ಚಿತ್ರಋಣ: ಮೈ ಇಂಡಿಯಾ ಪಿಕ್ಚರ್ಸ್ . ಕಾಂ
ಕರುವಿನ ಮೊರೆ
[ಹೋರಿಗರುವನ್ನು ಹುಟ್ಟಿದ ಕೆಲವೇ ದಿನಗಳಲ್ಲಿ ಅಮ್ಮನ ಹಾಲನ್ನು ತಪ್ಪಿಸಿದ ಮಾಲೀಕ ಕಟುಕರಿಗೆ ಮಾರುತ್ತಾನೆ, ಏನೂ ಅರಿಯದ ಆ ಮುಗ್ಧ ಕರುವಿನ ಬಾಯನ್ನೇ ಹೊಲಿದು [ಸಾಗಾಣಿಕೆಮಾಡುವಾಗ ಕೂಗಿಕೊಳ್ಳದಂತೇ] ಸಾಗಿಸುವಾಗಿನ ದೃಶ್ಯ ಹೃದಯವಿದ್ರಾವಕ, ಕಲ್ಪಿಸಿಕೊಳ್ಳಲೂ ಕಣ್ಣೀರು ಒಸರುವ ಇಂತಹ ಕೃತ್ಯಗಳು ಈಗ ನಡೆಯುತ್ತಿವೆ:]
ತಾಯಹಾಲನು ಬಿಡಿಸಿ ಬಾಯನ್ನೇ ಹೊಲಿಯುತ್ತ
ಮಾಯದೆಳೆತಂದರು ಹರನೇ
ಸಾಯಿಸಿ ತಿಂಬರು ಆರೂ ಕೇಳುವರಿಲ್ಲ
ರಾಯ ಮಾರಿದನೆನ್ನ ಬಿರನೇ
ಕಾಯದಳೆದೆನು ಇಹದಿ ಕಾಣದೀಕ್ರೌರ್ಯವ
ನೇಯ ಮಾನವ ರಚಿತ ಚಿತ್ರ
ಪಾಯವಿಲ್ಲೆನಗಿನ್ನು ದೀನವೆನ್ನಯ ಜನ್ಮ
ಜೀಯ ಓದೀ ಮೂಕ ಪತ್ರ !
ಮಾಯಕದ ಮಳೆನಿಂತು ಭೂಮಿ ಬರಡಾಗುತ್ತ
ಕಾಯಕದೊಳು ನಷ್ಟವಾಗಿ
ಹಾಯುವ ಸಾಲದ ಜನರೀಗುತ್ತರಿಸುತ್ತ
ಬೇಯತೊಡಗಿದನುಳುವ ಯೋಗಿ
ಬೀಯು ಇಲ್ಲದ ಹಟ್ಟಿ ಮೇವು ಇಲ್ಲದ ಬಯಲು
ನಾಯಿಗಿಂತಾ ಕಡೆಯ ಬಾಳು
ಛಾಯೆಕಾಣದು ಹೊರಗೆ ಮುಚ್ಚಿದವಾಹನ
ಕಾಯುತೊಯ್ದರು ಹೇಳೇ ಗೋಳು
ತೇಯುತಾಕೆಯ ಜೀವ ಹಾಲನ್ನೇ ಉಣಬಡಿಸಿ
ಗಾಯದಾ ಮೈಮನದಲ್ಲೂ
ಗೇಯುತಲೆನ್ನಮ್ಮ ಒಡೆಯನೊಳಿತನು ಬಯಸಿ
ಮೇಯದಾ ಆ ಹಸಿವಲ್ಲೂ
ನೋಯುತಲಿರುವಂತೇ ಮುರಿದು ಕಾಲ್ಗಳಮಡಚಿ
ಬಾಯಾರಿಕೆಗು ಏನೂ ಕೊಡದೇ
ಈಯುವ ಹಸುವಲ್ಲ ಬಸವಣ್ಣ ನಾನೆಂದು
ಹೇಯವಾಗಿಯೆ ಕಡಿದು ಬಡಿದೇ