ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, April 21, 2012

ಪದವಿ-ಪ್ರಮಾಣ

ಚಿತ್ರಋಣ: ಅಂತರ್ಜಾಲ 
ಪದವಿ-ಪ್ರಮಾಣ

ಕುದಿದ ಬೇರಿನ ನೀರು ತೆಗೆದಿರಿಸಿ ಪಾತ್ರೆಯಲಿ
ಹದದಿ ಕುಡಿಯುವ ವಿಧವ ಕಂಡ ಕೆಲವುಜನ
ಗೆದರಿ ತಾಳೆಯನೋಡಿ ವಿವಿಧ ರೋಗವ ಕಳೆವ
ಚದುರರಾದರು ಅರಿತು | ಜಗದಮಿತ್ರ

ನಿತ್ಯಜೀವನಕೆನುತ ಉಪಕರಣಗಳ ತಡಕಿ
ಸತ್ಯವಾಗಿಸುವಲ್ಲಿ ಬೆಂಬತ್ತಿ ಬಹಳ
ಪಥ್ಯವಲ್ಲದ ಕಷ್ಟ ಘಳಿಗೆಗಳ ಸಹಿಸಿದರು
ತಥ್ಯ ವಿಜ್ಞಾನತಮ | ಜಗದಮಿತ್ರ

ಓದಿ ಉರುಹೊಡೆಯುತ್ತ ಉತ್ತಮದ ಅಂಕಗಳ
ಸಾದರದಿ ಗೌರವವ ಪಡೆದರೆಲ್ಲಿಗದು?
ಕಾದ ಕಾವಲಿಯಲ್ಲಿ ಬೆಂದ ಹಿಟ್ಟಿನ ತೆರದಿ
ಸಾಧಕಗೆ ಪದವಿಯದು | ಜಗದಮಿತ್ರ

ಅರಿತ ವಿದ್ಯೆಯ ಪ್ರಕೃತ ಬಳಸಿ ಪ್ರಾಯೋಗಿಕದಿ
ನುರಿತ ಅನುಭವ ಪಡೆಯೆ ಕೊರತೆ ನೀಗುವೊಲು
ಒರತೆಯಿಂದಲಿ ನೀರು ಹೊರಹರಿದು ಬಂದಂತೆ
ಭರಿತ ಜ್ಞಾನವು ಶ್ರೇಷ್ಠ | ಜಗದಮಿತ್ರ  

ಅಳತೆ ಕೇವಲ ಲೆಕ್ಕ ವಿದ್ಯಾರ್ಥಿಯಾದವಗೆ
ಹಳತು ಹೊಸತರ ನಡುವೆ ಕುಳಿತು ಮಥಿಪನಿಗೆ
ಬೆಳೆತೆಗೆದ ಸಾಕ್ಷಿಗದೊ ಪದವಿ ಪತ್ರಗಳಷ್ಟೇ
ಕಳಿತ ಬುದ್ಧಿಯೆ ಮಿಗಿಲು | ಜಗದಮಿತ್ರ

ಜಗವು ಚಿಕ್ಕದು ಎನಿಸೆ ಸಂಪರ್ಕ ಮಾಧ್ಯಮದಿ
ನೊಗವ ಹೊತ್ತವಬಲ್ಲ ಭಾರದೇರಿಳಿತ
ಸೊಗವೆ ಮಾಹಿತಿಯರಿವು ನಿತ್ಯ ವಿಸ್ತರಿಸುವುದು?
ಬಗೆಯ ವಿಸ್ತಾರವದು | ಜಗದಮಿತ್ರ

ಇದಕಂಡೆ ಅದಕಂಡೆ ಬೆದಕುತ್ತ ಹದಿನಾರು
ಕೆದಕಿ ನೋಡಿದರಲ್ಲಿ ಸಾವಿರದ ನೂರು !
ಚಿದುಕುತ್ತ ನಡೆವಂಗೆ ಕಾಣದಚ್ಚರಿಯೆಷ್ಟೋ
ಬದುಕು ನಿತ್ಯದ ಪಾಠ | ಜಗದಮಿತ್ರ

ಹೊಸದಾದ ವಿಷಯಗಳ ಹೊತ್ತಗೆಯ ರೂಪದಲಿ
ಬೆಸಗೊಂಡ ಕೆಲವರದೊ ಒಟ್ಟುತೊಂದೆಡೆಗೆ
ಹೆಸರಿಟ್ಟು ಗುರುತಿಸುತ ವಿಶ್ವವಿದ್ಯಾಲಯವ
ಬೆಸುಗೆ ಮಾಹಿತಿಕೇಂದ್ರ | ಜಗದಮಿತ್ರ 

ರಸಗವಳವಂ ಕಾಣೆ ಖುಷಿಯು ಎಲ್ಲರ ಮೊಗದಿ
ಒಸಗೆ ನವಖಾದ್ಯಗಳ ನೈವೇದ್ಯವೆನಲು !
ಮೊಸರ ಕಡೆದಾವೇಳೆ ಕುಸುಕಿ ಮಜ್ಜಿಗೆ ಬೆಣ್ಣೆ
ಕಸುವು ನಿಷ್ಣಾತನದು | ಜಗದಮಿತ್ರ

ಕೆಲವ ಕಲಿಯಲು ಬೇಕು ಓದಿನಾಲಯಗಳಲಿ
ಹಲವನರಿಯಲು ಮಿಳಿತು ಬಲ್ಲ ಬಳಗದಲಿ 
ಇಲಿ-ಜೇನು-ಗೆದ್ದಲಿನ ತಂತ್ರಗಾರಿಕೆಗಳಲಿ
ಛಲ ಬೇಕು ಅರಿಯುವೊಲು | ಜಗದಮಿತ್ರ