ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 10, 2011

ಅಣ್ಣಾ ಹಜಾರೆ ಮತ್ತು ಸಾಯಿಬಾಬಾರಂಥ ಕೆಲಜನ



ಅಣ್ಣಾ ಹಜಾರೆ ಮತ್ತು ಸಾಯಿಬಾಬಾರಂಥ ಕೆಲಜನ

ವಿಷಯ ನಿಮಗೆಲ್ಲ ಗೊತ್ತಿರುವುದೇ ಆದರೂ ಅದನ್ನು ಮತ್ತೊಮ್ಮೆ ನಿಮ್ಮೊಡನೆ ಹರಟುವ ಜಿಹ್ವಾಚಾಪಲ್ಯದಿಂದ ಹೀಗೆ ಪ್ರಸ್ತಾಪಿಸುತ್ತಿದ್ದೇನೆ. ಪುಟ್ಟಪರ್ತಿಯ ಸಾಯಿಬಾಬಾ ಅವರು ತಾನೇ ಶಿರಡಿಯಲ್ಲಿ ಅವತಾರ ಮುಗಿಸಿ ಅಲ್ಲಿಗೆ ಬಂದೆನೆಂದೂ ಮುಂದೆ ಕರ್ನಾಟಕದಲ್ಲಿ ಮತ್ತೆ ಜನಿಸುವೆನೆಂದೂ ಹೇಳಿದ್ದರಂತೆ ಎಂಬುದು ಹಲವು ಮೂಲಗಳು ಹೇಳುವ ವಿಚಾರ. ಅವರು ದೇವರೋ ದೇವಮಾನವರೋ ಅದು ನನಗೆ ಬಾಧಿತವಲ್ಲ. ಅವರನ್ನು ಯಾವ ರೀತಿಯಲ್ಲೇ ಸ್ವೀಕರಿಸಿದರೂ ಅವರು ಮಾಡಿದ ಸೇವೆಯನ್ನು ಜನ ಮರೆಯಲಾಗುವುದಿಲ್ಲ.

ಭಜನೆಯ ಹುಡುಗನೊಬ್ಬ ಚೇಳುಕುಟುಕಿದಾಗಿನಿಂದ ಬದಲಾಗಿಹೋಗಿ ಹಲವು ಹೊಸದನ್ನು ಕಾಣುತ್ತಾ ಹೇಳುತ್ತಾ ಸಾವಿರಾರು ಜನರ ನೋವನ್ನು ಮರೆಸಿದ್ದು, ಸಿಗದಿದ್ದ ಯಾವುದೋ ಅನುಕೂಲವನ್ನು ಸಿಗುವಂತೇಮಾಡಿದ್ದು, ನಂಬಿಬಂದವರ ಜನಸಾಮಾನ್ಯರನ್ನೂ ತನಗೆ ಯಾರೂ ಹೆಚ್ಚು ಅಥವಾ ಯಾರೂ ಕಮ್ಮಿ ಅಲ್ಲ ಎಂಬ ಏಕೋಭಾವದಿಂದ ಕಂಡಿದ್ದು, ನೀರಿಲ್ಲದ ಆಂಧ್ರದ ಜಿಲ್ಲೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದು, ಬಡಜನರ ಭೌತಿಕ ಕಾಯಿಲೆಗಳಿಗೆ ಧರ್ಮಾರ್ಥ ಉನ್ನತ ದರ್ಜೆಯ ಆಸ್ಪತ್ರೆ ಕಟ್ಟಿಸಿದ್ದು ಇದೆಲ್ಲಾ ಮಾತ್ರ ಬಹಳ ವಿಶೇಷವಾಗಿಯೂ ಮತ್ತು ಆಶ್ಚರ್ಯವಾಗಿಯೂ ಕಾಣುತ್ತದೆ. ಅವರು ಮಾಡಿದ ಹಲವು ಕೆಲಸಗಳನ್ನು ನಾವೂ ನೀವೂ ಸಂಕಲ್ಪಿಸಲೂ ಆಗುತ್ತಿತ್ತೋ ಇಲ್ಲವೋ ! ಬಾಬಾ ದುಡಿದು ಜನರಿಗೆ ಕೊಟ್ಟರೇ ? ಅಲ್ಲ ಅದರೆ ತನ್ನ ದರ್ಶನ ಸ್ಪರ್ಶನಕ್ಕೆ ಕಾಣಿಕೆಯಾಗಿ ಬಂದ ಹಣದ ಬಹುಭಾಗವನ್ನು ಅವರು ಸಮಾಜಕ್ಕೇ ಮರಳಿಸಿದ್ದಾರೆ.

ಸಾರ್ವಜನಿಕರ ಹಣವನ್ನು ಗುಳುಂ ಸ್ವಾಹಾ ಮಾಡುವ ರಾಜಕಾರಣಿಗಳು ನಡೆಸುವ ಸರಕಾರ ಮಾಡಲಾಗದ ಮಹತ್ತರ ಯೋಜನೆಗಳನ್ನು ತ್ವರಿತಗತಿಯಲ್ಲಿ ಬಾಬಾ ಮಾಡಿತೋರಿಸಿದ್ದಾರೆ. ಬಹುತೇಕ ಭಾರತದ ಸಾಧು-ಸಂತರ ಮೂಲ ಧ್ಯೇಯೋದ್ದೇಶಗಳೇ ಇವಾಗಿವೆ. ಇದ್ದವರಿಂದ ಬಂದ ಕಾಣಿಕೆಗಳನ್ನು ಕ್ರೋಢೀಕರಿಸಿ ಇರದಿದ್ದವರಿಗೆ ಹಂಚಿ ಎಲ್ಲರನ್ನೂ ಸುಖಿಗಳನ್ನಾಗಿ ಮಾಡುವುದಾಗಿದೆ. ನಾನು ಓದಿತಿಳಿದ ಪ್ರಕಾರ ಶಿರಡಿಯಲ್ಲೂ ಒಮ್ಮೆ ಆಗರ್ಭ ಶ್ರೀಮಂತನೊಬ್ಬ ಬಾಬಾರಿಗೆ ಕಾಣಿಕೆ ಕೊಟ್ಟಾಗ ಅದನ್ನು ಅವರು ನೇರವಾಗಿ ಬಹಳ ಆಪತ್ತಿನಲ್ಲಿರುವ ಇನ್ನೊಬ್ಬ ಬಡವನಿಗೆ ನೀಡಿದ್ದರಂತೆ. ಇನ್ನೂ ಸ್ವಲ್ಪ ಮುಂದುವರಿದು ಹೇಳುವುದಾದರೆ ವರದಹಳ್ಳಿಯ ಶ್ರೀಧರಸ್ವಾಮಿಗಳಲ್ಲಿ ಹೊನ್ನಾವರ ತಾಲೂಕಿನ ಹಳದೀಪುರದ ವ್ಯಕ್ತಿಯೊಬ್ಬರು ತಮ್ಮ ಮಗನ ವಿದ್ಯಾಭ್ಯಾಸಕ್ಕೆ ಆರ್ಥಿಕ ಮುಗ್ಗಟ್ಟು ತೊಂದರೆಕೊಡುತ್ತಿದೆ ಎಂದು ತೋಡಿಕೊಂಡಾಗ ಸ್ವತಃ ಕೈಯ್ಯಿಂದ ದುಡ್ಡನ್ನು ಮುಟ್ಟದ ಸ್ವಾಮಿಗಳು ತಮಗೆ ಕಾಣಿಕೆ ಬಂದಿದ್ದನ್ನು ಪೇರಿಸಿ ಇಟ್ಟಿದ್ದ ಸಣ್ಣ ಪೆಠಾರಿಯನ್ನು ಶಿಷ್ಯನಮೂಲಕ ತರಿಸಿ ಪ್ರಾರ್ಥನೆಮಾಡಿ ನಿಂತಿದ್ದ ಹಳದೀಪುರದ ವ್ಯಕ್ತಿಯ ಶಾಲಿನಲ್ಲಿ ಸಂಪೂರ್ಣ ಹಾಕಿಬಿಡುವಂತೇ ಹೇಳಿದರಂತೆ. ಆ ಶಿಷ್ಯ ಹಾಗೆ ಹಾಕಿದಮೇಲೆ ಅದರಮೇಲೆ ಮಂತ್ರಾಕ್ಷತೆ ಎರಚಿ " ಮಗಾ ಈ ದುಡ್ಡು ನಿನ್ನ ಮಗನ ವಿದ್ಯಾಭ್ಯಾಸಕ್ಕೆ ಸಾಕಾಗುತ್ತದೆ ಚಿಂತೆಮಾಡಬೇಡಾ " ಎಂದಿದ್ದರಂತೆ. ಅದರಂತೇ ಹಳದೀಪುರದ ಆ ವ್ಯಕ್ತಿಯ ಮಗ ಚೆನ್ನಾಗಿ ಓದಿ ಈಗ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕಿವಿ-ಮೂಗು-ಗಂಟಲು ವೈದ್ಯರಾಗಿ ಕೆಲಸಮಾಡುತ್ತಿದ್ದಾರೆ.

ಹೀಗೇ ಭಾರತದುದ್ದಗಲಕ್ಕೂ ಹಾಗೂ ಭಾರತದ ಇತಿಹಾಸದುದ್ದಕ್ಕೂ ಹಲವು ವ್ಯಕ್ತಿಗಳು ಆಗಿಹೋಗಿದ್ದಾರೆ, ಇನ್ನೂ ಆಗಾಗ ಜನಿಸಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಂದೆಯ ಬಡತನದಲ್ಲಿ ಓದಿಸಲಾಗದ ಅನಾನುಕೂಲತೆಗೆ ಅತ್ತೆ ಕರೆದಾಗ ಹಳ್ಳಿಯಿಂದ ಮುಂಬೈ ಶಹರಕ್ಕೆ ಬಂದು ಅಲ್ಲಿ ೭ನೇ ತರಗತಿಯವರೆಗೆ ಓದಿ ಅದೂ ಸಾಕೆನಿಸಿ ಮರಳಿ ಹಳ್ಳಿಗೆ ಹೋಗಲೂ ಇಷ್ಟವಾಗದೇ ತಂದೆಯ ಬದುಕಿಗೆ ಭಾರವಾಗಬಾರದೆಂದು ಹೂಮಾರುವ ಹುಡುಗನಾಗಿ ಬದುಕಿದ ಅಣ್ಣಾ ಹಜಾರೆ ಕಾಲಾನಂತರದಲ್ಲಿ ಭಾರತೀಯ ಸೈನ್ಯಕ್ಕೆ ಸೇರಿ ೧೫ ವರ್ಷಗಳಕಾಲ ಸೈನಿಕನಾಗಿದ್ದರೂ ಕೇವಲ ತನ್ನ ಸ್ವಾರ್ಥಕ್ಕಾಗಿ ಬದುಕದ ಆ ಮನಸ್ಸು ಚಡಪಡಿಸಿ ಆ ಕೂಡಲೇ ರಾಜೀನಾಮೆ ನೀಡಿ ಹೊರಬಂದು ದೇವಸ್ಥಾನದ ಕೋಣೆಯೊಂದರಲ್ಲಿ ಇಡೀ ಜೀವಿತವನ್ನು ಕಳೆಯುತ್ತಾ ಸಮಾಜಸೇವೆಗಾಗಿ ತನ್ನನ್ನು ಸಮರ್ಪಿಸಿಕೊಂಡ ಅಣ್ಣಾ ಹಜಾರೆ ಎಂಬ ಸರಳ ಜೀವಿ ಬ್ರಷ್ಟಾಚಾರ ರೋಗಮುಕ್ತ ಭಾರತದ ಕನಸು ಕಂಡರು ಮತ್ತು ಅದಕ್ಕಾಗಿ ಶ್ರಮಿಸುತ್ತಲೇ ಬಂದರು. ಬೆಂಗಳೂರಿನಲ್ಲಿ ಶಿಕ್ಷಣತಜ್ಞ ಡಾ| ಎಚ್.ನರಸಿಂಹಯ್ಯನವರ ಜೀವನ ಕೂಡ ಇದೇ ರೀತಿ ಸರಳಜೀವನ ನಡೆಸಿದ್ದರು ಮತ್ತು ಹಲವರ ಅನುಕೂಲಕ್ಕಾಗಿ ’ನ್ಯಾಷನಲ್ ಎಜ್ಯುಕೇಶನ್ ಟ್ರಸ್ಟ್’ ಹುಟ್ಟುಹಾಕಿ ಡೊನೇಶನ್ ರಹಿತ ಶಾಲಾಕಾಲೇಜುಗಳನ್ನು ನಡೆಸಿಬಂದಿದ್ದರು ಎಂಬುದು ಸ್ಮರಣೆಗೆ ಬರುವ ವಿಚಾರ. ಸರಳ ಜೀವನ ಎಂದು ಬೋಧಿಸುವುದು ಸುಲಭ; ಆಚರಿಸುವುದು ಕಷ್ಟ. ಐಶಾರಾಮೀ ಸವಲತ್ತುಗಳನ್ನೆಲ್ಲಾ ಪಡೆದೂ ’ಸರಜೀವಿ’ ಎಂಬ ಬೋರ್ಡು ಹಾಕಿಕೊಳ್ಳುವವರೇ ಬಹಳಜನ. ಸಂಸಾರಿಗಳು ಸರಳಜೀವಿಗಳಾಗಲು ಕಷ್ಟಸಾಧ್ಯ! ಹೀಗಾಗಿ ಸಂಸಾರವನ್ನೇ ಕಟ್ಟಿಕೊಳ್ಳದೇ ದೇಶವೇ ತನ್ನ ಮನೆ ದೇಶವಾಸಿಗಳೇ ತನ್ನ ಸಂಸಾರ ಎಂಬ ಭಾವನೆ ಇಟ್ಟು ಬದುಕುವ, ತನಗೆ ದೊರೆಯಬಹುದಾದ ಎಲ್ಲಾ ಐಹಿಕ ಸುಖೋಪಭೋಗಗಳನ್ನು ತೊರೆಯುವ ಜನ ನಿಜಕ್ಕೂ ಒಂದರ್ಥದ ತಪಸ್ವಿಗಳಾಗುತ್ತಾರೆ. ಅವರ ಆ ನೈತಿಕ ನಿಷ್ಠೆಗೆ ದೇಶವಾಸಿಗಳ, ಸಮಾಜದ ಸಾತ್ವಿಕ ಬೆಂಬಲ ಸಿಗುತ್ತದೆ ಎಂಬುದಕ್ಕೆ ಮೊನ್ನೆ ನಡೆದ ಆಂದೋಲನವೇ ಸಾಕ್ಷಿ.

ಭವ್ಯಭಾರತವೆಂದು ಕರೆಸಿಕೊಳ್ಳುವುದಕ್ಕೆ ನಮ್ಮಲ್ಲಿನ ಈ ವೈಶಿಷ್ಟ್ಯವೇ ಕಾರಣವಾಗಿದೆ. ಪವಾಡಗಳನ್ನು ನಾವು ನಂಬದೇ ಇದ್ದರೂ ಎಲ್ಲಾ ಪವಾಡಗಳೂ ಕೇವಲ ರಹಸ್ಯ ಕಾರ್ಯಾಚರಣೆಯಿಂದ ಆಗುವುದಿಲ್ಲ. ನಾನು ಸಾಯಿಬಾಬಾ ಭಕ್ತನಲ್ಲ;ಆದರೆ ಕಾಣುವುದನ್ನು ಹೇಳಲು ಹಿಂಜರಿಯುವುದಿಲ್ಲ. ಉದಾಹರಣೆಗೆ ಸಾಯಿಬಾಬಾ ಶಿವಲಿಂಗವೊಂದಕ್ಕೆ ಕಾಲೀ ಬಿಂದಿಗೆಯೊಳಗೆ ಕೈಯ್ಯಾಡಿಸುತ್ತಾ ಭಸ್ಮದ ಅಭಿಷೇಕ ಮಾಡುತ್ತಾರಲ್ಲಾ. ಅದೂ ಅಲ್ಪ ಸ್ವಲ್ಪವಲ್ಲ, ಕ್ವಿಂಟಾಲುಗಟ್ಟಲೇ ಭಸ್ಮ! ಅದು ಅಲ್ಲಿ ಹೇಗೆ ಬಂತು ? ಹಾಗಂತ ಛಾಯಾಚಿತ್ರಗಳಲ್ಲಿ ಭಸ್ಮ ಮತ್ತು ಜೇನುತುಪ್ಪ ಉದುರುತ್ತದೆ ಎಂಬುದನ್ನು ನಾನು ನಂಬಲಾರೆ. ಆದರೂ ಯೋಗ ಹೇಳುತ್ತದೆ-- ಮುಮುಕ್ಷುವಾಗ ಹೊರಟ ಮಾರ್ಗದ ಆದಿಯಲ್ಲಿ ಒಂದುಹಂತದ ಸಾಧನೆ ಆದಾಗ ಪವಾಡಗಳು ಘಟಿಸಲು ಸಾಧ್ಯ ಅಂತ. ಆದರೆ ಪವಾಡಗಳನ್ನೇ ನೆಚ್ಚಿಕೊಂಡು ಕುಳಿತುಕೊಳ್ಳಬೇಡಿ ಎಂಬುದಾಗಿಯೂ ಸಾಕ್ಷಾತ್ಕಾರ ಪಡೆದವರು ಹೇಳುತ್ತಾರೆ. ಆದರೂ ಕೆಲವೊಮ್ಮೆ ಅದೇಕೆ ಕೆಲವು ಸಾಧು-ಸಂತರು ಸಮಾಜದ ಕೆಲವರಿಗೆ ಅವರ ಲೌಕಿಕ ಬದುಕಿನಲ್ಲಿ ಪವಾಡನಡೆಸಿ ಸಹಕರಿಸುತ್ತಾರೋ ತಿಳಿಯದಾಗಿದೆ! ಏನೇ ಇದ್ದರೂ ಬಂದ ಹಣವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸದ್ವಿನಿಯೋಗಮಾಡುವ ಆ ಪವಾಡವಿದೆಯಲ್ಲಾ ಅದಕ್ಕಿಂತಾ ಹೆಚ್ಚಿನ ಪವಾಡ ಬೇಕಾಗಿಲ್ಲ. ಹೀಗಾಗಿ ಇಂಥಾ ಬಾಬಾಗಳು ಸಾವಿರಾರು ವರ್ಷ ಬಾಳಿದರೂ ಬೇಡ ಎನಿಸುವುದಿಲ್ಲ. ಇದೇ ಸಮಯದಲ್ಲಿ ಪುಟ್ಟಪರ್ತಿ ಸಾಯಿಬಾಬಾ ಗುಣಮುಖರಾಗಲಿ ಎಂದು ಹಾರೈಸೋಣ.

ಸಾಧು-ಸಂತರ ವೇಷಗಳನ್ನು ತೊಟ್ಟ ನಿತ್ಯಾನಂದಾದಿ ಕೆಲವರಿಂದ ಆಗಬಾರದ ಅನಾಹುತಗಳು ಆಗುತ್ತಲಿವೆ. ಇದರಿಂದ ಯಾರು ಸಾಧು ಯಾರು ವೇಷಧಾರೀ ಸಾಧು ಎಂಬುದನ್ನು ಹುಡುಕುವುದು ಸಹಜವಾದರೂ ತೀರ್ಮಾನಕ್ಕೆ ಬರಲು ಕಷ್ಟವಾಗುತ್ತದೆ. ಇದಕ್ಕೆಲ್ಲಾ ಜನತೆಯಲ್ಲಿ ನಂಬಿಕೆ, ವಿಶ್ವಾಸ ಭಂಗವಾಗಿರುವುದೇ ಕಾರಣವಾಗಿದೆ. ಮೊದಮೊದಲು ಬ್ಯಾಂಕ್‍ಗಳಲ್ಲಿ ಖಾತೆ ತೆರೆಯಲಾಗಲೀ ರೇಶನ್ ಕಾರ್ಡ್ ಮಾಡಿಸಲಾಗಲೀ ಛಾಯಾಚಿತ್ರಗಳ ಅನಿವಾರ್ಯತೆ ಇರಲಿಲ್ಲ. ಈಗೀಗ ಅವೂ ಸಾಲದಾಗಿ ಬೇರೇ ಬ್ಯಾಂಕುಗಳಲ್ಲಿನ ಖಾತೆಯ ವಿವರ, ವಾಸ್ತವ್ಯದ ವಿಳಾಸಕ್ಕೆ ಅಧಿಕೃತ ಮಾಹಿತಿ, ಪಾನ್ ನಂಬರು ಹೀಗೇ ಹಲವಾರು ಮಾಹಿತಿಗಳ ಅವಶ್ಯಕತೆ ಕಾಣಬಂದಿದ್ದು ಹಲವರು ಅವುಗಳನ್ನು ದುರುಪಯೋಗ ಪಡಿಸಿಕೊಳ್ಳಲು ತೊಡಗಿದಮೇಲೆ. ಜನಸಂಖ್ಯೆ ಜಾಸ್ತಿಯಾದಂತೇ ಕೂಡುಕುಟುಂಬಗಳು ಮರೆಯಾಗಿ ಎಲ್ಲೆಲ್ಲೂ ಸ್ವಾರ್ಥವೇ ಮೆರೆಯುತ್ತಿರುವಾಗ ಪ್ರತೀ ವ್ಯಕ್ತಿ ತನ್ನ ಸ್ವಾರ್ಥದ ನೇರಕ್ಕೇ ನೋಡಿಕೊಳ್ಳುತ್ತಾ ಸಾಮಾಜಿಕ ಅನ್ಯಾಯಕ್ಕೆ ಕಾರಣನಾಗುತ್ತಿರುವುದರಿಂದ ಅದನ್ನು ಹತೋಟಿಗೆ ತರಲು ಹಲವು ಪ್ರಯತ್ನಗಳು ನಡೆದಿವೆ. ಮೊನ್ನೆಯಷ್ಟೇ ಇಂಧನ ಇಲಾಖೆ ಗ್ರಾಹಕರಿಗೆ ಅಡಿಗೆ ಅನಿಲವನ್ನು ಪೂರೈಸಲು ಅಧಿಕೃತ ನಾಗರಿಕ ಸರಬರಾಜು ಪಟ್ಟಿಯ ಮಾಹಿತಿ ಮತ್ತು ವಿದ್ಯುತ್ ಹಾಸಲು ಪಟ್ಟಿಯನ್ನು ಹಾಜರುಪಡಿಸುವಂತೇ ಕೋರಿದ್ದು ನಮಗೆ ತಿಳಿದುಬಂದಿದೆಯಲ್ಲವೇ ? ಇಲ್ಲೆಲ್ಲಾ ನೋಡಿದಾಗ ಅನಿಸುವುದು ’ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖ[ಬ್ರಷ್ಟಾಚಾರಿಯ]ನ ಸಂಖ್ಯೆ ಕಡಿಮೆಯಾದೀತು’ ಎಂಬ ಸ್ವಾಮೀ ವಿವೇಕಾನಂದರ ವಾಣಿ.

ಇಲ್ಲೀವರೆಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದ ಜನರಿಗೆ ಈಗೀಗ ಇದರಲ್ಲಿನ ಲೋಪದೋಷಗಳು ಕಾಣುತ್ತಿವೆ. ರಾಜನ ಆಳ್ವಿಕೆಯೇ ವಾಸಿಯಾಗಿತ್ತು ಎಂಬಷ್ಟರ ಮಟ್ಟಿಗೆ ಮನಸ್ಸು ರೋಸಿಹೋಗಿದೆ. ದಿನವೂ ಹಲವಾರು ರಾಜಕೀಯ ರಂಪಾಟಗಳು, ಅಪ್ಪ-ಮಕ್ಕಳದ್ದೇ ಒಂದು ಪಕ್ಷ, ಹಲವಾರು ಖೂಳರು ಸೇರಿ ದೋಚಿದ್ದನ್ನು ಹಂಚಿಕೊಳ್ಳುವ ಹಾಗೂ ಹಂಚಿಕೆಯಲ್ಲಿ ಪಾಲು ಕಮ್ಮಿಯಾದಾಗ ಅಥವಾ ವ್ಯತ್ಯಾಸ ಕಂಡುಬಂದಾಗ ಭಿನ್ನರಾಗಿ ಕಾಣಿಸಿಕೊಳ್ಳುವ ದೊಂಬರಾಟಗಳು ಜಾಸ್ತಿಯಾಗುತ್ತಿವೆ. ಹಾಡಹಗಲೇ ಶಾಸಕನೊಬ್ಬ ಆಡಳಿತ ಯಂತ್ರವಿರುವ ಜಾಗದಲ್ಲೇ ಲಂಚಪಡೆದರೂ ವಿಚಾರಣೆಗೆ ಒಳಪಡಿಸುವಾಗ ಆತನಿಗೆ ಎಂದೂಬರದಿದ್ದ ’ಎದೆನೋವು’ ಕಾಣಿಸಿಕೊಳ್ಳುತ್ತದೆ! ಸ್ನೇಹಿತನ ಹೆಂಡತಿಯನ್ನೇ ಭೋಗಿಸಲು ಹೋಗಿ ಬಲೆಯಲ್ಲಿ ಸಿಕ್ಕು ಒದ್ದಾಡಿ ಎಲ್ಲಾ ಮಾಧ್ಯಮದವರ ಸುದ್ದಿಗೆ ಆಹಾರವಾಗಿ ಕೊನೆಗೆ ಮಂತ್ರಿಗಿರಿಗೆ ಅನಿವಾರ್ಯವಾಗಿ ರಾಜೀನಾಮೆ ಸರಬರಾಜುಮಾಡಿದಾತನೊಬ್ಬ ವಿಚಾರಣೆಗೆ ಒಳಪಡಬೇಕಾದಾಗ ಇಲ್ಲದ ರೋಗ ಉಲ್ಬಣಿಸಿ ಆಸ್ಪತ್ರೆಯಲ್ಲಿ ಮಲಗುವುದು ಅದೂ ಸರಕಾರೀ ಆಸ್ಪತ್ರೆಯಲ್ಲೇ ಅಡ್ಡಡ್ಡ ಮಲಗಿ ನಿದ್ದೆಮಾಡಿದ ದೃಶ್ಯ ಜನರ ಕಣ್ಣಿಗೆ ಪೂರೈಕೆಯಾಗಿದೆ. ನೋಟಿಫೈ ಮತ್ತು ಡಿನೋಟಿಫೈ ಎಂಬ ಆಂಗ್ಲ ಶಬ್ದಗಳು ರೇಜಿಗೆ ಹುಟ್ಟಿಸಿವೆ. ಕಾಸಿದ್ದರೆ ಏನೂ ಮಾಡಬಹುದೆಂಬ ಕಾರಣದಿಂದ ರೈತರ ಭೂಮಿ-ಮನೆಗಳನ್ನು ರಸ್ತೆಗೆ ಅಂತ ಸ್ವಾಹಾಕಾರ ಮಾಡಿ ಅವರನ್ನೆಲ್ಲಾ ಒಕ್ಕಲೆಬ್ಬಿಸಿದ್ದು ಮರೆಯಲಾರದ ಕಹಿ ಅನುಭವ. ದೇಶ ತಮ್ಮಿಂದ ಮಾತ್ರವೇ ಉದ್ಧಾರವಾಗಲು ಸಾಧ್ಯ ಎಂಬ ಅಪ್ಪ-ಮಕ್ಕಳ ಹಾಗೂ ಅವರ ತಲೆಹಿಡುಕ ಕಾರ್ಯದರ್ಶಿಗಳ ಅಂಬೋಣವನ್ನು ನೋಡಿ ಜನ ನಗಬೇಕೋ ಅಳಬೇಕೋ ತಿಳಿಯದಾಗಿದ್ದಾರೆ. ಹೇಗಾದರೂ ಮಾಡಿ ಖುರ್ಚಿಗೆ ಬರಬೇಕಲ್ಲಾಎಂಬುದು ಹಲವು ’ಕೈ’ಗಳ ಒಗ್ಗೂಡುವಿಕೆಯ ಪ್ರಯತ್ನವಾಗಿದೆ!

ಮತ್ತೆ ಚುನಾವಣೆ, ಮತ್ತೆ ಮರುಚುನಾವಣೆ, ಮತ್ತೆ ಯಾರಿಗೂ ಬಹುಮತ ಇಲ್ಲದೇ ಅನೈತಿಕ ಹೊಂದಾಣಿಕೆ. ಹೊಟ್ಟೆಗೆ ’ಆಹಾರ’ ಸಿಗದಾಗ ಮತ್ತೆ ಬೆಂಬಲ ಹಿಂಪಡೆಯುವ ಮಸಲತ್ತು! ಕುದುರೆ ವ್ಯಾಪಾರ!-ಅದೂ ದೂರದ ಐಶಾರಾಮೀ ಪಂಚತಾರಾ ಹೋಟೆಲ್‍ಗಳಲ್ಲಿ. ಅಪ್ರಬುದ್ಧ ದಿವಾನಗಿರಿ. ದಿನವೂ ಹಲವು ರಾಜಕೀಯ ಖೂಳರು ದಿವಾನಖಾನೆಗೆ ಅನಾವಶ್ಯಕ ನುಗ್ಗುವುದು, ಇಲ್ಲದ ಸೂತ್ರ ಹೆಣೆದು ಸರಕಾರ ಉರುಳಿಸುವುದು, ಆಳುವ ಪಕ್ಷದಲ್ಲಿ ಬಿಕ್ಕಟ್ಟು ಮೂಡುವಂತೇ ಕುತಂತ್ರಮಾಡುವುದು. ಇದನ್ನೆಲ್ಲಾ ನೋಡಿದಾಗ ಕರ್ನಾಟಕದಲ್ಲೂ ಬ್ರಷ್ಟಾಚಾರ ಬಹಳ ಹೆಚ್ಚಾಗಿದೆ ಎಂಬುದು ಎಂಥಾ ಮೂರ್ಖನಿಗಾದರೂ ತಿಳಿಯುತ್ತದೆ. ಆದರೂ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾರ್ಥಿಯಾಗಿ ತನ್ನ ’ಕಾರ್ಯ ಸಾಧನೆಗಾಗಿ’ ಕಲಿಸಿದ ಲಂಚವೆಂಬ ಅಗ್ನಿ ಈಗ ಸಮಾಜವನ್ನೇ ಆಹುತಿ ತೆಗೆದುಕೊಳ್ಳುತ್ತಿದೆ. ಸರಕಾರದಿಂದಾಗಬೇಕಾದ ಯಾವ ಕೆಲಸವೂ ಕಾಸಿಲ್ಲದೇ ಆಗುವುದಿಲ್ಲ! ಸರಕಾರದ ಆಯಕಟ್ಟಿನ ಹುದ್ದೆಗಳಲ್ಲಿ ಕುಳಿತ ’ಗುಳುಂ’ ರಕ್ಕಸರು ಲಂಚಪಡೆಯುವುದು ಅವರ ಉಳಿವಿಗೆ! ಲಂಚದ ಮರದ ಬೇರು ಇರುವುದೇ ಆಡಳಿತ ಯಂತ್ರದಲ್ಲಿ. ಅಲ್ಲಿರುವ ತಾಯಿಬೇರು ಮತ್ತು ತಂತುಬೇರುಗಳು ಕಾಣಸಿಗುವುದಿಲ್ಲ. ಆ ಬೇರುಗಳಿಗೆ ಧನದ ದಾಹ ಇಂಗುವುದೇ ಇಲ್ಲ. ಸದಾ ಹಸಿವಿನಲ್ಲೇ ಇರುವ ಅವು ಉದ್ಯೋಗಿಗಳ ಮೂಲಕ ಹಾಗೂ ಸಾರ್ವಜನಿಕರ ಮೂಲಕ ಮತ್ತು ಕಂತ್ರಾಟುದಾರರ ಮೂಲಕ ಹೀಗೇ ಹಲವು ಮಾರ್ಗಗಳಲ್ಲಿ ಕಾಸನ್ನು ಹೀರುತ್ತವೆ. ಉದ್ಯೋಗಿಗಳು ತಮ್ಮ ಉಳಿವಿಗೆ ತಾವು ಕೊಟ್ಟ ಮೂರುಪಟ್ಟನ್ನು ಸಾರ್ವಜನಿಕರಿಂದ ಪಡೆಯುತ್ತಾರೆ! ಕಂತ್ರಾಟುದಾರರು ತಾವು ಕೊಟ್ಟ ಹಣವನ್ನು ಕಳಪೆ ಕಾಮಗಾರಿಯಿಂದ ಮರಳಿಪಡೆಯುತ್ತಾರೆ. ಮತ್ತು ಸಾರ್ವಜನಿಕರು ತಮ್ಮ ಕೆಲಸ ಸಾಧ್ಯವಾಗುವುದೆಂಬ ಬಿಸಿಲುಗುದುರೆಯೇರಿ ಕೆಲವೊಮ್ಮೆ ಕೊಟ್ಟಿದ್ದನ್ನು ಕಳೆದುಕೊಳ್ಳುತ್ತಾರೆ, ಅಪರೂಪಕ್ಕೊಮ್ಮೆ ಕೆಲಸವಾದರೂ ಮತ್ತೆಲ್ಲಾದರೂ ಅವರ ಬಾಲ ಸಿಕ್ಕಿಕೊಂಡಿರುತ್ತದೆ!

ಪ್ರತಿಯೊಬ್ಬ ರಾಜಕಾರಣಿಯೂ ಒಂದೊಂದು ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಇತ್ಯಾದಿ ನಿತ್ಯ ಹರಿದ್ವರ್ಣ ಕಾಡಿನೋಪಾದಿಯಲ್ಲಿ ಸದಾ ಕಾಸು ಬರುವ ’ಹಸಿರು ಉದ್ಯಾನ’ದಂಥಾ ಉದ್ಯಮವನ್ನು ನಡೆಸುತ್ತಾರೆ! ಕಾಮನ್ ಎಂಟ್ರನ್ಸ್ ಟೆಸ್ಟ್‍ನಲ್ಲಿ ಅತ್ಯುನ್ನತ ದರ್ಜೆಯಲ್ಲಿ ಪಾಸಾದರೂ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣಕ್ಕೆ ’ಡೊನೇಶನ್’ ಕೊಡುವುದು ಅನಿವಾರ್ಯವಾಗುತ್ತದೆ. ಅದರಲ್ಲಂತೂ ಮ್ಯಾನೇಜ್‍ಮೆಂಟ್ ಖೋಟಾದಲ್ಲಿನ ಸೀಟುಗಳು ಹರಾಜಾಗುತ್ತವೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸರಕಾರೀ ಶೈಕ್ಷಣಿಕ ಸಂಸ್ಥೆಗಳಲ್ಲಿ ಸವಲತ್ತುಗಳಿಲ್ಲ, ಅನೇಕ ಕಡೆ ಒಳ್ಳೆಯ ಶಿಕ್ಷಕರಿಲ್ಲ, ಸರಕಾರೀ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲ, ಬಡವರಿಗೆ ಸಿಗಬೇಕಾದ ಯಾವ ಅನುಕೂಲಗಳೂ ದೊರೆಯುತ್ತಿಲ್ಲ. ಯಾವನೋ ಕಂಪನಿಯಾತ ಯಾವುದೋ ಖಾಸಗೀ ಶೈಕ್ಷಣಿಕ ಸಂಸ್ಥೆಗೆ ಉದಾರ ಧನಸಹಾಯ ಮಾಡುತ್ತಾನೆ!-ಅದೇ ಆತ ಸರಕಾರೀ ಸಂಸ್ಥೆಗೆ ಕೊಡುವುದಿಲ್ಲ ಯಾಕೆ ಎಂಬುದು ತಿಳಿಯದಾಗಿದೆ. ಗಾದಿಯಿಂದ ಕೆಳಗೆ ಬಿದ್ದರೂ ಶಾಶ್ವತವಾಗಿ ಮೇಯಲು ಅನುಕೂಲವಾಗುವ ಎಲ್ಲಾ ಅಂಶಗಳ ಕಾರ್ಯಕ್ರಮವನ್ನು ಒಮ್ಮೆ ಮಂತ್ರಿಯಾದಾಗಲೇ ಮಾಡಿಮುಗಿಸಿಕೊಳ್ಳುವ ಜನ ಇವತ್ತಿಗೆ ನಮ್ಮನ್ನಾಳುವವರು ಎಂಬುದು ನೆನಪಾದಾಗ ಮೈತುಂಬಾ ತುರಿಕೆಯಾದಹಾಗೆ ಉರಿಯುತ್ತದೆ.

ಲಂಚದ ಪ್ರಕರಣಗಳನ್ನು ಪರಿಶೀಲಿಸಲು ಆಯೋಜಿತವಾದ ಲೋಕಾಯುಕ್ತರಿಗೆ ಪೂರ್ಣಪ್ರಮಾಣದ ಅಧಿಕಾರವೂ ಇಲ್ಲ, ಅವರು ಹಿಡಿದುಕೊಟ್ಟ ತಿಮಿಂಗಿಲಗಳಿಗೆ/ಭಕಾಸುರರಿಗೆ ಯಾವ ಶಿಕ್ಷೆಯೂ ಆಗದೇ ಕೇಸು ಖುಲಾಸೆಗೊಳ್ಳುತ್ತದೆ ! ಯಾಕೆಂದರೆ ಆ ತಿಮಿಂಗಿಲಗಳನ್ನು ಸರಿಯಾಗಿ ವಿಚಾರಿಸಿದರೆ ’ಬೇರು’ ಎಲ್ಲಿದೆ ಎಂಬುದನ್ನು ಹೇಳಿಯೇ ಬಿಡುತ್ತಾರೆ! ಹೀಗಾಗಿ ತಮ್ಮನ್ನು ರಕ್ಷಿಸಿಕೊಳ್ಳುವ ತಾಯಿ-ತಂತುಬೇರುಗಳು ತಮಗೆ ’ಆಹಾರ’ ಒದಗಿಸಿದ ಭಕಾಸುರರ ರಕ್ಷಣೆಗೆ ತಡೆಗೋಡೆಯಾಗಿ ನಿಲ್ಲುತ್ತವೆ! ಇದೊಂದು ಹಗಲೂ-ರಾತ್ರಿ ನಡೆಯುವ ನಾಟಕವೇ ಹೊರತು ಯಾವುದೂ ಇತ್ಯರ್ಥಗೊಳ್ಳುವ ಪ್ರಶ್ನೇಯೇ ಇಲ್ಲ.

ಇಂತಹ ಅಸಹನೀಯ ಲಂಚಬಡಕುತನವನ್ನು ನಿವಾರಿಸಬೇಕು- ಇದು ನಮಗೆ ಎಂದಿದ್ದರೂ ಮಾರಕವೇ ಹೊರತು ಪೂರಕವಲ್ಲ ಎಂಬುದು ಪ್ರಜಾತಂತ್ರವನ್ನು ನೆಚ್ಚಿನಿಂತ ಹಲವು ನಾಗರಿಕರ ಅನಿಸಿಕೆಯಾಗಿದೆ. ಆ ಅನಿಸಿಕೆಗೆ ಮಹಾರಾಷ್ಟ್ರದ ಅಣ್ಣಾಹಜಾರೆಯವರು ತಮ್ಮ ಕ್ರಿಯಾಶೀಲ ವೈಖರಿಯಿಂದ ಒಂದು ಆಂದೋಲನದ ರೂಪಕೊಟ್ಟು ಸ್ವತಃ ತಾನೇ ಉಪವಾಸ ಸತ್ಯಾಗ್ರಹ ನಡೆಸುತ್ತಾರೆ. ಅಸಂಬದ್ಧ ಪ್ರಸ್ತುತಿಗಳಿರುವ ಅಗತ್ಯ ಅಧಿಕಾರಗಳಿಲ್ಲದಿರುವ ’ಲೋಕಪಾಲ ವಿಧೇಯಕ ಮಸೂದೆ’ಎಂಬ ಕಣ್ಣೊರೆಸುವ ತಂತ್ರದ ಬದಲಾಗಿ ಸಮರ್ಪಕವಾದ ರೂಪುರೇಷೆಗಳುಳ್ಳ ಮತ್ತು ಅಧಿಕಾರಗಳೂ ತಿಳಿಸಲ್ಪಟ್ಟಿರುವ ’ಜನ ಲೋಕಪಾಲ ವಿಧೇಯಕ ಮಸೂದೆ’ಯನ್ನು ಜಾರಿಗೆ ತನ್ನಿ ಎಂಬುದು ಹಜಾರೆಯವರ ವಾದವಾಗಿದೆ; ವಾದ ದಿಟವೂ ಆಗಿದೆ. ಅಪರೂಪಕ್ಕೊಮ್ಮೆ ಇಂತಹ ಕೆಲಸಗಳನ್ನು ಮಾಡುವ ಜನ ನಮ್ಮ ಮಧ್ಯೆ ಸಿಗುತ್ತಾರೆ. ಇಂತಹ ಲಕ್ಷಾಂತರ ಹಜಾರೆಗಳು ಪ್ರತೀ ಆಡಳಿತ ಕೇಂದ್ರಗಳ ಹಜಾರದಲ್ಲಿ ಸದಾ ನಿಂತು ಕಣ್ಣಿಟ್ಟು ಕಾದರೆ ಆಗಮಾತ್ರ ಸ್ವಲ್ಪ ಮಟ್ಟಿಗೆ ಬ್ರಷ್ಟಾಚಾರ ನಿಯಂತ್ರಣಕ್ಕೆ ಬಂದೀತು. ಒಬ್ಬ ಹಜಾರೆ ಹಲವಾರು ಹಜಾರೆಗಳನ್ನು ರೂಪಿಸುವಲ್ಲಿ ದಿನ ಬಹಳ ದೂರವಿಲ್ಲ. ಸೇವೆಯನ್ನು ಬಹುದೊಡ್ಡ ಮಟ್ಟದಲ್ಲಿ ಮಾಡಿದ ಬಾಬಾರಿಗೂ ಹಾಗೂ ಹಜಾರೆಯವರಿಗೂ ನಮ್ಮ ನಮನಗಳನ್ನು ಸಲ್ಲಿಸೋಣ. ಸಮಾಜಕ್ಕೆ ಸೇವೆ ಸಲ್ಲಿಸುವ ಮನೋಭಾವವಿರುವ ಹಜಾರೆಯಂತಹ ಲಕ್ಷೋಪಲಕ್ಷ ಜನ ನಮ್ಮಲ್ಲಿ ತಯಾರಾಗಲಿ, ಬ್ರಷ್ಟಾಚಾರ ಬೇರನ್ನು ಕಳೆದುಕೊಳ್ಳಲಿ ಎಂಬ ಆಶಯದೊಂದಿಗೆ ನಾವೆಲ್ಲಾ ಆ ದಿಸೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕಾಗಿದೆ.