ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, May 28, 2011

ಐ ಲವ್ ಯೂ ಎಂಬ ಅಪಾಯಕಾರೀ ಅಣ್ವಸ್ತ್ರ


ಐ ಲವ್ ಯೂ ಎಂಬ ಅಪಾಯಕಾರೀ ಅಣ್ವಸ್ತ್ರ

ಆಶಾ ಉತ್ತಮ ಮನೆತನದ ಹುಡುಗಿ, ಹಳ್ಳಿಯಲ್ಲಿ ಕಾಲೇಜು ಇಲ್ಲದ್ದರಿಂದ ತಾಲೂಕು ಪಟ್ಟಣದ ಕಾಲೇಜಿಗೆ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದಳು. ದಿನವೂ ಹೆಚ್ಚುಕಮ್ಮಿ ಅದೇವೇಳೆಗೆ ಬಸ್ ಏರುತ್ತಿದ್ದು ಅದೇ ಮಾರ್ಗವಾಗಿ ಚಲಿಸುವ ಪ್ರಮೇಯವಿತ್ತು. ದಿನಗಳ ನಂತರ ಮಳೆಗಾಲದಲ್ಲಿ ಕೆಲವೊಮ್ಮೆ ಬಸ್ ಕಾಲಿ ಇದ್ದ ಸಮಯದಲ್ಲಿ ಕಂಡಕ್ಟರ್ ಜೊತೆ ಮಾತುಕತೆ ನಡೆಯಹತ್ತಿತ್ತು. ಮಾತು ಆಕೆಗೆ ಬಹಳ ಇಂಪಾಗಿ ನಿಧಾನವಾಗಿ ಆಕೆ ಕಂಡಕ್ಟರ್ ಹೇಳಿದ್ದನ್ನೆಲ್ಲಾ ಮಾಡಲು ಆರಂಭಿಸಿದಳು. ಮದುವೆಯಾಗಿ ಮಕ್ಕಳ ಅಪ್ಪನಾದ ಆತನಿಗೋ ಹೆಣ್ಣುಗಳ ಗೀಳು! ಹೇಗಾದರೂ ಮಾಡಿ ಆಶಾ ತನಗೆ ದಕ್ಕಬೇಕೆಂಬುದು ಆತನ ಬಯಕೆಯಾಗಿತ್ತು. ಅದಕ್ಕಾಗಿ ಆತ ಎಲ್ಲಾರೀತಿಯಲ್ಲೂ ಪ್ರಯತ್ನ ನಡೆಸಿಯೇ ನಡೆಸಿದ; ಅಶಾಳನ್ನು ಮರುಳುಮಾಡಿಬಿಟ್ಟ. ತನ್ನ ಮತ್ತು ಕಂಡಕ್ಟರ್ ವಯಸ್ಸಿನ ಅಂತರವನ್ನೂ ಆಕೆ ಲೆಕ್ಕಿಸಲಿಲ್ಲ, ಆತ ಬಿಟ್ಟ’ಅಪ್ಪಟ ಬ್ರಹ್ಮಚಾರಿ’ ಎಂಬ ಹೇಳಿಯನ್ನಾಧರಿಸಿ ನಿಧಾನವಾಗಿ ಆಕೆ ಆತನೆಡೆಗೆ ವಾಲಿದಳು. ಕಾಲೇಜಿನ ಯಾವ ಹುಡುಗನೂ ಮಾಡದ ಕಿಡಿಗೇಡಿತನದ ಕೆಲಸವನ್ನು ಆ ಕಂಡಕ್ಟರ್ ಮಾಡಿದ್ದ. ಕೆಲವೇದಿನಗಳಲ್ಲಿ ಆಶಾ ಆತನನ್ನು ಗುಪ್ತವಾಗಿ ಮದುವೆಯಾದಳು! ವ್ಯಾಸಂಗಕ್ಕಿಂತ ಈ ವ್ಯಸನದಲ್ಲೇ ಹೊತ್ತುಕಳೆದ ಆಕೆಯ ದಿನಚರಿ ಪಾಲಕರಿಗೆ ತಿಳಿಯಲೇ ಇಲ್ಲ. ಯಾವಾಗ ಆಶಾ ಬಸುರಿಯಾದಳೋ ಆಗ ಕಂಡಕ್ಟರ್ ’ರೂಟ್’ ಬದಲಿಸಲು ಆರಂಭಿಸಿದ. ಅಲ್ಲೆಲ್ಲೋ ಆಸ್ಪತ್ರೆಯೊಂದರಲ್ಲಿ ಅಬಾರ್ಷನ್ ಮಾಡಿಸಿದ. ಕೊನೆಗೊಮ್ಮೆ ಆಕೆಯನ್ನು ಮತ್ತಷ್ಟು ಭೋಗಿಸುವ ಹಂಬಲದಲ್ಲಿ ಎಲ್ಲಿಗೋ ಕರೆದುಕೊಂಡು ಒಂದೆರಡು ದಿನ ನಾಪತ್ತೆಯಾಗಿಬಿಟ್ಟ. ಆಮೇಲೆ ಪಟ್ಟಣದ ಬೇರೇ ಕಡೆ ಒಂದು ಖೋಲಿ ಕೊಡಿಸಿದ. ಆ ಖೋಲಿಯಲ್ಲಿ ಅವಳಜೊತೆಗೆ ಚೆಲ್ಲಾಟದ ದಿನಗಳು ಮುಂದುವರಿದವು. ಇತ್ತ ಹೆತ್ತವರು ಕಂಗಾಲಾಗಿ ಎಲ್ಲೆಡೆಗೂ ಹುಡುಕುತ್ತಾ ಆರಕ್ಷಕರಿಗೆ ದೂರು ನೀಡಿದರು. ಹಲವುದಿನಗಳ ನಂತರ ಹೇಗೋ ಪತ್ತೆಹಚ್ಚಿದ ಪೋಲೀಸರೆದುರು ಆಕೆ ಹೇಳಿದ್ದು ತಾನು ಕಂಡಕ್ಟರ್ ನನ್ನೇ ಮದುವೆಯಾಗುತ್ತೇನೆ ಎಂದು. ಹದಿನೆಂಟು ತುಂಬಿದ ಹುಡುಗಿಯಾದ್ದರಿಂದ ಅಪ್ಪ-ಅಮ್ಮ ಕಣ್ಣೀರು ಹಾಕುವುದನ್ನು ಬಿಟ್ಟರೆ ಏನೂಮಾಡುವ ಹಾಗಿರಲಿಲ್ಲ. ’ಎಂಥಾಗತಿ ಬಂತಪ್ಪಾ’ ಎಂದು ಮನದಲ್ಲಿ ಮರುಗಿದರು. ಹಾಗೂ ಹೀಗೂ ವರ್ಷದೂಡಿದ ಕಂಡಕ್ಟರ್ ಮಗುವನ್ನು ಕರುಣಿಸಿದ. ಸಿಗುವ ಸಂಬಳದಲ್ಲಿ ಆತನಿಗೆ ಆಶಾಳನ್ನೂ ಮತ್ತು ಮೊದಲ ಕುಟುಂಬವನ್ನೂ ಸಲಹಲು ಆಗುತ್ತಿರಲಿಲ್ಲ. ಅಷ್ಟರಲ್ಲಿ ಆತನ ಮೊದಲ ಪತ್ನಿಗೂ ವಿಷಯ ತಿಳಿದು ಆಕೆಯ ಗಲಾಟೆ ಆರಂಭವಾಯಿತು. ಕಂಡಕ್ಟರ್ ಕೈ ಬಿಟ್ಟ; ಖೋಲಿಗೆ ಬರುವುದನ್ನೇ ಬಿಟ್ಟ. ಮಗುವಿನೊಂದಿಗೆ ಆಕೆ ಸಾವರಿಸಿಕೊಂಡು ತವರುಮನೆಗೆ ಬಂದಳು.

ಅಕ್ಷರ ಜಾತ್ರೆಗೆ ಬಂದ ಚಿಕ್ಕವಯಸಿಇನ ಚೇತನ್ ಎಂಬ ಹುಡುಗನನ್ನು ಶಿರಸಿ ಶರಣರ ಮಠದ ಸಾಧ್ವಿ ಕಾವಿಯ ಸೆರಗಿನಲ್ಲೇ ಅವಿತು ಪ್ರೀತಿಸಿದಳು. ಆತನಿಗೂ ಅವಳೇ ಸರ್ವಸ್ವವಾಗಿಬಿಟ್ಟಳು. ವಯಸ್ಸಿನಲ್ಲೂ ಹಿರಿಯಳುಬೇರೆ. ಆದರೂ ಅಗಲಿರಲಾರದ ಅದಮ್ಯ ಅನಿಸಿಕೆ! ಅವಳಲ್ಲಿರುವ ಏನೋ ಅವನಿಗೂ ಆತನಲ್ಲಿರುವ ಏನೋ ಅವಳಿಗೂ ಬೇಕಿತ್ತು. ಶರಣೆ ಏಕ್‍ದಂ ಆತನ ಜೊತೆಗೆ ಮಾಧ್ಯಮಗಳ ಮುಂದೆ ಮದುವೆಯ ಪ್ರಸ್ತಾಪವಿಟ್ಟಳು. ಪೋಲೀಸ್ ಸಹಭಾಗಿತ್ವದಲ್ಲಿ ಮದುವೆಯೂ ನಡೆದುಹೋಯಿತು. ಹುಡುಗನ ಅಮ್ಮನ ಅಳಲನ್ನು ಯಾರೂ ಕೇಳಲಿಲ್ಲ; ಕೇಳಿ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮನದ ಹಸಿ ಹಸಿ ಬಯಕೆಗಳನ್ನು ಪೂರೈಸಿಕೊಳ್ಳಲು ೬-೭ ತಿಂಗಳು ಸಾಕಾಯಿತು. ಅವಳಲ್ಲಿರುವ ’ಅದನ್ನು’ ಅವನೂ ಅವನಲ್ಲಿರುವ ’ಅದನ್ನು’ ಅವಳೂ ಯಥೇಚ್ಛ ಪಡೆದಿದ್ದೂ ಆಯಿತು. ಪತಿ ಮತ್ತು ಆತನ ಅಮ್ಮನ ಕಾಟ ತಾಳಲಾರದೇ ಶರಣೆ ತವರಿಗೆ ನಿರ್ಗಮಿಸಿದ್ದೂ ಸುದ್ದಿಯಾಯಿತು!

ಜೋಸೆಫ್ ಮತ್ತು ಸ್ಮಿತಾ ಕಾಲೇಜಿನಲ್ಲಿ ಓದುವಾಗ ಜೋಸೆಫ್ ಎರಡು ತರಗತಿ ಮುಂದಿದ್ದ. ಬಹಳ ಸುಂದರಿಯೆನಿಸಿದ ಸ್ಮಿತಾ ನಕ್ಕರೆ ಅಪ್ಸರೆಯನ್ನೂ ನಾಚಿಸುತ್ತಿದ್ದಳು! ಮಾತನಾಡಿದರೆ ಮುತ್ತು ಉದುರುತ್ತಿತ್ತು. ದಾಳಿಂಬೆಯ ಬೀಜಗಳ ದಂತಪಂಕ್ತಿ ಸಾಕ್ಷಾತ್ ಧರೆಗಿಳಿದ ರತಿದೇವಿ! ಜೋಸೆಫ್ ತೀರಾ ಸುಂದರನಲ್ಲದಿದ್ದರೂ ಕಾಲೇಜಿನ ಚುನಾವಣೆಯಲ್ಲಿ ಗೆದ್ದು ಸ್ಟೂಡೆಂಟ್ ಯೂನಿಯನ್ ಲೀಡರ್ ಆಗಿದ್ದ. ಅವನ ಮಾತುಗಳು ನಡವಳಿಕೆ ಆ ವಯಸ್ಸಿನಲ್ಲಿ ಅವಳಿಗೆ ತುಂಬಾ ಹಿಡಿಸಿದವು. ಅವಳಿಗಾಗಿಯೇ ಆತ ಚುನಾವಣೆಗೂ ನಿಂತಿದ್ದನೆಂದರೂ ತಪ್ಪಾಗಲಿಕ್ಕಿಲ್ಲ. ಅವಳನ್ನು ಪಡೆದೇ ತೀರುವುದು ಅವನ ಹಠ, ಅವನೇ ತಕ್ಕವನೆನ್ನುವುದೂ ಅವಳ ಮನಸ್ಸಿಗೆ ಬಂದಿರುವುದು ದಿಟ. ಅವಳಲ್ಲಿ ’ಏನೋ ಅಂತಹ’ದಿತ್ತು ಅವನಲ್ಲಿಯೂ ’ಏನೋ ಅಂತಹುದಿತ್ತು.’ ಆ ಏನೋ ಅಂಥದ್ದನ್ನು ಪರಸ್ಪರ ಪಡೆಯದೇ ಇರಲು ಸಾಧ್ಯವಾಗುತ್ತಿರಲಿಲ್ಲ. ಆ ’ಏನೋ ಅಂಥದ್ದು’ ದೈಹಿಕವಾಗಿ ಹತ್ತಿರವಿದ್ದರೆ ಮಾತ್ರ ಪಡೆಯಲು ಸಾಧ್ಯವಿತ್ತು. ಅದಕ್ಕೇ ಅವರು ಪರಸ್ಪರ ಪ್ರೀತಿಸಿದರು. ಕಾಲೇಜಿನಿಂದ ಟ್ರಿಪ್ ಹೋಗಿದ್ದ ವೇಳೆ ರಾತ್ರಿ ಬಸ್‍ನಲ್ಲಿ ಅಪ್ಪಿಕುಳಿತರು. ಆಗ ಆ ’ಏನೋ ಅಂಥದ್ದು’ ಸ್ವಲ್ಪ ಹತ್ತಿರವಾಯಿತೇನೋ! ಮತ್ತೂ ಹತ್ತಿರಬರಲಿ ಎಂದುಕೊಂಡ ಅವರು ಪ್ರಯಾಣಕಾಲದಲ್ಲಿ ತಂಗಿದ್ದ ಜಾಗದ ಕೊಠಡಿಯಲ್ಲಿ ಏನೋ ಅಂಥದ್ದನ್ನು ಇನ್ನೂ ಸ್ವಲ್ಪ ಜಾಸ್ತಿ ಪಡೆದರು! ಬರುಬರುತ್ತಾ ಅಗಲಿರಲಾರದ ಹಕ್ಕಿಗಳು ಎಂದರು. ಕಾಲೇಜಿನ ಗೋಡೆಗಳಮೇಲೆ ಎಲ್ಲಿ ನೋಡಿದರೂ ಅವರ ಹೆಸರುಗಳೇ ಬರೆಯಲ್ಪಟ್ಟವು. ಅಪ್ಪ-ಅಮ್ಮನಿಗೆ ಹೇಳದೇಕೇಳದೇ ಕಾಲೇಜು ಮುಗಿಯುವ ಮುನ್ನವೇ ಮದುವೆ ಮಾಡಿಕೊಂಡರು. ಬೆಂಗಳೂರಿಗೆ ಬಂದರು. ಹಲವುದಿನಗಳವರೆಗೆ ’ಏನೋ ಅಂಥದ್ದನ್ನು’ ಪಡೆಯುತ್ತಲೇ ಇದ್ದರು! ಆಮೇಲೆ ಒಂದುದಿನ ಪೂರ್ವ-ಪಶ್ಚಿಮವಾಗಿ ನಿಂತಾಗ ಸ್ಮಿತಾಗೆ ಕೈಲೊಂದು ಮಗು ಹೊಟ್ಟೆಯಲ್ಲೊಂದು ಮಗು ಇದ್ದಿತ್ತು ಎಂಬುದು ಸುದ್ದಿಯಾಯಿತು.

ಬೆಂಗಳೂರಿನ ಶುಭಾ ಎಂಬ ಹುಡುಗಿ ಗಿರೀಶ್ ಎಂಬ ತಂತ್ರಾಂಶ ತಂತ್ರಜ್ಞನನ್ನು ಮದುವೆಯಾಗಲು ಒಪ್ಪಿ ಎಂಗೇಜ್‍ಮೆಂಟ್ ಕೂಡ ನಡೆದುಹೋಯಿತು. ಆ ನಂತರ ಸರಿಯಾಗಿ ೧೦+ ಕೂಡ ಓದಿರದ ಅದ್ಯಾವುದೋ ತಮಿಳು ಹುಡುಗನನ್ನು ಆಕೆ ಪ್ರೀತಿಸುತ್ತಿದ್ದಳಂತೆ. ಎಂಥಾ ಹುಚ್ಚು ಪ್ರೀತಿ ಎಂದರೆ ಆತನನ್ನು ಜಂಗಮವಾಣಿಯಲ್ಲಿ ಸಂದೇಶದಿಂದ ಕರೆದು ಪಾಪದ ಹುಡುಗ ಗಿರೀಶ್‍ನನ್ನು ಕೊಲೆಮಾಡಿಸಿಬಿಟ್ಟಳು. ಆಮೇಲೆ ಈಗ ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ರೂಪದಲ್ಲಾಗಲೀ ವಿದ್ಯೆಯಲ್ಲಾಗಲೀ ದುಡಿಮೆಯಲ್ಲಾಗಲೀ ಹೋಲಿಸಲಾಗದ ತಮಿಳು ಹುಡುಗನಲ್ಲಿ ಆಕೆ ಅದೇನು ಕಂಡಳು? ಅವನಲ್ಲಿರುವ ’ಏನೋ ಅಂಥದ್ದು’ ಅವಳಿಗೆ ಬೇಕಾಗಿತ್ತು! ಅಲ್ಲವೇ ?

ಸ್ನೇಹಿತರೇ, ಕೆಲವು ದಿನಗಳಿಂದ ಬರೆಯಲು ಸಮಯವಾಗಿರಲಿಲ್ಲ. ಮತ್ತೆ ಶುರುಮಾಡಿದ್ದೇನೆ. ಬರುಬರುತ್ತಾ ಮಾಧ್ಯಮಗಳಲ್ಲಿ ಲವ್ವೀ ಡವ್ವಿಯ ಕೇಸುಗಳು ತೀರಾ ಸಾಮಾನ್ಯವಾಗಿ ಮುಖಕ್ಕೆ ಅಪ್ಪಳಿಸ ಹತ್ತಿವೆ. ’ಮಾನವಕುಲ ತಾನೊಂದೆವಲಮ್’ ಎನ್ನುವುದು ಅಗತ್ಯವಾದರೂ ಅದನ್ನು ಸಾಧಿಸಹೊರಡುತ್ತೇವೆ ಎನ್ನುವ ಹಾದಿಯಲ್ಲಿ ಹಲವು ಕಾರೆ ಮುಳ್ಳುಗಳನ್ನು ಕಾಣಬೇಕಾಗಿದೆ. ನಿಜ ಜೀವನದ ಕೆಲವು ವಾಸ್ತವಿಕ ಮುಖಗಳನ್ನು ಅವಲೋಕಿಸಿದರೆ ಅದು ಅರಿವಿಗೆ ಬರುತ್ತದೆ. ಈ ಮೇಲಿನ ಎಲ್ಲಾ ಕಥೆಗಳೂ ಅದಕ್ಕೆ ಜ್ವಲಂತ ಉದಾಹರಣೆಗಳು. ಇನ್ನೂ ಸಾವಿರಾರು ಕಥೆಗಳನ್ನು ತೆಗೆದುಕೊಳ್ಳಬಹುದು. ಬಹುತೇಕ ಎಲ್ಲವೂ ದುಖಾಂತ್ಯದ ಕಥೆಗಳೇ ಆಗಿರುತ್ತವೆ. ಮಾನವೀಯ ಮೌಲ್ಯಗಳು ಕುಸಿಯುತ್ತಾ ನಡೆಯುತ್ತಿರುವ ಈ ದಿನಗಳಲ್ಲಿ ಎಗ್ಗಿಲ್ಲದ ಹಣದ ದಾಹ ಒಂದೆಡೆಗಾದರೆ, ಸ್ವೇಚ್ಛಾಚಾರ ಇನ್ನೊಂದೆಡೆಗೆ ಗಹಗಹಿಸಿ ನಗುತ್ತದೆ! ಅದರಲ್ಲಂತೂ ಹೆಣ್ಣುಮಕ್ಕಳು ತಾವೇ ದುಡಿಯುವ ಮಾರ್ಗಗಳನ್ನು ಅರಸಿ ಬದುಕುತ್ತಿರುವುದರಿಂದ ಅಲ್ಲಲ್ಲಿ ಅಲ್ಲಲ್ಲಿ ಅವರಿಗೆ ಏನೇನು ಬೇಕೋ ಆಯಾ ದಾಹಗಳನ್ನು ಪೂರೈಸಿಕೊಳ್ಳಲು ಅವರು ಮುಂದಾಗುತ್ತಾರೆ. ಝಣ ಝಣ ಕಾಂಚಾಣ ಕೈಗೆ ಬಂದಾಗ ಅವರಿಗೆ ಏನುಮಾಡಬೇಕೆಂಬುದು ತಿಳಿಯುವುದಿಲ್ಲ.

ಇನ್ನೊಂದು ಹಂತವೆಂದರೆ ಓದುವಾಗಿನ ಸಖ್ಯ. ಹದಗೆಟ್ಟ ಮಾಧ್ಯಮಗಳಲ್ಲಿ ಹಗಲಿರುಳೂ ಕಾಮಧ್ಯಾನ ನಡೆದರೆ ಚಿಕ್ಕಹುಡುಗರಿಗೆ ಅದರ ಗೀಳು ಹತ್ತದೇ ಇರಲು ಅವರೂ ಮನುಷ್ಯರಲ್ಲವೇ? ಅಂತಹ ಗೀಳು ಹತ್ತಿಸಿಕೊಂಡ ಹರೆಯದ ಹುಡುಗಿಯರು ಸುಮ್ನೇ ಒಮ್ಮೆ ರುಚಿ ನೋಡುವ ತೆವಲಿನಿಂದ ಯಾರದೋ ಕರೆಯನ್ನು ಮನ್ನಿಸಿ ಅವರೊಟ್ಟಿಗೆ ಗುಪ್ತವಾಗಿ ಮಲಗಿದರೆ, ಓಡಾಡಿದರೆ ಅದರಲ್ಲಿ ಮಾರ್ಗದರ್ಶಿಸಬೇಕಾದ ಹಿರಿಯರ ಹಲವರ ತಪ್ಪೂ ಇದೆ ಎಂಬುದನ್ನು ಮರೆಯುವ ಹಾಗಿಲ್ಲ. ಸಾಮಾನ್ಯವಾಗಿ ೧೦ರಿಂದ ಆರಭ್ಯ ೩೦ ರ ವರೆಗೂ ಇರುವ ಈ ಕಾಲ ಹುಡುಗ-ಹುಡುಗಿಯರಲ್ಲಿ ಹೊಸ ಹೊಸ ಕಲ್ಪನೆ, ಆಕರ್ಷಣೆಗಳನ್ನು ಸೃಜಿಸುವ ಕಾಲವಾಗಿರುತ್ತದೆ. ಸಿನಿಮಾದಲ್ಲಿ ಹೀರೋ ಹೀರೋಯಿನ್ ಯುಗಳಗೀತೆ ಹಾಡುವುದು, ಅಪ್ಪುವುದು, ಚುಂಬಿಸುವುದು, ಹಾಗೂ ಇನ್ನಿತರ ತರಹೇವಾರಿ ದೃಶ್ಯಗಳು ಹದಿಮನಸ್ಸಿನ ಒಳಗೆ ತೂರಿ ಕಾಮಾಂಧರಾಗುವಂತೇ ಪ್ರೇರೇಪಿಸುತ್ತದೆ. ತಾವಿರುವ ಸುತ್ತಲ ಪರಿಸರದಲ್ಲಿಯೇ ಹುಡುಗ ಹುಡುಗಿ ತಮಗೆ ಸಿಗಬಹುದಾದ ಅಥವಾ ತಾವು ಇಷ್ಟಪಡಬಹುದಾದವರನ್ನು ಗುರುತಿಸಿ ಅವರಲ್ಲಿ ಹೀರೋ ಹೀರೋಯಿನ್‍ಗಳನ್ನು ಕಾಣತೊಡಗುತ್ತಾರೆ. ಅಪ್ಪ-ಅಮ್ಮನ ಕಷ್ಟದ ಅರಿವು ಆಗ ಸುತರಾಂ ಬರುವುದಿಲ್ಲ. ದೂರದರ್ಶಕದ ಕೊಳವೆಯಲ್ಲಿ ನೋಡುವಾಗ ಹೇಗೆ ಆ ನಿಗದಿತ ಪ್ರದೇಶಮಾತ್ರ ಕಾಣುತ್ತದೋ ಹಾಗೇ ಕೇವಲ ’ಪ್ರೇಮಿ’ ಎಂಬ ವ್ಯಕ್ತಿಯ ಚಿತ್ರಮಾತ್ರ ಅವರ ಚಿತ್ತಭಿತ್ತಿಯಲ್ಲಿ ಮೂಡುತ್ತದೆ;ಕುಳಿತು ಲಾಸ್ಯವಾಡುತ್ತದೆ. ಮುಂದಿನ ಆಗುಹೋಗುಗಳು, ಜೀವನ ಇವೆಲ್ಲವುಗಳ ಪರಿಜ್ಞಾನ ಆಗ ಇರುವುದೇ ಇಲ್ಲ! " ಬೇಕೆಂದರೆ ಬೇಕು ಅಷ್ಟೇ " !

ಈ ’ಬೇಕೆಂದರೆ ಬೇಕೇ ಬೇಕು’ ಶುರುವಾದಾಗ ಅವರು ಪರಸ್ಪರ ’ಐ ಲವ್ ಯೂ ’ ಎನ್ನಲು ಹಾತೊರೆಯುತ್ತಾರೆ. ಕಾಲೇಜಿನಲ್ಲೋ ಬಸ್‍ಸ್ಟಾಪಿನಲ್ಲೋ ಯಾವುದೋ ಸಭೆ-ಸಮಾರಂಭದಲ್ಲೋ ಸಿಕ್ಕು ಮೌಖಿಕವಾಗಿ ನೇರವಾಗಿ ಅದನ್ನು ಹೇಳಿಕೊಳ್ಳುವ ಆಸೆ ಅತಿಯಾಗಿಬಿಡುತ್ತದೆ. ಅಲ್ಲಲ್ಲಿ ಅವಕಾಶ ಸಿಕ್ಕಾಗ ಮೈ ಹೊಸೆದು ಹೋಗುವುದು ಅಥವಾ ಛೇಡಿಸುವುದು ಆರಂಭವಾಗುತ್ತದೆ. ಇದಕ್ಕೆ ಅವರು ಕರೆದುಕೊಳ್ಳುವುದು ’ಪ್ರೀತಿ’ ಎಂದು. ಆದರೆ ಇದು ನಿಜವಾಗಿಯೂ ಪ್ರೀತಿಯೇ ಎನ್ನುವುದು ಯಕ್ಷಪ್ರಶ್ನೆ. ಇಲ್ಲಿಯೇ ಕೆಲವೊಮ್ಮೆ ತ್ರಿಕೋನ ಚತುಷ್ಕೋನ ಪಂಚಕೋನ ಮುಂತಾದರೀತಿಯ ’ಪ್ರೀತಿ’ ಆರಂಭಗೊಂಡು ಹುಡುಗರು ಕಾಡುಪ್ರಾಣಿಗಳ ರೀತಿ ಕಾದಾಡುತ್ತಾರೆ. ’ಕೈಕೊಟ್ಟಳು ಹುಡುಗಿ’ ಎಂದು ಬಗೆದಾಗ ಆ ’ಪ್ರೀತಿ’ ಎನ್ನಿಸಿಕೊಂಡ ಪ್ರೀತಿ ಕ್ಷಣಾರ್ಧದಲ್ಲಿ ದ್ವೇಷವಾಗಿ ಬದಲಾಗುತ್ತದೆ. ಆ ದ್ವೇಷ ಎಸಿಡ್ ದಾಳಿಗೋ ಕಿಡ್ನಾಪ್ ಮರ್ಡರ್‍ ಗೋ ಕಾರಣವಾಗುತ್ತದೆ. ಇದರಲ್ಲಿ ಇಂದಿನ ಹಲವು ಸಿನಿಮಾಗಳೂ ಪ್ರಮುಖ ಪಾತ್ರವಹಿಸುತ್ತವೆ. ಮನೋರಂಜನೆಗೆ ಸಿನಿಮಾಗಳು ಬೇಕು ನಿಜ, ಆದರೆ ಸಿನಿಮಾಗಳೆಲ್ಲಾ ಉಪೇಂದ್ರನ ಹುಚ್ಚಾಟಗಳನ್ನು ತೋರಿಸಿದರೆ ಅವು ಹಲವು ಅಪಘಾತಗಳಿಗೆ ದಾರಿಮಾಡಿಕೊಡುತ್ತವೆ.

ಇನ್ನು ವಯಸ್ಕರ ದಿಕ್ಕಿಗೆ ಮರಳೋಣ. ಮಾಧ್ಯಮವೊಂದರಲ್ಲಿ ಅಪರಾಧಿಯೊಂದನ್ನು ತೋರಿಸಿದರು. ಆತ ೫-೬ ಮದುವೆಯಾಗಿದ್ದ. ಮದುವೆಯಾಗುತ್ತೇನೆ ಎಂದು ಸ್ವಲ್ಪ ಜಾಸ್ತಿ ವಯಸ್ಕ ಹುಡುಗಿಯರ ಹಿಂದೆ ಬೀಳುವುದು, ಅವರಿಂದ ಹಣ-ಒಡವೆಗಳನ್ನು ಪಡೆಯುವುದು ಆಮೇಲೆ ನಾಪತ್ತೆಯಾಗುವುದು! ಆತನಿಗೂ ಆಕೆಗೂ ಪರಿಚಯವಾಗಿದ್ದು ದಿನಪತ್ರಿಕೆಯೊಂದರಲ್ಲಿ ಆತ ನೀಡಿದ ಜಾಹೀರಾತಿನಿಂದ. ಜಾಹೀರಾತುಗಳಿಗೆ ಮೊದಲೇ ಕಡಿವಾಣವಿಲ್ಲ. ಜಾಹೀರಾತಿನಿಂದ ಆಗುವ ಅಪರಧಗಳನ್ನು ಇನ್ನೊಮ್ಮೆ ನೋಡೋಣ. ಆತ ಕೊಟ್ಟ ಜಾಹೀರಾತಿಗೆ ಆಕೆ ಪ್ರತಿಕ್ರಿಯಿಸಿದಳು. ಆತನೂ ಮುಂದುವರಿದು ಎಲ್ಲೋ ಒಂದು ಪ್ರದೇಶದಲ್ಲಿ ಸಿಕ್ಕರು. ಅಮೇಲೆ ಯಥಾವತ್ ಅದೇಕಥೆ! ಮೊದಲ ಪರಿಚಯದಲ್ಲೇ ಅಗಲಿರಲಾರದಷ್ಟು ’ಪ್ರೀತಿ’! ಕೆಲವೇದಿನಗಳಲ್ಲಿ ಆತನಿಂದ ಹಣಸಹಾಯ ಮಾಡುತ್ತೀಯಾ ಎಂಬ ಪ್ರಸ್ತಾಪ. ಹಣನೀಡಿದ ಆಕೆಯೊಂದಿಗೆ ದೇಹಸುಖವನ್ನೂ ಪಡೆದು ಆಮೇಲೆ ನಾಪತ್ತೆ. ಆತನ ಜಂಗಮದೂರವಾಣಿ ನಿಷ್ಕ್ರ್‍ಇಯ ಅಥವಾ ಬದಲು!

ಇನ್ನೂ ಒಂದು ಹೆಜ್ಜೆ ಮುಂದುವರಿದರೆ ಅನೈತಿಕತೆ. ಗಂಡಸೂ ಹೆಂಗಸೂ ತಮ್ಮತಮ್ಮ ಇತಿಮಿತಿಗಳನ್ನು ಮರೆತು ವಿವಾಹೇತರ ಸಂಪರ್ಕಕ್ಕೆ ಮುಂದಾಗುವುದು. ’ಕದ್ದು ತಿಂದ ಹಣ್ಣಿನ ರುಚಿ ಜಾಸ್ತಿ ಇರುತ್ತದಂತೆ’ ಎಂದುಕೊಂಡ ಅವರ ಮನಸ್ಸಿನಲ್ಲಿ ’ಏನೋ ಅಂಥದ್ದು’ ಬೇಕಾಗಿರುತ್ತದೆ. ತನ್ನ ಗಂಡನಲ್ಲಿ/ಹೆಂಡತಿಯಲ್ಲಿ ಸಿಕ್ಕಿದರೂ ತೃಪ್ತಿಕರವಾಗಿರದ ಆ ’ಏನೋ ಅಂಥದ್ದು’ ಪರರ ಗಂಡ/ಹೆಂಡಿರಲ್ಲಿ ಸಿಗುತ್ತದೆ. ೨-೩ ದೊಡ್ಡ ಮಕ್ಕಳನ್ನು ಹೊಂದಿರುವ ಅನೇಕ ಹೆಂಗಸರು ಅಥವಾ ಗಂಡಸರೂ ಅದನ್ನೆಲ್ಲಾ ಮರೆತು ಎಲ್ಲೋ ಈ ರೀತಿಯ ಸಂಬಂಧಕ್ಕೆ ಮುಂದಾಗುತ್ತಾರೆ. ಕೆಲವೊಮ್ಮೆ ಇಂತಹ ಹಲವು ಸಂಬಂಧಗಳು ಒಂದಾದಮೇಲೆ ಒಂದರಂತೇ ಮುಂದುವರಿಯುತ್ತವೆ! ಕಾರಣವಿಷ್ಟೇ : ಆರ್ಥಿಕ ಸ್ವಾತಂತ್ರ್ಯ. ಗಳಿಸುವ ಅವರಿಗೆ ಮಜಾ ತೆಗೆದುಕೊಳ್ಳಲು ಬೇಡಾ ಎನ್ನಲು ಆಗುವುದೇ? ಅವರಿಗೆ ಯಾವ್ಯಾವ ರೀತಿಯ ಮಜಾ ಎಲ್ಲೆಲ್ಲಿ ಸಿಗುತ್ತದೋ ಅದ್ನ್ನು ಹುಡುಕಿ/ಹಿಂಬಾಲಿಸಿ ಪಡೆಯುತ್ತಾರೆ. ಇಂತಹ ಎಷ್ಟೋ ಕುಟುಂಬಗಳು ಒಡೆದುಹೋಗಿವೆ, ಕೆಲವು ಹಾಗೇ ಇದ್ದರೂ ಆಗಾಗ ಹೊಗೆಯಾಡುವ ಚಿಮಣಿಗಳಂತಿರುತ್ತವೆ!

ಇತ್ತೀಚೆಗಂತೂ ಡೈವೋರ್ಸ್ ಅನ್ನುವುದು ತೀರಾ ಸಾಮನ್ಯವಾಗಿಬಿಟ್ಟಿದೆ. ವಿನಾಕಾರಣ ಡೈವೋರ್ಸ್! ಇಂದು ಮದುವೆ, ಸಾಯಂಕಾಲ ಆರತಕ್ಷತೆ, ಮಾರನೇದಿನ ಬೀಗರ ಊಟ, ವಾರದಲ್ಲೇ ಮಧುಚಂದ್ರ, ಅದುಮುಗಿದ ವಾರದಲ್ಲೇ ವಿಚ್ಛೇದನ! ಇದರಲ್ಲಿ ಹೆಣ್ಣುಗಳ ಪಾತ್ರ ತೀರಾ ದೊಡ್ಡದು. ಹೆಣ್ಣೊಬ್ಬಳು ಗಂಡನ್ನು " ಆತ ಗಂಡಸೇ ಅಲ್ಲಾ " ಎಂದು ವಿಚ್ಛೇದಿಸಿದಾಗ ಹಾಗನ್ನಿಸಿಕೊಂಡ ಆತನಿಗೆ ಎಷ್ಟು ರೋಷ ಉಕ್ಕಿರಬೇಡ? ಮತ್ತೊಂದು ಮದುವೆಯಾಗಿ ಮಗು ಜನಿಸುವವರೆಗೂ ಗೊತ್ತಿರುವ ಹತ್ತಿರದ ಸಮಾಜಕೂಡ ಆತನನ್ನು ಅನುಮಾನಾಸ್ಪದ ರೀತಿಯಲ್ಲಿ ನೋಡುತ್ತಿತ್ತು! ಕೇವಲ ಆರ್ಥಿಕತೆಯನ್ನು ಅವಲಂಬಿಸಿ ಸಂಬಂಧ ಇನ್ನೊಂದು ತೆರನಾದದ್ದು. ಗಂಡನಾದವನು ಕಾರು, ಬಂಗಲೆ, ಸಾಕಷ್ಟು ಧಾರಾಕಾರವಗಿ ಹರಿಯುವ ಬ್ಯಾಂಕ್ ಬ್ಯಾಲೆನ್ಸ್ ಉಳ್ಳವನಾಗಿರಬೇಕು. ಇಲ್ಲದಿದ್ದರೆ ಮದುವೆಯಾದ ಕೆಲವೇ ದಿನಗಳು ಆ ಮದುವೆಯ ಭಾಗ್ಯ! ವಿಚ್ಛೇದಿತ ಮಹಿಳೆಯರಿಗೆ ಇನ್ನೂ ಮದುವೆಯಾಗದಿರುವ ಕನ್ಯೆಯರಿಗಿಂತಾ ಹೆಚ್ಚಿನ ಡಿಮಾಂಡು. ಹೀಗಾಗಿ ವಿಚ್ಛೇದನ ಸುಲಭ ಸೂತ್ರವಾಗಿಬಿಟ್ಟಿದೆ. ಕೆಲವರಂತೂ ಸುಖಾಸುಮ್ಮನೆ ಗಂಡನೆನಿಸಿಕೊಳ್ಳುವ ವ್ಯಕ್ತಿಯಿಂದ ಪರಿಹಾರ ಗಿಟ್ಟಿಸಲು ಮದುವೆಯಾಗುತ್ತಾರೆ. ಅದೇ ಒಂದು ದಂಧೆ! ಇನ್ನು ಕೆಲವರದು ಅನೈತಿಕ ಸಂಬಂಧದ ಹಿನ್ನೆಲೆಯುಳ್ಳದ್ದಾಗಿದ್ದು ಮದುವೆಯಾಗುವವರೆಗೂ ತೋರಬರುವುದಿಲ್ಲ, ಸಮಾಜದ ಕಣ್ಣಿಗೆ ಬೆಣ್ಣೆ ಹಚ್ಚುವ ತಂತ್ರ ಅದು! ಮದುವೆ ಎಂಬುದೊಂದು ಶಾಸ್ತ್ರಕ್ಕೆ. ಮಿಕ್ಕಿದ ಕೆಲಸಕ್ಕೆ ಬೇರೇ ಜನ ಇದ್ದಾರೆ ಎಂಬುದು ಅವರ ಅನಿಸಿಕೆ. ಇಂತಹ ಮದುವೆಗಳೂ ಕೂಡ ವಿಚ್ಛೇದನದಲ್ಲಿ ಪರ್ಯವಸಾನಗೊಳ್ಳುತ್ತವೆ.

ದಿನವೂ ಆಂಗ್ಲ ನಿಯತಕಾಲಿಕಗಳಲ್ಲಿ ಒನ್ ನೈಟ್ ಸ್ಟೇ, ಒನ್ ಡೇ ಫ್ಲಿಂಗ್, ಲಿವಿಂಗ್ ಟುಗೆದರ್ ಮತ್ತಿತರ ವಿದೇಶೀ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸ ನಡೆಯುತ್ತಿದೆ. ಧರಿಸುವ ಬಟ್ಟೆಗಳಂತೂ ಎಲ್ಲವನ್ನೂ ಎತ್ತಿ ತೋರುವ ’ಅಪಾರ’ ದರ್ಶಕಗಳಾಗಿವೆ. ಹುಡುಗಿ ಯಾರು ಹೆಂಗಸು ಯಾರು ಎಂಬ ಭೇದವನ್ನೇ ಹೇಳದ ದಿರಿಸುಗಳು! ಯಾವಾಗ ನೋಡಿದರೂ ಆರ್ಕುಟ್ಟು, ಫೇಸ್ ಬುಕ್ಕು ಇದರಲ್ಲೇ ವ್ಯವಹಾರ! ಇದನ್ನೆಲ್ಲಾ ನೋಡಿದಾಗ ಅನ್ನಿಸುವುದು " ಐ ಲವ್ ಯೂ " ಎಂಬ ಹೇಳಿಕೆಗೆ ಅರ್ಥವಿದೆಯಾ? ಅದು ಕೇವಲ ದೈಹಿಕವಾಗಿ ತೆವಲನ್ನು ತೀರಿಸಿಕೊಳ್ಳುವ ಆಸೆಯಿಂದ ಹೇಳುವ ಮಾತಲ್ಲವಾ ? ಭಾರತದ ಸಾಮಾಜಿಕ ಮೌಲ್ಯ ಯಾಕೆ ಹೀಗಾಗುತ್ತಿದೆ? ಹಿಂದೆ ಹೀಗಿತ್ತಾ ? ಇಷ್ಟೊಂದು ಗರಿಷ್ಠಪ್ರಮಾಣದಲ್ಲಿ ವಿಚ್ಛೇದನ, ಲವ್ವಿ-ಡವ್ವಿ ನಡೆಯುತ್ತಿತ್ತಾ ? ಹಾಗಾದ್ರೆ ಈಗ ಮಾತ್ರ ಯಾಕೆ ಹೀಗಾಗ್ತಾ ಇದೆ? ಆಂಗ್ಲರ ಬೇಡದ ಸಂಸ್ಕೃತಿ ನಮ್ಮ ಸಮಾಜದಮೇಲೆ ಪರಿಣಾಮ ಬೀರಿದೆ ಎಂದರೆ ತಪ್ಪಾ? ವಿಧವಾ ಅಥವಾ ವಿಚ್ಛೇದಿತ ಮಹಿಳೆಯ ಮದುವೆ ನಿಷೇಧವಿತ್ತಲ್ಲವಾ? ಮಹಿಳೆಯರು ಸಾಂಕೇತಿಕವಾಗಿ ತನ್ನ ಶೀಲವನ್ನು ಮಾರಬಾರದೆಂಬ ಅಥವಾ ಪರಭಾರೆಮಾಡಬಾರದೆಂಬ ಕಾರಣಕ್ಕೆ ಕಿವಿ,ಮೂಗು,ಕೈ, ಕೊರಳು, ಕಾಲು ಈ ಅಂಗಗಳಲ್ಲಿ ಆಯಾ ಆಭರಣಗಳನ್ನು ಧರಿಸುತ್ತಿದ್ದರಲ್ಲವಾ? ಇವತ್ತು ಈ ಕಟ್ಟಳೆಗಳು ಕೇವಲ ಹಿಂದುಳಿತ ಸಂಸ್ಕೃತಿ ಎಂದು ನೋಡುವ ನಾವು ಮುಂದೆ ಸಹಜವಾಗಿ ಅನುಭವಿಸಬೇಕಾದ ಹಲವು ಸಮಾಜಿಕ ಪಿಡುಗುಗಳು ಈಗಲೇ ಗೋಚರಿಸಲ್ಪಡುತ್ತಿವೆಯಲ್ಲವೇ? ಅಂದರೆ ’ಐ ಲವ್ ಯೂ " ಎಂಬುದು ಅಣ್ವಸ್ತ್ರಕ್ಕಿಂತಾ ದೊಡ್ಡ ಅಸ್ತ್ರವೆಂದರೆ ತಪ್ಪೇ ? ಈ ಕುರಿತು ಚಿಂತಕರು ಕುಳಿತು ಮಂಥನಮಾಡಬೇಕಾಗಿದೆ. ’ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೇ’ ಎನ್ನುವ ನಾಣ್ನುಡಿ ಇದೆಯಲ್ಲಾ ಅದನ್ನು ಸರಿಯಾಗಿ ಅರ್ಥೈಸಿನೋಡಿ. ಇಂದಿನ ಕಲಿತ ಹೆಣ್ಣು ಹಲವು ಶಾಲೆಗಳನ್ನು ಅಲ್ಲಲ್ಲಿ ತೆರೆಯುತ್ತಾಳೆ! ಯಾಕೆಂದರೆ ಅವಳಿಂದ ಸಮಾಜಕ್ಕೆ ಆಗುವ ಅಪಚಾರ ಕಮ್ಮಿಯೇ? ಕಲಿಕೆ ಬೇರೆ ಮತ್ತು ಸಂಸ್ಕಾರ ಬೇರೆ. ಕೇವಲ ಪದವಿ ಓದಿದ ಹೆಣ್ಣುಮಕ್ಕಳು ಸಂಸ್ಕಾರವಂತರು ಎನ್ನಲು ಸಾಧ್ಯವೇ? ಹಾಗಂತ ಹೆಚ್ಚಿನ ಓದಿರದ ನಮ್ಮ ಹಳ್ಳಿಯ ಹೆಂಗಳೆಯರಲ್ಲಿ ಸಂಸ್ಕಾರದ ಕೊರತೆ ಇದೆಯೇ? ಸ್ವಸ್ಥಸಮಾಜ ಮುನ್ನಡೆಯಬೇಕೆಂದಿದ್ದರೆ ಮಹಿಳೆಯರಿಗೆ ಮಾರ್ಗದರ್ಶನ ಅಗತ್ಯ ಎಂಬುದು ಹಲವರ ಅಂಬೋಣವಾಗಿದೆ. ಅಂದಹಾಗೇ ಮಾಧ್ಯಮಗಳು ತಮ್ಮ ಟಿ.ಆರ್.ಪಿ ರೇಟಿಗಾಗಿ ಕಂಡಿದ್ದನ್ನೆಲ್ಲಾ ದೊಡ್ಡಸುದ್ದಿಮಾಡಿ ಅನೈತಿಕತೆಯನ್ನೇ ವಿಜೃಂಭಿಸಿ ಹುಯಿಲೆಬ್ಬಿಸುವುದನ್ನು ನಿರ್ಬಂಧಿಸಲು ಸಮಾಜಕಲ್ಯಾಣ ಇಲಾಖೆ ತಲೆಹಾಕಬೇಕಾಗಿದೆ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ.