ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 11, 2013

ಕುವೆಂಪುವಿನ ಅದೃಷ್ಟ ಎಲ್ಲರದಾಗಲಿ ಎನ್ನುತ್ತದೆ ಮನಸ್ಸು.

 ಚಿತ್ರ ಋಣ : ಅಂತರ್ಜಾಲ 
 ಕುವೆಂಪುವಿನ ಅದೃಷ್ಟ ಎಲ್ಲರದಾಗಲಿ ಎನ್ನುತ್ತದೆ ಮನಸ್ಸು.

ಕವಿ-ಸಾಹಿತಿ-ಬರಹಗಾರರಿಗೆ ಅವರದ್ದೇ ಆದ ಲೋಕವೊಂದಿರುತ್ತದೆ. ಸಂನ್ಯಾಸಿಗಳು ಮೋಕ್ಷದ ಜಾಡುಹಿಡಿದು ಏಕಾಂಗಿಯಾಗಿ ಮುನ್ನುಗ್ಗಿದಂತೇ, ಬರಹಗಾರರು ಮನದಮೂಸೆಯಲ್ಲಿ ಟಿಸಿಲೊಡೆದ ಹೊಸ ಚಿಗುರ ಹಗುರ ಮೃದುಮಧುರ ಭಾವಗಳನ್ನಾತು ಬರಹದ ವ್ಯವಸಾಯದಲ್ಲಿ ಬೆಳೆತೆಗೆಯಲು ಏಕಾಂಗಿಯಾಗಿರಬೇಕೆಂಬುದು ಬರಹಗಾರರ ಮನದ ಬಯಕೆ. ಕುವೆಂಪು ಬರೆಯುವಾಗ ಮನೆಗೆ ಕಳ್ಳನುಗ್ಗಿ ಕೈಗೆಸಿಕ್ಕಿದ್ದನ್ನು ಕದ್ದೊಯ್ದ ಕಥೆ ನಿಮಗೆ ತಿಳಿದೇ ಇರಬಹುದು; ಆಮೇಲೆ ಕಂಪ್ಲೇಂಟು ಕೊಟ್ಟರು-ಕಾಲ ಟೆಕ್ನಾಲಜಿಯಲ್ಲಾಗಲೀ ಸಾಗಾಟದಲ್ಲಾಗಲೀ ಇಂದಿನಷ್ಟು ಮುಂದುವರಿದಿರಲಿಲ್ಲ; ಕಳ್ಳ ಸಿಕ್ಕಿಬಿದ್ದ. ಸಿಕ್ಕಿಬಿದ್ದ ಕಳ್ಳ ಪೋಲೀಸರಲ್ಲಿ ಹೇಳಿದ್ದು: "ತಾತ ಬರೆಯುತ್ತಲೇ ಇದ್ದರು ನಾನು ಬಂದಿದ್ದನ್ನು ನೋಡಿಯೂ ಅವರಿಗೆ ನಾನು ಬಂದಿದ್ದೆನೆಂಬ ಪರಿವೆಯೇ ಇರಲಿಲ್ಲ!"  ಇದು ಕುವೆಂಪು ಅವರಿಗಿದ್ದ ತಾದಾತ್ಮ್ಯತೆ.

ಸದ್ದಿರದ ಪಸುರುಡೆಯೆ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ......

ಎಂದು ಕುವೆಂಪು ಹೇಳಿದ ಸಾಲುಗಳನ್ನು ನೆನೆದುಕೊಂಡರೆ ಮಲೆನಾಡಿಗರೇ ಧನ್ಯರು ಎನಿಸುತ್ತದೆ. ಮುಂಗಾರು ಮಳೆಬಿದ್ದು, ನೆಲವೆಲ್ಲ ಹಸಿರುಟ್ಟು-ಭೂಮಿ ಮತ್ತು ವಾತಾವರಣ ತಂಪಾಗಿ-ಸೋನೆ ಹನಿವ ಮಳೆಯಲ್ಲಿ ಗದ್ದೆ-ತೋಟಗಳಲ್ಲಿ ಕೆಲಸಕ್ಕೆ ಹೋಗಿ-ನೆನೆದುಬಂದು, ಮರದಕುಂಟೆ ಹೆಟ್ಟಿದ ಬಚ್ಚಲು ಒಲೆಯೆದುರು ಮೈಕಾಯಿಸಿಕೊಳ್ಳುತ್ತಾ ಇದ್ದ ಆ ಕಾಲಘಟ್ಟ ಅಷ್ಟೊಂದುಮಟ್ಟಿಗೆ ಈಗ ಅಲಭ್ಯವಾದರೂ, ಸಹ್ಯಾದ್ರಿಯ ಕೆಲವು ಭಾಗಗಳಲ್ಲಿ ಅನೇಕ ಕಡೆಗಳಲ್ಲಿ ತುಂಬಿಹರಿವ ತೊರೆಗಳು, ಅವುಗಳು ಧುಮ್ಮಿಕ್ಕಿದಾಗ ಜನಿಸುವ ಜಲಪಾತಗಳು, ಸುತ್ತ ಕಾನನದಲ್ಲಿ ಕೂಗುವ ಗಿಳಿ-ಗೊರವಂಕವೇ ಮೊದಲಾದ ಕಾಡುಹಕ್ಕಿಗಳು, ಜನವಿರಳ ಜಾಗದಲ್ಲಿ ಒಂಟಿ ಗುಡಿಸಲು-ಹೀಗೇ ಅದೊಂದು ಪ್ರಕೃತಿರಂಜಿತ ಶೃಂಗಾರಕಾವ್ಯ; ಮಳೆಗಾಲದ ಮಲೆನಾಡು ನಿಜಕ್ಕೂ ಸ್ವರ್ಗ. ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿ ಹುಟ್ಟಿ ಮಲೆನಾಡ ಸೊಬಗನ್ನು ಸಂಪೂರ್ಣ ಆಸ್ವಾದಿಸುವ ಅವಕಾಶ ಕುವೆಂಪು ಅವರಿಗಿತ್ತು. ತುತ್ತಿನ ಚೀಲ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆಯೇನೂ ಇರದಿದ್ದರೂ ||ಉದ್ಯೋಗಂ ಪುರುಷ ಲಕ್ಷಣಂ||--ಎಂಬ ಮಾತಿನಂತೇ ಉದ್ಯೋಗಕ್ಕಾಗಿ ಮೈಸೂರಿನಲ್ಲಿ ಕುವೆಂಪು ನೆಲೆಸಿದರೂ, ಮಲೆನಾಡ ಭೂಮಿಯಲ್ಲಿ ಹುಟ್ಟಿದ ಮನದ ಮೂಲ ಕಸುವು ಅವರ ಸಾಹಿತ್ಯಕ ಜೀವನದುದ್ದಕ್ಕೂ ಅವರಿಗೆ ಬಹಳ ಅನುಕೂಲ ಕಲ್ಪಿಸಿತು.   

ಉತ್ತಮ ಬರಹಗಳು ತಾದಾತ್ಮ್ಯತೆಯುಳ್ಳ ಮನದ ತಪದ ಫಲ. ಒಂದು ಕೈಯ್ಯಲ್ಲಿ ರಿಂಗಣಿಸುವ ಮೊಬೈಲು ಹಿಡಿದು ಉತ್ತರಿಸುತ್ತಾ, ಇನ್ನೊಂದು ಕೈಯ್ಯಲ್ಲಿ ಇನ್ನೆನನ್ನೋ ಹುಡುಕಲು ಯತ್ನಿಸುತ್ತಾ ಏಕವ್ಯಕ್ತಿ-ಅನೇಕವ್ಯಕ್ತಿಗಳಾಗಿ ಬದುಕಬೇಕಾದ ಯಾಂತ್ರಿಕ ಜೀವನ ನಮ್ಮದಾಗಿದೆ; ನಾವೆಲ್ಲಾ ಇಂದು ಬರೆಯುವ ಬರಹಗಳು ತಪಸ್ಸಿಲ್ಲದೇ ಸೊರಗಿದ ಬರಹಗಳಾಗಿ ಹೊರಬರುವಂತಾಗಿದೆ. ಬರಹವೊಂದು ಕಲೆ ಎಂಬುದರ ಜೊತೆಗೆ ಬರಹವೊಂದು ತಪಸ್ಸುಕೂಡ! ವಿಫಲ ತಪಸ್ಸಿನಿಂದ ವಿಪರ್ಯಾಸವೆನಿಸುವ ಬರಹಗಳೇ ಹುಟ್ಟುತ್ತವೆ! ಬರಹದ ಮೂಲ ಉದ್ದೇಶ ಸುತ್ತಲ ಸಮಾಜವನ್ನು ಓದುಗರನ್ನು ನಮ್ಮ ಸಂಸ್ಕೃತಿಯತ್ತ ಜರುಗುವಂತೇ ಸಂಭಾಳಿಸುವುದು. ಅಸಂಸ್ಕೃತರನ್ನೂ ಸುಸಂಸ್ಕೃತರನಾಗಿ ಮಾಡಬಲ್ಲ ಚಾತುರ್ಯ ಉತ್ತಮ ಬರಹಕ್ಕಿರುತ್ತದೆ; ಸುಸಂಸ್ಕೃತರಿಗೆ ಒಂದಷ್ಟು ರಂಜನೆಯೊದಗಿಸುವುದರ ಜೊತೆಗೆ ಅಸಂಸ್ಕೃತರನ್ನು ತಿದ್ದುವ ವಿಷಯವಿಸ್ತಾರ ಬರಹಕ್ಕಿರಬೇಕು. ಅದಕ್ಕೆಂದೇ  ನಮ್ಮ ಹಿರಿಯರು ’ದೇಶ ತಿರುಗು ಇಲ್ಲಾ ಕೋಶ ಓದು’ ಎಂದಿದ್ದಾರೆ.

ಪಶ್ಚಿಮದ ದೇಶಗಳಿಗೆ ಅದೆಷ್ಟೋ ಜನ ಹೋಗಿಬರುತ್ತಾರೆ, ಹೋಗಿಬಂದಿದ್ದಾರೆ. ಆದರೆ ಕಾರಂತರು ಕಂಡ ಪಶ್ಚಿಮವೇ ವಿಶಿಷ್ಟವಾಗಿತ್ತು; ಅದನ್ನವರು ’ಅಪೂರ್ವ ಪಶ್ಚಿಮ’ದಲ್ಲಿ ಹೇಳಿಕೊಂಡಿದ್ದಾರೆ-ಅದೊಂದು ಅನುಭವದ ರಸಗಟ್ಟಿ. ಅನೆ ನಡೆದದ್ದೇ ದಾರಿ ಎಂದ ಹಾಗೇ ಕಾರಂತರು ತಮ್ಮ ಬರಹಗಳಲ್ಲಿ ತಾವು ನಡೆದದ್ದನ್ನೇ ದಾರಿಯನ್ನಾಗಿಸಿಕೊಂಡವರು. ಅಂತಹ ಕಾರಂತರು, ಇಂದಿರಾಗಾಂಧಿ ಮೀಸಾಕಾಯ್ದೆಯಲ್ಲಿ ಅನೇಕ ರಾಷ್ಟ್ರಪ್ರೇಮಿಗಳನ್ನು ಬಂಧಿಸಿ ಒಳಗಿಟ್ಟ ಸಂದರ್ಭದಲ್ಲಿ, ಕೇಂದ್ರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲು ಮುಂದಾದಾಗ "ನಿಮ್ಮ ಪ್ರಶಸ್ತಿಗಳು ನಿಮ್ಮಲ್ಲೇ ಇರಲಿ, ನನಗದರ ಅವಶ್ಯಕತೆಯಿಲ್ಲ, ದೇಶಪ್ರೇಮಿಗಳನ್ನು ಮೊದಲು ಬಂಧಮುಕ್ತಗೊಳಿಸಿ" ಎನ್ನುತ್ತಾ ವಾಪಸು ಕಳಿಸಿದರು! ಕಾರಂತರ ’ಬೆಟ್ಟದಹೂವು’ ಅರಳಿದ್ದು ಕೊಡಗಿನ ಗುಂಡುಕುಟ್ಟಿ ಮಂಜುನಾಥಯ್ಯನವರ ಮನೆಯಲ್ಲಿ. ಅದನ್ನು ಅರಳಿಸುವಾಗ ಎರಡು ತಿಂಗಳುಗಳಕಾಲ ಕಾರಂತರು ಅಲ್ಲೇ ಸತತವಾಗಿ ಉಳಿದುಬಿಟ್ಟಿದ್ದರಂತೆ! ಮಂಜುನಾಥಯ್ಯನವರು ತೀರಿಕೊಂಡ ಸಂದರ್ಭದಲ್ಲಿ ಅವರನ್ನು ನೆನೆಯುತ್ತಾ, ಆಗಿನ್ನೂ ಬದುಕಿದ್ದ ಕಾರಂತರು,ಬಹಳ ಭಾವಪೂರ್ಣವಾಗಿ ನುಡಿನಮನ ಲೇಖನವೊಂದನ್ನು ಬರೆದಿದ್ದುದನ್ನು ಬಲ್ಲೆ. ’ಮೂಕಜ್ಜಿಯ ಕನಸುಗಳು’, ’ಹುಚ್ಚುಮನಸ್ಸಿನ ಹತ್ತು ಮುಖಗಳು’ ಎಂಬ ಅನುಭವ ಕಥನಗಳನ್ನೇ ಕಾದಂಬರಿಗಳನ್ನಾಗಿಸಿದ ಕಾರಂತರು ’ಚೋಮನ ದುಡಿ’ಯಿಂದ ಸದ್ದನ್ನೂ ಹೊರಡಿಸಿದವರು. ಮೇಲಾಗಿ ’ಈ ಜಗತ್ತು’ ಎಂಬ ಐದು ಬೃಹತ್ ಸಂಪುಟಗಳ ಖಗೋಲ ಗ್ರಂಥವನ್ನು ಸಮಾಜಕ್ಕೆ ಕರುಣಿಸಿದವರು. ಕಾರಂತರ ಆ ಕೃತಿಗಳಲ್ಲಿ ನನ್ನನ್ನೇ ನಾನು ಮರೆತಿದ್ದೆ.

ವ್ಯಕ್ತಿ ಉತ್ತಮನಾಗುತ್ತಾ ಲೋಕದ ಚಿಲ್ಲರೆ ಜಂಜಾಟದ ವಿಷಯಗಳನ್ನು ಆದಷ್ಟೂ ಮರೆಯಬೇಕು; ಅದು ಅಧೋಲೋಕ, ಅಲ್ಲಿಯೇ ಇದ್ದುಬಿಡುವುದರಿಂದ ನಮ್ಮ ಮನಸ್ಸು ಹಾಳಾಗಿಹೋಗುತ್ತದೆ. ಸಂಸ್ಕಾರಯುತ ಜೀವನಕ್ರಮದಿಂದ ಸಹಬಾಳ್ವೆ ಸಾಧ್ಯವಾಗುತ್ತದೆ. ಸಮಾಜವೇ ಎದ್ದುನಿಂತು ಸಂಸ್ಕಾರವಂತನನ್ನು ಗೌರವಿಸುತ್ತದೆ. ನಾಲ್ಕುಜನ ಸಂಸ್ಕಾರವಂತನ ಮಾತಿಗೆ ಓ ಗೊಡುತ್ತಾರೆ, ಕೆಲವೊಮ್ಮೆ ಸಲಹೆಗಳನ್ನೂ ಕೇಳುತ್ತಾರೆ. ಸಂಸ್ಕಾರಗೊಂಡ ಮನಸ್ಸು ಆತ್ಮೋನ್ನತಿಗೆ ಕಾರಣವಾಗುತ್ತದೆ. ಸಂಕೀರ್ಣತೆ ತೊಲಗಿ ಸರಳತೆ ಮೈಗೂಡುತ್ತದೆ. ಯಾವುದರ ಮೇಲೂ, ಯಾರಮೇಲೂ ಅವಲಂಬಿತ ಬದುಕು ಅದಾಗಿರುವುದಿಲ್ಲ! ಕಾರು ಇದ್ದರೂ ಸರಿ, ಬಸ್ಸು ಇದ್ದರೂ ಸರಿ, ಏನೇ ಇರದೇ ’ವಿನೋಬಾ ಸರ್ವಿಸ್ಸಾ’ದರೂ ಸರಿ!-ಯಾವುದಕ್ಕಾದರೂ ವ್ಯಕ್ತಿ ಸಿದ್ಧ; ಪ್ರಯಾಣಿಸಿ ಗಮ್ಯ ತಲ್ಪಬೇಕು ಎಂಬುದಷ್ಟೇ ಗುರಿ. ಶತಾವಧಾನಿ ಡಾ|ಗಣೇಶರು ಇವತ್ತಿಗೂ ಸ್ವಂತಕ್ಕಾಗಿ ಒಂದು ವಾಹನ ಇಟ್ಟುಕೊಂಡಿಲ್ಲ. ಎಷ್ಟೇ ಕಾರ್ಯಕ್ರಮಗಳ ಒತ್ತಡವಿದ್ದರೂ ಸಮಯ ಪರಿಪಾಲಿಸುವುದರಲ್ಲಿ ತಪ್ಪಿಲ್ಲ. ಹಾಗೆನೋಡಿದರೆ ಅವರಿಗೆ ದಿನದ ೨೪ ಗಂಟೆಯೂ ಸಾಲುತ್ತಿಲ್ಲ! ಜ್ಞಾನದ ಗಣಿಯಾದ ಅವರ ಸರಳ ಬದುಕನ್ನು ನೆನೆಯುವಾಗ ನಾವೆಲ್ಲಾ ಎಳ್ಳಿನಷ್ಟೂ ಪ್ರಯೋಜನಕಾರಿಗಳಲ್ಲವೆನಿಸುತ್ತದೆ. ಗಣೇಶರು ಯಾಕೆ ಹಾಗಿದ್ದಾರೆ ಎಂದರೆ ಅದೊಂದು ತುಂಬಿದಕೊಡ! ವಿಶ್ವದ ಅನೇಕ ಭಾಷೆಯ, ಭಾರತದ ಬಹುಭಾಷೆಯ ಉತ್ತಮೋತ್ತಮ ಪುಸ್ತಕಗಳನ್ನೆಲ್ಲಾ ಓದುತ್ತಾ, ಆ ಹಸಿರು ಹುಲ್ಲುಗಾವಲಿನಲ್ಲಿ ಮೆಂದ ಅವರ ಮನಸ್ಸು ಪಕ್ವವಾಗಿಬಿಟ್ಟಿದೆ; ಸರಳತೆ ಮೈಗೂಡಿಬಿಟ್ಟಿದೆ.

ಉತ್ತಮ ಕೃತಿಗಳ ಓದು ನಮ್ಮನ್ನು ಸಂಸ್ಕಾರವಂತರನ್ನಾಗಿಸುತ್ತದೆ. ಉತ್ತಮರೊಡನಾಟ ನಮ್ಮನ್ನು ಮೇಲಕ್ಕೆತ್ತುತ್ತದೆ-ಅದು ಊರ್ಧ್ವಲೋಕ! ಅಧೋಲೋಕ ಎಂಬುದು ತಿಪ್ಪೆಯ ಜೀವನ, ಊರ್ಧ್ವಲೋಕವೆಂಬುದು ಉಪ್ಪರಿಗೆಯ ಜೀವನ. ಭಾರತದ ಹಿರಿಯ ಕವಿ-ಸಾಹಿತಿಗಳೆಲ್ಲಾ ಅದರಲ್ಲೂ ಸಂಸ್ಕೃತ ಕವಿಗಳೆಲ್ಲಾ ಸ್ವತಃ ದಾರ್ಶನಿಕರಾಗಿದ್ದಾರೆ. ಅಂಥವರ ಕೃತಿಗಳನ್ನು ಓದುತ್ತಿರುವಂತೇ ನಮ್ಮ ಬುದ್ಧಿ-ನಮ್ಮ ಅಪಕ್ವ ಮನಸ್ಸು ಎಷ್ಟು ಸಂಕುಚಿತ ಮತ್ತು ದುರ್ಬಲ ಎಂಬುದು ಗೊತ್ತಾಗುತ್ತದೆ. ಬರಹಗಾರರು ಎಂದುಕೊಳ್ಳುವ ನಾವು ನಿಜವಾಗಿಯೂ ಅವರಷ್ಟು ಜ್ಞಾನವಂತರೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಕುವೆಂಪು ಅವರ ಕಾಲದ, ಕಾರಂತರ ಕಾಲದ ಮಲೆನಾಡಿನ ಯಾ ಕರಾವಳಿಯ ರಮ್ಯಮನೋಹರ ದೃಶ್ಯಾವಳಿಗಳು ನಗರದಲ್ಲೆಲ್ಲೋ ಇಂದು ಬರೆಯುತ್ತ ಕೂರುವ ನಮಗೆ ಸಿಗುವುದು ಕಷ್ಟ. ಈ ಇಬ್ಬರ ಕಾಲದಲ್ಲೇ ಪ್ರಕೃತಿ ಹೀಗಿತ್ತೆಂದರೆ ಇನ್ನು ರಾಜರುಗಳ ಕಾಲದಲ್ಲಿ ಕವಿ-ಸಾಹಿತಿಗಳಿಗೆ ಬೆಂಬಲವೆಷ್ಟಿದ್ದಿರಬಹುದು? ಧಾರಾನಗರಿಯ ರಾಜಾ ಭೋಜನ ಆಸ್ಥಾನದಲ್ಲಿ ಮಹಾಕವಿ ಕಾಳಿದಾಸನಿದ್ದ; ತನ್ನ ಕಾವ್ಯ-ಕೃತಿಗಳಿಂದ ಭೋಜರಾಜನನ್ನೇ ತನ್ನ ಸ್ನೇಹಿತನನ್ನಾಗಿ ಪಡೆದ ಅದೃಷ್ಟ ಕಾಳಿದಾಸನದ್ದು! ಭಾರತದ ಭವ್ಯ ಇತಿಹಾಸದಲ್ಲಿ ಸಂಸ್ಕೃತದ ದಂಡಿ, ಮಾಘ, ಅಶ್ವಘೋಷ, ವರಾಹಮಿಹಿರ, ಸಾಯಣ, ಬಾಣ, ಮೊದಲಾದವರೂ ಕನ್ನಡದಲ್ಲಿ ಪಂಪ, ರನ್ನ, ಪೊನ್ನ, ಜನ್ನ, ರಾಘವಾಂಕ, ಹರಿಹರ, ಲಕ್ಷ್ಮೀಶ, ಕುಮಾರವ್ಯಾಸಾದಿ ಅನೇಕ ಮಹಾಕವಿಗಳ, ಕೃತಿಕಾರರ ಸಾಲು ಕಾಣಸಿಗುತ್ತದೆ.  

ಆವ ಜನ್ಮದ ಋಣವೊ ಮತ್ತಿ
ನ್ನಾವ ಪುಣ್ಯದ ಫಲವೊ ಭೂಮಿಯ
ಭಾವ ಬಂಧನ ಸೆಳೆದುತಂದಿತು ಕನ್ನಡಕೆ ನನ್ನಂ|
ಜೀವತಂತುಗಮೃತ ಜ್ಞಾನವ
ನೀವ ಸಖ ಗುರುಹಿರಿಯರೆಲ್ಲರ
ಸೇವಿಪುದು ಡಾರಾಗಣೇಶರನೆಲ್ಲದಕು ಮುನ್ನಂ ||   [--ಸ್ವರಚಿತ ]

ಇಂದಿನ ಕಲುಷಿತ ರಾಜಕೀಯದಲ್ಲಿ, ಬರೆದದ್ದೇ ಸಾಹಿತ್ಯವೆಂದು ಕೂಗುವ ಕುರಿಮೆಂದೆಯಲ್ಲಿ ನಿಜವಾದ ಬರಹಗಾರರಿಗೆ, ಡಾ|ಗಣೇಶರಂತಹ ಪ್ರಾತಃಸ್ಮರಣೀಯರಿಗೆ ಸರಕಾರದ ಬೆಂಬಲವಿರುವುದಿಲ್ಲ. ’ಜಾತಿಯಾಧಾರಿತ ಮೀಸಲಾತಿಯುಳ್ಳ ಜಾತ್ಯಾತೀತವೆಂಬ ಘನ ಸರಕಾರ’ದಲ್ಲಿ ಪ್ರತಿಭೆ ಲೆಕ್ಕಕ್ಕಿಲ್ಲ, ಜಾತಿಯಷ್ಟೇ ಆಧಾರ. ಕಂಡಿದ್ದನ್ನು ಹೇಳುವ ಮನಸ್ಸಾಗುತ್ತದೆ, ಹೇಳಿದರೆ ಕೆಲವರಿಗೆ ಬೇಸರವಾಗಲೂಬಹುದು. ಗಣೇಶರಂತಹ ಪ್ರತಿಭೆ ವಿದೇಶಗಳಲ್ಲಿದ್ದರೆ ಅವರ ಮೆದುಳಿನಮೇಲೆ ಅದೆಷ್ಟು ಸಂಶೋಧನೆಗಳು ನಡೆಯುತ್ತಿದ್ದವೋ ಅರಿಯೆ! ಇಂಥವರು ಅಲ್ಲಿದ್ದರೆ ಅಲ್ಲಿನ ಸರಕಾರ ಬೇಕಷ್ಟು ಸವಲತ್ತುಗಳನ್ನು ಕಲ್ಪಿಸುವುದರ ಜೊತೆಗೆ ಉಪಜೀವಿತದ ಯಾವುದೇ ಸಮಸ್ಯೆಗಳಿಂದಲೂ ಅವರ ಜ್ಞಾನಯಜ್ಞಕ್ಕೆ ಅಡ್ಡಿಯಾಗದಂತೇ ನೋಡಿಕೊಳ್ಳುತ್ತಿತ್ತು. ಮಹಾನಗರಿಯ ಕಾಂಕ್ರೀಟ್ ಕಾಡುಗಳಲ್ಲೇ ’ಸದ್ದಿರದ ಪಸುರುಡೆ ಮಲೆನಾಡ ಬನ’ದಂತಹ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಅವರು ನಡೆಸುವ ಕಾವ್ಯಕೃಷಿ ಅನ್ಯಾದೃಶ. ನಡೆದಾಡುವ ವಿಶ್ವಕೋಶದಂತಿರುವ ಅವರು ಸರಕಾರಕ್ಕೆ ಕಾಣಲೇ ಇಲ್ಲ! ಸರಕಾರ ಗಣಿಸಿಲ್ಲವೆಂದು ಗಣೇಶರು ಯಾರಲ್ಲೂ ಹೇಳಿದ್ದಿಲ್ಲ, ಹೇಳುವುದೂ ಇಲ್ಲ; ನಾನು ಇಲ್ಲಿ ಹೀಗೆ ಬರೆದಿದ್ದನ್ನು ಕಂಡರೂ/ತಿಳಿದುಕೊಂಡರೂ ಆಕ್ಷೇಪಿಸಿಯಾರು. 

ಶರೀರದಲ್ಲಿ ಎಲ್ಲಾ ಅಂಗಗಳೂ ಬೇಕು. ಬರೇ ಕಣ್ಣು, ಬರೇ ಮೂಗು, ಬರೇ ಬಾಯಿ, ಬರೇ ಕಿವಿ ಇದ್ದರೆ ಸಾಲುತ್ಯೇ? ಕೆಲಸಮಾಡಲು ಕೈಯ್ಯಿರಬೇಕು, ನಡೆದಾಡಲು ಕಾಲಿರಬೇಕು..ಹೀಗೇ ಆಯಾಯ ಅವಯವಗಳು ಆಯಾ ಕೆಲಸಗಳಿಗೆ ಬೇಕೇ ಬೇಕು. ಸಮಾಜವೆಂಬ ಶರೀರಕ್ಕೆ ಅದರ ಅವಯವಗಳಾದ ನ್ಯಾಯಾಂಗ-ಕಾರ್ಯಾಂಗ-ಶಾಸಕಾಂಗ ಇವೆಲ್ಲಾ ಇರುವಂತೇ ಸಂಗೀತ-ಸಾಹಿತ್ಯ-ಕಲೆಗಳೂ ಬೇಕು. ||ಸಂಗೀತ ಸಾಹಿತ್ಯ ಕಲಾ ವಿಹೀನಾಂ ಸಾಕ್ಷಾತ್ ಪಶೂನಾಂ ಪರ ಪುಚ್ಚ ವಿಹೀನಃ|| -ಎಂದು ನಮ್ಮ ಪೂರ್ವಜರು ಹೇಳಿದ್ದೇಕೆಂದರೆ, ಸಂಗೀತ-ಸಾಹಿತ್ಯ-ಕಲೆಗಳಿಂದ ನಮ್ಮ ಬದುಕು ಅಧೋಲೋಕದಿಂದ ಊರ್ಧ್ವಲೋಕದೆಡೆಗೆ ತೆರಳಲು ಅನುಕೂಲವಾಗುತ್ತದೆ. ಸಮಾಜ ಉತ್ತಮ ಸಂಸ್ಕಾರವನ್ನು ಪಡೆಯಲಿಕ್ಕೆ ಸಹಕರಿಸುವುದರ ಜೊತೆಗೆ ಒತ್ತಡದ ಬೇನೆಗಳನ್ನು ನಿವಾರಿಸುವಲ್ಲಿ ಅವು ಫಲಕಾರಿಯಾಗಿವೆ. ಕುವೆಂಪು ಅವರು ಪಡೆದ ನೈಸರ್ಗಿಕ ದೃಶ್ಯಾವಳಿಗಳು, ಅಷ್ಟೊಂದು ಸಮಸ್ಯಾರಹಿತ  ಸ್ವಾತಂತ್ರ್ಯ ಇಂದಿನ ಕವಿಗಳಿಗೆ ಸಿಗುತ್ತಿಲ್ಲ; ಅಂತಹ ಅದೃಷ್ಟ ಬರಹಗಾರರಿಗೂ, ಬರಹಗಳನ್ನು ಪ್ರೀತಿಯಿಂದ ಓದುವವರಿಗೂ ಲಭಿಸಲಿ ಎಂಬುದು ಇಂದಿನ ಹಾರೈಕೆ, ಶುಭದಿನ.