ಚಿತ್ರ ಋಣ : ಅಂತರ್ಜಾಲ
ಕೇಳೆ ಸಖೀ ಕಮಲಮುಖೀ
-(C) ವಿ.ಆರ್.ಭಟ್, ಹಡಿನಬಾಳ
[ಕವಿಕಲ್ಪನೆಯ ಭಾವಸ್ಫುರಣೆಯಲ್ಲಿ ಆದಿ-ಅಂತ್ಯ ಪ್ರಾಸಗಳ ಜುಗಲ್-ಬಂಧಿಯನ್ನು ಕಾವ್ಯರೂಪಕ್ಕಿಳಿಸುವಲ್ಲಿ, ಕಸುವನ್ನು ಒರೆಗೆ ಹಿಡಿದು ಬರೆದ ಇನ್ನೊಂದು ಕವನ ಇದು. ಛಂದಸ್ಸು-ವ್ಯಾಕರಣ-ಅಂಗಶುದ್ಧಿಯನ್ನು ಅನುಸರಿಸುತ್ತಾ, ಸಾಂಪ್ರದಾಯಿಕ-ಪ್ರಾಗೈತಿಹಾಸಿಕ ವಿಷಯವನ್ನೇ ಅದೆಷ್ಟು ಸಲ ವಿಭಿನ್ನ ಪದಪುಂಜಗಳಿಂದ ಬರೆಯಬಹುದು ಎಂಬ ದಿಸೆಯಲ್ಲಿ ಪ್ರಯತ್ನಿಸಿದ, ಪ್ರಯತ್ನಿಸುತ್ತಲೇ ಇರುವ ಹಲವು ಹೆಜ್ಜೆಗಳಲ್ಲಿ ಇದೊಂದು ಹೆಜ್ಜೆ; ಈ ಹೆಜ್ಜೆ ಓದುಗರ ಮನದಲ್ಲಿ ಗೆಜ್ಜೆತಟ್ಟಿದ ಸಪ್ಪಳವನ್ನು ಮೂಡಿಸಿದರೆ ಪ್ರಯತ್ನ ಸಾಫಲ್ಯ ಎಂಬ ಭಾವ ಕವಿಮನೆಯ-ಮನದ ಮೂಸೆಯಲ್ಲಿರುವಂಥದ್ದು.
ಗೋಕುಲದಲ್ಲಿ, ಗೊಲ್ಲನ ಅಗಲಿಕೆ ಗೋಪಿಕೆಯರಲ್ಲಿ ಯಾವ ಭಾವ ಕೆರಳಿಸಿತ್ತು ಎಂಬುದು ವಸ್ತುವಿಷಯ. ಕಮಲಮುಖಿಯೆನಿಪ ಸಖಿಯಲ್ಲಿ ಪ್ರತಿಯೊಬ್ಬ ಗೋಪಿಕೆಯದೂ ಇದೇ ಹೇಳಿಕೆ, ಇದೇ ಮಂಡನೆ: ಗೋಪಾಲ ತನ್ನವನು, ಗೋವಿಂದ ತನ್ನವನು ಎಂಬ ಹಪಹಪಿಕೆ. ಸಂಗದೊರೆತಾನಂತರ, ಅಕ್ಷರಶಃ, ಗೋಪಾಲನಿಲ್ಲದ ದಿನಗಳನ್ನು ಗೋಪಿಕೆಯರು ಬಯಸಲೇರ್ ಇಲ್ಲ! ಚಣಕಾಲ ಮಾಧವನಿಲ್ಲ ಎಂದರೆ ಆತ ಎಲ್ಲಿ ಹೋದ? ಯಾವಾಗ ಬರಬಹುದು?-ಎಂಬ ಚಿಂತೆ, ಆಲೋಚನೆ ಅವರನ್ನು ಕಾಡುತ್ತಿತ್ತು, ’ಗೋವಿಂದಕಲೆ’ಯನ್ನು ಸೃಜಿಸಿ ಚಾಣಾಕ್ಷನಾದ ಆ ಗೋವಳನ ಫ್ಲರ್ಟಿಂಗ್ ಅಷ್ಟರಮಟ್ಟಿಗೆ ವರ್ಕೌಟ್ ಆಗಿತ್ತು ಎಂದರ್ಥ !!
ಮಿತ್ರರೊಬ್ಬರು ನೆನಪಿಸಿದಂತೇ ಯಾರೇ ಬೇಕಾದರೂ ಅನೇಕ ಮದುವೆಗಳನ್ನು [ಕದ್ದು-ಮುಚ್ಚಾದರೂ]ಮಾಡಿಕೊಳ್ಳಬಹುದು, ಆದರೆ ಕೃಷ್ಣನಂತೇ ಕಿರುಬೆರಳಲ್ಲಿ ಗೋವರ್ಧನವನ್ನೆತ್ತಿ ನಿಲ್ಲಲು ಸಾಧ್ಯವಿಲ್ಲವಲ್ಲ. ತನ್ನ ಅನೇಕ ಚಾತುರ್ಯಗಳಿಂದ ಜಗದ ಮನವಗೆದ್ದ ಗುರು ಶ್ರೀಕೃಷ್ಣ, ವ್ಯಾಸ-ಗಣೇಶರ ಮೂಲಕ ಗೀತೆಯನ್ನು ಬೋಧಿಸಿ ಜಗದ್ಗುರುವಾಗಿದ್ದಾನೆ. ಏಕದಿಂದ ಅನೇಕ-ಅನೇಕದಿಂದ ಏಕ ಎಂಬ ತಥ್ಯವನ್ನು, ಸತ್ಯವನ್ನು ಆಡಿತೋರಿಸಿದ, ಮಾಡಿತೋರಿಸಿದ ಗೊಲ್ಲನ ಪ್ರೇಮ ಸಿಗುವುದಾದರೆ ಗೋಪಿಕೆಯರೇ ಏಕೆ ಜಗದ ಜನರೆಲ್ಲಾ ಹಾತೊರೆಯುತ್ತಿರಲಿಲ್ಲವೇ? ಗೋಪಿಕೆಯೋರ್ವಳ ಅಂತರಂಗ ತನ್ನ ಸಖಿಯಲ್ಲಿ ಬಹಿರಂಗಗೊಂಡ ಬಗೆಯನ್ನು ಕವನ ತಮಗೆ ತಿಳಿಸುತ್ತದೆ, ನಮಸ್ಕಾರ]
ಕೇಳೆ ಸಖೀ ಕಮಲಮುಖೀ ಅಂತರಂಗವ |
ಬಾಳಕಾವ್ಯಕೆನಗೆ ಅವನೆ ಕವಿಯು ಪುಂಗವ ||ಪ||
ಗಾಳಿಯಲ್ಲಿ ಕೊಳಲಗಾನ ದೂರದಿಂದ ತೇಲಿಬಿಟ್ಟು
ಹಾಳೆ ಹಾಳೆಯಲ್ಲು ಪದವ ಗೀಚಿದಂಥವ |
ಗೀಳು ಹಿಡಿಸಿ ಸರಿದುಹೋದ ಗಾವುದಗಳ ದೂರಕಷ್ಟು
ಗೋಳುಹುಯ್ದುಕೊಳುವನೆಲ್ಲಿ? ನಾಚಿದಂಥವ ||೧||
ಪಾಳಿಯೇನೊ ಎಂಬರೀತಿ ಕೊಳದಬುಡದಿ ಮರದೊಳಿದ್ದು
ದಾಳಿಯಿಟ್ಟು ಬಟ್ಟೆಗಳನು ಕದ್ದುಕೊಂಡವ |
ನೀಳಗೂದಲನ್ನು ಎಳೆದು ನೋವುನೋಡಿ ಮಜವಮೆದ್ದು
ಗೂಳಿ ಗುಟುರಿದಂತೆ ನಟಿಸಿ ಮುದ್ದನುಂಡವ ||೨||
ಕಾಳಸರ್ಪನನ್ನು ತುಳಿದು ಯಮುನೆ ಮಡುವಿನೊಳಗೆ ಬಿದ್ದು
ಕೇಳಿಯಾಡಿ ಕಾಳಗದೊಳು ಒದ್ದುನಿಂತವ |
ತಾಳಲಾರದಂಥ ಮಳೆಗೆ ಗೋವರ್ಧನವೆತ್ತಿ ಖುದ್ದು
ಬೀಳು ಹರಿಸಿ-ಇಂದ್ರಮೊಗದಿ ಗೆದ್ದುನಿಂತವ ||೩||
ತಾಳೆಲಾರೆನಮ್ಮ ವಿರಹ ಬಾಳೆ-ಬೇಕು ಗೊಲ್ಲ ಸನಿಹ
ಧೂಳು ಕವಿದ ರತುನದಂತದಾಯ್ತು ಜೀವನ |
ನಾಳೆನಾವದೆಲ್ಲೊ ಹುಡುಕಿ ಮಾಧವನನು ಸೇರೆ ಪುನಃ
ತಾಳೆಹಿಡಿದು ಜಾಡುನೋಡು ಜನುಮ ಪಾವನ ||೪||
------೦------