗುಮಂಚ’, ’ಸುಳಿಮಿಂಚು’, ’ಅಪೂರ್ವ ರತ್ನ’, ’ಭಾವಭೃಂಗ’- ಧ್ವನಿ ಸುರಳಿಗಳಾಗಿದ್ದು, ಮಾರುಕಟ್ಟೆಯಲ್ಲಿ ಲಭಿಸುತ್ತಿವೆ. 
 

ಪ್ರತಿಭೆಗೆ ದೊರೆತ ವಿಶೇಷ ಗೌರವ ಪುರಸ್ಸರಗಳು:

* ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
* ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
* ರಾಜ್ಯೋತ್ಸವ ಪ್ರಶಸ್ತಿ
* ದೇವರಾಜ ಬಹದ್ದೂರ್ ಪ್ರಶಸ್ತಿ
* ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ
* ಬಿ.ಎಚ್. ಶ್ರೀಧರ ಪ್ರಶಸ್ತಿ
* ಆರ್ಯಭಟ ಸಾಹಿತ್ಯ ಪ್ರಶಸ್ತಿ
* ಮೈಸೂರು ಅನಂತಸ್ವಾಮಿ ಪ್ರಶಸ್ತಿ
* ೨ ಬಾರಿ ಅಖಿಲ ಭಾರತ ಆಕಾಶವಾಣಿ ಪ್ರಶಸ್ತಿ
* ಅರವತ್ತು ತುಂಬಿದ ಸಂದರ್ಭದಲ್ಲಿ ಶಿಷ್ಯರು, ಅಭಿಮಾನಿಗಳು ಅರ್ಪಿಸಿದ ಅಭಿನಂದನಗ್ರಂಥ ’ಗಂಧವ್ರತ.’


ಪ್ರಕಟಿತ ಬರಹಗಳು:
===================

ಪರಿವೃತ್ತ(೧೯೬೮)
ಬಾಗಿಲು ಬಡಿವ ಜನಗಳು(೧೯೭೧)
ಮೊಖ್ತಾ(೧೯೭೪)
ಸಿಂದಬಾದನ ಆತ್ಮಕಥೆ(೧೯೭೭)
ಒಣ ಮರದ ಗಿಳಿಗಳು(೧೯೮೧)
ಮರೆತ ಸಾಲುಗಳು(೧೯೮೩)
ಸೌಗಂಧಿಕ(೧೯೮೪)
ಇಂದುಮುಖಿ(೧೯೮೫)
ಹರಿಗೋಲು(೧೯೮೫)
ವಿಸರ್ಗ(೧೯೮೮)
ಎಲೆಗಳು ನೂರಾರು(೧೯೮೯)
ಅಗ್ನಿಸ್ತಂಭ(೧೯೯೦)
ಎಷ್ಟೊಂದು ಮುಖ(೧೯೯೦)
ಅಮೆರಿಕದಲ್ಲಿ ಬಿಲ್ಲುಹಬ್ಬ(೧೯೯೭)
ವಿಮುಕ್ತಿ(೧೯೯೮)
ಭೂಮಿಯೂ ಒಂದು ಆಕಾಶ(೨೦೦೦)
ಮೂವತ್ತು ಮಳೆಗಾಲ(೨೦೦೧)

ಪ್ರಕಟಗೊಂಡ ಕಥೆಗಳು
=======================

ಬಾಣಸವಾಡಿಯ ಬೆಂಕಿ(೧೯೮೦)
ಪುಟ್ಟಾರಿಯ ಮತಾಂತರ(೧೯೯೦)

ಕಾದಂಬರಿಗಳು
=============

ತಾಪಿ(೧೯೭೮)

ಸಾಹಿತ್ಯಚರಿತ್ರೆ
===============

ಕೀರ್ತನಕಾರರು(೧೯೭೫)

ವಿಮರ್ಶೆ
========

ನೂರು ಮರ, ನೂರು ಸ್ವರ(೧೯೮೩)
ಮೇಘದೂತ(೧೯೮೯)
ಕಥನ ಕವನ(೧೯೯೦)
ಆಕಾಶದ ಹಕ್ಕು(೨೦೦೧)

ಅನುಭವ ಕಥನ
================

ಕ್ರಿಸ್ಮಸ್ ಮರ(೨೦೦೦)


ಸಂಪಾದನೆ
==========

ಶತಮಾನದ ಕಾವ್ಯ(೨೦೦೧)


ನಾಟಕಗಳು
===========

ಹೆಜ್ಜೆಗಳು(೧೯೮೧)
ಒಂದು ಸೈನಿಕ ವೃತ್ತಾಂತ(೧೯೯೩)
ಕತ್ತಲೆಗೆ ಎಷ್ಟು ಮುಖ(೧೯೯೯)
ಚಿತ್ರಪಟ(೧೯೯೯)
ಉರಿಯ ಉಯ್ಯಾಲೆ(೧೯೯೯)
ಅಗ್ನಿವರ್ಣ(೧೯೯೯)
ಸ್ವಯಂವರ(ಅಪ್ರಕಟಿತ);


ಅನುವಾದ
========

ಋತುವಿಲಾಸ(ಕಾಳಿದಾಸನ ಋತುಸಂಹಾರದ ಅನುವಾದ: ೧೯೮೮)


ಪ್ರಬಂಧ
=========
ಕನ್ನಡದಲ್ಲಿ ಕಥನ ಕವನಗಳು(ಪಿ.ಎಚ್.ಡಿ ಪ್ರಬಂಧ:೧೯೮೭)


ಮಕ್ಕಳ ಸಾಹಿತ್ಯ
===============

ಸಿ.ವಿ.ರಾಮನ್(೧೯೭೪)
ಹೋಮಿ ಜಹಾಂಗೀರ ಭಾಭಾ(೧೯೭೫)
ಸೋದರಿ ನಿವೇದಿತಾ(೧೯೯೫)
ಬಾಹುಬಲಿ(೨೦೦೦)


ಕವನಗಳು
==========

ಹಕ್ಕಿಸಾಲು(೧೯೮೭)
ಹೂವಿನ ಶಾಲೆ(೧೯೯೭)
ಸೋನಿ ಪದ್ಯಗಳು(೨೦೦೧)
ನದೀತೀರದಲ್ಲಿ


ಸಂದ ಪ್ರಶಸ್ತಿಗಳು
==================

ಸಿಂದಬಾದನ ಆತ್ಮಕಥೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೭೭
ತಾಪಿ-ದೇವರಾಜ ಬಹಾದ್ದೂರ ಪ್ರಶಸ್ತಿ-೧೯೭೮
ಅಮಾನುಷರು-ಸುಧಾ ಬಹುಮಾನ೧೯೮೧
ಹೆಜ್ಜೆಗಳು- ರಂಗಸಂಪದ ಬಹುಮಾನ-೧೯೮೦
ಇಂದುಮುಖಿ-ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ-೧೯೮೫
ಹರಿಗೋಲು-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೮೫
ಅಗ್ನಿಮುಖಿ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೮೬
ಋತುವಿಲಾಸ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ-೧೯೮೮
ಎಷ್ಟೊಂದು ಮುಗಿಲು ಬಿ.ಎಚ್.ಶ್ರೀಧರ ಪ್ರಶಸ್ತಿ-೧೯೯೦
ಒಂದು ಸೈನಿಕ ವೃತ್ತಾಂತ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೩
ಹೂವಿನ ಶಾಲೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೭
ಸ್ವಯಂವರ(ಅಪ್ರಕಟಿತ)-ಉಡುಪಿ ರಂಗಭೂಮಿ ಪುರಸ್ಕಾರ

’ಕವಿನೆನಪುಗಳು’ ಮಾಲಿಕೆಯಲ್ಲಿ ಆಗಿಹೋದ ಮತ್ತು ಈಗಿರುವ ಕವಿಗಳ ಕುರಿತು ಆಗಾಗ ಬರೆಯುತ್ತಲಿದ್ದೇನೆ. ಕವಿ-ಸಾಹಿತಿಗಳನ್ನು ನೇರವಾಗಿ ನೋಡುವುದು ನನಗಿಷ್ಟವಾದ ವಿಷಯ. ಅವರ ಜೊತೆ ಒಂದಷ್ಟು ಸಮಯ ಕಳೆದರೆ ಅಲ್ಲಿ ಸಿಗಬಹುದಾದ ಅಮೃತತುಲ್ಯ ಜ್ಞಾನಧಾರೆಯಲ್ಲಿ ಹಾಗೊಮ್ಮೆ ಮೀಯುವಾಸೆ. ’ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ಎಂದ ಪಂಪನಂತೇ ಭಾವುಕ ಮನಕ್ಕೆ ಜನ್ಮವಿದ್ದರೆ ಮತ್ತಿದೇ ಕನ್ನಡದಲ್ಲೇ ಪುನರಪಿ ಹುಟ್ಟುವ ಬಯಕೆ! ಸರಳ ಸಜ್ಜನ ಎಚ್.ಎಸ್.ವಿಯವರು ನನ್ನ ಬ್ಲಾಗಿಗೂ ಒಮ್ಮೆ ಬಂದು ಹರಸಿದ್ದಾರೆ. ಜೂನ್ ತಿಂಗಳು ಬಂದಾಗ ಅವರ ಹುಟ್ಟುಹಬ್ಬದ ನೆಪದಲ್ಲಿ ಹಲವು ಜನ ಅವರನ್ನು ಕಾಣಬಯಸುತ್ತಾರೆ. ಮೊನ್ನೆಯಂತೂ ಅವರೇ ಬರೆದ ಕಾವ್ಯಗಳಧಾರೆ ಗಾಯಕ/ಗಾಯಕಿಯರ ಕಂಠಗಳಲ್ಲಿ ಹೊರಹೊಮ್ಮಿತು ಎಂದು ಕೇಳಿಯೇ ಸಂತಸಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೇನೆ. ಎಚ್.ಸ್.ವಿಯವರು ಬಹುಕಾಲ ನಮ್ಮೊಟ್ಟಿಗಿರಲಿ, ನಮ್ಮಂಥವರಿಗೆ ಇನ್ನೂ ಹಲವು ಕೃತಿಗಳನ್ನು ಬಡಿಸಲಿ, ಬರಹಗಳ ಗದ್ದೆ-ತೋಟಗಳಲ್ಲಿ ಫಸಲು ಹುಲುಸಾಗಿ ಬರುವಂತೇ ಪ್ರೇರೇಪಿಸಲಿ ಎಂಬ ಪ್ರಾರ್ಥನೆಯೊಂದಿಗೆ ಎಚ್.ಎಸ್.ವಿಯವರಿಗೆ ನನ್ನ ವಂದನೆಗಳು, ಅಭಿನಂದನೆಗಳು.

’ನಮ್ಮೂರಲ್ಲಿ’ ಎಂಬ ಸಿನಿಮಾಕ್ಕಾಗಿ ಎಚ್.ಎಸ್.ವಿ ಬರೆದ ಒಂದು ಅಪರೂಪದ ಹಾಡು ನಿಮಗಾಗಿ :